ಕೆಂಪು ನೆರಳು!: ಎಸ್.ಜಿ.ಶಿವಶಂಕರ್

ವಾಸುದೇವರಿಗೆ ಗಾಢ ನಿದ್ರೆ. ಅಂತಾ ನಿದ್ರೆಯನ್ನು ಎಂದೂ ಮಾಡಿಲ್ಲ ಎನ್ನಿಸುವ ನಿದ್ರೆ. ಮೂರು ದಿನದಿಂದ ನಿದ್ರೆಯಿಲ್ಲದೆ ಹೈರಾಣಾಗಿದ್ದಕ್ಕೋ ಏನೋ..ಗಾಢ ನಿದ್ರೆ ಅವರಿಸಿತ್ತು! ಅಸ್ತಿತವನ್ನೇ ಮರೆಸಿದ ನಿದ್ರೆ! ದೇಹದ ಅರಿವಿಲ್ಲದ ನಿದ್ರೆ! ದೇಹದ ಭಾರವೇ ಇರಲಿಲ್ಲ! ತನಗೆ ಶರೀರವೇ ಇಲ್ಲ-ಎನ್ನುವಷ್ಟು ಹಗುರ, ನಿರಾಳ ಭಾವನೆ! ತಾನು ಬದುಕಿರುವೆನೋ? ಇಲ್ಲವೋ? ಜಾಗ, ಜಾವಗಳ ಅರಿವೇ ಇಲ್ಲದ ವಿಚಿತ್ರ ಹೊಚ್ಚ ಹೊಸ ಅನುಭವ! ಇಂತದು ಹಿಂದೆಂದೂ ಆಗಿರಲೇ ಇಲ್ಲ! ಎಲ್ಲಿರುವೆ? ಸಮಯ ಎಷ್ಟು? ಹಗಲೋ? ರಾತ್ರಿಯೋ? ಎಚ್ಚರವೇ ಇಲ್ಲ ಎಂದರೆ ಅದು ನಿದ್ರೆ. ತಾನು ಹಗಲು ಹೊತ್ತು ಮಲಗುವುದಿಲ್ಲ. ಅಂದರೆ ಇದು ರಾತ್ರಿಯೇ!

ಇಂತ ಅರಿವಿಲ್ಲದ ಕ್ಷಣಗಳಲ್ಲಿ ಕ್ಷೀಣ ಸರಬರ ಸದ್ದು! ಮೆಲುದನಿಯಲ್ಲಿ ಯಾರೋ ಮಾತಾಡುತ್ತಿದ್ದರು. ಗಾಲಿ ಕುರ್ಚಿಯ ಸದ್ದು. ಯಾವುದೋ ವಸ್ತುವನ್ನು ಸಾಗಿಸುತ್ತಿದ್ದಾರೆ ಎನಿಸಿತು. ಆದರೆ ಯಾರು? ಏನು? ಎಲ್ಲಿ..? ಆ ಸದ್ದು, ಆ ಮಾತು ಕೆಲ ನಿಮಿಷಗಳಲ್ಲಿ ನಿಂತಂತೆ ಭಾಸವಾಯಿತು. ನಿಧಾನಕ್ಕೆ ಪ್ರಜ್ಞೆ ಮರಳುತ್ತಿದೆ ಎನಿಸಿತು ವಾಸುದೇವರಿಗೆ. ಕೆಲವು ಕ್ಷಣಗಳಲ್ಲಿ ಎಚ್ಚರವಾಯಿತು. ಕಣ್ಣು ತೆರೆದರು.
ಕಾಣಿಸಿದ್ದು, ಮೇಲೆ ತಿರುಗುತ್ತಿದ್ದ ಫ್ಯಾನು, ಎದುರಿಂದ ತೂರಿ ಬರುತ್ತಿದ್ದ ಮಂದ ಬೆಳಕು! ಹಾಸಿಗೆಯ ಮೇಲೆ ಮಲಗಿರುವುದು ಅರಿವಾಯಿತು. ಆದರೆ ಮಲಗಿರುವುದು ತಮ್ಮ ಮನೆಯಲ್ಲಲ್ಲ್ಲ! ಮಗಳ ಮನೆಯಲ್ಲೂ ಅಲ್ಲ! ಅದು ಆಸ್ಪತ್ರೆ! ಹೌದು, ತಾನು ಆಸ್ಪತ್ರೆಯಲ್ಲಿರುವೆ! ಹಾಗಂತ ಖಾಯಿಲೆ ಇರಲಿಲ್ಲ! ಆದರೂ ಆಸ್ಪತ್ರೆಯಲ್ಲಿರಬೇಕಾಗಿತ್ತು! ದಿಂಬಿನಡಿಯಿಂದ ವಾಚು ತೆಗೆದು ಸಮಯ ನೋಡಿದರು. ಎರಡು ಗಂಟೆ. ರಾತ್ರಿ ಹಗಲಿನತ್ತ ಹೊರಳುತ್ತಿತ್ತು. ಎಚ್ಚರವಾಗುತ್ತಲೇ ದೇಹದ ಒಜ್ಜೆ ಕಾಣಿಸಿತು. ಎದ್ದು ಕುಳಿತು, ಎಡಪಕ್ಕ ನೋಡಿದರು. ತೀರಾ ಕ್ಷೀಣ ಬೆಳಕಿನಲ್ಲಿ ಪಕ್ಕದ ಮಂಚದಲ್ಲಿ ಪತ್ನಿ ಮಲಗಿರುವುದು ಕಂಡಿತು. ಅವರಿಗೆ ಎಲ್ಲ ನೆನಪಾಯಿತು. ಮೂರು ದಿನಗಳ ಹಿಂದೆಯಷ್ಟೆ ಅವರು ಪತ್ನಿಯೊಂದಿಗೆ ಆಸ್ಪತ್ರೆಗೆ ಬಂದಿದ್ದ! ಹಾಗೆಂದು ಅವರಿಗಾಗಲೀ ಅವರ ಪತ್ನಿಗಾಗಲೀ ಖಾಯಿಲೆ ಇರಲಿಲ್ಲ! ಅವರಾಗೇ ಆಸ್ಪತ್ರೆಗೆ ಬಂದಿರಲಿಲ್ಲ! ಅವರನ್ನೂ ಅವರ ಜೊತೆಗೆ ಒಂದು ಬಸ್ಸಿನಷ್ಟು ಜನರನ್ನು ಏರ್‌ ಪೋರ್ಟ್ ನಿಂದ ಕರೆದುಕೊಂಡು ಬಂದು ಆಸ್ಪತ್ರೆಯಲ್ಲಿ ಸೇರಿಸಿದ್ದರು!

