ಹುಬ್ಬಳ್ಳಿಯೊಳಗ ಮಂಡೇ ಬಜಾರಕ ದೊಡ್ಡ ಹೆಸರು. ಅವತ್ತು ಸೋಮವಾರವಾದ್ದರಿಂದ ಮಂಡೇ ಬಜಾರ್‌ನತ್ತ ಹೆಜ್ಜೆ ಬೆಳೆಸಿದೆ. ಇಲ್ಲಿ ೧೦ ರೂ.ಗಳಿಗೆ ಏನಿಲ್ಲ, ಏನುಂಟು. ಒಂದೊಳ್ಳೆಯ ಅಂಗಿ, ಹವಾಯಿ ಚಪ್ಪಲಿ, ಲುಂಗಿ, ಟವೆಲ್ಲು, ಒಳ ಉಡುಪು, ಬಾಂಡೆ ಸಾಮಾನುಗಳು ಏನೆಲ್ಲವನ್ನು ಖರೀದಿಸಬಹುದು. ಆದರೆ ಇವೆಲ್ಲ ಸೆಕೆಂಡ್ ಹ್ಯಾಂಡ್‌ಗಳು, ನಿಜವಾಗಿ ಹೇಳಬೇಕೆಂದರೆ ಜಾತ್ಯತೀತತೆ ಆಚರಣೆಗೆ ಮಂಡೆ ಬಜಾರ್ ಒಂದು ಸಂಕೇತವಿದ್ದಂತೆ. ಇಲ್ಲಿನ ಒಳ ಉಡುಪುಗಳನ್ನು ಮೊದಲ್ಯಾರೋ ಧರಿಸಿರತಾರೆ. ಈಗ ಅದು ಮತ್ಯಾರ ಮೈಗೋ ಅದು ಅಂಟಿಕೊಂಡು ಅವರ ಬೆವರು ವಾಸನೆಗೆ ಹೊಂದಿಕೊಳ್ಳುತ್ತದೆ. ನಮ್ಮ ರಾಜಕಾರಣಿಗಳಿಗಿಂತ ಇಲ್ಲಿನ ವಸ್ತುಗಳನ್ನು ಖರೀದಿಸುವವರು ನಿಜವಾದ ಜಾತ್ಯತೀತರಲ್ಲವೆ ಎಂಬ ವಿಚಾರ ಹೊಳೆದು ನನ್ನ ವಿಚಾರಕ್ಕೆ ನಾನೆ ನಕ್ಕೆ.
ನಗರದ ಲೈಂಗಿಕ ಕಾರ್ಮಿಕರೆಲ್ಲ ಇವತ್ತು ಇಲ್ಲಿ ಹಾಜರಿರುತ್ತಾರೆ ಎಂದು ನನಗೆ ರಾಜನ್ ಹೇಳಿದ್ದರು. ಏಕೆಂದರೆ ಅವರು ಈ ವಾರದ ವೈವಿಧ್ಯಮಯ ಬಣ್ಣದ, ಮಿಂಚುಳ್ಳ, ಅತ್ಯಾಕರ್ಷಕ ಉಡುಪುಗಳನ್ನು, ಅವುಗಳಿಗೆ ಒಪ್ಪುವ ಬ್ರಾ, ಚಡ್ಡಿ, ಹೇರ್‌ಪಿನ್ನು, ಟಿಕಳಿ, ಪೌಡರು, ಹೇರ್‌ಬ್ಯಾಂಡು, ಲಿಪ್‌ಸ್ಟಿಕ್, ಮುಂತಾದವುಗಳನ್ನು ಕೊಳ್ಳಬೇಕಿರುತ್ತದೆ. ಮುಂದಿನ ಒಂದು ವಾರಕ್ಕಾಗುವಷ್ಟು. ಸಾಮಾನ್ಯವಾಗಿ ಇಷ್ಟೆಲ್ಲ ಕೊಂಡರೂ ಸೈತ ಮುಂದಿನ ವಾರಕ್ಕ ಮತ್ತೆ ಅವರು ಇಲ್ಲಿಗೆ ಹಾಜರಿರುತ್ತಾರ. ಅಲ್ಲಿನ ಕೆಲವು ವಸ್ತುಗಳು ನನ್ನನ್ನು ಕೂಡ ಆಕರ್ಷಿಸಿದ್ದರಿಂದ ನಾನು ಅವುಗಳನ್ನು ನೋಡುತ್ತ ಅಡ್ಡಾಡತೊಡಗಿದೆ.
