ಕೊಲೆ: ಅನಿತಾ ನರೇಶ್ ಮಂಚಿ

ಇಲ್ಲಾ ಸಾರ್ ಅಲ್ಲಿಂದ್ಲೇ  ಕೇಳಿದ್ದು ಹೆಣ್ಣು ಮಗಳ  ಕಿರುಚಾಟ..  ಬೇಗ ಹೋಗೋಣ ನಡೀರಿ ಸಾರ್.. 
ಸರಿಯಾಗಿ ಕೇಳಿಸಿಕೊಂಡ್ರೇನ್ರೀ? ದಿನ ಬೆಳಗಾದ್ರೆ ಕೇಳ್ಸೋ ಗಂಡ ಹೆಂಡ್ತಿ ಜಗಳ ಅಲ್ಲ ತಾನೇ?
 ಸಾರ್.. ಇದು ನಾನು ಯಾವತ್ತೂ ಕೆಲ್ಸ ಮುಗ್ಸಿ ಮನೆ ಕಡೆ ಹೋಗೋ ಶಾರ್‍ಟ್ ಕಟ್. ಯಾವತ್ತೂ ಇಂತಹ ಕಿರುಚಾಟ ಕೇಳೇ ಇಲ್ಲ ಸಾರ್.. ಅದೂ ಅಲ್ಲದೇ ಇದು ತುಂಬಾ ಪಾಶ್ ಅಪಾರ್ಟ್ ಮೆಂಟ್..ಇನ್ನೂ ಹೆಚ್ಚು ಫ್ಯಾಮಿಲಿ ಬಂದಿಲ್ಲಾ ಸಾರ್ ಇಲ್ಲಿ.. ಹೊಸಾದು.  ಇಲ್ಲಿ ಮಾತಾಡೋದೇ ಕೇಳ್ಸಲ್ಲ ಅಂದ್ಮೇಲೆ ಕಿರುಚಾಟ ಎಲ್ಲ ಎಲ್ಲಿ ಕೇಳ್ಸುತ್ತೆ ಸಾರ್..ಅದೂ ಅಲ್ದೇ ಕೇಳಿದ್ದು ಬರೀ ಹೆಣ್ಣು ಮಗ್ಳ ಸ್ವರ ಅಷ್ಟೇ.. ಏನಾದ್ರೂ ರೇಪ್ಗೀಪ್ ಇರ್ಬೋದೇನೋ ಅನ್ನುಸ್ತು.. ಅದ್ಕೆ ನಿಮ್ಗೆ ಫೋನ್ ಮಾಡ್ದೆ ಸಾರ್.. 
 ಮೊದ್ಲೇ ನಮ್ಮನ್ನು ಸುಮ್ ಸುಮ್ನೆ ಉಗಿಯೋರ ಸಂಖ್ಯೆ ಜಾಸ್ತಿ ಇದೆ.  ಇದೊಂದು ಸಲ ಆದ್ರೂ ನಾವೇನು ನಮ್ಮ ತಾಕತ್ತೇನು ಅಂತ ತೋರಿಸಿಯೇ ಬಿಡ್ಬೇಕು.. ರಿಟಾಯರ್ಡ್ ಆಗಲು ಇನ್ನು ಐದಾರು ವರ್ಷ ಅಷ್ಟೇ ಇರೋದು.. ಒಂದಾದ್ರು ಪ್ರಮೋಷನ್ ಆದ್ರೆ ಬರೋ ದುಡ್ಡಾದ್ರು ಹೆಚ್ಚಾಗುತ್ತೆ.. ತಲೆ ಕೊಡವಿಕೊಂಡು ಫೋನ್ ಮಾಡಿ ಕರೆಸಿದವನನ್ನು ಬದಿಗೆ ನಿಲ್ಲಲು ಹೇಳುತ್ತಾ ತಮ್ಮ ಸುತ್ತಲಿದ್ದ ಪಿ ಸಿ ಗಳಿಗೆ ಪೊಸಿಷನ್ ತೆಗೆದುಕೊಳ್ಳಲು ಸನ್ನೆ ಮಾಡಿದರು. 
ಸಾರ್.. ಪಕ್ಕದಿಂದ ತಮ್ಮವನದ್ದೇ ಸ್ವರ 
ಕಣ್ಣು ಕೆಕ್ಕರಿಸಿ ಅತ್ತ ನೋಡಿದರು ಏನು ಎನ್ನುವಂತೆ
ಸಾರ್.. ಎಂದವನು ಅತ್ತಿತ್ತ ನೋಡಿ ಅವರ ಕಿವಿಯಲ್ಲಿ ಬಿಲ್ದಿಂಗ್ ನೋಡಿದ್ರೆ ತುಂಬಾ ದೋಡ್ಡೋರ್ ಇರೋ ತರ ಕಾಣ್ಸುತ್ತೆ ಸಾರ್.. ಇಲ್ಲೇನಾದ್ರೂ ಹೈ ಲೆವೆಲ್ಲಲ್ಲೆ ನಡಿಯೋದು..  ಮೀಡಿಯಾದವ್ರಿಗೆ ಫೋನ್ ಮಾಡ್ಲಾ ಸಾರ್.. ಸ್ಟೋರಿ ಕವರ್ ಮಾಡ್ತಾರೆ. ನಾವೂ ಆಗಾಗ ಟಿ ವಿ ಲಿ ಬರ್ಬಹುದು.ಏನಂತೀರಾ?  
 ಹಂಗಂತೀಯಾ.. ಸರಿ ಸರಿ ಮಾಡು .. ಅವ್ರೂ ಬಂದ್ಬಿಡ್ಲಿ.. ಆಮೇಲೇ ಹೋಗೋಣ.. 
ಸಾರ್.. ಮೀಡಿಯಾದವ್ರಿಗೆ ಮಾಡ್ದೆ ಸಾರ್.. ಎರಡು ಚ್ಯಾನಲ್ನವ್ರಿಗೂ ಹೇಳ್ದೆ.. ಇಬ್ರೂ ಬ್ರೇಕಿಂಗ್ ನ್ಯೂಸ್ ಅಂತ ಹಾಕ್ತಾರಂತೆ ಸಾರ್..  

