ಶನಿವಾರ , ಭಾನುವಾರ ಬಂತಂದ್ರೆ ಬಟ್ಟೆ ತೊಳೆಯೋದಿತ್ತಲ್ವಾ ಅನ್ನೋದು ದುತ್ತಂತ ನೆನಪಾಗುತ್ತೆ. ರೂಮಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬಟ್ಟೆಗಳು, ನಾ ನಿನ್ನ.. ಬಿಡಲಾರೆ ಅಂತ ಹಾಡುತ್ವೆ. ಏನು ಮಾಡೋದು ? ಬಟ್ಟೆಗಳ ತೊಳಿದೇ ಮನಬಂದಲ್ಲಿ ಎಸೆದು ಒಂದು ವಾರದ ತನಕ ದ್ವೇಷ ಸಾಧಿಸಬಹುದು. ಆದ್ರೆ ಆಮೇಲೆ ? ಸೋಮವಾರ ಮತ್ತೆ ಆಫೀಸಿಗೆ ಹೋಗೋಕೆ ಅವೇ ಬಟ್ಟೆಗಳು ಬೇಕಲ್ವಾ ? ಮುದುರಿಬಿದ್ದ ಬಟ್ಟೆಗಳನ್ನ ನೆನೆಸೋಕೆ ಹೋದಾಗ ಅವುಗಳ ಕಾಲರ್ರು, ತೋಳುಗಳಲ್ಲಿ ಜಮಾವಣೆಯಾದ ಮಣ್ಣು ನೋಡಿ ಇಷ್ಟು ಕೊಳೆಯಾಗೋ ತರ ಏನು ಮಣ್ಣು ಹೊರೋ ಕೆಲ್ಸ ಮಾಡಿದ್ನಪ್ಪಾ ಅನಿಸುತ್ತೆ. ಬಟ್ಟೆಗಳನ್ನ ಬೇಗ ಕೊಳೆಯಾಗಿದ್ದಕ್ಕೆ ಬೈಯ್ಕೋತ ಕೂತ್ರೆ ಅವು ಬೆದರಿ ತಾವೇ ತೊಳೆದುಕೊಳ್ಳುತ್ವೇ ? ಹಂಗೇನಿಲ್ಲದ ಕಾರಣ ನೆನಸಿಟ್ಕೋಳಿ, ಸೋಪ್ ಹಚ್ಬಿಡಿ. ಬಟ್ಟೇನ ತೊಳ್ಕೋಳಿ ಅಂತಾನೋ. ತೊಳಿ ಮಗ ಒಗೆ ಬೇಗ ತೊಳಿ ಮಗ ಒಗೆ ಬೇಗ .. ಬಿಡಬೇಡ ಕೊಳೇನ ಅಂತಾನೋ ಹಾಡೋ ಪರಿಸ್ಥಿತಿ. ಅವತ್ತಿನ ಬಟ್ಟೇನ ಅವತ್ತೇ ತೊಳ್ದು ವಾರಾಂತ್ಯಕ್ಕೆ ಆರಾಮಾಗಿರೋ ಜಾಣರ ಮಧ್ಯೆ ಒಂದೇ ಬಟ್ಟೇನ ಮಿನಿಮಮ್ ಮೂರು ಬಾರಿಯಾದ್ರೂ ಹಾಕ್ಬೇಕು. ಜೀನ್ಸನ್ನಂತೂ ತೊಳ್ಯೋದೇ ಮಹಾಪರಾಧ. ಅದಿರೋದೆ ಹರಿಯೋವರೆಗೆ ಹಾಕೋಕೆ ಅಂತನ್ನೋ ಬುದ್ದಿವಂತರೂ ಇದ್ದಾರೆ. ರಾಜಮಹಾರಾಜರ ಕಾಲದಲ್ಲಿ ಅವರ ಬಟ್ಟೆ ತೊಳೆಯೋಕೆಂತ್ಲೇ ದೋಭಿಗಳೆಂಬ ಜನರಿದ್ರಂತೆ. ಅದೇ ಒಂದು ಸಮುದಾಯವಾಗಿ ದೋಭಿಗಾಟ್ ಅನ್ನೋ ಸಿನಿಮಾ, ಏರಿಯಾ ಎಲ್ಲಾ ಆಗಿ ಈಗದರ ಕಲ್ಪನೆಯೇ ಬೇರೆಯಾದ ಕತೆ ಏನೇ ಇದ್ರೂ ನಮ್ಮಂತ ಪಿಳ್ಳೆಜನಕ್ಕೆ ತಮ್ಮ ಬಟ್ಟೆ ತಾವೇ ತೊಳ್ಕೊಳ್ಳೋದ್ರಲ್ಲೇ ಒಂದು ಸಮಾಧಾನ. ಸಮಯವಿಲ್ಲದ ಜನರ ಸೌಲಭ್ಯಕ್ಕೆ ಲಾಂಡ್ರಿ , ಡ್ರೈಕ್ಲೀನರ್ಗಳು ಬಂದಿದ್ರೂ ಟೀ ಚೆಲ್ಲಿಕೊಂಡ ಶರ್ಟನ್ನೋ, ಯಾವ್ದೋ ಲೋಷನ್ ಚೆಲ್ಲಿಕೊಂಡ ಲ್ಯಾಬ್ ಯೂನಿಫಾರ್ಮನ್ನು ಸರ್ಫ್ ಎಕ್ಸೆಲ್ಲೋ, ರಿನ್ನೋ ಹಾಕಿ ತೊಳೆಯೋದ್ರಲ್ಲಿರೋ ಖುಷಿ , ಸ್ವಾವಲಂಭನೆಯ ಭಾವ ಇದರಲ್ಲಿಲ್ಲ. ಪ್ರತೀ ಉಜ್ಜುವಿಕೆಯಲ್ಲೂ ಕಲೆ, ಕಾಲರ್ ಕೊಳೆ ಇಂಚಿಚಾಗಿ ಮಾಯವಾಗೋದ್ನ ನೋಡುವಾಗ ಮೂಡೋ ಸಂತೃಪ್ತಿಯಿದ್ಯಲ್ಲಾ . ಆಹಾ ? ಅದಕ್ಕದೇ ಸಾಟಿ.
ಹ್ಯಾಮಿಲ್ಟನ್ ಸ್ಮಿತ್ ಅನ್ನೋ ಪುಣ್ಯಾತ್ಮ ೧೮೫೮ ರಲ್ಲೇ ಆಗಲೇ ಇದ್ದ ವಾಷಿಂಗ್ ಮಿಷನ್ನಿನ ಯಾವುದೋ ರೂಪಾಂತರಕ್ಕೆ ಪೇಟೇಂಟ್ ಪಡಕೊಂಡ್ರೂ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಲ್ಲ ಅದಿನ್ನೂ. ಪೇಟೆಗಳ ಅನೇಕ ಮನೆಗಳಲ್ಲಿ ಅದಿಲ್ದೇ ಇಲ್ಲವನ್ನೋ ಪರಿಸ್ಥಿತಿ ಬಂದಿದ್ರೂ ಸುಮಾರಷ್ಟು ಮನೆಗಳಲ್ಲಿ ಅದು ಬರೀ ಬೆಡಶೀಟೋಗೆಯೋ ಸಾಧನವಾಗಿ, ಮನೆಯಲ್ಲಿ ಇದೆ ಅಂತ ತೋರಿಸಿಕೊಳ್ಳೋ ಪ್ರಸ್ಟೀಜಾಗಿ ಪರಿವರ್ತನೆಯಾಗಿದೆ. ಕೆಲೋ ಕಡೆ ಅದ್ನ ತಂದು ಒಂದು ವಾರ ಗುರ್ರೆನಿಸಿದ್ದೇ ಬಂತು. ಆಮೇಲೆ ಕರೆಂಟು, ಸೋಪು, ನೀರು ವಿಪರೀತ ಬೇಕು ಅಂತ ಮೂಲೆ ವಾಸ.
