ಕಥಾಲೋಕ

ಕೆಂಪು ಹುಂಜ: ಜೆ.ವಿ.ಕಾರ್ಲೊ

ಸೋಂಬಾನ ಆರೂಡುವ ಎತ್ತು ಹೊಟ್ಟೆಯುಬ್ಬರಿಸಿಕೊಂಡು ಸತ್ತು ಬಿದ್ದಿತ್ತು. ಸೋಂಬಾನ ಜಗತ್ತು ತಲೆ ಕೆಳಗಾದುದರಲ್ಲಿ ಆಶ್ಚರ್ಯವಿಲ್ಲ. ಎತ್ತು ಮುದಿಯಾಗಿತ್ತು, ನಿಜ. ನಿತ್ರಾಣಗೊಂಡಿತ್ತೂ ನಿಜವಾದರೂ, ಒಳ್ಳೆಯ ಸಮಯ ನೋಡಿಯೇ ಸೋಂಬಾನಿಗೆ ಕೈ ಕೊಟ್ಟಿತ್ತು… ಒಂದು ಹದವಾದ ಮಳೆ ಉದುರಿ ಭೂಮಿ ಉತ್ತನೆಗೆ ತಯಾರಾದಾಗ!

ಎತ್ತು ಯಾಕೆ ಸತ್ತಿತು ಎಂದು ಕಾರಣ ಸೋಂಬಾನಿಗೆ ಸ್ಪಷ್ಟವಾಗಿ ಗೊತ್ತಿತ್ತು. ಅವನ ಹೊಲದ ಬದಿಯಲ್ಲೇ ಒಂದು ದೈತ್ಯಾಕಾರದ ಆಲದ ಮರವಿತ್ತು. ಅದರಲ್ಲಿ ವಾಸವಿದ್ದ ಚೌಡಿಗೆ, ಪ್ರತಿವರ್ಷ ಕೊಯ್ಲಿನ ನಂತರ ಕೆಂಪು ಹುಂಜನನ್ನು ಬಲಿ ಕೊಡುವುದು ರೂಢಿ. ಇದು, ಅವನಪ್ಪ, ಅಜ್ಜ, ಮುತ್ತಜ್ಜ ಇವರು ಪಾಲಿಸಿಕೊಂಡು ಬಂದ ಸಂಪ್ರದಾಯ. ಅನೂಚಾನವಾಗಿ ನಡೆದು ಬಂದ ಸಂಪ್ರದಾಯವನ್ನು ಈ ಭಾರಿ ಸೋಂಬಾ ಮುರಿದಿದ್ದ! ಚೌಡಿ ಬಿಟ್ಟಾಳೆಯೇ?

ಇವತ್ತು ಸೋಂಬಾನ ಆಹಂಕಾರ ಇಳಿದಿದೆ. ಅವನು ದೈನ್ಯದಿಂದ ಕೈ ಮುಗಿದುಕೊಂಡು ಆಲದ ಮರದ ಬುಡದಲ್ಲಿ ನಿಂತುಕೊಂಡಿದ್ದಾನೆ.

