ಕೆಂಗುಲಾಬಿ (ಕೊನೆಯ ಭಾಗ): ಹನುಮಂತ ಹಾಲಿಗೇರಿ


ರಾಜಿಯ ದಾಂಪತ್ಯದ ಬದುಕಿನ ಬಗ್ಗೆ ಶಾರದೆಯ ಮೂಲಕ ದೀಪಾಳಿಗೂ, ದೀಪಾಳ ಮೂಲಕ ನನಗೂ ಗೊತ್ತಾಗುತ್ತಿತ್ತು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಶಾರೀಯ ಮೈಯ್ಯ ಮತ್ತು ಮುಖದ ಮೇಲಿನ ಕಳೆ ಮಾಯವಾಗುತ್ತಿರುವುದು ಶಾರದೆಯ ಗಮನಕ್ಕೂ ಬಂದಿತಂತೆ. ರಾಜಿಯ ದಾಂಪತ್ಯದೊಳಗೆ ಹೊಗೆಯಾಡಲಿಕ್ಕೆ ಶುರುವಾಗಿದೆ ಎಂಬುದನ್ನು ಅವಳು ಅರಿತುಕೊಂಡಿದ್ದಳು. ಅಳಿಯ ಕೆಲಸಕ್ಕೆ ಹೋಗೋದನ್ನು ಬಿಟ್ಟು ಪೂರ್ತಿಯಾಗಿ ಕುಡಿತಕ್ಕೆ ಅಂಟಿಕೊಂಡಿದ್ದ. ಕೆಲಸಕ್ಕೆ ಹೋಗು ಅಂತ ರಾಜಿ ಗಂಡನನ್ನು ಒತ್ತಾಯಿಸಿದಾಗ ಆತ ತನ್ನೊಳಗೆ ಅಡಗಿದ್ದ ಲಾವಾರಸಾನ ಹೊರ ಉಕ್ಕಿಸಿದ್ದ. ‘ನಿಮ್ಮಮ್ಮನ್ನ ತಂದ್ಹಾಕು ಅಂತ ಹೇಳು. ಒಬ್ಬ ಬೀದಿಸೂಳೆ ಮಗಳನ್ನು ನಾನು ಕೈ ಹಿಡಿದು ಜೀವನ ಕೊಟ್ಟಿಲ್ವ' ಅಂತ ಯಾವ ಅಳುಕಿಲ್ಲದೆಯೇ ಅನ್ನುತ್ತಿದ್ದುದರಿಂದ ರಾಜಿಗೆ ಬರ ಬರಸಿಡಿಲು ಬಡಿದಂತೆ ಆಗುತ್ತಿತ್ತು. ಉದ್ದಕ್ಕೂ ಇಂಥೋಳ ಮಗಳು ಅಂತ ಅನುಭವಿಸಿ ಬಂದ ಎಲ್ಲ ನೆನಪುಗಳು ಮತ್ತೆ ರಾಚಿದವು. ಈ ಸಂಸಾರ ಮರೀಚಿಕೆ, ತನಗೆಟುಕದ್ದು ಅನ್ನೋ ವಾಸ್ತವ ಶಾರಿಯನ್ನು ಕಂಗಾಲಾಗಿಸಿತ್ತು.

