ಕೆಂಗುಲಾಬಿ (ಭಾಗ 8): ಹನುಮಂತ ಹಾಲಿಗೇರಿ

ಹಿಂದಿನ ಸಂಚಿಕೆಯಿಂದ…

ಸುಮಾರು ಮುಕ್ಕಾಲು ಗಂಟೆ ಕಳೆದಿರಬಹುದು. ಏಳೆಂಟು ವರ್ಷದ ಹುಡುಗಿ ಏದುಸಿರು ಬಿಡುತಾ ಓಡೋಡಿ ಬಂದು ನನ್ನನ್ನು ಹೌದು ಅಲ್ಲವೋ ಎಂದು ಅನುಮಾನಿಸುತಾ "ಅಂಕಲ್ ಅವ್ವ ಕರಿತಿದಾರೆ" ಎಂದಿತು. ನಾನು ಆ ಮಗುವನ್ನು ಹಿಂಬಾಲಿಸುತ್ತಾ ಮಾತಿಗಿಳಿದೆ.

’ಪುಟ್ಟಿ ನಿನ್ನ ಹೆಸರು?’

’ರಾಜಿ’ ಎಂದಿತು ನಾಚಿಕೊಂಡು.

’ನಿಮ್ಮ ಪಪ್ಪಾ ಎಲ್ಲಿದ್ದಾರೆ ರಾಜಿ?’

’ಗೊತ್ತಿಲ್ಲ, ನಾ ಸಣ್ಣವಳಿದ್ದಾಗ ದಿನ ಕುಡಿದು ಬಂದು ಮಮ್ಮಿನ ಹೊಡಿತಿದ್ರು. ಆಗ ಅವ್ವ ಅಳತಿದ್ಲು. ಈಗೆಲ್ಲಿದ್ದಾರೋ ಗೊತಿಲ್ಲ. ಆದರೆ ಈಗ ದಿನಾಲೂ ಮನೆಗೆ ಹೊಸ ಹೊಸ ಅಂಕಲ್ ಬರುತಿರತ್ತಾರೆ. ಅವರು ಬಂದಾಗ ನಾನು ಅಜ್ಜಿ ಹತ್ತಿರ ಮಲಗತೀನಿ. ಮತ್ತೆ ನನಗೆ ಚಾಕಲೇಟು ಕೊಡ್ತಾರೆ’ ಎಂದ್ಲು.

ಆ ಸಂದಿಯಲ್ಲಿ ಬಲಗಡೆ ತಿರುಗಬೇಕಾದರೆ ದೂರದ ಆ ತಿರುವಿನಲ್ಲಿ ವೈನ್‌ಶಾಪ್ ಒಂದು ಕಾಣಿಸಿತು.

’ಅಂಕಲ್, ಅವ್ವ ಹೇಳಿ ಕಳಿಸ್ಯಾರ. ಅವ್ವಂಗೆ ಕುಡಿಯಾಕ ಈ ಅಂಗಡಿಯಿಂದನ ತುಗೊಂಡ ಬರಬೇಕಂತೆ’

ನನಗೆ ಒಂದು ಕ್ಷಣ ಗಾಬರಿ. ನನ್ನ ಶಾರಿ ಇವಳೇನಾ ಅಂತ ಅನುಮಾನ.

ಸಾವರಿಸಿಕೊಂಡು ವೈನ್ ಶಾಪ್ ಕಡೆ ಹೆಜ್ಜೆ ಬೆಳೆಸತೊಡಗಿದೆ.

’ಅಂಕಲ್ ನಂಗೆ ಚಾಕಲೇಟ್ ಮರಿಬೇಡಿ.’

ಆಯಿತೆಂದು ನಾನು ಮುಂದುವರೆದೆ. ರಾಜಿ ಆ ತಿರುವಿನಲ್ಲಿಯೇ ನನಗಾಗಿ ಕಾಯ್ದು ನಿಂತಿದ್ದಳು.

ಸೀಟ್ ಮನೆಯೊಂದು ಸಮೀಪಿಸುತ್ತಿದ್ದಂತೆ ರಾಜಿ ನನಗೆ ಅಲ್ಲೆ ತಡೆದು ನಿಲ್ಲಲು ಸನ್ನೆ ಮಾಡಿದಳು.

ತಾನು ಮುಂದುವರೆದು ನಿಧಾನಕ್ಕೆ ಬಾಗಿಲು ಬಡಿದಳು. ಮುಚ್ಚಿದ ಬಾಗಿಲು ತೆರೆದುಕೊಂಡಿತು. ಒಳಗಡೆಯಿಂದ ಹೊರಗೆ ಇಣುಕಿದ ಶಾರಿ ಮುಖ ಅತ್ತಿತ್ತ ನಡಿ ಯಾರು ಇಲ್ಲದ್ದನ್ನು ಖಾತರಿಪಡಿಸಿಕೊಂಡು ಒಳಗೆ ಬರಲು ಕಣ್ಸನ್ನೆ ಮಾಡಿತು.

ನಾನು ಅವಸರಿಸಿದೆ.

ನನಗೆ ಮತ್ತೇನು ಆ ಹುಡುಗಿ ಜೊತೆ ಮಾತನಾಡಬೇಕೆಂದು ತಿಳಿಯಲಿಲ್ಲ.

