ಇಲ್ಲಿಯವರೆಗೆ
[ಹಿಂದಿನ ವಾರ: ಉದ್ಘಾಟನೆಯ ಮಾರನೇ ದಿನವೇ ವಾಟ್ಸಪ್ ಗುಂಪು ಚುರುಕಿನಿಂದ ಕೆಲಸ ಮಾಡಿತು. ಸಲಹೆಗಳು ಹರಿದು ಬಂದವು. ಮತ್ತೂ ಮತ್ತೂ ಮರೆಯಬಾರದ ಸೂತ್ರವೊಂದಿದೆ. ಅದೇ ಸೂತ್ರವನ್ನು ಗಮನಿಸುತ್ತಲೇ ಇರಬೇಕು. ಅದೇ ಉತ್ಸಾಹ-ಸಲಹೆ-ಸೂಚನೆಗಳು ಕೆರೆಯ ಹೂಳನ್ನು ಎತ್ತಲಾರವು ಎಂಬುದೇ ಈ ಸೂತ್ರ. ಬಂಗಾರಮ್ಮನ ಕೆರೆಯ 600 ವರ್ಷಗಳ ಹೂಳನ್ನು ತೆಗೆಯಲು ಹಿಟಾಚಿ-ಟಿಪ್ಪರ್‍ಗಳು ಬೇಕು. ಇವಕ್ಕೆ ಮತ್ತೆ ಹಣಕಾಸು ಬೇಕು. ಅಗಾಧ ಪ್ರಮಾಣದ ಹೂಳನ್ನು ಹೊರಸಾಗಿಸಲು ಅಷ್ಟೇ ಪ್ರಮಾಣದ ಹಣಕಾಸು ಬೇಕು. ಕೆಲಸ ಶುರು ಮಾಡಿದ ವಾರದಲ್ಲೇ ಇಂಜಿನಿಯರ್ ಹೇಳಿದ ಬಜೆಟ್ ಮೀರಿತು. ಸರ್ಕಾರಿ ಕೆಲಸವಾದರೆ ನಿಲ್ಲಿಸಬಹುದಿತ್ತು. ಆದರೆ ಇಡೀ ಸಮಾಜಕ್ಕೊಂದು ಸಂದೇಶ ನೀಡುವ ಮಹೋನ್ನತ ಉದ್ಧೇಶವಿರುವ ಕಾರ್ಯಪಡೆಯ ಕೆಲಸ ನಿಲ್ಲುವ ಹಾಗಿಲ್ಲ. ಮುಂದೇನು?]
ಹವಾಮಾನ ಇಲಾಖೆವತಿಯಿಂದ ಈ ಬಾರಿ ಮಳೆಗಾಲ ಮುಂಚಿತವಾಗಿ ಪ್ರಾರಂಭವಾಗುತ್ತದೆ ಎಂಬ ಸಂದೇಶ ಬಿತ್ತರವಾಗುತ್ತಲೇ ಇತ್ತು. ಬಂಗಾರಮ್ಮ ಕೆರೆಯ ಭೌಗೋಳಿಕ ಲಕ್ಷಣವನ್ನು ಈ ಮುಂಚಿತವಾಗಿಯೇ ವಿವರಿಸಲಾಗಿದೆ. ಒಂದು ಮಳೆ ಬಿದ್ದರೆ ಸಾಕು ಅನಿವಾರ್ಯವಾಗಿ ಕೆಲಸ ನಿಲ್ಲುತ್ತದೆ. ನೈಸರ್ಗಿಕವಾದ ಅಡಚಣೆಯನ್ನು ನಿವಾರಿಸುವ ಮದ್ದು ಕಾರ್ಯಪಡೆಯಲ್ಲಿಲ್ಲ. ಚುರುಕಾಗಿ ಕೆಲಸ ಸಾಗಬೇಕು. ಮೊದಲ ಸಭೆಯಲ್ಲೇ ಶಿವಾನಂದ ಕಳವೆ ಹಾಗೂ ಶ್ರೀಕಾಂತ್ ಹೆಗಡೆ ಒಂದು ಸಲಹೆಯನ್ನು ನೀಡಿದ್ದರು. ವಿವಿಧ ಸಮಿತಿಗಳನ್ನು ರಚಿಸಿ ಕೆಲಸ ಶುರು ಮಾಡಿ. ಅದೇ ಪ್ರಕಾರ ಮುಂದಿನ ಸಭೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸೋಣ ಎಂಬ ಸಲಹೆ ನೀಡಿದೆ. ಅದರಲ್ಲೂ ಮುಖ್ಯವಾಗಿ ಹಣಕಾಸು ಸಮಿತಿಯ ಜವಾಬ್ದಾರಿ ಹೆಚ್ಚಿತ್ತು. ಆದರೆ ಸಭೆಯಲ್ಲಿ ಹಣವೇನೋ ಹೇಗೋ ಒಟ್ಟಾಗುತ್ತದೆ. ಸಮಿತಿ ರಚನೆ ಮಾಡುತ್ತಾ ಕುಳಿತರೆ, ಸಮಯ ಸರಿದು ಹೋಗುತ್ತದೆ, ಕೆಲಸವಾಗುವುದಿಲ್ಲ ಎಂಬ ಅಭಿಪ್ರಾಯ ಬಂತು ಮತ್ತು ಇದೇ ಅಭಿಪ್ರಾಯವೇ ಈಗಿನ ಹಿನ್ನೆಡೆಗೆ ಕಾರಣವಾಯಿತು. ಅದು ಹೇಗೆ ಎಂದು ಮುಂದೆ ನೋಡೋಣ.