ನಾನು ಕೆಲಸದ ನಿಮಿತ್ತ ಕೊಪ್ಪಳಕ್ಕೆ ಹೋಗಿ ವಾರವಾಗುತ್ತಾ ಬಂದಿತ್ತು. ಅದೊಂದು ಬೆಳಗ್ಗೆ ದೀಪಾ ಫೋನ್  ಮಾಡಿ ಒಂದು ಆತಂಕದ ಸುದ್ದಿಯನ್ನು ಹೇಳಿದ್ದಳು. 'ರಾಜಿಗೆ ನಿನ್ನೆ ಅವಳ ಗಂಡ ಹೊಡೆದಿದ್ದಾನೆ. ತಲೆಗೆ ದೊಡ್ಡ ಏಟು ಬಿದ್ದಿದ್ದರಿಂದ ರಾಜಾಜಿನಗರದ ಸರಕಾರಿ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದಾರೆ. ನಾನೀಗ ಆಸ್ಪತ್ರೆಯಲ್ಲಿಯೇ ಇದ್ದೇನೆ. ಏನು ಮಾಡಿದರು ಶಾರದಾ ಸುಮ್ಮನಾಗುತ್ತಿಲ್ಲ. ನಿನ್ನೆಯಿಂದ ಹೊಟ್ಟೆಗೇನು ತಿಂದಿಲ್ಲ ಬರೀ ಅಳ್ಳುತ್ತಿದ್ದಾಳೆ. ಅದಕ್ಕೆ ನೀವೊಂದು ಮಾತು ಸಮಾಧಾನ ಹೇಳಲಿ ಅಂತ ಫೋನು ಮಾಡಿದೆ. ಕೇಳುತ್ತಿದ್ದ ನಾನು ಕೂಡ ನನಗರಿವಿಲ್ಲದಂತೆ ಬಿಕ್ಕಳಿಸತೊಡಗಿದೆ. ‘ಅರೆ ಸರ್, ನೀವು ಅಳುತ್ತಿದ್ದೀರಿ, ಸಮಾಧಾನ ಹೇಳಬೇಕಾದ ನೀವೇ ಅತ್ತರೆ ಹೇಗೆ' ಎಂದು ಸ್ವಲ್ಪ ಹೊತ್ತಿನವರೆಗೆ ನನ್ನನ್ನೆ ಸಮಾಧಾನಗೊಳಿಸಿದಳು.

ನಾನು ಶಾರದೆಯ ಕೈಗೆ ಫೋನು ಕೊಡಲು ಹೇಳಿದೆ. ಶಾರದೆ ಅದು ಆಸ್ಪತ್ರೆ ಎಂಬುದನ್ನು ಬಿಟ್ಟು ಗೋಳೋ ಎಂದು ಅಳತೊಡಗಿದಳು. ಅಳೋದು ಬಿಟ್ಟು ಮತ್ತೇನು ಮಾಡಲಿಲ್ಲ. ನನ್ನ ಕೈಯಿಂದಲೂ ಏನು ಹೇಳಲಿಕ್ಕಾಗಲಿಲ್ಲ. ಮತ್ತೆ ಫೋನು ದೀಪಾಳ ಕೈಗೆ ಬಂತು. ನಾನು ಇದೆಲ್ಲಾ ಹೇಗಾಯಿತು ಎಂದು ಕೇಳಿದೆ.