ಮುಚ್ಚಿದ ಬಾಗಿಲ ತೆರೆದು ನಮ್ಮಿಬ್ಬರನ್ನು ಒಳ ಹಾಕ್ಕೊಂಡು ಮತ್ತೆ ಮುಚ್ಚಿಕೊಂಡಿತು. ಮಂದ ಬೆಳಕಿನ ಲೈಟೊಂದು ಅಲ್ಲಿನ ಬಣ್ಣಗೆಟ್ಟ ವಸ್ತುಗಳ ನಿಜ ಸ್ಥಿತಿಯನ್ನು ತಿಳಿಸುತಿತ್ತು. ಬೆಳಕು ಬಣ್ಣಗೆಟ್ಟಂತೆ ಕಾಣುತ್ತಿತ್ತು. ಮೂಲೆಯಲ್ಲಿ ಮಾಸಿದ ಬಟ್ಟೆಗಳ ಗುಂಪು, ಬುಡ ನೆಗ್ಗಿದ ಪಾತ್ರೆಗಳು, ಮೂಗಿಗೆ ಹರಡುವ ಬೆವರಿನ ಕಟು ವಾಸನೆ. ಒಂದೇ ರೂಮಿನ ನಡುವೆ ತಲೆ ಎತ್ತರ ಎದ್ದಿರುವ ಗೋಡೆ ರೂಮನ್ನು ಎರಡು ಹೋಳಾಗಿಸಿದೆ. ಒಂದರಲ್ಲಿ ಬಚ್ಚಲು ಮತ್ತು ಅಡುಗೆ ಕಟ್ಟೆ. ಇನ್ನೊಂದರಲ್ಲಿ ಮುದುಕಿಯೊಂದು ಮುದುರಿಕೊಂಡಿತ್ತು. ಮುದುಕಿಯ ಪಕ್ಕದಲ್ಲಿ ರಾಜಿ ಆಟವಾಡುತ್ತಾ ಮುದುರಿಕೊಂಡಿದ್ದಳು.

ಸೀರೆಯಲ್ಲಿ ತಳುಕು ಬಳುಕಾಗಿ ಕಾಣುತ್ತಿದ್ದ ಶಾರಿ ಈಗ ದೊಗಳೆ ನೈಟಿಯೊಂದನ್ನು ದರಿಸಿ ತನ್ನ ನಿಜರೂಪ ಬಯಲುಗೊಳಿಸಿದ್ದಳು.

’ಬೇಗ ಬೇಗ ಕೆಲಸ ಮುಗಿಸಿಕೊಂಡು ಹೋಗು ಬಾ’ ತೊದಲುತ್ತಾ ಬಂದ ಧ್ವನಿಯತ್ತ ನಾನು ಕಣ್ಣು ಹರಿಸಿದೆ. ಸ್ಟವ್ ಮೇಲೆ ಚಾ ಇಟ್ಟಿದ್ದ ಅವಳ ಕಣ್ಣುಗಳು ಕುಡಿದಿರುವುದರ ಗುಟ್ಟು ಬಿಟ್ಟುಕೊಟ್ಟವು. ನಾನು ಹೋಗಿ ಆ ಚಿಕ್ಕ ಅಡುಗೆ ಮನೆಯಲ್ಲಿ ಅವಳಿಗೆದುರಾಗಿ ಕುಳಿತೆ. ಉಸಿರಿಗುಸಿರು ದಾಟುವಷ್ಟು ಹತ್ತಿರದಲ್ಲಿzವು. ಅವಳು ಅಲ್ಲಿಯೇ ಚಾಪೆಯೊಂದನ್ನು ಸುರುಳಿಬಿಚ್ಚಿ ಅದರ ಮೇಲೆ ಅಡ್ಡಾದಳು. ನಾನು ಸೂರು ದಿಟ್ಟಿಸುತ್ತಿದ್ದೆ. ಸ್ವಲ್ಪ ಹೊತ್ತು ಮೌನ…. ’ಬೇಗ’ ಅವಳು ಅವಸರಿಸಿದಳು.

’ಶಾರಿ ನನಗ ಅವತ್ತಿನ ಆ ವಾರೆನೋಟದ ಹುಡುಗಿ ಬೇಕು,’ ಎಂದೆ.

’ಅವಳೀಗ ಇಲ್ಲ, ಸತ್ತೋದ್ಲು. ನಾನೇ ಬೇರೆ’ ಅವಳಂದಳು.

’ಹುಚ್ಚಿ, ಯಾಕ್ಹಿಂಗ ಆಡ್ತಿ, ನನ್ನ ಗುರುತು ಪರಿಚಯ ಇರಲಾರದಂಗ’ ನಾನು ಸಮಜಾಯಿಸತೊಡಗಿದೆ.

’ಮೈ ಮಾರೋ ದಂಧೇ ಮಾಡೋರಿಗೆ ಎಲ್ಲ ಗಿರಾಕಿಗಳು ಒಂದೆ, ಜಲ್ದಿ ಬಂದು ನಿನ್ನ ಕಿಬ್ಬೊಟ್ಟೆ ಕುದಿ ತಿರಿಸಕೋ. ಇಲ್ಲಂದ್ರ ಯಾರಿಗಾದ್ರೂ ಗೊತ್ತಾಗಿ ಈ ಮನಿ ಖಾಲಿ ಮಾಡಬೇಕಾದಿತು.’

