ಯಾರೋ ಬಾಗಿಲು ಬಡಿದಂತಾಗಿ ಅವಸರವಾಗಿ ಮೇಲೆದ್ದು, ಮಲಗಿದ್ದ ಮಗುವನ್ನು ಎತ್ತುಕೊಂಡು ಹೊರ ಬಂದೆ. ಒಂದಿಬ್ಬರು ಗಿರಾಕಿ ಬಂದಿದ್ದರು. ಈ ಸಲ ವಠಾರದ ಮುಂದಿರುವ ಗಲ್ಲೆ ಮೇಲೆ ರತ್ನಮ್ಮ ಕುಳಿತಿದ್ದಳು. ನಾನು ಮಗುವನ್ನು ಎತ್ತಿಕೊಂಡು ಬಾಗಿಲಲ್ಲಿ ನಿಂತುಕೊಂಡಿದ್ದೆ. ರತ್ನಮ್ಮ ನನ್ನನ್ನು ಕೆಕ್ಕರಿಸಿ ನೋಡುತ್ತಿದ್ದುದರಿಂದ ನನಗೆ ಮುಜುಗರವಾಗುತ್ತಿತ್ತು.
ಗಿರಾಕಿ ತಮ್ಮಿಷ್ಟದ ಹುಡುಗಿಯರನ್ನು ಆಯ್ದುಕೊಂಡು ರೂಮಿನೊಳಕ್ಕೆ ಮಾಯವಾದರು. ಅವರು ಒಳ ಹೋದ ತಕ್ಷಣ ನನ್ನಲ್ಲಿಗೆ ಬರಬರನೆ ಬಂದ ರತ್ನಮ್ಮ ನನ್ನ ರಟ್ಟೆಯನ್ನು ಹಿಡಿದುಕೊಂಡು ದರ ದರ ಎಳೆಯುತ್ತ ತನ್ನ ರೂಮಿಗೆ ಕರೆದುಕೊಂಡು ಹೋದಳು. ಉಳಿದ ಹುಡುಗಿಯರು ಅಲ್ಲಿಯೆ ಬಾಗಿಲಲ್ಲಿ ನಿಂತು ನನ್ನನ್ನು ನೋಡುತ್ತಿದ್ದರೆ ವಿನಃ ಯಾರು ಮುಂದೆ ಬಂದು ತಡೆಯಲಿಲ್ಲ. ರೂಮಿನಲ್ಲಿ ಎಳೆದೊಗೆದು ಬಾಗಿಲು ಹಾಕಿಕೊಂಡವಳೆ ನನ್ನ ಕೂದಲು ಹಿಡಿದು 'ರಂಡಿ, ಹಳೆ ರಂಡಿ ಉಂಡು ತಿಂದು ಮಲಗಾಕ ಬಂದಿಯೇನ ಇಲ್ಲಿ? ಗಿರಾಕಿ ಮುಂದ ಕೂಸಿನ ಎತ್ತಿಕೊಂಡು ನಿಲ್ಲತಿ' ಎಂದು ನನ್ನ ಕೂದಲು ಹಿಡಿದು ಎಳೆದಾಡಿ ನನ್ನ ಕೆಳಗೆ ಕೆಡವಿ ಸಿಟ್ಟು ಆರುವವರೆಗೆ ಒದ್ದು, ಅಷ್ಟೇ ರಭಸದಿಂದ ಹೊರ ಹೋದಳು. ಅಷ್ಟರಲ್ಲಿ ಅದೆಲ್ಲಿಂದಲೂ ಆ ವಠಾರವನ್ನು ಸ್ವಚ್ಚ ಮಾಡುತ್ತಿದ ಮುದುಕಿಯೊಂದು ಬಂದು ನನ್ನ ಮಗುವನ್ನು ಎತ್ತಿಕೊಂಡು ಸಮಾಧಾನಿಸತೊಡಗಿದಳು. ಅಲ್ಲಿಗೆ ಬಂದ ರೂಪಕ್ಕ ಎಷ್ಟೋ ಹೊತ್ತಿನವರೆಗೆ ನನ್ನನ್ನು ಸಮಾಧಾನಿಸಿ ಅಲ್ಲಿ ನಡೆದುಕೊಳ್ಳುವುದರ ಕುರಿತು ಮತ್ತೊಮ್ಮೆ ಹೇಳತೊಡಗಿದಳು. 'ಮಗುವನ್ನು ಗಿರಾಕಿಗಳಿಗೆ ತೋರಿಸಬೇಡ. ನೀನು ಹಿಂಗ ತೋರಿಸುತ್ತಿದ್ದರೆ ಒಂದಿಲ್ಲ ಒಂದು ದಿನ ನಿನ್ನ ಮಗುವನ್ನು ರತ್ನಮ್ಮ ಕೊಂದ ಬಿಡ್ತಾಳ' ಎಂದದ್ದು ನನ್ನ ದುಗುಡವನ್ನು ಮತ್ತಷ್ಟು ಹೆಚ್ಚಿಸಿತು.
