ಕೆಂಗುಲಾಬಿ (ಭಾಗ 7): ಹನುಮಂತ ಹಾಲಿಗೇರಿ

ಹಾವೇರಿಯ ಸಂವರ್ಧನ ಎನ್‍ಜಿಓದಲ್ಲಿ ನನಗೆ ತರಬೇತಿಯಾದ ಮೇಲೆ ಹಾವೇರಿ ಮೂಲೆಯೊಂದರಲ್ಲಿರುವ ಹಳ್ಳಿಯ ಸ್ವಸಹಾಯ ಸಂಘಗಳ ಸಮುದಾಯ ಅಧಿಕಾರಿ ಎಂದು ಕಳುಹಿಸಿಕೊಟ್ಟಿದ್ದರು. ನಾನು ಹಲಗೇರಿಗೆ ಬಂದಿಳಿದಾಗ ನನ್ನನ್ನು ಆ ಸುಡು ಬಿಸಿಲಿನಲ್ಲಿ ಎದುರುಗೊಂಡವನು ತಿಪ್ಪೇಶಿ. ಅವನು ಅಲ್ಲಿ ನನಗೆ ಆ ಹಳ್ಳಿಯ ಮಾಹಿತಿ ನೀಡುವ ಫೀಲ್ಡ್ ಗೈಡ್ ಆಗಿ ಕೆಲಸ ಮಾಡತಿದ್ದ. ನಮ್ಮ ಸಂಸ್ಥೆ ಕೆಲಸ ಮಾಡುವ ಪ್ರತಿ ಹಳ್ಳಿಯಿಂದಲೂ ತಿಪ್ಪೇಶಿಯಂತಹ ಒಬ್ಬರನ್ನು ಸಂಘಗಳ ಅಧಿಕಾರಿ ಎಂದು ನೇಮಿಸಿಕೊಂಡಿರುತ್ತಿದ್ದರು. ತಿಪ್ಪೇಶಿ ಹೊರಲಾರದಂತಹ ನನ್ನ ಎರಡು ಬ್ಯಾಗುಗಳನ್ನು ಹೆಗಲಿಗೆ ನೇತು ಹಾಕಿಕೊಂಡು ತಿಣುಕುತ್ತಾ ಮುಂದೆ ನಡೆದಿದ್ದ. ನನ್ನ ಕೈಯಲ್ಲಿ ಒಂದೆರಡು ಸಣ್ಣ ಬ್ಯಾಗುಗಳಿದ್ದವು. ಹಳ್ಳಿಯ ಕೆಲವರು ನಮ್ಮನ್ನು ಕುತೂಹಲದಿಂದ ನೋಡುತ್ತಿದ್ದರು. ಅಲ್ಲಿಯೇ ಕಟ್ಟೆ ಮೇಲೆ ಕುಳಿತಿದ್ದ ಒಬ್ಬ ಹಿರಿಯರು ‘ಓ ಏನು ತಿಪ್ಪಣ್ಣ ಹೊಸ ಸಾಹೆಬ್ರಾ’ ಎಂದು ಉದ್ಗಾರ ತೆಗೆದರು. ಅವರಿಗೆಲ್ಲ ‘ಹೌದು ಮಲ್ಲೇಶಿ ಅಂತ ಹೆಸರು’ ಎಂದು ಸಂಕ್ಷಿಪ್ತವಾಗಿ ನನ್ನನ್ನು ಏದುಸಿರು ಬಿಡುತ್ತಲೆ ಪರಿಚಯಿಸುತ್ತಿದ್ದನು. ಹಳ್ಳಿಯವರು ನನ್ನನ್ನು ಅನುಮಾನದಿಂದಲೋ, ಅಭಿಮಾನದಿಂದಲೊ ನೋಡುತ್ತಾ ‘ನಮಸ್ಕಾರ ಸಾಹೆಬ್ರ’ ಎನ್ನುತ್ತಿದ್ದರು. ಹೀಗೆ ಹಳ್ಳಿಯ ಮುಖ್ಯ ರಸ್ತೆಯಿಂದ ನಮ್ಮ ಸಂಸ್ಥೆಯಿರುವ ಸಣ್ಣ ಕೋಣೆಯೊಂದಕ್ಕೆ ಬಂದೆವು. ತಿಪ್ಪಣ್ಣ ಅದರ ಮುಂದಿರುವ ಕಟ್ಟೆಯ ಮೇಲೆ ತನ್ನ ಬ್ಯಾಗುಗಳನ್ನು ಇಳಿಸಿ ಕೀಲಿ ತೆಗೆಯತೊಡಗಿದ. ನಾನು ಆಫೀಸ್ ಒಳಗ ಬಂದು ಆ ಕಡೆ ಈ ಕಡೆ ಅಡ್ಡಾಡಿ ಮೂಲೆಯಲ್ಲಿರುವ ಕುರ್ಚಿಯೊಂದರ ಮೇಲೆ ಕುಳಿತುಕೊಂಡೆ. ನನಗ ಆಫೀಸ್‍ನ ವಾತಾವರಣ ಪಾಡ ಅನಿಸಿತು.

ಆಫೀಸ್‍ನಲ್ಲಿ ಇಡಬೇಕಾದ ಕೆಲವು ಫೈಲು-ಪುಸ್ತಕಗಳನ್ನು ಬ್ಯಾಗುಗಳಿಂದ ತೆಗೆದಿಟ್ಟು ಇನ್ನುಳಿದ ವಸ್ತುಗಳನ್ನು ಮತ್ತೆ ತಿಪ್ಪಣ್ಣನಿಗೆ ಹೊರೆಸಿಕೊಂಡು ಕೆಲವೊಂದಿಷ್ಟನ್ನು ನಾನು ಹೊತ್ತಕೊಂಡು ನಾನು ಉಳಿದುಕೊಳ್ಳಬೇಕಿರುವ ರೂಮಿನತ್ತ ಪಾದ ಬೆಳೆಸಿದೆ. ಇನ್ನೂ ರಸ್ತೆಯಲ್ಲಿ ದೂರ ಇರುವಾಗಲೆ ‘ಸರ್ ಅಲ್ಲೆತೆಲ್ಲಾ ಅದ ನೋಡ್ರಿ ರೂಮು’ ಎಂದ. ನಾನು ರೂಮಿನತ್ತ ನಡೆಯುತ್ತಲೇ ರೂಮಿನ ಸುತ್ತಮುತ್ತಲು ಕಣ್ಣಾಡಿಸಿದೆ. ನನ್ನ ರೂಮಿನ ಒಂದು ಬದಿಗೆ ಒಂದಕ್ಕೊಂದು ಅಂಟಿಕೊಂಡಂತಿರುವ ಐದಾರು ಸಾಲು ಮನೆಗಳು. ಮನೆಗಳ ಮುಂದೆ ತೆಂಗಿನಮರ, ಕಟ್ಟಿಗೆ, ಹೊಟ್ಟು, ಮೇವಿನ ಬಣವೆಗಳು ಕಂಡು ಸಹಜವಾಗಿಯೇ ನನಗೆ ಖುಷಿಯಾಯಿತು. ಮನೆಗಳ ಆವರಣದಿಂದ ಸ್ವಲ್ಪ ಪಕ್ಕದಲ್ಲಿ ಒಂದು ಕೈ ಬೋರು ಕಾಣಿಸಿತು. ಆ ಬೋರಿನ ಸುತ್ತಲೂ ಹುಡುಗಿಯರ ಗುಂಪೆÇಂದು ನಿಂತು ನನ್ನನ್ನೆ ನೊಡುತ್ತಾ ಕಿಸಿ ಕಿಸಿ ನಗುತ್ತಿದ್ದರು. ನನ್ನ ಬಗ್ಗೆಯೇ ಮಾತಾಡುತ್ತಿರಬಹುದೇ ಎಂದು ನನಗೆ ಅನುಮಾನ ಕಾಡಿತು. ಅಲ್ಲಿ ಬೋರು ಹೊಡೆಯುತ್ತಿರುವ ಹುಡುಗಿಯೊಂದರತ್ತ ನನಗೆ ನೋಡುತ್ತಲೇ ಇರಬೇಕೆನಿಸಿತು.