*******

ಮೀಡಿಯಾದವ್ರು ಬಂದ್ರೇನ್ರೀ.. 
ಇಲ್ಲಾ ಸಾರ್.. ಈಗ ಫೋನ್ ಮಾಡಿ ಕೇಳಿದ್ದೆ.. ಸ್ಟುಡಿಯೋಕ್ಕೆ ಸ್ತ್ರೀ ವಿಮೋಚನಾ ಸಂಸ್ಥೆಯ ಅಧ್ಯಕ್ಷೆಯನ್ನು ಕರ್ಸಿ ಈ ವಿಚಾರದ ಬಗ್ಗೆ ಮಾತಾಡ್ತಾ ಇದ್ದಾರಂತೆ ಸಾರ್.. ಈಗ ಬಂದ್ಬಿಡ್ತೀವಿ ಅಂದ್ರು.. ನಾನು ಅವ್ರ ನೇರ ಸಂಪರ್ಕದಲ್ಲೇ ಇದ್ದೀನಿ ಸಾರ್.. 
ನೀವೇನ್ರೀ ಕರ್ಮ ಸಂಪರ್ಕದಲ್ಲಿರೋದು ಕೊಡ್ರೀ ಇತ್ಲಾಗಿ ಫೋನ್.. ಏನೇನೆಲ್ಲಾ ಮಾತಾಡಿ ನನ್ ತಲೇಗೆ ತರ್ಬೇಡಿ.. 
ಇಲ್ಲಾ ಸಾರ್.. ನಗರದ ಸುಪ್ರಸಿದ್ಧ ಬಹು ಮಹಡಿ ಕಟ್ಟಡದಲ್ಲಿ ಮಹಿಳೆಯೊಬ್ಬರ ಅತ್ಯಾಚಾರ ಯತ್ನ ಪ್ರಕರಣ ಅಂತ ಮಾತ್ರ ಹಾಕಿದ್ದಾರಷ್ಟೇ ಸಾರ್.. ಈ ಬಿಲ್ಡಿಂಗ್ನ ಹೆಸ್ರು ನಾನಿನ್ನೂ ಹೇಳಿಲ್ಲ ಸಾರ್.. 

