ಹಿಂದೆಂದೂ ಕಾಣದೊಂದು ಸೂಕ್ಷ್ಮ ಅಣುಜೀವಿ ಇಂದು ವಿಶ್ವದೆಲ್ಲೆಡೆ ಹರಡಿ ತನ್ನ ಕಬಂಧಬಾಹುವನ್ನು ವಿಸ್ತರಿಸಿಕೊಂಡು ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತ ಇಡೀ ಮನುಕುಲವನ್ನೇ ತಲ್ಲಣವನ್ನುಂಟುಮಾಡಿದೆ. ವಿಜ್ಞಾನ – ತಂತ್ರಜ್ಞಾನಕ್ಕೇ ಸವಾಲೊಡ್ಡಿರುವ ಪರಿಸ್ಥಿತಿ ನಮ್ಮ ಕಣ್ಣೆದುರೇ ಇದೆ. ಎಲ್ಲರ ನಿದಿರೆಯಲ್ಲೂ ಸಿಂಹಸ್ವಪ್ನವಾಗಿರುವ ಕೊರೋನಾ ಮಹಾಮಾರಿಯಾಗಿ ತನ್ನ ಅಟ್ಟಹಾಸವನ್ನು ಮರೆಯುತ್ತಾ ಪ್ರಕೃತಿಯ ಮುಂದೆ ಎಲ್ಲವೂ ಶೂನ್ಯವೆಂಬ ನೀತಿಯನ್ನು ನೆನಪಿಸಿದೆ. ಒಂದೆಡೆ ರೋಗದ ಹರಡುವಿಕೆ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತ ತನ್ನ ವೇಗದ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಹೇಗೋ ಜೀವನ ಸಾಗಿಸುತ್ತಿದ್ದ ಹಲವಾರು ಕುಟುಂಬಗಳ ಪರಿಸ್ಥಿತಿ ಇಂದು ತೀರಾ ನಿಕೃಷ್ಟ ಮಟ್ಟವನ್ನು ತಲುಪಿದೆ.
ಬರಪೀಡಿತ ಜಿಲ್ಲೆಗಳಿಂದ ಜೀವನೋಪಾಯಕ್ಕಾಗಿಯೋ, ಉದ್ಯೋಗಕ್ಕಾಗಿಯೋ ಹೀಗೆ ವಿವಿಧೋದ್ದೇಶಗಳಿಂದಾಗಿ ಗುಳೆ ಹೊರಟು ಸಿಲಿಕಾನ್ ಸಿಟಿಯಲ್ಲಿ ತಾತ್ಕಾಲಿಕವಾಗಿ ಶೆಡ್ಡುಗಳಲ್ಲಿ ಅಥವಾ ಗುಡಾರಗಳಲ್ಲಿ ನೆಲೆಸಿ ವಾಸವಿದ್ದ ಅದೆಷ್ಟೋ ಕಟ್ಟಡ ಕಾರ್ಮಿಕರು, ಕಾರ್ಖಾನೆ ಕಾರ್ಮಿಕರು, ರಸ್ತೆಬದಿಯ ಹಾಗೂ ಮಾರುಕಟ್ಟೆ ವ್ಯಾಪಾರಿಗಳು, ಬೀದಿ ಬದಿಯ ಭಿಕ್ಷುಕರು ಇವರೆಲ್ಲ ಇಂದು ಭವಿಷ್ಯದ ದಿಕ್ಕುತೋಚದೆ ಕಂಗಾಲಾಗುವಂತಾಗಿದೆ. ಇಂತಹ ಅದೆಷ್ಟೋ ಅಸಂಘಟಿತ ದುಡಿಯುವ ಮಂದಿ ಈ ಕೊರೋನಾ ಪರಿಸ್ಥಿತಿಯ ಶಾಪಕ್ಕೀಡಾಗಿದ್ದಾರೆ. ಒಂದ್ಹೊತ್ತಿನ ಊಟಕ್ಕೂ ದಾರಿಯಿಲ್ಲದೆ, ಕೈಯಲ್ಲಿದೆ ಕೆಲಸವೂ ಇಲ್ಲದೆ ತಮ್ಮ ತಮ್ಮ ತವರನ್ನಾದರೂ ಸೇರಿ ಬದುಕೋಣವೆಂಬ ಭರದಲ್ಲಿ ಈಗಾಗಲೇ ಸಾವಿರಾರು ಮಂದಿ ಹಿಂತಿರುಗಿದ್ದಾರೆ. ಮೊದಲ ಹಂತದ ಲಾಕ್ ಡೌನ್ ಅದಾಗಲೇ ವಾಹನಗಳ ಸೌಲಭ್ಯವಿಲ್ಲದೆ, ವಾಸವಿದ್ದ ಮನೆ ಬಾಡಿಗೆ ಕಟ್ಟಲಾರದೆ ನೂರಾರು ಕಿಲೋಮೀಟರ್ ಗಳ ಪ್ರಯಾಣ ಮಾಡಿ ತವರು ಸೇರಿದ್ದಾರೆ. ಈ ನಡುವೆ ವಾಪಸ್ ಮರಳಿ ಹೋಗುವ ದಾರಿಯಲ್ಲಿ ತವರೂರು ಕಾಣುವ ಮುನ್ನವೇ ಕೆಲವರ ಪ್ರಾಣಪಕ್ಷಿ ಹಾರಿಹೋಗಿ ಅನಾಥ ಹೆಣಗಳಾಗಿದ್ದಾರೆ. ಇಂತಹ ಸುದ್ದಿಗಳನ್ನು ನಾವು ಹಲವು ಮೀಡಿಯಾಗಳ ಮೂಲಕ ಈಗಾಗಲೇ ನೋಡಿದ್ದಾಗಿದೆ.