ಆಕೆಗೆ ನೆಲೆ ಕಳಕೊಳ್ಳುವ ಭಯ. ನನಗೆ ನನ್ನ ಅಸ್ತಿತ್ವವನ್ನೆ ಕಳೆದುಕೊಂಡ ಅಸಹಾಯಕತೆ.

’ನನ್ನೂ ಗಿರಾಕಿ ತರಹ ನೋಡಿತಿ?, ಹಿಂದಿನ ನೆನಪಿನ ತಿಜೂರಿ ತೆಗೆದು ನೋಡು, ಅಂದಿನ ನನ್ನ ನಿನ್ನ ಒಲವಿನ ಕ್ಷಣಗಳು ನಿನ್ನ ಸುಡುವ ಮನಸ್ಸಿಗೆ ತಂಪು ನೀಡಬಹುದು.’ ನಾನು ದಿಗಿಲುಗೊಂಡರೂ ಸಾಂತ್ವನಗೊಳಿಸಲು ಯತ್ನಿಸುತಿದ್ದೆ.

’ಆ ತಿಜೂರಿ ವಾರೆನೋಟದ ಹುಡುಗಿ ಕೂಡ ಕಳೆದು ಹೋತು. ನನಗೀಗ ಅದ್ಯಾವುದರ ನೆನಪಿಲ್ಲ, ಫಸ್ಟು ನನಗ ಮನಸ್ಸ ಇಲ್ಲ. ಮೈ ಮಾತ್ರ ಐತಿ. ಇಲ್ಲಿ ಯಾರ ಜೊತೆನೂ ನನ್ನ ಮನಸ್ಸು ಬಳಸುವ ಸಂದರ್ಭ ಬರಲೇ ಇಲ್ಲ. ಬಳಸಲಾರದ ಮನಸ್ಸು ಜಂಗು ತಿಂದು ಹಾಳಾಗಿ ಹೋತು, ಆದ್ರ ಮೈ, ಇಡೀ ದಿನವೆಲ್ಲ ಬಳಕೆ ಆಗಿ ಆಗಿ ಸವೆದು ಹೊಗಿ ಇದಿಷ್ಟು ಉಳದೈತಿ. ಇದು ಯಾವತ್ತು ಕೆಟ್ಟು ಬಂದ್ ಅಕ್ಕೈತೋ ಅವತ್ತು ನನ್ನ ಬದುಕಿನ ಪುಟ ಮುಗದ್ಹಂಗ’ ಆಕೆ ತತ್ವಜ್ಞಾನಿಯಂಗ ಮಾತನಾಡುತಿದ್ದಳು.

’ಹಿಂಗ ಒಗಟಾಗಿ ಮಾತನಾಡಬೇಡ. ನಿನ್ನೊಳಗಿನ ತಿಜೂರಿ ತೆರೆದು ಅದರೊಳಗಿನ ನೋವಿನ ಗಂಟುಗಳನ್ನು ಒಂದೊಂದಾಗಿ ಬಿಚ್ಚಿ ನನ್ನ ಮುಂದ ಇಷ್ಟಿಷ್ಟ ಹರವುತಾ ಹೋಗು, ತಿಜೂರಿ ಸ್ವಚ್ಚವಾಗಿ ಹಗುರಾಗ್ತಿ. ಹಕ್ಕಿಯಂಗಾಗ್ತಿ.

* * *

ಅಲ್ಲಿ ನಿನ್ನನ್ನು ಅಗಲಿ ನಗರಕ್ಕೆ ಬಂದ ಮೇಲೆ ಇಲ್ಲಿ ನಿನ್ನದೇ ನೆನಪು. ಗಾರ್ಮೆಂಟ್ಸ್‌ಗಳಲ್ಲಿ ಯಂತ್ರಗಳಲ್ಲೊಂದು ಮಾನವ ಯಂತ್ರವಾಗಿ ದುಡಿದು ಸೋಲುತಿದ್ದ ದೇಹ ಮತ್ತು ಮನಸ್ಸಿಗೆ ಕ್ರಮೇಣ ನಿನ್ನ ನೆನಪು ಮಸುಕು ಮಸುಕಾಗತೊಡಗಿತು. ನನ್ನೆದೆಯ ಗೂಡಿನಿಂದ ನೀನು ಖಾಲಿಯಾಗುತಿದ್ದುದನ್ನು ಕಾದು ಕುಳಿತಿದ್ದ ಮತ್ತೊಬ್ಬ ಹೆದರುತಲೇ ಹಣಕಿ ಹಾಕತೊಡಗಿ ಆ ಮೇಲೆ ನನ್ನ ಗೂಡೊಳಗೆ ವಸತಿ ಹಾಕಿಬಿಟ್ಟ. ಕಡ್ಡಿ ಪೆಟ್ಟಿಗೆಗಳನ್ನು ಹೊಂದಿಸಿ ಇಟ್ಟಂಗ ಒಂದರ ಮೇಲೊಂದು ಸೇರಿಸಿ ಕಟ್ಟಲಾಗಿದ್ದ ನಮ್ಮ ವಟಾರದಾಗ ಹಾಡುವ ಹುಚ್ಚಿನ ಹುಡಗನೊಬ್ಬ ನನಗೆ ಹುಚ್ಚು ಹಿಡಿಸಿಬಿಟ್ಟಿದ್ದ. ಆತ ನನ್ನ ನೋವು ನಲಿವುಗಳನ್ನೇ ಹಾಡಾಗಿಸಿ ರಾಗ ಹೊರಡಿಸುತಿದ್ದಾನೆ ಎಂದು ಭಾವಿಸಿ ಆತನೆಡೆಗೆ ಆಕರ್ಷಿತನಾಗತೊಡಗಿದೆ. ಆತ ಮಾತಿನ ಮಂಟಪದಲ್ಲಿ ನನ್ನನ್ನ ಮದುವೆಯಾಗಿಬಿಟ್ಟ. ನಾನು ಇದ್ದೊಬ್ಬ ಅವ್ವಳಿಗೂ ತಿಳಿಸದಷ್ಟು ಹುಚ್ಚಿಯಾಗಿಬಿಟ್ಟಿದ್ದೆ. ಎರಡು ವರ್ಷ ಹೊಟ್ಟೆ ಬಟ್ಟೆಗೆ ಕಡಿಮೆ ಎನಿಸಿತಾದರೂ ಪ್ರೀತಿ ಕಕ್ಕುಲಾತಿಗೇನೂ ಕಡಿಮೆ ಇರಲಿಲ್ಲ. ಮೂರನೆಯ ವರ್ಷದಾರಂಭಕ್ಕೆ ಮನೆಯಂಗಳದಲ್ಲಿ ಮಗುವೊಂದು ಆಡತೊಡಗಿತು.

