ಹೃದಯಶಿವ ಅಂಕಣ

ಕೆಂಚಣ್ಣನ ತಿಥಿಯೂ… ವಿ.ಸಿ.ಪಿ. ಕಥೆಯೂ…! :ಹೃದಯಶಿವ ಅಂಕಣ

"ಬತ್ತು… ಬತ್ತು… ಬತ್ತು… ಇನ್ನೇನ್ ಬಂದೇ ಬುಡ್ತು… ಅಗೋ ಬತ್ತಾದೆ… ಸದ್ದು ಕೇಳ್ತಾದೆ… ಅಲ್ನೋಡು ಧೂಳು ಏಳ್ತಾದೆ… ಬತ್ತು… ಬತ್ತು.. ಬಂದೇsss ಬುಡ್ತು !  ಆಕು  ಪಾಕು  ವೆತ್ತೆಲೆ  ಪಾಕು  ಅಮಾ  ಡುಮಾಡೇ….  ಅಸ್ಕಿಣಕಣ  ಪಿಸ್ಕಿಣಕಣ ಅಮಾ  ಡುಮಾಡೇ!!"  ಎಂದು  ಎರಡೋ, ಮೂರೋ  ಓದುವ  ವಯಸ್ಸಿನಲ್ಲಿದ್ದ  ನಾವೆಲ್ಲ  ಖುಷಿಯಿಂದ ಸಂಭ್ರಮಿಸುತ್ತಿದ್ದಂತೆಯೇ  ಅತೀ  ಕೆಟ್ಟ  ಮಣ್ಣರೋಡಿನಲ್ಲಿ  ತುಂಬಿದ ಬಿಮ್ಮನ್ಷೆಯಂತೆ  ಏದುಸಿರು  ಬಿಡುತ್ತಾ  ನಮ್ಮೂರಿಗಿದ್ದ  'ಮೂರು  ಗಂಟೆ  ಬಸ್ಸು'  ಮೂರೂವರೆಗೋ, ಮೂರೂ ಮುಕ್ಕಾಲಿಗೋ  ನೇರವಾಗಿ ನಾವಿದ್ದಲ್ಲಿಗೇ  ಬಂದು ನಿಂತು ದೂರದಿಂದ  ಸಾಕಾಗಿ  ಬಂದವರು  'ಉಸ್ಸೋ'  ಅನ್ನುವ  ಮಾದರಿಯಲ್ಲಿ  ಟುಸ್ಸನೆ  ಗಾಳಿ  ಬಿಟ್ಟು  ವಿಶ್ರಮಿಸಿತು.  

