ಕೆಂಗುಲಾಬಿ (ಭಾಗ 4): ಹನುಮಂತ ಹಾಲಿಗೇರಿ


(ಹಿಂದಿನ ಭಾಗ ಇಲ್ಲಿದೆ)

ಅವತ್ತು ಉಜ್ಜಳಪ್ಪನ ಜಾತ್ರಿ ಈ ಮೊದಲಿನಂಗ ಅದ್ದೂರಿಯಾಗಿಯ ನಡೆದಿತ್ತು. ಸುತ್ತು ಊರು ಕೇರಿಯವರೆಲ್ಲ ಸೇರಿದ್ದರು. ದೇವರಿಗೆ ಬಿಡುವ ಹುಡುಗಿರನ್ನು ಉಜ್ಜಳಪ್ಪನ ಮುತ್ಯಾನ ಗುಡಿಯೊಳಗ ಇರೋ ಅಂತಪುರಕ್ಕೆ ಹೋಗಿ ಅಲ್ಲಿ ಹುಡುಗಿಯರ ಗುಪ್ತಾಂಗವನ್ನು ಗಾಯಗೊಳಿಸುವ ಪದ್ದತಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಕೆಲವು ಪ್ರತಿಭಟನಾಕಾರರ ಪ್ರಯತ್ನದಿಂದಾಗಿ ನಿಂತಿತ್ತಾದರೂ ಹುಡುಗಿಯರನ್ನು ದೇವರಿಗೆ ಬಿಡೋದು ಮತ್ತು ಪ್ರಾಣಿಗಳನ್ನು ಬಲಿ ಕೊಡೋದು ಇನ್ನು ಮುಂದುವರೆದಿತ್ತು.

ಅಂದು ಉಜ್ಜಳಪ್ಪನ ಅಣ್ಣ ತಮ್ಮಂದಿರು ಸಂಬಂಧಿಕ ದೇವರುಗಳನ್ನು ಸುತ್ತಲಿನ ಹಳ್ಳಿಯ ಭಕ್ತರು ಪಲ್ಲಕ್ಕಿಗಳಲ್ಲಿ ಹೊತ್ತು ತಂದಿದ್ದರು. ಬೆಳಗ್ಗೆ ಉಜ್ಜಳಪ್ಪ ಮತ್ತು ಆತನ ಅಣ್ಣ ತಮ್ಮಂದಿರ ಮೆರವಣಿಗೆ ನಡೆದಿತ್ತು. ಮೆರವಣಿಗೆಯಲ್ಲಿ ಈ ಮೊದಲಿನಂತೆಯೆ ಕುರಿ, ಕೋಣ, ಕೋಳಿ ಮತ್ತು ದೇವರಿಗೆ ಬಿಡಬೇಕಾದ ಹುಡುಗಿಯರ ದಂಡನ್ನು ಸೇರಿಸಿಕೊಂಡು ಉಜ್ಜಳಪ್ಪ ವಿಜೃಂಭಣೆಯಿಂದಲೇ ಪಾದಗಟ್ಟಿಯಿಂದ ಗುಡಿಯ ಮುಖ್ಯ ಪ್ರಾಂಗಣದ ದಿಬ್ಬ ಹತ್ತಿ ಮೆರವಣಿಗೆ ಹೊರಟಿದ್ದ. ದಿಬ್ಬದ ಕೆಳಗೆ ಬರುತ್ತಿರುವ ಜೀಪು ಉಜ್ಜಳಪ್ಪನ ಭಕ್ತರಿಗೆ ಗೋಚರಿಸಿ ಏನೋ ಕೇಡುಗಾಲ ಕಾದೈತಿ ಅಂತ ಗೊತ್ತಾತು. ಜಾತ್ರೆಯಲ್ಲಿ ಹಿರಿಕರೆನಿಸಿಕೊಂಡವರು ಓಡೋಡಿ ಬಂದು ಜೀಪಿಗೆ ಅಡ್ಡಾಗಿ ನಿಂತು ಪೋಲೀಸ್ ಸಾಹೆಬ್ರಿಗೆ ಕೈ ಮುಗಿದ್ರು. ಪಿಎಸ್‍ಐ ಊರಿನ ಗೌಡ ರಾಮಚಂದ್ರಪ್ಪರನ್ನು ಹಂಗೆ ಆಲದ ಮರದ ಕೆಳಗ ಕರ್ಕೊಂಡು ಹೋದದ್ದು ನನಗೆ ಕಾಣಿಸಿತು. ನಾನು ಜನರ ನಡುವೆ ನುಸುಳುತ್ತಾ ಆಲದ ಮರದ ಗುಂಪಿನ ನಡುವೆ ಸರಿದೆ. ಪೋಲೀಸರು ಗರ್ರಮ್ ಆಗಿದ್ದರು. 'ಇವತ್ತು ಕೋಣ ಬಲಿ ಕೊಡಾಕ ಹತ್ಯಾರ ಅಂತ ನಮಗ ನಿಮ್ಮ ಊರಿನ ರಂಗನಾಥ್ ಅನ್ನಾಂವ ಫೋನ್ ಮಾಡಿದ್ದ. ಅದಕ್ಕ ಅದನ್ನ ತಡಿಯಾಕ ಅಂತ ನಾವು ಇಲ್ಲಿ ಮಟ ಬಂದೇವಿ. ಇದಕ್ಕ ನಿಮ್ಮ ಸಹಕಾರ ಬೇಕು ಗೌಡ್ರ' ಎಂದು ಪೋಲೀಸರು ಕೇಳಿಕೊಂಡ್ರು. ಆದ್ರ ಗೌಡ್ರು ಬಾಳ ಚಿಂತಿ ಮಾಡಿ ನಮ್ಮ ಊರಾಗ ರಂಗನಾಥ ಅನ್ನು ಹುಡುಗ ಯಾರ ಇಲ್ಲ ಬಿಡ್ರಿ ಎಂದು ಹುಳ್ಳಗೆ ನಕ್ಕರಾದರೂ ಒಳಗೊಳಗೆ ವಿಷಯದ ಗಂಭೀರತೆಯನ್ನು ಅರ್ಥ ಮಾಡಿಕೊಂಡದ್ದರ ಕುರುಹು ಆಗಿ ಬೆವರಲಾರಂಭಿಸಿದರು. ತಮ್ಮ ತೆಲಿಗೆ ಏನೂ ಹೊಳಿಲಾರದ್ದಕ್ಕ ಊರ ಹಿರ್ಯಾರನ್ನೆಲ್ಲಾ ಕರೆಸಿ ಅವರ ಮುಂದ ವಿಷಯ ಪ್ರಸ್ತಾಪ ಮಾಡಿದರು. ಅವರು ಕೂಡ 'ಅಂಥಾ ಹುಡುಗರು ನಮ್ಮ ಊರಾಗ ಇಲ್ಲ ಬಿಡ್ರಿ ಸಾಹೇಬರ' ಎಂದು ಗೌಡ ಹೇಳಿದ್ದನ್ನೇ ಪುನರುಚ್ಚರಿಸಿದರು. 'ಅದೇನು ಗೊತ್ತಿಲ್ಲ, ಒಟ್ಟಿನಲ್ಲಿ ಇಲ್ಲಿ ಬಲಿ ಕೋಡೋದು ಹುಡಿಗಿಯರಿಗೆ ಮುತ್ತು ಕಟ್ಟುವಂತ ಅನಿಷ್ಟ ಕೆಲಸಗಳು ನಡಿಬಾರದಷ್ಟೆ' ಅಂತ ಖಡಕ್ಕಾಗಿ ಹೇಳಿದರು. 