ಅಂದಿನಿಂದ ಆ ಮುದುಕಿಗೆ ನನ್ನ ಟಿಪ್ಸ್‍ಗಳಲ್ಲಿಯೇ ಸ್ವಲ್ಪಭಾಗವನ್ನು ಕೊಟ್ಟು ನನ್ನ ಮಗುವನ್ನು ನೋಡಿಕೊಳ್ಳಲು ನೇಮಿಸಿದೆ. ನಾನು ಗಿರಾಕಿಯೊಂದಿಗೆ ಇದ್ದಾಗ ಮುದುಕಿ ನನ್ನ ಮಗುವನ್ನು ಸಮಾಧಾನಿಸುತ್ತಿದ್ದಳು. ಇದೇ ದಂಧೆಯಲ್ಲಿ ತನ್ನ ಇಡೀ ಬದುಕನ್ನು ಸವೆಸಿ, ಕೊನೆಗಾಲದಲ್ಲಿ ಅಲ್ಲಿನ ವಠಾರ ಸ್ವಚ್ಛ ಮಾಡಿಕೊಂಡಿದ್ದ ಮುದುಕಿಗೆ ರತ್ನಮ್ಮ ನೀಡುವ ರೊಕ್ಕ ಸಾಲುತ್ತಿರಲಿಲ್ಲ. ಸಕಲ ರೋಗಗಳ ಗೂಡು ಆಗಿದ್ದ ಆಕೆ ತನ್ನ ಮೈ ನೋವುಗಳನ್ನೆಲ್ಲ ಮರೆಯಲು ವಿಪರೀತ ಕುಡಿಯಬೇಕಾಗುತ್ತಿತ್ತು. ಆ ಖರ್ಚು ನಿಭಾಯಿಸಲು ಇಲ್ಲಿನ ಸೂಳೆಯರ ಮಕ್ಕಳಿಗೆ ಆಯಾ ಆಗಿಯೂ ಕೆಲಸ ಮಾಡುತ್ತಿದ್ದಳು.
ರೂಪಕ್ಕ ನನಗೆ ದಂಧೆಯ ಬಗ್ಗೆ ಬಹಳಷ್ಟು ಕಲಿಸಿದಳು. ಯಾವ ಸೀರೆ ಉಟ್ಟಾಗ ಯಾವ ಬಣ್ಣದ ಜಂಪರ್ ತೊಡಬೇಕೆಂದು, ಲಿಪ್‍ಸ್ಟಿಕ್, ಕಿವಿಯೋಲೆ, ಉಗುರುಬಣ್ಣ ಹಚ್ಚಬೇಕೆಂಬುದರಿಂದ ಹಿಡಿದು ನಮ್ಮೊಳಗಡೆಯ ನೋವು ಮರೆತು ಗಿರಾಕಿಗಳನ್ನು ಹೇಗೆ ನಗುನಗುತಾ ಅಕರ್ಷಿಸಬೇಕೆಂಬುದನ್ನು ಹೇಳಿಕೊಡುತ್ತಿದ್ದಳು. ಒಳಗೆ ದುಃಖ ಸಾಗರವನ್ನೆ ತಡೆದಿಟ್ಟುಕೊಂಡು ಹೊರಗೆ ಕೃತಕ ಬಣ್ಣ ಹಚ್ಚಿಕೊಂಡು ಗಿರಾಕಿಗಳಿಗಾಗಿ ಕಾಯುವುದು ದಿನನಿತ್ಯ ರೂಢಿಯಾಗತೊಡಗಿತು.
ಒಮ್ಮೊಮ್ಮೆ ಮಗುವಿಗೆ ಹಾಲು ಉಣಿಸುತ್ತಿರುವಾಗಲೆ ಗಿರಾಕಿಗಳು ಬರುತ್ತಿದ್ದುದರಿಂದ ಹಾಲು ಉಣಿಸೋದನ್ನು ಬಿಟ್ಟು ಮಗುವನ್ನು ಮುದುಕಿ ಸುಪರ್ದಿಗೆ ಒಪ್ಪಿಸಿ ಎದ್ದುಬಿಡಬೇಕಾಗುತ್ತಿತ್ತು. ಕೆಲವು ಮೊಂಡ ಗಿರಾಕಿಗಳು ಬೇಗ ತಮ್ಮ ತೀಟೆ ತೀರಿಸಿಕೊಳ್ಳದೆ ನನ್ನನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದಾಗ ನನ್ನ ಮಗುವಿನ ಅಳು ನನ್ನ ಕಿವಿಗೆ ಬಿದ್ದು ಕಣ್ಣಲ್ಲಿ ನೀರು ಬರುತ್ತಿತ್ತು. ಕಣ್ಣಲ್ಲಿನ ನೀರನ್ನು ತಪ್ಪು ಅರ್ಥ ಮಾಡಿಕೊಳ್ಳುತ್ತಿದ್ದ ಗಿರಾಕಿಗಳು ಅದನ್ನು ತಮ್ಮ ವಿಜಯೋತ್ಸವವೆಂದು ಮತ್ತಷ್ಟು ಹುಚ್ಚು ಉತ್ಸಾಹದಿಂದ ನನ್ನನ್ನು ಆವರಿಸುತ್ತಿದ್ದರು.
