ಕೆಂಗುಲಾಬಿ (ಭಾಗ 1): ಹನುಮಂತ ಹಾಲಿಗೇರಿ

ಒಬ್ಬೊಬ್ಬರ ಬದುಕು ಒಂದೊಂಥರಾ. ಒಂದರೊಳಗ ಸಿಕ್ಕ ಹಾಕ್ಕೊಂಡವರು ಅದರಿಂದ ಬಿಡಿಸಿಕೊಳ್ಳಾಕ ಅವರ ಹಿಂದಿನ ಬದುಕಿನ ಅಧ್ಯಾಯಗಳು ಅಷ್ಟು ಸರಳ ಬಿಡುದಿಲ್ಲ. ಸುತ್ತಲಿನ ಪ್ರಪಂಚವನ್ನು ಕಣ್ಣರಳಿಸಿ ನೋಡುವ ಮುನ್ನವೇ, ಯಾರದೋ ಹುನ್ನಾರಕ್ಕೆ ಬಲಿಯಾಗಿ, ತಾವು ಮಾಡದ ತಪ್ಪಿಗಾಗಿ, ಎಷ್ಟೋ ಹೆಣ್ಮಕ್ಕಳು ಇಂದು ತಮ್ಮ ಮೈಯನ್ನೇ ಸಂತೆಯೊಳಗ ಬಿಕರಿಗಿಟ್ಟು ತುತ್ತಿನ ಚೀಲ ತುಂಬಿಸಿಕೊಳ್ಳಾಕ ಹತ್ಯಾರ. ಅಂಥ ಮೈ ಮಾರೊಳ ಹೊಟ್ಟಿಯೊಳಗಿಂದ ಭೂಮಿಗೆ ಇಳಿದು ಬಂದವ ನಾ. ಹಿಂದೆ, ಇಂದು, ಮುಂದೆಂದೂ ಈ ಬ್ಯಾನಿ ನನ್ನನ್ನು ಬಿಟ್ಟು ಬಿಡದ ಕಾಡಕೋತನ ಇರತೈತಿ. ಈ ಚಣದ ನೋವ ಹಂಚಿಕೊಳ್ಳಾಕ ನನಗ ನನ್ನೋರು ಅನ್ನೋರು ಯಾರು ಇಲ್ಲ. ಬಾಯಿಬಿಟ್ಟು ಹಂಚಿಕೊಳ್ಳೋ ನೋವು ನನ್ನವಲ್ಲ. ನನ್ನ ನೋವು ಕೇಳಿದವರಿಂದ, ಅಬ್ಬಬ್ಬಾ ಅಂದ್ರ ಸಹಾನುಭೂತಿಯ ಒಂದು ನೋಟ, ಇಲ್ಲಂದ್ರ ಅಸಹ್ಯದ ಮುಖಭಾವ; ಇವೆರಡೇ ಎದುರಾಗೋದು. ಆದರೆ ಹಂಚಿಕೊಳ್ಳದಿದ್ದರ ಒಳಗಡೆ ಕೊತ ಕೊತ ಕುದಿಯುವ, ಹೊಯ್ದಾಡುವ ಕುದಿತ. ಯಾರ ಮುಂದಾದ್ರೂ ಹಂಚಕೋಬೇಕು, ಬಿಡುಗಡೆಯಾಗಬೇಕು ಅಂತ ಜೀವ ತಳಮಳಸತೈತಿ.

