ಕೊಲ್ಕತ್ತ-ದಿಘಾ ನಾಲ್ಕು ದಿನದ ಪ್ರವಾಸ (ಭಾಗ 1): ಶಿವು ಕೆ.

ಕೊಲ್ಕತ್ತ ವಿಮಾನ ನಿಲ್ದಾಣದ ೩ಎ ಗಾಜಿನ ಬಾಗಿಲಿಂದ ಹೊರಬರುತ್ತಿದ್ದಂತೆ ಸಣ್ಣಗೆ ಮಳೆ.  ನನಗಾಗಿ ಕಾಯುತ್ತಿದ್ದ "ಅಭಿಜಿತ್ ಡೆ" ಹೆಸರಿನ ನನಗಿಂತ ಸ್ವಲ್ಪ ಹೆಚ್ಚೇ ವಯಸ್ಸಿನ, ಹೆಚ್ಚೇ ಗಾತ್ರದ ಮತ್ತು ಜಾಸ್ತಿ ಬೆಳ್ಳಗಿನ ವ್ಯಕ್ತಿಯೊಬ್ಬ, "ಹಾಯ್ ಶಿವುಜೀ, ಕೆಸಾ ಹೇ, ಪ್ಲೇನ್ ನೇ ಕೊಯಿ ಪ್ರಾಬ್ಲಂ ನಂ ತಾ:  ಸಬ್ ಕುಚ್ ಟೀಕ್ ಹೇನಾ," ಎಂದು ನನ್ನನ್ನು ಗಟ್ಟಿಯಾಗಿ ಬಿಗಿದಪ್ಪಿಕೊಂಡನಲ್ಲ, ಅಲ್ಲಿಗೆ ನನ್ನ ಮನಸ್ಸಿನ ಚಿಂತೆಗಳಲ್ಲಿ ಅರ್ಧದಷ್ಟು ದೂರವಾಗಿತ್ತು. ಮೊದಲ ಬಾರಿಗೆ ನನ್ನ ಮಟ್ಟಿಗೆ ತುಂಬಾ  ದೂರದ ಕೊಲ್ಕತ್ತಗೆ ಪ್ರಯಾಣ ಹೊರಟಿದ್ದೇನಲ್ಲ ಅದಕ್ಕಾಗಿ ಏನನ್ನು ಮರೆಯಬಾರದೆಂದುಕೊಂಡು, ಎರಡು ದಿನದ ಮೊದಲೇ  ನಾನು ತೆಗೆದುಕೊಂಡು ಹೋಗುವ ವಸ್ತುಗಳ ಪಟ್ಟಿಯನ್ನು ಮಾಡಿದ್ದೆ.

ಎರಡು ಲಗೇಜ್ ಬ್ಯಾಗುಗಳು. ಒಂದರಲ್ಲಿ ಐದು ದಿನಕ್ಕಾಗುವ ಬಟ್ಟೆಗಳು, ಇನ್ನೊಂದು ಪುಟ್ಟಬ್ಯಾಗಿನಲ್ಲಿ ವಿಮಾನದ ಟಿಕೆಟ್, ನನ್ನ ವೈಯಕ್ತಿಕ ವಿಳಾಸ ತೋರಿಸುವ ಓಟರ್ ಐಡಿ, ಮೊಬೈಲ್ ಚಾರ್ಚರ್, ಪುಟ್ಟ ಕ್ಯಾಮೆರ ಅದರ ಚಾರ್ಚರ್, ನಾನು ಬೆಳ್ಳಗೆ ಕಾಣಲು ಫೇಸ್ ವಾಸ್, ಪೌಡರ್, ಅಲ್ಲಿ ಪ್ರಯಾಣಿಸುವ ರೈಲಿನಲ್ಲಿ ಬಿಡುವಾದರೆ ಓದಲು ಒಂದೆರಡು ಪುಸ್ತಕಗಳು, ಅಲ್ಲಿನವರಿಗೆ ಕೊಡಲು ನನ್ನ ಪುಸ್ತಕಗಳು ಮತ್ತು ಕಿರುಚಿತ್ರ "ಬೆಳಗಾಯ್ತು