ಅವನು ಮಾತಿಲ್ಲದೆ ಒಳಬಂದ. ನನ್ನಷ್ಟಕ್ಕೆ ನಾನು ರೇಜರ್ ಬ್ಲೇಡನ್ನು ಹಿಂದಕ್ಕೂ ಮುಂದಕ್ಕೂ ಉಜ್ಜುತ್ತಾ ಹರಿತಗೊಳಿಸುತ್ತಿದ್ದೆ. ಅವನ ಗುರುತು ಹಿಡಿದಾಕ್ಷಣ ನಾನು ನನಗರಿವಿಲ್ಲದಂತೆಯೇ ಸಣ್ಣಗೆ ನಡುಗಿದೆ. ನನ್ನ ಪುಣ್ಯಕ್ಕೆ ಅದನ್ನವನು ಗಮನಿಸಲಿಲ್ಲ. ನಾನು ನನ್ನ ಭಯವನ್ನು ತೋರಗೊಡದೆ ಬ್ಲೇಡನ್ನು ಹರಿತಗೊಳಿಸುವುದನ್ನು ಮುಂದುವರಿಸಿದೆ. ರೇಜರ್ ಬ್ಲೇಡನ್ನು ಹೆಬ್ಬೆರಳಿಗೆ ಕೊಂಚ ಒತ್ತಿ ಹಿಡಿದು, ಬೆಳಕಿಗೂ ಹಿಡಿದು ಪರೀಕ್ಷಿಸುತ್ತಾ ಸಾಕಷ್ಟು ಹರಿತವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಂಡೆ. ಅತ್ತ ಅವನೂ ಮಾತನಾಡುವ ಗೋಜಿಗೆ ಹೋಗದೆ ತನ್ನ ಸೊಂಟಕ್ಕೆ ಬಿಗಿದುಕೊಂಡಿದ್ದ, ಬಂದೂಕಿನ ಬುಲೆಟ್ಟುಗಳನ್ನು ಉದ್ದಕ್ಕೂ ಜೋಡಿಸಿದ್ದ ಬೆಲ್ಟ್ ಅನ್ನು ಬಿಚ್ಚಿ ಗೋಡೆಯ ಮೊಳೆಯೊಂದಕ್ಕೆ ಸಿಕ್ಕಿಸಿಕೊಂಡ. ಆ ನೇತಾಡುತ್ತಿರುವ ಭಾರದ ಬೆಲ್ಟ್ ನಲ್ಲಿ ಬಂದೂಕಿನ ಕವಚವೂ ಸೇರಿಕೊಂಡಿತ್ತು. ಹಾಗೆಯೇ ಆತ ತನ್ನ ಮಿಲಿಟರಿ ಕ್ಯಾಪ್ ಅನ್ನೂ ಅದೇ ಮೊಳೆಯಲ್ಲಿ ತೂಗಿಸಿಕೊಂಡ. ನಂತರ ನನ್ನೆಡೆಗೆ ತಿರುಗಿ, ತನ್ನ ಕೊರಳಿಗೆ ಬಿಗಿದುಕೊಂಡಿದ್ದ ಟೈ ಅನ್ನು ಸಡಿಲಗೊಳಿಸುತ್ತಾ “ಛೇ, ಎಂಥಾ ಸೆಕೆ… ಶೇವ್ ಮಾಡು'' ಅಂದ. ಅಂತೂ ಅವನು ನನ್ನ ಪುಟ್ಟ ಸಲೂನಿನ ಕುರ್ಚಿಯಲ್ಲಿ ಕುಳಿತಾಗಿತ್ತು.
ನಾನು ಅವನ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದೆ. ಶೇವ್ ಮಾಡಿ ಹೆಚ್ಚೆಂದರೆ ನಾಲ್ಕು ದಿನ ಆಗಿರಬಹುದು. ಆ ಮುಖದಲ್ಲಿ ಅಷ್ಟೇನೂ ಗಡ್ಡ ಬೆಳೆದಿರಲಿಲ್ಲ. ಆದರೆ ಬಿಸಿಲಿಗೆ ಸತತವಾಗಿ ಮುಖವೊಡ್ಡಿದ ಪರಿಣಾಮ ಚರ್ಮ ನಿಸ್ತೇಜವಾಗಿ, ಕೆಂಪಗಾಗಿತ್ತು. ನಮ್ಮ ಭೂಗತ ಕ್ರಾಂತಿಕಾರಿಗಳನ್ನು ಹುಡುಕುತ್ತಾ ಇವನ ಮಿಲಿಟರಿ ತುಕಡಿಗಳು ಕಳೆದ ನಾಲ್ಕು ದಿನಗಳಿಂದ ಜಿದ್ದಿಗೆ ಬಿದ್ದವರಂತೆ ಊರಿಡೀ ಅಲೆದಾಡುತ್ತಿದ್ದವು. ಅನಾವಶ್ಯಕ ಮಾತಿಗಿಳಿಯದೆ ನಾನು ಶೇವ್ ಮಾಡಲು ಸಾಬೂನಿನ ದ್ರಾವಣವನ್ನು ತಯಾರು ಮಾಡಲಾರಂಭಿಸಿದೆ. ಸಾಬೂನಿನ ನಾಲ್ಕೈದು ಹೆಚ್ಚಿದ ಚಿಕ್ಕ ತುಂಡುಗಳನ್ನು ಒಂದು ಬೌಲ್ ಗೆ ಹಾಕಿ, ಉಗುರು ಬೆಚ್ಚಗಿನ ನೀರನ್ನು ಅದಕ್ಕೆ ಸ್ವಲ್ಪಸ್ವಲ್ಪವಾಗಿ ಸುರಿಯುತ್ತಾ, ಮಿಶ್ರಣವನ್ನು ಶೇವಿಂಗ್ ಬ್ರಷ್ ನಿಂದ ಚೆನ್ನಾಗಿ ಅಲುಗಾಡಿಸಿದೆ. ಕ್ಷಣಾರ್ಧದಲ್ಲಿ ಬೌಲ್ ಸಾಬೂನಿನ ನೊರೆಯೊಂದಿಗೆ ತುಂಬಿಹೋಯಿತು.
“ನಿಮ್ಮ ಗುಂಪಿನ ಹುಡುಗರಿಗೂ ಈವರೆಗೆ ಇಷ್ಟು ಗಡ್ಡ ಬೆಳೆದಿರಬಹುದು'', ಎನ್ನುತ್ತಾ ಮೊದಲ ಬಾರಿ ನಾನು ಮಾತಿಗಿಳಿದೆ. ಬ್ರಷ್ ಅನ್ನು ಹಿಡಿದಿದ್ದ ನನ್ನ ಕೈಗಳು ಸಾಬೂನಿನ ನೊರೆ ತುಂಬಿದ ಬೌಲಿನಲ್ಲಿ ತನ್ನ ಕೆಲಸವನ್ನು ಮುಂದುವರೆಸುತ್ತಿದ್ದವು.
“ಎಲ್ಲವೂ ಅಂದುಕೊಂಡಂತೆಯೇ ನಡೆಯಿತು ನೋಡು. ಕೆಲವರನ್ನು ಸೆರೆಹಿಡಿದೆವು. ಕೆಲವರನ್ನು ಕೊಂದೂ ಹಾಕಿದೆವು. ಆದರೆ ಇನ್ನೂ ಕೆಲವರು ಬಾಕಿ ಉಳಿದಿದ್ದಾರೆ. ಕೆಲವು ದಿನಗಳಲ್ಲಿ ಅವರನ್ನೂ ಕೊಂದುಬಿಡುತ್ತೇವೆ''
“ಎಷ್ಟು ಜನರನ್ನು ಬಂಧಿಸಿದಿರಿ?'', ನಾನು ಆಸಕ್ತಿಯಿಂದ ಕೇಳಿದೆ.
