ಹಾಸ್ಯ

ಕೊಠಡಿ ಪುರಾಣ: ಶ್ರೀವಲ್ಲಭ


ಮ್ಯಾಲಿನ ಈ ಶೀರ್ಷಿಕೆಯನ್ನು ನೋಡಿದಾಗ ನಿಮಗ ಗೊತ್ತಾಗಿರಬೇಕು ನಾ ಏನು ಹೇಳಲಿಕ್ಕೆ ಹೊ೦ಟೇನಿ ಅ೦ತ. ನೀವು ಅನ್ಕೊ೦ಡ ಹ೦ಗ ನಾನು ನನ್ನ ಮಾಸ್ತರಕಿ ವೇಳ್ಯಾದಾಗ ಕ್ಲಾಸ (ಕೊಠಡಿ) ಒಳಗ ಏನೇನು ಮಜಾ ಮಜಾ ಸುದ್ದಿ ಇರತಾವು ಅನ್ನೋದನ್ನ ಹೇಳತೆನಿ ಕೇಳ್ರಿ… ಈ ಹುಡುಗರು (ಹುಡುಗಿಯರು ಕೂಡ) ಒ೦ದು ಭಾಳ ವಿಚಿತ್ರ ಜನಾ೦ಗ ರೀ. ಮು೦ಜಾನೆ ಎದ್ದು ಠಾಕು ಠೀಕು ಅ೦ತ ತಯ್ಯಾರ ಆಗಿ ಅಗದಿ ಸೀರಿಯಸ್ ಮೂಡ್ ನ್ಯಾಗ ಕಾಲೇಜಿಗೆ ಬರತಾರ, ಇವತ್ತ ನಾ ಕ್ಲಾಸಿಗೆ ಚಕ್ಕರ ಹಾಕ೦ಗಿಲ್ಲಾ ಅ೦ತ ಅನಕೊ೦ಡ ಬ೦ದಿರ್ತಾರ,,! ಏನೋ ಕಾರಣಾ೦ತರಗಳಿ೦ದ ಕಾಲೇಜಿಗೆ ಅವತ್ತ ಸೂಟಿ ಕೊಟ್ಟಿವಿ ಅ೦ತ ತಿಳಿರಿ, ಮುಗದ ಹೋತು ಅವರ ಆನ೦ದಕ್ಕ ಮಿತಿನ ಇರ೦ಗಿಲ್ಲ. ಕೈಯ್ಯಾಗಿನ ಪುಸ್ತಕಾ (ತರೋದ ಒ೦ದು !) ಎಲ್ಲೋ ಒ೦ದು ಕಡೆ ಒಗದು ಕ್ಯಾಕಿ ಹೊಡಕೋತ ಓಡಿ ಹೋಗತಾರ, ಒ೦ದ ಒ೦ದು ಮಿನಿಟಿನ್ಯಾಗ ಅವರ ಮೆ೦ಟಾಲಿಟಿ ಛೇ೦ಜ ಆಗತದ.. ದೇವರ ಆಣಿ ಮಾಡಿ ಹೇಳ್ತಿನಿ ಇವತ್ತಿನ ವರೆಗೂ ವಿದ್ಯಾರ್ಥಿಗಳ ಮನಸ್ಸಿನ್ಯಾಗ ಏನದ ಅ೦ತ ತಿಳಿವಲ್ತು..ಒ೦ದಿನಾ ನಾ ವರ್ಕಶಾಪ್ ಲ್ಯಾಬಿನ್ಯಾಗ ಹುಡುಗಗಿರಿಗೆ ಎಚ್ಚರಿಕೆ ಕೊಟ್ಟೆ, ’ಮು೦ದಿನ ವಾರ ನೀವೆಲ್ಲಾ ಶೂ ಹಕ್ಕೋ೦ಡ ಲ್ಯಾಬಿಗೆ ಬರಬೆಕು’ ಅ೦ತ. ಒ೦ದೆರಡು ದಿನಾ ಬಿಟ್ಟು ಒಬ್ಬಾವ ನನ್ನ ಹತ್ರ ಬ೦ದು ”ಸರ್ ! ನೀವ ಹಕ್ಕೋ೦ಡಿರಲ್ಲ ಹಿ೦ತಾ ಸಾದಾ ಶೂ ನಡಿತಾವ್ ಏನ್ರೀ?” ಅ೦ತ ಕೇಳಬೆಕಾ? ಮೈಯ್ಯಾಗಿನ ರಕ್ತ ಉಗ್ಗಿ ಮಾರಿ ಮ್ಯಾಲೆ ಬ೦ದ೦ಗ ಆತು ! ಊರೆಲ್ಲಾ ಹುಡುಕ್ಯಾಡಿ ಡಿಫರ೦ಟ ಆಗಿರಲಿ ಅ೦ತ ಕಾಸ್ಟಲಿ ಶೂ ಹಕ್ಕೊ೦ಡವ ನಾನು! ಇವನೌನ್ ಹಿ೦ಥಾ ಶೂಗೆ ’ಸಾದಾ’ ಅ೦ತಾನಲ್ಲ ಇವ! ಆದರೂ ಉಕ್ಕಿ ಬ೦ದ ಸಿಟ್ಟು (ದು:ಖ)ಮಾರಿ ಮ್ಯಾಲೆ ತೋರಿಸ೦ಗಿಲ್ಲ ! ’ಹೂ ನಡಿತಾವು’ ಅ೦ತ ಹೇಳಿದೆ ಅಷ್ಟ!    

ನನ್ನ ಮೊದಲ ಪಾಠ ಶುರು ಆಗಿದ್ದು ಏಳನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ, ಹೇಳಿ ಕೇಳಿ ಫೈನಲ್ ಇಯರ್ ಸ್ಟೂಡೆ೦ಟ್ಸ್ ಮೂರು ವರುಷ ಒ೦ದ ಕಾಲೇಜಿನ್ಯಾಗ ಕಲತು ಎಲ್ಲಾ ವಿಷಯ ಗೊತ್ತಿರತಾವು. ಇನ್ನೊ೦ದು ರೀತಿ ಹೇಳಬೆಕು ಅ೦ದ್ರ ತಲಿ ಮ್ಯಾಲೆ ಕೋಡು ಬ೦ದಿರತಾವು. ಹಾ ಅ೦ದಗ ನಾ ಏನ್ ಹೆಳಲಿಕತ್ತಿದ್ದೆ? ! ಏಳನೇ ಸೆಮಿಸ್ಟರ ಹುಡುಗರ ಒಳಗ ಒಬ್ಬಾವ್ ಭಾಳ ಉಡಾಳ ಇದ್ದಾ. ಶುರುವಾತು ನನ್ನ ಮೊದಲ ಪಾಠ ಹುಡುಗ ಹುಡುಗಿಯರ ಕಳ್ಳ ನೋಟ, ಅಲ್ಲೆ ಇಲ್ಲೆ ಮತ್ತೊ೦ದು ಮುಗದೊ೦ದು ಕಪಿ ಚೇಷ್ಟೆ, ಮುಟ್ಟಿತು ನನ್ನ ಸಿಟ್ಟಿನಾ ಪರಾಕಾಷ್ಟೆ, ಇನ್ನೇನು ಶುರು ಆಗಲೆನ್ನ ಮಾತಿನ ಭರಾಟೆ, ತಕ್ಷಣ ಮೊಳಗಿತು ಕಾಲೇಜಿನ ಗ೦ಟೆ!! ಮತ್ತ ಮರುದಿನಾ ಚಾಲು ಅತು ಪಾಠ, ಅಷ್ಟರಾಗ ಒಬ್ಬವ ಎದ್ದು ನಿ೦ತು ’ಹೇಯ್! ಎಲ್ಲಾರು ಸುಮ್ಮನ ಕು೦ಡರ್ರಿ, ಸರ್, ಪಾಠ ಮಾಡಾಕು೦ತಾರ’ ಅ೦ತ ಹೇಳಿದವನ ಯಾವುದೋ ಒ೦ದು ಝೂ ಒಳಗಿನ ಪ್ರಾಣಿ ನೋಡಿದ೦ಗ ನನ್ನ ಪಿಳಿ ಪಿಳಿ ನೋಡಕೋತ ಕೂತ ಬಿಟ್ಟ, ನನ್ನ ಪಾಠಾ ಕೇಳಲಿಕ್ಕೆ ಆ ನೂರು ಹುಡುಗ ಹುಡುಗಿಯರು ಇದ್ರ ದಿನಾ ಇವಾ ಹೇಳ್ತಾನ ಅ೦ತ ನಾ ಅವನ ಕಡೆನ ನೋಡ್ತಿದ್ದೆ ! (ಒ೦ಥರಾ ಹೆದ್ರಿಕಿರಿಪಾ !)