ಇನ್ನೂ ನ್ಯೂಸ್ ಪೇಪರ್ ಬಂದಿಲ್ವ" ಸಿಡಿ,……ಹೀಗೆ ಪ್ರತಿಯೊಂದನ್ನು ಮೊದಲೇ ಪಟ್ಟಿ ಮಾಡಿ ಸಿದ್ದಪಡಿಸಿಟ್ಟುಕೊಂಡು ಎಲ್ಲವನ್ನು ಸರಿಯಾಗಿ ಪರೀಕ್ಷಿಸಿಕೊಂಡು ಹೊರಟಿದ್ದರೂ, ಅಲ್ಲಿ ಅಚಾನಕ್ಕಾಗಿ ಎರಡರಲ್ಲಿ ಒಂದು ಬ್ಯಾಗ್ ಕಳೆದುಹೋದರೆ ಅಥವ ವಿಮಾನದಲ್ಲಿ ಹೋಗುವಾಗ ಏನಾದರೂ ತೊಂದರೆಯಾದರೆ ಇರಲಿ ಎಂದುಕೊಂಡು ನನ್ನನ್ನು ಕರೆದ ಕೊಲ್ಕತ್ತದ ಅನೇಕರ ಫೋನ್ ನಂಬರುಗಳನ್ನು ಬರೆದು ನನ್ನ ಶ್ರೀಮತಿಯ ಕೈಗೆ ಕೊಟ್ಟು ಅಲ್ಲಿಂದ ಹೊರಟಿದ್ದೆ.

ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯಲ್ಲಿ  ಹೊರಟೆವಲ್ಲ, ಅಲ್ಲಿಂದ ಶುರುವಾಯ್ತು ನಮ್ಮಿಬ್ಬರ ಮಾತು. ದಾರಿಯಲ್ಲಿ ಸಾಗಿದ ಒಂದುಕಾಲು ಗಂಟೆಯಲ್ಲಿ, ತುಂಬಾ ವರ್ಷಗಳ ನಂತರ ಮತ್ತೆ ಬೇಟಿಯಾಗಿದ್ದೇವೆ ಎನ್ನುವಂತೆ, ನಮ್ಮ ನಡುವೆ ಫೋಟೋಗ್ರಫಿ, ಮನೆ ವಿಚಾರ, ಹೀಗೆ ಎಲ್ಲವನ್ನು ಹಂಚಿಕೊಳ್ಳುತ್ತ ಕೊಲ್ಕತ್ತದ ಹೃದಯ ಭಾಗದಿಂದ ದಕ್ಷಿಣ ೩೫ ಕಿಲೋಮೀಟರ್ ಮೂಲೆಯಲ್ಲಿರುವ ಭಾರಕ್ ಪುರ್ನ ಅಭಿಜಿತ್ ಡೆ ಮನೆ ತಲುಪುವ ಹೊತ್ತಿಗೆ, ನಾವಿಬ್ಬರೂ ಬಾಲ್ಯದ ಗೆಳೆಯರು ಮತ್ತೆ ಬೇಟಿಯಾಗುತ್ತಿದ್ದೇವೇನೋ ಎನ್ನುವಂತ ಒಂದು ನಮಗರಿಯದಂತ ಆತ್ಮೀಯತೆ ನಮ್ಮೊಳಗೆ ಮೂಡಿತ್ತು. ನನಗಂತೂ ಅವರ ಮನೆ ತಲುಪುತ್ತಿದ್ದಂತೆ ಉಳಿದಿದ್ದ ಅರ್ಧ ಚಿಂತೆಯೂ ಸಂಪೂರ್ಣ ಮಾಯವಾಗಿ ತಂದಿರುವ ಎಲ್ಲವೂ ಕಳೆದು ಹೋದರೂ ಇಲ್ಲಿ ನೆಮ್ಮದಿಯಾಗಿ ಇರಬಹುದು ಎನಿಸಿತ್ತು. 