ಕೆಲವು ದಿನಗಳಲ್ಲಿಯೇ ನಾನು ದಂಧೆಯಲ್ಲಿ ಪಳಗಿಬಿಟ್ಟೆ. ಮೊದಲೆಲ್ಲ ಅಲ್ಲಿಗೆ ಬರುವ ಗಿರಾಕಿಗಳಿಂದ ಹಣ ವಸೂಲಿಯಲ್ಲಿ ಹಿಂದೆ ಬೀಳುತ್ತಿದ್ದ ನಾನು ಅನಂತರ ಅಲ್ಲಿನ ನನ್ನ ಸಹ ಲೈಂಗಿಕ ಕಾರ್ಮಿಕರೊಂದಿಗಿನ ಒಡನಾಟದಿಂದ ಬಹಳಷ್ಟು ಕಲಿತುಕೊಂಡೆ. ಗಿರಾಕಿ ಬಂದೊಡನೆ ಅವನನ್ನು ಆದಷ್ಟು ಹತ್ತಿರಕ್ಕೆ ಸೇರಿಸಿಕೊಳ್ಳದೆ ಹೇಗೆ ಅವನಿಂದ ಟಿಪ್ಸ್ ಬಿಚ್ಚಿಸುವುದು, ಆಮೇಲೆ ಬಿಚ್ಚುವ ಒಂದೊಂದು ಬಟ್ಟೆಗೂ ಹೇಗೆ ದುಡ್ಡು ಪಿಕ್ಸ್ ಮಾಡುವುದು, ಅವರು ಕೊಡದಿದ್ದರೆ ಹೇಗೆ ಅವರ ಮೈಮೇಲೆ ಬಿದ್ದು ಅವರ ಜೇಬುಗಳನ್ನು ತಡಕಾಡುವುದು, ಅವರ ಅಲವತ್ತುಕೊಳ್ಳುವಿಕೆಗೆ ಮಣಿಯದೆ ನಮ್ಮ ವಿಜಯವನ್ನೇ ಸಾಧಿಸುವುದು ಸೇರಿದಂತೆ ಹಲವಾರು ತಂತ್ರೋಪಾಯಗಳನ್ನು ನನ್ನ ಸಹದ್ಯೋಗಿಗಳು ಹೇಳಿ ಕೊಡುತ್ತಿದ್ದರು. ಕೆಲವೊಮ್ಮೆ ಅವರ ಹೇಳುವ ಕ್ರೂರ ತಂತ್ರಗಳಿಗೆ ನಾನು ಮರುಳಾಗದೆ ಇದೆಲ್ಲವೂ ಮೋಸವಲ್ಲವೆ ಎಂದು ಪ್ರಶ್ನಿಸುತ್ತಿದ್ದೆ. ಮೋಸಗಾರರಿಗೆ ಮೋಸ ಮಾಡುವುದರಲ್ಲಿ ಮೋಸವೆಂಬುದು ಎಲ್ಲಿ ಬಂತು. ಗಿರಾಕಿಗಳು ಕೂಡ ಯಾವುದೋ ಮೂಲದಿಂದ ಹಣವನ್ನು ಅನ್ಯಾಯದಿಂದ ಹೊಡೆದುಕೊಂಡು ಬಂದಿರುತ್ತಾರೆ. ಗಿರಾಕಿಗಳಲ್ಲಿ ನ್ಯಾಯವಿದ್ದರೆ ಮನೆಯಲ್ಲಿ ತಮ್ಮ ಹೆಂಡಂದಿರನ್ನು ಬಿಟ್ಟು ಈ ಕೊಳಕು ಕೊಂಪೆಗೇಕೆ ಬರುತ್ತಿದ್ದರು ಎಂದು ಅಲ್ಲಿನ ಸಹ ಗೆಳತಿಯರು ನನ್ನ ಬಾಯಿ ಮುಚ್ಚಿಸುತ್ತಿದ್ದರು.
