ಕೋವಿಡ್ ಕಲಿಸಿದ ಪಾಠ: ಗೀತಾ ಜಿ ಹೆಗಡೆ ಕಲ್ಮನೆ.

ಮೊನ್ನೆ ಒಂದಿನ ಸಾಯಂಕಾಲ ಆಗುತ್ತಿದ್ದಂತೆ ಗಂಟಲು ಸ್ವಲ್ಪ ಉರಿ, ನೆಗಡಿಯಾಗುವಾಗ ಆಗುತ್ತಲ್ಲಾ ಹಾಗೆ ಒಂದು ರೀತಿಯ ಇರಿಟೇಷನ್. ಉಸಿರಾಟದಲ್ಲಿ ಸ್ವಲ್ಪ ಕಷ್ಟ ಅಂದರೆ ಬಾಯಿ ತೆರೆದು ಉಸಿರಾಡಬೇಕು ಅನಿಸುವಷ್ಟು. ಸಂಜೆ ದೀಪ ಹಚ್ಚಿ ಸ್ವಲ್ಪ ಭಗವತ್ಗೀತೆ ಪಾರಾಯಣ ಮಾಡುವ ರೂಢಿ. ಎಂದಿನಂತೆ ಸರಾಗವಾಗಿ ಓದಲು ಆಗುತ್ತಿಲ್ಲ. ಸ್ವರವೇ ಹೊರಗೆ ಬರ್ತಿಲ್ಲ.

ಅಯ್ಯೋ ಶಿವನೇ….ಇದೆನಾಯಿತು ನನಗೆ? ಪಕ್ಕನೆ ಕೊರೋನಾ ಸಿಂಟೆಮ್ಸ ಹೀಗೀಗೆ ಇರುತ್ತದೆ ಎಂದು ಟೀವಿಯಲ್ಲಿ ಪೇಪರಲ್ಲಿ ವಾಲಗ ಊದುತ್ತಿದ್ದದ್ದು ಜ್ಞಾಪಕ ಬಂತು ನೋಡಿ…. ಸೋಫಾದಲ್ಲಿ ಕೂತವಳು ಸಣ್ಣಗೆ ಮನಸ್ಸು ಅದುರಿದ್ದಲ್ಲದೇ ಒಂದು ರೀತಿ ಗಾಬರಿ, ಭಯದಲ್ಲಿ ಎದೆ ಹೊಡೆದುಕೊಳ್ಳಲು ಶುರುವಾಯಿತು.

ಹೌದಾ…ನಂಗೂ ಬಂತಾ….ಯಪ್ಪಾ….ಈಗೇನು ಮಾಡಲಿ????

ಕೊರೋನಾ ಎಂಟ್ರಿ ಆದಾಗಿನಿಂದ ದಿನಾ ಕಷಾಯ ಮಾಡಿ ಕುಡಿಯಬೇಕು ಮನಸಲ್ಲಿ ಅಂದುಕೊಂಡಿದ್ದೇ ಬಂತು. ಆದರೆ ಮಾಡಿ ಕುಡಿಯಲು ಬೋರು. ನಾಳೆ ಕುಡಿವಾ. ಇವತ್ತು ಯಾರು ಮಾಡುತ್ತಾರೆ. “ನಾಳೆ ಎಂದವನ ಮನೆ ಹಾಳು” ಗೊತ್ತಿದ್ದೂ ಸೋಂಬೇರಿತನ. ಜೊತೆಗೆ ಆ ಕಷಾಯ ಕುಡಿಬೇಕು ಅಂದರೆ ಯಮ ಯಾತನೆ, ಗಂಟಲಲ್ಲಿ ಇಳಿಸೋದೇ ಕಷ್ಟ. ಚಿಕ್ಕವರಿದ್ದಾಗ ಮಳೆಗಾಲದಲ್ಲಿ ಒಂದು ಅಕ್ಷೀ… ಬಂದರೆ ಸಾಕು ಕಷಾಯ ರೆಡಿ. ಹಠ ಮಾಡಿದರೆ ಅಪ್ಪಯ್ಯಾ ಮೂಗು ಹಿಡಿದು ಎಮ್ಮೆ ಕರಕ್ಕೆ ಗೊಟ್ಟದಲ್ಲಿ ಔಷಧಿ ಕುಡಿಸಿದಂತೆ ನಮಗೂ ಸಮಾ ಸೇರಿಸುತ್ತಿದ್ದರು ಹೊಟ್ಟೆಗೆ. ಗೊಟ್ಟದಲ್ಲಲ್ಲಾ…ತಪ್ಪು ತಿಳಿಯಬೇಡಿ….. ಲೋಟದಲ್ಲಿ!