“ಬರೋಬ್ಬರಿ ಹದಿನಾಲ್ಕು ಜನ. ಕಾಡು-ಮೇಡು ಎನ್ನದೆ ಎಲ್ಲೆಲ್ಲೂ ಹುಡುಬೇಕಾಯಿತು ಇವರನ್ನು ಹಿಡಿಯಲು. ಆದರೆ ಇನ್ನೂ ಕೆಲವರು ಕಾಡಿನಲ್ಲಿ ಅಡಗಿಕೊಂಡಿದ್ದಾರೆ. ಈ ಬಾರಿ ಒಬ್ಬನೇ ಒಬ್ಬನೂ ಜೀವಂತವಾಗಿ ಉಳಿಯುವುದಿಲ್ಲ''
ಸಾಬೂನಿನ ನೊರೆಯಲ್ಲಿ ಮುಳುಗೇಳುತ್ತಾ ನನ್ನ ಕೈಯಲ್ಲಿ ಆಟವಾಡುತ್ತಿದ್ದ ಬ್ರಷ್ ಅನ್ನು ನೋಡುತ್ತಲೇ ಆತ ಕುರ್ಚಿಗಾನಿಸಿ ಕುಳಿತುಕೊಂಡು ಇನ್ನಷ್ಟು ಕಂಫರ್ಟೆಬಲ್ ಆಗಲು ಯತ್ನಿಸಿದ. ಶೇವ್ ಮಾಡುವ ಮುನ್ನ, ಕುಳಿತಿರುವ ಗ್ರಾಹಕನ ಮೇಲೆ, ಕತ್ತಿನ ಸುತ್ತಲಾಗಿ ಹಾಸಲ್ಪಡುವ ತೆಳುವಾದ ಬಟ್ಟೆಯನ್ನು ನಾನು ಇನ್ನೂ ಹಾಸಿರಲಿಲ್ಲ. ನಿಸ್ಸಂದೇಹವಾಗಿ ಅವನ ಅನಿರೀಕ್ಷಿತ ಆಗಮನದಿಂದಾಗಿ ನಾನು ವಿಚಲಿತನಾಗಿದ್ದೆ. ಡ್ರಾವರ್ ನಿಂದ ತೆಳುವಾದ ಬಟ್ಟೆಯೊಂದನ್ನು ತೆಗೆದು ಅವನ ಮೇಲೆ ಹಾಸಿ, ಅವನ ಕತ್ತಿನ ಹಿಂದೆ ಬಟ್ಟೆಯ ತುದಿಗಳಿಂದ ಗಂಟೊಂದನ್ನು ಬಿಗಿದುಕೊಂಡೆ. ಅವನು ಮಾತನಾಡುವುದನ್ನು ಮುಂದುವರೆಸಿದ್ದ. ಬಹುಶಃ ನಾನು ಅವನ ಮಿಲಿಟರಿ ಕಾರ್ಯಾಚರಣೆಯ ಸಮರ್ಥಕ ಅಂತ ಯೋಚಿಸಿದನೋ ಏನೋ.
“ನಮ್ಮ ಮಿಲಿಟರಿ ಕಾರ್ಯಾಚರಣೆಯಿಂದಾಗಿ ಈ ನಗರವು ತಕ್ಕ ಪಾಠವನ್ನು ಕಲಿತುಕೊಂಡಿದೆ'', ಅವನು ಹೇಳಿದ. ಬೆವರಿನಿಂದ ತೊಯ್ದು ಹೋಗಿದ್ದ ಅವನ ಕತ್ತಿನ ಹಿಂಭಾಗದಲ್ಲಿ ಹಾಸಿದ ಬಟ್ಟೆಯನ್ನು ಇನ್ನಷ್ಟು ಬಿಗಿಯಾಗಿಸುತ್ತಾ ನಾನು “ಹೂಂ'' ಎಂದೆ.
“ಶಾಲಾ ಆವರಣದಲ್ಲಿ ನಾವು ನಡೆಸಿದ ನಾಟಕ ಚೆನ್ನಾಗಿತ್ತಲ್ವಾ?'', ಅಂದ ಅವನು. “ಅದ್ಭುತ'', ಎನ್ನುತ್ತಾ ಪಕ್ಕದ ಮೇಜಿನಲ್ಲಿರಿಸಿದ್ದ ಬ್ರಷ್ ಅನ್ನು ತೆಗೆದುಕೊಳ್ಳಲು ನಾನು ಬಾಗಿದೆ.
ಅವನು ಆರಾಮಾಗಿ ಕುಳಿತುಕೊಂಡು, ಸಾಬೂನಿನ ಮಾಲೀಷಿಗೆ ಕಾಯುತ್ತಿರುವಂತೆ ತನ್ನ ಕಣ್ಣುಗಳನ್ನು ಮುಚ್ಚಿಕೊಂಡ. ನಾನವನನ್ನು ಇದೇ ಮೊದಲ ಬಾರಿಗೆ ಇಷ್ಟು ಹತ್ತಿರದಿಂದ ನೋಡಿದ್ದು. ಆ ದಿನ ಇನ್ನೂ ನೆನೆಪಿದೆ ನನಗೆ. ನಗರದ ಎಲ್ಲಾ ಜನರು ಕಡ್ಡಾಯವಾಗಿ ಶಾಲಾ ಆವರಣದಲ್ಲಿ ಸೇರಬೇಕೆಂದು ಆತ ಅಪ್ಪಣೆ ಹೊರಡಿಸಿದ್ದ. ನಾಲ್ವರು ಕ್ರಾಂತಿಕಾರಿಗಳನ್ನು ಬೆತ್ತಲೆಯಾಗಿ, ಸಾರ್ವಜನಿಕವಾಗಿ ಆ ಶಾಲಾ ಆವರಣದಲ್ಲಿ ನೇತು ಹಾಕಲಾಗಿತ್ತು. ರಕ್ತಸಿಕ್ತವಾಗಿದ್ದ, ಹೊಡೆತಗಳಿಂದ ಜರ್ಝರಿತವಾಗಿದ್ದ ಆ ನೇತಾಡುತ್ತಿದ್ದ ಮೃತದೇಹಗಳನ್ನು ಕಂಡು ಗಾಬರಿಯಾಗಿದ್ದ ನನಗೆ, ಆ ಗಡಿಬಿಡಿಯಲ್ಲಿ ಈ ಕ್ರೂರ ಶಿಕ್ಷೆಗೆ ಅಪ್ಪಣೆಯನ್ನಿತ್ತ ಇವನ ಮುಖ ಅಷ್ಟಾಗಿ ಗಮನಕ್ಕೆ ಬಂದಿರಲಿಲ್ಲ. ಆದರೆ ಅದೇ ಮುಖ ಈಗ ನನ್ನ ಕುರ್ಚಿಯಲ್ಲಿ ಕುಳಿತಿತ್ತು. ಅಂಥಾ ಕುರೂಪಿಯೇನೂ ಆಗಿರಲಿಲ್ಲ ಅವನು. ಆದರೆ ಬೆಳೆದ ಗಡ್ಡದ ಪರಿಣಾಮ ತನ್ನ ನಿಜವಾದ ವಯಸ್ಸಿಗಿಂತಲೂ ಸ್ವಲ್ಪ ಹೆಚ್ಚು ವಯಸ್ಸಾದವನಂತೆ ಕಾಣುತ್ತಿದ್ದ. ಕುರುಚಲು ಗಡ್ಡ ಅವನ ಮುಖಕ್ಕೆ ಹೊಂದುತ್ತಿರಲಿಲ್ಲ. ಅಂದ ಹಾಗೆ ಅವನ ಹೆಸರು ಟೊರೆಸ್. ಕ್ಯಾಪ್ಟನ್ ಟೊರೆಸ್. ನನ್ನ ಮಟ್ಟಿಗೆ ಟೊರೆಸ್ ಒಬ್ಬ ವಿಚಿತ್ರ ಕಲ್ಪನಾಶಕ್ತಿಯನ್ನು ಹೊಂದಿರುವ ಮನುಷ್ಯ. ಏಕೆಂದರೆ ಸೆರೆಹಿಡಿದು ಹಿಂಸಿಸಿದ ಕ್ರಾಂತಿಕಾರಿಗಳನ್ನು ಬೆತ್ತಲೆಯಾಗಿ ಊರೆದುರು ದಿನಗಟ್ಟಲೆ ನೇತುಹಾಕಿ, ನಿತ್ಯವೂ ನೇತಾಡುತ್ತಿರುವ ಆ ಮೃತದೇಹದ ಭಾಗಗಳಿಗೆ ಗುರಿಯಿಟ್ಟು ಶೂಟಿಂಗ್ ತಾಲೀಮು ನಡೆಸುವ ಕ್ರೂರ, ವಿಲಕ್ಷಣ ತಂತ್ರ ಯಾರಿಗೆ ತಾನೇ ಹೊಳೆದೀತು?
