ವಿಧವಿಧ ರಾಮಾಯಣಗಳಿಂದ ಹೆಚ್ಚುತ್ತಿರುವ ಹೊರೆಯಿಂದಾಗಿ, ಭೂಭಾರವನ್ನು ಹೊತ್ತ ಆದಿಶೇಷನು ನುಲಿದಾಡುತ್ತಿದ್ದಾನೆ; ರಾಮಾಯಣ ಸಾಹಿತ್ಯ ಪ್ರದೇಶ ಕಾಲಿಡಲಾಗದಷ್ಟು ನಿಬಿಡವಾಗಿಹೋಗಿದೆ ಎಂಬಂತೆ ಕುಮಾರವ್ಯಾಸನು ಸುಮಾರು ೬೦೦ ವರ್ಷಗಳ ಹಿಂದೆಯೇ ಹೇಳಿದ್ದನೆಂದಮೇಲೆ, ಇಂದು ಆ ಹೊರೆ ಇನ್ನೆಷ್ಟು ಹೆಚ್ಚಿರಬಹುದೆಂದು ಊಹಿಸಬಹುದು. ಆದ್ದರಿಂದಾಗಿ, ಮತ್ತೆ ಅದೇ ಕಥೆಯನ್ನೇ ಇರುಳುದ್ದ ಹೇಳಿ, ಹಗಲು ಹರಿಯುತ್ತಿದ್ದಂತೆ, ರಾಮಣ್ಣ-ರಾವಣ್ಣ ಯೇನ್ ಅಣ್ಣ-ತಮ್ಮಂದ್ರಾ? ಎಂಬ ಆಕಳಿಕೆಯ ಆಲಾಪವನ್ನು ಆಲಿಸುವ ಬದಲು, ಈಗಿನ ರಾಮಜನ್ಮದಿನಾಚರಣೆಗಾಗಿ ಅದೇ ರಘುವರಕಥೆಯ ಕೆಲವೇ ವಿಚಾರಗಳ ಲಘುನೋಟವೊಂದನ್ನು ಇಲ್ಲಿ ತೆಗೆದುಕೊಳ್ಳಲಾಗಿದೆ. ಆ ಕಥೆಯ ಕೆಲವು ಪ್ರಮುಖ ಹೆಸರುಗಳ ಮೂಲ-ಅರ್ಥಗಳಲ್ಲಿರುವ ಮೌಲ್ಯಗಳತ್ತ ಗಮನ ಸೆಳೆಯುವ ಒಂದು ಹಾರೈಕೆಹೂಮಾಲೆಯನ್ನು ಪ್ರಾರಂಭದಲ್ಲೇ ಪ್ರಸ್ತುತಪಡಿಸಲಾಗಿದೆ. ಅನಂತರ, ರಾಮನವಮಿ ಮತ್ತು ಮಜ್ಜಿಗೆ-ಪಾನಕ ನಡುವಿನ ವಿಚಿತ್ರ ಹೆಣಿಕೆಯನ್ನು ಗುರುತಿಸಿ, ಅದನ್ನು ಈ ’ಕೋಲಾಯುಗಕ್ಕೆ ಅನ್ವಯಿಸುವ ನಿಟ್ಟಿನಲ್ಲಿ, ಕೆಲವು ಸೊಟ್ಟ ಸೊಲ್ಲುಗಳನ್ನೂ ಮತ್ತು ಪೌರಾಣಿಕ ಡೊಂಕುನೋಟವೊಂದನ್ನೂ ಸೇರಿಸಲಾಗಿದೆ. [ವಾಸ್ತವವಾಗಿ, ’ಪಾನಕರಸರಾಗಾಸವಯೋಜನ’ ಎಂಬ ಪೇಯ ತಯಾರಿಕೆ ಕಲೆಯು, ೬೪ ಕಲೆಗಳಲ್ಲಿ ಒಂದು ಎಂಬುದನ್ನೂ, ಮತ್ತು ನೀರಿನಂಶಕ್ಕೆ ತಕ್ಕಾಗಿ ಮಜ್ಜಿಗೆಯನ್ನು ಘೋಲ, ಮಥಿತ, ತಕ್ರ, ಉದಶ್ವಿತ್ ಎಂದು ವಿಂಗಡಿಸುವ ವಿಶಿಷ್ಟ ಪದ್ಧತಿಯೊಂದಿತ್ತು ಎಂಬುದನ್ನೂ ಗಮನಿಸಿದರೆ, ಮಜ್ಜಿಗೆ-ಪಾನಕ ಕುರಿತು ಗಂಭೀರ ಚರ್ಚೆ-ಚಿಂತನೆಗಳ ಅಗತ್ಯಕ್ಕೆ ಸ್ಪಷ್ಟ ಸೂಚನೆ-ಸ್ಫೂರ್ತಿಗಳೇ ಸಿಗುತ್ತವೆ.]
ಶ್ರೀರಾಮಜಯಂತಿ ಆಶೋತ್ತರವು
> ರಾಮ ಎಂದರೆ ರಮಣೀಯ ಆದದ್ದು ಅಥವಾ ಆರಾಮ-ವಿರಾಮ ನೀಡುವಂಥದ್ದು ಎಂಬ ಮೂಲ ಅರ್ಥಕ್ಕೆ ಅನುಗುಣವಾಗಿ, ಶ್ರಮಜೀವಿಗಳೆಲ್ಲರಿಗೂ ವಿಶ್ರಾಂತಿಯೂ-ಉಲ್ಲಾಸವೂ ದೊರಕಲಿ!