‘ನನಗೆ ಸರಿಯಾಗೇ ಬುದ್ಧಿ ಕಲಿಸಿದೆ ನನ್ನವ್ವ. ನನ್ನ ಎತ್ತು ನೆಗೆದುಬಿದ್ದೋಯ್ತು. ಹೋಗ್ಲಿ ಬಿಡವ್ವ. ಈಗ ನಾನು ಕೇಳೋದು ಇಷ್ಟೇ: ಹೊಸ ಎತ್ತು ಕೊಳ್ಳಲು ಸಾಲನೋ, ಭುಮಿ ಉಳಲು ಪಟೇಲರಿಂದ ಸಹಾಯವನ್ನೋ ಕೊಡಿಸು ತಾಯೇ. ಮುಂದಿನ ಅಮವಾಸೆಗೆ, ಎರಡು ಕೆಂಪು ಹುಂಜಗಳನ್ನು ನಿನಗೆ ಬಲಿ ಕೊಟ್ಟು ನಿನ್ನ ಋಣಾನ ತೀರಿಸ್ತೀನಿ.’ ಎನ್ನುತ್ತಾ ಚೌಡಿಗೆ ಗೋಳು ಹುಯ್ದು ಕೊಳ್ಳುತ್ತಿದ್ದಾನೆ.ಸೋಂಬಾ ಹೊಲದಿಂದ ಊರೊಳಗೆ ಬಂದಾಗ, ದೇವಸ್ಥಾನದೆದುರು ಕಟ್ಟೆಯ ಮೇಲೆ ಊರೇ ಸೇರಿತ್ತು. ಆಲದ ಮರದ ಕೆಳಗೆ ಒಂದು ಜೀಪು ನಿಂತಿತ್ತು. ದೊಗಳೆ ಖಾಕಿ ಶರಟು, ಚಲ್ಲಣ ಮತ್ತು ಮೊರದಗಲ ಹ್ಯಾಟು ಧರಿಸಿದ್ದ ಒಬ್ಬ ಬಿಳಿ ದೊರೆ ಅದರೊಳಗೆ ಕುಳಿತಿದ್ದ.

‘ಫಾರೆಸ್ಟರ್ ಸಾಹೇಬ್ರು ಬಂದವ್ರೇನ್ಲಾ?’ ಸೋಂಬಾ ಬಗಲಲ್ಲಿ ನಿಂತಿದ್ದವನನ್ನು ವಿಚಾರಿಸಿದ.‘ಫಾರೆಸ್ಟ್ರು ಬರೋದು ಸೈಕ್ಲಲ್ಲಿ ಕಣ್ಲಾ!’ ಅವನು ಉತ್ತರಿಸಿದ.

‘ಹಂಗಾದ್ರೆ ಇವನು ದನಗಳದ್ದೋ, ರೋಡುಗಳದ್ದೋ ಸಾಹೇಬನಿರಬೇಕು!’‘ನನ್ನ ಭಾಂದವರೇ, ಇಲ್ಲಿ ಕೇಳಿ!’ ಜೀಪಿನಿಂದ ಹೊರ ಬಂದು ಏರಿದ ದನಿಯಲ್ಲಿ ಕೂಗಿ ಹೇಳಿದ ಬಿಳಿ ಸಾಹೇಬ. ಎಲ್ಲರೂ ಉಸಿರು ಬಿಗಿ ಹಿಡಿದು ಸ್ಥಬ್ದರಾದಾಗ, ‘ನಿಮ್ಮ ಹೊಲಗಳಲ್ಲಿ ಒಂದಕ್ಕೆ ಮೂರರಷ್ಟು ಬೆಳೆ ಬೆಳೀಬೌದು!.. ಇದು ಹೇಗಂತಾ ನಿಮಗೆ ಹೇಳಲಿಕ್ಕೆ ನಾನಿಂದು ಬಂದಿದ್ದೇನೆ..!’

‘ಹೋ!.. ಇವನು ಅಗ್ರಿಕಲ್ಚರ್ ಸಾಹೇಬ! ಇಂಗ್ಲೆಂಡಿನಾಗ, ಒಂದು ಗುಂಡಿ ಅದುಮಿದರಾ ಮುವ್ವತ್ತು ಗಾಡಿ ಭತ್ತ ಬೆಳೀತದಾ ಎಂದು ಹೇಳಾಕ ಬಂದಿದ್ದಾನ!’ ಊರ ಗುಡಿಯ ಪೂಜಾರಿ ಹೇಳಿದ.ನೆರೆದವರೆಲ್ಲಾ ಒಮ್ಮೆ ಹೊಟ್ಟೆ ತುಂಬಾ ನಕ್ಕರು.

ಇವರ ಮಧ್ಯೆಯಿದ್ದ ಶಾನುಭೋಗನಿಗೆ ಸಿಟ್ಟು ಬಂದು, ‘ಸಾಯ್ಬಾ ಏನೇಳ್ತಾನೇಂತ ತಿಗ ಮುಚ್ಚಂಡು ಕೇಳುಸ್ಕಳ್ರಲ್ಲ! ಗಲಾಟೆ ಮಾಡಬೇಡಿ!’ ಎಂದು ಗದರಿದ.‘ನಿನ್ನ ಸಮಸ್ಯೆ ಏನಪ್ಪಾ?’ ಬಿಳಿಯ ಪೂಜಾರೀನ ಕೇಳಿದ.