ಆ ಸಾಲುಮನೆಗಳ ಕೊನೆಯಲ್ಲಿ ಕೀಲಿ ಹಾಕಿರುವ ಮನೆಯೊಂದರ ಕೀಲಿ ತೆಗೆಯುವಲ್ಲಿ ತಿಪ್ಪೇಶಿ ಮಗ್ನನಾಗಿದ್ದರೆ, ನಾನು ಬೋರು ಹೊಡೆಯುವ ಹುಡುಗಿಯÀ ಏರಿಳಿಯುವ ಮೈಯನ್ನು ತದೇಕ ಚಿತ್ತನಾಗಿ ನೋಡುತ್ತಿದ್ದೆನು. ಕೊಡ ತುಂಬಿದ ಮೇಲೆ ಹುಡುಗಿಯ ಕೊಡ ಹೊರಿಸಲು ಗೆಳತಿಗೆ ಸನ್ನೆ ಮಾಡುವಳು. ಗೆಳತಿ ಕೊಡ ಎತ್ತಿ ಸೊಂಟದ ಮೇಲೆ ಇಟ್ಟಾದ ಮೇಲೆ ಅಚಾನಕಕ್ಕಾಗಿ ಮುಂದೆ ನೋಡಿದಾಗ ನನ್ನ ಕಣ್ಣುಗಳು ಆಕೆಯ ಕಣ್ಣುಗಳು ಸಂಧಿಸಿದ್ದರಿಂದ ನನಗೆ ಒಂದು ತರಹದ ಕಸಿವಿಸಿಯಾಯಿತು. ಆ ಹೊತ್ತಿಗೆ ನಾನು ಉಳಿದುಕೊಳ್ಳಬೇಕಾದ ರೂಮಿನ ಕದ ತೆರೆದು ‘ಬರ್ರಿ ಸರ್ ಇದ ಮನೆ’ ಎಂದು ತಿಪ್ಪಣ್ಣ ನನ್ನನ್ನು ಜೋರಾಗಿ ಕೂಗಿ ಎಚ್ಚರಿಸಿದ್ದ. ನಾನು ಮೈ ಮರೆತಿದ್ದನ್ನು ನೋಡಿದ ಹುಡುಗಿಯರು ಕಿಲ್ಲನೆ ನಕ್ಕಿದ್ದರಿಂದ ನನ್ನ ಮುಖ ಪೆಚ್ಚಾಯಿತು.

ಎರಡು ರೂಮುಗಳಿಂದ ಕೂಡಿರುವ ಸಣ್ಣ ಮನೆ. ಈ ಮನೆಗಂಟಿಕೊಂಡಿದ್ದ ಕೂಡು ಗೋಡೆಯ ಪಕ್ಕದ ಮನೆಯು ಮುಂಚೆ ಒಬ್ಬ ಮಾಲಕರಿಗೆ ಸೇರಿದ್ದರಿಂದ ಎರಡು ಮನೆಗಳ ನಡುವೆ ಅಡುಗೆ ಮನೆಯಲ್ಲಿ ಹಳೆಯ ಪರದೆಯನ್ನು ಹೊದೆದುಕೊಂಡಿದ್ದ ಸಣ್ಣ ಕಿಡಕಿಯೊಂದಿತ್ತು. ಮನೆಯ ಸ್ವಚ್ಚ ಮಾಡುತ್ತಿದ್ದ ನಾನು ಅಚಾನಕ್ಕಾಗಿ ಕಿಡಕಿಯ ತೂತಿನಾಚೆ ಹಣಕಿ ಹಾಕಿದೆನು. ಬೋರಿನಕಟ್ಟೆಯಲ್ಲಿ ನನ್ನನ್ನು ನೋಡಿ ಹಲ್ಲು ಕಿಸಿದಿದ್ದ ಹುಡುಗಿ ಮುಂದೆ ಕನ್ನಡಿಯೊಂದನ್ನಿಟ್ಟುಕೊಂಡು ತಲೆ ಬಾಚುತ್ತಿರುವುದು ಕಂಡಿತು. ನಾನು ಅವಳ ಉದ್ದಕೂದಲಿಗೆ ಜಡೆ ಬಾಚಿಕೊಳ್ಳುವ ಪರಿಗೆ ಮೈಮರೆತು ಅಲ್ಲಿಯೆ ನಿಂತು ಬಿಟ್ಟೆ. ಹಾಗೆ ಮೈ ಮರೆತು ನೋಡುತ್ತಿದ್ದಾಗ ಹೊರ ಬಾಗಿಲಿನಿಂದ ‘ಸಾರ್’ ಎನ್ನುವ ಶಬ್ದ ಕಿವಿಗೆ ಬಿದ್ದು ಅವಸರದಿಂದ ಹೊರ ರೂಮಿಗೆ ಬಂದು ನೋಡಿದೆ. ಬಾಗಿಲಿನಲ್ಲಿ ಒಂದೆರಡು ಸಣ್ಣ ಹುಡುಗರನ್ನು ಮುಂದಿಟ್ಟುಕೊಂಡು ಬೋರಿನ ಕಟ್ಟೆಯಲ್ಲಿ ಕಂಡ ಹುಡುಗಿಯರು ಕಂಡರು. ಧೂಳು ಮೆತ್ತಿದ ನನ್ನ ತಲೆ ಮುಖ ನೋಡಿದ ಅವರು ಮತ್ತೆ ಕೊಳ್ಳನೆ ನಕ್ಕರು. ನಾನು ಅವಸರವಾಗಿ ಲುಂಗಿ ಎತ್ತಿ ಮುಖ ಒರೆಸಿಕೊಂಡೆ.

