ಕೆಂಗುಲಾಬಿ (ಭಾಗ 16): ಹನುಮಂತ ಹಾಲಿಗೇರಿ

 
 

ಜನನಿಬಿಡ ಮಾರುಕಟ್ಟೆಯಲ್ಲಿ ರಸ್ತೆಯ ಎರಡು ಬದಿಗೆ ಶಾರದೆಗಾಗಿ ಕಣ್ಣು ಹಾಯಿಸುತ್ತಾ ನಡೆದಿದ್ದಾಗ ದೀಪಾಳ ಹಿಂದಿನಿಂದ ದೊಡ್ಡ ಹೊಟ್ಟೆಯ ಮುದಿ ಹೆಂಗಸೊಂದು ಧಾವಿಸಿ ಮುಂದೆ ಬಂದಿತು. ನಾವಿಬ್ಬರು ಒಂದು ಕ್ಷಣ ದಂಗುಗೀಡಾದೆವು. ಸ್ವಲ್ಪ ಹೊತ್ತಿನಲ್ಲಿ ದೀಪಾ ಸಾವರಿಸಿಕೊಂಡು ಆ ಮುದಿ ಮಹಿಳೆಯನ್ನು ಸಮಾಧಾನಿಸಿಕೊಂಡು ಬಾಗಿಲು ಮುಚ್ಚಿದ ಅಂಗಡಿ ಮುಂಗಟ್ಟೆಯ ಹತ್ತಿರಕ್ಕೆ ಕರೆದುಕೊಂಡು ಬಂದಳು.
ಮುಂಗಟ್ಟೆ ಮೇಲೆ ಕುಳಿತು ನಿಮಿಷಗಳೇ ಉರುಳಿದ್ದರೂ ಆ ಮುದಿ ಹೆಂಗಸು ಜೋರಾಗಿ ಉಸಿರಾಡುತ್ತಲೆ ಇತ್ತು. ಆಕೆ ತಡಬಡಾಯಿಸುತ್ತಲೇ ಬಯ್ಯಲು ಬಾಯ್ತೆರೆದಳು. ಆಗ ಅವಳು ಕುಡಿದಿದ್ದಾಳೆ ಅನ್ನುವುದು ಖಾತ್ರಿಯಾಯಿತು. ‘ನನ್ನ ಬದುಕನ್ನೆ ನುಂಗಿಬಿಟ್ಟೆ' ಎನ್ನುವುದಷ್ಟೇ ಅವಳ ಬೈಯುಗಳದಲ್ಲಿ ನನಗೆ ಅರ್ಥವಾಗುತ್ತಿತ್ತು. ಅವಳ ಕೈಯಿಂದ ಸಾಕಾಗುವವರೆಗೆ ಬೈಯಿಸಿಕೊಂಡಾದ ಮೇಲೆ ಅವಳ ಖರ್ಚಿಗೆ ನೂರರ ಮೂರು ನೋಟುಗಳನ್ನು ಕೊಟ್ಟು ದೀಪಾ ಅವಳಿಂದ ಬಿಡುಗಡೆ ಹೊಂದಬೇಕಾಯಿತ್ತು.
 
ಅವಳಿಂದ ಬಿಡಿಸಿಕೊಂಡು ಸ್ವಲ್ಪ ದೂರಕ್ಕೆ ಬಂದ ಮೇಲೆ ದೀಪಾ ಬಾಯಿಬಿಟ್ಟಳು. ‘ಅವಳು ಹೆಸರು ಸರೋಜಮ್ಮ ಅಂತ' ಒಂದಾನೊಂದು ಕಾಲದಲ್ಲಿ ಇಡಿ ಸುಂಕದಕಟ್ಟೆಗೆ ಹೆಸರು ಮಾಡಿದಂಥ ದಂಧೆ ಮನೆಯನ್ನು ನಡೆಸುತ್ತಿದ್ದಳು. ಅಲ್ಲಿ ಅತ್ಯಂತ ಚಿಕ್ಕ ಹುಡುಗಿಯರನ್ನು ಬಳಸಿಕೊಳ್ಳಲಾಗುತ್ತಿತ್ತು. ಅದು ನನಗೆ ಗೊತ್ತಾಗಿ ನಾನು ಒಂದು ದಿನ ಅವಳ ದಂಧೆ ಮನೆಗೆ ಬೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಇಷ್ಟೆ ನಾನು ಮಾಡಿದ್ದು. ಆದರೆ ನಾನು ಭೇಟಿ ಮಾಡಿದ ಮರುದಿನವೇ ಕಾಕತಾಳೀಯವೆಂಬಂತೆ ಪೊಲೀಸರು ಈಕೆಯ ದಂದೆ ಮನೆಯ ಮೇಲೆ ದಾಳಿ ನಡೆಸಿದರು. ದಾಳಿ ನಡೆಸಲು ಪೊಲೀಸರಿಗೆ ನಾನೇ ಮಾಹಿತಿ ನೀಡಿದೆ ಎಂದು ತಪ್ಪಾಗಿ ತಿಳಿದುಕೊಂಡಿದ್ದಾಳೆ. ಮೊದಲೆ ಕುಡುಕಿ ದಾಳಿ ನಡೆದ ಮೇಲೆ ಮತ್ತೆ ದಂಧೆ ಮನೆಯನ್ನು ಮೊದಲಿನ ಸ್ಥಿತಿಗೆ ತರಲು ಸಾಧ್ಯವಾಗಲೆ ಇಲ್ಲ. ಹೀಗಾಗಿ ಇಂದು ಬೀದಿಗೆ ಬಿದ್ದಿದ್ದಾಳೆ. ನಾನು ಸಿಕ್ಕಾಗ ತಲೆ ತಿಂದು ನನ್ನ ಕೈಯಿಂದ ಒಂದಿಷ್ಟು ಹಣ ಬಿಚ್ಚಿಸಿದ ಮೇಲೆಯೇ ನನ್ನನ್ನು ಕೈ ಬಿಡುತ್ತಾಳೆ' ಎಂದು ದೀಪಾ ಮಾತು ಮುಗಿಸಿದಳು.
* * *
 
ದೀಪಾಳಿಗೆ ಶಾರಿ ಮರಳಿ ಸಿಗಲಾರಳೆನೋ ಎಂಬ ಅನುಮಾನ ಬಂದಿರಬೇಕು. ಶಾರಿ ದೆಸೆಯಿಂದಾಗಿ ನಾನು ದೀಪಾಳನ್ನು ಕರೆದುಕೊಂಡು ಲೈವ್‍ಬ್ಯಾಂಡ್ ಅಡ್ಡಾ, ಲಾಡ್ಜ್‍ಗಳನ್ನೆಲ್ಲಾ ಅಡ್ಡಾಡಿಯಾಗಿತ್ತು. ಆದರೆ ಶಾರಿಯ ಸುಳಿವೇ ಸಿಕ್ಕಿರಲಿಲ್ಲ. 
 