 ಶಾರದೆ ಹಿಂದೆ ಸೂಳೆಯಾಗಿದ್ದಳು ಎಂಬ ಈ ನೆಪವನ್ನು ಬ್ಲಾಕ್‍ಮೇಲ್ ತಂತ್ರ ಮಾಡ್ಕೊಂಡು ಆತ ಮೀತಿ ಮೀರಿ ಕುಡಿಯತೊಡಗಿದ. ಕುಡಿತಕ್ಕಾಗಿ ತಾಯಿ ಮಗಳ ಹತ್ತಿರ ಹಣ ಉಚ್ಚುತ್ತಿದ್ದ. ಆ ಅಮಲಲ್ಲೇ ನಿನ್ನೆ ರಾತ್ರಿ ಮನೆಗೆ ಒಕ್ಕರಿಸಿ ಊಟಕ್ಕೆ ಇಕ್ಕು ಎಂದು ರಾಜಿಯನ್ನು ಪೀಡಿಸಿದ್ದಾನೆ. ತನಗಾಗಿ ಮಾಡಿಕೊಂಡಿದ್ದ ತಿಳಿಸಾರು ಮತ್ತು ಅನ್ನವನ್ನು ಅವನಿಗೆ ಬಡಿಸಿ ಪಕ್ಕದಲ್ಲಿಯೆ ತಂಬಿಗೆಯನ್ನು ತುಂಬಿಟ್ಟಿದ್ದಾಳೆ ರಾಜಿ ಆತನಿಗೆ ತಿಳಿಸಾರು ಅನ್ನ ರುಚಿ ಹತ್ತಿಲ್ಲ. 'ಯಾಕೆ ಸೂಳೆ ಮಗಳೆ ಬೇರೆ ಅಡುಗೆ ಮಾಡಿಲ್ಲ' ಎಂದು ಆಕೆಯ ಮೇಲೆ ಅಬ್ಬರಿಸಿದ್ದಾನೆ. ರಾಜಿ ಮನೇಲಿ ಏನು ಇಲ್ಲ. ಸ್ವಲ್ಪಾನೂ ದುಡೀದೆ ಇದ್ದರೆ ನಾಳೆ ಇದೂ ಸಿಗಲ್ಲ" ಎಂದು ಅಳುತ್ತಲೇ ಗೋಳು ತೋಡಿಕೊಂಡಿದ್ದಾಳೆ. 'ಸೂಳೆ ಮುಂಡೆ, ನನಗೆ ದುಡಿಲಿಕ್ಕಾ ಹೇಳ್ತಿಯಾ' ಎಂದು ಪಕ್ಕದಲ್ಲಿದ್ದ ಸ್ಟೀಲ್ ತಂಬಿಗೆಯನ್ನು ತೆಗೆದುಕೊಂಡು ನಾಲ್ಕೆದು ಸಲ ರಾಜಿಯ ತಲೆಗೆ ಹೊಡೆದಿದ್ದಾನೆ. ರಾಜಿ ತಲೆ ಹಿಡಿದುಕೊಂಡು ನೆಲದಲ್ಲಿ ಬಿದ್ದು ಹೊರಳಾಡುತ್ತಿದ್ದರೆ ನಾಗೇಶ್ ಅಲ್ಲಿಂದ ತೆಪ್ಪಗೆ ಮಾಯವಾಗಿದ್ದಾನೆ. ರಾಜಿಯ ಚೀರುವಿಕೆಯನ್ನು ಕೇಳಿದ ಸ್ಲಂನವರು ರಾಜಿಯನ್ನು ಆ ಹೊತ್ತಿನಲ್ಲಿ ಆಸ್ಪತ್ರೆಗೆ ಸೇರಿಸದಿದ್ದರೆ ಅಂದೆ ರಾಜಿಯ ಕತೆ ಮುಗಿದಿರುತ್ತಿತ್ತು ಎಂದು ಸಂಕ್ಷಿಪ್ತವಾಗಿ ತನಗೆ ತಿಳಿದು ಬಂದಿದ್ದ ಘಟನೆಯನ್ನು ದೀಪಾ ವಿವರಿಸಿದ್ದಳು. 

ತಲೆಗೆ ಬಲವಾದ ಏಟು ಬಿದ್ದಿದೆ. ಉಳಿಯೋದು ಗ್ಯಾರಂಟಿ ಇಲ್ಲ ಅಂತ ಡಾಕ್ಟರು ಹೇಳಿದ್ದಾರೆ. ಬರೋದಾದ್ರೆ ಬೇಗ ಬನ್ನಿ ಸರ್ ಎಂದು ದೀಪಾ ಭಾರವಾದ ಮನಸ್ಸಿನಿಂದಲೇ ಹೇಳಿದಳು. ಹೋದ ಕೆಲಸವನ್ನು ಅರ್ಧಕ್ಕೆ ಬಿಟ್ಟು ಬೆಂಗಳೂರಿನ ಬಸ್ ಹಿಡಿದೆ.

