ವಿಜ್ಞಾನ-ಪರಿಸರ

ಕೆಂದಳಿಲು-ಚೆಂದದಳಿಲು: ಅಖಿಲೇಶ್ ಚಿಪ್ಪಳಿ

ಮಾರ್ಚ್ ೨೦ ೨೦೧೪ ರಾತ್ರಿ ಖ್ಯಾತ ಪೆರ್ಡೂರು ಮೇಳದ ಯಕ್ಷಗಾನ ಸಾಗರ ಸಮೀಪದ ಕರ್ಕಿಕೊಪ್ಪದಲ್ಲಿ.  ಸಂಜೆಯಾದ ಮೇಲೆ ಮತ್ತಿಕೊಪ್ಪದಿಂದ ಒಳದಾರಿಯಲ್ಲಿ ಕರ್ಕಿಕೊಪ್ಪ ತಲುಪಲು ಬಹಳ ಹೊತ್ತು ಬೇಕಾಗಿಲ್ಲ. ದಟ್ಟ ಕಾನನದ ಕಚ್ಚಾರಸ್ತೆಯಲ್ಲಿ ಹೊರಟರೆ ೨ ಕಿ.ಮಿ. ತಲುಪಲು ಬರೀ ಅರ್ಧಗಂಟೆ ಸಾಕು. ಆಟ ಶುರುವಾಗುವುದು ಹೇಗೂ ೧೦ ಗಂಟೆಗೆ ತಾನೆ. ಊಟ ಮುಗಿಸಿಯೇ ಹೊರಡುವುದೆಂಬ ತೀರ್ಮಾನದಲ್ಲಿದ್ದ ಆದಿತ್ಯ. ಸೆಕೆಂಡ್ ಪಿ.ಯು.ನಲ್ಲಿ ಪಾಸಾಗದೇ ಅನಿವಾರ್ಯವಾಗಿ ಕರ್ಕಿಕೊಪ್ಪದಲ್ಲೇ ಗ್ಯಾರೇಜ್ ಸೇರಿ ಹೆಸರು ಮಾಡಿದ್ದ ಆದಿತ್ಯ ಕೈ ತೊಳೆದು ಊಟಕ್ಕೆ ಕೂರಬೇಕು ಎನ್ನುವ ಹೊತ್ತಿನಲ್ಲಿ ನಾಡಕೋವಿಯಿಂದ ಈಡಾದ ಸದ್ದು ಕೇಳಿತು. ಕ್ಷೀಣವಾದ ಕೂಗು ಕೇಳಿ ಬಂತು. ದೀವರ ಪೈಕಿ ಯಾರೋ ಹಾರುಬೆಕ್ಕು ಹೊಡೆದಿರಬೇಕು ಎಂದುಕೊಂಡು ಖೇದದಿಂದ ಊಟ ಮುಗಿಸಿ ಯಕ್ಷಗಾನ ನೋಡಲು ಹೊರಟ. ಕೈಯಲ್ಲೊಂದು ಚಿಕ್ಕ ಟಾರ್ಚ್ ಹಿಡಿದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದವನಿಗೆ, ಚರಂಡಿ ಪಕ್ಕದಲ್ಲಿ ಚಿಕ್ಕದೊಂದು ಪ್ರಾಣಿ ಅಸ್ತ್ಯವ್ಯಸ್ತವಾಗಿ ಹೊರಳುತ್ತಿರುವುದು ಕಂಡಿತು. ಹತ್ತಿರ ಹೋಗಿ ನೋಡಿದರೆ ಇನ್ನೂ ಕಣ್ಣು ಬಿಡದ ಉದ್ದ ಬಾಲದ ಒಂದು ಜೀವಿ. ಅದು ಯಾವ ಜೀವಿ ಎಂದು ಆದಿತ್ಯನಿಗೂ ಗೊತ್ತಾಗಲಿಲ್ಲ. ಈ ಚಿಕ್ಕ ಪ್ರಾಣಿಯನ್ನು ಬಿಟ್ಟು ಯಕ್ಷಗಾನಕ್ಕೆ ಹೋಗಲು ಮನಸ್ಸಿಲ್ಲ ಅತ್ತ ಯಕ್ಷಗಾನವನ್ನೂ ಬಿಡಲು ಮನಸ್ಸಿಲ್ಲ. ಅಂತೂ ಯಕ್ಷಗಾನದ ಸೆಳೆತಕ್ಕಿಂತ ಹೃದಯದೊಳಗಿನ ಕರುಣೆಯ ಕೈಯೇ ಮೇಲಾಯಿತು. ನಿಧಾನವಾಗಿ ಎತ್ತಿಕೊಂಡು ಮತ್ತೆ ವಾಪಾಸು ಮನೆ ಕಡೆಗೆ ಹೊರಟ.