ಹೀಗೆ ಎಲ್ಲವನ್ನು ಕೊಳ್ಳಲು ಅಲ್ಲಿಗೆ ನಗರದಲ್ಲಿರುವ ಲೈಂಗಿಕ ಕಾರ್ಯಕರ್ತರೆಲ್ಲ ಬರಲೇಬೇಕು ಎಂದಿದ್ದರಿಂದ ನಾನು ಅಲ್ಲಿ ಸ್ವಲ್ಪ ಹೊತ್ತಿನವರೆಗೆ ಕಾಯಕೋತ ಕುಳಿತೆ. ನನ್ನ ಮುಂದೆಯೇ ನನಗೆ ತಾಗಿಕೊಂಡು ಒಂದಿಬ್ಬರು ಭಿಕ್ಷುಕಿಯರು ಹಾಯ್ದು ಹೋದರು. ಆ ಭಿಕ್ಷುಕಿಯರ ಹಿಂದೆ ಒಂದಿಬ್ಬರು ಹಳ್ಳಿಯ ಶ್ರೀಮಂತ ಯುವಕರು ಅದೆನನ್ನೋ ತಮಾಷೆ ಮಾಡುತ್ತಾ ಕಿಸಿ ಕಿಸಿ ನಕ್ಕೋತ ಬೆನ್ನು ಬಿದ್ದಿದ್ದರು. ಅಯ್ಯೊ ಪಾಪ ಭಿಕ್ಷುಕ ಹುಡಿಗಿಯರು, ಅವರನ್ನು ಬಿಡತಾ ಇಲ್ಲ ಈ ಹುಡುಗ್ರು. ಅವರನ್ನು ಈ ಹುಡುಗರಿಂದ ಹೇಗಾದರೂ ಮಾಡಿ ಉಳಸಬೇಕು ಎಂಬ ಹವಣಿಕೆಯಲ್ಲಿ ನಾನು ಅವರ ಬೆನ್ನತ್ತಿದೆ. ಹುಡುಗಿಯರು ನಿಧಾನಕ್ಕೆ ಅಲ್ಲಿಂದ ಒಂದು ಸಂದಿಯೊಳಕ್ಕೆ ಹೊಕ್ಕರು. ಆ ಸಂಧಿಯ ಗೇಟ್‌ವರೆಗೆ ಹೋದ ಹುಡುಗರು ಆ ಸಂಧಿಯೊಳಕ್ಕೆ ಹೋಗಬೇಕೋ ಬೇಡವೋ ಎಂದು ಅನುಮಾನಿಸುತ್ತಿರುವಾಗ ಆ ಸಂದಿಯಿಂದ ಭಿಕ್ಷುಕಿ ಹುಡುಗಿಯೊಂದಿಗೆ ಇದ್ದ ಹೆಣ್ಣುಮಗಳು ಹಣಕಿ ಹಾಕಿದಳು. ಬಹುಶಃ ಈ ಕಾಮುಕರು ಬೆನ್ನು ಬಿದ್ದಿದ್ದಾರೆಯೇ ಎಂದು ನೋಡಲು ಇರಬಹುದೆಂದು ನಾನು ಹೇಗಾದರೂ ಆ ಸಂದಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಿಕ್ಷುಕರನ್ನು ರಕ್ಷಿಸಬೇಕೆಂದು ವೇಗವಾಗಿ ಆ ಸಂದಿಯತ್ತ ಸಾಗಿದೆ. ನನ್ನ ಮುಂದೆಯೆ ಆ ಹುಡುಗರಿಬ್ಬರು ಸಂದಿಯೊಳಗೆ ಪ್ರವೇಶಿಸಿದರು. ನಾನು ಅವಸರವಾಗಿ ಬಂದು ಸಂದಿಯೊಳಗ ಹಣಕಿ ಹಾಕ್ದೆ.
ಆಶ್ಚರ್ಯ ಅಂದ್ರ ಆ ಸಂದಿಯಲ್ಲಿ ಬಾಗಿಲು ಹಾಕಿರುವ ಮನೆಯ ಮುಂದೆ ಹೆಂಗಸು ಮತ್ತು ಆತ ಎದುರು ಬದುರಾಗಿ ನಿಂತು ಮಾತಾಡುತ್ತಿದ್ದರು. ಅವರಿಗೆ ಹತ್ತಿರದಲ್ಲಿಯೆ ನಿಂತಿರುವ ಹುಡುಗಿ ಕಿಸಿ ಕಿಸಿ ಎಂದು ಹಲ್ಲು ಕಿಸಿಯುತ್ತ ನಿಂತಿದ್ದಾಳೆ. ಆಕೆ ಕೈ ಬೆರಳುಗಳಲ್ಲಿ ಏನನ್ನೋ ಸೂಚಿಸುತ್ತಿದ್ದಾಳೆ. ಇಬ್ಬರಲ್ಲಿ ಒಬ್ಬಾತ ಆಕೆಯ ಬೆರಳಂಕಿ ಜಾಸ್ತಿಯಾಯಿತೆಂದು ತನ್ನ ಕೈಗಳ ಒಂದೆರಡು ಬೆರಳು ಮಡಚಿ ಅಷ್ಟಕ್ಕೇ ಎಂದು ಗೋಗರೆಯುತ್ತಿದ್ದಾನೆ. ಆ ಹೆಂಗಸು ಆಗಲ್ಲ ಎಂದು ಖಡಾ ಖಂಡಿತ ಮುಖಭಾವ ತೋರುತ್ತಿದ್ದಾಳೆ. ಭಿಕ್ಷುಕ ವೇಷದಲ್ಲಿರುವ ವೇಶ್ಯೆಯರೆಂದು ನನಗೆ ಮನವರಿಕೆಯಾಗಿ, ಹೀಗೂ ನಡಿತಾ ಇದೆಯಾ ಎಂದು ಗಾಬರಿಯಾಗಿ ಅವರ ಹಾವಭಾವಗಳನ್ನು ಗಮನಿಸುತ್ತಾ ನಿಂತಿರಬೇಕಾದರೆ,
