ಕೆಂಗುಲಾಬಿ (ಭಾಗ 2): ಹನುಮಂತ ಹಾಲಿಗೇರಿ

ನನ್ನ ಈ ನೌಕರೀ ಬಗ್ಗೆ ಹೇಳೋ ಮುನ್ನ ನನ್ನನ್ನು ಬಾಳಷ್ಟು ಕಾಡಿಸಿ ಪೀಡಿಸಿ ಬದಲಾವಣೆಗೆ ಕಾರಣಾದ ನನ್ನ ಕುಟುಂಬದ ಹಿನ್ನೆಲೆಯ ಬಗ್ಗೆ ಸ್ವಲ್ಪ ಮೊದಲಾ ಹೇಳಿದರೆ ಒಳ್ಳೇದು.

ಬಾಗಲಕೋಟಿಯ ಭೀಮನಕೊಪ್ಪ ಅನ್ನೋ ಕುಗ್ರಾಮದ ಮ್ಯಾಲ ಯಾರಾದರೂ ವಿಮಾನದಾಗ ಬಂದ್ರ, ಆ ಊರಿನ ಅಂಚಿನಲ್ಲಿ ನನ್ನ ದಲಿತ ಕೇರಿಯ ಗುಡಿಸಲಗೊಳು ಒತ್ತೊತ್ತಾಗಿ ಚಲ್ಲಿಕೊಂಡಿರುವುದು ಕಾಣಿಸತೈತಿ. ಆ ಗುಡಿಸಲುಗಳ ನಡುವು ಒಂದು ಮಂಗಳೂರು ಹೆಂಚಿನ ಅರಮನೆಯಂಥ ಮನಿ ಎದ್ದು ಕಾಣುತೈತಿ. ಅದು ನನ್ನವ್ವ ತಾರವ್ವ ಜೋಗತಿಯ ಮನಿ. ಅಂದ್ರ ಅದು ನನ್ನ ಮನೀನೂ.

'ನಾವೆಲ್ಲ ಹಗಲೂ ರಾತ್ರಿ ಬೆವರು ಸುರಿಸಿ, ಬಿಸಲಾಗ ಎಷ್ಟೊಂದು ದುಡಿದ್ರೂ ಒಂದು ತಗಡಿನ ಮನೆ ಕಟ್ಟಿಸಿಕೊಳ್ಳಾಕ ಆಗಿಲ್ಲ. ಆದ್ರ ತಾರವ್ವ ತನ್ನ ಐದಡಿ ದೇಹ ಮಾರಿಕೊಂಡು ದೆವ್ವದಂಥ ಮನೆ ಕಟ್ಟಿಸ್ಯಾಳ ನೋಡ್ರಿ' ಅಂತ ಊರಾಗಿನ ಮಂದಿ ಹಲಬುತಿದ್ದರು.

ಸವದತ್ತಿ ಗುಡ್ಡದ ಯಲ್ಲವ್ವಗ ನನ್ನವ್ವಳನ್ನು ಜೋಗತಿಯನ್ನಾಗಿ ಬಿಟ್ಟಿದ್ರು. ನಮ್ಮಜ್ಜ ಅಂದ್ರ ನಮ್ಮವ್ವನ ಅಪ್ಪನ ಕಾಲದೊಳಗ ಕೂಲಿಗೆ ಬಾಳ ತ್ರಾಸ ಇತ್ತಂತ. ನಮ್ಮಜ್ಜ ಚಪ್ಪಲಿ ಹೊಲೆಯೋ ಕೆಲಸಾ ಮಾಡತಿದ್ದನಂತ. ನಮ್ಮಜ್ಜನಿಗೆ ನಮ್ಮವ್ವ ಹಿರಿಮಗಳು. ಆಗಿನ ಕಾಲಕ್ಕ ನಮ್ಮಜ್ಜ 50 ಪೈಸಾ ಖಚರ್ು ಮಾಡಿ ಒಂದು ಜೊತಿ ಚಪ್ಪಲಿ ಹೊಲೀತಿದ್ದನಂತ. ಅದನ್ನ ಒಂದ್ರೂಪಾಯಿಗೆ ಮಾರಾಂವ. ಹಿಂಗ ಚಪ್ಪಲಿ ಹೊಲಿಯೋದಕ್ಕ ಮತ್ತ ಹರದ ಚಪ್ಪಲಿ ರಿಪೇರಿ ಮಾಡಾಕ ನಮ್ಮಜ್ಜ ಬಾಗಲಕೋಟಿಯೊಳಿಗಿನ ಹಳ್ಳಿಗಳನ್ನೆಲ್ಲಾ ಅಡ್ಡಾಡಾಂವ. ಅಂವನ ಕೂಡ ನಾನು ಒಮ್ಮೊಮ್ಮಿ ಹಳ್ಳಿಗೊಳಿಗಿ ಹೊಕ್ಕಿದ್ನಿ. ಆಗೆಲ್ಲ ನಮ್ಮಜ್ಜನ ಪರಿಸ್ಥಿತಿ ನೋಡಿ ನಾನು ಸತ್ರೂ ಈ ಕಾಲ್ಮರಿ ಹೊಲಿಯೋ ಕೆಲಸ ಮಾಡಬಾರದು ಅನಕೊಳ್ತಿದ್ದೆ. ಊರ ಅಗಸಿ ಬಾಗಿಲ ಮುಂದೆ ಜನ ಅಡ್ಡಾಡೋ ದಾರಿಯೊಳಗ ಒಂದು ಕುಡಿಕ್ಯಾಗ ನೀರು, ಕಟಿಗಿ ಕೊಡ್ಡ, ಹದ ಮಾಡಿದ ಚರ್ಮ, ಸಣ್ಣಾನು ನಟ್ಟು, ಬೋಲ್ಟು, ಚಾಕು, ಕತ್ರಿ, ಇತ್ಯಾದಿ… ತನ್ನ ಸಾಮಾನು ಸರಂಜಾಮು ತೊಗೊಂಡ ನಮ್ಮಜ್ಜ ಹಳ್ಳಿಕಡೆ ಹೊಂಟ ಬಿಡತಿದ್ದ. ಕೆಲವೊಮ್ಮೆ ಅಜ್ಜನ ಸಾಮಾನು ಸರಂಜಾಮು ಚೀಲದೊಂದಿಗೆ ನಾನು ಹೆಗಲೇರಿರುತ್ತಿದ್ದೆ. ಮ್ಯಾಲ ಉರಿಯೋ ಸೂರ್ಯ. ಮಗ್ಗಲದೊಳಗ ನಮ್ಮಜ್ಜನ ಮುಖ ನೋಡಿ ಥೂ ಎಂದು ಎಂಜಲು ಉಗುಳಿ ಮೂಗು ತಿರುವುಕೊಂಡ ಅಡ್ಡಾಡೋ ಜನ. 

ಆಗೆಲ್ಲಾ ಚಪ್ಪಲಿ ರಿಪೇರಿ ಮಾಡಿದರ ಜನಾ ರೊಕ್ಕ ಕೊಡತಿರಲಿಲ್ಲ. ನಿನ್ನೆ ಮೊನ್ನಿ ಉಳಿದಿದ್ದ ಕಟಕ್ ರೊಟ್ಟಿ, ಅದರ ಮ್ಯಾಲ ಹಿಟನಾಶಿ ಪಲ್ಯೆ ಹಾಕಿ ದೂರ್ನಿಂದ ನಮ್ಮಜ್ಜನ ಕೈಗೆ ಒಗೆಯೋರು, ಅಜ್ಜ ಚಪ್ಪಲಿ ಹೊಲಿಯೋ ಕೈಗಳಿಂದಲೇ ಅದನ್ನು ಹಿಡಿದು ಮಡಚಿ ಗೋಣಿ ಚೀಲದೊಳಗ ತುರುಕತ್ತಿದ್ದ. ಸಂಜಿ ಮಟಾ ಒಂದ ಜಾಗಾದೊಳಗ ಕುಂತು, ಆಮ್ಯಾಲ ಸಂಜಿ ಮುಂದ ಹಳಸಿದ ರೊಟ್ಟಿ ಪಲ್ಯೆ ತಿಂದು ಊರ ಕಡೆ ಮುಖ ಮಾಡುತ್ತಿದ್ದೆವು. ಅಜ್ಜಿ, ಮಕ್ಕಳು ಮತ್ತ ಮೊಮ್ಮಕ್ಕಳಿಗಾಗಿ ಉಳಕಲ ರೊಟ್ಟಿ ಮಡಚಿ ಬಗಲೊಳಗ ಇಟ್ಟಕೊಳ್ಳತಿದ್ದ. 

