ಕೈಯಲ್ಲಿ ಏಳು ಡಾಲರ್ ಹಿಡಿದು ಸ್ವಾಮೀಜಿ ಹೊರಟೇ ಬಿಟ್ಟರು : ಅಭಿಜಿತ್. ಎಮ್

ಇಸ್ಕಾನ್(ISKCON). ಈ ಸಂಸ್ಥೆಯ ಹೆಸರು ನೀವೆಲ್ಲರೂ ಕೇಳಿರಬಹುದು. ಇಂದು ಹೊರದೇಶಗಳಲ್ಲಿಯೂ ಹಿಂದೂ ಮಂದಿರಗಳಿವೆ ಎಂದರೆ, ಅದಕ್ಕೆ ಇಸ್ಕಾನ್ ಸಂಸ್ಥೆಯ ಕೊಡುಗೆ ಅಪಾರ. ಆದರೆ ಈ ಸಂಸ್ಥೆಯ ಸ್ಥಾಪಕರ ಬಗ್ಗೆ ಭಾರತದಲ್ಲಿಯೇ ತಿಳಿದಿರುವವರ ಸಂಖ್ಯೆ ಬಹಳ ಕಡಿಮೆ. ನೀವು ಯಾವುದಾದರೂ ದೇವಸ್ಥಾನಕ್ಕೆ ಹೋದಾಗಲೋ ಅಥವಾ ಜಾತ್ರೆಗಳಲ್ಲಿಯೋ ಅಥವಾ ಪುಸ್ತಕ ಮೇಳಗಳಲ್ಲಿಯೋ ಖಾದಿ ತೊಟ್ಟು, ತಲೆ ಹಿಂದೆ ಜುಟ್ಟು ಇರಿಸಿ, ಹಣೆ ಮೇಲೆ ಗಂಧದ ತಿಲಕವನ್ನು ಇಟ್ಟುಕೊಂಡು ಶ್ರೀಮದ್ ಭಗವದ್ಗೀತೆ ಗ್ರಂಥವನ್ನು ಮಾರಾಟ ಮಾಡುತ್ತಿರುವುದನ್ನು ನೀವು ಗಮನಿಸಿರಬಹುದು. ಇವರ ಎಲ್ಲಾ ಪುಸ್ತಕಗಳನ್ನು ತೆರೆದು ನೋಡಿದರೆ ಸಾಮಾನ್ಯವಾಗಿ ಒಬ್ಬ ಸನ್ಯಾಸಿಯ ಚಿತ್ರವು ಇರುವುದನ್ನು ನೀವು ನೋಡಿರಬಹುದು. ಅವರೇ ಇಸ್ಕಾನ್ ಸಂಸ್ಥೆಯ ಸ್ಥಾಪಕರಾದ ಶ್ರೀ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ರವರು.

ಶ್ರೀ ಪ್ರಭುಪಾದರು ಜನಿಸಿದ್ದು 1 ಸೆಪ್ಟೆಂಬರ್ 1896 ಕೋಲ್ಕತ್ತಾ ದಲ್ಲಿ. ಸ್ಕಾಟಿಷ್ ಚರ್ಚ್ ವಿಶ್ವವಿದ್ಯಾಲಯದಲ್ಲಿ ಪದವಿ ಓದುತ್ತಿದ್ದ ಇವರು ಗಾಂಧೀಜಿಯವರ ಅಸಹಕಾರ ಚಳವಳಿಯಿಂದ ಪ್ರೇರಿತರಾಗಿ ಪದವಿಯನ್ನು ಅರ್ಧದಲ್ಲೇ ತ್ಯಜಿಸಿ ಸ್ವ ಉದ್ಯೋಗ ಶುರುಮಾಡಿದರು. ಒಂದು ದಿನ ಎಷ್ಟೋ ವರ್ಷಗಳ ನಂತರ ತಮ್ಮ ಹಳೆ ಗುರುಗಳನ್ನು ಪ್ರಭುಪಾದರು ಭೇಟಿಯಾದರು. ಇವರ ಇಂಗ್ಲಿಷ್ ಭಾಷೆಯ ನೈಪುಣ್ಯತೆಯ ಬಗ್ಗೆ ಅರಿತಿದ್ದ ಗುರುಗಳು, ಭಗವದ್ಗೀತೆಯನ್ನು ಇಂಗ್ಲಿಷ್ ಗೆ ಅನುವಾದಿಸುವ ವಿಚಾರವನ್ನು ಶ್ರೀ ಪ್ರಭುಪಾದರ ಮುಂದಿಟ್ಟರು. ಗುರುಗಳ ಆಕಾಂಕ್ಷೆಯನ್ನು ಈಡೇರೀಸಲೆಂದು ಪ್ರಭುಪಾದರವರು ತಮ್ಮ ಬಿಡುವಿನ ವೇಳೆಯಲ್ಲಿ ಭಗವದ್ಗೀತೆಯನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸುತ್ತಿದ್ದರು.