ದಾರಿಯುದ್ದಕ್ಕೂ ನನಗೆ ಶಾರದೆಯ ಹೋರಾಟದ ಬದುಕು ಕಣ್ಮುಂದೆ ಬರತೊಡಗಿತು. ಜೀವನದುದ್ದಕ್ಕೂ ಸಂತೋಷವೆಂದರೆ ಏನೆಂದೇ ಅರಿಯದ ಶಾರದಾ ಈಗಷ್ಟೆ ಮಗಳ ಮದುವೆಯನ್ನು ಮಾಡಿ ಮೇಲಿನ ಭಾರವನ್ನು ಹಗುರಮಾಡಿಕೊಂಡಿದ್ದಳು. ಅಳಿಯನ ಸ್ವಭಾವ ಗೊತ್ತಿದ್ದುದರಿಂದ ಅವರಿಬ್ಬರು ಚೆನ್ನಾಗಿದ್ದರೆ ಸಾಕು ಎಂದು ಇತ್ತೀಚೆಗೆ ಮಗಳ ಮನೆಗೆ ಕೂಡ ಹೋಗಿರಲಿಲ್ಲ. ಹೇಗಾದರೂ ತನ್ನ ಮಗಳ ಬದುಕನ್ನು ಹಸನುಗೊಂಡರೆ ಸಾಕೆಂದು ಅದಕ್ಕಾಗಿ ಉಸಿರುಗಟ್ಟಿ ದುಡಿದಳು. ಒಮ್ಮೆ ಎಲ್ಲವೂ ಸರಿಹೋದಂತೆ ಭಾಸವಾಗಿತ್ತು. ಮತ್ತೊಮ್ಮೆ ತನ್ನ ಕನಸಿನ ಸೌಧವೇ ಉರುಳಿ ಹೋಗಿಬಿಡುವ ಅಪಾಯ ಕಾಡುತಿತ್ತು. ಇನ್ನೂ ಚಿಕ್ಕ ವಯಸ್ಸು, ಎಲ್ಲವೂ ಸರಿಹೋಗುತ್ತೆ ಅಂತ ತನ್ನನ್ನು ತಾನೆ ಸಮಾಧಾನಿಸಿಕೊಳ್ಳುತ್ತಿದ್ದಳು.

ನಾನು ಬೆಂಗಳೂರು ತಲುಪಿದೊಡನೆ ನನ್ನ ಸ್ಕೂಟರ್‍ಅನ್ನು ರಾಜಾಜಿನಗರ ಕಿಮ್ಸ್ ಹಾಸ್ಪೆಟಲ್ ಕಡೆಗೆ ಓಡಿಸಿದೆ. ಅಲ್ಲಿ ಯಾರೆಂದರೂ ಯಾರು ಇರಲಿಲ್ಲ. ಬೆಡ್ಡಿನ ಮೇಲೆ  ರಾಜೀ ಹೆಣವೊಂದನ್ನು ಬಿಟ್ಟು! ನನಗೆ ದಿಕ್ಕು ತೋಚದಂತಾಯಿತು. ಅಲ್ಲಿಗೆ ಬಂದ ವೈದ್ಯಾಧಿಕಾರಿಗಳು ಅಲ್ಲಿಯೆ ಇದ್ದ ನರ್ಸ್‍ಗೆ ಜೋರು ಮಾಡುತ್ತಿದ್ದರು. 

‘ಎಲ್ಲಿ ಹೊಯಿತು ಆ ಹೆಂಗಸು'

‘ಗೊತ್ತಿಲ್ಲ ಸರ್, ಮಗಳು ಸತ್ತು ಅಂದಕೂಡ್ಲೆ ಅಳ್ಳುತ್ತಾ ಓಡಿ ಹೋಗಿ ಬಿಟ್ಟಳು'

‘ಬಹುಶಃ ಹೆಣ ದಪನ ಮಾಡ್ಲಿಕ್ಕೆ ಖರ್ಚಿಗೆ ಹಣ ಮಾಡಬೇಕಾಗುತ್ತಲಾ ಅನಕೊಂಡು ಆಕೆ ಇಲ್ಲಿಂದ ತಪ್ಪಿಸಿಕೊಂಡಿರಬೇಕು. ಆಸ್ಪತ್ರೆಗೆ ಬಿಲ್ ಎಲ್ಲ ಕಟ್ಟಿದ್ದಾಳಾ?'