ಈಗ ನೋಡಿ ನನಗೆ ಸರ್ವಸ್ವತಂತ್ರರು ಎಂಬ ಕೊಂಬು ಮೂಡಿದ ಮೇಲೆ ಆ ಕಾಲದ ರಾಮಬಾಣ ಈಗ ಬೆಲೆ ಕಳಕೊಂಡು ಏನಿದ್ರೂ ಮೆಡಿಕಲ್ ಸ್ಟೋರ್ಸ್ ಗೆ ಹೋಗೋದು ಮಾತ್ರೆ ನುಂಗೋದು. ಕಷಾಯ ಕುಡಿಯೋದಿರಲಿ…. ಊಹೂಂ… ನೆನಪೂ ಆಗೋದಿಲ್ಲ.

ಆದರೆ ಈಗ ಅದೇ ಕೊರೋನಾ ಎಲ್ಲ ನೆನಪಿಸುತ್ತಿದೆ. ಆದರೂ ನನಗೆ ಹೀಗನಿಸುವುದು ; ಕೊರೋನಾ ತಡೆಗಟ್ಟಲು ಇಮ್ಮೂನಿಟಿ ಹೆಚ್ಚಿಸಿಕೊಳ್ಳಲು ಚಾ ಕುಡಿಯಬೇಕು ಅಂತಿದ್ದರೆ ತಪ್ಪದೆ ಪಟಕ್ಕಂತ ಮಾಡಿಕೊಂಡು ಕುಡಿತಿದ್ನಪ್ಪಾ! ಒಂದಲ್ಲಾ ಹತ್ತು ಬಾರಿ ಬೇಕಾದರೂ ಗೊಟಾಯಿಸುತ್ತಿದ್ದೆ….ಯಾರೂ ಹೇಳುವ ಅಗತ್ಯವೂ ಇರಲಿಲ್ಲ. ಆದರೀಗ ನೋಡಿ ಇಲ್ಲೀಗ ಕೊರೋನಾ ಭಯದಿಂದಾಗಿ ಸೋಂಬೇರಿತನ ನೆಗೆದುಬಿದ್ದು ನೆಲ್ಲಿಕಾಯಿ ಆಯಿತು.

ಸರ್..ರ್….ನೇ ಎದ್ದೆ. ನೀರಿಟ್ಟು ಬೆಲ್ಲ ಹಾಕಿದೆ. ಅರಿಶಿನ ಪುಡಿ, ಜೀರಿಗೆ, ಧನಿಯಾ, ಕಾಳುಮೆಣಸಿನ ಪುಡಿ, ಶುಂಠಿ ಪುಡಿ ಹೇಗಿದ್ದರೂ ವಾರಾಂತ್ಯಕ್ಕೆ ಮಗಳು ಅಡುಗೆ ಮನೆ ಸೇರಿದಾಗ ನಾರ್ಥ್ ಇಂಡಿಯನ್ ಡಿಷ್ಷಸ್ಗೆ ಕಂಪಲ್ಸರಿ ಬೇಕಾದ ಐಟಂಗಳು ರೆಡಿ ಇಟ್ಟಿದ್ದು….ಮಾಡಿಟ್ಟಿಲ್ಲಾ ಪುಡಿಗಳು ಅಂದರೆ ಸಹಸ್ರನಾಮ ಗ್ಯಾರಂಟಿ ಗೊತ್ತು. ಅದಕ್ಕೇ ಒಂದೊಂದು ಬಾಟಲಿ ತುಂಬಾ ಪುಡಿ ಮಾಡಿ ಲೆಬಲ್ ಹಚ್ಚಿದ್ದಕ್ಕೆ ನಾನು ಸಂಬಾವಿತಳಾಗಿ ಮೆಚ್ಚಿನ ಅಮ್ಮನಾಗಿಬಿಟ್ಟಿದ್ದು ಅವಳ ದೃಷ್ಟಿಯಲ್ಲಿ. ಆದರೀಗದಂತೂ ಬಹಳ ಉಪಯೋಗ ಆಯ್ತು. ಫಟಾಫಟ್ ಎಲ್ಲ ಕೊಂಚ ಕೊಂಚ ಹಾಕಿ ಕುದಿಸಿ ಹಾಲು ಹಾಕಿ ಖಡಕ್ ಕಷಾಯ ಕುಡಿದು ತೆಪ್ಪಗೆ ಕೂತೆ.