********

ಸಾರ್.. ಬೇಗ ಮೇಲೆ ಹೋಗೋಣ ಪಾಪ.. ಏನು ತೊಂದ್ರೇಲಿದ್ದಾರೋ ಆ ಹೆಣ್ಣು ಮಗಳು.. ಮನೆಗೆ ಹೋಗಲು ಅವಸರದಿಂದಿದ್ದ ಸಾಮಾನ್ಯ ನಾಗರೀಕನ ಸ್ವರ..
ಸುಮ್ನಿರ್ರೀ ನೀವು.. ಪೊಲಿಸ್ ನಾನಾ ನೀವಾ.. ಏನಾಯ್ತೋ ಮೀಡಿಯಾ ಕಥೆ?
ಸಾರ್.. ಅವ್ರು ನಿಧಾನಕ್ಕೆ ಬರ್ತಾರೆ ಸಾರ್.. ನಾನು ಸ್ವಲ್ಪ ಡಿಟೈಲ್ಸ್ ಕಲೆಕ್ಟ್ ಮಾಡ್ತಾ ಇದ್ದೀನಿ ಸಾರ್. ಈ ಬಿಲ್ಡಿಂಗ್ ನಮ್ಮ ಆಪೋಸಿಟ್ ಪಾರ್ಟಿ ಲೀಡರ್ ಬಸವಯ್ಯನವರದ್ದು ಅಂತೆ ಸಾರ್.. 
ಅಯ್ಯೋ.. ಹೌದಾ.. ಹಾಗಿದ್ರೆ ಒಳ್ಳೇದೇ ಆಯ್ತು ಬಿಡಿ.. ಇಂತಾ ಕೇಸು ಇಲ್ಲಿ ಆದ್ರೆ ಸರ್ಕಾರಕ್ಕೆ ಲಾಭನೇ.. ಇನ್ನೇನು ಬರೋ ಇಲೆಕ್ಷನ್ನಿನಲ್ಲಿ ಸರೀ ಉಗೀಬಹುದು ಈ ಖದೀಮಗಳಿಗೆ.. 
ಆದ್ರೆ ಸಾರ್.. ಈಗಿರೋ ಪಾರ್ಟಿ ಏನೇ ಉರುಳಾಡಿದ್ರು ಮುಂದಿನ ಇಲೆಕ್ಷನ್ನಿನಲ್ಲಂತೂ ಗೆಲ್ಲೋಕಾಗಲ್ಲ ಸಾರ್.. ಇವ್ರದ್ದೇ ಅಲ್ವಾ ಬರೋದು.. ಹೆಂಗೂ ನಂಬರ್ ಇದೆ ಒಂದು ಫೋನ್ ಮಾಡಿ ಬಿಡ್ಲಾ..
ಹುಂ.. ಅದೇ ಒಳ್ಳೇದು ಅನ್ಸುತ್ತೆ.. 
ಸಾರ್ ಮೀಡಿಯಾದವ್ರ ಫೋನ್ ಬರ್ತಾ ಇದೆ ನೋಡಿ.. ಇಲ್ಲಾ ಇನ್ನೂ ಕಾರ್ಯಾಚರಣೆ ನಡೀತಾ ಇದೆ ವಿವರ ಹೇಳೋಕಾಗಲ್ಲ ಅಂದ್ಬಿಡಿ ಸಾರ್..
ಅದು ನಾನು ನೋಡ್ಕೋತೀನಿ.. ನೀವು ಆವಯ್ಯಂಗೆ ಫೋನ್ ಮಾಡಿ. 
ಸಾರ್.. ಇದೀಗ ಬಸವಯ್ಯಂದು ಅಲ್ವಂತೆ ಸಾರ್.. ಇದುನ್ನ ಆಳೋ ಪಕ್ಸದ ವೃಷಭಯ್ಯ ತೆಗೊಂಡಿದ್ದಾರಂತೆ.. ಯಾಕೆ ಏನಾಗಿದೆ ಅಂತ ಕೇಳ್ತಾ ಇದ್ದಾರೆ ಹೇಳ್ಬಿಡ್ಲಾ ಸಾರ್.. 
ಸುಮ್ನೆ ಆಫ್ ಮಾಡ್ರೀ ಫೋನ್.. ವೃಷಭಯ್ಯ ಅಂದ್ರೆ ಸುಮ್ನೆ ಅಂದ್ಕೊಂಡಿದ್ದೀರಾ.. ನಾಳೆ ವಿಷ್ಯ ಗೊತ್ತಾದ್ರೆ ಒಂದು ತೊಟ್ಟು ನೀರು ಕೂಡಾ ಸಿಗದ ಜಾಗಕ್ಕೆ ಎತ್ತಂಗ್ಡಿ ಮಾಡ್ಬಿಡ್ತಾರೆ.. ಸುಮ್ನಿರಿ ಸ್ವಲ್ಪ..ಮೀಡಿಯಾದವ್ರಿಗೆ ಜಾಗಗೀಗ ಹೇಳಿದ್ದೀರಾ ..ಇಲ್ಲಾ ತಾನೇ.. 
ಇನ್ನೂ ಹೇಳಿಲ್ಲಾ ಸಾರ್.. ಅವ್ರು ಈ ಬ್ರೇಕಿಂಗ್ ನ್ಯೂಸ್ ಗೆ ಸೆಲೆಬ್ರಿಟಿಗಳನ್ನು ಕರಿಯೋ ಕೆಲ್ಸದಲ್ಲಿ ಬಿಜಿಯಾಗಿದ್ದಾರಂತೆ ಸಾರ್.. ಅದನ್ನ ಮಾಡಿ ಆಮೇಲೆ ಬರ್ತೀವಿ .. ಅಲ್ಲಿವರೆಗೆ ನೇರ ಸಂಪರ್ಕದಲ್ಲೇ ಮಾತಾಡ್ತೀವಿ ಅಂದ್ರು ಸಾರ್.. 
ಸರಿ ಸರಿ.. ನನ್ ಹೆಂಡ್ತೀಗೆ ಫೋನ್ ಮಾಡಿ ಹೇಳ್ಬೇಕೀಗ .. ನನ್ನ ವಾಯ್ಸು ಟಿ ವಿ ಲಿ ಬರ್ತಾ ಇದೆ ಅಂತ.. 
ಅಮ್ಮಾವ್ರಿಗೆ ನಾನಾಗ್ಲೇ ಹೇಳಿ ಆಯ್ತು ಸಾರ್. . ಅದಿಕ್ಕೆ ಅವ್ರು  ಟಿ ವಿ ಲಿ ನನ್ ಸೀರಿಯಲ್ ಬರ್ತಾ ಇದೆ.. ಅವ್ರು ವಾಯ್ಸ್ ಏನು ದಿನಾ ಕೇಳಲ್ವಾ ಮನೇಲಿ  ಅಂತ ಇಟ್ಬಿಟ್ರು ಸಾರ್ ..
ಯೂ ಫೂಲ್ ನಿಮ್ಗ್ಯಾರ್ರೀ ಮನೆಗೆ ಫೋನ್ ಮಾಡೋಕೆ ಹೇಳಿದ್ದು ಅಧಿಕ ಪ್ರಸಂಗಿ .. ಎಲ್ಲಾ ಇಂತವ್ರೆ ಇರೋದು ನಮ್ ಡಿಪಾರ್ಟ್ಮೆಂಟಲ್ಲಿ.. ನನ್ ಕರ್ಮ ನಿಮ್ಮಂತವ್ರ ಜೊತೆ ಏಗ್ಬೇಕು.. 