ಯಂತ್ರವೇ ಆಗ್ಲಿ, ಉಜ್ಜೋ ತಂತ್ರವೇ ಆಗ್ಲಿ ತೊಳ್ಯೋ ಶ್ರಮ, ಆಯ್ತಾ ನೋಡಿ ಮತ್ತೆ ಒಣಗಿಸೋ ಶ್ರಮ ಎಲ್ಲಾ ಇದ್ದಿದ್ದೆ. ಈ ಗೋಜೇ ಇಲ್ಲದಿದ್ರೆ ಹೆಂಗಿರ್ತತ್ತು ಅಂತ ? ಅಂದ್ರೆ ಬಟ್ಟೆನೇ ಹಾಕದಿದ್ರೆ ಹೆಂಗಿರ್ತುತ್ತು ಅಂತಲ್ಲ ಮತ್ತೆ !. ಹಾಕಿದ್ದ ಬಟ್ಟೆಗಳು ಕೊಳೆಯೇ ಆಗದಿದ್ರೆ ಹೆಂಗಿರ್ತಿತ್ತು ಅಂತ. ತನ್ನೆಲೆ ಮೇಲೆ ನೀರನ್ನೂ ಅಂಟಿಸಿಕೊಳ್ಳದ ಕಮಲದಂತೆ ಕೊಳೆಯಂಟಿಸಿಕೊಳ್ಳದ ಬಟ್ಟೆಗಳಿದ್ದಿದ್ರೆ ಅಂತ.. ವಾವ್..
ಅಂದಂಗೆ ನಾವು ಹಾಕೋ ಬಟ್ಟೆಗಳು ಏಕೆ ಕೊಳೆಯಾಗುತ್ತೆ ?
ನಾನು ದಿನಾ ಸಖತ್ತಾಗಿ ಒಂದು ಘಂಟೆ ಸ್ನಾನ ಮಾಡ್ತೀನಪ್ಪ.ಹೊರಗಡೆ ಹೋಗಿ ಏನು ಕೂಲಿ ಕೆಲ್ಸನೂ ಮಾಡಲ್ಲ. ಇಡೀ ದಿನ ಏಸೀಲಿದ್ರೂ ನನ್ನ ಬಟ್ಟೆಯ ಕಾಲರ್ರು, ತೋಳುಗಳು ಮಣ್ಣಾಗೋಗತ್ತಲ್ಲ ಯಾಕೆ ಅಂತ ಒಂದಿಷ್ಟು ಜನರ ಯೋಚ್ನೆ, ಈ ಬೆವರುವಿಕೆ ಅನ್ನೋದು ನಮ್ಮ ದೇಹದ ಒಂದು ನೈಸರ್ಗಿಕ ಕ್ರಿಯೆ. ಅಂಟಾರ್ಟಿಕಾದಲ್ಲಿರುವವನ ಬೆವರೋ ಪ್ರಮಾಣ ಇಲ್ಲವೇ ಇಲ್ಲವನ್ನುವಷ್ಟಿದ್ರೆ ಬೇಸಿಗೆಯಲ್ಲಿ ಇಲ್ಲಿರೋ ನಮಗೆ ದಿನಕ್ಕೆರೆಡು ಸ್ನಾನ ಮಾಡಿದ್ರೂ ಸಮಾಧಾನವಿಲ್ಲದಂತಹ ಬೆವರು. ವಾತಾವರಣ, ಜೀವಿಸುವ , ಕೆಲಸದ ಜಾಗ, ವಿಧಾನಕ್ಕನುಗುಣವಾಗಿ ಬೆವರೋದಂತೂ ಇದ್ದೇ ಇದೆ. ಬೆವರುವಿಕೆಯಿಂದ ಆರೋಗ್ಯಕ್ಕೆ ಹಲತರದ ಪ್ರಯೋಜನಗಳಿದ್ರೂ ಬೆವರಿನೊಂದಿಗೆ ದೇಹ ಒಂದಿಷ್ಟು ತ್ಯಾಜ್ಯಗಳನ್ನು