ಊಹೂಂ ಹಂದಾಡಲಿಲ್ಲ ಗಂಟಲು. ನಾಲಿಗೆ ರುಚಿ ಇದೆ. ಮೈಕೈ ನೋವು ಇಲ್ಲ. ಜ್ವರ ಇಲ್ಲವೇ ಇಲ್ಲ. ಬೆವರುತ್ತಿದ್ದೆನಲ್ಲಾ…..

ಅಷ್ಟೊತ್ತಿಗೆ ಟೀವಿ ನ್ಯೂಸ್ ;. ಮಂಡ್ಯಾ ಸಂಸದೆ ಸುಮಲತಾ ಅಂಬರೀಶ್ ರವರಿಗೆ ಗಂಟಲು ನೋವು…..ಕೊರೋನಾ ಪಾಸಿಟೀವ್………ಕಿವಿಗೆ ಬಿದ್ದಿದ್ದೇ ತಡ ಮತ್ತಷ್ಟು ದಿಗಿಲು.

ನೀರು ಕಾಯಿಸಿದೆ. ಉಪ್ಪು ಹಾಕಿದೆ. ಬಾಯಿಗೆ ಸುರಿದು ಗಂಟಲು ಕೊಳ ಕೊಳ ಅಂತ ಗಾರ್ಗಿಲ್ ಮಾಡಿದೆ. ಮತ್ತೂ ಸ್ವಲ್ಪ ಹೊತ್ತು ಕಾದೆ. ಸ್ವಲ್ಪ ಕಡಿಮೆ ಆದಾಂಗಾಯ್ತು. ಬಡ್ಡೀ ಮಗಂದು ಕೊರಾನಾ ಅಂತೆ ಕೊರೋನಾ…. ತತ್ತರಕಿ ಇಷ್ಟೊಂದು ಹೆದರಿಸೋದಾ? ಹುಟ್ಟಾಪರಿ ಎಷ್ಟು ಸರ್ತಿ ಗಂಟಲು ಇರಿಟೇಷನ್ ಆಗಿಲ್ಲಾ? ಆಗೆಲ್ಲಾ ಒಂದು ಚೂರೂ ಮೈ ಬೆವರಿಲ್ಲಾ…ಭಯನೂ ಆಗಿಲ್ಲ. ಇನ್ನೇನು ತಡೆಯೋಕೆ ಆಗಲ್ಲಾ ಅಂದಾಗ ಅಪ್ಪನ ನೆನಪಿಸಿಕೊಂಡು ಎದ್ದೋಗಿ ಕಷಾಯನೋ, ಹಾಲು ಅರಿಶಿನವೋ… ಕುಡಿದು ಗಂಟಲಿಗೆ ಉಪ್ಪು ಬಿಸಿ ನೀರಲ್ಲಿ ಗೊಟಾಯಿಸಿ ಕಂಬಳಿ ಹೊದ್ದು ಮಲಗಿದ್ದು ಬಿಟ್ಟರೆ ಈ ಪಾಟಿ ಹೆದರಿದ್ದು ಈವಾಗಲೇ…. ಇದು ಕೈಯಲ್ಲಿ ದುಡ್ಡು ಓಡಾಡದ ದಿನಗಳ ಸಮಾಚಾರ ಆಯ್ತಾ? ಇರಲಿ…

