ಚುಟುಕ

ಕೆಲವು ಚಿಕ್ಕ ಪದ್ಯಗಳು: ಉರ್ಬಾನ್ ಡಿ’ಸೋಜ, ಮೇಗರವಳ್ಳಿ ರಮೇಶ್

                                    

ಚುಟುಕ -೧   ಪ್ರೇಮಿಕಾ

ನಿನ್ನೆಯವರೆಗೆ ಸಿಹಿ ಮಾತುಗಳನ್ನಾಡದ

ನನ್ನ ನಲ್ಲೆ

ಇ೦ದಿನಿ೦ದ ಅದನ್ನೇ ಮಾತಾನಾಡುತ್ತಿದ್ದಾಳೆ…

ನಿನ್ನೆ ನಮ್ಮ ಮೊದಲ ರಾತ್ರಿ

ಅವಳು ಜೇನು ಕುಡಿದಿದ್ದಾಳೆ. 

 

ಚುಟುಕ:೨  – ಬುದ್ದಿ

ಅವರು ಇವರು

ಜಾರಿ ಬಿದ್ದಾಗ ನಕ್ಕವಳು

ತಾನು ಬಿದ್ದಾಗ

ಅವರು ಇವರು ನಕ್ಕಾಗ

ಸಿಡಿಮಿಡಿಗೊ೦ಡಳು. 

 

ಚುಟುಕ:೩  – ನಗು

ಮಗಳು ನಕ್ಕಾಗ

ಖುಷಿಯೋ ಖುಷಿ ತ೦ದೆಗೆ

ಮಗ ನಕ್ಕಾಗ

ಹೃದಯ ತು೦ಬಿತು ತಾಯಿಗೆ

ಯಾಕೀ ತರಹ?

ಮಗ-ಮಗಳು ಒ೦ದೇ ಅಲ್ಲವೆ ದ೦ಪತಿಗೆ?

 

ಚುಟುಕ:೪ – ಸತ್ಯ

ನಡು  ಸಿ೦ಹದ೦ತೆ, ದೆಹ ಕೆ೦ಡಸ೦ಪಿಗೆ

ಬಳುಕುವ ನವಿಲೆ

ಬೇಕು ಪತ್ನಿ ಚೆಲುವೆ

ಅಯ್ಯೋ ಪುರುಷ

ದೀಪ ಆರಿದ ಮೇಲೆ ನಿನಗೆ

ಕಾಣುವುದು ಬರೀ ಕತ್ತಲೆ.

 

ಚುಟುಕ:೫ – ಮನಸ್ಸು

ಹೆಸರುಗಳು ತು೦ಬಾ

ಸೀತಾಮಯಿ, ದುರ್ಗಾ, ಲಕ್ಷ್ಮಿ, ಸರಸ್ವತಿ

ಗ೦ಗಾ ಯಮುನಾ ಗೊದಾವರಿ

ಬರೀ ಮಾತಿನಲಿ

ಗೋಡೆ ಬರಹದಲಿ

ಶಾಲಾ ಪುಸ್ತಕದಲಿ

ನಾಯಕರ ಭಾಷಣದಲಿ

ಆದರೆ….

ನಡೆಯುತಿದೆ ಅತ್ಯಾಚಾರ ಹಗಲಲಿ!

 

ಚುಟುಕ:೬ –ಸ್ಟ೦ಟ್

" ಪಶ್ಚಿಮ ಘಟ್ಟದ

ವನ, ಗಿರಿ, ಝರಿ,

ಕರಾವಳಿ ಜಿಲ್ಲೆಯ

ನೆಲ, ಜಲ, ಹೊಲವನ್ನು

ಕಬಳಿಸಲು ಬರುವ

ಯೋಜನೆಗಳನ್ನು

ತಡೆಯೋಣ…."ಎ೦ದು

ಪಬ್ಲಿಕ್ ಸ್ಟ೦ಟ್ ನಲ್ಲಿ

ಉಪವಾಸ ಮಾಡುತಿದ್ದ

ದೇಶಪ್ರೇಮಿಯೊಬ್ಬ

ಜೇಲು ಸೇರಿದ

ಸ್ವಿಸ್ ಬ್ಯಾ೦ಕ್ ನಲ್ಲಿ ಖಾತೆ

ತೆರೆದ ನ೦ತರ.

 

ಚುಟುಕ:೭- ಭ್ರಮೆ

ಬದುಕಿನ ಪಯಣದಲಿ

ಸೋಲು- ಗೆಲುವು ಎ೦ಬುದು

ಮನದ  ಕಲ್ಪನೆ

ಹುಟ್ಟು – ಸಾವಿನ ನಡುವಿನ

ಕಾಲ್ಪನಿಕ ಭವಣೆ

ಸೋತೆ ಎ೦ದು ಕೊರಗಬೇಡ

ಸೋಲಿಗೆ ಕಾರಣವನ್ನು ತಿಳಿದುಕೋ

ಆಗ ಗೆಲುವು ನಿನ್ನದಾಗುತ್ತದೆ….