ಎಲ್ಲರ ದೃಷ್ಟಿ ತನ್ನ ಮೇಲೆ ಹರಿದಾಗ ಪೂಜಾರಿ ಏನೂ ಅರಿಯದವನಂತೆ ನಟಿಸತೊಡಗಿದ.‘ನಾನು ಎತ್ತು ಕೊಳ್ಳಲು ಖಾವಂದರ ಬಳಿ ಸಾಲಕ್ಕಾಗಿ ಅರ್ಜಿ ಗುಜಾರಾಯಿಸಿದ್ದೆ. ನನ್ನ ಎತ್ತು ಸತ್ತು ಇಂದಿಗೆ ಸರಿಯಾಗಿ ಮೂರು ವಾರಗಳಾದವು. ಇದರ ಬಗ್ಗೆ ಸಾಹೇಬರು ಏನು ತೀರ್ಮಾನ ತೆಗೆದು ಕೊಂಡಿದ್ದೀರೆಂದು ತಿಳಿಯಲು ಆತುರನಾಗಿದ್ದೇನೆ…’ ಸೋಂಬಾ ಮುಂದೆ ಬಂದ.

‘ಜಪಾನಿಯರು ಹೇಗೆ ಭತ್ತ ಬೆಳೆಯುತ್ತಾರೆ, ಅಮೆರಿಕಾದಲ್ಲಿ ರೈತರು ಸಾವಿರಾರು ಎತ್ತುಗಳನ್ನು ಸಾಕಿ ಎಷ್ಟೊಂದು ಮಜೆಯಲ್ಲಿ ವೆವಸಾಯ ಮಾಡುತ್ತಾರೆ ಎಂದು ನಮಗೆ ಹೇಳಿ ಏನೂ ಪ್ರಯೋಜನವಿಲ್ಲ!’ ಒಬ್ಬ ಬಿಸಿ ರಕ್ತದ ರೈತ ಪ್ರತಿಭಟಿಸಿದ.

‘ನಿನ್ನಜ್ಜಿ ತಲೆ!’ ಬಿಳಿಯ ಸಿಟ್ಟಿನಿಂದ ಕೆಂಪು ಕೆಂಪಗಾದ. ‘ಅಮೆರಿಕೆಯಲ್ಲಿ ನಿಮ್ಮಂಗೆ ವೆವಸಾಯಕ್ಕೆ ಎತ್ತುಗಳನ್ನು ಉಪಯೋಗಿಸುವುದಿಲ್ಲ! ನಿಮ್ಮ ನೂರೆತ್ತುಗಳು ಮಾಡುವ ಕೆಲಸ ಅಲ್ಲಿಯ ಒಂದು ಮಿಶೀನು ಮಾಡುತ್ತೆ!’

‘ಎತ್ತುಗಳ ಕೆಲಸ ಮಿಶಿನುಗಳು ಮಾಡುವುದು ಸಾಧ್ಯನೇಯಿಲ್ಲಾ!’ ಸೋಂಬಾ ತಿರಸ್ಕಾರದಿಂದ ಹೇಳಿದ.‘ಒಂದು ಸಣ್ಣ ಟ್ರ್ಯಾಕ್ಟರು ಕೂಡ ನಿಮ್ಮ ಆರು ಜೋಡಿ ಎತ್ತುಗಳಿಗಿಂತ ಆಳವಾಗಿ ಮತ್ತು ವೇಗವಾಗಿ ಉಳುತ್ತದೆ.!’ ಬಿಳಿ ಸಾಹೇಬನ ಮಾತಿನಲ್ಲಿ ವ್ಯಂಗ್ಯವಿತ್ತು.