ವಿಷಯ ಏನಪಾ  ಅಂದ್ರೆ, ಅವತ್ತು  ನಮ್ಮ ನೇಬರು  ಕೆಂಚೇಗೌಡ  ಅಲಿಯಾಸ್  ಕೆಂಚಣ್ಣನ  ದಿವಸ. ದಿವಸ  ಅಂದರೆ  ಮಾನವರು  ಸತ್ತ  ಹನ್ನೊಂದನೇ  ದಿನಕ್ಕೆ  ಮರಿ  ಕಡಿದು ಮಸಾಲೆಯೊಡನೆ ಬೇಯಿಸಿ  ಮಾಡುವಂಥ  ತಿಥಿಕಾರ್ಯ  ಎಂದರ್ಥ. ಮುದುಕ  ಕೆಂಚಣ್ಣ ಅಕಸ್ಮಾತಾಗಿ  ಸತ್ತು  ಹೋಗಿದ್ದ. ಸಹಜವಾಗಿ  ಎರಡೂ  ಕಣ್ಣಿಗೆ  ಒಂದು  ಕನ್ನಡಕ, ಒಂದು  ಕೈಗೆ  ಒಂದೇ  ಕೋಲು  ಬಂದಿದ್ದಂಥ  ನನ್ನ ತಾತನ  ಓರಗೆಯವನೆಂಬ  ಅಂದಾಜಿನಿಂದ  ಕೆಂಚಣ್ಣನಿಗೆ  ವಯಸ್ಸಾಗಿತ್ತು  ಅನ್ನಬಹುದಿತ್ತು. ಆ  ದಿವಸವೆನ್ನುವ  ದಿವಸದ  ನಿಟ್ಟಿನಲ್ಲಿ ಕೆಲವರು, ಹರಿಕಥೆ  ಮಾಡಿಸಿಬಿಡೋಣ  ಕೆಂಚಣ್ಣ  ನೇರವಾಗಿ  ವೈಕುಂಠಕ್ಕೆ  ಹೋಗಲು ಅನುಕೂಲವಾಗುತ್ತದೆ  ಅಂದರೆ, ಮತ್ತೆ  ಕೆಲವರು 'ಬ್ಯಾಡ  ಬ್ಯಾಡ, ಸುಮ್ನೆ  ಮಾದಪ್ಪುನ್  ಹೆಸರಲ್ಲಿ  ಕಂಸಾಳೆಯವ್ರನ್ನ  ಕರ್ಸಿ ಕತೆಗಿತೆ  ಓಡಿಸ್ಬುಡುವಾ ಕೆಂಚಣ್ಣ  ಕೈಲಾಸಕ್ಕೆ  ಹೋಗಲು  ದಾರಿ ಸುಗಮವಾಗುತ್ತದೆ'  ಅಂದಿದ್ದರು.

ಅದೇ  ವೇಳೆಗೆ, ಸಭೆಯ  ಮಧ್ಯದಲ್ಲಿದ್ದ, ಅಲ್ಪ ಸ್ವಲ್ಪ ಓದಿಕೊಂಡಿದ್ದ, ಕನಕಪುರದ  ವಾಸು  ಹೋಟೆಲಿನ ಮಸಾಲೆದೋಸೆ ಹಾಗೂ ಶಿವಾಜಿ ಮಿಲ್ಟ್ರಿ ಹೋಟೆಲಿನ  ಬೋಟಿ  ಫ್ರೈ  ರುಚಿ  ನೋಡುವಷ್ಟು  ಮುಂದುವರೆದಿದ್ದ ಹಿಪ್ಪಿ ಕಟಿಂಗು   ಯುವಕನೋರ್ವ,ತಾನು ಮನೆಗೆ ಬೇಕಾದ  ಸಾಮಾನು  ತರಲು  ಶನಿಶನಿವಾರ  ಕೋಡಳ್ಳಿ  ಸಂತೆಗೆ  ಸೈಕಲ್ಲಿನಲ್ಲಿ  ಹೋಗಿ, ಹಾಗೇ  ವಿನಾಯಕ  ಟೆಂಟಿನ  ಕಡೆ  ಕಣ್ಣುಹಾಯಿಸಿ, ಸಿಕ್ಕಿದ್ದೇ  ಸೀರುಂಡೆ  ಅಂತ  ಆ  ದಿನ  ಯಾವುದಿರುತ್ತೋ  ಆ  ಪಿಚ್ಚರ್ರೂ  ನೋಡಿಕೊಂಡು  ಬರುತ್ತಿದ್ದದ್ದು  ಥಟ್ಟನೆ ಹೊಳೆದು, 'ಹೇ… ಸಾಕು  ಸುಮ್ನಿರಯ್ಯಾ…  ಹರಿಕಥೆ ಅಂತೆ  ಕಂಸಾಳೆ  ಅಂತೆ… ಯಾವ  ಕಾಲದಲ್ಲಿ  ಇದ್ದೀರಿ  ನೀವೆಲ್ಲಾ?  ಸುಮ್ನೆ  ವಿಸಿಪಿ  ತಂದುಬುಡುವಾ… ಕೋಳಿ  ಕೂಗೋಷ್ಟರಲ್ಲಿ  ಏನಿಲ್ಲಾ  ಅಂದ್ರು  ಮೂರ್ನಾಕು ಕ್ಯಾಸೆಟ್ಟು  ನೋಡ್ಬೋದು. ಯಂಗೂ  ಕೋಡಳ್ಳಿ  ಭಾಷಾ  ನನ್ನ  ಕಂಡವ್ನೆ. ಈವಾಗ್ಲಂತೂ  ಅವನದು  ಸೈಕಲ್  ಶಾಪ್ ಯಾಪಾರುಕ್ಕಿಂತ  ವಿಸಿಪಿ, ಟಿಬಿ, ಪಿಲಂ ಕ್ಯಾಸೆಟ್ಟು  ಬಾಡಿಗೆ  ಕೊಡೋ  ಯವಾರಾನೆ ಜಾಸ್ತಿ. ನೀವೆಲ್ಲಾ  'ಊ'  ಅನ್ನೋದಾದ್ರೆ  ಉಸಾರಾಗಿ  ತಂದು  ಉಸಾರಾಗಿ  ತಲುಪಿಸೋ   ಜಬಾದಾರಿ  ನಂದು. ಖರ್ಚು, ಯಚ್ಚ ಬಾಡಿಗೆ  ಬಂಕಾನೆಲ್ಲ  ಕೆಂಚಣ್ಣನ  ಹಿರೀಮಗ  ನೋಡ್ಕೋಬೇಕು.ಸರಿ ತಾನೇ ನ್ಯಾಯ? 