'ಅಕ್ಷರ ಬಿಡುಗಡೆಯ ಭಾಗ್ಯ' ಅಂತಾರ. ಅದು ಒಬ್ಬೊಬ್ಬರಿಗೆ ಒಂದೊಂದು ಥರಾ ದೈವ. ಆದ್ರ ಅದು ನನಗ ಖರೇನ ಅಂದ್ರ ನನ್ನ ನೋವುಗಳನ್ನು ಬಚ್ಚಿಟ್ಟುಕೊಳ್ಳುವ ಮೌನಬಾವಿ, ನನ್ನೆಲ್ಲ ನೋವುಗಳನ್ನು ಆತು ಕೇಳುವ ಜಿಗರಿದೋಸ್ತ. ನನಗೆ ಸ್ವತಃ ಅನುಭವಿಸಿ ನರಳಿದ್ದನ್ನು, ಕಂಡು ದಂಗಾದುದನ್ನು, ಕೇಳಿ ಕಣ್ಣೀರಿಟ್ಟಿದ್ದನ್ನು, ಕಣ್ಣೀರು ಒಸರುತ್ತಿದ್ದ ಕಣ್ಣುಗಳೊಳಗೆ ಕಣ್ಣಿಟ್ಟು ಕಂಡುಕೊಂಡದ್ದನ್ನು ಆಗಾಗ ನನಗೆ ಡೈರಿಯೊಳಗ ಬರೆಯೊ ಚಟವಿತ್ತು. ಚಟ ಅನ್ನುವುದಕ್ಕಿಂತಲೂ ಕದಡುವ ಮನಸ್ಸನ್ನು ಸ್ಥಿರಗೊಳಿಸಲು, ಹಗುರಾಗಿಸಲು ನಾನೇ ಈ ಚಟಾನ ಬೆಳೆಸಿಕೊಂಡೀನಿ. ಒಬ್ಬೊಬ್ಬರಿಗೆ ಒಂದೊಂದು ಚಟ, ಬದುಕಿನ ದುರಂತಗಳನ್ನು ಹಗುರಾಗಿಸಿಕೊಳಾಕ. ನನಗ ಅಕ್ಷರ ಒಲಿದಿದ್ರಿಂದ ನನ್ನ ಮಾಯದ ಗಾಯಕ್ಕ ಮುಲಾಮಾಗಿ ಈ ಡೈರಿ ಬರಿತಿದ್ನಿ.

ನಾನು ಹೇಳಿ ಕೇಳಿ ಜೋಗತಿ ಮಗ. ಆದ್ರ ಬಹಳಷ್ಟು ಮಂದಿ ನನ್ನನ್ನು 'ಸೂಳೆ ಮಗ' ಅಂತ ಕರೀತಾರ. ನಾನೂ ಹಂಗೂ ಹಿಂಗೂ ಬಾಳ ಪರಿಪಾಟ ಪಟ್ಟು ಎಂ.ಎ. ಮಟ ಓದಿನಿ. ತಾಯಿ ತಂದೆ ಎರಡು ಒಬ್ಬರೆ ಆಗಿದ್ದ ನನ್ನವ್ವ ಈ ಅಕ್ಷರ ಎಂಬ ದಿವ್ಯಾಸ್ತ್ರ ಕೊಡಿಸಾಕ, ಮತ್ತ ನಾ ಪಡೆಯಾಕ ಪಟ್ಟ ಪರಿಪಾಟ ಬರದ್ರ„ ಅದೊಂದು ದೊಡ್ಡ ಪುಸ್ತಕಾ ಅಕ್ಕೈತಿ. ನನಗ ನನ್ನವ್ವಳ ಬದುಕ ಒಂದು ದೊಡ್ಡ ಕೌತುಕ. ಆಕಿಗಿ ದಿನಕ್ಕೊಂದು ಲಗ್ನ. ದಿನಕೊಬ್ಬನ ಕೂಡ ಶೋಭನ. ಹಂಗ ನೋಡಿದರ ಐದು ಮಂದಿ ಸಂಭಾಳಿಸುತ್ತಿದ್ದ ದ್ರೌಪದಿಗಿಂತ ನನ್ನವ್ವ ಬಾಳ ಗ್ರೇಟು. ದ್ರೌಪದಿ ಐದು ಮಂದಿ ಗಂಡರನ್ನ ಸಂಭಾಳಿಸಿದರ, ನನ್ನವ್ವ ಹೆಚ್ಚು-ಕಮ್ಮೀ ನನ್ನೂರಿನ ಎಲ್ಲ ಗಂಡಸರನ್ನು ಸಂಭಾಳಿಸಿ ಗೆದ್ದಾಳ. ಬರೆ ಐದು ಜನರಿಗೆ ಸುಸ್ತು ಹೊಡೆಯುತ್ತಿದ್ದ ದ್ರೌಪದಿಯನ್ನು ನಮ್ಮ ಸಮಾಜ ದೇವತಿ ಅಂತ ಕರದು ಪೂಜಿ ಮಾಡತೈತಿ. ಆದ್ರ ನಮ್ಮವ್ವನ್ನ ಸೂಳೆ ಅಂತ ಬೈದು ದೂರ ಮಾಡತೈತಿ. ನಮ್ಮವ್ವನ ದೈನಂದಿನ ಗಂಡಂದಿರು ಊರಿನ ಪ್ರತಿಷ್ಠಿತ ಗಣ್ಯರು. ಅವರ ಕೂದಲಿನ ಗೌರವವು ಚೂರೂ ಕೊಂಕಂಗಿಲ್ಲ.

