ಕೊರೋನಾ ಕಾಲುಗಳು!: ಎಸ್.ಜಿ.ಶಿವಶಂಕರ್

ಏನು? ಕೊರೊನಾಕ್ಕೂ ಕಾಲುಗಳಿವೆಯೆ ಎಂದು ಹುಬ್ಬೇರಿಸಬೇಡಿ. ನಾನೀಗ ಹೇಳುತ್ತಿರುವುದು ಕೊರೋನಾ ಲಾಕ್ಡೌನ್ ಸಮಯದಲ್ಲಿ ಬರುತ್ತಿದ್ದ ಫೋನ್ ಕಾಲುಗಳ ಬಗೆಗೆ!
ಕೊರೋನಾ ಮಾರಿ ಇಡೀ ವಿಶ್ವವನ್ನೇ ನಡುಗಿಸಿ, ಸಾವಿನ ಗಾಣದಲ್ಲಿ ಹಾಕಿ ಅರೆಯುತ್ತಿರೋವಾಗ ಅನಿವಾರ್ಯವಾಗಿ ಲಾಕ್‍ಡೌನ್ ಅಮರಿಕೊಂಡಿದೆ! ಎಲ್ಲೆಲ್ಲೂ ಲಾಕ್‍ಡೌನ್!! ಅಲ್ಲೂ ಲಾಕ್ಡೌನ್! ಇಲ್ಲೂ ಲಾಕ್‍ಡೌನ್, ಎಲ್ಲಾ ಕಡೆಯೂ ಲಾಕ್‍ಡೌನ್! ವಾರವೊ, ಹದಿನೈದು ದಿನವೊ ಆಗಿದ್ದರೆ ಹೇಗೋ ಜನ ತಡ್ಕೋಬಹುದು. ಅದು ತಿಂಗಳುಗಳನ್ನೂ ಮೀರಿ, ವಿಸ್ತರಿಸುತ್ತಾ..ವಿಸ್ತರಿಸುತ್ತಾ..ಮನೆಯೊಳಗೆ ಧಿಗ್ಭಂದಿಯಾದ ಜನ ಹೇಗೆ ಕಾಲ ಕಳೀಬೇಕೂಂತ ಪರಿತಪಿಸೋ ಹಾಗಾಗಿಬಿಡ್ತು. ಟಿ.ವಿ ವಾಹಿನಿಗಳೂ ಓತೋಪ್ರೋತವಾಗಿ ಸಿನಿಮಾ ಮಳೆಗರೆಯಲು ಶುರು ಮಾಡಿದ್ದವು! ಮೊದಲಿಗೆ ಒಂದಿಷ್ಟು ಸಿನಿಮಾ ಕಣ್ಣೂ, ಮನಸ್ಸನ್ನು ಸೆಳೆದಿದ್ದವು! ಆಮೇಲೆ..? ಬೋರಾದುವು! ಹಟ ಬಿಡದ ಚಂದಮಾಮದ ತ್ರಿವಿಕ್ರಮನಂತೆ ಜನರು ಹೊಸ ಪ್ರಯತ್ನಗಳನ್ನು ಮಾಡ್ತಿದ್ದಾರೆ. ಅವುಗಳಲ್ಲಿ ಹಳೆ ಕಾಲದ ಮಿತ್ರರಿಗೆ, ಚಡ್ಡಿ ದೋಸ್ತಿಗಳಿಗೆ, ಪ್ಯಾಂಟು ದೋಸ್ತಿಗಳಿಗೆ-ಮುಂತಾದವರಿಗೆ ಫೋನ್ ಮಾಡುವುದೂ ಒಂದು.
ಮನೇಲಿ ಕೂತಿರೋದು ಬೋರಾಗಿ ಗತಕಾಲದ ನೆನಪನ್ನ ಕೋಳಿಯಂತೆ ಕೆದಕಿ, ಫೋನ್‍ನಂಬರುಗಳನ್ನು ಹುಡುಕಿ ಜನ ಫೋನ್ ಮಾಡೋಕೆ ಶುರು ಮಾಡಿದ್ದಾರೆ. ಮಾಡಿದವರಿಗೆ ಎಷ್ಟು ಸಲ ಫೋನ್ ಮಾಡೋಕಾಗುತ್ತೆ. ಅದಕ್ಕೆ ಹೊಸಬರನ್ನ ಹುಡುಕಿ ಫೋನ್ ಮಾಡುವ ಅಂತ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಹಾಗಾಗಿ ಕಳೆದ ಒಂದು ತಿಂಗಳಿಂದ ಮರೆತ ಸ್ನೇಹಿತರು, ತೊರೆದ ನೆಂಟರು-ಸಂಪರ್ಕಕ್ಕೆ ಬರ್ತಾ ಇದ್ದಾರೆ.