ಕಾಲ ಹೀಗೆ ಅಂತ ಎಷ್ಟು ದಿನ ಇರುತ್ತೆ? ಏರಿದ್ದು ಕೆಳಗಿಳಿಯಲೇಬೇಕು. ಟಿವಿ, ಎಫ್.ಎಂ.ಗಳ ಹಾವಳಿಯಲ್ಲಿ ಅಂವ ಹಾಡುತಿದ್ದ ಹಾಡುಗಳು ಜನರಿಗೆ ಹಳೆಯದಾದವು. ಆರ್ಕೆಸ್ಟ್ರಾಗಳಲ್ಲಿ ಅವನ ಹಾಡಿಗೆ ಮೊದಲೆಲ್ಲ ಮುಗಿ ಬೀಳುತಿದ್ದ ಮಳ್ಳ ಮಂದಿ ನಂತರದ ದಿನಗಳಲ್ಲಿ ಇವನ ಹಾಡು ಕಿವಿಗೆ ಬಿದ್ದರೆ ಹಾವು ಕಂಡವರಂತೆ ದೂರ ಸರಿಯತೊಡಗಿದರು. ಕೆಲಸವಿಲ್ಲದೆ ರೋಸಿ ಹೋಗಿದ್ದ ಗಂಡ ಯಾರ ಯಾರದೋ ಸಹವಾಸಕ್ಕೆ ಬಿದ್ದು ತಿರುಗತೊಡಗಿದ. ಕುಡಿತಕ್ಕೂ ಅಂಟಿಕೊಂಡ. ಒಂದು ದಿನ ಇದ್ದಕಿದ್ದಂಗ ಸರಿ ರಾತ್ರಿಯಲ್ಲಿ ಬಾಗಿಲ ಸಪ್ಪಳ ಟಕ್ ಟಕ್ ಬಡಕೊಳ್ಳತೊಡಗಿತು. ನನ್ನೊಳಗೂ ಕೂಡ. ಬಾಗಿಲು ತೆರೆದರೆ ಒಳಬಂದದ್ದು ಗಂಡನಲ್ಲ, ಗಂಡನ ಗೆಳೆಯ. ಬರುತ್ತಲೇ ನನ್ನ ಎದೆಯ ಮೇಲೆ ಕಣ್ಣು ನೆಟ್ಟ. ಎಲ್ಲಿತೊ ಏನೊ, ದೇಹದ ಶಕ್ತಿಯನ್ನು ಒಟ್ಟಾಗಿಸಿ ರಟ್ಟೆಗೆ ತಂದುಕೊಂಡು ಹೊರ ನೂಕಿ ಒಳಗೆ ಚಿಲಕ ಹಾಕಿಕೊಂಡು ಬಿಟ್ಟೆ. ಸ್ವಲ್ಪ ಹೊತ್ತು ಮನಸ್ಸು ಕೊಲ್ಲುವ ಮೌನ. ನಂತರ ಮತ್ತೆ ಬಾಗಿಲ ಬಡಿಯುವ ಶಬ್ದ. ನಾನು ಮಣಿಯಲಿಲ್ಲ.

’ಬಾಗಿಲು ತೆಗಿ, ನಾನು’ ಈ ಸಲ ಕೂಗಿದವ ನನ್ನ ಗಂಡ. ಆದರೆ ಒಳಬಂದವ ಮಾತ್ರ ಗಂಡನಲ್ಲ, ಗಂಡನ ಗೆಳೆಯ. ದಿಗಿಲಿನಿಂದ ಕಿಡಕಿಯಲ್ಲಿ ಗಂಡನಿಗಾಗಿ ಹಣಕಿ ಹಾಕಿದರೆ, ಗಂಡ ಕೈಯಲ್ಲಿ ಬಾಟಲಿ ಹಿಡಿದು ಕಟ್ಟೆಗೆ ಒರಗಿದ್ದ. ಅವನ ಕಣ್ಣಲ್ಲಿ ನೀರು ಜಿನುಗುತಿತ್ತು. ಇದು ದಿನಂಪ್ರತಿ ಪುನರಾವರ್ತನೆಯಾಗತೊಡಗಿತು. ದಿನಕೊಬ್ಬಬ್ಬ ಹೊಸಬ.

