ಕೊಡಬಹುದ್ದಾದ್ದದ್ದು ದುಡ್ಡು ಒಂದನ್ನ?: ಹೇಮಲತಾ ಪುಟ್ಟನರಸಯ್ಯ

ಫೇಸ್ಬುಕ್ ನಲ್ಲಿ ಒಂದು ಫೋಟೋ ಚಿಂದಿ ಆಯುವ ಕೆಳಸ್ಥರದ  ಹೆಂಗಸು ತನಗೆ ದಕ್ಕಿದ ಒಂದು ಹೊತ್ತಿನ ಊಟವನ್ನು ಬೀದಿ ನಾಯಿಯೊಂದಿಗೆ ಹಂಚಿಕೊಂಡು ತಿನ್ನುತ್ತಿರುವುದು.  ಎಂತವರಿಗೂ ಕಾಡುವ ಚಿತ್ರ. ಈ ತರದ ಸನ್ನಿವೇಶವನ್ನು ಕಣ್ಣಾರೆ ಹಲವು ಬಾರಿ ನೋಡಿರ್ತಿವಿ.  ಜೊತೆಜೊತೆಗೆ ಮನೆಗೆ ಬಂದ ನೆಂಟರಿಗೆ ಬಾಯಿ ಮಾತ್ತಲ್ಲಾದರು  ಊಟ ಮಾಡಿ ಎನ್ನದ, ತಿಂಡಿ ಮನೆಯವರಿಗಷ್ಟೇ ಎಂದು ಎತ್ತಿಟ್ಟುಕೊಂಡ ಪೈಸೆ ಟು ಪೈಸೆ ಜನರನ್ನು ಅನುಭವ ಮಾಡಿಕೊಂಡಿರ್ತೀವಿ.  ಫೇಸ್ಬುಕ್ ನಲ್ಲಿ  ಫೋಟೋ ಶೇರ್ ಮಾಡಿದಾಕ್ಷಣ ನಾವು generous ಆಗಿಬಿಟ್ವಿ ಅಂತೇನು ಆಗಬೇಕಿಲ್ಲ ಅಲ್ವಾ ! generousity, ಉದಾರತೆ  ಎಂದರೆ  ಇದ್ದಬದ್ದುದ್ದನ್ನಲ್ಲ ಹಂಚಿಬಿಡುವುದು ಎಂದೇನು  ಆಗಬೇಕಿಲ್ಲ .  ಮನೆಯಲ್ಲಿನ ಅಕ್ಕಿ,  ಗೋಧಿ, ರವೆಯನ್ನೆಲ್ಲ  ಬೇಯಿಸಿ ಬಡಿಸಿಬಿಡುವ  ಧಾರಾಳತನವು ಅಲ್ಲ.  ದುಡಿದ ದುಡ್ಡಿನ ದೇಣಿಗೆ ನೀಡದ್ದಿದ್ದರು ನನ್ನ ಈ ಹೊತ್ತಿನ ಪ್ರಶ್ನೆ ಸಹಜೀವಿಗಳನ್ನು ಎಷ್ಟು ಸಹಾನುಭೂತಿಯಿಂದ ನಡೆಸಿಕೊಂಡೆವು ನಾವು ಎನ್ನುವುದು. 