*******

ಆಗಲೇ  ಇನ್ನೊಮ್ಮೆ ಕೇಳಿತ್ತು ಜೋರಾದ ಧ್ವನಿ..
 ಹೆಲ್ಪ್.. ಹೆಲ್ಪ್..
ಸಾರ್.. ನೋಡೀ ಸಾರ್ ಮತ್ತೆ ಕೇಳಿಸ್ತಾ ಇದೆ.. ಹೋಗೋಣಾ ಸಾರ್..
ಸುಮ್ನಿರ್ತೀರಾ .. ಏನೋ ಫೋನ್ ಮಾಡಿ ಹೇಳಿದ್ದೀರಾ ಅಂದ್ಕೂಡ್ಲೇ ದೊಡ್ ಜನ ಅಂದ್ಕೊಂಡ್ರಾ.. ಬಾಯ್ಮುಚ್ಕೊಳ್ಳಿ ಇಲ್ಲಾ.. ನಿಮ್ಮನ್ನೇ ಒದ್ದು ಒಳಗೆ ಹಾಕ್ಲಾ.. ನಮ್ಗೆ ಏನು ಮಾಡ್ಬೇಕು, ಏನು ಮಾಡ್ಬಾರ್ದು ಅಂತ  ಹೇಳೋಕೆ ನೀವ್ಯಾರ್ರೀ.. ಮುಚ್ಕೊಂಡು ಕೂತ್ಕೊಳ್ಳಿ.. 

