ನಾಲ್ವರು ಗೆಳತಿಯರು ಬೆಂಗಳೂರಿನ ಮೆಜಿಸ್ಟಿಕ್ ಬಸ್ ಸ್ಟಾಪ್ ನಲ್ಲಿ ಸಂತಸದಿಂದ ಹರಟುತ್ತಿದ್ದರು. ರಾತ್ರಿ ಆಗಲೇ ಹತ್ತು ಘಂಟೆ ದಾಟಿದ್ದು, 10:40 ಕ್ಕೆ ಚಿಕ್ಕಮಂಗಳೂರಿಗೆ ಹೊರಡುವ ರಾಜಹಂಸ ಬಸ್ಸಿಗೆ ಕಾಯುತ್ತಿದ್ದರು. ಎಲ್ಲರದ್ದೂ ಹೆಚ್ಚು-ಕಡಿಮೆ ಒಂದೇ ವಯಸ್ಸು. ಹತ್ತೊಂಬತ್ತು ಇಪ್ಪತ್ತರ ಉತ್ಸಾಹದ ಚಿಲುಮೆಗಳು. ಮೈಸೂರು ರಸ್ತೆಯಲ್ಲಿರುವ ಡಾನ್ ಬಾಸ್ಕೋನಲ್ಲಿ ಇಂಜಿನೀಯರಿಂಗ್ ಕಾಲೇಜಿನ ಐ.ಎಸ್ ವಿಭಾಗದ ಮೂರನೆ ಸೆಮಿಸ್ಟರ್ ಪರೀಕ್ಷೆಗಳನ್ನು ಮುಗಿಸಿದ ಎಲ್ಲರೂ, ರಜೆ ಇರುವ ಕಾರಣ ಒಂದು ವಾರ ಸಮಯ ಕಳೆಯಲು ಪ್ರಕೃತಿಯ ಮಡಿಲು ಚಿಕ್ಕಮಗಳೂರಿಗೆ ಹೊರಟಿರುವರು.
ಚಿಕ್ಕಿ , ಚಿಕ್ಕಮಗಳೂರಿನ ಹತ್ತಿರದ ಕೋಡುವಳ್ಳಿಯ ಹುಡುಗಿ ಹೆಸರು ಚಿತ್ರಾ , ಗೆಳತಿಯರು ಆಕೆಯನ್ನು ಚಿಕ್ಕಮಗಳೂರಿನವಳು ಅನ್ನುವ ಕಾರಣಕ್ಕ ಚಿಕ್ಕಿ ಅನ್ನುತ್ತಿದ್ದರು, ಶಾಲು ಅಂದರೆ ಶಾಲಿನಿ, ಕೀರು ಅಂದ್ರೆ ಕೀರ್ತನ ಮಾತ್ರ ಬೆಂಗಳೂರಿನವರು. ಉಳಿದಂತೆ ಅಚಲ ಕೇರಳದವಳು. ಅಚಲಳಿಗೆ ಕನ್ನಡ ಸರಿಯಾಗಿ ಬರಲ್ಲ , ಅವಳ ಕನ್ನಡ ಅಂದ್ರೆ ಮೂವರಿಗು ತಮಾಷಿ,
ರಜಾ ಎನ್ನುವಾಗ ಅಚಲ ಮೊದಲಿಗೆ ಎಲ್ಲರನ್ನು ಕೇರಳಕ್ಕೆ ಕರೆದಳು. ಚಿತ್ರಾ ಚಿಕ್ಕಮಗಳೂರಿನ ಕೋಡುವಳ್ಳಿಗೆ ಎಲ್ಲರು ಬನ್ನಿ ಎಂದಳು. ಶಾಲಿನಿ, ಕೀರ್ತನರಿಗೆ ತಮ್ಮ ಮನೆಯಲ್ಲಿ ಒಪ್ಪಿಸುವುದು ಒಂದು ಸಾಹಸವಾಯಿತು, ಚಿತ್ರಾಳೆ ಇಬ್ಬರ ಮನೆಗೂ ಹೋಗಿ ಅವರವರ ಅಮ್ಮಂದಿರ ಹತ್ತಿರ ಮಾತನಾಡಿ, ತಮ್ಮ ಮನೆಗೆ ಕರೆದೊಯ್ಯುವದಾಗಿ, ನಂತರ ಕ್ಷೇಮವಾಗಿ ಹಿಂದೆ ಕಳಿಸುವುದು ತನ್ನ ಜವಾಬ್ದಾರಿ ಎಂದು ಒಪ್ಪಿಸಿದ್ದಳು. ಅಚಲ,ಹಾಗು ಚಿತ್ರಾ ಹಾಸ್ಟೆಲ್ ವಾಸಿಗಳು. ಅಚಲ ತನ್ನ ಊರು ಎರ್ನಾಕುಲಮಗೆ ಅಪ್ಪನ ಹತ್ತಿರ ಮಾತನಾಡಿ ಒಂದು ವಾರ ಕಳೆದು ಬರುವದಾಗಿ ತಿಳಿಸಿದ್ದಳು.
"ಚಿಕ್ಕಿ , ಬೆಳಗ್ಗೆ ಚಿಕ್ಕಮಗಳೂರಿಗೆ ತಲುಪುವಾಗ ಎಷ್ಟು ಗಂಟೆ ಆಗುತ್ತೆ?" ಎಂದಳು ಕೀರ್ತನ
"ಲೇ ಕೀರು, ಎಷ್ಟಾದರೆ ಏನೆ, ನೀನು ಮಲಗಿದರೆ ನಿನಗೆ ಸಮಯವೆ ತಿಳಿಯುವದಿಲ್ಲ, ಬೆಳಗ್ಗೆ ಎಬ್ಬಿಸುತ್ತೇನೆ, ಎದ್ದರೆ ಸರಿ, ಇಲ್ಲದಿದ್ದರೆ ನಿನ್ನ ಬಸ್ಸಿನಲ್ಲಿ ಬಿಟ್ಟು ನಾವು ಚಿಕ್ಕಪ್ಪ ತರುವ ಜೀಪಿನಲ್ಲಿ ಹೊರಟು ಹೋಗುವೆವು"
ಎಂದಳು ಚಿತ್ರಾ.
ಕೀರ್ತನನಿಗೆ ರೇಗಿಹೋಯಿತು, ಆದರೇನು ಮರುಕ್ಷಣ ನಕ್ಕಳು.
ಬಸ್ಸು ಹತ್ತು ನಿಮಿಷ ತಡವಾಗಿಯೆ ಹೊರಟಿತು. ಬೆಂಗಳೂರು ದಾಟುವವರೆಗು ಎಲ್ಲರು ಮಾತು ನಡಿಸಿಯೆ ಇದ್ದರು. ಬಸ್ಸಿನಲ್ಲಿ ಅಕ್ಕ ಪಕ್ಕದ ವಯಸ್ಸಾದವರು ಕಡೆಗೊಮ್ಮೆ, ಮಲಗಿರಮ್ಮ, ನಮಗು ನಿದ್ದೆ ಬರುತ್ತಿದೆ ಎಂದು ಗೊಣಗಿದಾಗ ಎಲ್ಲರು ಮಾತು ನಿಲ್ಲಿಸಿ ತಲೆ ಹಿಂದೆ ಒರಗಿಸಿದರು.
ಚಿಕ್ಕಮಗಳೂರಿನ ಬಸ್ ನಿಲ್ದಾಣದಲ್ಲಿ ಬಸ್ಸು ನಿಂತಾಗ ಬೆಳಗಿನ ಐದು ಗಂಟೆ ಸಮಯ. ಎಲ್ಲರು ಅವರವರ ಬ್ಯಾಗ್ ಗಳನ್ನು ಹುಡುಕುತ್ತಿದ್ದರೆ, ಕೀರ್ತನ ಮಾತ್ರ ಸೊಂಪಾದ ನಿದ್ದೆಯಲ್ಲಿದ್ದಳು. ಚಿತ್ರಾ ಅವಳನ್ನು ಅಲುಗಾಡಿಸಿದಳು , ಕಣ್ಣು ಬಿಟ್ಟ ಅವಳು
"ಏ ಆಗಲೆ ನಿಮ್ಮ ಮನೆ ಬಂತಾ" ಎನ್ನುತ್ತ ಎದ್ದಳು.
"ಇಲ್ಲಮ್ಮ ಮನೆ ಇಲ್ಲಿ ಬಂದಿಲ್ಲ, ನಾವೆ ಮನೆಗೆ ಹೋಗಬೇಕು, ಎದ್ದೇಳು" ನಗುತ್ತ ಅಂದಳು ಚಿತ್ರಾ,
ಎಲ್ಲರಿಗು ನಗು. ಬಸ್ಸಿನಿಂದ ಇಳಿದು, ಎದುರಿಗೆ ನೋಡುವಾಗ ಚಿತ್ರಾಳ ಚಿಕ್ಕಪ್ಪ ಬಂದಿದ್ದರು.
"ಚಿಕ್ಕಪ್ಪ ನೀವೆ ಬಂದ್ರಾ, ಜೀಪ್ ಕಳಿಸಿದ್ದರೆ ಸಾಕಿತ್ತು " ಎಂದಳು,
ಆತ ನಗುತ್ತ "ಇನ್ನು ಕತ್ತಲೆ ಅಲ್ಲವೇನಮ್ಮ , ಅಲ್ಲದೆ ಜೀಪ್ ಡ್ರೈವರ್ ಇರಲಿಲ್ಲ, ಹಾಗೆ ನಾನೆ ಬಂದೆ. ಪ್ರಯಾಣ ಹೇಗಿತ್ತು, ನಿದ್ದೆ ಬಂದಿತಾ, ಇಲ್ಲ ಮಾತನಾಡುತ್ತ ಕುಳಿತಿದ್ದೀರ" ಎಂದರು ಆತ,
"ಬರಿ ನಾಲಕ್ಕು ಐದು ಗಂಟೆ ಪ್ರಯಾಣ ಅಲ್ವ ಚಿಕ್ಕಪ್ಪ, ಹಾಯಾಗಿತ್ತು, ಎಲ್ಲರು ಮಲಗಿದ್ದೇವು, ಇವಳೊಬ್ಬಳಿಗೆ ಮಾತ್ರ ನಿದ್ದೆ ಬರಲಿಲ್ಲ, " ಎನ್ನುತ್ತ ಕೀರ್ತನಳನ್ನು ತೋರಿದಳು ಚಿತ್ರಾ.
ಕೀರ್ತನ ಮುಖ ಕೋಪದಿಂದ, ಸಂಕೋಚದಿಂದ ಕೆಂಪಾಯಿತು.
"ಏಕಮ್ಮ ಬಸ್ ಪ್ರಯಾಣ ಒಗ್ಗುವದಿಲ್ಲವ " ಎನ್ನುತ್ತಿರಬೇಕಾದರೆ ಎಲ್ಲರಿಗು ನಗು. ಕೀರ್ತನ ಚಿತ್ರಾಳನ್ನು ಅವರ ಚಿಕ್ಕಪ್ಪನಿಗೆ ಕಾಣದಂತೆ ಸರಿಯಾಗಿ ಜಿಗುಟಿದಳು, ಅವಳು "ಹಾ,,,," ಎಂದಾಗ,
"ಏಕೆ, ಚಿತ್ರಾ ಏನಾಯಿತು" ಎಂದು ಚಿಕ್ಕಪ್ಪ ಎಂದರೆ,
"ಏನಿಲ್ಲ ಚಿಕ್ಕಪ್ಪ" ಎಂದು ನಗುತ್ತ ಹೇಳಿದಳು ಚಿತ್ರಾ
ಎಲ್ಲರು ತಮ್ಮ ಬ್ಯಾಗ್ ಗಳನ್ನು ಹಿಡಿದು ಅವರ ಹಿಂದೆ ನಡೆದರು. ಬಸ್ ನಿಲ್ಡಾಣದ ದ್ವಾರದಲ್ಲಿಯೆ ಜೀಪ್ ನಿಂತಿತ್ತು, ಹಿಂದಿನ ಬಾಗಿಲು ತೆಗೆದ ಆತ ಎಲ್ಲರ, ಬ್ಯಾಗಗಳನ್ನು ಪಡೆದು ಅದರಲ್ಲಿ ಹಾಕಿ, ಬಾಗಿಲು ಮುಚ್ಚಿ, ಮುಂದೆ ಬಂದು ಬಾಗಿಲು ತೆಗೆದಾಗ, ಎಲ್ಲರು ಜೀಪಿನ ಒಳ ಸೇರಿದರು, ಆತನು ಡ್ರೈವರ್ ಸೀಟಿನಲ್ಲಿ ಕುಳಿತರು.
ಜೀಪ್ ಹೊರಟಂತೆ ಚಿತ್ರಾಳು "ಚಿಕ್ಕಪ್ಪ ಎಲ್ಲರನ್ನು ಪರಿಚಯಿಸುವುವೆ ಮರೆತೆ, ಇವಳು ಶಾಲಿನಿ, ನಾವು ಶಾಲು ಅನ್ನುತ್ತೇವೆ, ಇವಳು ಕೀರ್ತನ ನಮಗೆಲ್ಲ ಕೀರು, ಇವಳು ಅಚಲ ಕನ್ನಡ ಸ್ವಲ್ಪ ಅಷ್ಟಕ್ಕಷ್ಟೆ" ಎನ್ನುತ್ತ ಎಲ್ಲರಿಗೂ "ಇವರು ನಮ್ಮ ಚಿಕ್ಕಪ್ಪ, ನನಗೆ ಚಿಕ್ಕವಯಸಿನಿಂದಲೂ ಪ್ರೆಂಡ್ " ಅಂದಳು
ಶಾಲಿನಿ , ಒಮ್ಮೆ ಚಿತ್ರಾಳ ಚಿಕ್ಕಪ್ಪನತ್ತ ನೋಡಿದಳು, ಇವರನ್ನು ಮೊದಲೆ ಎಲ್ಲಿಯೊ ನೋಡಿರುವಂತಿದೆ, ಎಲ್ಲಿರಬಹುದು ಅಂದುಕೊಂಡಳು. ಹೊರಗಿನ ನಸುಗತ್ತಲು, ರಸ್ತೆ ಕಾಣದಂತೆ ಮುಸುಕಿದ ಮಂಜು, ಜೀಪಿನ ಬೆಳಕಿನಲ್ಲಿ ಮುಂಬಾಗದ ರಸ್ತೆಯಷ್ಟೆ ಕಾಣುತ್ತಿತ್ತು.
"ನಿಮ್ಮ ಹಳ್ಳಿ ದೊಡ್ಡದ, ಏನೆಲ್ಲ ಇದೆ? " ಅಚಲ ಕೇಳಿದಳು
"ದೊಡ್ಡದೆಲ್ಲಿ ಬಂತು, ಕೋಡುವಳ್ಳಿ ಎಂದರೆ ಅರವತ್ತು ಎಪ್ಪತ್ತು ಮನೆ ಇದ್ದೀತು, ಮೂರುನೂರ ಜನಸಂಖ್ಯೆ ದಾಟದ ಹಳ್ಳಿ, ಸುತ್ತ ಮುತ್ತ ಕಾಫಿ ತೋಟ, ಬೆಟ್ಟಗುಡ್ಡ , ನಮ್ಮ ಹಳ್ಳಿ ಏಕೆ, ಚಿಕ್ಕಮಗಳೂರಿನ ಎಲ್ಲ ಹಳ್ಳಿಗಳಿರುವುದು ಹಾಗೆ" ಎಂದಳು
"ನನಗಂತು ದೊಡ್ಡ ಪಟ್ಟಣಗಳಿಗಿಂತ ಚಿಕ್ಕ ಹಳ್ಳಿಯೆ ಇಷ್ಟವಮ್ಮ" ಎಂದಳು ಕೀರ್ತನ,
"ಇಷ್ಟವೇನೊ ಸರಿ, ಆದರೆ ಅಲ್ಲಿ ಗೋಪಾಲನ್ ಮಾಲು, ಪಿಜ್ಜ ಇವೆಲ್ಲ ಇರಲ್ವಲ್ಲ ಏನು ಮಾಡ್ತಿ " ಚಿತ್ರಾ ತುಂಟತನದಿಂದ ಪ್ರಶ್ನಿಸಿದಾಗ ಎಲ್ಲರಲ್ಲು ಮತ್ತೆ ನಗು.
ಕೋಡುವಳ್ಳಿಯ ಚಿತ್ರಾಳ ಮನೆಯ ಎದುರಿಗೆ ಜೀಪ್ ನಿಂತಾಗ, ಸೂರ್ಯ ಹುಟ್ಟಲು ಸಿದ್ದತೆ ನಡೆಸಿದ್ದ. ಪೂರ್ವದಿಕ್ಕು ತನ್ನ ಕಪ್ಪುಬಣ್ಣವನ್ನು ತೊಡೆಯುತ್ತ, ಕೆಂಪಾಗುತ್ತಿತ್ತು. ಮಲೆನಾಡಿನ ವಿಶಾಲ ಅಂಕಣದ ಮನೆಯನ್ನು ನೋಡುತ್ತ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಶಾಲಿನಿ, ಕೀರ್ತನ ದಂಗಾಗಿ ನಿಂತರು. ಸುತ್ತಲ ಹಸಿರಿನ ಸಿರಿ, ಮನೆಯ ಮುಂದಿನ ದೊಡ್ಡ ಅಂಗಳದಲ್ಲಿ ಪೇರಿಸಿದ್ದ ಅಡಕೆಯ ಮೂಟೆಗಳು, ಮನೆಯ ಮುಂದಿನ ಮರದ ಕಂಬಗಳ ಸಾಲು ಮೇಲೆ ಹೆಂಚಿನ ಮಾಡು ಎಲ್ಲವು ವಿಶೇಷ ಎನಿಸಿದ್ದವು.
ಒಳಗಿನಿಂದ ಮತ್ತೊಬ್ಬ ನಡುವಯಸಿನ ವ್ಯಕ್ತಿ ಬಂದರು, ನೋಡಲು ಚಿತ್ರಾಳ ಚಿಕ್ಕಪ್ಪನಂತಯೆ ಇದ್ದರು, ಅವರನ್ನು ನೋಡುವಾಗಲೆ, 'ನಮ್ಮ ಅಪ್ಪ' ಎಂದು ಎಲ್ಲರಿಗೆ ಹೇಳಿ ನಡೆದಳು ಚಿತ್ರಾ.
"ನೀವು ಒಳಗೆ ನಡೆಯರಿ , ನಿಮ್ಮ ಬ್ಯಾಗನು ಕೆಂಚ ತರುತ್ತಾನೆ" ಎಂದರು ಚಿತ್ರಾಳ ಚಿಕ್ಕಪ್ಪ.
"ಯಾರೊ ಈ ಕೆಂಚ" ಎಂದುಕೊಳ್ಳುತ್ತ, ಎಲ್ಲರು ನಿಧಾನವಾಗಿ ಚಿತ್ರಾಳ ಹಿಂದೆ ನಡೆದರು. ಚಿತ್ರಾ ಅವರ ಅಪ್ಪನ ಜೊತೆ ಮಾತನಾಡುವಾಗಲೆ ಒಳಗಿನಿಂದ ನಡುವಯಸಿನ ಹೆಂಗಸೊಬ್ಬರು ಈಚೆ ಬಂದರು, ಎಲ್ಲರು ಬನ್ನಿ ಎಂದು ಕರೆಯುತ್ತ ಚಿತ್ರಾ "ಇವರು ನಮ್ಮ ಅಪ್ಪ, ಇವರು ನಮ್ಮ ಚಿಕ್ಕಮ್ಮ " ಎನ್ನುತ್ತ ಇಬ್ಬರನ್ನು ಪರಿಚಯಿಸಿ, ಮತ್ತೆ ಅವರಿಗು ತನ್ನ ಗೆಳತಿಯರನ್ನೆಲ್ಲ ಪರಿಚಯಿಸಿದಳು. ನಗುತ್ತ ಮಾತನಾಡುತ್ತ ಎಲ್ಲರು, ಹೊರಗೆ ಇದ್ದ ತೊಟ್ಟಿಯಲ್ಲಿದ್ದ ನೀರಿನಲ್ಲಿ ಕಾಲು ತೊಳೆದು ಒಳಗೆ ಹೋದರು. ಅದು ಹಳೆಯ ಸಂಪ್ರದಾಯ, ಇವರಿಗೆ ಹೊಸದು.
