ಕೆಂಪರೋಡ್..!: ತಿರುಪತಿ ಭಂಗಿ

ಕೆ.ಎ-28 ಎಫ್-6223 ಕರ್ನಾಟಕ ಸಾರಿಗೆ ಬಸ್ಸು ಗಾಳಿಯ ಎದೆ ಸೀಳಿಕೊಂಡು ಬಂವ್.. ವ್.. ವ್.. ಎಂದು ರಾಗ ಎಳೆಯುತ್ತ, ಕ್ಯಾಕರಸಿ ಹೊಗೆ ಉಗುಳುತ್ತ, ತಗ್ಗು ದಿನ್ನೆಯಲ್ಲಿ ಜಿಗಿದು, ಕುಣಿದು ದಣಿವರಿಯದೆ, ಚಾಲಕನ ಒತ್ತಡಕ್ಕೆ ಮನಿದು, ಮುನಿದು ‘ನಿಗಿನಿಗಿ’ ಕೆಂಡ ಉಗಳುವ ಸೂರಪ್ಪನ ಕಾಟಾಚಾರ ಸಹಿಸಿಕೊಂಡು ಬಿಜಾಪೂರದತ್ತ ಹೊರಟಾಗ ಬರೊಬ್ಬರಿ ಎರಡು ಗಂಟೆಯಾಗಿ ಮೇಲೆ ಒಂದಿಷ್ಟು ನಿಮಿಷಗಳಾಗಿದ್ದವು. ಖಾಸಗಿ ಬಸ್ಸಿನ ಸುಖಾಸನಗಳ ಮೇಲೆ ತಣ್ಣಗೆ ಕುಳಿತು ಬರಬೇಕೆಂದವನಿಗೆ, ಇದ್ದಕಿದ್ದಂತೆ ತಲೆಯಲ್ಲಿ ಅದೇನು ಸೇರಿಕೊಂಡಿತೋ, ವಿಠಲಸ್ವಾಮಿ ಸರಕಾರಿ ಬಸ್ಸಿನ ಬಾಗಿಲು ಪ್ರವೇಶಿಸಿಬಿಟ್ಟ..

ಮೊದಲೆ ಬೇಸಿಗೆ, ಸರಕಾರಿ ಬಸ್ಸು ಬೆಂಗಳೂರಿನ ಗಡಿದಾಟುವ ಹೊತ್ತಿಗೆ ವಿಠಲಸ್ವಾಮಿಗಳ ಜುಬ್ಬಾ ಪೈಜಾಮ್ ಒದ್ದೆಯಾಗಿದ್ದವು. ಬಿಸಿನೀರನ ಸ್ನಾನ ಮಾಡಿದಂತಹ ಅನುಭವ ಆಗತೊಡಗಿತು. ಕರ್ಚಿಪಿನಿಂದ ಮೊಖಾ-ಮೋತಿ ಎಷ್ಟೇ ತಿಕ್ಕಾಡಿದರೂ ಕೆಲಸಕ್ಕೆ ಬರಲಿಲ್ಲ. ಜನಸಾಮಾನ್ಯರು ದಿನಾಲೂ ಈ ಸರಕಾರಿ ಬಸ್ಸನ್ನೇ ಏರುತ್ತಾರೆ ಪಾಪ..! ಈ ಪರಿ ಕುದಿಗೆ ಅವರ ಗತಿ ಏನು ? ಈ ಕುರಿತು ಒಂದು ಲೇಖನ ಬರೆಯಲೇಬೇಕು. ಈ ರೀತಿಯಾದರೆ ಜನಸಾಮನ್ಯರ ಪರಸ್ಥಿತಿ ಏನಾಗಬಾರದು..? ಸರಕಾರ ಬಸ್ಸಿನಲ್ಲಿ ಏರ್ ಕಂಡೀಶನ್ ಬಳಸಬೇಕೆನ್ನುವುದನ್ನು ಲೇಖನದ ಮೊದಲನೆ ಪ್ಯಾರಾದಲ್ಲಿಯೇ ಬರೆಯಬೇಕೆಂದುಕೊಂಡರು. ಕೈಯಲ್ಲಿದ್ದ ನ್ಯೂಸ್ ಪೇಪರನಿಂದ ಗಾಳಿಬೀಸಿಕೊಳ್ಳುತ್ತಿದ್ದಾಗ ಮೈಗೆ ಒಂದೀಟು ಹಿತವೆನಿಸಿತು. ಕಂಡಕ್ಟರ್ “ನಿಮ್ಮದ ಎಲ್ಲಿಗ್ರೀ” ಅಂದ. ವಿಠಲಸ್ವಾಮಿಗಳಿಗೆ ವಿಪರೀತ ಕೋಪ ಬಂದಿತು. ಈ ಮನುಷ್ಯನ ನಾಲ್ಗಿಗೆ ಸಂಸ್ಕಾರವೇ ಇಲ್ಲ, ಏಕವಚನದಲ್ಲಿ ಮಾತಾಡಿಸುವುದಾ..? ಅದು ನಾನೊಬ್ಬ ದೊಡ್ಡ ಸಾಹಿತಿ, ಅನೇಕ ಸಾಹಿತ್ಯ ಪ್ರಶಸ್ತಿ ತೆಗೆದುಕೊಂಡ ಜನಪ್ರಿಯ ಲೇಖಕ.

ಕಂಡಕ್ಟರ್ ಪಾಪ..! ನನ್ನಷ್ಟು ಓದಿಕೊಂಡವನಲ್ಲ, ತಿಳಿದುಕೊಂಡವನಲ್ಲ, ದಿನವಿಡಿ ಈ ಒರಟು ಜನರೊಟ್ಟಿಗೆ ಮಾತಾಡಿ ಆತನೂ ಹೀಗಾಗಿರಬೇಕು. ಅವನ ಮಾತಿನಲ್ಲಿ ವಾಕ್ಯದೋಷ ಸರಿಪಡಿಸಬೇಕೆನಿಸಿತು. ಅದ್ಯಾಕೋ ಅವನ ಸಪ್ತ ಮನಸ್ಸು “ಹೋಗ್ಲಿ ಬಿಡು ಅವನು ನಿನ್ನಂತೆ ರೈಟರ್ ಅಲ್ಲ, ಮಾಮೂಲಿ ಕಂಡಕ್ಟರ್” ಎಂದು ಎಚ್ಚರಿಸಿತು.

“ಬಿಜಾಪೂರ ಒಂದ ಕೊಡ್ರಿ” ವಿಠಲಸ್ವಾಮಿ ಕಂಡಕ್ಟರನತ್ತ ಕೈ ಚಾಚಿದ. “ಎಲ್ಲರೂ ಗಟ್ಟಿ ನೋಟಕ್ವಟ್ರ ಚಿಲ್ರಾ ಹೆಂಗ ಕೊಡೂದ್ರೀ .. ಚಿಲ್ರಾ ಇದ್ದರ ನೋಡ್ರೀ..” ಕಂಡಕ್ಟರ್ ತನ್ನ ಕಮಚಿಟ್ಟ ರೊಕ್ಕದ ಚೀಲದೊಳಗೆ ಅಲ್ಲಲ್ಲ ಕೈ ಹಾಕಿ ತಡಕಾಡಿದ. ಇಲ್ಲ, ಅನ್ನುವ ರೀತಿ ಆಗ ವಿಠಲಸ್ವಾಮಿಗೆ ತಲೆ ಅಲ್ಲಾಡಿಸಿದ. “ಟಿಕೀಟ ಹಿಂದ ಚಿಲ್ರಾ ಬರ್ದೀನಿ.. ಇಳಿವಾಗ ಇಸ್ಕೊರ್ರಿ..” ಇಷ್ಟು ಹೇಳುತ್ತ ಆತ ಮತ್ತೆ ‘ಟಿಕೇಟ..ಟಿಕೇಟ..’ ಮುಂದಿನವರ ಹತ್ತಿರ ಚೌಕಾಸಿ ನಡಿಸಿದ. ಕಂಡಕ್ಟರ್ ಪಾಪ..!ಕಂಡಕ್ಟರಗಳು. ದಿನವಿಡಿ ಹತ್ತಾರು ಊರು ತಿರ್ಗಾಡ್ತಾವೆ. ಎಲ್ಲಂದರಲ್ಲಿ ವಸ್ತಿ ಇರ್ತಾವೆ. ಸಾರ್ವಜನಿಕರ ಕಿರ್ಕಿರಿ ಸಹಿಸಿಕೊಳ್ಳೊದಂದ್ರೆ ಸಾಮಾನ್ಯವೇ? ಎಲ್ಲವನ್ನು ಸಹಿಸಿಕೊಂಡು ಹೋಗುವ ಸಹನೆಯನ್ನು ದೇವ್ರು ಇವರಿಗೆ ಕೊಡಲಪ್ಪಾ ಎಂದು ವಿಠಲಸ್ವಾಮಿ ಟಿಕೇಟ್ ಹರಿಯುತ್ತಿದ್ದ ಕಂಡಕ್ಟರ್ ನೋಡುತ್ತ ಅವನ ಮಾತಿನ ಲಹರಿಯನ್ನು ನೆನೆದರು.