ಬಾತ್ರೂಮಿಗೆ ಹೋಗುವ ಇಚ್ಛೆಯಾಗಿ ಮೆಲ್ಲನೆ ಮಂಚದಿಂದಿಳಿದು ಎದುರಿನಿಂದ ಬರುತ್ತಿದ್ದ ಬೆಳಕಿನ ಆಧಾರದ ಮೇಲೆ ಬಾತ್ರೂಮ್ ಇರುವ ಜಾಗ ನೆನಪು ಮಾಡಿಕೊಂಡು ಅತ್ತ ತಿರುಗಿದರು. ಎದುರಿನ ಎರಡು ಮಂಚಗಳತ್ತ ದೃಷ್ಟಿ ಹರಿಯಿತು. ಐದು ಗಂಟೆಗಳ ಹಿಂದೆ ಅಲ್ಲಿ ಮಲಗಿದ್ದವರು ಇರಲಿಲ್ಲ! ಮಂಚಗಳು ಖಾಲಿಯಾಗಿದ್ದವು! ಅವರ ಸೂಟ್‍ಕೇಸುಗಳು, ಮಂಚದ ಮೇಲೆ ಹರಡಿದ್ದ್ದ ಅವರ ಟವೆಲ್-ಯಾವುವೂ ಇರಲಿಲ್ಲ! ಎದೆ ಝಲ್ಲೆಂದಿತು!! ಒಮ್ಮೆಲೇ ತಲೆಗೆ ರಕ್ತ ಏರಿದಂತಾಯಿತು! ಹಣೆ ಬೆವರಿತು! ಬಾಯಲ್ಲಿನ ಪಸೆ ಆರಿತು! ಅವರಿಬ್ಬರು ಎಲ್ಲಿ? ಏನಾದರು? ಒಂದು ದಿನದ ಇಲ್ಲಿಗೆ ಬಂದಿದ್ದರು! ವಿಶ್ವದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ವೈರಸ್ಸಿಗೆ ಬಲಿಯಾದರೆ? ತಾನು ಕೇಳಿದ ಆ ಸರಬರ ಸದ್ದು ಅವರ ಶರೀರಗಳನ್ನು ಇಲ್ಲಿಂದ ಕರೆದುಕೊಂಡು ಹೋಗಿದ್ದೆ?! ಆಸ್ಪತ್ರೆಗೆ ಬಂದಾಗ ಅವರು ಸರಿಯಾಗೇ ಇದ್ದರಲ್ಲ! ಅವರು ದುಬೈಯಿಂದ ಬಂದವರು ಎಂದು ಒಬ್ಬ ನರ್ಸ್ ಹೇಳಿದ್ದರು. ಅವರನ್ನು ಆ ಮಾರಕ ವೈರಸ್ಸು ಆಹುತಿ ತೆಗೆದುಕೊಂಡು ಬಿಟ್ಟಿತೆ! ಅವರನ್ನು ಆಹುತಿ ತೆಗೆದುಕೊಂಡಿದ್ದು ತಮ್ಮನ್ನು ಬಿಟ್ಟೀತೆ? ಅವರು ತಮ್ಮೊಟ್ಟಿಗೇ ಇದ್ದವರು! ಅವರು ಉಪಯೋಗಿಸಿದ ಶೌಚಾಲಯವನ್ನೇ ತಾವೂ ಉಪಯೋಗಿಸಿದ್ದೇವೆ! ಅವರಿಗಿದ್ದ ಸೋಂಕು ತಮಗೆ ಅಂಟಿಕ್ಕೊಳ್ಳುತ್ತದೆ! ಅಂದರೆ ಇಲ್ಲಿಗೆ ತಮ್ಮ ಜೀವನ ಕೊನೆ? ಭಯ, ಅನಿಶ್ಚತೆಗಳೊಂದಿಗೆ ಇಲ್ಲಿಯವರೆಗೂ ಬಂದಿದ್ದೇ ಸಾಹಸ! ಬೆನ್ನಟ್ಟಿ ಬಂದ ಆ ವೈರಸ್ಸು ಕೊನೆಗೂ ತಮ್ಮನ್ನು ಹಿಡಿದುಬಿಟ್ಟಿತೆ? ಅವರಿಬ್ಬರ ವಿಷಯ ನಿಜವೆ? ಅದನ್ನು ಖಾತ್ರಿ ಪಡಿಸಿಕ್ಕೊಳ್ಳುವ ಬಗೆ ಹೇಗೆ? ಹಾ..ಅಲ್ಲಿ ಎದುರಿನ ಲೈಟು ಬರುತ್ತಿರುವ ಕಡೆ ನರ್ಸ್‍ಗಳಿದ್ದಾರೆ. ಅವರನ್ನು ಕೇಳಿದರೆ ವಿಶಯ ತಿಳಿಯುತ್ತದೆ.

ವಾಸುದೇವ್ ಕಾಲೆಳೆದುಕೊಂಡು ನರ್ಸುಗಳ ಕ್ಯೂಬಿಕಲ್ಲಿಗೆ ಹೋದರು. ಅದು ಖಾಲಿಯಾಗಿತ್ತು! ಕ್ಯುಬಿಕಲ್ ಹೊರಗಿದ್ದ ಎರಡು ವೀಲ್ ಚೇರುಗಳೂ ಇರಲಿಲ್ಲ! ಅಂದರೆ ಆ ಇಬ್ಬರನ್ನು ವೀಲ್ ಚೇರಿನಲ್ಲಿ ಆಚೆ ಸಾಗಿಸಿದರೆ? ಆದರೆ ಎಲ್ಲಿಗೆ? ಅವರು ಸತ್ತರೆ? ಆ ಸಾವು ಯಾರಿಗೂ ತಿಳಿಯಬಾರದು ಎಂದು ಸದ್ದಿಲ್ಲದೆ ಸಾಗಿಸಿದರೆ?
ಎದೆ ಬಡಿತ ಕಿವಿಗೆ ಕೇಳಿಸುವಷ್ಟು ಜೋರಾಗಿತ್ತು! ಮೂತ್ರಕ್ಕೆ ಹೋಗುವ ಇಚ್ಛೆಯೂ ಮರೆತು ಹೋಯಿತು. ಪತ್ನಿಯನ್ನು ಏಳಿಸಲೆ? ಆಗ ವಾರ್ಡಿನಲ್ಲಿದ್ದ ಇತರರೂ ಏಳುವರು? ವಿಷಯ ತಿಳಿದೊಡನೆಯೇ ನಿದ್ರೆ ಮರೆಸಿದ್ದ ಸಾವಿನ ಭಯ ಮರುಕಳಿಸುವುದು. ಐವತ್ತು ಮೂರು ಜನ ಎಂಟು ವಾರ್ಡುಗಳಲ್ಲಿ ನೆಮ್ಮದಿಯಿಂದ ನಿದ್ರಿಸುತ್ತಿದ್ದಾರೆ! ಇನ್ನಷ್ಟು ಹೊತ್ತು ಮಲಗಲಿ-ಪಾಪದ ಜನ. ಎದ್ದರೆ..? ಈ ಸುದ್ದಿ ತಿಳಿದರೆ ಮತ್ತೆಲ್ಲಿ ನಿದ್ರೆ..? ಆ ಇಬ್ಬರು ಸತ್ತಿರುವುದು ಖಾತ್ರಿಯಾದರೆ ಇಲ್ಲುಳಿದಿರುವ ಐವತ್ತೊಂದು ಜನ ಇನ್ನಷ್ಟು ಭಯಭೀತರಾಗಬಹುದು! ಈಗಾಗಲೇ ಎಲ್ಲ ಅರ್ಧ ಸತ್ತಿದ್ದಾರೆ!!