‘ಎತ್ತುಗಳು ಉತ್ತಂಗೆ ಮಿಶಿನಿಗೆ ಸಾಧ್ಯನೇ ಇಲ್ಲ.’ ತಿರಸ್ಕಾರದಿಂದ ಹೇಳಿದ ಸೋಂಬಾ.‘ನಿನ್ನ ಆರು ಜೋಡಿ ಎತ್ತುಗಳು ಮಾಡುವ ಕೆಲಸವನ್ನು ನನ್ನ ಸಣ್ಣ ಟ್ರ್ಯಾಕ್ಟರು ಮಾಡುತ್ತದೆ.’ ನಗೆಯಾಡಿದ ಸಾಹೇಬ.

‘ಆರು ಜೋಡಿ ಎತ್ತುಗಳು ಕುಡಿಯುವ ನೀರಿಗಿಂತ ಹೆಚ್ಚು ಪೆಟ್ರೋಲು ನಿಮ್ಮ ಟ್ರ್ಯಾಕ್ಟರು ಕುಡಿಯುತ್ತೆ!’ ಪೂಜಾರಿ ಎಂದ.

‘ಶ್ಶ್…ಶ್ಶ್..!’ ಶಾನುಭೋಗ ಪೂಜಾರಿಯನ್ನು ದುರುಗುಟ್ಟಿಕೊಂಡು ನೋಡಿದ. ಸಾಹೇಬ ಜೇಬಿನಿಂದ ಒಂದು ಖಾಕಿ ಕರವಸ್ತ್ರವನ್ನು ಹೊರತೆಗೆದು ಮುಖ ಒರೆಸಿಕೊಂಡ. ಸಿಟ್ಟಿನಿಂದ ಅವನು ಕೆಂಪಗಾಗಿದ್ದ.‘ನಿನ್ನಂತ ಮೂರ್ಖರಿರೋರಿಂದ್ಲೆ ಈ ದೇಶ ಇನ್ನೂ ಹಾಗೇ ಇದೆ. ನಿಮಗೆ ಹೊಸತೇನಾದರು ಕಲಿಯುವುದರಿರಲಿ, ನೋಡುವುದೂ ಬೇಡ! ನಿನ್ನ ಜೀವಮಾನದಲ್ಲಿ ಎಂದಾದರೂ ಟ್ರ್ಯಾಕ್ಟರ್ ಅನ್ನೋದನ್ನೇನಾದರೂ ಕಂಡಿದ್ದೀಯಾ?’‘ಟ್ರ್ಯಾಕ್ಟರುಗಳನ್ನೇನೋ ನೋಡಿದ್ದೇನೆ. ಉಳೋ ಟ್ರ್ಯಾಕ್ಟರನ್ನು ಮಾತ್ರ ಕಂಡಿಲ್ಲ.’ ಜನರ ಮಧ್ಯೆಯಿಂದ ಯಾರೋ ವ್ಯಂಗ್ಯದಿಂದ ಹೇಳಿದ.

‘ನಾಳೆ ನೋಡುವಿಯಂತೆ ಮಗನೇ! ಟ್ರ್ಯಾಕ್ಟರಿನಲ್ಲಿ ಒಂದು ಗೆರೆ ಉತ್ತು ತೋರಿಸ್ತೇನೆ. ಆಮೇಲೆ ಹೇಳುವಿಯಂತೆ, ನಿನ್ನ ಎತ್ತಿನ ಉಳುಮೆ ಹೇಗೆ ನನ್ನ ಟ್ರ್ಯಾಕ್ಟರ್ ಉಳುಮೆ ಹೇಗೇಂತ?’‘ಒಂದು ಗೆರೆ ಉಳಾದು ಇಡೀ ಹೊಲ ಉತ್ತಾಂಗಾಗ್ತದ ಸಾಹೇಬ? ಕೊನೆಯ ಹತ್ತು ಸಾಲುಗಳಲ್ಲೇ ಇರಾದು ಜೀವ ಅಂತಾರೆ ನಮ್ಮ ಹಿರೀಕರು.’