ತಮ್ಮೂರುಗಳಿಗೆ ಹೋಗಲಾಗದೆ ಇದ್ದಲ್ಲಿಯೇ ಸಿಲುಕಿಕೊಂಡಿರುವವರ ಸ್ಥಿತಿ ಬೇರೆಯೇ ಆಗಿದೆ. ಎಲ್ಲೂ ಹೊರಗೆ ಹೋಗುವಂತಿಲ್ಲ, ದುಡಿದು ಬದುಕಲು ಕೆಲಸವಿಲ್ಲ. ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲೂ ಹೆಣಗಾಡಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಹೆಣ್ಣುಮಕ್ಕಳ ಕೌಟುಂಬಿಕ ಸಮಸ್ಯೆಗಳ ಸುತ್ತ ಒಂದು ಸುತ್ತು ಪರ್ಯಟಿಸುತ್ತಾ ಹೋದರೆ ಅದೆಷ್ಟೋ ಕುಟುಂಬಗಳ ನಿರ್ವಹಣೆ ಕೇವಲ ಹೆಣ್ಣುಮಕ್ಕಳಿಂದಲೇ ಸಾಗಿತ್ತು. ಇದು ಅವರಿಗೆ ಅನಿವಾರ್ಯವೂ ಕೂಡ. ತಮ್ಮ ಗಂಡನಾದವನು ಸೋಂಬೇರಿಯೋ, ಕುಡುಕನೋ ಆಗಿದ್ದ ಪಕ್ಷದಲ್ಲಿ ತನ್ನ ಸಂಸಾರದ ನೊಗವನ್ನು ತಾನೇ ಹೊತ್ತ ಹೆಣ್ಣುಮಗಳು, ತನ್ನ ಮಕ್ಕಳ ಲಾಲನೆ ಪೋಷಣೆಯೊಂದಿಗೆ ಕುಡುಕ ಗಂಡನನ್ನು ನಿರ್ವಹಿಸುವ ಹೊಣೆಯನ್ನೂ ಹೊರಬೇಕಾದ ಅನಿವಾರ್ಯ ಪ್ರಸಂಗ ಅವಳಿಗೆ ಎದುರಾಗಿದೆ. ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಅದೆಷ್ಟೋ ಬಡ ಹೆಣ್ಣುಮಕ್ಕಳು ನಿರ್ವಹಿಸುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.