ಹಿರ್ಯಾರು ಅನಿಸಿಕೊಂಡವರೆಲ್ಲಾ ಅದೇನೆನೋ ಪಿಸು ಪಿಸು ಮಾತಾಡಿ ಒಂದು ತಿರ್ಮಾನಕ್ಕೆ ಬಂದು 'ಒಟ್ಟಿನ್ಯಾಗ ನಿಮಗ ಮ್ಯಾಲಿನಿಂದ ಏನು ತೊಂದರೆ ಬರದಂಗ ನೋಡಿಕೋತಿವಿ ಸಾಹೆಬ್ರ' ಅಂತ ಹೇಳಿ ನಿಂಬಿ ಹಣ್ಣಿನ ಪಾನಕ ಕುಡಿಸಿ ಅವರ ತೆಲಿ ತಣ್ಣಗ ಮಾಡಿ ಕಳುಹಿಸಿಕೊಟ್ಟರು. ಈ ಕಡೆ ಗುಡಿ ಮುಂದ ಕೋಣ ಬಲಿ ಕೊಡುವ ಸಿದ್ಧತೆಗಳು ಸಾಂಗವಾಗಿ ನಡೆದಿದ್ದವು. ಉಜ್ಜಳಪ್ಪ ಮುತ್ಯಾನ ಹೆಸರಿನಲ್ಲಿ ಮುತ್ತು ಕಟ್ಟುವಂತಹ ಕಾರ್ಯಕ್ರಮಗಳು ಗಪ್‍ಚುಪ್ಪಾಗಿ ನಡೆದು ಹೋದವು. ಹಂಗೂ ಹಿಂಗೂ ಮಾಡಿ ಒಟ್ಟಿನಲ್ಲಿ ಹ್ಯಾಂಗೊ ಜಾತ್ರಿ ಮುಗಿಸಿದ ಜನ ತಣ್ಣಗೆ ತಮ್ಮ ಮನೆಗಳ ಕಡೆಗೆ ಮುಖ ಮಾಡಲು ತಯಾರಿ ನಡೆಸಿದ್ದರು.

ಆದ್ರೆ ನನ್ನ ಕೂಡ ಫೋನ್ ಮಾಡಾಕ ಬಂದಿದ್ದ ನಮ್ಮಟ್ಟಿಯ ದುಗ್ರ್ಯಾನಿಗೆ ಜಾತ್ರಿಯೊಳಗ ಅದೆನೆನೋ ತಿಂದಿದ್ದರಿಂದ ಹೊಟ್ಟಿಗಡತ ಶುರುವಾತು. ಮಂದಿ ಎಲ್ಲ ತಮ್ಮ ತಮ್ಮ ಸಾಮಾನುಗಳ ಗಂಟು ಕಟ್ಟಾಕ ಹತ್ತಿದರ ಇಂವ ಗುಡಿ ಹಿಂದಿನ ಬಳ್ಳಾರಿ ಜಾಲಿ ಮರೆಯೊಳಗೆ ಚರಗಿ ತೊಗೊಂಡ ಹೋಗೂದು ಬರೋದು ಮಾಡತಿದ್ದ. ಹೋದ ಐದಾರು ನಿಮಿಷದೊಳಗ 'ಹಾವು ಕಡಿತ್ರೋ ಎಪ್ಪಾ, ಎಪ್ಪಾ' ಚೀರಕೋತ ಬಂದ. ಪಾಪ ದುರ್ಗ್ಯಾನ ಅಪ್ಪ-ಅವ್ವ ಬಾಳ ತ್ರಾಸ್ ಮಾಡಕೊತ ಉಜ್ಜಳಪ್ಪನ ಗುಡಿಗೆ ಕರಕೊಂಡು ಹೋದ್ರು. ಹಾವಿನ ಇಸಾ ಮೈಯಲ್ಲ ಏರಿ ಮೈ ಅನ್ನೊದು ನೀಲಿಗಟ್ಟಾಕ ಹತ್ತಿತ್ತು. ನಾನು ಬಡಾಬಡಾ ಡಾಕ್ಟರಿಗೆ ಫೋನು ಮಾಡಿ ಬರತೇನಿ ಅಂತ ಅಲ್ಲಿಂದ ಹೊರಬಿದ್ದಿದ್ದೆ.

ಡಾಕ್ಟರು ಈ ರಾತ್ರಿಯೊಳಗ ಹ್ಯಾಂಗ ಬರೋದು ಅಂತ ಅನುಮಾನ ಮಾಡಿದ್ರು ಕೂಡ ಅವರನ್ನು ಏನೇನೋ ಕಥಿ ಹೇಳಿ ಒಪ್ಪಿಸಿ, ಜಲ್ದಿ ಬರ್ರಿ ಅಂತ ಹೇಳಿ ಓಡೋಡಿ ಹೊಳ್ಳಿ ಬಂದೆ. ನಾ ಇನ್ನೂ ದೂರ ಇರಾಕಿಲೆ ದುರ್ಗ್ಯಾನ ಅಪ್ಪ ಅವ್ವ ಹಾಡ್ಯಾಡಿಕೊಂಡು ಅಳೊದು ಕೇಳಿಸಿತು. ಇನ್ನೂ ಗುಡಿ ನೂರು ಹೆಜ್ಜೆ ದೂರ ಇರುವಾಗಲೆ ಅವ್ವ ಓಡೋಡಿ ಬರುವುದು ಕಾಣಿಸಿತು. ಅವಸರಿಲೆ ಎದುರಾದ ಅವ್ವ 'ಮಲ್ಯಾ ನಿನ್ನ ಗೆಳೆಯ ಉಜ್ಜಳಪ್ಪನ ಪಾದ ಸೇರಿದಪಾ. ನೀನು ಅಲ್ಲಿ ಹೋಗೋದು ಬ್ಯಾಡ ಬಾ ಇಲ್ಲಿಂದ ದೂರ ಹೋಗೋನು ಅಂದು ಬೀಸುಗಾಲು ಹಾಕ್ಕೋತ ಸ್ವಲ್ಪ ದೂರ ಕರೆದುಕೊಂಡು ಬಂದ್ಲು. ಮುಖ್ಯ ರಸ್ತೆ ಬಂದೊಡನೆ ಅವ್ವ ನನ್ನನ್ನು ತೆಕ್ಕೆ ಬಿದ್ದು ಅಳ ತೊಡಗಿ ನನ್ನಲ್ಲಿ ದಿಗಿಲು ಹುಟ್ಟಿಸಿದಳು. ಆಮೇಲೆ ಸಾವರಿಸಿಕೊಂಡ ಅವ್ವ ನೇರವಾಗಿ ನನ್ನೊಂದಿಗೆ ಮಾತಿಗಿಳಿದಳು.