ಒಂದು ವರ್ಷದಲ್ಲಿ ಸಾವಿರ ಪುಟಗಳಲ್ಲಿ ಗೀತೆಯನ್ನು ಅನುವಾದಿಸಲಾಗಿತ್ತು. ಆದರೆ ವಿಘ್ನವು ಇವರನ್ನೂ ಬಿಟ್ಟಿರಲಿಲ್ಲ. ಒಂದು ದಿನ ಪ್ರಭುಪಾದರು ತಮ್ಮ ಕೆಲಸ ಮುಗಿಸಿ ಮನೆಗೆ ಬಂದಾಗ ತಾವು ಅನುವಾದಿಸಿದ್ದ ಪುಟಗಳ ಭಂಡಾರವೆಲ್ಲವೂ ಮಾಯವಾಗಿದ್ದವು. ಹೆಂಡತಿಯೊಡನೆ ಕೇಳಿದಾಗ ಚಹಾ ಪುಡಿ ಖರೀದಿಸುವುದಕ್ಕೋಸ್ಕರ ಹಳೆಯ ಬೇಡದ ಕಾಗದಗಳೆಂದುಕೊಂಡು ಮಾರಲಾಯಿತು ಎಂಬ ವಿಷಯ ತಿಳಿದು ಸ್ವಾಮಿ ಸ್ಥಬ್ದರಾದರು. ಚಹಾ ದ ಹುಚ್ಚು ಭಾರತದಾದ್ಯಂತ ಹರಡುತ್ತಿದ್ದ ಸಮಯ ಅದು. ಒಂದು ಹಿಡಿ ಚಹಾ ಹುಡಿಗೋಸ್ಕರ ತಮ್ಮ ವರ್ಷದ ಪರಿಶ್ರಮವನ್ನು ಅಡವಿಟ್ಟ ಹೆಂಡತಿಯ ಮೂರ್ಖತನದಿಂದ ಬೇಸತ್ತು ಮನೆ, ಸಂಸಾರವನ್ನೆಲ್ಲ ತ್ಯಜಿಸಿ ಸನ್ಯಾಸಿಯಾದರು. ನಂತರ ಬೃಂದಾವನಕ್ಕೆ ತೆರಳಿದ ಸ್ವಾಮೀಜಿಯವರು ತಮ್ಮ ಅನುವಾದ ಕಾರ್ಯವನ್ನು ಅಲ್ಲಿ ಮುಂದುವರಿಸಿದರು. ಆದರೆ ಸ್ವಾಮೀಜಿಯವರು ಇಷ್ಟಕ್ಕೆ ಕೂರಲಿಲ್ಲ. ಪ್ರಪಂಚದ ನಾನಾ ಭಾಗಗಳಿಂದ ಹಲವು ಪುಸ್ತಕಗಳು ಭಾರತಕ್ಕೆ ಬರುತ್ತಿದ್ದವು ಮತ್ತು ಇಲ್ಲಿನ ಭಾಷೆಗಳಿಗೆ ಅನುವಾದ ಆಗುತ್ತಿದ್ದವು. ಆದರೆ ಅತ್ಯುನ್ನತ ಜೀವನ ಮೌಲ್ಯ ಮತ್ತು ಮನೋವಿಜ್ಞಾನದ ಸಾರ ಸಾರುವ ವೇದಗಳು ಮತ್ತು ಭಗವದ್ಗೀತೆಯು ತಾವಂದುಕೊಂಡಷ್ಟು ಮಟ್ಟದಲ್ಲಿ ಜನರಿಗೆ ತಲುಪುತ್ತಿಲ್ಲ ಎಂಬ ವಿಚಾರ ತಿಳಿದೊಡನೆ ತಮ್ಮ ಎಪ್ಪತ್ತನೇ ವಯಸ್ಸಿನಲ್ಲಿ ಏಕಾಂಗಿಯಾಗಿ ನ್ಯೂಯಾರ್ಕ್ ಪಟ್ಟಣಕ್ಕೆ ಹೋಗುವ ನಿರ್ಧಾರ ಮಾಡಿದರು. ವಿಮಾನದಲ್ಲಿ ಪ್ರಯಾಣಿಸುವಷ್ಟು ಅನುಕೂಲ ಇಲ್ಲದಿದ್ದ ಕಾರಣ ಕೊನೆಯದಾಗಿ ಜಲಮಾರ್ಗವೊಂದೇ ಇವರಿಗೆ ಆಯ್ಕೆಯಾಗಿತ್ತು. 