ದೀಪಾಳಿಗೆ ನನ್ನ ಮತ್ತು ಶಾರಿಯ ಮಧ್ಯೆ ಎಲ್ಲ ಕತೆಯನ್ನು ಹೇಳಿದಾಗಿತ್ತು. ಹೀಗಾಗಿ ಮೊದಮೊದಲು ಶಾರಿಯನ್ನು ನಿಮಗೆ ಹುಡುಕಿ ಕೊಟ್ಟೆ ಕೊಡುತ್ತೇನೆ ಎಂದು ದೀಪಾ ಹಟ ತೊಟ್ಟಿದ್ದಳು. ಈಗಿಗ ಇದು ಬಗಿಹರಿಯದ ಸಮಸ್ಯೆ ಎಂದು ತನ್ನ ಪಾಡಿಗೆ ತನ್ನ ಕೆಲಸದಲ್ಲಿ ನಿರತಳಾಗಿದ್ದಳು. ಹೀಗಾಗಿ ಅಂದು ದೀಪಾ ಬೇರೆ ಕೆಲಸದ ನಿಮಿತ್ತ ಬೇರೆ ಕಡೆ ಹೋಗಿದ್ದರಿಂದ ನಾನು ಕಲಾಸಿಪಾಳ್ಯದ ಬಸ್ ನಿಲ್ದಾಣದತ್ತ ಶಾರಿಯ ಬಗೆಗಿನ ದೂರದ ಅಸೆಯನ್ನಿಟ್ಟುಕೊಂಡು ಕಾಯುತ್ತಾ ನಿಂತಿದೆ.   
 
ಅಲ್ಲಿನ ಅಡ್ಡಾದಿಡ್ಡಿ ನಿಂತಿರುವ ಖಾಸಗಿ ಬಸ್ಸುಗಳ ಮಧ್ಯದಲ್ಲಿ ಮೂಗು ಬಿಡಲಾಗದಷ್ಟು ಗಬ್ಬುನಾತ ಹರಡಿಕೊಂಡಿತ್ತು. ಕಾಲಿಡಲೂ ಅಸಹ್ಯವಾಗುವಷ್ಟು ಕೊಚ್ಚಿ ನೆಲ. ಅಂತಹ ಜಾಗದಲ್ಲೇ ಶಾರಿಯ ಬಳಗದವರು ಕಂಡರು. ಅವರು ಪಿಚಕ್ಕನೆ ತಾಂಬೂಲ ಉಗಿಯುತ್ತಾ ಸೀರೆಯ ನೆರಿಗೆ ಸರಿಪಡಿಸಿಕೊಳ್ಳುತ್ತಿದ್ದರು. ಅಲ್ಲೆಲ್ಲಾ ಸಂದಿಯಲ್ಲಿ ನಿಂತಿದ್ದ ಬೈಕುಗಳ ಕನ್ನಡಿ ಹತ್ತಿರಕ್ಕೆ ಹೋಗಿ ತಮ್ಮ ಪುಟ್ಟ ಪಾಕೇಟಿದಿಂದ ಬಾಚಣಿಕೆ ತೆಗೆದುಕೊಂಡು ಬೈತಲೆಗಳನ್ನು ತೀಡಿಕೊಳ್ಳುವುದು, ಪೌಡರ್, ಲಿಪಸ್ಟಿಕ್, ಕಾಡಿಗೆ ಹಚ್ಚಿಕೊಂಡು ಇಲ್ಲದ ಸೌಂದರ್ಯ ಬರಿಸಿಕೊಳ್ಳುವುದು ಮಾಡುತ್ತಾ ಗಿರಾಕಿಗಳು ಸಿಕ್ಕಾರೆಯೇ ಎಂದು ಒರೆಗಣ್ಣು ಬಿಟ್ಟುಕೊಂಡು ಅಡ್ಡಾಡುತ್ತಿದ್ದರು.
 
ಹಾಗೆ ಅಡ್ಡಾಡುತ್ತಲೆ ತಮ್ಮ ನೋವು, ದುಃಖ, ಅವಮಾನ ಎಲ್ಲವನ್ನೂ ತಮ್ಮ ಸಹೋದ್ಯೋಗಿಗಳ ಜೊತೆಗೆ ಹಂಚಿಕೊಳ್ಳುತ್ತಿದ್ದರು.  ಕೆಲವರು ಕೈ ಕೈ ಮಿಲಾಯಿಸಿ ಜಗಳವಾಡುತ್ತಿದ್ದರು. ಕೆಲವರು ಹೋಟೆಲ್ ಹುಡುಗ ತಂದ ಟೀಯನ್ನು ಎಲ್ಲರೂ ಕೂತು ಒಂದೊಂದೇ ಸಿಪ್ ಹೀರುತ್ತಾ ಕುಳಿತಿದ್ದರು. ಹಲವರು ಕುಡಿದ ಮತ್ತಿನಲ್ಲಿ ಎಲ್ಲ ಜಂಜಾಟಗಳನ್ನು ಮರೆತು ಅಲ್ಲೇ ಮಲಗಿದ್ದರು. ನಾನು ಅದನ್ನೆಲ್ಲಾ ನೋಡುತ್ತಾ ಪಾನ್ ಅಂಗಡಿ ಪಕ್ಕದಲ್ಲಿ ನಿಂತುಕೊಂಡು ಸಿಗರೇಟ್ ಹಚ್ಚಿದೆ.
 
ನನಗೆ ಅನತಿ ದೂರದಲ್ಲಿ ಮಸೀದಿ ಮತ್ತು ಮಸೀದಿಯ ಅಣತಿ ದೂರದಲ್ಲಿ ಹೂ ಪೋಣಿಸುತ್ತಿದ್ದ ಹೆಂಗಸರಿಬ್ಬರನ್ನು ನೊಡಿ ದಂಗಾಗಿ ಬಿಟ್ಟೆ. ಏಕೆಂದರೆ ಅವಳಲೊಬ್ಬಾಕೆ ನನ್ನ ಶಾರದೆಯನ್ನು ಹೋಲುತ್ತಿದ್ದಳು. ದಡಗ್ಗನೆ ಎದ್ದು ಹತ್ತಿರ ಹೋಗಿ ನೋಡಿದರೆ ನನ್ನ ಶಾರದೆಯೇ! ನನ್ನ ಗುರುತು ಹಿಡಿದ ಆಕೆ ಖುಷಿಯಿಂದಲೆ ಮಾತಾಡಿಸಿದಳು. ನನಗೆ ಅವಳು ತನ್ನ ದಂಧೆಯನ್ನು ಬಿಟ್ಟು ಈ ಹೂವು ಪೋಣಿಸುವ ಹೊಸ ದಂಧೆಯನ್ನು ಶುರು ಮಾಡಿದ್ದರಿಂದ ಒಳಗೊಳಗೆ ಖುಷಿಯಾಗಿತ್ತು. ಪಕ್ಕದಲ್ಲಿದ್ದ ಅದೆ ವೃತ್ತಿಯಲ್ಲಿದ್ದ ಮುದುಕಿಗೆ ತನ್ನ ಕೈಲಿದ್ದ ಹೂವನ್ನು ಹಳೆಯ ಲೆಕ್ಕಕ್ಕೆ ಸರಿ ಮಾಡಿ ನನ್ನೊಂದಿಗೆ ಎದ್ದು ಬಂದಳು. ನಾನು ಅಲ್ಲಿಯೆ ಟೀ ಕುಡಿಯಲು ಹೊಟೆಲ್‍ವೊಂದಕ್ಕೆ ಹೋಗೋಣವೆಂದಾಗ ಯಾಕೆ ಮನೆಗೆ ಬರೋದಿಲ್ಲವಾ ಎಂದು ಜೋರು ಮಾಡಿದ್ದರಿಂದ ನಾನು ಅವಳನ್ನು ಹಿಂಬಾಲಿಸುವುದು ಅನಿವಾರ್ಯವಾಯಿತು.
ಬಸ್ಸಿನ ಸೀಟುಗಳು ಖಾಲಿ ಇದ್ದವು. ನಾನು ಹಿಂದಿನ ಸೀಟುಗಳತ್ತ ಹೊರಟೆ. ಆದರೆ ಆಕೆ ನನ್ನ ಕೈ ಹಿಡಿದು ಜಗ್ಗಿ ತನ್ನ ಪಕ್ಕದಲ್ಲಿಯೆ ಕೂಡ್ರಿಸಿಕೊಂಡಳು. ನನ್ನ ಪಕ್ಕದಲ್ಲಿಯೆ ಕುಳಿತಿದ್ದ ಶಾರಿಯತ್ತ ನೋಡುತ್ತಿದ್ದ ನಾನು ಅವಳ ಮುಖದಲ್ಲಾದ ಬದಲಾವಣೆಯನ್ನೆ ಗಮನಿಸುತ್ತಿದ್ದೆ. ನನಗೀಗ ಆಕೆಯೊಡನೆ ಬಸ್ಸಿನಲ್ಲಿ ಹೋಗಲು ಮೊದಲೊಮ್ಮೆ ಆದಂತೆ ಯಾವ ರೀತಿಯ ಭಯ, ಸಂಕೋಚಗಳೆ ಇಲ್ಲದ್ದರಿಂದ ನನಗೆ ಅಚ್ಚರಿಯಾಯಿತು. 
 