ಈಗ ಕೇಳಿ; ಸುತ್ತ ಕಣ್ಣಾಡಿಸಿದೆ…ಫ್ರಿಜ್ ಮೇಲಿರೊ ಔಷಧಿ ಬಾಕ್ಸ್ ನಾನಿದ್ದೀನಲ್ಲಾ…ಬೇಕಾ? ನುಂಗು ಒಂದು ಮಾತ್ರೆ ಅಂದಾಂಗಾಯಿತು. ಬೇಡಾ ಬೇಡಾ ಈಗ ಕೊರೋನಾ ಕಾಲ. ಯಾಕೆ ಟೀವಿ ನೋಡಿಲ್ವಾ? ದಿನಾ ಗರಿ ಗರಿಯಾಗಿ ಒಂದೊಂದು ಚಾನಲ್ಲಿನಲ್ಲೂ ಬರೀ ಇದೇ ವಿಷಯ ; ಭಾರತೀಯ ನಾಟಿ ವೈದ್ಯ ಪದ್ಧತಿ ಕೊರೋನಾ ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ… ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ…. ಹಾಗೆ ಹೀಗೆ… ಇತ್ಯಾದಿ ಇತ್ಯಾದಿ. ನಿಮಗಿಂತ ನನ್ನಪ್ಪನ ಕಾಲದ ಮದ್ದೇ ವಾಸಿಯಂತೆ …..ತೆಪ್ಪಗಿರಿ ಅಂದೆ.

ಮತ್ತೊಮ್ಮೆ ಹಂಗೇ ಬಿಸಿ ಬಿಸಿ ನೀರಲ್ಲಿ ಸ್ವಲ್ಪ ಹೆಚ್ಚೇ ಉಪ್ಪು ಹಾಕಿ ಗೊಟಾಯಿಸಿ ಧರ್ಮಸ್ಥಳ ದೇವರಿಗೆ ಹರಕೆ ಹೊತ್ತು ಮಲಗಿದೆ.

ಬೆಳಗಾಯಿತು…ಅರೆರೆ….ನನ್ನ ಗಂಟಲು ಸಮಾ…. ಆಗಿತ್ತು. ಮೊಗಾಂಬೋ ಖುಷ್ ಹುವಾ….ಹಿಂದಿ ಡೈಲಾಗ್ ಹಳೆ ಪಿಚ್ಚರ್ ಜಮಾನಾದಲ್ಲಿ ನೋಡಿದ್ದು ಅದ್ಯಾಂಗೆ ನೆನಪಿಗೆ ಬಂತೋ ನಾ ಕಾಣೆ.

ಬೆಳಗಿನ ಖಡಕ್ ಸೆಕೆಂಡ್ ಚಹಾ ಮಗಳು ಎದ್ದ ಮೇಲೆ ಜೊತೆಗೆ ಕುಡಿಯುವುದು ರಾತ್ರಿ ಬೆಳಗಿನವರೆಗಿನ ಸಮಾಚಾರ ಹೇಳಿಕೊಂಡು ಈ ವಿಷಯ ಟಾಪ್ ಲೆವೆಲ್ ನಲ್ಲಿ ಇತ್ತಲ್ಲಾ ….ಕೇಳಿದ ಮಗಳು “ಅಮ್ಮಾ ಯಾಕೆ ನನಗೆ ಹೇಳಲಿಲ್ಲ? ಏನಾದರೂ ಆಗಿದ್ರೆ…? ಕೊರೋನಾ ಅಂದರೆ ನೀನು ಯೋಗ ಮಾಡಿ ಓಡಿಸಿದ ರೋಗದಂತಲ್ಲಾ. ಸ್ವಲ್ಪ ಎಚ್ಚರಿಕೆ ಇರಲಿ. ಗೇಟ್ ಮುಂದೆ ನೀರಾಕಿ ರಂಗೋಲಿ ಹಾಕೋದು ಬಂದು ಮಾಡು. ಅದೊಂದು ನೆವಾ ನಿನಗೆ. ಹೋಗ್ತೀಯಾ ಆ ಗಿಡಗಳ ಮದ್ಯೆ ಅರ್ಧ ಗಂಟೆ ಇರ್ತೀಯಾ. ರೋಡೆಲ್ಲಾ ಗುಡಿಸ್ತೀಯಾ. ಈಗ ಸರಿಗಿಲ್ಲ ಟೈಮ್. ಶಾಸ್ತ್ರ ಬಿಟ್ಟಾಕು. ಏನೂ ಮಾಡಬೇಡಾ. ಹಾಲು ನಾನೇ ತರ್ತಿನಿ. ನೀನು ಹೋಗಬೇಡಾ. ರಸ್ತೆಗೆ ಇಳಿಬೇಡಾ….. ಇತ್ಯಾದಿ ಇತ್ಯಾದಿ….” ಅವಳ ಮಾತಿಗೆ ಪಕ್ಕನೆ ಫುಲ್ ಸ್ಟಾಪ್ ಬೀಳೊ ತರಾ ಕಾಣ್ತಿಲ್ಲಾ….