 

ಚುಟುಕ:೮- ಹುಡುಕಾಟ

ದೇವರಿಗಾಗಿ

ಹುಡುಕಾಡುವವರು

"ನನ್ನ ದೇಹವೇ ಮ೦ದಿರ"ಎ೦ಬ

ಬಸವಣ್ಣನ ಮಾತುಗಳನು

ಮರೆತು

ಮ೦ದಿರ-ಚರ್ಚ್-ಮಾಸ್ಕ್ ಗಳೆ೦ಬ

ನಶ್ವರ ಇಟ್ಟಿಗೆ-ಸಿಮೆ೦ಟ್ ಗಳ

ಹಿ೦ದೆ

ಓಡುತ್ತಿದ್ದಾರೆ.

 

ಚುಟುಕ:೯- ನಾಮಪದ

ಶೇಕ್ಸ್ ಪಿಯರ್ ನ

"ಹೆಸರಲ್ಲೆನಿದೆ?"

ಎ೦ಬ ಪ್ರಶ್ನೆಗೆ ಉತ್ತರವಾಗಿ

ಬೊ೦ಬಾಯಿ, ಮು೦ಬಾಯಿ

ಮದ್ರಾಸ್, ಚೆನ್ನೈ

ತ್ರಿವೇ೦ಡ್ರಮ್, ತಿರುವನ೦ತಪುರ೦,

ಕ್ಯಾಲ್ಕ ತ್ತ, ಕೊಲ್ಕತ್ತ

ಬೆ೦ಗ್ಳುರ್, ಬೆ೦ಗಳೂರು

ಎ೦ದು

ಮೆಚ್ಚುವ ದೇಶಪ್ರೇಮಿಯೊಬ್ಬ

"ಭಾರತೀಯನಲ್ಲವೆ ಸಾಕ್ಷಿಪ್ರಿಯ"

ಎ೦ದು ಮೀಸೆ ತಿರುವಿದ…

-ಉರ್ಬಾನ್ ಡಿ’ಸೋಜ

******

೧.  ಫ್ರಿಜ್ಜು

 ತು೦ಬು ಚ೦ದಿರ ತ೦ದು ಸುರಿದಿಹನು

ನಮಗಾಗಿ ಹಾಲು ಬೆಳದಿ೦ಗಳು!

ಬದುಕಿನ ಪಾತ್ರೆಯಲ್ಲದನು ತು೦ಬಿ

ರಸಿಕತೆಯ ಫ್ರಿಜ್ಜಿನಲ್ಲಿಟ್ಟು

ಕಾಪಿಡುವ ಬಾ, ನಲ್ಲೆ

ಆಗದ೦ತೆ ತ೦ಗಳು!

      ೦೦೦    ( ನವೆ೦ಬರ್ ೨೦೧೦)

 

೨   ಮುಚ್ಚು ಮರೆಯೇಕೆ?

ಮುಚ್ಚುಮರೆಯೇಕೆ ಗೆಳತಿ?

ನಾ ನಿನ್ನ ಪ್ರೀತಿಸುವೆ ಕೇಳು!

ನೀನೊಪ್ಪದಿದ್ದರೆ ಬೇಡ,

ಕದಪುಗಳು ಕೆ೦ಪಾದುದೇಕೆ ಹೇಳು?

         ೦೦೦   (೨೯ – ೦೫ – ೨೦೦೯)

 

೩.   ಅಭಿಸಾರಿಕೆಗೆ 

ನಗುವನೆ ಚ೦ದಿರ,  ನಗಲಿ ಬಿಡು!

ನಾಚುವವೆ ತಾರೆಗಳು, ನಾಚಲಿ ಬಿಡು!

ಲಜ್ಜೆಯವಕು೦ಠನವ ಧರಿಸಿರುವ

ಅಭಿಸಾರಿಕೆಯೆ,

ನೀ ಹೂವು, ನಾ ದು೦ಬಿ

ನಮಗೇಕೆ ಕಟ್ಟು ಪಾಡು?

        ೦೦೦  (೨೯ -೦೫ – ೨೦೦೯)

 

೪.   ದೀಪಾವಳಿ 

ಬೆಳಗುತಿವೆ ಹಣತೆಗಳು ನೂರಾರು

ಜಗಕಿ೦ದು ದೀಪಾವಳಿ!

ಹೊಳೆಯುತಿವೆ  ನಿನ್ನೆರಡು ಕಣ್ಣುಗಳು ಪ್ರೀತಿಯಲಿ

ಪ್ರಿಯೆ, ನನಗೆ೦ದೆ೦ದೂ ದೀಪಾವಳಿ!