"ಚಿತ್ರಾ ಕಾಫಿ ಕೊಡುವೆ, ಪ್ರಯಾಣದ ಸುಸ್ತು ಬೇರೆ, ನಿನ್ನ ಗೆಳತಿಯರೆಲ್ಲರಿಗು ಮಹಡಿಯ ಮೇಲಿನ ಅತಿಥಿಗಳ ರೂಮನ್ನು ಸಿದ್ದಪಡಿಸಿದೆ, ಸ್ನಾನ ಮಾಡಿ ಸಿದ್ದವಾಗಿ, ಎಲ್ಲರಿಗು ಇಡ್ಲಿ ಮಾಡಿಕೊಡುತ್ತೇನೆ " ಎಂದರು.
ಎಲ್ಲರು ಮುಖತೊಳೆದು ಕಾಫಿ ಕುಡಿದು, ಚಿತ್ರಾಳ ಅಪ್ಪ ಹಾಗು ಚಿಕ್ಕಮ್ಮನೊಡನೆ ಮಾತನಾಡುತ್ತ ಕುಳಿತರು.
ಚಿತ್ರಾ ತಾಯಿಯಿಲ್ಲದ ಮಗು, ಅವಳು ಎರಡು ವರ್ಷದ ಮಗುವಿರುವಾಗಲೆ ಅವಳ ತಾಯಿ ತೀರಿಹೋಗಿದ್ದರು. ತಂದೆ ಮತ್ತೊಂದು ಮದುವೆಯಾಗಲಿಲ್ಲ, ಹಾಗಾಗಿ ಚಿಕ್ಕಪ್ಪ ಚಿಕ್ಕಮ್ಮನ ಜೊತೆಗೆ ಬೆಳೆದವಳು ಅವಳು. ಚಿಕ್ಕಪ್ಪನ ಇಬ್ಬರು ಮಕ್ಕಳು ಅಭಿ ಹಾಗು ಅಜಯ್ ಅಂದರು ಅವಳಿಗೆ ಅಷ್ಟೆ ಪ್ರೀತಿ. ಎಲ್ಲರು ಹರಟುತ್ತಿದ್ದರು ಸಹ ಶಾಲಿನಿ ಮಾತ್ರ ತುಟಿ ಬಿಚ್ಚದಂತೆ ಕುಳಿತ್ತಿದ್ದಳು, ಸಾಮಾನ್ಯವಾಗಿಯೆ ಅವಳದು ಮಾತು ಕಡಿಮೆ ಆದರೆ ಈಗ ಅದೇನೊ ಮೌನ.
"ಏಕೆ ಸುಮ್ಮನೆ ಕುಳಿತೆ, ನಿನಗೆ ನಮ್ಮ ಮನೆ ಹಿಡಿಸಲಿಲ್ವ" ಚಿತ್ರಾ ಕೇಳಿದಳು,
"ಅದೆಲ್ಲ ಏನಿಲ್ಲ ಚಿಕ್ಕು, ಅದೇನು ಒಂದು ತರ ಅನ್ನಿಸುತ್ತಿತ್ತು, ಸುಮ್ಮನೆ ಕುಳಿತೆ, ನೀವು ಮಾತನಾಡುತ್ತಿರಿ, ನಾನು ಮೇಲೆ ಅತಿಥಿಗಳ ಕೊಣೆಯಲ್ಲಿರುತ್ತೇನೆ" ಎಂದವಳೆ , ಒಳಬಾಗದಲ್ಲಿದ್ದ ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೋದಳು.
ಅವಳು ಹೋದ ಹಿಂದೆಯೆ , ಚಿತ್ರಾಳ ಚಿಕ್ಕಮ್ಮ,
"ನೋಡಮ್ಮ ಮೇಲೆ ಅವಳಿಗೆ ಯಾವ ರೂಮು ಅಂತ ತಿಳಿಯಲ್ಲ, ಇದೋ ಹಳೆಯ ಬಂಗಲೆಯಂತಿದೆ, ಹೊಸಬರಿಗೆ ಕಷ್ಟವೆ , ನಿನ್ನ ಸ್ನೇಹಿತೆಗೆ ರೂಮು ತೋರಿಸು " ಎಂದರು.
ಶಾಲಿನಿಹೋದ ಒಂದೆರಡು ಕ್ಷಣದಲ್ಲಿ , ಚಿತ್ರಾಳು ಹೊರಟು, "ನಾನು ಮೇಲೆ ಹೋಗ್ತೀನಿ ನೀವು ಬನ್ನಿ, ಎನ್ನುತ್ತ ಹೊರಟಾಗ, ಇಬ್ಬರು ಗೆಳತಿಯರು ಜೊತೆಗೆ ಹೊರಟರು"
ಮೂವರು ಮಾತನಾಡುತ್ತ ಬೇಗ ಬೇಗಲೆ ಮೇಲೆ ಬಂದರು, ಶಾಲಿನಿ ಎಲ್ಲಿಯು ಕಾಣಲಿಲ್ಲ. "ಎಲ್ಲಿ ಹೋದಳೆ ಶಾಲು, ಮೊದಲೆ ಅವಳೊಂತರ ಮೊದ್ದು " ಎನ್ನುತ್ತ, ಮೇಲಿನ ಕಾರಿಡಾರಿನಲ್ಲಿ ಕೊನೆಯವರೆಗು ನಡೆದು, ಬಲಕ್ಕೆ ತಿರುಗಿ "ಇದೆ ನೋಡಿ ನಿಮ್ಮಗಾಗಿ ಸಿದ್ದವಾದ ರೂಮು" ಎನ್ನುತ್ತ ಬಾಗಿಲು ತೆರೆದರೆ, ಅಲ್ಲಿ ಶಾಲಿನಿ ಆಗಲೆ ಕುರ್ಚಿಯಲ್ಲಿ ವಿರಾಮಮಾಡುತ್ತ ಕುಳಿತ್ತಿದ್ದಳು, ಒಂದು ಕುರ್ಚಿಯ ಮೇಲೆ ಕುಳಿತು ಮತ್ತೊಂದರ ಮೇಲೆ ಕಾಲಿಟ್ಟು ಕಣ್ಣು ಮುಚ್ಚಿದ್ದಳು. "ರಾತ್ರಿ ಮಾಡಿದ ನಿದ್ದೆ ಸಾಲದೆ? ಮತ್ತೆ ಮಲಗಿದ್ದಿ " ಎನ್ನುತ್ತ ಕೀರ್ತನ ಒಳಬಂದಾಗ ಕಣ್ಣು ತೆರೆದಳು ಶಾಲಿನಿ."ಅಲ್ವೆ ಶಾಲು , ನಿನಗೆ ಇದೆ ಅತಿಥಿಗಳ ಕೋಣೆ ಎಂದು ಹೇಗೆ ತಿಳಿಯಿತು?, ಸರಿಯಾಗಿ ಇಲ್ಲಿಯೆ ಬಂದು ಸೆಟ್ಲ್ ಆಗಿ ಬಿಟ್ಟಲ್ಲ" ಚಿತ್ರಾ ಕೇಳಿದಳು."ಅದೇನೊ ಗೊತ್ತಿಲ್ವೆ, ಸುಮ್ಮನೆ ಹೀಗೆ ಉದ್ದಕ್ಕೆ ಬಂದೆ , ಇಲ್ಲಿ ರೂಮು ಕಾಣಿಸಿತು, ಒಳಗೆ ಬಂದೆ, ಸುಮ್ಮನೆ ಕಣ್ಣು ಮುಚ್ಚಿದ್ದೆ ಅಷ್ಟೆ" ಶಾಲಿನಿ ಅಂದಳು."ಸರಿ ಈಗ ನಮ್ಮ ಕಾಯಗಳೆನಮ್ಮ, ಚಿಕ್ಕು, ಇಲ್ಲದಿದ್ದರೆ, ಇವರಿಬ್ಬರು ರೂಮಿನಲ್ಲಿ ವಾರ ಪೂರ್ತಿ ನಿದ್ದೆ ಮಾಡುತ್ತಲೆ ಸಮಯ ಕಿಲ್ ಮಾಡ್ತಾರೆ" ಅಚಲ ಕೇಳಿದಳು.
"ಕಾಯವೆಂದರೆ ಎಂತದೆ" ಚಿತ್ರಾ ಕೇಳಿದಳು
"ಅದೇ ಚಿಕ್ಕು, ಪ್ರೋಗ್ರಾಮ್ ಅಂತಾರಲ್ಲ ಅದು" ಅಚಲ ಎಂದಳು
"ನಿನ್ನ ಕನ್ನಡಕ್ಕಿಷ್ಟು, ಕಾರ್ಯಕ್ರಮನ? , ನೀನು ಇಂಗ್ಲೀಷ್ ನಲ್ಲಿ ಮಾತನಾಡು, ನಮಗೆ ಅರ್ಥವಾಗುತ್ತೆ, ಈಗ ಸ್ನಾನ ಮಾಡಿ, ನಂತರ ಮನೆಯ ಪರಿಚಯ, ಆಮೇಲೆ ಚಿಕ್ಕಮ್ಮ ಮಾಡಿರುವ ತಿಂಡಿಗಳ ದ್ವಂಸ, ಮದ್ಯಾನ್ಹ ನಮ್ಮ ಹಳ್ಳಿ ಹಾಗು ಚಿಕ್ಕಮಗಳೂರಿಗೆ ಹೋಗಿ ಬರೋಣ ಇವತ್ತು ಸಾಕು, ಇನ್ನು ಸಮಯವಿದೆಯಲ್ಲ, ನಾಳೆ ಮುಳ್ಳಯ್ಯನ ಗಿರಿ, ಹಾಗು ಬಾಬ ಬುಡನ್ ಮತ್ತು ಸುತ್ತ ಮುತ್ತ ಅಂದುಕೊಂಡಿರುವೆ ನಮ್ಮ ಚಿಕ್ಕಪ್ಪ ಏನು ಹೇಳುವರೊ ನೋಡೋಣ" ಎಂದಳು.
"ಚಿಕ್ಕು, ನಿಮ್ಮ ಚಿಕ್ಕಪ್ಪನ?, ನನಗೆ ಏಕೊ ಅವರನ್ನು ನೋಡಿದರೆ ಭಯ ಅನ್ನಿಸುತ್ತೆ, ಅವರು ನಿನಗೆ ಏನು ಅನ್ನಲ್ವ?" ಶಾಲಿನಿ ಕೇಳಿದಳು.
ಎಲ್ಲರು ಶಾಲಿನಿಯನ್ನು ಅಚ್ಚರಿಯಿಂದ ನೋಡಿದರು
"ಏ ಶಾಲು ಭಯ ಎಂತದೆ, ಅವರು ತುಂಬಾ ಒಳ್ಳೆಯವರು, ನಾನು ಅಂದರೆ ಅವರಿಗೆ ಪ್ರಾಣ, ಈಗ ಅವರೆ ನಮ್ಮನ್ನು ಎಲ್ಲ ಕಡೆಗು ಕರೆದು ಕೊಂಡು ಹೋಗುವುದು, ನಮ್ಮ ಅಪ್ಪ ಇನ್ನೇನು ಯಾವುದಕ್ಕು ಬರಲ್ಲ, ಜೊತೆಗೆ ಚಿಕ್ಕಮ್ಮ , ಮಕ್ಕಳು ಬರಬಹುದು, ಮಕ್ಕಳನ್ನು ನೀವು ನೋಡಲಿಲ್ಲ ಅಲ್ವ ಮಲಗಿರಬಹುದು, ಈಗ ಸ್ನಾನ ಮುಗಿಸಿ, ನಂತರ ನೋಡೋಣ" ಎಂದಳು.
ಶಾಲಿನಿ , ಅಚಲ ಹಾಗು ಚಿತ್ರಾ ಸ್ನಾನ ಮುಗಿಸಿ ಸಿದ್ದವಾದರೆ, ಕೀರ್ತನ ಸಿದ್ದಳಾಗುತ್ತಿದ್ದಳು,
"ಇವಳೋಬ್ಬಳು ಬಂದರೆ ಆಯಿತು, ಒಟ್ಟಿಗೆ ಹೋಗಿ ಮನೆಯನ್ನೆಲ್ಲ ನೋಡುವ, ನಂತರ ಚಿಕ್ಕಮ್ಮ ಮಾಡಿರುವ ಇಡ್ಲಿ , ಹಾಗು ಗಸಗಸೆ ಪಾಯಸ " ಎಂದಳು ಚಿತ್ರಾ.
"ನನಗೆ ಓಡಾಡಲು ಬೇಸರ, ಒಂದು ಕೆಲಸ ಮಾಡು ಚಿಕ್ಕು ನೀವು ಮನೆಯನ್ನೆಲ್ಲ ನೋಡಿ ಬನ್ನಿ, ನಾನು ಇಲ್ಲೆ ಬಿಸಿಲುಮಚ್ಚಿನಲ್ಲಿ ನಿಂತು ಹಿಂದೆ ಕಾಣುವ ಹಸಿರು ಬೆಟ್ಟ ನೋಡುತ್ತ ನಿಂತಿರುತ್ತೇನೆ" ಎನ್ನುತ್ತ ಶಾಲಿನಿ ಹೊರಗೆ ನಡೆದಳು.
ಚಿತ್ರಾ ದಂಗಾಗಿ ನಿಂತಳು. ನಾನು ಇವರಲ್ಲಿ ಎಂದಿಗು ನಮ್ಮ ಮನೆಯ ಬಗ್ಗೆ ಹೇಳಿಲ್ಲ, ಆದರೆ ಶಾಲಿನಿ ತನಗೆ ಗೊತ್ತಿರುವಂತೆ ಬಿಸಿಲುಮಚ್ಚಿನ ಕಡೆ ನಡೆದಿದ್ದಾಳೆ, ಅಲ್ಲದೆ ಅಲ್ಲಿ ನಿಂತರೆ ಹಿಂದಿರುವ ಹಸಿರು ಇಳಿಜಾರು ಬೆಟ್ಟ ನೋಟ ಕಾಣುತ್ತದೆ ಎಂದು ಇವಳಿಗೆ ಹೇಗೆ ತಿಳಿಯಿತು, ಇದೇನೊ ವಿಚಿತ್ರವಾಗಿದೆ ಅಂದುಕೊಂಡಳು, ಆದರೆ ತನ್ನ ಸ್ನೇಹಿತೆಯರ ಜೊತೆ ಏನು ಹೇಳಲು ಹೋಗಲಿಲ್ಲ.
ಕೀರ್ತನ ಸಿದ್ದವಾದ ನಂತರ, ಇಬ್ಬರ ಜೊತೆ ಚಿತ್ರಾ ಮನೆಯನ್ನೆಲ್ಲ ಸುತ್ತು ಹೊಡೆದಳು, ಹಳೆಯ ಕಾಲದ ಮನೆ. ಯಾವುದೋ ರಾಜನ ಕಾಲದ ಅರಮನೆಯಂತಿದೆ, ಅಲ್ಲಿನ ಕಂಬಗಳ ಮೇಲಿನ ಕೆತ್ತನೆಗಳು, ವಿಶಾಲವಾದ ಕೋಣೆಗಳು, ಧವಸ ದಾನ್ಯಗಳನ್ನು ಕಾಫಿ, ಅಡಕೆಯನ್ನು ರಕ್ಷಿಸಿಡಲು ಇರುವ ಜಾಗಗಳು, ಅವನ್ನು ಒಣಗಿಸಲು ಮುಂದೆ ಇರುವ ವಿಶಾಲ ಅಂಗಳ ಎಲ್ಲವನ್ನು ನೋಡುತ್ತ ಗೆಳತಿಯರು ಮೈಮರೆತರು.
"ಇದೆಲ್ಲ ಸರಿ , ಶಾಲು ಎಲ್ಲಿ ಹೋದಳೆ ಎಲ್ಲು ಕಾಣಿಸುತ್ತಿಲ್ಲ" ಕೀರ್ತನ ಕೇಳಿದಳು
"ಬಾ ಅಲ್ಲಿಗೆ ಹೋಗೋಣ, ಅವಳೇನು ಬಿಸಲುಮಚ್ಚು ಸೇರಿಬಿಟ್ಟಿದ್ದಾಳೆ ಅನ್ನಿಸುತ್ತೆ, ಅಲ್ಲಿಂದ ಸುತ್ತಮುತ್ತಲ ಬೆಟ್ಟಗುಡ್ಡ ನಮ್ಮ ತೋಟ ಎಲ್ಲವು ಕಾಣುತ್ತದೆ, ನಮ್ಮ ಮನೆ ಸಾಕಷ್ಟು ಎತ್ತರದಲ್ಲಿದೆ ಹಾಗಾಗಿ ಸುತ್ತಲ ದೃಶ್ಯ ಚೆನ್ನಾಗಿರುತ್ತೆ" ಎನ್ನುತ್ತ, ಇಬ್ಬರ ಜೊತೆ ನಡೆಯುತ್ತ, ಪುನಃ ಮನೆಯ ಮೇಲ್ಬಾಗಕ್ಕೆ ಬಂದು, ಎಡಕ್ಕೆ ತಿರುಗುತ್ತ, ಅಲ್ಲಿದ್ದ ಹಳೆಯ ಮರದ ಬಾಗಿಲು ತೆರೆಯುತ್ತ ಬಿಸಿಲು ಮಚ್ಚು ಪ್ರವೇಶಿಸಿದರು.
"ಓ ಬ್ಯೂಟಿ, ಮಾರ್ವಲಸ್ , ಓಸಮ್.." ಕೀರ್ತನ, ಹಾಗು ಅಚಲ ಬಾಯಲಿ ಹೊರಟ ಪದಗಳು.
ಇವರು ಸುತ್ತಲು ನೋಡಿದರು, ಎತ್ತ ನೋಡಿದರು, ವನಸಿರಿ, ಹಸಿರ ಹೊದ್ದಿಕೆ, ಬೆಳಗಿನ ಬಿಸಿಲು ಹಾಗು ಮುಚ್ಚಿದ್ದ ಹಿಮ ಎಂತದೊ ಮಾಯಾಲೋಕವನ್ನು ಸೃಷ್ಟಿ ಮಾಡಿತ್ತು. ಬಿಸಿಲುಮುಚ್ಚಿನ ಕೊನೆಯಲ್ಲಿ ಅರ್ದ ಗೋಡೆಯ ಹತ್ತಿರ , ಶಾಲಿನಿ, ಬೆಟ್ಟದ ಕಡೆ ಮುಖ ಮಾಡಿ ನಿಂತಿರುವುದು ಕಾಣಿಸಿತು. ಮೂವರು ಹತ್ತಿರ ಹೋದಂತೆ, ಅವಳು ಹಿಂದೆ ತಿರುಗಿ , ಇವರನ್ನು ನೋಡಿ ನಸುನಕ್ಕಳು. ಅವಳ ಮುಖದಲ್ಲಿ ಎಂತದೋ ಪ್ರಭೆ ಇತ್ತು.
"ಏನು ಶಾಲು ಒಬ್ಬಳೆ ನಿಂತಿದ್ದಿ ತಪಸ್ಸು ಮಾಡಲೆಂದು ಇಲ್ಲಿ ಬಂದೆಯಾ" ಕೀರ್ತನ ನುಡಿದಾಗ,"ಅಷ್ಟಲ್ಲದೆ ಎನು ಇದು ನಿಜಕ್ಕು ತಪಸ್ಸು ಮಾಡುವ ಸ್ಥಳದಂತೆ ಇದೆ, ನೋಡು ಆ ಹಸಿರು ಇಳಿಜಾರು ಬೆಟ್ಟವನ್ನು " ಎಂದಳು ಶಾಲಿನಿ. "ನೀನು ಕವಿಯಾಗಿಬಿಟ್ಟೆ ಬಿಡು ಶಾಲು" ಅಚಲ ರೇಗಿಸಿದಳು. "ಇಲ್ಲವೆ ಇಲ್ಲಿ ಎಲ್ಲವು ಹೀಗೆ ಚೆನ್ನಾಗಿದೆ, ಮಳ್ಳಯ್ಯನ ಗಿರಿ ಶ್ರೇಣಿಯನ್ನು ಹಾಯುವಾಗಲು ಅಷ್ಟೆ ಇಂತದೆ ಹಸಿರು ಬೆಟ್ಟಗಳ ಸಾಲುಗಳಿವೆ" ಶಾಲಿನಿ ಸ್ವಗತದಂತೆ ನುಡಿದಳು. "ನೀನು ಮೊದಲೆ ಚಿಕ್ಕಮಗಳೂರಿಗೆ ಬಂದಿದ್ದೆಯ ಶಾಲು, ಎಲ್ಲ ಗೊತ್ತಲ್ಲ" ಅಚ್ಚರಿ ಎಂಬಂತೆ ಕೇಳಿದಳು ಚಿತ್ರಾ. "ಇಲ್ಲಮ್ಮ ನಾನು ನಿಮ್ಮ ಊರಿಗೆ ಬರುತ್ತಿರುವುದು ಇದೆ ಮೊದಲು, ಅಲ್ಲದೆ ನಮ್ಮ ಅಪ್ಪ ಅಮ್ಮ ನನ್ನನು ಈ ರೀತಿ ಹೊರಗೆ ಒಬ್ಬಳನ್ನೆ ಕಳಿಸುತ್ತಿರುವುದು ಇದೆ ಮೊದಲು, ಅದು ನಿನ್ನ ಕೃಪೆಯಿಂದ" ನಗುತ್ತ ಹೇಳಿದಳು ಶಾಲಿನಿ.