ಹೊರಹಾಕೋದಂತೂ ನಿಜ. ಎಣ್ಣೆ ಚರ್ಮ, ಒಣ ಚರ್ಮ ಅಂತ ನಮ್ಮ ದೇಹ ಪ್ರಕೃತಿಗೆ ತಕ್ಕಂತೆ. ಸೇವಿಸೋ ನೀರಿನಿಂದ , ಆಟೋಟಗಳಿಂದ ಉಂಟಾದ ಬೆವರು ಸಂಚರಿಸೋ ವಾತಾವರಣದಲ್ಲಿನ ಮಾಲಿನ್ಯದ ಜೊತೆ ಸೇರಿ ಒಂದು ಕೊಳೆಯ ಪದರವನ್ನು ಉಂಟು ಮಾಡುತ್ತೆ ನಮ್ಮ ದೇಹದ ಮೇಲೆ. ಹಾಗಾಗೇ ಬೆಳಗ್ಗೆ ಫ್ರೆಶ್ಶಾಗಿದ್ದ ಮುಖ ಸಂಜೆಯ ಹೊತ್ತಿಗೆ ಎಣ್ಣೆಣ್ಣೆ, ಕೊಳೆ ಕೊಳೆಯಾಗೋದನ್ನ ನೋಡಿರ್ತೀವಿ. ಮುಖಕ್ಕೇನೋ ಕ್ರೀಮು, ಲೋಶನ್ನುಗಳ ರಕ್ಷೆ ಕೊಡಬಹುದು . ಆದ್ರೆ ಬಟ್ಟೆಗಳಿಗೆ ? ನಮ್ಮ ಮೈಮೇಲೆ ಬಂದು ಬಿದ್ದಿರಬಹುದಾಗಿದ್ದ ಕೊಳೆಗೆ ಬಟ್ಟೆಗಳು ಕೊಡೆಯಾಗುತ್ತಷ್ಟೇ. ಕುರ್ಚಿಯ ಮೇಲಿದ್ದ ಧೂಳು, ಒರಗಿದ ಗೋಡೆಯ ಮೇಲಿದ್ದ ಮಣ್ಣುಗಳಿಗೆ ನಮ್ಮ ಬದಲು ಇವು ಕೊಳೆಯಾಗುತ್ತಷ್ಟೆ. ಈ ಕೊಳೆ ಹೆಚ್ಚಾಗ್ತಾ ಹೋದಷ್ಟೂ ಅವನ್ನೇ ನಂಬಿರೋ ಬ್ಯಾಕ್ಟೀರಿಯಾಗಳಿಗೆ , ಫಂಗಸ್ಗಳಿಗೆ ಅನುಕೂಲ ಹೆಚ್ಚಾಗಿ ನಮ್ಮ ಬಟ್ಟೆಗಳು ಅವುಗಳ ಸ್ವರ್ಗವಾಗುತ್ತಷ್ಟೆ. ಉಪ್ಪಲ್ಲೇ ಹಲ್ಲುಜ್ಜೋ ಕಾಲವೊಂದಿತ್ತು. ಅದು ಹೋಗಿ ನಿಮ್ಮ ಟೂತ್ ಪೇಸ್ಟಿನಲ್ಲಿ ಉಪ್ಪು ಇದ್ಯಾ ಅನ್ನೋ ಕಾಲ ಬಂದಿದೆ ಈಗ. ಅದರಂತೇ ನಿಂಬೆ, ಬೇವಿನ ಅಂಶಗಳಿರ್ತಿದ್ದ ಮಾರ್ಜಕಗಳನ್ನ ದೂರ ತಳ್ಳಿ ನಿಮ್ಮ ಬಟ್ಟೆಯಲ್ಲಿ ಬ್ಯಾಕ್ಟೀರಿಯಾ ಇದೆಯಾ ಅಂತ ಕಾಲ ಬಂದ್ರೂ ಬರಬಹುದು.
ಅಂದಂಗೆ ಕೊಳೆಯೇ ಆಗದಿರೋ ಬಟ್ಟೆ ಅನ್ನೋದು ಬರೀ ಕನಸಾ ?
ಖಂಡಿತಾ ಇಲ್ಲ. ಅಂಟಿಸಿಕೊಳ್ಳದ ಗುಣವುಳ್ಳ ಕಮಲ/ಲಿಲ್ಲಿ ಎಲೆಗಳು, ಬಾತುಕೋಳಿ ಪುಕ್ಕಗಳನ್ನು ಅಭ್ಯಸಿಸುತ್ತಿದ್ದ ವಿಜ್ನಾನಿಗಳು ಈ ನಿಟ್ಟಿನಲ್ಲಿ ಸಂಶೋಧನೆ ಮಾಡ್ತಾ ಇದ್ರು. ಮೆಸಾಚ್ಯುಯೆಟ್ಸ್ ಇನ್ಸ್ಟಿಟ್ಯೂಟ್ ಅವ್ರು ಇಂತಹ ಸೂಪರ್ ಕೊಳೆನಿರೋಧಕ ಪದರಗಳ ಬಗ್ಗೆ ಮಹತ್ತರ ಹೊಳಹುಗಳನ್ನು ಕೊಟ್ಟಿತ್ತು. ಇದನ್ನ ಬಳಸಿಕೊಂಡ ಅಮೇರಿಕಾ ಸೇನೆಯ ಸಂಶೋಧನಾ ಘಟಕವೊಂದರಲ್ಲಿ ಕ್ಯುವೋಕ್ ಟ್ರೂವೊಂಗ್ ಎಂಬ ತಂತ್ರಜ್ನ ಮತ್ತವರ ತಂಡ ಈ ನಿಟ್ಟಿನ ಸಂಶೋಧನೆಯಲ್ಲಿ ತೊಡಗಿ ಆಗಲೇ ಐದು ವರ್ಷಗಳಾಗಿವೆಯಂತೆ. ಇದೆಂತ ಕಾಮಿಡಿ ? ಬಟ್ಟೆಯೊಂದು ಕೊಳೆಯೇ ಆಗದಂಗಿರೋಕೆ ಹೇಗೆ ಸಾಧ್ಯ ಅಂದ್ರಾ ? ಬಟ್ಟೆ ಹಾಕಿಕೊಂಡು ಕೆಸರಲ್ಲಿ ಬೀಳದೇ ಹೋದ್ರೂ ಬಟ್ಟೆ ಮೇಲೆ ಚೆಲ್ಲಿಕೊಳ್ಳೋ ಇಂಕು, ಕ್ರಿಕೆಟ್ಟೋ ಕಾಲ್ಚೆಂಡೋ ಆಡೋಕೋಕಿ ಮೆತ್ಗಳ್ಳೋ ಮಣ್ಣು, ನಮ್ಮ ಬೆವರು, ಬೆವರ ಹುಡುಕಿ ಬರೋ ಧೂಳು.. ಹಿಂಗೆ ಬಟ್ಟೆ ಕೊಳೆ ಆಗ್ದೇ ಇರೋದು ಅಸಾಧ್ಯ ಅಂದ್ರಾ ? ನಿಮ್ಮ ತರ್ಕ ಸರಿಯಾಗೇ ಇದೆ. ಆದ್ರೆ ಟ್ರೂವೊಂಗರ ತಂಡದ ಸಂಶೋಧನೆ ಬಟ್ಟೆಯೊಂದು ಕೊಳೆಯಾಗೋದು ಹೇಗೆ ಅನ್ನೋ ಒಂದು ಅಂಶವೊಂದನ್ನು ಹುಡುಕಿ ಅದನ್ನು ಇಲ್ಲವಾಗಿಸೋದ್ರ ಮೇಲೆಯೇ ನಿಂತಿದೆ.