ಅವರು ಹೇಳಿದಂತೆ ಇದು ಕೊಳಕು ಕೊಂಪೆಯೇ ಆಗಿತ್ತು. ಎಲ್ಲ ರೂಮುಗಳನ್ನು ದಿನಕ್ಕೊಮ್ಮೆ ಮಾತ್ರ ಕಸ ಹೊಡೆದಂತೆ ಮಾಡುತ್ತಿದ್ದರು. ಬಾಗಿಲು ಕಿಡಿಕಿ, ಗೋಡೆಗಳೆಲ್ಲವೂ ಧೂಳು, ಬೆವರು, ರಕ್ತ, ಕಫ ಕೀವುಗಳ ಕಲೆಗಳಿಂದ ತುಂಬಿ ವಿಕಾರವಾಗಿ ಕಾಣುತ್ತಿದ್ದವು. ಪ್ರತಿದಿನ ಹತ್ತಾರು ಗಿರಾಕಿಗಳ ಮೈ ಉಜ್ಜುವಿಕೆಗೆ ತುತ್ತಾಗುತ್ತಿದ್ದ ಹಾಸಿಗೆ-ತಲೆದಿಂಬುಗಳು ಅವರ ಎದುಸಿರಿನ ಉಗುಳು, ಬೆವರುಗಳ ಕಟು ವಾಸನೆ ಬೀರುತ್ತಿದ್ದವು. ಮೆಕ್ಯಾನಿಕ್ ಕೆಲಸ ಮಾಡುವವರ ಮೈಮೇಲೆ ಜೋತಾಡುವ ಕೊಳೆ ಅಂಗಿಯಂತೆ ಮಾಸಿದ ಬಣ್ಣವನ್ನು ಹೊಂದಿದ್ದವು. ಪಲ್ಲಂಗದ ಕೆಳಗಡೆಯ ಮೂಲೆಗಳಲ್ಲೆಲ್ಲ, ಗಿರಾಕಿಗಳ ಉಗುಳು ಗುಂಪೆಗಳು, ಹರಿದ ಕಾಂಡೋಮ್‍ಗಳು ಕೊಳೆಯುತ್ತ ಬಿದ್ದಿರುತ್ತಿದ್ದವು.
ಹಾಗೆ ನೋಡಿದರೆ ಅಲ್ಲಿಗೆ ಬರುವ ಗಿರಾಕಿಗಳು ಕೂಡ ಬಹಳಷ್ಟು ಕೊಳಕರೆ ಆಗಿರುತ್ತಿದ್ದರು. ತರಕಾರಿ, ಹೂ, ಹಣ್ಣುಗಳನ್ನು ಮಾರುವ ಸಣ್ಣ ವ್ಯಾಪರಿಗಳೇ ಹೆಚ್ಚಿಗೆ ಇದ್ದರು. ಜನತಾ ಬಜಾರ್‍ನ ಹತ್ತಿರವೇ ರತ್ನಮ್ಮಳ ಮನೆ ಇದ್ದುದರಿಂದ ಮಾರುಕಟ್ಟೆಯಿಂದ ಯಾವಾಗಲೂ ಕೊಳೆತ ವಾಸನೆ ಬರುತ್ತಿತ್ತು. ಹಳ್ಳಿಯಿಂದ ಸಂತೆಗಾಗಿ ಬರುವ ಕೆಳ ಮಧ್ಯಮವರ್ಗದ ಜನರನ್ನು ಪಿಂಪ್ ಬಾಬು ಮತ್ತು ಮುತ್ತು ಕರೆದುಕೊಂಡು ಬರುತ್ತಿದ್ದರು. ಗಿರಾಕಿ ಕೊಡುವ ಹಣದಲ್ಲಿ ಕಾಲು ಪಾಲು ಹೀಗೆ ಕರೆದುಕೊಂಡು ಬರುತ್ತಿದ್ದ ಪಿಂಪ್‍ಗಳಿಗೆ ಕೊಡಬೇಕಾಗುತ್ತಿತ್ತು.
* * *
ಅವತ್ತು ಗಿರಾಕಿಯೊಂದಿಗೆ ಮಲಗಿದ್ದಾಗ ಜೋರಾಗಿ ಬಾಗಿಲು ಬಡಿದ ಶಬ್ದವಾಯಿತು. ಗಿರಾಕಿಯೊಂದಿಗೆ ಒಳಗಿದ್ದಾಗ ಯಾರೂ ಕೂಡ ಇದುವರೆಗೆ ಬಾಗಿಲು ಬಡಿದಿರಲಿಲ್ಲ. ಅವಸರವಾಗಿ ಸೀರೆ ಸುತ್ತಿಕೊಂಡು ಜಂಪರ್ ಬುಡ್ಡಿ ಹಾಕಿಕೊಳ್ಳುತ್ತಾ ಬಾಗಿಲು ತೆಗೆದರೆ ಎದುರಿಗೆ ಮಹಿಳಾ ಪೆÇಲೀಸರು ಮತ್ತು ಕ್ಯಾಮರಾ ಹಿಡಿದುಕೊಂಡ ಪಡ್ಡೆ ಪತ್ರಕರ್ತರು ಕಂಡರು. ಹೆದರಿದ ನಾನು ಹಿಂದಕ್ಕೆ ಗಿರಾಕಿ ಕಡೆ ನೋಡಿದರೆ ಆತ ಅಲ್ಲಿಲ್ಲ. ಗಿರಾಕಿ ಪಲ್ಲಂಗದ ಕೆಳಗೆ ಅವಿತುಕೊಂಡುಬಿಟ್ಟಿದ್ದ. ನನ್ನ ಮುಖವನ್ನು ಅನುಮಾನದಿಂದ ನೋಡುತ್ತ ಒಳಬಂದ ಪೆÇಲೀಸರು ಪಲ್ಲಂಗದ ಕೆಳಗಡೆ ಕೈಯಾಡಿಸಿ ಬತ್ತಲೆ ಮೈಯಲ್ಲಿದ್ದ ಗಿರಾಕಿಯನ್ನು ಮೇಲೆತ್ತಿ ಎಳೆದುಕೊಂಡರು. ನನ್ನ ರಟ್ಟೆ ಹಿಡಿದುಕೊಂಡು ವಠಾರ ಮೆಟ್ಟಿಲಿಳಿಸುತ್ತಾ ಕರೆದುಕೊಂಡು ಹೋಗುತ್ತಿದ್ದ ಮಹಿಳಾ ಪೆÇಲೀಸ್ ಪೇದೆ ಒಮ್ಮೇಲೆ ನನ್ನ ಜಂಪರಿನೊಳಕ್ಕೆ ಕೈ ಇಳಿ ಬಿಟ್ಟು ಅಲ್ಲಿದ್ದ ಪರ್ಸ್ ತೆಗೆದುಕೊಂಡು ತನ್ನ ಜಂಪರಿನೊಳಕ್ಕೆ ತುರುಕಿಕೊಂಡಳು. ನಾನು ಪ್ರತಿಭಟಿಸಲು ಬಾಯಿ ತೆರೆಯುವುದರೊಳಗಾಗಿ ಬಾಯಿ ಮೇಲೆ ಜೋರಾಗಿ ಒಂದು ಗುದ್ದು ಬಿತ್ತು. ರತ್ನಮ್ಮ ಅವತ್ತು ಎಲ್ಲಿದ್ದಳೊ ಗೊತ್ತಿಲ್ಲ.
ಗಿರಾಕಿಗಳನ್ನೇನೋ ಅವರ ಸಂಬಂಧಿಕರು ಮತ್ತು ಗೆಳೆಯರು ಪೆÇಲೀಸರಿಗೆ ಲಂಚ ಕೊಟ್ಟೋ ಅವರ ಮುಖಕ್ಕೆ ಉಗಿಯುತ್ತ ಕರೆದುಕೊಂಡು ಹೋದರು. ಕೆಲವು ಗಿರಾಕಿಗಳು ಅಲ್ಲಿಂದ ಪಾರಾಗಲು ತಮ್ಮಲ್ಲಿದ್ದ ಹಣವನ್ನೆಲ್ಲ ಸುರಿಯಬೇಕಾಯಿತು. ಆದರೆ ನಮ್ಮನ್ಯಾರು ಬಿಡಿಸಿಕೊಂಡು ಕರೆದುಕೊಂಡು ಹೋಗಬೇಕು. ನನಗೆ ನನ್ನ ಮಗುವಿನದೇ ಚಿಂತೆಯಾಗಿತ್ತು. ಇನ್ನು ನನ್ನ ಎದೆಹಾಲು ಕುಡಿಯುತ್ತಿದ್ದ ಹಸುಗೂಸು ಅದು. ಆದ್ರೆ ಇತ್ತೀಚೆಗಷ್ಟೆ ನಾನು ಗಿರಾಕಿಯೊಂದಿಗೆ ಇದ್ದಾಗ ಹೊಟ್ಟೆ ಹಸಿದು ಕಿರುಚಿಕೊಳ್ಳುವುದನ್ನು ನೋಡಲಾರದೆ ಮುದುಕಿ ಆಕೆಗೆ ಬಾಟಲಿ ಹಾಲು ಉಣಿಸುತ್ತಿದ್ದಳು. ಇದಕ್ಕೆ ಇನ್ನೊಂದು ಕಾರಣವಿತ್ತು. ರತ್ನಮ್ಮ ನನ್ನ ಮಗುವಿಗೆ ಹಾಲು ಕುಡಿಸುವುದನ್ನು ನೋಡಿದರೆ ಕೆಂಡ ಕಾರುತ್ತಿದ್ದಳು. 'ಹಾಲು ಕುಡಿಸಿ ಎದೆ ಹಾಳು ಮಾಡ್ಕೋಬೇಡ. ನಿನ್ನ ಎದೆ ಚಂದ ಇದ್ರ ಮಾತ್ರ ನಿನಗೆ ಇಲ್ಲಿ ಬಾಳ್ವೆ ಮಾಡಾಕ ಅಕ್ಕೈತಿ' ಅಂತ ರತ್ನಮ್ಮ ಯಾವಾಗಲೂ ಹೇಳುತ್ತಲೆ ಇರುತ್ತಿದ್ದಳು.
