“ವಿಮರ್ಶೆಯು ಒಂದು ಬೌದ್ಧಿಕ ಕ್ರಿಯೆ. ಯಾವುದೇ ಕೃತಿಯನ್ನು ತೂಗಿನೋಡಿ ಮೌಲ್ಯ ನಿರ್ಧರಿಸುವ ಸಾಮಥ್ರ್ಯ ಅಥವಾ ಕಲೆ – ಕ್ರಿಟಿಸಿಸಮ್. ಈ ಪದ ಗ್ರೀಕ್ ಮೂಲದ ಕ್ರಿನೈನ್‍ದಿಂದ ಬಂದದ್ದು. ಅಂದರೆ ಬೇರ್ಪಡಿಸು, ವಿವೇಚಿಸು, ವಿಶ್ಲೇಷಿಸು ಎಂದರ್ಥ. ಕ್ರಿಯಾಶೀಲ ಬರೆಹಗಾರರು, ಪ್ರಾರಂಭಿಕ ಬರೆಹಗಾರರು, ವೃತ್ತಿಶೀಲ ವಿಮರ್ಶಕರು ಎಲ್ಲರ ವಿಶ್ಲೇಷಣೆಯನ್ನು ವಿಮರ್ಶೆಯೆಂದೇ ಕರೆಯಲಾಗುತ್ತದೆ. ಇಂದು ಬಳಸುತ್ತಿರುವ ವಿಮರ್ಶೆ ಎಂಬ ಪದ ಇಂಗ್ಲಿಷ್‍ನ ಕ್ರಿಟಿಸಿಸಂ ಪದಕ್ಕೆ ಸಂವಾದಿ” ಎಂದು ಮಾಸ್ತಿ ವೆಂಕಟೇಶ ಅಯ್ಯಂಗಾರರು ತಮ್ಮ ವಿಮರ್ಶಾ ಬರಹಗಳಲ್ಲಿ ವಿಶೇಷವಾಗಿ ಸಣ್ಣ ಅತಿಸಣ್ಣ ಕಥೆಗಳ ವಿಮರ್ಶೆ ವಿಶ್ಲೇಷಣೆ ಕುರಿತು ವ್ಯಾಖ್ಯಾನಿಸಿದ್ದಾರೆ. ಈ ವ್ಯಾಖ್ಯಾನದ ಬೆನ್ನಿಡಿದು ಗುರುಪ್ರಸಾದ್ ಕಂಟಲಗೆರೆ ಅವರ ‘ಕೆಂಡದ ಬೆಳುದಿಂಗಳು’ ಕಥೆಗಳನ್ನು ಓದುತ್ತಾ, ಮಾಸ್ತಿ ವೆಂಕಟೇಶ ಅಯ್ಯಂಗಾರರ ವಿಮರ್ಶಾ ವಿಶ್ಲೇಷಣಾ ನಿರೂಪಣೆಯ ಕಥಾ ಕೋನ ಹಿಡಿದು, ಇಲ್ಲಿರುವ ಎಲ್ಲ ಕಥೆಗಳ ಒಳ ಹೊಕ್ಕಿ ನೋಡಬೇಕೇ? ಅಥವಾ ಅದರ ಕಥಾಸಾರದ ಒಳಗಣ ಗಮ್ಮತ್ತನ್ನು ಬಸಿದು ತೆರೆದಿಡಬೇಕೆ? ಎಂಬ ಪ್ರಶ್ನೆ, ಕ್ರಿಯಾತ್ಮಕ ಓದಿನ ಕ್ರಮಕ್ಕೆ ಸಾಧ್ಯಂತವಾಗಿ ಓದುಗನ್ನು ಅಥವಾ ವಿಮರ್ಶಾ ವಿಶ್ಲೇಷಕನನ್ನು “ಕೆಂಡದ ಬೆಳುದಿಂಗಳು” ನೂಕಿ ಬಿಡುತ್ತದೆ.
‘ಕೆಂಡದ ಬೆಳುದಿಂಗಳು’ ಸಂಕಲನದ ಶೀರ್ಷಿಕೆ ಒಂದು ಕೋನದಲ್ಲಿ ಧ್ವನ್ಯಾರ್ಥ ಸೂಚಕವಾಗಿ ಧ್ವನಿಸುತ್ತ, ಇನ್ನೊಂದು ಕೋನದಲ್ಲಿ ಅಯಸ್ಕಾಂತೀಯ ಗುಣದೊಂದಿಗೆ ಅದರೊಳಗಿನ ಕಥೆಗಳು, ಓದುಗನ ಭಾವಕ್ಕೆ ವಿಭಿನ್ನ ಅರ್ಥ ಹೊರಡಿಸಬಲ್ಲ ಸಶಕ್ತ ಶೀರ್ಷಿಕೆಯಾಗಿದೆ. ಇಲ್ಲಿ ಕೆಂಡಕ್ಕು ಬೆಳದಿಂಗುಳಿಗೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ‘ಕೆಂಡದ ಬೆಳುದಿಂಗಳು’ ಪುಟ ತಿರುವಿದರೆ ‘ಕೆಂಡದ ಬೆಳುದಿಂಗಳು’ ಕಥೆಯೇ ಇಲ್ಲ! ಅರೆ, ಈ ಶೀರ್ಷಿಕೆಯ ಕಥೆಯೇ ಇಲ್ಲದೆ ಇಲ್ಲಿರುವ ಚಾಕರಿ, ಇವ ನಮ್ಮವ, ಪ್ರತಿಮೆ ತೆರವು, ಕುರುವು, ಬೇರಿಗಂಟದ ಮರ, ಶ್ರೀಮನದ ಹೂದೋಟ, ಜಾಂತಿ ಮಾಂಸ, ಟಿಪ್ಪು, ಎರಡನೇ ಹೆಂಡ್ತಿ, ಶವರ್ ಮನೆ, ಯ ಒಟ್ಟು ಗುಚ್ಚದ ಮೊತ್ತ ಇದಾಗಿದೆ. ಈ ರೀತಿ ‘ನಿರ್ದಿಷ್ಟ ಕಥೆ’ಯೇ ಇಲ್ಲದೆ ಸಂಕಲನಕ್ಕೊಂದು ಶೀರ್ಷಿಕೆ ಕೊಟ್ಟಿರುವುದರಲ್ಲೆ ಕಥೆಗಾರನ ಸೃಜನಶೀಲತೆ ಅಡಗಿದೆ.
ಈತರದ ಪ್ರಯೋಗ ಹೊಸದಲ್ಲದೆ ದೇವನೂರ ಮಹಾದೇವ ಅವರು ತಮ್ಮ ಮೊದಲ ಕಥಾ ಸಂಕಲನಕ್ಕೆ ‘ದ್ಯಾವನೂರು’ ಅನ್ನೊ ಶೀರ್ಷಿಕೆ ಕೊಟ್ಟರು ಅದರಲ್ಲಿ ‘ದ್ಯಾವನೂರು’ ಎಂಬ ‘ನಿರ್ದಿಷ್ಟ ಕಥೆ’ಯೇ ಇಲ್ಲದೆ ಅದರೊಳಗಿನ ಆ ಎಲ್ಲ ಕಥೆಗಳೂ, ಕಥೆಗಳೂಳಗಿನ ಪಾತ್ರಗಳೂ, ದೇವನೂರೆಂಬ ದೇವನೂರಿನ ಚಿತ್ರ ಚಿತ್ತಾರಗಳೂ, ಅದರ ಒಡಲೊಳಗೆ ಬೆಂಕಿ ಕೆಂಡದಂತ ನೋವಿನ ವಿವರಗಳು ತಣ್ಣಗೆ ಪಿಸುಗುಡುತ ಕುಲುಕಿ ಮುಲುಕಿ ಮಗ್ಗುಲು ಬದಲಿಸುತ್ತಾ ಊರ ಸೆರಗಿಗಂಟಿ ದುಕ್ಕಳಿಸುತ್ತಾ ಮೂಳೆ ಚಕ್ಕಳ ರಕ್ತ ಮಾಂಸ ಒಂದರೊಳಗೊಂದು ಬೆರೆತು ಹೆಣೆದುಕೊಂಡು ಹೇಳಿಕೊಂಡ ಕಥೆಗಳೇ ಆಗಿವೆ. ಹೀಗೆ ‘ನಿರ್ದಿಷ್ಟ ಕಥೆ’ಯ ‘ದೇಹ’ವೇ ಇಲ್ಲದೆ ಮೂಳೆ ಚಕ್ಕಳ ರಕ್ತ ಮಾಂಸ ಗಡದ್ದಾಗಿ ಒಂದರೊಳಗೊಂದು ಬೆರೆತು ಧ್ವನಿಸುವ ‘ಕೆಂಡದ ಬೆಳುದಿಂಗಳು’ ಸಂಕಲನದ ಮೊದಲ ಕಥೆ ‘ಚಾಕರಿ’ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಈಗಾಗಲೇ ಮೊದಲ ಬಹುಮಾನ ಪಡೆದ ಶಕ್ತ ಕಥೆ.
ಯಶವಂತ ಚಿತ್ತಾಲರು ತಮ್ಮ ‘ಆಟ’ ದಲ್ಲಿ “ಎಂದಿನಂತೆಯೇ, ದೀಪ ಹಚ್ಚುವ ಹೊತ್ತಿಗೇ ಊಟವನ್ನು ಮುಗಿಸಿ, ಊರ ಇನ್ನೊಂದು ಕೊನೆಯಲ್ಲಿದ್ದ ಮೊಮ್ಮಗಳ ಮನೆಗೆ ಹೊರಟು ನಿಂತ ಬುಡಣಸಾಬರು ಒಳಗೆ ಅಡುಗೆ ಮನೆಯಲ್ಲೆಲ್ಲೊ ಕೆಲಸದಲ್ಲಿ ತೊಡಗಿದ ಮೊಮ್ಮಗನ ಹೆಂಡತಿಯನ್ನು ಕರೆದು, “ಚಾಂದಬೀಬೀ, ಕದ ಅಡ್ಡ ಮಾಡಿಕೋ. ಫಾತಿಮಾಳ ಮನೆಗೆ ಹೋಗಿ ಬರುತ್ತೇನೆ” ಎಂದು ಹೇಳಿ, ಅವಳ ಉತ್ತರದ್ದಾಗಲೀ ಬರವಿನದಾಗಲೀ ಹಾದಿ ಕಾಯದೆ, ಕೈಯಲ್ಲೆತ್ತಿಕೊಂಡ ಉದ್ದನ್ನ ಬಿದಿರಿನ ದೊಣ್ಣೆಯನ್ನೂರುತ್ತ ಮೆಲ್ಲನೆ ಜಗಲಿಯ ಮೆಟ್ಟಿಲಿಳಿದು ಅಂಗಳಕ್ಕೆ ಬಂದದ್ದೆ, ಹೊರಗೆ ಹೊತ್ತಿಗೆ ಮೊದಲೇ ಕವಿದ ಕತ್ತಲೆ ನೋಡಿ, ಆಕಾಶದತ್ತ ಕಣ್ಣೆತ್ತಿ, ‘ಅರೆ ಅಲ್ಲಾ..’ ಎನ್ನುತ್ತಿರುವಾಗ ದೂರ ಹುಣಸೇ ಮರಗಳ ತೋಪಿನಾಚೆಯ ಗುಡ್ಡಗಳ ನೆತ್ತಿಯಲ್ಲಿ ಗುಡುಗಿನ ಸದ್ದೂ ಕೇಳಿಸಿದಂತಾಗಿ, ಈ ಅಡ್ಡ ತಿಂಗಳಲ್ಲಿ ಮಳೆ ಬರುವಂತಿದೆಯಲ್ಲಾ ಎಂದುಕೊಂಡರೂ ಅದರ ಪರಿವೆಯೇ ಇಲ್ಲದವರಂತೆ ಅಂಗಳ ದಾಟಿ ಓಣಿಯತ್ತ ಸಾಗಿದ್ದರು” ಎಂದು ಸನ್ನಿವೇಶದ ಆರಂಭಿಕ ಚಿತ್ರಣವನ್ನು ಕಟ್ಟಿ ಕೊಡುವಂತೆ, ಗುರುಪ್ರಸಾದ್ ಕಂಟಲಗೆರೆ ‘ಚಾಕರಿ’ ಕಥೆಯಲ್ಲಿ, “ಬೆಳಗಿನ ಜಾವ ಮೂರರ ಸಮಯ. ತಿಂಗಳ ಬೆಳಕು ಊರೆಲ್ಲ ಹಬ್ಬಿ ಮನೆಗಳು ಬೆಳಗಿನಂಗೆ ಅದದೆ ಬಣ್ಣದಲ್ಲೆ ಕಾಣುತ್ತಿದ್ದರೂ ಒಂಚೂರು ಡಿಮ್ಮಾಗಿದ್ದವು. ಮರಗಳು ತಮ್ಮ ಎಲೆಗಳ ಬೆರಸೆಯಾಗಿ ಮೇಲೂ ಇತ್ತ ಕೆಳಗೂ ಕಪ್ಪಟೆ ಕರ್ರಗೆ ಇದ್ದು , ನೆಲದ ಮೇಲೆ ಕತ್ತಲು ಹರಿದಾಡಿದಂತಾಗಿತ್ತು. ಊರ ಮುಂದಕ ಬೇವಿನಮ್ಮನ ಮರದಡಿಯ ಕರುವುಗಳ್ ಮೇಲೆ ಮನುಷ್ಯನಂತದ್ದೇ ಬೂದಿ ಮುಚ್ಚಿದಂತ ಆಕೃತಿ ಮುಂದೆ ಕೆಂಪನೆಯ ಕಿಡಿ ಮ್ಯಾಕೋಗಿ ಕೆಳಗಿಳಿಯುತ್ತಿತ್ತು. ಅಷ್ಟೊತ್ತಲ್ಲಿ ಆ ಕರುವುಗಳ್ ಮ್ಯಾಲೆ ಬ್ಯಾತಾಳ್ನಂಗೆ ಕೂತು ಬೀಡಿ ಎಳೆಯುತ್ತಿದ್ದುದು. ಉದ್ದನೆ ಕಾಲ ರಂಗಮ್ಮುನ ಮಗ ಚಂಗ. ಚಂಗನ ತುಟಿ ಏರಿದಾಗ ರಜಸ್ಸಾಗುತ್ತಿದ್ದ ಬೀಡಿ, ಕೆಳಗಿಳಿದಾಗ ಮಂಕಾಗುತ್ತಿತ್ತು. ಎಷ್ಟೊತ್ತಾದರೂ ಮೂಲೆ ಮನೆ ತಟಿಗೆ ಸರಿದಾಡದಿದ್ದುದರಿಂದ ಸಿಟ್ಟಾಗುತ್ತಿದ್ದ ಚಂಗನ ಮೆದುಳು ಬೀಡಿ ತುದಿ ಉರಿದಂತೆ ಆ ತಂಪೊತ್ತಿನಲ್ಲು ಹೊಗೆಯಾಡುತ್ತಿತ್ತು” ಎಂದು ಆರಂಭಿಕ ಕಥೆಯ ಸನ್ನಿವೇಶದ ಚಿತ್ರಣವನ್ನು ಕಟ್ಟಿ ಕೊಡುತ್ತ ಓದುಗನು ಉಸಿರು ಬಿಗಿ ಹಿಡಿದು ಕುತೂಹಲಗೊಂಡು ಮುಂದುವರಿಯುವಂತೆ ಮಾಡುತ್ತದೆ.