ನಾನು ಮೊದಲ ಹಂತದ ಸಾಬೂನಿನ ನೊರೆಯನ್ನು ಬ್ರಷ್ ನಿಂದ ತೆಗೆದು, ಅವನ ಕೆನ್ನೆ ಮತ್ತು ಗಲ್ಲದ ಮೇಲೆ ಹರಡಿಸಿ ಬ್ರಷ್ ನಿಂದಲೇ ಮಾಲೀಷು ಮಾಡಲಾರಂಭಿಸಿದೆ.
“ಯಾವ ಪ್ರಯತ್ನವೂ ಇಲ್ಲದೆ ನಿದ್ದೆಗೆ ಜಾರಬಲ್ಲೆ ನಾನು'', ಟೊರೆಸ್ ಕಣ್ಣು ಮುಚ್ಚಿರುವಂತೆಯೇ ಮೆಲ್ಲಗೆ ಉಸುರಿದ. ನಾನು ಈ ಬಾರಿ ಉತ್ತರಿಸಲಿಲ್ಲ. “ಆದರೆ ನಿದ್ದೆ ಮಾಡೋ ಹಾಗಿಲ್ಲ. ಮದ್ಯಾಹ್ನದ ನಂತರ ತುಂಬಾ ಕೆಲಸವಿದೆ'', ಆತ ಮುಂದುವರೆಸಿದ. ನಾನು ನೊರೆ ತುಂಬಿದ ಬ್ರಷ್ ಅನ್ನು ಬದಿಯಲ್ಲಿರಿಸಿದೆ.
“ಇವತ್ತೆಲ್ಲಿ ನಿಮ್ಮ ಶೂಟಿಂಗ್?'', ನಾನು ಯಾಂತ್ರಿಕವಾಗಿ ಕೇಳಿದೆ. ನನ್ನ ದನಿಯಲ್ಲಿ ಆಸಕ್ತಿಯ ಲವಲೇಷವೂ ಇರಲಿಲ್ಲ.
“ಶೂಟಿಂಗ್ ಥರಾನೇ. ಆದರೆ ಸಣ್ಣ ಮಟ್ಟಿನದು''
ತನ್ನ ಲೋಹದ ತುಟಿಗಳ ನಡುವೆ ಬ್ಲೇಡನ್ನು ಕಚ್ಚಿಹಿಡಿದಿದ್ದ ರೇಜರ್ ಅನ್ನು ನಾನು ತೆಗೆದುಕೊಂಡೆ. ನನ್ನ ಕೈಗಳು ಈಗಲೂ ಸಣ್ಣಗೆ ನಡುಗುತ್ತಿದ್ದವು. ಬಹುಶಃ ಅವನು ಗಮನಿಸಿರಲಿಲ್ಲ. ನನ್ನ ನಡುಕ ಅವನ ಕಣ್ಣಿಗೆ ಬೀಳುವುದು ನನಗೆ ಬೇಕಾಗಿಯೂ ಇರಲಿಲ್ಲ. `ಛೇ ಇವನಿಲ್ಲಿ ಬರಲೇಬಾರದಿತ್ತು' ಎಂದು ತನ್ನಷ್ಟಕ್ಕೇ ಯೋಚಿಸಿ ಹಾಳು ಅದೃಷ್ಟವನ್ನು ಶಪಿಸಿಕೊಂಡೆ. ಆತ ನನ್ನ ಸಲೂನಿನ ಒಳ ಬಂದಿರುವುದನ್ನು ಬೀದಿಯಲ್ಲಿ ಅಹೋರಾತ್ರಿ ಗಸ್ತು ತಿರುಗುತ್ತಿರುವ ಕೆಲ ಬಂದೂಕುಧಾರಿ ಸೈನಿಕರು ನೋಡಿರಲೂಬಹುದು. ಎಲ್ಲಾ ಗ್ರಾಹಕರಿಗೂ ಶೇವ್ ಮಾಡುವಂತೆ, ಮೆತ್ತಗೆ, ನಾಜೂಕಾಗಿ, ರಕ್ತದ ಒಂದು ಹನಿಯೂ ಒಸರದಂತೆ ಶೇವ್ ಮಾಡುವುದು ಅಂಥಾ ಮಹಾಕೆಲಸವೇನೂ ಆಗಿರಲಿಲ್ಲ ನನಗೆ. ಅಲ್ಲದೆ ಟೊರೆಸ್ ನ ಚರ್ಮ ಶುದ್ಧವಾಗಿಯೂ, ಮೃದುವಾಗಿಯೂ, ಆರೋಗ್ಯವಾಗಿಯೂ ಇತ್ತು. ಆದರೆ ಇವನೊಬ್ಬ ಶತ್ರುವಾಗಿದ್ದ. ನನ್ನ ನಗರವನ್ನು ನಾಶಗೊಳಿಸಿದ ಕ್ರೂರಿ. ನನ್ನ ನಿಗೂಢ ಶತ್ರು. ಹೌದು, ನಾನೂ ಒಬ್ಬ ಕ್ರಾಂತಿಕಾರಿಯಾಗಿದ್ದೆ. ಆದರೆ ಇತರರಂತೆ ಭೂಗತನಾಗದೆ, ಉಳಿದ ಕ್ರಾಂತಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ರಹಸ್ಯವಾಗಿ ಕ್ಯಾಪ್ಟನ್ ಟೊರೆಸ್ ನ ದೈತ್ಯ ಸೈನ್ಯದ ವಿರುದ್ಧ, ಅವರುಗಳ ಅಮಾನುಷ ಕಾರ್ಯಾಚರಣೆಗಳ ವಿರುದ್ಧ ಸಂಚು ಹೂಡುತ್ತಿದ್ದೆ. ಹಾಗೆಯೇ ನಾನೊಬ್ಬ ಉತ್ತಮ ಕ್ಷೌರಿಕನೂ ಆಗಿದ್ದೆ. ಮತ್ತು ಈ ಬಗ್ಗೆ ನನಗೆ ಹೆಮ್ಮೆಯೂ ಇತ್ತು.
