
ವರ್ಷ ಎರಡು ಸಾವಿರದ ಹದಿಮೂರರ ಡಿಸೆಂಬರ್ ತಿಂಗಳು ಅನಿಸುತ್ತೆ. ಜಲ್ಪಾಯ್ಗುರಿಯಲ್ಲಿ ತುಂಬಾ ಚಳಿ ಇತ್ತು. ಒಂದು ಮುಂಜಾನೆ ಯಾವುದೋ ರೋಗ ಪತ್ತೆ ಹಚ್ಚಲು ನಮ್ಮ ಟೀಮ್ ಜೊತೆ ಕಾರಿನಲ್ಲಿ ಹೊರಟ್ಟಿದ್ದೆ. ನನ್ನ ಜೊತೆ ನನ್ನ ಡಾಟ ಮ್ಯಾನೇಜರ್, ಇಬ್ಬರು ಹೆಲ್ತ್ ವರ್ಕರ್ಸ್ ಮತ್ತು ಡ್ರೈವರ್ ಇದ್ದ. ಹೆಲ್ತ್ ವರ್ಕರ್ ಆಗಿದ್ದ ತೊರಿಕ್ ಸರ್ಕಾರ್ ಗೆ ಅವತ್ತು ತುಂಬಾ ಕೆಮ್ಮಿತ್ತು. ಕೆಮ್ಮಿದ್ದರೂ ಆತ ಮಾರ್ಗ ಮಧ್ಯೆ ಆಗಾಗ ಸಿಗರೇಟ್ ಸೇದುತ್ತಲೇ ಇದ್ದ. ಆತ ಮುಂದೆ ಡ್ರೈವರ್ ಪಕ್ಕ ಕುಳಿತ್ತಿದ್ದ. ನಾನು, ಡಾಟಾ ಮೇನೇಜರ್ ಮತ್ತು ಮತ್ತೊಬ್ಬ ಹೆಲ್ತ್ ವರ್ಕರ್ ಹಿಂದಿನ ಸೀಟಿನಲ್ಲಿ ಕುಳಿತ್ತಿದ್ದೆವು. ಚಳಿಗೆ ಬೆಚ್ಚ ಬೆಚ್ಚ ಸ್ವೆಟರ್, ಜರ್ಕಿನ್ ತೊಟ್ಟಿದ್ದೇವಾದರು ಕಾರ್ ಓಡುವ ರಭಸಕ್ಕೆ ಸುಯ್ ಎಂದು ಬೀಸುವ ಗಾಳಿಗೆ ಕಾರಿನ ಕಿಟಕಿ ಬಂದ್ ಮಾಡಲೇಬೇಕಿತ್ತು. ಕಿಟಕಿ ಮುಚ್ಚಿದ ಮೇಲೆ ಕಾರಿನೊಳಗೆ ಕುಳಿತವರ ಉಸಿರಾಟದ ಗಾಳಿ ಅಲ್ಲಿಯೇ ತಿರುಗುವ ಕಾರಣಕ್ಕೆ ತೊರಿಕ್ ಸರ್ಕಾರ್ ಕೆಮ್ಮಿದಾಗಲೆಲ್ಲಾ ನಮಗೆ ಗೊತ್ತಿಲ್ಲದೆ ಅವನಿಗೆ ತಗುಲಿದ್ದ ಇನ್ಫೆಕ್ಷನ್ ನಮಗೂ ತಗುಲಿತೋ ಏನೋ ಗೊತ್ತಾಗಲಿಲ್ಲ. ನಾವು ವಿಸಿಟ್ ಹೋಗಿದ್ದ ಆ ದಿನ ಶುಕ್ರವಾರ. ಅವತ್ತಿನ ಫೀಲ್ಡ್ ವಿಸಿಟ್ ಕೆಲಸ ಮುಗಿಸಿ ನಮ್ಮ ಪಾಡಿಗೆ ನಮ್ಮ ನಮ್ಮ ಮನೆಗಳಿಗೆ ಹೊರಟುಹೋದೆವು. ಮರುದಿನ ನನಗೆ ಸಣ್ಣದಾಗಿ ಸುಸ್ತಾದ ಅನುಭವವಾಯಿತು. ಒಂತರಾ ಮೈ ಕೈ ನೋವು, ಬಹುಶಃ ಜ್ವರ ಇತ್ತೋ ಏನೋ ಗೊತ್ತಾಗಲಿಲ್ಲ. ಕೆಮ್ಮು ಒಂಚೂರು ಶುರುವಾಯಿತು. ಪ್ಯಾರಸೆಟಮಾಲ್ ಮಾತ್ರೆಗಳನ್ನು ನುಂಗಿ ಇಡೀ ದಿನ ಚಳಿಗೆ ಮುದುಡಿ ಮಲಗಿದೆ. ಶನಿವಾರದ ರಜೆ ಕಳೆದ ಮೇಲೆ ಭಾನುವಾರವೂ ಸಹ ರಜೆ ಇದ್ದ ಕಾರಣ ಅವತ್ತೂ ಕೂಡ ಮಾತ್ರೆ ನುಂಗಿ ಚೆನ್ನಾಗಿ ಊಟ ಮಾಡಿ ಮಲಗಿಬಿಟ್ಟೆ.
