ಪುರಾಣ ಕಾಲದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನಮಾನವಿತ್ತು. ಒಳ್ಳೆಯ ಗೌರವ ಹಾಗೂ ಬೆಲೆ ಇತ್ತು. ಕ್ರಮೇಣ ಕಾಲ ಬದಲಾದಂತೆ ಮಹಿಳೆಯನ್ನು ಅಡಿಗೆ ಮನೆಗೆ ಸೀಮಿತವಾಗಿಡಲಾಯಿತು. ಮಹಿಳೆ ಎಷ್ಟೇ ಬುದ್ಧಿವಂತಳಾದರೂ ಬೇರೆ ವ್ಯವಹಾರಗಳಲ್ಲಿ ಅವಳಿಗೆ ಪ್ರವೇಶವಿರಲಿಲ್ಲ. ಅವಳಿಗೆ ಹೆಚ್ಚಿನ ವಿದ್ಯಾಭ್ಯಾಸ ದೊರೆಯುತ್ತಿರಲಿಲ್ಲ.
ಆದರೆ ಈಗ ಕಾಲ ಬದಲಾಗಿದೆ. ಮಹಿಳೆಯರು ಅಡಿಗೆ ಮನೆಗೆ ಸೀಮಿತರಾಗಿಲ್ಲ. ಮಹಿಳೆ ಹೊರಜಗತ್ತಿನಲ್ಲಿ ಪುರುಷರಿಗೆ ಸರಿಸಮನಾಗಿ ದುಡಿಯುತ್ತಿದ್ದಾಳೆ. ಜೊತೆಗೆ ಮನೆ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದಾಳೆ. ಪುರುಷರಿಗಿಂತ ಒಂದು ಹೆಜ್ಜೆ ಮುಂದೆಯೇ ಇದ್ದಾಳೆ ಎನ್ನಬಹುದು.ಪ್ರತಿವರ್ಷ
ಪರೀಕ್ಷೆಯ ಫಲಿತಾಂಶ ಬಂದಾಗ ಹುಡುಗಿಯರದ್ದೇ ಮೇಲುಗೈ ಎಂದಿರುತ್ತದೆ. ಬರೇ ಮನೆಯಿಂದ ಹೊರಗೆ ಹೋಗಿ ಆಫೀಸು, ಫ್ಯಾಕ್ಟರೀ ಇತ್ಯಾದಿಗಳಲ್ಲಿ ದುಡಿಯುವ ಮಹಿಳೆಯರು ಮಾತ್ರವಲ್ಲ ಗೃಹಿಣಿಯರಾಗಿ ಮನೆಯಲ್ಲಿರುವ ಮಹಿಳೆಯರು ಸಹ ಮನಸ್ಸಿದ್ದರೆ ಒಳ್ಳೆಯ ಸಂಪಾದನೆ, ಹೆಸರು, ಕೀರ್ತಿಗಳಿಸಬಹುದು.
ನಾನು ಕೊಡಗಿನಲ್ಲಿ ನೆಲೆಸಿರುವ ಮಹಿಳೆ. ಇಲ್ಲಿ ಪ್ರವಾಸೋದ್ಯಮ ಚೆನ್ನಾಗಿ ಅಭಿವೃದ್ಧಿ ಹೊಂದಿದ ಮೇಲೆ ಇಲ್ಲಿನ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಹೊರಗಡೆ ಆಫೀಸುಗಳಲ್ಲಿ ಕೆಲಸ ಮಾಡುವವರಿಗಿಂತಲೂ ಹೆಚ್ಚಿನ ಸಂಪಾದನೆಯನ್ನು ಹೊಂದಿದ್ದಾರೆ. ಪ್ರವಾಸೋಧ್ಯಮ ಬೆಳೆದಂತೆ ಇಲ್ಲಿ ಹೋಮ್ ಸ್ಟೇ ಮತ್ತು ಎಸ್ಟೇಟ್ ಸ್ಟೇಗಳ ಸಂಸ್ಕೃತಿ ಬೆಳೆಯಿತು. ಪೇಟೆ ಪಟ್ಟಣಗಳಲ್ಲಿನ ಮಹಿಳೆಯರು ಹೋಮೆ ಸ್ಟೇಯನ್ನೂ, ಎಸ್ಟೇಟ್ ಗಳಲ್ಲಿರುವ ಮಹಿಳೆಯರು ಎಸ್ಟೇಟ್ ಸ್ಟೇಯನ್ನೂ ಚೆನ್ನಾಗಿ ನಿಭಾಯಿಸತೊಡಗಿದರು. ಮಡಿಕೇರಿ ಸಣ್ಣ ಪಟ್ಟಣ. ಇಲ್ಲಿ ಜನ ಸಂಖ್ಯೆ ಕಡಿಮೆ. ಎಲ್ಲಿ ನೋಡಿದರೂ ಹಸಿರು. ದೊಡ್ಡ ದೊಡ್ಡ ಮನೆಗಳು, ಮನೆಯ ಮುಂದೆ ತುಂಬಾ ಜಾಗ. ಅದರಲ್ಲಿ ಸುಂದರವಾದ ಹೂತೋಟ ಎಲ್ಲರ ಮನೆಗಳಲ್ಲೂ ಇರುವುದು ಸಾಮಾನ್ಯ. ಹೀಗೆ ದೊಡ್ಡ ದೊಡ್ಡ ಮನೆಗಳಲ್ಲಿರುವ ಮಹಿಳೆಯರು ತಮ್ಮ ಮನೆಯ ಮಾಳಿಗೆಯ ಕೋಣೆಗಳನ್ನು ಹೋಮೆ ಸ್ಟೇ ಆಗಿ ಪರಿವರ್ತಿಸಿದರು. ಇನ್ನೂ ಅನೇಕ ಮಹಿಳೆಯರು ಮನೆಯ ಪಕ್ಕದಲ್ಲೇ ಎರಡು ರೂಂ, ನಾಲ್ಕು ರೂಂ ಇತ್ಯಾದಿಗಳನ್ನು ನಿರ್ಮಿಸಿ ಅದನ್ನು ಸುಂದರವಾಗಿ ಸಜಾಯಿಸಿ ಬರುವ ಪ್ರವಾಸಿಗರಿಗೆ ರೂಂಗಳನ್ನು ಕೊಡ ತೊಡಗಿದರು. ಇದಕ್ಕಾಗಿ ಮಹಿಳೆಯರಿಗೆ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯವೂ ಸಿಗುತ್ತದೆ.ನಾನು ಸಹಾ ನಮ್ಮ ಮನೆಯ ಪಕ್ಕದಲ್ಲೇ ಇರುವ ೨ ರೂಂ ಗಳನ್ನು ಹೋಮೆ ಸ್ಟೇ ಯಾಗಿ ಪರಿವರ್ತಿಸಿದ್ದೇನೆ. ಇನ್ನು ಕೆಲವರು ತಾವು ಬಾಡಿಗೆಗೆ ಕೊಟ್ಟ ಮನೆಗಳಲ್ಲಿಯೇ ಬಾಡಿಗೆಯವರನ್ನು ಎಬ್ಬಿಸಿ ಹೋಮೆ ಸ್ಟೇ ನಡೆಸತೊಡಗಿದರು. ಇದು ಬಾಡಿಗೆಗೆ ಕೊಡುವುದರಿಂದ ಎಷ್ಟು ಹೆಚ್ಚು ಲಾಭದಾಯಕವೆಂದರೆ ಕೆಲವೊಮ್ಮೆ ಇಡೀ ವರ್ಷ ಸಿಗುವ ಬಾಡಿಗೆಯಷ್ಟು ದುಡ್ಡು ಕೇವಲ ೧ ತಿಂಗಳಲ್ಲೇ ಸಿಗುತ್ತದೆ. ಹೀಗಾಗಿ ಇಲ್ಲಿ ಬಾಡಿಗೆಗೆ ಮನೆ ಸಿಗುವುದು ತುಂಬಾ ಕಷ್ಟ.