ನಿಮ್ಮ ಬಳಿ ಒಂದು ತಟ್ಟೆ, ಒಂದು ರಟ್ಟು, ಒಂದು ನಯಸ್ಸಾದ ಗ್ಲಾಸಿನ ಶೀಟಿದೆ ಅಂತಿಟ್ಕೊಳ್ಳಿ. ಮೂರನ್ನೂ ಒಂದು ೪೫ ಡಿಗ್ರಿ ಓರೆಯಾಗಿ ನಿಲ್ಲಿಸಿ ಒಂದೈದು ಹಾಲಿನ ಬಿಂದುವನ್ನು ಮೇಲಿಂದ ಬಿಡುತ್ತೀರಿ ಅಂತಿಟ್ಕೋಳ್ಳಿ. ಏನಾಗುತ್ತೆ ? ರಟ್ಟು(card board) ಬೋರ್ಡಿನ ಮೇಲೆ ಬಿಟ್ಟ ಹಾಲಿನ ಬಿಂದುಗಳು ನಿಧಾನವಾಗಿ ಕೆಳಗಿಳಿಯುತ್ತಾ ಅರ್ಧದಲ್ಲೇ ನಿಂತುಬಿಡಬಹುದು. ತಟ್ಟೆಯ ಮೇಲಿಟ್ಟ ಬಿಂದುಗಳು ಸ್ವಲ್ಪ ನಿಧಾನವಾಗಿ, ಒಂದು ಬಿಳಿ ಗೆರೆಯ ಸೃಷ್ಟಿಸಿ ಕೆಳಗೆ ತಲುಪಬಹುದು. ಆದ್ರೆ ಗ್ಲಾಸು ? ಅದ್ರ ಮೇಲಿಟ್ಟ ಬಿಂದುಗಳು ಕಣ್ಣು ಮುಚ್ಚಿ ತೆರೆಯೋದ್ರಷ್ಟರಲ್ಲಿ ಕೆಳ ತಲುಪಿಬಿಡುತ್ತೆ. ಗ್ಲಾಸು ನಯಸ್ಸಾಗಿದ್ದಷ್ಟೂ ಹಾಲಿನ ಬಿಂದುಗಳು ಬೇಗ ಕೆಳತಲುಪುತ್ತೆ. ಇದಕ್ಕೆ ಒಂದು ಕಾರಣ ಗ್ಲಾಸಿನ surface tension ಉಳಿದವಕ್ಕಿಂತ ಕಮ್ಮಿಯಿರುವುದು. ಅದೇ ತರಹ ನಮ್ಮ ಬಟ್ಟೆಯ surface tension ಬಟ್ಟೆಯನ್ನು ಮುತ್ತೋ ಕೊಳೆಗಿಂತ ಕಮ್ಮಿಯಿದ್ರೆ ? !! ಉತ್ತರ ಸುಲಭ. ಬಟ್ಟೆಯ ಮೇಲೆ ಯಾವ ಕೊಳೆಯೂ ನಿಲ್ಲೋಲ್ಲ. ಬಿದ್ದವೆಲ್ಲಾ, ಪ್ಲಾಸ್ಟಿಕ್ ಛತ್ರಿಯ ಮೇಲೆ ಬಿದ್ದ ಮಳೆ ಹನಿ ತರಹ ಚೆದುರಿ ಹೋಗುತ್ತೆ ಅಲ್ವಾ ? ಇದೇ ತಂತ್ರವನ್ನು ಬಳಸಿರೋದು ಟ್ರೂವೊಂಗ್. ಟ್ರೂವೊಂಗ್ ತಂಡ ಕಂಡುಹಿಡಿದಿರೋ ಈ ಕೊಳೆ ಅಂಟಿಸಿಕೊಳ್ಳದ ನ್ಯಾನೋ ಸೈಜಿನ ಪದರವನ್ನು ಬಟ್ಟೆಗಳ ಮೇಲೆ ಜೋಡಿಸಿದ್ರಾಯ್ತು. ಸಿಕ್ಕಾಪಟ್ಟೆ ಕಮ್ಮಿ ಅಥವಾ ಕೊಳೆಯನ್ನೇ ಆಕರ್ಷಿಸದ ಬಟ್ಟೆ ರೆಡಿ !! ಬಟ್ಟೆ ಕೊಳೆಯೇ ಆಗದಿದ್ದ ಮೇಲೆ ಅದ್ನ ಪದೇ ಪದೇ ತೊಳೆಯೋ ಪ್ರಮೇಯವೆಲ್ಲೀ ? !