ಕೆಂಗುಲಾಬಿ (ಭಾಗ 14): ಹನುಮಂತ ಹಾಲಿಗೇರಿ

 
ಕಾಲ ಹೀಗೆ ಬರುತ್ತೆ ಅಂತ ಹೇಳಲಿಕ್ಕಾಗುವುದಿಲ್ಲ. ಮದುವೆಯಾಗಿ ವರ್ಷ ತುಂಬಿ ಎರಡನೇ ವರ್ಷಕ್ಕೆ ಕಾಲಿಟ್ಟರಲಿಲ್ಲ. ಇನ್ನೂ ನಾನು ನನ್ನ ಹೆಂಡತಿ ಲಲಿತಾ ಪರಸ್ಪರ ಅರ್ಥ ಮಾಡಿಕೊಳ್ಳುವುದರಲ್ಲಿದ್ದೆವು. ಮದುವೆಯಾದ ತಕ್ಷಣವೇ ನಾನು ನನ್ನ ಹೆಂಡತಿಗೆ ನನ್ನ ಕೆಲಸದ ವಿಷಯ, ಶಾರಿಯ ವಿಷಯಗಳನ್ನು ಮುಕ್ತವಾಗಿ ಹೇಳಿದ್ದೆ. ಅಷ್ಟೇ ಅಲ್ಲದೆ ಅವಳನ್ನು ಶಾರಿಯ ಮನೆಗೆ ಕರೆದುಕೊಂಡು ಹೋಗಿದ್ದೆ ಕೂಡ. ಅಲ್ಲಿ ನಮ್ಮಿಬ್ಬರ ಪ್ರೀತಿ ವಿಶ್ವಾಸವನ್ನು ಗಮನಿಸಿದ ಲಲ್ಲಿ ಅಂದಿನಿಂದ ತಾನು ನನ್ನೊಂದಿಗೆ ನಡೆದುಕೊಳ್ಳುವ ಪದ್ದತಿಯನ್ನೇ ಬದಲಿಸಿದಳು. ಅವಳಲ್ಲಿ ಅನುಮಾನದ ಪೆಡಂಭೂತ ಹುಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇತ್ತು. ಆ ವಿರಸ ದಾಂಪತ್ಯದಲ್ಲಿಯೇ ಮುಂದೊಂದು ದಿನ ಗಂಡು ಮಗುವಾಯಿತು. ಹಾಗೂ ಹೀಗೂ ಮೂರ್ನಾಲ್ಕು ವರ್ಷ ಸಂಸಾರ ತೂಗಿಸಿದ್ದೆ ದೊಡ್ಡ ಸಾಧನೆಯೆನ್ನಬೇಕು. 
 
ಒಂದು ಹಂತದಲ್ಲಿ ನಮ್ಮಿಬ್ಬರಿಗೂ ಈ ಸಂಸಾರ ಬೇಡವೇ ಬೇಡ ಎನಿಸತೊಡಗಿತು. ಎಷ್ಟು ದಿನ ಉರುಳಿದರೂ ನನ್ನ ಮತ್ತು ನನ್ನ ಹೆಂಡತಿ ಲಲ್ಲಿಯ ಮಧ್ಯ ಹೊಂದಾಣಿಕೆ ಮೂಡಲೇ ಇಲ್ಲ. ಅನುಮಾನದ ಭೂತ ಅವಳನ್ನು ನೆಮ್ಮದಿಯಿಂದ ಇರಲು ಬಿಡುತ್ತಿರಲಿಲ್ಲ. ನಾನು ಯಾವುದಕ್ಕೂ ಹೊರಗಡೆ ಹೋದರೂ ಶಾರಿಯ ಹತ್ತಿರವೇ ಹೋಗಿದ್ದೇನೆಂದು ಅನುಮಾನಿಸಿ ಹೊಟ್ಟೆಕಿಚ್ಚಿನಿಂದ ಜಗಳ ತಗೆತಿದ್ಲು. ಬರ ಬರುತ್ತ ನಾನು ಹೊರಗಡೆ ಹೋಗುವುದೆ ಪಿರಿಯಾಗತೊಡಗಿತು. 
 
