![](https://panjumagazine.com/wp-content/uploads/Bhargavi-Joshi-224x300.jpg)
ಬರಿ ಈ ಕೊರೊನ, ಕೊರೊನ ಅಂತ ಆ ಕೀಟದ ಹಾವಳಿಯ ಮಧ್ಯ ಬೇರೆ ಬದುಕನ್ನೆಲ್ಲ ಮರೆತು ಬಿಟ್ಟಿದ್ದೇವೆ. ಹೋದ ತಿಂಗಳು ಭಾರತದಲ್ಲಿ ನಡೆದ ಒಂದು ಘಟನೆ ಇಂದು ಇತಿಹಾಸವೇ ಸರಿ. ನಿರ್ಭಯ ಅನ್ನುವ ಹೆಣ್ಣುಮಗಳನ್ನು ಅಷ್ಟು ಅಮಾನುಷವಾಗಿ ಹಿಂಸಿಸಿ ಕೊಂದ ಪಾತಕಿಗಳನ್ನು ಗಲ್ಲಿಗೆ ಬಲಿಕೊಡಲಾಯಿತು. ಅಂದು ಗಲ್ಲಿನ ಕುಣಿಕೆಗೆ ಕತ್ತು ನೀಡುವಾಗ ಅವರ ಮನಸುಗಳು ಎಷ್ಟು ಒದ್ದಾಡಿರಬಹುದು. ಅಯ್ಯೋ ಸಾವು ಕಣ್ಣಮುಂದೆ ಇದೆ ಎಂದಾಗ ಎಷ್ಟು ಭಯಾನಕ. ನಮ್ಮನ್ನು ಬದುಕಿಸಿ, ಒಂದು ಅವಕಾಶ ಕೊಡಿ ಎಂದು ಕೊನೇ ಕ್ಷಣದವರೆಗೂ ಅಂಗಲಾಚಿ ಬೇಡಿರಬಹುದು ಅಲ್ಲವೇ? ಅಯ್ಯೋ ಮೂರ್ಖರೆ ನೀವು ತಪ್ಪು ಮಾಡಿ ಶಿಕ್ಷೆ ಅನುಭವಿಸುತ್ತ ಇದ್ದೀರಾ. ಆದರೆ ಅಂದು ಆ ಹೆಣ್ಣು ಮಗು ಏನು ತಪ್ಪು ಮಾಡಿತ್ತು ಅಂತ ಆ ರೀತಿ ಅಂತ್ಯ ಹೊಂದಿತ್ತು? ಹೆಣ್ಣು ಆಗಿ ಹುಟ್ಟಿದ್ದೇ ಅವಳ ತಪ್ಪು ಆಗಿತ್ತ? ಅಷ್ಟು ಬರ್ಬರವಾಗಿ ಹಿಂಸೆ ಕೊಟ್ಟಿದ್ರಿ ಅವಳ ದೇಹಕ್ಕೆ. ನಿಮಗೆಲ್ಲ ಹೆಣ್ಣು ಎಂದರೆ ಒಂದು ದೇಹವಷ್ಟೇ ಎಂದು ಎನಿಸುತ್ತದೆಯೇ? ಆಗ ಒಂದು ಕ್ಷಣಕ್ಕೆ ನೆನಪಾಗಲಿಲ್ಲವೇ ನಿಮ್ಮ ತಾಯಿ, ಅಕ್ಕಾ, ತಂಗಿಯರ ದೇಹದ ರಚನೆಯು ಹೀಗೆ ಇದೆ ಎಂದು?