ಮುಂದೊಂದು ದಿನ ಗಂಡ ಮನೆಗೆ ಬರಲಿಲ್ಲ, ವಾರ ಕಳೆಯಿತು. ತಿಂಗಳು ಗತಿಸಿತು.

ಆದರೆ ನನ್ನ ಗಂಡನ ಗೆಳೆಯರು ಮಾತ್ರ ಬರುವುದನ್ನು ತಪ್ಪಿಸುತಿರಲಿಲ್ಲ. ಒಬ್ಬರಾದ ಮೇಲೆ ಮತ್ತೊಬ್ಬರು. ಒಂದು ರಾತ್ರಿ ಕಲ್ಲುಗಳು ಮನೆಯ ಮೇಲೆ ಬೀಳತೊಡಗಿದವು. ಜೊತೆಗಿದ್ದವ ಬಟ್ಟೆ ಎತ್ತಿಕೊಂಡು ಓಡತೊಡಗಿದ. ಓಡಿ ಓಡಿ ಕಲ್ಲು ಬಿಸುತಿದ್ದ ಜನರ ಗುಂಪಿನ ನಡುವೆ ಸಿಕ್ಕಿ ಬಿದ್ದ. ಜನ ಅವನನ್ನು ಒದೆಯುತಿದ್ದರು. ಕಲ್ಲಿನಿಂದ ಜಜ್ಜುತಿದ್ದರು. ನಾನು ಗಟ್ಟಿಯಾಗಿ ಬಾಗಿಲು ಹಾಕಿಕೊಂಡೆ. ಜನ ಮನೆಯನ್ನು ಸುತ್ತುವರೆದಿದ್ದರು. ಮಗು ಅಳುತಿತ್ತು.

’ಬೆಂಕಿ ಹಚ್ಚೂನು’

’ಬಾಗಿಲು ಮುರಿದು ಒಳಗೆ ಹೋಗೂನು’

’ಒಳಗ್ಹೋಗಿ ಎಳಕೊಂಡು ಬಂದು ಸೀರೆ ಕಳೆಯೋಹಂಗ ಒದೆಯೋನು’

’ಅದೆಲ್ಲ ಯಾಕ ಪೊಲೀಸ್ ಕಂಪ್ಲೆಂಟ್ ಕೊಡೋನು’

ಧ್ವನಿಗಳು ಒಂದರ ಹಿಂದೊಂದು ಕೇಳಿಸುತ್ತಲೇ ಇದ್ದವು. ಅವುಗಳಲ್ಲಿ ಕೆಲವು ಧ್ವನಿಗಳು ಇಂತಹದ್ದೆ ಇರುಳುಗತ್ತಲಲ್ಲಿ ನನ್ನ ಉಸಿರೊಂದಿಗೆ ಉಸಿರಾಗಿ ರಮಿಸಿ ಬೆವರಿಳಿಸಿ ಹೋಗಿದ್ದು ನೆನಪಾಗಿ ಆ ಸಂದರ್ಭದಲ್ಲಿಯೂ ನನಗೆ ನಗು ಬಂತು.

’ಆಕೆಗೆ ಮುಂಜಾನೆಯವರೆಗೆ ಟೈಮ ಕೊಡ್ರಿ, ಎಲ್ಲಿಯಾದ್ರು ಬದುಕಿಕೊಳ್ಳಲಿ’ ಒಬ್ಬ ಹಿರಿಯಜ್ಜ ಮಾತ್ರ ಬದುಕು ದಯಪಾಲಿಸಿದ್ದ. ಬೆಳಗು ಹರಿಯುವ ಮುನ್ನ ಬಗಲಲ್ಲಿ ಮಗು ಎತ್ತಿಕೊಂಡು  ನಡೆದುಕೊಂಡೇ ಕಿತ್ತೂರು ಚನ್ನಮ್ಮ ಸರ್ಕಲ್‌ವರೆಗೆ ಬಂದಿದ್ದೆ. ಇದ್ದೊಬ್ಬ ಗೂರಲು ರೋಗದ ಅವ್ವ ಸತ್ತು ಹೋಗಿರುವ ಸುದ್ದಿ ಇತ್ತು. ಮುಂದೆ ಎತ್ತ ಏನು ಎಂದು ಗೊತ್ತಾಗದೆ ಅಲ್ಲಿಯ ಹತ್ತಿರದ ಜನತಾ ಬಜಾರ್‌ನ ರಸ್ತೆ ಪಕ್ಕ ಕುಸಿದು ಕುಳಿತಿದ್ದೆ. ನನ್ನಂತಯೆ ಇದ್ದ ಕೆಲವು ಹೆಂಗಸರು ಅಲ್ಲಿ ತಮ್ಮ ಮೈಯನ್ನು ಬಂಡವಾಳವಾಗಿ ತೊಡಗಿಸಿ ವ್ಯವಹಾರ ಕುದುರಿಸುತಿದ್ದರು. ಕೆಲವು ಗಿರಾಕಿಗಳು ನನ್ನ ಸುತ್ತಲು ಸುಳಿಯುತಿದ್ದರು.