ಅವರು ಹೆಂಗಾರೂ ಹಾಳಾಗಿ ಹೋಗಲಿ. ಆದ್ರ ನನಗ ಅಪ್ಪ ಯಾರು ಅಂತ ಇನ್ನೂ ಮಟ ಗೊತ್ತಿಲ್ಲ. ನಮ್ಮಪ್ಪ ಯಾರೂ ಸ್ವತಃ ನಮ್ಮವ್ವಗೂ ಗೊತ್ತಿಲ್ಲ. 'ಯಾರು' ಅಂತ ಕೇಳಿದರ 'ಗುಡಿಯೊಳಗಿನ ಹನ್ಮಪ್ಪ' ಅಂತ ಹೇಳ್ತಾಳ ನಮ್ಮವ್ವ. ಹೌದು! ನಾನು ಹನ್ಮಪ್ಪ ದೇವ್ರ ಮಗಾ ಅಂದ್ರೆ ದೇವಕುಮಾರ. ಆದ್ರ ಯಾಕ ಈ ಹುಡುಗುರು ನನ್ನ ಸೂಳಿ ಮಗ ಅಂತಾರ. ಒಂದೂ ತಿಳಿವೊಲ್ಲದು.

ಇಚಿತ್ರ ಅಂದ್ರ; ಗುಡಿಯೊಳಗಿನ ದೇವರನ್ನ, ಅಂದ್ರ ನಮ್ಮಪ್ಪನ್ನಾ ನಾನು ಇದುವರೆಗೂ ಭೆಟ್ಟಿಯಾಗಿಲ್ಲ. ನಾನಷ್ಟ ಅಲ್ಲ, ಅವ್ವ ಸೈತಾ ಹನಮಂತನ ಹಂತ್ಯಾಕ ಹೋಗಿದ್ದ ಒಮ್ಮಿ ನೋಡಿಲ್ಲ. ಹೋಗಲಿ, ಮಗ ಅಂತ ಮಮಕಾರದಿಂದ ಅಪ್ಪ ಹನುಮಪ್ಪ ಆದ್ರೂ ಬಂದು ನನ್ನ ನೋಡಬಾರದೇನು? ಮಂದಿ ಹುಡುಗರ ಅಪ್ಪಂದಿರನ್ನೆಲ್ಲಾ ನೋಡಿದಾಗ ಎಷ್ಟು ಖುಷಿ ಅಕೈತಿ. ಒಳಗೊಳಗ ಅಷ್ಟು ದುಕ್ಕಾನೂ ಆಕ್ಕೈತಿ.

'ನಮ್ಮಪ್ಪ ಹ್ಯಾಂಗ ಆದಾನಬೇ' ಅಂತ ನಾನು ಒಮ್ಮಿ ಸಿಟ್ಟಿಗೆದ್ದ ಕೇಳಿದ್ದೆ, 'ಅಂವಂದು ಒಂಕ ಮೋತಿ, ಬಂಗಾರ ಕಣ್ಣು, ಬೆಳ್ಳಿ ಗದೆ, ಇಷ್ಟುದ್ದಾ ಬಾಲ' ಅಂತ ಏನೆನೋ ನಮ್ಮವ್ವ ಕತಿ ಮಾಡಿ ಹೇಳಿದ್ಲು.

ಅಷ್ಟೊಂದು ಬೆಳ್ಳಿ-ಬಂಗಾರ ಇರೋ ಸಿರಿವಂತ ನಮ್ಮಪ್ಪ ಅಂತ ಖುಷಿಯಾತು. ಆದ್ರ, ನಮಗಾ ಅಂತ ಏನೂ ಕೊಡದ ನಮ್ಮಪ್ಪ ಹನ್ಮಪ್ಪ ಬಾಳ ಜಿಪುಣ ಇರಬೇಕು ಅಂತ ಬೇಸರಾನೂ ಆಗಿತ್ತು.

'ಅಲ್ಲಬೇ ಯವ್ವ, ಮತ್ತ ನಾವ ಯಾಕ ನಮ್ಮಪ್ಪನ ಆ ಮನಿಗೆ ಹೋಗಬಾರದು. ಅದು ಎಷ್ಟ್ ದೊಡ್ಡದೈತಿ' ಅಂದೆ.

'ನಿಮ್ಮಪ್ಪ ನನ್ನ ಕೂಡ ಜಗಳಾ ಮಾಡ್ಯಾನ. ಅದಕ್ಕ ಬರೋದು ಬಿಟ್ಟಾನ' ಅಂತ ಏನೇನೋ ಸಮಾಧಾನ ಮಾಡಿದ್ಲು.