> ಸೀತಾ ಎಂದರೆ ನೇಗಿಲ ಸಾಲು (ನೆಲ ಉತ್ತಾಗ ಉಂಟಾಗುವ ಗೆರೆ) ಎಂಬ ಮೂಲ ಅರ್ಥಕ್ಕೆ ಹೊಂದುವಂತೆ, ಇಂದು ’ಮೂಗಿನಲ್ಲೇ ನೆಲವನ್ನುಳುತ್ತಿರುವ’ ನೇಗಿಲಯೋಗಿಗಳಿಗೆ, ಇನ್ನು ಮೇಲಾದರೂ ನೆಮ್ಮದಿ ಸಿಗಲಿ! ನೆಲಮಗಳು ಸೀತೆಯು ಉಳುಮೆಯಲ್ಲಿ ಒಲುಮೆಯನ್ನೂ, ದುಡಿಮೆಯಲ್ಲಿ ಗೆಲಿಮೆ-ನಲಿಮೆಗಳನ್ನೂ ಸರ್ವ ಕ್ಷೇತ್ರಕರ್ಮಿಗಳಲ್ಲೂ ಉಂಟಾಗಿಸಲಿ!
> ಯೋಧ-ಯುದ್ಧ-ಆಯುಧ ಇಂಥ ಯುದ್ಧವಿಚಾರಗಳಿಗೆ ತದ್ವಿರುದ್ಧ ಹೆಸರನ್ನೇ ಪಡೆದಿರುವ ಅ-ಯೋಧ್ಯಾ ಕುರಿತಂತೆಯೇ ಅಯೋಗ್ಯ-ಬರ್ಬರ ಮುಂದಾಳುಗಳು ಹೊತ್ತಿಕ್ಕಿರುವ ಯುದ್ಧಾಗ್ನಿಯನ್ನು, ಸರಸರ ಸರಿಯುವ ಸರಯೂ ನದಿಯು ನಂದಿಸಲಿ! ಈ ಯುದ್ಧದ ಗೀಳಿಗೆ ಬಿದ್ದಿರುವ ಹೃದಯಗಳ ನಡುವೆ ಒಂದು ಪ್ರಬಲ ಪ್ರೇಮಸೇತು ನಿರ್ಮಾಣವಾಗಲಿ!
> ದೊಡ್ಡ ದವಡೆಯುಳ್ಳವನು [ಹನು=ದವಡೆ; ಹನುಮಂತ= (ದೊಡ್ಡ) ದವಡೆಯುಳ್ಳವನು; ಹನುಗ್ರಹ= ಅಲ್ಲಾಡದಂತೆ ಸಿಕ್ಕಿಕೊಂಡಿರುವ ದವಡೆ] ಭಾರತ ದೌರ್ಭಾಗ್ಯವಿಧಾತರ ದವಡೆಗಳಿಂದ ಪ್ರಜೆಗಳನ್ನು ಬಿಡಿಸಲಿ! ಭಜರಂಗ ಬಲಿ ಹೆಸರಿನಲ್ಲಿ ವಿಭಜನೆಯಾಗುವುದನ್ನೂ, ಅಮಾಯಕರು ’ಬಲಿ’ ಆಗುವುದನ್ನೂ, ಮತ್ತು ಜನನಾಯಕರ ಸುಗ್ರೀವಾಜ್ಞೆಗಳಿಂದಾಗಿ ಜನಜೀವನವು ವಾಲಿಬಾಲ್ ಆಗುವುದನ್ನೂ ಆತನು ತಪ್ಪಿಸಲಿ! ಪವಮಾನಪುತ್ರನಾಗಿ, ಪ್ರಜೆಗಳು ನಿರಾಳವಾಗಿ ಉಸಿರಾಡುವಂಥ ಹವಾಮಾನವನ್ನು ಆತನು ನೀಡಲಿ!
> ರವ (ಶಬ್ದ), ರವಣ (ರೋದನ) ಅಥವಾ ಇಂಗ್ಲಿಷ್‌ನ ರೋರಿಂಗ್ (ಅಬ್ಬರ) ಎಂಬ ಮೂಲ ಅರ್ಥಗಳಲ್ಲಿ, ರಾವಣ-ವಧೆ ಎಂಬುದು, ಆರ್ಭಟ-ಆಕ್ರಂದನ-ಆಡಂಬರಗಳ, ಹಮ್ಮುಬಿಮ್ಮುಗಳ, ರವರವ ನರಕದ ಸೋಲನ್ನು ಸಂಕೇತಿಸಲಿ!
> ದಶರಥ ಎಂಬುದರಲ್ಲಿರುವ ಕ್ಷಾತ್ರಬಲವು, ದಶಕಂಠ ರಾವಣ ಎಂಬುದರಲ್ಲಿರುವ ಹತ್ತುಪಟ್ಟು ಅನಿಷ್ಟಶಕ್ತಿಯನ್ನು ಬಗ್ಗಿಬಡಿಯಲಿ! ಅಂತೆಯೇ, ಹತ್ತು ರಥಗಳಿದ್ದೂ ಅತ್ತು-ಕರೆದು, ಬೇಸತ್ತು-ಸತ್ತ ದಶರಥನ ಕಥೆಯು, ಹತ್ತಾರು ರಥಗಳನ್ನು, ಅರ್ಥಾತ್ ಮೋಟಾರುವಾಹನಗಳನ್ನು, ಒಬ್ಬರೇ ಹೊಂದಲು ಹೊರಟಿರುವವರ, ಅರ್ಥಾತ್ ತೀವ್ರಭೋಗವಾದಿಗಳ, ಕಣ್ತೆರೆಸಲಿ!
> ಜನಕ ಪ್ರಭಾವದಿಂದಾಗಿ, ಆಮ್ಲಜನಕ, ಜಲಜನಕ, ಸಾರಜನಕ (ನೈಟ್ರೋಜನ್), ಸಸಾರಜನಕ (ಪ್ರೋಟೀನ್) (ಸ್ತ್ರೀವಾದಿಗಳಿಗೆ, ಇದು, ಆಮ್ಲಜನನಿ, ಜಲಜನನಿ, ಸಾರಜನನಿ, ಸಸಾರಜನನಿ…) ಮುಂತಾದಂಥ ಜೀವದಾಯಕ ದ್ರವ್ಯಗಳು, ಝನಕ್ ಝನಕ್ ಎಂಬ ಸಮತೋಲದಲ್ಲಿ ಜೀವಿಗಳನ್ನು ಪೊರೆಯಲಿ!