ಸೋಮವಾರ ಆಫೀಸಿಗೆ ಹೋದಾಗ ನನ್ನ ಜೊತೆ ಶುಕ್ರವಾರ ಫೀಲ್ಡ್ ವಿಸಿಟ್ ಗೆ ಬಂದಿದ್ದ ಒಬ್ಬರೂ ಕೂಡ ಅವತ್ತು ಆಫೀಸಿಗೆ ಬಂದಿರಲಿಲ್ಲ. ಡಾಟ ಮ್ಯಾನೇಜರ್ ಗೆ ಫೋನ್ ಮಾಡಿ ವಿಚಾರಿಸಿದಾಗ “ರಾಜು ದಾ ಯಾಕೋ ಮೈ ಕೈ ನೋವು, ನೆಗಡಿ, ತಲೆನೋವು ಕೆಮ್ಮು. ಅದಕ್ಕೆ ರಜೆ ತೆಗೆದುಕೊಂಡೆ” ಅಂದಳು. ಉಳಿದವರ ಬಗ್ಗೆ ವಿಚಾರಿಸಿದಾಗ ಅವರಿಗೂ ಸಹ ಅದೇ ಸಮಸ್ಯೆ ಇರೋದು ತಿಳಿಯಿತು. ನಮ್ಮ ಡೇಟಾ ಮೇನೇಜರ್ ಎರಡು ದಿನದಲ್ಲಿ ಉಸಾರಾಗಿ ಬಂದರೆ ಉಳಿದವರು ಉಸಾರಾಗಿ ಬರಲು ಮೂರ್ನಾಲ್ಕು ದಿನ ತೆಗೆದುಕೊಂಡರು. ತೊರಿಕ್ ಸರ್ಕಾರ್ ಬಹುಶಃ ಒಂದು ವಾರ ಆಫೀಸಿಗೆ ಬರಲಿಲ್ಲ. ಆವತ್ತಿಗೆ ನಮ್ಮ ಗಂಟಲು ಮತ್ತು ಮೂಗಿನ ಸ್ವಾಬ್ ಸ್ಯಾಂಪಲ್ ಗಳನ್ನು ತೆಗೆದು ಇಫ್ಲುಯೆಂಜಾ ವೈರಸ್ ಗೆ ಅಥವಾ ಇವತ್ತಿನ ಬಹುಚರ್ಚಿತ ಕೊರೊನಾ ವೈರಸ್ ಗೆ ಟೆಸ್ಟ್ ಮಾಡಿದ್ದರೆ ಯಾವುದೋ ಒಂದು ವೈರಸ್ ಪಾಸಿಟಿವ್ ಬರುತ್ತಿತ್ತು ಅನಿಸುತ್ತೆ. ಆದರೆ ಆ ವೈರಸ್ ಗಳನ್ನು ಪರೀಕ್ಷಿಸುವ ಫೆಸಿಲಿಟಿ ಅಲ್ಲಿ ಇರಲಿಲ್ಲ. ಹಾಗೆಯೇ ನಾವೆಲ್ಲಾ ಬರೀ ರೆಸ್ಟ್ ಮತ್ತು ಒಂದಷ್ಟು ಮಾತ್ರೆಗಳಿಂದ ಸರಿಹೋಗಿದ್ದ ಕಾರಣ ಅವತ್ತಿಗೆ ಯಾರನ್ನೂ ಪರೀಕ್ಷೆಗೆ ಒಳಪಡಿಸಲಿಲ್ಲ. ಹಾಗೆಯೇ ಐಸೋಲೇಷನ್ ನಲ್ಲಿ ಸಹ ಇಡಲಿಲ್ಲ. ಯಾಕೆಂದರೆ ಅಲ್ಲಿ ಯಾವುದೇ ಜೀವ ಹಾನಿಯಾಗಿರಲಿಲ್ಲ. ಅವತ್ತು ನಮಗೆ ಕೊರೋನ ಬಂದಿತ್ತಾ ಅಥವಾ ಎಚ್1 ಎನ್1 ಬಂದಿತ್ತಾ ಗೊತ್ತಿಲ್ಲ.