ಬಿರುಬೇಸಿಗೆಯಲ್ಲಿ, ಬಿರುಬರಗಾಲದಲ್ಲಿ ನೀರಿನ ಮಹತ್ವದ ಅರಿವು ಹೆಚ್ಚಿನ ಸಾರ್ವಜನಿಕರಲ್ಲಿ ಉಂಟಾಗುತ್ತದೆ. ಕೆರೆ ಹೂಳೆತ್ತುವ ಕೆಲಸವೆಂದರೆ, ಇನ್ನಿತರ ಸಾಮಾಜಿಕ ಸೇವೆಗಳಿಗೆ ಹೋಲಿಸಿದರೆ, ಅತ್ಯಂತ ಮುಖ್ಯವಾದದು. ನೈಸರ್ಗಿಕ ವೈಪರೀತ್ಯಗಳು ಹೆಚ್ಚಿನಂಶ ಎಲ್ಲಾ ಅಸಮಾನತೆಗಳನ್ನು ತೊಡೆದು ಹಾಕುತ್ತವೆ. ಎಲ್ಲರಿಗೂ ಅನಿವಾರ್ಯವಾದ ನೀರು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವ್ಯಾಟ್ಸಪ್ ಗುಂಪಿನಿಂದ ಅಲ್ಪ ಪ್ರಯೋಜನವೇನೋ ಆಯಿತು. ನಿರೀಕ್ಷೆಯ ಫಲ ಸಿಗಲಿಲ್ಲ. ಟಿಪ್ಪರ್‍ಗಳ ಕೊರತೆಯನ್ನು ನೀಗಿಸಲು ರಕ್ಷಣಾ ಇಲಾಖೆ ಸಹಾಯ ಮಾಡಿತು. ಹೊರಗಿನ ಸ್ನೇಹಿತರು ಧನ ಸಹಾಯವನ್ನೂ ಮಾಡಿದರು. ಆದರೆ ಆಗುತ್ತಿರುವ ಕೆಲಸಕ್ಕೆ ಹೋಲಿಸಿದರೆ, ಸಂಗ್ರಹವಾಗುತ್ತಿರುವ ಹಣದ ಪ್ರಮಾಣ ಏನೇನೂ ಅಲ್ಲ. ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆಯ ಗಾದೆಯಂತೆ ಆಗಿತ್ತು.