ಆಕರ್ಷಣೆ ಸ್ವಾಭಾವಿಕ. ಆದರೆ ಕ್ರೌರ್ಯ ಅಲ್ಲ. ಪ್ರೀತಿಸಿ. ನಿಮಗಾಗಿ ಇರುವ ಮನಸ್ಸನ್ನು ಪ್ರೀತಿಸಿ. ನಿಮ್ಮದು ಎಂದು ಅಧಿಕಾರ ಇರುವ ಪ್ರೀತಿಯನ್ನು ಅನುಭವಿಸಿ. ನಿಮಗೆ ಒಲಿದು ಬರುವ ದೇಹವನ್ನು ಅನುಭವಿಸಿ, ಅದನ್ನು ಬಿಟ್ಟು ಈ ರೀತಿ ಕ್ರೂರ ಮನಸ್ಥಿತಿ ಹೊಂದಬೇಡಿ. ಹೆಣ್ಣು ಮಕ್ಕಳ ಉಡುಗೆ ತೊಡುಗೆಗಳು, ತುಂಡು ಬಟ್ಟೆ ತೊಡುವುದು, ಮೈ ತೋರಿಸುವಂತೆ ಓಡಾಡುವುದು ಗಂಡಸರನ್ನು ಆಕರ್ಷಿಸುವುದೇ ಈ ರೀತಿ ಅವಾಂತರಗಳಿಗೆ ಕಾರಣ ಅಂತ ದೂರುವ ಜನಗಳೇ ಒಮ್ಮೆ ಯೋಚಿಸಿ ಮೂರು -ಆರು ವರ್ಷದ ಮಕ್ಕಳು ಈ ರೀತಿ ಕಾಮುಕರ ಅಟ್ಟಹಾಸಕ್ಕೆ ಬಲಿ ಆಗುತ್ತಿದ್ದಾರೆ. ಆ ಮುದ್ದು ಕಂದಮ್ಮಗಳ ಬಟ್ಟೆ ಹೇಗಿರುತ್ತದೆ? ಅವಗಳಿಗೆ ತಮ್ಮ ದೇಹ ಹೇಗಿದೆ? ಯಾಕೆ ಈ ರೀತಿ ಇದೆ? ಅನ್ನುವುದರ ಅರಿವಾದರೂ ಇರುತ್ತದೆಯೇ? ಒಂದು ಉಗುರು ತುದಿ ಕಟ್ ಆದರೆ ಸಹಿಸದಷ್ಟು ನೋವು ಆಗುತ್ತದೆ. ಅಂತಹದರಲ್ಲಿ ಆ ಮಗು ಆ ನೋವನ್ನು ಹೇಗೆ ಸಹಿಸಿತು ಊಹಿಸಬಲ್ಲೆವಾ? ಏನಾಗುತ್ತಿದೆ? ಯಾಕಾಗುತ್ತಿದೆ? ಎನ್ನುವ ಅರಿವೇ ಇಲ್ಲದ ಮುದ್ದು ಕಂದಮ್ಮಗಳ ದೇಹದಲ್ಲಿ ಯಾವ ಆಕರ್ಷಣೆ ಕಾಣಿಸಿದೆ ಎಂದು ಅವುಗಳನ್ನು ಬಲಿಪಶು ಮಾಡಲಾಗುತ್ತದೆ?
60-70 ವಯಸ್ಸಿನ ಮಹಿಳೆಯರು ಇದಕ್ಕೆ ಹೊರತಾಗಿಲ್ಲ. ಅವರು ಯಾವ ರೀತಿ ಬಟ್ಟೆ ಹಾಕಿಕೊಂಡು ಆಕರ್ಷಿಸುತ್ತಾರೆ? ಈ ರೀತಿಯ ದೈಹಿಕ ಪ್ರಹಾರ ಸಹಿಸುವ ಸಾಮರ್ಥ್ಯ ಇರುತ್ತದೆಯೇ? ದೇಹ, ಮನಸ್ಸು, ಕಾಮ ಎಲ್ಲವು ದಣಿದುಹೋದ ವಯಸ್ಸು ಅದು. ಅಲ್ಲಿ ಯಾವ ಆಕರ್ಷಣೆ ಇದೆ ಎಂದು ಅವರನ್ನು ಬಿಡುತ್ತಿಲ್ಲ ಈ ಕಾಮುಕರು. ತುಂಡು ಬಟ್ಟೆ ತೊಟ್ಟವರದು ತಪ್ಪು. ಆದರೆ ಭಾರತೀಯ ಸಂಸ್ಕೃತಿಯ ಪ್ರತೀಕವಾದ ಸೀರೆ ಉಟ್ಟ ಮಹಿಳೆಯರನ್ನು ಕಾಮದ ದೃಷ್ಟಿ ಇಂದ ನೋಡುವದಿಲ್ಲವೇ? ಸೆರಗಂಚಲ್ಲಿ ಕಾಮಿಸುವ ಕಾಮಿಗಳೇ ಒಂದು ಕ್ಷಣ ನೆನಪಿಸಿಕೊಳ್ಳಿ ಅದೇ ಸೆರಗಂಚಲ್ಲಿ ನಿಮ್ಮ ತಾಯಿ ನಿಮಗೆ ಎದೆ ಹಾಲು ಉಣಿಸಿ ಬೆಳೆಸಿದ್ದು. ಬಾಳಂತನಕ್ಕೆ ತವರಿಗೆ ಬಂದ ನಿಮ್ಮ ಅಕ್ಕಾ -ತಂಗಿಯರನ್ನ ನೆನಪಿಸಿಕೊಳ್ಳಿ, ಮಗುವಿಗೆ ಎದೆ ಹಾಲು ಉಣಿಸುವ ನಿಮ್ಮ ಅತ್ತಿಗೆ-ನಾದಿನಿ ಇವರನ್ನೆಲ್ಲ ಒಮ್ಮೆ ನೆನಪಿಸಿಕೊಳ್ಳಿ. ಅವರನ್ನು ಕಾಮದ ದೃಷ್ಟಿಯಿಂದ ನೋಡುವ ಪಾಪಿಗಳು ಇದ್ದಾರೆ ಅನ್ನುವುದು ಕಹಿ ಸತ್ಯ.