'ಮಲ್ಯಾ ಒಂದು ಮಾತ ಕೇಳತಿನಿ ಖರೆ ಹೇಳು' ಅಂದ್ಲು ನನ್ನ ಮುಖ ನೋಡಕೋತ. 

ನನಗೆ ಅವ್ವ ಅಳ್ಳೋದನ್ನೆ ನಿಲ್ಲಿಸಿ ಮಾತಾಡಿದ್ದರೆ ಸಾಕಾಗಿತ್ತು. 'ಏನು ಕೆಳತಿ ಕೇಳಬೇ ಅದಕೆನಂತ' ಅಂದೆ.

‘ನೀನು ಮತ್ತು ಆ ದುರಗ್ಯಾ ಫೋಲೀಸ್‍ರಿಗೆ ಫೋನು ಮಾಡಿದ್ದಿರಂತ, ಖರೆ ಏನು?'

ನಾನು ಸುಮ್ಮನಾದೆ. 'ದುರಗ್ಯಾ ಸಾಯು ಮುಂದ ಎಲ್ಲ ಹೇಳಿ ಸತ್ತ.' ಅವ್ವ ಮತ್ತೆ ಮಾತಾಡಿದಳು.

ನಾನು ಏನು ಮಾತಾಡುವುದಕ್ಕೆ ತೋಚಲೇ ಇಲ್ಲ. 

'ನೀನು ಮುಂದಕ್ಕ ಹ್ವಾದ ಮ್ಯಾಲ ಪೂಜಾರಿ ಮೈಮೇಲ ಉಜ್ಜಳಪ್ಪ ಮುತ್ಯಾ ಬಂದಿದ್ದ. ಈ ಹುಡುಗನಿಂದ ದೇವರಿಗೆ ಏನೋ ಅಪಚಾರ ಆಗೆತಿ. ಅದಕ್ಕ ನಾನು ಅವನ್ನ ಬಿಡುದಿಲ್ಲ ಅದೇನ ಅಪಚಾರ ಮಾಡ್ಯನಂತ ಅಂವನ ಬಾಯಿ ಬಿಡಸರಿ' ಎಂದು ಹಾರಾಡಿದ. ಅಂತ ಸಂಕಟದೊಳಗ ನೀನು ಮತ್ತು ಆ ದುರಗ್ಯಾ ಪೋಲೀಸರಿಗೆ ಸುದ್ದಿ ತಿಳಿಸಿದ್ದನ್ನು ಬಾಯಿಬಿಟ್ಟ' ಎಂದು ಹೇಳಿ ಅವ್ವ ಬಾಯಿ ಮುಚ್ಚಿಕೊಂಡು ದುಃಖಿಸತೊಡಗಿದಳು. ಆಮೇಲೆ ಒಮ್ಮೆಲೆ ಜಾಗೃತಳಾದ ಅವ್ವ 'ಮಗಾ ಈಗ ಯಾಕ, ಏನು ಅಂತ ಚಿಂತಿ ಮಾಡಕೋತ ಕೂಡಾಕ ಟೈಮಿಲ್ಲ. ನಿನ್ನ ಹೆಸರು ಕೇಳಿದ ಅಲ್ಲಿಯವರೆಲ್ಲ ನೀ ಬರಲಿ ಅಂತ ಕಾಯಾಕ ಹತ್ಯಾರ. ಹೇಳಿ ಕೇಳಿ ಇದು ದೇವರಿಗೆ ಸಂಬಂಧಪಟ್ಟದ್ದು. ನಾನು ಅಂವನ ಬಿಡುದಿಲ್ಲ ಅಂತ ದೇವರು ಹಾರಾಡಕತೈತಿ. ಅದಕ್ಕ ಹಿರ್ಯಾರೆಲ್ಲ ನಿನ್ನ ದಾರಿ ಕಾಯಾಕ ಹತ್ಯಾರ ನೀನು ಈಗ ಇಲ್ಲಿಂದ ಊರು ಬಿಡು ಮಗಾ ಎಂದು ಹೇಳಿ ಅವ್ವ ಕಣ್ಣೀರು ಸುರಿಸತೊಡಗಿದಳು.

ನಾನು ಅಂದು ಉಟ್ಟ ಬಟ್ಟೆಯಲ್ಲಿಯೇ ಊರು ಬಿಟ್ಟು ಹುಬ್ಬಳ್ಳಿ, ನಂತರ ಬೆಂಗಳೂರು ಸೇರಿಕೊಂಡು ನಮ್ಮ ಛಲವಾದಿ ಮಾಸ್ತರನ ಮನೆಗೆ ಬಂದಿದ್ದೆ. ಅಲ್ಲಿ ಅವರು ತಮಗೆ ಪರಿಚಯವಿದ್ದ ಒಂದು ಎನ್‍ಜಿಓ ಅಡ್ರೆಸ್ ಮತ್ತು ಒಂದು ಚೀಟಿಯನ್ನು ಕೊಟ್ಟು ಹಾವೇರಿಗೆ ಕಳುಹಿಸಿದ್ದರು. ಆಮೇಲೆ ಹುಬ್ಬಳಿಗೆ ಬಂದಿದ್ದೆ. ಎನ್‍ಜಿಓದಲ್ಲಿ ಕ್ಷೇತ್ರ ಕಾರ್ಯವನ್ನು ಮಾಡುತ್ತಲೇ ನಾನು ದೂರಶಿಕ್ಷಣದ ಮೂಲಕ ಎಂಎ ಪಾಸು ಮಾಡಿಕೊಂಡಿದ್ದೆ. ಹಾವೇರಿಯಲ್ಲಿ ಇರುವಷ್ಟು ದಿನ ನಮ್ಮೂರಿನ ಜೊತಿಗಿ ಸಂಬಂಧವೇ ಕಡಿದುಹೋಗಿಬಿಟ್ಟಿತ್ತು. ಆದರೆ ಹುಬ್ಬಳ್ಳಿಗೆ ಬಂದ ಮೇಲೆ ಮತ್ತೆ ನಮ್ಮೂರಿನ ಬಸ್ ಡ್ರೈವರ್ ಸಾಬಣ್ಣನ ಮೂಲಕ ಚಿಗಿತುಕೊಂಡಿತ್ತು. ಆತನ ಮೂಲಕ ನಮ್ಮೂರಿನ ವಿಷಯಗಳು ನನಗೆ ತಿಳಿಯುತ್ತಲೇ ಇದ್ದವು. ಆತನ ಮೂಲಕ ಅವ್ವ ನನಗೆ ರೊಟ್ಟಿ ಬುತ್ತಿ ಕಳುಹಿಸುತ್ತಿದ್ದರೆ ನಾನು ಅವ್ವನ ಖರ್ಚಿಗೆ ರೊಕ್ಕ ಕಳುಹಿಸುತ್ತಿದ್ದೆ. ಅವ್ವ ಸಾಬಣ್ಣನ ಮುಂದೆ ಅತ್ತು ಕರೆದು ಮಾಡಿ ನನ್ನನ್ನು ನೆನಸಿಕೊಳ್ಳುತ್ತಿದ್ದಳಂತೆ.