ಆದಿತ್ಯನ ಕೈಯ ಬೆಚ್ಚಗಿನ ಅನುಭವ ಆ ಚಿಕ್ಕ ಪ್ರಾಣಿಗೆ ಅದೇನೊ ಒಂದು ತರಹದ ಭದ್ರತೆಯ ಭಾವ ತಂದುಕೊಟ್ಟಿರಬೇಕು. ಸುಮ್ಮನೆ ಕೈಯಲ್ಲಿ ಮಲಗಿತು. ಬೆಳಗ್ಗೆ ಚಾ ಕಾಯಿಸಲು ಬೇಕು ಎಂದು ಆದಿತ್ಯನ ಅಮ್ಮ ಭಟ್ಟರ ಮನೆಯಿಂದ ಕಾಲು ಲೀಟರ್ ಹಾಲು ತಂದು ಕಾಯಿಸಿ ಇಟ್ಟಿದ್ದರು. ಹಾಲು ಹದವಾಗಿ ತಣಿದು ವಾತಾವರಣದ ಉಷ್ಣತೆಗೆ ಹೊಂದಿಕೆಯಾಗಿತ್ತು. ಚಿಕ್ಕ ಲೋಟದಲ್ಲಿ ಹಾಲು ಎರೆಸಿಕೊಂಡು, ಕೈಗೆ ಸಿಕ್ಕಿದ ಚಮಚದಲ್ಲಿ ಒಂದೊಂದೇ ತೊಟ್ಟು ಹಾಲನ್ನು ಇನ್ನೂ ಕಣ್ಣು ಬಿಡದ ಆ ಚಿಕ್ಕ ಪ್ರಾಣಿಯ ಬಾಯಿಗೆ ಹಿಡಿದ, ಹಸಿವಿನಿಂದ ಕಂಗೆಟ್ಟಿದ್ದ ಮರಿ ಚೂರು-ಚೂರೇ ಹಾಲನ್ನು ಗುಟುಕರಿಸಿತು. ನಾಲ್ಕು ಚಮಚ ಹಾಲು ಕುಡಿದ ಮರಿಯನ್ನು ಮೆತ್ತೆಯ ಮೇಲೆ ಮಲಗಿಸಿ ಮೇಲೊಂದು ಬುಟ್ಟಿಯನ್ನು ಕವುಚಿಹಾಕಿ ಕಲ್ಲನ್ನು ಹೇರಿ ನಿರಾಳವಾದ. ಸಂಜೆ ಈಡಿನ ಸದ್ದು ಈ ಚಿಕ್ಕ ಪ್ರಾಣಿಯ ತಾಯಿಯನ್ನು ಬಲಿತೆಗೆದುಕೊಂಡಿದೆ, ತಾಯಿಯಿಲ್ಲದ ಮರಿ ಗಾಬರಿಯಿಂದ ಮರದ ಪೊಟರೆಯಿಂದ ಬಿದ್ದು ತನ್ನ ಕೈ ಸೇರಿದೆ. ಮುಂದೇನು ಮಾಡುವುದು ಎಂಬ ಯೋಚನೆಯಲ್ಲಿ ಯಕ್ಷಗಾನಕ್ಕೆ ಚಕ್ಕರ್ ಹಾಕಿ ಮಲಗಿದ. ಬೆಳಗ್ಗೆ ಅಷ್ಟೊತ್ತಿಗೆ ಎದ್ದು ಬುಟ್ಟಿಯನ್ನು ಎತ್ತಿದ. ಮರಿ ಕಣ್ಣು ಬಿಟ್ಟಿರಲಿಲ್ಲವಾದರೂ, ಚಟುವಟಿಕೆಯಿಂದ ಕೂಡಿತ್ತು. ಹಾಲಿನ ಪಾನ ಮುಗಿಸಿ, ಲಗುಬಗೆಯಿಂದ ಸ್ನಾನ-ತಿಂಡಿ ಪೂರೈಸಿ, ಕರ್ಕಿಕೊಪ್ಪಕ್ಕೆ  ಡ್ಯೂಟಿಗೆ ಹೊರಟ. ಮತ್ತೆ ಮನೆಗೆ ಬಂದಿದ್ದು ಸಂಜೆಗೆ. ಬಂದವನೇ ಮರಿಗೆ ಹಾಲು ಕುಡಿಸಿದ. ಬೆಳಗ್ಗೆಯಿಂದ ಹಸಿದಿದ್ದ ಮರಿ ನಿನ್ನೆಗಿಂತ ತುಸು ಹೆಚ್ಚು ಹಾಲು ಕುಡಿಯಿತು. ಮರುದಿನವೂ ಇದೇ ಪುನರಾವರ್ತನೆ. ಆದರೂ ಇದರ ದೇಖಿರೇಖಿ ತನ್ನಂತವನಿಗೆ ಕಷ್ಟವೇ ಸೈ ಎನಿಸಿತು. ಹತ್ತಿರದಲ್ಲೇ ವಾಸಿಸುತ್ತಿರುವ ಹರಿಯಪ್ಪನವರಿಗೆ ವಿಷಯ ತಿಳಿಸಿದ. ಹರಿಯಪ್ಪನವರು ಕುತೂಹಲದಿಂದ ಆದಿತ್ಯನ ಹಿಂದೆ ಹೊರಟರು. ಇನ್ನೂ ಕಣ್ಣು ಬಿಡದ ಆ ಮರಿ ಯಾವುದೆಂದು ಪತ್ತೆ ಹಚ್ಚಿದರು. ಕ್ಯಾಸಣಿಲು! ಕೆಂದಳಿಲು!! ಮಲಬಾರ್ ಜೈಯಿಂಟ್ ಸ್ಕ್ವಿರಿಲ್!!!