ಇಷ್ಟುಕ್ಕೂ  ಕೊನೇಗಾಲ್ದಲ್ಲಿ ಕೆಂಚಣ್ಣಾನೂ ಟಿಬಿ  ಮುಂದೆ  ಕೂತಿದ್ದೋನೆ, ಚಿತ್ರಮಂಜುಳಿ, ದಾರಾವಾಯಿ, ವಾರ್ತೆಗಳು, ಪ್ರದೇಶ ಸಮಾಚಾರದಿಂದ  ಹಿಡಿದು  'ಇದೀಗ ದೆಹಲಿಗೆ' ಅನ್ನೋಗಂಟ  ಸಾಲ್ದು  ಅಂತ  ಪಿಚ್ಚರ್ನೂ  ನೋಡಿದ್ದೋನೆ… ಅದುಕ್ಕೆ,  ವಿಸಿಪಿ  ತಂದು  ಊರ್  ಜನುಕ್ಕೆಲ್ಲ  ಸಿನಿಮಾ  ತೋರ್ಸುದ್ರೆ  ಕೆಂಚಣ್ಣನಾತ್ಮನೂ  ನಿರಾಳ  ಆಗಿ  ಅತ್ಲಾಗೆ  ವೈಕುಂಠದ ಸಾವಾಸಾನೂ  ಬ್ಯಾಡ… ಇತ್ಲಾಗೆ  ಕೈಲಾಸದ  ಸಾವಾಸಾನು  ಬ್ಯಾಡ  ಅಂದುಬುಟ್ಟು  ನೆಟ್ಟಗೆ  ಮೊಕನ್ಯಾರುಕ್ಕೆ  ನಮ್ ಗುರು  ಶಂಕರ್  ನಾಗ್  ಇರೋ  ತಾವ್ಕೆ  ಹೊಂಟೋಯ್ತನೆ'  ಅಂದುಬಿಟ್ಟ ನಮ್ಮೂರ ರಸಿಕ.