ಮೊನ್ನೆ ಬಂದಾಗ ಸಾಬಣ್ಣ ದುಗುಡದಿಂದಲೆ ಮಾತಿಗಿಳಿದ. 'ಒಂದು ಇಷ್ಯಾ ಹೇಳತಿನಿ ಮಲ್ಲೇಶಿ ಬೇಜಾರ ಮಾಡಕೋಬ್ಯಾಡ'. ನಾನು ಏನು ಎನ್ನವಂತೆ ಆತನತ್ತ ಮುಖ ಮಾಡಿದೆ. 

'ನಿಮ್ಮಕ್ಕ ಓಡಿ ಹೊದ್ಲು'. 

'ಯಾರ ಕೂಡ'. 

'ನಮ್ಮ ಊರಿಗೆ ಬರ್ಪ ಮಾರಾಕ ಬರತಿದ್ದನಲ್ಲ. ಅಂವನ ಕೂಡ.'

ಬರ್ಪ ಮಾರೋ ದೊಗಳೆ ಪ್ಯಾಂಟಿನ ಸಾಬಣ್ಣನೊಂದಿಗೆ ನಮ್ಮಕ್ಕ ಆಗಾಗ ಚಂದಂಗ ಮಾತಾಡೋದು ನನಗೂ ಗೊತ್ತಿತ್ತು. ಆದ್ರ ಅದು. ಅಕ್ಕ ತನ್ನ ಕೂದ್ಲ ಕೊಡೋದು, ಪಿನ್ನು ಎರಪಿನ್ನು, ರೂಬೆನ್ನು ತೊಗೊಳ್ಳುದು ಅಷ್ಟರಮಟ್ಟಿಗಿನ ವ್ಯವಹಾರ ಅನಕೊಂಡಿದ್ದೆ. ಅದರಿಂದು ಆವರು ತಮ್ಮ ಬದುಕು ಹಂಚಿಕೊಳ್ಳುವವರೆಗೆ ಮುಂದುವೆದಿದ್ದಾರೆ. 

 ನಾನು ಸುಮ್ಮನೆ ಇದ್ದೆ.

 'ಹೋಗ್ಲಿ ಮನಸ್ಸಿಗ ಪೆಟ್ಟ ಮಾಡಕೋಬ್ಯಾಡ ಮಲ್ಲೇಶಿ. ಪಾಪ ನಿಮ್ಮವ್ವ ಈಗ ಒಬ್ಬಂಟಿಯಾದ್ಲು ಅನ್ನೊದೊಂದೆ ಚಿಂತೆ.' ಎಂದು ಸಾಬಣ್ಣನೆ ಮತ್ತೆ ಮಾತಾಡಿದ.

 'ಸಾಬಣ್ಣೊರೆ, ನಮ್ಮಕ್ಕ ಓಡಿ ಹೊಗ್ಯಾಳಂತ ನನಗ ಬ್ಯಾಸರ ಇಲ್ಲ. ಇನ್ನ ನನಗ ಸಂತೋಷ ಆತು. ಅಕ್ಕ ದಿನ ಒಬ್ಬೊಬ್ಬರ ಜೊತೆ ಮಲಕ್ಕೊಳದಕ್ಕಿಂತ ಈಗ ಒಬ್ಬನ ಕೂಡ ಸಂಸಾರ ಮಾಡುವಂಗ ಆತಲ್ಲ, ಅಷ್ಟು ಸಾಕು. ಅಕ್ಕಗ ಮದುವೆಯಾದಷ್ಟು ಸಂತೋಷ ಆತು ನನಗ. ಆದ್ರ ನನಗೀಗ ಅವ್ವಂದ ಚಿಂತಿ. ಸಾಬಣ್ಣ, ಅವ್ವನ ನನ್ನ ಕೂಡ ಕರಕೊಂಡು ಬಂದ್ರ ಹ್ಯಾಂಗ ಅಂತಿ.' ಎಂದೆ ನನಗೆ ನಾನೆ ಪ್ರಶ್ನಿಸಿಕೊಳ್ಳುವಂತೆ. 'ನಾನು ತಾರವ್ವಗ ಅದಾ ಮಾತ ಹೇಳಿದೆ ಮಲ್ಲೇಶಿ, ಆದ್ರ ಆಕಿ ತಾನು ಕಟ್ಟಿಸಿದ ಮನಿ ಬಿಟ್ಟು ಎಲ್ಲೂ ಬರೋದಿಲ್ಲ ಅಂತ ಒಂದ ಮಾತ ಗಟ್ಟಿಯಾಗಿ ಹಿಡಕೊಂಡ ಕುಂತಾಳ.' ಎಂದ. ನನಗ ನಿರಾಸೆ ಆತು. 

ನೋಡೂನು ಮುಂದ ಹ್ಯಾಂಗ ತಿಳಿತೈತೊ ಹಂಗ ಮಾಡಿದ್ರಾತು. ನನಗೂ ಈಗ ಕೆಲಸದ ಮ್ಯಾಲಿಂದ ಒಂದ ಊರಿಂದ ಮತ್ತೊಂದು ಊರಿಗೆ ಓಡಾಡಬೇಕಾಗಿ ಬರತೈತಿ. ಇತ್ತಿತ್ತಲಾಗ ನಾನು ಕದ್ದು ಮುಚ್ಚಿ ಊರಿಗೆ ಹೋಗಿ ಅವ್ವಗ ಭೇಟಿಯಾಗಿ ಬರತಿದ್ದೆ. ಭೇಟಿ ಅಂದ್ರ ಏನದು. ರಾತ್ರಿ ಕಳ್ಳ ಬೆಕ್ಕಿನಂಗ ಹೋಗಿ ಮತ್ತ ಮಬ್ಬ ನಸುಕಿನ್ಯಾಗ ಓಡೋಡಿ ಬಂದ ಬಸ್ಸು ಹತ್ತುದು.

* * *

ಹಾವೇರಿಯಲ್ಲಿ ಹಳ್ಳಿಗಳಿಗೆ ಹೋಗಿ ರೈತಾಪಿ ಹೆಣ್ಣು ಮಕ್ಕಳನ್ನ ಸೇರಿಸಿ ಸ್ವಸಹಾಯ ಸಂಘಗಳನ್ನು ಕಟ್ಟೋದು, ಸ್ಥಳೀಯ ಬ್ಯಾಂಕಿನಲ್ಲಿ ಅವರ ಸಂಘದ ಬ್ಯಾಂಕ್ ಅಕೌಂಟ್ ತೆಗೆಸೋದು. ಅವರಿಗೆ ಸಾಲ ಕೊಡಸೋದು ಮಾಡತಿದ್ದೆ. ನಾನು ಈ ಕೆಲಸ ಮಾಡಕೋತ ವಿಶ್ವವಿದ್ಯಾಲಯ ಒಂದರಲ್ಲಿ ದೂರಶಿಕ್ಷಣದ ವ್ಯವಸ್ಥೆಯ ಮೂಲಕ ಎಂ.ಎ.ಯನ್ನು ಮುಗಿಸಿದೆ. ಆಗ ಹಾವೇರಿಯಲ್ಲಿ ನಡೆಯುತ್ತಿದ್ದ ಎಸ್‍ಎಫ್‍ಐ, ದಲಿತ ಸಂಘರ್ಷ ಸಮಿತಿಯಂತಹ ಸಂಘಟನೆಗಳು ನನ್ನನ್ನು ಆಕರ್ಷಿಸಿದ್ದರಿಂದ ಆಗಾಗ ಅವುಗಳ ಸಭೆ ಮತ್ತು ಅವು ನಡೆಸುವ ಪ್ರತಿಭಟನಾ ರ್ಯಾಲಿಗಳಲ್ಲಿ ಭಾಗವಹಿಸಿ ಒಂದಿಷ್ಟು  ವಿಚಾರ, ಅನುಭವ ಪಡೆದುಕೊಂಡೆ.