 "ಶಿವು ನಿಮಗೆ ಏನೂ ಅಭ್ಯಂತರವಿಲ್ಲದಿದ್ದಲ್ಲಿ ನಮ್ಮ ಮನೆಯಲ್ಲಿ ಇರಬಹುದು" ನಿಮಗೆ ಇಷ್ಟವಿಲ್ಲದಿದ್ದಲ್ಲಿ ನಮ್ಮ ಇತರ ಜ್ಯೂರಿಗಳಿಗೆ ಹೋಟಲ್ಲಿನಲ್ಲಿ ರೂಂ ವ್ಯವಸ್ಥೆ ಮಾಡಿದಂತೆ ನಿಮಗೆ ವ್ಯವಸ್ಥೆ ಮಾಡುತ್ತೇವೆ" ಎಂದು ಅಭಿಜಿತ್ ಡೇ ಫೋನಿನಲ್ಲಿ ಕೇಳಿದಾಗ, "ನಾನು ನಿಮ್ಮ ಮನೆಯಲ್ಲಿ ಇರುತ್ತೇನೆ" ಎಂದಿದ್ದೆ. ಅದಕ್ಕವರು ಸಂಕೋಚದಿಂದ "ನಮ್ಮಂತಹ ಬಡವನ ಮನೆ, ನಿಮಗೆ ತೊಂದರೆಯಾಗಬಹುದು" 

   ನೋಡಿ ಅಭಿಜಿತ್ ಡೇ ಸರ್, ನಾವು ಯಾವುದೇ ಪ್ರವಾಸಕ್ಕೆ ಹೋದರೂ ಅಲ್ಲೆಲ್ಲಾ ಹೋಟಲ್ ರೂಮಿನಲ್ಲಿಯೆ ಉಳಿದುಕೊಳ್ಳುತ್ತೇವಾದ್ದರಿಂದ ಅದರಲ್ಲಿ ಏನು ವಿಶೇಷವಿಲ್ಲ. ಆದ್ರೆ ಮೊದಲ ಭಾರಿಗೆ ಕಲ್ಕತ್ತದಂತ ದೊಡ್ದ ನಗರಕ್ಕೆ ಬರುತ್ತಿದ್ದೇನೆ. ಅಲ್ಲಿ ನಿಮ್ಮ ಮನೆಯಲ್ಲಿ ನಿಮ್ಮ ಕುಟುಂಬದ ಜೊತೆ ಒಂದೆರಡು ದಿನ ಕಳೆಯುವುದು ನನ್ನ ಸೌಭಾಗ್ಯವೆಂದುಕೊಳ್ಳುತ್ತೇನೆ. ನಮ್ಮಿಬ್ಬರ ನಡುವೆ ಬಡತನ-ಸಿರಿತನವೆಂಬ ಬೇಧಭಾವಗಳಿಲ್ಲ. ನಾನು ಕೂಡ ಒಬ್ಬ ಸಾಮಾನ್ಯ ದಿನಪತ್ರಿಕೆ ವಿತರಕನಷ್ಟೆ., ಮತ್ತೆ ಇದು ನನ್ನ ಬದುಕಿನ ಮದುರವಾದ ನೆನಪಿನ ಕ್ಷಣಗಳಾಗಬಹುದು. ಎಂದು ಅವರ ಮನೆಯಲ್ಲಿಯೇ ಉಳಿದುಕೊಳ್ಳಲು ಒಪ್ಪಿಕೊಂಡಿದ್ದೆ.  