ಲುಂಗಿ ಮೇಲೆ ಎತ್ತಿದ್ದರಿಂದ ಮತ್ತೆ  ಕೊಳ್ಳನೆ ನಗುತ್ತಾ ಮುಖ ಆ ಕಡೆ ತಿರುಗಿಸಿದರು. ನಾನು ಮುಖ ಒರೆಸಿಕೊಂಡೆ. ‘ಬಿಡಿ ಸರ್, ನಾವು ಕಸ ಗುಡುಸತಿವಿ’ ಎನ್ನುತ್ತಲೇ ಒಳಬಂದು ಅಲ್ಲಿಯೇ ಬಿದ್ದಿದ್ದ ಪೆÇರಕೆ ಎತ್ತಿಕೊಂಡು ಸ್ವಚ್ಚ ಮಾಡತೊಡಗಿದರು. ನಾನು ಕೆಲಸವಿಲ್ಲದೆ ಸುಮ್ಮನೆ ನಿಂತುಕೊಂಡು ಒಮ್ಮೆ ಕಿಡಕಿಯ ಕಡೆ ಮತ್ತೊಮ್ಮೆ ಕಸ ಹೊಡೆಯುವವರ ಕಡೆ ನೋಡುತ್ತಾ ನಿಂತು ಬಿಟ್ಟೆ. ನನ್ನನ್ನೆ ನೋಡುತ್ತಿದ್ದ ಆ ಹುಡುಗಿ ನಾನು ನೋಡುತ್ತಲೆ ಬೇರೆ ಕಡೆ ಮುಖ ತಿರುಗಿಸುತ್ತಿದ್ದಳು. ಹೀಗೆ  ನೋಡುವ ಆಟವಾಡುತ್ತಿದ ನಮ್ಮನ್ನು ಗಮನಿಸಿದ ಈ ಕಸ ಹೊಡೆಯುವ ಹುಡುಗಿಯರು ನನ್ನ ಇಚ್ಚೆಯನ್ನು ಗಮನಿಸಿದವರಂತೆ ‘ಸರ್ ಆ ಶಾರೀನ ಕರಕೊಂಡು ಬರೋನೇನ್ರಿ’ ಎಂದರು. ನಾನು ಕಳ್ಳನಂತೆ ಅವರ ಕೈಯಲ್ಲಿ ಸಿಕ್ಕಿದ್ದರಿಂದ ಬೆಪ್ಪಾಗಿ ನಿಂತುಬಿಟ್ಟೆ. ಆಗ ‘ಒಂದ್ನಿಮಿಷ ಸರ್ ಅವಳನ್ನು ಕರೆದುಕೊಂಡು ಬರತಿವಿ’ ಎಂದು ಓಡಿ ಹೋದ ಹುಡುಗಿಯರು ಮರುಕ್ಷಣವೇ ಆ ಹುಡುಗಿಯೊಂದಿಗೆ ಪ್ರತ್ಯಕ್ಷರಾದರು. ಆ ಹುಡುಗಿ ‘ಬಿಡ್ರೆ ಬಿಡ್ರೆ’ ಎಂದು ಕೈ ಕೊಸರಿಕೊಳ್ಳುತ್ತಲೇ ನನ್ನತ್ತ ಕಳ್ಳನೋಟ ಬೀರುತ್ತಿದ್ದಳು. ಅವಳ ಗೆಳತಿಯರು ಅವಳನ್ನು ತುಂಟಾಟ ಮಾಡುವ ಎಳೆ ಚಿಗರೆಯೊಂದನ್ನು ತಂದು ಇಳಿಸುವಂತೆ ನನ್ನ ಮುಂದೆ ನಿಲ್ಲಿಸಿದರು. ನಾನು ಅವಳತ್ತ ನೋಡತ್ತಿದ್ದರೆ ಅವಳು ಮುಖ ನಾಚಿ ನೀರಾಗಿತ್ತು.

* * *

ಮರುದಿನ ಶಾರಿ ಬೋರಿನಕಟ್ಟೆಯಲ್ಲಿ ನೀರು ಹೊಡೆಯುತ್ತಿದ್ದಳು. ನಾನು ಎರಡು ಬಿಂದಿಗೆ ತೆಗೆದುಕೊಂಡು ನೀರಿಗೆ ಹೋದೆ. ಶಾರಿ ಮತ್ತೆ ಮುಖದ ಮೇಲೆ ನಾಚಿಕೆ ತಂದುಕೊಂಡು ನನ್ನ ಕಡೆ ನೋಡಿಯೂ ನೋಡದಂತೆ ಬೋರು ಹೊಡೆಯತೊಡಗಿದಳು. ನಾನು ಆಸಕ್ತಿಯಿಂದ ಅವಳ ಉಸಿರಿನ ತಾಳಕ್ಕೆ ತಕ್ಕಂತೆ ಏರಿಳಿಯುವ ಮೈಯನ್ನು ಗಮನಿಸುತ್ತಾ ನಿಂತುಬಿಟ್ಟೆ. ಶಾರಿಯ ಕೊಡ ತುಂಬಿದ ಬಳಿಕ ಯಾರು ಹೊರಿಸುವವರಿಲ್ಲದೆ ಅತ್ತ ಇತ್ತ ನೋಡತೊಡಗಿದಳು. ಕೊನೆಗೆ ದಾರಿ ಕಾಣದೆ ಶಾರದಾ ಕೊಡ ಎತ್ತಲು ಪ್ರಯತ್ನಿಸಿ ಎತ್ತಲಿಕ್ಕಾಗದೆ ಮುಖ ಕೆಂಪು ಮಾಡಿಕೊಂಡು ನನ್ನತ್ತ ನೋಡಿದಳು. ನಾನು ಇದು ಒಳ್ಳೆಯ ಅವಕಾಶ ಎಂದು ಖುಷಿಯಿಂದ ಮುಂದೆ ಬಂದು ಆಕೆಯ ಕೊಡ ಎತ್ತಲು ಕೆಳ ಬಗ್ಗಿದೆನು. ಆಗ ಆಕೆಯೂ ಬಗ್ಗಿದ್ದರಿಂದ ಆಕೆಯ ಭುಜ ತಾಗಿ ನನಗೆ ಹೇಗೇಗೋ ಆಯಿತು. ಆ ಕ್ಷಣವೇ ಅವಳು ಕೊಡ ಬಿಟ್ಟು ಒಮ್ಮೆಲೇ ಹಿಂದೆ ಸರಿದಳು. ನಾನು ತುಂಟ ನಗೆಯಿಂದ ಅನಾಮತ್ತಾಗಿ ಕೊಡ ಎತ್ತಿ ಅವಳ ಸೊಂಟದ ಮೇಲೆ ಇಟ್ಟೆ. ಅವಳ ಕಣ್ಣುಗಳಲ್ಲಿ ತುಂಟನಗೆ. ಅವಳು ನನ್ನ ಮುಖವನ್ನೆ ನೋಡುತ್ತಾ ತನ್ನ ತುಂಬಿದ ಕೊಡದಿಂದ ಕೈಯಲ್ಲಿ ನೀರು ತೆಗೆದುಕೊಂಡು ನನ್ನ ಮುಖಕ್ಕೆ ಉಗ್ಗಿ ನಗುತ್ತಾ ಅವಸರವಾಗಿ ಹೆಜ್ಜೆ ಹಾಕಿ ಮಾಯವಾದಳು.