ಮೊದಲು ಹಾವೇರಿಯಲ್ಲಿ ಸಂವರ್ಧನ ಎನ್‍ಜಿಓದಲ್ಲಿ ಕೆಲಸ ಮಾಡುತ್ತಿದ್ದ ನಾನು ಅಲ್ಲೊಂದು ಹುಡುಗಿಯ ಜೊತೆ ಸ್ನೇಹ ಬೆಳೆದು ದೊಡ್ಡ ರಾದ್ಧಾಂತವಾಗಿ ಅನಿವಾರ್ಯವಾಗಿ ಸಂಸ್ಥೆಯಿಂದ ಹೊರಬೀಳಬೇಕಾಯಿತು. 

ಬೇರೆ ಕಡೆ ಕೆಲಸ ಹುಡುಕುತ್ತಿದ್ದಾಗ ಅನಾಯಾಸವಾಗಿ ಹುಬ್ಬಳ್ಳಿಯಲ್ಲಿ ಕೆಂಗುಲಾಬಿ ಎನ್‍ಜಿಓ ಫೇಲೋಶಿಪ್‍ಗೆ ಅರ್ಜಿ ಹಾಕಿದ್ದರಿಂದ ಕೆಲಸ ಸಿಕ್ಕಿತು. ಲೈಂಗಿಕ ಕಾರ್ಯಕರ್ತೆಯರ ಸಬಲೀಕರಣ ಮತ್ತು ಎಚ್‍ಐವಿ ಏಡ್ಸ್ ನಿಯಂತ್ರಣಕ್ಕಾಗಿ ಕೆಲಸ ಮಾಡುವುದು ಈ ಫೆಲೋಶಿಪ್‍ನ ಮುಖ್ಯ ಕೆಲಸ. ನಾನು ಕೂಡ ಅದೇ ಸಮುದಾಯದಿಂದ ಬಂದಿರುವುದರಿಂದ ನನ್ನ ಕೈಲಾದ ಸಹಾಯ ಮಾಡಬಹುದು. ಮತ್ತು ನಗರದಲ್ಲಿ ನಡೆಯುತ್ತಿರುವ ಸೂಳೆಗಾರಿಕೆ ಬಗ್ಗೆ ತಿಳಕೊಬಹುದು ಎಂಬುದು ನನ್ನ ಒಳ ಉದ್ದೇಶವಾಗಿತ್ತು. 

ಅಲ್ಲಿಗೆ ಹಾಜರಾದ ಮೊದಲ ದಿನವೇ ಅಲ್ಲಿನ ರೀಜನಲ್ ಹೆಡ್ ರಾಜನ್ ಸರ್ ನನಗೆ ಹುಬ್ಬಳ್ಳಿಯಲ್ಲಿನ ವೇಶ್ಯಾವೃತ್ತಿ ಚಟುವಟಿಕೆಗಳ ಬಗ್ಗೆ ಅಧ್ಯಯನ ಮಾಡಲು ಕೆಲಸ ನೀಡಿದ್ದರು. ಹೀಗಾಗಿ ನಾನು ಹುಬ್ಬಳ್ಳಿಯಲ್ಲಿನ ವೇಶ್ಯಾವಾಟಿಕೆ ಬಗ್ಗೆ ಸ್ವಲ್ಪಾದ್ರೂ ತಿಳಕೋಬೇಕಂತ ಹಳೆ ಬಸ್ ಸ್ಟಾಂಡ್ ಕಡೆ ಹೆಜ್ಜೆ ಹಾಕಿದೆ. ಕಿತ್ತೂರು ಚನ್ನಮ್ಮ ಸರ್ಕಲ್‍ನಿಂದ ಸುಜಾತಾ ಟಾಕೀಸ್‍ವರೆಗೆ ಸುಮ್ಮನೆ ಅಡ್ಡಾಡಿದೆ. ಅಡ್ಡಾಟ ಬೇಸರಾಗಿ ಟಾಕೀಸ್ ಹತ್ತಿರವಿರುವ ಡಬ್ಬಿ ಅಂಗಡಿಯಲ್ಲಿ ಟೀ ಕುಡಿದು, ಒಂದು ಸಿಗರೇಟು ಹಚ್ಚಿ ಉಸ್ ಉಸ್ ಹೊಗೆ ಬಿಡುತ್ತ ನಿಂತುಕೊಂಡೆ.  ಅದೃಷ್ಟವಶಾತ್ ನನ್ನ ಕಣ್ಣೆದುರೆ ಒಬ್ಬ ಹುಡುಗಿ ನಿಂತಿದ್ಲು. ನೊಡಲಿಕ್ಕೆ ಕಪ್ಪಾಗಿದ್ದರೂ ಆಕರ್ಷವಾಗಿಯೇ ಇದ್ದ ಅವಳು ಆಕಾಶ ಬಣ್ಣದ ಲಂಗ, ಅದಕೊಪ್ಪುವಂತ ಮಲ್ಲಿಗೆ ಹೂಗಳ ಚಿತ್ತಾರವಿರುವ ಕರಿವರ್ಣದ ಮೇಲಂಗಿ ತೊಟ್ಟುಕೊಂಡು ಅದರ ಮೇಲೊಂದು ಹೂವಿನ ವೇಲು ಸುತ್ತಿಕೊಂಡಿದ್ಲು. ನೋಡಾಕ ಯಾವದೋ ಹತ್ತಿರದ ಹಳ್ಳಿಯಿಂದ ಬಂದ ಅಮಾಯಕಳಂಗ ಕಾಣುತಿದ್ಲು. ನಾನು ಬೇರೆ ಕಡೆ ನೋಡುವಂಗ ಮಂದಿಗೆ ಅನಿಸಿದರೂ ಅವಳ ಚಲನವಲನ ಮೇಲೆ ಒಂದು ಕಣ್ಣಿಟ್ಟಿದ್ದೆ. ಆಕೆಯನ್ನೇ ತಮ್ಮ ಕಣ್ಣ ವಸ್ತುವನ್ನಾಗಿ ಮಾಡಿಕೊಂಡು ಐದಾರು ಜನ ನನ್ನಂಗ ಸಿಗರೇಟು ಹಚ್ಚಿಕೊಂಡು ಸೇದಕೋತ ಅದೇನನ್ನೋ ಕನಸು ಕಾಣುತ್ತಾ ನಿಂತಿದ್ರು. ಅಲೇ ಇಂವನ ಒಳ್ಳೆ ಮಜಾ ಆತಲ್ಲಾ ಅನಕೊಂಡು ಸ್ವಲ್ಪ ಹೊತ್ತು ಅಲ್ಲೆ ನಿಂತಿದ್ದೆ. ಒಂದಿಬ್ಬರು ಹುಡುಗರು ನಿಧಾನಕ್ಕೆ ಅವಳ ಹತ್ತಿರ ಬಂದು ಅದೇನನ್ನೋ ಸನ್ನೆಯಲ್ಲಿ ಮಾತಾಡಿಕೊಂಡರು. ಅವಳಿಗೆ ಬಾ ಎಂದು ಒತ್ತಾಯಿಸಿದರು. ಆದರೂ ಅವಳು ತುಟಿ ಪಿಟಿಕ್ ಅನ್ನದೆ ಅಲ್ಲಿಯೆ ನಿಂತಕೊಂಡಿದ್ಲು. ಅನುಮಾನಿಸಿಕೋತ ಸ್ವಲ್ಪ ದೂರದಾಗ ಹೋಗಿ ನಿಂತ ಅವರು, ಆಮೇಲೆ ಅದೇನನ್ನು ಬೈಯ್ಯುತ್ತಾ ಜಾಗ ಖಾಲಿ ಮಾಡಿದರು. 