ರೇಜರಿನ ಎರಡು ಬಾಯಿಗಳನ್ನು ಅಗಲವಾಗಿಸಿ, ನಾನು ಅವನ ಕೆನ್ನೆಯ ಒಂದು ಭಾಗವನ್ನು ಮೆತ್ತಗೆ ಹಿಡಿದುಕೊಂಡು ಕೆಳಮುಖವಾಗಿ ಶೇವ್ ಮಾಡಲಾರಂಭಿಸಿದೆ. ಗಡ್ಡದ ಕೂದಲುಗಳು ದಟ್ಟ ಮತ್ತು ಉದ್ದವಾಗಿರದಿದ್ದರೂ ಒರಟಾಗಿದ್ದವು. ಆದರೆ ನನ್ನ ರೇಜರ್ ಎಂದಿನಂತೆಯೇ ಅದ್ಭುತವಾಗಿ ಸಾಬೂನಿನ ನೊರೆಯನ್ನು ಸೀಳುತ್ತಾ ನೊರೆಯ ಹಿಂದಿದ್ದ ಅವನ ಚರ್ಮವನ್ನು ತೋರಿಸುತ್ತಿದ್ದವು. ರೇಜರ್ ಬ್ಲೇಡ್ “ಸ್ಸ್… ಸ್ಸ್…'' ಎಂಬ ಮೆತ್ತಗಿನ ಸದ್ದನ್ನು ಮಾಡುತ್ತಾ ನನ್ನ ನಡುಗುವ ಕೈಗಳೊಂದಿಗೇ ನೊರೆಯ ಅಂಟಿನಲ್ಲಿ ಜಾರುತ್ತಿತ್ತು. ನಡುವಿನಲ್ಲೊಮ್ಮೆ ರೇಜರ್ ಬ್ಲೇಡನ್ನು ಶುಚಿಗೊಳಿಸಿ, ಹಿಂದಕ್ಕೂ ಮುಂದಕ್ಕೂ ಉಜ್ಜುತ್ತಾ ಮತ್ತೊಮ್ಮೆ ಹರಿತಗೊಳಿಸಲಾರಂಭಿಸಿದೆ. ನುರಿತ ಕ್ಷೌರಿಕನಾಗಿದ್ದ ನನಗೆ ಈ ಕೆಲಸಗಳು ದಿನನಿತ್ಯದ್ದಾಗಿದ್ದವು. ನೊರೆ ತುಂಬಿದ ಮುಖದ ಮೇಲೆ ಅಚಾನಕ್ಕಾಗಿ ಯಾವ ಕ್ರಿಯೆಯೂ ನಡೆಯುತ್ತಿಲ್ಲದರ ಪರಿಣಾಮ ಟೊರೆಸ್ ಕಣ್ತೆರೆದು ಏನಾಯಿತೆಂಬ ಭಾವದೊಂದಿಗೆ ನನ್ನೆಡೆಗೆ ನೋಡಿದ. ಹಾಗೆಯೇ ಹಾಸಿದ ಬಟ್ಟೆಯಡಿಯಲ್ಲಿ ಅಡಗಿಹೋಗಿದ್ದ ತನ್ನ ಕೈಯನ್ನು ಮೇಲಕ್ಕೆತ್ತಿ ಕನ್ನಡಿಯನ್ನು ನೋಡುತ್ತಾ, ನೊರೆಯಿಲ್ಲದ ತನ್ನ ಕೆನ್ನೆಯ ಭಾಗವನ್ನು ಸುಮ್ಮನೆ ಮುಟ್ಟಿಕೊಂಡ.
“ಇವತ್ತು ಸಂಜೆ ಆರು ಘಂಟೆಗೆ ಶಾಲಾ ಆವರಣಕ್ಕೆ ಬಂದುಬಿಡು'', ಟೊರೆಸ್ ಹೇಳಿದ. ಅವನ ದನಿ ಮೆತ್ತಗಿದ್ದರೂ ಅದರಲ್ಲಿ ಅಪ್ಪಣೆಯ ನೆರಳಿತ್ತು.
“ಮೊನ್ನೆ ಮಾಡಿದಂತೆಯೇ ಇವತ್ತೇನಾದರೂ…?'', ನಾನು ಭಯದಿಂದಲೇ ಕೇಳಿದೆ.
“ಹಾಗೇನಿಲ್ಲ''
“ಮತ್ತೆ? ಇನ್ನೇನಾದರೂ ವಿಶೇಷವಾದ ಕಾರಣವಿದೆಯೇ?''
“ನನಗೂ ಸರಿಯಾಗಿ ತಿಳಿದುಬಂದಿಲ್ಲ. ಆದರೆ ಮೋಜಂತೂ ಇದ್ದೇ ಇರುತ್ತೆ'', ಟೊರೆಸ್ ಮುಗುಳ್ನಕ್ಕು, ಎರಡನೇ ಹಂತದ ನೊರೆಯ ಮಾಲೀಷಿಗೆ ತಯಾರಾದವನಂತೆ ಕುಳಿತಲ್ಲಿಯೇ ಮತ್ತೊಮ್ಮೆ ಕಣ್ಣುಗಳನ್ನು ಮುಚ್ಚಿದ.
“ಅವರೆಲ್ಲರನ್ನೂ ಶಿಕ್ಷೆಗೊಳಪಡಿಸುತ್ತೀರಾ?'', ರೇಜರ್ ಬ್ಲೇಡನ್ನು ನಾಜೂಕಾದ ಒತ್ತಡದೊಂದಿಗೆ ಹಿಡಿದು ಶೇವ್ ಮಾಡುತ್ತಾ ಕೇಳಿದೆ.
“ಹೌದು… ಒಬ್ಬನನ್ನೂ ಬಿಡದೆ'', ಟೊರೆಸ್ ಉತ್ತರಿಸಿದ.
ಸಾಬೂನಿನ ಬಿಳಿಯ ನೊರೆ ತಣ್ಣಗೆ ಅವನ ಚರ್ಮದ ಮೇಲೆ ಒಣಗುತ್ತಿತ್ತು. ನನ್ನ ಹೃದಯ ಭಯದಿಂದ ಜೋರಾಗಿ ಬಡಿದುಕೊಳ್ಳುತ್ತಿತ್ತು. ಕೈಗಳು ಅದುರುತ್ತಿದ್ದವು. ಆದರೂ ಬೇಗಬೇಗನೆ ಯಾವುದೇ ಗಾಯವನ್ನು ಮಾಡದೆ ಶೇವಿಂಗ್ ಮುಗಿಸಬೇಕಿತ್ತು. ಎದುರಿಗಿರಿಸಿದ್ದ ಕನ್ನಡಿಯಲ್ಲಿ ಸುಮ್ಮನೆ ಬೀದಿಯತ್ತ ಕಣ್ಣುಹಾಯಿಸಿದೆ. ಪಕ್ಕದ ಕಿರಾಣಿ ಅಂಗಡಿಯಲ್ಲಿ ಮಾಮೂಲಿಯ ಮೂವರು ಗ್ರಾಹಕರು ಕಾಣುತ್ತಿದ್ದರು. ಹಾಗೆಯೇ ಗೋಡೆ ಗಡಿಯಾರದತ್ತ ನೋಡಿದೆ. ಸಮಯ ಅಪರಾಹ್ನದ ಎರಡೂ-ಇಪ್ಪತ್ತನ್ನು ತೋರಿಸುತ್ತಿತ್ತು. ರೇಜರ್ ಬ್ಲೇಡ್ ಕೆಳಮುಖವಾಗಿ ಟೊರೆಸ್ ನ ಗಲ್ಲದ ಮೇಲೆ ತನ್ನ ಕೆಲಸವನ್ನು ಮುಂದುವರೆಸುತ್ತಲಿತ್ತು.