ಎಷ್ಟೋ ಸಲ ಹೀಗೆ ನೆಗಡಿ, ಕೆಮ್ಮು, ಮೈ ಕೈ ನೋವುಗಳಿದ್ದಾಗ ವೈರಲ್ ಫೀವರ್ ಆಗಿದೆ ಅಂತ ಒಂದಷ್ಟು ಮಾತ್ರೆಗಳನ್ನು ಕೊಟ್ಟು ವೈದ್ಯರು ಕಳುಹಿಸಿಬಿಡುತ್ತಾರೆ. ಎಷ್ಟೋ ಸಂದರ್ಭಗಳಲ್ಲಿ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲದೇ ಮನೆ ಮದ್ದುಗಳಿಂದಲೇ ನೆಗಡಿ ಕೆಮ್ಮು ವಾಸಿಯಾಗಿಬಿಡುತ್ತದೆ. ಯಾವಾಗ ರೋಗಿಯ ಕಂಡಿಷನ್ ಹದಗೆಡುತ್ತಿದೆ ಎನಿಸುತ್ತೋ ಆಗ ತುಂಬಾ ಸಾಮಾನ್ಯವಾಗಿ ಮಾಡದ ಟೆಸ್ಟ್ ಗಳನ್ನು ಮಾಡಿದಾಗ ರೋಗಪತ್ತೆಯಾಗುತ್ತದೆ. ಈ ರೀತಿ ಪ್ರಪಂಚದ ವಿವಿಧ ಭಾಗಗಳಲ್ಲಿ ಪತ್ತೆಗೊಂಡ ರೋಗಗಳ ಅಗ್ರಪಟ್ಟಿಯಲ್ಲಿರೋದು ಹೆಚ್1 ಎನ್1 ವೈರಸ್, ನಿಫಾ ವೈರಸ್, ಎಬೋಲ ವೈರಸ್ ಇತ್ಯಾದಿ. ಇಂತಹ ರೋಗಗಳ ಸಾಲಿಗೆ ಇತ್ತೀಚಿನ ಸೇರ್ಪಡೆ ಯಾವುದೆಂದು ಗೊತ್ತಿದೆಯಲ್ಲಾ. ಎಸ್ ನಿಮ್ಮ ಗೆಸ್ ಕರೆಕ್ಟ್ ಆಗಿದೆ. ಅದು ಕೊರೋನ ವೈರಸ್.