ನಾನು ಹೇಗಾದರೂ ಮಾಡಿ ಸ್ಟೇಷನ್ನಿಂದ ಪಾರಾಗಲು ಹವಣಿಸುತ್ತಿದ್ದೆನಾದರೂ ದಾರಿ ಗೊತ್ತಾಗದೆ ಚಡಪಡಿಸುತ್ತಿದ್ದೆ. ಉಳಿದ ನನ್ನ ಸಹದ್ಯೋಗಿಗಳು ಜೈಲಿನಲ್ಲಿಯೂ ತಮಾಷೆ ಮಾಡಿಕೊಂಡು ಮಜವಾಗಿಯೆ ಇದ್ದರು. ಇದು ಅವರಿಗೆ ರೂಢಿಯಾಗಿ ಬಿಟ್ಟಂತೆ ಕಂಡಿತು. ಹೀಗೆ ಒಬ್ಬೊಬ್ಬರೇ ಸ್ಟೇಷನ್ನಿನಲ್ಲಿ ಇರಬೇಕಾಗಿ ಬಂದಾಗ ಪೆÇಲೀಸರು ಸಾಮೂಹಿಕವಾಗಿ ಉಪಯೋಗಿಸಿ ಕೊಂಡದ್ದು ಉಂಟಂತೆ. ಆದರೆ ಈಗ ನಮ್ಮದೆ ಏಳೆಂಟು ಹೆಂಗಸರ ಗುಂಪಿದ್ದುದರಿಂದ ನಮ್ಮ ಹತ್ತಿರಕ್ಕೆ ಬರುವ ಧೈರ್ಯವನ್ನು ಪೆÇಲೀಸರು ಮಾಡಲಿಲ್ಲ. ಅಂದು ರಾತ್ರಿ ಸ್ಟೇಷನ್ನಿನಲ್ಲಿಯೆ ಕಳೆಯಬೇಕಾಯಿತು. ನಿದ್ರೆಯಿಲ್ಲದೆ ಹೊರಳಾಡುತ್ತಿದ್ದ ರೂಪಕ್ಕ, ಪೋಲೀಸ್ ಸ್ಟೇಷನ್ನಗಳಲ್ಲಿ ನಡೆಯುತ್ತಿದ್ದ ದೌರ್ಜನ್ಯ, ಪೊಲೀಸರ ಕಿರುಕುಳ, ಈ ಜಾಲದಲ್ಲಿಯೇ ಸ್ವತಃ ದಾಳವಾಗಿ ಬಲಕೆಯಾಗುವ ಪೊಲೀಸರ ಆಸಹಾಯಕತೆ ಮುಂತಾದವುಗಳ ಕುರಿತು ತಾಸುಗಟ್ಟಲೆ ಮಾತಾಡಿದಳು. ಅವಳ ಮಾತುಗಳಿಂದ ತಿಳಿದುಬಂದಿದ್ದಿಷ್ಟು.
‘ಪೊಲೀಸರು ಕೂಡ ನಮ್ಮಂಗೆ ಬಡ ಕುಟುಂಬಗಳಿಂದಲೇ ಬಂದವರು.