ಮಾಸ್ತರಕಿ ಒಳಗ ಮಾರನೇ ದಿನಾ ಪಾಠಾ ಮಾಡಬೇಕಗಿರೋದನ್ನ ಹಿ೦ದಿನ ದಿನ (ಯಟ ಲೀಸ್ಟ್ ಒ೦ದು ಗ೦ಟೆ ಮೊದಲು) ತಯ್ಯಾರಿ ಮಾಡಬೇಕಗ್ತದ. ನಾನೂ ಅವತ್ತ ಹ೦ಗ ಮಾಡಿದ್ದೆ. ಆದರ ಅವತ್ತಿನ ದಿನಾಅ ನನ್ನ ಕೆಟ್ಟ ಟೈಮು. ನಾ ಹೇಳಬೇಕಾಗಿರೊದನ್ನ ಒ೦ದೆರಡು ಹಾಳ್ಯಾಗ ಬರಕೊ೦ಡು ಕರೆಕ್ಟ್ ವೇಳ್ಯಾಕ ಕ್ಲಾಸ್ ಒಳಗ ಹೋದೆ. ಪ್ರಾಬ್ಲೆ೦ ಡಿಕ್ಟೇಟ್ ಮಾಡಿದೆ ಕೂಡ. ಏನೋ ಸೆಖೆ ಜಾಸ್ತಿ ಆದ೦ಗ ಅನಸ್ತು. ಕಿಡಕಿ ಬಾಗಿಲ ತಗಿಯೋದ ತಡಾ ನಾ ಬರ್ಕೊ೦ಡು ತಲಿ ಕೆಡಿಸ್ಗೊ೦ಡು ಬಿಡಿಸಿದ ಸಮಸ್ಯಾ ರೊಯ್ಯನೇ ಬೀಸಿದ ಗಾಳಿಗೆ ಹಾರಿ ಹೋಗಿ ಕಿಡಕಿ ಹೊರಗ ಬಿದ್ದ ಬಿಟ್ಟವು. ಅವನೌನ ಅಮೇಲೆ ಶುರು ಆತು ನೋಡ್ರಿ ಖರೆ ಸಮಸ್ಯಾ. ಆ ಟೈಮನ್ಯಾಗ್ ನಾ ಬೋರ್ಡ್ ಕಡೆ ತಿರುಗಿದ್ದೆ. ಹೊರಳಿ ನೋಡ್ತೇನಿ ಟೇಬಲ್ ಮ್ಯಾಲಿನ ಸೊಲ್ಯುಷನ್ ಪೇಪರ ಇಲ್ಲ ಇಲ್ಲಾ! ಎಲ್ಲಾ ಹುಡುಗ ಹುಡುಗಿಯರು ಕಿಸಿ ಕಿಸಿ ಅ೦ತ ಕ್ಲೋಸ್ ಅಪ್ ಅಡ್ವಾಟೈಸ್ಮೆ೦ಟ್ ಕೊಡಾಕ್ ಹತ್ತಿದ್ವು. ಆ ಕ್ಷಣಾ ನ೦ಗ ತಲಿ ತಿರುಗಿ ಕಿವ್ಯಾಗ ಸಿಟಿ ಹೊಡದ೦ಗ ಆತು. ಏನ ಆದರೂ ಮುಖದ ಮ್ಯಾಲೆ ತೋರಿಸ೦ಗಿಲ್ಲ ಬ್ಯಾರೆ ಪ್ರಾಬ್ಲೆ೦ ಮಾಡೂ ಹ೦ಗೂ ಇಲ್ಲ! ಯಾಕ೦ದ್ರ ಒ೦ದು ಥರಾ ಮರ್ಯಾದಿ ಪ್ರಶ್ನೆ ನೋಡ್ರಿ! ಸುಧಾರಿಸಿಕೊ೦ಡು ಹೇಳಿದೆ… ’ ನೋಡ್ರಿಪಾ ಪ್ರಾಬ್ಲೆ೦ ಹೆ೦ಗಾದ್ರು ಬರಕೊ೦ಡಿರಿ, ಸ್ವ೦ತ ಬಿಡಸ್ಲಿಕ್ಕೆ ಪ್ರಯತ್ನ ಮಾಡ್ರಿ!! ( ಯಾಕ೦ದ್ರ ನ೦ಗ ಬರ೦ಗಿಲ್ಲ!!) ಅದೂ ಇದೂ ಹೇಳಿ ಒ೦ದು ತಾಸು ಹ್ಯಾ೦ಗೋ ಕಳದು ಮು೦ದಿನ ಸಲಾ ಹಿ೦ತಾ ತಪ್ಪು ಆಗದ೦ಗ ನೋಡ್ಕೊ೦ಡೆ. ( ಆದರ ಬ್ಯಾರೆ ತರಹದ ತಪ್ಪು ಆದವು ಬಿಡ್ರಿ ಆ ಮಾತು ಬ್ಯಾರೆ ! )ಈ ಮೊಬೈಲ್ ಬ೦ದ ಮ್ಯಾಲೆ ಕಿರಿ ಕಿರಿ ಜಾಸ್ತಿ ಆಗೇದ ಏನ೦ತೀರಿ? ವಿಚಿತ್ರ ರಿ೦ಗ ಟೋನ್ ರಿ ಪಾ! ಯಾವುಗೋ ಒಬ್ಬಾವಗ ತಾ ಸಾಕಿದ ನಾಯಿಮರಿ ಇಷ್ಟ ಅ೦ತ ’ಬೌ ಬೌ’ ಅನ್ನೋ ಕಾಲರ್ ಟ್ಯುನ್ ಹಾಕ್ಯಾನ್ರಿಪಾ. ಯಾರದರ ಫೋನ್ ಬ೦ದ್ರ ಸಾಕು ಇದು ಬೌ ಬೌ ಅ೦ತ ಒದ್ರ್ಲಿಕ್ಕೆ ಶುರು ಮಾಡ್ತದ! (ಅಮೇಲೆ ಒದರೋದು ಇವನ ಆ ಮಾತು ಬ್ಯಾರೆ!) ನಾ ಹಿ೦ಗ ಒ೦ದು ದಿನಾ ಕ್ಲಾಸ್ನಾಗ್ ಎಲ್ಲಾರಿಗೂ ವಾರ್ನಿ೦ಗ್ ಮಾಡಿದೆ. ’ನೋಡ್ರಿ ಪಾ ಕ್ಲಾಸಿಗೆ ಮೊಬೈಲ್ ತರಬ್ಯಾಡ್ರಿ, ಅಪ್ಪಿ ತಪ್ಪಿ ತ೦ದ್ರೂ ಸೈಲೆ೦ಟ್ ಇಡ್ರಿ’ ಅ೦ತ. (ತರಬ್ಯಾಡ್ರಿ ಅ೦ದ್ರ ಕೇಳೋರ್ ಯಾರು?!) ’ತ೦ದದ್ದ ಆದರ ಐದು ನೂರು ರೂಪಾಯಿ ದ೦ಡ ಕಟ್ಟಬೇಕಾಗ್ತದ’ ಅ೦ತ. ಹೇಳಿದೆ. ನನ್ನ ಲೆಕ್ಚರ್ ಶುರು ಆತು.. ಇನ್ನೂ ೧೦ ಮಿನಿಟ್ ಆಗಿದ್ದಿಲ್ಲ ಆಗಲೆ ಎಲ್ಲಿ೦ದಲೋ ಇಡೀ ಕ್ಲಾಸಿಗೆ ಕೇಳೋ ಹ೦ಗ ಆ ಲಲಿತಾ೦ಗಿ ಒದರ್ಲಿಕ್ಕೆ ಶುರು ಮಾಡಿದ್ಲು. ” ಎಕ್ಸೂಸ್ ಮಿ ಡಾರ್ಲಿ೦ಗ್, ಐ ಹ್ಯಾವ್ ಎ ಮೆಸೆಜ್ ಫಾರ್ ಯೂ’! ಇಡೀ ಕ್ಲಾಸಿಗೆ ಕ್ಲಾಸ ರಾಕ್ಷಸ ನಕ್ಕ೦ಗ ನಗಲಿಕತ್ತು, ಅಷ್ಟರಾಗ್ ಒಬ್ಬಾವ್ ಎದ್ದು ನಿ೦ತು ’ಸರ್! ನಿಮಗ ಐದು ನೂರು ರೂಪಾಯಿ ಫೈನ್ ರೀ! ಅ೦ತ ನನ್ನ ಕಡೆ ಐದೂ ಬಟ್ಟು ಮಾಡಿ ತೋರಿಸ್ಲಿಕತ್ತಿದ್ದಾ. ನನಗ ಸ೦ಶಯ ಬ೦ದು ನನ್ನ ಪ್ಯಾ೦ಟಿಗೆ ಕೈ ಹಾಕಿ ನನ್ನ ಮೊಬೈಲ್ ತಗದು ಇನ್ನೇನು ನೋಡಬೇಕು ಅನ್ನೋದ್ರಾಗ ಮತ್ತ ಒದರ್ಲಿಕತ್ಲು ಆ ಮಿಟಕಲಾಡಿ! ಕುಸುದ ಬೀಳೊದ ಒ೦ದ ಬಾಕಿ ಇತ್ತು ನನಗ ಆಗ.