ಯಶವಂತ ಚಿತ್ತಾಲರ ‘ಆಟ’ ಸಂಜೆಯ ಸನ್ನಿವೇಶ ಚಿತ್ರಣವಾದರೆ ಕಂಟಲಗೆರೆ ಅವರ ‘ಚಾಕರಿ’ ಬೆಳಗಿನ ಸನ್ನಿವೇಶದ ಚಿತ್ರಣವಾಗಿದೆ. ಜೊತೆಗೆ ಎರಡೂ ಕಥೆಗಳ ಕಥಾ ಹಂದರ ಬೇರೆಯೇ ಆದರು ಇವುಗಳ ಆದಿ ಮತ್ತು ಅಂತ್ಯ ಭಾಗಶಃ ಸಾಮ್ಯತೆಯನ್ನು ಕಾಣಬಹುದು. ಹೀಗೆ ಕಂಟಲಗೆರೆಯವರ ಬಹುತೇಕ ಎಲ್ಲ ಕಥೆಗಳು ಈ ಚೌಕಟ್ಟು ಪಡೆದಿರುವುದರಲ್ಲಿ ಕಾಕತಾಳಿಯವು ಆಗಿರಬಹುದು. ‘ಚಾಕರಿ’ ಈ ಮಣ್ಣ ನೆಲೆ ಹಾಸಿನಲ್ಲಿ ಹಾಸು ಹೊದ್ದು ಮಲಗಿರುವ ಹಳ್ಳಿಯೊಂದರ ಯಥಾವತ್ ಚಿತ್ರ ಎಂದರೆ ತಪ್ಪಾಗುತ್ತದೇನೋ. ಬಹುಶಃ ಈ ದೇಶದ ಪ್ರತಿ ಹಳ್ಳಿಗಾಡಿನ ಸಾಮಾಜಿಕ ಸ್ಥಿತ್ಯಂತರದ ದ್ಯೂತಕ ಅನ್ನಬಹುದು. ಅದು ಈಗಲೂ ಹಳ್ಳಿ ಹಟ್ಟಿಗಳ ಜೀವಂತ ಚಿತ್ರ ಅನ್ನಬಹುದು.
ಇಲ್ಲಿ ಕುಲ್ವಾಡಿ ನರಸಯ್ಯ ಊರೊಳ್ಳರ ಚಾಕ್ರಿ ಮಾಡುವ ಆಜೀವ ಪರಂಪರೆಯವನು. ಊರ ಉತ್ಸವ, ಸತ್ತು ಕೆಟ್ಟು ಹೋದಲ್ಲೆಲ್ಲ ಕುಲ್ವಾಡಿ ಮನೆಯವರು ನೆಡ್ಕಳದು ಹೀಗೆ. ಆದರೆ ಊರೊಳ್ಳರು ಹಟ್ಟಿಗರ ಬೀದಿಯ ಕಡೆಗೆ ಬರದೆ ಒಂದು ಪರಂಪರಾಗತ ವ್ಯವಸ್ಥೆಯನ್ನು ಹಾಗೆ ಇರಿಸಿಕೊಂಡಿರುವುದು ಈಗಿನ ಮನಸ್ಥಿಯವರಿಗೆ ಒಪ್ಪಿಗೆಯಾಗದೆ ಊರ ಧಾರ್ಮಿಕ ಆಚರಣೆ ವೇಳೆ “ಹಂದಿ ಗೂಟಾಡ ದೊಂಬ್ರಟ್ಟಿಲಾದು ದೇವ್ರು ಉತ್ಸವ ಹೋಗಕಾಗುತ್ತೆ, ರಾಜಬೀದಿಯಾಗಿರ ನಮ್ಮಟ್ಟಿಯೊಳಗಾದು ಯಾಕೆ ಹೋಗಬಾರದು” ಹಾಗೆ “ಬೇರೆ ಜನಗಳ ಮಂತಕೆ ಹೋದಂಗೆ ನಮ್ಮನೆ ಮುಂದ್ಕು ದೇವ್ರೇ ಬರ್ಲಿ” ಅನ್ನೊ ನ್ಯಾಯದ ಮಾತಿಗೆ ಭಾಗಶಃ ಹಟ್ಟಿಗರು ಒಪ್ಪಿದರು ಕುಲ್ವಾಡಿ ನರಸಯ್ಯನ ಮನೆ ಒಪ್ಪಲಾಗದೆ ಯಥಾಸ್ಥಿತಿ ಕಾಯ್ದು ಹಟ್ಟಿಗರ ಸಿಟ್ಟಿಗೆ ಕಾರಣವಾಗಿರಲು, ಊರೊಳ್ಳರ ಪರಿನೂಟದ ಸಿದ್ದತೆ ವೇಳೆ ಅಕಸ್ಮಾತ್ ಕುಲ್ವಾಡಿ ನರಸಯ್ಯನ ಮೆಟ್ಟು ಪರಿನೂಟದ ಸಾಂಬಾರಿನ ಬೇಸಿನ್ ಒಳಕೆ ಬಿದ್ದು ಇಡೀ ಊರೊಳ್ಳರ ಕುಲ ಕುಲ್ವಾಡಿಯನ್ನು ಕಂಬಕ್ಕೆ ಕಟ್ಟಿ ಜುಲ್ಮಾನಿ-ಅನ್ನೊ ಕಾಣ್ಕ ವಿಧಿಸಿ ಸಮಯ ನಿಗದಿಯೊಳಗ ಜುಲ್ಮಾನಿ ಕೊಡಬೇಕಾದ ಸಂಕಟಕ್ಕೆ ಸಿಲುಕುವ ಕುಲ್ವಾಡಿ ನರಸಯ್ಯನ ಒಂದು ಸನ್ನಿವೇಶದ ವೃತ್ತಾಂವೇ ಆಧುನಿಕಗೊಂಡ ಕ್ರಾಂತಿಕಾರಿಗಳ ಗುಪ್ತ ಮಾತುಕತೆ ಮೂಲದಲ್ಲಿ ಅಡಗಿದೆ.
‘ಚಾಕರಿ’ ಮೂಲತಃ ಹಳೆಯದನ್ನು ಒಡೆದು ಹೊಸದೊಂದನ್ನು ಕಟ್ಟುವ ಆಧುನಿಕ ಕಾಲದ ಪಡೆ ಒಂದೆಡೆಯಾದರೆ, ಈ ಆಧುನಿಕ ಪಡೆಯ ಮಾತಿಗೆ ಒಪ್ಪಿಯೂ ಒಪ್ಪದ ಮನಸ್ಥಿತಿಯಲ್ಲಿ ಒಪ್ಪಿ ಇಕ್ಕಟ್ಟುಗಳ ದುಪ್ಪಟ್ಟಿನಲ್ಲಿ ದುಮುಗುಡುತ್ತ ಮೂಲವನ್ನು ಬಿಟ್ಟು ಬಿಡಲಾಗದೆಯೋ, ಅದ್ಯಾವ ಅಸ್ಸಹಾಯಕವೋ, ಧ್ಯಾನಸ್ಥವೋ ಆಗಿ ಒಳಗೇ ಕುದಿಯಾಗಿ ಬೇಯುವ ಸ್ಥಿತಿಯನ್ನು ಒಂದು ತೂಕದಲ್ಲಿ ಬಸಿದು ಹೇಳುವ ಕಥೆ.
‘ಚಾಕರಿ’ ಯ ಮೈಯನ್ನೆ ಹೊದ್ದು ಮಲಗಿದಂತಿರುವ ಚಾಕರಿಯಲ್ಲಿನ ಸತ್ಯ ,ಚಂಗ, ಶಿವ, ಪ್ರಕಾಶರೆಂಬ ಕ್ರಾಂತಿಕಾರಿಗಳ ರೂಪದ ಮುಂದುವರಿಕೆಯಾ.. ಅನುವಂಥ ಓದುಗನ ಓದಿನ ಪರಿಧಿಯೊಳಗೆ ಸವರಿಕೊಂಡು ಹೋಗುವ ‘ಕುರುವು’ ಕಥೆಯ ನರಸಿಂಹನ ಮೂಲಕ ಮೇಲ್ ಸ್ತರದ ಪರಂಪರಾಗತವಾದ ‘ತೋಪಿನ ಕೆಂಚಮ್ಮ’ ಊರ ನರ ಮನುಷ್ಯರ ಮೇಲೆ ಬಂದು ವಾಲಾಡೋಳು. ಈ ಉತ್ಸವಮ್ಮಳನ್ನು ಮನೆಗೆ ಕರೆಸಿಕೊಳ್ಳೊದು ವಾಡಿಕೆ. ಹಾಗೆ ಹೊಲ ಮನೆ ಗದ್ದೆಯ ನಿಗದಿತ ಜಾಗದಲ್ಲಿ ಕುರುವು ಗುರುತು ಹಚ್ಚುವಲ್ಲೂ ಕೆಂಚಮ್ಮನದೇ ಪಾರುಪತ್ಯ. ಇದನ್ನರಿತಿದ್ದ ಮೀಸೆ ನರಸಿಂಹ “ಅವ್ವ ಕೆಂಚವ್ವ, ನಾನೊಂದು ಕುರುವು ಮಾಡ್ಕಂಡಿನಿ ತೋರ್ಸವ್ವ” ಎಂದು ಭಕ್ತಿಯಿಂದ ಕೈ ಮುಗಿದನು. ಅವಳು ತೋರಿಸಿದ ನಾಕಾರು ಕಡೆ ಒಪ್ಪದ ನರಸಿಂಹ ಕಡೆಗೆ, “ಸರ್ವಾಂತರ್ಯಾಮಿಯಾದ ನಿನಗೆ ತಿಳಿದಲೇ ಇರೋದು ಯಾವುದಿದೆಯಮ್ಮ, ನೀನು ದಿಟವೇ ಆಗಿದ್ರೆ ನನ್ನ ಕುರುವು ತೋರ್ಸವ್ವ” ಎಂದು ಕೆಂಚಮ್ಮ ಉತ್ಸವ ದೇವ್ತಿಗೇ ಸವಾಲಾದನು. ಕೆಂಚಮ್ಮ ದೇವರನ್ನು ಒತ್ತಿದ್ದವರಿಗೆ ಇದು ಅರಿವಾಯ್ತೋ ಇಲ್ಲ ಮೀಸೆ ನರಸಿಂಹನ ಹರಿತವಾದ ಕುಡುಗೋಲು ಮಿರಿಮಿರಿ ಹೊಳೆದು ಎದೆಗಾಕಿ ಇರಿದು ಹರಿಯುತ್ತಿರುವುದರ ರಕ್ತ ಮುಕ್ಕಳಿಸಿ ಚಿಲ್ಲನೆ ಚಿಮ್ಮಿದಂಥ ಅನುಭವಾಯ್ತಾ ಅನ್ನೋತರ ಅಷ್ಟು ಜನರ ನಡುವೆ ಮೇಲ್ದಾರಿ ಕೆಳದಾರಿ ತಿಪ್ಪೆಗುಂಡಿ ಅನ್ನುವುದನ್ನು ಕಾಣದೆ ಇಳಿದು ಚರಂಡಿ ಒಳಗಿಳಿದು ಹಟ್ಟಿಯೊಳಗಿನ ಮಾರಿಕಲ್ಲಿನ ಸುತ್ತ ಸುತ್ತಿ ನಿಂತಿತು. ಅಲ್ಲಿ ಈಡುಗಾಯಿ ಹೊಡೆದ ನರಸಿಂಹ ಕೆಂಚವ್ವನನ್ನು ಅಬ್ಬರಿಸಿ ಹೊಗಳಿದ. ದೇವರೊತ್ತವರು ನೀವಳಿಸಿಕೊಂಡು ಹೊತ್ತ ದೇವರನ್ನು ಅಲ್ಲೆ ಬಿಸಾಡಿ ದಿಕ್ಕಾಪಾಲು ಧಾವಂತಗೊಂಡು ಓಡುವಾಗ ಅನಾಥವಾದ ದೇವರು.
ಇಲ್ಲಿ ಮೀಸೆ ನರಸಿಂಹ ತನ್ನ ನೆಂಟರುಡುಗನಿಗೆ ಹಿಂದೆ ಗೊಲ್ಲರಟ್ಟಿ ಬೀದಿಯಲ್ಲಿ ಆದ ಅಪಮಾನದ ಹಠದಲ್ಲಿ ಜಡ್ಡುಗಟ್ಟಿಗೊಂಡ ಒಂದು ಪರಂಪರಾಗತ ವ್ಯವಸ್ಥೆಯನ್ನೆ ತನ್ನ ಅವ್ಯವಸ್ಥಿತ (ಸ್ಪಷ್ಟ, ಸ್ಥಿರ, ಛಲದ ರೂಪದಲ್ಲಿ) ಮನಸ್ಥಿಯಿಂದ ತನ್ನ ಅಂಕೆಯಲ್ಲಿಟ್ಟುಕೊಂಡು ಹಟ್ಟಿಯಲಿ ಪಾರುಪತ್ಯ ಮೆರೆದು ತನ್ನ ಅವ್ಯವಸ್ಥಿತ ಮನಸ್ಥಿಯಿಂದಲೇ ಒಡೆದು ಕಟ್ಟುವ ಸಾಹಸದಲ್ಲಿ ಗೆದ್ದನೊ ಬಿದ್ದನೋ ಅಂತು ಒಂದಿಡೀ ವ್ಯವಸ್ಥೆಯೇ ಅವನ ಮೇಲೇ ಬಂದೆರಗುವ ಸೂಚಕದಲ್ಲಿ ಕಡೆಗೂ ಅವನು ತನ್ನ ಒಳಗಣ್ಣಿಂದಲೇ “ರೋಟಿಕುಡ್ಲು ಮೇಲೆ ಕೈಯಾಡಿಸಿ ಹಿಡಿತವನ್ನು ಬಿಗಿಗೊಳಿಸಿಕೊಂಡ” ಕೆಚ್ಚನ್ನು ಲೇಖಕರು ನರಸಿಂಹನ ಮೂಲಕ ಪರಂಪರಾಗತ ಕೆಟ್ಟ ವ್ಯವಸ್ಥೆಯನ್ನೆ ಬುಡಮೇಲು ಮಾಡುವ ಧೈರ್ಯವನ್ನು ಪ್ರದರ್ಶಿಸುವ ಗತ್ತಿನ ಚಿತ್ರವನ್ನು ಕಟ್ಟಿ ಕೊಡುತ್ತಾರೆ. ಹೀಗೆ ‘ಚಾಕರಿ’ಯ ಹುಡುಗರ ಒಡೆದು ಕಟ್ಟುವ ತಣ್ಣನೆಯ ಗುಪ್ತ ಪ್ರತಿರೋಧ, ‘ಕುರುವು’ ನರಸಿಂಹನ ದಾರ್ಷ್ಟ್ಯದ ಒರಟುತನದ ಪ್ರತಿರೋಧ ಒಟ್ಟಾರೆ ಈ ಎರಡು ಕಥೆಗಳು ಸಂಕಲನದಲ್ಲಿ ವಿಭಿನ್ನ ದಾರಿಯಲ್ಲಿ ಗುರುತಿಸಿಕೊಳ್ಳುತ್ತವೆ.
