ಕೊಲ್ಲುವ ರಸ್ತೆಗಳ ಪುರಾಣ: ಅಖಿಲೇಶ್ ಚಿಪ್ಪಳಿ

ಸೊರಬ ತಾಲ್ಲೂಕಿನ ಉಳವಿ ಹೋಬಳಿಯ ಕಾನಳ್ಳಿಯಿಂದ ತನ್ನ ಗಂಡ ಮತ್ತು ಎರಡು ಮುದ್ದು ಮಕ್ಕಳನ್ನು ಕರೆದುಕೊಂಡು ಹೈಸ್ಕೂಲ್ ಮಾಸ್ತರಾದ ತನ್ನ ಅಣ್ಣನಿಗೆ ರಾಖಿ ಕಟ್ಟಲು ಮೊಬೈಕಿನಲ್ಲಿ ಹೊರಟಿದ್ದ ಅಂಗನವಾಡಿ ಟೀಚರ್ ದಾರಿ ಮಧ್ಯದಲ್ಲಿ ಗುಂಡಿ ಹಾರಿದ ಬೈಕಿನಿಂದ ಬಿದ್ದು ತಲೆಗೆ ಏಟಾಗಿ ಸತ್ತೇ ಹೋದಳು. ಹಾಲು ಕುಡಿಯುವ ಮಗುವಿಗೆ ಏನೂ ಆಗಲಿಲ್ಲ. ಆಕೆಗಿನ್ನೂ ಇಪ್ಪತ್ತೇಳು ವರ್ಷವಾಗಿತ್ತಷ್ಟೆ. ಕಳಪೆ ಕಾಮಗಾರಿಯಿಂದಾದ ಹೊಂಡ ಚಿಕ್ಕ ಮಕ್ಕಳನ್ನು ತಬ್ಬಲಿ ಮಾಡಿತು. ಹೀಗೆ ದೇಶದಲ್ಲಿ ನಿತ್ಯವೂ ಸಾವಿರಾರು ಸಾವು ಸಂಭವಿಸುತ್ತದೆ. ಇದರಲ್ಲಿ ದೂರುವುದು ಯಾರನ್ನು? ಬೈಕ್ ಚಾಲನೆ ಮಾಡಿದ ಗಂಡನನ್ನೇ? ಬೈಕ್ ತಯಾರು ಮಾಡಿದ ಕಂಪನಿಯನ್ನೇ? ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರನನ್ನೇ? ಲೋಕೋಪಯೋಗಿ ಇಲಾಖೆಯನ್ನೇ? ಭ್ರಷ್ಟ ಅಧಿಕಾರಿಗಳನ್ನೇ?  ಎಲ್ಲದಕೂ ಮೂಲ ಕಾರಣರಾದ ರಾಜಕಾರಣಿಗಳನ್ನೇ? ಅಥವಾ ಬರೀ ಭ್ರಷ್ಟರನ್ನೇ ಆರಿಸಿ ಕಳುಹಿಸುತ್ತಿರುವ ಜನಸಾಮಾನ್ಯರನ್ನೇ?

ರಸ್ತೆಗಳನ್ನು ಮನುಷ್ಯನ ದೇಹದ ನರ-ನಾಡಿಗಳಿಗೆ ಹೋಲಿಸುತ್ತಾರೆ. ಉತ್ತಮ ಗುಣಮಟ್ಟದ ರಸ್ತೆಗಳು ದೇಶದ ಪ್ರಗತಿ ಸೂಚಕಗಳು. ರಸ್ತೆಯನ್ನು ನಿರ್ಮಿಸುವಾಗ ಹಲವು ಪ್ರಮಾಣಕ (Standard) ಗಳನ್ನು ಪಾಲಿಸಬೇಕಾಗುತ್ತದೆ. ಉತ್ತಮ ಗುಣಮಟ್ಟದ ಟಾರು, ಜೆಲ್ಲಿಗಳ ಮಿಶ್ರಣ ಹಾಗೂ ಪ್ರಮಾಣ ಇತ್ಯಾದಿಗಳು. ಗುತ್ತಿಗೆದಾರನಿಗೆ ಹಲವು ಚಿಂತೆಗಳಿರುತ್ತವೆ. ಇದರಲ್ಲಿ ಮುಖ್ಯವಾದ ಚಿಂತೆಯೆಂದರೆ, ೩೦-೪೦% ಹಣವನ್ನು ಲಂಚದ ರೂಪದಲ್ಲಿ ಸಲ್ಲಿಸಿದ ಮೇಲೂ ತಾನು ಲಾಭ ಮಾಡಿಕೊಳ್ಳುವುದು ಹೇಗೆ? ತಾಲ್ಲೂಕಿನ ಅಧಿನಾಯಕರಾದ ಎಂ.ಎಲ್.