ಅವನ  ಮಾತಿನಿಂದ  ಕೆಲವು  ಹಿರಿಯರು  ಉದ್ರಿಕ್ತರಾಗಿ  ಪ್ರತಿಭಟನೆಯ ರೂಪದಲ್ಲಿ  ಬುಸ್ಸನೆ  ಬೀಡಿ  ಹೊಗೆ  ಬಿಟ್ಟು, ಕೆಮ್ಮಿ  ಕ್ಯಾಕರಿಸಿ  'ಹಾ…ಹೂ'  ಅಂತ  ಎಷ್ಟೇ  ಎಗರಾಡಿದರೂ, ಕೆಲವು ಯುವಕರೂ, ಮಕ್ಕಳೂ  ಹಾಗೂ  ಉಗುರುಬಣ್ಣ, ಪಾಂಡ್ಸ್ ಪೌಡರ್ , ಗೋರಂಟಿ  ಹಾಕಿಕೊಳ್ಳುತ್ತಿದ್ದ  ಮಹಿಳೆಯರೂ  ಒತ್ತಾಯ  ಮಾಡಿದುದರಿಂದ  ಅಂತಿಮವಾಗಿ  ವಿಸಿಪಿ  ತರುವಂತೆಯೇ ಕೆಂಚಣ್ಣನ  ಮನೆ  ಮುಂದಿನ  ಪಡಸಾಲೆಯೆಂಬ  ಸದನದಲ್ಲಿ  ಸರ್ವಾನುಮತದಿಂದ  ಸಕಲರೂ  ಒಪ್ಪಿ  ತೀರ್ಮಾನ  ಕೈಗೊಳ್ಳಲಾಗಿತ್ತು.  

ಬಸ್ಸಿನಿಂದ  ಸಮಸ್ತ   ಪ್ರಯಾಣಿಕರೂ  ಇಳಿದ  ನಂತರ  ಗೂನು  ಬೆನ್ನಿನ  ಟಿವಿಯನ್ನು  ತನ್ನೆರಡೂ  ಕೈಗಳಲ್ಲಿ  ಹುಷಾರಾಗಿ ಹಿಡಿದುಕೊಂಡಿದ್ದ  ಒಬ್ಬ  ಅಸಾಮಿ  ನಿಧಾನವಾಗಿ  ನೆಲಕ್ಕಿಳಿದ, ಅಷ್ಟರಲ್ಲಿ  ನಮಗಿಂತ  ಸ್ವಲ್ಪ  ಮಿರಿಸಾದ  ಹುಡುಗ  ಓಡಿ ಹೋಗಿ  ಸಾಥ್  ಕೊಟ್ಟ. ಆ  ಆಸಾಮಿ  ಧರಿಸಿದ್ದ   ಬಿಳಿ ಟೋಪಿ, ಹಿಮ್ಮಡಿಗಿಂತ  ತುಸು  ಮೇಲಕ್ಕೇ ಇದ್ದ  ದೊಗಳೆ  ಪ್ಯಾಂಟು  ನೋಡಿ  ಈತ  ಭಾಷಾನ   ಬಲಗೈ  ಭಂಟ  ಅನ್ನುವುದು  ನಮಗೆ  ನಾವೇ  ಮಾಡಿಕೊಂಡಿದ್ದ  ಖಾತ್ರಿಯಾಗಿತ್ತು. ನಮ್ಮ  ಉತ್ಸಾಹದ  ಗ್ರಾಫ್  ನಿಧಾನವಾಗಿ  ಏರಲಾರಂಭಿಸುತ್ತಿದ್ದಂತೆಯೇ  ತನ್ನ  ಪಾನ್ಪರಾಗ್  ಹಲ್ಲುಗಳನ್ನು  ಪ್ರದರ್ಶಿಸುತ್ತಾ  ಕೆಲವು  ವೈರುಗಳು  ಹಾಗೂ  ಇವತ್ತು  ಪ್ಲೇಯರು  ಅಂತ  ಕರೆಯಲ್ಪಡುವ  ಅವತ್ತಿನ  ಆ ವಸ್ತುವನ್ನು  ಹಿಡಿದುಕೊಂಡು  ಭೀಮಾಕಾಯದ  ವ್ಯಕ್ತಿಯೋರ್ವ  ಬಸ್ಸಿನಿಂದಿಳಿದವನೇ  ತನ್ನ  ಕ್ಷೀಣದನಿಯಲ್ಲಿ,  "ಅದು  ಎಲ್ಲ ಮುಟ್ಬಾರ್ದು. ಡ್ಯಾಮೇಜ್ ಗೆ  ಆಗ್ಬಿಟ್ರೆ  ನಮ್ದು  ಅಪ್ಪ  ನಮ್ಗೆ  ಕುರ್ಮಾಗೆ  ಮಾಡ್ಬಿಡ್ತಾರೆ. ಸೈಡ್ಗೆ  ಹೋಗಿ… ಸೈಡ್ಗೆ ಹೋಗಿ"  ಅನ್ನುತ್ತಿದ್ದಂತೆಯೇ  ನಮ್ಮ  ಗುಂಪಿನ  ಒಬ್ಬ  ಹುಡುಗ  ಟಿವಿ  ಗ್ಲಾಸಿನ  ಮೇಲಿದ್ದ  ತನ್ನ  ಬೆರಳನ್ನು  ಚಕ್ಕನೆ  ಹಿಂದಕ್ಕೆ  ತೆಗೆದುಕೊಂಡು  ಸೀದಾ  ತನ್ನ  ಮೂಗಿನ  ಹೊಳ್ಳೆಯೊಳಗೆ  ತೂರಿಸಿಬಿಟ್ಟ.  