‘ಬೇರಿಗಂಟದ ಮರ’ ಕಂಟಲಗೆರೆ ಅವರ ಕಥಾ ಕಸುಬುಗಾರಿಕೆಯ ಕಥನ ತಂತ್ರಕ್ಕೆ ಇಂಬು ನೀಡುವ ನೋವಿನ ವಿವರಗಳ ಕನವರಿಕೆಗಳನ್ನು ಹುಟ್ಟು ಹಾಕುವ ಕಥೆ.
ತಲೆಮಾರುಗಳ ಕಸುಬುಗಾರಿಕೆ, ಮೆಟ್ಟು ಹದ ಮಾಡುವವನ ಮತ್ತು ತಲೆಗೂದಲು ಕತ್ತರಿಸುವವನ ಜೀವಯಾನದ ಕಥಾವಸ್ತುವಿದು. ಹಾಗು ಚರ್ಮಗಾರಿಕೆ ಮಾಡುವ ದಲಿತ ಜನಜೀವನದ ಮೇಲೆ ಮೇಲ್ವರ್ಗದವರ ದಮನಕಾರಿ ನೀತಿ ಮತ್ತು ದಾರ್ಷ್ಟ್ಯವನ್ನು ಮಹಾತ್ಮ ಗಾಂಧಿ, ಅಂಬೇಡ್ಕರ್ ಪ್ರತಿರೋಧಿಸಿದ ಇತಿಹಾಸವಿದೆ. ಇದು ಸ್ವಾತಂತ್ರ್ಯ ಕಾಲ ಹಾಗು ಸ್ವಾತಂತ್ರ್ಯೋತ್ತರದಲ್ಲು ಜೀವಂತವಾಗಿ ಉಳಿದು, ಈಗ ಬದಲಾದ ಕಾಲಘಟ್ಟದಲ್ಲಿ ಬಂಡವಾಳಶಾಹಿಗಳು ಭೂ ಒಡೆತನದ ಮೂಲಕ ವಿವಿಧ ವಲಯದೊಳಗೆ ಕಾಲಿಟ್ಟು ಆಕ್ರಮಿಸಿ ದೇಶೀಯವಾಗಿ ಹೊಸ ರೂಪ ಪಡೆದು ಚರ್ಮಗಾರಿಕೆ ಕಸುಬಿನವರ ಮೇಲೆ ಗಂಭೀರವಾದ, ಅಷ್ಟೇ ಮೇಲ್ ಸ್ತರದಲ್ಲಿ ಅಗೋಚರವಾಗಿ ದಾಳಿ ಮಾಡುತ್ತ ಅವರ ಕುಲ ಕಸುಬನ್ನೆ ನುಂಗುತ್ತಾ ಪ್ರಸ್ತುತವಾಗುಳಿದಿರುವ ಸಾಮಾಜಿಕ ಸ್ಥಿತ್ಯಂತರದ ಕಥಾವಸ್ತು ಇದಾಗಿದೆ. ಕಾರಜ್ಜನ ಕಾರಸ್ಥಾನ ಆಲದ ಮರದ ಬುಡದ ಪೆಟ್ಟಿಗೆ ಅಂಗಡಿಯಲ್ಲಿ ಮೆಟ್ಟು ಹದ ಮಾಡುವ ಹಟ್ಟಿಯ ಪುರಾತನರಿಂದ ಬಳುವಳಿಯಾಗಿ ಬಂದ ಕಸುಬು. ಜೊತೆಗೆ ಸುಬ್ಬಣ್ಣನ ಸ್ಟೈಲಿಸ್ ಹೇರ್ ಡ್ರೆಸ್ಸಸ್ ಕೂಡ.
ಬಹುಮುಖ್ಯವಾಗಿ, ಐನಾರು “ಅದ್ಯಾವ್ದದು ಆಲದ ಮರದಡಿ ಚೌರದ ಅಂಗಡಿ, ನಿನ್ನಂಗಡಿ ಎದುರಿಗೇ ಐತಲ್ಲ?” ಅಂದ. ಅದಕ್ಕೆ “ಹೇ ಅವ್ನು ಸುಬ್ಬ, ಅವ್ರಪ್ಪನ ಕಾಲ್ದಿಂದಲೂ ಇಲ್ಲೆ ಅವ್ನೆ” ಅಂದ. “ಅದ್ಕೆ ಮತ್ತೆ ಕೈ ನಿಲ್ತಿಲ್ಲ. ಅವ್ನು ಇಲ್ಲೆ ಇದ್ರೆ ಇನ್ನು ಚೌರ ಆಗಿ ಹೋಗ್ತಿಯ ನೋಡು” ಖಡಕ್ಕಾಗಿ ಹೇಳಿದ. ಇದು ಬ್ರಾಹ್ಮಣ್ಯದ ಪುರೋಹಿತಶಾಹಿಯ ವ್ಯವಸ್ಥಿತ ವ್ಯಾಪಾರಿ ಮನಸ್ಥಿತಿ. ಈ ಕಾರ್ಯತಂತ್ರದ ಫಲವಾಗಿ ಸುಬ್ಬನ ಅಂಗಡಿ ರಸ್ತೆಗೆ ಬದಲು ಹಿಂದಕ್ಕೆ ಮುಖಮಾಡಿಕೊಳ್ಳುತ್ತದೆ. ನಂತರದಲ್ಲಿ ಬರಬರುತ್ತಾ ಕಾರಜ್ಜನ ಕಾರಸ್ಥಾನವೇ ಇಲ್ಲವಾಗುವ ಸ್ಥಿತಿ.
ಈ ಸ್ಥಿತಿಯಲ್ಲಿ, “ಹೊರಗಡೆ ಜೋರಾಗಿ ಗಲಾಟೆ ನಡೆಯುತ್ತಿದ್ದರೂ ಅಂಗಡಿಯಿಂದ ಆಚೆ ಬರದೆ ಜಗಮಂಡನಂತೆ ಕೂತಿದ್ದ ಕಾರಜ್ಜನನ್ನು ಹೊರಗೆಳೆಯುವಂತೆ ಬಂದಿದ್ದ ಅಧಿಕಾರಿಗಳು ಅನತೀ ದೂರದಲ್ಲಿ ಕುಕ್ಕುರುಗಾಲಲ್ಲಿ ಕೂತು ಬೀಡಿ ಎಳೆಯುತ್ತಿದ್ದ ಸಮವಸ್ತ್ರಧಾರಿ ಪೌರಕಾರ್ಮಿಕರಿಗೆ ಆದೇಶಿಸಿದರು. ಅದರಂತೆ ತಮ್ಮ ಹಟ್ಟಿಯ ಹಿರೀಕ ಕಾರಜ್ಜನನ್ನು ಅವನ ಸಾಮಾನುಗಳ ಸಮೇತವಾಗಿ ದರದರನೆ ಎಳೆದು ತಂದು ಆಚೆ ಬಿಟ್ಟರು. ಆಚೆ ಬಂದ ಕ್ಷಣ ಹೊತ್ತಿನಲ್ಲೆ ಕಾರಜ್ಜನಿಗೆ ನೆರಳಾಗಿದ್ದ, ಜೀವವಾಗಿದ್ದ, ಬದುಕಾಗಿದ್ದ ಸಂಗಾತಿ ಆಲದ ಮರ ಗಡ್ರುಕ್ ಎಂಬ ದೊಡ್ಡ ಶಬ್ದದೊಂದಿಗೆ ನೆಲಕ್ಕುರುಳಿತು. ಅದರಲ್ಲೆ ಮನೆ ಮಾಡಿಕೊಂಡಿದ್ದ ಹಕ್ಕಿ ಪಕ್ಷಿಗಳು ಚೀರಾಡುತ್ತ ಕೂಗಾಡುತ್ತ ರೆಕ್ಕೆ ಬಡಿಯುತ್ತ ಗಗನಕ್ಕಾರಿದವು” ಎಂಬ ಅಂತ್ಯದ ಸನ್ನಿವೇಶದ ಚಿತ್ರಣದ ತೀವ್ರತೆ ವಿಷಾದದಿಂದ ಕೂಡಿದೆ. ಈ ವಿಷಾದದ ದನಿಯಲ್ಲಿ ಕಾರಜ್ಜನೊಬ್ಬನದೇ ಆಗಿರದೆ ಈ ನೆಲದ ಮೆಟ್ಟಿನ ಕುಲ ಕಸುಬಿನ ಮೇಲಾದ ದಬ್ಬಾಳಿಕೆಯ ಧ್ವನಿಯಾಗಿ ಕಂಟಲಗೆರೆ ಅವರ ಈ ನಿರೂಪಣಾ ವಿಧಾನವು ಕಥೆಯ ವಿಸ್ತೃತತೆಯನ್ನು ಮತ್ತಷ್ಟು ಹಿಗ್ಗಿಸಿದಂತಿದೆ.
‘ಬೇರಿಗಂಟದ ಮರ’ದ ಕಥೆಯ ಒಂದು ಸನ್ನಿವೇಶದಲ್ಲಿ ಹೀಗೆ ಬಂದು ಹಾಗೆ ಹೋಗುವ ಪುರೋಹಿತಶಾಹಿ ಮನಸ್ಥಿತಿಯ ಬ್ರಾಹ್ಮಣ್ಯದ ಬೇರು “ಕೆಂಡದ ಬೆಳುದಿಂಗಳು” ಸಂಕಲನದ ‘ಟಿಪ್ಪು’ ಕಥೆಯೊಳಗು ತೂರಿ ಬರುತ್ತದೆ. ಪ್ರಸ್ತುತ ರಾಜಕೀಯ ವಿದ್ಯಮಾನದ ವಸ್ತು ವಿಷಯವಾಗಿರುವ ಟಿಪ್ಪು, ಸಂಕಲನದ ‘ಟಿಪ್ಪು’ ಕಥೆಯಲ್ಲಿ ನಿಜ ಟಿಪ್ಪುವಿನ ಒಂದು ಪಾತ್ರವಾಗಿರದೆ ಬರೀ ಹೆಸರು ಮಾತ್ರದಿಂದಲೇ ಸಂಚಲನ ಸೃಷ್ಟಿಸುವ ತಲ್ಲಣವೇ ಆಗಿದೆ. ಒಂದು ಬೀದಿ ಅನ್ನಿ, ಒಂದು ಕೇರಿ ಅನ್ನಿ, ಒಂದು ಹಟ್ಟಿಯೇ ಅನ್ನಿ, ಅಲ್ಲಿ ‘ಒಟ್ಟುಜನ’ರಂತೆ ಬದುಕು ರೂಪಿಸಿಕೊಂಡ ವಿಭಿನ್ನ ಸಮುದಾಯಗಳು ತಮ್ಮದೇ ಪ್ರತ್ಯೇಕ ಆಚರಣೆ ಇದ್ದಾಗ್ಯೂ ಆಚರಣೆಯಲ್ಲಿ ಒಟ್ಟಿಗೆ ಸೇರಿ ಮಾಡುವ ಬಾಳ್ವೆಯೇ ಮಾದರಿಯದ್ದಾಗಿರುತ್ತದೆ. ಸಾಬರಬ್ಬದಲಿ ಮಾದಿಗರು, ಮಾದಿಗರಬ್ಬದಲಿ ಸಾಬರು, ಒಂದು ಅನ್ಯೂನ್ಯತೆಯ ಬದುಕು ಮಾಡಿಕೊಂಡಿರುವಾಗ ಸಾಬರಬ್ಬದ ಒಂದು ರಾತ್ರಿಯ ಸಡಗರದಲ್ಲಿ ಟಿಪ್ಪು ಸುಲ್ತಾನ್ ಇಂಗ್ಲೀಷರ ವಿರುದ್ದ ಹೋರಾಡಿದ್ದ, ತನ್ನ ಹೆತ್ತ ಕರುಳ ಕುಡಿಗಳ ಒತ್ತೆ ಇಟ್ಟು ರಾಜ್ಯ ರಕ್ಷಿಸಿದ, ಈ ದೇಶಕ್ಕಾಗಿ ಪ್ರಾಣತೆತ್ತ ಸಾಹಸದ ಲಾವ್ಣಿ ಕೇಳುವ ಹೊತ್ತಲ್ಲಿ ತುಂಬು ಗರ್ಭಿಣಿ ದುರ್ಗಯ್ಯನ ಹೆಂಡತಿ ಗಂಗಮ್ಮಳಿಗೆ ಹೆರಿಗೆಯಾಗಿ ಗಂಡು ಮಗು ಜನಿಸುತ್ತದೆ. ದುರ್ಗಯ್ಯನಿಗೆ ಬಲು ಸಂತೋಷವಾಗಿ ಈ ದೇಶಕ್ಕಾಗಿ ಹೋರಾಡಿದ ವೀರಾಧಿವೀರ ಟಿಪ್ಪು ಸುಲ್ತಾನ್ ಹೆಸರನ್ನೆ ಆಗಷ್ಟೇ ಹುಟ್ಟಿದ ಮಗುವಿಗೆ ಇಡುತ್ತಾನೆ. ಅದಾದ ಮೇಲೆ ದಿನಗಳುರುಳುತ್ತವೆ. ಬಾಳ ದಾರಿಲಿ ಟಿಪ್ಪು ಬದುಕಿನಲ್ಲಿ ಅನೇಕ ಘಟನೆಗಳು ಜರುಗುತ್ತವೆ. ಇಲ್ಲಿ ಹಿಂದುತ್ವದ ಹೆಸರಲ್ಲಿ ಮುಸಲ್ಮಾನರ ಮೇಲಿನ ದ್ವೇಷದ ಪ್ರತೀಕಗಳು ಮತಾಂಧತೆಯ ದಟ್ಟ ಕರಾಳ ಛಾಯೆ ದಟ್ಟವಾಗಿದೆ. ಇಲ್ಲಿ ಜರುಗುವ ಘಟನೆಗಳು ಈ ಕಥೆಯ ಉದ್ದಕ್ಕು ಟಿಪ್ಪುವಿನ ತಾತ ಕುಲ್ವಾಡಿ ತಿಮ್ಮಯ್ಯ ಅಜ್ಜಿ ನಂಜವ್ವಳ ಕಣ್ಮುಂದೆ ಎನುವಂತೆ ಬಿಗುವಿನಲಿ ದುತ್ತನೆರಗುತ್ತವೆ.