ನಾನು ಸುಮ್ಮನಿರದೆ 'ಅಲ್ಲಬೇ ಮತ್ತ ದಿನ ಒಬ್ಬೊಬ್ಬ ಕಾಕಾಗೊಳು ನಮ್ಮ ಮನಿಗೆ ಬರ್ತಾರಲ್ಲಾ' ಅಂದೆ.

'ಏಟು ಜಗಳ ಮಾಡಿದರೂ ನಿಮ್ಮಪ್ಪಗ ನನ್ನ ಮ್ಯಾಲ ಪ್ರೀತಿ ಕಮ್ಮೀ ಆಗಿಲ್ಲ. ಅದಕ್ಕ ಇವರಂತ್ಯಾಕ ರೊಕ್ಕ ಕೊಟ್ಟ ಕಳಿಸತಾನ' ಅಂದ್ಲು.

'ಮತ್ತ ಒಮ್ಮೊಮ್ಮಿ ಕುಡುದು ಬಂದು ನಿನ್ನ ಬಡೆಯೋದು ಬೈಯ್ಯೊದು ಮಾಡ್ತಾರಲ್ಲಬೇ ಆ ಮಕ್ಕಳು'  ಅಂದೆ ಪಟ್ಟುಬಿಡದೆ.

'ನಿಮ್ಮಪ್ಪ ಜಾಸ್ತಿ ರೊಕ್ಕ ಕೊಟ್ಟಿರತಾನ. ಆದ್ರ, ಈ ಬಾಡ್ಯಾಗೋಳು ಸ್ವಲ ರೊಕ್ಕ ತಮಗ ಇಟಗೊಂಡು ಉಳದ ರೊಕ್ಕಾ ನನಗ ಕೊಡತಾರ. ಆದಕ್ಕ ನಾನು ಅವರ ಕೂಡ ಜಗಳ ಮಾಡ್ತಿನಿ'

'ನಿಮ್ಮೌನ, ನಿ ಮತ್ಯಾಕ ಇದ ನಮ್ಮಪ್ಪಗ ಹೇಳಂಗಿಲ್ಲ' ಅಂದದ್ದೇ, 'ನಿಮ್ಮಪ್ಪ ನನ್ನ ಕೂಡ ಮಾತಾಡೂದಿಲ್ಲ ಅಂತ ಹೇಳಿದ್ದನೆಲ್ಲ' ಅಂದು ಸುಮ್ಮನಾದ್ಲು.

'ಅವತ್ತು ಈ ಹುಡುಗನ ತಂದಿ ಹೆಸರೇನು ಅಂತ ಸಾಲಿಯೊಳಗ ನಮ್ಮ ಮಾಸ್ತರ ಕೇಳಿದಾಗ ತಂದಿ ಇಲ್ಲ ಅಂತ ಹೇಳಿದ್ಯಲ್ಲಾ?'

ನನ್ನ ಇಂಥ ಪ್ರಶ್ನಿ ಕೇಳಿ ಕೇಳಿ ಅವ್ವಗ ಬಾಳ ಸಿಟ್ಟು ಬಂದಿರಬೇಕು, ಅಥವಾ ಉತ್ತರಾ ಕೊಡಾಕ ಆಗಿರಲಿಕ್ಕಿಲ್ಲ. ಸಿಟ್ ಬಂದು ಮಗ್ಗಲ್ದಾಗ ಮಕ್ಕೊಂಡಿದ್ದ ನನ್ನ ಮುಸಡೀಗೆ ಒಂದೆರಡು ಏಟು ಕೊಟ್ಟು ಅಳಸಿದ್ಲು. ತಾನೂ ಸೈತಾ ಮುಖ ಮುಚ್ಚಿಕೊಂಡು ಮುಸಿ ಮುಸಿ ಅತ್ಲು.

ಅವ್ವ ಅವತ್ತು ಯಾಕ ಹೊಡದ್ಲು ಅಂತ ನನಗ ಈಗೀಗ ಗೊತ್ ಆಗಾಕ ಹತ್ತೈತಿ.