 ನಾವಿಬ್ಬರು ಒಂದು ತೀರ್ಮಾನಕ್ಕೆ ಬರಲೇ ಬೇಕಿತ್ತು. ಡೈವೋರ್ಸ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬಂದಿದ್ದೇವು. ಆದ್ರೆ ನಾನು ಮಗುವನ್ನು ಬಹಳಷ್ಟು ಹಚ್ಚಿಕೊಂಡಿದ್ದರಿಂದ ಅದನ್ನು ಅವಳ ತಾಬಾಕ್ಕೆ ಒಪ್ಪಿಸಲು ಸಿದ್ದನಿರಲಿಲ್ಲ. ಮಗುವಿನಿಂದಾದರೂ ನಮ್ಮ ದಾಂಪತ್ಯ ಮತ್ತೆ ಜೋಡನೆಯಾಗಿ ಹಳಿಗೆ ಬರಬಹುದು ಎಂಬೊಂದು ದೂರದ ಆಸೆ. ಮಗುವನ್ನು ನಿನಗೆ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದೆ. ಆದರೆ, ಮಗುವು ಅವಳ ಮನಸ್ಸನ್ನು ಬದಲಾಯಿಸಲಿಕ್ಕೆ ಸಾಧ್ಯ ಆಗಲಿಲ್ಲ. ಅವಳು ಮಗುವನ್ನು ನನ್ನ ತಾಬಾಕ್ಕೆ ಒಪ್ಪಿಸಿ ನನ್ನಿಂದ ಡೈವೊರ್ಸ್ ಪಡೆದುಕೊಂಡಳು. ಹೀಗಾಗಿ ನಾನು ಏಕಾಂಗಿಯಾದೆ. ನನ್ನ ಮಗನನ್ನು ನಾನು ರಾಜಿ ಇದ್ದ ಅನಾಥಾಶ್ರಮಕ್ಕೆ ಸೇರಿಸಬೇಕಾಯಿತು. ಅಲ್ಲಿ ಶಾರಿಯ ಮಗಳು ರಾಜಿಯೇ ನನ್ನ ಮಗ ಅತೀತ್‍ನನ್ನು ತನ್ನ ಸ್ವಂತ ತಮ್ಮನಂತೆ ನೋಡಿಕೊಳ್ಳುತ್ತಿದ್ದಳು. ಅವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಐದಾರು ವರ್ಷಗಳಲ್ಲಿ ಇವೆಲ್ಲ ಘಟನೆಗಳು ನಡೆದು ನನ್ನ ಮನಸ್ಸಿನ ನೆಮ್ಮದಿಯನ್ನು ಪೂರ್ತಿಯಾಗಿ ಹಾಳು ಮಾಡಿದ್ದವು. ಈಗ ರಾಜಿ 6ನೇ ತರಗತಿಯಲ್ಲಿ ಮತ್ತು ಅತೀತ್ 1ನೇ ತರಗತಿಯಲ್ಲಿ ಓದುತ್ತಿದ್ದರು.  
 
ಕೆಲಸದ ಮಧ್ಯೆ ನನಗೆ ಮಕ್ಕಳಿಬ್ಬರು ಓದುತ್ತಿರುವ ಅನಾಥಾಶ್ರಮದ ಕಡೆ ಈ ನಡುವೆ ಹೋಗಲಿಕ್ಕೆ ಸಾಧ್ಯವಾಗಿರಲಿಲ್ಲ. ಒಂದು ದಿನ ಸ್ವೀಟ್ ಮತ್ತು ಬಟ್ಟೆ ತೆಗೆದುಕೊಂಡು ಹೋದೆ. ನಾನು ಬಂದ ಸುದ್ದಿ ಬಂದರೆ ಸಾಕು ರಾಜಿ ಓಡೋಡಿ ಬಂದು ನನ್ನ ತೆಕ್ಕೆ ಬೀಳುತ್ತಿದ್ದಳು. ಆದರೆ ಈ ಸಲ ರಾಜಿಯ ಸುಳಿವೇ ಇರಲಿಲ್ಲ. ಅಷ್ಟೊತ್ತಿಗೆ ಅತೀತ್ ಓಡೋಡಿ ನನ್ನ ತೊಡೆ ಮೇಲೆ ಕುಳಿತ. ಅವನ ಗೆಳೆಯರು ಬಂದು ಸುತ್ತುವರೆದರು. ನಾನು ಅದು ಇದು ಮಾತಾಡಿಯಾದ ಮೇಲೆ ಅತೀತನೆ ರಾಜಿಯ ವಿಷಯ ಹೇಳಿದ.
 