ಬೆಳೆಯುವ ಮಕ್ಕಳಿಗೆ ಹೇಗೆ ಹೆಚ್ಚು ಆಹಾರ ಬೇಕೋ ಹಾಗೆಯೇ ಯಾವುದೇ ಪ್ರಾಣಿಯ ಅಥವಾ ಪಕ್ಷಿಯ ಮರಿಗಳಿಗೆ ಪದೇ ಪದೇ ಆಹಾರದ ಅಗತ್ಯವಿರುತ್ತದೆ. ತೀರಾ ಆಹಾರದ ಕೊರತೆಯಾದಲ್ಲಿ ಅಪೌಷ್ಟಿಕತೆಯಿಂದ ಸತ್ತು ಹೋಗುವ ಅಪಾಯವಿರುತ್ತದೆ. ಇಲ್ಲಿ ಆದಿತ್ಯನಿಗೆ ಪದೇ ಪದೇ ಹಾಲು ನೀಡಲು ಆಗುವುದಿಲ್ಲ. ವಿಷಯ ಅರಿತ ಆದಿತ್ಯ ಆ ಮರಿಯನ್ನು ಹರಿಯಪ್ಪನವರಿಗೆ ಸಾಕಲು ಕೊಟ್ಟು ನಿರಾಳವಾದ. ಈಗ ಮರಿಯನ್ನು ಬದುಕಿಸುವ ಗುರುತರವಾದ ಹೊಣೆ ಬಿದ್ದದ್ದು ಹರಿಯಪ್ಪನವರ ಕುಟುಂಬದವರಿಗೆ. ಮರಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಹೆಂಡತಿಯ ಕೈಯಲ್ಲಿಟ್ಟು ಇದನ್ನು ಬದುಕಿಸಿದರೆ ೧೦೦೦ ರೂಪಾಯಿ ಇನಾಮು ಕೊಡುತ್ತೇನೆ ಎಂದರು. ಜೊತೆಗೆ ಇಕ್ಕೇರಿ ಅಘೋರೇಶ್ವರನಿಗೊಂದು ಹರಕೆಯನ್ನು ಕಟ್ಟಿಕೊಂಡರು. ಪೇಟೆಗೆ ಹೋಗಿ ಇಂಕ್ ಪಿಲ್ಲರ್ ತಂದು ಪ್ರತಿ ಅರ್ಧ ಗಂಟೆಗೊಂದು ಬಾರಿಯಂತೆ ಹಾಲು ನೀಡಲು ಶುರು ಮಾಡಿದರು. ಇವರು ನೀಡಿದ ಹಾಲನ್ನು ಅರಗಿಸಿಕೊಂಡ ಮರಿ ದಿನೇ ದಿನೇ ಹಿಗ್ಗುತ್ತಾ ಹೋಯಿತು. ಮೈಮೇಲಿನ ತುಪ್ಪುಳ ದಟ್ಟವಾಗಿ ಕಂದು ಬಣ್ಣಕ್ಕೆ ತಿರುಗಿತು. ಈ ಮಧ್ಯೆ ಕಣ್ಣನ್ನು ಬಿಟ್ಟು ಹೊರ ಪ್ರಪಂಚವನ್ನು ನೋಡಲು ಶುರು ಮಾಡಿತು. ಕ್ಯಾಸಣಿಲಿನ ಮರಿಗೆ ಈಗ ಹರಿಯಪ್ಪ ದಂಪತಿಗಳೇ ತಂದೆ-ತಾಯಿ. 

ಆರೈಕೆಯಲ್ಲಿ ಕೆಂದಳಿಲು ಮರಿ ಚೆನ್ನಾಗಿಯೇ ಬೆಳೆಯಿತು. ಗಂಡು ಮರಿಗೆ ಚಂದು ಎಂದು ಹೆಸರಿಟ್ಟರು. ನಾಮಕರಣ ಶಾಸ್ತ್ರಕ್ಕೆ ಮಾತ್ರ ಚಂದುವಿನ ಯಾವ ನೆಂಟರೂ ಬರಲಿಲ್ಲ. ಪೇರಳೆ, ನೇರಳೆ ಎಂದು ಸ್ಥಳೀಯ ಹಣ್ಣುಗಳ ಜೊತೆಗೆ ಚಂದುರಾಯರಿಗೆ ಪೇಟೆಯಿಂದಲೂ ಒಣದ್ರಾಕ್ಷಿ, ಉತ್ತುತ್ತೆ, ಖರ್ಜೂರ, ಬಾದಾಮಿ ಇತ್ಯಾದಿಗಳು ಬಂದವು. ಆದರೆ ಚಂದುವಿಗೆ ಬಾದಾಮಿಯೇ ಹೆಚ್ಚು ಇಷ್ಟ. ಬೆಳೆಯುತ್ತಿರುವ ಹಲ್ಲುಗಳಿಗೆ ಖಟಂ-ಖುಟುಂ ಬಾದಾಮಿ ಖುಷಿ ನೀಡುತ್ತಿತ್ತು. ಚಂದುವೀಗ ಮನುಷ್ಯರ ಸಂಗಾತಿ. ತೊಂಡೆಕಾಯಿಯನ್ನು ಚಪ್ಪರಿಸಿ ತಿನ್ನುತ್ತಾನೆ. ತೊಂಡೆಕಾಯಿಯೆಂದ ಕೂಡಲೇ ಹಿಂದೆ ನಡೆದ ಕಹಿಘಟನೆಯ ನೆನಪು ಬರುತ್ತದೆ. ಹರಿಯಪ್ಪನವರ ಅಕ್ಕ-ಭಾವರಿಗೆ ಹೀಗೆ ಒಂದು ಕೆಂದಳಿಲು ಸಿಕ್ಕಿತ್ತು. ಹೀಗೆ ಪ್ರೀತಿಯಿಂದ ಸಾಕಿದ್ದರು. ಮನುಷ್ಯರಿಗೆ ಆ ಕೆಂದಳಿಲು ಹೆದರುತ್ತಿರಲಿಲ್ಲ. ಅದೇ ಜೀವಕ್ಕೆ ಕುತ್ತಾಯಿತು. ಅದ್ಯಾರದೋ ಮನೆಯ ತೊಂಡೆ ಚಪ್ಪರಕ್ಕೆ ಮಿಡಿ ತಿನ್ನಲು ಹೋಗಿತ್ತು. ತೊಂಡೆ ಬಳ್ಳಿಯ ಯಜಮಾನ ಹತ್ತಿರ ಬಂದರೂ ಇನ್ನು ಎಳೆ ತೊಂಡೆಯನ್ನು ತಿನ್ನುತ್ತಲೇ ಇತ್ತು. ಸಿಟ್ಟುಗೊಂಡ ಯಜಮಾನ ಕೋಲು ಬೀಸಿದ. ತೊಂಡೆಬಳ್ಳಿಯಿಂದ ಬಿದ್ದ ಅಳಿಲು ಮತ್ತೆ ಮೇಲೆ ಏಳಲಿಲ್ಲ.

ಈ ಮಧ್ಯೆ ಸಂಸಾರದ ಕೆಲಸದ ಮೇಲೆ ಚಂದುವಿನ ಸಾಕುತಾಯಿ ಬೆಂಗಳೂರಿನ ಮಗಳ ಮನೆಗೆ ಹೋದರು. ಚಂದುವಿನ ಸಂಪೂರ್ಣ ಜವಾಬ್ದಾರಿ ಈಗ ಪೂರ್ತಿ ಸಾಕುತಂದೆಯದೇ ಆಯಿತು. ಎಲ್ಲಾ ಪ್ರಾಣಿಗಳ ಶೈಶವಾವಸ್ಥೆಯು ತುಂಟತನದಿಂದ ಕೂಡಿರುತ್ತದೆ. ಚಂದುವೀಗ ತುಂಟತನದ ತುಟ್ಟತುದಿಯೇರಿ ಕುಳಿತಿದ್ದಾನೆ. ಪೌಷ್ಟಿಕ ಆಹಾರದಿಂದ ಮೈಯಲ್ಲಿ ಕಸುವು ತುಂಬಿದೆ. ಜಿಗಿದಾಟಕ್ಕೆ ಹೆಚ್ಚಿನ ಮಹತ್ವ. ಆದರೆ ಯಾವುದರ ಮೇಲೆ ಜಿಗಿದರೆ ತನ್ನ ಭಾರವನ್ನು ತಡೆಯಬಲ್ಲದು ಎಂಬ ಜ್ಞಾನವಿನ್ನೂ ಚಂದುವಿಗೆ ಬಂದಿಲ್ಲ. ಅತ್ತ-ಇತ್ತ ಹಾರುತ್ತಾ ಮೂಲೆಯಲ್ಲಿದ್ದ ಫ್ಯಾನಿನ ಮೇಲೆ ಹಾರಿದ, ಫ್ಯಾನು ಮಗುಚಿ ಬಿತ್ತು. ಫ್ಯಾನಿನ ರೆಕ್ಕೆ ಮುರಿದು ಹೋಯಿತು. ಯಾರೂ ಇಲ್ಲದ ಮನೆಯಲ್ಲೀಗ ಚಂದುವಿಗೆ ಹರಿಯಪ್ಪನವರೇ ಸಂಗಾತಿ. ಫ್ಯಾನಿನ ರೆಕ್ಕೆ ಮುರಿದ ಚಂದುವಿಗೆ ಗದರಿದರು. ತನ್ನಿಂದೇನೋ ತಪ್ಪಾಯಿತು ಎಂದು ಚಂದುವಿಗೆ ತಿಳಿದುಹೋಯಿತು. ಬೈಯ್ದಿದ್ದನ್ನು ಅರಗಿಸಿಕೊಳ್ಳಲು ಕಷ್ಟವಾಗಿ ಮಹಡಿಯ ಮೂಲೆ ಸೇರಿತು. ಬರೀ ಅರ್ಧಗಂಟೆಯಲ್ಲಿ ವಾಪಾಸು ಬಂದು ಹರಿಯಪ್ಪನವರ ಭುಜವೇರಿ ರಮಿಸಿತು.