ಕೆನ್ನೆಯ ಒಂದು ಭಾಗವನ್ನು ಮುಗಿಸಿ ಇನ್ನೊಂದು ಭಾಗದ ಬಳಿ ನಾನು ಬಂದೆ. `ಕವಿಗಳು, ಸನ್ಯಾಸಿಗಳು ಬಿಡುವಂತೆ ಉದ್ದನೆಯ ಗಡ್ಡವನ್ನು ಈತ ಬಿಟ್ಟರೆ ಇನ್ನೂ ಚೆನ್ನಾಗಿ ಕಾಣುತ್ತಿತ್ತು' ಎಂದು ಮನಸ್ಸಿನಲ್ಲೇ ಹೇಳಿಕೊಂಡೆ. ಗಲ್ಲದ ಭಾಗದ ಶೇವಿಂಗ್ ಅನ್ನು ಮುಗಿಸಿದ ನನ್ನ ರೇಜರ್ ಬ್ಲೇಡ್ ಅವನ ಕತ್ತಿನ ಉಬ್ಬುತಗ್ಗುಗಳಲ್ಲಿದ್ದ ಕೂದಲುಗಳನ್ನು ಸಾಬೂನಿನ ನೊರೆಯೊಂದಿಗೆ ಕಿತ್ತುಹಾಕುತ್ತಿತ್ತು. ಕತ್ತಿನ ಭಾಗದಲ್ಲಿ ಶೇವ್ ಮಾಡುವಾಗ ಬಲು ಜಾಗರೂಕರಾಗಿರಬೇಕು. ಚರ್ಮ ಈ ಭಾಗದಲ್ಲಿ ನಾಜೂಕಾಗಿರುವುದಲ್ಲದೆ, ಗಡ್ಡದ ಕೂದಲುಗಳು ಕೊಂಚ ಚಿಕ್ಕದಾಗಿಯೂ, ಸುರುಳಿಯಾಗಿಯೂ ಇರುತ್ತದೆ. ಗುಂಗುರು ಕೂದಲಿನಂತೆ. ಹರಿದಾಡುತ್ತಿರುವ ಬ್ಲೇಡಿನ ಒತ್ತಡ ಕೊಂಚ ಏರುಪೇರಾದರೂ ಚರ್ಮದ ಸೂಕ್ಷ್ಮ ಪೊರೆಗಳು ರಕ್ತದ ಕೆಂಪು ಹನಿಯನ್ನು ಹೊರಸೂಸುವುದಂತೂ ಖಂಡಿತ. ನನ್ನಂಥಾ ನುರಿತ, ಅನುಭವಿ ಕ್ಷೌರಿಕ ಇಂಥಾ ವಿಷಯದಲ್ಲಿ ತುಸು ಹೆಚ್ಚೇ ಅನ್ನುವಷ್ಟು ಪರಿಣತಿಯನ್ನು ಹೊಂದಿರಬೇಕು. ಅದರಲ್ಲೂ ಈಗ ಇಲ್ಲಿ ಕುಳಿತಿರುವ ಗ್ರಾಹಕ ಅಂತಿಂಥವನಲ್ಲ. ಮೊದಲನೇ ದರ್ಜೆಯ ಗ್ರಾಹಕ. ಅವನಿಗೆ ವಿಶೇಷವಾದ ಸೇವೆಯನ್ನೇ ನೀಡಬೇಕಾದ ಅನಿವಾರ್ಯತೆಯಿದೆ.
ಹೀಗಿದ್ದರೂ ನಾನೊಬ್ಬ ಕ್ರಾಂತಿಕಾರಿ ಅನ್ನುವುದೂ ಅಷ್ಟೇ ಸತ್ಯ. ಟೊರೆಸ್ ಗೆ ಈ ಬಗ್ಗೆ ಮಾಹಿತಿಯಲ್ಲದಿರಬಹುದು. ನಗರದ ಬೆರಳೆಣಿಕೆಯಷ್ಟು ಜನರಿಗಷ್ಟೇ ಈ ಸತ್ಯ ತಿಳಿದಿರುವುದು. ಟೊರೆಸ್ ಮತ್ತು ಅವನ ಸೈನ್ಯದ ತುಕಡಿಗಳ ಆಗುಹೋಗುಗಳ ಬಗ್ಗೆ ನನಗೆ ತಕ್ಕಮಟ್ಟಿನ ಮಾಹಿತಿಯಿರುತ್ತದೆ. ಆದ್ದರಿಂದಲೇ ಟೊರೆಸ್ ನ ಸೈನ್ಯ ಪ್ರತೀಬಾರಿಯೂ ಕ್ರಾಂತಿಕಾರಿಗಳ ಬೇಟೆಗೆ ಹೊರಟಾಗಲೂ ನಾನು ಈ ಮಾಹಿತಿಯನ್ನು ನಮ್ಮ ಕ್ರಾಂತಿಕಾರಿಗಳೊಂದಿಗೆ ರಹಸ್ಯವಾಗಿ ಹಂಚಿಕೊಳ್ಳುತ್ತೇನೆ. ಈಗ ನನ್ನ ಕುರ್ಚಿಯಲ್ಲಿ ಈತ ನಿರಾಯುಧನಾಗಿ ಕಣ್ಣು ಮುಚ್ಚಿ, ಆರಾಮಾಗಿ ಕುಳಿತಿದ್ದಾನೆ. ನನ್ನ ಎರಡೂ ಕೈಗಳು ಅವನ ಮುಖದ ಮೇಲೆ, ಕೆನ್ನೆಯ ಮೇಲೆ, ಗಲ್ಲ-ಕತ್ತಿನ ಮೇಲೆ ರೇಜರ್ ಬ್ಲೇಡಿನೊಂದಿಗೆ ಆಟವಾಡುತ್ತಿವೆ. ಆಗುವುದಿದ್ದರೆ ಏನೂ ಆಗಬಹುದು. ನನ್ನ ಮನಸ್ಸು ಬದಲಾದರೆ ಈತ ಈ ಸಲೂನಿನ ಪುಟ್ಟ ಕೋಣೆಯಿಂದ ಜೀವಂತ ಹೊರಹೋಗುವುದು ಕಷ್ಟ.