* * *

ನಮ್ಮ ಹಳ್ಯಾಗ ನಡೆಯೋ ಸೂಳಿಗಾರಿಕೆಗೆ ಒಂದು ಮಖ ಇದ್ರ, ಪಟ್ಟಣದಾಗ ನಡೆಯೋ ಸೂಳಿಗಾರಿಕೆಗೆ ನೂರಾರು ಮಖ. ಈ ಹೊಟ್ಟೆ ಹೊರೆಯೊದಕ್ಕಾಗಿ ಹಳ್ಳಿ ಮತ್ತು ಪಟ್ಟಣ ಎರಡೂ ತಿರುಗಿದ್ದರಿಂದ ಸಾಕಷ್ಟು ಅನುಭವ ಆಗೇತಿ. ಸೂಳೇರ ಕುಟುಂಬದಿಂದ ಬಂದವನಾದ್ದರಿಂದ ನಮ್ಮವ್ವನಂಥ ಸೂಳೇರಿಗೆ ಅನುಕೂಲ ಆಗುವಂಗ ಏನಾದರೂ ಮಾಡಬೇಕು ಅಂತ ಮೊದಲಿಂದಾನೂ ಅನಸತ್ತಿತ್ತು. ಈಗಲೇ ಒಂದು ಸಂಸ್ಥಾ ಒಳಗ ಕೆಲಸ ಮಾಡುತ್ತಿದ್ದೇನಾದ್ರೂ, ಮಾಡೋ ಕೆಲಸದಾಗ ಶ್ರದ್ಧಾ ಇರಲಿಲ್ಲ. ಹೊಳ್ಳೆಮುಳ್ಳೆ ಅವ್ವನಂಗ ದಂಧಾ ಮಾಡೋ ಅವ್ವಂದಿರ ಮಖಗಳೆ ಕಣ್ಮುಂದ್ ಬರತಿದ್ವು. ಇಂಥೋರ್ಗೆ ಏನಾದರೂ ಒಳ್ಳೇದು ಮಾಡೋ ಮುನ್ನ ಈ ದಂಧಾದ ಆಳ ಅಗಲ ತಿಳಕೊಳ್ಳೋದು ಛಲೋ. ಅವ್ರ ಬದುಕಿನ ಸಂಕೀರ್ಣತೆ, ಸಂಕಷ್ಟ, ನಿಗೂಢಗಳನ್ನು ತಿಳಕೊಂಡ್ರ ಮುಂದ ಏನಾದರೂ ಮಾಡಬಹುದು ಅಂತ ಭರವಸೆ ಬಂತು.

ಇದ ಚಿಂತಿಯೊಳಗ ಇರ್ಬೇಕಾದ್ರ, ಹುಬ್ಬಳ್ಯಾಗ ಲೈಂಗಿಕ ಕಾರ್ಮಿಕರ ಸಮಸ್ಯೆಗೊಳ ಮ್ಯಾಲ ಕೆಲ್ಸಾ ಮಾಡೋ 'ಮೈತ್ರಿ ಪ್ರತಿಷ್ಠಾನ' ಸಂಸ್ಥಾದೊಳಗ ಕೆಲಸ ಖಾಲಿ ಐತಿ ಅಂತ ಪೇಪರ್‍ನ್ಯಾಗ್ ಬಂದಿದ್ದು ಕಣ್ಣಿಗ್ ಬಿತ್ತು. ಅದೇ ದಿನಾ ಅರ್ಜಿ ಗುಜರಾಯಿಸಿದ್ನಿ. ಸಂದರ್ಶನ ಆದ ಮ್ಯಾಲ, ಆಯ್ಕೆನೂ ಆತು.

ಆ ಸಂಸ್ಥಾ ಅಧಿಕಾರಿ ರಾಜನ್ ಅವರು ಕೆಲಸಕ್ಕೆ ಹೋದ ಮೊದಲ ದಿನವೇ ನಂಗೊಂದು ಕೆಲ್ಸಾ ಹಚ್ಚಿದರು. ಅದೇನಪ್ಪಾ ಅಂದ್ರ, ಹುಬ್ಬಳ್ಳ್ಯಾಗ ಸುಮ್ನೇ ಹಂಗಾ ಅಡ್ಯಾಡ್ಕೊಂಡು ಅಲ್ಲಿನ ಲೈಂಗಿಕ ಕಾರ್ಮಿಕರ ಸಮಸ್ಯಾ ಏನು ಅನ್ನೊದನ್ನಾ ಒಂದು ವಾರದಲ್ಲಿ ಅಭ್ಯಸಿಸಿ ವರದಿ ಸಲ್ಲಿಸೋದು.