ಯಾವುದೇ ಒಂದು ಹಳ್ಳಿ, ಪಟ್ಟಣ, ನಗರಕ್ಕೆ ಹೋದಾಗ ನಮ್ಮ ಪುಟ್ಟ ಕಣ್ಣುಗಳ ಹೊರನೋಟಕ್ಕೆ ಅವು ಬಹು ಸುಂದರವಾಗಿ ಅಥವ ಕೊಳಕಾಗಿ ಕಾಣಿಸಬಹುದು. ಆದರೆ ಅವುಗಳ ನಿಜವಾದ ಆತ್ಮದ ಒಂದು ಕೋಲ್ಮಿಂಚು, ಭಾವನಾತ್ಮಕ ಅಭಿವ್ಯಕ್ತಿಯ ತುಣುಕನ್ನು ಆಸ್ವಾದಿಸಬೇಕಾದರೆ ಖಂಡಿತವಾಗಿ ಅವುಗಳಲ್ಲಿನ ಒಂದು ಮನೆಯಲ್ಲಿ ಒಂದೆರಡು ದಿನಗಳ ಮಟ್ಟಿಗಾದರೂ ಇದ್ದು ಬರಬೇಕು ಎಂದು ಎಲ್ಲಿಯೋ ಓದಿದ್ದು ನೆನಪಾಗಿತ್ತು ಮತ್ತು ನನ್ನ ಉದ್ದೇಶವೂ ಅದೇ ಆಗಿತ್ತು. "ಹಾವ್ ಜೀ" ಎಂದು ಅವರ ಶ್ರೀಮತಿಯವರು ನನ್ನನ್ನು ಸ್ವಾಗತಿಸಿದಾಗ ಮೊಟ್ಟ ಮೊದಲ ಭಾರಿಗೆ ಕೊಲ್ಕತ್ತದ ಒಂದು ಟಿಪಿಕಲ್ ಮದ್ಯಮ ವರ್ಗದ ಮನೆಯೊಳಕ್ಕೆ ಕಾಲಿಟ್ಟಿದ್ದೆ. ಅಭಿಜಿತ್, ಅವರ ಶ್ರೀಮತಿ, ಒಬ್ಬಳು ಪುಟ್ಟ ಮಗಳು, ಕೆಲಸದವಳಾದರೂ ಮನೆ ಮಗಳೇ ಆಗಿಬಿಟ್ಟಿರುವ ನಮಿತ. ಈ ನಾಲ್ವರ ಪುಟ್ಟ ಮದ್ಯಮ ವರ್ಗದ ಕುಟುಂಬವದು. ಬಿಸಿ ಬಿಸಿ ಟೀ ಕುಡಿದ ನಂತರ ಪುಟ್ಟದಾಗಿ ಸ್ನಾನ ಮಾಡಿ ಸಿದ್ದನಾದೆನಲ್ಲ…ಸಂಕೋಚದಿಂದ ಮಾತಾಡುವ ಅವರ ಶ್ರೀಮತಿ, ಮುಗ್ದತೆಯಿಂದ ತಾನು ಬಿಡಿಸಿದ ಚಿತ್ರವನ್ನು ತೋರಿಸುವ ಅವರ ಮಗಳು, ನಮಗಿಷ್ಟದ ಅಡುಗೆಯನ್ನು ಉತ್ಸಾಹದಿಂದ ಮಾಡುವ ನಮಿತ, ಮನಪೂರ್ವಕವಾಗಿ ನಗುತ್ತ ಮಾತಾಡುವ ಅಭಿಜಿತ್, ಕೇವಲ ಒಂದೇ ಗಂಟೆಯಲ್ಲಿ ಎಲ್ಲರೂ ಆತ್ಮೀಯರಾಗಿ ನಮ್ಮ ಮನೆಯಲ್ಲಿಯೇ ಇರುವಂತೆ ಅನ್ನಿಸತೊಡಗಿತ್ತು. 