“ಈ ಆಸಾಮಿ ಭಾಷಾ ನೋಡಿದ್ರ ಬಿಜಾಪೂರ್ದ ಅನಸ್ತೈತಿ” ಅಂದುಕೊಂಡು ವಿಠಲಸ್ವಾಮಿ ತನ್ನ ಕತ್ತನ್ನು ಪೂರ್ವದಿಕ್ಕಿಗೆ ತಿರುಗಿಸಿದ. ಉತ್ತರಕ್ಕೆ ಮುಖಮಾಡಿ ಬರುತ್ತಿದ್ದ ಬಸ್ಸಿಗೆ ಒಂದು ರೀತಿ ಹುರುಪು ಹೆಚ್ಚಿತು. ಗಾಜಿನಲ್ಲಿ ಹಾದು ಸೂರ್ಯನ ಬೆಂಕಿಯಂತ ಕಿರಣಗಳು ಒಳಹೊಕ್ಕು ಕಿಡಕಿ ಬಾಜು ಇದ್ದವರ ಮೋತಿಯನ್ನು ಚುರಗುಡಿಸುತ್ತಿದ್ದವು. ಮೋತಿಗೆ ಕರ್ಚಿಪ ಹಿಡಿದುಕೊಂಡೋ, ಅಂಗೈ ಮರೆಮಾಡಿಕೊಂಡೋ, ಬಸ್ಸಿನಲ್ಲಿ ಕುಳಿತ ಪ್ರಯಾಣಿಕರು ಅವನ ಕಾಟ ಸಹಿಸಿಕೊಳ್ಳುತ್ತಿದ್ದರು. ಸುರ್ಯ,“ತನ್ನ ತಾಕತ್ತು ಹೆಂಗೈತಿ ನೋಡು” ಅನ್ನುವ ರೀತಿ ಧೀಮಾಕಿನಿಂದ ಮುಗಿಲ ಸವಾರಿ ಮಾಡುತ್ತಿದ್ದ.

ಬೆಂಗಳೂರು ನಗರ ದಾಟಿದ ಮೇಲೆ ಬಸ್ಸು ತನ್ನ ವೇಗವನ್ನು ಇಮ್ಮಡಿಸಿಕೊಂಡಿತು. ಕುಂತವರು ಅಲ್ಲಲ್ಲಿ ನಿದ್ದೆಗೆ ಜಾರಿದರು. ಕೆಲವರು ಮೊಬೈಲ್ ಬಟನ್ ‘ಪಟಪಟ’ ಒತ್ತುತ್ತ ಮೊಬೈಲ್ ಜೀವ ತಿನ್ನುತ್ತಿದ್ದರು. ಹಲವರು ಮಾತಿನ ಕುಂಡಿಗೆ ದಾರಪೋಣಿಸಿ ಆಗದ, ಹೋಗದ, ನೀಗದ ವಿಚಾರಗಳ ತೂತು ಹುಡುಕಿ ಹೊಲೆಯುತ್ತಿದ್ದರು.

ಯಾವಾಗಲೂ ತಮ್ಮ ಹೆಗಲೇರಿ ಕುಳಿತ ಬ್ಯಾಗಿನಿಂದ ಒಂದು ರಟ್ಟೆ ಅಳತಿ ಪುಸ್ತಕ ಹೊರ ಎಳೆದು ಅಂಗೈಯಲ್ಲಿಟ್ಟುಕೊಂಡರು. ಮಗ್ಗಲಿದ್ದವರು “ಆ ಪುಸ್ತಕ ಎಟ್ಟ ದಪ್ಪ ಐತಿ ಮಾರಾಯಾ, ಇದನ್ಯಾಂವ ಬರ್ದಾನ ಪುಣ್ಯಾತ್ಮ..!!” ಅನ್ನುವ ಬದಲು ಅದನ್ನು ಓದುವ ವಿಠಲಸ್ವಾಮಿಯನ್ನು ಸುತ್ತಮುತ್ತಲಿದ್ದವರು ಹುಬ್ಬೇರಿಸಿ ಅಚ್ಚರಿಯಿಂದ ನೋಡತೊಡಗಿದರು. ಕಣ್ಣಿಗೆ ಕಣ್ಣಡಕ ಒತ್ತಿಕೊಂಡು ತನ್ನ ದಾಡಿ ಮೇಲೆ ಆಗಾಗ ಕೈಯಾಡಿಸುತ್ತ, ಆಗಾಗ ಒಂದೊಂದು ಪುಟ ತಿರಿಯುವ ವ್ಯಕ್ತಿಯನ್ನು ನೋಡಿ “ಈ ಮನುಷ್ಯಾ ದೊಡ್ಡಂವ ಇರ್ಬೇಕು, ಶ್ಯಾನ್ಯಾ ಇರ್ಬೇಕು, ಭಾಳ ತಿಳವಳಕಿ ಇದ್ದಾಂವ ಇರ್ಬೇಕು, ಇಲ್ಲಂದ್ರ ತೆಲಿದಿಂಬಿನ ಅಳತಿ ಪುಸ್ತಾಕ ಕೈಯಾಗ ಹಿಡಕೊಂದ ಕುಂದ್ರತಿದ್ದಿಲ್ಲ” ಸುತ್ತಲಿದ್ದ ಮಂದಿ ಮನದಲ್ಲಿ ವಿಠಲಸ್ವಾಮಿ ದೊಡ್ಡವನಂತೆ ಅನಿಸತೊಡಗಿದ.

ವಿಠಲಸ್ವಾಮಿ ಆಗಾಗ ಆಕಳಿಸುತ್ತ, ಹತ್ತಿರದಲ್ಲಿದ್ದ ಇಪ್ಪತ್ತು ರೂಪಾಯಿ ಕೊಟ್ಟು ಖರೀದಿಸಿದ ಬಾಟಲ್ ನೀರನ್ನು ಗುಟಗರಿಸುತ್ತ ಓದು ಮುಂದುವರೆಸಿದ್ದರು. ಬಸ್ಸು ತನ್ನ ಪಾಡಿಗೆ ತಾನು ಒಂದೆ ಓಟದಲ್ಲಿ ಓಡುತ್ತಿತ್ತು.

ಸಂಜೆಯಾಗುತ್ತಿದ್ದಂತೆ ಸೂರ್ಯನ ಧಿಮಾಕು ಕಡಿಮೆಯಾಗಿತ್ತು. ಆಗಷ್ಟೆ ತುಸು ತಣ್ಣನೆ ಗಾಳಿ ಬಸ್ಸಿನ ಕಿಡಕಿಯಿಂದ ಒಳನುಗ್ಗುತ್ತಿತ್ತು. ಆ ಗಾಳಿಗೆ ಮೈ ಒಡ್ಡಿಕೊಂಡು ಪ್ರಯಾಣಿಕರು ಸುಖಿಸಿದರು. ವಿಠಲಸ್ವಾಮಿಗಳಿಗೆ ಕಾಫಿ ಕುಡಿಯಬೇಕು ಅನಿಸಿತು. ಹುಳುಹುಳು ಕಂಡಕ್ಟರ್ ಮೋತಿ ನೋಡಿ ಸುಮ್ಮನಾದ. ಕಾಫಿ ಕುಡಿಯುವ ಚಟ, ಸಾರಾಯಿ ಕುಡಿಯುವ ಚಟ, ಗುಟಕಾ ತಿನ್ನುವ ಚಟ ಎಲ್ಲವೂ ವಿಠಲಸ್ವಾಮಿಗಳಿಗೆ ಸರಿಸಮಾನವಾಗಿ ತೋರತೊಡಗಿತು.“ಈ ಚಟ ಪಟಕ್ಕನ ಬಿಡು ಅಂತ ಹೇಳೊದೇನೋ ಸರಳ. ಮೈಗಂಟಿಕೊಂಡ ಚಟ ಬಿಡೋದು ಸುಲಭದ ಮಾತಾಲ್ಲ. ಅದನ್ನು ಬಿಡ್ಬೇಕಂದ್ರ ಮನಸ್ಸು ಕಲ್ಲ ಮಾಡ್ಕೊಳ್ಳೊದು ಎಲ್ಲರಿಂದ ನೀಗೂ ಮಾತಲ್ಲ. ತನ್ನಿಂದಲೂ ಅಷ್ಟೆ. ಈ ಹಾಳಾದ ಕಾಫೀ ಸಹವಾಸ ತಾನಿರುವರೆಗೂ ಇದ್ದೆ ಇರುತ್ತದೆ”ವಿಠಲಸ್ವಾಮಿ ತಮ್ಮ ಮನದಲ್ಲಿ ಮೂಡಿದ ಮಾತಗಳೊಟ್ಟಿಗೆ ತಾವೂ ಮಾತಾದರು.