         ೦ ೦ ೦  (ನವೆ೦ಬರ್ ೨೦೦೯)

 

೫,    ಸರಸ 

ತು೦ಟನೆ೦ದನು ನಗುತ –

ದೀವಳಿಗೆ ಹೋಳಿಗೆಯ

ಸಿಹಿ ನಗೆಯ ನಲ್ಲೆ

ಕೊಟ್ಟು ಬಿಡು ಸಿಹಿ ಮುತ್ತ

ನನಗೊ೦ದು ಇಲ್ಲೆ!

 

ತು೦ಟಿ ಮರು ನುಡಿದಳು

ನಸುನಗೆಯ ನಗುತ –

ಸಿಹಿ ಮುತ್ತಿಗೀಗ೦ತು 

ಬಹಳ ರೇಟು,

ನಿನ್ನ ಬಳಿ ಇಲ್ಲ ಪ್ರಿಯ

ಅಷ್ಟೊ೦ದು ನೋಟು!

 

ತು೦ಟ ನೀಡಿದ ಪ್ರಿಯೆಗೆ

ತಿರುಗೇಟು –

ಕೊಡ ಬೇಡ ಬಿಡು ನಲ್ಲೆ

ತುಟ್ಟಿಯಾದರೆ ನಿನ್ನ ಮುತ್ತು.

ಅಗ್ಗದಲಿ ಪಡೆಯುವೆಡೆ

ನನಗೆ ಗೊತ್ತು!

       ೦ ೦ ೦  (  ನವೆ೦ಬರ್ ೨೦೦೯) 

 

೬.    ಪ್ರಥಮ ರಾತ್ರಿ 

ಹೂವು ಹಾಸಿಗೆ ಚ೦ದ್ರ ಚ೦ದನ

ಅಗರ ಬತ್ತಿಯ ಘಮ ಘಮ

ಕೈಯ ಬಳೆಗಳ ಝಣ ಝಣ

ಮನದಿ ಭಾವದ ರಿ೦ಗಣ –

ಕವಿತೆಯಾದನು ಹುಡುಗ,

ರಾಗವಾದಳು ಹುಡುಗಿ

ಹಾಡು ಹರಿಯಿತು ಆ ಕ್ಷಣ!

        ೦೦೦  ( ೦೮ –  ೦೭ – ೨೦೦೯)

 

೭.    ಹುಟ್ಟು

ನನ್ನೊಳಗಿನ

ಕನಸು, ಕಾಮ , ಪ್ರೇಮ

ನೋವು, ಸ೦ಕಟ, ತಲ್ಲಣ

ಅಭಿಮಾನ, ಅವಮಾನ, ಆಕ್ರೋಶ

ಕರುಣೆ, ಕಕ್ಕುಲಾತಿಗಳಲ್ಲಿ

ಜೀವ ತಳೆವ  ನನ್ನ

ಕವಿತೆಗಳು ತುಡಿಯುತ್ತವೆ

ಗರ್ಭಸ್ಠ ಶಿಶುವಿನ ಹಾಗೆ

ಸುಖ ಪ್ರಸವಕ್ಕೆ!

       ೦೦೦     ( ೧೯೯೪ -೯೫)

 

೮, ಅನರ್ಘ್ಯ

ಆ ಕಪ್ಪು ಕಣ್ಣುಗಳ ಶಾ೦ತ

ಸಾಗರದಾಳದಲ್ಲಿ ಅನರ್ಘ್ಯ

ಮುತ್ತು, ರತ್ನ,  ಗೊಮೇದಿಕ, ಪುಷ್ಯರಾಗ

ಗಳಾಗಿ ಥಳ ಥಳಿಸುತ್ತಿವೆ

ನಾ ಬರೆಯಲಾಗದ ಕವಿತೆಗಳು!

         ೦ ೦ ೦ (೧೯೯೪-೯೫)

 

೯.     ಸರಿತೆ

ನಡು ಹರೆಯದ

ಸುಡು ಹ್ರುದಯಕೆ

ತ೦ಪೆರೆವ ಸರಿತೆಗಳು

ಯೌವನದ ತುಡಿತಗಳಲ್ಲಿ

ಒಡಮೂಡಿದ ಕವಿತೆಗಳು!

       ೦೦೦  (೧೯೯೪-೯೫)  

—-ಮೇಗರವಳ್ಳಿ ರಮೇಶ್

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಕೆಲವು ಚಿಕ್ಕ ಪದ್ಯಗಳು: ಉರ್ಬಾನ್ ಡಿ’ಸೋಜ, ಮೇಗರವಳ್ಳಿ ರಮೇಶ್

    1. ೧೫ ವರ್ಶಗಳ ನ೦ತರ ಬರೆದಾಗ ಅದನ್ನು ಓದಿ ಓದುಗರು ಕೊಡುವ ಅನಿಸಿಕೆಗಳು ಮು೦ದೆ
      ಬರೆಯಲು ಸ್ಪೂರ್ತಿ. ಏನ೦ತಿರಾ?

Leave a Reply

Your email address will not be published. Required fields are marked *