ಮಗು ಜೋರಾಗಿ ಅಳ್ಳುತ್ತಲೆ ಇತ್ತು ನಾನು ಈ ಮೊದಲೇ ನನ್ನ ಒಣಗಿದ ಮೊಲೆತೊಟ್ಟನ್ನು ಅದರ ಬಾಯಿಗಿಟ್ಟು ಹಾಲು ಕುಡಿಸುವ ವ್ಯರ್ಥ ಪ್ರಯತ್ನ ಮಾಡಿ ಸೋತು ಸುಮ್ಮನಾಗಿ ಬಿಟ್ಟದ್ದೆ. ನನಗೆ ಮಗುವನ್ನು ಆಡಿಸಿ ಸುಮ್ಮನಾಗಿಸುವ ತ್ರಾಣವು ಇರಲಿಲ್ಲ. ಹಾಗೆ ಆಡಿಸಿದರೆ ಅದು ಸುಮ್ಮನಾಗುವುದು ಇಲ್ಲವೆಂದು ಗೊತ್ತಿದ್ದುದರಿಂದ ನಾನು ಅದರ ಅಳುವನ್ನು ನೋಡುತ್ತಾ ಸುಮ್ಮನೆ ಕುಳಿತುಬಿಟ್ಟಿದ್ದೆ. ಮಗು ಅಳುವುದನ್ನು ಯಾರಿಗೋ ಕಾಯುತ್ತಿರುವ ಒಬ್ಬಳು ಆಗಿನಿಂದಲೂ ದೂರದಿಂದ ಗಮನಿಸುತ್ತಿದ್ದಳು. ಅವಳು ಅಗ್ಗದವುಗಳಾದರೂ ಮಿರಿ ಮಿರಿ ಮಿಂಚುವ ಸೀರೆ ಅದಕ್ಕೊಪ್ಪುವ ಜಂಪರ್ ತೊಟ್ಟಿದ್ದಳು. ಆಕೆ ಯಾರಿಗೋ ಕಾಯುತ್ತಿದ್ದಂತೆ ಕಾಣುತ್ತಿತ್ತು. ಮಧ್ಯೆ ಮಧ್ಯೆ ತನ್ನ ಕೈಯಲ್ಲಿನ ಮಿಂಚುವ ವಾಚನ್ನು ನೋಡಿಕೊಳ್ಳುತ್ತಿದ್ದಳು. ಯಾರೊಂದಿಗೂ ಪೋನಿನಲ್ಲಿ ಮಾತಾಡಿ ಸಿಟ್ಟಿನಿಂದ ಕಾಲ್ ಕಟ್ ಮಾಡಿದ್ದು ಆ ನಿತ್ರಾಣದಲ್ಲಿಯೂ ನನ್ನ ಗಮನಕ್ಕೆ ಬಂತು.

ನಿಧಾನಕ್ಕೆ ನನ್ನ ಹತ್ತಿರಕ್ಕೆ ಬಂದಳು. ನನ್ನನ್ನು ದುರುದುರು ನೋಡುತ್ತಾ ’ಅದಕ್ಕೆ ಹಸಿವೆಯಾಗಿದೆ ಹಾಲು ಕುಡಿಸು’ ಎಂದಳು. ನಾನು ಕೇಳಿಯೂ ಕೇಳದವಳಂತೆ ಸುಮ್ಮನಿದ್ದೆ. ಅವಳು ’ಎಷ್ಟು ಧಿಮಾಕು ನಿನಗೆ. ಯಾಕೆ ಸುಮ್ನೆ ಇದ್ದಿಯ. ರಸ್ತೆ ಅಂತ ಸಂಕೋಚ ಮಾಡ್ಕೊಬೇಡ. ಆ ಕಲ್ಲು ಬೆಂಚಿನ ಮೇಲೆ ಹೋಗಿ ಕುಳಿತು ಹಾಲು ಕುಡಿಸು. ಕತ್ತಲಿನೊಳಗ ಯಾರು ನೋಡ್ತಾರೆ. ನೋಡಿದ್ರೂ ಏನಂತೆ, ಅಳಿತಿರೋ ಮಗುವಿನ ಹೊಟ್ಟೆ ತುಂಬೋದು ಮುಖ್ಯ, ಎಂದು ಹುಬ್ಬಳ್ಳಿಯದಲ್ಲದ ಭಾಷೆಯಲ್ಲಿ ಗದರಿಸಿದಳು. ಆದರೆ ನನ್ನ ಕೈಲಿಂದ ಮೊಲೆ ಕುಡಿಸೋದು ಎಲ್ಲಿ ಸಾಧ್ಯವಿತ್ತು. ನಾನು ಅವಳನ್ನೇ ದುರುದುರು ನೋಡಕೋತ ’ಹಾಲಿದ್ದರಲ್ಲವ್ವ ಕುಡಿಸೋದು. ಹಾಲಿಲ್ಲದ ಎದಿಯಿಂದ ಹ್ಯಾಂಗ ಕುಡಿಸಲಿ’ ಎಂದು ಅವಳ ಮೇಲೆಯೇ ಸಿಡುಕಿದೆ. ಅವಳ ನೆತ್ತಿಗೆ ಏರಿದ್ದ ಕಾವು ಝರ್ರನೆ ಇಳಿದಿರಬೇಕು. ಮೆಲ್ಲಗೆ ಕೇಳಿದಳು.