ಹಳ್ಳಿಯೊಳಗಿದ್ದಾಗ ಅವರಿ ಹೂವಿನಂಗ ಪಳ ಪಳ ಹೊಳಿತಿದ್ದ ಆಕೆಯ ಮುಖ ಇವತ್ತು ಯಾಕಿಂಗ ಆಕಾರಗೆಟ್ಟಿದೆ ಎಂದು ಅವಳ ಮುಖವನ್ನೆ ಹುಳು ಹುಳು ಗಮನಿಸುತ್ತಿದ್ದೆ. ಕೆನ್ನೆಯಿಂದ ಸಾಗಿ ಗದ್ದದಲ್ಲಿ ಮಾಯವಾಗಿರುವ ಚಾಕುವಿನ ಮಾಯ್ದ ಗಾಯದ ಕಲೆ, ಬಿಳಿಯಿಂದ ಹಳದಿ ಬಣ್ಣಕ್ಕೆ ತಿರುಗಿರುವ ಹಲ್ಲು, ಅಲ್ಲಲ್ಲಿ ದೊಡ್ಡದಾದ ಹಲ್ಲಿನ ಸಂದು, ಸಂದಿನಿಂದ ಹೊರ ಸೂಸುವ ದುರ್ನಾತ, ಎಷ್ಟೋ ದಿನಗಳಿಂದ ಕೊಬ್ಬರಿ ಎಣ್ಣೆ ಕಾಣದ ಕೂದಲುಗಳು, ಮುಖದ ಮೇಲಿನ ಜಿಡ್ಡು, ಇವೆಲ್ಲ ಸೇರಿಸಿ ಹೇಗಿದ್ದವಳು ಹೇಗಾಗಿದ್ದಳಲ್ಲ ಎಂದು ಚಿಂತಿಸತೊಡಗಿದ್ದೆ. 
 
ನನ್ನ ಚಿಂತಿಯನ್ನು ಅರ್ಥ ಮಾಡಿಕೊಂಡಿವಳಂತೆ ಅವಳು ಬಾಯಿಬಿಟ್ಟಳು. ‘ಏನು ಮಾಡಾಕ ಆಗುತ್ತೆ. ಮೊದಲು ಆ ದಂದೆಯಲ್ಲಿ ಇದ್ದಾಗ ಬೆಳಗ್ಗೆ ಮನೆ ಬಿಟ್ಟರೆ ಒಮ್ಮೆಲೆ ರಾತ್ರಿಯೆ ಮನೆಗೆ ಹಿಂದಿರುವುದಾಗುತ್ತಿತ್ತು. ಒಮ್ಮೊಮ್ಮೆ ಅಲ್ಲೆಲ್ಲೂ ಗಿರಾಕಿಯ ಜೊತೆ ತೊಂದರೆಯಾಗಿ ಅಥವಾ ಪೊಲೀಸ್ ಮಾಮಂದಿರ ಕೈಗೆ ಸಿಕ್ಕು ಹಾಕಿಕೊಂಡು ವಾರಾನುಗಟ್ಟಲೆ ಮನೆಗೆ ಬರಲಿಕ್ಕೆ ಆಗುವುದಿಲ್ಲ ಆಗೆಲ್ಲ ವಾರಾನುಗಟ್ಟಲೆ ಮುಖ ಮಾರಿ ತೊಳೆಯಲಿಕ್ಕಾಗದೆ ಹಂಗೆ ಕಾಲ ಕಳೆಯಬೇಕಾಗತದೆ. ಒಮ್ಮೊಮ್ಮೆ ತೊಳಕೊಳ್ಳಲಿಕ್ಕೆ ಎಲ್ಲ ವ್ಯವಸ್ಥೆ ಇದ್ದರೂ ಗಿರಾಕಿಗಳಿಂದ ಹಣ್ಣಾಗಿರುವ ಈ ಮೈ ಎದ್ದು ಮುಖ ತೊಳಿಲಿಕ್ಕು ಸ್ಪಂದಿಸೋದಿಲ್ಲ. ಇನ್ನು ಕೊಬ್ಬರಿ ಎಣ್ಣೆ , ಸಾಬೂನು ಎಲ್ಲ ಕೊಳ್ಳಲು ಮಾಮೂಲಿಯಾಗಿ ಹಣದ ಸಮಸ್ಯೆ  ಇದ್ದೆ ಇರುತ್ತೆ.'
 
‘ಅಲ್ಲ ಮುಖದ ಮೇಲೆ ದೊಡ್ಡ ಗಾಯ ಹೆಂಗ ಮಾಡ್ಕೊಂಡಿ?' ಅವಳ ನಿರಾಸೆಯ ಮಾತುಗಳನ್ನು ತುಂಡರಿಸಿ ನಾನು ಪ್ರಶ್ನಿಸಿದೆ. 
 
ಅವಳು ಹೇಳತೊಡಗಿದಳು. ‘ನಾನು ಜನತಾ ಮಾರ್ಕೆರ್ಟ್‍ನಲ್ಲಿ ದಂಧೆ ಶುರು ಹಚ್ಚಿಕೊಂಡಿದ್ದೆ. ಈ ಏರಿಯಾಕ್ಕೆ ಹೊಸಬಳಾದ ನನ್ನನ್ನು ಇಲ್ಲಿಯೆ ಯಾವಾಗಲೂ ಕುಳಿತಿರುತ್ತಿದ್ದ ಈ ಮುದುಕಿಯೆ ನನಗೆ ಗಿರಾಕಿಗಳನ್ನು ಕರೆದುಕೊಂಡು ಬರೋ ಕೆಲಸ ಮಾಡ್ತಿತ್ತು. ನಾನು ಈ ಮುದುಕಿಯೆ ಖರ್ಚಿಗೆ ಇಂತಿಷ್ಟು ಅಂತ ಬಂದ ಸಂಪಾದನೆಯಲ್ಲಿ ದುಡ್ಡು ಕೊಡ್ತಿದ್ದೆ. 
 