ಹೀಗೆ ನಡೆಸುವ ಹೋಮ್ ಸ್ಟೇ ಗಳಿಗೆ ದಿನಕ್ಕೆ ಇಷ್ಟೇ ಬಾಡಿಗೆ ಎಂದು ನಿಗದಿ ಇಲ್ಲ. ಮಾಮೂಲಾಗಿ ಒಂದು ಒಳ್ಳೆಯ ರೂಂ ಗೆ ದಿನಕ್ಕೆ ೧೫೦೦ ರೂಪಾಯಿ ತೆಗೆದುಕೊಳ್ಳುತ್ತಾರೆ. ಇದು ಸೀಸನ್ ನಲ್ಲಿ ದುಪ್ಪಟ್ಟು ಆಗುವುದೂ ಇದೆ. ಆದರೂ ಹೆಚ್ಚಿನ ಪ್ರವಾಸಿಗರೂ ಹೊಟೇಲ್ ರೂಂ ಗಿಂತ ಹೋಮ್ ಸ್ಟೇ ಯನ್ನೇ ಇಷ್ಟ ಪಡುತ್ತಾರೆ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಪ್ಲಾಟ್ ಗಳಲ್ಲಿ ಮನೆ ಮಾಡಿ, ಪಟ್ಟಣದ ವಾಯುಮಾಲಿನ್ಯ, ಜನ ಜಂಗುಳಿಗಳಿಂದ ಬೇಸತ್ತ ಅನೇಕರು ಸುಂದರ ಹೂದೋಟ, ಸುತ್ತಮುತ್ತ ಹಸಿರಿನಿಂದ ಕೂಡಿದ, ಶಾಂತವಾದ ಪ್ರದೇಶವಾದ ಹೋಮ್ ಸ್ಟೇ ಯನ್ನು ಇಷ್ಟ ಪಡತೊಡಗಿದರು. ಹೀಗಾಗಿ ಇಲ್ಲಿನ ಹೋಮ್ ಸ್ಟೇ ನಡೆಸುವ ಅನೇಕ ಚುರುಕಾದ ಸ್ವಾವಲಂಬಿ ಮಹಿಳೆಯರ ಸಂಪಾದನೆ ದೊಡ್ಡ ಹುದ್ದೆಯಲ್ಲಿರುವವರ ಸಂಪಾದನೆಗಿಂತಲೂ ಹೆಚ್ಚಾಗಿರುತ್ತದೆ. ಅನೇಕ ಸಲ ಗಂಡನಿಗೋ, ಮನೆಯ ಇತರರಿಗೋ ದುಡ್ಡಿನ ತೊಂದರೆಯಾದಲ್ಲಿ ಇವರಿಂದ ಕೇಳಿ ಪಡೆಯುವುದು ಸಾಮಾನ್ಯ..
ಆದರೆ ಹೋಮ್ ಸ್ಟೇ ನಡೆಸುವುದು ಅಷ್ಟು ಸುಲಭವಲ್ಲ, ಹೋಮ್ ಸ್ಟೇ ನಡೆಸುವ ಮಹಿಳೆಯರು ತುಂಬಾ ಚುರುಕಾಗಿರಬೇಕು. ಹಿಂದಿ ಭಾಷೆಯನ್ನು ಚೆನ್ನಾಗಿ ಮಾತನಾಡಲು ಬಲ್ಲವರಾಗಿರಬೇಕು. ಏಕೆಂದರೆ ಹೋಮ್ ಸ್ಟೇ ಗೆ ಬರುವ ಹೆಚ್ಚಿನ ಪ್ರವಾಸಿಗರೂ ಉತ್ತರಭಾರತದವರು. ನನ್ನ ಅನುಭವದ ಪ್ರಕಾರ ವರ್ಷದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ ಕನ್ನಡ ಮಾತನಾಡುವವರು ಬರುತ್ತಾರಷ್ಟೇ. ಕೆಲವು ಮನೆಯವರು ತಮ್ಮಲ್ಲಿ ಉಳಿದುಕೊಂಡ ಪ್ರವಾಸಿಗರಿಗೆ ಬೆಳಗ್ಗಿನ ತಿಂಡಿ, ರಾತ್ರಿಯ ಊಟ ಕೊಡುತ್ತಾರೆ. ಇದಕ್ಕೆಲ್ಲಾಹೆಚ್ಚುವರಿ ದುಡ್ಡು ತೆಗೆದುಕೊಳ್ಳುತ್ತಾರೆ. ಮತ್ತೆ ಅನೇಕ ಹೋಮ್ ಸ್ಟೇ ನಡೆಸುವವರು ತಾವೇ ಆಹಾರ ಕೊಡುವುದಿಲ್ಲ. ಕಾಫಿ ಟೀ ಇತ್ಯಾದಿಗಳನ್ನು ಕೊಡುತ್ತಾರೆ. ಆದರೆ ಪ್ರವಾಸಿಗರು ಕೇಳಿದರೆ ಹೊಟೇಲ್ ನಿಂದ ತರಿಸಿಯೋ, ಮನೆ ಆಹಾರವೇ ಬೇಕಾದರೆ, ಇಂತಹ ಆಹಾರ ಮಾಡಿಕೊಡುವವರಿಗೆ ಆರ್ಡರ್ ಕೊಟ್ಟು ತರಿಸಿಕೊಡಬೇಕಾಗುತ್ತದೆ. ಯಾವುದಾದರೂ ಒಳ್ಳೆಯ ಹೊಟೇಲ್ ನವರ ಸಂಪರ್ಕ ಇಟ್ಟುಕೊಂಡು ಅವರ ಮೆನು ಕಾರ್ಡ್ ನಮ್ಮಲ್ಲಿ ಇಟ್ಟುಕೊಂಡಿರಬೇಕು. ಪ್ರವಾಸಿಗರು ಬಯಸಿದ ಆಹಾರವನ್ನು ಫೋನ್ ನಲ್ಲಿ ಆರ್ಡರ್ ಮಾಡಿದರೆ ಹೊಟೇಲ್ ನವರು ಸರ್ವೀಸ್ ಚಾರ್ಜ್ ತೆಗೆದುಕೊಂಡು ಮನೆಗೆ ಕಳುಹಿಸಿಕೊಡುತ್ತಾರೆ. ಬಂದ ಪ್ರವಾಸಿಗರು, ಬಸ್ ನಲ್ಲಿ ಬಂದಿದ್ದರೆ ಅವರಿಗೆ ಪ್ರವಾಸಿ ತಾಣಗಳನ್ನು ನೋಡಲು ಟ್ಯಾಕ್ಸಿ ಮಾಡಿಕೊಡಬೇಕಾಗುತ್ತದೆ. ಹಾಗಾಗಿ ಹತ್ತಾರು ಟ್ಯಾಕ್ಸಿ ಅವರ ಸಂಪರ್ಕವೂ ನಮಗಿರಬೇಕು. ಹೀಗಿದ್ದರೆ ಬರೀ ಒಂದು ಫೋನ್ ನಲ್ಲಿ ಎಲ್ಲ ಕೆಲಸಗಳನ್ನು ನಿಭಾಯಿಸಬಹುದು. ಅದಕ್ಕೆ ತಕ್ಕ ಜಾಣ್ಮೆ ಇಲ್ಲಿನ ಮಹಿಳೆಯರಲ್ಲಿದೆ.
ಈ ಹೋಮ್ ಸ್ಟೇ ಗಳ ಮಾಹಿತಿ ಒದಗಿಸುವ ಅನೇಕ ವೆಬ್ ಸೈಟ್‌ಗಳಿವೆ. ಇಲ್ಲಿಯೇ ಹೋಮ್ ಸ್ಟೇಗೆ ಪ್ರವಾಸಿಗರನ್ನು ಕಳಿಸುವ ಅನೇಕ ಏಜೆಂಟ್ ಗಳಿದ್ದಾರೆ. ಆದರೆ ನಮ್ಮ ಹೋಮ್ ಸ್ಟೇ ಚೆನ್ನಾಗಿದ್ದರೆ, ನಮ್ಮ ಅತಿಥಿ ಸತ್ಕಾರ ಚೆನ್ನಾಗಿದ್ದರೆ, ಪ್ರವಾಸಿಗರ ಜೊತೆ ಚೆನ್ನಾಗಿ ಮಾತನಾಡಿ ಮಾಹಿತಿ ಒದಗಿಸುವ ಕಲೆ ನಮಗೆ ತಿಳಿದಿದ್ದರೆ ನಮ್ಮ ಹೋಮ್ ಸ್ಟೇಗೆ ಎಂದೂ ಪ್ರವಾಸಿಗರ ಕೊರತೆ ಉಂಟಾಗದು. ನಮ್ಮ ಹೋಮ್ ಸ್ಟೇಗೆ ಬಂದವರೆ ಅವರ ಕಲೀಗ್ ಗಳನ್ನು, ಸ್ನೇಹಿತರನ್ನು ಅಥವಾ ನೆಂಟರನ್ನು ಕಳುಹಿಸಿ ಕೊಡುತ್ತಾರೆ. ಹಾಗೆ ಬಂದವರು ಮತ್ತೆ ಹಲವರನ್ನು ಕಳುಹಿಸುತ್ತಾರೆ. ಹೀಗೆ ಸಂಪರ್ಕಗಳು ಮುಂದುವರಿಯುತ್ತಿದ್ದರೆ ಒಳ್ಳೆಯದು.