ಪಾನಕರಾಮನ ಸೊಟ್ಟ ಸೊಲ್ಲುಗಳು
> ಯುಗಾದಿಗೆ ಬೇವು-ಬೆಲ್ಲದ ತಂಪು; ರಾಮನವಮಿಗೆ ಬೇಲ-ಬೆಲ್ಲದ ಇಂಪು-ಕಂಪು!
> ಸಾಮಾನ್ಯ ಜನರ ರಾಮಾಣ್ಯ ಕೇಳೋರ್‍ಯಾರು?
> ಪರಶುರಾಮ, ಬಲರಾಮ, ಶ್ರೀರಾಮ ಸೇರಿಸಿ ತ್ರೀರಾಮನವಮಿ ಮಾಡಬಹುದೇ?
> ರಾಮ್‌ನೌಮಿ ದಿನಕ್ಕೆ ಪಾನಕ ನಿರೋಧ ತಂದ್ರಂತೆ!
> ಹೇಳೋದ್ ರಾಮನಾಮ, ಹಾಕೋದ್ ಎಲ್ರಿಗೂ ಪಂಗನಾಮ!
> ಆ ನವರಾತ್ರೀಗೆ ಮಾರ್‌ನೋಮಿ, ಈ ನವರಾತ್ರೀಗೆ ರಾಮ್‌ನೋಮಿ!
> ರಾಮನಂಥ ಅರಸನಿಲ್ಲ, ಶಾಮನಂಥ ರಸಿಕನಿಲ್ಲ, ಸೋಮದಂಥ ರಸವಿಲ!
> ರಾಮ ಅರಸನಾಗಬೇಕೆ, ರಾಮರಸ ಸೇವಿಸಲು?
> ರಮ್ ಕುಡಿದರೆ ರಾಮ್ ನೌಮಿ ಆಗೋದುಂಟೇ? ಜಿನ್ ಕುಡಿದವನು ಜಿನ ಆಗೋದುಂಟೇ? ಬ್ರಾಂದಿ ಕುಡಿದವನಿಗೆ ಭ್ರಾಂತಿ ಬಿಡೋದುಂಟೇ?
> ಕ್ಲಬ್ಬಿಗೆ ಬರೋಳು ಪಬ್ಬಿಗೆ ಬಾರಳೇ?
> ಕ್ಲಬ್ಬಿನಲಿ ಕಬ್ಬಿನರಸವನ್ ಕೇಳ್ದ ಮಬ್ಬುತಿಮ್ಮ!
> ರಾವಣನ ಹೊಟ್ಟೆಗೆ ರಾಮನವಮಿಯ ಮಜ್ಜಿಗೆಯೇ?
> ನೀರ್ ಮಜ್ಜಿಗೆ ಬದಲಿಗೆ ಬೀರ್ ತರೋಕ್ ಹೊರಟಳು! ಉದಕಶಾಂತಿಗೆ ವೋಡ್ಕಾ ಬೇಕೆಂದಳು!
> ತೀರ್ಥಂಕರ ಆಗಬೇಕೆಂದು ಶ್ರೀತೈಲಮಹಾತ್ಮೆ ಓದಿದ!
> ಕೋಲಾಪಾನಂ ಕಂಠಕ್ಕೆ ಜೀವರಸಂ!
> ಕಳ್ಳಿನಂಗಡಿಯಲ್ಲಿರುವವನಿಗೆ ಕಲ್ಲಂಗಡಿ ರಸವೇ?
> ಕಬ್ಬಿನರಸ ಕುಡಿದು ಕಬ್ಬಿಣದಂತಾದ!
> ಕಬ್ಬು ತಿರುಚಿತೆಂದು, ಕಬ್ಬುರುಚಿಯೂ ತಿರುಚುವುದೇ?
> ಷರಾಬ್ ಹಾಕುವವನಿಗೆ ಷರಬತ್ ಲೆಕ್ಕವೇ?
> ಪಾನಕ ಹಾಕೋಕೆ ಜಾನಕಮ್ಮನ ಅಪ್ಪಣೆಯೇ?
> ಮಜ್ಜಿಗೆ ಕುಡಿಯೋಕೆ ಈಚಲ ನೆರಳಿಗೆ ಓಡಿದ!
> ಕೋತಿಗೆ ಕೈಬಾಯೆಲ್ಲ ಮೊಸರು; ಮೇಕೆಗೆ ಮೈಕೆಸರು-ಬಾಯ್ಮೇಲಷ್ಟೇ ಮೊಸರು!
> ಕುಡಿಯೋ ಪಾನಕ ಕುದಿಯೋ ನೀರಿನಲ್ಲೇ?
> ಕೋಲಾ ಪಾನ, ಕಪಿಲಾ ಸ್ನಾನ!
> ಪಾನದಿಂದ ಜೋಲಾಡುವವನೆಂದ, ಜೋ-ಪಾನ!
> ನಿಂಬೆಪಾನಕ ಹೀರಿ, ರಂಭೆಯನ್ನೇ ಸಪ್ಪೆ ಎಂದ!
> ನಿಂಬೆ ಸೊಪ್ಪು ತಿಂದು ’ಎಳೆನಿಂಬೆ’ ಆದ; ಬಿಲ್ಪತ್ರೆ ತಿಂದು ಆಸ್ಪತ್ರೆ ಸೇರಿದ!
> ಪಾನಕ ಸೇದಿದವನನ್ನು ಮೇನಕೆಯೂ ಸೆಳೆಯಳು!
> ರಸಾಯನ ಮಾಡೋಕೆ ಕೆಮಿಸ್ಟ್ರಿ ಓದ್ಬೇಕಾ?
> ಕೋಸಂಬ್ರಿ ಕಲಿಸಲು ಕಾದಂಬ್ರಿ ಬರೆದ್ರು!