"ಶಾರಿ ಆಂಟಿ ಬಂದು ಕಳೆದ ವಾರವೇ ರಾಜಿ ಕರಕೊಂಡು ಹೋದ್ರು ಪಪ್ಪಾ ನನಗೂ ಬಾಳ ಜೀವ ಮಾಡಿದ್ರು" ಎಂದು ಅತೀತ್ ಬೇಸರದಿಂದ ಹೇಳಿದ. ನನಗೆ ದೊಡ್ಡ ಶಾಕ್. ನಾನು ಅವನೊಂದಿಗೆ ಅವನ ರೂಮಿನ ಕಡೆ ಪಾದ ಬೆಳೆಸಿದೆ. ಅಲ್ಲಿ ಅತೀತ್ ತನ್ನ ಟ್ರಂಕ್ ತೆಗೆದು ಒಂದು ದೊಡ್ಡ ಪ್ಲಾಸ್ಟಿಕ್ ಕವರ್‍ನ್ನು ಬಿಚ್ಚತೊಡಗಿದ. ನೋಡಿದರೆ ಅಂಟಿನ ಉಂಡೆಗಳು. 'ಶಾರದಾ ಅಂಟಿ ಕೊಟ್ಟು ಹೋಗ್ಯಾಳ' ಎಂದು ತಿಳಿಸಿದ. ಮತ್ತೊಂದು ಕವರ್ ತೆಗೆದು ಅದರಲ್ಲಿನ ಆಕಾಶ ನೀಲಿ ಬಣ್ಣದ ಜುಬ್ಬಾವೊಂದನ್ನು ತೋರಿಸಿ ಇದನ್ನು ಆಕೆ ಕೊಡಿಸಿದ್ದು ಎಂದು ತಿಳಿಸಿದ. 
 
'ಅತೀತ್ ಆಕಿ ಯಾವೂರಿಗೆ ಹೋಕ್ಕಿನಂತ ಏನಾರ ಹೇಳ್ಯಾಳನ ಎಂದು ಮಗುವನ್ನೆ ದಿಗಿಲಿನಿಂದ ಕೇಳಿದೆ.
 
ಆಕಿ ನನಗೆ ಏನೂ ಹೇಳಲಿಲ್ಲ ಪಪ್ಪಾ. ಆದ್ರ ನಿನಗೆ ಕೊಡ್ಲಿಕ್ಕಂತ ಹೇಳಿ ನಿನಿಗ ಈ ಚೀಟಿ ಕೊಟ್ಟಾಳ. ಎಂದು ಹೇಳಿ ಚೀಟಿ ಕೊಟ್ಟ. ತಪ್ಪಾಗಿದ್ರು ದುಂಡ ದುಂಡಗೆ ಇದ್ದ ಅಕ್ಷರಗಳು ಆಕೆಯವೇ ಎನ್ನುವುದು ನನಗೆ ಖಾತ್ರಿಯಾಯಿತು. ಮೊದಲೆರಡು ಪ್ಯಾರಾಗಳಲ್ಲಿ ನಾನು ಮಾಡಿದ ಸಹಾಯದ ಬಗ್ಗೆಯೇ ಬರೆದಿದ್ಲು.
 
ಕೊನೆಯ ಪ್ಯಾರಾದಲ್ಲಿ ನಿನ್ನ ಮತ್ತು ಲಲಿತಳ ಸಂಬಂಧ ಹದಗೆಡುತ್ತಿರುವುದು ಕೇಳಿ ಬಾಳ ಬೇಸರಾತು. ಇನ್ನಾದರೂ ತಂಗಿ ಲಲಿತಳೊಂದಿಗೆ ಚೆನ್ನಾಗಿರು, ಆಕಿನ ಚಲೋತಂಗ ನೋಡಿಕೋ. ನಿಮ್ಮಿಬ್ಬರ ದಾಂಪತ್ಯಕ್ಕೆ ಮುಳ್ಳಾಗಿದ ನಾನು ದೂರ ಹೋಗಲು ನಿರ್ಧರಿಸಿನಿ. ದೂರದ ಬೆಂಗಳೂರಿನಲ್ಲಿ ಅಳಿದುಳಿದ ನನ್ನ ಜೀವನ ಸಾಗಿಸಲು ಹೋಂಟಿನಿ. ಬಹುಶಃ ಇನ್ನೂ ನನ್ನ ನಿನ್ನ ಭೇಟಿ ಆಗಲಿಕ್ಕಿಲ್ಲ. ರಾಜಿಯನ್ನೂ ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೇನೆ. ನನ್ನಿಂದ ನಿನ್ನ ಬದುಕಿಗೆ ಆದ ತೊಂದರೆಗೆ ಕ್ಷಮೆ ಇರಲಿ ಎಂದು ಪತ್ರ ಮುಗಿಸಿದ್ದಳು.
 