ಕೆಲ ನಿಮಿಷಗಳ ನಂತರ ಅಭಿಜಿತ್ ಡೇ ತಮ್ಮ ಇಪ್ಪತ್ತು ವರ್ಷಗಳ ಅನುಭವದಲ್ಲಿ ಕಲಿತ ಫೋಟೊಗ್ರಫಿ, ಹೇಳಿಕೊಟ್ಟ ಗುರುಗಳು, ನಡೆದು ಬಂದ ದಾರಿ ಎಲ್ಲವನ್ನು ಅವರ ಅದ್ಬುತ ಚಿತ್ರಗಳ ಮೂಲಕ ವಿವರಿಸಿದಾಗ ಅವರ ಬಗ್ಗೆ ಹೆಮ್ಮೆಯೆನಿಸಿತ್ತು. ವಿಭಿನ್ನವಾದ ಅಲೋಚನೆ, ಚಿಂತನೆ ಮತ್ತು ಪ್ರಯೋಗಗಳಿಂದ ಮೂಡಿಸುವ ಅವರ ಫೋಟೊಗ್ರಫಿ ಕಲಾಕೃತಿಗಳು, ಅದರಿಂದ ಗಳಿಸಿದ ಪ್ರಶಸ್ತಿಗಳು, ಇತ್ಯಾದಿಗಳನ್ನು ನೋಡಿದ ಮೇಲೆ ಇವರಿಂದ ನಾವೆಲ್ಲ ಕಲಿಯುವುದು ಬಹಳಷ್ಟಿದೆ ಎನಿಸಿತು. ನಮ್ಮ ದಕ್ಷಿಣ ಭಾರತದ ಛಾಯಾಗ್ರಾಹಕರ ಫೋಟೊಗ್ರಫಿ ವಿಧಾನ, ತಯಾರಿ ರೂಪುರೇಷೆಗಳು ಒಂದು ರೀತಿಯಾದರೆ, ಉತ್ತರ ಭಾರತದ ಅದರಲ್ಲೂ ಪಶ್ಚಿಮ ಬಂಗಾಲದವರ ಫೋಟೊಗ್ರಫಿ ವಿಧಾನ, ರೂಪುರೇಷೆಗಳು ಬೇರೆ ತರನದ್ದು. ಅವರ ಚಿತ್ರಗಳನ್ನು ನೋಡಿದಾಗ ಅವರು ಕಲಾತ್ಮಕ ಛಾಯಾಗ್ರಾಹಣದಲ್ಲಿ ನಮಗಿಂತ ಮುಂದಿದ್ದಾರೆ ಅನಿಸುತ್ತದೆ.

ನಡುವೆ ಬೆಂಗಾಲದ ಟಿಪಿಕಲ್ ಶೈಲಿಯ ದಹೀ ಮಸಾಲಪುರಿ ಬಂತು. ಆಹಾ ಎಂಥ ರುಚಿ ಅಂತೀರಿ, ಅದನ್ನು ಸವಿಯುತ್ತಾ, ಅಭಿಜಿತ್ ಫೋಟೊಗಳನ್ನು ನೋಡುತ್ತಾ, ಅವರ ಅನುಭವವನ್ನು ಕೇಳುತ್ತಾ, ವಾಹ್! ಸಮಯ ಹೋಗಿದ್ದೇ ತಿಳಿಯಲಿಲ್ಲ. ನಡುವೆ ಅವರ ಫೋಟೊಗ್ರಫಿ ಕ್ಲಬ್ನ ಅಧ್ಯಕ್ಷರು, ಇತರ ಸದಸ್ಯರು, ವಿಧ್ಯಾರ್ಥಿಗಳ ಬಂದಾಗ ಅವರ ಪರಿಚಯವೂ ಆಯ್ತು.  ರಾತ್ರಿ ಊಟದ ಸಮಯವಾಯ್ತು ಬನ್ನಿ ಎಂದು ಕರೆದಾಗಲೇ ಗೊತ್ತಿಗಿದ್ದು ಆಗಲೇ ರಾತ್ರಿ ಒಂಬತ್ತು ಗಂಟೆ ದಾಟಿದೆಯೆಂದು. ಎಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತೆವು. ನನಗಿಷ್ಟವೆಂದು ಪರೋಟ, ಅಲುಗಡ್ಡೆಯ ಪಲ್ಯ, ಚಿಕನ್ ಮಸಾಲ, ಪಾಯಸ ಮತ್ತು ರಸಗುಲ್ಲ,.ಒಟ್ಟಾರೆಯಾಗಿ ರಾತ್ರಿ ಭರ್ಜರಿ ಊಟವೇ ಆಗಿಹೋಯ್ತು. ಈ ನಡುವೆ ಮಧ್ಯಾಹ್ನ ನಾನು ಬರುವ ಹೊತ್ತಿಗೆ ಶುರುವಾದ ಜಡಿ ಮಳೆ ಆಗಾಗ ಬಿಡುವುದು ಮತ್ತೆ ಶುರುವಾಗುವುದು ಥೇಟ್ ನಮ್ಮ ಬೆಂಗಳೂರಿನ ಮಳೆಯಂತೆ ಕಣ್ಣುಮುಚ್ಚಾಲೆಯಾಡುತ್ತಿತ್ತು. ಹೊರಗೆ ಸ್ವಲ್ಪ ಜೋರು ಮಳೆ ಶುರುವಾದರೂ ನನಗಂತೂ ಪ್ರಯಾಣದ ಆಯಾಸದಿಂದ ಮಲಗಿದ ತಕ್ಷಣವೆ ನಿದ್ರೆ ಆವರಿಸಿತ್ತು. 