ಒಂದಿನ ನಾನು ಗಿರಾಕಿಗೆ ಕಾಯ್ಕೋತ ನಿಂತಿದ್ದೆ. ಆಗ ನಾನಿದ್ದಲ್ಲಿಗೆ ನನ್ನಂಗ ಇರುವ ಮೂರ್ನಾಲ್ಕು ಹೆಂಗಸರು ಬಂದು ‘ನೀನು ನಾಳೆಯಿಂದ ಇಲ್ಲಿಗೆ ಬರಬ್ಯಾಡ, ಬೇರೆ ಏರಿಯಾ ನೋಡ್ಕೋ' ಅಂದ್ರು. 
ಮುದುಕಿ ಹೆಂಗಸರ ಬರುತ್ತಿರುವಾಗಲೇ ಮುದುಕಿ ಅವರ ಮಸಲತ್ತನ್ನು ಅರ್ಥ ಮಾಡಿಕೊಂಡಿದ್ದಳು. ಹೀಗಾಗಿ ‘ಯಾಕ್ರವ್ವ  ಇಲ್ಲಿ ಬಂದ್ರ ನಿಮ್ಮದೆನೂ ಗಂಟ ಹೊಕ್ಕೆತಿ. ನಾವು ಇಲ್ಲಿಗೆ ಬರೋವ್ರು, ಈ ರಸ್ತಾ ನಿಮ್ಮಪ್ಪಂದೂ ಅಲ್ಲ, ನಮ್ಮಪ್ಪಂದೂ ಅಲ್ಲ' ಎಂದು ತನ್ನ ದೊಡ್ಡ ಬಾಯಿ ತೆಗೆದು ಮುದುಕಿ ಅವರಿಗೆ ಜೋರು ಮಾಡಿದಳು.
 
 ಇದರಿಂದ ಆ ಹೆಂಗಸರು ಸಹನೆ ಮೀರಿರಬೇಕು. ‘ಹಾಹಾಹಾ ಬಂದಲಿವಳು ಕುಂಟಲಗಿತ್ತಿ. ಆಕಿನ ಪರ ಮಾತಾಡಾಕ. ನೀನು ಇದ ದಂಧೆದಾಕ ಮುದುಕಿಯಾದಿ. ಇಲ್ಲಿಗೆ ಯಾಕ ಬರಬ್ಯಾಡಂತಿವಂತ ನಿನಗ ಗೊತ್ತಾಗಬೇಕು' ಎಂದು ಒಬ್ಬಳೆಂದರೆ ಮತ್ತೊಬ್ಬಳು ‘ಇಂಥ ಚಂದುಳ್ಳಿ ಚಲುವಿ ಈ ಏರಿಯಾಕ ಬಂದ್ರ ನಮ್ಮಗಳ ಗತಿಯೇನಾಗಬೇಕು. ಸರಳ ಇಲ್ಲಿಂದ ಜಾಗ ಖಾಲಿ ಮಾಡ್ರಿ. ಇಲ್ಲಂದ್ರ ನಾವೇನ್  ಮಾಡಾಕೂ ಹೇಸೊದಿಲ್ಲ' ಎಂದು ಧಮಕಿ ಹಾಕಿಯೇ ಬಿಟ್ಟಳು.
 
ಆದರೆ ಈಯಮ್ಮನೂ ಹೆದರಿಲಿಲ್ಲ. ‘ಏ ಕಂಡಿದ್ದೀನೆ ಹೋಗ್ರೆ. ಬಂದು ಬಿಟ್ರು ಹೇಳಾಕ. ಏನು ಮಾಡ್ಕೋತಿರಿ ಮಾಡ್ಕೋ ಹೋಗ್ರಿ' ಎಂದು ಅವರಿಗೆ ಸವಾಲು ಹಾಕಿದಳು.
 ‘ಏ ಮುದುಕಿ ನಮಗ ಸವಾಲ ಹಾಕ್ತಿ, ತಡಿ ಹಂಗಾರ, ಏನು ಮಾಡ್ತಿವಿ ಅಂತ ಗೊತ್ತ ಆಕೈತಿ' ಅಂದ ಅನಕೊತ ಅಲ್ಲಿಂದ ಜಾಗ ಖಾಲಿ ಮಾಡಿದರು. ಅವರ ಮುಂದೆ ಬಹಳಷ್ಟು ಧೈರ್ಯದಿಂದಲೆ ಮಾತನಾಡಿದ್ದ ಮುದುಕಿ ಅವರ ಹೋದ ಮ್ಯಾಲ ‘ಶಾರದಾ ಈ ಬಿಂಕಾಣಗಿತ್ಯಾರು ಏನು ಮಾಡಾಕೂ ಹೆಸೋದಿಲ್ಲ. ನಮ ಹುಶ್ಯಾರದಾಗ ನಾವು ಇರಬೇಕು' ಎಂದು ನನಗೆ ಎಚ್ಚರಿಕೆ ನೀಡಿದ್ದಳು. ನನಗೆ ಆತಂಕ ಕಾಡುತ್ತಲೆ ಇತ್ತು.
 
 ಒಂದಿನ ನಾನು ಅದೆ ಆತಂಕದಿಂದ ಗಿರಾಕಿಗೆ ಕಾಯಕೋತ ನಿಂತಿದ್ದೆ. ಸ್ವಲ್ಪ ಹೊತ್ತಿನಿಂದ ನನ್ನನ್ನೆ ಗಮನಿಸುತ್ತಿದ್ದ ಗಿರಾಕಿಯೊಬ್ಬ ನನ್ನ ಹತ್ತಿರ ಬಂದು ಕೈಸನ್ನೆಯಲ್ಲಿಯೆ ವ್ಯವಹಾರ ಕುದುರಿಸಿದ. ನಾನು ಗಿರಾಕಿಯೊಂದಿಗೆ ಆಟೋದ ಕಡೆ ಹೊರಟೆ. ಆತ ಯಾರೊಂದಿಗೋ ಫೋನಿನಲ್ಲಿ ಮಾತಾಡುತ್ತಿದ್ದ. ದಾರಿ ಮಧ್ಯದಲ್ಲಿ ಆಟೋ ತರಬಿಸಿ ಮತ್ತೊಬ್ಬನನ್ನು ಹತ್ತಿಸಿಕೊಂಡಾಗಲೆ ನನಗೆ ಭಯ ಶುರುವಾಯಿತು. ಆಟೋ ದಿನ ಹೋಗುವ ಲಾಡ್ಜ್‍ಗೆ ಹೋಗುವ ಬದಲು ನಿರ್ಜನ ಪ್ರದೇಶವೊಂದರ ಕಡೆಗೆ ಹೊರಟಿತು. ನಾನು ಯಾಕೆ ಎಂದು ಗಲಾಟೆ ಮಾಡತೊಡಗಿದೆ. ನನ್ನ ಗಲಾಟೆಗೆ ಹೆದರದ ಅವರು ಅಲ್ಲೊಂದು ಗಿಡದ ಹತ್ತಿರ ಆಟೊವನ್ನು ನಿಲ್ಲಿಸಲು ಹೇಳಿದರು. ಆಟೋ ಇನ್ನೂ ನಿಂತಿರಲ್ಲಿಲ್ಲ. ಅಷ್ಟರಲ್ಲಿಯೇ ಚಾಕು ತೆಗೆದುಕೊಂಡು ಆತ ನನ್ನ ಕೆನ್ನೆಯ ಮೇಲೆ ಬಲವಾಗಿ ತಿವಿದ. ಇನ್ನೊಬ್ಬ ನನ್ನನ್ನು ಬಲವಾಗಿ ಹಿಡಿದುಕೊಂಡಿದ್ದ. ಆಮೇಲೆ ಇಬ್ಬರು ನನ್ನನ್ನು ಆಟೋದಿಂದ ಕೆಳಗೆ ದಬ್ಬಿ ಅಲ್ಲಿಂದ ಅದೇ ಆಟೋದಲ್ಲಿ ಓಡಿಹೋದರು.
* * *
 