ಆದರೆ ನನ್ನ ಮತ್ತು ಲಲ್ಲಿಯ ಮಧ್ಯೆ ಉಂಟಾದ ಬಿರುಕು ಕೊನೆಯ ಡೈವೋರ್ಸ್ ತೆಗೆದುಕೊಳ್ಳುವವರೆಗೆ ಮುಂದುವರೆದಿದ್ದರ ಬಗ್ಗೆ ಅವಳಿಗೆ ಗೊತ್ತೆ ಇರಲಿಲ್ಲ. ನನಗೆ ಆ ಕ್ಷಣದಲ್ಲಿ ಸಿಟ್ಟು ಮತ್ತು ಹತಾಶೆ ಎರಡು ಒಟ್ಟೊಟ್ಟಗೆ ಕಾಣಿಸಿಕೊಂಡವು. ಎದುರಿಗಿದ್ದ ಮಗ ಅತೀತನನ್ನು ಮರೆತು ಜೋರಾಗಿ ಅತ್ತುಬಿಡಬೇಕೆಂದೆ. ಆಗಲಿಲ್ಲ. ಎಷ್ಟೊ ಹೊತ್ತಿನ ನಂತರ ಅತೀತ ಎದ್ದು ಬಂದು ನನ್ನ ತೊಡೆಯ ಮೇಲೆ ಕುಳಿತು ತೇವಗೊಂಡಿದ್ದ ನನ್ನ ಕಣ್ಣುಗಳನ್ನು ಒರೆಸತೊಡಗಿದ.
* * *
 
ಶಾರಿ ಎಲ್ಲಾದರೂ ಇರಲಿ ಚಲೋತಂಗ ಇರಲಿ ಎಂದು ಹಾರೈಸುತ್ತಾ ಒಂದೆರಡು ವರ್ಷ ಹುಬ್ಬಳಿಯಲ್ಲಿಯೇ ಕೆಲಸ ಮಾಡಿಕೊಂಡು ಸುಮ್ಮನೆ ಕಳೆದದ್ದಾಯಿತು. ಆದರೆ ಬರಬರುತ್ತಾ ಹುಬ್ಬಳಿಯಲ್ಲಿ ದಿನ ದೂಡುವುದು ಅಸಹನೀಯ ಎನಿಸತೊಡಗಿತು. ಕೊನೆ ಕೊನೆಗೆ ಶಾರಿ ಎಲ್ಲಿದ್ದಾಳೋ ಹೇಗಿದ್ದಾಳೋ ನೋಡಬೇಕು ಎಂಬ ಹಪಾಹಪಿ ಹುಟ್ಟಿಕೊಂಡು, ತಾಳಲಾರದೆ ಬೆಂಗಳೂರಿಗೆ ವರ್ಗ ಮಾಡಿಸಿಕೊಂಡು ಬಿಟ್ಟೆ. ಲೈಂಗಿಕ ಕಾರ್ಮಿಕರ ಪರವಾಗಿಯೇ ನಾನು ನೌಕರಿ ಮಾಡಬೇಕಾಗಿದ್ದುದರಿಂದ ದಂಧೆ ನಡೆಯುವ ಪ್ರದೇಶಗಳನ್ನು ಹುಡುಕುವುದು ಕಷ್ಟವಾಗಲಿಲ್ಲ. ಕಸುಬಿನ ಹೆಣ್ಣುಮಕ್ಕಳು ಇರುವ ಎಲ್ಲ ಪ್ರದೇಶಗಳನ್ನು ಬಿಟ್ಟೂ ಬಿಡದೆ ಸುತ್ತಾಡತೊಡಗಿದೆ, ಆದರೂ ಅವಳು ನನಗೆ ಸಿಕ್ಕಿರಲಿಲ್ಲ. 
 
