ಬಣ್ಣದ ಒಂದು ಇಡೀ ಸೀರೆಯನ್ನೇ ತಲೆಗೆ ರುಮಾಲಾಗಿ ಸುತ್ತಿ ಒಂದು ಚುಂಗನ್ನು ಹೆಗಲ ಮೇಲೆ ಬರುವಂತೆ ಇಳಿ ಬಿಟ್ಟಿದ್ದಾನೆ. ದೊಡ್ದ ಪೊದೆ ಮೀಸೆ, ಹಣೆಯಲ್ಲೊಂದು ಹಳದಿ ನಾಮ, ಮಾಸಲು ಕಪ್ಪು ಕೋಟು, ಎಂದೋ ಬಿಳಿಯಾಗಿದ್ದಿರಬಹುದಾದ ಪಂಚೆ, ಹೆಗಲಿಗೆ ಒಂದು ಚಿಂದಿ ಜೋಳಿಗೆ, ಒಂದು ಕೈಯಲ್ಲಿ ಬಣ್ಣದ ಬೇಗಡೆ ಹಚ್ಚಿದ ಕೋಲು, ಇನ್ನೊಂದು ಕೈಯ ದಾರದ ತಿದಿಯಲ್ಲಿ ಕಟ್ಟಿದುದು ಒಂದು ಧಡೂತಿ ಮಂಗ. ಅದೇ ಗಲ್ಲಿಯ ಮಕ್ಕಳಿಗೆಲ್ಲರಿಗೆ ಆಕರ್ಷಣೆಯಾಗಿದ್ದುದುದು. ಆ ಮಂಗಕ್ಕೆ ಬಣ್ಣ ಬಣ್ಣದ ಬಟ್ಟೆಗಳ ಚೂರುಗಳನ್ನು ಚೌಕಚೌಕವಾಗಿ ಕತ್ತರಿಸಿ ಸೇರಿಸಿ ಹೊಲೆದು ಮಾಡಿದ್ದ ಅಂಗಿ, ಬಾಲ ಹೊರಗಿರುವಂತೆ ಹೊಲೆದ ದೊಗಲೆ ಕೆಂಪು ಚೆಡ್ಡಿ ಬೇರೆ. ಕೈಯಲ್ಲಿ ಕುತ್ತಿಗೆಯಲ್ಲಿ ಬಣ್ಣ ಬಣ್ಣದ ಮಣಿಗಳ ಸರಗಳು. ಸ್ವಲ್ಪ ಹಿಂದೆಯಷ್ಟೇ ಮನೆ ಮನೆಯ ಮುಂದೆಯೂ ಆ ಮಂಗ ಏನೆಲ್ಲಾ ದೊಂಬರಾಟ, ಅಲ್ಲಲ್ಲಿ ಮಂಗನಾಟ ಪ್ರದರ್ಶಿಸಿತ್ತೆಂದರೆ ಮಕ್ಕಳಿರಲಿ ದೊಡ್ದವರೂ ಸುತ್ತ ನೆರೆದು ಹಲ್ಲುಬಿಟ್ಟು ಹಿಗ್ಗಿ ನೋಡಿದ್ದರು. ಸಾಕಷ್ಟು ಚಿಲ್ಲರೆ ಮಂಗನೊಡೆಯನಿಗೆ ಸಿಕ್ಕಿತ್ತು. ಮಂಗನಿಗೂ ಕೆಲ ಮನೆಗಳಲ್ಲಿ ದೋಸೆ, ರೊಟ್ಟಿ, ಬಾಳೆಹಣ್ಣುಗಳು ಹೊಟ್ಟೆತುಂಬಿಸಿದ್ದವು. ಒಂದು ಮನೆಯಲ್ಲಂತೂ ಅಲ್ಯೂಮಿನಿಯಂ ಬಟ್ಟಲು ಹಿಡಿದು ನೀರು ಬೇಡಿ ಪಡೆದು ಕಾಲು ಹಾಕಿಕೊಂಡು ಮನುಷ್ಯರಂತೆಯೇ ಕುಡಿದು ಎಲ್ಲರನ್ನೂ ರಂಜಿಸಿತ್ತದು.
ಈಗ ಸಾಕಾಗಿರಬೇಕು ಇಬ್ಬರಿಗೂ. ನಮ್ಮ ಮನೆಯ ಮುಂದಿನ ಮಾವಿನ ಮರದ ನೆರಳಿಗೆ ಇಬ್ಬರೂ ವಿಶ್ರಾಂತಿಗೆ ಕುಳಿತರು. ಯಜಮಾನ ಜೋಳಿಗೆ ಬದಿಗಿಟ್ಟು ಕೆವಿಯ ಮೇಲೆ ಸಿಕ್ಕಿಸಿದ್ದ ಬೀಡಿ ತೆಗೆದು ಕೋತಿನ ಜೇಬಿನಲ್ಲಿದ್ದ ಬೆಂಕಿಪೊಟ್ಟಣ ತೆಗೆದು ಬೆಂಕಿ ಹಚ್ಚಿಕೊಂಡು ಬೀಡಿ ಹಚ್ಚಿದ. ಮಧ್ಯದಲ್ಲೇ ಸಂಗ್ರಹವಾಗಿದ್ದ ಬೀಡಿ ಎಷ್ಟು ಎಂದು ನೋಡುವ ಹಂಬಲ ಅವನಿಗೆ. ಸ್ವಲ್ಪ ಬೀಡಿ ಸೇದುವುದು, ನಂತರ ಬೀಡಿ ತೆಗೆದು ಮಂಗನ ಕೈಲಿ ಕೊಡುವುದು, ಚಿಲ್ಲರೆ ಎಣಿಸುವುದು ಮಾಡತೊಡಗಿದ. ತನ್ನ ಕೈಗೆ ಬೀಡಿ ಸಿಕ್ಕಾಗಲೆಲ್ಲಾ ಮಂಗ ಮನುಷ್ಯರಂತೆಯೇ ಪರಮಾನಂದದಿಂದ ಬಾಯಲ್ಲಿ ಬೀಡಿ ಇಟ್ಟುಕೊಂಡು ಎಳೆಯುತ್ತಿತ್ತು. ಮಾಲೀಕ ಬೀಡಿ ತೆಗೆದುಕೊಂಡಾಗ ಅವನ ಮುಖವನ್ನೇ ನಿರೀಕ್ಷ್ರೆಯಿಂದ ಆಸೆಯಿಂದ ನೋಡುತ್ತಾ ಇರುತ್ತಿತ್ತು. ಈ ವಿಚಿತ್ರ ದೃಶ್ಯ ನೋಡಿದಾಗ “ಕೋತಿ ತಾನು ಕೆಡೋದಲ್ಲದೇ ವನಾನೆಲ್ಲಾ ಕೆಡಿಸ್ತು” ಎಂಬ ಗಾದೆಯ ಬದಲು “ಮನುಷ್ಯ ತಾನು ಕೆಡೋದಲ್ಲದೇ ಕೋತೀನೂ ಕೆಡಿಸ್ದ” ಎಂದೇಕೆ ಗಾದೇನ ಬದಲಿಸಬಾರದು ಎಂದೆನಿಸತೊಡಗಿತು.