ತಗಳಪ್ಪಾ ಕೈಯಲ್ಲಿ ಇದ್ದ ಚಹಾ ಹಂಗೇ…. ತಣ್ಣಗಾಗಿತ್ತು. ನಂದಲ್ಲಾ ಅವಳದ್ದು. ನಾನಾಗಲೇ ಹೀರಾಗಿತ್ತು ಅವಳ ಕಾಳಜಿಯ ಮಾತಿನ ಮಧ್ಯೆ. ಅವಳ ಮಾತು ಕೇಳಿ ಖುಷಿ ಆಯಿತು. ಆದರೆ ಒಳಗೊಳಗೆ ಸಣ್ಣ ಬೇಜಾರು. ಹಾಲು ತರುವ ನೆಪದಲ್ಲಾದರೂ ಎರಡು ಮೂರು ದಿನಕ್ಕೆ ಒಮ್ಮೆ ಕಾಲು ಕಿಲೋ ಮೀಟರ್ ರೋಡಲ್ಲಿ ಹೋಗಿ ಬರುತ್ತಿದ್ದೆ. ಅದೂ ಬಂದಾಯ್ತಲ್ಲಾ….ಉಫ್…. ಇನ್ನು ನೀರಾಕೋದೂ ಬಿಡಬೇಕಾ…?

ಇತ್ತೀಚೆಗೆ ಕೊರೋನಾ ಧಾಳಿ ಹೆಚ್ಚಾಗುತ್ತಿದ್ದಂತೆ ಆಗಲೇ ದಿನಾ ತರುವ ಹಾಲು ಒಂದೇ ದಿನದಲ್ಲಿ ನಾಲ್ಕು ದಿನಕ್ಕಾಗುವಷ್ಟು ತಂದು ಫ್ರೀಜರ್ ನಲ್ಲಿ ಇಟ್ಟು ಚಹಾ ಗೊಟಾಯಿಸಲು ಉಪಯೋಗಿಸುತ್ತಿದ್ದದ್ದು ಕೊರೋನಾ ರೂಢಿ ಮಾಡಿಸಿತ್ತು. ಮೊದಲಾದರೆ ಹೀಗಿರಲಿಲ್ಲ. ಫ್ರೇಶ್ ಹಾಲೇ ಆಗಬೇಕಿತ್ತು. ಈಗ ಬಿಡಿ ಎಲ್ಲಾ ಬಂದ್..ಬಂದ್…ಬಂದ್…ನೀರೂ ಬಂದ್…ಹಾಲೂ ಬಂದ್…..

ಅಯ್ಯೋ…ಈ ಯೋಚನೆ ಆಗುತ್ತಿದ್ದಂತೆ ಇನ್ನೂ ಏನೇನು ಬಂದು ಮಾಡಿಸುತ್ತೋ ಈ ಕೊರೋನಾ… ಆದರೆ ಒಂದು ಮಾತು ಸಣ್ಣದಾಗಿ ಅನುಭವಿಸಿದ ಕೊರೋನಾ ಕಲ್ಪನೆ ನೆನಪಾಗಿ ತೆಪ್ಪಗೆ ಮಗಳ ಮಾತು ಕೇಳುವುದೇ ವಾಸಿ ಅಂತ ಅನಿಸುತ್ತಿರೋದು ಸುಳ್ಳಲ್ಲಾ. ಅವಳಿಗೆ ಎದುರುತ್ತರ ಕೊಡದೇ ಟೀವಿಯಲ್ಲಿ ಕೊರೋನಾ ಕೊರೋನಾ ಎಂದು ಆಗಾಗ ಹೇಳುತ್ತಿರುವಂತೆ ಅವಳೇನಂದರೂ ಆಯ್ತು ಆಯ್ತು ಅಂತ ಹೇಳುತ್ತ ತೆಪ್ಪಗೆ ಮನೆ ಗೇಟೊಳಗೇ ದರ್ಬಾರ್ ಮಾಡಿಕೊಂಡು ಇದ್ದುಬಿಟ್ಟಿದ್ದೇನೆ.