ಬಸ್ಸು ಹೊಸೂರು ರೋಡಿನ ಬೊಮ್ಮಸಂದ್ರ ದಾಟಿ ಮುನ್ನಡೆದಿತ್ತು. ಅಲ್ಲೊಂದು ಸ್ಟಾಪಿನಲ್ಲಿ ಶಾರಿ ಮತ್ತು ನಾನು ಇಳಿದೆವು. ಸ್ಲಂನ ಸಂದಿಗೊಂದಿಯನ್ನು ಬಳಸಿ ತನ್ನ ಮನೆಗೆ ಕರೆದುಕೊಂಡು ಹೋದಳು. ನನ್ನನ್ನು ನೋಡಿದ ರಾಜಿಯ ಕಣ್ಣುಗಳು ಅರಳಿದವು. ಆಕೆ ಈಗ ದೊಡ್ಡವಳಾಗಿದ್ದಳು. ಹೇಗಿದ್ದಿರಿ ಅಂಕಲ್ ಎನ್ನುತ್ತಾ ಹತ್ತಿರ ಬಂದಳು. ನಾನು ಮನೆಗೆ ಬಂದಿದ್ದರಿಂದ ಅವಳಿಗೆ ಖುಷಿಯಾಗಿತ್ತು. ತಿಂಡಿ ತಿಂದು ಟೀ ಕುಡಿದಾದ ಮೇಲೆ ರಾಜಿ ಪಕ್ಕದ ಮನೆಗೆ ಟಿವಿ ನೋಡೋದಕ್ಕಂತ ಹೋದಳು. ಹುಬ್ಬಳಿ ಬಿಟ್ಟು ಬಂದ ಮೇಲೆ ಅವಳ ಬದುಕಿನ ತಿರುವುಗಳ ಬಗ್ಗೆ ಕೇಳಲು ನಾನು ಕಾತರನಾದ್ದರಿಂದ ಶಾರಿ ಹೇಳತೊಡಗಿದಳು.
 ‘ನೀನು ನಿನ್ನ ಹೆಂಡತಿಯೊಂದಿಗೆ ಚಲೋತಂಗ ಇರುವಂಗ ಆದ್ರ ಸಾಕು ಎಂದು ನಾನು ಅಲ್ಲಿಂದ ಜಾಗ ಖಾಲಿ ಮಾಡೋದಕ್ಕಾಗಿ ಕಾಯುತ್ತಿದ್ದೆ. ಹುಬ್ಬಳಿ ಮತ್ತು ಸಿಗ್ಗಾಂವ ಮಧ್ಯದ ಡಾಬಾ ಒಂದರಲ್ಲಿ ನಾನು ಕೈ ತುಂಬಾ ಟಿಪ್ಸ್ ಸಿಗುವ ಕೆಲಸ ಸಿಗುತ್ತದೆ ಎಂದು ಪರಿಚಯದ ಪಿಂಪ್ ಒಬ್ಬ ತಿಳಿಸಿದ್ದ. ದಿನ ರಾತ್ರಿ ಒಂದಿಬ್ಬರು ಮಾತ್ರ ಟ್ರಕ್‍ಗಳ ಡ್ರೈವರ್ ಬರತ್ತಾರೆ. ಅಲ್ಲಿ ಹೆಂಗೋ ಬದುಕು ಹಳವಾರ ಆದರೆ ಸಾಕೆಂದು ನಾನು ಕಾಯುತ್ತಿದ್ದೆ. ಹಂಗಾಗಿ ಒಂದು ದಿನ ನಾನು ಮತ್ತೆ ರೂಪಕ್ಕ ಟೆಂಪೂದಲ್ಲಿ ಹತ್ತಿಕೊಂಡು ಹುಬ್ಬಳಿಯಿಂದ 30 ಕಿ.ಮೀ ದೂರದ ಡಾಬಾವೊಂದಕ್ಕೆ ಬಂದೆವು.
 
ಇನ್ನು ಡಾಬಾಗಳಲ್ಲಿರುವ ಹೆಚ್ಚಿನ ಹೆಣ್ಣು ಮಕ್ಕಳು ಸಮೀಪದ ರಾಜ್ಯದವರು ಅಥವಾ ದೂರದ ಜಿಲ್ಲೆಯವರು ಆಗಿರುತ್ತಾರೆ. ಮೇಲ್ನೋಟಕ್ಕೆ ಚಾ, ಊಟದ ತಯಾರಿ ನಡೆಸುವಂತೆ ಕಂಡರೂ ಬಹುತೇಕ ಡಾಬಾಗಳಲ್ಲಿ ನಡೆಸುವ ದಂಧೆಯೇ ನಮ್ಮಂಥವರಿಗೆ ಸಂಬಂಧಪಟ್ಟಿರತ್ತದೆ. ಆಶ್ರಯ ಕೊಟ್ಟ ಯಜಮಾನನಿಗೆ ಒಂದಷ್ಟು ಮತ್ತು ಇವಳಿಗೊಂದಷ್ಟು. ಎಲ್ಲ ವೇಶ್ಯೆಯರು ಅನುಭವಿಸುವ ಎಲ್ಲವನ್ನು ಇವಳು ಅನುಭವಿಸುತ್ತಾಳೆ. ಆದರೆ ಅಲ್ಲಿನ ಬದುಕು ಇಲ್ಲಿಗಿಂತಲೂ ಬಹಳ ಕಷ್ಟದಾಯಕ ಅಂತ ನಮಗೆ ಅನಿಸತೊಡಗಿತು. ದಿನಕ್ಕೆ ಎರಡ್ಮೂರು ಗಿರಾಕಿಗಳು ಬಂದರು ಕೂಡ ಅವರ ವಿಕೃತಿಯ ಮನಸ್ಸಿನವರೆ ಆಗಿರುತ್ತಿದ್ದರು. ಎಷ್ಟೋ ದಿನಗಳವರೆಗ ಹೆಂಗಸರ ಮೈಸುಖ ಸಿಗಲಾರದವರು ಮತ್ತು ವಿಕೃತ ತೀಟೆಯ ಸುತ್ತಮುತ್ತಲಿನ ಹಳ್ಳಿ ಜನ ಅಲ್ಲಿಗೆ ಬರುತ್ತಿದ್ದರು. ಹೀಗಾಗಿ ಅಲ್ಲಿಯೂ ನಿಲ್ಲದೆ ಒಂದು ದಿನ ತಪ್ಪಿಸಿಕೊಂಡು ಡಾಬಾದ ಮಧ್ಯದ ಕಾಡಿನಲ್ಲಿಯೇ ಹಾಯ್ದು ನಾನು ಮತ್ತು ರೂಪಕ್ಕ ದೂರದ ಸಿಗ್ಗಾಂವಿಗೆ ಬಂದೆವು.
 