“ಸರ್ ಕಾಫೀ ಕುಡಿಯಲು ಎಲ್ಲಾದ್ರೂ ನಿಲ್ಲಸ್ತಿರಾ?” ತಡೆಯಲಾಗದೆ ವಿಠಲಸ್ವಾಮಿ ರೊಕ್ಕ ಎಣಿಸುವುದರಲ್ಲಿ ಬ್ಯೂಸಿಯಾಗಿದ್ದ ಕಂಡಕ್ಟರನ್ನು ಕೇಳಿಯೇಬಿಟ್ಟರು. “ಇನ್ನೊಂದ ಹತ್ತ ನಿಮಿಷ್ನ್ಯಾಗ ಒಂದ ದಾಬಾ ಬರ್ತೈತ್ರಿ. ಅಲ್ಲಿ ಹದ್ನೈದ ನಿಮಿಷ ನಿಲ್ಲತೈತಿ” ಚುಟುಕು ವಾಕ್ಯ ಮುಗಿಸಿ ಕಂಡಕ್ಟರ್ ತನ್ನ ಚಿತ್ತವನ್ನು ಕೈಯಲ್ಲಿದ್ದ ಗರಿಗರಿ ನೋಟಿನತ್ತ ಹರಿಬಿಟ್ಟ.

ಕಾಫೀ ಕುಡಿಯುತ್ತ ವಿಠಲಸ್ವಾಮಿ ಇಡೀ ದಾಭಾದ ತುಂಬ ಕಣ್ಣೋಟ ಚಲ್ಲಿದ. ಇಡೀ ದಾಬಾ ಕಿಕ್ಕಿರಿದುಕೊಂಡಿತ್ತು. ಸರಕಾರಿ, ಸರಕಾರಿಯೇತರ ಬಸ್ಸುಗಳು ದಾಬಾದ ಮುಂದೆ ವ್ಯವಸ್ಥಿತವಾಗಿ ಪ್ರಾಥಮಿಕ ಶಾಲೆ ಹುಡುಗರು ಸಾಲು ಮಾಡಿ ನಿಂತಂತೆ ನಿಂತುಕೊಂಡಿದ್ದವು.ಈ ದಾಬಾದ ಮಾಲಿಕ ದಿನಕ್ಕೆ ಸುಮಾರು ಹಣ ಸಂಪಾದಿಸುತ್ತಾನೆ. ಅದಕ್ಕೆ ಅವನ ಕುತ್ತಿಗೆಯಲ್ಲಿ ಕಿರುಬೆರಳು ಅಳತಿ ಚೈನಿರೊದು..! ಈ ದಾಬಾ ಆಸಾಮಿ, ಒಂದು ತುತ್ತಿಗೂ ಒಂದು ರೇಟು, ಒಂದು ಗುಟಗಿಗೂ ಒಂದು ಬೆಲೆ. ಎಲ್ಲ ವಸ್ತುಗಳ ಬೆಲೆ ಡಬಲ್ ತ್ರಿಬಲ್ ಮಾಡಿಟ್ಟಿದ್ದಾನೆ. ಇದನ್ಯಾರು ಪ್ರಶ್ನಿಸುವವರಿಲ್ಲವೆ? ಜನಸಾಮಾನ್ಯರ ಒಂದು ದಿನದ ದುಡಿಮೆಯಷ್ಟು ದುಡ್ಡು ಒಂದು ಪ್ಲೇಟ ಅನ್ನಕ್ಕೆ ಕೋಡುವುದು ಎಷ್ಟೊಂದು ಸರಿ? ಇದು ಸಾಮಾನ್ಯರು ತಿನ್ನುವ ಅನ್ನ ಅಲ್ಲವೇ ಅಲ್ಲ. ಈ ಖಾಸಗಿ ವ್ಯಕ್ತಿಗಳಿಗೆ ಅನುಮತಿ ನೀಡುವ ಬದಲು, ಸರಕಾರ ಯಾಕೆ ದೊಡ್ಡ ದೊಡ್ಡ ಹೈವೆಗಳಲ್ಲಿ ಇಂಥ ದಾಬಾಗಳನ್ನು ನಡಿಸಬಾರದು…? ಜನಸಾಮಾನ್ಯರ ಒಳಿತಿಗಾಗಿ ಈ ಬಗ್ಗೆ ಸರಕಾರವೇಕೆ ಕಣ್ಣು ಮುಚ್ಚಿಕೊಂಡಿದೆ..? ಒಂದು ಕಾಫೀಗೆ ಮೂವತ್ತೈದು ರೂಪಾಯಿ ಆದ್ರೆ ಇನ್ನೂಳಿದ ತಿಂಡಿತಿನಿಸಿಗೆ ಎಷ್ಟು ದೊಡ್ಡ ಬೆಲೆ ಕಟ್ಟಿದ್ದಾನೋ ಈ ದಾಬಾದ ಮಾಲಿಕ..!

ಈ ವಿಷಯ ಕುರಿತು ಒಂದು ಲೇಖನ ಬರೆಯಬೇಕೆಂದು ತನ್ನ ಬ್ಯಾಗಿನಲ್ಲಿದ್ದ ಡೈರಿಯನ್ನು ಸರಕ್ಕನೆ ಹೊರಗೆಳೆದು ನಾಕಾರು ಸಾಲು ನೋಟ್ ಮಾಡಿಕೊಂಡರೂ ಸಮಾಧಾನವಾಗಲಿಲ್ಲ. ಎರಡು ಗುಟಕು ಕಾಪೀಗೆ ತಾನು ಮೂವತ್ತೈದು ರೂಪಾಯಿ ಕೊಟ್ಟ ಸಂಕಟ ಮನಸಿನ ಒಂದು ಮೂಲೆಯಲ್ಲಿ ನಿಗಿನಿಗಿ ಉರಿಯತೊಡಗಿತು. ಇದು ಖಂಡಿತ ಮಹಾ ಅನ್ಯಾಯ..! ಅಲ್ಲಿದ್ದವರು ಗರಿಗರಿ ನೋಟನ್ನು ತಮ್ಮ ಪರ್ಸಿನಿಂದ ಎಳೆದುಕೊಡುವಾಗ ವಿಠಲಸ್ವಾಮಿಯ ತಲೆ ಗಿರಿಗಿಟ್ಟಿತು. ಜನರಿಗೆ ದುಡ್ಡಿನ ಬಗ್ಗೆ ಇಷ್ಟೊಂದು ತಾಚಾರ ಭಾವ ಇರೊದು ಕಂಡು ಬೇಸರಗೊಂಡರು. ತಾವು ಬರೆದ ಒಂದು ಪುಸ್ತಕ ಕೊಂಡು ಓದಲು ಹಿಂದೆ ಮುಂದೆ ನೋಡುವ ಈ ಜನರ ಮನಸ್ಥಿತಿ ಎಂಥದ್ದು..! ಅಂತ ಮನಗಂಡು ತುಸು ನಕ್ಕರು.

ಬಸ್ಸು ರಾತ್ರಿ ಬಂವ್‍ಗುಡುತ್ತ ಬಿಜಾಪೂರ ಮುಟ್ಟುವ ಆತುರದಲ್ಲಿ ವೇಗ ಹೆಚ್ಚಿಸಿಕೊಂಡಿತು. ಬೆಳಗ್ಗೆ ಬಿಜಾಪೂರಿನಲ್ಲಿ ಕಾಲೂರಿದಾಗ ಸೂರ್ಯ ಹರದಾರಿ ದೂರ ಸಾಗಿದ್ದ.

ಬಾಳ ದಿನಗಳಿಂದ ಉತ್ತರ ಕರ್ನಾಟಕದ ಐತಿಹ್ಯಗಳ ಕುರಿತು ಒಂದು ಪ್ರವಾಸ ಕಥನ ಬರೆಯಬೇಕೆಂದು ಬಿಜಾಪೂರಗೆ ಬಂದಿದ್ದ ವಿಠಲಸ್ವಾಮಿಗಳಿಗೆ ಗೋಳಗುಮ್ಮಟ, ಭಾರಾಕಮಾನ್, ಇಬ್ರಾಹಿಮ್ ರೋಜಾ ನೋಡಬೇಕೆಂದಿದ್ದ ಅವರ ಆಸೆ ಅಂದು ಬಹುಬೇಗನೆ ಈಡೇರಿತು. ನೋಡಿದ್ದೆಲ್ಲವನ್ನು, ಅನಿಸಿದ್ದೆಲ್ಲವನ್ನು, ಬಿಳಿ ಹಾಳೆಯ ಮೇಲೆ ಗೀಚಿ ಪುಟ್ಟದೊಂದು ಟಿಪ್ಪಣಿ ಮಾಡಿಕೊಂಡರು.

ಸಮಯ ಉಳದದ್ದರಿಂದ ಬಾಗಲಕೋಟೆಗೆ ಹೋಗಬೇಕು, ಅಲ್ಲಿಂದ ಐಹೊಳೆ, ಪಟ್ಟದಕಲ್ಲು, ಬದಾಮಿ, ಬನಶಂಕರಿಗೆ ಬೇಟಿ ನೀಡಿದರೆ ಒಂದು ಪುಸ್ತಕ ಸರಳವಾಗಿ ಬರೆಯುವಷ್ಟು ವಿಷಯ ಸಿಗುತ್ತದೆ ಎಂದು ಬಾಗಲಕೋಟೆಗೆ ಹೋಗುವ ಬಸ್ ಹತ್ತಿದರು. ಬಾಗಲಕೋಟ ತಲುಪಿದಾಗ ತಕ್ಷಣ ವಿಠಲಸ್ವಾಮಿಗೆ ನೆನಪಾದವನು ತಮ್ಮ ಕಾಲೇಜ್ ಗೆಳೆಯ ಪ್ರಭು.