ಎಗೆ ಪಾಲು, ಮುಖ್ಯ ಹಾಗೂ ಸಹಾಯಕ ಅಭಿಯಂತರಿಗೆ ಪಾಲು, ಪ್ರತಿ ಟೇಬಲ್ ಕುರ್ಚಿ ಕಡೆಗೆ ಟೀ ತರುವ ಜವಾನನಿಗೂ ಪಾಲು ನೀಡಬೇಕು ಹಾಗೂ ಎ ಕ್ಲಾಸ್ ಗುತ್ತಿಗೆದಾರನೆಂಬ ಬಿರುದಿಗೆ ಪಾತ್ರನಾಗಿ ಐಷರಾಮಿ ಕಾರು ಕೊಳ್ಳಬೇಕು. ಕೆಲವೊಮ್ಮೆ ರಾಜಕೀಯ ಅಧಿನಾಯಕರ ರಾತ್ರಿ ಖರ್ಚುಗಳನ್ನೂ ಗುತ್ತಿಗೆದಾರ ನೋಡಿಕೊಳ್ಳಬೇಕು. ಭಾರತದಂತಹ ದೊಡ್ಡ ರಾಷ್ಟ್ರಗಳಲ್ಲಿ ಅಥವಾ ದೊಡ್ಡ-ದೊಡ್ಡ ರಾಜ್ಯಗಳಲ್ಲಿ ಕೆಲವೊಮ್ಮೆ ಏಕರೀತಿ ನಿಯಮಗಳು ಸೂಕ್ತವಾಗುವುದಿಲ್ಲ. ಅತಿ ಕಡಿಮೆ ಮಳೆ ಬೀಳುವ ಪ್ರದೇಶಕ್ಕೂ – ಅತಿಹೆಚ್ಚು ಮಳೆ ಬೀಳುವ ಪ್ರದೇಶಕ್ಕೂ ಒಂದೇ ನಿಯಮ ಮಾಡಿದಾಗ ಯೋಜನೆಗಳು ಹಾದಿ ತಪ್ಪುವ ಸಾಧ್ಯತೆ ಹೆಚ್ಚು. ರಸ್ತೆಯ ವಿಷಯಕ್ಕೆ ಬಂದಾಗ ಹೆಚ್ಚು ಕಡಿಮೆ ಎಲ್ಲಾ ರಸ್ತೆಗಳು ಮಳೆಗಾಲದ ನಂತರ ರಿಪೇರಿ ಕಾಣುತ್ತವೆ. ಮಲೆನಾಡಿನ ರಸ್ತೆಗಳ ಹೊಂಡಗಳಲ್ಲಿ ಗಿಡ ನೆಡುವುದರ ಮೂಲಕ ಚಾಲಕರು, ಜನಸಾಮಾನ್ಯರು ತಮ್ಮ ಪ್ರತಿಭಟನೆಯನ್ನು ದಾಖಲಿಸುತ್ತಾರೆ. ಹಾಗೆಯೇ ಲೋಕೋಪಯೋಗಿ ಇಲಾಖೆಯಲ್ಲಿ ಬಹಳ ಹಣದ ಹರಿವಿದೆ. ಹೆಸರೇನೋ ಲೋಕೋಪಯೋಗಿ ಆದರೆ ವಾಸ್ತವದಲ್ಲಿ ಲೋಕಕ್ಕೆ ಉಪಯೋಗವಾಗುವ ಹಾಗೆ ಇಲಾಖೆ ನಡೆದುಕೊಳ್ಳುವುದಿಲ್ಲ. ಮೇಲೆ ಕುಳಿತ ದೊಡ್ಡ ಇಂಜಿನಿಯರ್‌ಗೆ ವಾಸ್ತವ ಸಂಗತಿಯ ಅರಿವು ಇರುವುದಿಲ್ಲ. ರಸ್ತೆಯ ಉದ್ದಗಲಕ್ಕೆ ಅಗತ್ಯವಿರುವ ಜೆಲ್ಲಿ-ಟಾರುಗಳನ್ನು ಉಪಯೋಗಿಸಿ ರಸ್ತೆಗಳನ್ನು ನಿರ್ಮಿಸಲು ಹಾಲಿ ವ್ಯವಸ್ಥೆಯಲ್ಲಿ ಸಾಧ್ಯವಾಗುವುದಿಲ್ಲ. ಈಗೀಗ ಭ್ರಷ್ಟಾಚಾರದ ಬಗ್ಗೆ ಜನರಲ್ಲೂ ಸಾಫ್ಟ್ ಕಾರ್ನರ್ ಭಾವನೆ ವ್ಯಕ್ತವಾಗುತ್ತಿರುವುದು ಖೇದದ ವಿಚಾರವಾಗಿದೆ. ಅಂದರೆ ಲಂಚ ಪಡೆಯುವುದು ತಪ್ಪು ಎಂಬ ಭಾವನೆ ಸಾರ್ವತ್ರಿಕವಾಗಿ ಮರೆಯಾಗುತ್ತಿರುವುದು ನೈತಿಕ ದಿವಾಳಿತನದ ಸಂಕೇತವಾಗಿದೆ. 