ಚಿತ್ರಾಳ ಮನದಲ್ಲಿ ಎಂತದೊ ಗೊಂದಲ. ಏಕೊ ಶಾಲಿನಿಯ ನಡೆನುಡಿಗಳು, ನಮ್ಮ ಮನೆಗೆ ಬಂದ ನಂತರ ಬದಲಾಗಿದೆ, ಇದೆ ಮೊದಲು ಬರುತ್ತಿರುವುದು ಅನ್ನುತ್ತಾಳೆ, ಆದರೆ ಮೊದಲೆ ಎಲ್ಲವು ಗೊತ್ತು ಅನ್ನುವ ರೀತಿ ವರ್ತಿಸುತ್ತಿದ್ದಾಳೆ. ಎಲ್ಲಿಯೋ ಏನೊ ಆಗುತ್ತಿದೆ ಅಂದುಕೊಂಡಳು. ಆದರೆ ಅದನ್ನು ಯಾರಲ್ಲಿಯು ಹೇಳುವುದು ಬೇಡ, ಹೇಗೊ ಒಂದುವಾರ ಎಲ್ಲ ಸಂತಸದಿಂದ ಇದ್ದರೆ ಸರಿ ಎಂದು ಚಿಂತಿಸುತ್ತ, ಶಾಲಿನಿ ಕಡೆ ನೋಡಿದಳು, ಅವಳು ದೂರದ ಹಸಿರು ಬೆಟ್ಟದ ಮೇಲೆ ಗಮನವಿಟ್ಟಿದ್ದಳು.
ಎಲ್ಲರು ಮಾತನಾಡುತ್ತ , ಮನೆಯಲ್ಲಿ ಗಲಾಟೆ ಎಬ್ಬಿಸುತ್ತಲೆ ಊಟದ ಕೊಟಡಿಯಲ್ಲಿ ಸೇರಿ ಇಡ್ಲಿ ತಿಂದು ಗಸಗಸೆ ಪಾಯಸಿ ಕುಡಿದರು. ಮನೆಯಲ್ಲಿ ಎಂದು ಪಾಯಸ ಕುಡಿಯದ ಕೀರ್ತನ ಇಲ್ಲಿ ಎರಡು ಲೋಟ ಕುಡಿದಿದ್ದಳು, ಅಚಲ ಇಲ್ಲಿಯ ತಿಂಡಿಯನ್ನು ತನ್ನ ಕೇರಳದ ಇಡ್ಲಿಯಂತದೆ ತಿಂಡಿ 'ಪುಟ್ಟು'ವಿಗೆ ಹೋಲಿಸುತ್ತ ಸಾಕಷ್ಟು ತಿಂದಳು. ಶಾಲಿನೆ ಒಬ್ಬಳೆ ಸ್ವಲ್ಪ ಗಂಭೀರವಾಗಿದ್ದವಳು. ಅವರು ತಿನ್ನುತ್ತಿರಬೇಕಾದಲ್ಲಿ, ಚಿತ್ರಾಳ ಚಿಕ್ಕಪ್ಪ ಹಾಗು ಮಕ್ಕಳು ಅಬಿ, ಅಜಯ್ ಸಹ ಜೊತೆ ಸೇರಿದರು, ಅವರಿಬ್ಬರ ಮಾತುಗಳು ಎಲ್ಲರಿಗು ಇಷ್ಟವಾಯಿತು.
ಚಿತ್ರಾಳ ಚಿಕ್ಕಪ್ಪ, "ಚಿತ್ರಾ, ತಿಂಡಿ ತಿಂದಾದ ಮೇಲೆ, ಸುಮ್ಮನೆ ಹಾಗೆ ನಮ್ಮ ಕೋಡುವಳ್ಳಿಯನ್ನೊಮ್ಮೆ ಸುತ್ತಿಬನ್ನಿ, ತುಂಬಾ ದೂರವೆಲ್ಲ ಹೋಗಬೇಡಿ, ಕಾಫಿ ತೋಟಕ್ಕೆ ನಿಧಾನ ಹೋದರಾಯಿತು, ಈವತ್ತು ಬೇಡ, ದೇವಾಸ್ಥಾನ ತೋರಿಸು, ಮನೆಗೆ ಬೇಗ ಊಟಕ್ಕೆ ಬಂದು ಬಿಡಿ, ಊಟವಾದ ನಂತರ ವಿಶ್ರಾಂತಿ , ಸಂಜೆ ನಮ್ಮ ವ್ಯಾನಿನಲ್ಲಿ ಎಲ್ಲರು ಚಿಕ್ಕಮಗಳೂರಿಗೆ ಹೋಗಿ ಬರೋಣ ಎಲ್ಲರು ನಮ್ಮ ಊರು ನೋಡಲಿ. ನಾಳೆ ಬೆಳಗ್ಗೆ ಆರರ ಒಳಗೆ ಸಿದ್ದರಾಗಿ, ಮುಳ್ಳಯ್ಯನ ಗಿರಿಗೆ ಹೋಗೋಣ, ಬೇಗ ಹೋದರೆ, ಹಿಮದ ನಡುವೆ ಗಿರಿ ನೋಡಲು ಚಂದ, ಡ್ರೈವರ್ ಬಾಬುಗೆ ಹೇಳ್ತೀನಿ, ಅಲ್ಲಿಂದ ಬಾಬಬುಡನ್ ಗಿರಿ, ಎಲ್ಲ ನೋಡೋಣ, ಕಲ್ಲತ್ತ ಗಿರಿಯ ಫಾಲ್ಸ್ ಈಗ ತುಂಬಾ ಚೆನ್ನಾಗಿದೆ, ಬೇಕಿದ್ದಲ್ಲಿ ನೀವೆಲ್ಲ ಅಲ್ಲಿ ನೀರಲ್ಲಿ ಸ್ನಾನ ಮಾಡಬಹುದು, ಆದರೆ ಮೇಲೆ ಹತ್ತಿ ಹೋಗಬಹುದು, ನಾಡಿದ್ದು ಯಥಾಪ್ರಕಾರ ಬೆಳವಾಡಿ, ಹಳೆಬೀಡು ಬೇಲೂರು ನೋಡಿ ಬರುವ. ಎಲ್ಲರಿಗು ಇಷ್ಟವಾದರೆ ಒಂದು ದಿನ ಶೃಂಗೇರಿ ಹೊರನಾಡು. ಮತ್ತೆ ನಮ್ಮ ಕಾಫಿ ಅಡಕೆ ತೋಟ ನೋಡುವದಕ್ಕೆ ನಿಮಗೆ ಎರಡು ದಿನ ಬೇಕು, ಈಗ ನನಗೆ ಸ್ವಲ್ಪ ಕೆಲಸವಿದೆ ಹೊರಗೆ ಹೋಗಿ ಬರುವೆ, ಸಂಜೆ ಬಾಬು ಜೊತೆ ಚಿಕ್ಕಮಗಳೂರಿಗೆ ಹೋಗಿ ಬನ್ನಿ " ಎನ್ನುತ್ತ ಅವರು ಹೊರಟರು.
ಚಿತ್ರಾ ಎಲ್ಲರ ಜೊತೆ ಹೊರಹೊರಟಳು, ಬೆಳಗಿನ ಬಿಸಿಲು ಹಿತಕರವೆನಿಸಿತ್ತು. ಹಸಿರು ನಡುವಿನ ಪುಟ್ಟ ಹಳ್ಳಿ. ಬೆಂಗಳೂರಿನ ವಾಹನಗಳ ಹೊಗೆ, ಟಾರು ರಸ್ತೆ, ಕಾಂಕ್ರಿಟ್ ಬಿಲ್ಡಿಂಗ್ ಗಳ ನಡುವೆ ಇರುವ ಕೀರ್ತನ, ಹಾಗು ಶಾಲಿನಿಗಂತು ಯಾವುದೋ ಸ್ವರ್ಗಕ್ಕೆ ಬಂದ ಸಂಭ್ರಮ. ಚಿತ್ರಾ ಹಾಗು ಅಚಲ ಸಹ ನೆಮ್ಮದಿಯಾಗಿದ್ದರು. ಪುಟ್ಟಹಳ್ಳಿಯಾದರು ಸುತ್ತಡಲು ಸಾಕಷ್ಟು ಜಾಗವಿತ್ತು,
ಮನೆಯಿಂದ ಹೊರಬರುವಾಗಲೆ ಚಿತ್ರಾ ಹೇಳಿದಳು " ನೋಡು ಈ ದಾರಿಯಲ್ಲಿ ನಡೆದು ಹೋದರು, ನಮ್ಮ ತೋಟಕ್ಕೆ ಹೋಗಬಹುದು, ಆದರೆ ತುಂಬಾ ಸಮಯವಾಗುತ್ತೆ, ಅದಕ್ಕೆ ನಾಳೆ ನಾಡಿದ್ದು ಹೋಗೋಣ. ಎಲ್ಲರು ಕೋಡುವಳ್ಳಿ ಸುಮ್ಮನೆ ಸುತ್ತಾಡೋಣ. ಕೋಡುವಳ್ಳಿ ಎಂದರೆ ಊಟಿ ಇದ್ದಹಾಗೆ ಇದೆ. ಸುತ್ತಲು ಬೆಟ್ಟಗುಡ್ಡ ಎಲ್ಲ. ನಮ್ಮೂರಿನಲ್ಲಿ ದೇವಿರಮ್ಮ ದೇವಾಲಯವಿದೆ, ಎಲ್ಲರು ಅದಕ್ಕೆ ಹೋಗೋಣ"
ಬಿಸಿಲೇರುವವರಿಗು ಸುತ್ತಿದ್ದರು, ಹಳ್ಳಿಯ ಜನ ಕೆಲವರು ಮನೆಬಾಗಿಲಲ್ಲಿ ನಿಂತು ಸುತ್ತುತ್ತಿರುವ ಈ ಪಟ್ಟಣದ ಹೆಣ್ಣುಮಕ್ಕಳನ್ನು ಕುತೂಹಲದಿಂದ ನೋಡಿದರು,"ತಮ್ಮಯಪ್ಪನವರ ಮನೆ ಮಕ್ಕಳು" ಎಂದುಕೊಂಡರು. ದೇವಿರಮ್ಮನ ದರ್ಶನವು ಆಯಿತು. ಮದ್ಯಾನ್ಹ ಮನೆಗೆ ಬರುವಾಗ ಊಟಸಿದ್ದವಿತ್ತು. ಎಲ್ಲರು ಊಟ ಮುಗಿಸಿ ತಮ್ಮ ಮೇಲಿನ ಕೋಣೆ ಸೇರಿದರು. ಚಿತ್ರಾ, ಅಚಲ, ಕೀರ್ತನ ಮಾತನಾಡುತ್ತ ನಿದ್ದೆ ಹೋದರು,
ಶಾಲಿನಿ ನಿದ್ದೆ ಬಂದವಳಂತೆ ಮಂಚದ ಮೇಲೆ ಕಣ್ಣು ಮುಚ್ಚಿ ಮಲಗಿದ್ದಳು, ಅದು ತನ್ನ ಸ್ನೇಹಿತೆಯರ ಜೊತೆ ಮಾತು ತಪ್ಪಿಸಲು, ಆದರೆ ಅವಳ ಮನದಲ್ಲಿ ಎಂತದೋ ಸಂಘರ್ಷ ನಡೆದಿತ್ತು. ಇದೇಕೆ ಹೀಗೆ ಆಗುತ್ತಿದೆ. ಈ ಮನೆಯಲ್ಲಿ , ಈ ಹಳ್ಳಿಯಲ್ಲಿ ಸುತ್ತಾಡುವಾಗ ತನ್ನ ಮನಕ್ಕೆ ಅದೇನೊ ಆಗುತ್ತಿದೆ. ಏನೆಂದು ಅವಳಿಗೆ ಅರ್ಥವಾಗುತ್ತಿಲ್ಲ. ಈ ಜಾಗವನ್ನೆಲ್ಲ ಮೊದಲೆ ಯಾವುದೊ ಸಿನಿಮಾದಲ್ಲಿಯೊ ಎಲ್ಲಿಯೋ ನೋಡಿರುವಂತೆ ಅನ್ನಿಸುತ್ತಿದೆ. ಆದರೆ ಅದು ಸಿನಿಮಾ ನೆನಪುಗಳಲ್ಲ, ಈ ಜಾಗಕ್ಕು ತನಗು ಅದೇನೊ ಸಂಬಂಧವಿದೆ ಎಂದು ಮನಸ್ಸು ನುಡಿಯುತ್ತಿದೆ. ಸುಮ್ಮನೆ ಕಣ್ಣು ಮುಚ್ಚಿದಳು ಅವಳು. ನಿದ್ದೆಯ ಜೊಂಪೊಂದು ಎಳೆದಂತಾಯ್ತು.
"ಚಂದ್ರಾ……ಚಂದ್ರಾ….." ಯಾರೋ ಕೂಗಿದಂತಾಯ್ತು.
ತಟ್ಟನೆ ಅವಳಿಗೆ ಮತ್ತೆ ಎಚ್ಚರವಾಯಿತು, ಪಕ್ಕಕ್ಕೆ ತಿರುಗಿ ನೋಡಿದಳು. ಶಾಲಿನಿ, ಗೆಳತಿಯರೆಲ್ಲ ನಿದ್ರಿಸುತ್ತಿದ್ದರು. ಕೈ ಚಾಚಿ ಮೊಬೈಲ್ ಹಿಡಿದು ಸಮಯ ನೋಡಿದಳು, ಸಂಜೆ ನಾಲಕ್ಕು ಘಂಟೆ. ಮತ್ತೆ ನಿದ್ರೆ ಬರುತ್ತಿಲ್ಲ, ಎಲ್ಲರನ್ನು ಎಬ್ಬಿಸುವ ಎಂದು ಯೋಚಿಸಿದವಳು, ಅದಕ್ಕೆ ಮನಬಾರದೆ ಸುಮ್ಮನಾದಳು. ಹಾಗೆ ಎದ್ದು ಶಬ್ದವಾಗದಂತೆ ಬಾಗಿಲು ತೆರೆದು, ನಡೆಯುತ್ತ, ಮೆಟ್ಟಲಿಳಿದು ಕೆಳಗೆ ಬಂದಳು.
ಕೆಳಗೆ ಚಿತ್ರಾಳ ಚಿಕ್ಕಮ್ಮ ಕಾಫಿ ತಯಾರಿ ನಡೆಸಿದ್ದರು. ಶಾಲಿನಿಯನ್ನು ಕಂಡು, "ಏಕಮ್ಮ ನಿನಗೆ ನಿದ್ರೆ ಬರಲಿಲ್ಲವ, ಶಾಲಿನಿ ಎಂದಲ್ಲವ ನಿನ್ನ ಹೆಸರು, ಬೆಂಗಳೂರಿನಲ್ಲಿ ಎಲ್ಲಿಯಾಯ್ತು ನಿನ್ನ ಮನೆ," ಎಂದೆಲ್ಲ ವಿಚಾರಿಸಿದರು.
ಹಾಗೆ ಅವರ ಜೊತೆ ಮಾತನಾಡುತ್ತ, ಊಟದ ಕೋಣೆಯನ್ನೆಲ್ಲ ಸುತ್ತಲು ಕಣ್ಣಾಡಿಸುವಾಗ ಗೋಡೆಯ ಮೇಲೆ ಕೆಲವು ಭಾವಚಿತ್ರಗಳಿದ್ದವು, ಕುತೂಹಲದಿಂದ ಎದ್ದು ಹತ್ತಿರ ಹೋಗಿ ನೋಡಿದಳು. "ಇವೆಲ್ಲ ತುಂಬಾ ಹಳೆಯ ಪೋಟೊಗಳಮ್ಮ, ನಮ್ಮವರ ಅಪ್ಪ ತಾತ ಅಜ್ಜಿ ಮುಂತಾದವು, ಕೆಲವರು ಚಿತ್ರ ಯಾರದು ಅಂತ ನನಗು ಗೊತ್ತಿಲ್ಲ ಆದರು ಅದನ್ನೆಲ್ಲ ಅಲ್ಲಿಂದ ತೆಗೆಯುವ ಹಾಗಿಲ್ಲ ನೋಡು, ನಿಮ್ಮ ಚಿತ್ರಾಳ ಚಿಕ್ಕಪ್ಪನಿಗೆ ಕೋಪವೆ ಬಂದುಬಿಡುತ್ತದೆ" ಎಂದು ನಗಾಡಿದರು.
ಒಂದು ಪೋಟೋದ ಎದುರಿಗೆ ಶಾಲಿನಿ ನಿಂತು ಬಿಟ್ಟಳು. ಇದು ಯಾವುದೊ ಪರಿಚಿತ ಮುಖದಂತಿದೆ, ಹೌದು ನೋಡಲು ಚಿತ್ರಾಳ ಮುಖದ ಹಾಗಿದೆ
"ಆಂಟಿ, ಈ ಪೋಟೊ ಯಾರದು ಹೂವಿನ ಹಾರ ಹಾಕಿದೆಯಲ್ಲ" ಶಾಲಿನಿ ಕೇಳಿದಳು.
ಆಕೆಯೊಮ್ಮೆ ಅದರತ್ತ ನೋಡಿ, ಸ್ವಲ್ಪ ತಗ್ಗಿದ ದ್ವನಿಯಲ್ಲಿ "ಅದು ನಮ್ಮ ಚಿತ್ರಾಳ ತಾಯಿಯ ಪೋಟೋ ಶಾಲಿನಿ, ನನಗೆ ವಾರಗಿತ್ತಿಯಾಗಬೇಕು ಸಂಭಂದದಲ್ಲಿ, ಆದರೆ ನಾನು ಈ ಮನೆಗೆ ಬರುವಾಗಲೆ ಅವರು ಬದುಕಿರಲಿಲ್ಲ, ಚಿಕ್ಕವಯಸ್ಸಿನಲ್ಲಿಯೆ ಹೋದರಂತೆ ಅವರು ಸಾಯುವಾಗ, ಚಿತ್ರಾಳಿಗೆ ಆಗ ಒಂದು ವರ್ಷ ಅಷ್ಟೆ ಇರಬಹುದೇನೊ"
ಶಾಲಿನಿಗೆ, ಚಿತ್ರಾಳ ಬಗ್ಗೆ ಅಯ್ಯೋ ಅನ್ನಿಸಿತು, ಪಾಪ ಚಿಕ್ಕವಯಸಿನಲ್ಲಿ ತಾಯಿಯನ್ನು ಕಳೆದುಕೊಂಡವಳು, ಹಾಗೆ ಪೋಟೋ ನೋಡುತ್ತ "ಆಂಟಿ, ಅವರ ಪಕ್ಕ ಇರುವ ಮತ್ತೊಂದು ಹುಡುಗಿ ಯಾರು ಜೊತೆಯಲ್ಲಿ ನಿಂತಿದ್ದಾರಲ್ಲ" ಎಂದಳು."ಹೌದಲ್ವ, ನನಗು ಸರಿಯಾಗಿ ತಿಳಿಯದು, ಇವರೊಮ್ಮೆ ಆ ಮಗು ಆಕೆಯ ತಂಗಿ ಅಂದಂತೆ ನೆನಪು, ಅಕ್ಕ ತಂಗಿಯರ ಫೋಟೊ" ಎಂದರು ಚಿತ್ರಾಳ ಚಿಕ್ಕಮ್ಮ.