ಕೊರೋನ ವೈರಸ್ ನ ವಿವಿಧ ಪ್ರಭೇದಗಳಲ್ಲಿ ಒಂದಾದ MERS ಕೊರೋನ ವೈರಸ್ ಮಧ್ಯ ಪ್ರಾಚ್ಯ ದೇಶಗಳಲ್ಲಿ ಕಾಣಿಸಿಕೊಂಡು ತನ್ನ ಭಯಾನಕತೆಯನ್ನು ಈ ಮುಂಚೆ ತೋರ್ಪಡಿಸಿದೆ. ಚೀನಾ ದೇಶದಲ್ಲಿ ಸಾರ್ಸ್ ಕಾಯಿಲೆ ಕೂಡ ಕಾಣಿಸಿಕೊಂಡು ತನ್ನ ಕದಂಬ ಬಾಹುಗಳನ್ನು ಚಾಚಿ ಒಂದಷ್ಟು ಜೀವಗಳನ್ನು ಬಲಿತೆಗೆದುಕೊಂಡು ಮರೆಯಾಗಿ ಹೋಗಿತ್ತು. ಈ MERS ಕಾಯಿಲೆಯ ಮೂಲ ಯಾವುದು ಎಂದು ಹುಡುಕಿದಾಗ ವಿಜ್ಞಾನಿಗಳಿಗೆ ಒಂಟೆಯಲ್ಲಿ ಈ ವೈರಸ್ ಇರುವುದು ಪತ್ತೆಯಾಗಿತ್ತು. ಸಾರ್ಸ್ ನ ಮೂಲವನ್ನು ಸಿವೆಟ್ ಕ್ಯಾಟ್ ಅಥವಾ ಪುನುಗು ಬೆಕ್ಕು ಅಂತ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಒಂಟೆಗಳಿಂದ MERS ಹೇಗೆ ಮನುಷ್ಯರಿಗೆ ಹರುಡುತ್ತದೆ. ಪುನುಗು ಬೆಕ್ಕಿನಿಂದ ಸಾರ್ಸ್ ಹೇಗೆ ಹರಡಿತ್ತು ಎಂಬುದು ವಿಜ್ಞಾನಿಗಳಿಗೆ ಇಂದಿಗೂ ಒಂದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಈ ಯಕ್ಷ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಿರುವಾಗ ನ್ಯೂ ಕೋವಿಡ್ 19 ವೈರಸ್ ಈಗ ತನ್ನ ಇರುವಿಕೆಯನ್ನು ವಿಶ್ವಕ್ಕೆ ಪರಿಚಯಿಸುತ್ತಿದೆ. ಈ ಕೊರೋನ ವೈರಸ್ ಜನಗಳಿಂದ ಜನಗಳಿಗೆ ಹರುಡುವುದಕ್ಕಿಂತ ಇನ್ನೂ ಅದನ್ನು ಹೆಚ್ಚು ಭಯಾನಕವಾಗಿ, ಆ ಕಾಯಿಲೆಯ ಬಗ್ಗೆ ಭಯಗಳನ್ನು ಸುಳ್ಳು ಸುದ್ದಿಗಳನ್ನು ಹರಡುತ್ತಿರುವವರು ಮಾಧ್ಯಮಗಳು ಮತ್ತು ಸೋಷಿಯಲ್ ಮೀಡಿಯಗಳು ಎಂದರೆ ತಪ್ಪಾಗಲಾರದು.
ಅದಕ್ಕೆ ಒಂದು ಉದಾಹರಣೆ ಎಂದರೆ, ಕಳೆದ ತಿಂಗಳು ರೈಲಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದೆ. ನನ್ನ ಪಕ್ಕ ಇಬ್ಬರು ಹುಡುಗಿಯರು ಕುಳಿತ್ತಿದ್ದರು. ಆ ಇಬ್ಬರು ಹುಡುಗಿಯರು ತುಂಬಾ ತಿಂಡಿಪೋತಿಯರು ಮತ್ತು