’ಯೋಯ್ ಇಲ್ಲೇನ ಮಾಡಾಕ ಹತ್ತಿರಿ’ ಎಂದು ನನ್ನ ಬೆನ್ನ ಹಿಂದೆ ಶಬ್ದ ಅಪ್ಪಳಿಸಿದ್ದರಿಂದ ಗಾಬರಿಯಾಗಿ ಹಿಂತಿರುಗಿ ನೋಡಿದರೆ ಒಂದಿಬ್ಬರು ಹುಡುಗರು ನಿಂತುಕೊಂಡಿದ್ದರು. ಅಷ್ಟರಲ್ಲಾಗಲೆ ನಮ್ಮ ಮುಂದೆ ನಿಂತಿದ್ದ ಹುಡುಗಿ ಮತ್ತು ಹೆಂಗಸು ನನ್ನ ಬೆನ್ನನ್ನೆ ಸವರಿಕೊಂಡು ಹೋಗಿ ತಪ್ಪಿಸಿಕೊಂಡರು. ಆದರೆ ಬಿಳಿ ಕಾಲರಿನ ಯುವಕರಿಬ್ಬರು ಸಿಕ್ಕಿಕೊಂಡರು. ’ಮಕ್ಕಳ, ನಮ್ಮ ಮನಿ ಮುಂದ ಸೂಳಿಗಾರಿಕಿ ಮಾಡ್ತಿರಿ. ಹಡಿಬಿಟ್ಟಿ ಸೂ…ಮಕ್ಕಳ’ ಅಂತ ಆ ಹುಡುಗರು ಈ ಹಳ್ಳಿ ಯುವಕರ ಮುಖಗಳಿಗೆ ಗುದ್ದತೊಡಗಿದರು. ಅವರು ಒಂದ್ನಿಮಿಷ ಎಂದರೂ ತಡೆಯದೆ ಮತ್ತೆ ಮತ್ತೆ ಗುದ್ದತೊಡಗಿರು. ಅದರಲ್ಲಿ ಒಬ್ಬ "ಸಾರ್ ನಾವು ಪ್ರೆಸ್‌ನೊರು ಇವರ ಬಗ್ಗೆ ಒಂದು ಕತೆ ಬರಿಬೇಕಂತ ಹಿಂಗ ಮಾತಾಡಸಿಕೋತ ನಿಂತಿದ್ದೆವು ಎಂದು ತನ್ನ ಪ್ರೆಸ್ ಕಾರ್ಡ್ ತೆಗೆದು ತೋರಿಸಿದ. "ನಿಮಂಥರೊನ ಕಂಡೀನಿ ಹೋಗಲೆ ಪೆಪರ್‍ದೋರ ಆದ್ರು ನಿವೇನು ಮೇಲಿಂತ್ರ ಉದುರಿ ಬಿದ್ದಿರಂಗಿಲ್ಲ. ಸರಳ ಇಲ್ಲಿಂದ ಜಾಗ ಖಾಲಿ ಮಾಡ್ರಿ" ಎಂದು ಅವರನ್ನು ದಬ್ಬುತ್ತಲೆ ಹೊರ ಹಾಕಿದರು.
* * *
ನಾನು ಅಲ್ಲಿಂದ ದುರ್ಗದ ಬೈಲಿನತ್ತ ಹೆಜ್ಜೆ ಹಾಕಿದೆ. ದುರ್ಗದ ಬೈಲಿನ ರಸ್ತೆಯಲ್ಲಿ ಒಬ್ಬ ಹುಡುಗ ಮತ್ತು ಆತನ ಆಜು ಬಾಜುವಿನಲ್ಲಿ ಜೋರಾಗಿ ಜಗಳ ಮಾಡಿಕೊಂಡು ಬರುತ್ತಿರುವ ಇಬ್ಬರು ಹುಡುಗಿಯರು ಕಂಡರು. ಸ್ವಲ್ಪ ನೋಡಲಿಕ್ಕೆ ಚೆನ್ನಾಗಿರುವ ಮಾಸಲು ಚೂಡಿದಾರ ಅದರ ಮೇಲೊಂದು ಅಷ್ಟೇ ಮಾಸಿದ ತುಂಬು ತೋಳಿನ ಸ್ವೇಟರ್ ತೊಟ್ಟಿರುವ ಹುಡುಗಿ ಆ ಹುಡುನೊಂದಿಗೆ ನೇರವಾಗಿ ಜಗಳಕ್ಕಿಳಿದಳು. ಅವರೊಂದಿಗೆ ಇದ್ದ ಹರಕಲು ಸೀರೆಯುಟ್ಟಿದ್ದ ಹೆಂಗಸೊಬ್ಬಳು ಇಬ್ಬರನ್ನು ಸಮಾಧಾನಿಸಲು ನೋಡುತ್ತಿದ್ದಳು. ನೋಡು ನೋಡುತ್ತಿದ್ದಂತೆ ಅವರ ಜಗಳ ವಿಕೋಪಕ್ಕೆ ಹೋಗುತ್ತದೆ ಎಂದು ನನಗೆ ಭಾಸವಾಯಿತು. ನಾನು ಅವರ ಹತ್ತಿರ ಚಲಿಸಿದೆ. ಅವನು ಪಕ್ಕದಲ್ಲಿದ್ದ ಚೂಪುಗಲ್ಲೊಂದನ್ನು ತೆಗೆದು ಅವಳ ಮುಖ ಜಜ್ಜಲು ಹವಣಿಸಿದಾಗ ಆ ಹುಡುಗಿ ತಪ್ಪಿಸಿಕೊಂಡು ಓಡಿ ಹೋದಳು.
