ಕೆಲವು ಸಲ ನಮ್ಮ ಊಹೆ ಸರಿಯಿರಲಿಲ್ಲ ಅಂತ ಪ್ರೂವ್ ಆದಾಗ ಒಂದು ಥರಾ ಖುಷಿ ಆಗುತ್ತೆ…
ವಿಷಯ ಇಷ್ಟೇ…ನಾನು ಮತ್ತು ಗೆಳೆಯ ಮುಕುಂದ್ ಒಂದು ಸಲ ಹರಟೆ ಹೊಡೆಯುತ್ತಾ ನಿಂತಿರುವಾಗ ಅವರು “ನಾನು ಒಂದು ಆಡಿಯೋ ಬುಕ್ ಪ್ರಾಜೆಕ್ಟ್ ಮಾಡ್ತಿದೀನಿ ಕಣೋ” ಅಂತಂದ್ರು. ನಾನು “ಒಹ್ ಹೌದಾ, ಏನದು?” ಅಂತ ಕೇಳಿದೆ ಕುತೂಹಲದಿಂದ. ಮುಕುಂದ್ ತಮ್ಮದೇ ಶೈಲಿಯಲ್ಲಿ “ನೋಡೋ, ಏನು ಗೊತ್ತಾ, ಇವತ್ತು ಯಾರಿಗೂ ಟೈಮ್ ಇಲ್ಲ, ಹಾಗಾಗಿ ಪುಸ್ತಕ ಓದೋರೇ ಕಮ್ಮಿ ಆಗಿಬಿಟ್ಟಿದ್ದಾರೆ, ಹಾಗಾಗಿ ಕಥೆಗಳನ್ನ ಆಡಿಯೋ ರೂಪದಲ್ಲಿ ಕೊಟ್ಟರೆ ಹೇಗೆ ಅಂತ? ‘ಕೇಳಿ ಕಥೆಯ – ಒಂದಲ್ಲ ಆರು’ ಅಂತ ಪ್ರಾಜೆಕ್ಟ್ ಹೆಸರು. ಆರು ಜನ ಕಲಾವಿದರ ಧ್ವನಿಯಲ್ಲಿ ಆರು ಲೇಖಕರ ಬೇರೆ ಬೇರೆ ಕಥೆಗಳನ್ನು ರೆಕಾರ್ಡ್ ಮಾಡಿ ಸೀಡೀ ಮಾಡುವುದು. ಅದಕ್ಕೆ ಹಿತವಾದ ಹಿನ್ನಲೆ ಸಂಗೀತ ಬೆರೆಸಿ ಒಳ್ಳೆಯ ಕೇಳುವ ಅನುಭವ ಕೊಡಬೇಕು, ಆಮೇಲೆ ಇದರಿಂದ ಬರುವ ಫುಲ್ ದುಡ್ಡನ್ನ ಗಡಿನಾಡನ ಕನ್ನಡ ಸರ್ಕಾರಿ ಶಾಲೆಗಳ ಗ್ರಾಮೀಣ ವಿದ್ಯಾರ್ಥಿಗಳ ಉಪಯೋಗಕ್ಕೆ ಕೊಡೋಣ ಅಂತ” ಅಂತ ವಿವರಿಸಿದರು. ಹೊಸಾ ಐಡಿಯಾ ಅಂತ ತಕ್ಷಣ ನಂಗೆ ತುಂಬಾ ಮೆಚ್ಚುಗೆಯಾಯಿತು. “ಒಳ್ಳೆ ಐಡಿಯಾ, ಸಕ್ಕತ್ತಾಗಿದೆ” ಅಂತ ಹೇಳಿದೆ ಕೂಡ. ಆದರೆ ಆ ಆಲೋಚನೆಯ ಹಿಂದೆಯೇ ಅತ್ಯಂತ ಸಹಜವಾದ ನಿರಾಶಾದಾಯಕ ಆಲೋಚನೆ ಬಂತು – “ಕಥೆ ಓದುವ ಆಸಕ್ತಿ ಇರೋ ಜನ ಇದ್ದಾರೆ, ಆದರೆ ಕಥೆ ಯಾರು ‘ಕೇಳ್ತಾರೆ’? ಆಮೇಲೆ ಈ ಐಡಿಯಾ ಜನಕ್ಕೆ ಇಷ್ಟ ಆದರೂ ದುಡ್ಡು ಕೊಟ್ಟು ಕೊಂಡುಕೊಳ್ಳುತ್ತಾರಾ?” ಅಂತ. ಅವರ ಉತ್ಸಾಹಕ್ಕೆ ಭಂಗ ತರಬಾರದು ಅಂತ ಇದನ್ನು ಅವರಿಗೆ ಹೇಳಲಿಲ್ಲ. ಈ ಪ್ರಾಜೆಕ್ಟ್ ಯಶಸ್ವಿಯಾಗಲಿ ಅಂತ ಎಷ್ಟು ಬಯಸಿದ್ದೇನೋ, ಇದು ಯಶಸ್ವಿಯಾಗುತ್ತದಾ ಅಂತ ಅಷ್ಟೇ ಆತಂಕ ಕೂಡ ಇತ್ತು!
