ಲೇಖನ

ಕೋತಿಗಳು ಸಾರ್ ಕೋತಿಗಳು: ಎಂ. ಎಸ್. ನಾರಾಯಣ.

ಕೆಲವು ನಿಜಕ್ಕೂ ಅದ್ಭುತವಾದ ದೃಷ್ಟಾಂತಗಳಿವೆ. ಬಹುಶಃ ಇವು ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿ ಹಸ್ತಾಂತರಗೊಂಡಿರಬಹುದೆಂದು ಭಾವಿಸುತ್ತೇನೆ. ಮನುಕುಲದ ಒಟ್ಟಾರೆ ವಿವೇಕವನ್ನು ಒಳಗೊಂಡಿರುವ ಈ ದೃಷ್ಟಾಂತಗಳಿಗೆ ಜನರನ್ನು ಸ್ಫೂರ್ತಿಸಿಂಚನದಲ್ಲಿ ತೋಯಿಸಿ ಧನಾತ್ಮಕವಾಗಿ ಪ್ರಚೋದಿಸುವ ಅಗಾಧವಾದ ಶಕ್ತಿಯಿರುವುದು ಸುಳ್ಳಲ್ಲ. ಈ ಅಂಕಣದ ಮೂಲಕ ಅಂತಹ ಒಂದೆರಡು ದೃಷ್ಟಾಂತಗಳನ್ನು ಕನ್ನಡದ ಓದುಗರೊಂದಿಗೆ ಹಂಚಿಕೊಳ್ಳಲು ಸಂತಸವಾಗಿದೆ. ಇಲ್ಲಿ ಚರ್ಚಿಸಲಾಗಿರುವ ಪರಿಕಲ್ಪನೆಗಳು ವಿಶೇಷವಾಗಿ ನಮ್ಮ ಯುವ ಜನತೆಗೆ, ತಮ್ಮ ವೃತ್ತಿಜೀವನದ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳಲು ಮಾರ್ಗದರ್ಶನ ಮಾಡುವ ದಾರಿದೀಪವಾಗಬಹುದು.

ಭಾರತದಲ್ಲಿ ಕೋತಿಗಳನ್ನು ಹಿಡಿಯುವ ಸ್ವಾರಸ್ಯಕರವಾದ ಪ್ರಾಚೀನ ತಂತ್ರಗಾರಿಕೆಯೊಂದು ಚಾಲ್ತಿಯಲ್ಲಿದೆ. ಕೋತಿಯ ಖಾಲಿ ಕೈಮಾತ್ರ ತೂರುವ ಗಾತ್ರದ ಬಾಯಿ ಇರುವಂಥ ಖಾಲಿ ಶೀಷೆಯೊಂದನ್ನು ತೆಗೆದುಕೊಂಡು ಅದರಲ್ಲಿ ನಾಲ್ಕಾರು ಕಡ್ಲೇಕಾಯಿಗಳನ್ನಿಟ್ಟು ಅದನ್ನು ಕೋತಿಗಳು ಅಡ್ಡಾಡುವ ಜಾಗದಲ್ಲಿ ಯಾವುದಾದರೂ ಕಲ್ಲಿಗೋ ಮರಕ್ಕೋ ಕಟ್ಟಿ ಇಡಲಾಗುತ್ತದೆ. ಇದನ್ನು ಕಂಡ ಕೋತಿ, ಪಾಪ ಕಡ್ಲೇಕಾಯಿ ಆಸೆಗೆ, ಹತ್ತಿರ ಬಂದು ಶೀಷೆಯ ಒಳಗೆ ಕೈಹಾಕಿ ಕಡ್ಲೇಕಾಯಿ ತೆಗೆದುಕೊಂಡು ತನ್ನ ಕೈಯನ್ನು ಆಚೆ ತೆಗೆಯಲು ಪ್ರಯತ್ನಿಸುತ್ತದೆ. ಆದರೆ ಕಡ್ಲೇಕಾಯಿ ಹಿಡಿದ ಕೈ ಶೀಷೆಯಿಂದ ಆಚೆ ಬರುವುದಿಲ್ಲ, ಆದರೆ ಕೋತಿ ಕಡ್ಲೇಕಾಯಿ ಹಿಡಿದ ತನ್ನ ಕಪಿಮುಷ್ಠಿಯನ್ನು ಬಿಡುವುದಿಲ್ಲ. ಇಲ್ಲಿ ಕೋತಿಯು ಕೈಯಲ್ಲಿ ಹಿಡಿದಿರುವ ಕಡ್ಲೇಕಾಯಿಗಳನ್ನು ಬಿಟ್ಟು ಬಿಟ್ಟರೆ ನಿರಾಯಾಸವಾಗಿ ಮುಕ್ತವಾಗಿ ಹೋಗಿ ಬಿಡಬಹುದು. ಆದರೆ ವಿಪರ್ಯಾಸ ನೋಡಿ, ಹಿಡಿ ಕಡ್ಲೇಕಾಯಿಯ ಆಸೆಗೆ ಮೂರ್ಖ ಮಂಗ ತನ್ನ ಅತ್ಯಮೂಲ್ಯವಾದ ಸ್ವತಂತ್ರವನ್ನೇ ಪಣಕ್ಕಿಟ್ಟು ಬಂಧಿಯಾಗಿ ಬಿಡುತ್ತದೆ. ತಮಾಷೆ ಎಂದರೆ ಕೋತಿ ಹಿಡಿಯಲು ಇಷ್ಟು ಚತುರ ಜಾಲವನ್ನು ಹೆಣೆಯುವ ಮನುಷ್ಯ, ತನ್ನ ಜೀವನದ ಅತಿ ಮುಖ್ಯವಾದ ನಿರ್ಧಾರಗಳನ್ನು ಮಾಡುವಾಗ ಸಾಕ್ಷಾತ್ ನಮ್ಮ ಪೂರ್ವಜನಂತೆಯೇ ವರ್ತಿಸಿಬಿಡುತ್ತಾನೆ. ಹೌದು ಸಾರ್, ನಾವೆಲ್ಲಾ ಕೋತಿಗಳೂ ಸಾರ್ ಕೋತಿಗಳು.                                      