> ಸೀತೆಗೆ ಸೀತ ಆಯ್ತೆಂದು, ಸೀನ ಸೀನಿದ!
> ಸೀತಾಫಲ ತಿನ್ಲೀ, ರಾಮಫಲ ತಿನ್ಲೀ, ಸೀತಾರಾಮನಿಗಂತೂ ಫಲ ಒಂದೇ: ಸೊನ್ನೆ!
> ಹಿಂದಿಂದ ಮುಂದೆ, ಮುಂದಿಂದ ಹಿಂದೆ, ಮದ್ರಾಸಿನ ಸಿದ್ರಾಮ ಒಂದೇ!
> ಕರ್ಬೂಜ ಕಂಡು ಚತುರ್ಭುಜನೂ ಜೊಲ್ಲು ತೊಟ್ಟಿಸಿದ!
> ಫಲಾಹಾರಜೀವಿ ಗಿಣಿಗೆ ಫಲಾಪೇಕ್ಷೆ ಬೇಡವೆಂದು ಬೋಧಿಸಿ ವಿಫಲನಾದ!
> ಹನುಮಾನ್ ಮುಂದೆ ಹನಿಮೂನ್ ವಿಷಯ ಮಾತಾಡಿದ್ರು!
> ಹನುಮಾನನಿದ್ದೆಡೆ ಅನುಮಾನವಿಲ್ಲ!
> ಹಣಮಂತನ ಆಟದ ಮುಂದೆ ಹಣವಂತರ ಆಟವೇ?
> ಕ್ರಿಕೆಟ್ಟಿಂದ ದಿಕ್ಕೆಟ್ಟವರು, ’ವಾಲಿ’ ಬಾಲ್ ಎಂಬುದನ್ನು ಬಾಲಮಂಗಗಳ ಬಾಲದಾಟ ಎಂದರು!
> ಅಜ್ಜಿಗೆ ಬೇಡ ಬರಿ ಮಜ್ಜಿಗೆ; ಆಯುಸ್ಸಿನಿಂದ ಆಯಾಸವಾದ ಅವಳಿಗೆ ಬೇಕು, ಆಯುಸ್ ಕ್ರೀಂ!
ಕೋಲಾಪಾನಕ ಉಪಾಖ್ಯಾನವು
ಆದಿಕಾಲದಲ್ಲಿ ಹಾಲ್ಗಡಲನ್ನು ಕಡೆಯುವ ಪ್ರಕ್ರಿಯೆಯಲ್ಲಿ ಕೋಲಾ ಎಂಬ ಹಾಳುನೀರು ಹಾಲಾಹಲಕ್ಕಿಂತಲೂ ಸ್ವಲ್ಪ ಮುಂಚೆಯೇ ಉಕ್ಕಿಬಂದು, ಕೋಲಾಹಲ ಎಂಬ ಘನನಾಮದಿಂದ ಕರೆಯಲ್ಪಟ್ಟಿತು. ಆ ಸಮಯ ಅಲ್ಲೇ ದಂಡೆಯಲ್ಲಿ ಕೋಕಾಸುರನೊಡನೆ ಸಮರ ಸಾಗಿಸುತ್ತಿದ್ದ ಕೋಲಾಸುರಭಯಂಕರಿಯು, ಕೋಲಾಹಲದ ಲೋಕೋತ್ತರ ರೂಪದಿಂದ ಒಮ್ಮೆಲೇ ಸೆಳೆಯಲ್ಪಟ್ಟು, ಅದನ್ನೇ ’ಕೋಲಾಹಲಾಯುಧ ಎಂದು ಅಭಿಮಂತ್ರಿಸಿ, ಕೋಕಾಸುರನ ಮೇಲೆ ಪ್ರಯೋಗಿಸಿಬಿಟ್ಟಳು. ಇದರಿಂದ ತನ್ನ ಸಾವು ಸನಿಹವಾಯಿತೆಂದು ಸುಳಿವು ಹಿಡಿದ ಕೋಕಾಸುರನು, ಒಡನೆಯೇ ದೇವಿಯ ಪಾದಕ್ಕೆ ಶಿರವನಿಕ್ಕಿ ಆಕೆಯಲ್ಲಿ ಜೀವಭಿಕ್ಷೆ ಬೇಡಲು, ಕೊಂಚ ಮೆದುವಾದ ದೇವಿಯು, ಈಗ ನಿನ್ನ ಜೀವವನ್ನು ಹಿಡಿದಿಡಲು ತ್ರಿಮೂರ್ತಿಗಳೂ ಅಶಕ್ತರು; ಆದರೆ, ಮುಂದೆ ಸಂಭವಿಸಲಿರುವ ಭವದಲ್ಲಿ ನೀನು ಇದೇ ಕೋಲಾಹಲ ಸತ್ವದಿಂದ ರಚಿಸಲ್ಪಟ್ಟು, ಕೋಕಾಕೋಲಾ ಎಂಬ ಅಲೌಕಿಕ ಅಭಿಧಾನದಿಂದ ಮೈವೆತ್ತಿ, ನಿನ್ನನ್ನು ಸೇವಿಸಿದವರಿಗೆ ಮೃತತ್ವವನ್ನು ವಿಧಿಸುತ್ತಾ, ನೀನು ಮಾತ್ರ ಅಮೃತತ್ವವನ್ನು ಪಡೆಯುವೆ; ಅನಾರೋಗ್ಯದ ಅಪರಾವತಾರವೇ ಆದರೂ, ಕೋಲಾಮೃತ ಎಂದೇ ನಮ್ಯನಾಗಿ, ಕೋಕ್ ಎಂಬ ಮುದ್ದಾದ ಅಡ್ಡನಾಮದಿಂದ ಜಗಪ್ರಿಯನಾಗುವೆ ಎಂಬ ಆಶ್ವಾಸನೆಯನ್ನಿತ್ತು, ಒಡನೆಯೇ ಕರಗಿಹೋದಳು. ಅಂದಿನಿಂದ ಲಾಗಾಯತು, ಕೋಲಾ ಎಂಬುದು ವಿಶ್ವಾದ್ಯಂತ ಕೋಲಾಹಲಿಸಲಾರಂಭಿಸಿತು. ಹಾಲುಹಸುಳೆಗಳು ಹಾಲಿಗೆ ಬದಲು ಇಂಪುತಂಪುಕಂಪುಪೆಂಪುಗಳ ಕೋಲಾಜಲ ಹೀರಲು ರಚ್ಚೆ ಹಿಡಿದವು. ಆಲ್ಕೋಹಾಲಿಗಳೆಲ್ಲರೂ ಆಲ್ ಕೋಲಾಹಾರಿ ಆದರು; ಕೋಲಾಕಂಠೇಶ್ವರರೇ ಆಗಿ ಬೆಳೆದರು. ಕೋಲೂರಿ ಕಾಲಿಕ್ಕುವವರೂ ಕೋಲಾಲೋಲರಾಗಿ ಹೋದರು. ಕೂಳಿಗಾಗಿ ಕೂಲಿ ಮಾಡುವವರು, ಕಾಳು-ಕಳ್ಳು ಕೊಳ್ಳುವುದರ ಬದಲು ಕೋಲಾಎಣ್ಣೆಯನ್ನು ಕೊಂಡಾಡಿ ಕೊಂಡುಕೊಂಡು, ತಮ್ಮನ್ನೇ ಕೊಂದುಕೊಂಡರು; ಕೋಲಾಲಾಲಸೆಯಿಂದ ಆಲಸಿಗಳಾದರು; ಕಾಲುಕೀಲುಗಳಲ್ಲಿ ತೋಲ ತಪ್ಪಿ ಓಲಾಡಿದರು. ಎಲ್ಲೆಂದರಲ್ಲೇ ’ಕೋಕ್ ಜಾಹೀರಾತಿನ ಕೋಕಿಲವಾಣಿಗೆ ಕೇಕೆ ಹಾಕುತ್ತಾ, ಜನರು ಕೋಲಾಭೂತನರ್ತನದಲ್ಲಿ ಮೈಮರೆತರು. ಕೋಲ್ ಮತ್ತು ಕೋಕ್ ಎಂಬ ಇದ್ದಿಲುಗಳು ಇದ್ದೆಡೆಯಲ್ಲಿ, ಕೋಲಾ ಮತ್ತು ಕೋಕ್ ತೂರಿಬಂದು, ಜನರ ದಿನನಿತ್ಯಚಾಲನೆಗೆ ಇಂಧನಗಳಾಗಿ ಕೂತವು. ಚಾಕಲೇಟ್‌ನ ಕೋಕೋ ಹಾಗೂ ಕೋಕಮ್‌ನ ಹಣ್ಣುಬೆಣ್ಣೆಗಳು ಮುಕ್ಕಾಲುಪಾಲಿಗೂ ಹೆಚ್ಚು ಮೂಲೆಪಾಲಾದವು. ಕಾಕಾಕೋಲ, ಕೊಕ್ಕೋಕೋಲ, ಕೊಕ್ಕರೆಕೋಲಾ, ಕುಹೂಕೋಲ ಎಂಬ ನಾಲ್ಕು ಕೋಲಾಗಳ ಚಾರ್‌ಕೋಲ ಪಕ್ಷಿಪಾನೀಯ ಪ್ಯಾಕೆಟ್ಟುಗಳೂ ತಡವಿಲ್ಲದೇ ಮಾರುಕಟ್ಟೆಯನ್ನು ತಟ್ಟಿದವು. ಅಂಕೋಲ, ಅಕೋಲ, ಕೋಲ್‌ಕತ್ತಾಗಳಲ್ಲಿ ಕೋಲಾ ಕೊಳಗಳೇ ಕೋರೈಸಿದವು. ಮಲ್ಲೇಶ್ವರಂನ ಮಲೇಶ್ಯಾ ಮಲ್ಲೇಶಯ್ಯ ಎಂಬ ಉದ್ಯಮಿಯು, ತಮ್ಮ ತೀರ್ಥರೂಪರ ಪ್ರೀತ್ಯರ್ಥ ಒಂದು ರಾಜರಾಜಕೋಲಾ ಬೃಹದ್ದೇಗುಲವನ್ನು ಕೋಲಾಲಂಪುರದಲ್ಲಿ ಲೋಕಾಂತರಾರ್ಪಣೆ ಮಾಡಿ ಧನ್ಯರಾದರು. ಅವರ ಮಗಳಂದಿರು ಶಶಿಕೋಲಾ ಮತ್ತು ಕೋಲಾವತೀ, ಪೀಣ್ಯದಿಂದ ಕೀನ್ಯದವರೆಗೆ, ಯಲಹಂಕದಿಂದ ಶ್ರೀಲಂಕಾದವರೆಗೆ, ಕೆಂಗೇರಿಯಿಂದ ಶೃಂಗೇರಿ ಮತ್ತು ಅಲ್ಲಿಂದಾಚೆಗೆ ಹಂಗರಿಯವರೆಗೆ, ಕೋಲಾಪಬ್ ಎಂಬ ಬೀದಿಬದಿ ಅರವಟ್ಟಿಗೆಗಳಲ್ಲಿ ಕೋಲಾ ಸಂತರ್ಪಣೆ ಮಾಡಿದರು; ಕೊಲಂಬೋದಿಂದ ಕೊಲಂಬಿಯಾವರೆಗೆ ಕೋಲಾ ಕಾಲೇಜುಗಳನ್ನೂ, ಕೋಕ್ ಶಾಸ್ತ್ರ ಪೀಠಗಳನ್ನೂ ತೆರೆದಿಟ್ಟರು. ಕಾಲಾನುಕ್ರಮದಲ್ಲಿ, ಕೋಲಾನುಭವವೂ ಒಂದು ಕೈವಲ್ಯಾನುಭವದಂತೆಯೇ ಆಗಿಹೋಯಿತು.