’ಯಾಕವ್ವಾ ಮಗೂಗೆ ಹಾಲು ಸಾಲತಿಲ್ವ’ ನನ್ನ ಕಣ್ಣುಗಳಲ್ಲಿ ನೀರುಕ್ಕಿದವು. ಅಳುತ್ತಾ ’ನನಗೆ ನಿನ್ನೆಯಿಂದ ತಿನ್ನಾಕ ಗತಿಯಿಲ್ಲಕ್ಕ. ದೇಹದಲ್ಲಿ ಸಕ್ತಿ ಇದ್ರೆ ತಾನೇ ಹಾಲು ಸಿಕ್ಕೋದು. ಕೈಯಲ್ಲಿ ಒಂದು ಚಿಕ್ಕಾಸು ಇಲ್ಲ. ಇದಕ್ಕ ನೋಡಿದರ ರಾಕ್ಷಸ ಹಸಿವು. ಸಾಕಾಗೈತಿ ಇದರ ಕಾಟ. ಹಾಲಿಲ್ದೆ ಇದು ಸತ್ತೆ ಹೋಕ್ಕೈತೇನೋ?. ಅಳುವುದಕ್ಕೂ ಇದಕ್ಕೆ ಉಸಿರಿಲ್ಲ’ ಎಂದು ಬಿಕ್ಕಳಿಸುತ್ತಾ ತೋಳಿನಲ್ಲಿದ್ದ ಮಗುವನ್ನೆ ನೋಡಿದೆ. ಮಗು ಬಿಟ್ಟು ಬಿಟ್ಟು ಅಳುತ್ತಿತ್ತು. ಅದು ಅವಳಿಗೆ ಸಾವಿನ ನರಳಿಕೆಯಂತೆ ಕೇಳಿಸಿರಬೇಕು. ದಿಕ್ಕು ತೋಚದೆ ಚಡಪಡಿಸಿದಳು. ಒಮ್ಮೊಮ್ಮೆ ರಸ್ತೆ ಕಡೆ ನೋಡುತ್ತಿದ್ದಳು. ಬಹುಶಃ ಬರುವ ಗಿರಾಕಿಗಾಗಿ ಕಾಯುತ್ತಿದ್ದಂತೆ ಕಾಣುತ್ತದೆ. ಮಗು ಸಣ್ಣಗೆ ಅಳುತ್ತಲೆ ಇತ್ತು. ಅವಳು ಕಣ್ಣು ತುಂಬಿಕೊಂಡು ಚಡಪಡಿಸತೊಡಗಿದಳು.

ಒಮ್ಮೆ ಎದೆಯತ್ತ ನೋಡಿ ಮುಟ್ಟಿಕೊಂಡಳು. ಅವಳ ಎದೆ ಬೀರಿದು ಹಾಲು ತೊಟ್ಟಿಕ್ಕಿದ ಕಲೆಗಳು ನನಗೆ ಕಂಡವು. ಆಕೆಯ ಮೈಯಿಂದ ವಿಚಿತ್ರವಾದ ಹಸಿ ಬಾನಂತಿಯ ವಾಸನೆ ಬರುತ್ತಿತ್ತು. ಒಮ್ಮೆಲೆ ಅಲ್ಲಿಂದ ಕದಲುವಂತೆ ಮುಂದಕ್ಕೆ ಹೋದಳು. ಮತ್ತೆಕೊ ಹಿಂದಕ್ಕೆ ಬಂದಳು. ಪರ್ಸ್ ತೆಗೆದು ನೋಡಿದಳು. ಅದರಲ್ಲಿ ಕೇವಲ ಐವತ್ತು ರೂಪೈ ತೆಗೆದು ನನ್ನ ಕೈಯ್ಯಲ್ಲಿಟ್ಟು ಹೋಗು ’ಎಲ್ಲಾದರೂ ಹತ್ತಿರದಲ್ಲಿ ಬೇಕರಿ ಇದ್ರ ಹಾಲು ತಗೊಂಡು ಕುಡಸು. ನೀನು ಸ್ವಲ್ಪ ತಿನ್ನು. ಹಿಡಿ ಲಗೂನ’ ಎಂದು ಅವಸರಿಸಿದಳು. ನಾನು ಅವಳ ಮುಖವನ್ನೆ ದಿಟ್ಟಿಸುತ್ತ ಒಂದು ಕ್ಷಣ ನಿಂತೆ. ಮಗು ನಿತ್ರಾಣದಿಂದ ಅಳುತ್ತಿತ್ತು. ’ನಿನಗೆ ಪುಣ್ಯ ಬರಲೆವ್ವ’ ಎಂದು ಬೇಕರಿ ಹುಡುಕಿಕೊಂಡು ಹೊರಟೆ.