ಕೋರಮಂಗಲ, ಎಂ.ಜಿ.ರೋಡಿನ ಹೈಟೆಕ್ ವೇಶ್ಯಾಗೃಹಗಳು, ಕೆ.ಆರ್.ಪುರಂನ ಹೊಸೂರು ರಸ್ತೆಯ ಲೋಟೆಕ್ ವೇಶ್ಯಾಗ್ರಹಗಳು, ಗಾಂಧಿನಗರದ ಕಂಪೆನಿ ಮನೆಗಳು, ಮೆಜೆಸ್ಟಿಕ್‍ನ ಬೀದಿಗಳು ನ್ಯಾಷನಲ್ ಹೈವೇಗಳ ಡಾಬಾಗಳಲ್ಲಿರುವ ಬಳುಕುವ ಹೆಣ್ಣುಗಳು, ಮಾರ್ಕೆಟ್‍ನ ಹಮಾಮ್‍ಗಳು, ಮನೆಯಲ್ಲಿರುವ ತಮ್ಮ ರೂಮುಗಳನ್ನೆ ಗಂಟೆ ಲೆಕ್ಕದಲ್ಲಿ ಬಾಡಿಗೆಗೆ ಕೊಟ್ಟು ದೇಹವನ್ನು ಇಮ್ಮಡಿಯಾಗಿಸಿಕೊಂಡಿರುವ ಡಬ್ಬಲ್‍ರೋಡಿನ ತಲೆಹಿಡುಕ ಮನೆಗಳು, ಥಿಯೇಟರ್ ಒಳಗಿನ ಕತ್ತಲು-ಬಣ್ಣ-ಬೆಳಕಿನಲ್ಲೇ ಬೆತ್ತಲೆಯಾಗುವ ಜಾಗಗಳು ಹೀಗೆ ಎಲ್ಲ ಸ್ಥಳಗಳನ್ನು ಶಾರಿಗಾಗಿ ಹುಡುಕಿದ್ದಾಯಿತು. 
 
ಈ ಮಧ್ಯೆ ಬೆಂಗಳೂರಿನಲ್ಲಿ ನನ್ನ ಕೈ ಕೆಳಗೆ ಕೆಲಸ ಮಾಡಲು ಫಿಲ್ಡ್‍ಗೈಡ್ ಆಗಿ ದೀಪಾ ಎನ್ನುವ ಹುಡುಗಿಯನ್ನು ಕೊಟ್ಟಿದ್ದರು. ಶಾರದೆಯ ಹುಡುಕಾಟದ ಹುಚ್ಚಿನಲ್ಲಿ ಬೆಂಗಳೂರಿಗೆ ಬಂದು ಇಳಿದಿದ್ದರಿಂದ ವೇಶ್ಯಾ ಮಹಿಳೆಯರ ಬದುಕಿನ ಹಲವಾರು ಮುಖಗಳನ್ನು ಅರ್ಥ ಮಾಡಿಕೊಳ್ಳುವಂತಾಯಿತು. ಪಬ್‍ನಲ್ಲಿ ನಡು ಬಳುಕಿಸುವ ಬೆಡಗಿಯರು, ಮಸಾಜ್ ಸೆಂಟರ್‍ನಲ್ಲಿ ಮೈ ಮಾರಿಕೊಳ್ಳುವ ಹುಡುಗಿಯರು, ಕುಂಬಾರಪೇಟೆ ಬಸ್ ನಿಲ್ದಾಣದಲ್ಲಿ ಬಸ್ಸುಗಳ ಮರೆಯಲ್ಲಿಯೇ ತಮ್ಮ ಕೆಲಸವನ್ನು ಶುರು ಹಚ್ಚಿಕೊಳ್ಳುತ್ತಿದ್ದ ಕೋತಿಗಳು, ಹಿಜ್ಡಾಗಳು, ಪಾರ್ಕ್‍ಗಳಲ್ಲಿ ಸಿನೆಮಾ ಥಿಯೇಟರ್‍ಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ತುಟಿಗೆ ಲಿಪ್‍ಸ್ಟಿಕ್ ಒರೆಸಿಕೊಳ್ಳತ್ತಲೇ ಗಿರಾಕಿಗಳ ಕಡೆಗೆ ಕಣ್ಣು ಹಾರಿಸುತ್ತಿದ್ದ ಹುಡುಗಿಯರು, ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶಗಳಲ್ಲಿ ಸಂತೆಗೆ ಬಂದಂತೆ ನಟಿಸುತ್ತಲೇ ಪಿಂಪ್ ಕೆಲಸ ಮಾಡುತ್ತಿದ್ದ ವೃದ್ದ ವೇಶ್ಯೆಯರು ಹೀಗೆ ತರಾವರಿಯ ಜನರೆಲ್ಲರೂ ಎದುರಾದರು.
 