ಆದರೆ, ಬರಬರುತ್ತಾ, ಕೋಲಾ ಬೆಲೆಯು ಕೋಲಾರಚಿನ್ನದಂತಾಗಿ, ಹಲಾಲ್‌ಖೋರರು, ನಕಲಿ ಕೋಲಾಕೋಡಿಗಳನ್ನೇ ಹರಿಸಿ, ಕೋಟಿಕೋಟಿ ಕೊಳ್ಳೆಹೊಡೆದು, ಕೊಳ್ಳೇಗಾಲದ ಅಡವಿಯಲ್ಲಿ ಅಡಗಿಕೊಂಡರು. ಈ ನಡುವೆ ಪೆಪ್ಸಿ ಕೋಲಾ ಪ್ರವೇಶವಾಗಿ, ಪೆಪ್ಸಿ ಪಿಪಾಸೆಯು ಚುರುಕಾಗಿ, ಕೋಕ್ ಮತ್ತು ಪೆಪ್ಸಿ ನಡುವೆ ಅತಿಮೇಲಾಟದ (’ಸೆವೆನ್-ಅಪ್’ಮನ್‌ಶಿಪ್) ಕೋಲಾಟಕ್ಕೆ ಮೊದಲಿಟ್ಟಿತು; ಪೆಪ್ಸಿ ವಾಪ್ಸಿ ಆಂದೋಳನವೂ ಹಾಗೆಯೇ ಹುರಿಗೊಂಡಿತು. ಕೋಲಾ ಮಾಫ಼ಿಯಾಗಳ ನಡುವೆ ಕೊಲೆಗಳೇ ನಡೆದುಹೋದವು. ಕೋಲಾಗೇಟ್ ಹಗರಣಗಳ ತನಿಖೆಗಾಗಿ ಒಬ್ಬ ಕೋಲಾಯುಕ್ತರನ್ನು ನೇಮಿಸಲಾಯಿತಾದರೂ, ಅವರೂ ಕಾಳಸಂತೆಕೋರರಿಗೆ ಕೋಳ ತೊಡಿಸಲಾಗದೆ, ಎಂಟುಮಣಗಳ ವರದಿಗ್ರಂಥಮಾಲೆಯೊಂದನ್ನು ಪ್ರಸಾದವಾಗಿತ್ತು ಅಂತರ್ಧಾನರಾದರು. ಜೊತೆಜೊತೆಗೆ, ಕೋಲಾಹಾಲ್ಗಡಲುಗಳ ಮತ್ತು ಕೋಲಾ ಬಾಟಲು-ಬಟ್ಟಲು ಬೆಟ್ಟಗಳ (ಕೋಲಾಚಲಂ) ಭಾರದಿಂದ ಭೂಮಿಯಲ್ಲಿ ಉಲ್ಲೋಲಕಲ್ಲೋಲ ಆಗಹತ್ತಿತು. ಕೋಲಾಕೂಟಗಳಿಂದಾಗಿ ಒಂದು ನವಕಾಲಕೂಟವು ಭೂಗ್ರಹವನ್ನು ಮುಸುಕಿತು. ’ಕೋಕ’ (’ತೋಳ’) ಮತ್ತು ’ಕೋಲ’ (’ಹಂದಿ’), ಇವೆರಡರ ’ಕೋಲಾಕೋಲಿ’ (ಆಲಿಂಗನ) ಕಂಡು ಕೆರಳಿದ್ದ ಕೋಕ್ಕ್ವೋಕ (ಕೊಕ್ಕೋಕ) ಎಂಬ ಮುನಿಯೊಬ್ಬನ ಮುನಿಸಿನಿಂದಾಗಿ ಈ ಎಲ್ಲ ಅನಾಹುತಗಳೂ ಭುಗಿಲಿಡುತ್ತಿವೆ ಎಂದು ಕೆಲವು ಭೂತಕಾಲಜ್ಞರು ಭಾವಿಸಿದರು. ಇವೆಲ್ಲದರಿಂದ ಒಟ್ಟಿನಲ್ಲಿ ಕಂಗೆಟ್ಟ ಅಮೃತಪಾನಜೀವಿ ದೇವತೆಗಳು ಇನ್ನು ತಡೆಯಲಾರದೆ, ನೇರವಾಗಿ ಮಹಾದೇವನಿಗೇ ಮೊರೆಯಿಟ್ಟರು.