ಕಾಲೇಜ ಓದುವಾಗ ಪ್ರಭು ತನ್ನನ್ನು ಅವರೂರಿಗೆ ಕರೆದುಕೊಂಡು ಹೋಗಿದ್ದು, ದಾಳಿಂಬೆ, ಚಿಕ್ಕು, ಬಾಳೆಹಣ್ಣು ಸಾಕು ಸಾಕು ಅನ್ನುವಂತೆ ತಿನಿಸಿದ್ದು ನೆನಪಾಗಿ..ರಾತ್ರಿ ವಸ್ತಿ ಗೆಳೆಯನ ಮನೆಯಲ್ಲಿಯೇ ಮಾಡಿದರಾಯಿತು ಎಂದು ಮೊಬೈಲನಲ್ಲಿ ಅವನ ನಂಬರ ಹುಡುಕಾಡಿ ‘ಬಾಗಲಕೋಟ ದೋಸ್ತ’ ಎಂದು ಸೇವ್ ಮಾಡಿದ ನಂಬರಿಗೆ ಕಾಲು ಹಾಯಿಸಿದ. ಆಗ ಈ ನಂಬರ ಅಸ್ತಿತ್ವದಲ್ಲಿ ಇಲ್ಲ ಎಂದು ಗೊಣಗಿತು. “ಅಲಾ ಇವ್ನೌನ್.. ಈಗೇನು ಮಾಡೂದು..? ಇಲ್ಲಿವರೆಗೂ ಬಂದಿನಿ ಹೆಂಗಾರ ಮಾಡಿ ಗೆಳೆಯಾನ ಬೆಟ್ಟಿಯಾಗಬೇಕು. ಹೆಂಗೂ ಆತ ಊರಲ್ಲಿ ಇರೊದು ಪಿಕ್ಷ್..! ಅಂವ ನೌಕರಿ ಮಾಡುವ ಗೋಜಿಗೆ ಹೋಗದೆ ತನಗಿದ್ದ ಆಸ್ತಿ ನೋಡಿಕೊಳ್ಳುವುದೇ ಒಂದು ದೊಡ್ಡ ನೌಕರಿ” ಎಂದು ಆಗಾಗ ಬೆಟ್ಟಿಯಾದಾಗ ಹೇಳುತ್ತಿದ್ದ ಮಾತು ವಿಠಲಸ್ವಾಮಿ ಜ್ಞಾಪಿಸಿಕೊಂಡರು. ಅವನ ಬೇಟಿಯಾಗದೆ ತುಂಬಾ ದಿನಗಳಾಗಿವೆ, ಮದುವೆ ಮಾಡ್ಕೊಂಡಿರಬೇಕು..ಪ್ರಭ್ಯಾ..! ತುಂಬಾ ರಸಿಕ ನನ್ನ ಮಗಾ. ಕಾಲೇಜಿನಲ್ಲಿ ಹುಡುಗಿಯರನ್ನು ಚುಡಾಯಿಸುವುದರಲ್ಲಿ ನಂಬರ್ ಒನ್. ಈಗ ಮೊದಲಿನ ಚಾಳಿ ಬಿಟ್ಟಿರಬೇಕು..!

ವಿಠಲಸ್ವಾಮಿ ಗೆಳೆಯನೂರಿಗೆ ಹೋಗಲು ನಿರ್ಧರಿಸಿದ.ಬಾಗಲಕೋಟೆಯಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಕೈನಕಟ್ಟಿ ಊರಿಗೆ ಹೋಗಲು ಬಸ್ಸಿನ ಸೌಕರ್ಯ ಇರಲಿಲ್ಲ. ಟೆಂಪೋ ಅಥವಾ ರಿಕ್ಷಾ ಆಗಾಗ ಓಡಾಡುತ್ತಿದ್ದವು. ವಿಠಲಸ್ವಾಮಿ ಒಂದು ಎರಡು ವಿಚಾರಮಾಡದೆ ಗೆಳೆಯನ ಊರಿನತ್ತ ಮುಖಮಾಡಿದ. ಹೊತ್ತು ಮುನುಗಿ ಕತ್ತಲಾಗುವ ಹೊತ್ತಿಗೆ ಒಂದು ರಿಕ್ಷಾ ಸಿಕ್ಕಿತು. ಹತ್ತಿ ಕುಳಿತರು. ರಿಕ್ಷಾ ತುಂಬವ ತನಕ ಆ ರಿಕ್ಷಾ ಆಸಾಮಿ ‘ಚಟಕ್ ಪಿಟಕ್’ ಅನಲಿಲ್ಲ. ಊರ ಬಿಟ್ಟು ಮೂರು ಕಿಲೋಮೀಟರ್ ಗೆಳೆಯನ ತೋಟ ಇದೆ. ಆತ ತೋಟದಲ್ಲಿಯೇ ಮನೆ ಮಾಡಿಕೊಂಡಿರೊದು. ಅವನು ನನ್ನ ಅನಿರೀಕ್ಷಿತ ಬೆಟ್ಟಿ ಕಂಡು ಪುಳಕಿತನಾಗುತ್ತಾನೆ. “ಇಂದು ರಾತ್ರಿ ಪೂರಾ ಇಬ್ಬರು ಕಾಲೇಜಿನ ದಿನಗಳಲ್ಲಿ ಕಂಡುಂಡ ಸವಿಸವಿ ನೆನಪು ಮೆಲಕು ಹಾಕಬಹುದು” ಎಂದು ವಿಠಲಸ್ವಾಮಿ ಚಲಿಸುವ ರಿಕ್ಷಾದಲ್ಲಿ ಕುಳಿತು ಮನದಲ್ಲಿ ಹುಟ್ಟಿದ ಭಾವಗಳೊಂದಿಗೆ ತೇಲುತ್ತಿದ್ದ.ರಿಕ್ಷಾ ಊರಲ್ಲಿ ತಂದು ಇಳಿಸಿತು. ಗೆಳೆಯನ ತೋಟದ ಹಾದಿ ಗೊತ್ತಿದ್ದರಿಂದ ವಿಠಲಸ್ವಾಮಿಗಳು ಯಾರನ್ನು ಕೇಳದೆ ದುಡುದುಡುರಿಕ್ಷಾ ಇಳಿದುಕೊಂಡು ಊರ ಹೊರಗಿರುವ ಹಾದಿಗುಂಟ ಹೆಜ್ಜೆ ಹಾಕತೊಡಗಿದರು.
*

ಪೂರ್ತಿ ಕತ್ತಲಾಗಿತ್ತು.

“ಸರ್..! ಅದು ಕೆಂಪರೋಡ್..ತುಂಬಾ ಡೇಂಜರ್ ಪ್ಲೇಸ್ .ನೀವು ಯಾವುದಕ್ಕೂ ಸ್ವಲ್ಪ ಹುಷಾರಾಗಿರಿ. ನೀವು ಈ ಊರಿಗೆ ಹೊಸಬರು ಅನಿಸುತ್ತೆ. ಪಾಪ..! ನಿಮಗೇನೂ ಗೊತ್ತಿಲ್ಲ. ರಾತ್ರಿಯಾದ್ರೆ ಸಾಕು ಎಂಥ ಧೈರ್ಯಶಾಲಿನೂ ಆ ಜಾಗಕ್ಕೆ ಹೋಗ್ಬೇಕಾದ್ರೆ ಅಂಜಿ ಉಚ್ಚಿ ಹೊಯ್ಕೊತಾನೆ. ‘ನಾ..ನೀ..’ ಅನ್ನುವವರ ಆಟ ಆ ಜಾಗದಲ್ಲಿ ನೆಡಿಯಾಕಿಲ್ಲ. ನಿಮ್ಮನ್ನ ನೋಡಿದ್ರ ಸಂಬಾಯಿತರ ಹಾಗೆ ಕಾಣ್ತಿರಾ. ಯಾವೂರಿಂದ ಬಂದಿರಿ ? ಈ ಊರಲ್ಲಿ ಯಾರಾದ್ರೂ ಸಂಬಂಧಿಕರಿದ್ದಾರೋ..? ಇಲ್ಲಂದ್ರೆ ನಮ್ಮ ಮನೆಗೆ ಬನ್ನಿ, ನಮ್ಮ ಮನೆಗೆ ಬರಲು ನಿಮಗೆ ಕಸಿವಿಸಿ ಅನಿಸಿದರೆ ಇಲ್ಲೆ ಹನಮಪ್ಪನ ಗುಡಿ ಇದೆ. ಅಲ್ಲಿ ಈ ರಾತ್ರಿ ಕಳೆದು ಮುಂಜಾನೆದ್ದು ಹೋಗಿ. ಇಂಥ ಸರಹೊತ್ತಿನಲ್ಲಿ ಖಂಡಿತ ನೀವು ಹೋಗ್ಬೇಡಿ……. ಈ ಹಾಳಾದ ರಸ್ತೆಯಲ್ಲಿ ರಾತ್ರಿ ಹೊತ್ತು ದೆವ್ವಗಳದ್ದೇ ದರ್ಬಾರು..!!”