ಸಿಕ್ಕಾಪಟ್ಟೆ ಮಾತನಾಡುತ್ತಿದ್ದರು. ಅವರ ಮಾತಿನ ಮಧ್ಯೆ “ನೋಡೆ ಕೋಳಿ ತಿಂದರೆ ಅದೇನೋ ಕೊರೋನ ವೈರಸ್ ಬರುತ್ತಂತೆ. ಅದಕ್ಕೆ ನಮ್ಮೆನೆಯವರ್ರು ವಾರದಿಂದ ಚಿಕನ್ ತಂದಿಲ್ಲ ಕಣೆ. ನೋಡಿಲ್ಲಿ. ಅಯ್ಯಪ್ಪಾ ಎಷ್ಟು ಕೆಟ್ಟದಾಗಿದೆಯಲ್ಲಾ” ಅಂತ ಕೋಳಿಯ ಗುಂಡುಕಾಯಿ (ಗಿಜ್ಜಾರ್ಡ್) ಯ ಒಂದು ಭಾಗವಾದ ಪ್ರೊವೆಂಟ್ರಿಕುಲಸ್ ನಲ್ಲಿ ರಕ್ತಸ್ರಾವವಾಗಿರೋದನ್ನು ತನ್ನ ಗೆಳತಿಗೆ ಆ ಹುಡುಗಿ ತನ್ನ ಮೊಬೈಲ್ ನಲ್ಲಿ ತೋರಿಸುತ್ತಿದ್ದಳು. ನನಗೆ ಅದುವರೆಗೂ ಯಾವುದೇ ಆ ತರಹ ವಾಟ್ಸ್ ಅಪ್ ಮೆಸೇಜ್ ಬಂದಿರದ ಕಾರಣ. ನನ್ನ ಮೊಬೈಲ್ ನಲ್ಲಿದ್ದ ಒಂದು ಪ್ರೊವೆಂಟ್ರಿಕುಲಸ್ ನ ಚಿತ್ರವನ್ನು ತೋರಿಸಿ “ನೋಡಿ ನಾನೇ ಕಟ್ ಮಾಡಿರೋ ಕೋಳಿಯ ಗುಂಡುಕಾಯಿಯ ಚಿತ್ರ ಇದು. ನಿಮಗೆ ಬಂದಿರೋ ಚಿತ್ರದಲ್ಲಿರೋದು ನನ್ನ ಮೊಬೈಲ್ ನಲ್ಲಿ ಇರೋದು ಒಂದೇ ತರಹ ಇದೆಯಲ್ಲ.” ಎಂದೆ. “ಓ ನೋಡೆ ಈ ಸರ್ ಹತ್ರನೂ ಹಂಗೆ ಇರೋ ಫೋಟ ಅದೆ” ಎಂದು ನನ್ನ ಮೊಬೈಲ್ ತೆಗೆದುಕೊಂಡು ಅವಳ ಗೆಳತಿಗೂ ತೋರಿಸಿದಳು. ನಾನು “ನೀವು ಅಂದುಕೊಂಡಿರೋ ಹಾಗೆ ಇದು ಕೊರೋನ ಕಾಯಿಲೆ ಅಲ್ಲ. ಇದು ಬೇರೆ ಕಾಯಿಲೆ. ಈ ಕಾಯಿಲೆ ಕೋಳಿಗಳಿಂದ ಮನುಷ್ಯರಿಗೆ ಬರಲ್ಲ.” ಅಂದೆ. “ಸರ್ ಯಾವ್ ಡಿಪಾರ್ಟ್ ಮೆಂಟ್ ಸರ್ ನೀವು? ಏನ್ ಕೆಲಸ ನಿಮ್ಮದು?” ಅಂತೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಳು. ಅವಳ ಪ್ರಶ್ನೆಗಳಿಗೆ ಉತ್ತರಿಸಿ “ಕೊರೋನ ಕೋಳಿಗಳಿಂದ ಹರಡೋಲ್ಲ” ಅಂತ ಹೇಳಿ ನಕ್ಕಿದೆ. “ಏನೋ ಸರ್ ಎಲ್ಲಾ ಕಡೆ ಹಂಗೆ ಮೆಸೇಜ್ ಮಾಡ್ತಾರೆ. ಅದಕ್ಕೆ ಕೋಳಿ ತಿನ್ನೋದುಬಿಟ್ಟಿದ್ದೇವೆ.” ಅಂದಳು. ಕೋಳಿಗಳಿಂದ ಕೊರೋನ ಹರಡೋಲ್ಲ ಅನ್ನೋದನ್ನು ನನ್ನ ಶಕ್ತಿಗನುಸಾರ ಅವಳಿಗೆ ತಿಳುವಳಿಕೆ ಆಗುವಂತೆ ಹೇಳಿದೆ.