ಈಗ ಪ್ರವಾಸೋದ್ಯಮ ಇಲಾಖೆಯವರು ಹೋಮ್ ಸ್ಟೇ ಗಳಿಗೆ ಬಂದು ನೋಡಿ ಅದು ಅವರ ನಿಯಮಾವಳಿಗಳಿಗೆ ಸರಿ ಇದೆ ಎನಿಸಿದರೆ ಹೋಮ್ ಸ್ಟೇ ನಡೆಸಲು ಅನುಮತಿ ಪತ್ರ ನೀಡುತ್ತಾರೆ. ಹಾಗಾಗಿ ಪ್ರವಾಸಿಗರು ಯಾವುದೇ ಭಯವಿಲ್ಲದೆ ಇಂತಹ ಹೋಮ್ ಸ್ಟೇ ಗಳಿಗೆ ಬರಬಹುದು.
ಪ್ರವಾಸಿಗರು ಈಗೀಗ ಎಸ್ಟೇಟ್ ಸ್ಟೇ ಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.ಎಸ್ಟೇಟ್ ಸ್ಟೇಅಂತೂ ಇನ್ನೂ ದುಬಾರಿ. ಅಲ್ಲಿಗೆ ಬರುವವರಿಗೆ ಒಬ್ಬರಿಗೆ ಇಷ್ಟು ಎಂದು ಚಾರ್ಜ್ ಮಾಡುತ್ತಾರೆ. ಅಲ್ಲಿ ಅವರು ಬೆಳಗ್ಗಿನ ತಿಂಡಿ ಮತ್ತು ರಾತ್ರಿಯ ಊಟವನ್ನು ಕೊಡುತ್ತಾರೆ. ಅಲ್ಲಿ ರಾತ್ರಿ ಕ್ಯಾಂಪ್ ಫೈರ್ ಇತ್ಯಾದಿಗಳು ಇರುತ್ತವೆ. ಸಾಧಾರಣವಾಗಿ ಎಸ್ಟೇಟ್ ಸ್ಟೇ ಗಳಲ್ಲಿ ಒಬ್ಬರಿಗೆ ದಿನಕ್ಕೆ ರೂ ೭೫೦ ಯಿಂದ ೧೫೦೦ ವರೆಗೂ ಚಾರ್ಜ್ ಮಾಡುತ್ತಾರೆ. ಇದರಿಂದಾಗಿ ಎಸ್ಟೇಟ್ ಸ್ಟೇ ನಡೆಸುವ ಮಹಿಳೆಯರು ಯಾವ IT ಯವರಿಗೂ ಕಡಿಮೆ ಇಲ್ಲದಂತೆ ಸಂಪಾದನೆ ಮಾಡುತ್ತಾರೆ. ಹೀಗೆ ಇಲ್ಲಿನ ಮಹಿಳೆಯರು ಎಲ್ಲ ವಿಷಯಗಳಲ್ಲೂ ಸ್ವಾವಲಂಬಿಗಳಾಗಿದ್ದಾರೆ.