ಮಕ್ಕಳನ್ನು ಶಾಲೆಗೆ ಕಳುಹಿಸಿ ಮನೆಯಲ್ಲಿ ದೈನಂದಿನ ಕೆಲಸಗಳನ್ನು ಒತ್ತಡದಲ್ಲೇ ಮಾಡಿ ಮುಗಿಸಿ ಅರೆಬರೆ ತಿಂದು ತಾವೂ ಕೂಡ ಕೂಲಿನಾಲಿ ಮಾಡಲು ಹೊರಹೋಗಿ ದುಡಿದು ದಣಿವಾಗಿ ಮತ್ತೆ ಸಂಜೆ ಮನೆಗೆ ಬಂದರೆ ತಮಗಾಗಿ ಉಳಿದ ನಿತ್ಯ ಕೆಲಸಗಳು ಕಾಯುತ್ತಿರುತ್ತಿದ್ದವು. ಹೇಗೋ ಅಂತೂ ದಿನದ ಹೊಟ್ಟೆ ತುಂಬುತ್ತಿತ್ತು. ಆದರೀಗ ಕೊರೋನಾ ತಂದ ಗಂಡಾಂತರದಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಹೆಚ್ಚು ಜನರು ಒಟ್ಟಿಗೆ ಸೇರುವಂತಿಲ್ಲ. ಎಲ್ಲಾ ಕೆಲಸದ ಕಾರ್ಖಾನೆಗಳೂ ಬೀಗಜಡಿದು ಸ್ತಬ್ಧವಾದವು. ಇದರಿಂದಾಗಿ ಎಷ್ಟೋ ಕುಟುಂಬಗಳಿಂದು ಒಪ್ಪತ್ತಿನ ಗಂಜಿಯೂ ಇಲ್ಲದೆ, ದುಡಿಮೆಯೂ ಇಲ್ಲದೆ ಆಗಸದತ್ತ ಮೊಗಮಾಡಿ ತಮ್ಮದೇ ಅಂಗೈ ಅಗಲ ಸೂರುಗಳಡಿಯಲ್ಲಿ ಭವಿಷ್ಯದ ಕನಸು ಕಾಣುತ್ತಾ ಕೂರುವಂತಾಗಿದೆ. ಮಕ್ಕಳ ಶಾಲೆಗಳೂ ಮುಚ್ಚಿರುವ ಕಾರಣ ಎಲ್ಲಾ ಕುಟುಂಬಗಳ ಮಕ್ಕಳು ಮನೆಯಲ್ಲೇ ಉಳಿಯುವಂತಾಗಿದೆ. ಅವರ ವಿದ್ಯಾಭ್ಯಾಸದ ಸಾಧ್ಯತೆಗಳನ್ನು ಕಂಡುಕೊಳ್ಳುವ ಆಧುನಿಕ ವಿಜ್ಞಾನದ ಸೌಕರ್ಯಗಳಾಗಲೀ ಅಥವಾ ಆರ್ಥಿಕ ಸಬಲತೆಯಾಗಲೀ ಇಲ್ಲದಿರುವ ಹೆಣ್ಣುಮಕ್ಕಳು, ಅನ್ನದ ದುಡಿಮೆಯ ನೌಕರಿಯನ್ನೂ ಮಾಡಲಾಗದ ಸಂಕಷ್ಟದ ದಿನಗಳನ್ನು ಈಗ ಅನುಭವಿಸುವಂತಾಗಿದೆ.
ಇನ್ನೂ ಕೆಲವು ಅವಿಭಕ್ತ ಕುಟುಂಬಗಳಲ್ಲಿ ಕೊರೋನಾ ನಿಮಿತ್ತ ಎಲ್ಲಾ ಸದಸ್ಯರು ದಿನದ ಇಪ್ಪತ್ನಾಲ್ಕು ಗಂಟೆಗಳೂ ಕೂಡ ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಮುಂಜಾನೆಯಿಂದ ನಡುರಾತ್ರಿಯವರೆಗೂ ಮನೆಯ ಎಲ್ಲರ ಬೇಕುಬೇಡಗಳನ್ನು ಪೂರೈಸುವುದರಲ್ಲಿಯೇ ಮಹಿಳೆಯರ ಜೀವನ ಮೊದಲಿಗಿಂತಲೂ ಈಗ ಹೈರಾಣಾಗಿ ಹೋಗಿದೆ. ಕೊರೋನಾ ಪೂರ್ವದ ದಿನಗಳಲ್ಲಾಗಿದ್ದರೆ ಬೆಳಗಿನ ಉಪಹಾರದ ನಂತರ ಮನೆಯ ಹಿರಿಯರು ಹೊಲಗದ್ದೆ ತೋಟಕ್ಕೆ, ಗಂಡ ಕೆಲಸಕ್ಕೆ, ಅತ್ತೆ ದೇವಸ್ಥಾನಕ್ಕೋ ಅಥವಾ ಸಂಬಂಧಿಕರ ಮನೆಗಳಿಗೋ ಹೋದರೆ, ಇನ್ನು ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಆ ಸಮಯದಲ್ಲಾದರೂ ಮನೆಯ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿದ ಬಳಿಕ ಕೆಲಕಾಲ ವಿರಾಮ ದೊರೆಯುತ್ತಿತ್ತು. ಆದರೆ ಈಗ ವಿರಾಮದ ಮಾತೆಲ್ಲಿ?! ತನ್ನ ಆರೋಗ್ಯದ ಬಗ್ಗೆ ಗಮನಹರಿಸಲು ಕೂಡ ಸಮಯವಿಲ್ಲದಂತಾಗಿದೆ.