ಸಾಗರದಲ್ಲಿ ಬಹಳಷ್ಟು ಸಮಾಜಮುಖಿ ಸಂಘ-ಸಂಸ್ಥೆಗಳಿವೆ, ಹಣಕಾಸು ಸಂಸ್ಥೆಗಳಿವೆ, ದೊಡ್ಡ ಮಟ್ಟದ ವಹಿವಾಟು ನಡೆಸುವ ಕುಳಗಳಿದ್ದಾರೆ. ಕೆರೆಯ ಕೆಲಸಕ್ಕಾಗಿ ಹಣ ಸಂಗ್ರಹಣೆ ಕಷ್ಟವಾಗುವುದಿಲ್ಲ ಎಂಬ ಒಂದೇ ಉಮೇದಿಯಿಂದ ಕೆಲಸ ಮಾಡುತ್ತಲೇ ಸಾಗಿದೆವು. ಮೂರು ಮತ್ತು ನಾಲ್ಕನೆಯ ಸಭೆಗೆ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆ ಆಯಿತು. ನಿಶ್ಚಯವಾಗಿಯೂ ಇದೊಂದು ಮಹತ್ವದ ಉದ್ಧೇಶ ಈಡೇರಿಕೆಗಾಗಿ ಆದ ಅಡಚಣೆ ಹಾಗು ಇದನ್ನು ಗುರುತಿಸುವಲ್ಲಿ ವಿಫಲವಾದದ್ದು ನಮ್ಮ ಬಲುದೊಡ್ಡ ತಪ್ಪು. ಇರಲಿ, ಯೋಜನಾ ವೆಚ್ಚ ಹೆಚ್ಚಾಗಿದ್ದು, ಹಣ ಸಂಗ್ರಹಣೆಯಾಗದೇ ಇರುವುದು, ಮುಂದೆ ನಿಂತು ಕೆಲಸ ಮಾಡುವವರ ಸ್ಥೈರ್ಯ ಕುಂದುತ್ತದೆ. ಆನೆಸೊಂಡಿಲು ಕೆರೆಯಿಂದ ಹರಿದ ನೀರು ಗಣಪತಿ ಕೆರೆಗೆ ಸೇರುತ್ತದೆ. ಗಣಪತಿ ಕೆರೆಯಲ್ಲಿ ನೀರಿದ್ದರೆ, ಇಡೀ ಸಾಗರ ಪಟ್ಟಣದ ಅಂತರ್ಜಲದ ಮಟ್ಟ ಸ್ಥಿರವಾಗಿರುತ್ತದೆ. ಎಲ್ಲಾ ತೆರೆದ ಬಾವಿಗಳಲ್ಲು ಭರಪೂರ ನೀರು ಇರುತ್ತದೆ. ಇದರಿಂದ, ನಗರಸಭೆಯ ಮೇಲೆ ನೀರಿಗಾಗಿನ ಒತ್ತಡ ಕಡಿಮೆಯಾಗುತ್ತದೆ. ಪ್ರತಿ ಹಂತದಲ್ಲೂ ಒಟ್ಟಾರೆ ನೀರಿನ ನಿರ್ವಹಣೆಯ ವೆಚ್ಚ ಕಡಿಮೆಯಾಗುತ್ತದೆ. ಇಷ್ಟೊಂದು ಪತ್ಯಕ್ಷವಾದ ಪ್ರಯೋಜನಗಳು ಕೆರೆ ಹೂಳೆತ್ತುವುದರಿಂದ ಆಗುತ್ತದೆ.
ಈ ಮಧ್ಯೆ ಸಂಘ-ಸಂಸ್ಥೆಗಳ ಸಭೆಯನ್ನೂ ಕರೆಯಲಾಯಿತು. ಆ ಸಭೆಯಲ್ಲಿ ಡಾ:ನಾ.ಡಿಸೋಜ, ಉಪವಿಭಾಗಾಧಿಕಾರಿಗಳು, ಸರ್ಕಲ್ ಇನ್ಸ್‍ಪೆಕ್ಟರ್ ಹಾಜರಿದ್ದರು, ವಿಚಾರಗಳ ಚರ್ಚೆ ನಡೆಯಿತು. ಭಿನ್ನಾಬಿಪ್ರಾಯಗಳೂ ಬಂದವು. ಎಲ್ಲವನ್ನೂ ಸಮಚಿತ್ತದಿಂದ ಕೇಳಿ, ಮುಂದಿನ ಹಾದಿ ಏನು ಎಂಬ ವಿಚಾರ ಮಾಡಿದೆವು. ಆ ಸಭೆಯಲ್ಲಿ ಹೇಳಿಕೊಳ್ಳುವಂತಹ ಯಾವ ಭರವಸೆಗಳೂ ಸಿಗಲಿಲ್ಲ. ಹೂಳೆತ್ತುವ ಕೆಲಸ ನಿಂತಿರಲಿಲ್ಲ. ನಿರಂತರವಾಗಿ ನಡೆಯುತ್ತಿತ್ತು. ಕಡುಬೇಸಿಗೆಯಲ್ಲೂ ಬಂಗಾರಮ್ಮ ಬತ್ತಿರಲಿಲ್ಲ. ಮೇಲಿನ ಆನೆ ಸೊಂಡಿಲು ಕೆರೆ ಸಂಪೂರ್ಣ ಮುಚ್ಚಿಹೋಗಿದ್ದರೂ, ನೀರಿನ ಒರತೆಯನ್ನು ಜಿನುಗಿಸುತ್ತಿತ್ತು. ತಾಲ್ಲೂಕಿನ ಎಲ್ಲಾ ಇಲಾಖೆಯ ಮುಖ್ಯಸ್ಥರು ಬಂದು ಕೆರೆಯನ್ನು ನೋಡಿ ಹೊಗಳಿದರು. ಇಂತಹ ನೀರಿನ ಸೆಲೆ ಇರುವ ಇನ್ನೊಂದು ಕೆರೆಯನ್ನು ತಾವು ನೋಡಿಲ್ಲವೆಂದು ಎಲ್ಲರೂ ಹೇಳಿದರು.
