ಕೋಲಾರಮ್ಮ ದೇವಸ್ಥಾನ: ಪ್ರಶಸ್ತಿ ಪಿ.

ಕರ್ನಾಟಕದಲ್ಲಿನ ಪುರಾತನ ದೇವಾಲಯಗಳಲ್ಲಿ ಹೆಚ್ಚಿರುವುದು ಹೊಯ್ಸಳರ ದೇಗುಲಗಳು. ಅವುಗಳಿಗಿಂತಲೂ ಹಿಂದಿನ ದೇಗುಲಗಳು ಅಂದರೆ ನೆನಪಾಗೋದು ಚೋಳರ ಕಾಲದ್ದು ಮತ್ತು ಅದಕ್ಕಿಂತಲೂ ಹಿಂದೆ ಅಂದರೆ ಕದಂಬರ, ಗಂಗರ ಕಾಲದ ಅಳಿದುಳಿದ ದೇಗುಲಗಳು. ಕೋಲಾರದಲ್ಲಿ ೧೦೧೨ರಲ್ಲಿ ಕಟ್ಟಿಸಲಾದ ದೇವಸ್ಥಾನವೊಂದಿದೆ, ಇನ್ನೂ ಒಳ್ಳೆಯ ಸ್ಥಿತಿಯಲ್ಲಿಯೇ ಇದೆಯೆಂಬ ಸುದ್ದಿ ಕೇಳಿದಾಗ ಅಲ್ಲಿಗೆ ಹೋಗದಿರಲಾಗಲಿಲ್ಲ. ಆ ದೇಗುಲವೇ ಕೋಲಾರಕ್ಕೆ ಇಂದಿನ ಹೆಸರು ಬರಲು ಕಾರಣವಾದ ಕೋಲಾರಮ್ಮ ದೇವಸ್ಥಾನ. 

ಇತಿಹಾಸ:
ಮೂರನೇ ಶತಮಾನದ ಶುರುವಿನಿಂದಲೂ ಕೂವಲಾಲಪುರ(ಇಂದಿನ ಕೋಲಾರವು) ಗಂಗರ ಆಳ್ವಿಕೆಗೆ ಒಳಪಟ್ಟಿತ್ತು ಎಂದು ಶಾಸನಗಳು ತಿಳಿಸುತ್ತದೆ. ಇಲ್ಲಿನ ಕೋಲಾರಮ್ಮನ ದೇವಸ್ಥಾನವನ್ನು ರಾಜೇಂದ್ರ ಚೋಳ(೧೦೦೨-೧೦೪೫) ಕಟ್ಟಿಸಿರಬಹುದೆಂದು ದೇವಾಲಯದಲ್ಲಿರುವ ರಾಜೇಂದ್ರ ಚೋಳನ ಶಾಸನಗಳಿಂದ ಅಂದಾಜಿಸಲಾಗುತ್ತದೆ.  ಚೋಳರ ನಂತರದಲ್ಲಿ  ಹೊಯ್ಸಳ, ವಿಜಯನಗರದ ಅರಸರಿಂದಲೂ ಆಳ್ವಿಕೆಗೊಳಲ್ಪಟ್ಟ ಕೋಲಾರದಲ್ಲಿದ್ದ ಈ ದೇಗುಲ ಸಣ್ಣಪುಟ್ಟ ಮಾರ್ಪಾಡುಗಳನ್ನೊಳಗೊಂಡು ಪ್ರಸ್ತುತ ರೂಪವನ್ನು ಪಡೆದಿರಬಹುದು. 

ಚೇಳಮ್ಮ:
ಇಲ್ಲಿನ ಗರ್ಭಗುಡಿಯಲ್ಲಿರುವ ಕೋಲಾರಮ್ಮನ ವಿಗ್ರಹದ ಮೇಲೊಂದು ಚೇಳಿನ ಚಿತ್ರಣವಿದೆ. ಇದರ ಪಕ್ಕದಲ್ಲಿರುವ ದೇವತೆಯೇ ಚೇಳಮ್ಮ. ಇಲ್ಲಿ ಪೂಜೆ ಸಲ್ಲಿಸಿದರೆ ಚೇಳುಗಳ ಕಡಿತವಾಗುವುದಿಲ್ಲ ಎಂಬ ನಂಬಿಕೆಯಿದೆ. ಅದರ ಪಕ್ಕದಲ್ಲೇ ಒಂದು ಭೂಮಿಯೊಳಗೆ ಸಾಗುವ ಒಂದು ಹುಂಡಿಯಿದ್ದು ಆ ಹುಂಡಿಯ ಒಳಗೆ ಚೇಳುಗಳಿವೆಯಂತೆ. ಅವು ಆಗಾಗ ಹೊರಬಂದು ದೇವತೆಯ ವಿಗ್ರಹದ ಪಕ್ಕದಲ್ಲಿ ಓಡಾಡುತ್ತಿರುತ್ತವೆ ಎಂದು ಜನ ತಿಳಿಸುತ್ತಾರೆ. ಆ ಹುಂಡಿಯಲ್ಲಿ ನಾಣ್ಯಗಳನ್ನು ಹಾಕೋ ಭಕ್ತರಿಂದ ಚೇಳುಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಇಲ್ಲಿ ನಾಣ್ಯಗಳನ್ನು ಹಾಕಿ ಚೇಳುಗಳ ಉತ್ಪಾದನೆಗೆ ತೊಂದರೆಯನ್ನುಂಟು ಮಾಡಬಾರದು ಎಂಬ ಫಲಕ ಸಹ ದೇಗುಲದಲ್ಲಿದೆ. ಕೋಲಾರಮ್ಮನ ರೂಪದಲ್ಲಿ ದೇವಿ ಪಾರ್ವತಿ ಇಲ್ಲಿ ನೆಲಸಿದ್ದಾಳೆ ಎಂಬುದು ಭಕ್ತರ ನಂಬಿಕೆ.