ಕೆಂದಳಿಲು ನಿಶಾಚರ ಪ್ರಾಣಿಯಲ್ಲ. ಹಗಲು ಹೊತ್ತಿನಲ್ಲಿ ಚಟುವಟಿಕೆಯಿಂದಿರುವ ಪ್ರಾಣಿ. ಹರಿಯಪ್ಪನವರ ಮನೆಯಲ್ಲಿ ರಾತ್ರಿ ಊಟ ಮಾಡಿ, ಟಿ.ವಿ.ನೋಡಿ ಮಲಗುವುದು ರಾತ್ರಿ ಹತ್ತು ಗಂಟೆಗೆ. ಸ್ವಾಭಾವಿಕವಾದ ಪರಿಸರದಲ್ಲಿ ಕತ್ತಲಾಗುತ್ತಿದ್ದಂತೆ ಕೆಂದಳಿನಂತಹ ಪ್ರಾಣಿಗಳು ವಿಶ್ರಾಂತಿಗೆ ಹೋಗುತ್ತವೆ. ಆದರೆ ಇಲ್ಲಿ ರಾತ್ರಿ ಹತ್ತು ಗಂಟೆಯವರೆಗೂ ಚಂದುವಿನ ಚಿನ್ನಾಟ ಮುಂದುವರೆಯುತ್ತದೆ. ಅಪ್ಪನ ಭುಜವೇರಿ, ನೆತ್ತಿ ಹತ್ತಿ, ಮಾರು ದೂರದಲ್ಲಿ ಕುಳಿತ ಅಮ್ಮನ ಭುಜಕ್ಕೆ ಹಾರುವುದು. ಮಧ್ಯದಲ್ಲಿ ಬಾದಾಮಿಯನ್ನು ಮೆಲ್ಲುವುದು ಇತ್ಯಾದಿ ಆಟಗಳಲ್ಲಿ ತೊಡಗುವುದು. ಸಾಕುತ್ತಿರುವವರಿಗೆ ಮನರಂಜನೆ ಬೇಕು. ಅದಕ್ಕಾಗಿ ಅವರು ಟಿ.ವಿ.ಯಲ್ಲಿ ಬರುವ ಧಾರಾವಾಹಿಗಳನ್ನು ನೋಡುತ್ತಾರೆ. ಚಂದುವಿಗೆ ಟಿ.ವಿ. ಬೇಡ. ತನ್ನ ಕಡೆ ಗಮನ ನೀಡದ ತಂದೆ-ತಾಯಿಗಳ ಗಮನವನ್ನು ತನ್ನ ಕಡೆಗೆ ಸೆಳೆಯಲು ಹಲವಾರು ಇಂತಹ ಕಸರತ್ತುಗಳನ್ನು ಚಂದು ಮಾಡುತ್ತಾನೆ. ಮನೆಯ ದೀಪಗಳನ್ನು ಆರಿಸಿದ ನಂತರ ಚಂದುವೀಗ ಮಲಗುತ್ತದೆ. ಚಂದುವಿಗೆ ಮಲಗಲು ಇಡೀ ಮನೆಯಿದೆ. ಆದರೆ ಒಮ್ಮೊಮ್ಮೆ ಚಂದು ಹರಿಯಪ್ಪನವರ ಚಾದರವನ್ನು ಹೊಕ್ಕು ಮಲಗಿ ಬಿಡುತ್ತಾನೆ. ಹರಿಯಪ್ಪನವರು ಬೆಳಗ್ಗೆ ೬ಕ್ಕೆ ಎದ್ದು ಕೊಟ್ಟಿಗೆ ಕೆಲಸ ಅದೂ-ಇದೂ ಮಾಡುತ್ತಾರೆ. ಚಂದು ಮಾತ್ರ ಏಳುವುದು ಬೆಳಗ್ಗೆ ೯ ಗಂಟೆಗೆ. 