   ಮರುದಿನ ಬೆಳಿಗ್ಗೆ ಎಚ್ಚರವಾದಾಗ ಹೊರಗೆ ಸಂಪೂರ್ಣ ಬೆಳಕಾಗಿತ್ತು. ಬಹುಶಃ ನಾನು ಎಂಟುಗಂಟೆಯವರೆಗೂ ಚೆನ್ನಾಗಿ ಮಲಗಿಬಿಟ್ಟಿದ್ದೇನೆ ಅಂದುಕೊಂಡು ಕೈಗಡಿಯಾರವನ್ನು ನೋಡಿಕೊಂಡರೆ ಐದು ಗಂಟೆ ತೋರಿಸುತ್ತಿದೆ! ಇದೇನಿದು ಹೊರಗೆ ನೋಡಿದರೆ ಅಷ್ಟೊಂದು ಬೆಳಕಾಗಿದೆ, ಆದ್ರೆ ಮೊಬೈಲಿನಲ್ಲೂ ಕೂಡ ಐದುಗಂಟೆ ತೋರಿಸುತ್ತಿದೆ! ಕುತೂಹಲದಿಂದ ಎದ್ದು ಬಾಲ್ಕನಿಗೆ ಬಂದು ನೋಡಿದರೆ, ನಿಜವಾಗಿಯೂ ಬೆಳಿಗ್ಗೆ ಐದು ಗಂಟೆಗೆ ಸಂಪೂರ್ಣ ಬೆಳಕಾಗಿಬಿಟ್ಟಿದೆ! ನಮ್ಮ ಬೆಂಗಳೂರಿನಲ್ಲಿ ಬೆಳಗ್ಗೆ ಎಂಟು ಗಂಟೆಯ ಹೊತ್ತಿಗೆ ಆಗುವಷ್ಟು ಬೆಳಕಾಗಿಬಿಟ್ಟಿದೆ. ಸೂರ್ಯೋದಯ ಕಾಣಬಹುದಾ ಎಂದು ಪೂರ್ವದತ್ತ ನೋಡಿದರೆ ದಟ್ಟವಾದ ಮೋಡದ ವಾತಾವರಣ, ಈ ಮಳೆಗಾಲದಲ್ಲಿ ಹೀಗಾದರೆ ಮೋಡಗಳಿಲ್ಲದ ಬೇಸಿಗೆ ಹೇಗಿರಬಹುದು ಎಂದು ಕಲ್ಪಿಸಿಕೊಂಡರೆ ಬಹುಶಃ ನಮ್ಮ ಬೆಂಗಳೂರಿನ ಒಂಬತ್ತು-ಹತ್ತು ಗಂಟೆಯಲ್ಲಿ ಕಾಣುವ ಬೆಳಕು ಇಲ್ಲಿ ಮುಂಜಾನೆ ನಾಲ್ಕು-ಐದು ಗಂಟೆಗೆ ಕಾಣಬಹುದೇನೊ! ಈ ಸಮಯದಲ್ಲಿ ಬೆಂಗಳೂರು ಹೇಗಿರಬಹುದು? ನಮ್ಮ ದಿನಪತ್ರಿಕೆ ಹಂಚುವ ಹುಡುಗರು ಏನು ಮಾಡುತ್ತಿರಬಹುದೆಂದು ನೆನಪಿಸಿಕೊಂಡರೆ, ಕತ್ತಲಲ್ಲಿ ಸಪ್ಲಿಮೆಂಟರ್ ಹಾಕುವ ನಂತರ ಜೋಡಿಸಿಕೊಳ್ಳುತ್ತಾ, ತಲೆಹರಟೆ ಮಾಡುತ್ತಾ, ಸಿದ್ದವಾಗುತ್ತಿರುವ ಅನೇಕ ಪುಟ್ಟ ಪುಟ್ಟ ಚಿತ್ರಗಳು ಮನಸ್ಸಿನಲ್ಲಿ ಹಾದು ಹೋದವು. ಇಷ್ಟು ಬೇಗ ಎದ್ದು ಏನು ಮಾಡುವುದು ಎಂದು ಮತ್ತೆ ಮಲಗಿದೆ. ಎಚ್ಚರವಾದಾಗ ಏಳುಗಂಟೆ. ನಾವು ಕೊಲ್ಕತ್ತದಿಂದ ನೂರತೊಂಬತ್ತು ಕಿಲೋಮೀಟರ್ ದೂರದಲ್ಲಿ ಸಮುದ್ರ ಕಿನಾರೆಗೆ ಅಂಟಿಕೊಂಡಿರುವ ಸುಂದರ ಮತ್ತು ಪುಟ್ಟ ದಿಘ ಟೌನಿಗೆ ಹೋಗಬೇಕಿತ್ತು. ಅಲ್ಲಿಯೇ ನಮ್ಮ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯ ತೀರ್ಪುಗಾರಿಕೆಗಳು ನಡೆಯುವುದು ನಿಗದಿಯಾಗಿತ್ತು. 

ನಾನು ಮತ್ತು ಅಭಿಜಿತ್ ಬೆಳಿಗ್ಗೆ ಒಂಬತ್ತು ಗಂಟೆಯ ಹೊತ್ತಿಗೆ ಬೆಳಗಿನ ತಿಂಡಿ ಮುಗಿಸಿ ಸಿದ್ದರಾಗುವ ಹೊತ್ತಿಗೆ ಅವರ ಕ್ಲಬ್ಬಿನ ಇನ್ನಿತರ ಸದಸ್ಯರು ನಮ್ಮನ್ನು ಕೂಡಿಕೊಂಡರು. ನಮ್ಮ ಲಗ್ಗೇಜುಗಳನ್ನು ಹೊತ್ತು ರೈಲು ನಿಲ್ದಾಣದ ಕಡೆಗೆ ಹೊರಟೆವು. ಛಾಯಗ್ರಾಹಕ ಗೆಳೆಯ ಅಭಿಜಿತ್ ಮನೆಯಿಂದ ಒಂದು ಕಿಲೋಮೀಟರ್ ದೂರ ರೈಲು ನಿಲ್ದಾಣಕ್ಕೆ ಹೋಗಲು ಸೈಕಲ್ ರಿಕ್ಷಾ ಹತ್ತಿದೆವು. ಸ್ವಲ್ಪ ದೂರದ ಮುಖ್ಯರಸ್ತೆಗೆ ಹೋಗುತ್ತಿದ್ದಂತೆ ಒಂದರ ಹಿಂದೆ ಒಂದು ಎದುರಿಗೆ ಪಕ್ಕದಲ್ಲಿ ಹೀಗೆ ಎಲ್ಲೆಂದರಲ್ಲಿ ಬೆಲ್ ಹೊಡೆಯುತ್ತಾ ಸಾಗುವ ಸೈಕಲ್ ರಿಕ್ಷಾಗಳು ಆ ಕ್ಷಣದಿಂದ ನನಗೆ ಕುತೂಹಲದ ವಸ್ತುಗಳಾದವು.  ನೂರಾರು ವರ್ಷಗಳ ಇತಿಹಾಸವುಳ್ಳ ಕೊಲ್ಕತ್ತದ ಪಳಯುಳಿಕೆಯ ಭಾಗವಾಗಿರುವ ಇಲ್ಲಿನ ಸೈಕಲ್ ರಿಕ್ಷಾಗಳು ಮುಂಜಾನೆ ಐದು ಗಂಟೆಗೆ ಪ್ರಾರಂಭವಾದರೆ ರಾತ್ರಿ ಹನ್ನೊಂದುಗಂಟೆಯವರೆಗೆ ನಿಮ್ಮನ್ನು ಒಂದು ಕಿಲೋಮೀಟರಿನಿಂದ ಐದಾರು ಕಿಲೋಮೀಟರ್ ದೂರದವರೆಗೆ ಲಗ್ಗೇಜು ಸಮೇತ ನಿಮ್ಮನ್ನು ಸಾಗಿಸುತ್ತವೆ.