ಹುಬ್ಳಿ ಉತ್ತರ ಕರ್ನಾಟಕದಾಗ ಬಾಳಾ ದೊಡ್ಡ ನಗರ. ಅಷ್ಟ್ಯಾಕ, ಬೆಂಗ್ಳೂರಿನ ನಂತರ ಹೆಚ್ಚು ವಹಿವಾಟ ನಡಸೋ ವಾಣಿಜ್ಯ ನಗರಿ ಅಂತಾ ಹೆಸರ ಮಾಡಿರೋ ಹುಬ್ಳಿ, ಚೋಟಾ ಬಾಂಬೆ ಅಂತಾನೂ ಈ ಭಾಗದ ಜನರ ಬಾಯಾಗ ಬೇರೂರೈತಿ. ಹುಬ್ಳಿಯಾಗ ಈ ಮೊದ್ಲಾ ಗಪ್ಪಚುಪ್ಪಾಗಿ ನಡೀತ್ತಿದ್ದ ವೇಶ್ಯಾವಾಟಿಕೆ ದಂಧಾ ಇವಾಗ ರಾಜಾರೋಷವಾಗಿ ನಡೆತೈತಿ. ಈ ಲೈಂಗಿಕ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಸ್ವಯಂ ಸೇವಾ ಸಂಸ್ಥಾಗೊಳು ಹುಟಕೊಂಡಾವ. ಇಚಿತ್ರ ಅಂದ್ರ ಈ ವೇಶ್ಯಾರಿಗೆ ಸಹಾಯ ಮಾಡೋ ನೆಪದಾಗ ನೂರಾರು ಮಂದಿ ಎನ್‍ಜಿಓಗಳ ಕಾರ್ಯಕರ್ತರು ತಮ್ಮ ಕುಟುಂಬದ ಹೊಟ್ಟಿ ತುಂಬಸತಾ ಇದ್ದರಲ್ಲಾ ಅಂತ ನನಗ ಅನುಮಾನ ಅಕೈತಿ.

ಪಿಂಪ್‍ಗಳು ಗಿರಾಕಿ ತಲಿ ಹಿಡದು ಹೊಟ್ಟಿ ತುಂಬಸಕೊಂಡ್ರ, ಇವರು ಅವರ ಬದುಕು ಉದ್ಧಾರ ಮಾಡೋ ಥರದಾಗ ನಾಜೂಕೀಲೆ ತಲಿ ಹಿಡಿತಾರಲ್ಲಾ ಅಂತ ಅನಸತೈತಿ. ಇಬ್ಬರೂ ಈ ಚಾಲ್ತಿಲಿರೋ ವೇಶ್ಯಾವೃತ್ತಿ ಅವಲಂಬನ ಮಾಡಕೊಂಡೇ ಬದುಕ ಸಾಗಿಸೋರು.

ಆದ್ರ ಅದೆನೇ ಇರಲಿ, ಹುಬ್ಳ್ಯಾಗ ಲೈಂಗಿಕ ಕಾರ್ಮಿಕರ ಮ್ಯಾಲ ಕೆಲಸ ಮಾಡುತ್ತಿರುವುದರಲ್ಲಿ ಬಾಳಾ ಹೆಸ್ರು ಮಾಡಿದ್ದು ಮೈತ್ರಿ ಸಂಸ್ಥಾ. ಲೈಂಗಿಕ ವೃತ್ತಿಯ ಬಗ್ಗೆ ಬಾಳಷ್ಟು ಸಂಶೋದ್ನಾ ಕೈಗೊಂಡಿದ್ದ ನಾನು ಕೊನೆಗೆ ದಿಕ್ಕುಗಾಣದಂತಾಗಿದ್ದೆ. ಇಂಥಾ ಹೊತ್ತಿನ್ಯಾಗ ಈ ಮೈತ್ರಿ ಸಂಸ್ಥಾದ ಕೆಲಸ ನನಗ ಆಧಾರಾಗಿ ಸಿಕ್ಕಿತ್ತು. ಈ ಕೆಲಸದಾಗ ಒಂದೇ ಒಂದು ಖುಷಿ ಪಕಳೆಗಳಿರೊದಿಲ್ಲ. ನೋವಿನ, ಅವಮಾನದ, ಹತಾಶೆಯ, ಸಂಕಟದ ಬುತ್ತಿಯೇ ಹೆಪ್ಪುಗಟ್ಟುತ್ತಾ ಹೋಗತೈತಿ ಅಂತ ಮೊದಲ ಗೊತ್ತಿತ್ತು.