ಒಂದು ದಿನ ರಾತ್ರಿ ಅಲ್ಲಿಂದ ಇಲ್ಲಿಗೆ ಹಾರುತ್ತಿರುವಾಗ ಒಂದು ಅನಾಹುತವಾಯಿತು. ಸೀದಾ ಈಳಿಗೆ ಮಣೆಯ ಮೇಲೆ ಹಾರಿತು. ಗೋಡೆಗೆ ಒರಗಿಸಿ ಇಟ್ಟಿದ್ದ ಈಳಿಗೆ ಮಣೆ ಕವುಚಿ ಚಂದುವಿನ ಮೇಲೆ ಬಿತ್ತು. ಚಂದುವಿಗೆ ಎಚ್ಚರ ತಪ್ಪಿತು. ಅದೂ ಮನೆಯೊಡತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ. ಹರಿಯಪ್ಪನವರ ಎದೆ ಡವ-ಡವ. ಚಂದುಗೆ ಎಚ್ಚರವಿಲ್ಲ. ಎತ್ತಿ ತೊಡೆಯ ಮೇಲೆ ಹಾಕಿಕೊಂಡು ಸ್ವಲ್ಪ ನೀರು ಕುಡಿಸಿದರು. ರಾತ್ರಿ ಹತ್ತು ಗಂಟೆ. ಮನೆಯಲ್ಲಿ ಯಾರೂ ಇಲ್ಲ. ಇತ್ತ ಚಂದುವಿನ ಪರಿಸ್ಥಿತಿ ಹೀಗಿದೆ. ದೇವರ ಮೇಲೆ ಭಾರ ಹಾಕಿ ಜೊತೆಯಲ್ಲೇ ಮಲಗಿಸಿಕೊಂಡರು. ಚಂದುವಿಗೆ ರಾತ್ರಿಯಿಡೀ ಎಚ್ಚರವಿಲ್ಲ. ಹರಿಯಪ್ಪನವರಿಗೆ ರಾತ್ರಿಯಿಡೀ ನಿದ್ದೆಯಿಲ್ಲ. ಅಂತೂ ಬೆಳಗಾಯಿತು. ಅದೇನು ಚಮತ್ಕಾರವೋ ಬೆಳಗಿನ ಹೊತ್ತಿಗೆ ಚಂದು ಸುಧಾರಿಸಿಕೊಂಡಿತ್ತು. ಮತ್ತೆ ಮೊದಲಿನಂತಾಯಿತು. ಇಕ್ಕೇರಿ ಅಘೋರೇಶ್ವರನಿಗೆ ಜೋಡುಗಾಯಿ ಅರ್ಪಿತವಾಯಿತು.

ಚಂದುವಿನ ಸ್ವಗತ:

ಈಗ ನಾನು ವಾಸಿಸುತ್ತಿರುವ ಮನೆ ಬಲುದೊಡ್ಡದು. ನನ್ನನ್ನು ಸಾಕಿದವರು ಎರಡೇ ಕಾಲಿನಲ್ಲಿ ನಡೆಯುತ್ತಾರೆ, ನನ್ನನ್ನು ತುಂಬಾ ಪ್ರೀತಿ ಮಾಡುತ್ತಾರೆ. ನನಗೆ ಆಡಲು ಮಹಡಿಯ ಮೇಲೆ ಜೋಕಾಲಿ ಕಟ್ಟಿಕೊಟ್ಟಿದ್ದಾರೆ. ಅಂಗಳದಲ್ಲಿ ರೆಂಭೆ-ಕೊಂಬೆಗಳಿಂದ ಕೂಡಿದ ಒಂದು ಮರವನ್ನು ಆಡಲು ನೆಟ್ಟಿದ್ದಾರೆ. ನನ್ನ ಹಾಗೆ ಇವರ ಮನೆಯಲ್ಲಿ ಒಂದು ನಾಯಿ ಕೂಡಾ ಇದೆ. ತುಂಬಾ ಸಿಟ್ಟಿನ ನಾಯಿ. ಸುಮಾರು ಜನರಿಗೆ ಕಚ್ಚಿದೆಯಂತೆ. ನನ್ನನ್ನು ನಾಯಿಯ ಹತ್ತಿರ ಹೋಗಲು ಬಿಡುವುದಿಲ್ಲ. ಮನೆಗೆ ಬೆಕ್ಕು ಬಂದರೂ, ಓಡಿಸುತ್ತಾರೆ. ನನ್ನನ್ನು ನೋಡಲೂ ಜನ ಬರುತ್ತಾರೆ. ಆದರೆ ನನಗೆ ಅಪರಿಚಿತರನ್ನು ಕಂಡರೆ ಭಯ. ನನಗಾಗಿ ಬುಟ್ಟಿಗಟ್ಟಲೆ ಹಣ್ಣನ್ನು ತಂದು ಇಡುತ್ತಾರೆ. ನಾನು ಮನೆಯಲ್ಲಿ ಗಲೀಜು ಮಾಡಿದರೆ, ಒಣ ಬಟ್ಟೆಯಿಂದ ಒರೆಸುತ್ತಾರೆ. ವಾರಕ್ಕೊಂದು ಬಾರಿ ಹದವಾದ ಬಿಸಿ ನೀರಿನಿಂದ ಸ್ನಾನವನ್ನು ಮಾಡಿಸುತ್ತಾರೆ. ನನ್ನ ಅಷ್ಟೂ ಚೇಷ್ಟೆಗಳನ್ನೂ ಸಹಿಸಿಕೊಂಡು ನನ್ನ ಪ್ರೀತಿ ಮಾಡುತ್ತಾರೆ. ಇರುವೆಗಳು ತಿಂದು ಸಾಯಬೇಕಾದ ನನ್ನನ್ನು ಕಾಪಾಡಿದ ಆದಿತ್ಯನೆಂಬ ಪುಣ್ಯಾತ್ಮ ಹಾಗೂ ನನ್ನನ್ನು ಸಾಕುತ್ತಿರುವ ಅಪ್ಪ-ಅಮ್ಮನಿಗೆ ನಾನೆಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ. ಒಮ್ಮೊಮ್ಮೆ ಅನಿಸುತ್ತದೆ ಇವರ ಋಣ ತೀರಿಸುವ ಬಗೆ ಹೇಗೆ?