‘ಇಡೀ ಹೊಲ ಉಳ್ತಾ ಕೂತರೆ ನಾನು ದಿನಕ್ಕೆ ಎಷ್ಟು ಹಳ್ಳಿಗಂತಾ ಟ್ರ್ಯಾಕ್ಟರ್ ತೋರುಸ್ಲಿ? ಅಲ್ಲದೆ, ಇನ್ನೂ ಹೊಲ ಉಳದೆ ಹಂಗೇ ಬಿಟ್ಕಂಡಿರೋ ರೈತ ಯಾರವ್ನೆ?’‘ನನ್ನ ಹೊಲ ಹಂಗೇ ಖಾಲಿ ಬಿದ್ಕಂಡಿದೆ ಸಾಹೇಬ. ಆ ದೊಡ್ಡಾಲದ ಮರದ ಬುಡದಲ್ಲಿರೋದೆ ನನ್ನ ಹೊಲ.’ ಬೆಟ್ಟು ತೋರಿಸುತ್ತಾ ಹೇಳಿದ ಸೋಂಬಾ.

‘ಸರಿ, ಸರಿ.’ ಮತ್ತೊಮ್ಮೆ ಬೆವರು ಒರೆಸುತ್ತಾ ಹೇಳಿದ ಬಿಳಿ ಸಾಹೇಬ.ಮರುದಿನ ಬೆಳಿಗ್ಗೆ ಸೋಂಬಾನ ಹೊಲಕ್ಕೆ ಟ್ರ್ಯಾಕ್ಟರು ಬಂತು. ಟ್ರ್ಯಾಕ್ಟರಿನೊಟ್ಟಿಗೆ ಹ್ಯಾಟು ಧರಿಸಿದ್ದ ನಾಲ್ವರು ಸಹಾಯಕರೂ ಇದ್ದರು. ಊರಿನ ಜನಗಳ ಎದುರಿಗೆ ಸಣ್ನವನಾಗಬಾರದೆಂದು ಸಾಹೇಬ ಪೂರ್ವ ತಯಾರಿಯೊಂದಿಗೇ ಬಂದಿದ್ದ.

ಮಧ್ಯ್ಹಾನದೊಳಗೆ ಸೋಂಬಾನ ಹೊಲ ಉತ್ತು ಮುಗಿಸಿತ್ತು ಟ್ರ್ಯಾಕ್ಟರು. ಬೀಜ ಬಿತ್ತುವುದೊಂದೇ ಬಾಕಿ ಉಳಿದಿತ್ತು! ಸೋಂಬಾನ ಹೊಲ ಅವನ ಮುತ್ತಜ್ಜನ ಕಾಲದಲ್ಲೂ ಆ ಬಗೆಯಲ್ಲಿ ಉಳುಮೆ ಕಂಡಿರಲಿಲ್ಲ!

***

ಮುಂದಿನ ಅಮವಾಸೆಯ ರಾತ್ರಿ ಕತ್ತು ಕಳಕೊಂಡ ಎರಡು ಕೆಂಪು ಹುಂಜಗಳು ದೊಡ್ಡಾಲದ ಮರದ ಬುಡದಲ್ಲಿ ಬಿದ್ದು ಕೊಂಡಿದ್ದವು! ಈ ಭಾರಿ ಹರಕೆಯನ್ನು ತೀರಿಸಲು ಸೋಂಬಾ ಉದಾಸೀನ ಮಾಡಿರಲಿಲ್ಲ!

***

(ದಿವಂಗತ ಮನೋಹರ್ ಮಳ್ಗಾಂವ್‍ಕರ್ ರವರ Red Rooster  ಕಥೆಯ ಅನುವಾದ.)

 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಕೆಂಪು ಹುಂಜ: ಜೆ.ವಿ.ಕಾರ್ಲೊ

  1. ಹೀಗೆ ಟ್ರ್ಯಾಕ್ಟರ್ ನಲ್ಲಿ ಊಳಿ-ಊಳಿ, ರಾಸಾಯನಿಕ ಹಾಕಿ-ಹಾಕಿ
    ಹೊಲಗಳು ಕೂಡ ಕತ್ತು ಕಳೆದುಕೊಂಡ ಕೆಂಪು ಹುಂಜಗಳಂತೆ,
    ಸತ್ವ ಕಳೆದುಕೊಂಡಿವೆ.

Leave a Reply

Your email address will not be published. Required fields are marked *