‘ಟಿಪ್ಪು’ ಕಥೆಯೊಳಗಿನ ಸಂಬಂಧಿತ ಪಾತ್ರಗಳು ಟಿಪ್ಪುವಿನ ಹೆಸರಿನ ಗೊಂದಲಗಳು ಪರಿಣಾಮಕಾರಿ ನಡೆ ಪ್ರದರ್ಶಿಸುತ್ತವೆ. ಈ ನಡುವೆ, ಕೆಂಪು ನಾಮದ ಕನ್ನಡ ಮೇಷ್ಟ್ರು, ದುರ್ಗಯ್ಯನಿಗೆ “ಯಾವ್ ಬೇಕುಫ್ನಯ್ಯ ನಿನ್ ಮಗುಂಗೆ ಆ ಹೆಸರಿಟ್ಟಿತ್ತು. ಅವ್ನೆಂತ ಕ್ರೂರಿ ಗೊತ್ತೇನಯ್ಯ, ಹಿಂದೂಗಳ್ನೆಲ್ಲ ಮಾರಣ ಹೋಮ ಮಾಡ್ದವ್ನು ಕಣಯ್ಯ ಅವ್ನು, ನೀನು ಒಬ್ಬ ಹಿಂದು ಆಗಿ ಅಂಥ ಹೆಸರಿಕ್ಕಕೆ ನಾಚ್ಕೆ ಆಗಲ್ವ” ಎಂದು ತಲೆಗೆ ತುಂಬುತ್ತಾನೆ. ಅದುವರೆಗೂ ಈ ಬಗ್ಗೆ ತಲೆ ಕೆಡಿಸಿಕೊಳದ ದುರ್ಗಯ್ಯ ಮೊದಲ ಬಾರಿಗೆ ಡಿಸ್ಟರ್ಬ್ ಆಗುತ್ತಾನೆ. ಈ ಸನ್ನಿವೇಶ ಹಾಗು ಮೇಷ್ಟ್ರ ಹೇಳಿಕೆಗೆ ಅವನ ಹೆಂಡತಿ ಗಂಗಮ್ಮ “ಮಠದ ಬುದ್ಯೋರ ಬಗ್ಗೆ ಜನ ಏನೇನೊ ಮಾತಾಡರು. ಓದಿರೋದ್ಲಿ ಬಿಟ್ರೆ ಬಿಡ್ಲಿ, ಕಟ್ಟಿರ ಹೆಸ್ರ ಈಗ ಅಳ್ಸಕಾಗುತ್ತಾ, ಹೋಗಿ ಕರ್ಕ ಬಾ” ಎಂದು ಕೆಂಪು ನಾಮದ ಮೇಷ್ಟ್ರು ಮಾತನ್ನು ದಿಕ್ಕರಿಸುತ್ತಾಳೆ. ಇದು ಬಹುಶಃ ಬ್ರಾಹ್ಮಣ್ಯದ ಬೇರುಗಳು ಬಹು ಕಾಲದಿಂದ ಇದುವರೆವಿಗೂ ಸತ್ಯದ ಇತಿಹಾಸದ ಪುಟಗಳನ್ನು ತಿರುಚಿ ಮುಗ್ದ ಭಾರತೀಯ ಮನಸ್ಸುಗಳ ಮೇಲೆ ಅಗೋಚರವಾಗಿ ದಾಳಿ ಮಾಡುತ್ತಿರುವ ತಮ್ಮ ಕುಟಿಲತೆಯನ್ನು ತೆರೆದಿಡುತ್ತದೆ. ಹಾಗೆ ಪುರೋಹಿತಶಾಹಿಗಳು ಕಾಲದಿಂದ ಕಾಲಕ್ಕೆ ವ್ಯವಸ್ಥಿತ ಸಂಚಿನ ಭಾಗವಾಗಿ ಬೇರು ಬಿಟ್ಟಿರುವ ಖಚಿತತೆಯನ್ನು ದಾಖಲಿಸುತ್ತದೆ. ಈ ವಿವರವನ್ನು ಕಥೆಗಾರ ಕಂಟಲಗೆರೆ ಸೂಕ್ಷ್ಮವಾಗಿ ಕಥೆಯ ಮೇಲ್ ಸ್ತರದ ಚೌಕಟ್ಟಿನಲ್ಲಿ ಒಂದು ಹದವಾಗಿ ಹಿಡಿದಿಟ್ಟಿದ್ದಾರೆ. ಹಾಗೆ ಹಿಂದುತ್ವ ಪ್ರತಿಪಾದಿತರಿಗೆ ವಿವಾದಿತ ಇಶ್ಯೂ ಮಾಡಿಕೊಂಡಿರುವ ಟಿಪ್ಪುವನ್ನು ಕಂಟಲಗೆರೆ ಅವರು ತಮ್ಮ ನಿಪುಣ ಕಥನ ತಂತ್ರ ಶೈಲಿಯ ಮೂಲಕ ಮತೀಯ ಶಕ್ತಿಗಳ ಮುಖವಾಡವನ್ನು ಕಳಚಿಡುವ ಪ್ರಯತ್ನ ಉತ್ಕೃಷ್ಟ ಮಟ್ಟದ್ದು.
ಗುರುಪ್ರಸಾದ್ ಕಂಟಲಗೆರೆ ಅವರ ಈ ಉತ್ಕೃಷ್ಟತೆಯ ರೂಪವನ್ನು “ಬಹುಸಂಖ್ಯಾತ ಶೂದ್ರವರ್ಗ ಬ್ರಾಹ್ಮಣ್ಯದ ಬೇರಿಗೆ ನೀರು ಎರೆಯುವುದನ್ನು ಯಾವತ್ತು ನಿಲ್ಲಿಸುತ್ತಾರೊ, ಅವರ ದೇವರು ಧರ್ಮ ಶಾಸ್ತ್ರ ಸಂಪ್ರದಾಯ ಜಾತಿಯ ಚೌಕಟ್ಟು ಬಿಟ್ಟು ಯಾವತ್ತು ಹೊರ ಬರುತ್ತಾರೋ, ಅವರ ಪ್ರಚೋದಿತ ಮಾತನ್ನು ಯಾವತ್ತು ಪ್ರಶ್ನಿಸಿ ತಿರಸ್ಕರಿಸುತ್ತಾರೋ ಅವತ್ತು ಅವರ ಶೋಷಣೆಯಿಂದ ಬಲವಂತದ ಹೇರುವಿಕೆಯಿಂದ ಕುತಂತ್ರದಿಂದ ಬಿಡಿಸಿ ಹೊರ ಬರಹುದು” ಎಂದು ಧಾರ್ಮಿಕ ಮತ್ತು ಮತೀಯ ವಿಚಾರದ ವ್ಯಸನವನ್ನೆ ಪ್ರಧಾನ ಧಾರೆಯಾಗಿರಿಸಿಕೊಂಡ ಪುರೋಹಿತಶಾಹಿಯ ಬ್ರಾಹ್ಮಣ್ಯದ ಕುರಿತು ತಮಿಳು ಲೇಖಕ ಪೆರುಮಾಳ್ ಮುರುಗನ್ ಹೇಳಿರುವ ಈ ಮಾತು ‘ಟಿಪ್ಪು’ ಕಥೆಯ ಟಿಪ್ಪುವಿನ ಅವ್ವ ಗಂಗಮ್ಮಳ ಸಂಭಾಷಣೆಯ ಸಂದರ್ಭದಲ್ಲಿ ತುಲನೆ ಮಾಡಬಹುದು. ಕುಲ್ವಾಡಿ ತಿಮ್ಮಯ್ಯ, ಅವನ ಹೆಂಡತಿ ನಂಜವ್ವಳ ಆಲೋಚನೆಗು ಮತ್ತು ದುರ್ಗಯ್ಯ, ಅವನ ಹೆಂಡತಿ ಗಂಗಮ್ಮಳ ಆಲೋಚನೆಗು ಭಿನ್ನವಾದ ವ್ಯತ್ಯಾಸವಿದೆ. ಈ ಭಿನ್ನತೆಯಿಂದ ‘ಟಿಪ್ಪು’ ಕಥೆ, ಓದುಗನ ಆಲೋಚನಾ ಕ್ರಮವನ್ನೆ ಬದಲಾಯಿಸಿ ವೈಚಾರಿಕ ಒಳನೋಟವನ್ನು ಬಿತ್ತುತ್ತದೆ. ಹಾಗೆ ತನ್ನ ಒಡಲ ಆಸ್ಮಿತೆಯನ್ನು ಉಳಿಸಿಕೊಳ್ಳುವಲ್ಲಿ ಸಫಲತೆ ಪಡೆದಿದೆ.
ತಿರುಮಕೂಡಲು ನರಸೀಪುರ ಒಡ್ಗಲ್ ರಂಗನಾಥಸ್ವಾಮಿ ಬೆಟ್ಟದ ಮೇಲಿನ ಆಲದ ಮರದ ಕೆಳಗೆ ಒಂದು ಪುಟ್ಟ ಗುಡಿಲು ಆಶ್ರಮ ಮಾಡಿಕೊಂಡು ಪ್ರತಿದಿನ ಇಡೀರಾತ್ರಿ ದೊಡ್ಡದಾದ ಕಡಿದಾದ ಮಣ್ಣುದಿಣ್ಣೆ ಕೊರಕಲು ಬಂಡೆಗಳನ್ನು ತಾವೊಬ್ಬರೇ ಕೆಡವಿ ಒಂದು ಅರ್ಧ ಕಿಲೋ ಮೀಟರ್ ರಸ್ತೆ ನಿರ್ಮಿಸಿ ಧ್ಯಾನಸ್ಥನಾಗಿದ್ದ ಮಲಿಯೂರಿನ ಮಾದಿಗರ ಬೀದಿಯ ಆಲದ ಮರದ ಬ್ರಹ್ಮಜ್ಞಾನಿ ನಾಗರಾಜ ಮಹಾಸ್ವಾಮಿಗಳು ಒಂದು ಚುಮುಚುಮು ಬೆಳಿಗ್ಗೆ ನನ್ನನ್ನೂ ಸೇರಿ ನಾನಿದ್ದ ಯುವಕರ ಗುಂಪು ನೋಡುತ್ತ ಎಡಗೈಯಿಂದ ತಮ್ಮ ಹಣೆಯ ಮೇಲಿದ್ದ ಬೆವರು ಬಳಿದು ಒದರಿ “ರಾತ್ರೆಲ್ಲ ನಾ ಕೆಲ್ಸ ಮಾಡ್ತಿದ್ರ ನೀವೆಲ್ಲ ಕೆಲ್ಸನು ಮಾಡ್ದೆ ಮುಲುಗುಡ್ತ ಮುಲುಗುಡ್ತ ನಿದ್ದನು ಮಾಡ್ದೆ ಬೆಳೆಗೆದ್ದು ನೊಡುದ್ರ ನಿಮ್ ಮೊಕೆಲ್ಲ ಕಪಿ ತರಡಿನ್ತರ ಆಗದ. ಈ ನಿದ್ದ ಮಾಡದು ಈ ಧ್ಯಾನ ಮಾಡದು ಅಂದ್ರ ಸುಮ್ನಲ್ಲ ಕನಾ.. ಮನ್ಸ ಎಲ್ಲ ಆಸನು ಮುಗಿಸ್ಕಂಡಿದ್ರ ಅದಾಗದು ಕನಾ.. ನಾ ಕಂಡಾಗಿ ನಿಮ್ಗ ದೇಹಬಾಧಿ ಅದ, ಮದ್ವ ಗಿದ್ವ ಮಾಡ್ಕಂಡು ದೇಹಬಾಧಿ ತೀರುಸ್ಕಳಿ. ಆಗ ಜೀವ ಹಗರಾಯುತ್ತ.. ನಿದ್ದನು ಬತ್ತುದ.. ಕೆಲ್ಸ ಮಾಡಕು ಮನ್ಸಾಯುತ್ತ..’ ಎಂದು ದಂಗು ಬಡಿಸಿದ್ದರು. ಅದಾಗಿ ಅವರು ಕಾಲವಾದ ಎಷ್ಟೊ ದಿನಗಳು ಕಳೆದವು. ಆಗೆಲ್ಲ ನಾವು ಅವರೇಳಿದ್ದು ನೆನೆದು ಮುಸಿಮುಸಿ ನಗ್ತಾ ಇದ್ದೆವು. ದಿನಗಳಿತಾ ಆ ಸ್ವಾಮಿಗಳೇಳಿದ ಮಾತು ನಿಜವಾಗ್ತ ಇತ್ತು.