ನಾನು ಶೇವಿಂಗ್ ಮಾಡಿ ಮುಗಿಸಿದ್ದೆ. ಮುಖದಲ್ಲಿ ಗಡ್ಡದ ಯಾವುದೇ ಕುರುಹಿರದೆ, ಟೊರೆಸ್ ಮೊದಲಿಗಿಂತಲೂ ಚೆನ್ನಾಗಿ ಕಾಣುತ್ತಿದ್ದ. ಅವನ ಮುಖದಲ್ಲಿ ಮಡುಗಟ್ಟಿದ್ದ ಸುಸ್ತು ಮಾಯವಾಗಿ, ಒಂದೆರಡು ವರ್ಷ ಚಿಕ್ಕವನಾದಂತೆ ಕಂಡ. ಸಲೂನಿಗೆ ಕ್ಷೌರಕ್ಕೆಂದು ಹೋದ ಎಲ್ಲಾ ಪುರುಷರಲ್ಲೂ ಈ ಲಕ್ಷಣಗಳು ಕಾಣುವುದು ಸಾಮಾನ್ಯ. ಅಲ್ಲದೆ ನಾನೇನೂ ಸಾಮಾನ್ಯ ಕ್ಷೌರಿಕನಾಗಿರಲಿಲ್ಲ. ನಗರದಲ್ಲೇ ಉತ್ತಮ ಎಂದರೂ ಅತಿಶಯೋಕ್ತಿಯಾಗಲಿಕ್ಕಿಲ್ಲ. ಅವನೂ ನನ್ನಂತೆಯೇ ಬೆವರುತ್ತಿದ್ದಾನೆಯೇ ಎಂದು ನಾನು ಪರೀಕ್ಷಿಸಿದೆ. ಆದರೆ ಹಾಗೇನೂ ಕಂಡುಬರಲಿಲ್ಲ. ಶಾಂತತೆಯೇ ಮೂರ್ತಿವೆತ್ತಂತಿದ್ದ ಆತ ಆರಾಮಾಗಿ ಕುಳಿತಿದ್ದ. ಸಂಜೆ ಶಾಲಾ ಆವರಣದಲ್ಲಿ ಬಂಧಿತರಾಗಿದ್ದ ಕ್ರಾಂತಿಕಾರಿ ಕೈದಿಗಳನ್ನೇನು ಮಾಡುವುದು ಎಂದು ಆತ ಯೋಚಿಸುತ್ತಿರುವಂತೆಯೂ ನನಗೆ ಕಾಣಬರಲಿಲ್ಲ. ಗೋಮುಖವ್ಯಾಘ್ರನೇ ಸರಿ.
ಆದರೆ ಅಪ್ಪಿತಪ್ಪಿಯೂ ರಕ್ತ ಒಸರದಂತೆ ಶಕ್ತಿಮೀರಿ ಪ್ರಯತ್ನಿಸುತ್ತಾ, ನಾಜೂಕಾಗಿ ರೇಜರ್ ಬ್ಲೇಡ್ ಹಿಡಿದು ಶೇವ್ ಮಾಡುತ್ತಿದ್ದ ನನ್ನ ಮನಸ್ಸು ಮರ್ಕಟವಾಗಿತ್ತು. ಟೊರೆಸ್ ನನ್ನು ಕೊಲ್ಲುವುದು ಎಷ್ಟು ಸುಲಭದ ಮಾತು ನನಗೆ. ಸಾಯುವುದಕ್ಕೆ ಅವನು ಅರ್ಹನೂ ಕೂಡ. ಛೇ ಯಾಕಾದರೂ ಬಂದನೋ ಈತ! ಆದರೆ ನಾನೊಬ್ಬ ಕ್ರಾಂತಿಕಾರಿಯಲ್ಲವೇ, ಇವನಂತೆ ಕೊಲೆಗಾರನೇ…? ಇವನನ್ನು ಕೊಂದು ನಾನು ಸಾಧಿಸುವುದಾದರೂ ಏನು! ಒಬ್ಬ ಟೊರೆಸ್ ಸತ್ತರೆ ಇನ್ನೊಬ್ಬ ಬರುತ್ತಾನೆ. ಒಬ್ಬ ಇನ್ನೊಬ್ಬನನ್ನು ಕೊಲ್ಲುತ್ತಾನೆ. ಇನ್ನೊಬ್ಬ ಮತ್ತೊಬ್ಬನನ್ನು ಕೊಲ್ಲುತ್ತಾನೆ. ರಕ್ತವು ನದಿಯಂತೆ ಹರಿದುಹೋಗುವಷ್ಟರ ಮಟ್ಟಿಗೆ ಈ ದಾಹ ವಿನಾಕಾರಣ ಮುಂದುವರೆಯುತ್ತಾ ಹೋಗುತ್ತದೆ. ಇವನನ್ನು ಕೊಲ್ಲುವುದೇನು ಮಹಾ ಸಾಹಸವೇ. ಇವನ ಕಣ್ಣುಗಳು ಮುಚ್ಚಿರುವುದರಿಂದಾಗಿ ನನ್ನ ಹೊಳೆಯುವ ತೀಕ್ಷ್ಣ ಕಣ್ಣುಗಳಾಗಲೀ, ಹೊಳೆಯುವ ಅಲಗಿನ ಹರಿತವಾದ ಬ್ಲೇಡಿನ ತುದಿಯಾಗಲೀ ಇವನಿಗೆ ಕಾಣುವುದಿಲ್ಲ. `ಚಕ್… ಚಕ್…', ನಿಮಿಷಾರ್ಧದಲ್ಲಿ ನನ್ನ ಈ ಬ್ಲೇಡ್ ಇವನ ಕತ್ತನ್ನು ಕುಯ್ಯಬಲ್ಲದು… ಕುಯ್ದೊಡನೆಯೇ ರಕ್ತ ಟೊರೆಸ್ ನ ಕತ್ತಿನಿಂದ ಚಿಮ್ಮುತ್ತದೆ. ಈ ಹಾಸಿದ ತೆಳು ಬಟ್ಟೆಯ ಮೇಲೆ, ನನ್ನ ಕೈಗಳ ಮೇಲೆ, ಈ ಕುರ್ಚಿಯ ಆಜುಬಾಜಿನ ಹ್ಯಾಂಡಲ್ಲುಗಳ ಮೇಲೆ, ನೆಲದ ಮೇಲೆ… ಆಮೇಲೆ ಸಲೂನಿನ ಬಾಗಿಲನ್ನು ನಾನು ಮುಚ್ಚಬೇಕಾಗುತ್ತದೆ. ರಕ್ತ ಮೆಲ್ಲನೆ ಹನಿಹನಿಯಾಗಿ ನೆಲಕ್ಕೆ ಬಿದ್ದು, ಹರಿಯುತ್ತಾ, ನೆಲವನ್ನು ತೋಯ್ದು, ಕೋಣೆಯ ಮೂಲೆ ಮೂಲೆಗೂ ಮೆಲ್ಲನೆ ಆವರಿಸಿ, ಮೆಟ್ಟಿಲುಗಳಿಂದ ಇಳಿದುಹೋಗಿ ಬೀದಿಯ ರಸ್ತೆಯನ್ನು ಒದ್ದೆಮಾಡುತ್ತದೆ. ಕತ್ತನ್ನು ಒಂದೇ ಏಟಿನಲ್ಲಿ ಆಳವಾದ ಗಾಯವಾಗುವಂತೆ ಕುಯ್ದುಬಿಟ್ಟರೆ ನೋವಿನ ಹಂಗಿಲ್ಲದೆ ಈತ ಸಾವನ್ನು ಆಲಂಗಿಸಬಹುದು. ನರಳುವ ಸಮಸ್ಯೆಯೇ ಬರುವುದಿಲ್ಲ. ಆದರೆ ಇವನ ಶವವನ್ನು ಏನು ಮಾಡಲಿ ನಾನು? ಎಲ್ಲಿ ಅಡಗಿಸಿಡಲಿ ಇವನ ಮೃತದೇಹವನ್ನು? ಎಲ್ಲಾ ಬಿಟ್ಟು ಎಲ್ಲಿಗೆಂದು ಓಡಿ ಹೋಗಲಿ ನಾನು? ನಾನು ಎಷ್ಟು ದೂರ ಪಲಾಯನಗೈದರೂ, ಯಾವ ರೆಫ್ಯೂಜಿ ಕ್ಯಾಂಪಿನಲ್ಲಿ ತಲೆಮರೆಸಿ ಉಳಿದುಕೊಂಡರೂ, ನನ್ನನ್ನು ಕೊಲ್ಲದೆ ಇವನ ಸೈನಿಕರು ಬಿಡುವುದಿಲ್ಲ ಅನ್ನೋದಂತೂ ಸತ್ಯ. `ಆತ ಕ್ಯಾಪ್ಟನ್ ಟೊರೆಸ್ ನ ಕೊಲೆಗಾರ. ಶೇವ್ ಮಾಡಲು ಹೋಗಿದ್ದ ನಮ್ಮ ಕ್ಯಾಪ್ಟನ್ನಿನ ಕತ್ತನ್ನು ಎರಡೂ ಭಾಗದಲ್ಲಿ ತನ್ನ ಬ್ಲೇಡಿನಿಂದ ಸೀಳಿ ಓಡಿಹೋದ ಹೇಡಿ. ನಮ್ಮೆಲ್ಲರ ಶತ್ರು ಈ ಕ್ಷೌರಿಕ. ಮಹಾ ದೇಶದ್ರೋಹಿ. ಈತನ ಹೆಸರನ್ನು ಮರೆಯಬೇಡಿ. ಅನ್ನುತ್ತಾ ನನ್ನ ಹೆಸರನ್ನು ಇನ್ನೊಮ್ಮೆ, ಮತ್ತೊಮ್ಮೆ ಕೂಗಿ ಹೇಳುತ್ತಾರೆ…' ಹೀಗೆ ಏನೇನೋ ಯೋಚಿಸುತ್ತಾ, ಭಯಾನಕ ಕಲ್ಪನೆಯ ಗುಂಗಲ್ಲೇ ನರಳುತ್ತಾ ನನ್ನ ಮನಸ್ಸು ಗೊಂದಲದ ಗೂಡಾಗಿತ್ತು. ಸಲೂನಿನ ಆರಾಮದಾಯಕ ಕುರ್ಚಿಯಲ್ಲಿ ಆಸೀನನಾದ ಟೊರೆಸ್ ಆರಾಮಾಗಿ ಕಣ್ಣುಮುಚ್ಚಿ ವಿಶ್ರಾಂತಿಯ ಸ್ಥಿತಿಯಲ್ಲಿದ್ದರೆ, ನಾನು ಬೀದಿಯ ಜನಜಂಗುಳಿಯಲ್ಲಿ ಸಿಕ್ಕಿಬಿದ್ದ ಕೊಲೆಗಾರನಂತೆ ನಿಂತಲ್ಲೇ ನಡುಗುತ್ತಿದ್ದೆ. ನನ್ನ ಮೈ ಜ್ವರದ ರೋಗಿಯಂತೆ ಬೆವರುತ್ತಿತ್ತು.
ಇವೆಲ್ಲಾ ಮುಗಿದ ನಂತರ ಆಗುವುದಾದರೂ ಏನು? ನಾನು ಹೀರೋ ಆಗುವೆನೋ ಅಥವಾ ಒಬ್ಬ ಜುಜುಬಿ ಕೊಲೆಗಾರನಾಗುವೆನೋ? ನನ್ನ ಭವಿಷ್ಯ ಈ ಹರಿತವಾದ ಬ್ಲೇಡಿನ ಅಂಚಿನಲ್ಲಿ ನಿಂತಿದೆ. ಕೈಯನ್ನು ಕೊಂಚ ಬಾಗಿಸಿ, ರೇಜರ್ ಬ್ಲೇಡನ್ನು ಕೊಂಚ ಒತ್ತಿ ಹಿಡಿದರೂ ಬ್ಲೇಡು ಇಂಚುಇಂಚಾಗಿ ರೇಷ್ಮೆಯಂಥಾ, ರಬ್ಬರಿನಂಥಾ ಈ ಕತ್ತಿನ ಚರ್ಮದ ಒಳಹೋಗುತ್ತದೆ. ಮಾನವ ಚರ್ಮಕ್ಕಿಂತ ಸೂಕ್ಷ್ಮವಾಗಿರುವ ಯಾವ ವಸ್ತುವಿದೆ ಈ ಪ್ರಪಂಚದಲ್ಲಿ. ಚಿಮ್ಮಲು ರಕ್ತವಂತೂ ಇದ್ದೇ ಇದೆ ಈ ದೇಹದ ಮೂಲೆಮೂಲೆಗಳಲ್ಲಿ. ಇಂಥಾ ಬ್ಲೇಡು ನನ್ನಂಥಾ ಚಾಣಾಕ್ಷ ಕ್ಷೌರಿಕನ ಕೈಯಲ್ಲಿ ವಿಫಲವಾಗುವ ಪ್ರಶ್ನೆಯೂ ಹಾಸ್ಯಾಸ್ಪದ ಮತ್ತು ಬಾಲಿಶ.
ಆದರೆ ಕೊಲೆಗಾರನಾಗಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಕ್ಯಾಪ್ಟನ್ ಟೊರೆಸ್ ಶೇವ್ ಮಾಡಿಸಿಕೊಳ್ಳಲು ಗ್ರಾಹಕನಾಗಿ ನನ್ನ ಸಲೂನಿಗೆ ಬಂದಿದ್ದಾನೆ. ನಾನೂ ಅಷ್ಟೇ ಗೌರವದಿಂದ ನನ್ನ ಕರ್ತವ್ಯವನ್ನು ಪೂರ್ಣಗೊಳಿಸಿ ಅವನನ್ನು ವಾಪಾಸು ಕಳುಹಿಸುವುದೇ ಸರಿ. ನನ್ನ ಕೈಗೆ ರಕ್ತದ ಹನಿಗಳು ಹೊಂದುವುದಿಲ್ಲ. ನನಗೇನಿದ್ದರೂ ಸಾಬೂನಿನ ನೊರೆಯೇ ಸರಿ. ಟೊರೆಸ್ ಒಬ್ಬ ಕೊಲೆಗಾರ ಮತ್ತು ನಾನೊಬ್ಬ ಮಾಮೂಲಿ ಕ್ಷೌರಿಕ, ಅಷ್ಟೇ. ಪ್ರತಿಯೊಬ್ಬನಿಗೂ ಅವನದೇ ಆದ ಜಾಗ, ಜವಾಬ್ದಾರಿ, ಕರ್ತವ್ಯಗಳಿರುತ್ತವೆ. ಹೌದು, ಅವರವರದ್ದೇ ನಿಯಮಿತ ಜಾಗಗಳು.
ಶೇವಿಂಗ್ ಮುಗಿದ ನಂತರ ಟೊರೆಸ್ ನ ಮುಖ ಮೃದುವಾಗಿ, ಶುಭ್ರವಾಗಿ ಕಂಗೊಳಿಸುತ್ತಿತ್ತು. ಆತ ಎದ್ದು ನಿಂತು ಕನ್ನಡಿಯಲ್ಲಿ ತನ್ನ ಮುಖವನ್ನು ದಿಟ್ಟಿಸಿದ. ತನಗರಿವಿಲ್ಲದಂತೆಯೇ ಅವನ ಕೈಗಳು ಹೊಸದಾದಂತೆ ಕಾಣುವ, ಆ ತಾಜಾ, ಮೃದು ಕೆನ್ನೆಗಳನ್ನು ಸವರಿದವು.