ನಿರ್ಭಯ ಒಬ್ಬಳೇ ಅಲ್ಲ ಈ ರೀತಿ ವಿಕೃತಿಗೆ ಬಲಿ ಆದದ್ದು. ಅನೇಕ ಹೂವುಗಳು ಅರಳುವ ಮುನ್ನ ನಲುಗಿ ಹೋಗಿವೆ ಈ ಅತ್ಯಾಚಾರ ಎಂಬ ಬೆಂಕಿಗೆ.. ಭವಿಷ್ಯದ ಅದೆಷ್ಟೋ ಕನಸು ಹೊತ್ತು ಅರಳುತ್ತಿರುವ ಮುಗ್ಧ ಮನಸುಗಳು. ಮಕ್ಕಳ ಬದುಕಿನ ಬಗ್ಗೆ ಅದೆಷ್ಟು ಆಸೆ ಕನಸು ಕಟ್ಟಿದ್ದವೋ ಹೆತ್ತವರ ಮನಸು. ಎಲ್ಲವನ್ನು ಕೆಲವೇ ಕ್ಷಣದಲ್ಲೇ ಚಿವುಟಿ ಹಾಕಿದರು ಆ ದುಷ್ಟರು. ಆಗ ಎಷ್ಟು ನೋವು ಅನುಭವಿಸಿರಬಹುದು ಆ ಹುಡುಗಿ? ಆ ನೋವನ್ನು ಕಲ್ಪನೆ ಮಾಡಿಕೊಳ್ಳೋದಕ್ಕಾದರೂ ಸಾಧ್ಯ ಇದೆಯಾ? ಕೊನೆ ಕ್ಷಣದವರೆಗೂ ಅದೆಷ್ಟು ಹಲುಬಿರಬಹುದು ಆ ಮಗು ನನ್ನ ಬಿಟ್ಟುಬಿಡಿ ಬಿಟ್ಟುಬಿಡಿ ಎಂದು… ಕೊನೆ ಉಸಿರೆಳೆವವರೆಗೂ ಅದೆಷ್ಟು ಹಂಬಲಿಸಿರಬಹುದು ಆ ಮಗು ಯಾರಾದರೂ ಬಂದು ನನ್ನ ಕಾಪಾಡ ಬಹುದೇ ಎಂದು.
ದುಷ್ಟರೆ ಪ್ರಾಣಭಯ ಹುಟ್ಟಿ ಪ್ರಾಣಭಿಕ್ಷೆಗಾಗಿ ಅದೆಷ್ಟು ಅಂಗಲಾಚಿದಿರಿ, ಅದೆಷ್ಟು ಕೋರ್ಟು, ವಕೀಲರ ಮೊರೆ ಹೊಕ್ಕಿರಿ? ಅದೆಷ್ಟು ದೇವರಲ್ಲಿ ಹರಕೆ ಹೊತ್ತಿರಿ? ಕೊನೆಗೂ ಅದು ಯಾವುದು ಫಲಿಸದೆ ನ್ಯಾಯಕ್ಕೆ ಬೆಲೆ ಸಿಕ್ಕಿದೆ. ನಿಮ್ಮಂತಹ ಮಕ್ಕಳನ್ನು ಹೆತ್ತ ತಪ್ಪಿಗೆ ಪಾಪಾ ನಿಮ್ಮ ಪೋಷಕರು ಎಷ್ಟು ನೊಂದಿರಬಹುದು. ಇದು ಅಂತ್ಯವಲ್ಲ. ಈ ರೀತಿ ಕಾಮುಕರು ರಕ್ತಬೀಜಾಸುರನ ವಂಶಸ್ಥರು ಇದ್ದಂತೆ. ಇಲ್ಲಿ ನಾಲ್ಕು ಅಂತ್ಯ ಅಲ್ಲೆಲ್ಲೋ ಇನ್ನು ನಲವತ್ತು ಹೀನ ಮನಸ್ಥಿತಿಗಳು ಹುಟ್ಟಿರುತ್ತವೆ. ಆದರೆ ಇಂದು ಈ ದುಷ್ಟ ವಧೆ ಎಲ್ಲ ಕ್ರೂರ ಮನಸ್ಥಿತಿಗಳಿಗೂ ಒಂದು ಎಚ್ಚರಿಕೆಯ ಘಂಟೆ. ಇನ್ನೊಮ್ಮೆ ಹೆಣ್ಣನ್ನು ಕೀಳು ದೃಷ್ಟಿ ಇಂದ ನೋಡುವ ಮುಂಚೆ ಒಮ್ಮೆ ಈ ಗಲ್ಲು ಶಿಕ್ಷೆಗೆ ಬಲಿಯಾದ ನಾಲ್ವರನ್ನು ನೆನಪು ಮಾಡಿಕೊಳ್ಳಿ. ಹೆಣ್ಣಿಗೆ ಗೌರವಕೊಟ್ಟು, ಅವಳಿಗಾಗಿ ಅಲ್ಲದೆ ಇದ್ದರು ನಿಮಗಾಗಿಯಾದರು ನೀವು ಒಮ್ಮೆ ಯೋಚಿಸಿ.