ಈ ಸಂದರ್ಭಕ್ಕೆ ಸೂಕ್ತವೆನಿಸುವ ‘ಬರ್ನಿಂಗ್ ದಿ ಬೋಟ್ಸ್’ ಎಂಬ ಇಂಗ್ಲಿಷ್ ನುಡಿಗಟ್ಟೊಂದು ನನಗೀಗ ನೆನಪಾಗುತ್ತಿದೆ. ೧೫ನೇ ಶತಮಾನದಲ್ಲಿ ಚಕ್ರವರ್ತಿ ಅಲೆಕ್ಸಾಂಡರ್ ತನ್ನ ಪರ್ಷಿಯಾ ದೇಶದ ಮೇಲೆ ದಂಡಯಾತ್ರೆ ಹೋಗಿರುತ್ತಾನೆ. ಆಗ ಅಲೆಕ್ಸಾಂಡರ್, ಒಂದು ರಣತಂತ್ರವಾಗಿ, ತಾನೇ ಬೇಕೆಂದು  ತನ್ನ ಸೇನೆಯ ಎಲ್ಲ ನೌಕೆಗಳಿಗೂ ಅಗ್ನಿಸ್ಪರ್ಶ ಮಾಡಿ ಸುಟ್ಟು ಬಿಡುತ್ತಾನೆ. ಅಂಥ ತಂತ್ರಗಾರಿಕೆಯಿಂದ ತನ್ನ ಸೇನೆಗೆ ಪಲಾಯನ ಮಾಡುವ ಅವಕಾಶವನ್ನು ಇಲ್ಲವಾಗಿಸಿ ಯೋಧರಿಗೆ ‘ಮಾಡು ಇಲ್ಲವೆ ಮಡಿ’ ಎನ್ನುವಂಥ ಪರಿಸ್ಥಿತಿ ತಂದೊಡ್ಡುತ್ತಾನೆ. ಅನ್ಯ ಗತ್ಯಂತರವಿಲ್ಲದ ಸ್ಥಿತಿಯಲ್ಲಿ ಯೋಧರು ಜೀವದ ಹಂಗುತೊರೆದು ಯುದ್ಧದಲ್ಲಿ ಹೋರಾಡಿ ಪರ್ಷಿಯಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.