ಈ ಜಗತ್ತೇ ವಿಚಿತ್ರ, ಹಿಟಾಚಿಯ ಡ್ರೈವರ್‍ಗೆ ಹೆಚ್ಚೆಂದರೆ, 20 ವರ್ಷ, ದೂರದ ಬಿಹಾರದಿಂದ ಬಂದವನ ಹೆಸರು ರೋಹಿತ್. ಕನ್ನಡ ಬಾರದು, ಬೆಳ್ಳಂಬೆಳಗ್ಗೆ 6 ಗಂಟೆಗೆ ಕೆಲಸ ಶುರು ಮಾಡಿದರೆ, ಕೆಲಸ ನಿಲ್ಲಿಸುವುದು ಸಂಜೆ 6 ಗಂಟೆಗೆ. ಮಧ್ಯದಲ್ಲಿ, ತಿಂಡಿ-ಊಟಕ್ಕೆ ಅರ್ಧರ್ಧ ಗಂಟೆ ಬಿಡುವಷ್ಟೆ. ಮೊದಲು ಕೆರೆ ದಂಡೆಯ ಮೇಲೆ ನಿಂತು, ಹಿಟಾಚಿಯ ಬಕೇಟ್‍ಗೆ ನೀಕುವಷ್ಟು ದೂರದ ಹೂಳು ತೆಗೆದ ಮೇಲೆ ಮುಂದೇನು? 600 ವರ್ಷದ ಅಗಾಧ ಹೂಳು. ಹಿಟಾಚಿಯನ್ನು ಹಾಗೆಯೇ ಕೆರೆಗೆ ಇಳಿಸುವಂತಿಲ್ಲ. ಒಮ್ಮೆ ಹಿಟಾಚಿಯೇನಾದರೂ ಹೂಳಿನಲ್ಲಿ ಸಿಕ್ಕಿಕೊಂಡಿತೆಂದರೆ, ಇಡೀ ಯೋಜನೆಯೇ ಹಳ್ಳ ಹಿಡಿದಂತೆ. ಹಳೇಇಕ್ಕೇರಿಯಲ್ಲಿ ಬರದಿಂದ ಒಣಗಿ ನಿಂತ ತೆಂಗಿನ ಮರಗಳನ್ನು ಕಡಿದು ಹಾಕಿದ್ದಾರೆ ಎಂದು ಯಾರೋ ಹೇಳಿದರು. ಟ್ರ್ಯಾಕ್ಟರ್‍ನಲ್ಲಿ ಆ ಮರಗಳನ್ನು ತಂದು 15 ಅಡಿ ಉದ್ದದಂತೆ ಕೊಯ್ದು, ಅದನ್ನು ಎರೆರೆಡು ಅಡಿಗೊಂದರಂತೆ ಹೂಳಿನ ಮೇಲೆ ಹಾಕಿದೆವು. ಒಂದಿಷ್ಟು ಸೊಪ್ಪು ತಂದು, ಅದರ ಮೇಲೆ ಮಣ್ಣು ಹಾಕಿ ಹೂಳಿನ ಮೇಲೆ ರಸ್ತೆ ನಿರ್ಮಿಸಿದೆವು. ಇದೊಂತರ ಕತ್ತಿಯ ಅಲಗಿನ ಮೇಲೆ ನಡೆದಂತೆ, ಕೊಂಚ ಎಚ್ಚರ ತಪ್ಪಿದರೂ ಯಂತ್ರ ಹೂಳಿನೊಳಗೆ ಸೇರುತ್ತದೆ. ಈ ಕೆಲಸ ಮಾಡಲು ತುಂಬ ಎಚ್ಚರ ಹಾಗೂ ಧೈರ್ಯ ಬೇಕು. ಬಿಹಾರದ ಆ ಹುಡುಗನಲ್ಲಿ ಎರೆಡೂ ಇತ್ತು. ಹೀಗೆ ಕೆರೆಯ ಮಧ್ಯಭಾಗದಲ್ಲಿ ರಸ್ತೆ ನಿರ್ಮಾಣ ಪ್ರಾರಂಭವಾಯಿತು. ಕೆರೆಯ ಹೂಳೆತ್ತುವ ಮೊದಲೇ ಇನ್ನಷ್ಟು ಮಣ್ಣು ಕೆರೆಗೆ ಬಿತ್ತು. ಆದರೆ ಇದು ಅನಿವಾರ್ಯ. ಯಾವುದೇ ಪರ್ಯಾಯ ತಂತ್ರವಿಲ್ಲ. ಕೆರೆಯ ಮಧ್ಯಭಾಗದಲ್ಲಿ ರಸ್ತೆ ನಿರ್ಮಿಸಿ, ರಸ್ತೆಯ ಇಕ್ಕೆಲಗಳ ಹೂಳನ್ನು ತೆಗೆಯುವುದು ನಮ್ಮ ಯೋಜನೆ. ಮುನ್ನೂರು ಅಡಿ ರಸ್ತೆ ನಿರ್ಮಿಸಲು ಎರಡು ದಿನ ಬೇಕಾಗುತ್ತದೆ. ಹಿಟಾಚಿಯ ಬಾಡಿಗೆ ಗಂಟೆಗೆ 2000 ರೂಪಾಯಿಗಳು ಅಂದರೆ 24 ತಾಸು ಕೆಲಸವೆಂದರೆ 48 ಸಾವಿರ ರೂಪಾಯಿಗಳು! ಇವೆಲ್ಲಾ ಪ್ರಾಕ್ಟಿಕಲ್ ಆಗಿ ಬರುವ ಕಷ್ಟಗಳು. ಆಯಿತು ಬೇರೆ ದಾರಿ ಇಲ್ಲದ್ದರಿಂದ, ಇದೇ ಯೋಜನೆಯನ್ನು ಮುಂದುವರೆಸುವ ನಿರ್ಧಾರ ತೆಗೆದುಕೊಂಡಾಯಿತು. ಇನ್ನಷ್ಟು ಸೊಪ್ಪು-ಸದೆಗಳು, ಮಣ್ಣುಗಳು ಮತ್ತೆ ಕೆರೆಗೆ ಸೇರಿದವು. ತಾತ್ಕಾಲಿಕ ರಸ್ತೆ ಕೆಲಸ ಶುರುವಾಯಿತು.
ಒಂದು ದಿನದ ಕೆಲಸ ಮುಗಿಯಿತು. ಸುಮಾರು ಅರ್ಧಕ್ಕಿಂತ ಹೆಚ್ಚಿನ ಭಾಗದ ರಸ್ತೆ ಕೆಲಸ ಮುಗಿದಿತ್ತು. ಬೆಳಗ್ಗೆ ಕೆರೆಯ ಹತ್ತಿರ ಹೋದವರಿಗೆ ಶಾಕ್! ಅರ್ಧ ಭಾಗದ ರಸ್ತೆ ತಿರುಗಿ ಕೂತಿದೆ. ಉತ್ತರ ಭಾರತದ ಗುಡ್ಡಗಾಡುಗಳಲ್ಲಿ ಇಡೀ ಗುಡ್ಡಕ್ಕೆ ಗುಡ್ಡವೇ ಜಾರುತ್ತಲ್ಲ ಆ ರೀತಿ ನಮ್ಮ ತಾತ್ಕಾಲಿಕ ರಸ್ತೆ ಜಾರಿ ಹೋಗಿತ್ತು. ಮಾಡಿದ ಅರ್ಧ ಕೆಲಸ ಹೂಳಿನಲ್ಲೇ ಹೋಮವಾಗಿತ್ತು. ಸರಿ, ಮತ್ತೆ ಕೆರೆ ದಂಡೆಯ ಮೇಲೆ ನಾಲ್ಕಾರು ಜನರ ತುರ್ತು ಸಭೆ ನಡೆಯಿತು. ಚರ್ಚೆಗಳ ಮೇಲೆ ಚರ್ಚೆಗಳಾದವು. ರಸ್ತೆ ಜಾರಿದ್ದಕ್ಕೆ ಕಾರಣವೇನು? ಮುಂದೇನು ಮಾಡುವುದು? ಹೀಗೆ ಕೊನೆ-ಮೊದಲಿಲ್ಲದ ಪ್ರಶ್ನೆಗಳೇ ಇದ್ದವು. ಮತ್ತೆ ಆ ರೀತಿಯಲ್ಲಿ ರಸ್ತೆ ನಿರ್ಮಿಸುವುದು ಅಸಾಧ್ಯವೇ ಸರಿ. ಎಲ್ಲಿಯವರೆಗೆ ರಸ್ತೆ ಸರಿ ಇದೆಯೋ ಅಲ್ಲಿಯವರೆಗಿನ ಇಕ್ಕೆಲಗಳ ಹೂಳು ಎತ್ತಿ ಹಾಕುವುದು ಎಂದು ತೀರ್ಮಾನಿಸಿದೆವು. ಟಿಪ್ಪರ್‍ಗಳೂ ಬಂದು ನಿಂತಿದ್ದವು. ದಿನ ಬಾಡಿಗೆಗೆ ಬಂದ ಟಿಪ್ಪರ್‍ಗಳನ್ನು ಖಾಲಿ ನಿಲ್ಲಿಸುವ ಹಾಗಿಲ್ಲ. ವೃಥಾ ಬಾಡಿಗೆ ಕಟ್ಟಬೇಕು.