ಅಲ್ಲಿ ಇಲ್ಲಿ ಬಸ್ ಸ್ಟಾಂಡ್ ಹಾಗೂ ರಸ್ತೆ ಬದಿಗಳಲ್ಲಿ ಬೇಡಿ ತಿಂದು ಜೀವನ ಹೊರೆಯುತ್ತಿದ್ದ ಭಿಕ್ಷುಕರ ಪಾಡಂತೂ ಹೇಳುವಂತಿಲ್ಲ. ಇವರಲ್ಲಿ ಅಸಹಾಯಕರು, ಬುದ್ಧಿಮಾಂಧ್ಯರು, ವಿಕಲಚೇತನರು, ಅನಾಥರು, ವೃದ್ದರು ಮುಂತಾದವರು ಬೇಡಿ ತಿಂದು ಬದುಕುತ್ತಿದ್ದರು. ಆದರೆ ಕೊರೋನಾ ಭಯದಿಂದ ಸಾರ್ವಜನಿಕರು ಕೂಡ ಅಂಥವರ ಬಳಿ ಹೋಗಲು ಹಾಗೂ ಭಿಕ್ಷೆ ನೀಡಲು ಮುಂದಾಗಲು ಧೈರ್ಯವಿಲ್ಲದಂತಾಗಿದೆ. ಈಗಂತೂ ಈ ಧೀನ ಜನರ ಸ್ಥಿತಿ ಆ ದೇವರಿಗೂ ಮುಟ್ಟದು. ಈ ರೀತಿಯ ಪರಿಸ್ಥಿತಿ ಹಳ್ಳಿಗಳಲ್ಲೂ ಹೊರತಾಗಿಲ್ಲ. ಅದೆಷ್ಟೋ ಮಹಿಳೆಯರು ಊರೂರು ತಿರುಗಿ ಸಣ್ಣ ಪುಟ್ಟ ವ್ಯಾಪಾರಗಳನ್ನು ನಂಬಿಕೊಂಡು ತಮ್ಮ ಕುಟುಂಬಗಳನ್ನು ಸಲಹುತ್ತಿದ್ದರು. ಕೂದಲು ಮಾರುವವವರು, ಬಟ್ಟೆ ಮಾರುವವರು, ಬಳೆಗಾರರರು, ಮನೆಕೆಲಸದವರು, ಇಟ್ಟಿಗೆ ಕಾರ್ಖಾನೆಗಳಲ್ಲಿ ಕೂಲಿ ಮಾಡುತ್ತಿದ್ದವರು ಇವರೆಲ್ಲಾ ಹೆಚ್ಚು ಹೆಣ್ಣುಮಕ್ಕಳೇ. ಕೇವಲ ಇವರ ದುಡಿಮೆಯನ್ನು ನಂಬಿ ಬದುಕುತ್ತಿದ್ದ ಇವರ ಕುಟುಂಬಗಳ ಸ್ಥಿತಿ ಇಂದು ಹೊಟ್ಟೆಯ ಮೇಲೆ ತಣ್ಣೀರ ಬಟ್ಟೆ ಎನ್ನುವಂತಾಗಿದೆ. ಜೀವನದಲ್ಲಿ ಕನಸುಗಳನ್ನು ಗಾಳಿಗೆ ತೂರಿ ದಿನಗಳನ್ನು ಎಣಿಸುವಂತಾಗಿದೆ. ಅಲ್ಲದೆ ಅದೆಷ್ಟೋ ಕುಟುಂಬಗಳಲ್ಲಿ ಸ್ವಂತ ಬೋರವೆಲ್ ವ್ಯವಸ್ಥೆ ಇರುವುದಿಲ್ಲ. ಸಾರ್ವಜನಿಕ ನೀರಿನ ಮೂಲಗಳನ್ನು ತಮ್ಮ ದಿನನಿತ್ಯದ ಅವಶ್ಯಕತೆಗಳಿಗೆ ಅವಲಂಭಿತರಾಗಿದ್ದರು.
ಈಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ದೊಡ್ಡ ಸವಾಲಾಗಿ ಒಂದು ಬಿಂದಿಗೆ ನೀರನ್ನು ತರಲು ಹರಸಾಹಸ ಪಡುವಂತಾಗಿದೆ. ಈ ಕೊರೋನಾ ಕಾಲ ಚದುರಿ ಹೋಗುತ್ತಿದ್ದ ಸಂಸಾರವನ್ನು ಒಂದುಗೂಡಿಸುವುದರಲ್ಲಿ ಒಂದಷ್ಟು ಮಹಿಳೆಯರ ಪಾಲಿಗೆ ವರದಾನವಾಗಿದ್ದರೆ, ಬಹಳಷ್ಟು ಹೆಣ್ಣುಮಕ್ಕಳಿಗೆ ಶಾಪವೇ ಆಗಿ ಪರಿಣಮಿಸಿದೆ. ಸಮೀಕ್ಷೆಯೊಂದರ ಪ್ರಕಾರ ಕೊರೋನಾ ಅವಧಿಯಲ್ಲಿ ದಂಪತಿಗಳ ನಡುವೆ ಕಲಹಗಳು ತಾರಕಕ್ಕೇರಿ ಅತಿಹೆಚ್ಚು ವಿಚ್ಛೇದನಗಳೂ ಸಂಭವಿಸುತ್ತಿವೆ ಎನ್ನುವಂತಹ ಸುದ್ದಿ ನಿಜಕ್ಕೂ ಆಘಾತಕಾರಿ. ಕೆಲವು ಕೌಟುಂಬಿಕ ವ್ಯವಸ್ಥೆಯಲ್ಲಿ ಸ್ರ್ತೀ ಪುರುಷ ಸಮಾನತೆ ಕೇವಲ ಪುಸ್ತಕದ ಬದನೆಕಾಯಿಯೇ ಹೊರತು ಮತ್ತಿನ್ನೇನೂ ಅಲ್ಲ. ಇಂದಿಗೂ ಪುರುಷ ಪ್ರಧಾನ ವ್ಯವಸ್ಥೆಯೇ ಜೀವಂತವಾಗಿದ್ದು ಕುಟುಂಬದ ತೀರ್ಮಾನಗಳಲ್ಲಿ ಪುರುಷನೇ ಸರ್ವಾಧಿಕಾರಿ. ಶತಮಾನಗಳು ಕಳೆದರೂ ನಾಲ್ಕು ಗೋಡೆಗಳ ನಡುವೆ ನಡೆಯುವ ಸ್ತ್ರೀ ಶೋಷಣೆ ತಪ್ಪಿಲ್ಲ. ಇತ್ತ ಹೆಣ್ಣುಮಕ್ಕಳು ಇದ್ದ ಅಲ್ಪ ಸ್ವಾತಂತ್ರವನ್ನು ಈಗ ಕಳೆದುಕೊಂಡು ಎಲ್ಲರ ಸರಹದ್ದಿನಲ್ಲಿ ತಮ್ಮದೇ ಗೃಹಗಳಲ್ಲಿ ಬಂಧಿಯಾಗಿ, ಇತ್ತ ಅನುಭವಿಸಲೂ ಆಗದೆ, ಅತ್ತ ಪ್ರತಿಭಟಿಸಲೂ ಆಗದೆ ಬದುಕು ಸಾಗಿಸುತ್ತಿದ್ದಾರೆ. ಅದರಲ್ಲೂ ನೌಕರಿ ಮಾಡುವಂತಹ ಮಹಿಳೆಯರು ತುಸು ಹೆಚ್ಚೇ ಸಂಕಷ್ಟವನ್ನು ಅನುಭವಿಸುವಂತಾಗಿದೆ. ಕಾರಣ ಅವರು ತಮ್ಮ ತಮ್ಮ ನೌಕರಿಯ ಸ್ಥಳಗಳನ್ನು ತಲುಪಲು ವಾಹನ ವ್ಯವಸ್ಥೆಯು ಈಗ ಅಸ್ತವ್ಯಸ್ತವಾಗಿದೆ. ಮನೆಯ ಎಲ್ಲಾ ಕೆಲಸಗಳನ್ನು ಮುಗಿಸಿ ಕಛೇರಿ ಕೆಲಸಕ್ಕೆ ಹೋಗಿ ಮರಳುವುದೇ ದೊಡ್ಡ ಸವಾಲಾಗಿದೆ. ಮನೆಗೆ ಹಿಂತಿರುಗಿ ಬಂದ ಮೇಲೂ ಕೌಟುಂಬಿಕ ಕಾರ್ಯಗಳಿಂದ ವಿನಾಯಿತಿ ದೊರೆಯದು.