ಬರಬರುತ ನೀರು ತರಲು ನಾನು ಬೋರಿಗೆ ಬಂದಾಗ ಆ ಹುಡುಗಿಯು ನೀರಿಗೆ ಬರುವುದು, ಅವಳು ನೀರು ತರುವಾಗ ನಾನು ನೀರು ತರಲು ಸಜ್ಜಾಗುವುದು ನಡೆಯತೊಡಗಿತು. ನಾನಂತೂ ರೂಮಿನಲ್ಲಿ ಎಲ್ಲ ಪಾತ್ರೆಗಳು ತುಂಬಿದ್ದರೂ ಕೂಡ ಬಚ್ಚಲಿಗೆ ನೀರನ್ನು ಚೆಲ್ಲಿ ಬೋರಿಗೆ ಓಡುತಿದ್ದೆ. ಅಲ್ಲಿ ಅವಳು ಬಗ್ಗಿ ಬೋರು ಹೊಡೆಯುವಾಗ ಮೇಲೇರಿ ಕೇಳಗಿಳಿಯುತಿದ್ದ ಅವಳ ಕಾಯಿ ಮೊಲೆಗಳು, ಮುನಿಸಿನಿಂದ ಮುಂಗುರುಳನ್ನು ಹಿಂದಕ್ಕೆ ಸರಿಸುವ ಪರಿ, ಆಗಾಗ ನನ್ನತ್ತ ವಾರೆಯಾಗಿ ನೋಡಿ ನಾಚಿ ಮುಗುಳು ನಗು ಸೂಸುವ ಸೊಬಗು, ಇವೆಲ್ಲವೂ ನನಗೆ ಮತ್ತೆ ಮತ್ತೆ ಬೋರಿಗೆ ಓಡಿ ಬರುವಂತೆ ಮಾಡುತಿದ್ದವು.

ನಮ್ಮಿಬ್ಬರ ಈ ಅವಸ್ಥೆಯನ್ನು ಗಮನಿಸುತಿದ್ದ ಅವಳ ಗೆಳತಿಯರು ನನ್ನ ಅವಳ ಬಗ್ಗೆ ಆಡಿಕೊಳ್ಳಲು ಶುರು ಮಾಡಿದರು. ಇದರಿಂದ ನಾನು ಹೊರಗಡೆ ಸಿಟ್ಟು ತೋರಿಸುತ್ತಿದ್ದರೂ ಕೂಡ, ಒಳಗಡೆ ಒಂದು ರೀತಿ ಹಿತ ಅನುಭವಿಸುತಿದ್ದೆ. ಈ ಮಧ್ಯ ದಿನದ ಮುಸ್ಸಂಜೆಯ ಮಬ್ಬಿನಲ್ಲಿ ಅಲ್ಲಿನವರ ಕಣ್ಣು ತಪ್ಪಿಸಿ ನಾವಿಬ್ಬರು ಪಿಸುಗುಟ್ಟ ತೊಡಗಿದೆವು. ದಿನ ಬೆಳಿಗ್ಗೆ ತಮ್ಮ ಮನೆಯಲ್ಲಿ ಏನೇ ವಿಶೇಷ ತಿ£ಸು ಮಾಡಿದರೂ ಕೂಡ ಅದು ನನ್ನ ಕಿಡಕಿಯ ಮೂಲಕ ನನ್ನ ರೂಮೊಳಗೆ ಪ್ರವೇಶಿಸುವುದು ಪ್ರಾರಂಭವಾಗಿ ಮುಂದೆ ನಾಲ್ಕೈದು ಸಾಲಿನ ಪ್ರೇಮಪತ್ರಗಳು ಆ ಕಿಡಕಿಯ ಮೂಲಕ ಒಳಬರತೊಡಗಿದವು. ಇತ್ತೀಚೆಗಂತೂ ನನಗೆ ಕೆಲಸದ ಕಡೆ ಗಮನ ಕೊಡುವುದೆ ಕಡಿಮೆಯಾಗತೊಡಗಿ ಯಾವಾಗಲೂ ಅವಳ ನೆನಪೇ ಕಾಡತೊಡಗಿತು. ಅವಳು ಹೋಗುವ ಟೈಲರಿಂಗ್ ತರಬೇತಿ ಕೇಂದ್ರದ ಸುತ್ತಾ ಗಿರಕಿ ಹೊಡೆಯುವುದು, ಬರುವ ದಾರಿಯಲ್ಲಿ ಅವಳಿಗಾಗಿ ಕಾಯುವುದು ಮಾಡತೊಡಗಿದೆ.

ಸ್ನಾನ ಮಾಡಿದ ನಂತರದಲ್ಲಿ ಅವಳು ತನ್ನ ಉದ್ದನೆಯ ಕೂದಲು ಬಾಚಿ ಹೆರಳು ಹಾಕಿಕೊಳ್ಳತಿದ್ದದನ್ನು ಕಿಡಕಿಯ ಮೂಲಕ ದಿನಾಲೂ ಕದ್ದು ನೋಡುತಿದ್ದೆ. ಅವಳ ನಾಗಜಡೆಯ ಮೂಲಕ ಬರುವ ಆ ಅಗ್ಗದ ಶಾಂಪೂವಿನ ಪರಿಮಳ ಹೀರುತ್ತಾ  ಮತ್ತೇರಿಸಿಕೊಳ್ಳುತಿದ್ದೆ. ದಿನಗಳೆದಂತೆ ಮತ್ತು ನೆತ್ತೀಗೇರಿ ಮತ್ತೇನೋ ಬೇಕೆನಿಸತೊಡಗಿತು. ಬಹುಶಃ ಆಗ ನಮ್ಮೂರು ಟೆಂಟಿನಲ್ಲಿ ನಾನು ನೋಡುತಿದ್ದ ನೀಲಿ ಸಿನೆಮಾಗಳು ಕೂಡ ಈ ಉತ್ತೇಜನಕ್ಕೆ ಕಾರಣವಾಗಿತ್ತೆನೋ. ಒಟ್ಟಿನಲ್ಲಿ ಹೆಣ್ಣಿನ ಪ್ರಥಮ ಆಲಿಂಗನದ ಕುತೂಹಲಕ್ಕಾಗಿ ನನ್ನ ಮೈ ಅವಸರದಿಂದ ಕಾಯುತಿತ್ತು. ಈ ಆತುರವನ್ನು ನನ್ನ ಕಣ್ಣುಗಳು ಅವಳ ಕಣ್ಣುಗಳಿಗೆ ಮನವರಿಕೆ ಮಾಡಿಕೊಡುತಿದ್ದವು. ಅವಳ ಕಣ್ಣುಗಳಲ್ಲಿ ಇಂತದೇ ಆತುರವನ್ನು ಗುರುತಿಸುವಲ್ಲಿ ಅವು ಯಶಸ್ವಿಯಾದವು.

