ಫಲಿತಾಂಶದ ಪಟ್ಟುಯನ್ನು ಕೂಲಂಕಷವಾಗಿ ಪರಿಶೀಲಿಸಿದ ಮೇಲೆ ಸಹಜವಾಗಿ ಸಂತೃಪಿಯ ನಗು ತೇಲಿತು. ನೋಟಿಸ್ ಬೋರ್ಡ್‍ಗೆ ಹಚ್ಚಿದ ಮೇಲಂತೂ ಮನಸ್ಸು ತುಸು ಹಗುರಾಯಿತು. 8ನೇ ತರಗತಿಯ ಮಕ್ಕಳು ಕೆಲದಿನಗಳಿಂದ ‘ಕಥೆ ಹೇಳಿ ಸಾರ್…’ ಎಂದು ಪೀಡಿಸುತ್ತಿದ್ದದ್ದು ನೆನಪಾಗಿ ‘ಕೊನೆಯ ದಿನದೊಳಗೊಂದು’ ಕಥೆ ಹೇಳಬೇಕೆಂದು ಮನ ಮಾಡಿ ಅತ್ತ ಕಾಲಿಟ್ಟಿದ್ದೆ. ತರಗತಿಯ ಲೀಡರ್ ಅಭಿಷೇಕ್ ‘ಅರುಣ್ ಸರ್ ಬಂದ್ರ… ಇವತ್ತು ಕಥೆ ಗ್ಯಾರಂಟಿ…’ ಎಂದ ತುಸು ಜೋರಾಗಿಯೇ ತರಗತಿ ಕ್ಷಣಾರ್ಧದಲ್ಲಿ ಮೌನವಾಗಿ ನನ್ನ ಕಥೆಗೊಂದು ವೇದಿಕೆ ನಿರ್ಮಿಸಿಕೊಟ್ಟಿತ್ತು.
“ಮಕ್ಕಳೇ, ಇದು ನಿಮಗೆ ಕಥೆ ಅನ್ನಿಸದಿರಬಹುದು. ವಾಸ್ತವ ಇರಬಹುದೇ ಅನ್ನಿಸಲೂಬಹುದು… ಮೊದಲು ಕಥೆ ಕೇಳಿ… ಏನಾದ್ರೂ ಕೇಳುವುದಿದ್ರೆ ಆಮೇಲೆ ಪ್ರಶ್ನೆ ಕೇಳಬಹುದು… ಸರೀನಾ?” ಎಂದೆ. ಸಮ್ಮತಿಯಾದೊಡನೆ ನನ್ನ ಕಥೆ ಶುರುವಿಟ್ಟುಕೊಂಡೆ.
ಅದೊಂದು ಗುಡ್ಡಗಾಡು ಪ್ರದೇಶದ ಕುಗ್ರಾಮ. ಹೆಸರು ಅಜ್ಜಂಪುರ. ನಿಜಕ್ಕೂ ಅದರ ಹೆಸರಿಗೂ ಪ್ರಗತಿಗೂ ಸಂಬಂಧಾನೇ ಇರಲಿಲ್ಲ. ಅಂತಹ ಊರಲ್ಲೊಂದು ಶಾಲೆ. ಅದಕ್ಕೆ ಒಬ್ನೇ ಒಬ್ಬ ಮೇಷ್ಟ್ರು. ಅವರೊಬ್ಬರೇ 5 ತರಗತಿಗಳ ಎಲ್ಲಾ ವಿಷಯ ಬೋಧನೆ, ಕಚೇರಿ ಕೆಲಸ, ಬಿಸಿ ಊಟ, ಶಾಲಾ ದಾಖಲೆ ನಿರ್ವಹಣೆ ಮಾಡ್ಲೇಬೇಕಿತ್ತು. ದೂರದ ಬೆಳಗಾವಿಯಿಂದ ಇಲ್ಲಿಗೆ ಆಯ್ಕೆಯಾಗಿ ಮಕ್ಕಳ ಕಲಿಕೆಯಲ್ಲಿ ಭರವಸೆ ಮೂಡುಸಿದ್ದರಿಂದ, ಪೋಷಕರ, ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದರು. ಕೆಲಸಕ್ಕೆ ಸೇರಿ ಎರಡು ವರ್ಷ ಆಯ್ತು ಅಂತ ಅನ್ನಿಸ್ತದೆ… ಫಲಿತಾಂಶ ಮುಗಿದಿತ್ತು… ಪಟ್ಟಿಯನ್ನು ನೋಟೀಸ್ ಬೋರ್ಡ್‍ಗೆ ಹಚ್ಚಿದ್ದರಷ್ಟೇ, ಬಿಆರ್‍ಸಿ ಕಚೇರಿಯಿಂದ ‘ಮುಂದಿನ ವರ್ಷದ ಪಠ್ಯಪುಸ್ತಕ… ಸಮವಸ್ತ್ರ ಈಗಲೇ ಬಂದು ಪಡೆಯುವಂತೆ ಕರೆ ಬಂದಿತ್ತು. ಊರಿಗೆ ತೆರಳಲು ಲಗ್ಗೇಜ್ ಸಹಿತ ಬಂದಿದ್ದರಿಂದ ಅವರಿಗೆ ಮತ್ತೊಂದು ಅಘಾತ ಬಂದೆರಗಿತ್ತು- ಅದೇ ಮೊಬೈಲಿನಿಂದ. ತನ್ನನ್ನು ಸಾಕಿ, ಉದ್ಯೋಗದ ಸಲುವಾಗಿ ತನ್ನ ಕಾಪಿಟ್ಟಿದ್ದ ತಂದೆ ಅನಾರೋಗ್ಯ ಪೀಡಿತರಾಗಿದ್ದ ಕೆಟ್ಟ ಸುದ್ಧಿ! ‘ಕೊನೆಯ ದಿನದೊಳಗೊಮ್ಮೆ’ ಅವರ ದರ್ಶನ ಭಾಗ್ಯ ಸಿಕ್ಕೀತೇ ಎಂಬ ಚಿಂತೆಯಲ್ಲೇ ಚೀಲಗಳನ್ನು ಜೋಡಿಸಿಕೊಳ್ಳತೊಡಗಿದರು.
“ಅಯ್ಯೋ… ಈ ವಸ್ತುಗಳನ್ನು ಇಲ್ಲೇ ಇಟ್ಟರೆ ಹ್ಯಾಗೋ ರಾಮಾ! ಈ ಥರ್ಮಾಕೋಲ್‍ಗಳ ಬ್ಯಾಗನ್ನು ಲೈಬ್ರರಿ ರೂಮ್‍ನಲ್ಲಿಡು! ಇದರಲ್ಲಿ ಅಸ್ಥಿಪಂಜರ… ಜೀರ್ಣಾಂಗವ್ಯೂಹ…ಮಾಡಲ್ ಮಾಡಲಿಕ್ಕಿದೆ.” ರಾಮಾ ಶಾಲಾ ನಾಯಕ. ಸ್ವಲ್ಪ ಜೋರಿನವ. ಆ ವಸ್ತುಗಳನ್ನು ಸಾಗರನ ಕೈಯಲ್ಲಿತ್ತು, ಲೈಬ್ರರಿಯ ಬೀಗ ತೆಗೆದು ಒಳಗೆ ಇಟ್ಟು ಬರುವಂತೆ ಸನ್ನೆ ಮಾಡಿ ಹೇಳಿದ. ಹೊರಗಡೆ ಗದ್ದಲ… ಸಿಹಿ ವಿತರಣೆ ಜೋರಾಗಿತ್ತು… ಶುಭಾಶಯಗಳು, ಸಿಹಿ ತಿಂಡಿಗಳ ವಿನಿಮಯ ಆಗ್ತಾ ಇತ್ತು. ಫಲಿತಾಂಶದ ಬಗ್ಗೆ ತುಂಬಾ ಕಾತರದಿಂದಿದ್ದ ಸಾಗರ್ ಹೊತ್ತಿದ್ದ ಥರ್ಮಾಕೋಲ್ ಚೀಲದಿಂದ ಅವಾಂತರ ಸೃಷ್ಟಿಯಾಗಿತ್ತು. ಎರಡು ಸಾಲಿನಲ್ಲಿಯೂ ಆಳೆತ್ತರದಲ್ಲಿ ಅರಿ ಮಾಡಿಟ್ಟ ಪುಸ್ತಕಗಳಿಗೆ ತಾಗಿ ‘ಧೊಪ್’ ಎಂಬ ಶಬ್ದದೊಂದಿಗೆ ಅವನು ಧರಾಶಾಯಿಯಾಗಿದ್ದ ಭಯದಿಂದ ಕಣ್ಣು ಕಪ್ಪಿಟ್ಟಿತ್ತು… ಯಾರಾದರೂ ನೋಡಿಯಾರು… ಮೇಷ್ಟ್ರು ಬೈದಾರು… ಎಂದುಕೊಂಡು ಸೆಕೆಯಂಗಳದಲ್ಲಿ ಸದ್ದಿಲ್ಲದೇ ಜೋಡಿಸುವುದರಲ್ಲಿ ಮಗ್ನನಾಗಿದ್ದರಿಂದ ಅವನಿಗೊಂದು ‘ಸಿಹಿ’ ಸಿಗಲೇ ಎಲ್ಲ. ಮೇಷ್ಟ್ರ ಕೈ ನಡುಗುತ್ತಿತ್ತು… ತಂದೆಯ ಮರಣವಾರ್ತೆಯನ್ನು ಹೊತ್ತು ತಂದ ಮೊಬೈಲ್ ಇನ್ನೂ ರಿಂಗುಣಿಸುತ್ತಲೇ ಇತ್ತು… ಗಾಬರಿಯಿಂದ ಹೊರ ಬಂದು ‘ರಾಮಾ’ ಎಂದರಷ್ಟೇ. ಅಷ್ಟೇ ವೇಗದಲ್ಲಿ ಎಲ್ಲಾ ಬೀಗಗಳನ್ನು ಜಡಿದು, ಕೀಲಿಯನ್ನೊಪ್ಪಿಸಿಬಿಟ್ಟ ರಾಮ. ದೀರ್ಘಕಾಲ ರಜೆಯಿದ್ದದ್ದರಿಂದ ಎಲ್ಲರಿಗೂ ಖುಷಿಯೋ ಖುಷಿ ಒಬ್ಬನ ಹೊರತಾಗಿ” ಕಥೆ ಹೇಳುತ್ತಿದ್ದವ ತುಸು ಹೊತ್ತು ಮೌನವಾದೆ. ಮಕ್ಕಳ ಕಂಗಳಲ್ಲಿ ಕಾತರತೆ, ಕುತೂಹಲ, ಭಯ ಮಿಶ್ರಿತ ಭಾವನೆಗಳು ಇಣುಕುತ್ತಿದ್ದುದ್ದನ್ನು ಗ್ರಹಿಸಿ, ತುಸು ನೀರನ್ನು ಕುಡಿದು ಮುಂದುವರಿದೆ.