ಬೆಳಿಗ್ಗೆ ಹತ್ತುಗಂಟೆ. ಉಪಹಾರ ಮುಗಿಸಿ, ಎರಡು ಸಲ ಕಾಫಿ ಕುಡಿದು ಪೇಪರಲ್ಲಿ ಕಣ್ಣಾಡಿಸುತ್ತಿದ್ದೆ. ಆಗ ದಿನದ ಪ್ರಥಮ ಫೋನ್ ಕರೆ ಬಂತು!
“ನಾನ್ಯಾರು ಗೊತ್ತಾಯ್ತೆ?” ಅಪರಿಚಿತ ಗಂಡು ಸ್ವರ ಉಲಿಯಿತು!
“ಇಲ್ಲ…”
“ಜ್ಞಾಪಿಸಿಕ್ಕೊಳ್ಳಿ”
“ಈಗ್ಲೂ ಇಲ್ಲ..”
“ಕೋಡುಬಳೆ..?”
“ಏನು? ಕೋಡುಬಳೇನಾ..ಮಾತಡ್ತಿರೋದು?”
ಸಖೇದಾಶ್ಚರ್ಯವಾಯಿತು! ನಮ್ಮ ಜೈವಿಕ ತಂತ್ರಜ್ಞಾನ ಇಷ್ಟೊಂದು ಮುಂದುವರಿಯಿತೆ? ಕೋಡುಬಳೆ ಕೂಡ ಮಾತಾಡಲು ಶುರುವಾಯಿತೆ?
“ಹೌದು, ಕೋಡ್ಬಳೇನೆ..ವಿಡಿಯೋ ಆನ್ ಮಾಡು ಗೊತ್ತಾಗುತ್ತೆ”
ಮೊಬೈಲುಗಳು ಯದ್ವಾತದ್ವಾ ಅಡ್ವಾನ್ಸಾಗಿ ನೋಡಲಸಾಧ್ಯವಾದದ್ದೆಲ್ಲಾ ನೋಡುವಂತಾಗಿವೆ! ಆ ದನಿಯ ಆದೇಶಕ್ಕೆ ಮಣಿದು ವಿಡಿಯೋ ಕಾಲ್ ಆನ್ ಮಾಡಿದೆ.
ಅದು ಕೋಡುಬಳೆಯಾಗಿರದೆ ನಿಜಕ್ಕೂ ಓರ್ವ ಗಂಡಸಿನದಾಗಿತ್ತು! ಉತ್ತರ ಭಾರತದ ತಿನಿಸು ಬತೂರಾ ತರಾ ಊದಿದ ಮುಖ, ದಂತಪಕ್ತಿಗಳನ್ನು ಧಾರಾಳವಾಗಿ ಪ್ರದರ್ಶಿಸುತ್ತಿತ್ತು ಆ ಗಂಡಸು!
“ಗೊತ್ತಾಯ್ತ?” ಎಂದಿತು ಆ ಮುಖ!
“ಕೋಡುಬಳೆ ಎಂದಿದ್ದೆ?” ಆಕ್ಷೇಪಿಸಿದೆ! ನಿಜಕ್ಕೂ ಕೋಡುಬಳೇನೇ ಮಾತಾಡ್ತಿದೆ ಅಂದುಕೊಂಡಿದ್ದ ನನಗೆ ನಿರಾಸೆಯಾಗಿತ್ತು!

“ಹೌದು. ನೀವೆಲ್ಲಾ ನನ್ನ ಅದೇ ಅಡ್ಡ ಹೆಸರಿಂದ ಕರೀತಿದ್ರಿ!”
ಒಮ್ಮೆಲೇ ನೆನಪು ಗತಕಾಲಕ್ಕೆ ನಾಗಾಲೋಟದಲ್ಲಿ ಓಡಿತು! ಮೂಡಿಗೆರೆ ತಾಲ್ಲೋಕಿನ, ಗೋಣೀಬೀಡಿನ ಪ್ರೈಮರಿ ಸ್ಕೂಲಿನ ಮೂರನೆ ತರಗತಿಯ ಸಹಪಾಠಿ ಬೋರಯ್ಯ ನೆನಪಾಯಿತು! ದಿನಾ ಜೇಬಲ್ಲಿ ಕೋಡುಬಳೆ ಇಟ್ಕೊಂಡು ಬರ್ತಿದ್ದ! ಅವನು ಕೂತು ಎದ್ದಾಗ, ಅವನ ಚಡ್ಡಿ ಜೇಬಿನಲ್ಲಿ ಅದು ಚೂರುಚೂರಾಗಿರುತ್ತಿತ್ತು. ಅದರ ತುಣುಕುಗಳನ್ನು ಅವನು ಆಗಾಗ್ಗೆ ಬಾಯಿಗೆ ಹಾಕಿಕ್ಕೊಳ್ಳುತ್ತಿದ್ದುದು ನೆನಪಾಯಿತು!
“ಅರೆ, ನೀನು. ಬೋರಯ್ಯ ಅಲ್ವೇನೋ..?”
“ಕರೆಕ್ಟಾಗಿ ಹೇಳಿದೆ! ಎಷ್ಟು ವರ್ಷ ಆಯ್ತು!?”
“ನನ್ನ ನಂಬರು ಹೇಗೆ ಸಿಕ್ತು..?’
“ನೀನ್ಯಾವುದೋ ಕಾದಂಬರಿ ಬರ್ದಿದ್ದೀಯಂತೆ? ಅದು ಧಾರಾವಾಹಿಯಾಗಿ ವಾರಪತ್ರಿಕೇಲಿ ಬರ್ತಿದೆಯಲ್ಲ? ಆ ಪೇಪರಿನವರಿಗೆ ಫೆÇೀನ್ ಮಾಡಿ ಇಸ್ಕೊಂಡೆ!”
“ಓದಿದೆಯಾ..?” ಖುಷಿಯಾಯಿತು! ಬರೀ ಮೊಬೈಲು, ಟಿವಿ ನೋಡುವ ಜನರ ನಡುವೆ ಓದುಗನೊಬ್ಬ ಸಿಕ್ಕ ಖುಷಿಯಲ್ಲಿ ಕೇಳಿದೆ!
“ಇಲ್ಲ…ನೋಡಿದೆ”
ಜರ್ರನೆ ನನ್ನ ಉತ್ಸಾಹ ನೆಲಕಚ್ಚಿತು!

“ಓದಲಿಲ್ಲವಾ..?” ಬೇಸರಿಸಿದೆ.
“ಓದೋದು ಪ್ರೈಮರಿಗೇ ಬಿಟ್ಬಿಟ್ಟೆ! ಅಪ್ಪನ ಉದ್ಯೋಗ ಮುಂದುವರಿಸಿದೆ..”
“ಅಂದರೇನೊ..?”
“ನಮ್ಮಪ್ಪ ಬಿಟ್ಟು ಹೋದ ಆಸ್ತಿ, ದೊಡ್ಡ ಕಬ್ಬಿಣದ ಬಾಂಡ್ಲಿ, ಜಾಲರಿ! ಅದನ್ನೇ ಉಪಯೋಗಿಸ್ತಾ ಬೋಂಡಾ, ಚಕ್ಲಿ, ಕೋಡ್ಬಳೆ ಮಾಡ್ತಿದ್ದೆ. ಸಂತೆ, ಜಾತ್ರೆಗಳಲ್ಲೂ ಸ್ಟಾಲ್ ಇಟ್ಕೋತಿದ್ದೆ. ಈಗ ಸ್ವಲ್ಪ ಸ್ಟೈಲ್ ಛೇಂಜ್ ಮಾಡಿದ್ದೀನಿ. ಮನೇಲೇ ಚಕ್ಲಿ, ಕೋಡ್ಬಳೆ, ನಿಪ್ಪಟ್ಟು ಮುಂತಾದುವನ್ನ ಮಾಡಿ ಅಂಗಡಿಗಳಿಗೆ ಸಪ್ಲೈ ಮಾಡ್ತಿದ್ದೀನಿ. ದಸರಾದಲ್ಲಿ ನಿಮ್ಮೂರಿನ ಆಹಾರ ಮೇಳಕ್ಕೂ ಬಂದಿದ್ದೆ! ನೀನೆಲ್ಲಿ ಕಾಣ್ಲೇ ಇಲ್ಲ!”
ಕೋಡಬಳೆ ಯಾನೆ ಬೋರಯ್ಯ ತನ್ನ ಯಶೋಗಾಥೆ ವಿವರಿಸಿದ.
ಅಷ್ಟು ಹಳೆಯ ಸ್ನೇಹಿತ ವಾರಪತ್ರಿಕೆಯಲ್ಲಿ ಬರ್ತಿರೋ ನನ್ನ ಧಾರವಾಹಿ ಓದದೆ, ಬರಿ ನೋಡಿ ನನ್ನ ಫೆÇೀನ್ ನಂಬರ್ ಪಡೆದುಕೊಂಡು ಫೋನ್ ಮಾಡಿದ್ದು ತುಂಬಾ ಸಂತೋಷವಾಗಿತ್ತು!

ನನ್ನ ಸಂತೋಷನ ಹಂಚಿಕೊಳ್ಳುವುದಕ್ಕೆ ಪತ್ನಿಯನ್ನು ಕರದೆ.
“ಲೇ..ಇವಳೇ…?”
“ಏನೋ..? ಇನ್ನೊಂದ್ಸ ಕಾಫಿ ಬೇಕಾ? ಈಗಾಗಲೇ ಎರಡು ಸಲ ಆಯ್ತು. ಈ ಲಾಕ್ಡೌನ್ ಮಾಡಿದ್ದು ಹೆಂಗಸರಿಗೆ ಎಷ್ಟು ತಾಪತ್ರಯ? ಇದನ್ನ ಮಾನ್ಯ ಮುಖ್ಯಮಂತ್ರಿಗಳಿಗೆ, ಪ್ರಧಾನಮಂತ್ರಿಗಳಿಗೆ ಹೇಳಬೇಕು”
“ಅಯ್ಯೋ ಕಾಫಿಗಲ್ಲ.. ಕರೆದದ್ದು”
“ಮತ್ತಿನ್ನೇನು? ಇನ್ಯಾರೋ ಒಬ್ಬ ನಿಮ್ಮ ಸ್ನೇಹಿತ ಫೋನ್ ಮಾಡಿದ್ನಾ?”
“ಅದು ನಿನಗೆ ಹೇಗೆ ಗೊತ್ತಾಯ್ತು?”
“ಅಯ್ಯೋ ಅಷ್ಟೂ ಗೊತ್ತಾಗಲ್ವಾ? ಈ ಸಮಯದಲ್ಲಿ ಎಲ್ಲಾ ಹುಡುಕಿ ಹುಡುಕಿ ಫೋನ್ ಮಾಡುತ್ತಿದ್ದಾರೆ. ನನಗೂ ಇಂತಾ ಅನುಭವಗಳು ಆಗ್ತಿವೆ. ಅದೇನ್ನು ದೊಡ್ಡ ವಿಷಯವೆ?”
ನನ್ನ ಹೊಸ ಓದುಗನ ಬಗೆಗೆ ಕೊಚ್ಚಿಕ್ಕೊಳ್ಳಬೇಕೆಂದಿದ್ದ ನನ್ನ ಉತ್ಸಾಹ ಕಮರಿತು.
“ನಿಮಗೇಂದ್ರೆ ಮಾಡೋಕೆ ಕೆಲಸ ಇಲ್ಲ ನನ್ನಂತ ಗೃಹಿಣಿಯರಿಗೆ ಧಂಡಿ ಕೆಲಸ”
ಎನ್ನುತ್ತಾ ನಾಟಕದ ಪಾತ್ರದಂತೆ ನಿರ್ಗಮಿಸಿದಳು.

ಇವತ್ತು ನಾನು ಏನು ಮಾಡಬಹುದು? ಸಮಯ ಹೇಗೆ ಕಳೆಯಬಹುದು? ಎಂದು ಯೋಚಿಸುತ್ತಿರುವಾಗ ಮತ್ತೊಂದು ಫೋನ್! ಇನ್ನೊಬ್ಬ ಸಹಪಾಠಿಯೆ? ಫೋನ್ ಎತ್ತಿಕೊಂಡೆ.
“ನಾನ್ಯಾರು ಗೊತ್ತಾಯ್ತು?” ಮಾಮೂಲಿನಂತೆ ಆಗಂತುಕನ ಸಂಭಾಷಣೆಯ ಪರಿ!
“ಒಂದು ಕ್ಲೂ ಕೊಡು ನೋಡೋಣ” ಮಾಮೂಲಿನಂತೆ ಗೊತ್ತಾಗಲಿಲ್ಲ ಎಂದು ಹೇಳುವುದರ ಬದಲಿಗೆ ಹೀಗೆ ಕೇಳಿದೆ.
“ಓಕೆ ಒಂದು ಕ್ಲೂ ಕೊಡುತ್ತೇನೆ ಕೇಳು. ಗಣಗಣ ಗಂಟೆ ಬಾರಿಸಿತು”
“ನಿನ್ನನ್ನು ಕೊಟ್ಟಿದ್ದ ಕ್ಲೂಗೆ ಗೊತ್ತ್ತೂ ಆಯ್ತು ಸುಸ್ತೂ ಆಯ್ತು”
“ಸುಸ್ತ? ಅದ್ಯಾಕೋ?”
“ಕಾಲ್ ಮೇಲೆ ಕಾಲ್ ರಿಸೀವ್ ಮಾಡ್ತಾ ಇದೀನಿ”
“ಹೀಗೆ ಕಾಲ್ ಬರ್ತಾ ಇದ್ರೆ ಟೈಂಪಾಸ್ ಆಗುತ್ತೆ ಅಂತ ಖುಷಿಯಾಗಿರುವುದು ಬಿಟ್ಟು ಸುಸ್ತಾಗಿದೆ ಅಂತಿದ್ಯಲ್ಲ? ವಿಚಿತ್ರ ಮನುಷ್ಯ! ನಿನ್ನಷ್ಟೇ ನಿನ್ನ ಕಾದಂಬರಿಯನ್ನು ವಿಚಿತ್ರ”
ಕಾದಂಬರಿ ಹೆಸರು ಅವನ ಹೇಳುತ್ತಿದ್ದಂತೆ ಖುಷಿಯಾಯಿತು. ನನ್ನ ಓದುಗರ ಸಂಖ್ಯೆ ಹೆಚ್ಚುತ್ತಿದೆ! ನನ್ನ ಧಾರಾವಾಹಿ ಓದಿದ ಇನ್ನೊಬ್ಬರ ಈತ!