ಭೂಗೋಳದ ಈ ಗೋಳಾಟವನ್ನು ತೆಪ್ಪಗೆ ಕಿವಿಯೊಳಬಿಟ್ಟ ಮಹಾದೇವನು, ಎಲೈ ದೇವತೆಗಳಿರಾ, ಅತಿ ಅಮೃತಪಾನದಿಂದಾಗಿ ನೀವು ಮೂಲಮತಿಯನ್ನೇ ಕಳೆದುಕೊಂಡು, ಅಮರತ್ವದ ಬದಲು ಅಮಲತ್ವದೆಡೆಗೆ ವಾಲುತ್ತಿದ್ದೀರಿ. ಇಲ್ಲದಿದ್ದಲ್ಲಿ, ನೀವು ಈ ಅಲ್ಪ ಅಹವಾಲನ್ನು ನನ್ನ ಮಟ್ಟಕ್ಕೆ ತರಹೋಗುತ್ತಿರಲಿಲ್ಲ. ನನ್ನನ್ನು ನೆನೆಯುವ ಸಮಯ, ನನ್ನಂತೆಯೇ ಮುಕ್ಕಣ್ಣನಾಗಿರುವ ತೆಂಗಿನಕಾಯನ್ನು ನೆನೆದಿದ್ದರೆ – ಕೋಕ್ ನೆನೆಯುವ ಸಮಯದಲ್ಲೇ ಕೋಕೋನಟ್ ನೀರನ್ನು ಒಮ್ಮೆಯಾದರೂ ನೆನೆದಿದ್ದರೆ – ಈ ಪಿಶಾಚಪೇಯಕ್ಕೆ ಪರಿಹಾರವು ನಿಮಗೆ ಕೋಲಾಲೋಕದಲ್ಲೇ ದೊರಕಿಬಿಡುತ್ತಿತ್ತು. ಎಳನೀರು, ಸೀಯಾಳ, ಬೊಂಡ ಎಂದು ನಾನಾ ನಾಮಗಳಿಂದ ಗುಟುಕರಿಸಲ್ಪಡುವ ನಾರೀಕೇಳಫಲೋದಕ – ಬೇಕಾದರೆ, ನಾರೀಕೋಲಾ ಎಂದೆನ್ನಿ, ಸಾಕು – ಮಹಿಮೆಯನ್ನು ನಾನು ಏನೆಂದು ಹೇಳಲಿ? ಮೃತಯುಗ, ಪ್ರೇತಾಯುಗ, ಗಾಂಪರಯುಗ ಮತ್ತು ಕದಿಯುಗದಲ್ಲಿಯೂ ಇದನ್ನು ಒಳಸೆಳೆದೇ ತ್ರಿಕೋಲಾಧಿಪತಿಗಳೂ ತಂತಮ್ಮ ಕೆಲಸಕಾರ್ಯಗಳನ್ನು ಸಾಧಿಸಿಕೊಂಡರು. ಸೊದೆಗೆ ಸಮಾನವಾದ ಎಳನೀರನ್ನು ಒಮ್ಮೆ ಸೇವಿಸಿದವರು ಇನ್ನೆಂದಿಗೂ ಯಾವ ಕೋಲಾ ಸಂಕೋಲೆಗಳಿಗೂ, ಪೆಪ್ಸಿ ಅಭೀಪ್ಸೆಗಳಿಗೂ, ಹಾನಿಕರ ಪಾನೀಯವ್ಯಸನಗಳಿಗೂ ಈಡಾಗರು. ಅಂಥವರ ಕೋಟಲೆಗಳು ಕೋಲಾಗುಳ್ಳೆಗಳಂತೆ ಸಿಡಿದೊಡೆದು, ಜೀವನವು ಕೋಲು ಮಿಂಚನ್ನೂ ಮಿಂಚುವಂತೆ ಉಜ್ವಲವೂ, ಕೋಲುಜೇನಿನಂತೆ ಸವಿಯೂ, ಕೋಲುಮಲ್ಲಿಗೆಯಂತೆ ಸುಗಂಧಿಕವೂ ಆಗುವುದು, ಎಂಬ ಆಶಾವಾಣಿಯನ್ನಿತ್ತು ನಿಟ್ಟುಸಿರಿನಿಂದ ನಿರ್ಗಮಿಸಹೊರಟನು.
ಆದರೆ, ಅಷ್ಟಕ್ಕೇ ಅವನನ್ನು ಬಿಟ್ಟುಕೊಡದ ದೇವತೆಗಳು, ಎಳನೀರು ದೊರಕದಿದ್ದರೆ, ಬೇರೆ ಯಾವ ಫಲವು ಶ್ರೇಷ್ಠವು? ಫಲಾರ್ಥಿಗಳ ಫಲಚಪಲಗಳೆಲ್ಲ ಇದರಿಂದ ನೀಗುವುವೇ? ಈ ವಿಚಾರದಲ್ಲಿ ಗ್ರಂಥಪ್ರಮಾಣ ಲಭಿಸುವುದೇ?- ಎಲ್ಲವನ್ನೂ ಸವಿಸ್ತಾರವಾಗಿ ತಿಳಿಸಬೇಕೆಂದು ಬೇಡಿಕೊಂಡರು. ಇದರಿಂದ ಉತ್ತೇಜಿತನಾದ ಮಹಾದೇವನು ಮುಂದುವರೆದು – ಕಪಿಗಳು ಸ್ಥಿತವಾಗಿರುವ ಮರದಲ್ಲಿ ಬಿಡುವುದರಿಂದಾಗಿ ’ಕಪಿತ್ಥ’ ಎಂದೇ ಖ್ಯಾತವಾಗಿರುವ ಬೇಲದಹಣ್ಣಿನ ಪಾನಕ ಬಹುಶ್ರೇಷ್ಠವು; ಇಷ್ಟವಿದ್ದವರು ಇದರಲ್ಲೇ ಅರ್ಘ್ಯಪಾದ್ಯಗಳನ್ನು ಕೊಡಬಹುದು-ತರ್ಪಣಗಳನ್ನೂ ಬಿಡಬಹುದು; ಇದರಿಂದ ಗಂಟಲು ನೆನೆದರೆ, ಅದು ರಾಮನಾಮವನ್ನು ನೆನೆದಷ್ಟೇ ಪಾವನಕರವಾಗುವುದು; ವನವಾನರರೂ ತಮ್ಮ ಉಪವಾಸವನ್ನು ಇದರಿಂದಲೇ ಮುಗಿಸುವರು ಎಂದು ಕಪಿತ್ಥ ಕೌತೂಹಲಂ ದಾಖಲಿಸಿದೆ; ಈ ಪಾನಕವನ್ನೇ ನವಯುಗಕ್ಕೆ ತಕ್ಕಂತೆ ಬೇಲಕೋಲಾ ಅಥವಾ ರಾಮ್‌ಕೋಲಾ ಎಂದು ಹಂಚಾಡಬಹುದು. ಇದರ ಜೊತೆಗೇ ಕುಸ್ತುಂಭರ ಮಹರ್ಷಿಯು ಕೋಸಲದೇಶದಲ್ಲಿ ಮೊದಲು ಉಪದೇಶಿಸಿ-ಉಪಯೋಗಿಸಿದ ಕೋಸಂಬರಿಗಳನ್ನೂ, ಅವುಗಳಿಂದ ಶುದ್ಧವಾಗಿ ತಯಾರಿಸಿದ ರಾಮ್ ಬರ್ಗರ್-ಶ್ಯಾಮ್ ಬರ್ಗರ್ ಅವಳಿತಿನಿಸುಗಳನ್ನೂ ಸೇವಿಸುವುದು ಆರೋಗ್ಯಪ್ರದವಷ್ಟೇ ಅಲ್ಲದೆ, ಮೋಕ್ಷಪ್ರದವೂ ಆಗುವುದು. ಇದಲ್ಲದೇ, ಕಪಿತ್ಥ (ಬೇಲ), ಕಾಲಿಂದ (ಕಲಂಗಡಿ), ಖರ್ವೂಜ (ಕರಬೂಜ), ಜಂಬೀರ (ನಿಂಬೆ) ಮತ್ತು ಮಜ್ಜಿಗೆ ಬೆರೆಸಿದ ಪಂಚಫಲಾಮೃತ ಸೇವಿಸಿದಲ್ಲಿ, ಪಂಚಭೂತಗಳೂ ಒಲಿದು, ಪ್ರಪಂಚಭೀತಿಯೇ ಇಲ್ಲವಾಗುವುದು ಎಂದು ಬಹುಪ್ರಾಚೀನ ರಾಮನವಮಿ ಪಾನಕೀಯಂ ಸಂಪುಟದಲ್ಲಿ ಹೇಳಲಾಗಿದೆ. ಬೇಕೆಂದಲ್ಲಿ, ಈ ಪಂಚಫಲಾಮೃತವನ್ನು ಆಧುನಿಕತೆಗೆ ತಕ್ಕಂತೆ ಪಂಚ್ ಎಂದು ಕರೆದು ಪೋಷಿಸಬಹುದು. ಹಾಗೆಯೇ, ಲವಕುಶಫಲದ ರಸವನ್ನು, ’ದ್ರಾವಿಡಉತ್ಕ-ಲವಂಗ ಎಂಬ ಜನಗಣಸಂಬಾರದೊಡನೆ ಸೇವಿಸಬಹುದು. ಅದು ಸರ್ವವ್ಯಾಧಿಗಳಿಗೂ ರಾಮಬಾಣವಾಗುವ ಸೋಜಿಗದ ಸಂಗತಿಯನ್ನೂ, ಮತ್ತು ಅದರಲ್ಲಿ ಸರ್ವ ಪೋಷಕಾಂಶ-ಪಾಲಕಾಂಶ-ಪೌಷ್ಟಿಕಾಂಶಗಳೂ ದಕ್ಕುವುವಲ್ಲದೇ, ಅದರಲ್ಲಿ ಮಾತ್ರ ಸೇರಿರುವ ಶಾಸಕಾಂಶ-ಶ್ವಾಸಕಾಂಶಗಳು, ಲೋಕಸಭೆ-ವಿಧಾನಸಭೆಗಳಲ್ಲಿ ವಾಗ್ಧಾರೆ ಎರೆಯುವವರಿಗೆ ಮನಮೋಹಕಸಿಂಹಧ್ವನಿಯನ್ನು ಕೊಡುವುವೆಂಬ ಸ್ವಾರಸ್ಯಕರ ಸಂಗತಿಯನ್ನೂ, ಮಹಾವೃಷಭಹೃದಯಂ ಕೃತಿಯಲ್ಲಿ ಒತ್ತಿಹೇಳಲಾಗಿದೆ. ಸೂಕ್ತಫಲಾನ್ವೇಷಣೆಯಲ್ಲಿ ಸಫಲರಾಗದವರು, ಕಡೆಗೆ ನಿಷ್ಠೆಯಿಂದ ತಿಳಿಸಾರು (ರಸಂ) ಸೇವಿಸಿದರೂ ಸಾಕು, ಅವರಿಗೆ ತಿಳಿಮನಸ್ಸೂ, ತಿಳಿವಳಿಕೆಯೂ ಉಂಟಾಗುವುವು ಎಂದು ಸರಸ-ಸಮರಸಂ ಎಂಬ ಪುರಾತನ ಮಲೆಯಾಳ ಗ್ರಂಥದಲ್ಲಿ ಸೂಚಿಸಲಾಗಿದೆ – ಎಂದೆಲ್ಲ ಆ ಭಯಭೀತ ದೇವತೆಗಳಿಗೆ ದೃಢ ಧೈರ್ಯವನ್ನಿತ್ತು, ತನ್ನ ಕೈಲಾಸದ ಕೈಸಾಲೆಯೊಳಗೆ ಹಾಗೆಯೇ ನಯವಾಗಿ ನುಣುಚಿಕೊಂಡನು.
ಈ ಕೋಲಾಪಾನಕ ಉಪಾಖ್ಯಾನವನ್ನು ಕುತೂಹಲದಿಂದಾಗಲೀ ಅಥವಾ ಕಡೇಪಕ್ಷ ಕೋಲೆ ಬಸವನಂತೆಯಾಗಲೀ ಕೇಳಿದವರಿಗೆ, ಕೋಲಾಸುರಭಯಂಕರಿಯ ಅಭಯಹಸ್ತವು ಆದ್ಯತೆಯಲ್ಲಿ ದೊರೆತು, ಅಂಥವರು ಕೋಲಾಗೋಲದಲ್ಲಿ ಲೀಲಾಜಾಲವಾಗಿ ತೇಲಾಡುವರು – ಎಂಬಲ್ಲಿಗೆ ಹಾಲಾಹಲ ಮಾಹಾತ್ಮ್ಯದಲ್ಲಿನ ಕೋಲಾಹಲೀ ವೃತ್ತಾಂತ ನಿರೂಪಣಂ ಸಂಪೂರ್ಣಂ.
~ ಕೋಕಂ-ಕೋಲಂ-ಕುಶಲಂ ~
******
ಇಷ್ಟುದ್ದದ ಪ್ರಸಂಗವನ್ನು ಬರೆದ ನಿಮ್ಮ ತಾಳ್ಮೆಗೇ ಒಂದು ಶರಣು ಸಾರ್.. 🙂