ಮೊನ್ನೆ ಯಾರೋ ನಾಲ್ಕು ಜನ ಬಂದಿದ್ದರು. ಕ್ಯಾಮರದಲ್ಲಿ ನನ್ನ ಚಿತ್ರವನ್ನು ತೆಗೆದರು. ಮೊಬೈಲ್‌ನಲ್ಲೂ ನನ್ನ ಫೋಟೋ ಅಚ್ಚಾಯಿತು. ಅದರಲ್ಲೊಬ್ಬರು ಕೈಯಲ್ಲಿ ಬಾದಾಮಿ ಹಿಡಿದುಕೊಂಡು ನನ್ನನ್ನು ನೆವೇರಿಸಿದರು ನಾನು ಅವರು ಅಪಾಯಕಾರಿ ಜನ ಅಲ್ಲ ಅಂತ ಅವರ ಭುಜವೇರಿದೆ. ಮತ್ತೆ ಯಾಕೋ ಅನುಮಾನ ಬಂದು ಮಹಡಿಗೆ ಹೋಗಿ ನನಗಾಗಿ ಮಾಡಿಟ್ಟ ಗೂಡಿನಲ್ಲಿ ಕುಳಿತೆ. ಅಮ್ಮ ಬಂದು ರಮಿಸಿ ಕರೆದರು. ಆ ನಾಲ್ಕು ಜನ ನನ್ನ ಹಿಂದೆ ಮಹಡಿಗೂ ಬಂದರು. ನಾನು ಅಡಗಿ ಕುಳಿತೆ. ಅಪ್ಪ ಬಂದು ರಮಿಸಿ ಕೈಯಲ್ಲೆತ್ತಿಕೊಂಡರು. ನನ್ನನ್ನು ಜೋಕಾಲಿ ಮೇಲೆ ಹತ್ತಿಸಿದರು. ನನಗೆ ಅಪರಿಚಿತರ ಕಂಡರೆ ಅದೇನೋ ಭಯ. ನಾನು ಜೋಕಾಲಿಯಲ್ಲಿ ಆಟವಾಡಲಿಲ್ಲ. ಆದರೂ ನನ್ನನ್ನು ನೋಡಿ ಅವರಿಗೆ ಬಹಳ ಖುಷಿಯಾಗಿತ್ತು. ನನ್ನ ಚಂದನೆಯ ಬಾಲವನ್ನು ಹೊಗಳಿದ್ದೇ ಹೊಗಳಿದ್ದು, ನನ್ನ ಹೆಸರಿಡಿದು ಕೂಗಿದ್ದೆ ಕೂಗಿದ್ದು. ನನಗೆ ಬಾಲವನ್ನು ಮುಟ್ಟಿದರೆ ಮಾತ್ರ ಸಿಟ್ಟು ಬರುತ್ತದೆ. ನನ್ನನ್ನು ಹಿಡಿಯಲು ಬಂದ ಅಮ್ಮ ಒಮ್ಮೆ ಬಾಲವನ್ನು ಹಿಡಿದಳು. ನನಗೆ ಸಿಟ್ಟು ಬಂದು ಗುರುಗುಟ್ಟಿದೆ. ಅಮ್ಮ ರಮಿಸಿದರು. ಬಂದ ಅಪರಿಚಿತರು ಸ್ವಲ್ಪ ಹೊತ್ತಿನಲ್ಲಿ ವಾಪಾಸು ಹೋದ ಮೇಲೆ ನನಗೆ ನಿರಾಳವಾಯಿತು. ನಾನು ಇಲ್ಲೇ ಇರುತ್ತೇನೆ. ಏಕೆಂದರೆ, ನನಗೆ ಇದಕ್ಕಿಂತ ಹೆಚ್ಚಿನ ಸುರಕ್ಷಿತ ತಾಣ ಬೇರೆಲಿಲ್ಲ. 

ಚಂದುವಿನ ಅಳಲು:

ಅನ್ಯಾಯವಾಗಿ ಗುಂಡೇಟಿಗೆ ಬಲಿಯಾದ ನನ್ನ ತಾಯಿಯನ್ನು ನೋಡದೆ, ತಬ್ಬಲಿ ಮಗುವಾಗಿ, ಅನಾಥ ಶಿಶುವಾಗಿದ್ದ ನಾನು ಅದೃಷ್ಟವಶಾತ್ ನನ್ನವರಿಲ್ಲದಿದ್ದರೂ ಸುಖವಾಗಿದ್ದೇನೆ. ನನಗೆ ಸಿಕ್ಕಿದ ಈ ಭಾಗ್ಯ ನನ್ನಂತ ಬೇರೆಯವರಿಗೆ ಸಿಗಲಾರದು. ಅಲ್ಪ ಸಂಖ್ಯಾತರಾದ, ನಿರುಪದ್ರವಿಗಳಾದ ನನ್ನ ಬಂಧುಗಳನ್ನು ಭೇಟೆಯಾಡದೇ, ಕನಿಕರದಿಂದ ನೋಡಿ ಉಳಿಸಿ. 