ಶಿಲ್ಪಕಲೆ: ದ್ರಾವಿಡ ಶೈಲಿಯಲ್ಲಿರುವ ಈ ದೇವಾಲಯದ ಹೊರನೋಟವು ಎರಡು ಪ್ರತ್ಯೇಕವಾದ ದೇಗುಲಗಳನ್ನು ಸೇರಿಸಿದಂತೆ ಕಾಣುತ್ತದೆ. ದೇಗುಲದ ಹೊರಗೋಡೆಗಳಲ್ಲೆಲ್ಲಾ ತುಂಬಿರುವ ತಮಿಳು ಬರಹಗಳು ತಮಿಳು ಬಲ್ಲ ಇತಿಹಾಸಜ್ಞರಿಗೆ ಉತ್ತಮ ಮಾಹಿತಿಯ ಆಗರವಾಗಬಲ್ಲದು.  ಇಲ್ಲಿನ ಪ್ರವೇಶದ್ವಾರದಲ್ಲಿರುವ ಶಿಲಾಬಾಲಿಕೆಯರು, ಶ್ರೀಕೃಷ್ಣ, ನಂತರ ಸಿಗುವ ಸಪ್ತಮಾತೃಕೆಯರು, ದೇಗುಲದ ಹೊರಗೋಡೆಯಲ್ಲಿರುವ ಉಬ್ಬು ಶಿಲ್ಪಗಳು, ಸತಿಗಲ್ಲಿನಂತಹ ರಚನೆ, ಕಂಬದಲ್ಲಿನ ರಚನೆಗಳಲ್ಲಿರುವ ಶಿಲ್ಪಕಲೆ ಒಂದಕ್ಕಿಂತ ಒಂದು ವಿಭಿನ್ನಶೈಲಿಯಲ್ಲಿದ್ದು ದೇಗುಲ ಬೇರೆ ಬೇರೆ ಅರಸರ ಆಳ್ವಿಕೆಯಲ್ಲಿ ಮಾರ್ಪಾಟ್ಟಾಗಿರಬಹುದಾದ ಸಾಧ್ಯತೆಯನ್ನು ತಿಳಿಸುತ್ತದೆ. 

ಇಲ್ಲಿ ಪ್ರಸಾದವಾಗಿ ಕೊಡುವುದು ನಿಂಬೆಹಣ್ಣು. ಜನ ಹರಕೆಯಾಗಿ ನಿಂಬೆಹಣ್ಣುಗಳನ್ನು ದೇಗುಲದ ಎದುರಿಗಿನ ಧ್ವಜಸ್ಥಂಭದ ಪಕ್ಕದ ಕಂಬಕ್ಕೆ ಚುಚ್ಚುವುದನ್ನು ಗಮನಿಸಬಹುದು

ವೀಕ್ಷಣಾ ಸಮಯ: 
ದೇಗುಲ ಬೆಳಗ್ಗಿನ ಏಳರ ಸುಮಾರಿಗೆ ತೆರೆದರೂ ಗರ್ಭಗುಡಿಯಲ್ಲಿರುವ ಮೂರ್ತಿಯ ದರ್ಶನವಾಗುವುದು ಒಂಭತ್ತೂವರೆ ಸುಮಾರಿಗೆ. ಅಲ್ಲಿಯವರೆಗೆ ಅಲಂಕಾರಕ್ಕಾಗಿ ಪರದೆಯನ್ನು ಮುಚ್ಚಿರಲಾಗುತ್ತದೆ. ಉಳಿದ ವಿಗ್ರಹಗಳನ್ನು , ದೇಗುಲದ ಪರಿಸರವನ್ನು ಸಂದರ್ಶಿಸಬಹುದು.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x