ಇದು ಪ್ರತಿ ಭಾರತದ ಪ್ರತಿ ಹೆಣ್ಣು ಮಕ್ಕಳ ಗೆಲುವು. ಹಾಗಂತ ಪುರುಷ ಸಮಾಜ ಕೆಟ್ಟದ್ದು ಎಂದು ಹೇಳಲು ಸಾಧ್ಯವಿಲ್ಲ. ಆ ಕಾಮುಕರನ್ನು ಬಲಿಹಾಕಿ ಹಿಡಿದ ಪೊಲೀಸ್ ಪಡೆ ಗಂಡು ಜಾತಿ. ಗಲ್ಲಿಗೆ ಹಾಕುವ ಆದೇಶ ಹೊರಡಿಸಿದ ನ್ಯಾಯಾಧೀಶರು ಗಂಡು ಜಾತಿ. ಕೊನೆಗೆ ಆ ನೀಚ ದೇಹಕ್ಕೆ ಕುಣಿಕೆ ಸಿಕ್ಕಿಸಿದವರು ಗಂಡುಜಾತಿ.. ನೀಚರ ಸಾವನ್ನು ಸಂಭ್ರಮಿಸಿದ ಅದೆಷ್ಟೋಜನ ಸೋದರರು ಅವರಿಗೆಲ್ಲ ವಂದನೆಗಳು. ಅವಳು ಬರಿ ದೇಹವಲ್ಲ. ಅವಳಿಗೆ ಒಂದು ಮನಸ್ಸು ಇರುತ್ತದೆ. ಮನಸು ಹಾಳಾಗಿ ಹೋಗಲಿ, ದೇಹಕ್ಕೆ ಆಗುವ ನೋವು ಅದನ್ನಾದರೂ ಅರ್ಥ ಮಾಡಿಕೊಳ್ಳಿ. ಏನೇ ಆಗಲಿ ಸಹೋದರಿ ನಿರ್ಭಯ ಇಂದು ನಿನ್ನ ಆತ್ಮಕ್ಕೆ ಶಾಂತಿ ಸಿಕ್ಕಿತೇ ಮಗು? ನೆಮ್ಮದಿ ಇಂದ ಮುಕ್ತಿ ಹೊಂದು ಮಗು. ದುಷ್ಟರು ಯಮಪುರಿಯ ದಾರಿ ತುಳಿದಾಗಿದೆ. ಅವರ ಕರ್ಮಕ್ಕೆ ಅವರು ಇಷ್ಟುದಿನ ಸಾವಿನ ಭಯದಲ್ಲಿ ಸಾಕಷ್ಟು ಅನುಭವಿಸಿದ್ದಾರೆ. ಏನೇ ಮಾಡಿದರು ನಿನ್ನನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ ನಿನ್ನಂತೆ ಬೇರೆ ಹೆಣ್ಣು ಮಕ್ಕಳು ಅನುಭವಿಸುವ ಸಂಖ್ಯೆ ಕಡಿಮೆ ಆಗಬಹುದು ಎಂಬ ನಂಬಿಕೆ.
–ಭಾರ್ಗವಿ ಜೋಶಿ.
ಸಂಹಾರ ಖುಷಿ ಕೊಟ್ಟಿತು. ಲೇಖನ ಮನಸಿನಲ್ಲಿ ಮೂಡಿದ ನಿಟ್ಟುಸಿರಿನ ಗಾಯನ. ಅಂತಹ ಕಾಮಪಿಪಾಸುಗಳಿಗೆ ಆಗಬೇಕಾದದ್ದು ಆಗಿದೆ ರಿ. ಮತ್ತೊಬ್ಬ ಅತ್ಯಾಚಾರಿ ಎಂದಿಗೂ ಹುಟ್ಟಬಾರದು. ನೇರವಾಗಿ ನೇಣಿಗೇರಿಸದೆ, ಹೆಣ್ಣನ್ನು ಮುಟ್ಟಲೂ ಹೆದರುವಂತಹ ಶಿಕ್ಷೆ ನೀಡಬೇಕಿತ್ತು ಅನಿಸುತ್ತದೆ ರಿ.