ಸಣಕಲು ದೇಹದ, ಕುರಚಲು ಗಡ್ಡದ, ಹಣೆ ಮೇಲೆ ವಿಭೂತಿ ಧರಿಸಿದ ವ್ಯಕ್ತಿ ಹೇಳುವ ಮಾತು ಕೇಳಿ, ಅವನ ಮಾತಿಗೆ ‘ಹಾಂ..ಹೂಂ..’ ಅನ್ನದೆ ಅರಗಳಿಗೆ ವಿಠಲಸ್ವಾಮಿ ಅವನ ಮಾನವೀಯ ಪರ ಕಾಳ್ಜಿಗೆ ಬೆಕ್ಕಸ ಬೆರಗಾಗಿ ನಿಂತುಕೊಂಡರು. ಇನ್ನೊಂದೆಡೆ ಈ ರಸ್ತೆಯಲ್ಲಿ “ರಾತ್ರಿ ದೆವ್ವಗಳದ್ದೆ ದರ್ಬಾರು..” ಅವನ ಬಾಯಿಯಿಂದ ಉದುರಿದ ಸಣ್ಣ ವಾಕ್ಯ ಕೇಳಿ ವಿಠಲಸ್ವಾಮಿಗಳ ಕೈಕಾಲು ನಡುಗಿದವು. ಸಣ್ಣ ಕಪ್ಪೆಗೆ ಹೆದರಿ ಸಾಯುವ ವಿಠಲಸ್ವಾಮಿಗಳು ಕಣ್ಣಿಗೆ ಕಾಣದ “ಬುದ್ದಿಗೇಡಿ ದೆವ್ವಗಳ” ಹೆಸರು ಕೇಳಿದಾಗ ಅವರ ಮೈಯಲ್ಲ ತಣ್ಣಗಾಯಿತು.

“ಸರ್ ಯಾಕೆ ಹಂಗ ಗಾಬ್ರಿ ಆದ್ರೀ..? ನಾ ಹೇಳಿದ್ದು ಸುಳ್ಳಲ್ಲ. ಈ ಊರಾಗ ಯಾರ್ನಬೇಕಾದವರ್ನ ಕೇಳಿ ನೋಡ್ರಿ ಅವರು ನಾ ಹೇಳಿದ್ಹಂಗೆ ಹೇಳ್ತಾರೆ. ಬೇಕಾದ್ರೆ ಇನ್ನಷ್ಟ ಉಪ್ಪು, ಖಾರಾ ಹಾಕಿ ಒಗ್ಗರಣೆ ಸೇರಿಸಿ ಹೇಳವರೇನು ಕಮ್ಮಿ ಇಲ್ಲ ಅನಕೋಬೇಡ್ರಿ..ನಮ್ಮೂರಲ್ಲಿ !” ಹ..ಹ..ಹ..ಹ.. ಆತ ಹಗುರವಾಗಿ ನಕ್ಕ.

ಅವನ ಮಾತು ಕೇಳಿ ವಿಠಲಸ್ವಾಮಿಗಳು ನಿರ್ಧಾರವನ್ನು ಆ ಕ್ಷಣದ ಮಟ್ಟಿಗೆ ಬದಲಾಯಿಸಿಕೊಂಡರು. ತನ್ನ ಕುರಿತು, ಕಾಳ್ಜಿಯಿಂದ ಸಲಹೆ ನೀಡಿದ ಆ ಮಹಾನುಭಾವನಿಗೆ ಕೈ ಕುಲಕಿ ‘ಥ್ಯಾಂಕ್ಸ್’ ಹೇಳಿದರು. “ನಾನು ಮುಂಜಾನೆ ಹೋಗುತ್ತೇನೆ, ರಾತ್ರಿ ಹನಮಪ್ಪನ ಗುಡಿಯಲ್ಲಿ ಮಲಗುತ್ತೇನೆ” ಎಂದು ಹೇಳಿದ ಮೇಲೆ ಅವನು “ಆಯ್ತು ಸರ್ ಹಾಗೆ ಮಾಡಿ” ಅಂದ. ಹಾಗೆ ಮುಂದುವರೆದು ನೀವೇನ ಕೆಲಸಾ ಮಾಡ್ತಿರಿ..? ಎಂದು ವಿಠಲಸ್ವಾಮಿಗಳ ಕೆದಕಲೊಂದು ಪ್ರಶ್ನೆ ಕೇಳಿದ. ಅವನು ಕೇಳಿದ ಪ್ರಶ್ನೆಗೆ ಅವರು ಉತ್ತರ ಕೊಡಲೇ ಬೇಕಾಗಿತ್ತು.

“ನಾನು ಒಬ್ಬರೈಟರ್”ಎಂದು ಮತ್ತೊಮ್ಮೆ ಅವನ ಕೈ ಕುಲುಕಿದರು. ಅವನು ಅವರ ಮೋತಿ ‘ಹುಳು ಹುಳು’ ನೋಡತೊಡಗಿದ, ಅವರು ಹೇಳಿದಕ್ಕೂ ಇವರು ಇರುವುದಕ್ಕೂ ಬಿಲ್ಲಕುಲ್ ಹೊಂದಾಣಿಕೆ ಇರಲಿಲ್ಲ. ರೈಟರ್‍ನಲ್ಲಿ ಇರಬೇಕಾದ ಯಾವುದೇ ತರಹದ ವೇóಷಭೂಷಣ ಇಲ್ಲದಿರುವುದು, ಆ ವ್ಯಕ್ತಿ ಅಡಿಯಿಂದ ಮುಡಿಯವರೆಗೂ ಗಮನಿಸಿದ. ರೈಟರ್‍ಗಳೇ ಉಪಯೋಗಿಸುವ ಚೀಲವನ್ನು ವಿಠಲಸ್ವಾಮಿ ಹೆಗಲಲ್ಲಿ ಕಾಣಲು ಹೋಗಿ ಆ ಮನುಷ್ಯ ನಿರಾಸೆ ಹೊಂದಿದ. ವಿಠಲಸ್ವಾಮಿಗಳು ಹೈಸ್ಕೂಲ್ ಹುಡುಗರಂತೆ ಬೆನ್ನ ಮೇಲೆ ಒಂದು ಬ್ಯಾಗ್ ಹೊತ್ತುಕೊಂಡಿದ್ದರು.

ಅವನ ಮನಸಲ್ಲಿ ‘ರೈಟರ್’ ಅಂದರೆ ನೀಲುವಂಗಿಯೋ, ಜುಬ್ಬಾ ಪೈಜಾಮೋ ತೊಟ್ಟವನಿರಬೇಕು, ಕೈತುಂಬ ಪುಸ್ತಕ, ಹೆಗಲಲ್ಲಿ ಜೋತಾಡುವ ಚೀಲ ಇರಬೇಕೆಂದು ಆತ ಭಾವಿಸಿಕೊಂಡವನಂತೆ ಅವನ ಕಣ್ಣುಗಳಲ್ಲಿಯ ಭಾವಗಳು ಎದ್ದು ಕಾಣುವುದು ವಿಠಲಸ್ವಾಮಿಗಳಿಗೆ ಗಮನಕ್ಕೆ ತೋರತೊಡಗಿತ್ತು. ಆತ ಇಂವ ರೈಟರೋ-ಪೈಟರೋ ಅನುಮಾನದಲ್ಲಿಯೇ ವಿಠಲಸ್ವಾಮಿಗಳ ಧನ್ಯವಾದವನ್ನು ಮನಸ್ಪೂರಕವಾಗಿ ಸ್ವೀಕರಿಸಿ. ಮೋತಿ ತುಂಬ ನಗೆಯನ್ನು ಹೊತ್ತುಕೊಂಡು ಅಲ್ಲಿಂದ ಹೆಜ್ಜೆ ಕಿತ್ತ. ಅಲ್ಲಿಯೇ ಇರುವ ಕಲ್ಲು ಬಂಡೆಯ ಮೇಲೆ ವಿಠಲಸ್ವಾಮಿ ಕುಂಡಿಯೂರಿದರು. ಮುಗಿಲ ತುಂಬ ನಕ್ಷತ್ರಗಳು ಸುಂದರಿಯೊಬ್ಬಳು ನಕ್ಕಾಗ ಪಳಗುಟ್ಟುವ ಹಲ್ಲುಗಳಂತೆ ಹೊಳೆಯುತ್ತಿದ್ದವು.