ಕೆಲವು ಸಂಪ್ರದಾಯಸ್ಥ ಕುಟುಂಬಗಳಲ್ಲಿ ಮಹಿಳೆಯರ ಮಾಸಿಕ ಋತುಚಕ್ರದ ಸಮಯದಲ್ಲಿ ಮನೆಯಿಂದ ಒಂದು ದಿನ ಅಥವಾ ಮೂರು ದಿನಗಳ ಕಾಲ ಹೊರಗಿರುವ ಪದ್ಧತಿ ಈಗಲೂ ರೂಢಿಯಲ್ಲಿದೆ. ಇದು ಕೆಲವು ಮೇಲ್ಜಾತಿಯ ಪುರೋಹಿತಶಾಹಿ ಸಮುದಾಯಗಳಲ್ಲಿ ಇಂದಿಂಗೂ ಜೀವಂತವಾಗಿದೆ. ಈ ಪರಿಸ್ಥಿಯಲ್ಲಿ ಅವರಿಗೆ ಸಹಾಯ ಮಾಡುವರಾರು… ಇಂತಹ ದಿನಗಳನ್ನು ನಿಭಾಯಿಸುವುದಾದರೂ ಹೇಗೆ?
ಈ ಎಲ್ಲಾ ಸಮಸ್ಯೆಗಳು ಒಂದು ಕಡೆಯಾದರೆ ಬಸುರಿ ಬಾಣಂತಿಯರ ಪಾಡು ಇನ್ನೂ ಕಷ್ಟ. ಏಕೆಂದರೆ ಅವರು ನಿಯತವಾಗಿ ತಮ್ಮ ಮಾಸಿಕ ತಪಾಸಣೆಗಳಿಗಾಗಿ ಆಸ್ಪತ್ರೆಗಳಿಗೆ ಹೋಗಲೇಬೇಕಾದ ಅನಿವಾರ್ಯತೆ.. ಆದರೆ ಈ ಅವಧಿಯಲ್ಲಿ ಅವರಿಗೆ ಹೋಗಿಬರುವುದೇ ದೊಡ್ಡ ಸಾಹಸವಾಗಿದೆ. ಜೊತೆಗೆ ಸುರಕ್ಷತೆಯ ಬಗ್ಗೆಯೂ ಅಷ್ಟೆ ಗಮನಹರಿಸಬೇಕಾಗಿದೆ. ಪ್ರಸವದಂತಹ ತುರ್ತು ಪರಿಸ್ಥಿತಿಗಳಲ್ಲಿ ಆಸ್ಪತ್ರೆಗಳ ಸೂಕ್ತ ಸೌಲಭ್ಯ ಸಿಗುವುದೇ ಅದೃಷ್ಟವಾಗಿ ವಾರ್ಡ್ಗಳಲ್ಲಿ ಇದ್ದಷ್ಟು ದಿನಗಳ ಕಾಲ ಭಯಭೀತಿಯ ವಾತಾವರಣದಲ್ಲೇ ದೂಡುವಂತಾಗಿದೆ. ಇನ್ನು ನವಜಾತ ಶಿಶುಗಳಿಗೆ ಸ್ನಾನ ಮಾಡಿಸಲು ನೆರೆಮನೆಯ ಅಜ್ಜಿಯರನ್ನು ಕರೆಯಲು ಕೂಡ ಮೀನಾಮೇಷ ಎಣಿಸುವಂತಾಗಿದೆ. ಫಾರಿನ್ಗಳಲ್ಲಿ ನೆಲೆಸಿದ್ದ ಕುಟುಂಬದವರ ಮೂಲಕ ಕೊರೋನಾ ಪಿಡುಗು ಮೊದಲು ದೇಶದ ಬಾಗಿಲನ್ನೂ ತಟ್ಟಿ ನಂತರ ರಾಜ್ಯವನ್ನು ಪ್ರವೇಶಿಸಿ ಇದೀಗ ಎಲ್ಲಾ ಹಳ್ಳಿ ಹಳ್ಳಿಗೂ ಲಗ್ಗೆ ಇಟ್ಟು ಕೆಳವರ್ಗದವರ ಮೇಲೂ ಪರಿಣಾಮ ಬೀರಿದೆ….
–ತೇಜಾವತಿ ಹುಳಿಯಾರು