ಇಲ್ಲಿಯವರೆಗೆ…
ನಿಶಾ ಳ ಸಂಗಡ ಹೋಗುತ್ತಿರುವಂತೆ, ಆಫೀಸಿನಲ್ಲಿ ಎಲ್ಲರ ಕಣ್ಣುಗಳು ಇವರನ್ನೇ ನೋಡುತ್ತಿದ್ದರೆ ಸುಜಯ್ ಗೆ ಒಳಗೊಳಗೇ ಖುಷಿ. ಅದರೂ ಅದು ಹೇಗೋ ಅವನ ಮುಖದ ಮೇಲೆಯೂ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅದನ್ನು ಗಮನಿಸಿದ ಅವಳ ಮುಖದಲ್ಲೊಂದು ತುಂಟ ಮುಗುಳ್ನಗು ಸುಳಿಯಿತು. ಇಬ್ಬರೂ ರಿಸೆಪ್ಶನ್ ದಾಟಿಕೊಂಡು ಹೋಗುತ್ತಿದ್ದಂತೆ, “ಸುಜಯ್… ಹೇ ಸುಜಯ್…” ಅಂತ ಕೂಗುತ್ತಿದ್ದ ಕೋಮಲ ದನಿಯೊಂದು ಇವರಿಬ್ಬರಿಗೂ ನಿಲ್ಲುವಂತೆ ಮಾಡಿತು. ಯಾರು ಅಂತ ಹಿಂತಿರುಗಿ ನೋಡಿದರೆ ಆ ಕೋಮಲ ದನಿ ಬೇರೆ ಯಾರದೂ ಅಲ್ಲ, ಪೃಥ್ವಿ ಅನ್ನುವ ಗಂಡಸಿನದು!
…ಪ್ರಥ್ವಿ ಇವರ ಕಂಪನಿಯ ಮುಖ್ಯ ಸಂಯೋಜಕ. ಅಲ್ಲಿ ಟಿಶ್ಯೂ ಪೇಪರ್ ಗಳ ಖರೀದಿಯಿಂದ ಮೊದಲುಗೊಂಡು ಹೊರದೇಶದ ಗ್ರಾಹಕರು ಅಥವಾ ಕಂಪನಿಯ ಮುಖ್ಯಸ್ಥರು ಭೇಟಿ ನೀಡಿದರೆ ಅವರ ಉಪಚಾರ ನೋಡಿಕೊಳ್ಳುವ ಜವಾಬ್ದಾರಿಯವರೆಗೆ ಎಲ್ಲ ಕಾರುಭಾರು ಇವನದೇ. ಅವನ ದನಿ ಮಾತ್ರ ಹುಡುಗಿಯರ ತರಹವೆ ಇತ್ತು. ಅದರಲ್ಲಿ ಪಾಪ ಅವನ ತಪ್ಪಿರಲಿಲ್ಲ ಬಿಡಿ! ಆದರೂ ತುಂಬಾ ಜನರು ಇದರಿಂದ ಗಲಿಬಿಲಿಗೊಳ್ಳುತ್ತಿದ್ದರು. ಅದರಲ್ಲೂ ಹೆಸರೂ ಕೂಡ ಪ್ರಥ್ವಿ ಇದ್ದುದರಿಂದ, ಯಾರಾದರೂ ಹೊಸಬರ ಜೊತೆಗೆ “ಹಲೋ ಪ್ರಥ್ವಿ ಹಿಯರ್” ಅಂತ ವೈಯಾರದಿಂದ ಹೇಳಿದಾಗ ಆ ಹೊಸಬರು ಇವನು ಹುಡುಗಿ ಅಂತಲೇ ಭಾವಿಸಿ “ಹಲೋ ಮ್ಯಾಡಂ…” ಅಂತ ಸಂಭಾಷಣೆ ಮುಂದುವರಿಸುತ್ತಿದ್ದರು. ಆಮೇಲೆ ಮುಖತಃ ಭೇಟಿಯಾದಾಗ, ಇವನು ಹುಡುಗಿ ಅಲ್ಲ ಅಂತ ಅರಿವಾಗಿ ಆಶ್ಚರ್ಯ ಪಡುತ್ತಿದ್ದರು! ಇನ್ನೂ ಕೆಲವರು ಆ ದನಿಯ ಕೇಳಿ ಸುಂದರ ಹೆಣ್ಣಿನ ಕಲ್ಪನೆ ಮಾಡಿಕೊಂಡು, ಅದು ಸುಳ್ಳಾದಾಗ ಅತೀವ ನಿರಾಸೆ ಹೊಂದುತ್ತಿದ್ದರು! ಈ ವಿಷಯವಾಗಿ ತುಂಬಾ ಜನ ಸಹೋದ್ಯೋಗಿಗಳು ಇವನ ಗೋಳು ಹೊಯ್ದುಕೊಳ್ಳುತ್ತಿದ್ದರು ಕೂಡ. ಆದರೆ ಅವನು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಈ ಜಗದ ಕೊಂಕುಗಳಿಗೆ ಕುಗ್ಗಿದರೆ ಬದುಕು ಸಾಧ್ಯವೇ?