ಈ ಸಲ ಆವೇಶ ಬಂದಂತೆ ಓಡುತ್ತಾ ನನ್ನ ಹಿಂದೆ ಬಂದು ’ಏಯ್ ನಿಂತ್ಕೋ ಎಂದು ಜೋರಾಗಿ ಕಿರುಚಿದಳು. ನಾನು ಹಿಂತಿರುಗಿ ನೋಡಿದೆ. ನನ್ನ ಹತ್ತಿರ ಬಂದವಳೆ ’ಕೊಡಿಲ್ಲಿ ನಿನ್ನ ಮಗೂನ’ ಅಂದ್ಲು. ನಾನು ’ಯಾಕ್ರವ್ವಾ, ನನ್ನ ಮಗೂನ ಯಾಕ ಕೊಡಬೇಕು. ಎಂದು ಆತಂಕದಿಂದ ಮಗುವನ್ನು ಅವಚಿಕೊಂಡೆ. ಅವಳು ತಡ ಮಾಡದೆ ’ಅಯ್ಯೋ ಅದು ಹಸಿವಿನಿಂದ ಸಾಯಕ ಹತೈತಿ. ನೀನು ಹಾಲು ಕೊಂಡು ಕುಡಿಸೋ ಹೊತ್ತಿಗೆ ಅದು ಸತ್ತೆ ಹೋಗಿರತೈತಿ. ಇಲ್ಲಿ ಕೊಡು’ ಎಂದು ಮಗುವನ್ನು ಕಿತ್ತುಕೊಂಡು ಹಿಂದಿರುಗಿ ಕಲ್ಲು ಬೆಂಚಿನ ಕಡೆ ನಡೆದಳು. ’ಅಯ್ಯೋ ನನ್ನ ಮಗೂನ ಕೊಡ್ರವ್ವಾ ಎಲ್ಲಿಗೆ ಹೊಂಟಿರಿ’ ಎಂದು ನಾನು ಅವಳ ಹಿಂದೆಯೆ ಓಡಿದಂತೆ ನಡೆದೆ. ಅವಳು ಓಡಿ ಹೋಗಿ ಹತ್ತಿರದಲ್ಲಿರುವ ಕಲ್ಲು ಬೆಂಚಿನ ಮೇಲೆ ಕುಳಿತಳು. ನನ್ನನ್ನೆ ಮರೆಯಾಗುವಂತೆ ಅಡ್ಡವಾಗಿ ನಿಲ್ಲಿಸಿಕೊಂಡು ಸೆರಗು ಹೊದ್ದು ರವಿಕೆ ಸಡಲಿಸಿ ಮೊಲೆ ತೊಟ್ಟು ಮಗುವಿನ ಬಾಯಿಗಿಟ್ಟಳು. ಮಗು ಯಾವಾಗ ಮೊಲೆಯನ್ನು ಕಂಡೊಡನೆ ಗಪ್ಪರಿಸಿ ಚೀಪತೊಡಗಿತು. ಕಣ್ಣುಮುಚ್ಚಿ ಆಕಾಶಮುಖಿಯಾದವಳ ಮುಖದಲ್ಲಿನ ಸಂತೃಪ್ತಿಯನ್ನು ನೋಡಿ ನಾನು ಸೈತ ದಂಗಾಗಿ ಮೂಕಳಂತೆ ನೋಡುತ್ತಾ ನಿಂತುಬಿಟ್ಟೆ. ಹಸಿದಿದ್ದ ಮಗು ಲೊಚಲೊಚನೆ ಹೀರುತ್ತಿತ್ತು.

* * *


(ಮುಂದುವರೆಯುವುದು..)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
ಪ್ರಶಾ೦ತ ಕಡ್ಯ

ಕಥೆ ಚೆನ್ನಾಗಿದೆ, ಆದರೆ ಕಥೆ ಅಪೂರ್ಣವಾಗಿದೆ.
ಇನ್ನೂ ಮು೦ದುವರಿಯುತ್ತದೆ ಎ೦ದಾದರೆ, ಕೊನೆಗೆ ಬರೆಯಿರಿ "ಮು೦ದುವರೆಯುತ್ತದೆ.".

ramachandra shetty
ramachandra shetty
10 years ago

ಒ೦ದು ಹೆಣ್ಣಿನ ಮನಸ್ಸಿನ ತೊಳಲಾಟ,ಆಕೆ ಪರಿಸ್ಥಿತಿಯ ಕೈಗೊ೦ಬೆಯಾಗಿ ಬದಲಾದದ್ದು..ಕಟ್ಟಿಕೊ೦ಡ ಗ೦ಡನೆ ಕೊಚ್ಚೆಗೆ ನೂಕಿದ್ದು ಇವೆಲ್ಲಾ ಸೇರಿ ಸಮಾಜದ ಸ್ಥಿತಿಯ ಬಗ್ಗೆ ವಿವರಣೆಕೊಡುತ್ತಾ ಹೋಗುತ್ತವೆ..ಇವೇ ಈ ಘಟನೆಗಳು ಒ೦ದು ಹೆಣ್ಣಿನ ಸ್ಥಿತಿಯನ್ನು ವಿವರಿಸುತ್ತಾ ಹೋಗುತ್ತದೆ…ಮು೦ದಿನ ವಾರಕ್ಕಾಗಿ ಕಾಯುತ್ತಿದ್ದೇನೆ…ಧನ್ಯವಾದಗಳು

Rajendra B. Shetty
10 years ago

ಮಗುವಿನ ಅಪ್ಪನ ಹೆಸರು ಕೇಳುವಲ್ಲಿ ನಾಯಕ ಸೋಲುತ್ತಾನೆ. ತಾನಿರುವ ತಾಣ ಆತನಿಗೆ ಗೊತ್ತು, ಹಾಗಿರುವಾಗ ಈ ಪ್ರಶ್ನೆ ಅಪ್ರಸ್ತುತ ಅನಿಸಿತು. ಲೇಖನ ಮನ ತಟ್ಟುತ್ತದೆ. ಶಾರಿಯ ಮಾತುಗಳು ಹೃದಯ ಚುಚ್ಚುತ್ತವೆ.

4
0
Would love your thoughts, please comment.x
()
x