ಅವರು ಹೋದ ಮೇಲೆ ಒಂದು ಹುಡುಗ ತಲೆ ಕೆರಕೋತ, ಎನೋ ಧೇನಿಸಿಕೋತ ಆಕಿನ ಒಂದು ಸುತ್ತು ಹಾಕಿದ. ನೊಡಲಿಕ್ಕೆ ಕಾಲೇಜು ಹುಡುಗನಂಗ ಕಾಣುತ್ತಿದ್ದ ಆತ ಯಾರಾದರೂ ನೋಡಿಯಾರೆಂಬ ಭಯ, ಸಂಕೋಚ, ಮುಜುಗರಗಳು ಅವನ ಮುಖದಿಂದ ಹಣಿಕಿ ಹಾಕುತ್ತಿದ್ದವು. ಮುಖ ಬೆವರುತ್ತಿತ್ತು. ಕಾಲುಗಳು ಅದರುತ್ತಿದ್ದವು. ಆದರೂ ಆತ ಆ ಕಡೆ ಈ ಕಡೆ ನೋಡಿ ನಿಧಾನಕ್ಕೆ ಅವಳ ಕಡೆ ಸರಿಯತೊಡಗಿದ. ಅವನ ಭಯವನ್ನು ಗಮನಿಸಿದ ಆಕೆ "ಬಾ" ಎಂದು ಕಣ್ಣಿನಲ್ಲಿಯೆ ಕರೆದು, ಮುಗುಳು ನಕ್ಕು ಧೈರ್ಯ ತುಂಬಿದಳು. ಆದರೂ ಆತ ಅನುಮಾನಿಸಿದ್ದರಿಂದ ಆಕೆಯೇ ಅವನತ್ತ ಸರಿದು ನಿಂತುಕೊಂಡಳು. ಇಬ್ಬರೂ ಅದೇನನ್ನೋ ಬೆರಳುಗಳಲ್ಲಿಯೇ ವ್ಯವಹರಿಸಿಕೊಂಡರು. ಆಕೆ ಹೋಗಿ ಟಾಕೀಸ್ ಎದುರಗಡೆಯಿಂದ ಆ ಕಡೆ ರಸ್ತೆ ದಾಟಿ ಆಟೋಗಾಗಿ ಒಂದೆರಡು ಕ್ಷಣ ಕಾಯ್ದಳು. ಎಲ್ಲಿಯೋ ಇದ್ದ ಆಟೋವಾಲಾ ಇವಳನ್ನು ನೋಡಿ ಆಟೋ ತಂದು ಅವಳ ಮುಂದೆ ನಿಲ್ಲಿಸಿದ. ಅವಳು ಹಿಂದೆ ದೂರದಲ್ಲಿದ್ದ ಅವನಿಗೆ ಬರಲು ಸನ್ನೆ ಮಾಡಿ ಆಟೋದೊಳಗೆ ಕಣ್ಮರೆಯಾದಳು. ಹುಡುಗ ಕೂಡ ಓಡಿ ಹೋಗಿ ಆಟೋದಲ್ಲಿ ಹೆಜ್ಜೆ ಇಡಬೇಕು ಅಷ್ಟರಲ್ಲಿ, ಒಳ್ಳೆ ಅರಬಿ ತೊಟಗೊಂಡಿದ್ದ ನೋಡಲಿಕ್ಕೆ ಸರಕಾರಿ ನೌಕರನಂಗ ಕಾಣುತ್ತಿದ್ದ ಅಜಮಾಸು 50 ವರ್ಷದವನೊಬ್ಬ  ಏಕದಂ ಅವಸರಲೆ ಬಂದು ಆ ಹುಡುಗನ ಕೊಳ್ಳಪಟ್ಟಿ ಹಿಡಕೊಂಡು ಹೊರಗೆಳೆದ. ಕಕ್ಕಾಬಿಕ್ಕಿಯಾದ ಹುಡುಗ ಮೇಲೆ ಹೆದರಕೋತ ಕೊಳ್ಳಪಟ್ಟಿ ಬಿಡಿಸಿಕೊಳ್ಳಲು ನೋಡಿದ. 

'ಇಳಿಯೋ ಮಗನ„ ಇಟುದ್ದ ಇದ್ದಿ, ನಿನಗೆ ಸೂಳೆ ಬೇಕಾ, ನಡಿ ಸ್ಟೇಷನಕ' ಅಂತ ದಬಾಯಿಸುತ್ತಿರುವಾಗಲೇ ಆ ಹುಡುಗಿ ಆಟೋದಿಂದ ಬಲಗಡೆ ಕಬ್ಬಿಣ ರಾಡ್ ದಾಟಿಕೊಂಡು ಇಳಿದು ಓಟಕಿತ್ತಳು. ಆ ಡೊಳ್ಳು ಹೊಟ್ಟೆಯ ವ್ಯಕ್ತಿ ಅವಳನ್ನು 'ಏ ನಿಂತ್ಕೋ' ಎಂದು ಬೆದರಿಸಿದನಾದರೂ, ಬೆನ್ನು ಹತ್ತಿ ಹೋಗಿ ಅವಳನ್ನು ಹಿಡಿಯುವ ಪ್ರಯತ್ನವನ್ನೇನ ಮಾಡಲಿಲ್ಲ. ನನ್ನನ್ನು ಸೇರಿಸಿ ಸ್ವಲ್ಪ ಜನ ಇದನ್ನು ಒಂದು ರೀತಿಯ ತಮಾಷಾ ನಾಟಕವೆಂಬಂತೆ ಸುತ್ತ ನಿಂತು ನೋಡುತ್ತಿದ್ದೆವು. ಡೊಳ್ಳು ಹೊಟ್ಟೆಯವ ಮತ್ತು ಅವನೊಂದಿಗೆ ಇದ್ದ ಇನ್ನೊಬ್ಬ ಸವಕಲು ವ್ಯಕ್ತಿ ಆ ಹುಡುಗನನ್ನು ಹಿಡಿದುಕೊಂಡು ಬದಿಗೆ ಎಳೆದುಕೊಂಡು ಹೋದರು. 