“ಹೇ ಸುಜಯ್, ಎರಡು ಜನ ಇಂಟರ್ವ್ಯೂಗೆ ಕಾಯ್ತಿದಾರೆ. ಯಾವಾಗ ಕಳಸ್ಲಿ?” ಪ್ರಥ್ವಿ ಕೇಳಿದ. ನಿಶಾ ಳ ಜೊತೆಗೆ ಸ್ವಲ್ಪ ಹೊತ್ತು ಆರಾಮವಾಗಿ ಕಳೆಯುವ ತನ್ನ ಯೋಜನೆಗೆ ಇಂಥದೊಂದು ಕಲ್ಲು ಬೀಳುವುದೆಂದು ಇವನು ನಿರೀಕ್ಷಿಸಿರಲಿಲ್ಲ. ಆದರೂ ಸಾವರಿಸಿಕೊಂಡು,
“ನಾನೀಗ ಊಟಕ್ಕೆ ಹೊರಟಿದ್ದೇನೆ. ಆಮೇಲೆ ಒಂದು ಬೇರೆ ಮೀಟಿಂಗ್ ಇದೆ. ೪ ಗಂಟೆಗೆ ಇಂಟರ್ವ್ಯೂ ಶೆಡ್ಯೂಲ್ ಮಾಡು” ಅಂತ ಹೇಳಿ ತಾನು ತುಂಬಾ ಗಡಿಬಿಡಿಯಲ್ಲಿರುವವನಂತೆ, ಅಲ್ಲಿಂದ ನಿರ್ಗಮಿಸುವ ಆತುರ ತೋರಿದ. ಹಾಗೆ ಆಗ್ಲಿ ಅಂತ ಕಣ್ಣು ಮಿಟುಕಿಸಿ ಅವರ ಬೀಳ್ಕೊಟ್ಟ ಪ್ರಥ್ವಿ. ಇಬ್ಬರೂ ತುಂಬಾ ವರ್ಷಗಳಿಂದ ಆ ಕಂಪನಿಯಲ್ಲಿದ್ದುದರಿಂದ ಅವರಲ್ಲೊಂದು ಸಲುಗೆ ಇತ್ತು. ಸುಜಯ್ ನ ಮೀಟಿಂಗ್ ಯಾವುದು ಅಂತಲೂ ಅವನಿಗೆ ಗೊತ್ತಾಗಿತ್ತು!
ಅನಿರೀಕ್ಷಿತವಾಗಿ ಎದುರಾಗಿ ಬಂದ ಪ್ರಥ್ವಿ, ಸುಜಯ್ ನ ಕರ್ತವ್ಯ ಪ್ರಜ್ಞೆಯನ್ನು ಜಾಗೃತ ಗೊಳಿಸಿದ್ದರಿಂದಲೋ ಏನೋ, ಇವನ ಮುಖ ಬಾಡಿದ್ದು ಕಂಡು ನಿಶಾ,
“ನಿನಗೆ ಯಾವ ತರಹದ ಫುಡ್ ಇಷ್ಟ?” ಅಂತ ಕೇಳಿ ಇವನನ್ನು ತಿರುಗಿ ಹಳಿಗೆ ತರುವ ಪ್ರಯತ್ನ ಮಾಡಿದಳು. ಅದು ಫಲಿಸಿತೋ ಎಂಬಂತೆ ಇವನ ಮುಖದಲ್ಲಿ ಬದಲಾವಣೆ ಕಂಡು ಬಂತು…
“ಹಸಿದಾಗ ಏನು ಕೊಟ್ಟರೂ ಇಷ್ಟವೇ… ಅದು ಇದು ಅಂತ ಬೇಧ ಭಾವ ಮಾಡೋನೇ ಅಲ್ಲ ನಾನು” ಅಂತ ತುಂಬಾ ಸಹಜವಾಗಿ ಹೇಳಿದ ತನ್ನ ಮಾತು ಕೇಳಿ ನಿಶಾ ಆ ಪರಿ ನಗುವಳೆಂದು ಸುಜಯ್ ನಿರೀಕ್ಷಿಸರಲಿಲ್ಲ!