ನನ್ನೊಂದಿಗಿನ ಪ್ರೇಮವನ್ನು ಗಟ್ಟಿಗೊಳಿಸುತಲೇ ಅವಳು ತನ್ನ ಟೇಲರಿಂಗ್ ತರಬೇತಿಯನ್ನು ಮುಗಿಸಿದ್ದಳು. ಇದನ್ನೆ ಕಾಯುತಿದ್ದ ಗೂರಲು ರೋಗಿ ಅವಳವ್ವ, ಅವಳನ್ನು ಪರಿಚಯದವರೊಬ್ಬರ ವಶೀಲಿಯನ್ನು ಹಚ್ಚಿ ಬೆಂಗಳೂರಿಗೆ ಕಳುಹಿಸಲು ಸಿದ್ದಳಾದಳು. ಈ ಅವಸರಕ್ಕೆ ನನ್ನೊಂದಿಗಿನ ಅವಳ ಚಲ್ಲಾಟವು ಕಾರಣವಾಗಿತ್ತು. ‘ನಾಳೆ ಬೆಳಿಗ್ಗೆ ನಾನು ಬೆಂಗಳೂರಿಗೆ ಹೋಗುತಿನಿ. ಸಂಜೆ ಮನೆಯ ಹಿತ್ತಲಿನಲ್ಲಿ ಸಿಗು’ ಎಂದು ಬರೆದಿರುವ ಸಣ್ಣ ಚೀಟಿಯೊಂದು ಕಿಡಕಿಯ ಹತ್ತಿರ ಬಿದ್ದಿತು. ಎತ್ತಿ ನೋಡಿದೆ ಒಂದು ತರಹದ ಸಂಕಟ ಹೊರಗೆ ಬಂದು ಅವಳಿಗಾಗಿ ಕಣ್ಣಾಡಿಸಿದೆ. ಅಂಗಳದಲ್ಲಿ ಪಾತ್ರೆ ತೊಳೆಯುತಿದ್ದವಳ ಕಣ್ಣುಗಳು ತೇವಗೊಂಡಿದ್ದವು.

ಅಂದು ಸಂಜೆಯ ಮಬ್ಬು ಗತ್ತಲಿನಲ್ಲಿ ಹಿತ್ತಿಲದೊಡ್ಡಿಯ ಬಣವೆಯ ಹಿಂದೆ ನಾನು ಅವಳಿಗಾಗಿ ಕಾಯುತ್ತಿದ್ದೆ. ಕಾತರದಿಂದ ಕ್ಷಣ ಕ್ಷಣಕ್ಕೂ ಅವಳು ಬಂದಳೇ ಎಂದು ದೊಡ್ಡಿಯ ಬಾಗಿಲಿನತ್ತ ನೋಡುತ್ತಿದ್ದೆ. ದೊಡ್ಡಿಯ ಬಾಗಿಲು ತೆರೆದ ಶಬ್ದ ಕೇಳಿದ್ದರಿಂದ  ನಾನು ಕುಳಿತಲ್ಲಿಂದಲೇ ಹುರುಪಿನಿಂದ ಗೋಣು ಹಾಕಿ ಆ ಕಡೆ ನೋಡಿದಾಗ ಶಾರಿ ಬಗ್ಗಿ ಬಣವೆಗುಂಟ ಬರುತ್ತಿದ್ದಳು. ಕಣ್ಣಲ್ಲಿ ನೀರು ತುಂಬಿಕೊಂಡಿದ್ದ ಅವಳ ಕೈಹಿಡಿದ ನಾನು ಕರೆದುಕೊಂಡು ಬಂದು ಅಲ್ಲಿಯೇ ಹೊಟ್ಟಿನ ಮೇಲೆ ಕುಳ್ಳಿರಿಸಿದೆ.

ಅವಳ ಕೈಯನ್ನು ನನ್ನ ಕೈಗೆ ತೆಗೆದುಕೊಂಡು ಸಮಾಧಾನಿಸುತ್ತ ‘ಯಾಕ, ನನ್ನ ಹಂತ್ಯಾಕ ಬರಾಕ ಇಷ್ಟ ಹೆದರಿತಿ’ ಎಂದೆ.

ಆಕೆ ‘ಅದಕ್ಕಲ್ಲಾ ನಾನು ಅಳ್ಳಾಕ ಹತ್ತಿರೋದು. ನಾಳೆ ನಾನು ಬೆಂಗಳೂರಿಗೆ ಹೊಂಟಿನಿ’ ಅಂದಳು ಅದೆ ದುಃಖದಿಂದ.

ನಾನು ಗಾಬರಿಯಾಗಿ ‘ಯಾಕ’ ಅಂದೆ.

ಆಕೆ ತನ್ನ ಮನೆಯ ಪರಿಸ್ಥಿತಿಯನ್ನು ಹೇಳತೊಡಗಿದಳು; ‘ಮನಿಯಾಗ ಕಿತ್ತು ತಿನ್ನೊ ಬಡತನ ಇರೋದು ನಿಮಗ ಗೊತ್ತಿದ್ದದ್ದೆತಿ. ನಿನ್ನೆಗೆ ನನ್ನ ಟೇಲರಿಂಗ್ ತರಬೇತಿ ಮುಗಿತು. ಅದಕ್ಕ ಊರಾಗ ಚಾರು-ಚೂರು ತೊಗೊಂಡಿದ್ದ ಸಾಲ ತೀರಿಸೊ ಬಗ್ಗೆ ಅವ್ವ ಮನಸ್ಸಿಗೆ ಹಚಗೊಂಡಾಳ. ನಮ್ಮೂರಿನವರೊಬ್ಬರು ಬೆಂಗಳೂರಿನ ಗಾರಮೆಂಟ್ಸ್‍ನೊಳಗ ಕೆಲಸ ಮಾಡತಾರ. ನಾನು ಅಲ್ಲಿ ಗಾರಮೆಂಟ್ಸ್‍ನೊಳಗ ಕೆಲಸಕ್ಕ ಸೇರಿಕೊಬೇಕು ಅನ್ನೋದು ಅವ್ವನ ಆಸೆ ಐತಿ ಅದಕ್ಕ ಹೊಂಟಿನಿ’ ಎಂದ್ಲು.

ನಾನು ಕೊನೆಯ ಬಾಣವೆಂಬಂತೆ ‘ಇಲ್ಲೆ ಇದ್ಕೊಂಡು ಏನಾದರೂ ಮಾಡಬಹುದಲ್ಲಾ ಶಾರು’ ಎಂದೆ.

‘ಅದು ಸಾಧ್ಯ ಇಲ್ಲ ಅಂತ ಅನಸತೈತ್ರಿ. ಸದ್ಯದ ಪರಿಸ್ಥಿತಿಯೊಳಗ ನಮಗ ಬದುಕಲಿಕ್ಕೆ ಇದೊಂದ„ ದಾರಿ. ಅಷ್ಟ ಅಲ್ಲದ ಅವ್ವಗ ನಮ್ಮಿಬ್ಬರ ಮ್ಯಾಲ ಸಂಶೆ ಬಂದೈತಿ. ಅದಕ್ಕ ನನ್ನ ನಿನ್ನಿಂದ ಅಗಲಿಸಬೇಕಂಬೂದು ಅಕಿ ಇಚ್ಚಾ ಇರಬಹುದು’ ಎಂದು  ಮತ್ತಷ್ಟು ದುಃಖಿಸಿದಳು.