ಮೊನ್ನೆ ಭಾನುವಾರ ಕೃಷ್ಣಜನ್ಮಾಷ್ಠಮಿಯಂದು ಮನೆಮಂದಿಯೆಲ್ಲಾ ದೇವಸ್ಥಾನಕ್ಕೆ ಹೋಗಿದ್ದರು. ಚಾನಲ್ ಬದಲಿಸುತ್ತಿರುವಾಗ ಮೂರ್ಖರ ಪೆಟ್ಟಿಗೆಯ ಅದ್ಯಾವುದೋ ಚಾನೆಲ್‌ನಲ್ಲಿ ಕಮಲಹಾಸನ್ ಅಭಿನಯಿಸಿದ ಹಿಂದೂಸ್ಥಾನಿ ಎಂಬ ಸಿನೆಮಾ ಪ್ರಸಾರವಾಗುತ್ತಿತ್ತು. ಇದರಲ್ಲಿ ಭ್ರಷ್ಟರ ವಿರುದ್ಧ ಹೋರಾಡುವ ಸ್ವಾತಂತ್ರ್ಯಯೋಧ ಅಂತಿಮವಾಗಿ ಕಾನೂನನ್ನು ಕೈಗೆ ತೆಗೆದುಕೊಂಡು ಆರ್.ಟಿ.ಓ. ಇನ್ಸ್‌ಪೆಕ್ಟರ್ ಆದ ತನ್ನ ಮಗನನ್ನೇ ಬಲಿತೆಗೆದುಕೊಳ್ಳುವ ದೃಶ್ಯವಿದೆ. ಸಿನೆಮಾದ ಸಂದೇಶ ಲಂಚ – ಕೊಡುವುದೂ ಮತ್ತು ಪಡೆಯುವುದೂ ಎರಡೂ ಘೋರ ಅಪರಾಧಗಳು. ಸರ್ಕಾರಿ ಆಸ್ಪತ್ರೆಯಲ್ಲಿ ಲಂಚ ನೀಡದಿರುವುದಕ್ಕೆ ತನ್ನ ಮಗಳನ್ನೇ ಕಳೆದುಕೊಂಡು ರೋಧಿಸುವ ದೃಶ್ಯ ಎಂಥವರ ಮನಸ್ಸನ್ನು ಕಲಕುತ್ತದೆ. 

ನಮ್ಮಲ್ಲಿ ನೇರ ರಸ್ತೆಗಳು ಕಡಿಮೆ. ಸುತ್ತು-ಬಳಸಿ ಹೋಗುವುದೇ ಹೆಚ್ಚು. ಮಲೆನಾಡಿನಲ್ಲಿ ರಸ್ತೆಗಳು ಯಾಕೆ ಈ ಪರಿ ಓರೆ-ಕೋರೆಗಳಿಂದ ಕೂಡಿರುತ್ತವೆ ಎನ್ನುವುದಕ್ಕೆ ಹಿರಿಯ ಸ್ನೇಹಿತರೊಬ್ಬರು ತರ್ಕಿಸಿ ಉತ್ತರಿಸಿದ್ದಾರೆ. ಆಗಿನ ಎತ್ತಿನ ಗಾಡಿ ಓಡಿಯಾಡಿದ  ರಸ್ತೆಯೇ ಕ್ರಮೇಣ ಪಂಚಾಯ್ತಿ ರಸ್ತೆಯಾಗಿ ಮಾರ್ಪಾಟಾಗಿದೆ.  ಮೊದಲು ಪಂಚಾಯ್ತಿ ರಸ್ತೆ, ಆಮೇಲೆ ಜಿಲ್ಲಾಪಂಚಾಯ್ತಿ ರಸ್ತೆ, ಮುಂದೆ ಇದೇ ರಸ್ತೆ ಲೋಕೋಪಯೋಗಿ ಇಲಾಖೆಗೆ ವರ್ಗಾವಣೆಗೊಂಡು ಮೇಲ್ದರ್ಜೆಗೇರುತ್ತದೆ. ಮೊದಲು ಎತ್ತಿನ ಗಾಡಿಗೆ ಮಧ್ಯದಲ್ಲಿ ಒಂದು ಹಳ್ಳವೋ ಅಥವಾ ಬಿದಿರು ಮಟ್ಟಿಯೋ ಅಡ್ಡ ಬಂದರೆ ಅದನ್ನು ಸುತ್ತು-ಬಳಸಿ ಹೋಗುತ್ತಿತ್ತು. ಪಂಚಾಯ್ತಿಯವರು ರಸ್ತೆ ಮಾಡುವಾಗ ಇದೇ ಗಾಡಿ ರಸ್ತೆಗೆ ಎರಡೂ ಬದಿ ಚರಂಡಿ ತೆಗೆದು ಅಧಿಕೃತ ರಸ್ತೆ ಎಂದು ಹೆಸರಿಟ್ಟರು.  