ಸಾವಿನ ಭಯ ಶುರುವಾಗಿದ್ದೇ ನಾಲ್ಕು ದಿನಗಳ ಹಿಂದೆ!
ವಾಸುದೇವ್ ಆ ಕ್ಷೀಣ ಬೆಳಕಿನಲ್ಲೇ ಮತ್ತೆ ಹಾಸಿಗೆಯ ಬಳಿ ವಾಪಸ್ಸು ಬಂದು ಕೂತರು!
ನಾಲ್ಕು ದಿನಗಳ ಹಿಂದಿನ ರಾತ್ರಿ ಅಮೆರಿಕಾದಲ್ಲಿ ಮಗಳ ಮನೆಯಲ್ಲಿದ್ದುದು ನೆನಪಾಯಿತು.
ರಾತ್ರಿ ಹನ್ನೊಂದು ಗಂಟೆಯ ಸಮಯ-ಆಗಷ್ಟೇ ನಿದ್ರೆ ಆವರಿಸಿತ್ತು. ಟಿವಿ ತುಂಬಾ ಆ ವೈರಸ್ಸಿನದೇ ಸುದ್ದಿ. ವಿವಿಧ ದೇಶಗಳಲ್ಲಿ ಎಷ್ಟು ಹರಡಿದೆ. ಎಷ್ಟು ಜನ ಸತ್ತಿದ್ದಾರೆ! ಅಲ್ಲಿನ ಸರ್ಕಾರಗಳು ಏನೇನು ಕ್ರಮ ಕೈಗೊಳ್ಳುತ್ತವೆ ಇತ್ಯಾದಿ ಇತ್ಯಾದಿ. ಅಮೆರಿಕಾದ ಮಗಳ ಮನೆಯಲ್ಲಿ ಕಳೆದ ಐದು ತಿಂಗಳಿಂದ ವಾಸು ದಂಪತಿಗಳು ವಾಸಿಸುತ್ತಿದ್ದರು. ಮೊಮ್ಮಗನೊಂದಿಗೆ ಸಮಯ ಕಳೆಯುತ್ತಾ ಸುಖವಾಗಿ ಕಾಲ ಕಳೆದಿದ್ದರು. ಇನ್ನು ಹದಿನೈದು ದಿನಗಳಲ್ಲೇ ಬೆಂಗಳೂರಿಗೆ ವಾಪಸ್ಸಾಗಬೇಕಿತ್ತು. ಆಗಲೇ ಚೀನಾದಲ್ಲಿ ವಿಚಿತ್ರವಾದ ವೈರಸ್ ರಕ್ತಬೀಜಾಸುರನಂತೆ ಅಟ್ಟಹಾಸ ಮಾಡತೊಡಗಿತ್ತು. ನೂರರ ಸಂಖ್ಯೆಯಲ್ಲಿ ಸಾಯುತ್ತಿದ್ದವರ ಸಂಖ್ಯೆ ಸಾವಿರಕ್ಕೆ ಏರಿತ್ತು! ಅದು ಲಕ್ಷವನ್ನು ಮುಟ್ಟುವಂತಿತ್ತು! ದಿನದಿಂದ ದಿನಕ್ಕೆ ಸಾಯುವವರ ಸಂಖ್ಯೆ ದ್ವಿಗುಣ, ತ್ರಿಗುಣಗೊಳ್ಳುತ್ತಿತ್ತು! ಸಾವಿನ ಸಂಖ್ಯೆ ನೋಡಿಯೇ ಜನ ಸತ್ತಂತಾಗಿದ್ದರು! ಅದು ಹೊಸ ವೈರಸ್ಸಂತೆ! ಅದಕ್ಕೆ ಔಷಧಿ ಇಲ್ಲ ಎಂದು ಜಾಗತಿಕ ಮಟ್ಟದಲ್ಲಿ ಮಾತುಕತೆ ನಡೆದಿತ್ತು. ವಿಜ್ಞಾನಿಗಳು ತಲೆ ಕೆಡಿಸಿಕೊಂಡಿದ್ದರು. ಆ ವೈರಸ್ಸು ಮನುಷ್ಯರ ಸಂಪರ್ಕದಿಂದ ಹರಡುತ್ತಿತ್ತು. ನೋಡು ನೋಡುತ್ತಲೇ ಅದು ವಿಶ್ವದ ಎಲ್ಲೆಡೆ ಬೆಳಕಿನ ವೇಗದಲ್ಲಿ ಹರಡಿ, ಜಗತ್ತನ್ನು ತಲ್ಲಣಗೊಳಿಸಿತ್ತು! ಇನ್ನು ಹದಿನೈದು ದಿನಗಳಲ್ಲಿ ಸ್ವದೇಶಕ್ಕೆ ವಾಪಸ್ಸಾಗುವ ಸಮಯದಲ್ಲಿ ಇಂತ ವಿಪತ್ತು ಎದುರಾಗಿತ್ತು! ವೀಸಾ ನಿಯಮದಂತೆ ಇನ್ನು ಇಪ್ಪತ್ತು ದಿನಗಳಷ್ಟೆ ಅಲ್ಲಿರಬಹುದಿತ್ತು! ಮಾನವ ಸಂಪರ್ಕದಿಂದ ವೈರಸ್ಸು ಹರಡುತ್ತಿರುವುದರಿಂದ ವಿದೇಶ ಪ್ರಯಾಣ ನಿಷೇಧಿಸುವ ಮಾತು ನಡೆಯುತ್ತಿತ್ತು. ಅಂದರೆ ತಾವುಗಳು ಬೆಂಗಳೂರಿಗೆ ವಾಪಸ್ಸಾಗಲು ವಿಮಾನಗಳೇ ಇರುವುದಿಲ್ಲ!