ಸಿಗ್ಗಾಂವಿಯಲ್ಲಿ ರೂಮೊಂದನ್ನು ಬಾಡಿಗೆಗೆ ಹಿಡಿದು ದಿನಾಲೂ ಪೂನಾ-ಬೆಂಗಳೂರು ಹೆದ್ದಾರಿಗೆ ಅಂಟಿಕೊಂಡಂತಿದ್ದ ಕಾಡಿನಲ್ಲಿ ಹೋಗಿ ನಿಲ್ಲುತ್ತಿದ್ದೆವು. ಹೆದ್ದಾರಿಯ ತುಂಬೆಲ್ಲ ಹರಿದಾಡುವ ನಿರಂತರ ಲಾರಿಗಳು. ಈ ಹೆದ್ದಾರಿಗಳನ್ನೇ ತಮ್ಮ ವೃತ್ತಿಯ ಜೀವಧಾತುವಾಗಿಸಿಕೊಂಡಿರುವ ನನ್ನಂಥ ಸಾವಿರಾರು ವೇಶ್ಯೆಯರೂ ಕೂಡ ಆ ಸುಮ್ಮನೆ ಮಲಗಿದಂತಿರುವ ಹೆದ್ದಾರಿಯಷ್ಟೆ  ಬ್ಯೂಜಿಯಾಗಿರುತ್ತೇವೆ. ನಮ್ಮನ್ನು ನೋಡಿದ ಲಾರಿ ಬಾಯಾರಿದಂತೆ ಸ್ವಲ್ಪ ದೂರದಲ್ಲಿ ಹೋಗಿ ನಿಲ್ಲುತ್ತೆ. ನಾವು ಲಾರಿಯಲ್ಲಿ ಒಂದಷ್ಟು ದೂರ ಪಯಣಿಸಿ ಅವರ ಕಾಮ ತೃಷೆ ಹಿಂಗಿಸಿ, ಒಂದಷ್ಟು ಕುಡಿದು ತಿಂದು, ಅವರ ತಾಕತ್ತಿಗತನುಗುಣವಾಗಿ ಹಣ ಪಡೆದು ಇನ್ನೊಂದು ವಾಹನಕ್ಕೆ ಜಿಗಿಯುತ್ತಿರುತ್ತೇವೆ. ಸದಾ ಆತಂಕ, ಭಯದ ನಿರೀಕ್ಷೆಗಳಲ್ಲೇ ಮೈ ಒಡ್ಡಬೇಕಾಗುತ್ತದೆ. ಇಲ್ಲಿಯೂ ಹಣ, ನಿರ್ಭಾವುಕತೆ, ಆತಂಕಗಳೆ ಪ್ರಧಾನ. 
 
 ಕೆಲವೊಮ್ಮೆ ಕಾಡಿನಲ್ಲಿಯೇ ಬೆನ್ನು ನೀಡಬೇಕಾಗುತ್ತದೆ. ಕಾಡಿನೊಳಗೆ ಕಳೆದ ಬದುಕಿನ ಕ್ಷಣಗಳನ್ನು ನೆನೆಸಿಕೊಂಡರೆ ಮೈ ಜುಂ ಎನಿಸುತ್ತದೆ. ಸುಮಾರು ಆರರಿಂದ ಆರೂವರೆ ಅಡಿ ಉದ್ದ, ಮೂರೂವರೆ ಅಡಿ ಅಗಲ, ಒಂದುವರೆ ಅಡಿ ಆಳ. ಇಷ್ಟು ಜಾಗ ನಮ್ಮ ಮೈ ಮಾರುವ ಅಂಗಡಿಯಿದ್ದಂತೆ. ದಟ್ಟವಾದ ಕುರುಚಲು. ಏಳೆಂಟು ಅಡಿ ಬೆಳೆದು ಚಿಕ್ಕ ಚಿಕ್ಕ ಛತ್ರಿಯಂತೆ ಹರಡಿಕೊಂಡು ಇತ್ತ ನೆರಳಿಗೂ ಅಲ್ಲದ, ಅತ್ತ ಮರವೂ ಅಲ್ಲದ ಜಾಲಿ ಗಿಡಗಳ ಮರೆಯಲ್ಲಿ ಈ ಅಳತೆಯ ಜಾಗಗಳು ಕಾಣಿಸುತ್ತವೆ. ಒಂದಕ್ಕೂ ಇನ್ನೊಂದಕ್ಕೂ ಹತ್ತು-ಹನ್ನೆರಡು ಅಡಿ ಅಂತರ. ಅದೆ ಜಾಲಿಗಳು ಒಂದಿಷ್ಟು ಅಡ್ಡ ನಿಂತು ಆ ಗುಂಡಿಗಳಿಗೆ ಒಂದು ಪ್ರೈವೆಸಿ ತಂದುಕೊಟ್ಟಿರುತ್ತವೆ. ಪ್ರತಿ ಗುಂಡಿಯ ಒಳಗಡೆ ಹಾಸಿರುವ ಸೀರೆ ಅಥವಾ ದುಪ್ಪಟಗಳೆ ನಮ್ಮ ಮೈ ಮಾರವ ದಂಧೆಗೆ ಬೇಕಾದ ಸಲಕರಣೆಗಳು ಮತ್ತು ಇದು ತನ್ನದೇ ಗುಂಡಿ ಎಂದು ಖಡಕ್ಕಾಗಿ ಹೇಳೋಕೆ ಇರುವ ಐಡೆಂಟಿಟಿಗಳು.
 
ಈ ಗುಂಡಿಗಳ ಹತ್ತಿರ ಗಿರಾಕಿಯೊಂದಿಗೆ ಬಂದಾಗ ಏನು ಮಾತಾಡುವಂತಿಲ್ಲ. ಮೊದಲೆ ಗಿರಾಕಿಯೊಂದಿಗೆ ವ್ಯವಹಾರ ಕುದುರಿಸಿಕೊಂಡು ಬರಬೇಕು. ಏಕೆಂದರೆ ಅಲ್ಲಿ ತಮ್ಮ ಕ್ರಿಯೆಯಲ್ಲಿ ತಲ್ಲಿನರಾಗಿದ್ದ ಜೋಡಿಗಳಿಗೆ ಭಂಗ ಬರಬಹುದು. ಇದು  ನಮ್ಮ ಸಹದ್ಯೋಗಿ ಲೈಂಗಿಕ ಕಾರ್ಮಿಕರು ಪಾಲಿಸಿಕೊಂಡು ಹೋಗುವ ಕರಾರು.
 
ಹಾಸಿರೋ ಬಟ್ಟೆ ಜಾಡಿಸಿದರೆ ಸಾಕು ಶಯ್ಯಾಗಾರ ರೆಡಿ. ಅಲ್ಲೊಂದು ಮುದುಕಿ ಒಂದೊಂದು ಗುಂಡಿಗೂ ಒಂದೊಂದು ಪ್ಯಾಕೆಟ್ ಕಾಂಡೂಮ್ ಹಾಕ್ತಾ ಹೋಕ್ಕಿದ್ಲು. ಆ ಕಾಡಿನೊಳಗೆ ಬೈತಲೆಯಂತಿದ್ದ ರೋಡಿನಲ್ಲಿ ಆಗೊಮ್ಮೆ ಈಗೊಮ್ಮೆ ಸರ್ರಂತ್ ಪಾಸಾಗುತ್ತಿದ್ದ ಟ್ರಕ್‍ಗಳಿಗೆ ಬಕಪಕ್ಷಯಂತೆ ಕಾಯ್ದು ಗಿರಾಕಿಗಳನ್ನು ಹುಡುಕಿಕೊಂಡು ಬರಬೇಕು. ಬಂದ ಗಿರಾಕಿಗಳು ರಸ್ತೆಯ ಮಗ್ಗುಲದ ಮರಗಳ ಮರೆಯಲ್ಲಿ ಅಲ್ಲಲ್ಲಿ ನಿಂತಿರುತ್ತಿದ್ದ ನಮ್ಮಗಳ ವಯಸ್ಸು ಮತ್ತು ಚಂದ ನೋಡಿ ತಮ್ಮ ಟ್ರಕ್‍ಗಳಿಗೆ ಬ್ರೇಕ್ ಹಾಕುತ್ತಿದ್ದರು. ಹೀಗಾಗಿ ಅಲ್ಲಿ ಸೌಂದರ್ಯವತಿಯರಿಗೆ ಅದರಲ್ಲೂ ಡೌಲು ಮಾಡುವವರಿಗೆ ಮಾತ್ರ ಕೈತುಂಬ ಹಣ ಇನ್ನುಳಿದವರಿಗೆ ಸುತ್ತಮುತ್ತಲ ಹಳ್ಳಿಯವರೆ ಆಪತ್ಕಾಲದ ರಕ್ಷಕರು. ಹೀಗಾಗಿ ಅಲ್ಲಿ ನಮಗೆ ಒಬ್ಬ ಗಿರಾಕಿಯಿಂದ ಹದಿನೈದು ರೂಪಾಯಿಂದ ಹಿಡಿದು ಹೆಚ್ಚೆಂದ್ರೆ ನೂರು ರೂಪಾಯಿಯವರೆಗೆ ಮಾತ್ರ ಸಿಗುತ್ತಿತ್ತು. ಚೌಕಾಸಿ ಮಾಡೋ ಚಾಲಾಕಿನ ಮೇಲೆ ಹಣ ನಿಗದಿಯಾಗುತ್ತೆ. ಇನ್ನು ಜಾಗ ಫ್ರೀ. ಉಳಿದ ಎಲ್ಲವೂ ನಿಸರ್ಗದತ್ತ.
 