“ಸರಿಯೇ ಗೊತ್ತಾಯ್ತು ಅಂದೆಯಲ್ಲ ನಾನ್ಯಾರು ಹೇಳು ನೋಡೋಣ?”
“ನೀನು ಸಜ್ಜಕದ ಸಿನಿ ಅಲ್ವೇನೋ? ಅರ್ಚಕ ಸುಬ್ಬಾಭಟ್ಟರ ಮಗ! ದೇವರ ಪ್ರಸಾದ ಸಜ್ಜಕದ ದೊನ್ನೆ ಬ್ಯಾಗಲ್ಲಿ ಇಟ್ಕೊಂಡು ಸ್ಕೂಲ್ಗೆ ಬರ್ತಿದೆಯಲ್ಲ? ನಿನ್ನ ಮರೀತೀನಾ?”
“ನಿನ್ನ ಮೆಮೊರಿ ಶಾರ್ಪ್ ಆಗಿದೆ”
“ಮೆಮೊರಿ ಶಾರ್ಪ್ ಅಲ್ಲ ಸಜ್ಜಕದ ಸಿಹಿ. ಶಾರ್ಪ್ ಆಗಿದೆ. ಆಗಾಗ್ಗೆ ನನಗೂ ದೊನ್ನೇಲಿ ಪಾಲು ಸಿಗ್ತಿತ್ತಲ್ಲ? ಅದಿರ್ಲಿ ಏನ್ಮಾಡ್ತಿದ್ದೀಯಾ?ಏನ್ ಆಗಿದ್ದೀಯಾ“
“ನಮ್ಮಪ್ಪ ಪೂಜೆ ಮಾಡುತ್ತಿದ್ದ ದೇವಸ್ಥಾನದಲ್ಲಿ ಅರ್ಚಕನಾಗಿದ್ದೇನೆ”
“ಯಾಕೋ ಮುಂದೆ ಓದಲಿಲ್ವೇನೋ?”
“ಜೀವನಕ್ಕೆ ಓದು ಬೇಕಾಗಿಲ್ಲ ಅನ್ನೋದು ಗೊತ್ತಾಯ್ತು. ಜೊತೆಗೆ ಚಿಕ್ಕಂದಿನಲ್ಲೇ ನಮ್ಮಪ್ಪ ಮಂಗ್ಳಾರ್ತಿ ತಟ್ಟೇ ಕೈಗೆ ಕೊಟ್ರು. ಅದರ ಆಕರ್ಷಣೇಲಿ ಓದು ಹತ್ತಲಿಲ್ಲ! ಅದನ್ನೇ ಗಟ್ಯಾಗಿ ಹಿಡ್ಕೊಂಡಿದೀನಿ”
‘ಜೀವನ ಮಾಡೋಕೆ ಓದು ಬೇಕಾಗಿಲ್ಲ’ ಅನ್ನೋ ಮಾತು ಕೇಳಿ ಮಂಕಾದೆ! ಅಂದರೆ..? ಈತನೂ ನನ್ನ ಕಾದಂಬರಿ ಓದಿಲ್ಲ!! ನನ್ನ ಕಾದಂಬರಿ ಓದಿದ ಒಬ್ಬನೇ ಓದುಗ ಅಥವಾ ಒಬ್ಬಳೇ ಓದುಗಿ ಈವರೆಗೆ ಸಿಕ್ಕಿರಲಿಲ್ಲ! ನಿರಾಸೆಯಾಯಿತು!