ಬಾಗಿಲ ಮೇಲೆ ಮೆಲ್ಲನೆ ಬಡಿದ ಶಬ್ದಕ್ಕೆ ಎಚ್ಚರವಾಗಿತ್ತು. ಎದ್ದು ಹೋಗಿ ಬಾಗಿಲು ತೆರೆದಾಗ ಮಗಳು ಕಾಣಿಸಿದ್ದಳು!
“ಬ್ಯಾಡ್ ನ್ಯೂಸ್. ಭಾರತಕ್ಕೆ ವಿದೇಶಗಳಿಂದ ಬರೋ ವಿಮಾನಗಳಿಗೆ ಧಿಗ್ಭಂದನ ಹಾಕಿದೆ. ಎಲ್ಲಾ ಕಡೆ ಹರಡಿರೋ ವೈರಸ್ ತಡೆಯೋಕೆ ಈ ಕ್ರಮ. ಇನ್ನು ಮೂರು ದಿನಗಳಲ್ಲಿ ಅಲ್ಲಿಗೆ ವಾಪಸ್ಸಾಗುವವರಿಗೆ ಮಾತ್ರ ಅವಕಾಶ!” ಆತಂಕದಿಂದ ಹೇಳಿದ್ದಳು.
“ಮತ್ತೆ ನಾವು ಹದಿನೈದು ದಿನದ ಮೇಲೆ ಹೊರಟರೆ ನಮ್ಮನ್ನ ಸೇರಿಸ್ಕೊಳ್ಳಲ್ಲ” ವಾಸು ಪತ್ನಿ ವಸಂತ ಆತಂಕಗೊಂಡಿದ್ದರು.
“ಹೌದು. ಅಲ್ಲೂ ಈಗ ಹರಡ್ತಾ ಇದೆ. ಐದಾರು ಜನ ಸತ್ತಿದ್ದಾರೆ! ಇದು ಹರಡ್ತಿರೋದೇ ಬೇರೆ ದೇಶಗಳಿಂದ ಬಂದವರಿಂದ. ಈಗೇನ್ಮಾಡ್ತೀರ..?”
“ಏನ್ಮಾಡೋದು? ಮೂರು ದಿನದ ಒಳಗೆ ವಾಪಸ್ಸಾಗಿ ಮನೆ ಸೇರ್ಕೋಬೇಕು. ಫ್ಲೈಟ್ ರೀಶೆಡ್ಯೂಲ್ ಮಾಡು. ಆಮೇಲೆ ಇಲ್ಲಿದ್ದರೆ ವೀಸಾ ತೊಂದ್ರೆ ಬೇರೆ” ವಾಸುದೇವರ ದನಿಯಲ್ಲಿ ಗಾಬರಿಯಿತ್ತು.
“ವೀಸಾ ವಿಶಯ ಸಾಲ್ವ್ ಮಾಡ್ಕೊಳ್ಳೋಣ. ಇನ್ನೆರಡು ತಿಂಗಳಿದ್ದು ಹೋಗಿ”
“ಅಯ್ಯೋ ಇಲ್ಲ. ಸಂತೋಷ, ಪದ್ಮ ಗಾಬರಿಯಾಗ್ತಾರೆ” ಮಗ, ಸೊಸೆ, ಮೊಮ್ಮಕ್ಕಳನ್ನು ನೆನೆದು ಹೇಳಿದರು ವಾಸುದೇವ್.
“ಬೆಳಿಗ್ಗೆ ಯಾವ್ದಾದ್ರೂ ಫ್ಲೈಟಿದೆಯಾ ನೋಡ್ತೀನಿ..ಪ್ಯಾಕ್ ಮಾಡ್ಕೊಂಡು ರೆಡಿಯಾಗಿ” ಮಗಳು ಸುಮಾ ಹೇಳಿ
“ಬೆಳಿಗ್ಗೇನೇ? ಇದ್ದಕ್ಕಿದ್ದ ಹೇಗೆ ಹೊರಡೋದು?”
“ಅದಕ್ಕೇ ಇರಿ ಅಂತ ಹೇಳಿದ್ದು”
“ಅಯ್ಯೋ ಮತ್ತೆ ಹೋಗೋಕೇ ಆಗ್ದಿದ್ರೆ..?”
“ಹಾಗೇನೂ ಆಗೊಲ್ಲ”
“ಹೇಗೋ ಹೊರಟುಬಿಡ್ತೀವಿ..ನೋಡು ಯಾವ್ದಾದ್ರೂ ಫ್ಲೈಟ್ ಸಿಗುತ್ತಾ..?”
“ಸರಿ” ಮಗಳು ಹೋಗಿದ್ದಳು.
“ಇದೆಂತಾ ಪರಿಸ್ಥಿತಿ?”
“ಅದೆಲ್ಲಾ ಯೋಚನೆ ಬೇಡ! ಈಗ ಬಟ್ಟೆ, ಬರೆ ಪ್ಯಾಕ್ ಮಾಡ್ಕೊಳ್ಳೋಣ..”
“ಮೂರ್ನಾಲ್ಕು ಗಂಟೆ ಒಳಗೆ ಹೇಗ್ರೀ ಪ್ಯಾಕ್ ಮಾಡ್ಕೊಳ್ಳೋದು..?”
“ಎಲ್ಲಾ ಸುಮ್ನೆ ಸೂಟ್ ಕೇಸಲ್ಲಿ ತುಂಬ್ಕೊಳ್ಳೋಣ”
ಹನ್ನೆರಡು ಗಂಟೆ ಸುಮಾರಿಗೆ ಮಗಳು ಮತ್ತೆ ಬಂದಿದ್ದಳು. ಅವಳಿಗೂ ನಿದ್ರೆಯಿರಲಿಲ್ಲ.
“ಬೆಳಿಗ್ಗೆ ಹತ್ತಕ್ಕೆ ಒಂದು ಫ್ಲೈಟಿದೆ. ಅದು ಆಮ್‍ಸ್ಟರ್‍ಡ್ಯಾಮ್ ಮೇಲೆ ಹೋಗುತ್ತೆ. ಆಗುತ್ತಾ? ಹೂ ಅಂದ್ರೆ ಬುಕ್ ಮಾಡ್ತೀನಿ”
“ಬೇರೆ ದಾರಿ ಇಲ್ವಲ್ಲ? ಪುಟ್ಟಂಗೆ ಷಾಕಾಗುತ್ತೆ. ಬೆಳಿಗ್ಗೆ ಅವನೆದ್ದಾಗ ನಾವಿರೋದೇ ಇಲ್ಲ”
ಮಗಳು ತುಟಿ ಕಚ್ಚಿಕೊಂಡಳು. ಕಣ್ಣಲ್ಲಿ ನೀರು ಕಾಣಿಸಿತು. ಅದನ್ನು ಮುಚ್ಚಿಕ್ಕೊಳ್ಳಲು ಆಕೆ ಹಿಂತಿರುಗಿ, ಟಿಕೆಟ್ ಬುಕ್ ಮಾಡಲು ತೆರಳಿದ್ದಳು.
ನಿದ್ರೆ ಹಾರಿತ್ತು. ಬಟ್ಟೆ ಬರೆ ತುಂಬಿಕೊಂಡಿದ್ದು ಮುಗಿದಾಗ ಬೆಳಗಿನ ಮೂರು ಗಂಟೆ!
“ಇನ್ನೇನು ಮಲಗೋದು? ನೀವು ಸ್ನಾನ ಮಾಡಿ ಬನ್ನಿ..”

**

ಸದಾ ಗಿಜಿಗಿಜಿ ಎನ್ನುವ ನ್ಯೂಯಾರ್ಕ್ ಏರ್‌ ಪೋರ್ಟ್ ಅಕ್ಷಶಃ ಖಾಲಿಯಾಗಿತ್ತು. ಅಲ್ಲೊಬ್ಬರು ಇಲ್ಲೊಬ್ಬರು ಕಾಣಿಸುತ್ತಿದ್ದರು. ಕಂಡವರೆಲ್ಲಾ ಮುಖಗವುಸು, ಹ್ಯಾಂಡ್ ಗ್ಲೌಸಿನಲ್ಲಿದ್ದರು. ವೈರಸ್‍ನ ಭೀಕರತೆ ಗೋಚರಿಸುತ್ತಿತ್ತು. ಚೆಕ್-ಇನ್ ಕೌಂಟರಿನಲ್ಲಿ ನಿಂತಿದ್ದವರು ವಾಸು ದಂಪತಿಗಳು ಮಾತ್ರ! ಹತ್ತೇ ನಿಮಿಷದಲ್ಲಿ ಬ್ಯಾಗೇಜ್ ಚೆಕ್ ಆಯಿತು. ಮೂವತ್ತು ಕೆ.ಜಿ ತೂಕ ಮಾತ್ರ ನಿಗಧಿತವಾಗಿತ್ತು. ಆತುರದಲ್ಲಿ ತೂಕ ಚೆಕ್ ಮಾಡಿಕ್ಕೊಳ್ಳಲೂ ಸಾಧ್ಯವಿರಲಿಲ್ಲ. ಇಬ್ಬರದೂ ಸುಮಾರು ಮೂವತ್ತು ಕೆ.ಜಿ ಮೇಲೆಯೇ ಇತ್ತು ಆದರೂ ಚೆಕ್-ಇನ್ ಕೌಂಟರಿನಲ್ಲಿ ಹೆಚ್ಚಿಗೆ ಲಗ್ಗೇಜು ಛಾರ್ಜು ಕೊಡಬೇಕೆಂದು ತಕರಾರು ಮಾಡಲಿಲ್ಲ!
“ಸರ್, ನೀವು ಹೇಗೂ ಬೇಗ ಬಂದಿದ್ದೀರ. ಒಂಬತ್ತರ ಫ್ಲೈಟಿಗೆ ಹೋಗಬಹುದು. ಹೂ ಎಂದರೆ ಅದರ ಬೋರ್ಡಿಂಗ್ ಪಾಸ್ ಇಶ್ಯೂ ಮಾಡ್ತೀನಿ”
ಬೇಗನೆ ಹೋಗಬೇಕೆಂದಿದ್ದ ವಾಸುದೇವ್, ಆಕೆಯ ಮಾತಿಗೆ ‘ಆಗಲಿ’ ಎಂದರು.