ಜಿಲ್ಲಾ ಪಂಚಾಯ್ತಿಯವರಾದರೂ ಓರೆ-ಕೋರೆಗಳನ್ನು ಸರಿ ಮಾಡಿ ಪಕ್ಕಾ ರಸ್ತೆಯನ್ನು ಮಾಡಬಹುದಿತ್ತು. ಖರ್ಚು ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಅದೇ ಗಾಡಿ ರಸ್ತೆಯನ್ನೇ ಮೇಲ್ದರ್ಜೆಗೇರಿಸಿ ಕೈ ತೊಳೆದುಕೊಂಡರು. ಇನ್ನು ಲೋಕೋಪಯೋಗಿ ಇಲಾಖೆಯೂ ನೇರ ರಸ್ತೆ ಮಾಡುವ ಸಾಹಸಕ್ಕೆ ಕೈ ಹಾಕಲಿಲ್ಲ. ತಮಾಷೆಯಾಗಿ ಕಾಣುವ ಈ ತರ್ಕ ನಿಜವೂ ಹೌದು. 

ನಮ್ಮಲ್ಲಿ ಲಭ್ಯವಿರುವ ಸಂಪತ್ತಿನಿಂದ ರಸ್ತೆಗಳು ಆಗುವುದಿಲ್ಲ – ಬದಲಿಗೆ ರಸ್ತೆಗಳಿಂದಲೇ ನಮ್ಮ ಸಂಪತ್ತು ಹೆಚ್ಚುತ್ತದೆ ಎನ್ನುವ ಮಾತನ್ನು ಅಬ್ರಾಹಂ ಲಿಂಕನ್ ಹೇಳಿದ್ದರು. ಆರ್ಥಿಕ ದೃಷ್ಟಿಯಿಂದ ನೋಡಿದಾಗ ಈ ಮಾತು ಸತ್ಯ ಕೂಡ. ಆದರೂ ಸಾಧ್ಯವಿರುವ ಕಡೆ ರಸ್ತೆಗಳನ್ನು ನೇರವಾಗಿಯೇ ನಿರ್ಮಿಸಬೇಕು. ಸುತ್ತು-ಬಳಸುವ ರಸ್ತೆಯಿಂದ ವೃಥಾ ಖರ್ಚು ಹೆಚ್ಚು. ಉದಾಹರಣೆಗೆ ೧೦ ಕಿ.ಮಿ. ಸುತ್ತು ಬಳಸು ರಸ್ತೆಯನ್ನು ನೇರ ಮಾಡಿದಾಗ ಅರ್ಧ ಕಿ.ಮಿ. ಕಡಿಮೆಯಾಗಿ ೯.೫ ಕಿ.ಮಿ.ಯಾಗುತ್ತದೆ ಎಂದಿಟ್ಟುಕೊಳ್ಳೋಣ. ಓಡಿಯಾಡುವ ಪ್ರತಿ ವಾಹನವೂ ಅಷ್ಟು ಇಂಧನವನ್ನು ಉಳಿಸಿದಂತಾಯಿತು. ಲೆಕ್ಕ ಹಾಕಿದರೆ ೧೦ ವರ್ಷಗಳಲ್ಲಿ ಉಳಿಯುವ ಇಂಧನದ ಹಣದಲ್ಲಿ ಉತ್ಕ್ರಷ್ಠ ಗುಣಮಟ್ಟದ ಶಾಶ್ವತ ರಸ್ತೆಯನ್ನೇ ನಿರ್ಮಿಸಬಹುದು. 