ಇಷ್ಟೆಲ್ಲಾ ಆದರೂ ಕೆರೆಯ ಅಳತೆ ನಮಗಿನ್ನೂ ಸಿಕ್ಕಿರಲಿಲ್ಲ. ಎಲ್ಲಾದರೂ ಒಂದು ಭಾಗದಲ್ಲಿ ಗಟ್ಟಿ ನೆಲ ಸಿಕ್ಕಿದರೆ, ಅರ್ಧ ಯುದ್ಧ ಗೆದ್ದ ಹಾಗೆ. ಆದರೆ ಬಂಗಾರಮ್ಮ ವಾರವಾದರೂ ತನ್ನ ಗುಟ್ಟು ಬಿಟ್ಟು ಕೊಡಲಿಲ್ಲ. ಹಿಟಾಚಿಯ ಬಕೇಟಿಗೆ ಗಟ್ಟಿ ತಳ ಸಿಗಲಿಲ್ಲ. ಕೆರೆ ಏರಿಗೆ ಬಂದವರು ನಾನಾ ತರಹದ ಸಲಹೆಗಳನ್ನು ನೀಡುತ್ತಲೇ ಇದ್ದರು. ಈ ಹಿಂದೆ ಯೋಗೀಶ್ವರ ಕೆರೆಯ ಹೂಳು ತೆಗೆದ ಅನುಭವ ಇದ್ದ, ಅಕ್ಷರ, ಸತೀಶ ಹಾಗೂ ಅಶೋಕ ಇವರಿಗೆ ಯೋಜನೆಯ ಸಂಬಂಧಪಟ್ಟ ತೀರ್ಮಾನಗಳನ್ನು ತೆಗೆದುಕೊಳ್ಳುವ ಪರಮಾಧಿಕಾರ ನೀಡಿ ಮುಂದುವರೆಯುವಂತೆ ಸೂಚಿಸಲಾಯಿತು.
ಇನ್ನೊಂದು ಇಪ್ಪತೈದು ವರ್ಷಗಳ ಕಾಲ “ಬಂಗಾರಮ್ಮ” ಕೆರೆಯ ಹೂಳೆತ್ತದಿದ್ದರೆ, ಅದೊಂದು ನಿರ್ಜಿವ ಕೆರೆಯಾಗುತ್ತಿತ್ತು. ಈಗಾಗಲೇ ಮುಕ್ಕಾಲು ಭಾಗ ನಿರ್ಜಿವವಾಗಿದ್ದ ಕೆರೆ ಹಲವು ಹತ್ತು ಪಾಠಗಳನ್ನು ಕಲಿಸಿತು. ಇಕ್ಕೇರಿ-ಕೆಳದಿಗಳನ್ನು ಆಳಿದ್ದ ನಾಯಕರ ದೂರದೃಷ್ಟಿಯ ಫಲವಾಗಿ ಅನೇಕ ತಲೆಮಾರುಗಳ ಜನಜೀವನ ಸುಗಮವಾಗಿ ಸಾಗಿತ್ತು. ಮಲೆನಾಡಿಗೆ ಬಂದ ಭೀಕರ ಬರ ಹೂಳೆತ್ತುವ ಕಾಯಕಕ್ಕೆ ಮುನ್ನುಡಿ ಬರೆಯಿತು. ಕೆಡುಕಿನಲ್ಲೂ ಒಳಿತಿದೆ.
ಮುಂದುವರೆಯುವುದು…