ಏಕೆಂದರೆ ಸಾವು ನನ್ನ ಹಿಂದೆಯೇ ಇದೆಯೆಂಬುದು ಗೊತ್ತಿದ್ದರೂ ಭಯ ಪಡದ ನಾನು ಕೊರೋನಾ ಅಂದರೆ ಬಹಳ ಭಯ ಪಡುತ್ತೇನೆ. ಎಷ್ಟು ಭಯ ಪಡಿಸುತ್ತಿದೆಯೆಂದರೆ ಚಿಕ್ಕವಳಿರುವಾಗ ರಾತ್ರಿ ಪತ್ತೆದಾರಿ ಕಾದಂಬರಿ ಓದಿ ಎದ್ದು ದೀಪ ಆರಿಸಲೂ ಹೆದರಿ ಕಂಬಳಿ ಒಳಗೇ ಮುದುರಿ ಮಲಗ್ತಿದ್ದ ಅನುಭವಕ್ಕಿಂತಲೂ ಹೆಚ್ಚು. ಒಂದೇ ಉಸುರಿಗೆ ಸತ್ತರೆ ಪರವಾಗಿಲ್ಲ. ಆದರೆ ಈ ಕೊರೋನಾ ನರಳಾಟ, ಅದು ಹಂತ ಹಂತವಾಗಿ ಕಾಡಿಸೊ ಹಿಂಸೆ ಯಾರಿಗೆ ಬೇಕು? ಅನುಭವಿಸೋದು ಹೇಗೆ? ಆಸ್ಪತ್ರೆ ಮೆಟ್ಟಿಲು ಹತ್ತುವಂತ ಶಿಕ್ಷೆ ನನಗೇನು ನನ್ನ ವೈರಿಗೂ ಬೇಡಾ. ಕೊರೋನಾ ಬಂದು ಸತ್ತರೆ ನಮ್ಮ ಬಾಡಿನೂ ನೋಡೋಕೆ ಬಿಡದೆ ಎಳೆದು ಹಾಕ್ತಾರಂತಲ್ಲಾ ……ಈ ಸತ್ಯ ಸಿಕ್ಕಾಪಟ್ಟೆ ಹಿಂಸೆ. ಕನಸಿನಲ್ಲೂ ಬೆಚ್ಚಿ ಬೀಳುವಂತಾಗುತ್ತದೆ.

ದೊಡ್ಡದಾಗಿ ಸತ್ತ ಮೇಲೆ ಏನಾದರೇನು ಅಂತ ವೇದಾಂತಿ ತರ ನಾನೂ ಆಗಾಗ ಹೇಳಿದ್ದಿದೆ. ಆದರೆ ಅದೀಗ ಕಾಲುಬುಡಕ್ಕೆ ಬಂದರೆ …? ಕೊರೋನಾ ನನ್ನ ಬಂಡವಾಳ ಬಯಲುಮಾಡುತ್ತಿದೆ. ಬೇಡಪ್ಪಾ ಬೇಡಾ ಇದರ ಸಾವಾಸಾ.

ಇನ್ನೊಂದು ನಾನು ದೇಹ ದಾನ ಮಾಡುವ ಉದ್ದೇಶ ಆಗೊಮ್ಮೆ ಈಗೊಮ್ಮೆ ಜ್ಞಾಪಿಸುತ್ತದೆ ಮನಸ್ಸು. “ಅಲ್ಲಾ ನಿನ್ನ ದೇಹ ಆಗಲೇ ಒಂದೆರಡು ಕಾಯಿಲೆ ಅನುಭವಿಸಿದೆ. ಈಗ ಶುಗರ್ ಬೇರೆ ಸುತ್ತಿಕೊಂಡಿದೆ. ಹೀಗಿರುವಾಗ ದೇಹ ದಾನ ಮಾಡಬಹುದಾ? ವಿಚಾರಿಸಿಕೊ ಮಾರಾಯ್ತಿ ಅಂತಲೂ ಕುಟುಕುತ್ತದೆ. ಆಗಲೇ ಕಣ್ಣು ಕೊಟ್ಟಾಗಿದೆ ಅಂದೆ…ಈಗ ದೇಹನಾ? “ಅಂತಲೂ ನನ್ನ ಪುಕ್ಕಲುತನಕ್ಕೆ ಅಣುಕಿಸುತ್ತದೆ.