ಇಂಥ ಜನರೊಂದಿಗೆ ಒಡನಾಟ ಬೆಳೆಸಿಕೊಳ್ಳುವಲ್ಲಿ ನನ್ನ ಸಹದ್ಯೋಗಿ ದೀಪಾ ನನಗೆ ಬಹಳಷ್ಟು ನೆರವಾದಳು. ಕಚೇರಿಯಲ್ಲಿ ಕೆಲಸ ಮಾಡುತ್ತಲೇ ಲೈಂಗಿಕ ಕಾರ್ಮಿಕರ ಹಕ್ಕುಗಳಿಗಾಗಿ ಕ್ರೀಯಾಶಿಲವಾಗಿರುವ ಹಲವಾರು ಸಂಸ್ಥೆಗಳ ಸದಸ್ಯಳೂ ಆಗಿದ್ದಳು. ಹೀಗಾಗಿ ಲೈಂಗಿಕ ದಂಧೆಯ ಪಲಾನುಭವಿಗಳೆಲ್ಲರನ್ನು ಅವಳು ಬಲ್ಲವಳಾಗಿದ್ದಳು.
 
ಅಂದು ಮಾರುಕಟ್ಟೆಯಲ್ಲಿ ದೀಪಾಳೊಂದಿಗೆ ಸಾಗುತ್ತಿದ್ದೆ. ಎದುರಿಗೆ ಹಿಜಡಾಗಳ ಒಂದು ದಂಡೇ ಮಾಮ ಬಂದ ಓಡ್ರೇ ಎಂದು ಓಡುತ್ತಿದ್ದುದು ಗಮನ ಸೆಳೆಯಿತು. ಫುಟ್‍ಪಾತ್ ಮಧ್ಯೆ ಬಟ್ಟೆ ಹಾಸಿಕೊಂಡೋ ಅಥವಾ ಬುಟ್ಟಿ ಇಟ್ಟುಕೊಂಡು ತಳ್ಳುಗಾಡಿಯಲ್ಲೋ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳು ಅವಸರದಲ್ಲಿ ತಮ್ಮ ವ್ಯಾಪಾರದ ವಸ್ತುಗಳನ್ನು ಗಂಟುಮೂಟೆ ಕಟ್ಟಿಕೊಂಡು ಮುಂದೆ ಸಾಗತೊಡಗಿದ್ದರು. ಇಡೀ ವಾತಾವರಣವೇ ನಿಶಬ್ದಗೊಂಡಿದ್ದರಿಂದ ದೂರದಲ್ಲೆಲ್ಲೋ ಬೂಟಿನ ಕಟ್ ಕಟ್ ಶಬ್ದಕ್ಕೆ ಮಾತ್ರ ಜೀವವಿತ್ತು. ಆ ಶಬ್ದ ಹತ್ತಿರ ಬಂದಂತೆಲ್ಲ ನಿಶಬ್ದ ಮತ್ತಷ್ಟು ಆಳವಾಗುತ್ತಿತ್ತು. ಆದರೆ ಕೆಲವು ಸಾರ್ವಜನಿಕರು ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ನಿನ್ನೆಯ ಅದೇ ನಿರ್ಲಿಪ್ತತೆಯಲ್ಲಿ ಒಬ್ಬರ ಹಿಂದೊಬ್ಬರು ನಿರಾತಂಕವಾಗಿ ಅಡ್ಡಾಡುತ್ತಿದ್ದರು. 
 