ಊಟ ಬಟ್ಟೆ ವಸತಿ ಮೂಲಭೂತ ಸೌಕರ್ಯಗಳು.  ಅವಷ್ಟೇ ಒದಗಿಬಿಟ್ಟರೆ  ಮನುಷ್ಯ ಉಸಿರಾಡುತ್ತಾ ಬದುಕಬಲ್ಲ.  ಆದರೆ ಜೀವಂತ ಬದುಕಬಲ್ಲನ? ಭಿಕ್ಷಾಟನೆಯನ್ನು ಸೋಮಾರಿತನದ ಮತ್ತೊಂದು ರೂಪ ಎನ್ನುವವರು ಇದ್ದಾರೆ. ಇತ್ತೀಚೆಗಂತೂ ಅದೂ ಕೂಡ ಒಂದು ದೊಡ್ಡ ದಂಧೆಯಾಗಿ  ಬಿಟ್ಟಿದೆ. ಆದರೆ ಅದೇ ವರ್ಗದ ಕೆಲವೊಂದು ಜೀವಿಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇವ ? ಸತ್ತ ಕನಸುಗಳ ಹೂತ ಕಣ್ಣುಗಳು, ಭರವಸೆ ಮಾಸಿದ ನಗು, ದೇವರ ಮೇಲಿನ ಮುನಿಸು, ಮನುಷ್ಯರ ಮೇಲಿನ ತಿರಸ್ಕಾರ, ವಂಚನೆಗೊಳಗಾದ ಮುರಿದ ಸಂವೇದನೆ,ಮನೆ, ಸಂಸಾರ, ಅಸ್ತಿತ್ವ ಹೊರೆಯಾಗಿ ಕಳಚಿಟ್ಟು ತುತ್ತು ಊಟದಲ್ಲಷ್ಟೇ ಪೂರ್ತಿ ತೃಪ್ತರಾಗಿ, ಏಲ್ಲೆಂದರಲ್ಲಿ ಅಲೆಯುತ್ತ, ಏನೇನೋ ಬಡಬಡಿಸುತ್ತ,ಕಡೆಗೆ  ರಸ್ತೆ ಬದಿಯ ಮೋರಿ ಪಕ್ಕವೋ, ಗುಡಿಯಲ್ಲಿನ ಅರಳಿಮರದ ಕೆಳಗೋ, ಬಸ್ ಸ್ಟಾಪ್ ನ ಚಾವಣಿ ಕೆಳಗೋ ನಿಶ್ಚಿಂತೆಯಲ್ಲಿ ಉಸಿರಾಡುತ್ತಾ ಜೀವಂತ ಶವವಾದವರು. ಕೈಕಾಲು ಗಟ್ಟಿ ಇರೋವಾಗ ದುಡಿದು ತಿನ್ನಲೇನು ದಾಡಿ ಎನ್ನುವವರಿಗೆ ಅರ್ಥವಾಗೋಲ್ಲ  ಅವರು. ನನಗೂ ಸಹ ತೀರ ಕಾಡಿರಲಿಲ್ಲ, ಸ್ಪಷ್ಟವಾಗಿ ಕಂಡಿರಲಿಲ್ಲ  ಹೆಚ್ಚು ಕಡಿಮೆ ಅದೇ ಹತ್ತಿರತ್ತಿರ ನಡೆಯುವವರೆಗೂ. 

ಯಾರ ಶಾಪ, ಯಾರ ಶಿಕ್ಷೆ, ಯಾವ ಕಾಣದ ಕೈಗಳು ಕತ್ತು ಹಿಸುಕಿದ್ದು. ?  ನೀವೆಷ್ಟೇ ದೀಪಹಿಡಿದು ಬೆಳಕು ಮೂಡಿಸಲು ಹೋದರು ಹತ್ತುವುದಿಲ್ಲ ಅವರು. ಕಳೆದುಕೊಂಡಿದ್ದಾಗಿದೆ  ಎಂದೋ  ನಂಬಿಕೆ ಮತ್ತು  ಜೀವನ ಪ್ರೀತಿ. ಚಿರವಿರಾಗಿಗಳು . ಪ್ರಾಣಿಪಕ್ಷಿಯಂತೆ ಬಂಧಮುಕ್ತರು ಅವರು. ಏನು  ಕೊಡಬಲ್ಲೆವು ನಾವು ಅವರಿಗೆ ?  ಊಟ, ವಸತಿ, ಬಟ್ಟೆ ? ನಮ್ಮೂರಲ್ಲೊಬ್ಬ ಮೂಗನಿದ್ದ. ಊರಿಗೆ ಹೋದಾಗೆಲ್ಲ ಅಪ್ಪನೆದುರು ಹಲ್ಲುಗಿಂಜುತ್ತ ಕೈಚಾಚುತ್ತಿದ್ದ.  ಅವನು ಕಂಡಿತ ಭಿಕ್ಶುಕನಲ್ಲ . ನಮ್ಮದೇ ನೆಂಟ. ಅವನಿಗೂ ಮನೆ, ಹೊಲ, ಕುಟುಂಬವಿತ್ತು. ಜೊತೆಗೆ ಮೂಗನಾದ ತಪ್ಪಿಗೆ ಮನೆಯವರ ದಿವ್ಯ ತಿರಸ್ಕಾರ, ಅಸಡ್ಡೆಯೂ . ಏರು ಯವ್ವನದ  ಹುಡುಗನ ಮುಖದಲ್ಲಿ  ರಾಜನ ಕಳೆ.  ಆದರೆ ಅಪ್ಪ ಕೊಡುತ್ತಿದ್ದ 5 -10 ರೂಪಾಯಿಯಲ್ಲಿ ಅದೇನು ಕೊಂಡುಕೊಂಡು ಸುಖಿಸುತ್ತಿದ್ದ.

ನನಗನಿಸುತ್ತದೆ ಅವನು ಅಂಗೈಚಾಚಿ ಪಡೆಯುತ್ತಿದ್ದದ್ದು ದುಡ್ಡೇ ಆದರು ಕೈ ಒಡ್ಡಿ ಬೇಡುತ್ತಿದ್ದದ್ದು ಚೂರೇ ಚೂರು  ಸಹಾನುಭೂತಿ, ಸ್ನೇಹ,ಅನುಕಂಪಗಳನ್ನ ಮಾತ್ರ .  ಪ್ರೀತಿಯಲ್ಲಿ  ಅಪ್ಪ ಕೊಟ್ಟ ಕಾಸು ಅಷ್ಟೈಶ್ವರ್ಯ ಸಿಕ್ಕಿದ್ದಕ್ಕಿಂತಲೂ  ಅಮೂಲ್ಯ ಅವನಿಗೆ .  ತನಗೂ ಸ್ಪಂದಿಸುವವರು ಯಾರೋ ಇದ್ದಾರೆ  ಅನ್ನುವ  ಉಲ್ಲಾಸದಲ್ಲಿ ಕೈಕುಲುಕಿ ಮಂದಹಾಸಬೀರಿತ್ತಿದ್ದ . ಎಷ್ಟು ಕೋಟಿಯ ನಗು ಅದು !!! ಅದೇ ರೀತಿ ವಯಸಾದ ಮುದುಕ ಮುದುಕಿಯರು ಎಷ್ಟು ಅಧಿಕಾರದಲ್ಲಿ ಎಲೆ ಅಡಿಕೆಗೆ, ಪ್ಯಾಕೆಟ್ ಸಾರಾಯಿಗೆ ಪ್ರೀತಿಯಿಂದ ವಸೂಲಿ ಮಾಡಿಕೊಳ್ಳುತ್ತಿದ್ದರು. ನಮ್ಮವರು, ನಮ್ಮ ಊರವರು ಎಂದು ಬಂಧಿಸಿದ ಭಾವವದು. 