“ಹೋಗ್ಲೆ ನನ್ನ ಕಾದಂಬರಿ ಓದ್ತಾ ಇದ್ದೀಯಾ?” ಹತಾಶೆ ತೋರ್ಪಡಿಸಿದೆ.
“ಇಲ್ಲಾ ಕಣೋ. ನೋಡ್ತಾ ಇದ್ದೀನಿ. ಪುಸ್ತಕ, ಮ್ಯಾಕ್ಸೀನ್ ಎಲ್ಲಾ ಓದೋದು ಬಿಟ್ಟು ಬಹಳ ವರ್ಷಗಳಾದವು. ಈಗೇನಿದ್ದರೂ ನೋಡೋದು ಅಷ್ಟೇ ವಾಟ್ಸಪ್ಪು, ಫೇಸ್ಬುಕ್ಕು, ಟಿವಿ-ಎಲ್ಲಾ ಫಟಾಫಟ್”
“ಮತ್ತೆ ನನ್ನ ಕಾದಂಬರಿ ವಿಷಯ ಹೇಗೆ ಗೊತ್ತಾಯ್ತು?”
“ಹೀಗೆ ಯಾರೋ ಹೇಳಿದರು!”
“ಮತ್ತೆ ಹೇಗಪ್ಪ ಇದಿಯಾ? ಸಂಸಾರ ಮಕ್ಕಳು?”
“ಸಂಸಾರ ಎಲ್ಲಿ ಬಂತು? ಎಷ್ಟೋ ಹೆಣ್ಣುಗಳು ಬಂದವು! ಅವರದೆಲ್ಲಾ ಒಂದೇ ಕಂಡೀಶನ್ನು! ಜುಟ್ಟು ಕತ್ತರಿಸಬೇಕಂತೆ! ಅದು ಬಿಟ್ರೆ ಹೇಗೋ ಅರ್ಚಕಾಂತ ಜನ ನಂಬ್ತಾರೆ? ನಾನು ಜುಟ್ಟು ಕತ್ತರಿಸೊಲ್ಲ, ನನ್ನ ಮದುವೆ ಆಗೊಲ್ಲ! ಅರ್ಚಕರನ್ನು ಯಾರೂ ಮದುವೆ ಆಗಲ್ಲ ಕಣೋ. ಅಂದ ಹಾಗೆ ನಿಮ್ಮ ಕಡೆ ಯಾರಾದರೂ ಜುಟ್ಟು ಒಪ್ಪೊ ಹೆಣ್ಣು ಗೊತ್ತಿದ್ರೆ ಹೇಳು”

“ಆಯ್ತು ನೋಡೋಣ.. ಏನೋ ಟಪಟಪ ಕೇಳಿಸ್ತಾ ಇದೆ ಏನ್ ಮಾಡ್ತಾ ಇದ್ದೀಯಾ?”
“ಈಗ ಲಾಕ್ಡೌನ್ ಸಮಯ ಅಲ್ವಾ? ಪ್ರಸಾದ ಮಾಡೋಕು ಯಾರೂ ಬರ್ತಾ ಇಲ್ಲ. ನಾನೇ ಸಜ್ಜಕ ಮಾಡ್ತಿದ್ದೀನಿ. ಆಯ್ತು ಇನ್ನೊಂದು ಸಲ ಫೋನ್ ಮಾಡ್ತೀನಿ ಸಜ್ಜಕ ತಳ ಹಿಡಿತಿದೆÉ”
ಫೋನ್ ಡಿಸ್ಕನೆಕ್ಟಾಯಿತು! ನನಗೆ ತೀವ್ರ ನಿರಾಶೆ ಉಂಟು ಮಾಡಿದ್ದು ಇರದೇ ಇದ್ದುದು ಟೇಕಾಫೇ ಆಗದ ನನ್ನ ಓದುಗರ ಸಂಖ್ಯೆ!
ಸಜ್ಜಕದ ಸೀನಿ ವಿಷಯ ಮನೆಯವಳಿಗೆ ಹೇಳಬೇಕು ಅನ್ನಿಸಲಿಲ್ಲ. ಅವಳನ್ನ ಕರೆದರೆ ಕಾಫಿ ಕೇಳ್ತಿದ್ದೀನಿ ಅಂತ ತಪ್ಪು ತಿಳ್ಕೊಳ್ಳೋ ಅಪಾಯ ಇತ್ತು!
ಅಷ್ಟರಲ್ಲಿ ಮತ್ತೆ ಮೊಬೈಲು ರಿಂಗಣಿಸಿತು. ಕಿವಿಗೆ ಇಟ್ಟುಕೊಂಡೆ.