ಇತ್ತೀಚೆಗೆ “ಏನಪ್ಪಾ ಭಾನುವಾರದ ಸ್ಪೆಷಲ್ ಚಿಕನ್ ತರಲಿಲ್ವಾ” ಅಂತ ನನ್ನ ಸ್ನೇಹಿತನ ಜೊತೆ ಮಾತನಾಡುವಾಗಲೂ “ಚಿಕನ್ ತಿನ್ನುವಷ್ಟಿಲ್ಲವಂತಲ್ಲಪ್ಪ” ಅಂತ ನನ್ನ ಸ್ನೇಹಿತ ಹೇಳಿದಾಗ ಅವನಿಗೂ ಪಾಠ ಮಾಡಬೇಕಾಯಿತು. “ಅಣ್ಣ ಚಿಕನ್ ತಿನ್ನಬಹುದಾ ಇಲ್ವಾ” ಅಂತ ನನ್ನ ಕಸಿನ್ ಗಳು ಕೇಳುವಾಗ ತಿನ್ನಪ್ಪಾ ಏನು ಆಗಲ್ಲ. ನೋಡು ನಾನು ಮೊನ್ನೆ ಟ್ರೈನಿಂಗ್ ಹೋದಾಗ ನಮಗೆ ದಿನಾ ಚಿಕನ್ ಊಟನೇ ಕೊಟ್ಟಿದ್ರು. ಏನು ಆಗಲ್ಲ ತಿನ್ನು ಅಂತ ಎಷ್ಟು ಹೇಳಿದರೂ ಅದನ್ನು ನಂಬದಿರುವಷ್ಟು ಜನ ಫೇಕ್ ನ್ಯೂಸ್ ಗಳನ್ನು ನಂಬುತ್ತಿದ್ದಾರೆ. ಆ ಫೇಕ್ ನ್ಯೂಸ್ ಗಳ ಕಾರಣಕ್ಕೆ ಈ ಒಂದು ತಿಂಗಳಲ್ಲಿ ಕೋಳಿ ಉದ್ಯಮಕ್ಕೆ ದೊಡ್ಡ ಪೆಟ್ಟೇ ಬಿದ್ದಿದೆ. ಒಂದು ಕೋಳಿಯನ್ನು ಬೆಳೆಸಲು ಎಪ್ಪತ್ತು ರೂಪಾಯಿ ಖರ್ಚು ಮಾಡಿದ ರೈತ ಇವತ್ತು ಕೇವಲ ಮೂವತ್ತೈದು ನಲವತ್ತು ರೂಪಾಯಿಗಳಿಗೆ ಮಾರುತ್ತಿದ್ದಾನೆ. ಕೇವಲ ಮೂರು ಸಾವಿರ ಕೋಳಿ ಸಾಕಿರೋ ರೈತನಿಗೂ ಮೂರು ಸಾವಿರ ಕೋಳಿಯಿಂದ ಸುಮಾರು ಒಂದು ಲಕ್ಷ ರೂಪಾಯಿ ನಷ್ಟವಾಗುತ್ತೆ ಎಂದರೆ ಸಾವಿರಾರು ಕೋಳಿಗಳನ್ನು ಸಾಕಿರುವ ರೈತನ ನಷ್ಟ ಎಷ್ಟಿರಬೇಡ ಲೆಕ್ಕ ಹಾಕಿ. ಕೋಳಿ ಉದ್ಯಮದ ಮೇಲಷ್ಟೆ ಅಲ್ಲ ಕೊರೋನ ದೇಶದ ಆರ್ಥಿಕತೆ ಮೇಲೆ ಕೆಟ್ಟ ಪರಿಣಾಮ ಬೀರಿದೆ ಬೀರುತ್ತಿದೆ ಎನ್ನುವುದು ಕಟುಸತ್ಯ.