ನಾನು ಕಣ್ಣಲ್ಲಿ ನೀರು ತಂದುಕೊಂಡು ‘ಆದರ ಶಾರಿ ನಾನು ನಿನ್ನನ್ನ ಬಾಳ ಹಚಗೊಂಡ ಬಿಟ್ಟಿನಿ. ನಿನ್ನ ಬಿಟ್ಟ ನನ್ನ ಬದುಕಿಗೆ ಅರ್ಥ ಇಲ್ಲ ಅಂತ ಅನಸತೈತಿ ನಡಿ ನಾನು ಬರತೇನಿ. ಅಲ್ಲೆ ಯಾವುದಾದರೂ ಒಂದು ಕೆಲಸ ಮಾಡಿದರಾತು ಎಂದೆ.

ಆಗ ಆಕೆ ‘ಬ್ಯಾಡ, ಇಷ್ಟರಾಗ ನಿಮ್ಮ ನೋಕ್ರಿ ಖಾಯಂ ಆಗೋದು ಐತಿ. ನಾನು ಆಗಾಗ ಬರತೇನಿ. ಸ್ವಲ್ಪ ದಿನ ಅಷ್ಟ’ ಎಂದು ನನ್ನನ್ನೆ ಸಮಾಧಾನಿಸಿದಳು.

ನಾನು ಆಕೆಯ ನಿರ್ಧಾರ ಕೇಳಿ ಆಕೆಯಿಂದ ದೂರ ಸರಿದು ಆಕಾಶದತ್ತ ಮುಖ ಹೊರಳಿಸಿ ಕುಳಿತುಬಿಟ್ಟೆ. ನನ್ನ ಹತ್ತಿರಕ್ಕೆ ಸರಿದು ಮುಖವನ್ನು ತನ್ನ ಕಡೆ ಹೊರಳಿಸಿಕೊಂಡಳು. ನಾನು ನಿಧಾನಕ್ಕೆ  ಅವಳು ತಿರುಗಿಸಿಕೊಂಡಂತೆ ತಿರುಗಿದೆ. ಇಬ್ಬರ ಮುಖಗಳು ಹತ್ತಿರದಲ್ಲಿದ್ದವು. ಅವತ್ತು ಆಕೆ ನನ್ನ ಮುಖವನ್ನು ನೇವರಿಸತ್ತಿದ್ದರೆ ನಾನು ಅವಳನ್ನು ಬರಸೆಳೆದಪ್ಪಿಕೊಂಡೆ. ಅವತ್ತು ನಾವಿಬ್ಬರು ನಮ್ಮನ್ನು ಮರೆತು ದೇಹಗಳಿಗೆ ತಮ್ಮ ಕೆಲಸವನ್ನು ಒಪ್ಪಿಸಿಬಿಟ್ಟೆವು.

ಆಮೇಲೆ ಅವಳು ಡಲ್ಲಾಗಿ ಸ್ವಲ್ಪ ಹೊತ್ತು ಕುಳಿತುಬಿಟ್ಟಳು. ಆಕೆ ಮುಡಿದಿದ್ದ ಮಲ್ಲಿಗೆ ಆಕೆಯ ಶರಣಾಗತಿಗೆ ಸಾಕ್ಷಿಯಾಗಿದ್ದವು. ನಾನು ಬಾಡಿದ ಮಲ್ಲಿಗೆ ಸರಿಪಡಿಸಿ ಅವಳನ್ನು ಕಳುಹಿಸಿಕೊಟ್ಟಿದ್ದೆ.

ಮರುದಿನ ನಾನು ರೂಮಿನ ಕಿಡಕಿಯ ಮೂಲಕ ಹಣಿಕಿ ಹಾಕಿದರೆ ಅಲ್ಲಿ ಅವಳ ಕಲರವವಿಲ್ಲ. ನಿಧಾನಕ್ಕೆ ಹೊರ ಅಂಗಳಕ್ಕೆ ಬಂದೆ. ಅಲ್ಲಿಯೂ ನಿಲ್ಲಲಾಗದೆ ಬೋರಿನ ಕಟ್ಟೆ ಕಡೆ ಹೋದೆ. ಅಲ್ಲಿ ಶಾರಿಯ ಗೆಳತಿಯರಿಬ್ಬರು ಅವತ್ತು ರೂಮು ಸ್ವಚ್ಚ ಮಾಡಲು ಬಂದವರು ನೀರು ತುಂಬುತ್ತಿದ್ರು. ನಾನು ಅನ್ಯ ಮನಸ್ಕನಾಗಿ ಅಡ್ಡಾಡುತ್ತಿರುವುದನ್ನು ನೋಡಿ ‘ಯಾಕ್ರಿ ಸರ್ ನೀರ ತರಾಕ ಬಂದ್ರೇನ’ ಎಂದರು. ನಾನು ಅನ್ಯಮನಸ್ಕನಾಗಿಯೇ ಅವರಿಗೆ ಹೌದೆಂದೆ. ‘ಮತ್ತ ಕೊಡ ಏಲ್ಲೆತ್ರಿ ಸರ್’ ಅಂದ್ರು. ಮುಸಿ ಮುಸಿ ನಕ್ಕರು. ನಾನು ಬೆ ಬೆ ಎಂದು ಬೆಪ್ಪಾಗಿ ನಿಂತಿಬಿಟ್ಟೆ. ‘ಸರ್ ಶಾರಿ ಬಗ್ಗೆ ಬಾಳ ತಲೆಕೆಡಿಸಿಕೊಂಡಂಗ ಕಾಣತೈತಿ’ ಎಂದು ಅವರು ನಗುತ್ತಾ ಮಾತಾಡಿಕೊಳ್ಳುತ್ತಲೆ ಅಲ್ಲಿಂದ ಮಾಯವಾದರು.