ಹೊಸ ಚಪ್ಪಲಿ ಮಾರಾಟ ಆದ್ರ ಮಾತ್ರ ರೊಕ್ಕ ಕೈಗೆ ಬರತಿತ್ತು. ಬಂದ ರೊಕ್ಕದಾಗ ಜ್ವಾಳಾ ತರಾಂವಾ. ಅದ್ನ ಬೀಸುಕಲ್ಲಾಗ ಬೀಸಿ ನುಚ್ಚು ಮಾಡಿಕೇಸಿ ತಪಲೀನಾಗ ಇಟ್ಟು ಕುದಿಸಿ ಉಣ್ಣುಸುತಿದ್ದಳು ಅಜ್ಜಿ. ಸ್ವಂತ ಊರಾಗ ಮಾತ್ರ ಯಾರು ರೊಕ್ಕನೂ ಕೊಡ್ತಿರಲಿಲ್ಲ, ಜ್ವಾಳನೂ ಕೊಡ್ತಿರಲಿಲ್ಲ. ಆಗ ಊರಾಗ ಆಯಾ ಕೊಡು ಪದ್ದತಿ ಚಾಲ್ತೀಲಿತ್ತು. ಆಯಾ ಅಂದ್ರ ಊರ ರೈತಗಾರಿಕಿ ಮನಿಗಳೊಳಗ ರಾಶಿ ಮಾಡೋ ಟೈಮ್ನಾಗ, ರಾಶಿ ಮಾಡೋ ಕಣಕ್ಕ ಹೋಗಬೇಕಾಗತಿತ್ತು. ಅವು ಸುಗ್ಗಿ ದಿನ ಆಗಿರೋದ್ರಿಂದ ಸಹಜವಾಗಿಯೆ ಅಜ್ಜ ಕೂಡ ರಾಶಿ ಮಾಡಾಕ ಕೈಗೂಡತಿದ್ದ. ಹಗಲೆಲ್ಲಾ ದುಡಿದ ಮ್ಯಾಲ ಒಂದೆರಡು ಮರ ಅಥವಾ ಒಂದರೆಡು ಸೇರು ಜ್ವಾಳ ಇಸಕೊಂಡು ಮನಿಗೆ ಬರಬೇಕಾಗತಿತ್ತು. ಅವರು ಕೊಟ್ಟಷ್ಟ, ಅಜ್ಜ ಇಸಗೊಂಡಷ್ಟ ಸೈ. ಈ ಹಿಂದ ರೈತರ ಮನಿಗೊಳಾಗ ದನ-ಕರಾ ಸತ್ತು ಅವುನ್ನಾ ಅಜ್ಜ ಮತ್ತು ಅವನ ಸಂಗಡಿಗರು ಹೊತ್ತಕೊಂಡು ಹೋಗಿ ಖಂಡ, ಚರ್ಮ ಬಳಸಿಕೊಂಡಿದ್ರ ಆ ರೈತರ ಮನೆಯಲ್ಲಿ ಆಯಾನೂ ಕೊಡತಿರಲಿಲ್ಲ. 

ಹಂಗಾಗಿ 'ಇದರವ್ವನ ಈ ದಂಧೇನ ಬ್ಯಾಡ' ಅನಕೊಂಡು ಮನ್ಯಾಗ ಹೆಣ್ಣಮಕ್ಕಳು ಹುಟ್ಟಿದರ ಈ ಕಷ್ಟಗೊಳೆಲ್ಲ ತಪ್ಪತಾವು ಅಂತ ನಮ್ಮಜ್ಜ ಬಯಸಿದ್ದನಂತ. ಅಷ್ಟ ಅಲ್ಲದ ಹೆಣ್ಣು ಹುಟ್ಟಿದರ ನಿನಗ ಕ್ವಾಣ ಬಿಡತೇನಿ ಅಂತ ದುರಗವ್ವಗ ಬೇಡಿಕೊಂಡಿದ್ದನಂತ. ಆದ್ರ ನಮ್ಮಜ್ಜಿ ಎರಡು ಗಂಡ ಮಕ್ಕಳನ್ನು ಹಡದ ಮ್ಯಾಲ ನಮ್ಮವ್ವನ ಹಡದಳಂತ. ನಮ್ಮವ್ವ ಹುಟ್ಟಿದಮ್ಯಾಗ ನಮ್ಮಜ್ಜನ ತಡಿಯೋವ್ರೆ ಯಾರ ಇದ್ದಿರಲಿಲ್ಲಂತ. ಈ ಮೊದಲ ದೇವರಿಗೆ ಬೇಡಿಕೊಂಡಂಗ ಮನಿಯಾಗ ಎಮ್ಮಿ ಕ್ವಾಣ ಇಳಿದಿದ್ದರಿಂದ ಆ ಕ್ವಾಣಾನ ದುರಗವ್ವ ತಾಯಿಗೆ ಬಿಟ್ಟು ತನ್ನ ಭಕ್ತಿ ಮುಟ್ಟಿಸಿದ್ದ. ಮುಂದ ಅದ ಕ್ವಾಣ ಕಡದು ತನ್ನ ಕುಲ ಬಾಂಧವರಿಗೆ ಖಾರದೂಟ ಹಾಕಿಸಿದನಂತ.

* * * 

ನಮ್ ಕಡೀಗ, ನಮ್ ಕುಲದ ಹೆಣ್ಗೊಳಿಗೆ ಮುತ್ತ ಕಟ್ಟಿ ಸೂಳಿ ಬಿಡಾದು ಹಳ್ಳ್ಳಳ್ಳಿಗೂ ಐತಿ. ನಮವ್ವ ಮೈ ನರೆಯೋದನ್ನೆ ಕಾಯುತ್ತಿದ್ದ ನಮ್ಮಜ್ಜ, ಅವಳು ಮೈ ನರೆದ ಮ್ಯಾಲ ಮುತ್ತು ಕಟ್ಟಿಸಿ ಮೆರುಣಿಗಿ ಮಾಡಿಸೋ ಮೂಲಕ ತನ್ನ ಮಗಳು ಸೂಳಿಗಾರಿಕೆ ಮಾಡಾಕ ಇಂದಿನಿಂದ ತಯಾರಾಗ್ಯಾಳ ಅನ್ನೊದನ್ನ ಢಂಗೂರ ಸಾರಿದ. ಅವತ್ತಿಂದ ನಮ್ಮವ್ವ ಊರವರ ವಸ್ತು ಆದ್ಲು. ಊರಾಗಿನ ಮ್ಯಾಗಳ ಕುಲಸ್ಥರೆಲ್ಲ ನಮ್ಮವ್ವನನ್ನು ಹರಕೊಂಡು ತಿನ್ನಾಕ ಶುರು ಮಾಡಿದ್ರು. ಕೆಲವೊಬ್ಬರಿಗಂತೂ ದುಡ್ಡಿಲ್ಲ ಕಾಸಿಲ್ಲ. ಪುಗಸಟ್ಟೆ ಮಾಲ ಆಗಿಬಿಟ್ಲು ನಮ್ಮವ್ವ. ಹಂಗಾಗಿ ಕಂಡ ಕಂಡ ಹಡಬೇ ಮಕ್ಕಳೆಲ್ಲ ಎಳಕಂಡು ಹೋಗಾವರೇ ಆಕಿನ್ನ. ಬದಲೀಗೆ ನುಚ್ಚೋ ಜ್ವಾಳವೋ ಅವರು ಕೊಟ್ರೆ ಉಂಟು ಇಲ್ಲಾಂದ್ರ ಇಲ್ಲ. ಬಸವೀ ಇದೀಯಲ್ಲ ನೀ ಇರಾದ ನಮ್ ತೀಟಿ ತೀರಿಸಾಕ ಅಂತ ನಗೋರಂತ.

ಆದ್ರ ಹೊಟ್ಟಿಗಿ ಹಿಟ್ಟು ಬೇಕಲ್ಲ. ಅದಕ್ಕ ನಮ್ಮವ್ವ ಊರು ಬಿಟ್ಟು ಬಸ್ ಹತಿಗೆಂಡು ಬಸ್ ಸ್ಟಾಂಡುಗಳಾಗ ದಂಧಿ ಮಾಡಾಕ ಶುರು ಮಾಡಿದ್ಲಂತ. ಅದೂ ಒಂದೋಸು ದಿನ ನಡೀತು. ಐವತ್ತೊ, ನೂರೋ. ಅದೂ ಇಲ್ಲ ಅಂದ್ರ ಕಡೀಗೆ ಇಪ್ಪತ್ತು. ಆಗಿನ ಕಾಲಕ್ಕೆ ಅಷ್ಟು ಸಿಕ್ಕರೆ ಅದೇ ದೊಡ್ಡದಂತ. ಊರಿಗ ಹೊಳ್ಳಿ ಹೋಗಾಕ ಬಸ್ ಚಾಜರ್ಿಗೆ ರೊಕ್ಕ ಇರಲಿಕ್ಕಂದ್ರ ಹತ್ತಿಪ್ಪತ್ತಕ್ಕೂ ಸೆರಗ ಹಾಸಿತಂತ ಕೋಡಿ ನಮ್ಮವ್ವ. ಆ ಹತ್ತಿಪ್ಪತ್ತರೊಳಗೆ ಪೋಲೀಸರು ತಿಂದು, ರೌಡಿಗೊಳು ತಿಂದು, ಮಿಕ್ಕಿದ್ದು ಆಕಿಗೆೆ.

ಇಂಥ ಟೈಮಿನೊಳಗ ನಮ್ಮೂರಿನಲ್ಲಿ ಹನುಮಪ್ಪನ ಓಕಳಿ ನಡೀತು. ಈ ಓಕಳಿ ಐದು ವರ್ಷಕ್ಕೊಮ್ಮೆ ನಡೆತೈತಿ. ಆ ಓಕಳಿಯಿಂದ ಅವ್ವನ ದಂಧಾಕ ಬಡ್ತಿ ಸಿಕ್ಕಿತೆಂದೇ ಹೇಳಬೇಕು. ಹನ್ಮಪ್ಪನ ಒಕಳಿ ಅಂದರ, ಅದೊಂದು ರೀತಿ ಕೆಳ ಕುಲಸ್ಥ ಸೂಳೇರು ಮ್ಯಾಲಿನ ಕುಲಸ್ಥ ಗಂಡಸರ ಮುಂದ ಪ್ರದರ್ಶನಕ್ಕೆ ಇಡೋ ವ್ಯವಸ್ಥೆ.

ಅಂದು ಊರ ಗುಡಿಯ ಮುಂದೆ ಇರೋ ಹೊಂಡದ ಸುತ್ತಲೂ ರಗಡ ಮಂದಿ ಸೇರಿರತಾರ. ಊರ ಮತ್ತು ಪರೂರಿನ ಭಾರಿ ಕುಳಗಳು ಅಲ್ಲಿ ಸೇರಿರುತಾವು. ಊರಿನ ಹರಿಜನ ಕೇರಿ ಕಡಿಂದ ಸೂಳಿ ಬಿಟ್ಟೋರು ಅರಿಶಿನ ಸೀರೆ ಉಡಸಿಕೊಂಡು, ಮುಖಕ್ಕೆ ಭಂಡಾರ ಹಚಕೊಂಡು, ಬಲಿ ಪ್ರಾಣಿಗಳನ್ನು ಎಳಕೊಂಡು ತಂದಾಗ ತರತಾರ. ಸೂಳ್ಯಾರು ಮೆರವಣಿಗೆಯಾಗ ಹೊಂಡಕ್ಕೆ ಐದು ಸುತ್ತು ಹಾಕಿದ ಮ್ಯಾಲ ಓಕಳಿಯಾಟ ಪ್ರಾರಂಭ ಆಕೈತಿ. ಅವ್ವ ಮತ್ತು ಅವ್ವನ ಜೊತೆಗಾತಿಯರು ತಮ್ಮ ರಕ್ಷಣೆಗಾಗಿ ಲಕ್ಕಿ ಪೊರಕೆಗಳನ್ನು ಹಿಡಿದುಕೊಂಡಿರತಾರ. ಗರಡಿಯಲ್ಲಿ ಪಳಗಿದ ಕುಸ್ತಿ ಗಡಿಗಳು ಹೊಂಡಕ್ಕೆ ಇಳಿದು ತಮ್ಮ ದೋತರಗಳಲ್ಲಿ, ಚಂಬು, ಬಕೇಟ್ಗಳಲ್ಲಿ ಹೊಂಡದಲ್ಲಿನ ಬಣ್ಣದ ನೀರು ತುಂಬಿಕೊಂಡು ಗೊಜ್ಜತಿರತಾರ. ಅವರು ಗೊಜ್ಜು ನೀರಿಗೆ ನಮ್ಮವ್ವಂದಿರು ಮೈ ಮಣಸಕೋತ, ವೈಯ್ಯಾರ ಮಾಡಕೋತ ನಿಂದರಬೇಕಾಕೈತಿ.

 ನೀರಾಗ ನೆಂದು ಅವರ ಮೈ ಎಲ್ಲ ಅರಬಿಯೊಳಗ ಹಾಸಿ ಹಂಗಂಗೇ ಕಾಣಿತಿರ್ತದ. ನೀವಾ ಲೆಕ್ಕಾ ಹಾಕ್ಕೋರೀ ನಮ್ಮವ್ವನಂಥವರ ಪಾಡು ಏನಾಗಿರತೇತಿ ಅಂತ. ಓಡಿ ಹೋದ್ರೂ ಬಿಡಾಂಗಿಲ್ಲ, ಅಟ್ಟಿಸಿಕೋತಾ ಬಂದು ನೀರು ಗೊಜ್ಜತಾರ. ಹಿಂಗ ಓಕಳಿ ಆಡಾಕಂತಲೇ ನಮ್ ಕೆಳ ಕುಲಸ್ಥರ ಮನೆಗೊಳಿಗಿ ಪಾಳಿ ಹಚ್ಚಿರತಾರ. ಓಕಳಿ ಮುಗಿದ ಮ್ಯಾಲ ಹಣಮಂತ ದ್ಯಾವರಿಗೆ ಪೂಜೆ ಮಾಡ್ತಾರ, ಆದ್ರ ನಮ್ಮ ಮಂದಿ ಗುಡಿ ಕಟ್ಟೆ ಹತ್ತಂಗಿಲ್ಲ ನೋಡ್ರಿ. ಕೆಳಗ ನಿಂತು ಕೈ ಮುಗೀಬೇಕು. ಆಮ್ಯಾಲ ಮ್ಯಾಗಳ ಕುಲಸ್ಥರು ಅವರವ್ರಿಗೆ ಇಷ್ಟ ಆದ ಹೆಣಮಕ್ಕಳ ಕೂಟೆ ಕರಕೊಂಡು ಹೋಕ್ಕಾರು. 

 ಓಕಳಿ ಆಡಿದ ಬಣ್ಣದ ಗುತರ್ು ಅವ್ವನ ಮುಖದ ಮ್ಯಾಲೆಲ್ಲಾ ಇನ್ನೂ ಹಂಗ ಇತ್ತು. ಅಷ್ಟರೊಳಗ ಒಂದಿಬ್ಬರು ಗಣಮಕ್ಕಳು ನಮ್ಮನಿಗೆ ಬಂದ್ರಂತ. ಅವರು ನಿನ್ನೆಯ ಓಕಳಿಯೊಳಗ ತೊಯ್ದ ಅರಬ್ಯಾಗ ನಮವ್ವನ ನೋಡಿದ್ರು. ದೂರದ ಪ್ಯಾಟಿಯಿಂದ ನಮ್ಮವ್ವನಂತ ಸೂಳೆರನ್ನು ನೋಡುದಕ್ಕಾಗಿಯೆ ಬಂದಿದ್ರಂತ. ಹಿಂಗ ಪ್ರತೀ ಸಲ ಓಕಳಿ ನಡೆಯುವಾಗ ಬರೋದು ಅವರ ಕಾಯಕ. ಸುತ್ತಮುತ್ತಲ ಹಳ್ಳಿಗಳೊಳಗ ಯಾವಾಗ ಓಕಳಿ ನಡೆತಾವು ಅಂತ ಅವರು ಕಾಯತಿರತಾರಂತ.

 ನಮ್ಮವ್ವನ ಮೈಮಾಟದಿಂದ ಸಾಕಷ್ಟು ವ್ಯಾಪಾರ ಮಾಡಕೋಬೌದು ಅಂತ ಅವರಿಗೆ ಅನಿಸಿತ್ತು. ಬಂದೋರು ನಮ್ಮಜ್ಜನ ಕೂಡ ಅದೆನನ್ನೋ ಮಾತಾಡಿದರು. ನಮ್ಮವ್ವ ನಿನ್ನೆ ರಾತ್ರಿಯ ದುಡಿಮೆಯಿಂದ ಮುಲುಗುತ್ತ ಮೈ ಮುರಕೋತ ಮಲಗಿದ್ಲು. ಬಂದೋರು ನಮ್ಮವ್ವನನ್ನು ಕರೆಸಿ ಮತ್ತೊಮ್ಮೆ ಅವಳನ್ನು ಕಣ್ಣಿನಲ್ಲಿಯೆ ಅಳೆದು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಅಜ್ಜನ ಸೂಚನೆಯಂತೆ ನಮ್ಮವ್ವ ಬಟ್ಟೆಗಂಟು ಕಟ್ಟಕೊಂಡು ಅವತ್ತು ಹೊರಟು ನಿಂತ್ಲು. ಆಕಿಗೆ ತಾನು ಎಲ್ಲಿ ಹೊರಟಿರುವುದೆಂದು ಗೊತ್ತಿತ್ತು. ಈ ಹಿಂದೆ ಹೀಗೆ ಹೋದವರು ಬಣ್ಣ ಬಣ್ಣದ ಚಿತ್ತಾರದ ಸೀರೆ ಉಟ್ಟುಕೊಂಡು ಕೊರಳು ತುಂಬಾ ಬಂಗಾರ ಹೊತ್ಕೊಂಡು ಮರಳಿ ಬರುತ್ತಿದ್ದುದು ಆಕೆಯ ಕಣ್ಮುಂದೆ ಕಟ್ಕೊಂಡಿತ್ತು. ಆ ಚಿತ್ತಾರ ಆಕಿ ಕಣ್ಣಗುಬ್ಯಾಗ ಹೊಳಿತಿತ್ತು.