“sಸರಿ… ಮೇಷ್ಟ್ರು ಬೆಳಗಾವಿಗೆ ಹೋಗಿ ತಂದೆಯ ಅಪರ ಕಾರ್ಯಗಳನ್ನು ಮುಗಿಸಿಕೊಂಡು ಮೇ ಅಂತ್ಯದಲ್ಲಿ ಮೂಲ ಶಾಲೆಗೆ ಹೊಸ ಹೊಸ ಯೋಜನೆಗಳೊಂದಿಗೆ, ಹುರುಪಿನೊಂದಿಗೆ ಹೊರಟು ಬಂದಿದ್ದರು. ಗುಡ್ಡಗಾಡು ಪ್ರದೇಶದಲ್ಲಿ ಶಾಲೆ ಇರುವುದಲ್ಲ! ಎಂಬ ಚಿಂತೆಯನ್ನು ದೂರ ಮಾಡಿ ಕರ್ತವ್ಯವೆಂಬ ಗುಡ್ಡವೇರತೊಡಗಿದ್ದ ಮಾಸ್ತರು-ಶಂಕರಪ್ಪನನ್ನು ಕಂಡೊಡನೆ ಹೆಜ್ಜೆ ನಿಧಾನವಾಗಿಸಿದರು. ‘ಏನ್ ಶಂಕ್ರಣ್ಣ… ಹೇಗಿದ್ದೀರಾ? ಏನ್ ವಿಶೇಷ ಊರ ಕಡೆ!’ ಕುತೂಹಲಕ್ಕೆ ಮಾತಿಗೆಳೆದದ್ದೇ ನೆಪ… ಶಂಕರಣ್ಣ ಗೋಳೋ ಎಂದು ಅಳತೊಡಗಿದ… ‘ಸಾಗರ್ ಕಾಣ್ತಾ ಎಲ್ಲಾ ಸಾರ್… 2 ತಿಂಗಳಾತು!’
“ಯಾರು?”
‘4ನೇ ಕ್ಲಾಸಿನ ಮೂಕ ಹುಡುಗ ಸಾ… ನನ್ನ ತಮ್ಮನ ಮಗ… ನಾನೇ ಸಾಕ್ಕಂಡಿದ್ದೆ… ಅಪ್ಪನಮನೆ ಜಾತ್ರೆಗೆ ಹೋಗಬೇಕು ಅಂತ ಹೇಳಿದ್ದ ಸಾ… ಇದೇ ಕಾಡಲ್ ಹೋಗಬೇಕು… ಮೊದಲೇ ಚಿರತೆಗಳ ಹಾವಳಿ ಬೇರೆ… ಏನಾಯ್ತೋ ಏನೋ… ಅವನು ಅಲ್ಲಿಗೂ ಹೋಗ್ಲಿಲ್ಲ… ಇಲ್ಲಿಗೂ ಬರಲಿಲ್ಲ… ಅವತ್ತ ಹತ್ನೇ ತಾರೀಖು ರಿಸಲ್ಟ್ ನೋಡ್ಕ ಬತ್ತೆ ಅಂತ ಸನ್ನೆ ಮಾಡಿ ಹೋದ. ಅದೊಂದೇ ನೆನಪು ನನಗೆ…” ಶಕರಪ್ಪ ಅಕ್ಷರಶಃ ಗೋಳಾಡತೊಡಗಿದ್ದ.