“ಸರ್ ಈ ರಸ್ತೆ ತುಂಬಾ…. ಡೇಂಜರ್ ಸರ್” ಪ್ರತಿಮಾತಿಗೂ ನಾಕಾರು ಬಾರಿ ‘ಸರ್ ..ಸರ್’ ಎಂದು ಆತ ಪ್ರಯೋಗಿಸುವ ಪದ. ಮನುಷ್ಯ ಸಂಬಂಧದ ಬಗ್ಗೆ ಆತನು ತೋರಿದ ಪ್ರೀತಿ, ವಿಠಲಸ್ವಾಮಿಗಳನ್ನು ಚಕಿತಗೊಳಿಸಿತು. ಆ ರಸ್ತೆ ಕುರಿತು ಆ ವ್ಯಕ್ತಿ ಆಡಿದ ಮಾತು, ವಿಠಲಸ್ವಾಮಿಗಳಲ್ಲಿ ಕುತೂಹಲ ಕೆರಳಿಸಿತು. ಆ ರಸ್ತೆ ಬಗ್ಗೆ ಅದೇನಿದೆಯೋ ‘ಕಥೆ’ ತಿಳಿಯಲೇ ಬೇಕು ಅನ್ನುವ ಹುಂಬ ಧೈರ್ಯ ಅವರನ್ನು ಆ ಊರಲ್ಲಿರವ ಗುಡಿಯಲ್ಲಿ ಅಂದು ನೆಲೆನಿಲ್ಲುವಂತೆ ಮಾಡಿತು.
*

ಬೇಸಿಗೆಯಾಗಿದ್ದರಿಂದ ಹೊದ್ದುಕೊಂಡು ಮಲಗುವ ಜರೂರತ್ತ ಏನೂ ಇರಲಿಲ್ಲ. ತೊಟ್ಟ ಬಟ್ಟೆಯಲ್ಲಿಯೇ ‘ಶಿವಾ..ಹರಾ..’ ಅನ್ನುತ್ತ ಆ ರಸ್ತೆಯಿಂದ ಹತ್ತು ಗಜದೂರದಲ್ಲಿರುವ ಹನಮಪ್ಪನ ಗುಡಿಯಲ್ಲಿ ಕಾಲುಚಾಚಿದರು. ನಾಕಾರು ಜನ ಅವರಿಗಿಂತಲೂ ಮೊದಲೇ ಹಾಸಿಗೆ ಹಾಸಿ, ತೆಲೆದಿಂಬು ಇಟ್ಟುಕೊಂಡು ನಿದ್ದೆಗೆ ಸಜ್ಜಾಗಿದ್ದರು. ದಿನಾಲೂ ನಾಕಾರು ಜನ ಕತ್ತಲಾದರೆ ಆ ರಸ್ತೆಯ ಮೇಲೆ ಹೋಗುವ ಧೈರ್ಯ ಸಾಲದೆ ಅದೇ ಗುಡಿಯಲ್ಲಿ ಮಲಗಿ ಮುಂಜಾನೆ ಹೋಗುವ ಪರಿಪಾಟಲು ಇರುವುದರಿಂದ ಅಲ್ಲಿದ್ದವರು ವಿಠಲಸ್ವಾಮಿಗಳತ್ತ ತಲೆ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಮಲಗಿದಲ್ಲಿಯೇ ನಿದ್ದೆ ಬರುವ ತನಕ “ಮಾತು ಕುಟ್ಟಿ ಕುಟ್ಟಿ” ನಿದ್ದೆಗೆ ಜಾರಿದರು.

ವಿಠಲಸ್ವಾಮಿಗೆ ಹೊಸ ಜಾಗವಾದರಿಂದ ನಿದ್ದೆ ಹತ್ತಲು ಹೈರಾಣ ಮಾಡಿತು. ಬಾಗಲಕೋಟೆಯಲ್ಲಿ ತಿಂದ ಮಸಾಲೆ ದೋಸೆ ಕರಗಿತ್ತು. ಹೊಟ್ಟೆ ಸಾಪಾಗಿತ್ತು. ನಿದ್ದೆ ಅವರ ಸಮೀಪಕ್ಕೆ ಬರಲು ನಾಚುತ್ತಿತ್ತು. ಹಣೆ ಮೇಲೆ ವಿಭೂತಿ ಧರಿಸಿದ ಕುರಚಲು ಗಡ್ಡದ, ಸನಕಲು ದೇಹದ ವ್ಯಕ್ತಿ ದೆವ್ವಗಳ ಕುರಿತು ಹೇಳಿದ ಮಾತು ತಲೆಯಲ್ಲಿ ಹಾಗೆ ‘ಗುಂಯ್’ ಗುಟ್ಟತೊಡಗಿತು. ಅವರಿಗೆ ಭಯವಾಗುವುದಕ್ಕಿಂತ ಹೆಚ್ಚಾಗಿ ಆ ರಸ್ತೆ ಮಹಿಮೆ ತಿಳಿಯಬೇಕು. ಅದರ ಮೇಲೆ ಒಂದು ಕಥೆಯೋ, ಕಾದಂಬರಿಯೋ ಬರೆಯಬೇಕೆಂದು ಮನಸ್ಸು ಹದಗೊಂಡಿತು.

ಎಷ್ಟೋ ಹೊತ್ತು ಎಚ್ಚರವಾಗಿಯೇ ಇದ್ದರು. ಆ ವ್ಯಕ್ತಿ ಹೇಳಿದಂತೆ ರಾತ್ರಿ ಹೊತ್ತು ಯಾವ ಗುಬ್ಬಿ ಸುಳಿವೂ ಅಲ್ಲಿ ಇರಲಿಲ್ಲ.

*

ಬೆಳಗಾದಾಗ ತಮ್ಮ ಕಾಲಡಿಯೊಂದು ಮನುಷ್ಯ ಆಕೃತಿ ಕುಳಿತಿದ್ದು ಕಂಡು ವಿಠಲಸ್ವಾಮಿಗಳ ‘ಎದಿ ಜಲ್’ ಎಂದಿತು. ಅವನು ನೋಡಲು ಬೇರೆ ಗ್ರಹದಿಂದ ತಪ್ಪಿಸಿಕೊಂಡು ಬಂದವನಂತೆ ತೋರಿದ, ಮೋತಿಯ ಮೇಲೆ ಇರಬೇಕಾದ ಕಣ್ಣು-ಮೂಗುಗಳು ತುಂಬಾ ವೀಕಾರವಾಗಿದ್ದವು, ಬಾಯಲ್ಲಿದ್ದ ಹಲ್ಲುಗಳು ಜೀರಿಗೆ ಗಾತ್ರದಷ್ಟು ಇದ್ದವು. ಶತಮಾನಗಳಿಂದ ಆ ದೇಹಕ್ಕೆ ಆಹಾರದ ದರುಶನವೇ ಆಗಿಲ್ಲವೇನೋ..? ಅನ್ನುವಂತೆ ಆ ಮನುಷ್ಯನ ಶರೀರ ಹುಳುತಿಂದ ಜಾಲಿಕಟ್ಟಿಗೆಯಂತೆ ಕಂಡಿತು..!
ಮಾತಾಡಿಸಿದರೆ ‘ಹಾಂ..ಹೂಂ..’ ಅನ್ನದೆ ಗುಬ್ಬಿಗಾತ್ರದ ಕಣ್ಣುಗಳಲ್ಲಿ ದಿಟ್ಟಿಸಿ ನೋಡುವುದನ್ನು ಕಂಡು ವಿಠಲಸ್ವಾಮಿಗಳ ಎದೆಯ ಬಡೆತ ತುಸು ಹೆಚ್ಚಿತು.

ನಿನ್ನೆ ಊರ ಅಂಚಲ್ಲಿ ಸಿಕ್ಕ, ಹಣೆ ಮೇಲೆ ವಿಭೂತಿ ಧರಿಸಿದ, ಕುರಚಲು ಗಡ್ಡದ ವ್ಯಕ್ತಿ “ಸರ್ ದೆವ್ವಗಳಿವೆ ಹುಷಾರು..!” ಅವನು ಹೇಳಿದ ಮಾತು ಕಿವಿ ತುಂಬ “ಬೊರಂಗಿ ಹುಳು ಗುಂಯ್‍ಗುಡಿದಂತೆ” ಗುಂಯ್‍ಗುಟ್ಟಿದಾಗ ಅಲ್ಲಿಂದ ಎದ್ದು ಓಡಬೇಕೆಂದು ಅನಿಸಿದರೂ ಕಾಲಲ್ಲಿ ‘ಸಗತಿ’ ಇಲ್ಲದಂತಾಗಿ, ಜೋರಾಗಿ ಕೂಗಿ ಯಾರನ್ನಾದರೂ ಒದರಬೇಕೆಂದರೆ ಬಾಯಲ್ಲಿ ಒಂದು ಪದವೂ ಹೊರಡದೇ “ಮೈಯಲ್ಲ ಮುಂಗಾರು ಮಳೆಯಲ್ಲಿ ತೊಯ್ಸಿಕೊಂಡಂತೆ” ಒದ್ದೆಯಾಯಿತು.