ಆತ ಕೂಡ ಅವಳ ಬೆನ್ನು ಬಿದ್ದು ಕೂದಲು ಹಿಡಿದು ಎಳೆದಾಡತೊಡಗಿದ. ಅದು ಮಾರುಕಟ್ಟೆಯಾದ್ದರಿಂದ ಸುತ್ತಲಿದ್ದ ಜನ ಇವರ ಜಗಳವನ್ನು ಗಮನಿಸುತ್ತಲೇ ಇದ್ದರು. ಆ ಹುಡುಗಿಯ ಕೈಯನ್ನು ಹಿಂಬರಕಿ ತಿರುಗಿಸಿ ಹಿಡಿದು ಆತ ಆಕೆಯ ಮುಖ ಮೋತಿಯನ್ನದೆ ಜಜ್ಜತೊಡಗಿದ. ಆ ಹುಡುಗಿ ಕುಸಿದು ಬಿದ್ದ ಜೋರಾಗಿ ಚೀರಿದಳು. ಆತ ಅವಳ ಚಿರುವಿಕೆಯ ಮೂಲ ಶಬ್ದ ಬರುತ್ತಿದ್ದ ಹೊಟ್ಟೆಯೆಡೆ ಜೋರಾಗಿ ಕಾಲು ಬೀಸಿ ಒದ್ದ. ಈ ಸಲ ಹುಡುಗಿ ಸ್ವಲ್ಪ ಮೀಸುಕಾಡಿದಂತೆ ಮಾಡಿ ಅಲ್ಲಿಯೆ ಮಲಗಿಬಿಟ್ಟಳು. ಅದೆ ದಾರಿಯಲ್ಲಿ ನಾಲ್ಕಾರು ಕಾಲೇಜು ಹುಡುಗರು ಹೋಗುತ್ತಿದ್ದರು. ಇದನ್ನೋಡಿದ ಅವರಿಗೆ ಸುಮ್ಮನಿರಲಾರದೆ ಓಡಿ ಬಂದು ಆ ಹುಡುಗನನ್ನು ಎಳೆದೊಗೆದು ಅವನ ಮೆದು ಜಾಗ ನೊಡಿ ಒದೆಯ ತೊಡಗಿದರು. ಅವರ ಒದೆತದಿಂದ ತಪ್ಪಿಸಿಕೊಂಡ ಮೇಲೆದ್ದ ಹುಡುಗ ’ನಿಮ್ಮೌರ ನನ್ನ ಹೆಂತಿ ನಾನು ಒದ್ರ ನಿಮಗೇನ ಆತೋ ಮಕ್ಕಳ ದಾಡಿ’ ಎಂದು ಆತ ಕುಡಿದ ಮತ್ತಿನಲ್ಲಿಯೆ ಚೀರಿದ. ಹುಡುಗರಿಂದ ಮತ್ತೊಂದೆರಡು ಒದೆತ ಬಿದ್ದವು. ಅತ್ತಕಡೆ ಆ ಹುಡುಗಿಗೆ ಯಾರೋ ನೀರು ತಂದು ಕುಡಿಸಿದರು. ಮತ್ಯಾರೋ ಅವಳ ಒಡೆದ ತಲೆಗೆ ಪ್ರಥಮೋಪಚಾರ ನಡೆಸಿದ್ದರು.
ಆ ಹುಡುಗನ ತುಟಿಯಿಂದ ರಕ್ತ ಸೋರತೊಡಗಿತು. ಹುಡುಗ ಈಗ ಮೆತ್ತಗಾಗಿದ್ದ. ಅವನ ತುಟಿಯಿಂದ ಕೂಡ ರಕ್ತ ಒಸರುತ್ತಿತ್ತು. ಅಯ್ಯೋಯ್ಯೋ ಬಿಡ್ರೆಪೋ ನಿಮಗ ಕೈ ಮುಗಿತೀನಿ. ನನ್ನ ಹೆಂತಿ ನಾನು ಹೊಡೀಲಿಕ್ಕೂ ಬಿಡವಲ್ರಲ್ಲಪೋ ಎಂದು ನರಳುತ್ತಾ ಚೀರಿದರೂ ಹುಡುಗರ ಒದೆತಗಳು ನಿಂತಿರಲಿಲ್ಲ. ಸ್ವಲ್ಪ ಎಚ್ಚರಗೊಂಡಿದ್ದ ಆಕೆ ಕಷ್ಟಪಟ್ಟು ಸುತ್ತಮುತ್ತಲು ತನ್ನ ಕಣ್ಣುಗಳನ್ನು ಹರಿಬಿಟ್ಟಳು. ನೋಡಿದರೆ ಅಲ್ಲಿ ಆ ಹುಡುಗನಿಗೆ ಒದೆತ ಬೀಳುವುದು ಕಾಣಿಸುತ್ತಿದೆ. ತನ್ನ ಆರೈಕೆ ನಡೆಸಿದ್ದವರಿಂದ ಕೊಸರಿಕೊಂಡು ಆ ಒದೆಸಿಕೊಳ್ಳುತ್ತಿರುವ ಹುಡಗನ ಹತ್ತಿರ ಬರುವ ಆಕೆ ಅವನ ಮೇಲೆ ಡಬ್ಬ ಬಿದ್ದು ತಾನೂ ಕೂಡ ಒದೆತ ತಿಂದು ಒದೆಯುವವರಿಗೆಲ್ಲ ಕೈ ಮುಗಿದು ಬೇಡಿಕೊಂಡು ಅವರಿಂದ ಬಿಡಿಸಿಕೊಂಡ್ಳು. ಈಗಾಗಲೆ ಒದ್ದು ಒದ್ದು ಸಾಕಾಗಿದ್ದ ಹುಡುಗರು ಆ ಹುಡುಗನ ಮುಖಕ್ಕೆ ಥೂ ಎಂದು ಉಗಿದು ಅಲ್ಲಿಂದ ಕಾಲ್ಕಿತ್ತರು. ಅವರು ದೂರ ಹೋದ ಮೇಲೆ ಮೇಲೆಬ್ಬಿಸಿಕೊಂಡು ನಗರದ ರೈಲು ನಿಲ್ದಾಣದತ್ತ ಅವನ ಕೈ ಹಿಡಿದು ನಡೆಸಿಕೊಂಡು ಹೋದ್ಲು. ನನಗೆ ಇದು ಕೂತಹಲಕಾರಿ ಎನಿಸಿದ್ದರಿಂದ ನಾನು ಕೂಡ ಅವರನ್ನು ದೂರದಲ್ಲಿ ಹಿಂಬಾಲಿಸಿದೆ.