ಇದಾದ ಕೆಲವು ದಿನಗಳ ಮೇಲೂ “ಕಥೆಯನ್ನು ಯಾರು ‘ಕೇಳ್ತಾರೆ’?” ಅಂತ ನನಗೆ ಬಂದ ಆಲೋಚನೆಯ ಬಗ್ಗೆ ಯೋಚಿಸುತ್ತಿದ್ದೆ. ಕಥೆ ಅಂದರೆ ಕಥೆ ಪುಸ್ತಕ ಮಾತ್ರ ಅಂತ ನನಗೆ ಯಾಕೆ ಅಂದುಕೊಂಡಿದ್ದೆ ಅಂತ ನನಗೇ ಆಶ್ಚರ್ಯ ಆಯಿತು. ಯೋಚಿಸಿ ನೋಡಿ, ನಾವು ಕಥೆ ಓದೋದಕ್ಕಿಂತ ಕೇಳೋದೇ ಜಾಸ್ತಿ ಆಲ್ವಾ? ಕಥೆಗಳು ಪುಸ್ತಕರೂಪದಲ್ಲಿ ಬಂದಿದ್ದು ನೂರು ಚಿಲ್ಲರೆ ವರ್ಷಗಳ ಇತ್ತೀಚಿಗೆ ಇರಬೇಕು ಅಷ್ಟೇ. ಆದರೆ ಕಥೆ ಹೇಳುವ, ಕೇಳುವ ಪರಂಪರೆ ಮನುಷ್ಯನ ನಾಗರೀಕತೆಯಷ್ಟೇ ಹಳೆಯದು. ಚಿಕ್ಕ ವಯಸ್ಸಿನಲ್ಲಿ ಅಜ್ಜಿಯ ಕೈಲಿ ಕಥೆ ಹೇಳಿಸಿಕೊಂಡಿದ್ದರೆ, ದೊಡ್ಡವರಾದ ಮೇಲೆ ಹರಿಕತೆ-ನಾಟಕ ಆ ಅವಶಕತೆಯನ್ನು ಪೂರೈಸುತ್ತಿದ್ದವು. ಯಾಕೆ ಈಗಲೂ ಸಹ ಸ್ನೇಹಿತರು ಒಟ್ಟಿಗೆ ಸಿಕ್ಕಾಗ “ಲೋ, ಇವತ್ತು ಆಫೀಸಲ್ಲಿ ಏನಾಯ್ತು ಗೊತ್ತಾ?” ಅಂತ ಕಥೆ ಹೇಳಲು ಶುರುವಿಟ್ಟುಕೊಳ್ಳುತ್ತೇವೆ. ಅಕ್ಕಪಕ್ಕದ ಮನೆಯ ವಯಸ್ಸಾದ ಹೆಂಗಸರ ಕಾಂಪೌಂಡಿನ ಬಳಿಯ ಮಾತುಕತೆಯಲ್ಲಿ “ಅಯ್ಯೋ ನಮ್ಮನೆ ವಿಷಯ ಹೇಳಕ್ಕೆ ಹೋದರೆ ಅದೇ ಒಂದು ದೊಡ್ಡ ಕಥೆ ಆಗುತ್ತೆ ಅಷ್ಟೇ…” ಅಂತ ಬಂದುಹೋಗುತ್ತದೆ. ಕಥೆಗೆ ಇರುವ ಪ್ರಾಮುಖ್ಯತೆ ಅಂಥದ್ದು!
ಇನ್ನು “ಇದಕ್ಕೆ ಒಂದು ‘ಮಾರ್ಕೆಟ್’ ಇದೆಯಾ?” ಅನ್ನುವ ಪ್ರಶ್ನೆ ಇದ್ದೇ ಇತ್ತು. ಅದಕ್ಕೆ ಸಿಕ್ಕ ಅಂಕಿಅಂಶಗಳು ನನ್ನನ್ನು ದಂಗುಬಡಿಸಿದ್ದವು. ಮೂರು ವರ್ಷದ ಹಿಂದೆ, ಅಮೇರಿಕಾ ಒಂದರಲ್ಲೇ ಆಡಿಯೋ ಬುಕ್ ಮಾರುಕಟ್ಟೆ ನೂರಿಪ್ಪತ್ತು ಕೋಟಿ ಡಾಲರ್ ಅಷ್ಟು ದೊಡ್ಡದು ಅಂತ ಗೊತ್ತಾದಾಗ. ಈಗ ಎಲ್ಲರೂ ಬ್ಯುಸಿ, ಯಾರಿಗೂ ಟೈಮಿಲ್ಲ, ಈಗೆಲ್ಲಾ ಸಾಹಿತ್ಯಕ್ಕೆ ಬೆಲೆಯಿಲ್ಲ ಅನ್ನುವ ಗೊಣಗಾಟ ಒಂದು ಕಡೆ ಆದರೆ, ಇವೆಲ್ಲಾ ಅನಿವಾರ್ಯತೆಗಳ ನಡುವೆಯೂ ಹೊಸ ಆವಿಷ್ಕಾರಗಳು ಉಂಟುಮಾಡುತ್ತಿರುವ ಬಗೆಬಗೆಯ ಸಾಧ್ಯತೆಗಳು ಇನ್ನೊಂದು ಕಡೆ.
ನಿಜಕ್ಕೂ ಇದನ್ನು ಜನ ಕೊಂಡುಕೊಳ್ಳುತ್ತಾರಾ ಅನ್ನುವ ನನ್ನ ಅನುಮಾನಕ್ಕೆ ಉತ್ತರ ಸಿಕ್ಕಿದೆ, ಈಗಾಗಲೇ ಐನೂರಕ್ಕೂ ಹೆಚ್ಚಿನ ಜನ “ಕೇಳಿ ಕಥೆಯ” ಸೀಡೀಗೆ ‘ಪ್ರೀ-ಆರ್ಡರ್’ ಮಾಡಿದ್ದಾರೆ. ಈ ಅಪೂರ್ವವಾದ ಪ್ರತಿಕ್ರಿಯೆ “ಕೇಳಿ ಕಥೆಯ” ಇನ್ನೂ ಹತ್ತು ಸೀಡೀ ಮಾಡುವುದಕ್ಕೆ ಹುಮ್ಮಸ್ಸು ಕೊಡಲಿ. ಇದಕ್ಕಿರುವ ಮಾರ್ಕೆಟ್ ನೋಡಿ, ಇನ್ನೂ ಹತ್ತು ಜನ ಈ ಥರ ಆಡಿಯೋ ಬುಕ್ ಮಾಡುವ ಹಾಗೆ ಉತ್ತೇಜನ ಸಿಗಲಿ ಅನ್ನುವುದು ನನ್ನ ಆಶಯ.
ಈ ಪ್ರಾಜೆಕ್ಟಿನ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲಿಂಕನ್ನು ಕ್ಲಿಕ್ಕಿಸಿ: http://www.kelikatheya.com/
ಸೀಡೀಯನ್ನು ಪ್ರೀ-ಆರ್ಡರ್ ಮಾಡಲು ಈ ಲಿಂಕನ್ನು ಕ್ಲಿಕ್ಕಿಸಿ: http://www.kelikatheya.com/PreOrder.html
ಮುಕುಂದ್ ಮತ್ತು ಅವರ ಟೀಂ ಮಾಡಿರುವ ಈ ವಿನೂತನ ಪ್ರಯತ್ನವನ್ನು ಬೆಂಬಲಿಸಿ. ಇದರ ಬಗ್ಗೆ ನಿಮ್ಮ ಸ್ನೇಹಿತರಿಗೆ, ಪರಿಚಯದವರಿಗೂ ತಿಳಿಸಿ!
******
ವಾವ್!! ಎಂತಹ ಐಡಿಯಾ!!!
ಕೇಳಿ ಕತೆಯ ಟೈಟಲ್ಲೇ
ಮನ ಸೆಳೆಯುವಂತಿದೆ.
ಮಾಹಿತಿಗಾಗಿ ಧನ್ಯವಾದಗಳು ವಾಸುಕಿ.
ಚೆನ್ನಾಗಿ ಮೂಡಿಬಂದಿದೆ ಬರಹ…..ಅಭಿನಂದನೆಗಳು.
ಚೆನ್ನಾಗಿದೆ.. ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ.
Good initiative well showcased, ದಿನಾ ಕಾರಲ್ಲಿ ಕಮ್ಯೂಟ್ ಮಾಡೊ ಸಾಹಿತ್ಯಾಸಕ್ತರಿಗೆ ಎಫ್ ಎಂ ನಿಂದ ಒಳ್ಳೆ ಬಿಡುಗಡೆ