ಈ ಸಲ ಮಾತಾಡಿದ ಮಹಾನುಭಾವ ‘ನಾನು ಯಾರು ಗೊತ್ತಾಯ್ತಾ?’ ಎಂದು ಕೇಳದೆ ನೇರ ಮಾತಾಡಿದ. ಅದು ನನ್ನ ಮಿತ್ರ-ಶತೃ ಟೂ ಇನ್ ಒನ್ ಆದ ಸುಬ್ಬೂ ಅರ್ಥಾತ್ ಸುಭಾಶ್.
“ಏನು ಕೊರೀತಿದ್ದೀಯೋ..?” ಸುಬ್ಬು ಸ್ವಾಗತಿಸುವ ಪರಿ ಇದು.
“ಇಲ್ಲ. ಬರೆಯೋ ಉತ್ಸಾಹÀ ಇಂಗಿಬಿಟ್ಟಿದೆ! ಇಬ್ರು ಹಳೆ ದೋಸ್ತಿಗಳು ಫೆÇೀನ್ ಮಾಡಿದ್ದರು. ಅವರಲ್ಲಿ ಯಾರೂ ವಾರಪತ್ರಿಕೇಲಿ ಬರ್ತಿರೋ ನನ್ನ ಕಾದಂಬರಿ ಓದೇ ಇಲ್ಲವಂತೆ!”
ತೀವ್ರ ನಿರಾಶೆಯಿಂದ ಕನಲಿದೆ.

“ನಾನೆಷ್ಟು ಸಲ ಬಡ್ಕೊಂಡಿದ್ದೆ? ಬ್ಯಾಡವೋ? ಬರೀಬೇಡ! ಕೊರೀಬೇಡ..ಇದು ಆಧುನಿಕ ಪ್ರಪಂಚ! ಇಲ್ಲಿ ಓದೋದು ನಗಣ್ಯ! ನೋಡೋದೇ..ಈಗಿನ ಟ್ರೆಂಡು! ಬರೆದು ಪೇಪರು ಹಾಳು ಮಾಡಿ, ಪತ್ರಿಕೆಯವರ ಟೈಮು ಹಾಳುಮಾಡಬೇಡ!”
ಸುಬ್ಬು ಮಾತಿಗೆ ಅಳು ಬಂತು!
“ಅತ್ತಿಗೆ ಹೇಗಿದ್ದಾರೆ..?” ಸುಬ್ಬೂ ನನ್ನ ತೇಜೋವಧೆ ಮಾಡುವ ಮುಂಚೆ ವಿಷಯ ಬದಲಿಸಿದೆ.
“ಇಲ್ಲೇ ಇದ್ದಾಳೆ..ನೀನೇ ಮಾತಾಡು” ಸುಬ್ಬು ಅತ್ತಿಗೆ ಕೈಗೆ ಫೆÇೀನ್ ಕೊಟ್ಟಿರಬೇಕು. ಮುಂದಿನ ಡೈಲಾಗು ಅತ್ತಿಗೇನೇ ಹೇಳಿದ್ದು.
“ಹೇಗಿದ್ದೀರಿ? ನಿಮ್ಮ ಮನೆಯವರು ಹೇಗಿದ್ದಾರೆ?”
“ಎಲ್ಲಾ ಚೆನ್ನಾಗಿದ್ದೀವಿ. ಲಾಕ್ಡೌನ್ ಟೈಮು ಹೇಗೆ ಕಳೀತಿದ್ದೀರಿ?” ಲೋಕಾಭಿರಾಮವಾಗಿ ಕೇಳಿದೆ.
“ಮನೆಗೆ ಗೆಸ್ಟುಗಳಿಲ್ಲ ಅಂಗಡಿಗೆ ಲಿಸ್ಟುಗಳಿಲ್ಲ! ಜಗಳ ಇಲ್ಲ, ಹಗ್ಗ-ಜಗ್ಗಾಟ ಇಲ್ಲ”
“ಎಲ್ಲಾ ಅರ್ಥವಾಯ್ತು! ಆದ್ರೆ ಹಗ್ಗ ಜಗ್ಗಾಟ? ಏನದು?”