 ಅವ್ವ ಬಾಂಬೇದಾಗಿನ ದಂಧೆ ಮನೆಗೊಳ ಪಾಲಾದ್ಲು. ಅಲ್ಲಿಗೆ ಹೊದ ಮೇಲೆ ಆಕಿಗೆ ಗೊತ್ತಾತು. ಅದು ಬೇಕು, ಇದು ಸಾಕು ಅಂತ. ನೀರಿಗೆ ಇಳಿದ ಮ್ಯಾಲ ಇದ್ದಷ್ಟು ದಿನ ಈಜಾಡಬೇಕು. ಬಾಂಬೆದಾಗ ಭಿಂಡಿಚಾಳ್, ಪತ್ರಚಾಳ್ ಅನ್ನಾ ಕಡೇ ನಮ್ಮವ್ವ ಇರೋ ದಂಧೆ ಮನಿ ಇತ್ತಂತೆ. ಅಲ್ಲಿ ಮಾತ್ರ ಆ ಜಾತಿ ಈ ಜಾತಿ ಅನ್ನೋರು ಇರಲಿಲ್ಲ. ಮುಸಲ್ಮಾನರು, ಮರಾಠ್ರು, ಒಡ್ಡರು, ಕೊರಮರು, ಹಿಂಗೆ ಎಲ್ಲಾ ಜಾತಿ ಗಣಮಕ್ಕಳು ಬರ್ತಿದ್ರಂತೆ. ಆದ್ರ ಮನಿ ಮಾತ್ರ ಬಾಳ ಸಣ್ವು. ಹತ್ತಡಿ ಉದ್ದ ಐದಡಿ ಅಗಲ ಇರೋ ಕೊಣಿಯೊಳಗ ಒಂದರ ಮ್ಯಾಲೊಂದು ಮಂಚ ಇದ್ದವಂತ. ಎನ್ನಿಗಮಟು ವಾಸನಿಯ ಚಾದರ, ಮತ್ತು ಒಂದು ಜಮಖಾನಿ. ಅದರೊಳಗ ಅವ್ವ ಎಂಬ ಕೈದಿ. ಗಿರಾಕಿಗೊಳ ದುಡ್ಡಿನಾಗ ಘರವಾಲಿಗೆ ಅರ್ಧಪಾಲು ಕೊಡಬೇಕಾಗತಿತ್ತು.

 ಘರವಾಲೀ ಮನ್ಯಾಗ ಎರಡು ಥರ ಸಂಪಾದನೆ ಇರತೈತಿ. ಒಂದು ಮೈ ಹಾಸೋದು, ಇನ್ನೊಂದು ಡಾನ್ಸು ಮಾಡಾದು, ನಮ್ಮವ್ವ ಬಾಳ ಚಾಲಾಕಿ. ಮತ್ತ ಕಣ್ಣೂ ಮೂಗಿಲಿ ಬಾಳ ನೇಟೊಗ ಚಂದ ಇದ್ಲು. ಸಿನಿಮಾ ಹಾಡ ಅಂದ್ರ ಆಕಿಗಿ ಬಾಳ ಇಷ್ಟ. ಹೊಸ ಹಾಡು ಬಂದ್ರ ಲಗೂನ ಕಲ್ತ ಬಿಡತಿದ್ಲು. ಮತ್ತ ಅದಕ್ಕ ತನಗ ಬರೋ ಸ್ಟೆಪ್ ಹಾಕ್ಕೊಂಡು ಕುಣಿತಿದ್ಲಂತ. ಜನಾ ನೋಟು ಎಸೆಯೋರು. ವರುಸಕ್ಕ ಒಂದೆಲ್ಡು ಸಲ ಘರವಾಲಿ ಮನೆಯಾಗಿಂದ  ಊರೀಗೆ ಹೋಗಾಕ ಬಿಡೋರು. ಊರಿಗೆ ಬಂದಾಗ ನಮ್ಮಜ್ಜಗ ದೋತ್ರ, ಅಂಗಿ, ಅಜ್ಜಿಗೆ ಸೀರಿ ಎಲ್ಲ ತರತಿದ್ದಳು ನಮ್ಮವ್ವ. ಅಲ್ಲಿ ಕೋಲಿಯೊಳಗ ಬಂಧಿಯಾಗಿ ಇದ್ದು ಇದ್ದು ಬ್ಯಾಸರಾಗಿ ಈ ಮೈ ಮಾರೋ ದಂಧೀನ ಬ್ಯಾಡ ಅನಸಾಕ ಹತ್ತಿತಂತ. ಹಿಂಗಾಗಿ ಪಾಡತಂಗ ರೊಕ್ಕ ಮಾಡಕೊಂಡ ನಮ್ಮವ್ವ, ಒಂದಿನ ತೆಪ್ಪಸಗೊಂಡು ಊರಿಗೆ ಬಂದ್ಲು. ದುಡಿದ ದುಡ್ಡಿನಾಗ ನನ್ನ ತಂಗೇರು ತಮ್ಮಂದಿರ ಮದುವಿ ಮಾಡಿ ಕೊಟ್ಲು. ಯಾರಿಗೋ ಹ್ಯಂಗ ಮಕ್ಕಳಾಗತಾವೋ ಹಂಗ ನಮ್ಮವ್ವಗೂ ಮಕ್ಕಳಾದ್ವು. ಮೊದಲ ನಮ್ಮಕ್ಕ ಹುಟ್ಟಿದ್ಲು. ಆಮ್ಯಾಲ ನಾನು ಹುಟ್ಟಿದಿನಂತ. ನಮಗ ಎಲ್ಲ ಇತ್ತು. ಆದ್ರ, ಅಪ್ಪ ಯಾರಂತ ಹೇಳಕೊಳ್ಳಾಕಾದ್ರೂ ಒಬ್ಬ ಮನುಷಾ ಇರಲಿಲ್ಲ. ನಮ್ಮವ್ವನಂಗ ನಮ್ಮಕ್ಕನೂ ಸೂಳಿ ಆದ್ಲು. ಇದು ನಮ್ಮಜ್ಜಿ ಮುತ್ತಜ್ಜಿಯಿಂದ ಬಂದ ಬಳುವಳಿ. ನಮ್ಮ ಮನಿತನ ಅಂದ್ರ ಸೂಳೀರ ಜಗತ್ತು ಇದ್ದಾಂಗ. ಸಂಸಾರ ಕಟಕೊಳಾಕ ಈ ಮ್ಯಾಗಲ ಕುಲಸ್ಥರು ಬಿಡುದಿಲ್ಲ. ಅವರ ಮನಿ ಹೆಣಮಕ್ಕಳು ಚಂದ ಚಂದನ ಗಂಡುಮಕ್ಕಳ ಕೂಟೆ ಸಂಸಾರ ಮಾಡಿಕೊತಾರಾ. ನಮ್ಮನಿ ಹೆಣಮಕ್ಕಳಿಗೆ ಇಂಥಾ ಬಾಳೇವು. ಮೈಯಾಗ ಖಂಡ ಇರೋತನ ಚಲೋ, ಆಮ್ಯಾಲಿನ ಪಾಡು ನಾಯಿಬಾಳು.