ಮುಖ್ಯ ರೈಲು ನಿಲ್ದಾಣವಿನ್ನೂ ದೂರವಿರುವಾಗಲೆ ರೈಲು ಹಳಿಗಳನ್ನು ದಾಟಿ ಜನ ವಿರಳವಾಗಿರುವ ತಾವು ವಾಸಿಸುವ ಪ್ರದೇಶಕ್ಕೆ ಕರಕೊಂಡು ಮುನ್ನಡೆದಳು. ನಾನು ಹಿಂಬಾಲಿಸುತ್ತಲೆ ಇದ್ದೆ. ಅಲ್ಲಿ ಯಾವ್ಯಾವದೋ ಯೋಜನಾ ಉದ್ದೇಶಕ್ಕಾಗಿ ಕಟ್ಟಲುದ್ದೇಶಿಸಿ, ಆದರೆ ಕಟ್ಟಲಾರದೆ ಅರ್ಧಗೊಂಡಿರುವ ಕಟ್ಟಡಗಳು, ಅವುಗಳ ಪಕ್ಕ ಎಂದೋ ಕಟ್ಟಿ ಇಂದು ಪಾಳು ಬಿದ್ದಿರುವ ಹಳೆ ಮನೆಗಳು. ಈ ಮನೆಗಳ ಕಿಡಕಿಗಳಿಗೆ ಹಗ್ಗ ಕಟ್ಟಿಕೊಂಡು ಆ ದಾರಕ್ಕೆ ಹಳೆಯ ಸೀರೆ ಹೊಚ್ಚಿ ನಿರ್ಮಿಸಿರುವ ಗೂಡುಗಳು, ತೆಂಗಿನಗರಿ, ಮುರಕಲು ಕಟ್ಟಿಗೆಯ ಪಳಿಗಳಿಂದ ಮೇಲು ಹೊದಿಕೆ, ಬಾಗಿಲು ತಡಿಕೆಗಳಿಂದ ಮೇಲೆದ್ದಿರುವ ಗುಡಿಸಲುಗಳ ಒಂದು ಲೋಕವೆ ನನ್ನ ಮುಂದೆ ತೆರೆದುಕೊಂಡಿತು. ಆದರೆ ಇದು ಸುಡು ಮಧ್ಯಾಹ್ನವಾದ್ದರಿಂದ ಅಲ್ಲಿ ಗುಡಿಸಲೊಳಗೆ ಅಳುವ, ಮತ್ತ ಹೊರಗೆ ಆಡುವ ಮಕ್ಕಳು, ಅಲ್ಲಲ್ಲಿ ಗೂರು ಮುದುಕರನ್ನು ಬಿಟ್ಟರೆ ಅಲ್ಲಿ ಮತ್ಯಾರು ಕಾಣಲಿಲ್ಲ. ಆ ಗುಡಿಸಲುಗಳ ಅಂಗಳದ ಮೂಲೆಯ ಕೊನೆಯ ಸಾಲಿನಲ್ಲಿರುವ ಗುಡಿಸಲಿನೊಳಗೆ ಹೊಕ್ಕು ಹುಡುಗಿ ನೀರು ತಂದು ಅವನಿಗೆ ಕುಡಿಸಿದಳು. ಇಬ್ಬರು ಸುಧಾರಿಸಿಕೊಂಡು ಮತ್ತೆ ಏನನ್ನೊ ಮಾತಾಡಿಕೊಳ್ಳುತೊಡಗಿದರು. ಅಷ್ಟರಲ್ಲಿ ಜಗಳ ಪ್ರಾರಂಭವಾಗಿ ಆತ ಆಕೆಯ ಕೂದಲು ಹಿಡಿದು ಎಳೆದಾಡಿ ಬಡಿಯತೊಡಗಿದ. ಮೊದಲೆಲ್ಲ ಚೀರಾಡಿ ಕೊಸರಿಕೊಳ್ಳಲು ಹವಣಿಸುವ ಹುಡುಗಿ ಕೊನೆಗೆ ಉಪಾಯಗಾಣದೆ ಅಲ್ಲಿಯೆ ಬಿದ್ದಿದ್ದ ಕಲ್ಲು ತೆಗೆದು ಅವನ ತಲೆಗೆ ಚಚ್ಚಿಯೇಬಿಟ್ಟಳು. ಆ ಹುಡುಗ ಜೋರಾಗಿ ಚೀರಿ ಅಲ್ಲಿಯೆ ಒರಗಿಕೊಂಡ ಇದು ಮುಗಿಯದ ಯುದ್ಧವೆನಿಸಿದ್ದರಿಂದ ನಾನು ಮತ್ತೆ ಬಸ್ ನಿಲ್ದಾಣದತ್ತ ಮುಖ ಮಾಡಿದೆ.