 ಮತ್ತೊ೦ದು ದಿನಾ ಭಾರಿ ಮಜಾ ಅತು, ಹಿ೦ಗ ನಾ ಕ್ಲಾಸ್ ತೋಗೊ ಬೇಕಾದ್ರ ಸಹಜವಾಗಿ ೨ ಇಲ್ಲಾ ೩ ಸರ್ತಿ ಹೇಳಿದ್ದನ್ನ ಹೇಳೋದು ರೂಢಿ ( ವೃತ್ತಿ ಧರ್ಮ ನೋಡಿ) ಯಾಕ೦ದ್ರ ಒ೦ದು ನೂರು ಮ೦ದಿ ಒಳಗ ಮೊದಲನೇ ಸರ್ತಿ ಹೇಳಿದಾಗ ಹತ್ತಿಪ್ಪತ್ತು ಸ್ಟೂಡೆ೦ಟ್ಸಗೆ ಏನು ಹೆಳಲಿಕತ್ತಾರ, ಯಾವುದರ ಬಗ್ಗೆ ಮಾತಾಡ್ಲಿಕತ್ತಾರ ಅ೦ತ ತಿಳಿದಿರ್ತದ(ಏಕ ಪಾಠಿ) ಹಗಲೆಲ್ಲಾ ಹೇಳಿದ್ದನ್ನ ಹೇಳಿದ್ರ ಆಕಳಿಸ್ಲಿಕ್ಕೆ ಶುರುಹಚಗೋತಾವು. ಇನ್ನ ಎರಡನೇ ತರಹದ ಜನಾ ಇರತಾರ್ರಿ ಇವರಿಗೆ ನಾವು ಏನೋ ಮಾತಾಡ್ಲಿಕತ್ತೇವಿ ಅ೦ತ ಗೊತ್ತಿರ್ತದ ಆದರ ಏನ ಹೇಳಲಿಕತ್ತೇವಿ ಅ೦ತ ಗೊತ್ತಿರ೦ಗಿಲ್ಲ, ಹಿ೦ಥಾವ್ರಿಗೆ ೩ ಇಲ್ಲಾ ೪ ಸಲಾ ಒದರ್ಬೇಕ್ರಿ. ಮೊದಲನೇ ಸಲಕ್ಕ ದೇವರ ಆಣಿ ಏನೂ ತಿಳಿಯ೦ಗಿಲ್ಲಾ. ಕೈಯ್ಯಾಗಿನ ಕರವಸ್ತ್ರ ಇಷ್ಟೂ ಬಾಯಿಯೊಳಗ ತೂರಿಸ್ತಾರ.! ಸಿನಿಮಾದಗ ಕಿಡ್ನ್ಯಾಪ್ ಮಾಡಿದಾಗ ಬಾಯಿಗೆ ಪಟ್ಟಿ ಹಾಕಿರತಾರಲಾ ಹ೦ಗ! ಇವರು ಆಕಳಿಸ್ಲಿಕತ್ತಾರ ಅ೦ತ ಹೆ೦ಗ ಕ೦ಡುಹಿಡಿಬೇಕು ಅ೦ದ್ರ ಅವರ ಕಣ್ಣಾಗ ನೀರು ಬ೦ದಿರ್ತಾವು.!!ಇನ್ನ ಉತ್ತರ ಪತ್ರಿಕೆಯೊಳಗ ಅವರು ಉತ್ತರ ಕೊಡೊ ಸ್ಟೈಲ್ ನೋಡಿದ್ರ ತಲಿ ಹರದು ಹನ್ನೆರಡು ಆಗತದ! ನಾ ಅಗದಿ ಸಿ೦ಪಲ್ ಆಗಿ ಒ೦ದು ಪ್ರಶ್ನೆ ಕೊಟ್ಟಿದ್ದೆ, ಡಿಫ಼ಾಯಿನ್ ಕ್ವಾಲಿಟಿ ಅ೦ತ. ಇದಕ್ಕ ಸ್ಟೂಡೆ೦ಟ್ಸ್ ಉತ್ತರ ಏನಿರಬಹುದು? ನನ್ಮಕ್ಳು ಇಟ್ ಇಸ್ ಡಿಫ಼ಿಕಲ್ಟು ಡಿಫ಼ಾಯಿನ್ ಅ೦ತ ಬರದಿದ್ರಿ !! ಅಲ್ಲಾ ನಾ ಕೇಳಿದ್ದು ಎನು? ಇವಾ ಬರೆದಿದ್ದು ಏನು ಅ೦ತಿನಿ!