ನಮ್ಮ ಕೇರಿಯೊಳಗ ಹೆಣ್ಣು ಮಗಾ ಹುಟ್ಟಿತು ಅಂದ್ರ ಮುತ್ತು ಕಟ್ಟತೀವಿ, ದೇವದಾಸಿ ಮಾಡಿತೀವಿ, ಬಸವಿ ಬಿಟ್ಟೇವಿ, ದೇವರ ಕೂಸ ಐತದು… ಇಂಥಾವ ಮಾತು. ಹೆಣ್ ಮಗಾ ಆತು ಅಂದ್ರೆ ಪೇಟೆ ಕಡೆಯೋರು ಹೊಟ್ಟೆ ಕುಯ್ಯಿಸಿಕೋತಾರಂತ, ಆದ್ರ ನಮ್ಮ ಊರುಗಳಾಗ ಹೆಣಮಗಾ ಆತು ಅಂದ್ರೆ ಹಬ್ಬಾ ಮಾಡ್ತಾರ. ಹೆಣ್ಣಗೂಸ ಹುಟ್ಟಿದರ, ಅದು ಬಾಂಬೇಗ ಹೊಕ್ಕೈತಿ, ಅಲ್ಲಿ ಮೈ ಮಾರಿಕಂಡಾದ್ರೂ ನಮ್ಮನ್ನ ಸಾಕತೇತಿ ಅಂತ ಖುಷೀ ಪಡೋ ದರಬೇಸಿ ಪರಸ್ಥಿತಿ ನಮಗ. ಇಲ್ಲುಟ್ಟೋ ಯಾವ ಹೆಣಮಗಾನೂ ಇವತ್ತಿನ ಮಟಾ ಬಸವೀ ಆಗದಂಗೆ ಬಚಾವು ಮಾಡಾಕ ಒಬ್ಬ ದ್ಯಾವರೂ ಹುಟ್ಟಿಲ್ಲ ಈ ಭೂಮ್ತಾಯಿ ಹೊಟ್ಯಾಗ. ಹೆಣಮಗಾ ಮೈ ನೆರೀತಂದ್ರ ಬಾಂಬೇ, ಪೂನಾ, ಸಾಂಗ್ಲೀನಾಗಿಂದ ಓಡಿ ಬರತಾರ ಘರವಾಲಿಗೊಳು. ಊರಿಗೆಲ್ಲ ಊಟ ಹಾಕಸಿ ಬೆಲ್ಲ ಹಂಚಾಕ ಕಾಸು ಬೇಕಲ್ಲಪಾ, ಘರವಾಲಿಗೊಳು ಕೊಡತಾರ ಹೆಣಮಕ್ಕಳ ಹೆತ್ತೋರಗ! ಸಿನಿಮಾ ನೋಡೋಕೆ ಟಿಕೇಟ ತಗೊಳ್ಳಕಾ ಪಾಳಿ ಹಚ್ಚಿರ್ತಾರಲ್ಲಾ? ಹಂಗೆ, ಊರಾಗಿನ ಮ್ಯಾಗಣ ಕುಲಸ್ಥರು. ಅವರು ಮೈನರದ ಹೆಣಮಗಾನ ದವಡೀಗ ಹಾಕ್ಕೊಂಡು ಅಗದು ಬಿಸಾಕಿದ ಮ್ಯಾಲ ಘರವಾಲಿ ಕೊಟ್ಟ ಕಾಸು ತೀರಿಸಾಕ ಹಸೀ ಮೈ ಹೊತಗೊಂಡು ಬಾಂಬೇಗ ಹೋಕ್ಕೈತಿ ಹೆಣ್ಣಗೂಸ. ಅಲ್ಲೊಂದೆರಡು ವರ್ಷ ಕಂಡ ಕಂಡೋರ ಕೆಳಗ ಬಿದಕೊಂಡು, ನಾಕು ಕಾಸು ಕಂಡು, ಬರುವಾಗ ಚೈನು, ಬಳೀ, ಪೌಡ್ರು, ಲಿಪಸ್ಟಿಕ್ಕು, ಒಳ್ಳೇ ಬಟ್ಟೀ ಬರೀ ಹಾಕ್ಕಂಡು ಬರತೈತಿ. ಮೈನರೆಯೋ ಹೆಣ್ಣಕೂಸಗಳಾದ್ರೂ ಏನ ಮಾಡ್ತಾವ. ಅಕ್ಕಾ ಬಂದಾಳ.. ಬಟ್ಟೀ  ಬರೀ, ಚೈನು, ಬಳೀ ಎಲ್ಲ ತಂದಾಳ. ನಾವೂ ಹೋಗುನು ಬಾಂಬೇಗ ಅನಸತದ ಅವುಕ್ಕ. ತಿನ್ನಾಕ ಒಂದು ಮುರುಕ ಜ್ವಾಳದ ರೊಟ್ಟೀನೂ ಇಲ್ಲವಲ್ಲ ಮನ್ಯಾಗ. ರೊಟ್ಟಿ ಸಿಗತೈತಿ ಅಂತ ಬಾಂಬೇ ಬಸ್ ಹತ್ತುತಾವಾ ನಮ್ಮ ಹೆಣಗೂಸುಗಳು.

 ಬಾಂಬೇಗ ಹೋದ ಮ್ಯಾಲ ವರುಸಾನ ಕಾಲ ಇದ್ದು, ಹೊಳ್ಳಿ ಬರೋವಾಗ ಮೈ ತುಂಬಾನ ಜಡ್ಡು ಹೊತಗಂಡು ಬರತಾವು. ಬಂದ ಆರೇಳು ತಿಂಗಳಾ ಅಷ್ಟೆ. ಅದೆಂಥೆಂಥಾ ಜಡ್ಡು ಬರತಾವೋ ಏನೋ, ನರಳೀ ನರಳೀ ಸಾಯ್ತಾವ. ಯಾರ್ಯಾರಿಗೋ ಹುಟ್ಟಿದ ಕೂಸಗಳೋ, ಕೇಳಾಕ ದಿಕ್ಕೂ ದೆಸೀ ಇಲ್ಲದಂಗ ಬೀದಿಗೊಂದು ಪಾಲಾಗ್ತಾವು. ಅವ್ವಿಲ್ಲ, ಅಪ್ಪಿಲ್ಲ, ಹೆಣಗೂಸಾದ್ರ ಇನ್ನ ಹತ್ತೊರಸ ಕಳದ ಮ್ಯಾಲ ಅದರ ಕಥೆಯೂ ಇಷ್ಟಾ. ಗಂಡುಗೂಸಾದರ ಕಳ್ಳತನವೋ, ಕೊಲೆಯೋ, ಮಾಡಬಾರದ್ದು ಮಾಡಕಂಡು ಬದಕತಿರ್ತಾವು. ಅದರಾಗ ಅರ್ಧ ಹುಡುಗರನ್ನ ಪೊಲೀಸರೇ ಹೊಡೆದಾಕ್ಕಾರ. ಇನ್ನರ್ಧ ಊರು ಬಿಟ್ಟು ದೇಶಾಂತಾರ ಹೋಕ್ಕಾವ. ಇದ್ನೆಲ್ಲ ನೋಡಿ ನೋಡಿ ನಮ್ಮ ಅಕ್ಕತಂಗ್ಯಾರು ಕಣ್ಣು ಇಮರೋಗಿ ಜೀವ ಇದ್ರೂ ಹೆಣ ಇದ್ದಂಗ ಇರಬೇಕಾಕ್ಕೆತಿ.

* * *

ಇಂಥ ಲೋಕದೊಳಗ ಬದುಕಿ ಬಂದಿರೋ ಹೆಣಮಗಳು ನಮ್ಮವ್ವ. ಆಗ ಅಷ್ಟ ಕಷ್ಟ ಪಟ್ಟ ಬಂದಿದಕೋ ಏನೋ, ಈಗ ನಮ್ಮ ಕೇರಿಯೊಳಗ ನಾಲ್ಕು ಮಂದಿ ನಿಂತು ನೋಡುವಂತ ಮನಿ ಕಟ್ಟಿಸಿಕೊಂಡಾಳ. ಅರಮನೆಯಂಥ ಮನೆ ಇದ್ದರೂ ಸೈತ ಆಕಿ ಹಗಲೆಲ್ಲ ಕಮತದಾರರ ಹೊಲಗೊಳಾಗ ಕೆಲಸ ಮಾಡಕೋತ ರಾತ್ರಿಯಲ್ಲಿ ಸವದತ್ತಿ ಯಲ್ಲವ್ವಳ ಅಣತಿಯಂಗ ಬಂದ ಗಿರಾಕಿಗಳೆಗೆಲ್ಲ ಸೆರಗು ಹಾಸಿ ಜೋಗತಿ ಸೇವೆಯನ್ನು ಮಾಡಬೇಕು. ಎರಡು ಮಕ್ಕಳಾಗಿ, ಆ ಮಕ್ಕಳು ಎದೆಯುದ್ದ ಬೆಳೆದಿದ್ದರೂ ಕೂಡ.

ನಾನು ಅರಮನಿಯಂಥ ಮನಿಯಾಗ ಹುಟ್ಟಿದ್ರೂ ಕೂಡ ಊರ ಹುಡುಗರು ಯಾರು ನನ್ನನ್ನು ಆಟಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ. ಹೊಲಗೇರಿಯ ಹುಡುಗರ ಕೂಡೆ ಆಡಿ ಬೆರೆಯಬೇಕಿತ್ತು. ತಿಪ್ಪೆಯ ಗುಂಡಿ, ನಾಯಿ, ಹಂದಿ, ಗುಡಿಸಲು, ದನ ಕೊಯ್ಯುವ ದುರ್ನಾತ, ದುರಗವ್ವನ ಗುಡಿಯ ಭಂಡಾರ ಇವೇ ನಮ್ಮ ಸಂಗಾತಿಗಳಾಗಿದ್ದವು.

 ನಾನು ಶಾಲೆಗೆ ಹೋಗುತ್ತಿದ್ದರೂ ಸೈತ ಕೂಡ ಅಕ್ಕಾನ ಅವ್ವ ಯಾಕೋ ಶಾಲೆಗೆ ಸೇರಿಸಿರಲಿಲ್ಲ. ನನಗೆ ಅಕ್ಕನ್ನ ಬಿಟ್ಟು ಶಾಲೆಗೆ ಹೋಗಾಕ ಬಾಳ ಬೇಸರ ಆಗ್ತಿತ್ತು. ನಾನು ಅಕ್ಕನ್ನ ಅಷ್ಟೊಂದು ಹಚ್ಚಿಕೊಂಡು ಬಿಟ್ಟಿದ್ದೆ. ನಾನು ಶಾಲೆಗೆ ಹೋಗೋದಿಲ್ಲ ಎಂದು ಹಟ ಹಿಡಿಯುತ್ತಿದ್ದೆನಾದರೂ ಅವ್ವ ಅದೆನೇನೋ ಸಮಾಧಾನ ಹೇಳಿ ನನ್ನನ್ನು ಸಾಲೀಗಿ ಕಳುಹಿಸುತ್ತಿದ್ದಳು.