* * *
ಬಸ್ ನಿಲ್ದಾಣದಲ್ಲಿ ಅಲ್ಲಲ್ಲಿ ಕೆಲವು ಸೀಟುಗಳಲ್ಲಿ ಹೆಣ್ಣುಮಕ್ಕಳು, ಮಕ್ಕಳು, ಮುದುಕರು, ಹುಡುಗರಿಂದ ತುಂಬಿಕೊಂಡಿದ್ದವು. ಅದು ಕಾಲೇಜು ಬಿಡುವ ಸಮಯವಾದ್ದರಿಂದ, ಹಳ್ಳಿಗಳ ಕಾಲೇಜು ಹುಡುಗ ಹುಡುಗಿಯರು ತಮ್ಮೂರಿನ ಬಸ್ಸಿಗಾಗಿ ಕಾಯಕೋತ ಹರಟೆ ಹೊಡಕೋತ ಕುಂತಿದ್ರು. ಬಸ್ ನಿಲ್ದಾಣವೆ ಲೈಂಗಿಕ ಕಾರ್ಯಕರ್ತರ ಕೇಂದ್ರ ಸ್ಥಾನ ಅಂತ ರಾಜನ್ ಸರ್ ಹೇಳಿದ್ದು ನೆನಪಾಯಿತು. ಇಷ್ಟೊಂದು ಜನರಲ್ಲಿ ಸೂಳ್ಯಾರ್‍ಯಾರು, ಗರತಿಯರಾರು ಅಂತ ಕಂಡು ಹಿಡಿಯುವುದೇ ಬಹಳ ಕಷ್ಟದ ಕೆಲಸ. ಸಾಮಾನ್ಯವಾಗಿ ಲೈಂಗಿಕ ದಂಧೆಯಲ್ಲಿರೋರು ಅಗ್ಗದ ಸೀರೆ, ಅದಕೊಪ್ಪುವ ಮಾಸಿದ ಜಂಪರು, ಕೊರಳಲ್ಲಿ ಜೋಗೇರ ಅಂಗಡಿಯಲ್ಲಿ ತೊಗೊಂಡ ತಾಮ್ರದ ತಾಳಿ, ಕಾಲಲ್ಲಿ ಹವಾಯಿ ಚಪ್ಪಲಿ, ತಲೆಗೆ ಯಾವಾಗಲೂ ಮುಡಿದ ಹೂ, ಬಾಯಲ್ಲಿ ಎಲೆಯಡಿಕೆಯ ಪೀಚಕಾರಿ ತುಂಬಿಕೊಂಡು ಬಜಾರಿ ತರಹ ಕಾಣ್ತಿರ್‍ತಾರೆ ಅಂತ ನನ್ನ ಅಭಿಪ್ರಾಯವಾಗಿತ್ತು. ಆದ್ರ ಈ ಪಟ್ಟಣಗಳಲ್ಲಿ ಎಲ್ಲರೂ ಒಂದೇ ತರಹ ಕಂಡದ್ದರಿಂದ ನಾನು ಬೆಪ್ಪಾಗಿ ಅವರನ್ನು ಗಮನಿಸುತ್ತಾ ನಿಂತಿದ್ದೆ. ಒಳ್ಳೆಯ ಬಟ್ಟೆ ಹಾಕಿಕೊಂಡವರು ಸೂಳೆಯರಂತೆ ಮತ್ತು ಕೊಳಕು ಬಟ್ಟೆ ಹಾಕಿಕೊಂಡವರಲ್ಲಿ ಕೆಲವರು ಗರತಿಯರಂತೆ ಗೋಚರವಾಗಿ ಎಲ್ಲವೂ ಕಲಸುಮಲಸು ಆಗಿ ಒಳಗೊಳಗೆ ನಗುವಂತಾಯಿತು. ಭಿಕ್ಷುಕಿಯ ಪ್ರಸಂಗ ನೆನಪಿನ ಪಟಲದಲ್ಲೊಮ್ಮೆ ಹರಿದು ಹೋಯಿತು.