“ಹಾಗೆಲ್ಲಾ ಆಗ್‍ಲಿಕ್ಕಿಲ್ಲ ಶಂಕರಣ್ಣಾ… ನೋಡೋಣಾ ಸಿಗತಾನೆ…” ಎಂದು ಧೈರ್ಯ ಹೇಳಿ ಒಳಗೊಳಗೆ ಕಂಪಿಸತೊಡಗಿದರು ಮಾಸ್ತರು. ಬಿರಬಿರನೆ ಶಾಲಾವರಣದ ಬಳಿ ಬಂದಾಗ ಅದೇನೋ ಕಮುಟು ವಾಸನೆ ಮೂಗಿಗೆ ಬಡಿಯಿತು. “ರಾಮಾ… ಬಾಗಿಲು ತೆಗೆ… ಎಲ್ಲೋ ಇಲಿ… ಹೆಗ್ಗಣ ಸತ್ತರಿಬೇಕು… ನೋಡೋಣ…” ಎಂದು ಕೀ ಗೊಂಚಲನ್ನು ನೀಡಿದರು. ಅವನು ಕ್ಷಣಾರ್ಧದಲ್ಲಿ ಬಾಗಿಲು ತೆರೆದು, “ಸಾರ್… ವಾಸ್ನೆ ಬರತಾ ಇರೋದು… ಲೈಬ್ರರಿ ರೂಮ್‍ನಲ್ಲಿ ಸಾರ್… ಬನ್ನಿ… ಬನ್ನಿ” ಎಂದ ಮೇಷ್ಟ್ರು ಒಳಗಡಿಯಿಟ್ಟಾಗ ಕಮಟು ಜೋರಾಯಿತು, ಕರ್ಚೀಫ್ ಒತ್ತಿ ಹಿಡಿದರು ಮೂಗಿಗೆ! ಮಕ್ಕಳು ಅಂಗಿಯನ್ನೇ ಮೂಗಿಗಡ್ಡ ಹಿಡಿದುಕೊಂಡು ಅಲ್ಲೇ ನಿಂತಿದ್ದರು. ಚೆಲ್ಲಾಪಿಲ್ಲಿಯಾಗಿದ್ದ ಪುಸ್ತಕಗಳ ನಡುವೆ ಆಗ ತಾನೇ ತಂದಿರಿಸಿದ್ದ ಅಸ್ಥಿಪಂಜರದ ಸುತ್ತ ಗೆದ್ದಲು ಹುಳುಗಳ ದರ್ಶನವಾಯಿತು. ಕರಿಹಲಗೆ ಮೇಲೆ ‘ಊಟ ಬೇಕು, ಊಟ ಬೇಕು, ಯಾರಾದ್ರೂ ಬಾಗಿಲು ತೆಗೆಯಿರಿ ಪ್ಲೀಸ್’ ಎಂಬ ಕೈ ಬರಹ ಎಲ್ಲಾ ಕಡೆ ಗೀಚಿತ್ತು! ಹೌದು ಮೇಷ್ಟ್ರಿಗೆ ಸ್ಪಷ್ಟವಾಗತೊಡಗಿತು. ಅದು 4ನೇ ತರಗತಿಯ ಸಾಗರನ ಕೈ ಬರಹ ಎಂದು… ಕೂಡಲೇ… ಎದೆ ಹಿಡಿದುಕೊಂಡು ಕುಸಿದು ಹೋದರು ಅಲ್ಲೇ!”
… ಕಥೆ ನಿಂತು ಹೋಯಿತು. ಮಕ್ಕಳು ಕಣ್ಣಿರಾಗಿದ್ದರು… ನನ್ನ ಸಹೋದ್ಯೋಗಿಗಳೂ, ಉಪನ್ಯಾಸಕರೂ, ಪ್ರಾಚಾರ್ಯರೂ ನಿಂತಿದ್ದು ನನ್ನ ಗಮನಕ್ಕೆ ಬಾರದಿರಲಿಲ್ಲ. ಏನಾದ್ರೂ ಪ್ರಶ್ನೆಗಳಿವೆಯೇ” ಕೇಳಿದೆ ಎಂದಿನಂತೆ. “ಮುಂದೇನಾಯ್ತು ಸಾರ್?” ಅಭಿಷೇಕನ ಪ್ರಶ್ನೆಯಲ್ಲಿ ಕುತೂಹಲ ಮನೆ ಮಾಡಿತ್ತು. “ಇನ್ನೇನಾಯ್ತು! ಆಸ್ಪತ್ರೆಯಲ್ಲಿ ಚೇತರಿಕೊಂಡ ಮೇಷ್ಟ್ರು ನಿಯಾಮಾನುಸಾರ ಸಸ್ಪೆಂಡ್ ಆದರು. ಕೊನೆಗೆ ಬೇರೆ ಕಡೆ ವರ್ಗಾವಣೆನೂ ಆಯಿತು ಅನ್ನಿ” ಎಂದೆ ಕ್ಲಿಯರ್ ಆಗಿ.