ಕಷ್ಟಪಟ್ಟು ಹತ್ತನೆತ್ತೆಯೋ, ಪಿಯುಸಿಯೋ ಪಾಸಾಗುವ ಇವರು ಈ ಹುದ್ದೆಗೆ ಬರಬೇಕಾದರೆ ಲಕ್ಷಾಂತರ ರೂ. ಲಂಚ ನೀಡಿರುತ್ತಾರೆ. ಜೊತೆಗೆ ಬೆಂಗಳೂರಿನ ಒಂದು ಪ್ರದೇಶದಿಂದ ತನಗೆ ಬೇಕಾದ ಇನ್ನೊಂದು ಪ್ರದೇಶಕ್ಕೆ ಟ್ರಾನ್ಸ್‍ಫರ್‍ಗಾಗಿ ಒಬ್ಬ ಕಾನ್‍ಸ್ಟೇಬಲ್ ಸುಮಾರು ಅದೆಷ್ಟೋ ಲಂಚ ಕೊಟ್ಟಿರುತ್ತಾನೆ. ರಾಜದಾನಿಯ ಕೆಲವು ಪ್ರದೇಶಗಳೇ ಹಾಗೆ. ದಿನವೂ ಚಿನ್ನದ ಮೊಟ್ಟೆಯಿಡುವ ಕೋಳಿಗಳಂತೆ! ಬೇರೆ ಎಲ್ಲಾ ದಂಧೆಗಳು ಹಾಗಿರಲಿ, ಬೀದಿ ಬದಿಯ ನಮ್ಮಂಥ ವೇಶ್ಯಯರೇ ಪ್ರತಿದಿನ ಪ್ರತಿ ಕಾನ್‍ಸ್ಟೇಬಲ್‍ಗೆ ಕನಿಷ್ಟ ನೂರಾರು ರೂ. ಮಾಮೂಲಿ ತೆರಬೇಕಾಗುತ್ತದೆ. ಈ ಮಾಮೂಲಿ ಇಸಕೊಂಡು ಕೆಲವೊಮ್ಮೆ ತಿಂಗಳ ಕೊನೆಯಲ್ಲಿ, ಹೊಸ ಅಧಿಕಾರಿಗಳು ವರ್ಗವಾಗಿ ಬಂದಾಗ, ಕೆಲವೊಮ್ಮೆ ಪೊಲೀಸ್ ತಾಕತ್ತು ತೋರಬೇಕೆಂದು ಮೂಡು ಬಂದಾಗ, ಮಾಧ್ಯಮಗಳಲ್ಲಿ ವರದಿಯಾದಾಗ, ಹಿಂದಿನ ದಿನ ಒಂದು ವೇಳೆ ಮಾಮೂಲಿ ಕೊಡದಿದ್ದಾಗ. ಹೀಗೆ ನಾನಾ ಕಾರಣಗಳಿಗಾಗಿ ಅವರನ್ನು ನಮ್ಮನ್ನು ಬಂಧಿಸುತ್ತಿರುತ್ತಾರೆ. ಇದು ಹಲವು ವರ್ಷಗಳಿಂದಲೂ ನಡೆಯುತ್ತಲೇ ಬರುತ್ತಿದೆ. ಮಹಾನಗರಗಳು ಜಿಲ್ಲಾ ಕೇಂದ್ರಗಳು, ತಾಲ್ಲೂಕು ಕೇಂದ್ರಗಳು ಎಲ್ಲಿಯೂ ಈ ಮಾಮೂಲಿನಿಂದ ಪಾರಾಗುವಂತಿಲ್ಲ.
ಈ ಬಗ್ಗೆ ನಮಗೆ ಆತ್ಮೀಯರಂತೆ ವರ್ತಿಸುವ ಕಾನ್‍ಸ್ಟೇಬಲ್‍ಗಳು ನಮ್ಮೊಂದಿಗೆ ಹಾಸಿಗೆ ಹಂಚಿಕೊಂಡಾಗ ತಕರಾರು ತೆಗೆದರೆ ಅವರು ತಮ್ಮದೆಯಾದ ನೂರೆಂಟು ಸಮಸ್ಯೆಗಳ ಪಟ್ಟಿಯನ್ನೆ ಹೇಳುತ್ತಾರೆ. ನೀವು ಕೊಡೂದ್ರಲ್ಲಿ ನಮಗೇನು ಸಿಗೋಲ್ಲ. ಅದು ಎಸ್.ಐ., ಸರ್ಕಲ್, ಡಿ.ಎಸ್.ಪಿ. ಉನ್ನತ ಅಧಿಕಾರಿಗಳವರೆಗೂ ಹಂಚಿಕೆಯಾಗುತ್ತೆ. ನಾವು ಕೊಟ್ಟ ಲಂಚಗಳಿಗೆ ಬಡ್ಡಿ ಕೊಡೋಕು ಸಾಲೋಲ್ಲ ಈ ಹಣ. ಇಂಥ ಸಮರ್ಥನೆಗಳ ಮೂಲಕ ಅವರು ನುಣುಚಿಕೊಳ್ಳುತ್ತಾರೆ.