ಸರ್ಕಾರಗಳನ್ನು ರಚಿಸಿ ಒಂದು ದೇಶವನ್ನೋ ಅಥವಾ ರಾಜ್ಯವನ್ನೋ ಆಳಲು ಬಿಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುಮುಖ್ಯ ಅಂಶ. ಜನತೆಯ ಪರವಾಗಿರುವ ತೀರ್ಮಾನಗಳನ್ನು ಕೈಗೊಂಡು ಅಳವಡಿಸಲು ಜನರು ನೀಡಿದ ತೀರ್ಪು. ಅಂದ ಮೇಲೆ ಜನರಿಂದ ಆರಿಸ್ಪಟ್ಟ ಜನಪ್ರತಿನಿಧಿಗಳು ಜನಹಿತ-ಲೋಕಹಿತವನ್ನೇ ಬಯಸಬೇಕು. ಜನರಿಗೆ ಸಹ್ಯಯೋಗ್ಯ ವಾತಾವರಣವನ್ನು ಕಲ್ಪಿಸುವುದು ಸರ್ಕಾರಗಳ ಆದ್ಯ ಕರ್ತವ್ಯ. ಶುದ್ಧ ಗಾಳಿ-ನೀರು-ಆಹಾರ ಇತ್ಯಾದಿಗಳು ಮೂಲಭೂತ ಅವಶ್ಯಕತೆಗಳಾದರೆ, ಸಾಮಾಜಿಕ, ಆರ್ಥಿಕ, ಆಹಾರ, ಅಭಿವ್ಯಕ್ತಿ ಸ್ವಾತಂತ್ರ್ಯ, ಮಾನವ ಹಕ್ಕು, ಪ್ರಾಣಿಗಳ ಹಕ್ಕು, ಸುರಕ್ಷತೆ, ಭದ್ರತೆ ಇತ್ಯಾದಿಗಳನ್ನು ಪೂರೈಸುವುದು ಸರ್ಕಾರದ ನಂತರದ ಆದ್ಯತೆ. ಈಗಿನ ಬದುಕು ಎಂದರೆ – ನಾಳೆಯ ಅವಸಾನ ಅಲ್ಲ. ಅಂದರೆ ಯಾವುದೇ ಯೋಜನೆಗಳನ್ನು ರೂಪಿಸುವಾಗಲೂ ನಮ್ಮ ಮುಂದಿನ ತಲೆಮಾರು ಅಥವಾ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಯೋಜಿಸಬೇಕಾಗುತ್ತದೆ. ಆದರೆ ಹೀಗಾಗುತ್ತಿಲ್ಲ. ಯಾಕೆ ಅಂದರೆ ಮತ್ತದೇ ಗಾಡಿ ರಸ್ತೆಯ ಕತೆಯೇ ಮುಂದುವರೆಯುತ್ತದೆ. ಹಿಂದಿನ ಮುಖ್ಯಮಂತ್ರಿ ಇಷ್ಟು ಲೂಟಿ ಹೊಡೆದು ಹೋದ. ಈಗ ನಾನು ಇಂತಿಷ್ಟು ಲೂಟಿ ಮಾಡಲೇ ಬೇಕು ಎಂಬ ಮನೋಭಾವ. 

ಕಳಪೆ ರಸ್ತೆಯಿಂದಾಗುವ ಪರಿಸರ ಮಾಲಿನ್ಯವೇನು ಕಡಿಮೆಯೇ? ಸರಿ, ರಸ್ತೆ ನಿರ್ಮಿಸುವಾಗ ಒಂದಿಷ್ಟು ಮರಗಳನ್ನು ಕಡಿಯುವುದು ಅನಿವಾರ್ಯ. ಹಾಗೆ ದೊಡ್ಡ-ದೊಡ್ಡ ಯಂತ್ರಗಳನ್ನು ಬಳಸುವುದು ಅಗತ್ಯ. ಅತ್ಯಾಧುನಿಕ ಆಮದು ಯಂತ್ರಗಳನ್ನು ಬಳಸಿ, ಪೆಟ್ರೋಲಿಯಂ ಉಪಉತ್ಪನ್ನ ಹಾಗೂ ಜಲ್ಲಿ ಇತ್ಯಾದಿ ನೈಸರ್ಗಿಕ ಸಂಪತ್ತನ್ನು ಉಪಯೋಗಿಸಿ ಒಂದು ಕಳಪೆ ರಸ್ತೆಯನ್ನು ನಿರ್ಮಿಸಿದರೆ, ಆ ರಸ್ತೆ ವರ್ಷದಲ್ಲೇ ಹಾಳಾಗಿ, ಗುಂಡಿ ಬಿದ್ದು, ರಸ್ತೆಯಲ್ಲಿ ಸಾಗಾಡುವ ವಾಹನಗಳು ಹಾಳಾಗಿ, ಇಂಧನ ಕ್ಷಮತೆ ಕಡಿಮೆಯಾಗಿ ಇತ್ಯಾದಿ-ಇತ್ಯಾದಿಗಳಿಂದ ಒಂದು ದೇಶದ ಅಥವಾ ರಾಜ್ಯದ ಒಟ್ಟೂ ಅಭಿವೃದ್ಧಿಯೇ ಕುಂಠಿತವಾಗುತ್ತದೆ. ಅಂದಾದುಂಧಿ ಅಭಿವೃದ್ಧಿವಾದಿಗಳ ದೃಷ್ಟಿಯಿಂದಲೂ ಇದು ಸಲ್ಲ. ಒಟ್ಟು ದೇಶದ ಜಿಡಿಪಿ ಸೂಚ್ಯಂಕವೇ ಉದುರಿ ಬೀಳುವಷ್ಟರ ಮಟ್ಟಿಗೆ ರಸ್ತೆಯ ಪಾತ್ರವಿದೆ ಎಂದರೆ ಅತಿಶಯೋಕ್ತಿಯಾಗಲಾರದು. 