ಕೆಲ ವರ್ಷಗಳ ಹಿಂದೆ ದಿನೇಶ್ ಅಮೀನ್ ಮಟ್ಟು ಪ್ರಜಾವಾಣಿಯಲ್ಲಿ ವಿವೇಕಾನಂದರ ಕುರಿತು ಒಂದು ದೀರ್ಘ ಲೇಖನ ಬರೆದಿದ್ದರು. ಆ ಲೇಖನ ಮತೀಯ ಮನಸುಗಳಲ್ಲಿ ವಿವೇಕನಂದರ ಬಗೆಗಿದ್ದ ಎಲ್ಲ ಇಸಂ ಗೆ ತದ್ವಿರುದ್ದವಿದ್ದ ಲೇಖನ. ವಿವೇಕಾನಂದರಿಗೆ ‘ಸ್ವಾಮಿ’ ತನವಿದ್ದರು ಎಲ್ಲ ಲೋಕರೂಢಿ ಆಸೆಗಳಿದ್ದವು. ತಿನ್ನುವುದು ಕುಡಿಯುವುದು ಹಸ್ತಮೈಥುನವೂ ಸೇರಿ. ಅಂದರೆ ಮನುಷ್ಯ ಅನೈತಿಕ ನಡೆಯಿಂದ (ಮಾರ್ಗ) ದೂರವಿದ್ದು ನೈತಿಕ ಮಾರ್ಗದಲ್ಲಿ ಪ್ರಕೃತಿದತ್ತ ದೇಹದಾಸೆಗಳನು ಅನುಭವಿಸಿ ಪರಿಪೂರ್ಣನಾಗಬೇಕು.. ಹೀಗೆಯೇ ಬುದ್ದ ಕೂಡ ಪ್ರಕೃತಿದತ್ತ ಹೆಣ್ಣಿನ ದೇಹವ ಸ್ಪರ್ಶಿಸಿ ಅನುಭವಿಸಿದ್ದ. ಕಾದ ಕೆಂಡದುಂಡೆಯಂತಿದ್ದ ದೇಹಬಾಧಿಯ ತೀರಿಸಿಕೊಂಡಿದ್ದ. ನಂತರದ ಕೆಲ ದಿನಗಳ ಒಂದು ಹುಣ್ಣಿಮೆಯ ಬೆಳುದಿಂಗಳ ರಾತ್ರಿಯಲಿ ಕಾಣದ್ದನ್ನು ಕಾಣುತ್ತ ಕೇಳದ್ದನ್ನು ಕೇಳುತ್ತ ಬೆಳಕನುಡುಕುತ್ತ ಸಾಗುವಲ್ಲಿ ಕಣ್ಣುಗಳು ವಿಷಾದದ ನೆರಳಲ್ಲು ಪ್ರಸನ್ನವಾಗಿದ್ದವು. ಪರಿಪೂರ್ಣತೆಯ ಮಹತ್ತನ್ನು ನೋಡುತ್ತಿದ್ದವು. ಈ ಮೇಲಿನ ವಿವರದ ಕೊಂಡಿ ಹಿಡಿದು ಸ್ವಾಮೀಜಿಯ ಔನ್ನತ್ಯ, ‘ಗುರು’ತ್ವ, ದೈವತ್ವದ ಮೂರ್ತರೂಪದ ಪ್ರತೀಕ, ಅಸಾಧಾರಣ ವ್ಯಕ್ತಿತ್ವ ಬ್ರಹ್ಮಚರ್ಯದಲ್ಲಿದೆ ಎಂಬ ಇಸಂ ಹೇಗೆ ಒಳಹರಿವಿನಲ್ಲಿ ಪ್ರಜ್ಞಾಪೂರ್ವಕವಾಗಿ ಅನಾವರಣಗೊಳ್ಳುತ್ತದೆ ಎಂಬುದನ್ನು ಇಲ್ಲಿನ “ಶ್ರೀಮನದ ಹೂದೋಟ” ಕಥೆಯಲ್ಲಿ ನೋಡಬಹುದೇನೋ. ಹಾಗೆ ನೋಡುವುದಾದರೆ ಪ್ರಸ್ತುತ ಯಾವ ಮಠಗಳೂ ಅದರ ಮಠಾಧೀಶರೂ ಧ್ಯಾನ ಕೇಂದ್ರಗಳೂ ಭಾಗಶಃ ತನ್ನ ಎಲ್ಲೆಯನ್ನು ಮೀರಿ ಇವತ್ತು ಪರಿಶುದ್ಧದ ಪ್ರಶ್ನೆ ಎದುರಿಸುತ್ತಿವೆ. ಶ್ರೀ ಮಠದ ಕಿರಿಯ ಶ್ರೀಗಳು “ಶ್ರೀಮಠದ ಹೂದೋಟಕ್ಕೆ ಬೇಕಾಗಿದ್ದಾರೆ” ಹಾಗೆ “ಕಂಪ್ಯೂಟರ್ ನಲ್ಲಿ ಕನ್ನಡ ಟೈಪಿಂಗ್ ಗೊತ್ತಿರುವ ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ’ ಎಂದು ಸೇರಿಸಲಾಗಿದ್ದ ಅವರೇ ಕೊಟ್ಟಿದ್ದ ಪತ್ರಿಕಾ ಜಾಹೀರಾತು ಕಡೆ ಕಣ್ಣಾಡಿಸುತ್ತಾ ಓದುತ್ತಾ ಇರುವುದರ ಮೂಲಕ ಕಥೆ ತನ್ನ ಆರಂಭಿಕ ಖಾತೆ ತೆರೆಯುತ್ತದೆ. ಇಲ್ಲಿ ಕಿರಿಯ ಶ್ರೀಗಳ ಒಳ ತುಮುಲಗಳನು ಕಂಟಲಗೆರೆ ಬಿಡಿಸಿಡುವ ನಿರೂಪಣಾ ರೀತಿ ಮಾಸ್ತಿ ವೆಂಕಟೇಶ ಅಯ್ಯಂಗಾರರ ಕಥಾ ನಿರೂಪಣಾ ವಿಧಾನದೆಡೆಗೆ ಓದುಗನನ್ನು ಸೆಳೆದು ಕೊಂಕು ಗಾಯವಾಗದ ಹಾಗೆ ಜಾರಿಸಿ ತಂದು ಕೂರಿಸಿ ಬಿಡುತ್ತದೆ.
ಕೆಲ ವರ್ಷಗಳ ಹಿಂದೆ ಹುಬ್ಬಳ್ಳಿ ಶಾಂತಸ್ವಾಮಿಗಳು ಒಂದು ಧಾರ್ಮಿಕ ಸಮ್ಮೇಳನದ ಸಂದರ್ಭದಲ್ಲಿ ತಮ್ಮ ಕಾರಿನ ಹಿಂಬದಿ ಸೀಟಿನಲ್ಲಿ ಹೆಂಗಸೊಬ್ಬಳನ್ನು ಕೂರಿಸಿಕೊಂಡಿದ್ದನ್ನು ಶ್ರೀಮಠದ ಕಿರಿಯ ಶ್ರೀಗಳು ಕಂಡಿದ್ದರು. ಶಾಂತಸ್ವಾಮಿಗಳು “ಸಮ್ಮೇಳನದಲ್ಲಿ ವಿಷಯ ಮಂಡಿಸಬೇಕಲ್ಲ, ವಿಚಾರವೆಂಬುದು ನಿಂತ ನೀರಾಗದೆ ಮತ್ತೆ ಮತ್ತೆ ಪರಿಷ್ಕರಣೆಗೆ ಒಳಗಾಗುತ್ತಲೇ ಇರಬೇಕಾಗುತ್ತದೆ, ಆದ್ದರಿಂದ ಡಿಟಿಪಿ ಆಪರೇಟರ್ ಪಕ್ಕದಲ್ಲೆ ಇಟ್ಟುಕೊಂಡಿದ್ದರೆ ವೇದಿಕೆಯಲ್ಲಿನ ಮುಜುಗರದಿಂದ ತಪ್ಪಿಸಿಕೊಳ್ಳಬಹುದು” ಎಂದು ನಾಜೂಕಾಗಿ ಹೇಳಿದ್ದರು. ಹಾಗೆ ಅಲ್ಲೆ ಕೊಠಡಿ ಶೌಚಾಲಯದಲ್ಲಿ ಶಾಂತಸ್ವಾಮಿಗಳ ಅಸ್ತವ್ಯಸ್ತ ‘ಗೌಪ್ಯ ಚಿತ್ರ’ದಿಂದ ವಿಚಲರಾದ ಪ್ರಸಂಗ. ಹೀಗೆ ಪ್ರಸಂಗದ ನೋಟ, ಆಮೇಲಾಮೇಲಾದ ನಿಗ್ರಹಿಸಲಾರದ ಮಾನಸಿಕ ತುಮುಲ, ದೈಹಿಕ ಯಾತನೆ- ಪ್ರಕೃತಿ ಸಹಜ ಕಾಮಭೋಗಕ್ಕೆ ಮನಸ್ಸು ಎಡತಾಕತೊಡಗುವ ತಾಕಲಾಟಗಳ ಕೊನೆಯಲ್ಲಿ “ಹೂವುಗಳೆಂದರೆ ನನಗೆ ಪಂಚಪ್ರಾಣ” ಹೆಣ್ಣಿನ ತಣ್ಣನೆ ದನಿ ಶ್ರೀಮನದ ಶ್ರೀಗಳ ಸುಳಿಯನ್ನು ಸ್ಪರ್ಶಿಸಿ ಹಾದು ಹೋಗುತ್ತದೆ. ಹಾಗೆ ಹಾದು ಹೋಗುವಾಗ ವ್ಯಕ್ತಿತ್ವದ ಪ್ರಶ್ನೆ ಹಾಗು ಅದು ಒಡ್ಡುವ ಸವಾಲುಗಳು ಒಗ್ಗೂಡಿ ನಿಲ್ಲುತ್ತವೆ.
ಹೀಗೆ, ಈ ಕಥೆ ಮೊದಲಿಂದ ಕೊನೆಯ ತನಕ ಎಲ್ಲೂ ಗುಲ್ಲೆಬ್ಬದ ಹಾಗೆ ನಿಶ್ಯಬ್ಧದ ಲಹರಿಯಲ್ಲಿ ಸ್ವರವೊಂದು ಅಪಸ್ವರವಾಗಿ ಅಪಸ್ವರವೂ ಸ್ವರವಾಗುವುದರತ್ತ ಅವ್ಯಕ್ತ ದನಿಯಲ್ಲಿ ಒಳಗೇ ನಿವೇದಿಸಿಕೊಳುತ್ತದೆ. ಹೀಗೆ ನಿವೇದಿಸಿಕೊಳ್ಳುತ್ತ ಉಸಿರಿಲ್ಲದ ಒಂದು ನಿರ್ಜೀವ ಸ್ತಬ್ಧಚಿತ್ರವಾಗಿ ನಿಲ್ಲುತ್ತದೆ. ಜೊತೆಗೆ ಈ ಕಥೆ ಮಾಸ್ತಿಯವರ ‘ಸಂನ್ಯಾಸಿ ಅಲ್ಲದ ಸಂನ್ಯಾಸಿ’ ಕಥೆಯನ್ನು ನೆನಪಿಸುತ್ತದೆ. ಮೇಷ್ಟ್ರು ನರಸಿಂಹಯ್ಯ ಅದುವರೆಗೂ ಬಾಯಿ ಚಪಲವಿರಿಸಿಕೊಂಡು ಚಪ್ಪರಿಸಿದ್ದು ರೂಢಿಯಾಗಿ ತಾನು ಹೇಳಿದ ಗಳಿಗೆಯಲ್ಲಿ ಹೆಂಡತಿ ಬೆಂಡೇಕಾಯಿ ಹುಳಿ ಮಾಡಿಕೊಡಲಿಲ್ಲವೆಂದು ಕುಪಿತಗೊಂಡು ಆತುರದಿಂದ ಸಂನ್ಯಾಸಿಯಾಗಿ ಅಲ್ಲಿ ಇಲ್ಲಿ ತಿರುಗಿ ಆರು ತಿಂಗಳ ಊರತ್ತಿರ ಕಾಣಿಸಿಕೊಳುತಾರೆ. ನಂತರ ಒಂದು ದಿನದ ಮಟ್ಟಿಗೆ ಅತ್ತೆ ಮನೆಗೆ ಪೂಜೆಗೆ ಬರುತ್ತಾರೆ. ಅತ್ತೆಯ ಉಪಾಯ ಹೆಂಡತಿಯ ಜಾಣ್ಮೆ ಸನ್ಯಾಸತ್ವ ಬಯಲು ಮಾಡುತ್ತದೆ. ಬೆಂಡೇಕಾಯಿ ಹುಳಿಯ ರುಚಿ ನೋಡಿದ್ದೆ ಅತ್ತೆ ಮಾತು ಮತ್ತು ಹೆಂಡತಿಯ ಪಾದಸ್ಪರ್ಷವನ್ನೇ ನೆಪ ಮಾಡಿಕೊಂಡು ನಟಿಸುತ್ತಾ ಸಂನ್ಯಾಸ ಸಹವಾಸ ಸಾಕೆಂದು ಬಿಡುವ ಪ್ರಮೇಯ. ಅಂದರೆ ಮನುಷ್ಯ ಬಿಡಲಾರದದ್ದು ಬಿಟ್ಟು ಬದುಕಲಾರದ ಬದುಕನ್ನು ಬದುಕುವ ಸ್ಥಿತಿಯೇ ಇದು. ಶ್ರೀಮನದ ಶ್ರೀಗಳ ಮನಸ್ಥಿತಿಯೂ ಆಯ್ಕೆ ಮಾಡಿಕೊಂಡ ಬದುಕು ಬದುಕಲಾರದ ಬದುಕು ಬಿಡಲಾರದ ಸಂಕಟದ ಸುಳಿಯಲ್ಲಿ ತೊಯ್ದಾಟವೇ ಆಗಿದೆ. ಇವತ್ತು ‘ಜಾತಿ ಎಲ್ಲಿದೆ?’ ಎನುವವರ ಸಂಖ್ಯೆ ದುಪ್ಪಟ್ಟು. ಕೊಡುಕೊಳ್ಳುವಲ್ಲಿ ಜಾತಿಯ ಬೇರಿದೆ. ಒಂದು ತಳ ಸಮುದಾಯವನ್ನು ತಣ್ಣಗೆ ಮುಖ್ಯವಾಹಿನಿಯಿಂದ ಇಲ್ಲವಾಗಿಸುವ ಶತ ಪ್ರಯತ್ನಗಳು ಜರುಗಿವೆ. ಬಹುಶಂಖ್ಯಾತ ಸಾಮಾನ್ಯ ತಳವರ್ಗದ ಎದೆಗಿನ್ನೂ ನಾಟದಿರುವ, ಇವಿಷ್ಟು ವಿಚಾರ ಬ್ರಾಹ್ಮಣ್ಯದ ಅಗೋಚರ ಶಕ್ತಿಗಳು ತಮ್ಮ ಕಾರ್ಯಕ್ಷೇತ್ರ ವಿಸ್ತರಿಸಿಕೊಳ್ಳಲು ಇಂಬು ನೀಡಿವೆ.