ಈತ ಹುಚ್ಚನಿರಬೇಕೆಂದು ಅವನಿಂದ ಕೊಂಚ ದೂರ ಸರೆದು, ವಿಠಲಸ್ವಾಮಿ ತಲೆಗೆ ಆನಿಸಿಕೊಂಡು ಇಟ್ಟುಕೊಂಡಿದ್ದ ತನ್ನ ಕರಿ ಬಣ್ಣದ ಬ್ಯಾಗನ್ನು ಸರಕ್ಕನೆ ಎಳೆದುಕೊಂಡು ಬೆನ್ನಿಗೆ ಹಾಕಿಕೊಂಡನು. ಆ ಬ್ಯಾಗು ಸದಾ ಅವರ ಬೆನ್ನ ಹಿಂದಿರುವ ಬೇತಾಳನಂತೆ ಎಲ್ಲಿ ಹೋದಲ್ಲಿ ಜೋತು ಬಿದ್ದಿರುತ್ತಿತ್ತು.
ವಿಕಾರ ದೇಹಿ ಸಣ್ಣಗೆ ಸರಿದು ವಿಠಲಸ್ವಾಮಿಗಳತ್ತ ಬರತೊಡಗಿದೆ. ಓಡಬೇಕೆಂದೆನಿಸಿದರೂ ಇದ್ದಬಿದ್ದ ಧೈರ್ಯವನ್ನು ಒಟ್ಟುಗೂಡಿಸಿಕೊಂಡು ನಿಂತು “ಯಾರು ನೀನು?” ಎಂದು ಕೇಳಿದರು. ಆ ವಿಕಾರ ದೇಹಿಯ ದೇಹದಿಂದ ಒಂದು ಮಾತು ಹುಟ್ಟುವಷ್ಟೂ ಶಕ್ತಿ ಇರಲಿಲ್ಲ. ದೀನವಾದ ಅವನ ಗುಬ್ಬಿ ಗಾತ್ರದ ಕಣ್ಣುಗಳು ವಿಠಲಸ್ವಾಮಿಗಳಿಗೆ ಬಾಳ ದಿನದ ಹಿಂದಿನಿಂದಲೂ ಪರಿಚಯ ಇದ್ದಂತೆ ತೋರಿದಾಗ ಒಂದಿಷ್ಟು ಹೊತ್ತು ಅವರ ಮನಸ್ಸು ಗೊಂದಲಕ್ಕೆ ಬಿದ್ದಿತು.

“ಲೇ ಅನಿಷ್ಟ ಸೂಳಿಮಗನ.. ಗುಡಿಯಾಗ ಬರಬ್ಯಾಡಂದ್ರೂ ಬಂದ ವಕ್ಕರಸ್ಕೋತಿಯಲ್ಲೋ.. ನಡಿ ಮದಲ ಅತ್ತಾಗ.. ಊರಾಗ ನೀನೊಂದ ಶನಿಪಾತಕ” ಎಂದು ಗುಡಿಯ ಪೂಜಾರಿ ಹೆಗಲ ಮೇಲೆ ತಾಮ್ರದ ಕೊಡ ಹೊತ್ತುಕೊಂಡು ದುಡು ಗುಡಿಯ ಅಂಗಳಕ್ಕೆ ಬರುವುದೆ ತಡ, ಆ ವಿಕಾರ ದೇಹಿ ಸಣ್ಣಗೆ ಸರೆದು ಕೈನಕಟ್ಟಿ ಹಳ್ಳಿಯ ಹನಮಪ್ಪನ ಗುಡಿ ಹಿಂದಿರುವ ಕೆಂಪುರೋಡತ್ತ ಹಗುರವಾಗಿ ಹೆಜ್ಜೆ ಇಡುತ್ತ ತಿರುತಿರುಗೆ ವಿಠಲಸ್ವಾಮಿಗಳನ್ನು ನೋಡುತ್ತ ನೋಡುತ್ತ ದೂರಸಾಗಿ ಹೋದ.

ವಿಠಲಸ್ವಾಮಿಗಳ ಮನದಲ್ಲಿ ತಳಮಳ ಹೆಚ್ಚಿತು. ಆ ಕಣ್ಣುಗಳು ಭಾಳ ದಿನಗಳಿಂದ ಚಿರಪರಿಚಿತ ಅನ್ನುವಂತೆ ಅವರ ಸೂಪ್ತ ಮನಸ್ಸು ಸಾರಿಸಾರಿ ಹೇಳುತ್ತಿತ್ತು.

“ಅಲ್ಲಾ ಪೂಜಾರಿ ಅವರೆ ಆ ಮನಷ್ಯಾ ಯಾರಿ?” ಗುಣುಗುಣು ಹಾಡ ಗುಣಗುತ್ತ ಬಾಗಿ ಗುಡಿ ಕಸ ಹೊಡೆಯುತ್ತಿದ್ದ ಪೂಜಾರಪ್ಪನನ್ನು ವಿಠಲಸ್ವಾಮಿ ಕೇಳಲೋ ಬೇಡವೋ ಎಂದು ಕೇಳಿದರು. ಪೂಜಾರಪ್ಪ ಕಸಗೂಡಿಸುತ್ತಲೇ ಅವರನ್ನು ವಿಚಿತ್ರವಾಗಿ ನೋಡಿ, ಸ್ವಲ್ಪ ತಡೆದು, “ಆ ಮುಂಡೆ ಮಗನ ಇತಿಹಾಸ ಯಾಕ ಕೇಳ್ತಿರೀ ..ಅಂವನೇನು ಸಮಾಜ ಸುಧಾರಕನಲ್ಲ, ದೇಶರಕ್ಷಕನಲ್ಲ” ಎಂದು ಏನೊಂದು ಅರ್ಥವಾಗದಂತೆ ಬೊಗಳಿದ. ವಿಠಲಸ್ವಾಮಿ ಒಂದು ಎರಡು ಅನ್ನದೇ ಸುಮ್ಮನಾದರೂ. ಸ್ವಲ್ಪ ಹೊತ್ತು ಬಿಟ್ಟು ಪೂಜಾರಪ್ಪ “ಆ ನನ್ನ ಮಗ ..ಅವತ್ತೊಂದ ದಿನ” ಎಂದು ಪೀಠಿಕೆ ಹಾಕಿ ಹೇಳತೊಡಗಿದರು. ಪೂಜಾರಪ್ಪ ಹೇಳುವ ಮಾತಿಗೆ ಆ ಕ್ಷಣ ವಿಠಲಸ್ವಾಮಿಗಳು ಪೂರಾ ಕಿವಿಯಾದರು.

“ ಅಂವ ನಮ್ಮೂರವನೆ, ಭಾಳ ಒಳ್ಳೆ ಮನಷ್ಯಾ, ಧಾರ್ವಾಡದಲ್ಲಿ ಓದಿಕೊಂಡು ಬಂದವ ನಮ್ಮೂರಲ್ಲಿ ಇವನೊಬ್ಬನೇ, ಅವತ್ತು ಒಂದಿನ ಈತ ಮನುಷ್ಯನಾಗಿರಲಿಲ್ಲ; ಅವತ್ತು ಅವನೇನಾದರೂ ಆ ಕೆಟ್ಟ ಕೆಲಸಕ್ಕೆ ಮನಸ್ಸು ಮಾಡದಿದ್ದರೆ, ಇಂದು ಇಡೀ ಊರಿನವರಿಂದ ಈತ ಕೈಮುಗಿಸಿಕೊಂಡು ಗೌರವಿಸಿಕೊಳ್ಳುತ್ತಿದ್ದ; ಪಾಪ..! ಅಂದು ಅವನ ಗ್ರಹಗತಿ ಸರಿ ಇರಲಿಲ್ಲ ಅನಿಸುತ್ತದೆ..”

“ಏನಾತ್ರೀ..”ಎಂದು ವಿಠಲಸ್ವಾಮಿಗಳು ಕೇಳಿದರು. ಅವರಿಗೆ ಪೂಜಾರಪ್ಪನ ಹೇಳುವ ಮಾತು ಪತ್ತೆದಾರಿ ಕಾದಂಬರಿ ಓದುವಾಗಿನಷ್ಟು ಕುತೂಹಲವೆನಿಸಿತು.