ಈ ಮಧ್ಯೆಯೆ ಅಲ್ಲಿಯೇ ಯಾವ ಪೋಲಿಸರನ್ನು ಕೇರು ಮಾಡದ ಮಾಲಾ ಎಂಬ ಗಟ್ಟಿಗಿತ್ತಿ ಹುಡುಗಿಯನ್ನು ದೀಪ ನನಗೆ ಪರಿಚಯಿಸಿದಳು. ಮಾಲಾಳ ಮುಖ ಏಕೋ ದುಮಗುಡುತ್ತಿತ್ತು. ದೀಪಾ ಅವಳನ್ನು ಕೂಗಿ "ಪೊಲೀಸರು ಬಂದರು ತಪ್ಪಿಸಿಕೊಳ್ಳೆ' ಎಂದು ಅವಳ ಹತ್ತಿರಕ್ಕೆ ಹೋಗಿ ಹೇಳಿದಳು. ದೀಪಾಳನ್ನು ಒಂದು ಕ್ಷಣ ಹಿಂದಕ್ಕೆ ತಿರುಗಿ ನಿಂತು ನೋಡಿದ ಅವಳು ‘ಅಯ್ಯೊ ಬಿಡಿ ಮೇಡಂ. ಪೊಲೀಸರು ಏನು ಮಾಡ್ತಾರೆ ಪೊಲೀಸರನ್ನು ಬುಟ್ಟಿಗೆ ಹಾಕಿಕೊಳ್ಳುವುದು ನನಗೆ ಚೆನ್ನಾಗಿ ಗೊತ್ತು' ಎಂದು ಗತ್ತಿನಿಂದಲೆ ಉತ್ತರಿಸಿದಳು. 
 
‘ಅದೇಗೆ ಬುಟ್ಟಿಗೆ ಹಾಕಿಕೊಳ್ತೀಯೇ?’ ಎಂದು ದೀಪಾ ಕೇಳಿದರೆ, ಕಣ್ಣು ಹೊಡೆದರೆ ಪೋಲೀಸರ ಅಧಿಕಾರದ ಗಮ್ಮತ್ತೆಲ್ಲ ಜರ್ರಂಥ ಇಳಿಯುತ್ತೆ. ‘ಏನು ಮೇಡಂ ನಿಮಗೆ ಹೇಳಿ ಕೊಡಬೇಕೆ? ನಿಮಗೇ ಗೊತ್ತಲ್ವಾ ಪೊಲೀಸರನ್ನು ಕಂಡ್ರೆ ನನಗೆ ಎಷ್ಟೊಂದು ಇಷ್ಟ ಅಂತ’ ಎಂದು ಕಣ್ಣು ಹಾರಿಸಿ ನಿಧಾನಕ್ಕೆ ನಡೆದುಕೊಂಡು ಹೋದಳು. ನನಗೆ ಅವಳ ಮಾತಿನ ಒಗಟು ಅರ್ಥವಾಗದ್ದರಿಂದ ಬೆಪ್ಪನಂತೆ ದೀಪಾಳತ್ತ ನೊಡಿದೆ. 
 
ನನ್ನ ನೋಟವನ್ನು ಅರ್ಥ ಮಾಡಿಕೊಂಡ ದೀಪ ಮಾಲಾಳ ಕಥೆಯನ್ನು ಹೇಳತೊಡಗಿದಳು. ‘ಇದೊಂದು ವಿಚಿತ್ರ ಹುಡುಗಿ ಸರ್. ಪಾಪ, ತಾನು ಏನು ತಪ್ಪು ಮಾಡದಿದ್ದರೂ ಈ ಪಾಪ ಕೂಪದಲ್ಲಿ ಸಿಕ್ಕಿಬಿದ್ದಿರುವ ನತದೃಷ್ಟಳು. ಆನೇಕಲ್ ಹತ್ತಿರದ ಹಳ್ಳಿಯವಳು. ಹರೆಯದ ಕಿಚ್ಚಿನಲ್ಲಿ ತಾನು ಇಷ್ಟಪಟ್ಟವನೊಂದಿಗೆ ಓಡಿ ಹೋದಳಂತೆ. ಇವಳ ದುರಾದೃಷ್ಟಕ್ಕೆ ಅವನು ಮೇಲ್ಜಾತಿಯ ರಾಜಕೀಯ ಪುಢಾರಿಯೊಬ್ಬನ ಮಗನಾಗಿದ್ದ. ಎರಡು ಕಡೆಯ ಕುಟುಂಬದವರು ಹುಡುಕಿಸಿದ್ದೆ ಹುಡುಕಿಸಿದ್ದು. ಪೊಲೀಸ್ ಕಂಪ್ಲೇಂಟ್ ಬೇರೆ ಕೊಟ್ಟರು. ಇನ್ನು ಸಿಕ್ಕರೆ ಯಡವಟ್ಟಾದೀತು ಎಂದು ಇಬ್ಬರು ಪೊಲೀಸರಿಗೆ ಶರಣಾದರು. 
 