ಸರಿ ಸುಮಾರು ಐದಾರು ವರ್ಷಗಳಿಂದ ಪ್ರೀತಿಸಿ ಮದುವೆಯಾದ ಎರಡು ಮನಸ್ಸುಗಳು ತವಕ ತಲ್ಲಣ ಸಂದಿಗ್ಧತೆಯಲ್ಲೆ ಬದುಕು ರೂಪಿಸಿಕೊಳುವಲ್ಲಿ, ಆಯಾ ಆಗಿ ನಗರವಾಸಿಗರ ಅವರಿವರ ಮನೆ ಮುಸುರೆ ತಿಕ್ಕುತ್ತ, ಆ ಮುಸುರೆ ತಿಕ್ಕುವ ಕೆಲಸವನ್ನು ಹಾಗೆ ಕಾಯ್ದಿರಿಕೊಳುವ ಅನಿವಾರ್ಯತೆಯಲ್ಲಿ ತಾನು ಹೊಲೆಯ ಅಥವಾ ಮಾದಿಗ ಜಾತಿಯವನು/ಳು, ತನ್ನ ಊರುಕೇರಿ ಇಂಥದ್ದು ಎಂದು ಎದೆ ತಟ್ಟಿ ಹೇಳಲಾಗದಿದ್ದರು ಮೆಲ್ಲನಾದರು ಸಾರ್ವಜನಿಕವಾಗಿ ಸತ್ಯ ಹೇಳಲಾಗದ ಅಸ್ಸಹಾಯಕತೆ “ಪ್ರತಿಮೆ ತೆರವು” “ಇವ ನಮ್ಮವ” ಕಥೆಗಳು ವ್ಯವಸ್ಥೆಯ ವಿವಿಧ ಮಗ್ಗುಗಳನ್ನು ಪರಿಚಯಿಸುತ್ತವೆ. ಹಾಗೆ “ಶವರ್ ಮನೆ” ಕಥೆ ಕೂಡ ಇಂಥದ್ದೇ ವಸ್ತು ವಿಷಯವಾದರು ಈ ಕಥೆಯೊಳಗೊಂದು ‘ಜಾತಿ’ಯ ನಾವಿನ್ಯಪೂರ್ಣ ನಿರೂಪಣೆ ಗಮನ ಸೆಳೆಯುತ್ತದೆ. ಈ ಕಥೆಯ ಸಾರದಂತೆ ಇವತ್ತಿಗೂ ದೊಡ್ಡದೊಡ್ಡ ನಗರಗಳಲ್ಲಿ ದಲಿತರು ಒಂದು ಬಾಡಿಗೆ ಮನೆ ಪಡೆಯುವುದು ಅತ್ಯಂತ ಕ್ಲಿಷ್ಟಕರವಾದುದು. ಈ ಕ್ಲಿಷ್ಟಕರವಾದ ವಿಚಾರವನ್ನು ಕಂಟಲಗೆರೆ ಎಷ್ಟು ಲೀಲಾಜಾಲವಾಗಿ ಕಟ್ಟಿಕೊಟ್ಟಿರುವರೆಂದರೆ ಮನೆ ಹುಡುಕುವ ಗಂಡನ ಕಷ್ಟ, ಹೆಂಡತಿಯ ಲಕ್ಸುರಿ ಬದುಕಿನ ಆತುರದ ಕನಸು, ಅಟ್ಯಾಚ್ಡ್ ಬಾತ್ರೂಮ್ ನ ಕಮೋಡ್, ಶವರ್ ನ್ನು ಅಪ್ಪ ಅಮ್ಮನ ಮೂಲಕ ಅನುಭವಿಸುವ ಮಕ್ಕಳ ಮನಸ್ಸು, ಅದು ಹಾಗೇ ಉಳಿದು ಬಿಡುವ ಚಿತ್ರವಾಗಿ, ಈ ಸೊಸೈಟಿಯೊಳಗೆ ಮಡುಗಟ್ಟಿದ ಅಸಮತೋಲಿತ ವೈಚಿತ್ರ್ಯವೊಂದು – ಇವ ನಮ್ಮವ, ಶವರ್ ಮನೆ, ಪ್ರತಿಮೆ ತೆರವು ಈ ಮೂರೂ ಕಥೆಗಳು ‘ಜಾತಿ’ಯೇ ಪ್ರಧಾನ ಅಂಶವಾಗಿ ಚಿತ್ರಿತವಾಗಿರುವ ಕಥೆಗಳು.
ಹಾಗೆ, ಈ ನೆಲದ ಸಾಂಸ್ಕೃತಿಕ ಶ್ರೀಮಂತಿಕೆ ಎನ್ನುವುದು ಬಹುಸಂಖ್ಯಾತ ತಳವರ್ಗದ ಜನರ ಆಚಾರ-ವಿಚಾರ ಉಡುಗೆ-ತೊಡುಗೆ, ಪರಂಪರಾಗತ ಕುಲ ಮೂಲ ಧಾರ್ಮಿಕ ಆಚರಣೆ, ನಂಬಿಕೆ, ಇವುಗಳ ಜೊತೆಜೊತೆಗೆ ಮಾಂಸಾಹಾರ, ಮದ್ಯ ಸೇವನೆ ಬಹುಮುಖ್ಯ ಪ್ರಧಾನ ಧಾರೆಯ ವೈಶಿಷ್ಟ್ಯವಾಗಿದೆ. ಈ ವೈಶಿಷ್ಟ್ಯಪೂರ್ಣ ಬಹುಜನರ ಆಹಾರದ ಮೇಲೆ ಕಾಲದಿಂದಲೂ ದಬ್ಬಾಳಿಕೆ ನಡೆಯುತ್ತಲೇ ಇದೆ. ಆಯಾಯ ಸಮುದಾಯದ ಆಚೀಚೆಗಿನ ಜನವರ್ಗದ ನಡುವೆಯೇ ಮೇಲು- ಕೀಳಿನ ಶ್ರೇಷ್ಟತೆಯ ವ್ಯಸನದಲ್ಲೆ ಒಂದು ಚೌಕಟ್ಟು ನಿರ್ಮಾಣವಾಗಿ ಮೌಢ್ಯವೂ ನಂಬಿಕೆಯೂ ಒಟ್ಟೊಟ್ಟಿಗೆ ಮಿಳಿತಗೊಂಡು ಬಲವಂತದ ಹೇರುವಿಕೆಯಲ್ಲಿ ಸಮುದಾಯದ ಮೇಲೆ ಗಾಯ ಮಾಡುತ್ತ ಆ ಗಾಯ ಒಳಗೊಳಗೆ ಕುದಿದು ಬೇಯುತ್ತಲೇ ಇದೆ. ಹಾಗೆ ಅನೇಕ ಪ್ರಶ್ನೆ ಹುಟ್ಟು ಹಾಕುವ ಇಲ್ಲಿನ “ಜಾತಿಮಾಂಸ” ಅಂಥದ್ದೇ ಕುದಿವ ಗಾಯದ ಕಥೆ.
ಈ ಕಥೆ ಬಹುಮುಖ್ಯವಾಗಿ ಲಕ್ಷ್ಮೇನಹಳ್ಳಿಯ ಭೈರವೇಶ್ವರ ಸ್ವಾಮಿ, ಲಕ್ಷ್ಮೀದೇವರು ಎಂಬೆರಡು ಒಕ್ಕಲುಗಳ ನಡುವಿನ ನಂಬಿಕೆಗಳ ತಾಕಲಾಟಗಳ ಕಥಾನಕ. ಲಕ್ಷ್ಮೀದೇವರ ಕಿಡ್ಡಯ್ಯ ವಾರಕ್ಕೊಮ್ಮೆ ಹಂದಿ ಕುಯ್ದು ಪಾಲಾಕಿ ಮಾರಿ ಊರವರ ಮನೆಯ ಕೊಟ್ಟಿಗೆಯಲಿ ಮಾಂಸದ ಸಾಂಬಾರು ಗಮಗುಡಲು ಕಾರಣನಾಗಿರುವವ. ಭೈರವೇಶ್ವರ ಉತ್ಸವ ನಡೆವಾಗ ಹಂದಿಯ ಕಾರಣವಾಗಿ ಉತ್ಸವಕ್ಕೆ ಭಿನ್ನವಾಗುತ್ತದೆ. ಇದಾದ ತಿಂಗಳಿಗೆ ಭೈರವೇಶ್ವರ ಸ್ವಾಮಿಯ ಪೂಜಾರಿ ಶೀನಪ್ಪನ ಹೆಂಡತಿಗೆ ಕೇಡಾಗುತ್ತದೆ. ಈ ಕೇಡಿಂದ ತರಾವರಿ ಮಾತುಗಳು ಊರಾಳುತ್ತವೆ. ಈ ಪರಿಣಾಮ ಭೈರವೇಶ್ವರ ಸ್ವಾಮಿಯ ಊರೊಳ್ಳೊರು ಕಿಡ್ಡಯ್ಯನಿಗೆ ತಾಕೀತು ಮಾಡುತ್ತಾರೆ. ಊರೊಳ್ಳೊರ ಮಾತಿಗೆ ಹೆದರಿ ಹಂದಿ ಕುಯ್ಯುವುದನ್ನು ನಿಲ್ಲಿಸುತ್ತಾನೆ. ಅದನ್ನೆ ನಂಬಿ ಬದುಕು ರೂಪಿಸಿಕೊಂಡಿದ್ದ ಕಿಡ್ಡಯ್ಯ ಬರಿಗೈಯಾಗಿ ಯೋಚನೆಗೆ ಬೀಳುತ್ತಾನೆ. ಕೆಲ ದಿನಗಳ ನಂತರ ಸತ್ತು ಹೋಗುತ್ತಾನೆ. ವಾರಕ್ಕೊಮ್ಮೆ ಸಾಲವೋ ಇಲ್ಲ, ಪುಸಲಾಯಿಸೊ ಹಂದಿ ಮಾಂಸ ಖರೀದಿಸಿ ಬಾಯಿ ಚಪ್ಪರಿಸಿ ಸುಖಿಸುತ್ತಿದ್ದ ಊರವರು ಎಲ್ಲರಿಗಿಂತ ಹೆಚ್ಚಾಗಿ ಲಕ್ಷ್ಮೀದೇವರ ಪೂಜಾರಿ ಊದ್ಗಡ್ಡಯ್ಯ ಹಂದಿ ಮಾಂಸ ಇಲ್ಲದೆ ಯೋಚನೆಗೆ ಬೀಳುತ್ತಾನೆ. ಹಂದಿ ಮಾಂಸದ ಕಾರಣ ಒಮ್ಮೊಮ್ಮೆ ನಿಯಂತ್ರಣ ಕಳೆದುಕೊಂಡು ಹುಚ್ಚನಂತಾಗುತ್ತಾನೆ. ಅರಚುತ್ತಾನೆ. ಇದು ಸೊಸೆಗೆ ಕಿರಿಕಿರಿ. ಈ ಕಾರಣ ಸೊಸೆಯ ಕೊಂಕು ನುಡಿ.ಇದರಿಂದ ಗಂಡ ಹೆಂಡತಿ ಇಬ್ಬರೂ ತೋಟದ ಮನೆ ಸೇರುತ್ತಾರೆ.
ಭೈರವೇಶ್ವರ ಕುಲಕ್ಕೆ ಆಗಿ ಬರದ ಹಂದಿ ಮಾಂಸವನ್ನು ಭೈರಾ ತಾನು ತಿನ್ನದಿದ್ದರು ಗುಪ್ತವಾಗಿ ಶಿಕಾರಿ ಮಾಡಿದ ಹಂದಿ ಮಾಂಸವನ್ನು ಊದ್ಗಡ್ಡಯ್ಯನಿಗೆ ತಂದು ಕೊಡುತ್ತಾನೆ. ಈ ಮೂಲಕ ಊದ್ಗಡ್ಡಯ್ಯನೊಳಗೆ ಸತ್ತು ಹೋದ ಕಿಡ್ಡಯ್ಯನನ್ನು ಭೈರನಲ್ಲಿ ಕಾಣುತ್ತಾನೆ. ಅದೇ ಖುಷಿಯಲ್ಲಿ ತೋಟಗಾರಿಕೆ ಮಾಡುತ್ತ ಎಂದಿನಂತಾಗಿ ಅಲ್ಲಿ ತೆಂಗಿನ ಗಿಡ ಹಾಕಲು ಗುಂಡಿ ಕೀಳುತ್ತಾನೆ. ಈಚೀಚೆಗೆ ಭೈರ ಕಾಣದೆ ಹಂದಿ ಮಾಂಸವೂ ಇಲ್ಲದೆ ಊದ್ಗಡ್ಡಯ್ಯ ಹುಚ್ಚನಂತಾಗಿ ಸತ್ತು ಹೋಗುತ್ತಾನೆ. ತೆಂಗಿನ ಗಿಡ ಹಾಕಲು ಊದ್ಗಡ್ಡಯ್ಯನೇ ತೆಗೆದಿದ್ದ ಗುಂಡಿಗೆ ಅವನನ್ನು ಊಳುತ್ತಾರೆ. ತಿಥಿಯ ದಿನ ಸಮಾದಿ ಮೇಲಿನ ಎಡೆಗೆ ವಾತನ ಮಾಂಸದ ಬದಲು ಹಂದಿ ಮಾಂಸವೇ ಬೇಕೆಂದು ಊದ್ಗಡ್ಡಯ್ಯನ ಹೆಂಡತಿ ತನ್ನ ಗಂಡ ಯಾವಾಗಲು ಹಂದಿ ಮಾಂಸವನ್ನು ಅದರ ರುಚಿಗೆ ಆಸೆಗೆ ಮಾರು ಹೋಗಿ ‘ಜಾತಿ ಮಾಂಸ’ ಎಂದು ಕರೆಯುತ್ತಿದ್ದುದನ್ನು ನೆನೆದು ಎಡೆಗೆ ಆ ‘ಜಾತಿ ಮಾಂಸ’ವೇ ಬೇಕೆಂದು ಗುಪ್ತವಾಗಿ ಭೈರನನ್ನು ಹುಡುಕಿ ಬೇಡಿಕೆ ಇಡುತ್ತಾಳೆ. ಈ ಮೂಲಕ ‘ಜಾತಿ ಮಾಂಸ’ ಕಥೆಯಲ್ಲಿ ಮನುಷ್ಯನ ಆಹಾರದ ಮಹತ್ವವನ್ನು, ಅದು ಒಡ್ಡುವ ಸವಾಲನ್ನು ಆ ಸವಾಲಿನ ಪರಿಣಾಮಗಳನ್ನು ಕಥೆಗಾರ ಗುರುಪ್ರಸಾದ್ ಕಂಟಲಗೆರೆ ಯಾವ ಪರಿ ನಿರೂಪಿಸಿದ್ದಾರೆಂದರೆ ಆ ಪಾತ್ರಗಳೇ ನಾವಾಗಿ ಬಿಡುವ ಹಾಗೆ! ಹಾಗಾಗಿ ‘ಜಾತಿ ಮಾಂಸ’ ಎನ್ನುವುದು ‘ಕೆಂಡದ ಬೆಳುದಿಂಗಳು’ ಸಂಕಲನದಲ್ಲೇ ಒಂದು ಪರಿಣಾಮಕಾರಿ ಕಥೆ.
ಇನ್ನೂ ಮುಂದುವರಿದು ಹೇಳುವುದಾದರೆ, “ಒಂದು ಕಥೆ ವಿಸ್ತೃತವಾದ ದನಿ ಇಟ್ಟುಕೊಂಡು ಸಾಗಿದರೆ ಓದುಗನಲ್ಲಿ ತಲ್ಲಣ ಸೃಷ್ಠಿಸುತ್ತ ಮತ್ತೆ ಮತ್ತೆ ಅದೇ ವಿಸ್ತೃತ ದನಿ ಹೊಸ ತಲೆಮಾರನ್ನು ಮೀರಿ ಉಳಿಯುತ್ತ, ಅದರ ಲೇಖಕನೂ ಪ್ರತಿ ತಲೆಮಾರನ್ನು ಸ್ಪರ್ಶಿಸಿ ಪ್ರಭಾವಿಸಿ ತನ್ನ ಪ್ರಭಾವಲಯವನ್ನು ವಿಸ್ತರಿಸಿಕೊಳ್ಳುತ್ತಾನೆ” ಎಂದು ಕೀರ್ತಿನಾಥ ಕುರ್ತಕೋಟಿ ಅವರು ಯು.ಆರ್.ಅನಂತಮೂರ್ತಿ ಅವರ ‘ಸಂಸ್ಕಾರ’ ಕೃತಿ ಸಂದರ್ಭದಲ್ಲಿ ಹೊಸ ತಲೆಮಾರಿನ ಕಥೆಗಾರರ ಕುರಿತು ಸಾಂದರ್ಭಿಕವಾಗಿ ಹೇಳಿರುವ ಈ ಮಾತು ಪ್ರಸ್ತುತ ‘ಜಾತಿ ಮಾಂಸ’ ಕಥೆ ಓದುವಾಗ ಕಥೆಗಾರ ಗುರುಪ್ರಸಾದ್ ಕಂಟಲಗೆರೆ ಈ ತಲೆಮಾರನ್ನು ಮೀರಿ ನಂತರದ ತಲೆಮಾರಿಗೂ, ಜೊತೆಗೆ ತಮ್ಮ ವಿಸ್ತೃತ ದನಿಯ ಮೂಲಕ ಹೊಸದೆನ್ನುವ ತಲ್ಲಣ ಸೃಷ್ಠಿಸಿ ಉಳಿಯುವ, ಹಾಗು ಸಹಜ ಜೀವಂತಿಕೆಯ ಕ್ರಿಯಾರೂಪದಲ್ಲಿ ವಿಸ್ತರಿಸಿಕೊಳುವ ಪ್ರಭಾವಲಯ ಸೂಚ್ಯವಾಗಿ ಗೋಚರಿಸುತ್ತದೆ.
‘ಎರಡನೇ ಹೆಂಡ್ತಿ’ ಹೆಣ್ಣಿನ ಸುತ್ತ ಆವರಿಸಿಕೊಂಡಿರುವ ಕಥೆ. ಎಳೆ ವಯಸ್ಸಿನ ಮೋಹನನ ಅವ್ವ ವಯಸ್ಸಾದವನನ್ನು ಮದುವೆಯಾಗಿ ಮೂರು ಮಕ್ಕಳಾದ ಮೇಲೆ ತೀರಿಹೋದ ಗಂಡನಿಗೆ ವಯಸ್ಸು ಬರೊಬ್ಬರಿ ಎಪ್ಪತ್ತನ್ನು ಮೀರಿತ್ತು. ಇದರಿಂದ ಸ್ಕೂಲು ಕಾಲೇಜಲ್ಲಿ ಮೋಹನ, ಮೋಹನನ ಅಕ್ಕ ಕಮಲಿಗೆ ತಮ್ಮ ಸಹಪಾಠಿಗಳು ಅಪ್ಪನನ್ನು ತಾತನ ಸ್ಥಾನದಲ್ಲಿ ಕೂರಿಸಿ ಅಪಮಾನ ಮಾಡಿದ್ದುಂಟು. ಇದರಿಂದ ಮೋಹನ, ಕಮಲಿ ಕಿನ್ನರಾಗಿದ್ದರು. ತನ್ನ ಅವ್ವ, ಅಪ್ಪ ಸತ್ತು ಹೋದ ಮೇಲೆ ಇನ್ನೊಂದು ಮದುವೆ ಯಾಕಾಗಲಿಲ್ಲ? ಹೆಂಡತಿ ತೀರಿಹೋದ ಗಂಡ ತನ್ನ ಮಕ್ಕಳನ್ನು ನೋಡಿಕೊಳ್ಳಲೋ, ಅಥವಾ ಕಾಮ ತೃಷೆಗೋ ಆರೇ ತಿಂಗಳಿಗೆ ಮದುವೆಯಾಗಿ ಮಜ ಮಾಡುವುದಾರೆ ತನ್ನ ತಾಯಿ ಇನ್ನೊಂದು ಮದುವೆ ಯಾಕಾಗಬಾರದಿತ್ತು? ಮೋಹನ ತನ್ನ ಮೇಷ್ಟ್ರು ಎರಡನೇ ಮದುವೆಯಾಗಿ ಬಂದ ದಿನ ಈ ಯೋಚನೆ ಮಾಡಿದ್ದುಂಟು. ಇತ್ತ ಮನೆಯಲ್ಲಿ ಅವನ ಅವ್ವ ತನಗೆ ಬಂದ ಕಷ್ಟ ಬೇರಾರಿಗೂ ಬಾರದಿರಲೆಂದು ತನ್ನ ಮಗಳನ್ನಾದರು ಒಂದೊಳ್ಳೆ ಕಡೆ ಸೇರಿಸಬೇಕೆಂಬ ಲೆಕ್ಕಾಚಾರದಲ್ಲಿ ತೊಡಗಿದರು ಸಹ ಬ್ರೋಕರ್ ನ ಮೂಲಕ ಈಗಾಗಲೇ ಬಂದು ಹೋಗಿರುವ ಸಂಬಂಧಗಳು ಎರಡನೆಯವನು ಮೂರನೆಯವನೇ ಆಗಿರುತ್ತಿದ್ದ. ಅದರಲ್ಲಿ ಹದಿದೈದು ವರ್ಷ ಸರ್ವಿಸ್ ಆಗಿರುವ ಇಬ್ಬರು ಮಕ್ಕಳಿರುವ ಪೊಲೀಸಪ್ಪನೂ ಒಬ್ಬ. ಹಾಗೆ ಇನ್ನೊಬ್ಬ ಅಮವಾಸ್ಯೆ ಹುಣ್ಣಿಮೆಗೆ ಬಟ್ಟೆ ಬಿಚ್ಚಿಕೊಂಡು ವಿಚಿತ್ರವಾಗಿ ವರ್ತಿಸುವ ಮೂರ್ಚೆ ರೋಗಿಯೂ ಕೂಡ. ಇದನ್ನೆಲ್ಲ ಗಮನಿಸಿದ ಕಮಲಿ “ಅವ್ವವ್ ನಾನು ಆ ತಿಕ್ಕಲುನ್ನ ಮದ್ವೆ ಆಗಕಿಲ್ಲ. ನನ್ನ ಅವ್ನಿಗೆ ಕೊಟ್ಟು ಮದ್ವೆ ಮಾಡ್ಬೇಡ” ಎಂದು ಅಸ್ಸಹಾಯಕಳಂತೆ ಮಲಗಿದ ಮಗ್ಗುಲಲ್ಲೆ ಸಣ್ಣದಾಗಿ ಪ್ರತಿಭಟಿಸಿದ್ದಳು. ಒಳ್ಳೆ ಸಂಬಂಧ ಕೂಡಿ ಒಂದು ಗೊತ್ತಾದ ಗಂಡು ಇಷ್ಟವಾದರು ಊರೊಳಗೆ ಅಲ್ಲಿ ಇಲ್ಲಿ ಕುಂತು ನಿಂತು ಮಾತಾಡುವವರು ‘ನಿನ್ನ ಮಗಳನ್ನ ಮದ್ವೆಯಾದರೆ ವರ್ಷ ಕಳೆದ್ರೊಳಗ ಗಂಡ ಸತ್ತೋದನಂತೆ’ ಎಂಬುದು ಕಲ್ಲೋಲ ಸೃಷ್ಟಿಸಿತು. ಬೀದಿಯಲ್ಲಿ ರಂಪವಾಯ್ತು. ಹಗಲು ರಾತ್ರಿ ಯೋಚಿಸಿದ್ದಾಯ್ತು. ಕೊನೆಗೆ ಒಂದು ಗಟ್ಟಿ ನಿರ್ಧಾರಕ್ಕೆ ಬಂದು ಬ್ರೋಕರ್ ಹೇಳಿದ್ದ
“ಆ ಗಂಡನ್ನೇ” ನೋಡಲು ಮನಸ್ಸು ಮಾಡಿದಳು.
ಈ ಕಥೆ ಈಗಲೂ ನಮ್ಮ ಹಳ್ಳಿಗಾಡು ಅಂತೇನಿಲ್ಲ ಬಹುತೇಕ ಭಾಗಶಃ ಉಳಿದುಕೊಂಡಿರುವಂಥದ್ದೇ ಆಗಿದೆ. ‘ಅವ್ವ ನನ್ನ ಅವ್ನಿಗೆ ಕೊಡ್ಬೇಡ’ ಅನ್ನೊ ಕಮಲಿಯ ಅಸ್ಸಹಾಯಕತೆ, ಒಂದು ಹೆಣ್ಣು ಸ್ವತಂತ್ರವಾಗಿ ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳುವಷ್ಟು ಸ್ವಾತಂತ್ರ್ಯವಿಲ್ಲದಷ್ಟು ಆಕೆಯ ಮನಸ್ಥಿತಿಯ ಮೇಲೆ ಹೇರುವಿಕೆ ಇದೆ ಎಂದರೆ ನಮ್ಮ ಸಮಾಜ ಇನ್ನೂ ಪಕ್ವಗೊಂಡಿಲ್ಲ ಎನುವುದನ್ನು ಈ ಕಥೆಯ ಮೂಲಕ ಲೇಖಕರು ಮುಖ್ಯವಾಹಿನಿಗೆ ಸಂದೇಶ ರವಾನಿಸಿದ್ದಾರೆ. ಇದು ದ.ರಾ. ಬೇಂದ್ರೆ ಅವರ ‘ಪುಟ್ಟ ವಿಧವೆ’ ಪದ್ಯದ ಎದೆಯ ಸಾಲುಗಳನು ನೆನಪಿಸುತ್ತದೆ. ಜೊತೆಗೆ ಕಮಲಿಯ ಅವ್ವ ವಯಸ್ಸಿಗೆ ಮೀರಿದವನನ್ನು ಮದುವೆಯಾಗಿರುವುದು ಬಡತನವೋ ಇನ್ನಾವುದೋ ಸಾಂಪ್ರದಾಯಿಕ ಒತ್ತಡವೋ ಒಂದೆಡೆಯಾದರೆ ವಿಧವೆಯೊಬ್ಬಳು ನ್ಯಾಯಮಾರ್ಗದಲ್ಲಿ ಮತ್ತೊಂದು ಗಂಡನ್ನು ಪಡೆಯಲು ಅರ್ಹಳಲ್ಲ ಅವಳಿಗೆ ಅವಶ್ಯಕತೆ ಇದ್ದರೆ ಅಥವಾ ಒಂದು ಗಂಡು ಅವಳ ಕಂಡು ವ್ಯಾಮೋಹಗೊಂಡರೆ, ಅದೇನಿದ್ದರು ಕಂಡೂ ಕಾಣದ ಅನೈತಿಕವಾದ ಸಂಬಂಧದ ಅಂಕೆಯಲ್ಲೆ ಬದುಕು ಮಾಡಿಕೊಳಬೇಕೆಂಬ ಮಿತಿಯಲ್ಲಿ, ಅದೇ ಅನೈತಿಕತೆಗೆ ಉತ್ತೇಜನ ನೀಡುವವರು ‘ಅವರ ನೇರಕ್ಕೆ ನ್ಯಾಯ’ ದ ಬಟ್ಟು ಇಟ್ಟು ತೂಗಿ ನೋಡುವವರಿಗೆ ಬಿಟ್ಟ ವಿಚಾರ ಎನುವ ಪುರಾತನ ಗೊಡ್ಡು ಸಂಪ್ರದಾಯ ಬೇರು ಬಿಟ್ಟಿರುವ ಸಂಕೇತದಂತೆಯೂ ‘ಎರಡನೇ ಹೆಂಡ್ತಿ’ ಕಥೆ ತನ್ನ ಆಂತರ್ಯದ ಸತ್ಯ ಬಿಚ್ಚಿಡುತ್ತೆ.
ಒಂದು ಕೃತಿಯ ಯಶಸ್ಸು ಅದರಲ್ಲಿ ಬಳಸಿರುವ ಭಾಷಾ ಸೊಗಡು ಮುಖ್ಯವಾಗುತ್ತದೆ. ಪರಿಪೂರ್ಣ ಆಡುಭಾಷೆ ಅಲ್ಲದಿದ್ದರು ಓದುಗರಿಗೆ ನೆರವಾಗುವ ದಾಕ್ಷಿಣ್ಯವನ್ನು ತೋರಿರುವ ಗುರುಪ್ರಸಾದ್ ಕಂಟಲಗೆರೆ “ಕೆಂಡದ ಬೆಳುದಿಂಗಳು” ಸಂಕಲನದಲ್ಲಿರುವ ಅಷ್ಟೂ ಕಥೆಗಳಲ್ಲಿ ಅವಶ್ಯಕವಾಗಿ ಭಾಷೆಯನ್ನು ‘ಭಾಷಾ ದೌರ್ಬಲ್ಯ ರಹಿತವಾಗಿ’ ದುಡಿಸಿಕೊಂಡಿದ್ದಾರೆ.