ಇತಿಹಾಸದಲ್ಲಿ ಹೆರ್ನನ್ ಕೋರ್ಟೆಸ್ ಮುಂತಾದ ಇತರ ದಂಡನಾಯಕರೂ ಈ ರಣತಂತ್ರವನ್ನು ಯಶಸ್ವಿಯಾಗಿ ಬಳಸಿದ ಅನೇಕ ಉದಾಹರಣೆಗಳಿವೆ. ಅಂದಿನಿಂದ ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸುಲಭ ಹಾಗೂ ಸುರಕ್ಷಿತವಾದ ಆಯ್ಕೆಯನ್ನು ಸ್ವಯಂಪ್ರೇರಣೆಯಿಂದ ನಾಶ ಪಡಿಸಿಕೊಂಡು ಕಷ್ಟಕರವಾದ ಮಾರ್ಗದಲ್ಲಿ ಜಯಿಸಲೇಬೇಕಾದ ಅನಿವಾರ್ಯತೆಯನ್ನು ಸೃಷ್ಠಿಸಿಕೊಳ್ಳುವ ತಂತ್ರಗಾರಿಕೆಗೆ ‘ಬರ್ನಿಂಗ್ ದಿ ಬೋಟ್ಸ್’ ಎನ್ನುತ್ತಾರೆ. ಜೀವನದಲ್ಲಿ ಯಶಸ್ಸಿನ ಶಿಖರವನ್ನು ಏರಲು ನಾವು ಕೆಲವೊಮ್ಮೆ ಪ್ರಜ್ಞಾಪೂರ್ವಕವಾಗಿ ಸಾಂಪ್ರದಾಯಿಕ ವಿವೇಚನೆಯ ವಿರುದ್ಧವಾಗಿ ನಡೆಯಬೇಕಾಗುತ್ತದೆ. ನೌಕೆಗಳನ್ನು ಸುಡುವಂತಹ ಸಾಹಸೀ ನಿರ್ಣಯಗಳನ್ನು ತೆಗೆದುಕೊಳ್ಳದೆ, ಕಡ್ಲೇಕಾಯಿಗಳ ಆಮಿಷವನ್ನು ಗೆಲ್ಲದೇ ಮಹತ್ತರ ಯಶಸ್ಸನ್ನು ಸಾಧಿಸಲಾಗುವುದಿಲ್ಲ.

ನೀವು ಗಮನಿಸಿರಬಹುದು, ಚಿತ್ರಕಲೆಯಲ್ಲಿ ಅಸಾಧಾರಣ ಪ್ರತಿಭೆಯುಳ್ಳ ಸರ್ಕಾರೀ ಗುಮಾಸ್ತನೊಬ್ಬ ತನ್ನ ಸೇವಾ ಭದ್ರತೆ ಹಾಗೂ ಪಿಂಚಣಿಗಳೆಂಬ ಕಡ್ಲೇಕಾಯಿಗಳಿಗೆ ಅಂಟಿಕೊಂಡು ಸಾಧಾರಣ ಅರೆಕಾಲಿಕ ಚಿತ್ರಕಲಾ ಶಿಕ್ಷಕನಾಗಿಬಿಟ್ಟಿರುತ್ತಾನೆ. ಅವನಿಗೆ ಸರ್ಕಾರಿ ಗುಮಾಸ್ತಗಿರಿ ಎಂಬ ನೌಕೆಯನ್ನು ಸುಡುವ ಧೈರ್ಯ ಸಾಲದೆ ಒಬ್ಬ ರವಿವರ್ಮನೋ ಪಿಕಾಸೋನೋ ಆಗುವ ಸಾಧ್ಯತೆಯನ್ನು ಕಳೆದುಕೊಂಡು ಬಿಟ್ಟಿರುತ್ತಾನೆ. ಅಂತೆಯೇ ಸಂಗೀತದಲ್ಲಿ ವಿಶೇಷವಾದ ಪ್ರತಿಭೆ ಹೊಂದಿದ ಪಿಟೀಲು ವಾದಕನೊಬ್ಬ ಹೊಟ್ಟೆಪಾಡೆಂಬ ಕಡ್ಲೇಕಾಯಿಗೆ ಅಂಟಿಕೊಂಡು ಆರ್ಕೇಸ್ಟ್ರಾಗಳಲ್ಲಿ ಎರಡನೇ ದರ್ಜೆಯ ಗಾಯಕರಿಗೆ ಪಕ್ಕವಾದ್ಯಗಾರನಾಗಿ ಉಳಿದು ಹೋಗುತ್ತಾನೆ. ಯಾವುದೇ ಕ್ಷೇತ್ರದಲ್ಲಿ ಶ್ರೇಷ್ಠತೆಯ ಸಾಧನೆ ತ್ಯಾಗ, ಪರಿಶ್ರಮ ಹಾಗೂ ತಪಸ್ಸನ್ನು ಬೇಡುತ್ತದೆ. ಆ ನಿಟ್ಟಿನಲ್ಲಿ ಕ್ಷುಲ್ಲುಕವಾದ ಕಡ್ಲೇಕಾಯಿಯ ತ್ಯಾಗ ಹಾಗೂ ಸುಲಭ ಸುರಕ್ಷಿತ ಆಯ್ಕೆಗಳ ತ್ಯಾಗ ಅನಿವಾರ್ಯ. ಆಗ ಮಾತ್ರ ಸಾಧಕನೊಬ್ಬ ಶ್ರೇಷ್ಠತೆ ಬೇಡುವ ಪರಿಶ್ರಮ ಹಾಗೂ ತಪಸ್ಸಿನತ್ತ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ.       