ಬದುಕಿನ ತಿರುವು, ಸೆಳೆತ, ಪಾಚಿಗಟ್ಟಿದ ಜಾರು ದಾರಿಯಾಗ ಸಾವರಿಸಿ ನಿಲ್ಲಾಕ ಆಗದ ಜಾರಿದೋರ ವೃತ್ತಾಂತಗಳು, ಇವೆಲ್ಲದರ ನಡುವೆ ಎಲ್ಲರಂಗ ಬಾಳುವ ಹಂಬಲ, ಸಂಸಾರದ ಕನಸು, ಗಂಡ, ಮನಿ, ಮಕ್ಕಳು ಇವರೆಲ್ಲರ ಸಂಸರ್ಗ ಇರಬೇಕಿತ್ತೆಂಬ ದೂರದಾಸೆ. ಜೊತೆಗೆ ಅದೆಲ್ಲಾ ತಮ್ಮ ಪಾಲಿಗೆ ಗಾಳಿಗೋಪುರ ಅನ್ನೋ ಅರಿವು. ಇಂಥೋರ ಬದುಕಿಗೆ, ಕತೆಗೆ ಕಿವಿಯಾಗಬೇಕು ಅನ್ನೋ ಉದ್ದೇಶದಿಂದ ಈ ಕೆಲಸಕ್ಕೆ ಬಂದಿದ್ದೆ. ಕೆಂಪು ದೀಪದ ಕೆಳಗಿನ ಕತ್ತಲೊಳಗ ಬದುಕು ಸವೆಸುತ್ತಿದ್ದ ಅಸಂಖ್ಯಾತ ಹೆಣ್ಮಕ್ಕಳ ನೋವು ಹಾಗೂ ಹತಾಶೆಗೆ ನಲಿವಿನ ಲೇಪ ಕೊಡಬೇಕು, ಅವರು ಬದುಕಿನೊಳಗಿನ ಬೇರೆ ಬಣ್ಣಗಳನ್ನು ಕಾಣುವಂಗ ಮಾಡಕೋಬೇಕು ಎಂಬ ಒತ್ತಾಸೆ ಮತ್ತು ಸ್ವಇಚ್ಛೆದಾಗ ಈ ನೌಕರೀಗೆ ಬಂದೆ.

*****

(ಮುಂದುವರೆಯುವುದು…)


ಕೆಂಗುಲಾಬಿ ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

9 Comments
Oldest
Newest Most Voted
Inline Feedbacks
View all comments
ಸುಮಮ್ ದೇಸಾಯಿ
ಸುಮಮ್ ದೇಸಾಯಿ
11 years ago

ಹಾಲಿಗೇರಿಯವರಿಗೆ ನನ್ನ ನಮಸ್ಕಾರಗಳು,
                                                       ಹೊದವಾರ ಪಂಜು ನ್ಯಾಗ ನಿಮ್ಮ ಕಾದಂಬರಿ ಬಗ್ಗೆ ಓದಿದಾಗ ಯಾವಾಗ ಓದೇನೊ ಅನ್ನೊ ಕೂತುಹಲ ಇತ್ತು. ಆದರ ಇವತ್ತ ಓದಿದ ಮ್ಯಾಲೆ ಮುಂದಿನ ವಾರಗಟ್ಟಲೆ ಕಾಯೊ ಅಷ್ಟು ತಾಳ್ಮಿ ಇಲ್ಲಾ ಅನಿಸ್ತದ.
ಅದಕ್ಕ ಇವತ್ತನ ನಿಮ್ಮ "ಕೆಂಗುಲಾಬಿ" ತರಿಸಿ ಓದತೀನಿ. ನಿಮಗ ನನ್ನ ಶುಭಹಾರೈಕೆಗಳು. ನಿಮ್ಮಿಂದ ಇನ್ನು ಛೊಲೊ ಛೊಲೊ ಕೃತಿಗಳು ಹೊರಬರಲಿ. ಸುಮನ್ ದೇಸಾಯಿ….

Santhoshkumar LM
Santhoshkumar LM
11 years ago

Superb ಹಾಲಿಗೇರಿಯವರೇ…. ಆ ಹೆಣ್ಣು ಮಗಳು ಸತ್ಯ ಹೇಳಲಾಗದೇ ಮಗುವಿಗೆ ದೇವರ ಬಗ್ಗೆ ಹೇಳುತ್ತಾ ಸಂತೈಸುವ ದೃಶ್ಯ ಕಣ್ಣ ಮುಂದೆ ಬಂತು. ……very interesting….please continue…..

Rukmini Nagannavar
11 years ago

hennumagala tanna dukhavannu tannolage nungi maganige matra aa satydinda horagiduva prayatna mana muttithu… dukha agutte intaha lekhana oduvaga… barahadalli hidididuvudu kastada kelasa neevu madta iddeeri..
shubhavagali anna

prashasti.p
11 years ago

ಶುಭವಾಗಲಿ 🙂

mamatha keelar
mamatha keelar
11 years ago

ಸೋಮವಾರದ ಪಂಜು ಬರುವದನ್ನೇ ಕಾಯೋ ಹಾಗೆ ಮಾಡಿದೆ ನಿಮ್ಮ ಕೆಂಗುಲಾಬಿ….