“ಆ ಶಿಕ್ಷಕರು ಈಗೆಲ್ಲಿ ಇದ್ದಾರೆ ಸಾರ್” ಅಪರೂಪಕ್ಕೆ ಅನುಷಾ ಎದ್ದು ನಿಂತು ಕೇಳಿದಳು. “ನಿಮ್ಮ ಎದುರಿಗೇ ನಿಂತಿದ್ದಾರೆ” ಎಂದೆ ನನ್ನ ಪಕ್ಕದಲ್ಲಿ ನಿಂತಿದ್ದ ಶಿಕ್ಷಕರಿಗೆ ಕಸಿವಿಸಿಯಾಯಿತು.ಅಲ್ಲಲ್ಲಿ ಪಿಸು ಪಿಸು ಶುರುವಾಯಿತು. ಕೆ.ಜಿ ಜಗದೀಶ್ ಸರ್ ನನ್ನ ಬಳಿ ಬಂದು, “ಏನ್ಸಾರ್… ಕಥೆ ತುಂಬಾ ಚೆನ್ನಾಗಿತ್ತು… ಒಂದು ಹುಳ ಬಿಟ್ರಿ ನೋಡಿ… ನಿಮ್ಮೆದ್ರೂಗೆ ಇದ್ದಾರೆ ಅಂದ್ರಲ್ಲ ಸಾರ್ ಅಂದ್ರೇ ನೀವೇನಾ ಸಾರ್? ನೀವು ನೋಡಿದ್ರೆ ‘ಅರುಣ್ ಸಾಗರ್’ ಟ್ರಸ್ಟ್ ನಿರ್ಮಾಣ ಮಾಡಿ ಹತ್ತಾರು ವರ್ಷಗಳಿಂದ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡ್ತಾ ಇದ್ದೀರಾ… ಅನಾಥ ಮಕ್ಕಳ ದತ್ತು ತಗೊಂಡು ಬೆಳಿಸ್ತಾ ಇದ್ದೀರಾ… ನಿಮ್ಮ ಸಂಬಳವೆಲ್ಲಾ ಟ್ರಸ್ಟ್‍ಗೆ ದೇಣಿಗೆ ನೀಡ್ತಾ ಇದ್ದೀರಿ… ನನಗಂತೂ ನಂಬೋಕೆ ಆಗ್ತಾ ಇಲ್ಲಾ ಸಾರ್…” ಎಂದರು ಕಳಕಳಿಯಿಂದ.
“ಒಂದೊಂದು ಒಳ್ಳೆಯ ಕೆಲಸದ ಹಿಂದೆ ಇಂಥ ದುರಂತಗಳು ಇರ್ತವೆ ಜಗದೀಶ್ ಸರ್”-ಎಂದೆ. ನಾನು ಈ ಕಥೆಯನ್ನು ಈಗಲೇ ಹೇಳ್‍ಬೇಕಿತ್ತು. ಏಕೆಂದರೆ ತುಂಬಾ ಎಚ್ಚರಿಕೆಯಿಂದ ಕೊನೆಯ ದಿನದ ಕರ್ತವ್ಯ ಮಾಡಬೇಕು ನಾವು… ನೀವು…! ಇಲ್ಲದಿದ್ದಲ್ಲಿ ಕೊನೆಯ ದಿನ ‘ಕೊಲೆಯ ದಿನ’ವಾದೀತು ನೋಡಿ… ಅರುಣ್ ಸಾಗರರ ಕಣ್ಣಿನೊಂದಿಗೆ ಮಕ್ಕಳ ಮನಸ್ಸೂ ಒದ್ದೆಯಾಯಿತು.
-ಮೊಗೇರಿ ಶೇಖರ ದೇವಾಡಿಗ