ಸಾಮಾನ್ಯವಾಗಿ ಗಮನಿಸಿದರೆ, ಬದುಕಿನಲ್ಲಿ ಕ್ಷುಲ್ಲಕವಾದ ಆಮಿಷಗಳನ್ನು ಗೆದ್ದು ಮಹಾನ್ ಸಾಧನೆಗಳನ್ನು ಮಾಡಿದವರ ಉದಾಹರಣೆಗಳು ತೀರಾ ವಿರಳ. ಆದರೆ ಕ್ಷುಲ್ಲಕವಾದ ಆಮಿಷ ಮತ್ತು ಸುರಕ್ಷಿತ ಆಯ್ಕೆಗಳಿಗೆ ಕಟ್ಟುಬಿದ್ದು ಮಹಾನ್ ಸಾಧನೆಗಳ ಸಾಧ್ಯತೆಗಳನ್ನು ಕಳೆದುಕೊಂಡವರ ಉದಾಹರಣೆಗಳು ಹೇರಳವಾಗಿ ದೊರೆಯುತ್ತವೆಂದೇ ಹೇಳಬೇಕು. ಜಗತ್ತಿನ ಅತ್ಯಂತ ಬುದ್ಧಿವಂತ ಜೀವಿಗಳೆಂದು ಮೆರೆಯುವ ಮಾನವರಲ್ಲಿ, ಬಹುತೇಕ ಜನರು ಹಿಡಿ ಕಡ್ಲೇಕಾಯಿ ಆಸೆಗೆ ತಮ್ಮ ಅಮೂಲ್ಯವಾದ ಸ್ವಾತಂತ್ರ್ಯವನ್ನೇ ಕಳೆದುಕೊಳ್ಳುವ ಮೂರ್ಖ ಮಂಗಗಳಂತೆ ವರ್ತಿಸುವುದು ಎಂಥಾ ವಿಪರ್ಯಾಸ ನೋಡಿ. ಬದುಕಿನಲ್ಲಿ ಸಣ್ಣ ಸಣ್ಣ ತ್ಯಾಗಗಳನ್ನು ಮಾಡದೇ  ದೊಡ್ಡ ದೊಡ್ಡ  ಸಾಧನೆಗಳು ಸಾಧ್ಯವಾಗುವುದಿಲ್ಲವೆನ್ನುವ ಸರಳ ಸತ್ಯವು ನಮಗೆ ಸೂಕ್ತ ಸಮಯದಲ್ಲಿ ಅರಿವಾಗುವುದೇ ಇಲ್ಲವಲ್ಲ! ಪ್ರಿಯ ಓದುಗರೇ, ಇನ್ನಾದರೂ ನಾವು ಬುದ್ಧಿವಂತರಾಗಿ, ನಮ್ಮ ಕಡ್ಲೇಕಾಯಿ ಹಿಡಿದ ಮುಷ್ಠಿಗಳನ್ನು ಸಡಿಲಿಸಬೇಕಲ್ಲವೇ? ನಮ್ಮ ಸಾಧನೆಗಳಿಗೆ ತೊಡಕಾಗುವ ತಥಾಕಥಿತ ಸುರಕ್ಷಿತ ನೌಕೆಗಳನ್ನು ಸುಡುವ ಧೈರ್ಯ ತೋರಬೇಕಲ್ಲವೇ? ಸ್ವಲ್ಪ ಯೋಚಿಸಿ ನೋಡಿ. 

*****               

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಕೋತಿಗಳು ಸಾರ್ ಕೋತಿಗಳು: ಎಂ. ಎಸ್. ನಾರಾಯಣ.

    1. ಆಖಿಲೇಶ್, ರಾಂ. ಗವಿಸ್ವಾಮಿ. ಅಮರ್ ದೀಪ್ ಎಲ್ಲರಿಗೂ ಧನ್ಯವಾದಗಳು. 🙂

Leave a Reply

Your email address will not be published. Required fields are marked *