“ಏನಿಲ್ಲ ನಿಮ್ಮ ಸ್ನೇಹಿತರ ವಾಗ್ವಾದ! ಅವರೆಂದಾದರೂ ಸೋತಿದ್ದುಂಟೆ? ನಾನು ಕಂಡ ಕತ್ತೆಗೆ ಐದು ಕಾಲು ಎನ್ನುವ ಶೂರ! ಆದ್ರೂ ಅವರ ಕಾಟ ಮಿತಿಮೀರಿದೆ! ಹೆಂಗಸರಿಗೆ ಲಾಕ್ಡೌನಿಂದ ವಿಪರೀತ ತೊಂದ್ರೆ!”
“ತೊಂದ್ರೇನಾ..?” ಅತ್ತಿಗೆ ವಿಚಾರಸರಣಿಗೆ ಕಿವಿತೆರೆದೆ.
“ಆಗಾಗ್ಗೆ ತೌರಿಗೆ ಹೋಗ್ತೀನೀನ್ನೊ ಧಮಕೀ ಹಾಕೋ ಹಾಗಿಲ್ಲ! ಬಸ್ಸಿಲ್ಲ, ಟ್ರೈನಿಲ್ಲ? ಹೋಗೋಕೆ ಪಾಸ್ ಬೇರೆ ಬೇಕು! ಮಾಲುಗಳು ಬಂದ್! ಬ್ಯೂಟಿ ಪಾರ್ಲರಿನವರು ಡ್ಯೂಟೀಗೇ ಬರ್ತಿಲ್ಲ! ನಮ್ಮ ಗೋಳು ಕೇಳೋರಿಲ್ಲ! ದಿನ ಬೆಳಗೆದ್ದರೆ ನಿಮ್ಮ ಸ್ನೇಹಿತರು ತಿಂಡಿಗೇನು? ಕಾಫಿಗೇನು? ಊಟಕ್ಕೇನು? ಸಂಜೆ ಸ್ನ್ಯಾಕ್ಸ್ ಏನೂಂತ ಗೋಳು ಹುಯ್ಕೋತಾರೆ! ನಮ್ಮ ಜನಪ್ರತಿನಿಧಿಗಳಿಗೆ ಎಲ್ಲರ ಕಷ್ಟಾನೂ ಜ್ಞಾಪಕ್ಕೆ ಬರ್ತಾರೆ! ಆದ್ರೆ ಗೃಹಿಣಿಯರ ಕಷ್ಟ ಮಾತ್ರ ನೆನಪಾಗೋಲ್ಲ!”
ಅತ್ತಿಗೆ ಮಾತು ಜೋಗದ ಸಿರಿಯಾಗಿತ್ತು! ಪರೋಕ್ಷವಾಗಿ ನನ್ನನ್ನೂ ಬೈಯುತ್ತಿರುವಂತಿತ್ತು!
“ಸ್ವಲ್ಪ ಸುಬ್ಬೂಗೆ ಫೋನ್ ಕೊಡಿ..ಎನೋ ಹೇಳ್ಬೇಕಿತ್ತು”
“ಅವರಿಲ್ಲ”
“ಈಗ್ತಾನೆ ಇದ್ನಲ್ಲ..?”
“ಕಣ್ಣೀರು ಒರೆಸಿಕ್ಕೊಳ್ಳೋಕೆ ಬಾತ್ರ್ರೂಮಿಗೆ ಹೋದ್ರು”
“ಕಣ್ಣೀರಾ..?” ಗಾಬರಿಯಾಯಿತು!

“ನಾನೇನು ಅವ್ರ ಕಣ್ಣಲ್ಲಿ ನೀರು ತರಿಸಿಲ್ಲ. ಈರುಳ್ಳಿ ಸಿಪ್ಪೆ ಸುಲಿಸ್ತಿದ್ದೆ. ಕಣ್ಣೀರು ಸುರಿಸ್ತಾ ಎದ್ದು ಹೋದರು. ನೀವೇನೂ ಯೋಚಿಸಬೇಡಿ. ನಿಮ್ಮ ಸ್ನೇಹಿತರು ಸುರಕ್ಷಿತವಾಗಿದ್ದಾರೆ..”
“ಸಾರಿ, ಯಾವುದೋ ಕಾಲ್ ಬರ್ತಿದೆ..ಸುಬ್ಬೂಗೆ ಆಮೇಲೆ ಫೋನ್ ಮಾಡ್ತೀನಿ..”
“ಆಗಲಿ..ಮತ್ತೆ ಮಾಡಿ..ನಿಮ್ಮ ಸ್ನೇಹಿತರ ಬಗ್ಗೆ ಹೇಳೋದು ಇನ್ನೂ ಇದೆ..”
ಬೆವರುತ್ತಾ ಫೋನ್ ಡಿಸ್ಕನೆಕ್ಟ್ ಮಾಡಿದೆ!!

-ಎಸ್. ಜಿ. ಶಿವಶಂಕರ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Tirupati Bhangi
Tirupati Bhangi
3 years ago

katheya sambasane tumba estavayitu

1
0
Would love your thoughts, please comment.x
()
x