ಫ್ಲೈಟ್ ಏರಿದಾಗ ಅದೂ ಬರಿದು. ಎಲ್ಲೆಲ್ಲೂ ಸ್ಮಷಾನ ಮೌನ. ಧಿಗಿಲು ಹುಟ್ಟಿಸುವ ವಾತಾವರಣ. ಒಂಬತ್ತು ಜನರು ಕೂರಬಹುದಾದ ಸೀಟುಗಳ ಒಂದೊಂದು ಸಾಲಿನಲ್ಲಿ ಒಬ್ಬರು ಇಲ್ಲ ಇಬ್ಬರಿದ್ದರಷ್ಟೆ. ಕೆಲವು ಸಾಲಿನಲ್ಲಂತೂ ಯಾರೂ ಇರಲಿಲ್ಲ. ತಮ್ಮ ಸೀಟಿನಲ್ಲಿ ಕೂತಾಗ ನಿಟ್ಟುಸಿರು ಬಿಡಲೂ ಭಯವಾಗಿ ತಡೆದುಕೊಂಡರು ವಾಸುದೇವ್.
ಫ್ಲೈಟಿನಲ್ಲಿ ಸರ್ವ್ ಮಾಡಿದ ಬ್ರೇಕ್‍ಫಾಸ್ಟ್ ತಿನ್ನಲೂ ಭಯವಾಯಿತು. ‘ಎಲ್ಲೂ, ಏನೂ ಮುಟ್ಟಬೇಡಿ. ಯಾರ ಜೊತೆಯೂ ಮಾತಾಡಬೇಡಿ. ಯಾರ ಹತ್ತಿರವೂ ಹೋಗಬೇಡಿ. ಎಲ್ಲೂ ಏನೂ ತಿನ್ನಬೇಡಿ’ ಮಗಳು, ಅಳಿಯ ಎಚ್ಚರಿಸಿದ್ದರು. ಮಗಳು ಚಪಾತಿಗಳನ್ನು ಚಟ್ನಿಪುಡಿ, ತುಪ್ಪ ಲೇಪಿಸಿ ಪ್ಯಾಕ್ ಮಾಡಿ ಕೊಟ್ಟಿದ್ದಳು. ‘ಬೆಂಗ್ಳೂರು ಮುಟ್ಟುವವರೆಗೂ ಇದನ್ನೇ ತಿನ್ನಿ. ಸ್ಯಾನಿಟೈಸರ್ ಆಗಾಗ್ಗೆ ಬಳಸಿ’ ಎಂದಿದ್ದರು ಅಳಿಯ, ಮಗಳು. ಭಯ..ಭಯ..ಎಲ್ಲಿ ಸೋಂಕು ಹತ್ತುವುದೋ..? ಬೆಂಗ್ಳೂರು ತಲುಪುತ್ತೇವೋ ಇಲ್ಲವೋ?

ಆಮ್‍ಸ್ಟರ್‍ಡ್ಯಾಮಿನಲ್ಲೂ ಇದೇ ಅನುಭವ. ಮಾಸ್ಕ್ ಧರಿಸಿದ್ದರಿಂದ ತಮ್ಮದೇ ಉಸುರಿನ ಶಾಖಕ್ಕೆ ಬೆವರುವಂತಾಗುತ್ತಿತ್ತು, ಸರಾಗವಾಗಿ ಉಸಿರಾಡಲಾಗದೆ ಉಸಿರುಕಟ್ಟುತ್ತಿತ್ತು. ಕೆಲವು ಗಂಟೆಗಳ ನಂತರ ತಮ್ಮದೇ ಬಾಯಿ ವಾಸನೆ ಅಸಹ್ಯವಾಗತೊಡಗಿತ್ತ್ತು! ಆದರೆ ಮಾಸ್ಕ್ ತೆಗೆಯುವಂತಿರಲಿಲ್ಲ. ಹಾಗೆ ಮಾಡಿದರೆ ಸೋಂಕು ತಗುಲುವುದು ಎಂಬ ಭಯ!
ಉಸಿರು ಕಟ್ಟಿಕೊಂಡು ಬೆಂಗಳೂರು ಏರ್‌ ಪೋರ್ಟ್ ತಲುಪಿದಾಗ ನಿಜಕ್ಕೂ ನಾವು ಬದುಕಿದೆವು ಎನಿಸಿತು! ಸ್ವದೇಶ ತಲುಪಿಬಿಟ್ಟೆವು! ಎಂದು ಖುಷಿಯಾಯಿತು. ಆದರೆ ಆ ಖುಷಿ ಬಹಳ ಕಾಲ ಇರಲಿಲ್ಲ.
ಫ್ಲೈಟಿನಿಂದ ಈಚೆ ಬರುತ್ತಲೇ ಎಲ್ಲರಿಗೂ ಎರಡೆರಡು ಫಾರಮ್ಮುಗಳನ್ನು ಕೊಟ್ಟರು. ಅದರಲ್ಲಿ ಬಂದ ದೇಶ, ವಿಮಾನದ ನಂಬರು, ಸೀಟು ನಂಬರು, ಫೋನ್ ನಂಬರು ಬರೆದು ಕೊಡಬೇಕಾಗಿತ್ತು. ಭರ್ತಿ ಮಾಡಿದ ಫಾರಮ್ ಕೊಟ್ಟವರ ಹಣೆಗೆ ಥರ್ಮಲ್ ತರ್ಮಾಮೀಟರು ಇಟ್ಟು ಉಷ್ಣಾಂಶ ನೋಡಿ ಮುಂದೆ ಕಳಿಸಿದರು. ಇಮಿಗ್ರೇಶನ್ನಿನಲ್ಲೂ ಜನರಿಲ್ಲ. ಹೆಚ್ಚು ಪ್ರಶ್ನೆಗಳಿಲ್ಲ!
ಬ್ಯಾಗೇಜು ಕಲೆಕ್ಟ್ ಮಾಡಿಕೊಂಡು ಟ್ರಾಲಿ ತಳ್ಳಿಕೊಂಡು ಬರುವಾಗ ಬೆಂಗಳೂರಿನ ಏರ್‌ ಪೋರ್ಟ್ ನಿರ್ಜನವಾಗಿರುವುದು ಕಾಣಿಸಿತು. ತಮ್ಮ ಜೊತೆ ಬಂದ ಪ್ರಯಾಣಿಕರನ್ನು ಬಿಟ್ಟರೆ ಉಳಿದಂತೆ ಜನವೇ ಇಲ್ಲ! ವಿರಳವಾಗಿ ಕೆಲವು ಸರ್ಕಾರಿ ಅಧಿಕಾರಿಗಳು ಅಲ್ಲಲ್ಲಿ ಅಡ್ಡಾಡುತ್ತಿದ್ದರು. ಇಲ್ಲಿಯೂ ಎಲ್ಲರೂ ಮುಖಗವುಸಿನಲ್ಲಿ ಕಾಣಿಸಿದರು.