********

ಸಾರ್ .. ಅಲ್ನೋಡೀ ಸಾರ್.. ಆ ಕೆಂಪು ಕಾರು.. ಇದು ನಮ್ಮ ಡಿ ಸಿ ಪಿ   ಮಗನ ಕಾರಲ್ವಾ.. ನಂಬರ್ ನೋಡಿ ಸಾರ್.. ನಂಗೆ ಸರೀ ನೆನ್ಪಿದೆ.. 
 ಹೌದಾ.. ಮೊದ್ಲು ಸಾರ್ ಗೆ ಫೋನ್ ಮಾಡಿ ಹೇಳ್ಬಿಡೋಣಾ..ನಿಲ್ರೀ.. ಆಮೇಲೆ ನಮ್ದೇ ಡಿಪಾರ್ಟ್ಮೆಂಟ್ ತಗಲಾಕ್ಕೊಳ್ಳುತ್ತೆ..
ಲೈನ್ ಸಿಗ್ತಾ ಇಲ್ಲ ಸಾರ್.. ಒಳಗಡೆ ಹೋಗ್ಬಿಡೋಣ್ವಾ..
ಇರ್ರೀ.. ಸ್ಸ್ವಲ್ಪ.. ಯಾರಿದ್ದಾರೋ ಏನೋ ಅಲ್ಲಿ.. ಅವ್ರ ಫೋನ್ ಸಿಗ್ಲಿ ಮೊದ್ಲು.. ಕೇಳ್ಕೊಂಡೇ ಡಿಸೈಡ್ ಮಾಡೋಣಾ..

***********

ಅಯ್ಯೋ.. ನೋಡೀ ಡಿಸ್ ಸಿ ಪಿ ಸಾಹೇಬ್ರೆ ಫೋನ್ ಮಾಡ್ತಿದ್ದಾರೆ.. ತೆಗೊಳ್ಳೀ ಸಾರ್..

******

ಹುಂ.. ಸಾರ್.. ಸರಿ ಸಾರ್..ಈಗ್ಲೇ ಸಾರ್.. ನಾವೆಲ್ಲಾ ಫುಲ್ ಎಲರ್ಟ್ ಆಗಿದ್ದೀವಿ ಸಾರ್.. ಓಕೆ ಸಾರ್.. 
ಹುಂ.. ನಡೀರಿ ಬೇಗ.. ಟೇಕ್ ಯುವರ್ ಪೊಸಿಷನ್ಸ್.. ಡೋರ್ ನಂಬರ್ ಐವತ್ತೈದು ಎ. ಅಲ್ಲಿಂದ್ಲೇ ಕೇಳ್ತಾ ಇರೋದು ಕಿರುಚಾಟ.. ಕಮನ್.. ಮೂವ್ ಫಾಸ್ಟ್..
ಯಾರ್ ಮನೆ ಸಾರ್ ಅದೂ..
ಸಾಹೇಬ್ರ ಮನೇನೇ ಕಣ್ರೀ ಅದು.. ಅದ್ಕೆ ಅವ್ರ ಮಗನ ಕಾರ್ ಹೊರ್ಗಡೆ ಕಂಡಿದ್ದು.. ಅಷ್ಟೂ ಕಾಮನ್ ಸೆನ್ಸ್ ಇಲ್ವೇನ್ರೀ ನಿಮ್ಗೆ.. 
ಅಯ್ಯೋ.. ಏನಾದ್ರೂ ಸೀರಿಯಸ್ ಆಗಿದ್ಯಾ ಸಾರ್.. ಅಂದ್ರೆ, ಕೊಲೆ ಗಿಲೆ ಏನಾದ್ರೂ..
ಇನ್ನೂ ಇಲ್ಲ ಕಣ್ರೀ.. ನಾವೇ ಹೋಗಿ ಮಾಡ್ಬೇಕು.. ಬನ್ನಿ ಬೇಗ..

**********

 ಓಹ್.. ಗಾಡ್.. ಸದ್ಯ ಬಂದ್ರಲ್ಲಾ.. ಪ್ಲೀಸ್ ಹೆಲ್ಪ್..  ಕಿಲ್ ದಟ್ ಡರ್ಟೀ ಕಾಕ್ರೋಚ್.. ಇಟ್ಸ್ ಇನ್ ಮೈ ಬಾತ್ ರೂಮ್.. ಕಮ್ ಫಾಸ್ಟ್.. 

********

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Prasad
Prasad
9 years ago

Awesome short story.. Fun read 🙂

Anitha Naresh Manchi
Anitha Naresh Manchi
9 years ago
Reply to  Prasad

Thank you 🙂

parthasarathy
9 years ago

ಏನ್ರಿ  ಇನ್ನು ಏಪ್ರಿಲ್ ಎಲ್ಲೋ ಇದೆ ಈಗ್ಲೆ ಫೂಲ್ ಮಾಡ್ತೀರಲ್ಲ, 
ನಾನು ಏನೊ ಸೀರಿಯಸ್ ಅಂತ ಕಡೇವರೆಗೂ ಓದಿ….  ಬೇಡ ಬಿಡಿ 🙁

 

ವನಸುಮ
9 years ago

ಹಾ ಹಾ ಸೂಪರ್…

4
0
Would love your thoughts, please comment.x
()
x