* * *

ಜೋರಾಗಿ ಸೀಟಿ ಸದ್ದು ಕೇಳಿದ್ದರಿಂದ ಕನಸಿನಿಂದ ಅನಿವಾರ್ಯವಾಗಿ ಹೊರಬಂದೆ. ನೋಡಿದರೆ ಕಿತ್ತೂರು ಚನ್ನಮ್ಮ ಸರ್ಕಲ್ಲಿನ ಟ್ರಾಫಿಕ್ ಪೆÇಲೀಸ್‍ನೊಬ್ಬ ನನ್ನ ಮುಂದೆ ದೆವ್ವದಂತೆ ನಿಂತು ‘ಗಾಡಿ ಆ ಕಡೆ ಹಾಕು’ ಎಂದು ಸೀಟಿ ಊದುತ್ತಲೆ ಸನ್ನೆ ಮಾಡುತ್ತಿದ್ದ. ಲೈನ್ ಜಂಪ ಮಾಡಿದ ತಪ್ಪು ಅರಿವಿಗೆ ಬಂತು. ದಂಡ ಕಟ್ಟಿ ಇನ್ನೇನು ಬೈಕ್ ಸ್ಟಾರ್ಟ್ ಮಾಡಬೇಕು. ಅಷ್ಟರಲ್ಲಿಯೆ ಪಕ್ಕದಲ್ಲಿ ನಿನ್ನೆ ಪ್ರೆಸ್ ಮೀಟ್‍ನಲ್ಲಿ ನನ್ನ ಕಣ್ಣಿಂದ ತಪ್ಪಿಸಿಕೊಂಡ ಶಾರಿ ಕಾಣಿಸಿದಳು. ದೊಡ್ಡ ಹೊಟೇಲಿನ ಒಂದು ಮೂಲೆಯಲ್ಲಿ ನಿಂತಿದ್ದ ಶಾರಿಯನ್ನು ನೋಡಿದ ತಕ್ಷಣ ನನಗರಿವಿಲ್ಲದೆ ರಸ್ತೆಯ ಈ ಕಡೆ ಪಾರ್ಕ್ ಮಾಡಿ ಶಾರಿಯತ್ತ ದೃಷ್ಟಿ ನೆಟ್ಟು ಆಕೆಯತ್ತ ಅವಸರವಾಗಿ ನಡೆದೆ. ನಿನ್ನೆಗಿಂತಲೂ ಇಂದು ಬಹಳಷ್ಟು ಬದಲಾದಂತೆ ನನಗೆ ಕಾಣಿಸಿದಳು. ಮಾಸಿದ ಸೀರೆ, ಅದಕ್ಕೆ ಸ್ಪರ್ಧೆಯೊಡ್ಡುವಷ್ಟು ಮಾಸಿದ್ದ ಜಂಪರ್, ಎಷ್ಟೊ ದಿನದಿಂದ ಎಣ್ಣೆ ಕಾಣದ ತಲೆಗೂದಲು, ಹಳೆಯ ಗಾಯಗಳ ಕುರುಹು ಹೊತ್ತ ಮುಖ, ಬಾಯಿ ತೆರೆದಾಗ ಕಾಣುವ ಕಂದು ಹಲ್ಲುಗಳು, ಜೋತು ಬಿದ್ದ ಎದೆ, ಸ್ವಲ್ಪ ಹೆಚ್ಚಿಗೆ ಎನಿಸುವಷ್ಟು ಹೊಕ್ಕಳ ಕೆಳಗಿರುವ ಬೊಜ್ಜು, ನಿನ್ನೆ ಇವುನ್ನೆಲ್ಲ ಗಮನಿಸಲಿಕ್ಕೆ ಆಗಿರಲಿಲ್ಲ. ಅಲ್ಲಿ ಅಂತಹದ್ದೆ ಮುರ್ನಾಲ್ಕು ಹೆಂಗಸರು ತಮ್ಮ ಬಾಯಲ್ಲಿನ ಗುಟಕಾ ರೊಜ್ಜನ್ನು ಪಿಚಕ್ ಪಿಚಕ್ ಎಂದು ಉಗುಳುತ್ತಾ ಗಿರಾಕಿಗಳಿಗಾಗಿ ಕಾಯುತ್ತಿದ್ದರು. ಅವರು ಮುಡಿದಿದ್ದ ಮಲ್ಲಿಗೆ ದಂಡೆ ಬಾಡಿ ರಸ ಕಳೆದುಕೊಂಡಂತೆ ಬಾಸವಾದವು. ಅವರುಟ್ಟಿದ್ದ ಹಿಮ್ಮಡಿ ಕೆಳಗಿನ ಸೀರೆ ಮಳೆಯ ಆ ದಿನಗಳಲ್ಲಿ ರಾಡಿ ಕಲೆಗಳಿಂದ ಮುಳಿಗೆದ್ದಿತ್ತು. ಅವರ ದಂದೆಗಾಗಿ ಪಟ್ಟ ಪಾಡನ್ನು ಅದು ವಿವರಿಸುವಂತಿತ್ತು.

ಗಿರಾಕಿಗಳು ಮುಂದೆ ಸುಳಿದಾಡಿ, ಅಣತಿ ದೂರದಲ್ಲಿ ನಿಲ್ಲಲಾರದೆ ನಿಂತು ತಲ್ಲಣಗೊಂಡು ಬೆವರುತ್ತಿದ್ರು. ಈ ಹೆಂಗಸರೊ ಸೆರಗು ಸರಿಪಡಸುವ ನೆಪದಲ್ಲಿ ಗಿರಾಕಿಗಳಿಗಷ್ಟೆ ಕಾಣುವಂತೆ ತಮ್ಮ ಎದೆಯನ್ನು ಪ್ರದರ್ಶಿಸುತ್ತಿದ್ದರು. ಕೆಲವು ಗಿರಾಕಿಗಳು ಇವರ ಸನ್ನೆಗೆ ಬಲಿಯಾಗಿ ವ್ಯವಹಾರ ಕುದುರಿಸಲು ಹೆಣಗುತ್ತಿದ್ದರು. ನಾನು ಅವಳತ್ತ ಸಾಗುತ್ತಿರುವುದನ್ನು ನೋಡಿದ ಕೆಲ ಸಭ್ಯ ಮುಖವಾಡದ ಜನರು ನನ್ನ ನಾಗರಿಕ ವ್ಯಕ್ತಿತ್ವವನ್ನು ಕಂಡು ಅಸಹ್ಯದಿಂದಲೋ ಹೊಟ್ಟೆಕಿಚ್ಚಿನಿಂದಲೋ ನನ್ನನ್ನೇ ದುರುಗುಟ್ಟಿ ನೋಡತೊಡಗಿದರು. ನನ್ನನ್ನು ನೋಡಿದ ಶಾರಿ ಅವಸರದಿಂದ ಅಲ್ಲಿಂದ ಕಾಲ್ಕಿತ್ತು ಅಲ್ಲಿಯ ಸಂದಿಯೊಂದರಲ್ಲಿ ಮಾಯವಾದಳು. ನಾನು ನಿರಾಸೆಯಿಂದ ಜನರ ಕಣ್ಣುಗಳಿಗೆ ಆಹಾರವಾಗುತ್ತಾ ಅಲ್ಲಿಯೆ ನಿಂತೆ. ಇನ್ನುಳಿದ ಹೆಂಗಸರು ನನ್ನ ಮುಂದೆ ಸುಳಿದಾಡಿ ತಮ್ಮ ವಯ್ಯಾರ ಪ್ರದರ್ಶಿಸಿ ಗಾಳ ಹಾಕಲು ಪ್ರಯತ್ನಿಸತೊಡಗಿದರು. ನಾನು ಕೆಲವೊಮ್ಮೆ ಅಸಹ್ಯದಿಂದಲೂ, ಆಶ್ಚರ್ಯದಿಂದಲು ನನ್ನತ್ತ ದೃಷ್ಟಿ ನೆಟ್ಟಿರುವ ಜನರತ್ತಲು, ಕೆಲವೊಮ್ಮೆ ನನ್ನತ್ತ ಕಣ್ಣು ಮಿಟುಕಿಸುತ್ತಿರುವ ಹೆಂಗಸರತ್ತಲೂ ಮಿಕಿ ಮಿಕಿ ನೋಡುತ್ತಾ ನಿಂತುಬಿಟ್ಟೆ.  ನನಗೆ ಗಾಳ ಹಾಕಲು ಯತ್ನಿಸುತ್ತಿದ್ದ ಆ ಹೆಂಗಸರಿಗೆ ನನ್ನಿಂದ ಯಾವುದೆ ಸಿಗ್ನಲ್‍ಗಳು ದೊರಕದಿರುವುದರಿಂದ ನನ್ನತ್ತ ಒಂದು ಶಪಿಸುವ ನೋಟ ಚಲ್ಲಿ ಬೇರೆ ಗಿರಾಕಿಗೆ ಗಾಳ ಹಾಕುವುದಕ್ಕಾಗಿ ಬದಿಗೆ ಸರಿದರು. ನಾನು ಪಾನ್ ಅಂಗಡಿಯತ್ತ ಸರಿದು, ಸಿಗರೇಟ್ ಕೊಂಡು ಪುಸ್ ಪುಸ್ ಎಂದು ಹೊಗೆ ಬಿಡತೊಡಗಿದೆ.