ಶಾಲಿನಿ , ಚಿತ್ರಾಳ ಅಮ್ಮನನ್ನು , ಪಕ್ಕದಲ್ಲಿದ ಮತ್ತೊಂದು ಮಗುವನ್ನು ನೋಡುತ್ತ ನಿಂತಂತೆಯೆ ಅವಳ ಮೈಯೆಲ್ಲ ಎಂತದೋ ನಡುಕ ಉಂಟಾಯ್ತು, ಆ ಹುಡುಗಿಯ ಚಿತ್ರ ನೋಡುತ್ತಿರುವಂತೆ ಅವಳ ಹೊಟ್ಟೆಯಲ್ಲಿ ಎಂತದೊ ಹಿಂಸೆ. ಮನದಲ್ಲಿ ಏನೇನೊ ಅರ್ಥವಾಗದ ಭಾವ. ಮುಂದೆ ಯಾವ ಪ್ರಶ್ನೆ ಕೇಳಲಾಗಲಿಲ್ಲ. ಕಾಲುಗಳಲ್ಲಿ ಸೋಲು ಉಂಟಾದಂತೆ ಅನುಭವ. ನಡೆದು ಬಂದು, ಮತ್ತೆ ಕುರ್ಚಿಯಲ್ಲಿ ಕುಳಿತಳು. ಚಿತ್ರಾಳ ಚಿಕ್ಕಮ್ಮ ಕಾಫಿ ಸಿದ್ದಮಾಡುವದರಲ್ಲಿ, ಉಳಿದ ಮೂವರು ಕೆಳಗಿಳಿದು ಬಂದರು.
ಚಿತ್ರಾಳು "ಏನೆ ಶಾಲಿ, ಮತ್ತೆ ನಮ್ಮ ಚಿಕ್ಕಮ್ಮನ ಹತ್ತಿರ ಮಸ್ಕಾ ಹೊಡೆಯುತ್ತಿದ್ದಿ, ಗಸಗಸೆ ಪಾಯಸದ ನೆನಪು ಮತ್ತೆ ಬಂತಾ" ಎನ್ನುತ್ತಿರುವಂತೆ ಎಲ್ಲರು ನಗಲು ಪ್ರಾರಂಬಿಸಿದರು.
ಎಲ್ಲರು ಮತ್ತೆ ಸಿದ್ದವಾಗಿ ಕೆಳಗೆ ಬರುವಾಗ ವ್ಯಾನ್ ಸಹ ನಿಂತಿತ್ತು, ನಾಲ್ವರ ಜೊತೆಗೆ ಚಿತ್ರಾಳ ಚಿಕ್ಕಮ್ಮನ ಇಬ್ಬರು ಮಕ್ಕಳು ಅಭಿ ಅಜಯ್ ಸಹ ಸೇರಿದರು, ಡ್ರೈವರ್ ಬಾಬು ಸಹ ಇವರನ್ನು ಕರೆದೋಯ್ಯಲು ಸಿದ್ದನಿದ್ದ.
ಚಿಕ್ಕಮಗಳೂರೇನು ದೂರವೆ, ಮಾತನಾಡುತ್ತಲೆ ತಲುಪಿದರು, ಅವನು "ಚಿಕ್ಕಮಗಳೂರು-ಬೇಲುರು" ಮುಖರಸ್ತೆಯಲ್ಲಿ ಜೀಪ್ ನಿಲ್ಲಿಸಿ. ನೀವೆಲ್ಲ ಎಷ್ಟು ಬೇಕಾದರು ಸುತ್ತಾಡಿ ಬನ್ನಿ, ಬೇಕಾದರೆ ಮಕ್ಕಳನ್ನು ನಾನು ಜೀಪಿನಲ್ಲಿಯೆ ಇಟ್ಟು ಕೊಂಡಿರುತ್ತೇನೆ ಎಂದ,
ಆದರೆ ಅಭಿ ಮತ್ತು ಅಜಯ್ ಬಾಬು ಜೊತೆ ಇರಲು ಒಪ್ಪದೆ ತಾವು ಸುತ್ತಲು ಬರುವದಾಗಿ ಹಟ ಹಿಡಿದಾಗ, ಅವರನ್ನು ಕರೆದೋಯ್ದರು ಹೊರಗೆ ಸುತ್ತಲು. ಅಲ್ಲಿ ಇರುವ ಬಜಾರ ಎಲ್ಲ ಸುತ್ತಾಡಿ, ಬೇಲೂರು ರಸ್ತೆಯಲ್ಲಿ ಬರುವಾಗ, "ನೋಡೆ, ಇಲ್ಲು ಪಾನಿಪೂರಿ ಅಂಗಡಿ ಇದೆ" ಕೀರ್ತನ ಕೂಗಿದಳು. "ನಿನಗೇನು ಬಂತೆ, ಬೆಳಗಿನಿಂದ ಅಷ್ಟು ತಿಂದಿದ್ದಿ, ಮತ್ತೆ ಪಾನಿಪೂರಿ ಅನ್ನುತ್ತಿ " ಶಾಲಿನಿ ರೇಗಿಸಿದಾಗ, "ಅಯ್ಯೊ ನಾನು ಪಾನಿಪೂರಿ ಅಂಗಡಿ ಇದೆ ಅಂದೆ ಅಷ್ಟೆ , ತಿನ್ನುತ್ತೇನೆ ಎಂದು ಎಲ್ಲಿ ಹೇಳಿದೆ " ಎಂದಳು,
ಆದರೆ ನಾಲ್ವರು ಸೇರಿ ಪಾನಿಪೂರಿ ತಿನ್ನುವುದು ಮಾತ್ರ ಬಿಡಲಿಲ್ಲ. ಮಕ್ಕಳು ಅವರ ಜೊತೆ ಸೇರಿದರು. ಜೀಪಿನ ಹತ್ತಿರ ಹಿಂದೆ ಬಂದಾಗ ಸಂಜೆ ಏಳುವರೆ , ಬಾಬು
"ಏನ್ರಮ್ಮ ಹೋಗ್ತಾ, ಇಲ್ಲಿ ದೊಡ್ಡಮಗಳೂರಿನಲ್ಲಿ ಕೋದಂಡರಾಮ ದೇವಾಲಯ ವಿದೆ ನೋಡಿ ಹೋಗೋಣವೆ" ಎಂದ, ಎಲ್ಲರೂ ಆಗಲಿ ಎಂದು ಒಪ್ಪಿದರು,
"ಕೋದಂಡ ರಾಮನ ದೇವಾಲಯದ ವಿಶೇಷ ಏನು ಗೊತ್ತ, ಅಲ್ಲಿಯ ಪುರೋಹಿತ ಕಣ್ಣನವರು ಕನ್ನಡ ಪ್ರೇಮಿ, ಸಾಮಾನ್ಯವಾಗಿ ಇರುವ ಸಂಸ್ಕೃತ ಮಂತ್ರವನ್ನು ಬಿಟ್ಟು ಅಲ್ಲಿ ಅರ್ಚನೆ, ಮಂಗಳಾರತಿ ಎಲ್ಲವನ್ನು ಅವರೆ ಕನ್ನಡದಲ್ಲಿ ರೂಪಿಸಿರುವ ಮಂತ್ರರೂಪದಲ್ಲಿ ಹೇಳಿ ಪೂಜಿಸುತ್ತಾರೆ" ಎಂದು ಚಿತ್ರಾ ಹೇಳಿದಾಗ ಎಲ್ಲರಿಗೂ ಕುತೂಹಲ.
ಕೋದಂಡರಾಮ ದೇವಾಲಯದ ಬೇಟಿ ಮುಗಿಸಿ, ಮನೆ ತಲುಪಿದಾಗ ಎಲ್ಲರಿಗು ಸುಸ್ತು. ಚಿತ್ರಾ ಚಿಕ್ಕಮ್ಮನ ಬಲವಂತಕ್ಕೆ ಊಟ ಮುಗಿಸಿ ಎಲ್ಲರು, ಮೇಲಿನ ರೂಮು ಸೇರಿದರು. ಅದೇನೊ ಚಿತ್ರಾಳ ತಂದೆಯಾಗಲಿ, ಚಿಕ್ಕಪ್ಪನಾಗಲಿ ಕಾಣಲಿಲ್ಲ.
ಬೆಳಗಿನಿಂದ ದಣಿದ ಅವರಿಗೆ ನಿದ್ರಾ ದೇವಿ ಆವರಿಸಿದರೆ, ಶಾಲಿನಿ ಒಬ್ಬಳಿಗೆ ಮಾತ್ರ ಎಚ್ಚರ , ಹಾಗು ನಿದ್ರೆಯ ಆಟ. ಪೋಟೋದಲ್ಲಿ ನೋಡಿದ್ದ ಚಿತ್ರಾಳ ಅಮ್ಮನ ಮುಖವೆ ಪದೆ ಪದೆ ಎದುರಿಗೆ ಬಂದು ನಿಲ್ಲುತ್ತಿತ್ತು. ಹೊರಗೆ ಯಾರೊ "ಚಂದ್ರಾ….ಚಂದ್ರಾ.." ಎಂದು ಕೂಗಿದಂತೆ ಶಬ್ದ, ಯಾರಿರಬಹುದು ಈ ಚಂದ್ರಾ? ಅವಳಿಗೆ ಚಿಂತೆ ಹಾಗು ಮಂಪರು. ಹಾಗೆ ಹೊರಳಾಡುತ್ತ ಕಡೆಗೆ ನಿದ್ದೆಗೆ ಶರಣಾದಳು
ಮುಳ್ಳಯ್ಯನ ಗಿರಿಯ ತುದಿಯಲ್ಲಿ ನಿಂತ ಗೆಳತಿಯರಿಗೆ ಆಕಾಶದಲ್ಲಿಯೆ ನಿಂತಷ್ಟು ಸಂಭ್ರಮ. ಸುತ್ತಲಿನ ಬೆಟ್ಟಗುಡ್ಡಗಳು, ಕಣಿವೆ ಕಾಡುಗಳ ದೃಶ್ಯ ನಯನಮನೋಹರವೆನಿಸಿತು. ಕರ್ನಾಟಕದ ಅತ್ಯಂತ ಎತ್ತರದ ಶೃಂಗದಲ್ಲಿ ತಾವಿದ್ದೇವೆ ಎನ್ನುವ ಭಾವ ಅವರನ್ನು ತುಂಬಿತು. ಒಂದು ತಾಸು ಅಲ್ಲಿಯೆ ಕಳೆದು ನಂತರ ಕೆಳಗಿಳಿದು ಮತ್ತೆ ಎಲ್ಲರು ಬಾಬಬುಡನ್ ಗಿರಿಯತ್ತ ಪ್ರಯಣ ಬೆಳೆಸಿದರು ಅಲ್ಲಿಯ ಪ್ರಕೃತಿ ನಿರ್ಮಿತ ಗುಹೆ, ಮಣಿಕ್ಯದಾರ ಜಲದಾರೆ ಎಲ್ಲವನ್ನು ನೋಡುತ್ತ ಊಟದ ಸಮಯವಾದುದ್ದೆ ತಿಳಿಯಲಿಲ್ಲ. ಚಿತ್ರಾಳ ಚಿಕ್ಕಮ್ಮ ಮನೆಯಲ್ಲಿಯೆ ಮಾಡಿತಂದಿದ್ದ ಅಹಾರವನ್ನು ಹೊಟ್ಟೆತುಂಬಾ ತಿಂದು ಮತ್ತೆ ವಾಹನ ಹತ್ತಿದಾಗ ಎಲ್ಲರಿಗು ಜೊಂಪು ಕೆಳಗಿನ ಕಲ್ಲತ್ತಿಗಿರಿಗೆ ಬಂದಾಗ ಅಲ್ಲಿನ ತಂಪಿನ ವಾತವರಣ, ಬಂಡೆಯಲ್ಲಿಯೆ ಕೆತ್ತಿದ್ದ ದೇವಾಲಯ ದೇವಾಲದ ಮೇಲೆ ಸುರಿಯುವ ಜಲಪಾತ ಎಲ್ಲವನ್ನು ನೋಡುತ್ತ ಮುಗ್ದರಾದರು. ಚಿತ್ರಾಳ ಚಿಕ್ಕಪ್ಪನ ಜೊತೆ ಸೇರಿ ಜಲಪಾತದ ಪಕ್ಕದ ಬಂಡೆಯನ್ನು ಹತ್ತಿ ಸ್ವಲ್ಪದೂರ ಸಾಗಿ , ಮತ್ತೆ ಕತ್ತಲಾದಿತ್ತೆಂದು ಹಿಂದೆ ಬಂದರು. ಸಂಜೆ ಮನೆ ಸೇರಿದಾಗ ಎಲ್ಲರಿಗು ಆಯಾಸ ಮರುದಿನದ ಕಾರ್ಯಕ್ರಮದ ಯೋಜನೆ.
ಮರುದಿನ ಬೆಳವಾಡಿಯ ನರಸಿಂಹ ದೇವಾಲಯ, ಉದ್ಭವಗಣಪತಿ, ಹಳೆಯಬೀಡು ಬೇಲೂರು ಎಲ್ಲಕಡೆಯು ನಿಂತ ಹೋಯ್ಸಳರ ಶಿಲ್ಪಕಲಾವೈಭವ ನೋಡುತ್ತ ಹೊರಗಿನ ಪ್ರಪಂಚದ ಅರಿವೆ ಇಲ್ಲದಂತಾಯಿತು ಅವರಿಗೆ. ಶಾಲಿನಿಯು ಅಷ್ಟೆ ತನ್ನ ಮನದ ಎಲ್ಲ ಯೋಚನೆಗಳನ್ನು ಬದಿಗೊತ್ತಿ ಎಲ್ಲರೊಂದಿಗೆ ಬೆರೆತು ನಗುತ್ತ ಇದ್ದಾಗ, ಚಿತ್ರಾಳಿಗೆ ಎಂತದೊ ಸಮಾದಾನ ಸದ್ಯ ಮತ್ತೆ ಸರಿಹೋದಳಲ್ಲ ಶಾಲಿನಿ ಎಂದು.
ಬೇಲೂರಿನಿಂದ ಬಂದು ರಾತ್ರಿ ಎಲ್ಲರು ಊಟಕ್ಕೆ ಕುಳಿತಾಗ ಚಿತ್ರಾಳ ಚಿಕ್ಕಪ್ಪ ತಮ್ಮಯ್ಯಪ್ಪ ಹೇಳಿದರು,
"ಎರಡು ದಿನ ಸುತ್ತಾಟವೆ ಆಯಿತು, ಶೃಂಗೇರಿಯ ಪ್ರಯಾಣ ನಾಳೆ ಬೇಡ ಎಲ್ಲರಿಗು ಆಯಾಸವಾಗುತ್ತದೆ. ಬದಲಾಗಿ ನಾಳೆ ಕೋಡುವಳ್ಳಿಯ ತಮ್ಮ ಅಡಿಕೆ ಕಾಫಿತೋಟವನ್ನೆಲ್ಲ ಸುತ್ತಾಡಲಿ. ಬೆಳಗ್ಗೆ ತಿಂಡಿ ತಿಂದು ಹೊರಟರೆ ಆಯ್ತು. ಮದ್ಯಾನ್ಹ ನಾನೆ ಅಲ್ಲಿಗೆ ಊಟವನ್ನು ತರುವೆ ವಾಹನದಲ್ಲಿ. ಸಂಜೆಯವರೆಗು ಸಮಯ ಕಳೆಯಲಿ. ನಾಳಿದ್ದು ಶೃಂಗೇರಿಗೆ ಹೋದರೆ ಸರಿಹೋಗುತ್ತದೆ"
ಎಲ್ಲರು ಅವರ ಅಭಿಪ್ರಾಯ ಒಪ್ಪಿದರು.
ಮತ್ತೆ ಅವರು "ನೋಡಮ್ಮ ಚಿತ್ರಾ, ನಾಡಿದ್ದು ನಾನು ನಿಮ್ಮ ಜೊತೆ ಶೃಂಗೇರಿಗೆ ಬರಲಾಗುವದಿಲ್ಲ, ಹಾಸನದಲ್ಲಿ ನನಗೆ ಒಂದು ಕೋರ್ಟು ಕೆಲಸವಿದೆ, ಬಾಬುನನ್ನು ಕರೆದುಕೊಂಡು ಹೋಗಿ, ಅಲ್ಲದೆ ನಿಮ್ಮಪ್ಪ ಹೊರಗೆ ಹೋಗಿ ತುಂಬಾ ದಿನ ಆಯ್ತು, ಅವರನ್ನು ಜೊತೆಗೆ ಕರೆದುಕೊಂಡುಹೋಗು"
ಚಿತ್ರಾ ಅವರ ಅಪ್ಪ ರಾಮಕೃಷ್ಣರನ್ನು ಕೇಳಿದಳು "ಅಪ್ಪಾ ನೀವು ಬನ್ನಿ ನಮ್ಮ ಜೊತೆ ಶೃಂಗೇರಿಗೆ " ಅದೇನು ಆಶ್ಚರ್ಯವೊ ಅವರು ಒಂದೆ ಸಾರಿಗೆ ಒಪ್ಪಿಬಿಟ್ಟರು. ಚಿತ್ರಾಳಿಗಂತು ಸಂಭ್ರಮ, ಎಂದು ನನ್ನ ಜೊತೆ ಬಾರದ ಅಪ್ಪ , ಜೊತೆಗೆ ಬರಲು ಒಪ್ಪಿದ್ದಾರೆ ಎಂದು.
ಮರುದಿನ ಬೆಳಗ್ಗೆ ಎಲ್ಲರು ಸ್ವಲ್ಪ ನಿದಾನವಾಗಿಯೆ ಎದ್ದರು. ತೋಟದ ಕಾರ್ಯಕ್ರಮ ಎಂದು. ಚಿತ್ರಾಳ ಚಿಕ್ಕಮ್ಮ ಮಲೆನಾಡಿನ ವಿಶೇಷ ಎಂದು ಅಟ್ಟದ ಮೇಲಿದ ಒತ್ತು ಮಣೆ ಕೆಳಗಿಳಿಸಿ ಅಕ್ಕಿ ಶಾವಿಗೆ ಮಾಡಿದ್ದರು. ನಾಲ್ವರು ಅದರಲ್ಲಿ ಶಾವಿಗೆ ಒತ್ತಲು ಪ್ರಯತ್ನಿಸಿದರು. ವಿವಿದ ರುಚಿಗಳಲ್ಲಿ ಶಾವಿಗೆ ತಿಂದು ಎಲ್ಲರು ತೋಟದ ಕಡೆ ಹೊರಡುವಾಗ ಅವಳ ಚಿಕ್ಕಮ್ಮ ಹಾಗು ತಂದೆ ಇಬ್ಬರು ಎಚ್ಚರಿಸಿದರು. "ಚಿತ್ರಾ ತೋಟಕ್ಕೆ ಸುತ್ತಾಡಲು ಹೋಗುತ್ತಿದ್ದೀರ ಹುಷಾರು ಪುಟ್ಟ, ಆದಷ್ಟು ಕೆಂಚನ ಜೊತೆಗೆ ಇರಿ, ತೋಟದ ಬಾವಿಯ ಹತ್ತಿರ ಎಚ್ಚರವಾಗಿರಿ " ಇತ್ಯಾದಿ ಎಚ್ಚರಿಕೆಗಳು , ಚಿತ್ರಾ ಎಲ್ಲಕ್ಕು ತಲೆಯಾಡಿಸಿ ಒಪ್ಪಿಗೆ ಕೊಟ್ಟು ಹೊರಟಳು.
ಸುಮಾರು ಇಪ್ಪತ್ತು ಎಕರೆಗಿಂತ ಅದಿಕ ಅಡಿಕೆ, ಅದಕ್ಕಿಂತ ವಿಶಾಲ ಕಾಫಿತೋಟ, ನಡುವೆ ಮೆಣಸು, ವಿಳೆದಲೆ ಬಳ್ಳಿಗಳು, ಕೆಲವು ಕಡೆ ಹಾಕಿದ್ದ ಏಲಕ್ಕಿ ಅಲ್ಲದೆ ಅದಾಗೆ ಬೆಳೆದಿದ್ದ ಕಾಡು ಹೂಗಳು , ಹಸಿರು, ನೆಲದಲ್ಲೆಲ್ಲ ನೀರಿನ ತಂಪು. ಎಲ್ಲರಿಗೂ ತಾವೆಲ್ಲೊ ಕಾಶ್ಮೀರದಲ್ಲಿ ಇದ್ದಿವೇನೊ ಎನ್ನುವ ಭಾವ .
"ಹೌದ್ರೆ, ನಮ್ಮ ಚಿಕ್ಕಮಗಳೂರನ್ನು ಎಲ್ಲರು ಕರ್ನಾಟಕದ ಕಾಶ್ಮೀರವೆಂದೆ ಕರೆಯುವರು ಗೊತ್ತ" ಅಂದಳು ಹೆಮ್ಮೆಯಿಂದ ಚಿತ್ರಾ.