70ರ ಮುದಿ ವಯಸ್ಸು, ಅದೂ ಅಲ್ಲದೆ 32 ದಿನಗಳ ಹಡಗಿನ ಪ್ರಯಾಣ, ಅದೂ ಸರಕು ಸಾಗಿಸುವಂತಹ ಹಡಗು. ಯಾರಿಂದಲೂ ಬೆಂಬಲ ಸಿಗದೆ ಒಬ್ಬಂಟಿಯಾಗಿ ಹೊರಟ ಇವರಿಗೆ “ನೀನು ಈ ಪರಿಸ್ಥಿತಿ ಯಲ್ಲಿ ಹೋದರೆ ನೀನು ಅಮೆರಿಕ ತಲುಪುವ ಮುಂಚೆಯೇ ಸಾವನ್ನಪ್ಪುತ್ತೀಯ ಒಂದು ವೇಳೆ ಅಮೆರಿಕ ತಲುಪಿದರೂ ಜನ ನಿನ್ನನ್ನಲಿಂದ ಒದ್ದು ಓಡಿಸುತ್ತಾರೆ” ಎಂಬ ಮಾತುಗಳೆಲ್ಲಾ ಸಾಮಾನ್ಯವಾಗಿ ಹೋಗಿದ್ದವು. ಕೈಯಲ್ಲಿ ಏಳು ಡಾಲರ್ ಹಿಡಿದು ಸ್ವಾಮೀಜಿ ಹೊರಟೇ ಬಿಟ್ಟರು.

ಅಮೆರಿಕದ ಆಪಲ್ ಮೊಬೈಲ್ ಕಂಪೆನಿಯ ಸ್ಥಾಪಕ ಸ್ಟೀವ್ ಜಾಬ್ಸ್ ಒಂದು ದಿನ ಸ್ಟಾಂಡ್ ಫೋರ್ಡ್ ಯುನಿವರ್ಸಿಟಿಯ ಕಾರ್ಯಕ್ರಮದ ತಮ್ಮ ಭಾಷಣದಲ್ಲಿ ಈ ಮಾತನ್ನು ಹೇಳುತ್ತಾರೆ. “ನನ್ನ ಜೀವನದ ಒಂದು ಕಾಲಘಟ್ಟದಲ್ಲಿ ಎಂಥಹಾ ಪರಿಸ್ಥಿತಿ ಇತ್ತೆಂದರೆ, ಒಂದು ಹೊತ್ತು ಊಟಕ್ಕೂ ಪರಿತಪಿಸುತ್ತಿದ್ದೆ. ವಾರದಲ್ಲಿ ಆರು ದಿನಗಳು ಒಂದೋ ಎರಡೋ ಬ್ರೆಡ್ಡಿನಿಂದ ಹೊಟ್ಟೆತುಂಬಿಸುತ್ತಿದ್ದ ನಾನು, ವಾರದ ಕೊನೆಯಲ್ಲಾದರೂ ಹೊಟ್ಟೆತುಂಬಾ ಊಟ ಮಾಡಬೇಕೆನ್ನುವ ಸಲುವಾಗಿ ಏಳು ಮೈಲಿ ನಡೆದುಕೊಂಡು ಹೋಗಿ ಹರೇ ಕೃಷ್ಣ ಮಠದಲ್ಲಿ ಉಚಿತವಾಗಿ ಊಟ ಮಾಡುತ್ತಿದ್ದೆ” ಎಂದು. ಒಂದು ಲೋಟ ನೀರಿಗೂ ಬಿಲ್ ಮಾಡಬೇಕಿದ್ದಂತಹ ನ್ಯೂಯಾರ್ಕ್ ಪಟ್ಟಣದಲ್ಲಿ, ಸಾವಿರಾರು ಮಂದಿಗೆ ಊಟ ನೀಡುವಷ್ಟು ಮಟ್ಟಕ್ಕೆ ಬೆಳೆಯುವುದೆಂಬ ಕಲ್ಪನೆ ಅಂದು ಹಡಗಿನಲ್ಲಿ ಕುಳಿತು ಸಾಗರದ ಅಲೆಗಳ ಏರಿಳಿತವನ್ನು ನೋಡುತ್ತಿದ್ದ ಪ್ರಭುಪಾದರಿಗೆ ಇತ್ತೋ, ಇಲ್ಲವೋ ಗೊತ್ತಿಲ್ಲ. ಯಾಕೆಂದರೆ ಮನದಲ್ಲಿ ಎಷ್ಟೇ ಉತ್ಸಾಹವಿದ್ದರೂ ದೇಹ ಅದಕ್ಕೆ ಬೆಂಬಲಿಸುತ್ತಿರಲಿಲ್ಲ. 32 ದಿನಗಳ ಆ ಪ್ರಯಾಣದಲ್ಲಿ ಎರಡು ಬಾರಿ ಹೃದಯಾಘಾತವುಂಟಾಯಿತು. ಈ ಆಘಾತ ಬರೀ ಅವರ ಹೃದಯಕ್ಕೆ ಮಾತ್ರವಲ್ಲ, ಅವರ ಆತ್ಮವಿಶ್ವಾಸಕ್ಕೂ ಆಗಿತ್ತು. ಒಂದು ದಿನದ ಬಸ್ ಪ್ರಯಾಣವೇ ಸುಸ್ತು ಎನಿಸುವ ನಮ್ಮಂತವರಿಗೆ 32 ದಿನ ಪ್ರಯಾಣ ಹಡಗಿನಲ್ಲಿ, ಊಹಿಸಲಾಗದಂತದ್ದು.

ಶ್ರೀ ಪ್ರಭುಪಾದರು ನ್ಯೂಯಾರ್ಕ್ ಗೆ ಕಾಲಿಟ್ಟ ಸಮಯದಲ್ಲಿ ಪಟ್ಟಣ ಎಲ್ಲಾ ಹಿಪ್ಪಿಗಳೇ ತುಂಬಿಕೊಂಡಿದ್ದರು. ಹಿಪ್ಪಿಗಳೆಂದರೆ ಮನೆ, ಕೆಲಸ ಇವ್ಯಾವುದೂ ಇಲ್ಲದೆ ರಸ್ತೆ ಬದಿ ಅರೆನಗ್ನರಾಗಿ ಶರಾಬು ಕುಡಿಯುತ್ತಾ, ಗಾಂಜಾ ಸೇದುತ್ತಾ, ಊಟ ಮತ್ತು ನಶೆಗೋಸ್ಕರ ಜೀವ ತೆಗೆಯಲೂ ಹೇಸದಂತಹ ಜನರು. ಅಮೆರಿಕ, ವಿಯೆಟ್ನಾಂ ಯುದ್ಧದ ಪ್ರಭಾವದಿಂದ ಇಂಥವರ ಸಂಖ್ಯೆ ಆಗ ಜಾಸ್ತಿಯಾಗಿತ್ತು. ಆಗಿನ ಸರ್ಕಾರಕ್ಕೂ ಇವರೆಲ್ಲಾ ತಲೆನೋವಾಗಿ ಪರಿಣಮಿಸಿದ್ದರು. ಸ್ವಾಮೀಜಿ ಬಂದು ಇಂಥಾ ಜನರ ನಡುವೆ ಸೇರಿಕೊಂಡರು. ಆನಂತರ ನಡೆದುದದೆಲ್ಲಾ ಪವಾಡ ಎಂದು ಕೆಲವರು ಹೇಳುತ್ತಾರೆ. ಇಲ್ಲ, ಪವಾಡಗಳನ್ನು ಮಾಡುವುದು ದೇವರುಗಳು. ಒಬ್ಬ ಮಾಮೂಲಿ ಸನ್ಯಾಸಿ ಅಂದು ಕ್ರಾಂತಿ ಹುಟ್ಟಿಸಿದ್ದರು. ಯಾವ ಜನರು ಶರಾಬು, ಗಾಂಜಾ ನಶೆಗೆಂದೇ ಹಾಹಾಕಾರ ಸೃಷ್ಟಿಸುತ್ತಿರೋ, ಅಂಥವರಿಗೆ ಸ್ವಾಮೀಜಿ ಭಕ್ತಿ ಮತ್ತು ಧ್ಯಾನದ ನಶೆಯನ್ನು ಹತ್ತಿಸಿದ್ದರು.