ಇವರ ಮುಖ ಕಂಡ ತಕ್ಷಣ ಪೊಲೀಸರು ಮೊದಲು ಮಾಡಿದ ಕೆಲಸ ಹುಡುಗನ ತಂದೆಗೆ ಫೋನಾಯಿಸಿ ಮಗನನ್ನು ಒಪ್ಪಿಸಿ ಅವರಿಂದ ಶಹಬ್ಬಾಸಗಿರಿ ಪಡೆದುಕೊಂಡಿದ್ದು. ನಂತರದಲ್ಲಿ ವಾರಾನುಗಟ್ಟಲೆ ಇವಳನ್ನು ಠಾಣೆಯಲ್ಲಿಟ್ಟುಕೊಂಡು ಲೈಂಗಿಕ ಹಲ್ಲೆ ನಡೆಸಿ ನಂತರ ಬೀದಿಗೆ ಎಸೆದರಂತೆ. ಹೀಗಾಗಿ ಅಂದಿನಿಂದ ಇವಳಿಗೆ ಪೋಲಿಸರನ್ನು ಕಂಡರೆ ಅಷ್ಟೊಂದು ಸಿಟ್ಟು.' ಎಂದು ಸಂಕ್ಷಿಪ್ತವಾಗಿ ಹೇಳಿ ಮುಗಿಸಿದಳು. 'ಆದ್ರೆ, ಪೊಲೀಸರನ್ನೆ ಕಂಡ್ರೆ ನನಗೆ ಬಹಳ ಇಷ್ಟ ಅಂತ ಅವಳು ಹೇಳಿದ್ಲು' ಎಂದೆ ಆಶ್ಚರ್ಯದಿಂದ.'ಅಯ್ಯೋ, ಮುಖ್ಯವಾದ ವಿಷಯವನ್ನೇ ಹೇಳೋದನ್ನು ಮರೆತೆ ಸರ್. ಅವಳಿಗೆ ಏಡ್ಸ್ ಇದೆ. ತನ್ನಲ್ಲಿರುವ ಏಡ್ಸ್‍ನ್ನು ಪೊಲೀಸರಿಗೆಲ್ಲ ಪುಕ್ಕಟ್ಟೆಯಾಗಿ ಹಂಚಬೇಕು ಅನ್ನೋದು ಅವಳ ಹಟ. ಅದಕ್ಕಾಗಿಯೆ ಪೊಲೀಸರನ್ನು ಕಂಡರೆ ವಯ್ಯಾರದಿಂದ ಹಲ್ಲುಗಿಂಜುತ್ತಾಳೆ. ಇವಳ ವಯ್ಯಾರಕ್ಕೆ ಶ್ರೀರಾಮಚಂದ್ರನಂಥ ಪೋಲಿಸರು ಸಹ ಬಲಿಪಶುವಾಗೋದು ಗ್ಯಾರಂಟಿ ಎಂದು ಹೇಳಿ ನಿಟ್ಟುಸಿರುಬಿಟ್ಟಳು. ನಮ್ಮ ಎದುರುಗಡೆಯ ರಸ್ತೆ ತಿರುವಿನಲ್ಲಿ ಖಾಕಿ ಟೊಪ್ಪಿಗೆಯ ವ್ಯಕ್ತಿಯೊಂದಿಗೆ ಮಾಲಾ ಸಲುಗೆಯಿಂದ ಮಾತಾಡುತ್ತಿದ್ದುದು ಕಣ್ಣಿಗೆ ಬಿತ್ತು.
                                  * * * 
(ಮುಂದುವರೆಯುವುದು)
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x