ನಾನು ನಿಂತಿರುವ ಪಾನ್ ಅಂಗಡಿಯ ಮುಂದೆ ಬಸ್ ಬಂದು ನಿಂತಿತು. ಅದು ನಿಂತೊಡನೆ ಶಾರಿ ಎಲ್ಲಿದ್ದವಳೊ ಓಡಿ ಬಂದು ಬಸ್ಸು ಹತ್ತಿ ಕುಳಿತಳು. ದಿಗಿಲುಗೊಂಡ ನಾನು ಕೂಡ ಸಿಗರೇಟ್ ಬಿಸಾಕಿ ಓಡಿ ಹೋಗಿ ಅವಳ ಪಕ್ಕವೆ ಕುಳಿತುಕೊಂಡುಬಿಟ್ಟೆ. ಬಸ್ಸಿನಲ್ಲಿದ್ದವರು ನನ್ನತ್ತ ಅಸಹ್ಯದಿಂದ ನೋಡತೊಡಗಿದರಿಂದ ನಾನು ಸಂಕೋಚದಿಂದ ಮುದುಡಿ ಕುಳಿತಿದ್ದೆ. ಶಾರಿಗೂ ಸಂಕೋಚವಾಗಿರಬೇಕು. ಕಿಡಕಿಯ ಹೊರಗೆ ನೆಟ್ಟ ತನ್ನ ನೋಟವನ್ನು ಬದಲಿಸಲಿಲ್ಲ. ನನ್ನತ್ತ ಮಿಕಿ ಮಿಕಿ ನೋಡಿದ ಕಂಡಕ್ಟರ್ ಟಿಕೆಟ್ ಎಲ್ಲಿಗೆ ಎಂದ. ನಾನು ಎಲ್ಲಿಗೆ ಎಂದು ಗೊತ್ತಾಗದೆ ಆಕೆಯತ್ತ ಹೊರಳಿದೆ. ಆಕೆಯ ಮುಖ ಕಿಡಕಿಯಲ್ಲಿಯೆ ಊರಿತ್ತು. ನಾನು ‘ಲಾಸ್ಟ್ ಸ್ಟಾಪ್, ಎರಡು ಕೊಡಿ’ ಎಂದೆ. ಆತ ನಿನ್ನ ಹಕಿಕತಾ ನನಗೆ ಎಲ್ಲ ಗೊತ್ತು ಎನ್ನುವಂತೆ ವಿಚಿತ್ರವಾಗಿ ನನ್ನತ ನೋಡುತ್ತಾ ಎರಡು ಟಿಕೆಟ್ ಹರಿದು ಕೊಟ್ಟು ಮತ್ತೆ ಹಿಂದಕ್ಕೆ ಸರಿದು ಹೋದ. ಬಸ್ ನಿಧಾನಕ್ಕೆ ಒಲ್ಡ್ ಹುಬ್ಬಳ್ಳಿ ದಾಟಿ ನೇಕಾರ ನಗರದತ್ತ ಕುಂಟುತ ಸಾಗಿತ್ತು. ನೇಕಾರನಗರ ದಾಟಿ ಸ್ಲಮ್‍ನಂತಹ ಒಂದು ಪ್ರದೇಶದಲ್ಲಿ ಅವಳು ಎದ್ದು ನಿಂತಳು. ಅವಳನ್ನು ನೋಡಿ ನಾನು ಎದ್ದು ನಿಂತು ಅವಳನ್ನು ಹಿಂಬಾಲಿಸಿದೆ. ಆ ಕತ್ತಲ ರಾತ್ರಿಯಲ್ಲಿ ನಮ್ಮಿಬ್ಬರನ್ನೆ ಅಲ್ಲಿ ಇಳಿಸಿದ ಬಸ್ಸು ಮಾಯವಾಯಿತು.

ಈ ಹೊತ್ತಿನಲ್ಲಿಯೂ ಕೂಡ ಅವಳು ನನ್ನ ಪರಿಚಯವೇ ಇಲ್ಲದವಳಂತೆ ಓಡುವಂತೆ ಬಿರಿ ಬಿರಿ ನಡೆಯತೊಡಗಿದಳು. ನಾನು ಸ್ವಲ್ಪ ದೂರದವರೆಗೆ ಅವಳನ್ನು ಹಿಂಬಾಲಿಸಿದೆ. ಅವಳು ತನ್ನ ನಡಿಗೆಯ ವೇಗವನ್ನು ಹೆಚ್ಚಿಸಿದಳು. ನಾನು ಕೂಡ. ಕೊನೆಗೊಮ್ಮೆ ಸಿಡಿಮಿಡಿಯಿಂದ ನಿಂತಳು. ನಾನು ಹಿಂದೆ ಮುಂದೆ ನೋಡಿಕೊಂಡು ಅನುಮಾನಿಸುತ್ತಲೆ ಅವಳ ಹತ್ತಿರಕ್ಕೆ ಹೋದೆ. ‘ಮಾನವಂತರ ಏರಿಯಾ ಇದು. ಹಿಂಗಂತ ಗೊತ್ತಾದ್ರೆ ಜನ ನನ್ನ ಮನಿ ಮ್ಯಾಲ ಕಲ್ಲು ಒಗ್ದು ಮನಿ ಬಿಡಿಸ್ಯಾರು.  ಅಗೋ ಅಲ್ಲಿ ಕಾಣುತೈತಲ್ಲ ಸೀಟ್ ಮನೆ. ಅದೇ ನಂದು. ಈ ಕಂಬದ ಹತ್ತಿರ ನಿಂತು ಕಾಯತ್ತಿರು. ರಾತ್ರಿಯಾದ ಮ್ಯಾಲೆ ಮಗೂನ ಕಳಿಸಿಕೊಡತಿನಿ. ಅದರ ಜೊತೆ ಬಾ’ ಎಂದವಳೇ ಸರ ಸರ ಆ ಕತ್ತಲಲ್ಲಿ ಮಾಯವಾಗಿಬಿಟ್ಟಳು.

* * *

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x