ಗ್ರೀನ್ ಚಾನಲ್ಲಿನಲ್ಲಿ ಈಚೆ ಬರುತ್ತಲೇ ಸರ್ಕಾರದ ಆರೋಗ್ಯ ಇಲಾಖೆಯವರು ತಡೆದು ಎಲ್ಲರನ್ನೂ ತಡೆದು ಪ್ರಯಾಣದ ಮಾಹಿತಿ, ಮೊಬೈಲು ನಂಬರು ತೆಗೆದುಕೊಂಡು, ‘ಎಲ್ಲ ಆಸ್ಪತ್ರೆಯಲ್ಲಿ ಸ್ಕ್ರೀನಿಂಗಿಗೆ ಹೋಗಬೇಕು, ಇದು ಕಡ್ಡಾಯ. ಬಸ್ ಹತ್ತಿ, ತಪ್ಪಿಸಿಕೊಂಡರೆ ನಿಮ್ಮ ಮನೆಗೆ ಹುಡುಕಿಕೊಂಡು ಬರ್ತೀವಿ. ಇದು ನಿಮಗಾಗಿ, ನಿಮ್ಮ ಮತ್ತು ದೇಶದ ಕ್ಷೇಮಕ್ಕಾಗಿ’ ಎಂದರು.. ಗತ್ಯಂತರಿವಿಲ್ಲದೆ ಭಾರಿಯಾಗಿದ್ದ ಸೂಟ್ಕೇಸುಗಳನ್ನು ಎತ್ತಲಾರದೆ ಹೆಣಗಿದರು ಪ್ರಯಾಣಿಕರು.

ಆಸ್ಪತ್ರೆಯಲ್ಲಿ ಬಂದವರನ್ನು ಎರಡು ವರ್ಗಗಳಾಗಿ ವಿಂಗಡಿಸಿದರು. ಯುವಕರಿಗೆ ಹದಿನಾಲ್ಕು ದಿವಸ ನಿಮ್ಮ ಮನೆಯಲ್ಲೇ ಏಕಾಂತವಾಗಿರಬೇಕು ಎಂದು ಎಡಗೈಮೇಲೆ ಸೀಲ್ ಹಾಕಿ ಕಳಿಸಿದರು. ಅರವತ್ತು ವರ್ಷ ಮತ್ತು ಅದಕ್ಕೂ ಮೀರಿದವರ ಬಳಿ ಮತ್ತೆ ಅರ್ಜಿ ತುಂಬಿಸಿಕೊಂಡು ನೀವು ಆಸ್ಪತ್ರೆಯಲ್ಲಿ ಹದಿನಾಲ್ಕು ದಿನ ಇರಲೇಬೇಕು. ನಂತರ ನಿಮ್ಮನ್ನು ಮನೆಗೆ ಕಳಿಸುತ್ತೇವೆ. ಎಂದು ಒಂದು ಕಡೆ ಕೂರಿಸಿದರು.
ಇಪ್ಪತ್ನಾಲ್ಕು ತಾಸು ಮೀರಿತ್ತು ಒಟ್ಟು ಪ್ರಯಾಣ, ಭಯದ ಕ್ಷಣಗಳಲ್ಲಿ, ಕಣ್ಣೆವೆಯನ್ನೂ ಮುಚ್ಚಲು ಸಾಧ್ಯವಾಗದೆ ಹೈರಾಣಾಗಿದ್ದ ವಾಸುದೇವ ಅಲ್ಲಿನ ಮುಖ್ಯಸ್ಥರಂತೆ ಕಾಣುತ್ತಿದ್ದ ಒಬ್ಬರ ಹತ್ತಿರ ಹೋಗಿ ಬೇಸರದಿಂದ ಕೇಳಿದರು.

“ಇನ್ನೂ ಎಷ್ಟೊತ್ತು ಇಲ್ಲಿ ಕೂರಿಸ್ತೀರಿ? ನಾವು ವಯಸ್ಸಾದವರು, ಬೇಗ ನಾವೆಲ್ಲಿರಬೇಕು ಅಲ್ಲಿಗೆ ಕರೆದುಕೊಂಡು ಹೋಗಿ”
“ಅಯ್ತು, ಆಯ್ತು..ಇನ್ನೇನು ಹತ್ನಿಮಿಷ ಅಷ್ಟೆ” ಎಂದವರು ಸಮಾಧಾನಿಸಿದ್ದರು.
ಆಚೆ ಭಾರದ ಲಗ್ಗೇಜು ಇತ್ತು. ಅದನ್ನು ಎತ್ತಿಕೊಂಡು ಒಳಗೆ ಬರಲಾಗಲಿಲ್ಲ, ಅದಕ್ಕೆ ಅವೆಲ್ಲಾ ಹೊರಗೇ ಬಿಟ್ಟು ಬಂದಿದ್ದರು. ಅದರ ಸುರಕ್ಷತೆಯ ಯೋಚನೆಯೂ ಕಿರಿಕಿರಿಯಾಗಿ ಹಿಂಸಿಸುತ್ತಿತ್ತು!
ಕೊನೆಗೊಮ್ಮೆ ಎಲ್ಲರನ್ನೂ ಬಸ್ಸು ಹತ್ತುವಂತೆ ಹೇಳಿದರು. ಭಾರದ ಲಗ್ಗೇಜುಗಳನ್ನು ಎತ್ತಲಾರದೆ ವಾಸುದೇವರು ಎರಡು ಸಲ ಮುಗ್ಗರಿಸಿದ್ದರು. ಅಂತೂ ಹೇಗೋ ಲಗ್ಗೇಜನ್ನು ಬಸ್ಸುಗೆ ಏರಿಸಿ ಕೂತಾಗ ಯಾರೋ ಒಬ್ಬರು ಕೇಳಿದರು.

“ನಮ್ಮನ್ನು ಎಲ್ಲಿಗೆ ಕರ್ಕೊಂಡು ಹೋಗ್ತಿದ್ದೀರಿ?”
“ಏರ್‌ ಪೋರ್ಟ್ ಹತ್ತಿರದ ಎಲ್ಲಾ ಹಾಸ್ಪಿಟಲ್ ತುಂಬಿ ಹೋಗಿದಾವೆ. ನಿಮ್ಮನ್ನು ಹೊಸಕೋಟೆ ಹತ್ತಿರ ಇರೋ ಆಸತ್ರೆಗೆ ಕರ್ಕೊಂಡು ಹೋಗ್ತಿದ್ದೀವಿ. ಅಲ್ಲೇ ನೀವು ಹದಿನಾಲ್ಕು ದಿವಸ ಇರಬೇಕು”
ಎಂದು ಹೇಳಿ ಎಡಗೈ ಮೇಲೆ ಸೀಲ್ ಒತ್ತಿದ್ದರು.
“ಈ ಸೀಲು ಇರುವತನಕ ನೀವು ಎಲ್ಲಿಯೂ ಪ್ರಯಾಣ ಮಾಡುವಂತಿಲ್ಲ..ಹದಿನಾಲ್ಕು ದಿನಗಳಲ್ಲಿ ಸೀಲು ತಂತಾನೇ ಅಳಿಸಿಹೋಗುತ್ತದೆ. ನಿಮ್ಮನ್ನು ಮನೆಗೆ ಕಳಿಸುವ ಜವಾಬ್ದಾರಿ” ಎಂದಿದ್ದರು.
ಆ ಆಸ್ಪತ್ರೆಯನ್ನು ವಿದೇಶದಿಂದ ಬಂದ ಜನರಿಗಾಗಿ ಮೀಸಲಾಗಿರಿಸಿದ್ದರು. ಅಲ್ಲಿಗೆ ಬೇರೆ ಯಾರೂ ಬರುವಂತಿರಲಿಲ್ಲ. ಅನುಮತಿಯಿದ್ದ ನರ್ಸುಗಳು, ಡಾಕ್ಟರುಗಳು ಮತ್ತು ಹೌಸ್ ಕೀಪಿಂಗಿನ ಸಿಬ್ಬಂದಿ ಮೈತುಂಬಾ ಪರ್ಸನಲ್ ಪ್ರೊಟೆಕ್ಟೀವ್ ಎಕ್ವಿಪ್ಮೆಂಟ್ ಧರಿಸಿ ತಮ್ಮೊಂದಿಗೆ ವ್ಯವಹರಿಸುತ್ತಿದ್ದರು.