ರಸ್ತೆ ನಿರ್ಮಿಸುವಾಗ ಕೆಲವೊಂದು ಮೂಲಭೂತ ಅಂಶಗಳನ್ನು ದೃಷ್ಟಿಯಲ್ಲರಿಸಿಕೊಳ್ಳುವುದು ಸರಿಯಾದ ಕ್ರಮ:

ರಸ್ತೆ ಮಾಡುವುದಕ್ಕಿಂತಲೂ ಪೂರ್ವದಲ್ಲಿ ಸರಿಯಾದ ಚರಂಡಿಯನ್ನು ನಿರ್ಮಿಸುವುದು ಬಹುಮುಖ್ಯ. ಮಳೆಗಾಲದ ನೀರು ರಸ್ತೆಯ ಮೇಲೆ ಹರಿಯದಂತೆ ನೋಡಿಕೊಳ್ಳುವುದು. ಮೇಲಿನಿಂದ ಬಿದ್ದ ಮಳೆಹನಿಗಳಿಂದ ರಸ್ತೆ ಹಾಳಾಗುವುದಿಲ್ಲ. ಕೆಲ ರಾಜಕಾರಣಿಗಳು ಮತ್ತು ಗುತ್ತಿಗೆದಾರರು ರಸ್ತೆ ಹಾಳಾಗಲು ವಿಪರೀತ ಮಳೆ ಕಾರಣ ಎಂದು ಹೇಳುತ್ತಾರೆ. ಆದರೆ ಇದು ನಿಜವಲ್ಲ. ಯಾವುದೇ ತಂತ್ರಜ್ಞಾನವಿಲ್ಲದ ಆ ಕಾಲದಲ್ಲಿ ಬ್ರಿಟೀಷ್ ಆಡಳಿತದಲ್ಲಿ ನಿರ್ಮಿಸಿದ ರಸ್ತೆಗಳು ಇಂದಿಗೂ ಹಾಳಾಗಿಲ್ಲ.

ನಂತರದಲ್ಲಿ ರಸ್ತೆ ನಿರ್ಮಿಸುವುದಕ್ಕೂ ಮುನ್ನ ಅಡಿಪಾಯವನ್ನು ಗಟ್ಟಿಗೊಳಿಸಿಕೊಳ್ಳಬೇಕು. ಅಡಿಪಾಯವೇ ಸರಿಯಿಲ್ಲದಿದ್ದರೆ, ಮೇಲಿನಿಂದ ಎಷ್ಟೇ ಚೆನ್ನಾಗಿ ರಸ್ತೆ ನಿರ್ಮಿಸಿದರೂ ಕಾಲಾನಂತರದಲ್ಲಿ ಹಾಳಾಗುವುದು ನಿಶ್ಚಿತ. ಸ್ಥಳೀಯವಾಗಿ ಲಭ್ಯವಿರುವ ಗೊಚ್ಚು ಮಣ್ಣನ್ನು ಮೊದಲಿಗೆ ಹಾಕಬೇಕು. ಹೆಚ್ಚಿನ ಬಾರಿ ದೂರದಿಂದ ಮಣ್ಣು ತರುವ ಕೆಲಸ ದುಬಾರಿಯೆಂದು ಕಂತ್ರಾಟುದಾರರು ಇತರೆ ತೊಳೆದುಹೋಗುವ ಮಣ್ಣನ್ನು ಉಪಯೋಗಿಸುತ್ತಾರೆ. ಗೊಚ್ಚು ಮಣ್ಣನ್ನು ಹಾಕಿದ ನಂತರದಲ್ಲಿ ಹದವಾಗಿ ನೀರನ್ನು ಕುಡಿಸಿ ದಮಾಸು ಮಾಡಬೇಕು. ದಮಾಸು ಮಾಡಲು ಈಗ ಯಾಂತ್ರಿಕೃತ ರೋಡ್ ರೋಲರ್‌ಗಳಿವೆಯಾದರೂ ಗುಣಮಟ್ಟದ ಕೆಲಸ ಕಂಡುಬರುತ್ತಿಲ್ಲ. ಮತ್ತು ಒಂದು ಪ್ರದೇಶದ ಇಡೀ ವರ್ಷದ ಹವಾಮಾನವನ್ನು ಅರಿತು ರಸ್ತೆಯನ್ನು ನಿರ್ಮಿಸಬೇಕಾಗುತ್ತದೆ. ಬಿಸಿಲು-ಚಳಿ-ಮಳೆಗೆ ತಡೆಯುವಂತಹ ರಸ್ತೆ ನಿರ್ಮಿಸುವುದು ದುಬಾರಿಯದರೂ, ಶಾಶ್ವತವಾಗಿ ನಿಲ್ಲುತ್ತದೆ. ತಾತ್ಕಾಲಿಕವಾದ ಲಾಭಕ್ಕಾಗಿ ಹೆಚ್ಚಿನ ಬಾರಿ ಕಳಪೆ ಕಾಮಾಗಾರಿಯಿಂದಾಗಿ ರಸ್ತೆಗಳು ಎಕ್ಕುಟ್ಟಿಹೋಗುತ್ತವೆ. 

ಇನ್ನೊಂದು ಮುಖ್ಯ ವಿಚಾರವೆಂದರೆ, ಯಾವುದೇ ಹೊಸ ರಸ್ತೆಯಲ್ಲಿ ಬರೀ ಲಘು ವಾಹನಗಳೇ ಚಲಿಸುವುದಿಲ್ಲ. ಬರೀ ಬೈಕ್‌ಗಳು ಅಥವಾ ಕಾರುಗಳಿಗೆ ಹೇಳಿ ಮಾಡಿಸಿದ ರಸ್ತೆಗಳು ಲಾರಿ-ಬಸ್ಸು-ಟ್ರಕ್‌ಗಳಂತಹ ಭಾರಿಗಾತ್ರದ ವಾಹನಗಳ ಭಾರಕ್ಕೆ ರಸ್ತೆಗಳು ಹಾಳಾಗುವ ಸಂಭವ ಹೆಚ್ಚು. ಆದ್ದರಿಂದ ದೂರದೃಷ್ಟಿಯನ್ನು ಇಟ್ಟುಕೊಂಡು ಮುಂದೆ ಸಂಭಾವ್ಯವಾಗಿ ಚಲಿಸಬಲ್ಲ ಭಾರಿಗಾತ್ರದ ವಾಹನಗಳನ್ನು ಗಮನದಲ್ಲಿಟ್ಟುಕೊಂಡು ತಕ್ಕುದಾದ ರಸ್ತೆಗಳನ್ನು ನಿರ್ಮಿಸಬೇಕಾಗುತ್ತದೆ. ರಿಪೇರಿ ಮಾಡುವ ಕೆಲಸ ಯಾವಾಗಲೂ ವೆಚ್ಚದಾಯಕವಾಗಿರುತ್ತದೆ. ಆದ್ದರಿಂದ ಮೂಲದಲ್ಲೇ ಈ ಅಂಶಗಳನ್ನು ಗಮನಿಸಿಕೊಂಡು ಕಾರ್ಯವೆಸಗಬೇಕಾಗುತ್ತದೆ. 