“ಹೌದೆ ಈಗ ನಿನಗೆ ಹಸಿವೆಯಾಗಿದೆಯಲ್ಲವೇ? ಹಾಗಿದ್ದರೆ ಚಿಕನ್ ಬಿರಿಯಾನಿ ತಿನ್ನೋಣ. ಆಯ್ತಾ?” ಅಂದು ಇನ್ನೂ ಜೋರಾಗಿ ನಗತೊಡಗಿದಳು. ಅವಳಿಗೆ ತಾನು ಸಸ್ಯಾಹಾರಿ ಅಂತ ಗೊತ್ತಿದ್ದೂ ತನ್ನ ಕಾಲೆಲೆಯುತ್ತಿರುವಳೆಂದು ಗೊತ್ತಾಗಿ ಸುಮ್ಮನೆ ನಕ್ಕ.
ಅವಳ ನಗುವನ್ನು ನಿಯಂತ್ರಿಸಲೋ ಏನೋ ಎಂಬಂತೆ,
“ನಿನ್ನ ಊರು ಯಾವುದು?” ಅಂತ ಇವನು ಕೇಳಿದ್ದಕ್ಕೆ, ಅವಳ ನಗುವೇನೋ ನಿಂತಿತು. ಆದರೆ ಉತ್ತರವನ್ನು ಬ್ರೇಕ್ ಬಳಿಕ ಹೇಳುತ್ತೇನೆ ಅನ್ನುವ ತರಹ, “ಊಟ ಮಾಡುವಾಗ ಹೇಳುತ್ತೇನೆ” ಅಂತ ಕಣ್ಣು ಮಿಟುಕಿಸಿದಳವಳು. ಹಾಗೆ ಕಣ್ಣು ಮಿಟುಕಿಸಿದಾಗ ತುಂಬಾ ಕ್ಯೂಟ್ ಕಾಣುತ್ತೀಯ ಅಂತ ಹೇಳಬೇಕೆಂದವನು ಸುಮ್ಮನಾದ.
ತಂದೂರಿ ಹಟ್ ಅನ್ನುವ ಆ ಹೋಟೆಲಿನಲ್ಲಿ ಕಾಲಿಡಲೂ ಜಾಗವಿರದಷ್ಟು ಜನವಿದ್ದರು. ಆಫೀಸಿನಲ್ಲಿ ಖಾಲಿ ಖಾಲಿ ಹೊಡೆಯುತ್ತಿದದ್ದು ಯಾಕೆ ಅಂತ ಇಲ್ಲಿ ಕುಳಿತವರ ನೋಡಿದರೆ ಗೊತ್ತಾಗುತ್ತಿತ್ತು. ಆದರೆ ಇಲ್ಲಿ ಪ್ರೈವಸಿ ಗೆ ಅವಕಾಶವೇ ಇರಲಿಲ್ಲ. ಇಲ್ಲಿ ಬೇಡ, ಬೇರೆ ಕಡೆ ಹೋಗೋಣ ಅಂದವನ ಮನಸ್ಸನ್ನು ಓದಿ ಅರ್ಥ ಮಾಡಿಕೊಳ್ಳದಷ್ಟು ಅನಕ್ಷರಿಯಾಗಿರಲಿಲ್ಲ ಅವಳು! ಅಲ್ಲಿರುವ ನಾಲ್ಕೋ ಐದೋ ಹೋಟೆಲು ಗಳಲ್ಲೇ, ಜನರು ಕಡಿಮೆ ಇದ್ದ ಕಡೆ ಹೋಗಿ ಕೂತರು. ಊಟ ಆರ್ಡರ್ ಮಾಡುವ ಗಡಿಬಿಡಿ ಇವನಿಗಿರಲಿಲ್ಲವಾದರೂ, ಆರ್ಡರ್ ತೆಗೆದುಕೊಳ್ಳುವ ಗಡಿಬಿಡಿ ಹೋಟೆಲಿನ ಮಾಣಿಗಿತ್ತಲ್ಲ! ಆ ಮಾಣಿ ಕೊಟ್ಟ ಮೆನುನಲ್ಲಿ ಅವಳಿಗಿಷ್ಟವಾದ ಎಲ್ಲವೂ ಸಹಜವಾಗಿ ಇವನಿಗೂ ಇಷ್ಟವಾಯ್ತು! ಅವಳೇ ಊಟಕ್ಕೆ ಏನು ಬೇಕು ಅಂತ ಆರ್ಡರ್ ಮಾಡಿದಳು. ಅಡಿಗೆ ಆರಾಮವಾಗಿ ತಯಾರಾಗಲಿ ಎಂಬ ಅಣತಿಯನ್ನು ಮಾಣಿಗೆ ಕಣ್ಣಲ್ಲೇ ಹೇಳಿದನವನು. ಇಂಥ ಎಷ್ಟೋ ಜೋಡಿಗಳನ್ನು ದಿನವೂ ನೋಡುವ ಮಾಣಿಗೆ ಇಂತಹ ಅಣತಿಗಳು ಸುಲಭವಾಗಿ ಅರ್ಥವಾಗುತ್ತಿದ್ದವು. ಅದನ್ನು ಪಾಲಿಸಿದರೆ ಅವನ ಜೇಬಿಗೊಂದಿಷ್ಟು ಜಾಸ್ತಿ ದುಡ್ಡು ಸೇರುತ್ತಿತ್ತು!
“ನನ್ನ ಅಮ್ಮ ಕೆರಳದವಳು, ಅಪ್ಪ ಕಾಶ್ಮೀರದವನು. ನಾನು ಹುಟ್ಟಿದ್ದು ನನ್ನ ಅಜ್ಜಿಯ ಊರಾದ ಕೊಟ್ಟಾಯಂ ನಲ್ಲಿ” ಅಂತ ತನ್ನ ಉಗಮದ ಬಗ್ಗೆ ತಿಳಿಸಿದಳು. ಎರಡು ರಾಜ್ಯಗಳ ಸುಂದರಿಯರಲ್ಲಿರಬೇಕಾದ ಲಕ್ಷಣಗಳ ಸಂಗಮವಿರುವುದಕ್ಕೇ ಇವಳು ಇಷ್ಟು ಸುಂದರಿ ಇರಬೇಕು ಅಂದುಕೊಂಡನವನು.
“ನನಗೊಬ್ಬಳು ತಂಗಿ ಇದ್ದಾಳೆ, ನನ್ನ ಅಪ್ಪನಿಗೆ ಏರ ಫೋರ್ಸ್ ನಲ್ಲಿ ಕೆಲಸ. ಹೀಗಾಗಿ ನಾನು ಹೆಚ್ಚು ಕಡಿಮೆ ಇಡೀ ದೇಶವೆಲ್ಲಾ ಸುತ್ತಾಡಿದ್ದೇನೆ…” ಅವಳ ಮಾತುಗಳನ್ನೆ ಮಂತ್ರಮುಗ್ಧನಾಗಿ ಕೇಳುತ್ತಿದ್ದ…
*****
(ಮುಂದುವರೆಯುವುದು…)
ಈ ಧಾರಾವಾಹಿಯ ಕಂತು ಪ್ರಾಸ್ತಿಪಿಸಿದ ಈ ವಾಕ್ಯಗಳು "ಈ ಜಗದ ಕೊಂಕುಗಳಿಗೆ ಕುಗ್ಗಿದರೆ ಬದುಕು ಸಾಧ್ಯವೇ?"
"ಹಸಿದಾಗ ಏನು ಕೊಟ್ಟರೂ ಇಷ್ಟವೇ… ಅದು ಇದು ಅಂತ ಬೇಧ ಭಾವ ಮಾಡೋನೇ ಅಲ್ಲ ನಾನು”"ಎರಡು ರಾಜ್ಯಗಳ ಸುಂದರಿಯರಲ್ಲಿರಬೇಕಾದ ಲಕ್ಷಣಗಳ ಸಂಗಮವಿರುವುದಕ್ಕೇ ಇವಳು ಇಷ್ಟು ಸುಂದರಿ ಇರಬೇಕು"-ಬಹಳ ಸಂಧರ್ಬಿಕವಾಗಿ ಮೂಡಿಬಂದಿದೆ . .