ಅಂತಾ ಐಸೊಲೇಶನ್ ಜನರಲ್ ವಾರ್ಡಿನಲ್ಲಿ ಎರಡು ದಿನ ಕಳೆದದ್ದು ನೆನಪಾಯಿತು. ನೆನ್ನೆಯಷ್ಟೇ ದುಬೈನಿಂದ ಬಂದಿದ್ದ ಇಬ್ಬರು ತಮ್ಮ ವಾರ್ಡಿನಲ್ಲೇ ಇದ್ದರು! ಬಂದಾಗಲೇ ಒಬ್ಬ ಸಣ್ಣಗೆ ಕೆಮ್ಮುತ್ತಿದ್ದ. ಇನ್ನೊಬ್ಬನಿಗೆ ನೆಗಡಿ. ಅವೆರಡೂ ಸೋಂಕಿನ ಲಕ್ಷಣಗಳೆಂದು ತಮ್ಮೊಂದಿಗಿದ್ದ ಜನರು ಗುಸುಗುಸು ಮಾತಾಡಿಕ್ಕೊಳ್ಳುತ್ತಿದ್ದರು. ಆ ಇಬ್ಬರನ್ನು ಗಂಟೆಗೊಮ್ಮೆ ತಪಾಸಣೆ ಮಾಡುತ್ತಿದ್ದರು. ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ವಾರ್ಡಿನ ಎಲ್ಲಾ ಲೈಟುಗಳನ್ನು ಆರಿಸಿದ್ದರು. ಎಲ್ಲರಿಗೂ ನಿದ್ರೆ ಹತ್ತಿತ್ತು.

ವಾಸುದೇವರು ಅರೆ ನಿದ್ರೆಯಲ್ಲಿ ಏನೋ ಶಬ್ದ ಆಲಿಸಿದ್ದರು. ಅದು ದುಬೈಯಿಂದ ಬಂದ ಆ ಇಬ್ಬರನ್ನು ಸಾಗಿಸಿದ್ದೇ ಇರಬೇಕು ಎನ್ನುವ ಅನುಮಾನ! ರಾತ್ರೋರಾತ್ರಿ ಖಾಲಿಯಾಗಿದ್ದ ಅವರು ಏನಾದರು?! ಅವರನ್ನು ಎಲ್ಲಿಗೋ ಕರೆದೊಯ್ದಿದ್ದಾರೋ ಅಥವಾ ಅವರು ಸೋಂಕಿನಿಂದ ಸತ್ತಿದ್ದಾರೋ? ಅವರಿಗೆ ಸೋಂಕು ಇತ್ತು ಎಂದರೆ ಅದು ತಮಗೂ ಬರುವ ಸಾಧ್ಯತೆಯಿದೆ. ತನಗೆ ಮಾತ್ರವಲ್ಲ ಇಡೀ ವಾರ್ಡಿನಲ್ಲಿರುವ ಎಲ್ಲರಿಗೂ, ತನ್ನ ಪತ್ನಿಗೂ! ಎಂತ ಅಪಾಯಕ್ಕೆ ಸಿಕ್ಕಿಕೊಂಡೆವು! ಅಷ್ಟು ದೂರದಿಂದ, ಮೂರು ಏರ್‌ ಪೋರ್ಟ್ ಗಳಲ್ಲಿ, ನೂರಾರು ಜನರ ನಡುವೆ ಸಾವು ತಪ್ಪಿಸಿಕೊಂಡು ಬಂದರೆ ಇಲ್ಲಿ ತಮ್ಮನ್ನು ಹಿಡಿಯಿತೆ?

ಮಗಳ ಮಾತು ಕೇಳಬೇಕಿತ್ತು! ಅಂದರೆ ಇನ್ನೂ ಮೂರು ತಿಂಗಳು ಅಮೆರಿಕದಲ್ಲಿ ಸಿಕ್ಕಿಕ್ಕೊಳ್ಳಬೇಕಿತ್ತು! ಮನೆ ಬಿಟ್ಟಾಗಲೇ ಆರು ತಿಂಗಳಾಗಿತ್ತು! ಇನ್ನೆಷ್ಟು ಕಾಲ ಅಲ್ಲಿರುವುದು? ಈ ಮಾರಣಾಂತಿಕ ಸೋಂಕು ಯಾವ ಮಟ್ಟದಲ್ಲಿ ಹೆಚ್ಚುವುದೋ? ಮುಂದೆ ಮನೆಗೆ ಮರಳಲು ಸಾಧ್ಯವಾಗುವುದೋ ಇಲ್ಲವೋ? ಚಿಂತೆ ಇನ್ನಿಲ್ಲದೆ ಕಾಡಿತ್ತು! ಬೇರು ಕತ್ತರಿಸಿದ ಗಿಡದಂತೆ ಅಲ್ಲಿ ಇರುವುದು ಹಿಂಸೆಯಾಗಿತ್ತು! ಸ್ನೇಹಿತರಿಲ್ಲ? ಬಂಧು-ಬಳಗವಿಲ್ಲ! ಮಗಳು-ಅಳಿಯ, ಮೊಮ್ಮಗನೇನೋ ಸರಿ. ಆದರೆ ಬೇರು ಕತ್ತರಿಸಿದ ಗಿಡದ ಭಾವನೆ! ಚಿಂತೆ ಚಿತೆಯಾಗಿ ಬೇಯಿಸುತ್ತೆ ಎನ್ನುವ ಅನುಭವವಾಗಿತ್ತು. ಏನಾದರಾಗಲೀ ಊರು ಸೇರುವ ಆಸೆಯೊಂದಿಗೆ ಹಿಂದಿರುಗಿದವರಿಗೆ ಏರ್‌ ಪೋರ್ಟ್ ನಲ್ಲೇ ಧಿಗ್ಭಂಧನ! ಆನಂತರ ಆಸ್ಪತ್ರೆಯಲ್ಲಿ ಕ್ವಾರಂಟೈನ್! ಇದೀಗ ಎದುರು ಮಂಚದಲ್ಲಿದ್ದವರ ಭಯ ಬಿತ್ತಿದ ಆ ಇಬ್ಬರ ನಿರ್ಗಮನ!
ಕಿಟಿಕಿಯಾಚೆ ಮೆಲ್ಲನೆ ಬೆಳಕು ಮೂಡುವ ಸೂಚನೆ ಕಂಡಿತು. ಕತ್ತಲೆ ಬಿತ್ತಿದ್ದ ಭಯ ಕಮ್ಮಿಯಾಗಬಹುದು. ನರ್ಸುಗಳು ಬರುತ್ತಾರೆ. ಅವರನ್ನು ಕೇಳಬೇಕು: ಆ ಇಬ್ಬರು ಏನಾದರು? ವಾರ್ಡಿನಲ್ಲಿರುವ ತಮ್ಮಂತೆಯೇ ಕ್ವಾರಂಟೈನಿನಲ್ಲಿರುವ ಇತರರು ಏಳುತ್ತಾರೆ! ಖಾಲಿ ಮಂಚ ಕಂಡು ಎಲ್ಲ ಭಯಭೀತರಾಗುತ್ತಾರೆ! ಮೊದಲ ಬಾರಿಗೆ ತಮ್ಮ ಎದುರೇ ಮಲಗಿದ್ದವರು ಸತ್ತಿದ್ದಾರೆ ಎಂದು ಗೊತ್ತಾಗುತ್ತಲೇ ಅರ್ಧ ಸತ್ತೇಬಿಡುತ್ತಾರೆ! ಪೂರ್ಣ ಸಾವೆಂದರೆ ನಿರಾಳವಂತೆ! ಆದರೆ ಈ ಅರೆ ಸಾವು? ಇದು ಅರೆ ಸಾವೆ? ಹೌದು ಇದು ಪೂರ್ಣ ಬದುಕಿದ ಸ್ಥಿತಿ ಅಲ್ಲ! ಅರೆ ಸಾವು! ತಮ್ಮನ್ನು ಭಯದಲ್ಲಿ ಬೇಯಿಸುತ್ತಿದೆ!
ಮೊದಲು ಎದುರಿನ ಸಾಲಿನ ಎರಡನೆ ಮಂಚದಲ್ಲಿದ್ದವರು..ಹೊರಳಿ ಎದ್ದರು. ಅವರ ಹೆಸರೇನು..? ರಾವ್ ಎಂದಲ್ಲವೆ..? ರಾವ್ ಎದ್ದು ಆಗ ತಾನೆ ಮೂಡುತ್ತಿದ್ದ ಬೆಳಕನ್ನು ನೋಡಿ ಎದ್ದು ಕುಳಿತು ಕೈಗಳನ್ನು ಹೊಸೆದು, ಕಣ್ಣುಗಳ ಮೇಲಿಟ್ಟುಕೊಂಡು ನಂತರ ಕೆಳಗಿಳಿಸಿ ನೋಡುತ್ತಾ ‘ಕರಾಗ್ರೇ ವಸತೇ ಲಕ್ಷ್ಮಿ’ ಎಂದು ಹೆಚ್ಚು ಶಬ್ದ ಬಾರದಂತೆ ಪಿಟಿಪಿಟಿ ಎಂದರು. ವಾಸುದೇವರಿಗೆ ಸ್ವಲ್ಪ ಧೈರ್ಯ ಬಂತು. ಆ ಇಬ್ಬರು ಖಾಲಿಯಾಗಿರುವ ವಿಷಯ ಅವರಿಗೂ ಗೊತ್ತಾಗುತ್ತದೆ ಎನ್ನುವುದು ವಿಚಿತ್ರವಾದ ಭರವಸೆ ಮೂಡಿತು.