ಕಾಫಿ ತೋಟದಲ್ಲಿ ಓಡಾಡುವಾಗ ಇವರ ಜೊತೆ ಮನೆಯ ಆಳು ಕೆಂಚ ಇದ್ದ. ಇವನೇನ ಕೆಂಚ ಎಂದು ಎಲ್ಲರು ನೋಡಿದರು. ಆಗಲೆ ನಡು ವಯಸನ್ನು ದಾಟುತ್ತಿದ್ದ ವ್ಯಕ್ತಿ. ಇವರ ಜೊತೆ ನಡೆಯುವಾಗ ಶಾಲಿನಿ ಎದ್ದಕಿದ್ದಂತೆ ಕೆಂಚನನ್ನು ಕೇಳಿದಳು. "ನಿನ್ನ ಜೊತೆ ಒಂದು 'ಕರಿಯ' ಎನ್ನುವ ಕಪ್ಪು ಬಣ್ಣದ ನಾಯಿ ಇತ್ತಲ್ವ, ಈಗ ಅದೆಲ್ಲಿ"
ಚಿತ್ರಾಳ ಹೆಜ್ಜೆ ನಿಂತು ಹೋಯಿತು. ಕೆಂಚನ ಮುಖದಲ್ಲಿ ಎಂತದೋ ಗಾಭರಿ. "ಇಲ್ಲಮ್ಮ ನಾನು ಯಾವ ನಾಯಿಯನ್ನು ಸಾಕಿಲ್ವೆ, ತುಂಬಾ ಹಿಂದೆ ಇತ್ತು ಅದು ಅಷ್ಟೆ, ಈಗ ಯಾವ ನಾಯಿಯು ಇಲ್ಲ "
ಕೆಂಚ ಸ್ವಲ್ಪ ಹೆದರಿದ್ದ, ಕರಿಯ ಎನ್ನುವ ನಾಯಿ ತುಂಬಾ ಹಿಂದೆ ಅಂದರೆ ಸುಮಾರು ಹದಿನೈದು ಇಪ್ಪತ್ತು ವರ್ಷದ ಹಿಂದೆ ತಾನು ಸಾಕಿದ್ದು, ಚಿತ್ರಾಳಗೆ ಸಹ ಅದು ಗೊತ್ತಿಲ್ಲ ಹಾಗಿರಲು ಇದಾವುದೊ ಮಗು ಬಂದು ಕೇಳುತ್ತಿದೆಯಲ್ಲ ಎಂದು. ಚಿತ್ರಾ ತಕ್ಷಣ ಶಾಲಿನಿಯ ಕೈ ಹಿಡಿದು ಬಾರೆ ನಾವು ತೋಟದ ಮನೆ ಹತ್ತಿರ ಹೋಗೋಣ ಎಂದು ವೇಗವಾಗಿ ಹೊರಟಳು, ಅವಳ ಕೈ ಸ್ವಲ್ಪ ನಡುಗುತ್ತಿತ್ತು.
ದೂರದಲ್ಲಿ ತೋಟದ ನಡುವೆ ಮನೆಯೊಂದು ಕಂಡಿತು. ಅಚಲ ಕೇಳಿದಳು "ಅದ್ಯಾವುದೆ ಮನೆ … ತೋಡದ ನಡುವೆ" "ಅಯ್ಯೋ ಅದೆ ನಮ್ಮ ತೋಟದ ಮನೆ , ನಾವು ಕೆಲವೊಮ್ಮೆ ಇಲ್ಲಿ ಬಂದಿರುತ್ತಿದ್ದೆವು, ಈಗ ಖಾಲಿ ಬಿದ್ದಿದ್ದೆ " ಎಂದಳು.
ಮನೆಯನು ದೂರದಲ್ಲಿ ಕಾಣುತ್ತಿರುವಂತೆ, ಶಾಲಿನಿ ಮನಸ್ಸು ಮತ್ತೆ ಕಲ್ಲೋಲ, ಇದೇನು ವಿಚಿತ್ರ, ಈ ಮನೆ ಈ ತೋಟ ಎಲ್ಲ ನೋಡುವಾಗ , ತಾನು ಮೊದಲೆ ಇಲ್ಲಿ ಬಂದಿದ್ದ, ಓಡಿಯಾಡಿದ್ದ ನೆನಪು ಕಾಡುತ್ತಿದೆಯಲ್ಲ ಅದು ಹೇಗೆ ಅವಳಿಗೆ ತಿಳಿಯದಾಯಿತು. ಎಲ್ಲರು ಮನೆಯೊಳಗೆ ಮಾತನಾಡುತ್ತ ಕುಳಿತಿರುವಂತೆ ಅವಳು ಮನೆಯಿಂದ ಹೊರಬಂದು, ಪಕ್ಕದಿಂದ ನಡೆದಳು. ಅಲ್ಲಿ ಮರದ ಕೆಳಗೆ ಒಂದು ದೊಡ್ಡ ಬಂಡೆ ಇದ್ದಿತ್ತು. ಅದರ ಹತ್ತಿರ ಹೋಗಿ ನಿಂತಳು. ಸುತ್ತಲು ನೋಡಿದರೆ ದೂರದಲ್ಲೊಂದು ಕಲ್ಲಿನ ಮಂಟಪ ಕಾಣಿಸಿತು. ಇದೇನು ಎಂದು ಹತ್ತಿರ ಹೋಗುವಾಗಲೆ ಅವಳ ಕಣ್ಣ ಮುಂದೆ ಯಾವುದೊ ಅರ್ಥವಾಗದ ದೃಶ್ಯಗಳು ಮಂಟಪದ ಹತ್ತಿರ ಹೋಗುವಾಗಲೆ ಅವಳ ಕಣ್ಣಿಗೆ ಯಾರೊ ಇಬ್ಬರು ವ್ಯಕ್ತಿಗಳು ಅಸ್ವಷ್ಟವಾಗಿ ಕಾಣುತ್ತಿದ್ದರು, ನೋಡುವಾಗಲೆ , ಒಬ್ಬರು ಮಂಟಪದಿಂದ ಆಸರೆ ತಪ್ಪಿ ಹಿಂದಿದ್ದ ಆಳವಾದ ನೆಲಬಾವಿಗೆ ಬಿದ್ದಂತೆ ಕಾಣಿಸಿತು. ನಂತರ ಯಾರು ಇಲ್ಲ. ಇದೇನು ನನ್ನ ಭ್ರಮೆ ಎನ್ನುತ್ತ ಮಂಟಪದ ಹತ್ತಿರ ಹೋದಳು, ಅಲ್ಲಿ ಹೋಗಿ ಬಗ್ಗಿ ನೋಡುವಾಗ , ಮಂಟಪದ ಹಿಂಬಾಗದಲ್ಲಿ ಆಳವಾದ ಇಳಿಜಾರು ಅಲ್ಲೊಂದು ಬಾವಿ ಕಾಣಿಸಿತು. ಅವಳ ಮನವನ್ನು ಯಾವುದೊ ಭ್ರಮೆ ಆವರಿಸಿತು, ಏನೊ ಆಗುತ್ತಿದೆ ಏನೆಂದು ಅವಳಿಗೆ ಅರಿವಾಗುತ್ತಿಲ್ಲ.
ಯಾರೋ ' ಅಕ್ಕ ಅಕ್ಕ' ಎಂದು ಜೋರಾಗಿ ಕೂಗಿತ್ತಿದ್ದಾರೆ, ಯಾರು , ಕಣ್ಣು ಮುಚ್ಚಿದಳು ಚಿತ್ರಾಳ ದ್ವನಿ ಕೇಳಿತು, ಕಣ್ಣು ಬಿಟ್ಟು ನೋಡಿದರೆ, ತನ್ನ ಸ್ನೇಹಿತೆಯರೆಲ್ಲ ಬಂದು ನಿಂತಿರುವರು, ಅವರ ಹಿಂದೆ ಚಿತ್ರಾಳ ಚಿಕ್ಕಪ್ಪ ಸಹಿತ ಇದ್ದರು "ಇಲ್ಲೇಕೆ ಒಬ್ಬಳ ಬಂದೆ , ಸ್ವಲ್ಪ ಅಪಾಯದ ಜಾಗ ಇದು, ಅತ್ತ ಬಾ ಅಲ್ಲಿ ಮರದ ಕೆಳಗೆ ಬಂಡೆಯ ಮೇಲೆ ಕುಡೋಣ " ಎ೦ದಳು ಚಿತ್ರಾ "ಹೌದಲ್ಲವ , ಇದು ಅಪಾಯದ ಜಾಗ, ನಿಮ್ಮ ಅಮ್ಮ ಇಲ್ಲೆ ಅಲ್ಲವ ಕೊಲೆಯಾಗಿದ್ದು" ಶಾಲಿನಿ ಸ್ವಗತದಂತೆ ನುಡಿದಳು. ಮೂವರು ಗೆಳತಿಯರು ದಂಗಾಗಿ ನಿಂತರು. ಅವರ ಹಿಂದಿದ್ದ ಚಿಕ್ಕಪ್ಪ ಚಕಿತರಾಗಿ ಶಾಲಿನಿಯನ್ನೆ ನೋಡುತ್ತಿದ್ದರು. "ಶಾಲು, ಏನು ಮಾತನಾಡುತ್ತಿದ್ದೀಯಾ? ನಿನಗೆ ಏನಾಗಿದೆ, ನನ್ನ ತಾಯಿ ಏಕೆ ಕೊಲೆಯಾಗುತ್ತಾರೆ, ಹುಷಾರಾಗಿದಿ ತಾನೆ, ಬಿಸಿಲಿಗೆ ನಿನಗೆ ತಲೆ ಸುತ್ತಿರಬಹುದು, ಬಾ ಒಳಗೆ ಹೋಗೋಣ , ಇಲ್ಲಿಬೇಡ ಬಾ " ಎಂದು ಕೈ ಹಿಡಿದು ಮಂಟಪದಿಂದ ದೂರ ಕರೆತಂದಳು, ಮರದ ಕೆಳಗಿದ್ದ ಬಂಡೆಯ ಹತ್ತಿರ ಬಂದು. "ಶಾಲು ನಿನಗೆ ಹಸಿವಾಗಿರಬಹುದು ಬೆಳಗೆ ತಿಂಡಿ ಮಾಡಿದ್ದು, ಆಯಾಸ, ಇಲ್ಲೆ ಕುಳಿತು ಮನೆಯಿಂದ ಚಿಕ್ಕಪ್ಪ ತಂದಿರುವ ಊಟ ಮುಗಿಸಿಬಿಡೋಣವೆ ?" ಎಂದು ಕೇಳಿದಳು.ಶಾಲಿನಿ ಯಾವುದೋ ಭ್ರಮೆಯಲ್ಲಿದ್ದಳು "ಬೇಡ ಇಲ್ಲಿ ಬೇಡ ನನಗೆ ಭಯ ಅನಿಸುತ್ತಿದೆ, ಮನೆಯ ಒಳಗೆ ಹೋಗೋಣ, ಇಲ್ಲಿ ಬೇಡ" ಅನ್ನುತ್ತಲೆ ವೇಗವಾಗಿ ಮನೆಯ ಒಳಗೆ ಹೊರಟಳು.
ಎಲ್ಲ ಗೆಳತಿಯರಿಗು ಆತಂಕ, ಇವಳೇಕೆ ಹೀಗೆ ಆಡುತ್ತಿರುವಳು. ಚಿಕ್ಕಪ್ಪ ಅಂದರು "ಚಿತ್ರಾ, ಹಾಗೆ ಮಾಡಮ್ಮ ಇಲ್ಲಿ ಬೇಡ ಎಲ್ಲರು ಮನೆಯ ಒಳಗೆ ಹೋಗೋಣ, ಅಲ್ಲಿಯೆ ಊಟ ಮುಗಿಸಿ, ಈ ಜಾಗ ನಿನ್ನ ಸ್ನೇಹಿತೆಗೆ ಸರಿ ಹೋಗುತ್ತಿಲ್ಲ, ಇಲ್ಲಿಂದ ಬೇಗ ಹೊರಟುಬಿಡೋಣ" ಎಂದು ಅವಸರಪಡಿಸಿದರು.
ಎಲ್ಲರ ಸಂಭ್ರಮವು ಆತಂಕಕ್ಕೆ ತಿರುಗಿತ್ತು, ಮನೆಯೊಳಗೆ ಹೋಗಿ ಊಟ ಮುಗಿಸಿ, ಸ್ವಲ್ಪ ವಿಶ್ರಾಂತಿ ಪಡೆದು ಅಲ್ಲಿಂದ ಹೊರಟರು. ಚಿತ್ರಾ ಪುನಃ ಶಾಲಿನಿಯನ್ನು ಏನು ಮಾತನಾಡಿಸಲಿಲ್ಲ . ಆದರೆ ಚಿಕ್ಕಪ್ಪನ ಹತ್ತಿರ ಒಬ್ಬಳೆ ಕೇಳಿದಳು "ಚಿಕ್ಕಪ್ಪ , ಅಮ್ಮ ನಿಜವಾಗಿ ಹೇಗೆ ಸತ್ತಿದ್ದು, ನನಗೆ ಗೊತ್ತೆ ಇಲ್ಲ ಅವಳಿಗೆ ಏನು ಆಗಿತ್ತು" ಎಂದಳು, ಚಿತ್ರಾಳ ಚಿಕ್ಕಪ್ಪ ಬೇಸರದಿಂದ "ಈ ಸಮಯದಲ್ಲಿ ಅದೆಲ್ಲ ಏನಮ್ಮ, ಮನುಷ್ಯನಿಗೆ ಆಯಸ್ಸು ಮುಗಿದಾಗ ಸಾವಿಗೆ ಒಂದು ಕಾರಣ ಅಷ್ಟೆ, ಹೀಗೆ ಅನಾರೋಗ್ಯ ಅಂತ ಆಯಿತು, ಪಾಪ ಆಕೆ ಹೋದರು, ಈಗ ಅದೆಲ್ಲ ಯೋಚಿಸಬೇಡ. ನಿನ್ನ ಸ್ನೇಹಿತೆಗೆ ಏನೊ ತೊಂದರೆ ಇದ್ದಂತಿದೆ. ಪರರ ಮನೆಯ ಹೆಣ್ಣು ಮಕ್ಕಳು ನಮಗೆ ಏಕೆ ಜವಾಬ್ದಾರಿ, ನೀನು ಆದಷ್ಟು ಅವಳನ್ನು ಕ್ಷೇಮವಾಗಿ ನೋಡಿಕೋ, ನಾಳೆ ಶೃಂಗೇರಿ ಒಂದು ಮುಗಿಸಿ, ನಂತರ ಊರಿಗೆ ಹೊರಡಲಿ, ಅವಳಿಗೆ ಅದೇಕೊ ಇಲ್ಲಿನ ಹವೆ ಒಗ್ಗುತ್ತಿಲ್ಲ ಅನ್ನಿಸುತ್ತೆ ಪಾಪ" ಎಂದರು. ಅವರ ದ್ವನಿಯಲ್ಲಿ ಯಾವುದೊ ಆತಂಕ , ಚಿಂತೆ.
ಅಲ್ಲಿಂದ ಹೊರಟಂತೆ ಶಾಲಿನಿ ಮನದಲ್ಲಿ ಅಂದುಕೊಂಡಳು, ಇಲ್ಲ ಈ ತೋಟದ ಮನೆಯ ಹತ್ತಿರದ ಮಂಟಪಕ್ಕು ನನ್ನ ಭ್ರಮೆಗು ಏನೊ ಸಂಬಂಧ ಖಂಡೀತ ಇದೆ, ಈ ರಹಸ್ಯ ಹೇಗಾದರು ಸರಿ ತಿಳಿದುಕೊಳ್ಳಬೇಕು. ಎಲ್ಲರು ಇದ್ದರೆ ಆಗದು . ತಾನು ಹೇಗಾದರು ಮಾಡಿ ಒಬ್ಬಳೆ ಇಲ್ಲಿ ಬರಬೇಕು ಎನ್ನುವ ನಿರ್ದಾರ ಮಾಡಿದಳು.
.
ಬೆಳಗ್ಗೆ ಎಲ್ಲರು ಸಿದ್ದವಾದರು ಶೃಂಗೇರಿ ಹೊರನಾಡಿಗೆ ಹೋಗಿ ಬರುವದೆಂದು. ಚಿತ್ರಾಳ ತಂದೆ ರಾಮಕೃಷ್ಣ ಸಹ ಸಿದ್ದವಾಗಿದ್ದರು. ಜೊತೆಯಲ್ಲಿ ಅಭಿ ಹಾಗು ಅಜಯ್ ಸಹ ಸಿದ್ದವಾಗಿದ್ದರು . ಚಿತ್ರಾಳ ಚಿಕ್ಕಮ್ಮ ಎಲ್ಲರಿಗು ತಿಂಡಿ ಮಾಡಿಕೊಟ್ಟು, "ಊಟದ ಹೊತ್ತಿಗೆ ಶೃಂಗೇರಿಯಲ್ಲಿರುತ್ತೀರಿ , ರಾತ್ರಿ ಸಾದ್ಯವಾದಷ್ಟು ಬೇಗ ಬಂದು ಬಿಡಿ" ಎಂದರು. ಎಲ್ಲರು ಹೊರಟರು ಎನ್ನುವಾಗ ಶಾಲಿನಿ ಇದ್ದಕ್ಕಿಂದಂತೆ ತಾನು ಹೊರಡುವದಿಲ್ಲ ಉಳಿದವರು ಹೋಗಿ ಬರಲಿ ಎಂದಳು. ಎಲ್ಲರಿಗು ಆತಂಕ. ಚಿತ್ರಾಳು "ಅದೇಕೆ ಹೀಗೆ ಮಾಡುತ್ತಿದ್ದೀಯಾ, ಬೆಂಗಳೂರಿನಿಂದ ಬಂದಿರುವುದೆ ಎಲ್ಲ ನೋಡಲು ಈಗ ನೋಡಿದರೆ ಹೀಗೆ ಮಾಡ್ತೀಯ ಏಕೆ " ಎಂದಳು.
ಶಾಲಿನಿ ಗುಟ್ಟಿನಲ್ಲಿ ಚಿತ್ರಾಳ ಕಿವಿಯಲ್ಲಿ, "ದೇವಾಸ್ಥಾನಕ್ಕೆ ಹೋಗುತ್ತಿರುವದರಿಂದ ನಾನೀಗ ಬರಲಾಗುವದಿಲ್ಲ, ಮೈಲಿಗೆಯಾಗುತ್ತೆ " ಎಂದು ತಿಳಿಸಿದಳು. ಅಲ್ಲದೆ ತನಗಾಗಿ ಹೊರಟಿರುವ ಕಾರ್ಯಕ್ರಮ ರದ್ದುಮಾಡುವುದು ಬೇಡ, ಒಂದು ದಿನ ತಾನೆ ತಾನು ಮನೆಯಲ್ಲಿ ಚಿಕ್ಕಮ್ಮ ಜೊತೆ ಇರುವೆ, ಅಲ್ಲದೆ ಸ್ವಲ್ಪ ಕಾಫಿ ತೋಟದಲ್ಲಿ ಅಡ್ಡಾಡುವೆ ಯಾರು ಚಿಂತಿಸಬೇಡಿ, ಎಂದು ಎಲ್ಲರನ್ನು ಒಪ್ಪಿಸಿ ಕಳಿಸಿದಳು, ಚಿತ್ರಾ ಸಹಿತ, ತನ್ನ ಅಪ್ಪ ಹೊರಗೆ ಹೊರಡುವುದೆ ಅಪರೂಪ ಈಗ, ಬೇಡ ಎಂದರೆ ಅವರು ಸಹ ಬೇಸರಿಸುವರು ಎಂದು ತನ್ನ ಉಳಿದ ಸ್ನೇಹಿತೆಯರೊಡನೆ ಹೊರಟಳು. ಅವರು ಹೊರಟ ಸ್ವಲ್ಪ ಸಮಯಕ್ಕೆ ಚಿತ್ರಾಳ ಚಿಕ್ಕಪ್ಪ ಸಹಿತ. ತಮ್ಮ ಪತ್ನಿಯನ್ನು ಕುರಿತು "ಹಾಸನದಲ್ಲಿ ಕೋರ್ಟಿನ ವ್ಯವಹಾರವಿದೆ ಹೋಗಿ ಬರುವೆ " ಎಂದು ತಿಳಿಸಿ ತಮ್ಮ ಕಾರಿನಲ್ಲಿ ಹೊರಟುಬಿಟ್ಟರು.