ಈ ಅಣುಕಿಸುವ ಮಾತಿದೆಯಲ್ಲಾ ನನಗೆ ಆಗಿ ಬರೋದಿಲ್ಲ. ಮೈಯ್ಯೆಲ್ಲಾ ಉರಿದು ಕೋಪ ನೆತ್ತಿಗೇರಿತು ಅಂದರೆ ಸಾಧಿಸಿಬಿಡುವ ಛಲ ಭುಗಿಲೇಳುತ್ತದೆ. ಈಗ ಹಾಗೇ ಆಗಿ ಏನಾದರಾಗಲಿ ಕೊರೋನಾ ನನ್ನ ಹತ್ತಿರ ಸುಳಿಯದಂತೆ ಅತ್ಯಂತ ಜಾಗೃತಿವಹಿಸುತ್ತಿದ್ದೇನೆ. ಅದಕ್ಕಾಗಿ ನಾನು ಕೊರೋನಾ ವಿರುದ್ಧ ಹೋರಾಡುತ್ತಲೂ ಇದ್ದೇನೆ. ದಿನಾ ತಪ್ಪದೇ ದಿನಕ್ಕೊಂದು ಬಾರಿ ಕಷಾಯ ಕುಡಿಯೋದು. ತಪ್ಪದೇ ಪ್ರತಿನಿತ್ಯ ಯೋಗ ಮಾಡೋದು. ಟೆರೇಸ್ ಮೇಲೆ ವಾಕಿಂಗ್. ಇದರಿಂದಾಗಿ ದಿನವೆಲ್ಲಾ ಲವಲವಿಕೆಯಿಂದ ಇದ್ದು ನನ್ನಲಡಗಿದ್ದ ಸೋಂಬೇರಿತನ ಕಾಲ್ಕಿತ್ತ್ಕೊಂಡು ಓಡೋಗಿಬಿಟ್ಟಿದೆ.

ಅಂದಹಾಗೆ ಈ ನಡುವೆ ಟೆರೇಸ್ ಮೇಲೆ ಪುಟ್ಟ ಕಿಚನ್ ಗಾರ್ಡನ್ ರೆಡಿ ಮಾಡಿದ್ದೇನೆ. ಸಿಮೆಂಟ್ ಚೀಲದಲ್ಲಿ ಒಂದೆಲಗಾ, ಬಸಳೆ, ಪುದಿನಾ, ದೊಡ್ಡಪತ್ರೆ, ಟೊಮೆಟೊ, ಎಲವರಿಗೆಕುಡಿ,ಗಿಣಿಕೆ ಸೊಪ್ಪು, ಈರುಳ್ಳಿ ಸೊಪ್ಪು ಇತ್ಯಾದಿ ಬೆಳೆಯುತ್ತಿದೆ. ಇರೊ ಮಣ್ಣಿಗೇ ಮನೆಯ ಹಸಿ ತ್ಯಾಜ್ಯಗಳನ್ನು ಹಾಕಿ ಅವುಗಳ ಹೊಟ್ಟೆ ತುಂಬಿಸುತ್ತಿದ್ದೇನೆ. ಸೋಂಪಾಗಿ ಬೆಳೆಯುತ್ತಿವೆ. ದಿನಕ್ಕೊಂದು ಮಲೆನಾಡಿನ ತಂಬುಳಿ ಒಂದೊಂದು ಗ್ಲಾಸ್ ಅಲಂಕರಿಸಿ ನಮ್ಮ ಹೊಟ್ಟೆ ಸೇರುತ್ತಿವೆ.

ಆದರೂ ಈ ಟೀವಿ ಮುಂದೆ ಕೂತಾಗ ಕೆಲವೊಮ್ಮೆ ಮನಸ್ಸು ಚಂಚಲವಾಗಿಬಿಡುತ್ತದೆ. ಏನು ಗೊತ್ತಾ ಎಲ್ಲಾದರೂ ಸುತ್ತಾಡೊ ಹುಚ್ಚು. “ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಬನ್ನಿ. ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದೇವೆ. ಕೊರೋನಾಕ್ಕೆ ಭಯಪಡದಿರಿ. ಈಗಾಗಲೇ ಕೆಲವರು ಬರುತಾತಿದ್ದಾರೆ…”
ಇತ್ಯಾದಿ ಇತ್ಯಾದಿ.