ಭಾಷಾನ  ಬಾಲದಂತೆ  ಬಂದವನೇ  ನಮ್ಮೂರ  ರಸಿಕ. ಆತನ  ಕೈಲಿ  ಒರಟು ಒರಟಾದ  ಒಂದು  ಬ್ಯಾಗಿತ್ತು. ಬಹುಷಃ  ಅದರಲ್ಲೇ   ಕ್ಯಾಸೆಟ್ಟುಗಳಿರಬಹುದು  ಅಂತ ಅನುಮಾಸಿದೆವು. ಕುತೂಹಲ  ತಡೆಯಲಾರದೆ  ನಾನು  ಕೇಳೇ  ಬಿಟ್ಟೆ, "ಯಾವ್ಯಾವ  ಪಿಚ್ಚರ್ಗಳು  ಇದ್ದವು? ಎಷ್ಟು  ಕ್ಯಾಸೆಟ್ಟು ತಕೋಬಂದೆ?"  ಆತ  "ಐದವೆ ಕಣ್ಲಾ ಸಿವಾ… ನಾಳೆ  ವತಾರಕ್ಕೆ  ಆ  ಬಡ್ಡಿ ಹೈದ  ಸೂರ್ಯ  ಹುಟ್ಟದೆ ಇದ್ರೆ  ಎಲ್ಲಾನೂ  ನೋಡ್ಬೋದಪಾ"  ಅಂದು  ಬ್ಯಾಗನ್ನು  ಎಡಗೈಯಿಂದ  ಬಲಗೈಗೆ  ವರ್ಗಾಯಿಸಿ  ಜೋರಾಗಿ  ನಕ್ಕ. ಗುಂಪಿನ  ಉತ್ಸಾಹಿ  ಹುಡುಗರ  ಕಣ್ಣುಗಳೆಲ್ಲ ಆ  ಮಾಯಾಚೀಲದ  ಮೇಲಿದ್ದವು.

ಸಂಜೆಯಾಗುತ್ತಲೇ  ದಿವಂಗತ  ಕೆಂಚಣ್ಣನ  ಮನೆಯೆದುರು  ಜನವೋ  ಜನ. ಸೂತಕದ  ಮನೆಮುಂದೆ  ಜಾತ್ರೆಯ ಸಂಭ್ರಮ! ನಡುಬೀದಿಯಲ್ಲಿ ಒಂದು ಟೇಬಲ್ಲು, ಅದರ  ಮೇಲೆ  ಟಿವಿ  ಇಟ್ಟಿದ್ದರು. ಪಕ್ಕದಲ್ಲಿ  ಪ್ಲೇಯರು. ಉಳಿದಂತೆ ಕ್ಯಾಸೆಟ್ಟುಗಳ  ಬ್ಯಾಗನ್ನು  ತನ್ನ  ತೊಡೆಯ  ಮೇಲೇ  ಮಡಗಿಕೊಂಡು  ಟಿವಿಯ  ಪಕ್ಕದಲ್ಲೇ  ಒಂದು  ಚೇರು  ಹಾಕಿಕೊಂಡು ನಮ್ಮೂರ  ರಸಿಕ  ಸ್ವತಃ  ತಾನೇ  ಕೂತುಬಿಟ್ಟಿದ್ದ.