ನನ್ನ ಮುಂದೆಯೇ ಮಧ್ಯವಯಸ್ಕಳೊಬ್ಬಳು ಸುಳಿದಾಡತೊಡಗಿದಳು. ನಾನು ಅಕೆಯತ್ತ ಗಮನಿಸಿಯೂ ಗಮನಸಿದಂತೆ ಕಳ್ಳು ನೋಟ ನೋಡುತ್ತ ಕುಳಿತಿದ್ದೆ. ಹಳದಿ ಹೂವಿನ ಬಣ್ಣದ ಸೀರೆ, ಅದಕ್ಕೊಪ್ಪುವ ಜಂಪರ್ ತೊಟ್ಟಿದ್ದ ಆಕೆ ನೊಡಲೇನು ಆಕರ್ಷಕವಾಗಿಯೇ ಕಂಡಳು. ತನ್ನ ವಾರೆನೋಟದಿಂದ ನನ್ನ ಕಳ್ಳನೋಟವನ್ನೆ ಸಮ್ಮತಿಯೆಂದು ತಿಳಿದುಕೊಂಡ ಆಕೆ, ಕಣ್ಣಿನಲ್ಲಿಯೆ ಬಾ ಎಂದು ಸನ್ನೆ ಮಾಡತೊಡಗಿದಳು. ನಾನು ಗಿರಾಕಿಯಲ್ಲ ನಿಮ್ಮ ಬಗ್ಗೆ ತಿಳಿದುಕೊಳ್ಳಲು ಬಂದವನೆಂದೂ ಹೇಗೆ ಹೇಳೋದು. ಹೆಂಗೊ ಪಕ್ಕಕ್ಕೆ ಕರಿತಾ ಇದ್ದಾಳೆ. ಇವಳನ್ನ ಮಾತಾಡಿಸಿ ಸ್ವಲ್ಪ ವಿಷಯ ಸಂಗ್ರಹಿಸಿದರಾಯಿತೆಂದು ನಾನು ಅವಳ ಬೆನ್ನು ಹತ್ತಿದೆ. ನನ್ನತ್ತ ಹಿಂದಿರುಗಿ ನೋಡುತ್ತಲೇ ನಾನು ಹಿಂಬಾಲಿಸುತ್ತಿದ್ದೇನೆಂಬುದನ್ನು ಖಾತ್ರಿ ಮಾಡಿಕೊಳ್ಳುತ್ತಾ ಬಸ್ ನಿಲ್ದಾಣದ ಹೊರಗೆ ಬಂದ ಆಕೆ ನೇರವಾಗಿ ಆಟೋದ ಹತ್ತಿರ ಹೋಗಿ ನಿಂತಳು. ನಾನು ನಿಧಾನಕ್ಕೆ ಅವಳನ್ನು ಹಿಂಬಾಲಿಸಿದೆ. ಆಟೋದಲ್ಲಿ ಕುಳಿತೆ. ಅವಳು ಪಕ್ಕದಲ್ಲಿ ಬಂದು ಕುಳಿತಳು. ಅದೆಲ್ಲಿಂದಲೋ ಇನ್ನೊಬ್ಬಳು ಬಂದು ಕುಳಿತಳು.
ನನಗೆ ಯಾಕೋ ಹೆದರಿಕಿ ಆಗಾಕ ಹತ್ಯು. "ನೀವ್ಯಾರು" ಎಂದೆ
’ಇವರು ನಮ್ಮ ಆಂಟಿ’ ಎಂದಳು ಮೊದಲಿನ ಹುಡುಗಿ ಸ್ವಲ್ಪ ಬಿಂಕದಿಂದ.
ನಾನು ಸುಮ್ಮನೆ ಕುಳಿತಿದ್ದೆ. ಸ್ವಲ್ಪ ದೂರ ಅಟೊ ಚಲಿಸಿರಬೇಕು.
’ರೊಕ್ಕ ತೆಗಿ’ ಆಂಟಿ ಎಂದು ಕರೆಯಲ್ಪಟ್ಟಿದ್ದ ಹೆಂಗಸು ಗಡಸು ಧ್ವನಿಯಲ್ಲಿ ಹೇಳಿದಳು.
’ಯಾಕ’ ಅಂದೆ ನಾನು.
’ಅಯ್ಯ, ಯಾಕ ಅಂತಿಯಲ್ಲ ಗಂಡಸ ಹೌದ ಅಲ್ಲ. ನಮ್ಮ ಹುಡಿಗಿ ಕಂಪೆನಿ ಬೇಕಂದ್ರ ರೊಕ್ಕ ತಗಿ ಲಗೂನ’
ನಾನು ಇದ್ದಬಿದ್ದ ದೈರ್ಯ ಒಗ್ಗೂಡಿಸಿಕೊಂಡು ’ಲಾಡ್ಜಿನೊಳಗ ಕಂಪನಿ ತುಗೊಂಡ ಮ್ಯಾಲ ಕೊಡತೇನಿ’ ಅಂದೆ.
’ಅಲ್ಲೆಲ್ಲಾ ರೊಕ್ಕದ ವ್ಯವಹಾರ ಮಾಡಾಕ ಆಗೂದಿಲ್ಲ. ಅದೆಲ್ಲ ಇಲ್ಲೆ ಆಟೋದೊಳಗ ಆಗಬೇಕು. ತೆಗಿ ತೆಗಿ ಲಗೂನ’ ಎಂದು ಜೋರು ಮಾಡಿದಳು.
ನಾನು ಹಟದಿಂದ ’ಇಲ್ಲಾ ನಾ ಇಲ್ಲಿ ಕೋಡೋದಿಲ್ಲ’ ಅಂದೆ.
’ಏ ಡ್ರೈವರ್, ಆಟೋ ಸೈಡಿಗೆ ಹಾಕಪಾ’ ನನ್ನ ಹಟವನ್ನು ಮೀರಿಸುವಂತೆ.
ಅವಳ ಮುಖದ ಮ್ಯಾಲ ಒಂದ ಥರಾ ನಗು ಮಿಸುಕಾಡುತ್ತಿತ್ತು.