ಹಂಗ ನೋಡಿದರ ಸಾಲೀಗಿ ಹೋಗುದಂದ್ರ ನನಗ ಬಾಳ ಬ್ಯಾಸರ ಆಗತಿತ್ತು. ಯಾವಾಗಲೂ ಕಣ್ಣೀರ ಹಾಕ್ಕೋತನ ಸಾಲಿ ದಾರಿ ಹಿಡಿತಿದ್ದೆ. ಸಾಲಿಗೆ ಹೋಗೋ ಊರ ದಾರ್ಯಾಗ ಕೆಲವರು ನಮ್ಮವ್ವ, ಅಕ್ಕಂದಿರ ವಿಷಯವಾಗಿ ಏನೇನೋ ಅಂದು ಅಣಕಿಸುತ್ತಿದ್ದರು. ಒಮ್ಮೊಮ್ಮೆ ಅಂಗಡಿಗೆ ಕರಕೊಂಡು ಹೋಗಿ ಪೆಪ್ಪರಮೆಂಟ್ ಕೊಡಿಸಿ ಅವ್ವ ಅಕ್ಕಂದಿರ ವಿಷಯ ಕೆದಕಿ ತಿಳಕೋತಿದ್ರು ನನ್ನ ಮೈಯೆಲ್ಲ ಕೈಯಾಡಿಸುತ್ತಿದ್ರು. ಹಿಂಗಾಗಿ ಊರ ನಡುವು ಹಾಸಿ ಹೊಗಾಕ ಯಾವಾಗಲೂ ನನಗ ಒಂಥರಾ ಅಸಹ್ಯ ಎನಿಸುತ್ತಿತ್ತು. ಇತ್ತಿತ್ತಲಾಗಂತೂ ಊರು ಸುತ್ತು ಹೊಡದು ಹೋಕ್ಕಿದ್ದೆ. ಕೆಲವೊಮ್ಮೆ ಸಾಲಿ ತಪ್ಪಿಸಿ ತಿಪ್ಪಿಗುಂಡಿಯಲ್ಲಿನ ಬಗೆಯ ಚಿತ್ರ ವಿಚಿತ್ರದ ಕಸ ಹುಡುಕಲು ಹೊರಟು ಬಿಡುತ್ತಿದ್ದೆವು. ಮಾಸ್ತರರು ಹುಡುಕಲು ಬಂದರೆ ಮನೆಯ ಹಿಂದಿನ ದೊಡ್ಡಿಗಳಲ್ಲಿ ತಪ್ಪಿಸಿಕೊಳ್ಳುತ್ತಿದ್ದೇವು.

ನಮ್ಮೂರು ಸಾಲಿ ಊರ ಹೊರಗಿನ ಕೊತ್ಲಪ್ಪ ದೇವರ ಗುಡಿಯಾಗ ನಡೀತಿತ್ತು. ಗುಡಿಯ ಪ್ರಾಂಗಣ ವಿಶಾಲವಾಗಿತ್ತು. ಅಪರೂಪಕ್ಕೆ ಹಳ್ಳಿಯ ಭಕ್ತರು ಅಲ್ಲಿಗೆ ಬಂದು ಹೋಗುವುದಿತ್ತು. ಒಂದರಿಂದ ಆರನೆ ತರಗತಿಯ ಎಲ್ಲ ಮಕ್ಕಳು ಗುಂಪಾಗಿ ನೆರೆದು ಗದ್ದಲದಲ್ಲೇ ಏನೋ ಒಂದಿಷ್ಟು ಕಲಿಯುತ್ತಿದ್ದೆವು. ಗುಡಿಯ ಪೂಜಾರಪ್ಪ ಅಲ್ಲೆ ಇದ್ದು ಮಾಸ್ತರ ಟೀ ಕುಡಿಯಲೋ, ಚುಟ್ಟಾ ಸೇದಲೋ ಹೊರ ಹೋದಾಗ ಅತನೇ ಮಾಸ್ತರನ ಪಾತ್ರವನ್ನು ನಿಭಾಯಿಸುತ್ತಿದ್ದ.  ಪ್ರಾಂಗಣದ ಮೆಟ್ಟಿಲುಗಳಿಗೆ ಅಂಟಿಕೊಂಡಂತೆ ಇದ್ದ, ಕಸ ಚೆಲ್ಲಲು ಬಳಸಬಹುದಾದ ಒಂದಿಷ್ಟು ಜಾಗದಲ್ಲೆ ನಾವು ಹೊಲಗೇರಿಯ ಮಕ್ಕಳು ತುದಿಯಲ್ಲಿ ಕೂರುತ್ತಿದ್ದೆವು.  ಜಾಗ ಸಾಲದೆ ಒಮ್ಮೊಮ್ಮೆ ನಮ್ಮಲ್ಲೇ ಪೈಪೋಟಿ ನಡೆದು ಕೂತಲ್ಲೇ ಒಬ್ಬರನ್ನೊಬ್ಬರು ನೂಕುತ್ತ, ಗಿಂಡುತ್ತ ಹೊಡೆದಾಟ ಮಾಡಿಕೊಂಡು ಪ್ರಾಂಗಣದ ಅಂಚಿನಿಂದ ಕೆಳಕ್ಕೆ ಉರುಳುವುದೂ ಇತ್ತು. ಹೊಲೆಯರ ಮಕ್ಕಳಾದ ನಾವು ಮಾರು ದೂರವನ್ನು ದಾಟಿ ಮುಂದೆ ಹೋಗುವಂತಿರಲಿಲ್ಲ. ಅಪ್ಪಿ ತಪ್ಪಿ ಮೈ ಮರೆತು ಒಂದೆಜ್ಜೆ ಮುಂದೆ ಹೋದವರಿಗೆ ಮಾಸ್ತರ ಉಗ್ರ ಶಿಕ್ವ್ಷೆಗಳನ್ನು ನೀಡಿ ಶಿಕ್ಷಿಸುತ್ತಿದ್ದರು.  ಪೂಜಾರಪ್ಪ ಮುಂದೆ ಹೋಗಿ ಮಾರವ್ವ ನಿನ್ನನ್ನು ಬಲಿ ತೆಗೆದುಕೊಳ್ಳುವಳು ಎಂದು ಭೀತಿ ಹುಟ್ಟಿಸುತ್ತಿದ್ದ. ನಾವು ದೂರದಲ್ಲಿಯೇ ಕುಳಿತು ಆ ಕಪ್ಪ ಹಲಗೆಯ ಮೇಲೆ ಬರೆದಿದ್ದನ್ನು ದಿಟ್ಟಿಸಿ ನೋಡಿ ನಮ್ಮ ಪಾಟಿಯ ಮೇಲೆ ಗೀಚಲು ಪ್ರಯತ್ನಿಸುತ್ತಿದ್ದೆವು.  ಆ ಬೋರ್ಡನ್ನೇ ಒಂದು ದೈವ ಎಂಬಂತೆ ದಿಟ್ಟಿಸುತ್ತಿದ್ದರು. ಈ ಕಪ್ಪು ಹಲಗೆ ಬರೀ ಕಪ್ಪು ಹಲಗೆ ಅಲ್ಲ. ಇದು ಆ ವಿದ್ಯಾದೇವತೆಯ ಇನ್ನೊಂದು ಮೈ…. ಇದನ್ನು ಮುಟ್ಟಬೇಕಾದರೆ ನಾವು ಪವಿತ್ರವಾಗಿರಬೇಕು, ಎಂದು ಸ್ವತಃ ಮಾಸ್ತರೇ ಬೋಡರ್ಿಗೆ ಮೊದಲು ನಮಸ್ಕರಿಸಿ ಪಾಠ ಬರೆಯುತ್ತಿದ್ದರು. ಅಂತಹ ವಿದ್ಯಾದೇವತೆಯ ಮೈಯನ್ನು ನಾವೇಕೆ ಮುಟ್ಟಬಾರದೂ… ನಾವು ಹೇಗೆ ಕೀಳು… ನಮಗೇಕೆ ಆ ತಾಯಿಯ ಆಶೀವರ್ಾದ ಇಲ್ಲ ಎಂದು ನಾವು ಹೊಲಗೇರಿಯ ಮಕ್ಕಳೆಲ್ಲ ಮಾತಾಡಿಕೊಳ್ಳುತಿದ್ದುದು ಉಂಟು. ಆಲೋಚಿಸಿದ್ದುಂಟು. ಆ ಬೋಡರ್ು ನಮಗೆ ನಿಗೂಢ. 