ನನ್ನಂಥ  ಸಣ್ಣ ಪುಟ್ಟ  ಹೈಕಳು  ಸಹಜವಾಗಿ  ಟಿವಿಗೆ  ತೀರಾ  ಹತ್ತಿರದಲ್ಲಿ ಕುಳಿತಿದ್ದೆವು. ಕೆಲವರಂತೂ  ಹೆಚ್ಚೂ  ಕಡಿಮೆ  ಟೇಬಲ್  ಕೆಳಗೇ  ಕೂತಂತೆ  ಕಾಣುತ್ತಿದ್ದರು. ಅದೊಂಥರಾ  ಇವತ್ತಿನ ಗಾಂಧಿಕ್ಲಾಸ್  ಅನುಭವ  ಬಿಡಿ.  ನಮ್ಮ  ಹಿಂದೆ  ಸೆಕೆಂಡ್  ಕ್ಲಾಸಿನಂಥ  ಸರದಿ  ಹೆಂಗಸರದು. ಕೆಲವರಂತೂ ಮಂದಲಿಗೆ,  ತಲೆಮೂಟೆ, ಕಂಬಳಿ, ರಗ್ಗುಗಳ  ಸಮೇತ  ನಾಟಕ  ನೋಡುವವರಂತೆ  ಬಂದು  ಕುಳಿತಿದ್ದರು. ಇನ್ನು  ಗಂಡಸರ  ವಿಷಯಕ್ಕೆ ಬಂದರೆ, ಕೆಲವರು  ಆ  ಕಡೆ  ಈ  ಕಡೆ  ಮನೆಗಳ  ಪಡಸಾಲೆಗಳ  ಮೇಲೆ  ಬೀಡಿ, ಬೆಂಕಿ ಪೊಟ್ಟಣ  ಸಮೇತ ಕುಳಿತ್ತಿದರು. ಕೆಲವು  ಗಂಭೀರ  ಸ್ವಭಾವದ  ಗಂಡಸರಂತೂ  ಹಿಂದೆ  ಬಲು  ಹಿಂದೆ  ಒಂದು  ಕಾಲನ್ನು  ನೆಲಕ್ಕೂರಿ, ಮತ್ತೊಂದರ  ಪಾದವನ್ನು  ತಮ್ಮ  ಬೆನ್ನ  ಹಿಂದಿನ  ಗೋಡೆಗೊತ್ತಿ, ಕಿವಿ,ಬಾಯಿಗೆ  ವಲ್ಲಿಬಟ್ಟೆ  ಸುತ್ತಿಕೊಂಡು  ನಿಂತಿದ್ದರು. ಅವರಲ್ಲನೇಕರು ಹರಿಕಥೆ, ಕಂಸಾಳೆ  ಪ್ರಿಯರೇ  ಆಗಿದ್ದರೆನ್ನುವುದು  ಚೋದ್ಯದ  ಸಂಗತಿ!