ಶ್ರಾವಣ ಮಾಸದ ಸೀಜನ್ನಿನಲ್ಲಿ ವ್ಯಾಪಾರ ಡಲ್ಲಾಗಿರುತ್ತಿತ್ತು. ಗಿರಾಕಿಗಳು ಕಡಿಮೆ. ಉತ್ತರ ಕರ್ನಾಟಕ ಭಾಗದಲ್ಲಿ ಶ್ರಾವಣಮಾಸಕ್ಕೆ ವಿಶಿಷ್ಟವಾದ ಸ್ಥಾನ. ಆ ವೇಳೆಯಲ್ಲಿ ಎಲ್ಲ ಹಳ್ಳಿಗಳಲ್ಲಿ ಭಜನಾ ಮೇಳಗಳು, ಪುರಾಣ ಪುಣ್ಯ ಕತೆಗಳನ್ನು ಗ್ರಾಮಗಳ ವತಿಯಿಂದ ಹಚ್ಚುತ್ತಿದ್ದುದರಿಂದ ಹಳ್ಳಿಗರ ಅದರಲ್ಲೆ ಮನರಂಜನೆ ಪಡೆಯುತ್ತಿದ್ದರು. ಜೊತೆಗೆ ದೇವರ ಭಯ ಬೇರೆ. ಹಿಂಗಾಗಿ ದೇವರೆ ನಮ್ಮ ಹೊಟ್ಟೆ ಮೇಲೆ ಕಲ್ಲು ಹೊಡೆಯುತ್ತಿದ್ದಾನೆ ಎಂದುಕೊಂಡು ಆಗ ನಾವು ದೇವರನ್ನೇ ಶಪಿಸುತ್ತಿದ್ದೆವು.
 
ಇತ್ತಿತ್ತಲಾಗಿ ಇಂತಹ ಸಂಪ್ರದಾಯಗಳಲ್ಲಿ ಜನರು ಅನಾಸಕ್ತಿಗೊಂಡಿದ್ದರಿಂದ ಜಾತ್ರೆ, ವಿಶೇಷ ಪೂಜೆ ಇಂಥಾ ಟೈಮಲ್ಲೆಲ್ಲಾ ಗಿರಾಕಿಗಳು ಜಾಸ್ತಿ ಬರುತ್ತಿದ್ದುದು ಉಂಟು. ಪ್ರಕೃತಿ ಎಲ್ಲಿ ತನ್ನ ಛಾಪನ್ನು ಸುಂದರವಾಗಿ ಮೂಡಿಸಿರುತ್ತದೋ, ಅಲ್ಲೆಲ್ಲಾ ಮಾನವನ ಭೂಗತ ಚಟುವಟಿಕೆಗಳು, ಪಾತಕ ಲೋಕದ ತಾಣಗಳು ಸಾಮಾನ್ಯವಾಗಿ ಇದ್ದೆ ಇರುತ್ತವೆ. ಅದರೊಂದಿಗೆ ವೇಶ್ಯಾವಾಟಿಕೆಯೂ ಇರುತ್ತದೆ. ಪ್ರಕೃತಿದತ್ತವಾದ ಬೆಟ್ಟಗುಡ್ಡಗಳು, ದಟ್ಟವಾದ ಕಾಡುಗಳು, ಸಮುದ್ರ ತೀರಗಳು, ನದಿ ದಂಡೆಗಳು ವೇಶ್ಯಾವಾಟಿಕೆಗೆ ಹೇಳಿ ಮಾಡಿಸಿದಂಥ ಜಾಗಗಳು. ಗಿರಾಕಿಗಳು ಹೆಚ್ಚು ದೊರೆಯುವ ಹಾಗೆಯೇ ನಿರ್ಭಯವಾದ ಲೈಂಗಿಕ ಕ್ರಿಯೆಗೆ ತೊಡಗಬಹುದಾದ ಏಕಾಂತಕ್ಕಾಗಿ ಘಟ್ಟ ಪ್ರದೇಶ ಹೆದ್ದಾರಿಯೂ ಆಗಿ ದಟ್ಟವಾದ ಅರಣ್ಯವೂ ಇದ್ದಾಗ, ಅಲ್ಲಿ ದಿನನಿತ್ಯ ನಿರಂತರವಾಗಿ ಓಡಾಡುವ ಸಾವಿರಾರು ಲಾರಿಗಳು ಹಾಗೂ ವಾಹನಗಳು ವಿಶ್ರಾಂತಿಗಾಗಿ, ಸ್ನಾನಕ್ಕಾಗಿ, ಹೆಚ್ಚು ಹೆಚ್ಚು ಊಟಕ್ಕಾಗಿ ವಿರಮಿಸುತ್ತವೆ. 
 
ಒಮ್ಮೆ ಇಂಥಹ ಅಡವಿಯೊಳಗೆ ಹೊಕ್ಕರೆ ಸಾಕು, ಎಲ್ಲವೂ ಸ್ವಚ್ಚಂದ ವಾತಾವರಣ. ಆ ದಟ್ಟತೆ ಎಲ್ಲವನ್ನೂ ತನ್ನ ಒಡಲೊಳಗೆ ಮುಚ್ಚಿಕೊಂಡುಬಿಡುತ್ತಿದೆ. ಆ ಅಡವಿಯ ಇಳಿಜಾರಿ ಆಳದಲ್ಲಿ ಹಳ್ಳವೊಂದು ತಣ್ಣಗೆ ಹರಿಯುತ್ತಿತ್ತು. ಈ ನದಿ ಕೂಡ ನಮ್ಮಂಥ ಈ ಲೈಂಗಿಕ ವೃತ್ತಿ ಮಹಿಳೆಯರ ಬದುಕಿನೊಂದಿಗೆ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸುತ್ತಿತ್ತು. ನಮ್ಮ ದಂಧೆಯ ಹೊಲಸನ್ನೆಲ್ಲ ದಿನದ ಸಂಜೆ ಸ್ವಚ್ಚವಾಗಿ ತೊಳೆದುಕೊಂಡು ನಮ್ಮ ಗೂಡುಗಳ ದಾರಿ ಹಿಡಿಯುತ್ತಿದ್ದೆವು. ಒಮ್ಮೊಮ್ಮೆ ದಾರಿ ಸವೆಸುವುದೆ ಕಷ್ಟವಾಗಿ ಹಳ್ಳದ ದಂಟೆಗುಂಟ ಬೆಳೆದಿದ್ದ ಪೊದೆಯಲ್ಲಿ ವಾಸ್ತವ್ಯ ಹೂಡುತ್ತಿದ್ದೆವು.
 