ನಾವಾಗ ಚಿಕ್ಕವರು. ಅದೊಬ್ಬಳು ಹೆಂಗಸು, ಆಸುಪಾಸಿನ ಊರವಳು. ಎರಡು ತಿಂಗಳಿಗೋ, ಮೂರು ತಿಂಗಳಿಗೂ ಹಾಗೆ ಮನೆಮನೆ ಕದಬಡಿಯುತ್ತಿದ್ದಳು. ಅವಳನ್ನು ಕರೆಯುತ್ತಿದ್ದದ್ದು ಹುಚ್ಚಿ ಎನ್ನುವ ಹೆಸರಿಂದ, ಏನೇ ಕರೆದರೂ ಮಗುವಂತ ನಗುವಿರುವವಳಿಗೆ ನೀಡಲು ಮನೆಮನೆಯವರು  ಊಟ, ಬಟ್ಟೆ, ಉಡುಗೊರೆ  ಇಟ್ಟೇ  ಇಡುತ್ತಿದ್ದರು. ನನಗೋ ಸಣ್ಣ ಅನುಮಾನ, ಜೊತೆಗೆ ವಿಪರೀತ ಕುತೂಹಲ. ಹುಡುಗರ  ಕಟ್ಟಿಕೊಂಡು ಕೊಟ್ಟಿಗೆಯಲ್ಲಿ ಅವಳ interrogation ಶುರುಮಾಡಿದ್ದೆವು. ನೀ ಯಾರು, ಹೆಸರೇನು, ಮನೆ, ಮಟ, ಊರು, ಕಥೆ ? ಮೊದಮೊದಲು ಹುಚ್ಚ್ಚಿಯಂತೆ ಮಾತು ತeಲಿಸಿದಳಾದರು ಅದ್ಯಾವಾಗ ಹೇಳುತ್ತಾ ಹೇಳುತ್ತಾ ಸರಿಹೋದಳೋ. ಅವಳ ಹರಿದ ಸೀರೆ, ಗುಂಡು ಹೊಡಿಸಿಯೋ  ಕಟಿಂಗ್ ಮಾಡಿಸಿಯೋ ಆಗಿದ್ದ ಇಂದಿರಾಗಾಂಧೀ ಹೇರ್ ಸ್ಟೈಲು, ಜಡ್ಡುಗಟ್ಟಿದ ಮುಖ– ಚೂರೇ ಸರಿ ಮಾಡಿದರು ಅಚ್ಚುಕಟ್ಟಾದ ಸುಂದರಿಯಾಗಿಬಿಟ್ಟಿರುತ್ತಿದ್ದಳು. ಅವಳ  ಹಿಂದೆ ಕತೆಯಿತ್ತು. ಗಂಡ ಬಿಟ್ಟು ಹೋಗಿದ್ದ, ಹೆತ್ತವರು ಮಣ್ಣು ಸೇರಿದ್ದರು, ಅತ್ತೆ ಮನೆಯಲ್ಲಿ ಜಾಗವಿರಲಿಲ್ಲ. ಮೊಗು ಇತ್ತೋ ಇಲ್ಲವೋ ಮರೆತು ಹೋಗಿದೆ. ಸಮಾಜದ ಗಂಡಸರಿಂದ ತಪ್ಪಿಸಿಕೊಳ್ಳಲು ಹುಚ್ಚಿಯಾದಳ, ನಗುವ ಭಿಕ್ಷುಕಿಯಾದಳ. ಎಂದಿಗೂ ಮುಗಿಯದ ಪ್ರಶ್ನೆ. 

ನಡು ವಯಸಿನ ಮುತ್ತೈದೆ ಹೆಂಗಸು ಆಕೆ.  ಬಿಚ್ಚೋಲೆ ಗೌರಿಗೆ ಅಲಂಕಾರವಿಲ್ಲದ್ದಿದ್ದರು ತುಂಬು ಸೌನ್ದರ್ಯ. ಕಣ್ಣುಗಳೇ ಹೇಳುತ್ತಿದ್ದವು ರಾತ್ರಿಯೆಲ್ಲ ನಿದ್ದೆಮಾಡದೆ ಅಳುತ್ತಿದ್ದಿದ್ದು. ಅದ್ಯಾವ ಗಳಿಗೆಯಲ್ಲಿ ಎದ್ದು ನಡೆದ್ದಿದ್ದಳೋ, ಬಸ್ ಹತ್ತಿದವಳಿಗೆ ಟಿಕೆಟ್ ತೆಗೆದುಕೊಳ್ಳಲು ಬಿಡಿಗಾಸು ದುಡ್ಡಿರಲಿಲ್ಲ.  ಕಂಡಕ್ಟರಿನ ಗದುರು ಪ್ರಶ್ನೆಯಷ್ಟೇ ಅಲ್ಲ ಯಾರ ಪ್ರಶ್ನೆಗೂ ಉತ್ತರ ಕೊಡಲಾಗದ ಅಘಾತದ್ದಲ್ಲಿದ್ದಳು. ಮುಲಾಜಿಲ್ಲದೆ  ಎಲ್ಲರೆದುರು ಅದೆಷ್ಟು ಬೈದು  ಅವಮಾನಿಸಿದರು ಬಸ್ಸಿನಿಂದ ಇಳಿಯದೆ  ಗರಬಡಿದವಳಂತೆ  ಕೂತೆ ಇದ್ದಳು. ಈ  ಲೋಕದಲ್ಲಿ ಅವಳಿಗೆ ಸಂಬಂಧವೇ  ಉಳಿದಿಲ್ಲವೆಂಬಂತೆ !