ಇತ್ತೀಚೆಗೆ ಬಂದಿರುವ ಮಹಿಳಾ ಪೊಲೀಸರಂತೂ ನಮಗೆ ಹಿಡಿಂಬಿ ತಾಟಕಿಯನ್ನು ನೆನಪಿಸುತ್ತಾರೆ ಎನ್ನಲಡ್ಡಿಯಿಲ್ಲ. ಗಂಡಸು ಪೊಲೀಸ್‍ರಾದರೆ ಮಾಮೂಲಿ ಕಿತ್ಕಳ್ಳೋವ್ರು. ಕಾಸೇ ಇಲ್ಲ ಎಂದಾಗ ಹೋಗ್ಲಿ ಬಾ ನನ್ಜೊತೆನಾದ್ರೂ ಅಂತ ನಮಗೂ ಕುಡಿಸಿ ತಿನ್ನಿಸಿ ನಮ್ಮನ್ನು ಅನುಭವಿಸಿ ಹೋಗ್ತಾರೆ. ಆದ್ರೆ ಇವ್ರೆಲ್ಲರಿಗಿಂತ ಅಪಾಯಕಾರಿ ಈ ಮಹಿಳಾ ಪೊಲೀಸರು. ಇವರು ಕಾಸು ಇಲ್ಲವೆಂದರೂ ಕೇಳದೆ ದಂಧೆ ಮಾಡೋ ನಮ್ಮೂ ಬ್ರಾ ಕಾಚಾನೂ ಬಿಚ್ಚಿಸುವ ಮಟ್ಟಕ್ಕೆ ಇಳಿದುಬಿಡತಾರೆ.
ನಾವೇನೋ ರತ್ನಮ್ಮಳಂತ ದಂದಾ ಮನೆಯಲ್ಲಿ ಆರಾಮಾಗಿ ಇರತೀವಿ. ಎಲ್ಲ ಕಿರಿಕಿರಿ ಮನೆಯ ಯಜಮಾನಿಗೆ ಇರುತ್ತದೆ. ಆದ್ರೆ, ಬೀದಿ ಬದಿಯ ಲೈಂಗಿಕ ವೃತ್ತಿ ಮಾಡೋರು ಪೊಲೀಸರ ಮಾಮೂಲಿ ವಸೂಲಿಗೆ ಹೆಚ್ಚಿನ ಬಲಿ ಪಶುಗಳಾಗುವುದು. ಅವರಿಗೆ ಈ ಪಾಪದ ದಂಧೆಯಲ್ಲಿದ್ದು ತಪ್ಪು ಮಾಡುತ್ತಿದ್ದೇನೆ ಎಂಬ ಪಾಪ ಪ್ರಜ್ಞೆ ಕಾಡುತ್ತಿರುತ್ತದೆ. ಕಾನೂನಿನ ಬಗ್ಗೆ ಏನೊಂದು ತಿಳಿವಳಿಕೆ ಇರಲ್ಲ. ಆದರೆ ಖಾಕಿ ಸಮವಸ್ತ್ರಧಾರಿಗಳಿಗಾದರೂ ಕಾನೂನಿನ ಅರಿವಿರಬೇಕು ತಾನೆ? ತಲೆ ಹಿಡಿಯುವುದು, ಸಾರ್ವಜನಿಕ ಪ್ರದೇಶಗಳಲ್ಲಿ ಅಸಭ್ಯವಾಗಿ ನಡೆದುಕೊಳ್ಳುವುದು, ಗಿರಾಕಿಗಳನ್ನು ಸೆಳೆಯುವ ನಿಟ್ಟಿನಲ್ಲಿ ವಿವಸ್ತ್ರಳಾಗುವುದು, ಗಿರಾಕಿಗಳನ್ನು ಉಪಯೋಗಿಸಿ ದಂಧೆ ನಡೆಸುವುದು ಅಪರಾಧ ಎನ್ನುವ ಕಾನೂನು ಮಾಹಿತಿಯನ್ನು ಅರೆಬರೆಯಾಗಿ ಅರ್ಥೈಸಿಕೊಂಡಿರತಾರೆ. ಪರಂಪರಾಗತವಾಗಿ ಎಂಥದೋ ಒಂದು ಕುರುಡು ನಂಬಿಕೆಯಂತೆ, ತನ್ನ ಹಿರಿಯ ಅಧಿಕಾರಿಗಳು ಇದನ್ನೇ ಮಾಡಿರುವುದು, ನಾವು ಅದನ್ನೇ ಮುಂದುವರಿಸುತ್ತೇವೆ ಎನ್ನುವ ಹುಂಬತನದಿಂದಲೂ ಇಂದಿನ ಪೊಲೀಸರು ತಮ್ಮ ಲಾಠಿ ಬೂಟುಗಳಿಗೆ ಶಕ್ತಿ ತುಂಬುತ್ತಿರುತ್ತಾರೆ. ರತ್ನಮ್ಮ ಇನ್ನು ಏನೇನೋ ಹೇಳುತ್ತಲೆ ಇದ್ದಳು. ನನ್ನ ಕಣ್ಣುಗಳು ಎಳಿಯುತ್ತಿದ್ದವು.
(ಮುಂದುವರೆಯುವುದು)
* * *