ಶಾಲಿನಿ ಹೊರಡುವದಿಲ್ಲ ಎಂದು ನಿಲ್ಲಲ್ಲು , ಬಲವಾದ ಕಾರಣಾವಿತ್ತು. ಬೆಂಗಳೂರಿನಿಂದ ಹೊರಟು ಚಿಕ್ಕಮಗಳೂರಿನ, ಕೋಡುವಳ್ಳಿಗೆ ಬಂದ ದಿನದಿಂದ ಅವಳ ಮನಸ್ಸು ಯಾವುದೊ ಭ್ರಮೆಯಲ್ಲಿ ಸಿಕ್ಕಿ ಹೋಗಿತ್ತು. ಮನೆಗೆ ಕಾಲಿಟ್ಟ ಕ್ಷಣವೆ ಅದೇನೊ , ಈ ಮನೆ ತನಗೆ ಹೊಸದಲ್ಲ ಮೊದಲೆ ಇಲ್ಲಿ ಓಡಿಯಾಡಿರುವೆ ಎನ್ನುಬ ಭಾವನೆ ಮೂಡಿ ಬಲವಾಗುತ್ತಿತ್ತು. ಮನೆಯ ಪ್ರತಿ ಜಾಗವು ಅವಳಿಗೆ ಪರಿಚಿತ ಅನ್ನಿಸುತ್ತಿತ್ತು. ಅಲ್ಲದೆ ಕೆಲವು ಸಂಗತಿಗಳು ಅವಳನ್ನು ತಲೆ ತಿನ್ನುತ್ತಿದ್ದವು, ಚಿತ್ರಾಳ ತಾಯಿಯ ಫೋಟೋ ಎದುರಿಗೆ ನಿಂತಾಗ ಅವಳ ಹೃದಯ ಮನಗಳನ್ನು ಯಾವುದೋ ಭಾವ ಆವರಿಸುತ್ತಿತ್ತು. ಚಿತ್ರಾಳ ಅಮ್ಮ ಜಾನಕಿ ಅವರ ಪೋಟೊ ಕಾಣುವಾಗ ತನಗು ಅವರಿಗು ಯಾವುದೋ ಸಂಬಂಧ ಇದೆಯೆಂಬ ಭಾವ ಮನಸನ್ನು ತುಂಬುತ್ತಿತ್ತು, ತಾನು ಅವರೊಡನೆ ತುಂಬ ಒಡನಾಡಿದಂತೆ, ವರ್ಷಗಳ ಕಾಲ ಬೆರೆತು ಆಡಿದಂತೆ, ಮಾತನಾಡಿರುವಂತೆ ಪರಿಚಿತರು ಅನ್ನುವ ಭಾವ ಅವಳನ್ನು ದೃತಿಗೆಡಿಸುತ್ತಿತ್ತು. ತನ್ನದೆ ವಯಸಿನ ಚಿತ್ರಾಳು ಒಂದು ವರ್ಷದ ಮಗುವಾಗಿರುವಾಗಲೆ ಸತ್ತಿರುವ ಅವರನ್ನು ತಾನು ಮೊದಲೆ ನೋಡಿರಲು ಹೇಗೆ ಸಾದ್ಯ ಎಂದು ಅವಳಿಗೆ ಅರ್ಥವಾಗುತ್ತಿಲ್ಲ. ತನಗು ಚಿತ್ರಾಳಿಗು ಒಂದು ವರ್ಷದ ಅಂತರವಿದೆ ಅಷ್ಟೆ, ತನಗೆ ಹದಿನೆಂಟು ದಾಟಿ ಹತ್ತೊಂಬತು ಎಂದರೆ ಅವಳಿಗೆ ಹತ್ತೊಂಬತ್ತು ದಾಟಿ ಇಪ್ಪತ್ತು ಅಷ್ಟೆ. ತಾನು ಅವರ ಜೊತೆ ಒಡನಾಡಿರಲು ಸಾದ್ಯವೆ ಇಲ್ಲ ಅನ್ನುವ ಸತ್ಯವನ್ನು ಅವಳ ಮನ ಒಪ್ಪುತ್ತಿಲ್ಲ.
ಚಿತ್ರಾಳನ್ನು ಅತೀವ ಪ್ರೀತಿಯಿಂದ ನೋಡಿಕೊಳ್ಳುತ್ತಿರುವ, ತಮ್ಮೆಲ್ಲರನ್ನು ಆತ್ಮೀಯತೆಯಿಂದ ಮಾತನಾಡಿಸುವ, ಅವರ ಚಿಕ್ಕಪ್ಪನನ್ನು ಕಂಡರೆ ತನಗೆ ಭಯ ಏಕಾಗಬೇಕು ಅವಳಿಗೆ ಅರ್ಥವಾಗುತ್ತಿಲ್ಲ. ಅಲ್ಲದೆ ಅವರ ಮನೆಯಿಂದ ಒಂದು ಮೈಲಿ ದೂರದೊಳಿಗಿರುವ ಆ ತೋಟದ ಮನೆ ಅವಳ ಮನಸನ್ನು ಆಕ್ರಮಿಸಿತ್ತು. ಹಿಂದಿನ ದಿನ ಅಲ್ಲಿಗೆ ಹೋದಾಗ ಅವಳಿಗೆ ತನ್ನತನದ ಅರಿವು ಪೂರ್ತಿ ಹೊರಟುಹೋಗಿತ್ತು. ತಾನ್ಯಾರೊ ಪೂರ್ತಿ ಬೇರೆಯದೆ ಆದ ವ್ಯಕ್ತಿತ್ವ ಅನ್ನಿಸಿ, ಮನವನ್ನೆಲ್ಲ ಆ ಭಾವ ಅಲುಗಾಡಿಸಿ ಅವಳು ಕ್ಷೋಭೆಗೊಂಡಿದ್ದಳು. ಎಲ್ಲೋ ಬೆಂಗಳೂರಿನಲ್ಲಿ ಹುಟ್ಟಿ ಅಲ್ಲಿಯೆ ಬೆಳೆದು, ತನ್ನ ತಂದೆತಾಯಿಯ ಜೊತೆ ಇರುವ ತನಗು , ದೂರದ ಚಿಕ್ಕಮಗಳೂರಿನ ಹತ್ತಿರವಿರುವ ಕೋಡುವಳ್ಳಿಗು ಯಾವ ಸಂಭಂದ.
ಕೋಡುವಳ್ಳಿಯ ಅದ್ಯಾವ ಕರೆ ತನ್ನನ್ನು ಇಷ್ಟು ಕರೆಯುತ್ತಿದೆ?
ತನಗು ಇಲ್ಲಿಗು ಇರುವ ಬಂದನವೇನು ಅನ್ನುವದನ್ನು ಅರಿಯಬೇಕಾದರೆ ತಾನು ಪುನಃ ಆ ತೋಟದ ಮನೆಯ ಹತ್ತಿರ ಹೋಗಲೆ ಬೇಕೆಂದು ನಿರ್ದರಿಸಿದ್ದಳು, ಅವಳ ಮನವನ್ನು ಆ ಬಯಕೆ ಎಷ್ಟು ಬದ್ರವಾಗಿ ಹಿಡಿದಿತ್ತೆಂದರೆ , ಅದಕ್ಕಾಗಿ ತಾನು ತನ್ನ ಸ್ನೇಹಿತೆಯರೊಡನೆ ಶೃಂಗೇರಿಗೆ ಬರಲ್ಲ ಎಂದು ನೆಪಹೇಳಿ ಕಳಿಸಿದ್ದಳು. ತಾನು ಒಂಟಿಯಾಗಿ ಆ ತೋಟದ ಮನೆಯ ಹತ್ತಿರ ಹೋದಲ್ಲಿ ಸತ್ಯ ತಿಳಿಯಬಹುದು, ತನ್ನ ಮನಸಿನ ಹೋರಾಟವೆಲ್ಲ ನಿಲ್ಲಬಹುದು ಎನ್ನುವ ಭಾವ ಅವಳನ್ನು ಸ್ನೇಹಿತೆಯರ ಸಂಗ ತಪ್ಪಿಸುವಂತೆ ಪ್ರೇರೇಪಿಸಿತ್ತು.
ಚಿತ್ರಾಳ ಚಿಕ್ಕಪ್ಪ ತಮಗೆ ಹಾಸನದಲ್ಲಿ ಕೋರ್ಟಿನ ಕೆಲಸವಿದೆ ಎಂದು ಹೊರಟು ಹೋದಂತೆ, ಶಾಲಿನಿ, ಮನೆಯಲ್ಲಿದ್ದ ಚಿತ್ರಾಳ ಚಿಕ್ಕಮ್ಮನಿಗೆ , ಮನೆಯಲ್ಲಿ ಒಬ್ಬಳೆ ಇರುವುದು ಬೇಸರ, ಸುಮ್ಮನೆ ಹೊರಗೆ ಹಳ್ಳಿಯಲ್ಲಿ ಕಾಲಾಡಿಸಿ ಬರುವೆನೆಂದು ತಿಳಿಸಿದಳು, ಆಕೆ ಸ್ವಲ್ಪ ಅನುಮಾನದಿಂದಲೆ "ಎಚ್ಚರವಮ್ಮ ಹಳ್ಳಿ ಬಿಟ್ಟು ತೋಟದ ಕಡೆಗೆ ಹೋಗಬೇಡ, ಕಾಫಿ ತೋಟಗಳಲ್ಲಿ ಒಬ್ಬರೆ ಓಡಾಡುವುದು ಅಷ್ಟೊಂದು ಕ್ಷೇಮವಲ್ಲ, ನನಗೆ ಕೆಲಸವಿದೆ ಇಲ್ಲದಿದ್ದರೆ ನಾನೆ ನಿನ್ನಜೊತೆ ಬರುತ್ತಿದ್ದೆ " ಎಂದರು.
ಒಬ್ಬಳೆ ಹೊರಟ ಶಾಲಿನಿ, ನಡೆಯುತ್ತ ಹಳ್ಳಿಯಿಂದ ಕಾಲುದಾರಿ ಹಿಡಿದ ನೇರ ತೋಟದ ಮನೆಯತ್ತ ಅವಳಿಗೆ ಯಾರು ಎದುರಿಗು ಬರಲಿಲ್ಲ, ಅವಳು ಅತ್ತ ನಡೆಯುವದನ್ನು ಯಾರು ಗಮನಿಸುವ ಅವಕಾಶವು ಇರಲಿಲ್ಲ. ಆಗಲೆ ಸುಮಾರು ಹತ್ತು ಗಂಟೆ, ತೋಟದ ಮನೆಯ ಹತ್ತಿರ ತಲುಪಿದಳು. ಹೊರಗಿನಿಂದ ಬೀಗ ಹಾಕಿತ್ತು. ಹೊರಗೆ ಒಂದು ಸುತ್ತು ಹಾಕಿ, ಮರದ ಕೆಳಗಿದ್ದ ಕಲ್ಲುಬಂಡೆಯ ಮೇಲೆ ಕುಳಿತಳು.
ಇದ್ಯಾವ ಅನುಬಂಧ ನನಗು ಈ ಜಾಗಕ್ಕು ಏನು ನಂಟಿರಬಹುದು. ಬಂಡೆಯ ಮೇಲೆ ಕುಳಿತು, ಕಣ್ಣಳತೆಯ ದೂರದಲ್ಲಿದ್ದ , ಕಲ್ಲಿನ ಮಂಟಪದ ಆಕಾರವನ್ನು ಗಮನಿಸಿದಳು, ಆ ಮಂಟಪದಲ್ಲಿಂದ ಬಗ್ಗಿ ನೋಡಿದರೆ ಸಾಕು, ಕೆಳಗೆ ಅರವತ್ತು ಎಪ್ಪತ್ತು ಅಡಿಗಳ ಕೆಳಗೆ ನೀರಿನ ಬಾವಿ ಕಾಣುತ್ತದೆ, ಈಗಲಾದರೆ ಅದು ಹೂಳು ಕೆಸರಿನಿಂದ ತುಂಬಿದೆ. ಆ ಮಂಟಪವನ್ನು ನೋಡುವಾಗಲೆ, ಅವಳ ಮನಸಿನ ಮೇಲೆ ಯಾವುದೋ ಹಳೆಯ ದೃಶ್ಯವೊಂದು ಕಾಣುತ್ತಿತ್ತು,
.
ಆಕೆ ಯಾರೊ ಕಲ್ಲಿನ ಮಂಟಪದಲ್ಲಿ ನಿಂತು, ಗಂಡಸಿನ ಜೋತೆ ಹೋರಾಡುತ್ತಿದ್ದಾಳೆ, ಅವಳು ಬಿಡಲಿಲ್ಲ ಸೀದ ಕುತ್ತಿಗೆಗೆ ಕೈ ಹಾಕಿದ ಅವಳು ಅವನನ್ನು ದೂರನೂಕುವ ಪ್ರಯತ್ನದಲ್ಲಿದ್ದಾಳೆ, ಅವಳು ಕೂಗುತ್ತಿರುವ ಶಬ್ದ ಕೇಳುತ್ತಿದೆ, ಇದ್ದಕ್ಕಿದಂತೆ ಅವನು ಅವಳತ್ತ ದೊಡ್ಡ ಮರದ ತುಂಡಿನಿಂದ ಬೀಸಿದ, ಅವಳ ತಲೆ ಕಲ್ಲಿಗೆ ಅಪ್ಪಳಿಸಿತು, ಕಣ್ಣುಗಳಲ್ಲಿ ಭಯ, ಹೌದು ಕಾಣುತ್ತಿದೆ, ತನ್ನದು ಭ್ರಮೆಯಲ್ಲ, ಅವಳು ಚಿತ್ರಾಳ ತಾಯಿ, ಜಾನಕಿ, ಜೋಲಿಹೊಡೆದಂತೆ ಒಮ್ಮೆಲೆ ಹಿಂದೆ ಬಿದ್ದುಹೋದಳು. ಅವಳ ಕೂಗು, ಕಾಫಿತೋಟದ ಸುತ್ತ ಮುತ್ತಲಿನ ಗುಡ್ಡಗಳಲ್ಲಿ ಕರಗಿ ಹೋಯಿತು. "ಅಕ್ಕಾ,,,,," ಶಾಲಿನಿಗೆ ಅರಿವಿಲ್ಲದೆ ದ್ವನಿ ಗಂಟಲಿನಿಂದ ಹೊರಟಿತು, ಅವಳು ಬೆವರುತ್ತಿದ್ದಳು, ಜಾನಕಿ ಕೆಳಗೆ ಬಿದ್ದ ಜಾಗವನ್ನೆ ಒಂದು ಕ್ಷಣ ನೋಡುತ್ತಿದ್ದ ಆತ ಹಿಂದೆ ತಿರುಗಿದ, ಈಗವನು ಶಾಲಿನಿ ಕಡೆಗೆ ನೋಡುತ್ತಿದ್ದ, ನಿದಾನವಾಗಿ ಅವಳ ಕಡೆಗೆ ಬರುತ್ತಿದ್ದ,
"ಅಕ್ಕಾ, ಅಕ್ಕಾ….." ಕಿರುಚುತ್ತ , ಕಣ್ಣು ಮುಚ್ಚಿಕೊಂಡಳು, ಶಾಲಿನಿ.
.
.
ಒಂದೆರಡು ಕ್ಷಣ ಕಳೆಯಿತು ಎಲ್ಲ ಮೌನ. ನಿದಾನವಾಗಿ ಕಣ್ಣು ಬಿಟ್ಟಳು. ಏನಾಗಿದೆ ತನಗೆ. ಇದೇಕೆ ಹೀಗೆ, ಜಾನಕಿ ಚಿತ್ರಾಳ ಅಮ್ಮ, ಅವಳನ್ನು ಅವಳ ಚಿಕ್ಕಪ್ಪ ಕೊಂದಂತೆ ಏಕೆ ತನಗೆ ಬಾಸವಾಗುತ್ತಿದೆ, ತನಗು ಇಲ್ಲಿಗು ಏನು ಸಂಬಂಧ, ತಾನು ಯಾರು…. ತಾನು ಯಾರು….. ಅವಳ ಮನಸನ್ನು ತುಂಬಿ ಹೋಯಿತು…..
ಹೌದು … ಜಾನಕಿ ತನ್ನ ಅಕ್ಕ….. ತನ್ನ ಅಕ್ಕ…. ತಾನು ಯಾರು ಜಾನಕಿಯ ತಂಗಿ ತಾನು …ಹೌದು… ತಾನು ಚಂದ್ರಕಲ ! ಹೌದು ತಾನು ಚಂದ್ರ, ಚಂದ್ರಕಲ !
ಹಾಗಾದರೆ ಶಾಲಿನಿ ಸಹ ನಾನೆ ಅಲ್ಲವೆ ? ಹೌದು …. ತಾನು ಹಿಂದೆ ಚಂದ್ರ ಆಗಿದ್ದವಳು ,,,, ಈಗ ಶಾಲಿನಿ,,, ಅಂದರೆ ತನ್ನ ಹಿಂದಿನ ಜನ್ಮದ ನೆನಪೆ ತನ್ನನ್ನು ಕಾಡುತ್ತಿರುವುದು… ಅಥವ ತನ್ನದು ಭ್ರಮೆಯೊ ? …. ಇಲ್ಲ ಅದು ಸಾದ್ಯವಿಲ್ಲ….. ಹಾಗಿದ್ದಲ್ಲಿ ತನಗೆ ಎರಡು ವ್ಯಕ್ತಿತ್ವಗಳು ಹೇಗೆ ನೆನಪಿರಳು ಸಾದ್ಯ….. ಪುನರ್ಜನ್ಮ …. ಹೌದು ಚಂದ್ರ ಆಗಿದ್ದ ತಾನು ಶಾಲಿನಿ ಆಗಿ ಜನ್ಮ ತಾಳಿದ್ದೇನೆ ಅದೆ ಸತ್ಯ.
ಕಣ್ಣು ಮುಚ್ಚಿ ಬಂಡೆಗೆ ಒರಗಿದ್ದ ಅವಳಿಗೆ ತನ್ನೆದುರು ಯಾರೊ ನಿಂತಂತ ಬಾಸವಾಯಿತು. ನಿದಾನವಾಗಿ ಕಣ್ತೆರದಳು…. ಚಿತ್ರಾಳ ಚಿಕ್ಕಪ್ಪ … ಹೌದು ಕೊಲೆಗಡುಕ… ಚಿತ್ರಾಳ ತಾಯಿಯನ್ನು ಕೊಂದವನು..
"ಕೊಲೆಗಾರ…. ನೀನು ಕೊಲೆಗಾರ…. ಅಕ್ಕನನ್ನು ಕೊಂದುಬಿಟ್ಟೆ… ಚಿತ್ರಾಳ ಅಮ್ಮನನ್ನು ಕೊಂದುಬಿಟ್ಟೆ…. ನಿಜತಾನೆ…. ನೀನು ಕೊಲೆಗಾರ ನಿಜ ತಾನೆ"
ಶಾಲಿನಿಯ ಮಾತುಗಳಿಗೆ, ಆಶ್ಚರ್ಯ, ಹಾಗು ಎಂತದೊ ಭಯ ತುಂಬಿ ನಿಂತಿದ್ದ ಚಿತ್ರಾಳ ಚಿಕ್ಕಪ್ಪ ತಮ್ಮಯ್ಯಪ್ಪ. ಅವನು ಭಯದಿಂದ ಕೇಳಿದ
"ನೀನು ಯಾರು… ಇದೆಲ್ಲ ಏಕೆ ಹೇಳುತ್ತಿದ್ದಿ . ನಿನಗು ಕೋಡುವಳ್ಳಿಯ ಈ ತೋಟಕ್ಕು ಯಾವ ನಂಟು?" ಅವನ ದ್ವನಿ ಕೋಪದಲ್ಲಿತ್ತು.