“ಏನ್ ಆಗ ಬಾರದಿತ್ತೋ ಅದು ಆಗಿ ಹೊಯ್ತು, ಏನು ನಡಿಬಾರದಿತ್ತೋ ಅದು ನಡೆದು ಹೊಯ್ತು, ಅಂದು, ಎಂಟು ವರುಷದ ಹುಡುಗಿಯರಿಬ್ಬರು ಕೆಂಪರೋಡಲ್ಲಿ ಇರುವ ಹುಣಸೆ ಹಣ್ಣು ಆರಿಸಿಕೊಳ್ಳಲು ಹೋಗಿದ್ದರು. ಕಾಮಕ್ಕೆ ಕಣ್ಣಿಲ್ಲ ಅಂತರಲ್ಲಾ ಅದು ಖರನೇ ಇರ್ಬೇಕು. ಹಿಂಗೆ ಅಲ್ಲವೇ ನಮ್ಮ ರಾವಣನು ಎಡವಿದ್ದು..! ಪಾಪ..! ಸೀತಮ್ಮನ್ನು ಹಾರಿಸಿಕೊಂಡು ಹೋಗಿದ್ದು; ಈ ಮುಂಡೆ ಮಗ ಆ ಹುಡುಗಿರನ್ನು ನೋಡಿ, ಒಬ್ಬಳನ್ನು ಹೊತ್ತುಕೊಂಡು ಕೆಂಪರೋಡಿನಲ್ಲಿರವ ಹುಣಸೆ ಮರದ ಹಿಂದೆ ಇರುವ ಕಲ್ಲು ಬಂಡೆ ಹಿಂದೆ ಅತ್ಯಾಚಾರ ಮಾಡಿದನಂತೆ; ಪಾಪ..! ಆ ಮಗು ಎಷ್ಟು ಗೋಳಾಡಿರಬೇಕು..!! ಮಾಡುವುದೆಲ್ಲ ಮಾಡಿ ಸುಮ್ನೆ ಬಿಡದೆ ಈ ನಾಲಾಯಕ ಆ ಹುಡುಗಿಯನ್ನು ಕೊಂದು ಹಾಕಿದ್ದ; ಆ ಹುಡುಗಿ ಬೇರೆ ಯಾರೂ ಅಲ್ಲ, ಈ ಊರ ಗೌಡರ ಮಗಳು; ಈ ಮುಟ್ಟಾಳ ಹೀಗೆ ಮಾಡುತ್ತಿರುವುದನ್ನು ನೋಡಿದ ಮತ್ತೊಂದು ಹುಡುಗಿ ಓಡೋಡಿ, ತೇಕುತ್ತ, ಬಂದು ಊರಲ್ಲಿ ಸುದ್ದಿ ಮಾಡಿದ್ದೇ ತಡ, ಇಡೀ ಊರೆ ಆ ಕೆಂಪ ರೋಡಲ್ಲಿ ಹಾಜರಿತ್ತು; ಮೊದಲೇ ಕೆಟ್ಟ ಸ್ವಭಾವದ ಗೌಡ ಸುದ್ದಿ ತಿಳಿದು ಕೊಡಲಿ,ಬಡಗಿ ಎತ್ತಿಕೊಂಡು ಕೆಲವರನ್ನು ಕರೆದುಕೊಂಡು ಕೆಂಪರೋಡಿನತ್ತ ಧಾವಿಸಿದರು. ಹುಡುಗಿಯ ಸ್ಥಿತಿ ನೋಡಿ ಯಾರಿಗೆ ತಾನೆ ಸಿಟ್ಟು ಬರುವುದಿಲ್ಲ ಹೇಳಿ..? ಗೌಡ ಹಾಗೆ ತನ್ನವರನೆಲ್ಲ ಕರೆದುಕೊಂಡು ಹೋಗಿ, ಅವನನ್ನು ಹುಡಿಕಿದರು; ಪುಣ್ಯಕ್ಕೆ ಆತ ತಲೆ ಮರೆಸಿಕೊಂಡಿದ್ದ, ಕೆಟ್ಟ ಸ್ವಭಾವದ ಗೌಡ ಸುಮ್ಮನಿರದೆ ಮನದಲ್ಲಿರುವ ತನ್ನ ಕಿಚ್ಚು ಆರಿಸಿಕೊಳ್ಳಲು ಅವನ ಕುಟುಂಬದವರನ್ನು ಕೈಕಾಲು ಕಟ್ಟಿ ಬಂಡಿಯಲ್ಲಿ ಹೇರಿಕೊಂಡು ಬಂದು, ಅದೇ ಕೆಂಪರೋಡಲ್ಲಿರು ಹುಣಸೆ ಮರದಡಿಯಲ್ಲಿ ಸೀಮೇ ಎಣ್ಣೆ ಸುರವಿ ಬಂಡಿಯಲ್ಲಿರುವ ಎಲ್ಲರನ್ನು ಜೀವಂತವಾಗಿ ಸುಟ್ಟುಬಿಟ್ಟ; ಅದನ್ನು ನೆನಸಿಕೊಂಡರೆ ‘ಎದೆಜಲ್’ ಅನ್ನುತ್ತದೆ; ಗೌಡ ಜೈಲು ಸೇರಿದ; ಈ ಅತ್ಯಾಚಾರಿ ನಾಕು ದಿನದ ನಂತರ ಊರಿಗೆ ಬಂದ, ಅವನನ್ನು ಊರವರು ಹಿಗ್ಗಾಮುಗ್ಗಾ ಥಳಸಿದರು; ಅವನಿಗೆ ಯಾರೂ ಅನ್ನ ನೀರು ಕೋಡದಂತೆ ಊರಿನವರು ತೀರ್ಮಾನಿಸಿದರು, ಅಂವ ಕೂಳು-ನೀರು ಇಲ್ಲದೆ ಸಾಯಲಿ ಅನ್ನುವ ವಿಚಾರ ನಮ್ಮೂರಿನವರದು; ಪಾಪಿ ಚಿರಾಯು.. ಅಂತಾರಲ್ಲ ಅದು ಖರೆ ಐತಿ. ಊರವರು ಕೊಡದಿದ್ದರೇನಾಯಿತು ದಾರಿಯಲ್ಲಿ ಹೋಗು ಬರುವವರು ಕೊಟ್ಟದ್ದು ತಿಂದು ಇನ್ನೂ ಬದಕಿದ್ದಾನೆ ಆ ಅತ್ಯಾಚಾರಿ ಪ್ರಭ್ಯಾ..! ಪ್ರಭ್ಯಾನ ತಂದೆ,ತಾಯಿ,ತಂಗಿ, ಅವನ ತಂಗಿ ಮಗ ಮತ್ತು ತಾನು ಅತ್ಯಾಚಾರ ಮಾಡಿ ಕೊಂದ ಆ ಹುಡುಗಿ ಎಲ್ಲರೂ ದೆವ್ವಗಳಾಗಿದ್ದಾರೆ. ರಾತ್ರಿ ಹೊತ್ತು ಅಲ್ಲಿ ಯಾರೂ ಹೋಗುತ್ತಿಲ್ಲ. ಹೋದವರು ಅಂಜಿ ಚಡ್ಡಿ ತುಂಬಾ ಉಚ್ಚಿ ಹೊಯ್ಕೊಂಡು ಬಂದಿದ್ದಾರೆ..”

ಪೂಜಾರಪ್ಪನ ಹೇಳಿದ ಗೆಳೆಯನ ಬದುಕಿನಲ್ಲಿ ಜರುಗಿದ ದುರಂತ ಕೇಳಿದ ವಿಠಲಸ್ವಾಮಿಗಳ ಎದೆಗೆ ದೊಡ್ಡ ಸಿಡಿಲು ಹೊಡೆದಂತೆ ಅನಿಸಿತು. ಅಯ್ಯೋ..! ಇಷ್ಟೊತ್ತಿನವರೆಗೂ ತನ್ನ ಕಾಲಡಿಯಲ್ಲಿ ಕುಳಿತ ವಿಕಾರ ದೇಹಿ ನನ್ನ ಗೆಳೆಯ ಫ್ರಭುವೇ..!! ಅದಕ್ಕೆ ಆ ಕಣ್ಣುಗಳು ತನಗೆ ಪರಿಚಯದಂತೆ ಕಂಡದ್ದು. ಅದೇನು ಅನಾಹುತ ಮಾಡಿಕೊಂಡಿದ್ದಾನೆ ಪ್ರಭು..!! ಪುಣ್ಯಕ್ಕೆ ನಾನು ಪ್ರಭುವಿನ ಗೆಳೆಯ ಎಂದು ಯಾರ ಮುಂದು ಹೇಳದೆ ಇದ್ದದ್ದು ಒಳ್ಳೆಯದಾತು. ಇಲ್ಲದಿದ್ದರೆ ನನಗೂ ಈ ಊರಿನವರಿಂದ ಏಟು ಪಿಕ್ಷ್ ಸಿಗುತ್ತಿತ್ತು.

ವಿಠಲಸ್ವಾಮಿಗಳು ದಕ್ಷಿಣ ದಿಕ್ಕಿನತ್ತ ಮುಖ ತಿರುವಿಕೊಂಡಿದ್ದ ಹನಮಪ್ಪನಿಗೊಂದು ನಮಸ್ಕಾರ ಸಲ್ಲಿಸಿ, ಮೆಲ್ಲಗೆ ಬಂದ ಹಾದಿಯತ್ತ ತಿರುಗಿ ಹೆಜ್ಜೆ ಹಾಕುತ್ತ ಕೆಂಪರೋಡಿನಲ್ಲಿ ಆಗತಾನೆ ನಡೆದು ಹೋದ ಗೆಳೆಯ ಪ್ರಭು ಎಲ್ಲಾದರೂ ಕಾಣಬಹುದೆಂದು ಕಣ್ಣೋಟ ಕೆಂಪು ರಸ್ತೆ ತುಂಬ ಹರಸಿದರು. ಕೆಂಪರೋಡ ಬಣಬಣ ಬಣಗುಟ್ಟುತ್ತಿತ್ತು. ಆಗಷ್ಟೆ ಆ ರಸ್ತೆಯಲ್ಲಿ ಸುಂಟರಗಾಳಿ ಎದ್ದು ಹಾಳಿ, ರವದಿ, ಧೂಳು ಎತ್ತಿಕೊಂಡು ಗಣಗಣ ತಿರಗುತ್ತ ಆಕಾಶದೆತ್ತರ ಏರತೊಡಗಿತು. ಅದನ್ನು ನೋಡುತ್ತ ವಿಠಲಸ್ವಾಮಿಗಳು ಎಷ್ಟೋ ಹೊತ್ತು ಅಲ್ಲಿಯೇ ನಿಂತುಕೊಂಡರು.

-ತಿರುಪತಿ ಭಂಗಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x