ಮೊದಲಿನ ಆ ಸುಂದರ ಹುಡುಗಿ ಇದಕ್ಕೂ ನನಗೂ ಏನೂ ಸಂಬಂಧ ಇಲ್ಲ ಅನ್ನುವಂಗ ತುಟಿಮ್ಯಾಲ ಒಂದು ತೆಳು ನಗು ಮೂಡಿಸಿಕೊಂಡು ಸುಮ್ಮನ ಕುಳಿತಿದ್ಲು.
ಇನ್ನು ನನಗೆ ಉಳಿದವನೆಂದರೆ ಇಲ್ಲಿಯವರೆಗೆ ನಮ್ಮ ನ್ಯಾಯ ನೋಡುತ್ತಿದ್ದ ಆಟೋ ಡ್ರೈವರ್ ಒಬ್ಬನೇ. ಅವನೆ ಆ ಹೆಂಗಸರಿಗೆ ಬುದ್ಧಿ ಹೇಳಾಕ ನನ್ನ ಪರ ವಕಾಲತ್ತು ವಹಿಸತಾನ ಅಂತ ಅನಕೊಂಡಿದ್ದೆ ನಾ.
ಆದ್ರ ನಾ ಅನಕೊಂಡಿದ್ದು ಉಲ್ಟಾ ಹೊಡಿತು.
ಡ್ರೈವರ್ ಅವಳ ಮಾತಿಗೆ ಕಾಯುತ್ತಿದ್ದವನಂತೆ, ಗೇರು ಬದಲಾಯಿಸಿಕೊಂಡು ಪಕ್ಕಕ್ಕೆ ತರುಬಿ ನನ್ನತ್ತ ನೋಡಿ ’ಏ ಬೋಸುಡಿ ಮಗನ, ನಾನು ಆವಾಗಿನಿಂದ ನೋಡಾಕ ಹತ್ತೇನಿ, ಸರಳ ರೊಕ್ಕ ಹೊರಗ ತೆಗಿ’ ಎಂದು ಜೋರು ಮಾಡಿದ.
ನನಗೆ ನಿಜಕ್ಕೂ ಭಯವಾಗಿ ’ಇಲ್ಲಿ ಯಾಕ ರೊಕ್ಕ ಕೊಡಬೇಕು. ನಾನು ಲಾಡ್ಜೊಳಗ ರೊಕ್ಕ ಕೊಡತೆನಿ’ ಅಂದೆ.
’ಯಾಕಂತಂದ್ರ, ಆ ಹುಡುಗ್ಯಾರ ಪಕ್ಕ ಕುಂತ ಇಷ್ಟೊತನ ಅವರ ಕೂಡ ಚಕ್ಕಂದ ಹೊಡದೆಲ್ಲ ಅದಕ್ಕ’ ಅಂದ ಅಷ್ಟೆ ಜೋರಾಗಿ. ’ನೋಡ್ರಿ ಕರೆ ಹೇಳಬೇಕಂದ್ರ ನಾನು ಆ ತರಹದೋನು ಅಲ್ಲ. ನಾನು ಸೂಳೆಯರ ಪರ ಕೆಲಸ ಮಾಡೋ ಒಂದು ಸಂಸ್ಥೆಯೋನು’ ಎಂದು ಕಡೆಯ ದಾಳ ಎಸೆದೆ. ನನಗೆ ಅವರಿಂದ ಪಾರಾದರೆ ಸಾಕಾಗಿತ್ತು.
’ಅಕ್ಕಾ, ಎಲ್ಲಾ ಬೋ.. ಮಕ್ಕಳು ಸಿಕ್ಕಹಾಕ್ಕೊಂಡ ಮ್ಯಾಲ ಹಿಂಗ ಹೇಳ್ತಾರ. ಇಂವ ಹಿಂಗ ಚಲೋ ಮಾತಿನೊಳಗ ಹೇಳಿದರ ಕೇಳೋ ಹಂಗ ಕಾಣುದಿಲ್ಲ. ನಾನು ಹಿಂದ ಬರತೇನಿ ತಡಿ’ ಎಂದು ತನ್ನ ಡ್ರೈವರ ಸೀಟಿನಿಂದ ಇಳದು ನನ್ನ ಕಡೆ ಬಂದ. ಈ ಸಲವಂತೂ ನನಗೆ ನಿಜಕ್ಕೂ ಭಯವಾಗಿ ಆಟೋದ ಬಲಗಡೆಯ ಸಂಧಿಯಿಂದ ಪಾರಾಗಲು ನೋಡಿದೆ. ಆದರೆ ನನ್ನ ಪಕ್ಕದಲ್ಲಿ ಕುಳಿತಿದ್ದ ಆ ಬಿಂಕದ ಹುಡುಗಿ ಗಟ್ಟಿಯಾಗಿ ನನ್ನ ಕಾಲರ್ ಹಿಡಿದುಕೊಂಡಿದ್ದಳು. ಆತ ಬಂದು ನೇರವಾಗಿ ನನ್ನ ಜೇಬಿಗೆ ಕೈ ಹಾಕಿ ನೋಟು ತೆಗೆದುಕೊಂಡ. ಇಬ್ಬರು ಹೆಂಗಸರು ನನ್ನ ಪ್ಯಾಂಟಿನ ಜೇಬುಗಳನ್ನು ತಡಕಾಡತೊಡಗಿದರು.
* * *