ಶಾಲಿನಿ ಈಗ ಕೋಪದಿಂದ ನಡುಗುತ್ತಿದ್ದಳು "ನಾನು ಅದೆ ಚಂದ್ರ , ನೀನು ನನ್ನ ಅಕ್ಕನನ್ನು ಕೊಂದೆಯಲ್ಲ ಅದನ್ನು ನೋಡಿದೆ ಎಂದು ನನ್ನನ್ನು ಕೊಲ್ಲ ಬಂದೆಯಲ್ಲ ಅದೆ ಚಂದ್ರ"
ಒಂದು ಕ್ಷಣ ಅಚ್ಚರಿಯಿಂದ ನಿಂತಿದ್ದ ಚಿತ್ರಾಳ ಚಿಕ್ಕಪ್ಪ ನುಡಿದರು "ನೋಡು ಶಾಲಿನಿ, ನೀನು ಬೆಳಗ್ಗೆ ಎಲ್ಲರ ಜೊತೆ ಹೊರಡಲಿಲ್ಲ. ನೀನು ಏಕೊ ಸಹಜವಾಗಿಲ್ಲ ಅನ್ನಿಸಿತು. ನಾನು ಹಾಸನಕ್ಕೆ ಎಂದು ಹೊರಟಿದ್ದೆ, ನೀನು ತೋಟದ ಕಡೆ ನಡೆದು ಬರುವದನ್ನು ಕಾರಿನಿಂದಲೆ ನೋಡಿದೆ. ಏಕೊ ಆತಂಕವೆನಿಸಿತ್ತು. ಎದ್ದೇಳು ಒಬ್ಬಳೆ ಹೀಗೆ ಇಲ್ಲೆಲ್ಲ ಬಂದು ಕುಳಿತುಕೊಳ್ಳುವುದು ಅಪಾಯ. ನೀನು ಏನೇನೊ ಕಲ್ಪಿಸಿಕೊಂಡು ಇಲ್ಲಿಗೆ ಬಂದಿದ್ದಿಯ ಅನ್ನಿಸುತ್ತೆ. ಏಳಮ್ಮ, ಬಾ ನಿನ್ನನ್ನು ಮನೆಗೆ ಬಿಟ್ಟು ನಾನು ಹಾಸನಕ್ಕೆ ಹೋಗುವೆ ಬಾ" ಎಂದು ಪ್ರೀತಿಯ ದ್ವನಿಯಲ್ಲಿ ಕರೆದರು. ಶಾಲಿನಿ ಚಿತ್ರಾಳ ಚಿಕ್ಕಪ್ಪ ತಮ್ಮಯಪ್ಪನನ್ನು ಕ್ರೂರವಾಗಿ ನೋಡಿದಳು, "ಇದೆಲ್ಲ ನಾಟಕ ಬೇಡ, ನಿಜ ಹೇಳು, ನೀನೆ ತಾನೆ ಜಾನಕಿ ಅಕ್ಕನನ್ನ ಕೊಂದಿದ್ದು, ನನಗೆ ಎಲ್ಲವು ತಿಳಿಯುತ್ತಿದೆ"
ಆತ ಅವಳ ಪಕ್ಕ ನಿದಾನಕ್ಕೆ ಕುಳಿತರು. "ನೋಡು ಶಾಲಿನಿ, ನಿನಗೆ ಇವತ್ತೆಲ್ಲ ಇಪ್ಪತ್ತು ವರುಷವಿರಬಹುದು, ನೀನು ಎಂದೊ ಸತ್ತಿರುವ ನನ್ನ ಅತ್ತಿಗೆಯ ಸಾವನ್ನು ಕೊಲೆ ಎಂದು ಈಗ ಹೇಳಿ ಎಲ್ಲರಲ್ಲು ಗಲಿಬಿಲಿ ಹುಟ್ಟಿಸಬೇಡ, ಅಷ್ಟಕ್ಕು ನಾನು ಅವರನ್ನು ಏಕೆ ಕೊಲ್ಲಲ್ಲಿ. ನೀನು ಅದನ್ನೆಲ್ಲ ನೋಡಿರುವೆ ಅನ್ನುವದೆಲ್ಲ ಹಾಸ್ಯಾಸ್ಪದವಲ್ಲವೆ. ನೀನೆ ಯೋಚಿಸಿ ನೋಡು, ನೀನು ಇದೆ ಮೊದಲ ಬಾರಿ ಕೋಡುವಳ್ಳಿಗೆ ಬರುತ್ತಿರುವುದು, ನೀನು ಇದನ್ನೆಲ್ಲ ಹೇಳಿದರೆ ಯಾರು ನಂಬುವರು"
ಶಾಲಿನಿ, ಕಣ್ಣು ಮುಚ್ಚಿದಳು, ಎರಡು ಕೈಲಿ ತಲೆಯನ್ನು ಅದುಮಿಕೊಂಡಳು, ಎಂತದೋ ಹಿಂಸೆ ಅವಳಿಗೆ.
"ಇಲ್ಲ ಇದೆಲ್ಲ ಹೇಗೆ ಸಾದ್ಯ, ನನಗೆ ಎಲ್ಲ ನಿಚ್ಚಳವಾಗಿ ಕಾಣುತ್ತಿದೆ, ನಾನು ಏನು ಮಾಡಲಿ ಆದರೆ ಇದೆಲ್ಲ ಸತ್ಯ, ನಾನು ಚಂದ್ರಕಲ ಅನ್ನುವುದು ಸತ್ಯ, ನನಗೆ ಆ ದಿನವೆಲ್ಲ ನೆನಪಿಗೆ ಬರುತ್ತಿದೆ. ಆಗಲು ನನ್ನನ್ನು ಹೀಗೆ ನೀವು ಬೇಲುರು ಹಳೆಯಬೀಡು ಎಂದು ಸುತ್ತಿಸಿದ್ದಿರಿ, ಅಕ್ಕ , ಭಾವ ಎಲ್ಲ ಜೊತೆಯಲ್ಲಿದ್ದರು. ನಿಮ್ಮನ್ನು ಭಾವ ಎಂದು ಕರೆಯುತ್ತಿದ್ದೆ, ಹೌದು ಭಾವ. ನೀವಾಗ ಉದ್ದ ಕೂದಲು ಬಿಡುತ್ತಿದ್ದೀರಿ, ನಾನು ನಿಮ್ಮ ಜೊತೆ ಬ್ಯಾಟ್ ಮಿಟನ್ ಆಡಿದ್ದೆ, ನನಗೆ ಎಲ್ಲ ನೆನಪಿಗೆ ಬರುತ್ತಿದೆ. ಕೆಂಚನ ಹತ್ತಿರ ಕರಿಯ ಎನ್ನುವ ಕಪ್ಪು ನಾಯಿ ಇತ್ತು, ಆದರೆ ಇದೆಲ್ಲ ಸಾದ್ಯವ? ಇಷ್ಟು ವರ್ಷಗಳಾದ ನಂತರ ಹೇಗೆ ನೆನಪು ಮರಳಿತು. ಈ ಜಾಗಕ್ಕೆ ಬಂದ ಕಾರಣ ಗೊತ್ತಿಲ್ಲ. ಹೇಳಿ ನೀವು ನನ್ನ ಅಕ್ಕನನ್ನು ಏಕೆ ಕೊಂದಿರಿ, ನಾನು ಕಣ್ಣಾರೆ ನೋಡಿರುವೆ, ಆಮೇಲೆ ನನಗೇನಾಯಿತು"
ತಮ್ಮಯ್ಯಪ್ಪ ಸುಮ್ಮನೆ ಕುಳಿತರು.
"ಹೇಳಿ ಎಲ್ಲ ಹೇಳಿ ನನಗೆ ಬೇಕು, ನಾನು ಎಲ್ಲರ ಹತ್ತಿರ ಹೇಳುವೆ ನೀವೆ ಜಾನಕಿಯ ಕೊಲೆ ಮಾಡಿರುವಿರಿ ಎಂದು, ಚಿತ್ರಾಗು ಹೇಳುವೆ" ದ್ವನಿ ಎತ್ತಿ ಕೂಗುತ್ತಿದ್ದಳು ಶಾಲಿನಿ.
ಚಿತ್ರಾಳ ಚಿಕ್ಕಪ್ಪ ತಮ್ಮಯ್ಯಪ್ಪನವರ ಮುಖ ಗಂಭೀರವಾಗುತ್ತಿತ್ತು, ಅಲ್ಲಿ ಎಂತದೋ ನಿರ್ದಾರ ಮೂಡುತ್ತಿತ್ತು.
"ಹೌದು ಶಾಲಿನಿ, ನಿಜ, ಜಾನಕಿಯನ್ನು ನಾನು ಕೊಂದಿದ್ದು ನಿಜ, ಆದರೆ ಅದು ಉದ್ದೇಶ ಪೂರ್ವಕವಾಗಿರಲಿಲ್ಲ. ಜಾನಕಿ ನನಗೆ ಕಾಲೇಜಿನ ಸಹಪಾಠಿ ಎಂಬ ವಿಷಯ ಯಾರಿಗು ತಿಳಿಯದು. ಅದೆಲ್ಲ ಹೇಗೊ ಆಯಿತು ನನಗೆ ತಿಳಿಯುತ್ತಿಲ್ಲ. ನಾನು ಜಾನಕಿ ಒಂದೆ ಕಾಲೇಜಿನಲ್ಲಿ ಒಟ್ಟಿಗೆ ಓದಿದವರು, , ನನಗೆ ಅವಳನ್ನು ಕಂಡರೆ ಮನಸಿನಲ್ಲೆ ತುಂಬು ಪ್ರೀತಿ, ಆದರೆ ಓದುವ ದಿನಗಳಲ್ಲಿ ಅದನ್ನು ಅವಳ ಎದುರಿಗೆ ಹೇಳುವ ದೈರ್ಯ ಎಂದಿಗು ಬರಲಿಲ್ಲ. ನಮ್ಮ ಕಾಲೇಜಿನ ಕಡೆಯ ವರ್ಷದ ಪರೀಕ್ಷೆಗಳೆಲ್ಲ ಮುಗಿದು , ಒಬ್ಬರೊನ್ನೊಬ್ಬರು ಅಗಲುವ ದಿನ, ನಾನು ಇನ್ನು ಹೇಳದಿದ್ದರೆ ಅವಳು ಮತ್ತೆ ಸಿಗುವದಿಲ್ಲ ಅನ್ನುವ ದೈರ್ಯ ಮಾಡಿ ನನ್ನ ಪ್ರೀತಿ ತಿಳಿಸಿದೆ. ಅವಳನ್ನೆ ಮದುವೆ ಆಗುವನೆಂದು ತಿಳಿಸಿದೆ. ಆದರೆ ಅವಳು ಕೋಪಮಾಡಿಕೊಂಡಳು, ತನಗೆ ಎಂದು ಆ ಭಾವ ಇರಲಿಲ್ಲವೆಂದು, ತನಗೆ ಪ್ರೀತಿ ಇಂತದರಲ್ಲೆಲ್ಲ ನಂಭಿಕೆ ಇಲ್ಲ, ಏನಿದ್ದರು, ತಂದೆ ತಾಯಿ ನೋಡಿದ ಹುಡುಗನನ್ನೆ ಮದುವೆ ಆಗುವದಾಗಿ ತಿಳಿಸಿದ ಅವಳು, ತನಗೆ ಆಗಲೆ ಅಪ್ಪ ಹುಡುಗನನ್ನು ನೋಡುತ್ತಿರುವದಾಗಿ ತಿಳಿಸಿ ನನ್ನ ಎಲ್ಲ ಆಸೆಗಳಿಗು ತಣ್ಣೀರು ಎರಚಿದಳು. ನಾನು ಎಷ್ಟೋ ಬೇಡಿಕೊಂಡರು ಕರಗದೆ ನನ್ನ ಪ್ರೀತಿಯನ್ನು ನಿರಾಕರಿಸಿಬಿಟ್ಟಳು.
ಅವಳ ಮನಸನ್ನು ಅರಿಯದೆ ಒಳಗೊಳಗೆ ಪ್ರೀತಿಸಿ ನಾನು ತಪ್ಪು ಮಾಡಿದ್ದೆ. ಆ ಅಘಾತದಿಂದ ಚೇತರಿಸಿಕೊಳ್ಲಲು ಕಷ್ಟವೆನಿಸಿತು, ಆ ಸಮಯದಲ್ಲಿ ಸೌತ್ ಇಂಡಿಯಾ ಟೂರ್ಗೆ ನನ್ನ ಗೆಳೆಯರೆಲ್ಲ ಹೊರಟಾಗ ನಾನು ಅವರ ಜೊತೆ ಹೊರಟುಬಿಟ್ಟೆ, ಅಲ್ಲಿಂದ ಬರುವಾಗ ನನ್ನ ಅಣ್ಣನ ಮದುವೆ ಗೊತ್ತಾಗಿತ್ತು. ಮದುವೆ ಮನೆಯಲ್ಲಿ ನನಗೆ ಆಶ್ಚರ್ಯ ಕಾದಿತ್ತು, ನಾನು ಪ್ರೀತಿಸಿ ನನ್ನನ್ನು ನಿರಾಕರಿಸಿದ ಹುಡುಗಿ ಜಾನಕಿಯೆ ನನ್ನ ಅಣ್ಣನಿಗೆ ಪತ್ನಿಯಾಗಿ ಬರುತ್ತಿದ್ದಳು. ಅದು ನನಗೆ ಹೇಗೆ ಅನಿರೀಕ್ಷಿತವೊ ಅಷ್ಟೆ ಅವಳಿಗು ಅನಿರೀಕ್ಷಿತ, ಅವಳಿಗು ತಿಳಿದಿರಲಿಲ್ಲ, ನಾನೆ ಅವಳ ಮೈದುನನಾಗುವನೆಂದು"
ಆತ ಕತೆ ನಿಲ್ಲಿದರು, ಶಾಲಿನಿ ಕುತೂಹಲದಿಂದ ಅವರನ್ನೆ ನೋಡುತ್ತಿದ್ದಳು
"ಅಣ್ಣನ ಮದುವೆಯ ನಂತರ ನನ್ನೊಳಗಿನ ರಾಕ್ಷಸ ಕೆರಳಿದ್ದ, ನನ್ನನ್ನು ತಿರಸ್ಕರಿಸಿ ಅವಳು ನನಗೆ ಅವಮಾನ ಮಾಡಿದಳೆಂದೆ ನನ್ನಮನಸ್ಸು ಭಾವಿಸಿತ್ತು, ಹಾಗಾಗಿ ಅವಳಿಗೆ ಒಳಗೊಳಿಗೆ ಕಿರುಕುಳ ಕೊಡುತ್ತಿದ್ದೆ. ಅವಳಾದರು ಅದೇನು ಕಾರಣವೊ ಯಾರಿಗು ನಾನು ಅವಳ ಸಹಪಾಠಿ ಎಂದು ತಿಳಿಸಿರಲೆ ಇಲ್ಲ, ನಾನು ಅದೇ ಕಾರಣದಿಂದ ಅವಳನ್ನು ಗೋಳಾಡಿಸಿದೆ. ಒಬ್ಬಳೆ ಸಿಕ್ಕಾಗಲೆಲ್ಲ ಅಸಬ್ಯವಾಗಿ ವರ್ತಿಸಿದ್ದೆ. ನನಗು ಒಮ್ಮೊಮ್ಮೆ ನಾನು ಮಾಡುತ್ತಿರುವುದು ತಪ್ಪೆಂದು ಅನ್ನಿಸಿತ್ತಿತ್ತು. ಹಾಗೆ ಎರಡು ವರ್ಷ ಕಳೆಯಿತೇನೊ ಅವಳಿಗು ನನ್ನ ಬಗ್ಗೆ ರೋಸಿ ಹೋಗಿತ್ತು ಅನ್ನಿಸುತ್ತೆ. ಆ ವೇಳೆಗೆ ಅವಳಿಗೆ ಒಂದು ಮಗುವು ಆಗಿತ್ತು. ಬಾಣಂತನಕ್ಕೆ ಅಮ್ಮನ ಮನೆಗೆ ಹೋದವಳು ಹಿಂದೆ ಬರುವಾಗ ಅವಳ ತಂಗಿ ಚಂದ್ರಕಲಾಳನ್ನು ಕರೆತಂದಿದ್ದಳು ಸದಾ ತನ್ನ ಜೊತೆಗೆ ಇರಲು. ಅವಳಿನ್ನು ಎಂಟು ವರ್ಷದ ಮಗು. ನಾನು ಒಮ್ಮೆ ಸಮಯನೋಡಿ ಜಾನಕಿಗೆ ತಿಳಿಸಿದೆ , ಮದ್ಯಾನ್ಹ ತೋಟದ ಬಾವಿಯ ಹತ್ತಿರ ಬಾ ಎಂದು .ಅವಳನ್ನು ಕರೆದ ಉದ್ದೇಶ ಬೇರೆ ಇದ್ದಿತು, ನನ್ನ ಮನಸನ್ನು ತಿಳಿಸಿ ಅವಳ ಬಳಿ ತಪ್ಪು ಒಪ್ಪಿ ಕ್ಷಮೆ ಕೇಳಿ ಮುಂದೆ ಎಂದು ತೊಂದರೆ ಕೊಡುವದಿಲ್ಲ ಎಂದು ಹೇಳುವ ಎಂದು ಕರೆದಿದ್ದೆ. ಅವಳು ನನ್ನ ಅತ್ತಿಗೆ, ಅಲ್ಲದೆ ನನ್ನ ಅಣ್ಣನ ಮಗುವಿಗೆ ತಾಯಿಯಾಗಿರುವಳು ಎಂಬ ಭಾವ ನನ್ನಲ್ಲಿ ತುಂಬಿತ್ತು.
ಅದಕ್ಕಿಂತ ಹೆಚ್ಚಿಗೆ ನನ್ನಗು ಆಗಲೆ ಹುಡುಗಿ ನೋಡಿದ್ದರು, ಹಾಗಿರುವಾಗ ಜಾನಕಿಯ ಮೇಲೆ ನಾನು ಇನ್ನು ಹಗೆ ಸಾದಿಸಿದರೆ ನನ್ನ ಅವಳ ಇಬ್ಬರ ಜೀವನವು ನರಕವಾಗುವುದು ಎನ್ನುವ ಅರಿವು ಮೂಡಿತ್ತು, ಜೊತೆಗೆ ಸ್ವಲ್ಪ ಪಶ್ಚತಾಪವು ಮೂಡಿತ್ತು, ಹಾಗಾಗಿ ಅದನ್ನು ತಿಳಿಸಲೆಂದು ಜಾನಕಿಯನ್ನು ಕರೆದಿದ್ದೆ,
ಆದರೆ ಅವಳು ಬೇರೆಯದೆ ಅರ್ಥಮಾಡಿಕೊಂಡಿದ್ದಳು, ಬರುವಾಗ ಮನೆಯಲ್ಲಿದ್ದ ಪಿಸ್ತೂಲ್ ತಂದಿದ್ದಳು."