ಇಪ್ಪತ್ತರೊಳಗಿನ ಯುವಕರಿಂದ ಹಿಡಿದು ಎಪ್ಪತ್ತು ದಾಟಿದ ವಯಸ್ಸಾದ ಮುದುಕರವರೆಗೂ ಅನೇಕರಿಗೆ ಜೀವನಕ್ಕೆ ದಾರಿಯಾಗಿರುವ ಇವುಗಳನ್ನು ಎತ್ತರದ ಕಟ್ಟಡದ ತುದಿಯಿಂದ ಕೆಳಗೆ ಇಣುಕಿ ನೋಡಿದರೆ ಹದಿನೈದು ಅಡಿ ಅಗಲದ ಪುಟ್ಟ ಪುಟ್ಟ ರಸ್ತೆಯಲ್ಲಿ ಬೆಲ್ ಮಾಡುತ್ತಾ ಸಾಗುವಾಗುತ್ತಿದ್ದರೆ ನೆಲದ ಮೇಲೆ ಬ್ಯುಸಿಯಾಗಿ ಹರಿದಾಡುವ ಇರುವೆಗಳನ್ನು ನೆನಪಿಸುತ್ತವೆ. ಎಲ್ಲೆಂದರಲ್ಲಿ ಕೈತೋರಿಸಿದರೆ ನಿಲ್ಲಿಸಿ ನಮ್ಮನ್ನು ಕರೆದೊಯ್ಯುವ ಈ ಸೈಕಲ್ ರಿಕ್ಷಾವಾಲಗಳು ಶ್ರಮಜೀವಿಗಳು. ಒಂದೆರಡು ಕಿಲೋಮೀಟರ್ ಸಾಗಿದರೂ ಅವರು ಪಡೆದುಕೊಳ್ಳುವ ಹಣ ಐದರಿಂದ ಹತ್ತು ರೂಪಾಯಿ ಅಷ್ಟೆ. ನಮ್ಮಲ್ಲಿ ಕಾಣುವ ಆಟೋರಿಕ್ಷಾಗಳಿಗೆ ಪರ್ಯಾಯವಾಗಿರುವ ಅವು ಇಡೀ ಕೊಲ್ಕತ್ತ ನಗರದಲ್ಲಿ ಲಕ್ಷಾಂತರವಿರಬಹುದೆಂದುಕೊಳ್ಳುವಾಗಲೇ ಭಾರಕ್ಪುರ್ ರೈಲು ನಿಲ್ದಾಣ ಬಂತು. ಕೊಲ್ಕತ್ತ ನಗರದ ಭಾಗವಾಗಿರುವ ಭಾರಕ್ಪುರ ಪೂರ್ವದ ಕೊನೆಯಲ್ಲಿದೆ. 

(ಮುಂದುವರೆಯುವುದು…)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x