“ಧನ್ಯವಾದಗಳು'', ಎನ್ನುತ್ತಾ ಗೋಡೆಯ ಮೊಳೆಗೆ ನೇತುಹಾಕಿದ್ದ ಪಿಸ್ತೂಲಿನ ಸಹಿತವಿದ್ದ ಬೆಲ್ಟ್ ಮತ್ತು ಮಿಲಿಟರಿ ಕ್ಯಾಪನ್ನು ಟೊರೆಸ್ ತೆಗೆದುಕೊಂಡ. ಬಹುಶಃ ನನ್ನ ಮುಖ ಬಣ್ಣಗೆಟ್ಟಿತ್ತು. ಬೆವರಿನಿಂದ ಒದ್ದೆಯಾಗಿದ್ದ ನನ್ನ ಬೆನ್ನಿಗೆ ನನ್ನ ತೆಳುವಾದ ಶರ್ಟು ಅಂಟಿಕೊಂಡಿತ್ತು. ಬುಲೆಟ್ಟುಗಳೊಂದಿಗೆ ಅಲಂಕೃತ ತನ್ನ ಬೆಲ್ಟ್ ಅನ್ನು ಮಟ್ಟಸವಾಗಿ ಸೊಂಟಕ್ಕೆ ಬಿಗಿದು ಸಿಕ್ಕಿಸಿಕೊಳ್ಳುತ್ತಾ, ಜೋತುಬಿದ್ದ ಪಿಸ್ತೂಲನ್ನು ಸುರಕ್ಷಿತವಾಗಿ ಅದರ ಕವಚದಲ್ಲಿರಿಸಿ, ತನ್ನ ಕೇಶರಾಶಿಯ ಮೇಲೆ ಸುಮ್ಮನೆ ಕೈಯಾಡಿಸಿ ಆತ ತನ್ನ ಮಿಲಿಟರಿ ಕ್ಯಾಪನ್ನು ಧರಿಸಿದ. ಹಾಗೆಯೇ ಜೇಬಿನಿಂದ ನಾಲ್ಕೈದು ನಾಣ್ಯಗಳನ್ನು ತೆಗೆದು ನನ್ನ ಕೈಯಲ್ಲಿರಿಸಿ ಆತ ಸಲೂನಿನಿಂದ ಹೊರಬೀಳಲು ಮುಂಬಾಗಿಲಿನತ್ತ ನಡೆದ. ಸಲೂನಿನ ಹೊಸ್ತಿಲು ದಾಟಿದ ಟೊರೆಸ್ ಏನೋ ನೆನಪಾದವನಂತೆ ಒಂದು ಕ್ಷಣ ನಿಂತು ನನ್ನೆಡೆಗೆ ತಿರುಗಿದ.
“ನೀನು ನನ್ನನ್ನು ಕೊಂದೇ ಬಿಡುವಿ ಎಂದೆಲ್ಲಾ ಕೆಲವರು ಹೇಳುತ್ತಿದ್ದರು. ಅದಕ್ಕೇ ಪರೀಕ್ಷಿಸೋಣವೆಂದು ಬಂದೆ. ಕೊಲ್ಲುವುದೆಂದರೆ ಅಷ್ಟು ಸುಲಭದ ಮಾತಲ್ಲ ಗೆಳೆಯಾ. ನನ್ನ ಈ ಮಾತುಗಳನ್ನು ಸದಾ ನೆನಪಿನಲ್ಲಿಡು'', ಎಂದು ಹೇಳಿ ಕ್ಯಾಪ್ಟನ್ ಟೊರೆಸ್ ಬೀದಿಯತ್ತ ನಡೆದು ಮಾಯವಾದ.
ನಾನು ಪೆದ್ದನಂತೆ, ಪೆಚ್ಚಾಗಿ ನಿಂತಿದ್ದೆ.
ಮೂಲ ಲೇಖಕ: ಹೆರ್ನಾಂಡೋ ಟೆಲೆಝ್
ಹೆರ್ನಾಂಡೋ ಟೆಲೆಝ್ (1908 – 1966) ಕೊಲಂಬಿಯಾ ಮೂಲದ ಪ್ರಸಿದ್ಧ ಲೇಖಕ, ಪತ್ರಕರ್ತ. 1950 ರಲ್ಲಿ ಸ್ಪ್ಯಾನಿಷ್ ಭಾಷೆಯಲ್ಲಿ ಪ್ರಕಟವಾದ ಹೆರ್ನಾಂಡೋ ರ ಕಥಾಸಂಕಲನ `ಸೆನಿಝಾಸ್ ಅಲ್ ವಿಯೆಂತು' (ಆಷಸ್ ಟು ದ ವಿಂಡ್) ನಿಂದ ಈ ಕಥೆಯನ್ನು ಆರಿಸಲಾಗಿದೆ. `ಸೆನಿಝಾಸ್ ಅಲ್ ವಿಯೆಂತು' ಕಥಾಸಂಕಲನದ ಈ ಕಥೆ ಹೆರ್ನಾಂಡೋರಿಗೆ ವಿಶ್ವಮನ್ನಣೆಯನ್ನು ಗಳಿಸಿಕೊಟ್ಟಿತು. ಸ್ಪ್ಯಾನಿಷ್ ಭಾಷೆಯಲ್ಲಿರುವ `ಎಷ್ಪೂಮ ಯೊನಾದ ಮಾಯಿಷ್' ಎಂಬ ಶೀರ್ಷಿಕೆಯ ಈ ಕಥೆಯನ್ನು ಖ್ಯಾತ ಅಮೆರಿಕನ್ ಉಪನ್ಯಾಸಕ, ಲೇಖಕ, ಅನುವಾದಕ ಡೊನಾಲ್ಡ್ ಎ. ಯೇಟ್ಸ್ `ಜಸ್ಟ್ ಲಾಥರ್, ದ್ಯಾಟ್ಸ್ ಆಲ್' ಎಂಬ ಹೆಸರಿನಲ್ಲಿ ಆಂಗ್ಲಭಾಷೆಗೆ ಅನುವಾದಿಸಿದ್ದಾರೆ. ಈ ಕಥೆಯನ್ನು ಹಲವು ದೇಶಗಳಲ್ಲಿ ಪಠ್ಯವಾಗಿಯೂ ಅಳವಡಿಸಿಕೊಳ್ಳಲಾಗಿದೆ.
ಪ್ರಸಾದ್, ಕಥೆ ಅದ್ಭುತವಾಗಿದೆ! ನಿಮ್ಮ ಅನುವಾದ ಕೂಡ!
ಧನ್ಯವಾದಗಳು ಗುರುಪ್ರಸಾದ್ ಸರ್… ಈ ಕಥೆ ಓದಿದ ಕೂಡಲೇ ಖುಷಿಯಾಗಿ ಕುಳಿತು ಬರೆದ ಅನುವಾದವಿದು…
ತುಂಬಾ ಕುತೂಹಲಕಾರಿಯಾಗಿದೆ ಕಥೆ ಅಷ್ಟೇ ಚೆಂದವಾದ ಅನುವಾದ
ಧನ್ಯವಾದಗಳು ಶಿವು…