ಶಾಲಿನಿ ಚಿತ್ರಾಳ ಚಿಕ್ಕಪ್ಪ ಹೇಳುತ್ತಿದ್ದ ಕತೆಯನ್ನು ಕೇಳುತ್ತಿದ್ದಳು. "ಅವಳು ನಾನು ಮಾತನಾಡಲು ಅವಕಾಶವೆ ಕೊಡಲಿಲ್ಲ, ನನ್ನನ್ನು ಕಾಣುತ್ತಲೆ ಸೀಳು ನಾಯಿಯಂತೆ ಮೇಲೆ ಬಿದ್ದಳು, ನನ್ನನ್ನು ಮುಗಿಸಿಬಿಡುವದಾಗಿ ಪಿಸ್ತೂಲ್ ತೆಗೆದು ನಿಂತಳು, ಅವಳ ಕೈ ಮೈ ನಡುಗುತ್ತಿತ್ತು ಕೋಪದಿಂದ ಯಾವುದೆ ಕ್ಷಣದಲ್ಲಿ ಅವಳು ಪಿಸ್ತೂಲ್ ಹಾರಿಸಬಹುದಿತ್ತು, ನನ್ನ ಸಮಾದಾನದ ಮಾತು ಕೇಳುವ ಪರಿಸ್ಥಿಥಿಯಲ್ಲಿ ಅವಳಿರಲಿಲ್ಲ. ನಾನು ಹೇಗಾದರು ತಪ್ಪಿಸಿಕೊಳ್ಳಬೇಕೆಂದು ಪಕ್ಕದಲ್ಲಿ ಬಿದ್ದಿದ್ದ, ಕಾಪಿ ಗಿಡದ ಬೇರಿನ ಕೊಂಬೆಯನ್ನು ಅವಳತ್ತ ಬೀಸಿದೆ, ಅದರೆ ದುರಾದೃಷ್ಟ ಅವಳ ಕೈಗೆ ನಾನು ಇಟ್ಟಿದ್ದ ಗುರಿ ತಪ್ಪಿತ್ತು, ಅವಳು ತಪ್ಪಿಸಿಕೊಳ್ಳುವಂತೆ ಬಗ್ಗಿದಳು, ತಲೆಗೆ ಏಟು ಬಿದ್ದು, ತಲೆ ಒಡೆದಿತ್ತು, ಅನೀರಿಕ್ಷಿತವಾಗಿ ಕೊಲೆಯಾಗಿತ್ತು, ಅವಳು ಚೀರಿಕೊಳ್ಳೂತ್ತ ಮಂಟಪದ ಹಿಂದಿದ್ದ, ಬಾವಿಗೆ ಬಿದ್ದು ಹೋದಳು. ಅಲ್ಲಿಂದ ನೆಗೆದು ನಾನು ಅವಳನ್ನು ಕಾಪಾಡುವ ಯಾವುದೆ ಅವಕಾಶವಿರಲಿಲ್ಲ, ನಾನೇನು ಈಜುಗಾರನು ಅಲ್ಲ"
"ನಾನು ಕೊಂಬೆಯನ್ನು ಎಸೆದು , ತಿರುಗಿ ನೋಡಿದೆ, ಎದುರಿಗೆ ಅವಳ ತಂಗಿ ಚಂದ್ರಕಲಾ ಇದ್ದಳು, ಅವಳು ನನ್ನನ್ನೆ ಕೋಪದಿಂದ ನೋಡುತ್ತಿದ್ದಳು , ಚೀರಾಡಿದಳು
"ನಾನು ಎಲ್ಲ ನೋಡಿದೆ, ನನ್ನ ಅಕ್ಕನನ್ನು ಕೊಂದಿದ್ದು ನೀನೆ, ಮನೆಗೆ ಹೋಗಿ, ಎಲ್ಲರಿಗು ಹೇಳುವೆ ಎಂದು" ಅವಳ ಬಾಯಿ ಮುಚ್ಚಿಸಲು ಎಷ್ಟೊ ಪ್ರಯತ್ನಿಸಿದೆ, ಆ ಹುಡುಗಿ ನನ್ನಮಾತು ಕೇಳುವ ಸ್ಥಿಥಿಯಲ್ಲಿರಲಿಲ್ಲ, ಅಕ್ಕನಂತೆಯೆ ಅವಳು ಸಹ ಕೂಗಾಡುತ್ತಿದ್ದಳು, ಅಳುತ್ತಿದ್ದಳು, ನನಗೆ ಬೇರೆ ದಾರಿಯೆ ಕಾಣಲಿಲ್ಲ, ಕಲ್ಲಿನ ಮಂಟಪಕ್ಕೆ ಒರಗಿಸಿ ಅವಳ ಕುತ್ತಿದೆ ಅದುಮಿದೆ ದ್ವನಿ ನಿಲ್ಲಲ್ಲಿ ಎಂದು ಆದರೆ ಅವಳು ಸಹ ಸತ್ತು ಹೋದಳು,
ನಾನು ದಿಗ್ಬ್ರಾಂತನಾಗಿದ್ದೆ, ನನ್ನ ಕೈಲೆ ಎರಡು ಕೊಲೆ ನಡೆದುಹೋಗಿತ್ತು, ಬೇರೆ ದಾರಿ ಇರಲಿಲ್ಲ, ಅದೇ ಬಾವಿಗೆ ಅವಳನ್ನು ಸಹ ಎಸೆದೆ. ಅಲ್ಲಿ ಬಿದ್ದಿದ್ದ ಪಿಸ್ತೂಲನ್ನು ಒರೆಸಿ, ಜೋಬಿನಲ್ಲಿರಿಸಿದೆ, ಅಲ್ಲಿಂದ ಹೊರಟುಹೋದೆ"
ಚಿಕ್ಕಪ್ಪ ಕತೆ ನಿಲ್ಲಿಸಿದರು, ಅಲ್ಲೆಲ್ಲ ಒಂದು ಸ್ಮಶಾನ ಮೌನ ನೆಲೆಸಿತ್ತು. ಶಾಲಿನಿ ಯೋಚಿಸುತ್ತ ಇದ್ದಳು, ಅದಕ್ಕಾಗಿಯೆ ನನಗೆ ಜಾನಕಿ ಸತ್ತ ನಂತರ ಏನಾಯಿತು ಎಂದು ಗೊತ್ತಾಗಲಿಲ್ಲ ಅಂದುಕೊಂಡಳು. ಅವಳ ಕಣ್ಣು ಕೆಂಪಾಗುತ್ತಿತ್ತು. ಇಂತ ದ್ರೋಹಿಯನ್ನು ಬಿಡಬಾರದು, ಒಂದಲ್ಲ ಎರಡು ಕೊಲೆ ಮಾಡಿರುವ ಇವನನ್ನು ಹಿಡಿದು ಪೋಲಿಸಿಗೆ ಒಪ್ಪಿಸಬೇಕು. ಎಂದ ಅವಳ ಮನ ಹೇಳುತ್ತಿತ್ತು. ಒಮ್ಮೆಲೆ ಎದ್ದು ನಿಂತಳು
"ಪಾಪಿ ನನ್ನ ಅಕ್ಕನನ್ನು ಕೊಂದೆಯಲ್ಲದೆ, ನನ್ನನ್ನು ಸಾಯಿಸಿದೆ. ಎಲ್ಲವು ನನಗೆ ಅರ್ಥವಾಗಿದೆ, ನಾನು ಇದನ್ನು ಬಿಡುವದಿಲ್ಲ, ಎಲ್ಲರಿಗು ತಿಳಿಸುವೆ, ಚಿತ್ರಾಳಿಗು ಹೇಳುವೆ ನಿನ್ನ ಅಮ್ಮನನ್ನು ಕೊಂದವನು ನಿನ್ನ ಚಿಕ್ಕಪ್ಪ ಎಂದು, ನಾನು ಆಗಿನ ಎಲ್ಲ ಘಟನೆ ವಿವರಿಸುವೆ,ಎಲ್ಲರು ನಂಬುವುದು ಖಂಡಿತ, ನಿನ್ನ ತಪ್ಪಿಗೆ ಶಿಕ್ಷೆ ಕೊಡಿಸದೆ ನಾನು ಇಲ್ಲಿಂದ ,ಕೋಡುವಳ್ಳಿಯಿಂದ ಕದಲುವದಿಲ್ಲ"
ಶಾಲಿನಿಯ ದ್ವನಿ ತಾರಕ್ಕಕ್ಕೆ ಏರಿತು. ಅದು ಶಾಲಿನಿಯ ಮನವೊ ಚಂದ್ರಕಲಾ ಎಂಬುವಳದೊ ಯಾರು ಅರಿಯರು.
ಚಿತ್ರಾಳ ಚಿಕ್ಕಪ್ಪ, ತಮ್ಮಯ್ಯಪ್ಪ ಅಸಹಾಯಕನಾಗಿದ್ದ, ಅವನು ಮತ್ತೆ ಹೇಳಿದ "ಇಲ್ಲಿ ಕೇಳು ಶಾಲಿನಿ, ನನಗೀಗಲೆ ಮದುವೆಯಾಗಿ ಎರಡು ಮಕ್ಕಳಿವೆ, ತೋಟವಿದೆ, ಮನೆಯಿದೆ ಈ ಎಲ್ಲವನ್ನು ಬಿಟ್ಟು ಹೋಗಿ ಜೈಲಿನಲ್ಲಿ ಕುಳಿತುಕೊಳ್ಳಲು ಆಗಲ್ಲ, ನನ್ನ ಮಕ್ಕಳನ್ನು ನೋಡುವರು ಯಾರು, ನಿನ್ನ ಸ್ನೇಹಿತೆ ಚಿತ್ರಾಳನ್ನು ನೋಡು , ಅವಳಿಗೆ ಮದುವೆ ಮಾಡುವ ಜವಾಬ್ದಾರಿ ಹೊರುವರು ಯಾರು ನಮ್ಮ ಅಣ್ಣ ಯಾವುದಕ್ಕು ಬರುವನಲ್ಲ ವಿರಕ್ತನಂತೆ ಇದ್ದಾನೆ. ನನ್ನ ಮಾತು ಕೇಳಮ್ಮ ಅಂದು ಆಗಿದ್ದು ಆಕಸ್ಮಿಕ , ನನಗೆ ಯಾರ ಕೊಲೆಯು ಮಾಡುವ ಉದ್ದೇಶವಿರಲಿಲ್ಲ ಈ ವಿಷಯ ಇಲ್ಲಿಗೆ ಬಿಟ್ಟುಬಿಡು, ಎಲ್ಲರು ಶೃಂಗೇರಿಯಿಂದ ಬಂದಮೇಲೆ ನಿನ್ನ ಪಾಡಿಗೆ ಬೆಂಗಳೂರಿಗೆ ಹೊರಡು, ನಿನ್ನ ಜೀವನ ಹಾಗು ನನ್ನ ಜೀವನ , ನಿನ್ನ ಸ್ನೇಹಿತೆಯ ಜೀವನ ಎಲ್ಲವು ನೆಮ್ಮದಿಯಿಂದ ಇರುತ್ತದೆ"
ಅವಳನ್ನು ಓಲೈಸಿದ, ಅವಳು ಓಡಿಹೋಗದಂತೆ ಬಿಗಿಯಾಗಿ ಅವಳ ಕೈ ಹಿಡಿದಿದ್ದ. ಆದರೆ ಶಾಲಿನಿಯ ಕೂಗಾಟ ನಿಲ್ಲಲಿಲ್ಲ. "ನಾನು ನಿನ್ನ ಜೀವನ ಉಳಿಸುವದಿಲ್ಲ, ನನ್ನ ಹಾಗು ಅಕ್ಕ ಜಾನಕಿಯ ಬಾಳು ಹಾಳುಮಾಡಿದ ನೀನು ಪೋಲಿಸ್ ಹತ್ತಿರ ಹೋಗಲೆ ಬೇಕು ಹಾಗೆ ಮಾಡುವೆ" ಹುಚ್ಚುಹಿಡಿದಂತೆ ಕೂಗಾಡುತ್ತಿದ್ದಳು,
ತಮ್ಮಯ್ಯಪ್ಪ ಅವಳ ಬಾಯಿ ಒತ್ತಿ ಹಿಡಿದ ಕೂಗಾಡದಂತೆ, ಅವಳು ನಾಗಿಣಿಯಂತೆ ಸೆಣಸುತ್ತಿದ್ದಳು, ಬಿಡಿಸಿಕೊಳ್ಳಲು ಹೋರಾಡುತ್ತಿದ್ದಳು. ಅವನು ವಿದಿಯಿಲ್ಲ ಎಂಬಂತೆ ಅವಳ ಕುತ್ತಿಗೆಗೆ ಕೈ ಹಾಕಿದ, ಎರಡು ಮೂರು ನಿಮಿಷಗಳು , ಅವಳ ಕೂಗಾಟ ನಿಂತಿತು, ಅವಳ ಉಸಿರು ನಿಂತ ಪಕ್ಕಕ್ಕೆ ಒರಗಿದಳು,
ಅವಳತ್ತ ವಿಷಾದದಿಂದ ನೋಡಿದ ತಮ್ಮಯ್ಯಪ್ಪ, "ಶಾಲಿನಿ ನಿನ್ನದು ಪುನರ್ಜಮವೊ ಇಲ್ಲ , ಚಂದ್ರಳ ಆತ್ಮದ ಅವಾಹನೆಯೊ ನನಗೆ ತಿಳಿಯದು, ಆದರೆ ನನಗೆ ನನ್ನ ಸುರಕ್ಷತೆ ಮುಖ್ಯ, ನಿನ್ನನ್ನು ಕೊಲ್ಲುವ ಬಯಕೆ ನನಗೇನು ಇರಲಿಲ್ಲ, ಆದರೆ ಆ ಸಂದರ್ಭವನ್ನು ನೀನೆ ಸೃಷ್ಟಿಸಿದೆ, ಚಂದ್ರಳಾಗಿ ಬಂದಾಗಲು ನನ್ನಮಾತು ಕೇಳಲಿಲ್ಲ, ಮತ್ತೆ ಶಾಲಿನಿಯಾಗಿ ಬಂದರು ನನ್ನಮಾತು ಕೇಳಲಿಲ್ಲ. ನನ್ನನ್ನು ಅಸಹಯಾಕನನ್ನಾಗಿಸಿದೆ, ನಾನು ಮಾಡಿದ ಒಂದು ಕೊಲೆಗೆ ಎರಡು ಬಾರಿ ಸಾಕ್ಷಿಯಾಗಿ ಬಂದು ನನ್ನನ್ನ ಇಕ್ಕಟ್ಟಿಗೆ ಸಿಕ್ಕಿಸಿದೆ. ನನ್ನನ್ನು ಕ್ಷಮಿಸಿಬಿಡು, ಮಗು " ಅಂದವನು ಶಾಲಿನೆಯ ಮೃತದೇಹವನ್ನು ಎತ್ತಿ ನಿದಾನಕ್ಕೆ ಮಂಟಪದ ಹತ್ತಿರ ನಡೆದು , ಹಿಂದಿದ್ದ ಹಾಳು ಬಾವಿಗೆ ಜಾರಿಬಿಟ್ಟ . ಒಂದು ಕ್ಷಣ ಮೌನವಾಗಿ ನಿಂತು, ನಂತರ ರಸ್ತೆಯಲ್ಲಿ ನಿಲ್ಲಿಸಿದ ಕಾರಿನ ಕಡೆಗೆ ನಡೆಯಲು ಪ್ರಾರಂಬಿಸಿದ. ಅವನಿಗೆ ಗೊತ್ತಿತ್ತು ಕಾಫಿಕಾರ್ಮಿಕರೆಲ್ಲ ತಮಿಳುನಾಡಿಗೆ ಹಬ್ಬಕ್ಕೆ ಹೋಗಿದ್ದಾರೆ, ಸುತ್ತಮುತ್ತ ತೋಟಗಳಲ್ಲಿ ಸಹ ಯಾರು ಇಲ್ಲ. ಕಡೆ ಪಕ್ಷ ಎರಡುಮೂರು ಮೈಲು ಸುತ್ತಳತೆಯಲ್ಲಿ ಯಾರು ಇಲ್ಲ ಎಂದು. ರಸ್ತೆ ತಲುಪಿ , ತನ್ನ ಕಾರನ್ನು ಹತ್ತಿ ನಿದಾನಕ್ಕೆ ಮೂಡಿಗೆರೆ ರಸ್ತೆಯ ಕಡೆ ಕಾರು ತಿರುಗಿಸಿದ, ಅಲ್ಲಿಂದ ಹಾಸನಕ್ಕೆ ಹೋಗುವ ಕಾರ್ಯಕ್ರಮವಿತ್ತು.
ಶೃಂಗೇರಿಯಿಂದ ಬಂದ ಗೆಳತಿಯರಿಗೆ ಅಘಾತ ಕಾದಿತ್ತು, ಶಾಲಿನಿ ಕಣ್ಮರೆಯಾಗಿದ್ದಳು. ಬೆಂಗಳೂರಿನಿಂದ ಅವರ ಅಪ್ಪ ಅಮ್ಮ ಬಂದರು. ಹಳ್ಳಿಯ ಜನರೆಲ್ಲ ಹುಡುಕಿದರು, ಕಡೆಗು ಅವಳು ತೋಟದ ಭಾವಿಯಲ್ಲಿ ಬಿದ್ದಿರುವುದು ಪತ್ತೆಯಾಯಿತು. ಪೋಲಿಸರು ಬಂದರು, ಅಕಸ್ಮಿಕವಾಗಿ ಬಾವಿಗೆ ಬಿದ್ದಿರಬಹುದೆಂದೆ ಎಲ್ಲರು ಭಾವಿಸಿದರು. ಶಾಲಿನಿಯ ಅಪ್ಪ ಅಮ್ಮನೆ ಪೋಲಿಸರನ್ನು ಇದೊಂದು ಆಕಸ್ಮಿಕದಂತೆ ಕಾಣುತ್ತಿದೆ ತಮಗೆ ಯಾವುದೆ ಅನುಮಾನವಿಲ್ಲ ಎಂದು ತಿಳಿಸಿ ಒಪ್ಪಿಸಿದರು. ಊರಿನ ದೊಡ್ಡಕುಳಗಳು ತಮ್ಮಯ್ಯಪ್ಪನವರು ಅವರ ಪ್ರಭಾವವು ಇದ್ದಿತು. ಗೆಳತಿಯರೆಲ್ಲ ತಮ್ಮಿಂದ ದೂರವಾದ ಶಾಲಿನಿಗಾಗಿ ವ್ಯಥೆ ಪಡುತ್ತಲೆ ಬೆಂಗಳೂರಿಗೆ ಹೊರಟರು.
ಚಿತ್ರಾಳ ಮನದಲ್ಲಂತು ಎಂತದೊ ಒಂದು ಚಿಂತೆ ಕಾಡುತ್ತಿತ್ತು, ಶಾಲಿನಿ ತಮ್ಮ ಮನೆಗೆ ಬಂದಾಗಲಿಂದಲು ಅದೇಕೆ ವಿಚಿತ್ರವಾಗಿ ವರ್ತಿಸುತ್ತಿದ್ದಳು, ಮತ್ತು ಅದೇಕೆ ಭಾವಿಯ ಹತ್ತಿರ ಹೋಗಿ ಬಿದ್ದಳು ಎನ್ನುವುದು. ಅದು ಅವಳ ಯೋಚನೆಗಳಿಗೆ ನಿಲುಕದ ವಿಚಾರವಾಗಿತ್ತು.
lengthy story
but good
but tragic end
sorry
thank u
thank u
ಚ೦ದದ ಕಥೆ..ಸ೦ಭಾಷಣೆ ಗಳು ಸು೦ದರವಾಗಿದ್ದವು.. ಓದಿಸಿಕೊ೦ಡು ಹೋಯಿತು..ಸೋಮವಾರದಾರ೦ಭದಲ್ಲಿ ಒ೦ದೊಳ್ಳೆಯ ಕಥೆ ಓದಿದ ಸ೦ತಸ.. ಧನ್ಯವಾದಗಳು
ವಂದನೆಗಳು ಸಾರ್
ಕಥೆ ಸ್ವಲ್ಪ ಸಿನೀಮಯ ಅನಿಸಿತು. ಆದರೂ ಕಥೆಯ ನಿರೂಪಣೆ ಬಹಳ ಚೆನ್ನಾಗಿದೆ. ಕಥೆಯ ಸುಳುಹು ಸಿಕ್ಕರೂ, ಕುತೂಹಲ ಕೊನೆಯ ತನಕ ಉಳಿಯುತ್ತದೆ.ಮಲೆನಾಡ ಸೌಂಧರ್ಯ ಚೆನ್ನಾಗಿ ವರ್ಣಿಸಿದ್ದೀರಿ. ಚಿಕ್ಕ ಮಗಳೂರಿಗೆ ಒಮ್ಮೆ ಹೋಗಿ ಬರೋಣ ಅನಿಸಿತು.
ಕೊನೆ ನನಗು ಸ್ವಲ್ಪ ಸಿನಿಮೀಯ ಅನ್ನಿಸಿತು
ಆದರೆ ಬೇರೆ ರೀತಿಯ ಅಂತ್ಯ ಕಷ್ಟವಿತ್ತು.
ಕೊಲೆಯ ವಿಷಯ ತಿಳಿದ ಅವಳು ಹೊರಬಂದರೆ ಅವನ ಜೀವನ ನಾಶ
ಅಲ್ಲದೆ ಒಂದೆ ಕೊಲೆಗೆ ಎರಡು ಜನ್ಮದಲ್ಲಿ ಸಾಕ್ಷಿಯಾಗಿ ಎರಡು ಸಾರಿ ಕೊಲೆಯಾಗುವ ಅಂತ್ಯ ಸ್ವಲ್ಪ ವಿಶೇಷ ಅನ್ನಿಸಿ ಹಾಗೆ ಮುಗಿಸಿದೆ
ಕುತೂಹಲಕಾರಿ ಕಥೆ.. ದುಃಖದ ಅಂತ್ಯ ಸ್ವಲ್ಪ ಬೇಸರ ತಂದಿತು. ತುಂಬಾ ತುಂಬಾ ತುಂಬಾ ಹಿಡಿಸಿತು.
ವಂದನೆಗಳು ಸರ್
ಚೆನ್ನಾಗಿದೆ 🙂
ವಂದನೆಗಳು ರವಿಕಿರಣ್ ರವರಿಗೆ ತಮ್ಮ ಪ್ರತಿಕ್ರಿಯೆಗೆ