ಅಂದು ಮೊದಲ ಬಾರಿ ಲಂಡನ್ನಿನ ರಸ್ತೆಗಳಲ್ಲಿ “ಹರೇ ರಾಮ ಹರೇ ಕೃಷ್ಣ”ಅನ್ನುತ್ತ ಜಗನ್ನಾಥ ಸ್ವಾಮಿಯ ರಥಯಾತ್ರೆ ಆಯೋಜನೆಗೊಂಡಾಗ ಪಟ್ಟದಲ್ಲಿ ಕುಳಿತವರಿಲ್ಲಾ ಆಶ್ಚರ್ಯ!. ಯಾವ ಸಂಸ್ಕೃತಿ, ಪರಂಪರೆಯನ್ನು ಪ್ರಪಂಚದಿಂದಲೇ ಅಳಿಸಿಹಾಕಬೇಕೆಂದುಕೊಂಡಿದ್ದರೋ, ಅದೇ ಸಂಸ್ಕೃತಿ ಅಂದು ಅವರ ನೆಲದ ಮೇಲೆ ವಿಜೃಂಭಿಸುತ್ತಿತ್ತು. ಇಂದು ಪಾಕಿಸ್ತಾನ ಸೇರಿದಂತೆ ಪ್ರಪಂಚದಾದ್ಯಂತ ಸುಮಾರು 600ಕ್ಕೂ ಹೆಚ್ಚು ಇಸ್ಕಾನ್ ಶಾಖೆಗಳಿವೆ. ಶ್ರೀ ಪ್ರಭುಪಾದರು 14 ಸಪ್ಟೆಂಬರ್ 1977 ರಂದು ತಮ್ಮ ದೇಹ ತ್ಯಜಿಸಿದರು. ಸಾವಿನ ಕೊನೆ ಗಳಿಗೆಯಲ್ಲಿಯೂ ಅವರ ಉದ್ದೇಶ ಒಂದೇ ಆಗಿತ್ತು. ಗೀತೆ, ವೇದ, ಉಪನಿಷತ್ತುಗಳನ್ನು ಪ್ರಪಂಚದ ಎಲ್ಲಾ ಭಾಷೆಗಳಿಗೆ ಅನುವಾದಿಸಿ ಭಾರತದ ಸಂಸ್ಕೃತಿ, ನೀತಿ , ಉಪದೇಶಗಳ ಬಗ್ಗೆ ಲೋಕದ ಎಲ್ಲಾ ಜನರಿಗೆ ತಿಳಿಯಪಡಿಸುವುದಾಗಿತ್ತು. ಸ್ವಾಮಿಗಳು ಯಾವತ್ತು ಕೂಡ ಯಾರೊಬ್ಬನನ್ನೂ ಧರ್ಮಪರಿವರ್ತಿಸಿದವರಲ್ಲ, ಸ್ವತಃ ತಾನೇ ದೇವರೆಂದುಕೊಂಡು ಆಸನದಲ್ಲಿ ಕುಳಿತವರಲ್ಲ, ಕೌಶಲ್ಯ ವಾಕ್ಚತುರತೆ ತಿಳಿದವರಲ್ಲ. ಆದರೂ ಪ್ರಪಂಚದಲ್ಲಿ ಇಂದು ಇವರ ಕೋಟ್ಯಂತರ ಅನುಯಾಯಿಗಳು ಇದ್ದಾರೆ. ಇದಕ್ಕೆಲ್ಲಾ ಅವರು ಮನುಕುಲಕ್ಕೆ ಹೇಳಿಕೊಟ್ಟ ಪ್ರೀತಿಯ ಪಾಠವೇ ಕಾರಣ. ಶ್ರೀ ಪ್ರಭುಪಾದರು ಎಂಬ ಹೆಸರು ನಾಯಕತ್ವ, ಭಕ್ತಿ, ಸೇವೆ, ಕರುಣೆ, ಪ್ರೀತಿಯ ಇನ್ನೊಂದು ಹೆಸರು.

ಅಭಿಜಿತ್. ಎಮ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x