ಹಳ್ಳ ದಡದಲ್ಲಿ ಹೋಗಿ ಕುಳಿತರೆ ದಣಿದ ದೇಹ ಮನಸ್ಸುಗಳಿಗೆ ತಣ್ಣನೆಯ ಸ್ಪರ್ಶ ಮೈದಡವುತ್ತಿತ್ತು. ಅನೇಕ ಬಾರಿ ಪೋಲೀಸರಿಂದಲೋ, ಗಿರಾಕಿಗಳಿಂದಲೋ ರಕ್ತಸಿಕ್ತವಾಗುವುದು, ಘಾಸಿಗೊಳ್ಳುವುದು ನಡೆದಾಗೆಲ್ಲಾ ಅನಾಥ ಪ್ರಜ್ಞೆಯಿಂದ ಏಕಾಂಗಿಯಾಗಿ ಓಡಿ ಬಂದು ಆ ಪಾಪವಿಮೋಚನೆ ಹಳ್ಳದ ತೆಕ್ಕೆಗೆ ಬೀಳುತ್ತಿದ್ದೆವು. ದುಗುಡಗಳು ಇಳಿಯುವವರೆಗೂ ಅಲ್ಲೆ ಅವಳ ಮಡಿಲಲ್ಲೇ ಇದ್ದು ಬಿಡುತ್ತಿದ್ದೆವು. ಹಲವೊಮ್ಮೆ ಮನಸ್ಸು ಉಲ್ಲಸಿತವಾದಾಗ ಕಾಲುಗಳನ್ನು ಇಳಿಬಿಟ್ಟು ಆ ನದಿಯ ಸ್ಪರ್ಶದೊಂದಿಗೆ ಪುಳಕಗೊಳ್ಳುತ್ತಿದ್ದವು. ಅಲ್ಲಿ ಹೋದರೆ ನಮಗೆ ಮಾನಸಿಕವಾಗಿ ರಿಫ್ರೆಶ್ ಆಗಲು ಸಾಧ್ಯವಾಗುತ್ತಿತ್ತು.
ಆದರೆ ಅಲ್ಲಿಯೂ ದಂಧೆ ಮುಂದುವರೆಸಲು ಸಾಕಷ್ಟು ಎಡರು ತೊಡರುಗಳಿದ್ದವು. ಆಗಾಗ ಪೋಲೀಸರು ಹಪ್ತಾ ವಸೂಲಿಗೆ ಬರುತ್ತಿದ್ದರು. ದುಡಿದಿದ್ದರಲ್ಲಿ ಸ್ವಲ್ಪ ಪಾಲು ಅವರಿಗೆ ಮೀಸಲಿಡಬೇಕಿತ್ತು. ಆದರೆ ಅಷ್ಟೆನೂ ಸೌಂದರ್ಯವತಿಯರಲ್ಲದ ಕೆಲವು ವಯಸ್ಸಾದ ಲೈಂಗಿಕ ಕಾರ್ಮಿಕರಿಗೆ ಈ ಪ್ರದೇಶದಲ್ಲಿ ತಮ್ಮ ಹೊಟ್ಟೆಪಾಡು ಸಾಗಿಸುವುದೇ ಕಷ್ಟವಾಗಿದ್ದರಿಂದ ಹಪ್ತಾ ಕೊಡುವುದು ಕಷ್ಟದ ಮಾತು. ಆಗೆಲ್ಲ ಅವರು ಬೇಕಾದರೆ ನಿಮ್ಮ ಕೂಡ ನಮ್ಮ ಮೈ ಹಂಚೋಕೋತಿವಿ, ಬೇಕಾದಂತೆ ಬಳಸಿಕೊಳ್ಳಿ ಆದರೆ ದುಡ್ಡು ಎಲ್ಲಿಂದ ತರೋನು ಅಂತ ಗೋಗರೀತಾ ಇದ್ರು. ಆದರೆ ಹೃದಯವಿಲ್ಲದ ಪೆÇಲೀಸ್ ಪೇದೆಗಳು ‘ನಿಮ್ಮ ಹಳಸಿದ ಮೈ ತೊಗೊಂಡು ಹಾಳಾಗಿ ಹೋಗಂತಿರೇನು ಸರಳ ದುಡ್ಡು ಕೊಡ್ರಿ’ ಎಂದು ಪೀಡಿಸುವುದು ಮಾಮೂಲಿಯಾಗಿತ್ತು. ಕೆಲವೊಮ್ಮೆ ಸ್ಥಳಿಯ ರೌಡಿಗಳು ಒಕ್ಕರಿಸುತ್ತಿದ್ದರು. ನಮ್ಮಗಳ ಹಣ್ಣುಗಾಯಿ ನೀರುಗಾಯಿ ಮಾಡಿ ನಮ್ಮ ಜಂಪರಿನೊಳಗೆ ಹುದಗಿದ್ದ ಪುಡಿಗಾಸನ್ನು ಕಸಿದುಕೊಂಡು ಮಾಯವಾಗುತ್ತಿದ್ದರು. 
 
ಇದೇ ಸಮಯದಲ್ಲಿ ಒಂದು ದಿನ ಪಿಂಪ್ ಬಾಬು ನಮ್ಮನ್ನು ಹುಡುಕಿಕೊಂಡು ಬಂದು ಒಂದ ಹೊಸ ಅವಕಾಶದ ಬಗ್ಗೆ ತಿಳಿಸಿದ. ಅದೇನೆಂದರೆ ಮುಂದಿನ ವಾರದಿಂದ ಬೆಂಗಳೂರಿನಲ್ಲಿ ಅಧಿವೇಶನ ಶುರುವಾಗಿ ತಿಂಗಳಾನುಗಟ್ಟಲೆ ನಡೆಯುತ್ತದೆ. ಈ ಸಮಯದಲ್ಲಿ ರಾಜಕಾರಣಿಗಳಿಗೆ ಬೇಕಾದಷ್ಟು ಹುಡುಗೀರು ಬೇಕು. ಹೀಗಾಗಿ ಅಲ್ಲಿಗೆ ಹೋದರೆ ಈ ಸಿಜನ್ನಿನಲ್ಲಿ ದುಡಿದುಕೊಂಡು ಸ್ವಲ್ಪ ಹಣ ಮಾಡಿಕೊಂಡು ಆರಾಮಾಗಿ ಇರಬೌದು ಎಂದು ಆಸೆ ಹುಟ್ಟಿಸತೊಡಗಿದ. ಬಾಬು ಹೀಗೆ ಹೇಳುತ್ತಿದ್ದಾನೆಂದರೆ ಅವನು ದೊಡ್ಡ ಮೊತ್ತದ ಕಮಿಶನ್ ಹೊಡೆಯುತ್ತಾನೆಂಬುದು ನಮಗೂ ಗೊತ್ತು. ಆದರೆ ನಮಗೆ ಅಲ್ಲಿಂದ ಬಿಡುಗಡೆ ಬೇಕಿತ್ತು. ಹೀಗಾಗಿ ರೂಪಕ್ಕ ಒಪ್ಪಿಕೊಳ್ಳಲಿಲ್ಲಾವಾದರೂ ನನಗೆ ಈ ಹುಬ್ಬಳ್ಳಿ ಬಿಟ್ಟು ಬಹುದೂರ ಹೋಗಬೇಕಾಗಿತ್ತು ಹೀಗಾಗಿ ಒಪ್ಪಿಕೊಂಡೆ.
* * *
(ಮುಂದುವರೆಯುವುದು….)
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x