ಪ್ರಾಂಗಣದ ಅಂಚಿಗಿದ್ದ ನಮ್ಮತ್ತ ಯಾವ ಮಾಸ್ತರೂ ಬರುತ್ತಿರಲಿಲ್ಲ. ಇಂಗ್ಲೀಷ್ ಭಾಷಾ ಮಾಸ್ತರನ ಮಾಯಾದಂಡದ ಹೊಡೆತದ ದೆಸೆಯಿಂದಾಗಿ ಎಷ್ಟೊ ಹುಡುಗರು ಶಾಲೆ ತ್ಯಜಿಸಿ ಜೀತವೇ ಸುಖ ಎಂದು ಕಳೆದುಹೋಗಿದ್ದರು. ಅಪ್ಪಿ ತಪ್ಪಿ ನವ್ಮ್ಮಂಥವರ ತಂದೆ ತಾಯಿಗಳು ಬಂದರೆ `ನಮ್ಮ ಹುಡುಗನಿಗೆ ಚೆನ್ನಾಗಿ ವಡ್ಡುಬಡ್ಡು ನಾಲ್ಕಕ್ಷರ ಕಲ್ಸಿ ಸೋಮಿ' ಎಂದು ದೂರದಲ್ಲೇ ನಿಂತು ಹೇಳಿ ಮತ್ತೇನನ್ನೂ ಗಮನಿಸದೆ ಮರೆಯಾಗುತ್ತಿದ್ದರು. ದೇವಸ್ಥಾನ ಮುಂಗಟ್ಟೆಯ ಅಂಚಿಗೆ ಮೆಟ್ಟಿಲುಗಳ ಬಳಿ ಅಂಟಿಕೊಂಡಂತೆ ಕೂತಿರುತ್ತಿದ್ದ ನಾವು ಎಷ್ಟೋ ಸಲ ಮಳೆ ಗಾಳಿ ಬಿಸಿಲಿಗೆ ಹಾಗೇ ಮೈ ಒಡ್ಡಿ ಕಲ್ಲಂತೆ ಕಲ್ಲಾಗಿರುತ್ತಿದ್ದೆವು. ಒಳಗಡೆಯ ಕಲ್ಲು ದೇವರಿಗೆ ಇಷ್ಟು ಚಂದದ ಬೃಹತ್ ದೇವಸ್ಥಾನವನ್ನು ಕಟ್ಟಿದ ಈ ಸಮಾಜ ನವ್ಮ್ಮಂಥವರಿಗೆ ಯಾಕೆ ಚಾಟು ಮಾಡುವುದಿಲ್ಲ ಎಂದು ಯೋಚನೆಗೆ ಬೀಳುತ್ತಿದ್ದೆವು. 

ಅಟೆಂಡೆನ್ಸ್ ಕರೆಯುವಾಗಲೂ ಆ ಮಾಸ್ತರು ನಮ್ಮ ಹೆಸರು ಕರೆಯುತ್ತಿರಲಿಲ್ಲ. ಇನ್ನು ನಾವು ಬರೆದಿದ್ದು ಸರಿ ಇದೆಯೊ ಇಲ್ಲವೊ ಎಂದು ಪರಿಶೀಲಿಸುವ ಪರಿಯೇ ಕ್ರೂರವಾಗಿತ್ತು. ಪ್ರಾಂಗಣದ ಕೆಳ ಮೆಟ್ಟಿಲಲ್ಲಿ ಕೂತಿರುತ್ತಿದ್ದ ನಾವು ಎದ್ದು ನಿಂತು ಅಪರಾಧಿಗಳ ಹಾಗೆ ಸ್ಲೇಟನ್ನು ಹಿಡಿದು ನಿಲ್ಲಬೇಕಿತ್ತು. ಅದನ್ನು ಯಾವುದೊ ಒಬ್ಬ ಮೇಲ್ಜಾತಿ ಹುಡುಗ ಗಮನಿಸಿ ಏನೋ ಒಂದು ಹೇಳಿದ ಮೆಲೆ ನಾವು ಹತಾಶೆಯಲ್ಲಿ ಕೂರುತ್ತಿದ್ದೆವು. ಮಾಸ್ತರು ನೋಡಿ ಮೆಚ್ಚಲಿ ಎಂದು ದುಂಡಾಗಿ ಬರೆದು ಬರೆದು ತಮ್ಮ ಸ್ಲೇಟನ್ನು ಮಾಸ್ತರು ಒಮ್ಮೆಯೂ ನೋಡಲಿಲ್ಲವಲ್ಲಾ ಎಂದು ತಾವು ಬರೆದದ್ದನ್ನೇ ಸಿಟ್ಟಿನಿಂದ ಅಳಿಸಿ ಸ್ಲೇಟನ್ನು ಕುಕ್ಕಿ ಬ್ಯಾಗಿನ ಒಳಗಿಟ್ಟು ಸುಮ್ಮನೇ ಮಿಕಿ ಮಿಕಿ ಅತ್ತಿತ್ತ ನೋಡುತ್ತ ಮೃದು ಭಾವಕ್ಕೆ ಮುಳ್ಳು ನಾಟಿದಂತಾಗಿ ಪೆಚ್ಚಾಗಿ ಕೂತು ಬಿಡುತ್ತಿದ್ದರು.  ಮಕ್ಕಳ ಆ ಮನಸ್ಥಿತಿಯನ್ನು ದೂರವೇ ನಿಂತು ಗ್ರಹಿಸಬಹುದಿತ್ತು. ಮೇಲು ಜಾತಿ ಮಕ್ಕಳು ತಮ್ಮ ಪಾಲಕರನ್ನು ಅನುಕರಿಸಿ ಹೊಲೆ ಮಕ್ಕಳನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ. `ಸಾ, ಸಾ, ಇವ್ನು ನನ್ನ ಮುಟ್ಟಿಬಿಟ್ಟ ಸಾ… ರಜ ಕೊಡಿ ಸಾ… ಮನೆಗೋಗಿ ನೀರುಯ್ಯಬೇಕು ಸಾ… ಇವುನ್ಗೋಡೀರಿ ಸಾ…' ಎಂದು ಗದ್ದಲವೆಬ್ಬಿಸಿ ಎಂದು ಎಂದು ತಮಗೆ ರಜೆ ಬೇಕಾದಾಗಲೆಲ್ಲ ನಮ್ಮ ಮೇಲೆ ಚಾಡಿ ಹೇಳುತ್ತಿದ್ದರು. ಹಲವೊಮ್ಮೆ ತಂದೆ ತಾಯಿಗಳನ್ನು ಕರೆತಂದು ಉಗಿಸಿ ಹೊಡೆಸುತ್ತಿದ್ದರು. ಅದು ಸಾಲದು ಎಂಬಂತೆ; ಎಷ್ಟು ಸಲ ನಿಮಗೆ ಹೇಳಬೇಕೊ ದನಾ ತಿನ್ನೋ ಹಂದಿ ನಾಯಿಗಳಾ; ನಿಮ್ಮಿಂದ ನಮಗೂ ಒಂದು ಮಾತಲ್ರೊ ಎಂದು ಮಾಸ್ತರರು ಚಚ್ಚಿ ಹಾಕುತ್ತಿದರು. ಹೀಗಾಯಿತು ಎಂದು ಮನೆಯಲ್ಲೂ ಯಾರಲ್ಲೂ  ನಾವು ಹೇಳಿಕೊಳ್ಳುವಂತಿರಲಿಲ್ಲ. ಆಟಕ್ಕೆ ಬಿಟ್ಟಾಗ ಮೈ ಮರೆತು ಆಡುವಾಗ ಅದು ಹೇಗೊ ಮುಟ್ಟಿಬಿಡುವ ಪ್ರಸಂಗಗಳು ಉಂಟಾಗಿ ಅದೇ ಒಂದು ರಂಪವಾಗುತ್ತಿತ್ತು. ಅಷ್ಟೆಲ್ಲ ಬೈಯ್ದರೂ, ಹೊಡೆದರೂ ಮುಖಕ್ಕೆ ಉಗಿದರೂ ಆ ಹೈಕಳು ಆದ ಮೈದಾನದ ಒಂದು ಮೂಲೆಯಲ್ಲಿ ಅನಾಥವಾಗಿ ಕೂತು ಅತ್ತು ಅತ್ತು ಬರೆಬಂದಂತಿದ್ದ ಕಣ್ಣೀರ ಕೆನ್ನೆಗಳ ಗೀರುಗಳ ಒರೆಸಿಕೊಳ್ಳುತ್ತ ನೀಲಾಕಾಶವನ್ನು ಸುಮ್ಮನೆ ದಿಟ್ಟಿಸುತ್ತ ಬೆಲ್ಲು ಹೊಡೆಯುವುದನ್ನೇ ಕಾಯುತ್ತಿರುತ್ತಿದ್ದೆವು. 

ಪೂಜಾರಪ್ಪನಂತೂ ಆಗಾಗ ಖ್ಯಾತೆ ತೆಗೆದು ಈ ದರಿದ್ರರಿಂದ ಮಾರಿಗುಡಿಗೆ ಸೂತಕವಾಗಿ ಮಾರಮ್ಮನೇ ಗುಡಿ ಬಿಟ್ಟು ಹೋಗವಳೆ ಎಂದು ಆರೋಪಿಸಿ; ನಮ್ಮನ್ನು ಶಾಲೆ ಬಿಡಿಸಿದರೆ ಮಾತ್ರ ಊರಿಗೆ ಉದ್ದಾರವಾಗುವುದು ಎಂದು ಏನೇನೋ ಪುರಾಣ ಬಿಚ್ಚುತ್ತಿದ್ದ.  