ಆದ್ರ ಆಟೋ ಡ್ರೈವರ್‍ಗ ಯಾಕೋ ಅನುಮಾನ ಬಂದಿರಬೇಕು. ತನಗ ಸಿಕ್ಕಿದ್ದ ಗಿರಾಕಿ ತಪ್ಪಿಸಿದ್ದರಿಂದ ಅಂವಂಗ ಸಿಟ್ಟು ಬಂದಿತ್ತು. ಸಾಮಾನ್ಯವಾಗಿ ಇಂಥ ಸಂದರ್ಭಗಳಲ್ಲಿ ಹುಡುಗಿಯರನ್ನು ಹಿಡಿಯಲು ಪೋಲೀಸರು ಪ್ರಯತ್ನಿಸಿದರೆ ಈ ಡೊಳ್ಳು ಹೊಟ್ಟೆಯ ವ್ಯಕ್ತಿ ಕೇವಲ ಈ ಹುಡುಗನನ್ನು ಹಿಡಿದು ಬೆದರಿಸುತ್ತಿರುವುದರ ಹಿಂದೆ ಏನೊ ಮಸಲತ್ತು ಇರಬಹುದು ಅನಕೊಂಡು ಆಟೋ ಡ್ರೈವರ್ ಅವರನ್ನು ಹಿಂಬಾಲಿಸಿ ಹತ್ತಿರ ಹೋಗಿ ನಿಂತ. ಆ ಡೊಳ್ಳು ಮತ್ತು ಸವಕಲು ವ್ಯಕ್ತಿಯರಿಬ್ಬರು ಆ ಹುಡಗನ ಜೇಬು ತಡಕಾಡುತ್ತಿರುವುದು ಆಟೋ ಡ್ರೈವರ್‍ಗೆ ಕಂಡು ಬಂದು ಅವನ ಸಿಟ್ಟು ನೆತ್ತಿಗೇರಿತ್ತು. ಅವಸರವಾಗಿ ಬಂದವನೆ ಅವರ ಕೈಯಿಂದ ಆ ಹುಡಗನನ್ನು ಬಿಡಿಸಿಕೊಂಡು 'ನೀವು ಖರೆ ಪೋಲೀಸ ಇದ್ರ ಸ್ಟೇಷನ್ನಿಗೆ ಕರಕೊಂಡು ಹೋಗ್ರಿ. ಅದು ಬಿಟ್ಟು ದಾರಿಯೊಳಗ ನಿಮ್ಮ ದಂಧಾಕ ಸುರು ಹಚ್ಚಿಗೊಂಡಿರೆಲ್ಲ' ಎಂದು ಸಿಟ್ಟಿನಿಂದಲೇ ದಬಾಯಿಸಿದ.

 ಡೊಳ್ಳು ಹೊಟ್ಟೆಯವನಿಗೆ ಇದರಿಂದ ಅವಮಾನವಾದಂತಾಯಿತು. 'ಏ ಬೊಸುಡಿ ಮಗನ, ನಿನ್ನೂ ಒದ್ದ ಒಳಗ ಹಾಕೂನೇನ, ಸರಳ ಇಲ್ಲಿಂದ ಜಾಗ ಖಾಲಿ ಮಾಡ್ತಿಯೋ' ಎಂದು ಹುಡುಗನನ್ನು ಹಿಡಿದುಕೊಂಡೆ ಅವಾಜ್ ಹಾಕಿದ.

 'ಏ ಹರಾಮ್‍ಕೋರ್, ಸರಿ ನಾಲಿಗಿ ಹಿಡಿದು ಮಾತಾಡು. ನೀ ಖರೆನ ಪೋಲೀಸ್ ಆಗಿದ್ರ ನಿನ್ನ ಡ್ರೆಸ್ ಎಲ್ಲಿದಾವು ನಿನ್ನ ಐಡೆಂಟಿಟಿ ಕಾರ್ಡ್ ಎಲ್ಲೆತಿ ತೋರ್ಸು' ಅಚಿತ ಆಟೋವಾಲಾನೂ ಹಠಕ್ಕ ಬಿದ್ದ.

 'ಲೇ ಮಗನ ನಮಗ ಹರಾಮ್‍ಕೋರ್ ಅಂತಿ. ನಿಂಗೂ ಸೊಕ್ಕ ಬಾಳ ಇದ್ದಾಂಗೇತಿ. ನೋಡು ಇದ ಕಾರ್ಡ್" ಎಂದು ಸಿಟ್ಟಿಲೆ ಕಿಸೆಯಿಂದ ಕಾರ್ಡ್ ತೆಗೆದು ಆಟೋ ಡ್ರೈವರ್‍ನ ಮುಖಕ್ಕೆ ಎಸೆದುಬಿಟ್ಟ.

ಆಟೋ ಡ್ರೈವರ್ ಅದನ್ನು ಸ್ವಲ್ಪ ಹೊತ್ತು ನೋಡಿದವನೇ 'ಮಕ್ಕಳ ನನಗ ಆಟ ಹಚ್ಚಿರಿ, ಕೊಟ್ಟಿ ಕಾರ್ಡ್ ಇಟಗೊಂಡು ಕಳ್ಳತನ ಮಾಡೋ ನಿಮಗ ಇಷ್ಟ ಧೈರ್ಯ ಇರಬೇಕಂದ್ರ ಇನ್ನು ದೇವರ ಸತ್ತುವಾಗಿ ದುಡಕೊಂಡು ತಿನ್ನೋ ನಮ್ಮಂಥೋರು ಯಾಕ ಹೆದ್ರಬೇಕು. ನಡ್ರಿ ಪೋಲೀಸ್ ಸ್ಟೇಷನ್ನಿಗೆ ಹೋಗೋಣ'. ಎಂದ ಎನೋ ಸತ್ಯವನ್ನು ಕಂಡು ಹಿಡಿದವನಂಗ.

ಇವನ ದೈರ್ಯ ನೋಡಿದ ಡೊಳ್ಳ ಮತ್ತು ಸಣಕಲರಿಬ್ಬರು ಹೆದರಿರಬೇಕು. 'ಮಗನ, ಇನ್ನೊಂದು ಸಲ ನೋಡಕೋತಿವಿ ನಿನ್ನ' ಎಂದು ಅವರಿಬ್ಬರು ಆ ಹುಡಗನನ್ನು ಅಲ್ಲಿಯೆ ಬಿಟ್ಟು ಹಲ್ಲು ಮಸೆದುಕೊಳ್ಳುತ್ತಾ ಜಾಗ ಖಾಲಿ ಮಾಡಿದರು.                   