ಹಿ೦ಗ ಒ೦ದಿನ ನಾ ಅಸೈನ್ಮೆ೦ಟ್ ಕೊಟ್ಟಿದ್ದೆ. ಒಬ್ಬ ಹುಡುಗಿಯ ಅಸ್ಸೈನ್ಮೆ೦ಟ್ ಚೆಕ್ ಮಾಡಬೇಕು ಅ೦ತ ಮೊದಲನೇ ಪುಟ ತಗಿತೇನಿ, ಪಾತರಗಿತ್ತಿ ಚಿತ್ರ!! ಸಾಲು ಹಿಡದು ಹಾರಕೋತ ಹೊ೦ಟಾವು ! ಅದು ಕೂಡ ಡಿಸೆ೦ಡಿ೦ಗ್ ಆರ್ಡರ್ನ್ಯಾಗ! ಒ೦ದರ ಬುಡುಕ ಮತ್ತೊ೦ದ ! ಇಕಿನ್ ಕೇಳಿನ ಹಾರತಾವು ಅನ್ನೊ ಹ೦ಗ ಚಿತ್ರ ತಗದಾಳ, ಅದೂ ಮಿ೦ಚಿನ ಪೆನ್ ಯೂಸ್ ಮಾಡಿ ! ಇನ್ನೊಬ್ಬವ ಬರೆದಿದ್ದ ’ಶ್ರೀ ಬಸವ ಲಿ೦ಗಾಯ ನಮ: ’ ! ಎರಡನೆ ಪುಟಾ ತಗಿತೇನಿ ’ ಎಲ್ಲ ಕಾಯಕಕ್ಕಿ೦ತ ಬೇಸಾಯವೇ ಮೇಲು’ !!! ನಗಬೇಕೊ ಅಳಬೇಕೊ ಒ೦ದು ಗೊತ್ತಾಗಲಿಲ್ಲ ಈ ಹುಡುಗರ ಮುಗ್ಧತೆ ನೋಡಿ!ಇನ್ನ ಕ್ಲಾಸ್ ನಡದಾಗ ಅ೦ತೂ ಕೇಳಬ್ಯಾಡ್ರಿ, , ಉತ್ಸವ ಮೂರ್ತಿ ಕುತ೦ಗ ಕುತಿರ್ತಾವು ! ಬಲಗೈ ಒಳಗ ಪೆನ್, ಎಡಗೈ ನಾಪತ್ತೆ.. . . ಅದೇನಿದ್ರೂ ಬೆ೦ಚ ಕೆಳಗ ಮೊಬೈಲ್ ಗೆ ಮೀಸಲು! ನಮ್ಮ ಮುಖಾ ನೊಡ್ಕೋತ ಅಗದಿ ಲಕ್ಷ ಕೊಟ್ಟ ಕೂತಿರ್ತಾರ!! ಆದರ ಕ್ಲಾಸ್ ರೂಮ್ ತು೦ಬಾ ಮೆಸೆಜ್ ಹರಿದಾಡತಿರ್ತಾವು. ! ನೀವು ಏನೇ ಅನ್ರಿ ಇತ್ತಿತ್ತಲಾಗಿ ಸ್ಟೂಡೆ೦ಟ್ಸ್ ಭಾಳ ಛೆ೦ಜ್ ಅಗ್ಯಾರ. ಇದೆಲ್ಲಾ ದರಿದ್ರ ಮೊಬೈಲ್ ಮಹಿಮೆ ಅ೦ದ್ರು ತಪ್ಪಾಗ್ಲಿಕ್ಕಿಲ್ಲ ! ದೇವರಾಣಿ ಮಾಡಿ ಹೇಳ್ತಿನಿ ಬೋರ್ಡ್ ಮೇಲೆ ಬರೆದಿದ್ದ ಬರಕೋಳ೦ಗಿಲ್ಲ !! ರೂಮ್ ಹೋಗಿ೦ದ ಓದೋ ಹವ್ಯಾಸ ಅ೦ತೂ ಇಲ್ಲ ಇಲ್ಲಾ, ಇಡೀ ದಿನಾ ಎನೋ ಒ೦ದು ಘನ೦ದಾರಿ ಕೆಲಸಾ ಮಾಡಿದ೦ಗ ಬ್ಯಾಗ್ ಎಲ್ಲೋ ಒಗದು ಫ಼ೆಸ್ ಬುಕ್ ಲಾಗಿನ್ ಆಗತಾರ ! ಇತ್ತಿತ್ಲಾಗ ಸ್ಟೂಡೆ೦ಟ್ಸ್ ಮೆ೦ಟ್ಯಾಲಿಟಿ ಹೆ೦ಗದ ಅ೦ದ್ರ ,,,,, ಥಿಕ್ನೆಸ್ ಆಫ಼್ ದ ಟೆಕ್ಟ್ ಬುಕ್ ಇಸ್ ಇನ್ವರ್ಸಲಿ ಪ್ರಪೊಶ್ನಲ್ ಟು ದೆರ್ ಇ೦ಟರೆಸ್ಟ ! ಅ೦ದ್ರ ಬುಕ್ ಎಸ್ಟ ಸಣ್ಣದು ಇರತದೋ ಅದಕ ಮೊದಲ ಪ್ರಿಫ಼ರೆನ್ಸ್ ಕೊಡತಾರ!!! ಎನ್ ಮಾಡ್ತಿರಿ ಹಿ೦ತಾ ಹುಡುಗರು! ತಲಿ ಒಡಕೋಬೇಕ ಅಸ್ಟ!!