ಒಂದು  ಬಗೆಯ  ಸೊಳ್ಳೆಜಾತಿಯ  ಚುಕ್ಕಿಗಳನ್ನು  ನಮಗೆಲ್ಲಾ  ತೋರಿಸುತ್ತ  ಟಿವಿ  ಆನ್  ಆಯಿತು. ಅದರ  ಮೊರೆತದ  ಧ್ವನಿಯೂ  ಹೆಚ್ಚು  ಕಡಿಮೆ ಸೊಳ್ಳೆಯದ್ದೇ  ಆಗಿತ್ತು. ಭಾಷಾ  ಅದು  ಇದು  ತಿರುವೋದು,  ನಡುನಡುವೆ  ಭಂಟನ  ಕುರಿತ  'ವೋ ದೇರೆ… ಯೇ ದೇರೆ'ಗಳ  ಜೊತೆಗೆ 'ತೇರಿ ಡ್ಯಾಶ್' ಗಳೆಲ್ಲಾ  ಸಾಂಗವಾಗಿ  ಹರಿದವು. ಆ ಡ್ಯಾಶ್ ಗಳಲ್ಲಿನ  ಕೆಲವು  ಶಬುದಗಳನ್ನು  ಸ್ವಲ್ಪಮಟ್ಟಿಗೆ  ಅರ್ಥಮಾಡಿಕೊಂಡ  ಲಂಬಾಣಿ  ಹೆಂಗಸರು ಕಿಸಕ್ಕನೆ  ನಕ್ಕು  ತಮಗೇನೂ  ಕೇಳಿಸಲಿಲ್ಲ  ಅನ್ನುವಂತೆ  ತಲೆತುಂಬಾ ಸೆರಗು  ಹೊದ್ದುಕೊಳ್ಳುತ್ತಿದ್ದರು.

ಸೊಳ್ಳೆಗಳ  ಸದ್ದಡಗಿಸಿ ಕಡೆಗೂ  ಟಿವಿ  ಪರದೆ  ಮೇಲೆ  ಯಾವುದೋ ದೇವರನ್ನು  ಮೂಡಿಸುವಲ್ಲಿ  ಭಾಷಾ  ಯಶಸ್ವಿಯಾದ. 'ರಾಮಾಂಜನೇಯ ಯುದ್ಧ'  ಅನ್ನುವ  ಸಿನಿಮಾದ  ಟೈಟಲ್ಲು  ಕಾಣಿಸುತ್ತಿದ್ದಂತೆಯೇ  ಸಮಯಕ್ಕೆ  ಸರಿಯಾಗಿ  ಮಾರೀಚನಂತೆ  ಮಳೆ  ಬಂತು. 'ಥೂ…ಎಂಥ  ಕೆಲಸ  ಆಗೋಯ್ತು ಮಾರಾಯ',  'ಬೇಕಾದಾಗ  ಬರದೇ  ಇವಾಗ  ಬಂದದೆ… ಇದರ  ಮನೆ  ಹಾಳಾಗ',  'ಈ  ಕಂಜಾತಿ  ನನ್ಮಗನ್  ಮಳೇಗೆ  ಹೊತ್ತು  ಗೊತ್ತು ಅನ್ನೋದೇ  ಇಲ್ಲ  ಕಣ್ಲಾ'  ಅನ್ನುವ  ಹಲವಾರು  ಸ್ವಗತಗಳಿಗೆ  ಎಡೆಮಾಡಿಕೊಡುತ್ತಾ  ಎಲ್ಲರೂ  ಎದ್ದು  ತಂತಮ್ಮ  ಮನೆಗಳ  ಕಡೆಗೆ  ಪಾದ ಬೆಳೆಸಿದರು. ವೈಕುಂಠ, ಕೈಲಾಸಗಳನ್ನು  ಮಿಸ್  ಮಾಡಿಕೊಂಡ  ಕೆಂಚಣ್ಣ  ಶಂಕರ್ ನಾಗ್  ಹತ್ರ  ಹೋಗೋದೂ  ಡೌಟೇ  ಅನ್ನುವ  ಡೌಟಿನಲ್ಲಿ  ನಮ್ಮೂರ  ರಸಿಕ  ಕ್ಯಾಸೆಟ್ಟಿನ  ಬ್ಯಾಗು  ಹಿಡಿದುಕೊಂಡು  ಪಡಸಾಲೆ  ಸೂರಿನಡಿ  ತೂರಿಕೊಂಡ.