Rajendra B. Shetty
11 years ago

ಅಯ್ಯೋ…., ಮುಂದಿನ ಸೋಮವಾರಕ್ಕೆ ಇನ್ನೂ ಮೂರು ದಿನವಿದೆಯಲ್ಲಾ…..

GAVISWAMY
11 years ago

very impactful…
ಕಥನಾಯಕ ತನ್ನ ನೋವಿನ ವೃತ್ತಾಂತವನ್ನು 
ತೆರೆದಿಡುವ ಪರಿಯಲ್ಲಿ ಅನನ್ಯತೆ ಇದೆ, ಘನತೆಯಿದೆ. 
ಆತ ಸಮಾಜದ ಅನುಕಂಪವನ್ನು ಬೇಡುವುದಿಲ್ಲ.

ಸಮಾಜವನ್ನೇ ಅಣಕಿಸುತ್ತಾನೆ, ನೀನು ಬದಲಾಗುವುದು 
ಯಾವಾಗ ಎಂದು. 

great beginning …

 I am also waiting for the next edition.. 

 

Utham
11 years ago

Thumba chenagidhe munduvaresi shubhavagali

mugali bhimappa
10 years ago

ಸಮಾಜದ ಸಂತ್ಯಾಗ ಸುಮಾರು ಜನರ ಬಾಳು ಸಿಡಿಲು ಬಡಿದ ಮರದಂಗ್ಹ ಇದ್ದರೂ ಅದರಾಗೂ ಲಾಭ ತಿನ್ನುವ ದಲಾಲಿ ಹೇಸರಗತ್ತೆಯಾಗಿರುವ ಗಂಡಸರೇ ಹೂವಿನಂತಹ ಹೆಣ್ಮಕ್ಕಳ ಮನಸಿಗೆ ಮಸಿ ಬಳಿದು ಯಾವ ಪುರುಷಾರ್ಥದ ಹೆಸರಿಗೆ ಗುದ್ದಾಡ್ಯಕ ಹೊಂಟವರ ಬಗ್ಗೆ ತುಂಬಾ ಅನುಭವಿಸಿ ನಿಮ್ಮ ಬರಹದಲಿ ಗರ್ಬಿನಿಯಾಗಿ ಸುಂದರ ಸಮಾಜದ ಹೊಸ ಕೂಸಿಗೆ ಹೆಸರಿಡುವ ನಿಮ್ಮ ಈ ಅಧ್ಬುತ ಕೆಂಗುಲಾಬಿ ಸದಾ ನಗುತಿರಲಿ ಎಲ್ಲರ ಮನದಲಿ.

ಬರಿ ಕಥೆ ಓದಿ ಖುಷಿ ಪಡುವ ಯುವಕರು ಪುನಃ ಹೊಸ ಕೆಂಗುಲಾಬಿ ಹುಟ್ಟಾಕ ಬಿಡಬಾರದು.
ಸಮಾಜ ಆರೋಗ್ಯವಾಗಿರಬೇಕೆಂದರೆ ಯುವಕರ ಮನಸು ಕಾಮದ ಬಾವಿಗೆ ಬಿದ್ದ ಕಪ್ಪೆ ತರಹವಾಗಬಾರದು.
ಈ ಸುಂದರ ಕಥೆ ಎಷ್ಟೋ ನೊಂದವರ ವ್ಯಥೆ ಹಿಗಾಗಿ ನಮ್ಮ ಕ್ಷಣಿಖ ಸುಖಃಕೆ ಸೋತು ಮಾನವ ಸತ್ತ ನರಿಯಂಗ್ಹ ಬದುಕಬಾರದು ಬದಲಿಗೆ ಬೇಸಿಗೆ ಬೇವಿನ ಮರದ ಕೆಳಗೆ ಒಂದು ನಗುವ ಹೂವಿಗೆ ಹೆಸರಿಟ್ಟು ಬಾಳು ಕೊಡುವಂತಹ ಯುವಕರು ಸಿಕ್ಕರೆ ಈ ಕಥೆ ಓದಿದಕ್ಕೂ ಸಾರ್ಥಕ.

ತುಂಬಾ ಹದಬರಿತ್ಹ ಕನಕ ಮಾಡಿ ಕಥೆಯ ಊಟ ಬಡಿಸುವ ನಿಮ್ಮ ಕಾರ್ಯ ಸದಾ ಮುನ್ನಡೆಯಲಿ ಎನ್ನುವದೇ ನನ್ನ ಬಯಕೆ.

ಬುದ್ದು.

9
0
Would love your thoughts, please comment.x
()
x