'ಬಡ್ಡಿ ಮಕ್ಕಳು, ಹೆದರಿದ್ರ ಮೈಮ್ಯಾಲ ಬರತಾರ. ಹೆದರಿಸಿದ್ರ ಓಡಿಹೋಗ್ತಾರ. ದೋಸ್ತ್ ನೀನೇನು ಹೆದರಬ್ಯಾಡ. ಅಂದ್ಹಂಗ ರೊಕ್ಕ ಗಿಕ್ಕಾ ಕೊಟ್ಟಿಯೇನ ಮತ್ತ ಅವರಿಗೆ' ಎಂದು ಆಟೋ ಡ್ರೈವರ್ ಆ ಹುಡುಗನ ಹತ್ತಿರ ಬಂದು ಸಮಾಧಾನ ಮಾಡುತ್ತ ಕೇಳಿದಾಗ ಹುಡುಗ ಹೆದರುತ್ತಲೆ 'ಇಲ್ರಿ, ರೊಕ್ಕ ಕಸಕೊಳಾಕ ಹತ್ತಿದರಿ, ಅಷ್ಟರೊಳಗ ನೀವು ಬಂದ್ರಿ ನೋಡ್ರಿ. ಚಲೋ ಆತು' ಎಂದು ಕಾಲರ್ ತಿದ್ದಿಕೊಳ್ಳತೊಡಗಿದ. 'ಆತು ನೀನು ಹಳ್ಳಿ ಕಡೆಯಂವನಂಗ ಕಾಣ್ತಿ ಅದಕ್ಕ ಹಿಂಗ ಕಾಡ್ತಾರ ಮಕ್ಕಳು. ಹುಶ್ಯಾರಿರು.' ಎಂದು ಆತ ತನ್ನ ಆಟೋ ಚಾಲು ಮಾಡಿ ಅಲ್ಲಿಂದ ಮಾಯವಾದ.

ಅವನನ್ನು ದೂರದಿಂದಲೆ ಗಮನಿಸುತ್ತಿದ್ದ. ಆ ಡೊಳ್ಳು ಮತ್ತು ಸವಕಲು ವ್ಯಕ್ತಿಗಳು ಅಂವ ಹ್ವಾದ ಗಳೇನಾ ಹಿಂದಿನಿಂದಲೆ ಆ ಹುಡುಗನನ್ನು ಹಿಡಿದುಕೊಳ್ಳಲು ಹವಣಿಸಿದರು. ಅಷ್ಟರೊಳಗ ಆ ಹುಡುಗ ಇಂದಿರಾಗಾಜಿನ ಅರಮನೆಯ ಮುಂದಿನ ಮೈದಾನದೊಳಗ ಓಡುತ್ತಾ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನಾದರೂ ಸವಕಲು ವ್ಯಕ್ತಿ ಚಿಣಗಿ ಹಾವಿನಂಗ ಅವನನ್ನು ಬೆನ್ನು ಹತ್ತಿ ಹಿಡಿದುಕೊಂಡು ಆ ಹುಡುಗನನ್ನು ಕೆಳಗೆ ಬಿಳಿಸುವುದು, ಮುಖ್ಯ ರಸ್ತೆಯ ಬದಿ ನಿಂತ ನಮ್ಮಂತ ಐದಾರು ಜನರಿಗೆ ಕಾಣಿಸುತಿತ್ತು.  ಅಷ್ಟೊತ್ತಿಗೆ ಡೊಳ್ಳು ಹೊಟ್ಟೆಯವನು ಕಷ್ಟಪಟ್ಟು ಓಡಿ ಅಲ್ಲಿಗೆ ಬಂದ. ಸವಕಲು ವ್ಯಕ್ತಿ ಹುಡುಗನನ್ನು ಮಣಕಾಲುಗಳ ಅಡಿಯಲ್ಲಿ ಗಟ್ಟಿಯಾಗಿ ಹಿಡಿದಿದ್ದರೆ, ಡೊಳ್ಳು. ಹೊಟ್ಟೆಯವ ಹುಡುಗನ ಜೇಬುಗಳನ್ನು ತಡಕಾಡಿ ಚಿಲ್ಲರೆಯನ್ನು ಬಿಡದೆ ಕಿತ್ತುಕೊಂಡು ತನ್ನ ಕಿಸೆಗೆ ಇಳಿಸಿದ.

ಹುಡುಗ 'ನನಗೆ ನಮ್ಮೂರಿಗೆ ಹೋಗಲು ಬಸ್ಸಿಗಾದರೂ 10 ರೂಪೈ ಕೊಡ್ರಿ' ಎಂದು ದೈನ್ಯತೆಯಿಂದ ಬೇಡುತ್ತಿದ್ದರೂ ಕೂಡ ಅವರು ಆ ಹುಡಗನ ಬೇಡಿಕೆಯನ್ನು ಕೇರು ಮಾಡದೆ 'ಇನ್ನೊಮ್ಮೆ ಹಿಂಗ ಸೂಳೆರ ಬೆನ್ನು ಹತ್ತಿ ಬಂದಿ ಅಂದ್ರ ನೋಡ ಮಗನ' ಎಂದು ಎರಡು ಕೆನ್ನೆಗೆ ಬಿಗಿದು ಮಾಯವಾದರು. ಸೂಳೆ ಶಬ್ದ ಕಿವಿಗೆ ಬಿದ್ದೊಡನೆ ರೊಕ್ಕ ಹೋದ್ರ ಹೋಗಲಿ, ಈ ನನ್ನ ಮಕ್ಕಳು ನಡು ಬೀದ್ಯಾಗ ಮಾನಾ ತೆಗಿಯದೆ ಇದ್ರ ಸಾಕು' ಅನ್ಕೊಂಡು ಕಣ್ಣೀರು ಒರೆಸಿಕೊಂಡು ಯಾರಾದರೂ ನೋಡಿದರೆ ಏನು ಗತಿ ಅನಕೊಂಡು ಅತ್ತ ಇತ್ತ ನೋಡಿ ಹೆದರಿಕೆಯಿಂದಲೇ ಅಲ್ಲಿಂದ ನಡೆಯಲಾರಂಭಿಸಿದ. ಆ ಹುಡುಗನಿಗೆ ಬಸ್ ಚಾರ್ಜ್‍ಗಾದರೂ ಹಣ ನೀಡೋಣ ಅಂತ ನನಗೆ ಅನಿಸಿತಾದರೂ ಈ ವಯಸ್ಸಿನಲ್ಲಿ ಇಂತ ಚಟ ಮಾಡುವ ಈ ಮಳ್ಳನಿಗೆ ಸರಿಯಾದ ಶಾಸ್ತಿಯೇ ಆಯಿತು ಅನಕೊಂಡು ಸುಮ್ಮನಾದೆ.

* * *


ಕೆಂಗುಲಾಬಿ ಪುಸ್ತಕ ಕೊಳ್ಳಲು ಇಲ್ಲಿ  ಕ್ಲಿಕ್ಕಿಸಿ
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x