ಇದಲ್ಲದೆ ಕೊಡಗಿನ ಅನೇಕ ಮಹಿಳೆಯರು ಮನೆಯಲ್ಲೇ ವೈನ್, ಜ್ಯೂಸ್, ಚಾಕ್ಲೆಟ್ ಇತ್ಯಾದಿಗಳನ್ನು ಮಾಡಿ ಅದನ್ನು ಸುಂದರವಾಗಿ ಪ್ಯಾಕ್ ಮಾಡಿ ಪೇಟೆಯಲ್ಲಿರುವ ಅಂಗಡಿಗಳಲ್ಲಿ ಇತ್ತು ಮಾರಾಟ ಮಾಡುತಾರೆ. ಇಂತಹ ಮನೆಯಲ್ಲಿಯೇ ಮಾಡಿದ ವಸ್ತುಗಳನ್ನು ಎಷ್ಟು ದುಡ್ಡಾದರು ತೆತ್ತು ಪ್ರವಾಸಿಗರು ಖರೀದಿಸುತ್ತಾರೆ. ಮನೆಯಲ್ಲಿಯೇ ತಯಾರಿಸಿದ ವೈನ್ ಇಲ್ಲಿ ತುಂಬಾ ಪ್ರಸಿದ್ದ. ಅದರಲ್ಲಿ ದ್ರಾಕ್ಷೆ, ಬಾಳೆಹಣ್ಣು, ಅಕ್ಕಿ, ವೀಳ್ಯದೆಲೆ, ಹೀಗೆ ಇನ್ನೂ ಅನೇಕ ವಸ್ತುಗಳಿಂದ ತಯಾರಿಸಿದ ವೈನ್ ಮಾರಾಟಕ್ಕೆ ದೊರೆಯುತ್ತದೆ. ಈ ಉದ್ಯೋಗದಲ್ಲಿ ನಿರತರಾದ ಮಹಿಳೆಯರು ಸಹಾ ಚೆನ್ನಾಗಿ ಸಂಪಾದನೆ ಮಾಡಿ ಸ್ವಾವಲಂಬಿಗಳಾಗಿದ್ದಾರೆ.
ಹೀಗೆ ಮಹಿಳಾ ದಿನಾಚರಣೆಗೆ ಸರಿಯಾದ ಅರ್ಥ ಬರುವುದೇ ಮಹಿಳೆಯರು ಸಬಲೆಯರಾಗಿ ಸ್ವಾವಲಂಬಿಗಳಾದಾಗ. ಹೀಗೆ ಪ್ರವಾಸಿ ತಾಣಗಳಲ್ಲಿರುವ ಮಹಿಳೆಯರು ಬಂದವರ ಜೊತೆ ಮಾತನಾಡಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ಖಂಡಿತ.ಇದೆಲ್ಲಾ ನನ್ನ ಅನುಭವಗಳು. ನನಗೆ ಈ ವರೆಗೆ ಪ್ರವಾಸಿಗರಿಂದ ಯಾವುದೇ ಕೆಟ್ಟ ಅನುಭವವಾಗಿಲ್ಲ. ನಮ್ಮಲ್ಲಿಗೆ ಬಂದ ಎಲ್ಲ ಪ್ರವಾಸಿಗರೂ ಮನೆಯವರಂತೆ ನಮ್ಮ ಜೊತೆ ಹೊಂದಿಕೊಂಡಿದ್ದಾರೆ.ಕೆಲವರು ಹೋಗುವಾಗ ಗಿಫ್ಟ್ ಗಳನ್ನು ಸಹಾ ಕೊಟ್ಟು ಹೋಗಿದ್ದಾರೆ.
ಪ್ರವಾಸಿ ತಾಣಗಳ ಮಹಿಳೆಯರಿಗೆ ಮಾತ್ರವಲ್ಲ ಎಲ್ಲಾ ಮಹಿಳೆಯರಿಗೂ ಮನಸ್ಸಿದ್ದರೆ ಮತ್ತು ಶ್ರಮಪಟ್ಟರೆ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಂಡು ಸಂಪಾದನೆಯನ್ನು ಮಾಡಿ ಸ್ವಾವಲಂಬಿಗಳಾಗಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು. ಹೀಗಾದಾಗ ಮಾತ್ರ ಈ ಮಹಿಳಾ ದಿನಾಚರಣೆಗೆ ಒಂದು ಅರ್ಥ ಬರುತ್ತದೆ.
*******
ಲೇಖನ ಚೆನ್ನಾಗಿದೆ…. ಅಭಿನಂದನೆಗಳು…
ಉತ್ತಮ ಲೇಖನ
ವಿನೋದ್ ಕುಮಾರ್ ಬೆಂಗಳೂರು