-ಹೃದಯಶಿವ 

ಕನ್ನಡದ ಬರಹಗಳನ್ನು ಹಂಚಿ ಹರಡಿ

9 thoughts on “ಕೆಂಚಣ್ಣನ ತಿಥಿಯೂ… ವಿ.ಸಿ.ಪಿ. ಕಥೆಯೂ…! :ಹೃದಯಶಿವ ಅಂಕಣ

 1. ಶಿವಣ್ಣ,
  ಲೇಖನ ಚೆನ್ನಾಗಿದೆ. ಭಾಷಾ ಬಳಕೆಯಂತೂ ತುಂಬಾ ಖುಷಿಯಾಯಿತು.
  ನಿಮಗೆ ಒಳಿತಾಗಲಿ
  – ಬಿ.ಸುರೇಶ

 2. ಲೇಖನ ತುಂಬಾ ಚೆನ್ನಾಗಿದೆ. ಗ್ರಾಮ್ಯದ ಸೊಗಡಿನ ಭಾಷೆಯಿಂದಾಗಿ ಹಳ್ಳಿಗೆ ನೇರವಾಗಿ ಹೋದಂತಾಯಿತು. ಮತ್ತೆ ಮತ್ತೆ ಇಂತಹ ಲೇಖನಗಳು ಬರುತ್ತಿರಲಿ, ಪಂಜು ಜೋರಾಗಿ ಉರಿಯಲಿ.
  – ಕಿರಣ್ ವಟಿ.

 3. ವೀಸೀಪಿ ತಂದು ನಮ್ಮ ಆ ದಿನಗಳ  ಕೆಸೆಟ್ಟನ್ನೇ ಹಾಕಿ ತೋರಿಸಿಬಿಟ್ರಿ… ಚೆಂದದ ಫ್ಲಾಶ್ ಬ್ಯಾಕ್. ಅಷ್ಟೇ ಚೆಂದದ ಕತೆ ಹೇಳೋ ಶೈಲಿ. ಧನ್ಯವಾದಗಳು..
  ಮತ್ತಷ್ಟು ಓದಲು ಕಾತರದಲ್ಲಿ

  ನವೀನ

 4. shankarmurthybl ಓದಿಗಾಗಿ ವಂದನೆಗಳು.
  ಬಿ.ಸುರೇಶ ನಿಮ್ಮ ಹಸ್ತ ನಮ್ಮ ಬೆನ್ನ ಮೇಲಿದ್ದಷ್ಟು ಹೆಮ್ಮೆ…
  ಕಿರಣ್ ವಟಿ ಮುಂದಿನವಾರ ಓದದೆ ಇದ್ರೆ ರಂಗಶಂಕರ ಹತ್ರ ಬಂದು ಗಲಾಟೆ ಮಾಡ್ತೀನಿ 🙂
  ನವೀನ್ ಸಾಗರ್  ನಾನೂ ಕೂಡ ವಿ.ಸಿ.ಪಿ. ಬದಲಿಗೆ ವೀಸೀಪಿ ಎಂದೇ ಬರೆಯಬೇಕಿತ್ತು ಅನ್ನಿಸ್ತು.ಓದಿಗಾಗಿ ನಿಮಗೂ ಥ್ಯಾಂಕ್ಸ್…
  d.suman kittur  ನೀವು ಕೊಟ್ಟ ಸಮಯ ನಮಗದುವೆ ಬಹುಮಾನ…
   
  ಉಳಿದಂತೆ ಲೈಕ್ ಮಾಡಿದ,ಓದಿದ,ನಕ್ಕ,ಅತ್ತ,ಬೈದುಕೊಂಡ ಎಲ್ಲರಿಗೂ ಧನ್ಯವಾದಗಳು.ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.ನಮಸ್ಕಾರ.

Leave a Reply

Your email address will not be published. Required fields are marked *