ಶ್ರೀಧರ ಗುರುಗಳೆ , ನಾನು ಇಷ್ಟ ಪಟ್ಟು ಬರೆದದ್ದನ್ನೇ ನೀವು ಮೆಚ್ಚಿದ್ದು ನನಗೆ ದೊಡ್ಡ ಬಹುಮಾನ ಸಿಕ್ಕಷ್ಟೇ ಖುಷಿ!! ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಹೀಗೆ ಇರಲಿ. ಧನ್ಯವಾದಗಳು!
ಮಸ್ತ್ ಅದ ಗುರು..ಹಿಂದಿನ ಸಂಚಿಕೆಥರಾ ಇಲ್ಲು ಬೆಗಾ ಮುಗದಂಗ ಆತು… ಸ್ವಲ್ಪ ಹೆಚಗಿ ಬರಿರಲ್ಲಾ…
ಗುರು, ಎಲ್ಲಾ ಒಮ್ಮೆ ಬರೆದು ಬಿಡಪಾ….ಧಾರಾವಾಹಿ ತರಾ “ಮುಂದುವರೆಯುವದು…….”
ಕಾಯೋಕಾಗಲ್ಲ…
ವಿಜಯ್ ಗುರುಗಳೆ, ಒಮ್ಮೆಲೇ ಎಲ್ಲಾ ಹೇಳಿದರೆ ಮಜಾ ಇರೋದಿಲ್ಲ ಅಂತ ನನ್ನ ಅಭಿಪ್ರಾಯ. 🙂
ನೀವು ನನ್ನ ಬರಹ ಓದುತ್ತಿದ್ದೀರಿ ಅನ್ನುವ ವಿಷಯವೇ ನನಗೆ ಖುಶಿ ಕೊಡುವ ಸಂಗತಿ! ಧನ್ಯವಾದಗಳು!
ವಿಟ್ಠಲ, ಮುಂದಿನ ಸಲ ಖಂಡಿತ ಪ್ರಯತ್ನಿಸುವೆ! 'ಹೊದ ಸಲಾನೂ ಹಿಂಗ ಹೇಳಿದ್ದ್ಯಲ್ಲಪಾ' ಅಂತ ಬಯ್ಯ ಬ್ಯಾಡ 😉
ನಿನ್ನ ಪ್ರೋತ್ಸಾಹಕ್ಕೆ ನಾನು ಋಣಿ!
ಗುರು ನಿಮಗ ಬಯ್ಯೊ ಅಂಥಾದ್ದು ಯೆನಿಲ್ಲಾ! ನಿಮ್ಮ ಲೇಖನ ಯೆಲ್ಲಿಗೆ ನಿಲ್ಲಸಬೆಕು ಯೆಲ್ಲಿಂದ ಶುರುಮಡಬೆಕು ನಿಮಗ ಗೊತ್ತು… ನನಗ ಅಸ್ಟು ಕುತುಹಲ ಹುಟ್ಟಿಸಿತ್ತು ಇನ್ನು ಓದಬೆಕು ಇನ್ನು ಓದಬೆಕು ಅಂತ ಆದ್ರ ಮುಗದಹೊತು ಅದಕ್ಕ ಹೆಳಿದೆ ಸ್ವಲ್ಪ ಹೆಚಗಿ ಬರಿರಲ್ಲಾ ಅಂತ.
[…] ನಾನು ಮತ್ತು ನನ್ನ ನಾಯಿ ಇಬ್ಬರೂ ನಿರ್ಗತಿಕರು!: ಗುರುಪ್ರಸಾದ್ ಕುರ್ತಕೋಟಿ March 30th, 2015 editor [ ಪಂಚ್ ಕಜ್ಜಾಯ ] https://www.panjumagazine.com/?p=10591 ಇಲ್ಲಿಯವರೆಗೆ.. […]
ಪೃಥ್ವಿ ತರಹದ್ದೇ ಒಂದು ಹೆಣ್ಣು ದನಿ ಇತ್ತು ನಾನು ಕೆಲಸ ಮಾಡುತ್ತಿದ್ದ ಹಳೆಯ ವಾಹಿನಿಯಲ್ಲಿ. ಅವರು voice over ಸಹ ಕೊಡುತ್ತಿದ್ದರು!