ಪಕ್ಕದ ಮಂಚದಲ್ಲಿದ್ದ ಪತ್ನಿ ಕೂಡ ಏಳುತ್ತಿರುವುದು ಅರಿವಾಯಿತು. ಈಗ ಇನ್ನಷ್ಟು ಧೈರ್ಯ! ಎದುರಿ ಮಂಚದಲ್ಲಿದ್ದ ಆ ಇಬ್ಬರು ಸತ್ತಿದ್ದಾರೆ ಎನ್ನುವ ಕಲ್ಪನೆಯೇ ಇಷ್ಟು ಘೋರವಾಗಿತ್ತಲ್ಲ? ಇನ್ನು ಅವರನ್ನು ಆಚೆ ಸಾಗಿಸುವುದನ್ನು ನೋಡಿದ್ದರೆ ಇನ್ನೆಷ್ಟು ಹೆದರುತ್ತಿದ್ದೆನೋ ಎಂದು ವಾಸುದೇವರು ನಿಟ್ಟುಸಿರಿಟ್ಟರು.
ವಾರ್ಡಿನೊಳಕ್ಕೆ ಯಾರೋ ಬರುತ್ತಿರುವಂತೆ ಹೆಜ್ಜೆಗಳ ಶಬ್ದವಾಯಿತು. ವಾಸುದೇವ್ ಆ ಕಡೆ ನೋಡಿದರು. ನರ್ಸೊಬ್ಬರು ವಾರ್ಡಿನೊಳಗೆ ಕಾಣಿಸಿದರು.

“ಸಿಸ್ಟರ್..ಸಿಸ್ಟರ್..?” ವಾಸುದೇವ್ ಕೂಗಿದರು. ತನ್ನ ದನಿಯಲ್ಲಿದ್ದ ಅರ್ತತೆಗೆ ಅವರಿಗೇ ಅಚ್ಚರಿಯೆನಿಸಿತು.
“ಯಾಕೆ? ಏನಾಯಿತು? ಯಾಕೆ ಹಾಗೆ ಕಿರಿಚಿದಿರಿ?”
ಪತ್ನಿಯ ಮಾತಿಗೆ ವಾಸುದೇವರಿಗೆ ಅಚ್ಚರಿ! ತಾನು ಕಿರಿಚಿದನೆ?
“ಏನಾಯ್ತು ಸಾರ್?”
ಎದುರಿನ ಸಾಲಿನಲ್ಲಿ ಆಗ ತಾನೆ ಎದ್ದಿದ್ದ ರಾವ್ ಕೇಳಿದರು.
“ಏನು..? ಯಾಕೆ ಕೂಗಿದ್ದು..?”
ನರ್ಸ್ ಬಂದರು. ಆಕೆಯ ಮುಖದಲ್ಲಿ ಹಸಿರು ಬಣ್ಣದ ಮುಖಗವುಸು, ತಲೆ, ಮೈ, ಕೈಗಳು ಕೂಡ ಗವುಸಿನಲ್ಲಿ ಮುಚ್ಚಿದ್ದವು.
“ಸಿಸ್ಟರ್..ಅಲ್ಲಿ..ಆ ಬೆಡ್ಡುಗಳಲ್ಲಿದ್ದ ಇಬ್ಬರು..” ವಾಸುದೇವರಿಗೆ ತಮ್ಮ ದನಿ ಕಂಪಿಸುತ್ತಿರುವುದು ಗೋಚರಿಸಿತು.
“ಹಾ..ದುಬೈಯಿಂದ ಬಂದಿದ್ದವರು..”
“ಅವರು ಕಾಣಿಸ್ತಿಲ್ಲವಲ್ಲ..?”
“ಸೋಂಕು ತಗುಲಿತ್ತು. ಹೈ ಫೀವರಿತ್ತು..ರಾತ್ರೀನೇ..ಐ.ಸಿ.ಯುಗೆ ಶಿಫ್ಟ್ ಮಾಡಿದ್ದೂ..ವೆಂಟಿಲೇಟರಲ್ಲಿದ್ದರು..ಬಟ್..?”
“ಏನಾಯ್ತು..ಅವರಿಗೆ..?”
“ಚೀನಾದ ವೈರಸ್ ಕೊರೊನಾಗೆ ಬಲಿಯಾದರು!”
ವಾರ್ಡಿನಲ್ಲಿದ್ದವರೆಲ್ಲ ಸಾವಿನ ಸುದ್ದಿಗೆ ಬೆಚ್ಚಿಬಿದ್ದರು! ಸಾವಿರಾರು ಮೈಲಿಗಳಿಂದಲೂ ನೆರಳಿನಂತೆ ಹಿಂಭಾಲಿಸಿದ್ದ ಕೊರಾನಾ ವೈರಸ್ಸಿನ ಪ್ರತ್ಯಕ್ಷ ದರ್ಷನವಾಗಿತ್ತು!

-ಎಸ್.ಜಿ.ಶಿವಶಂಕರ್,


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Varadendra K
Varadendra K
4 years ago

ತುಂಬ ಚೆನ್ನಾಗಿ ಬರೆದಿದ್ದೀರಿ ಸರ್

shivashankar
shivashankar
4 years ago

thanks for reading

2
0
Would love your thoughts, please comment.x
()
x