ಚೀನ ದೇಶದ ಪಬ್ಲಿಕ್ ಹೆಲ್ತ್ ಸಿಸ್ಟಮ್ ಹೇಗಿದೆಯೋ ತಿಳಿಯದು. ಆದರೆ ಇತ್ತೀಚಿನ ಕಾಯಿಲೆಗಳಾದ ಡೆಂಗ್ಯೂ, ಚಿಕನ್ ಗುನ್ಯಾ, ಹೆಚ್1 ಎನ್1, ನಂತಹ ರೋಗಗಳನ್ನು ಯಶಸ್ವಿಯಾಗಿ ಹತೋಟಿಗೆ ತರುವಲ್ಲಿ ಶ್ರಮಿಸುವ ದೊಡ್ಡ ತಂಡಗಳು ಕೇಂದ್ರಮಟ್ಟದಿಂದ ಹಿಡಿದು, ರಾಜ್ಯ, ಜಿಲ್ಲೆ, ತಾಲ್ಲೂಕು ಮಟ್ಟದವರೆಗೆ ನಮ್ಮ ದೇಶದಲ್ಲಿ ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಆ ಕಾರಣಕ್ಕೆ ನಿಫಾ ವೈರಸ್ ನಂತಹ ಭಯಾನಕ ಕಾಯಿಲೆಯನ್ನು ಕೇರಳದಲ್ಲಿ 2018 ರಲ್ಲಿ ಹದ್ದುಬಸ್ತಿಗೆ ತರಲು ಸಾಧ್ಯವಾಯಿತು. ಈಗ ಕೊರೋನ ಬಂದಿದೆ. ಮುಂದೆ ಬೇರೆ ಯಾವುದೇ ಕಾಯಿಲೆ ಬರಬಹುದು. ಎಲ್ಲವನ್ನೂ ಹತೋಟಿಗೆ ತರುವ ಶಕ್ತಿ ನಮ್ಮ ದೇಶಕ್ಕಿದೆ ಎನ್ನುವ ನಂಬಿಕೆ ಇರಲಿ. ಕೊರೋನ ಬಗ್ಗೆ ಭಯಬೇಡ. ಮಾಸ್ಕ್, ಸ್ಯಾನಿಟೈಜರ್ ಅಂತ ದುಡ್ಡು ದಂಡ ಮಾಡಿಕೊಳ್ಳೋದು ನಿಮಗೆ ಬಿಟ್ಟ ವಿಚಾರ. ಅದರ ಬದಲು ಸೋಪು ಹಚ್ಚಿ ಚೆನ್ನಾಗಿ ಕೈ ತೊಳೆದುಕೊಳ್ಳೋದನ್ನ ಅಭ್ಯಾಸ ಮಾಡಿಕೊಳ್ಳಿ. ತುಂಬಾ ಆರೋಗ್ಯದ ಸಮಸ್ಯೆ ಅನಿಸಿದರೆ ಉಸಿರಾಟದ ತೊಂದರೆಯಾದರೆ, ನ್ಯೂಮೋನಿಯದಂತಹ ಲಕ್ಷಣ ಕಂಡು ಬಂದರೆ ಹತ್ತಿರದ ವೈದ್ಯರನ್ನು ತಕ್ಷಣ ಸಂಪರ್ಕಿಸಿ. ಆರೋಗ್ಯವಾಗಿರಿ. ಖುಷಿಯಾಗಿರಿ.
–ಡಾ. ನಟರಾಜು ಎಸ್. ಎಂ.
Very good information sir. Thank you.
ಲವ್ಲಿ . ಬಾಸ್. ಸಂದರ್ಭೋಚಿತ ಬರಹ
We expect more writeups from you sir.
Sir nice and timely information
Sir nice
ಆರ್ಥಿಕ ಮಟ್ಟ ಕುಗ್ಗಿದೆಯೋ ಏನೋ ಗೊತ್ತಿಲ್ಲ ಜನರ ಬುದ್ಧಿಮಟ್ಟ ಮಾತ್ರ ಕುಗ್ಗಿದೆ ಕಾರಣ ಸುದ್ದಿಯನ್ನು ಲಘುವಾಗಿ ವಿಶ್ಲೇಷಣೆ ಮಾಡಿಕೊಳ್ಳುವುದು. ಸುದ್ದಿ ಆಳ ಬೇರೂರ ಬೇಕಾದರೆ ಇಂತಹ ಪ್ರಯತ್ನ ಹೆಚ್ಚಾಗಬೇಕು..
ಜನ ಮರುಳೊ ಜಾತ್ರೆ ಮರುಳೊ ಅನ್ನೋದು ಇದ್ಕೇನೆ….
ನಿಮ್ಮ ಬರಹ ಕೂಡ ಸಾಂಕ್ರಮಿಕ ಸರ್….
ತುಂಬಾ ಅರ್ಥಪೂರ್ಣ ಲೇಖನ…ತಿಳುವಳಿಕೆ ಮುಖ್ಯ. ಫೇಕ್ ನ್ಯೂಸ್ ನಂಬೊ ಬದಲು ನಿಜಾಂಶದ ಕಡೆ ಗಮನಿಸುವುದು ಬಹು ಮುಖ್ಯ. ನಿಮ್ಮ ಅರ್ಥೈಸುವ ಕಲೆ ಮೆಚ್ಚುವಂತಹುದು…ಉಪಯುಕ್ತ ಲೇಖನ