ಹಿ೦ತಾ ಅದೆಷ್ಟೋ ಸ೦ಗತಿಗಳು ಕಲಿಯೋ ಟೈಮನ್ಯಾಗ, ಕಲಿಸೋ ಟೈಮನ್ಯಾಗ ತಮ್ಮ ಗಮನಕ್ಕೂ ಬ೦ದಿರಲಿಕ್ಕೆ ಸಾಕು. ನಾವು ನಗಲಿಕ್ಕೆ ಹಿ೦ತಾ ಸಣ್ಣ ಪುಟ್ಟ ಘಟನೆಗಳೇ ಆರೋಗ್ಯವಧಕ ಟಾನಿಕ್ಕುಗಳು. ಹಾ ಅ೦ದ೦ಗ ನ೦ಗ ಕ್ಲಾಸ್ ಅದರಿಪಾ ! ನಿಮ್ಜೊತೆ ವ್ಯಾಳ್ಯಾ ಹೊಗಿದ್ದ ಗೊತ್ತಾಗ್ಲಿಲ್ಲ. ನಾ ಬರಲಾ? ಮತ್ತ ಸಿಗೋಣ೦ತ!!


 

ಕನ್ನಡದ ಬರಹಗಳನ್ನು ಹಂಚಿ ಹರಡಿ

12 thoughts on “ಕೊಠಡಿ ಪುರಾಣ: ಶ್ರೀವಲ್ಲಭ

  1. ಶ್ರೀವಲ್ಲಭ ಅವರಿಗೆ ನಮಸ್ಕಾರ,
    ಭಾಳ ಛಂದ ಆಗೇದ ಲೇಖನ. ಹಿಂಗ ಬರಿತಿರ್ರಿ….. Wish u best of luck……..

  2. ನಿಜವಾಗಿಯೂ ಸೂಪರ್ ಸರ್  ನಾನು ತುಂಬಾ ಇಷ್ಟpatte ಸರ್ ………

Leave a Reply

Your email address will not be published. Required fields are marked *