ಎಲ್ಲಾ ಓಕೆ ಆದರೆ ಈ ಮನಸ್ಸನ್ನು ಕಟ್ಟಿಹಾಕೋದಿದೆಯಲ್ಲಾ ಭಯಂಕರ ಕಷ್ಟ. ನಿಮಗೂ ಹೀಗೇ ಅನಿಸುತ್ತಾ?…;

ಅಯ್ಯೋ! ಈ ಕೊರೋನಾ ಯಾವಾಗ ಹೋಗುತ್ತದೋ… ಮತ್ತೆ ಮೊದಲಿನಂತಾಗೋದು ಯಾವಾಗಾ? ಮನೆಯಿಂದ ಹೊರಗೆ ಹೋಗಬೇಕು….ಸುತ್ತಾಡಬೇಕು….. ಕಪಾಟಿನಲ್ಲಿಯ ಸೀರೆಗಳನ್ನು ಉಡದೇ ಎಷ್ಟು ದಿನ ಆಯ್ತು… ಎಲ್ಲಾ ಮುಗ್ಗು ಹಿಡಿತಿದೆ……
ಏನ್ಮಾಡ್ಲಿ… ಏನ್ಮಾಡ್ಲಿ…..

ಥೋ….. ಇದಂತೂ ಮುಗಿಯದ ಕಥೆ ಮಾರ್ರೆ….. ಅದ್ಕೇ ಈಬೇಜಾರಿಗೋ….ಹತಾಶೆಗೋ….ಆಗುತ್ತಿರುವ ಹಿಂಸೆಗೋ….ಒಟ್ಟಿನಲ್ಲಿ ಕೊರೋನಾ ಶುರುವಾದ ಮೇಲೆ ನನಗೇ ಗೊತ್ತಿಲ್ಲದೆ ಆರೋಗ್ಯ ಅಂತೂ ಸಖತ್ ಸುಧಾರಿಸಿದೆ. ಪಾಪ ನನ್ನ ದೇಹವಂತೂ ಆಸ್ಪತ್ರೆ ಮೆಟ್ಟಿಲು ಹತ್ತಲು ಹೆದರಿ ಮೂರು ಮೂರು ದಿವಸಕ್ಕೂ ಏನಾದರೂ ನೆವ ಹೇಳಿ ಮಾಡಿಕೊಳ್ಳುತ್ತಿದ್ದ ಅವಾಂತರ ತೆಪ್ಪಗೆ ಬಾಯಿಮುಚ್ಚಿ ಕೂತಿದೆ. ಹಾಗೇ ಅದೆಷ್ಟು ದುಡ್ಡು ಉಳಿಸಿದೆ ಅಂದರೆ ಒಂದಿಪ್ಪತ್ತಾದರೂ ಉಳಿಸಿದೆ!

ಇದೇ ಖುಷಿಯಲ್ಲಿ ನಮ್ಮನೆಗೆ ಆಗಾಗ ಬರುವ ಬಂಟನಿಗೆ ಮನೆ ಪ್ರೊವಿಸನ್ ಗೆ ಮಕ್ಕಳ ಫೀಸ್ ಕಟ್ಟಲು ಭಕ್ಷೀಸು ಸ್ವಲ್ಪ ಜಾಸ್ತಿಯೇ ನೀಡುವಂತಾಗಿದೆ. ಕೆರೆಯ ನೀರನು ಕೆರೆಗೆ ಚೆಲ್ಲಿ….ಈಗ ಈ ಹಾಡು ಹೇಳಲು ಬಹಳ ಖುಷಿನೂ ಹೌದು.

ಅಂತೂ…..ಕೊರೋನಾ ಧಾಳಿ ಹೆಚ್ಚಾಗುತ್ತಿದ್ದಂತೆ ಅದರ ವ್ಯಾಪ್ತಿ ದೊಡ್ಡದಾಗುತ್ತಲೇ ನಡೆಯುತ್ತಿರೋದು ಎಂದಿಗೆ ಇದರ ಕೊನೆ? ಪ್ರಶ್ನೆಗೆ ಬೇಗ ಉತ್ತರ ಸಿಕ್ಕರೆ ಸಾಕಾಗಿದೆ ಅಲ್ವಾ?

ಗೀತಾ ಜಿ ಹೆಗಡೆ ಕಲ್ಮನೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x