ಕಡೆಯದಾಗಿ, ಉಸ್ತುವಾರಿ. ಚೆನ್ನಾಗಿ ನಿರ್ಮಿಸಿದ ರಸ್ತೆಗಳು ಮರುಉಸ್ತುವಾರಿಯಿಲ್ಲದಿದ್ದಲ್ಲಿ ಹಾಳಾಗುತ್ತವೆ. ಚರಂಡಿಯಲ್ಲಿ ಕಟ್ಟಿಕೊಂಡ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ನೀರು ರಸ್ತೆಯ ಮೇಲೆ ಹರಿಯುವ ಸಾಧ್ಯತೆಗಳನ್ನು ನಿವಾರಿಸುವ, ಅಥವಾ ಇನ್ನಿತರೆ ಕಾರಣಗಳಿಂದಾಗಿ ಹಾಳಾದ ರಸ್ತೆಯನ್ನು ತಕ್ಷಣದಲ್ಲಿ ರಿಪೇರಿ ಮಾಡುವ ಕೆಲಸವನ್ನು ನಿಯಮಿತವಾಗಿ ಮಾಡಬೇಕಾಗುತ್ತದೆ. ರಸ್ತೆಗಳು ಮಾನವನಿಗೆ ಮತ್ತು ದೇಶದ ಅಭಿವೃದ್ಧಿಗೆ ಪೂರಕವಾದ ಅಂಶವಾದರೂ, ಭೂಮಿಯ ಮೇಲೆ ವಾಸಿಸುವ ಇನ್ನಿತರೆ ಜೀವಿಗಳನ್ನು ಗಮನದಲ್ಲಿಟ್ಟುಕೊಂಡು ರಸ್ತೆ ನಿರ್ಮಾಣ ಮಾಡಬೇಕಾಗುತ್ತದೆ. ಅರಣ್ಯದ ನಡುವೆ ಹಾದುಹೋಗುವ ರಸ್ತೆಗಳ ಕೆಳಭಾಗಗಳಲ್ಲಿ ಅಲ್ಲಲ್ಲಿ ಪ್ರಾಣಿಗಳಿಗೆ ಚಲಿಸಲು ಅನುಕೂಲವಾಗುವಂತೆ ಅಡ್ಡಡ್ಡವಾಗಿ ಸುರಂಗಗಳನ್ನು ನಿರ್ಮಿಸುವುದರಿಂದ ರಸ್ತೆ ಅಪಘಾತಗಳಲ್ಲಿ ವನ್ಯಪ್ರಾಣಿಗಳು ಹತ್ಯೆಯಾಗುವುದನ್ನು ತಪ್ಪಿಸಬಹುದಾಗಿದೆ. ಯೋಜನಬದ್ಧವಾಗಿ ನಿರ್ಮಿಸಿದ ಒಂದು ರಸ್ತೆಯಿಂದ ಹಲವು ತರಹದ ಮಾಲಿನ್ಯಗಳನ್ನು ತಪ್ಪಿಸಬಹುದಾಗಿದೆ. ಭದ್ರವಾದ ಒಳ್ಳೆಯ ಗುಣಮಟ್ಟದ ರಸ್ತೆಗಳು ನಿಜವಾಗಲೂ ದೇಹದ ನರ-ನಾಡಿಯಿದ್ದಂತೆ,  ರಸ್ತೆಗಳು ಆಯಾ ದೇಶ-ರಾಜ್ಯಗಳ ನೈತಿಕ, ಸಾಮಾಜಿಕ, ಆರ್ಥಿಕ ಆರೋಗ್ಯವನ್ನು ಪ್ರತಿಬಿಂಬಿಸುತ್ತವೆ. ಕಳಪೆ ರಸ್ತೆಗಳೆಂದರೆ, ಆ ಪ್ರದೇಶದ ಆರೋಗ್ಯ ಸರಿ ಇಲ್ಲವೆಂದೇ ಅರ್ಥೈಸಬೇಕು. ಉತ್ತಮ ರಸ್ತೆ ನಿರ್ಮಿಸಿ,  ಕಳಪೆ ರಸ್ತೆಯಿಂದಾಗುವ ಅಪಘಾತಗಳನ್ನು  ಹಾಗೂ ಇದರಿಂದ ಅಮಾಯಕರ ಜೀವ ಎರವಾಗುವುದನ್ನು ತಪ್ಪಿಸಬಹುದು. ಜೊತೆಗೆ ದೇಶದ ನೈಸರ್ಗಿಕ ಸಂಪತ್ತನ್ನು ಮಿತವಾಗಿ ಬಳಸಿದಂತೆ ಆಗುವುದು. ಇಂತಹ ಕನಸುಗಳು ನನಸಾಗಲಿ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
prashasti.p
9 years ago

ಓರೆ ಮತ್ತು ನೇರ ರಸ್ತೆಗಳ ಬಗ್ಗೆ ಒಳ್ಳೆಯ ತರ್ಕ ಮಂಡಿಸಿದ್ದೀರ. ಲಂಚಾವತಾರದ ಮತ್ತೊಂದು ರೂಪ ಇನ್ನೊಂದಿಷ್ಟು ಜನರ ಜೀವ ತೆಗೆದ ಪರಿ ಓದಿ ಬೇಸರವಾಯ್ತು

1
0
Would love your thoughts, please comment.x
()
x