“ನಿನ್ನಬ್ರಡ್ಗ ನಿಲ್ಲು”
“ಹಂದಿ ಗೂಟಾಡ ದೊಂಬ್ರಟ್ಟಿಲಾದು ದೇವ್ರು ಉತ್ಸವ ಹೋಗಕಾಗುತ್ತೆ, ರಾಜದಾರಿಯಾಗಿರ ನಮ್ಮಟ್ಟಿಯೊಳಾದು ಯಾಕೆ ಹೋಗಬಾರದು”
“ಅ ದೇವ್ರುಆಡ್ಕೆಂತ ಆಡ್ಕೆಂತ ಬಂದು ಒಮ್ಮೆ ಹಂದಿ ಗೂಟಾಡ ಬಾನಿಯೊಳಗೆ ಎಡವಿ ಬಿದ್ದೋತು”
“ಇವ್ನಯ್ಯುನು ಗುಂಜ್ನಾಕ್ಯಾಯ, ಇವ್ರಪ್ಪುಗೆ ಬೇರೆ ಹೆಸ್ರೆ ಇರ್ಲಿಲ್ಲ ಕಟ್ಟಕೆ”
“ಮದ್ವೆ ಅಂದ್ರೆ ಸದ್ರುಕಾಗುತ್ತೇನ್ರಮ್ಮ”
“ಲಕ್ಷ್ಮಮ್ಮುಂದೆ ಏನು ಚಿಂತಿಲ್ಲ, ಅವ್ರ ಹೆಣ್ಣುಡುಗ್ರಿಗೆ ಯಾರಾರ ಹೆಂಡ್ರು ಸತ್ತಿರರು, ಎಲ್ಡನೆ ಮದ್ವೆರು ಬಂದು ಖರ್ಚಿಲ್ದಂಗೆ ಆಗೆ ಆಗ್ತರೆ ತಗ”
ಹೀಗೆ ಕೃತಿಯೊಂದರಲ್ಲಿ ಬಳಸಿರುವ ಭಾಷಾ ಪ್ರಯೋಗ ಸಾಧಾರಣವಾದ ಕೃತಿಯೂ ಅಸಾಧಾರಣವಾದ ಉದಾಹರಣೆ ಇದೆ. ದೇವನೂರ ಮಹಾದೇವರ ‘ಕುಸುಮ ಬಾಲೆ’ ಮತ್ತು ‘ಒಡಲಾಳ’ ಹೀಗೊಂದು ಭಾಷಾ ಪ್ರಯೋಗಶೀಲ ಕೃತಿಗಳು. ಹೀಗಾಗಿ ಕುಸುಮ ಬಾಲೆ ಮತ್ತು ಒಡಲಾಳ ವಿಮರ್ಶಿಸಿ ವಿಶ್ಲೇಷಿಸಿದವರೆಲ್ಲರೂ ಅವುಗಳ ಕಥೆ ಹೇಳುವ ಸಾರಕ್ಕಿಂತ ಬಳಸಿರುವ ಭಾಷೆ ಮತ್ತು ರೂಪಕಗಳ ಮೂಲಕವೇ ಕೃತಿಯ ಹೆಚ್ಚುಗಾರಿಕೆಗೆ ಒತ್ತುಕೊಟ್ಟು ತುಲನೆ ಮಾಡಿದ್ದೇ ಹೆಚ್ಚು. ಅಂತೆಯೇ ಚದುರಂಗರು, “ಹೊಯ್ಸಳ ಶಿಲ್ಪಿಗಳು ಕಲ್ಲನ್ನು ಮೇಣ ಎನ್ನುವ ಹಾಗೆ ಉಪಯೋಗಿಸಿದಂತೆ ಕುಸುಮ ಬಾಲೆಯಲ್ಲಿ ಭಾಷೆಯು ಮೈದಾಳಿದೆ” ಎಂದರೆ “ಕುಸುಮ ಬಾಲೆ ಓದುವಾಗ ಬೆಳ್ಳಕ್ಕಿಯ ಸಾಲುಗಳು ಸಾಲುಸಾಲಾಗಿ ಬಾನಿನಿಂದ ಇಳಿದು ಬಂದು ನೀರನ್ನು ಮುಟ್ಟೀ ಮುಟ್ಟೀ ಮೇಲೇರಿ ಹಾರಾಡುವ ಲೀಲೆಯಂತೆ ಅನುಭವವಾಯ್ತು” ಎಂದು ಪು.ತಿ.ನ ಹೊಸದೇ ಆದ ನೋಟದತ್ತ ಚಿತ್ತ ಹರಿಸಿದರೆ “ಒಡಲಾಳದ ಭಾಷಾ ಪ್ರಯೋಗ ಕಥನ ಕ್ರಮಗಳಿಗೆ ಅಪೂರ್ವ ಶೋಭೆ ಉಂಟಾಗುವುದು ಲೇಖಕನಿಗೆ ಬರೆಯುವ ಕ್ರಮವೇ ನೈತಿಕ ಕ್ರಿಯೆಯೂ ಆಗಿದೆ” ಎಂದು ಯು.ಆರ್.ಅನಂತಮೂರ್ತಿ ಕೃತಿಯ ಭಾಷಾ ಪ್ರಯೋಗದ ಬಗ್ಗೆ ಗಮನ ಸೆಳೆಯುತ್ತಾರೆ. ಹೀಗಾಗಿ ‘ಅ ಆ ಮತ್ತು..’ ಕವಿ ದೇವನೂರ ಮಹಾದೇವರ ದಸಂಸ ಕಾಲದ ಒಡನಾಡಿ ಹೆಚ್.ಗೋವಿಂದಯ್ಯ “ಕುಸುಮ ಬಾಲೆಯಲ್ಲಿ ಭಾಷಾ ಪ್ರಯೋಗವೇ ಪ್ರಧಾನ. ಅದರ ಹೊರತು ಅದು ಪರಿಪೂರ್ಣ ಕೃತಿ ಆಗದೆ, ಮೇಲ್ವರ್ಗದ ಹೆಣ್ಣು ದಲಿತ ಹುಡುಗನೊಂದಿಗಿನ ಅನೈತಿಕ ಸಂಬಂಧವನ್ನೇ ಕೃತಿಯ ಕೇಂದ್ರವಾಗಿ ಇಟ್ಟು ‘ಕೃತಿಯ ಶ್ರೇಷ್ಟತೆ’ ನೋಡಿರುವುದೇ ಕುಸುಮ ಬಾಲೆಯ ದೌರ್ಬಲ್ಯ. ಹಾಗಾಗಿ ಅದೊಂದು ವ್ಯಸನದಿಂದ ಕೂಡಿದ ಕೃತಿ” ಎಂದು ಋಣಾತ್ಮಕ ಅಂಶಗಳತ್ತ ಗಮನ ಸೆಳೆದಿದ್ದಾರೆ. ಆದರೆ ಗುರುಪ್ರಸಾದ್ ಕಂಟಲಗೆರೆ ದೇವನೂರ ಮಹಾದೇವರಂತೆ ಭಾಷಾ ಪ್ರಯೋಗದ ದೌರ್ಬಲ್ಯಕ್ಕೆ ತಮ್ಮನ್ನು ಒಡ್ಡಿಕೊಳ್ಳದೆ ಯಶವಂತ ಚಿತ್ತಾಲ ಮತ್ತು ಮಾಸ್ತಿ ವೆಂಕಟೇಶ ಅಯ್ಯಂಗಾರರ ಪ್ರಯೋಗಶೀಲ ಕಥನ ಕ್ರಮವೇ ಕಾಕತಾಳೀಯ ಎನುವಂತೆ ಕೃತಿ ರಚನೆಗೈದಿದ್ದಾರೆ. ಹೀಗೆ ‘ಕೆಂಡದ ಬೆಳುದಿಂಗಳು’ ತನ್ನ ಗುಣಾತ್ಮಕ ಅಂಶಗಳ ಮೂಲಕ ಓದುಗನನ್ನು ಸೆಳೆವ ಕೃತಿ.
ಹಾಗಾದರೆ ಈ ಕೃತಿ ದೌರ್ಬಲ್ಯ ರಹಿತವೇ? ಎಲ್ಲವೂ ಗುಣಾತ್ಮಕತೆಯಿಂದ ಕೂಡಿ ಋಣಾತ್ಮಕ ಅಂಶದಿಂದ ಬಿಡಿಸಿಕೊಂಡು ಪರಿಪೂರ್ಣ ಕೃತಿಯಾಗಿದೆಯೇ? ಯಾವುದೇ ಶ್ರೇಷ್ಟ ಕೃತಿಯಲ್ಲು ಗುಣಾತ್ಮಕ ಋಣಾತ್ಮಕ ವಿಶೇಷ ಇದ್ದೇ ಇರುತ್ತದೆ. ಈ ಮಾನದಂಡದಲ್ಲಿ ‘ಕೆಂಡದ ಬೆಳದಿಂಗಳು’ ಕಥೆಗಳಲ್ಲಿ ಮುಖ್ಯ ಪಾತ್ರದೊಂದಿಗೆ ಕೆಲವು ಅನ್ಯ (Supporting charector) ಪಾತ್ರಗಳು ಕೇಂದ್ರ ಕಥೆಯ ನಡುವೆ ಸಡನ್ನಾಗಿ ಬಂದು ಕೂಡುತ್ತವೆ. ಅವು ಕಥೆಯೊಳಗೆ ಮೇಲುಗೈ ಸಾಧಿಸುವ ಹಂತ ತಲುಪುವ ಉಮೇದು ಪ್ರದರ್ಶಿಸುತ್ತವೆ. ಆ ಪಾತ್ರಗಳ ವಿವರಣೆ ಮುಗಿಯುವ ಹೊತ್ತಿಗೆ ಕೇಂದ್ರ ಪಾತ್ರ ಮಖ್ಯ ಕಥೆಗೆ ಜೊತೆಯಾಗುತ್ತದೆ. ಇದು ಓದುಗನನ್ನು ಆಗಾಗ ತಡೆದು ನಿಲ್ಲಿಸುತ್ತದೆ. ಇವರ ಚೊಚ್ಚಲ ಕೃತಿ ‘ಗೋವಿನ ಜಾಡು’ ಕೃತಿಯಲ್ಲೂ ಈ ತೆರನಾದ ಪಾತ್ರ ಪ್ರವೇಶಿಕೆ ನಿರೂಪಣೆ ಇದೆ. ಹಾಗೆ ‘ಗೋವಿನ ಜಾಡು’ ಕಥಾ ಸಂಕಲನದಲ್ಲಿನ ಕಥೆಗಳ ಪಾತ್ರ ಸಂಭಾಷಣೆಗಳು “ಕೆಂಡದ ಬೆಳುದಿಂಗಳು” ಕಥಾ ಸಂಕಲನದ ಒಂದೆರಡು ಕಥೆಗಳಲ್ಲೂ ಅಲ್ಲಲ್ಲಿ ಪುನರಾವರ್ತಿತವಾಗಿವೆ. ಒಂದು ಕೃತಿಯ ಪಾತ್ರಗಳ ಸಂಭಾಷಣೆ ಅವರದೇ ಇನ್ನೊಂದು ಕೃತಿಯಲ್ಲಿ ಬಂದರೆ ತಪ್ಪೇ? ಪಾತ್ರಗಳು ಸನ್ನಿವೇಗಳು ಊರುಕೇರಿ ಎಲ್ಲವೂ ಮೊದಲ ಕೃತಿಯಿಂದ ಎರಡನೇ ಕೃತಿಗೆ ಪ್ರಯಾಣಿಸಿ ಸಹಜವಾಗಿ ಬರಬಹುದಾದ ಸಾಧ್ಯತೆ ಇದೆ. ಹಿರಿಯ ಲೇಖಕರ ಕೆಲವುಗಳೂ ಈ ತೆರನಾದ ಪುನರಾವರ್ತಿತತೆ ಇದೆ. ಎಸ್.ಎಲ್. ಭೈರಪ್ಪನವರ ‘ಗೃಹಭಂಗ’ ಮತ್ತು ಅದರ ಮುಂದುವರಿಕೆಯಂತಿರುವ ‘ಅನ್ವೇಷಣೆ’ ಕೃತಿಯಲ್ಲಿ ಈತರದ ಪುನಾವರ್ತಿತ ಸನ್ನಿವೇಶ, ಸಂಭಾಷಣೆ ಕಾಣಬಹುದು. ಹಾಗಾಗಿ ಇದು ಅಂತ ಲೋಪವಾಗದೆ ಇದ್ದರು ಇದರಿಂದ ಬಿಡಿಸಿಕೊಂಡರೆ ‘ಪ್ರಸ್ತುತ ಕೃತಿಯ’ ತಾಜಾತನ ಹೆಚ್ಚುತ್ತದೆ.
ಒಟ್ಟಾರೆ “ಸಾಹಿತ್ಯ ಎಂದೂ ಕಿರುಚುವುದಿಲ್ಲ, ಅರಚುವುದಿಲ್ಲ, ಘೋಷಣೆ ಮಾಡುವುದಿಲ್ಲ, ಅಭಿಪ್ರಾಯಗಳ ಸಮರ್ಥನೆ ಮಾಡುವುದಿಲ್ಲ: ಶ್ರೇಷ್ಠ ಸಾಹಿತ್ಯವೆಂಬುದು ಪಿಸುಮಾತಿನಂತೆ. ಓದುಗನು ಅದನ್ನು ತನ್ನ ಸ್ವಗತವೆಂಬಂತೆ ಓದಿಕೊಳ್ಳಬೇಕೆನ್ನುವುದು ಬರಹಗಾರನೊಬ್ಬನ ಆಶಯವಾಗಿರುತ್ತದೆ” ಎಂದು ಯು.ಆರ್. ಅನಂತಮೂರ್ತಿ ಅವರ ಅಭಿಪ್ರಾಯದಂತೆ ಗುರುಪ್ರಸಾದ್ ಕೆಂಟಲಗೆರೆ, ಅವರ “ಕೆಂಡದ ಬೆಳುದಿಂಗಳು” ಅರಚದೆ ಕಿರುಚದೆ ಸಮರ್ಥನೆಗೆ ಇಳಿಯದೆ ಗಂಭೀರವಾಗುತ್ತ ಸ್ವಗತದಲ್ಲಿ ಓದಿಕೊಳುವ ಗುಣದೊಂದಿಗೆ ಸುಡುವ ಕೆಂಡದಲ್ಲಿ ಅದ್ದಿ ತೆಗೆದಂಥ ಒಂದು ಅಪೂರ್ವ ಕಲಾಕೃತಿ.
-ಎಂ.ಜವರಾಜ್