ಇದು ಬರೀ ಕಟ್ಟುಕತೆಯಲ್ಲ. ಈಗಾಗಲೇ ರೆಡಿಯಾಗಿ ಸೈನ್ಯದ ಪ್ರಯೋಗಾರ್ಥ ಬಳಕೆಯಲ್ಲಿದೆ ಅನ್ನುತ್ತೆ ಈ ನಿಟ್ಟಿನ ಆರ್ಮಿ.ಮಿಲ್ ವೆಬ್ ತಾಣ. ಇದು ಕಮರ್ಷಿಯಲ್ ಹಿಟ್ ಆಗಿ ಜನ ಸಾಮಾನ್ಯರ ಕೈಗೂ ಸಿಗೋ ಕಾಲ ಇನ್ನೂ ದೂರವಿದ್ದರೂ ಬಟ್ಟೆ ತೊಳೆಯೋ ಸೋಂಬೇರಿತನದ ನನ್ನಂತವರಿಗಂತೂ ಖುಷಿ ಕೊಟ್ಟಿದೆ.
ಕೊನೆ ಹನಿ:
ಸರ್ಫು, ಡೆಟ್ಟಾಲು ಅಂತ ನಮ್ಮ ದೇಶದ ಆರ್ಥಿಕತೆಯನ್ನೇ ಲೈಟಾಗಿ ತೊಳಿತಿರೋ ಬಹುದೇಶೀಯ ತೊಳೆಯಪ್ಪಗಳ ಬಣ್ಣ ಬಣ್ಣದ ಜಾಹೀರಾತಿಗೆ ಮರುಳಾಗದೇ ನಿರ್ಮಾ, ವೀಲು, ಸುಂದರಿ ಇತ್ಯಾದಿ ದೇಶೀ ಮಾರ್ಜಕಗಳತ್ತ ಗಮನಹರಿಸೋಣ. ಅನಗತ್ಯ ಬ್ಲೀಚುಗಳಿಗೊಡ್ಡಿ ಹಾಳಾಗೋ ಬಟ್ಟೆಗಳನ್ನ, ಬ್ಲೀಚುಗಳ ದುಷ್ಪರಿಣಾಮಕ್ಕೊಳಗಾಗ್ತಿರೋ ನಮ್ಮ ಕೈಗಳನ್ನ, ಆಗ್ತಿರೋ ಜಲಮಾಲಿನ್ಯವನ್ನ ತಡೆಯೋಣ ಅನ್ನೋ ಮಾತುಗಳೊಂದಿಗೆ ವಿರಾಮ
*****
ಹಾಸ್ಟೆಲ್ ನಲ್ಲಿ ವಾಸವಾಗಿದ್ದ ಒಬ್ಬ ಬಲು ಹುಷಾರಿ.
ತನ್ನ ಒಂದೊಂದು ಬನಿಯನ್ ಗಳನ್ನು ವಾರದ
ಬಟ್ಟೆ ತೊಳೆಯುವ ಇತರೆ ಹಾಸ್ಟೆಲ್ ಮೇಟ್ ಗಳ
ಬಕೇಟ್ ನಲ್ಲಿ ನೆನೆಸಿಡುವುದು. ಅವರು ತಮ್ಮದೇ ಬನಿಯನ್
ಎಂದು ತೊಳೆದು ಹಾಕುತ್ತಿದ್ದರು. ಒಣಗಿದ ಮೇಲೆ ನಿಧಾನವಾಗಿ
ತೆಗೆದುಕೊಂಡು ಬಂದು ಮಡಿಚಿಟ್ಟುಕೊಳ್ಳುತ್ತಿದ್ದ. ಕೊಳೆ-ಕೊಳೆ
ತೊಳೆ-ತೊಳೆ.
He he.. 🙂 🙂