 ನಮ್ಮ ಪಾಡಿಗೆ ನಾವು ಪಾಟಿಯಲ್ಲಿ ಏನಾದರು ತಿದ್ದುತಿರುವಾಗ ಹೊಲೆ ಸೂಳಿಮಗ ಎನ್ನುವ ಶಬ್ದ ಕಿವಿಗೆ ಅಪ್ಪಳಿಸುತ್ತಿತ್ತು. ಕತ್ತೆತ್ತಿ ನೊಡಿದರೆ ಆ ಹುಡುಗರು ತಮ್ಮ ಪಾಟಿಯಲ್ಲೂ ಆದನ್ನೆ ಬರೆದು ನಮ್ಮ ಮುಖಕ್ಕೆ ಹಿಡಿಯುತ್ತಿದ್ರು. ನಾವು ಅವರಿಗೆ ಏನಾದರೂ ತಿರುಗಿ ಅಂದರೆ ಉಚ್ಚಿ ಹೊಯ್ಯಲು ಬೀಡುವ ಬಿಟ್ಟಾಗ ಇರಿಯುವ ಹೋರಿಗಳಂತೆ ಹತ್ತಾರು ಹುಡುಗರು ಸುತ್ತಗಟ್ಟಿ ನಮಗೆ ಸೂಳಿ ಮಗ, ಸೂಳಿ ಮಗ ಎಂದು ರೇಗಿಸುತ್ತಿದ್ದರು. ನಾವು ಆ ಹುಡುಗರಿಂದಾಗುವ ಅವಮಾನ, ಕಿರುಕುಳ ತಪ್ಪಿಸಿಕೊಳ್ಳುವುದಕ್ಕಾಗಿಯೇ  ಸಾಕಷ್ಟು ಸಲ ಶಾಲಿ ತಪ್ಪಿಸುತ್ತಿದ್ದೆವು.

ನಾವು ಕುಂತಿರೋ ಪ್ರಾಂಗಣದ ಪಕ್ಕದಲ್ಲಿಯೇ ನಮ್ಮ ಟೀಚರಮ್ಮನೋರು, ಮಾಸ್ತರು, ಗೌಡ್ರು ಮತ್ತು ಕುಲಕಣ್ಯರ್ಾರರ ಮಕ್ಕಳ ತಮ್ಮ ಚಪ್ಪಲಿ ಬಿಟ್ಟಿರತಿದ್ರು. ನಾನು ಯಾವಾಗಲೂ ಸಾಲಿಯೊಳಗಿನ ಬೋಡರ್್ ನೋಡಿದ್ದಕ್ಕಿಂತಲೂ ಗೌಡರ ಮಗಳು ಲತಾಳ ಇಷ್ಟಿಷ್ಟೇ ಇದ್ದ ಹೂವಿನ ಚಪ್ಲಿ ಕಡೆನೇ ನೋಡಕೋತ ಕುಂತಿರುತ್ತಿದ್ದೆ. ಸಾಲೀಲಿ ಯಾವತ್ತು ಮುಂದಿನ ಸಾಲಿನಲ್ಲಿ ಕುಳಿತಿರುತ್ತಿದ್ದ ಲತಾ ತನ್ನ ಚಪ್ಪಲಿಗಳನ್ನು ಮಾತ್ರ ನಮ್ಮಂಥವರ ಸರಿಸಮಕ್ಕೆ ಬಿಟ್ಟಿರುತ್ತಿದ್ದಳು. ಮಾಸ್ತರರ ಚಪ್ಲಿಗಳಂತೂ ಗುಡಿಯಲ್ಲಿನ ದೇವರ ಪಾದುಕೆಯಂತೆ ಭಾಸವಾಗುತ್ತಿದ್ವು.  

ಮೂಗಿನ ಸುಂಬಳ ಒರೆಸಲಿಕ್ಕೆ ಮತ್ತು ಪಾಟಿ ಒರೆಸಲಿಕ್ಕೆ ಅಂಗಿಯ ಚುಂಗನ್ನೆ ಬಳಸುತ್ತಿದ್ದ ದಿನಗಳವು. ನಮ್ಮ ಆಕಾರ ಮತ್ತು ಜಾತಿಯನ್ನು ನೋಡಿ ನಮ್ಮ ಕೇರಿಯ ಹುಡುಗರನ್ನು ಯಾರು ಹತ್ತಿರ ಸೇರಿಸಿಕೊಳ್ಳುತ್ತಿರಲಿಲ್ಲ. ನಾವು ಕೇರಿಯ ಹುಡುಗರೇ ದೂರ ಹೊಗಿ ಆಡಿಕೊಳ್ಳುತ್ತಿದ್ದೆವು. ಕಟಕ್ ರೊಟಿ ಒಣ ಮೀನು ತುಣುಕುಗಳ ಬುತ್ತಿಯನ್ನು ಸಾಲಿಯ ಅನತಿ ದೂರದಲ್ಲಿದ್ದ ತಿಪ್ಪಿ ಸಮೀಪ ಕುಳಿತು ತಿನ್ನುತ್ತಿದ್ದೆವು. 

ಅವ್ವ ಮಾತ್ರ ದಿನಾಲೂ ಜಳಕ ಮಾಡಿಸಿ ಒಗೆದ ಅಂಗಿ ತೊಡಿಸಿ ಈಗಿನ ಅಂಡರವೇರನಂಥ ಚಡ್ಡಿ ತೋಡಿಸಿ ಸಾಲಿಗಿ ನನ್ನನ್ನು ತಯಾರು ಮಾಡುತ್ತಿದ್ದಳು. ಓದಿ ದೊಡ್ಡ ಸಾಹೇಬ್ ಆಗಬೇಕು ಮಗಾ ಅಂತ ನನ್ನ ಗಲ್ಲಕ್ಕೆ ಮುತ್ತಿಟ್ಟು ಸಂಬ್ರಮಿಸುತ್ತಿದ್ದಳು. ಅವ್ವನ ಆ ಸಂಭ್ರಮ ಕಾಣುವುದಕ್ಕಾಗಿಯೇ ನಾನು ಸಾಲಿಯತ್ತ ಮುಖ ಮಾಡುತ್ತಿದ್ದೆ. 

* * *

 

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
Santhoshkumar LM
10 years ago

Very interesting!

mamatha keelar
mamatha keelar
10 years ago

ಏನು ಹೇಳೋಕು ತೋಚ್ತಾನೇ ಇಲ್ಲಾ …ಹೃದಯ ತುಂಬಿ ಬರುತ್ತಿದೆ..

Rajendra B. Shetty
Rajendra B. Shetty
10 years ago

"ಅಲ್ಲಿ ಮೈ ಮಾರಿಕಂಡಾದ್ರೂ ನಮ್ಮನ್ನ ಸಾಕತೇತಿ ಅಂತ ಖುಷೀ ಪಡೋ ದರಬೇಸಿ ಪರಸ್ಥಿತಿ ನಮಗ." ಈ ಸಾಲುಗಳನ್ನು ಓದುವಾಗ, ಹೊಟ್ಟೆಯಲ್ಲಿ ಯಾರೋ ಸೋಜಿ ಚುಚ್ಚಿದ ಅನುಭವವಾಯಿತು.
'

GAVISWAMY
10 years ago

superb sir..
ಕಥೆಯನ್ನು ಹೇಳುವ ಶೈಲಿ ಅನನ್ಯ.. ನೀವು ಕಟ್ಟಿಕೊಡುವ  ದಟ್ಟ ವಿವರಣೆಗಳು ಮನಸಿನಲ್ಲಿ ಅಚ್ಚಳಿಯದೇ ಉಳಿದುಬಿಡುತ್ತವೆ..
ಯೋಚಿಸುವಂತೆ ಮಾಡುತ್ತವೆ.
ಖಂಡಿತವಾಗಿಯೂ ಸಮಾಜದ ಮೇಲೆ ಧನಾತ್ಮಕ ಪರಿಣಾಮ 
ಬೀರುವ ಕಾದಂಬರಿ ಇದು..
ಧನ್ಯವಾದಗಳು..

 

ಸರ್ವೇಶ್ ಕುಮಾರ್
ಸರ್ವೇಶ್ ಕುಮಾರ್
10 years ago
Reply to  GAVISWAMY

ಉತ್ತಮ ಸಂಜಮುಖಿ ಕಥಾವಸ್ತು… ಮುಂದುವರೆಯಲಿ.

Rukmini Nagannavar
Rukmini Nagannavar
10 years ago

kathe oduvaga neevu balasiruva prathi padagalannu oduvaga hotteyalli khara kalasida bhava sir…

ಪ್ರಶಾ೦ತ ಕಡ್ಯ

ತು೦ಬಾ ಚೆನ್ನಗಿದೆ.

7
0
Would love your thoughts, please comment.x
()
x