ಈಚೆಯಿಂದ ಟಾಕುಟೀಕಾಗಿ ಕಾಣುವವರು ಒಳಗೊಳಗೇ ಆದಷ್ಟು ನುಚ್ಚುನೂರಾಗಿರ್ತಾರೋ ಕಂಡವರು ಯಾರು.  ಯಾವ ಕೆಟ್ಟ ಗಳಿಗೆಯಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ, ಎಲ್ಲಿ ತಮ್ಮನ್ನೇ ತಾವು ಮುಗಿಸಿಕೊಳ್ಳುತ್ತಾರೋ ಅರ್ಥ ಮಾಡಿಕೊಳ್ಳುವವರು ಯಾರು.  ತಮ್ಮಿಂದ ಯಾವುದೇ ಸಹಾಯವಾಗದ್ದಿದ್ದರು ನಷ್ಟವಿಲ್ಲ, ಆದರೆ ಅದ್ಯಾಕೆ ಕೆಲವರು ಇನ್ನೊಬ್ಬರ ಬದುಕ್ಕಲ್ಲಿ ವಿನಾಕಾರಣ ವಿಧಿಯಾಗಿ ಬಿಡುತ್ತಾರೆ ? ಜೊತೆ ಕೂತವರಿಗೆ ಹಿಂಸೆ ಆಗದಂತೆ ಬದುಕಲು  ಬಿಡುವುದ ಮನುಷ್ಯ ಎಂದು ಕಲಿಯುತ್ತಾನೆ ? ನಂಬಿದವರಿಗೆ ಅನ್ಯಾಯ ಮಾಡದೆ, ಜಿಗುಪ್ಸೆ ತರಿಸದೇ ಬದುಕಲು  ಬಿಡುವ ಪಾಠವನ್ನು  ಯಾವ ವಿಶ್ವವಿದ್ಯಾಲಯ ನೀಡುತ್ತಿದೆ ?

ಸ್ನೇಹಿತ ಕೇಳಿದ — ಸ್ನೇಹಿತರಿಗೆ  ನಿನ್ನಿಂದ ಏನು ಸಿಗಬಲ್ಲದು? ಹೌದು ಸಮಯಕ್ಕೆ appointment ಮತ್ತು ಸಾಂತ್ವನಕ್ಕೆ ಫೀಸ್ ಕಟ್ಟಬೇಕಾದ ಇಂದಿನ ಕಾಲದಲ್ಲಿ ಏನು ಕೊಡಬಲ್ಲೆವು ನಾವು? ದುಡ್ಡನ್ನ? ಊಟ ವಸತಿ ಆಶ್ರಯವನ್ನ? ಆತ್ಮವಿಶ್ವಾಸ ಕಳಕೊಂಡ ಮನುಷ್ಯ ಅರೆಗಳಿಗೆಯು ಗಟ್ಟಿಯಾಗಿ ಬದುಕಲಾರನಂತೆ. ಚೂರು ಸಮಯ, ಆತ್ಮಸ್ಥೈರ್ಯ, ಅಂಗೈ ಹಿಡಿದು ನಾಕು ಹೆಜ್ಜೆ  ಹಾಕುವಷ್ಟು ಮನುಷ್ಯತ್ವ ಉಳಿದಿದೆಯೇ ನಮ್ಮಲ್ಲಿ ? Are  we  really  generous ?

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ವನಸುಮ
10 years ago

ವಾವ್. ಉತ್ತಮ ಬರಹ. ನಿಜಕ್ಕೂ ಇಂದಿನ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಚೆನ್ನಾಗಿದೆ.

ಶುಭವಾಗಲಿ.

1
0
Would love your thoughts, please comment.x
()
x