ಉಪಸಂಹಾರ:

ಹರಿಯಪ್ಪನವರ ಮನೆಯಲ್ಲಿ ಚೆಂದಳಿಲು ಸಾಕಿದ್ದಾರೆ ಎಂದು ಗೊತ್ತಾಗಿದ್ದು, ಖುದ್ದು ಹರಿಯಪ್ಪನವರಿಂದಲೇ. ನಮ್ಮ ಮನೆಯ ಹಿಂದೆ ಕೂಡಾ ಕೆಂದಳಿಲಿನ ಸಂಸಾರವಿದೆ. ತುಂಬಾ ನಾಚಿಕೆಯ ಸ್ವಾಭಾವದ ಈ ಪ್ರಾಣಿಗಳನ್ನು ಮಾಂಸಕ್ಕಾಗಿ ಮತ್ತು ಚರ್ಮಕ್ಕಾಗಿ ಬೇಟೆಯಾಡಿ ಕೊಲ್ಲುತ್ತಾರೆ. ರೈತರಿಗೆ ಕೆಂದಳಿಲು ಅಷ್ಟೇನೂ ಅಪಾಯಕಾರಿಯಲ್ಲದಿದ್ದರೂ, ಎಳೆ ತೆಂಗಿನ ಮಿಡಿಗಳನ್ನು ತಿನ್ನುತ್ತದೆ ಎನ್ನಲಾಗುತ್ತದೆ. ದಂಶಕ ವಂಶದ ಜಾತಿಯೆಲ್ಲೆಲ್ಲಾ ಅತ್ಯಂತ ಸುಂದರವಾದ ಕೆಂದಳಿಲು, ಮನುಷ್ಯರ ಏಕಮಾತ್ರ ಹಸ್ತಕ್ಷೇಪದಿಂದಾಗಿ ಅಳಿವಿನಂಚಿಗೆ ಬಂದಿವೆ. ಸಾಕಿದ ಕೆಂದಳಿಲು ವಯಸ್ಸಿಗೆ ಬರುತ್ತಿದ್ದಂತೆ ಸಂಗಾತಿಗಾಗಿ ಹಾತೊರೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಮನೆಯಿಂದ ಹೊರಗೆ ಹೋಗಿ ಅಪಾಯಕ್ಕೆ ಸಿಲುಕುವ ಭೀತಿಯಿರುತ್ತದೆ. ಹೆಗ್ಗೋಡಿನ ಸಮೀಪದಲ್ಲೊಬ್ಬರ ಮನೆಯಲ್ಲಿ ಒಂದು ಹೆಣ್ಣು ಕೆಂದಳಿಲನ್ನು ಸಾಕಿದ್ದಾರೆ ಎಂದು ಗೊತ್ತಾಗಿದೆಯಾದ್ದರಿಂದ, ಹರಿಯಪ್ಪನವರಿಗೆ ತಮಾಷೆಯಾಗಿ, ನಿಮ್ಮ ಚಂದುವಿಗೆ ಮದುವೆ ಯಾವಾಗ ಎಂದು ಕೇಳಿದೆ. ಮನೆಗೆ ಸೊಸೆಯನ್ನು ತರುತ್ತೀರೋ ಅಥವಾ ಮನೆಯಳಿಯನಾಗಿ ಚಂದುವನ್ನೇ ಅವರ ಮನೆಗೆ ಕಳುಹಿಸುತ್ತೀರೋ ಎಂದು ಮುಂದುವರೆದು ಹೇಳಿದಕ್ಕೆ ಹರಿಯಪ್ಪನವರು ನಕ್ಕರು. ಏನೇ ಆಗಲಿ ಚೆಂದದ ಚಂದುವಿನಂತಹ ಚೆಂದಳಿಲಿಗೆ ಏನೂ ಅಪಾಯವಾಗದಿರಲಿ ಎಂದು ಆಶಿಸುತ್ತಾ. . .

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

6 thoughts on “ಕೆಂದಳಿಲು-ಚೆಂದದಳಿಲು: ಅಖಿಲೇಶ್ ಚಿಪ್ಪಳಿ

  1. ಮಾನವೀಯತೆ ಇನ್ನೂ ಉಳಿದಿದೆ .. ಚೆಂದಳಿನ ಬಗ್ಗೆ ಚೆಂದದ ಬರಹ

  2. ಚೆನ್ನಾಗಿದೆ! ನಿಮ್ಮ ಕಳಕಳಿಯನ್ನು ತುಂಬಾ ಸ್ವಾರಸ್ಯಕರವಾಗಿ ನಿರೂಪಿಸಿದ್ದೀರಿ.

  3. ಪ್ರತಿಕ್ರಯಿಸಿದ ಅನಿತಾ ನರೇಶ್ ಮಂಚಿ, ಗುರುಪ್ರಸಾದ್
    ಕುರ್ತಕೋಟಿ ಹಾಗೂ ಪ್ರಶಸ್ತಿ ಪಿ. ಇವರಿಗೆ ಧನ್ಯವಾದಗಳು

    ಮತ್ತು ಲೈಕ್ ಹಾಗೂ ಶೇರ್ ಮಾಡಿದವರಿಗೂ
    ವಂದನೆಗಳು.

  4. very nice article… I have got an orphan  baby squirrel to care now. ur details strengthen my feel to parent it. Thank you!!!

Leave a Reply

Your email address will not be published. Required fields are marked *