‘ಇಲ್ಲಾ ಸರ್, 743 ರೂ. ಕಟ್ಟಬೇಕು ಡಾಕ್ಟರು ದುಡ್ಡು ಕಟ್ಟಿ ಹೆಣ ಒಯ್ಯಿ ಎಂದು ಹೇಳಿದ್ದರಿಂದಲೇ ಇಲ್ಲಿಂದ ಮಾಯವಾದಳು'

‘ಸರಿ, ರಾತ್ರಿಯವರೆಗೆ ಕಾಯಿರಿ ಆಕೆ ಬಂದ್ರೆ ಸರಿ, ಇಲ್ಲದಿದ್ದರೆ ಹೆಣಾನ ಶವಾಗಾರಕ್ಕೆ ಸಾಗಿಸಿಬಿಡಿ.'

‘ಸರಿ ಸರ್'

ವೈದ್ಯಾಧಿಕಾರಿಗಳು ತಮ್ಮ ಜೇಬಿನಲ್ಲಿನ ಮೊಬೈಲ್ ಕೈಗೆ ತೆಗೆದುಕೊಂಡು ಯಾರೊಂದಿಗೊ ಮಾತಾಡುತ್ತಾ ಅಲ್ಲಿಂದ ಹೆಜ್ಜೆ ಕಿತ್ತರು. 

ನಾನು ತಕ್ಷಣ ಅಲ್ಲಿಂದ ಹೊರ ಬಂದು ದೀಪಾಳಿಗೆ ಫೋನು ಮಾಡಿದೆ. ಫೋನು ರೀಚ್ ಆಗಲಿಲ್ಲ. ಆಸ್ಪತ್ರೆಯ ಗೇಟಿನ ಹೊರಗೆ ಒಂದೊಮ್ಮೆ ಶಾರದೆಯೊಂದಿಗೆ ಹೂ ಪೋಣಿಸುತ್ತಿದ್ದ ಮುದುಕಿ ಕುಂತಿದ್ದಳು. ಆಕೆ ನನ್ನನ್ನು ನೋಡಿದ ತಕ್ಷಣ ಎದ್ದು ನಿಂತಳು. ಕಣ್ಣುಗಳು ತೇವಗೊಂಡಿದ್ದವು.

‘ಶಾರದೆ ಎಲ್ಲಿದ್ದಾಳೆ' ಮುದುಕಿಯನ್ನು ಕೇಳಿದೆ.

ಅದಕ್ಕವಳು ಈಗಷ್ಟೆ ಹೊದ್ಲು ಸರ್ ಎಲ್ಲಿಂತ ಗೊತ್ತಿಲ್ಲ. ಈ ಕಡೆ ಹೋದಳು ಎಂದು ಅಳ್ಳುತ್ತಲೆ ಕೈಮಾಡಿ ತೋರಿಸಿದಳು. 

‘ಇಲ್ಲಿ ಹೆಣ ಬಿಟ್ಟು ಹೊರಗೆ ಹೋಗೋ ದರ್ದು ಏನಿತ್ತು?’ ನಾನು ಸಿಟ್ಟಿನಿಂದಲೇ ಕೇಳಿದೆ.

‘ಡಾಕ್ಟರ್ ದುಡ್ಡು ಕಟ್ಟಿ ಹೆಣ ಒಯ್ಯಿ ಅಂದ್ರು ಸರ್. ಅವಳ ಹತ್ತಿರ ಅಷ್ಟೊಂದು ಹಣ ಇರಲಿಲ್ಲ. ಇಲ್ಲಿವರೆಗೆ ಆಸ್ಪತ್ರೆಗೆ ಎಲ್ಲ ಹಣ ಖರ್ಚಾಗಿತ್ತು. ಬಹುಶ: ಹಣ ಹೊಂದಿಸಲಿಕ್ಕೆ ಹೋಗಿರಬೇಕು.’

‘ಯಾರ ಹತ್ತಿರ, ಹೇಗೆ ಹೊಂದಿಸಲಿಕ್ಕೆ?’

‘ಬೇಜಾರ ಮಾಡ್ಕೊಬೇಡಿ ಸರ್. ಅವಳಿಗೆ ಗೊತ್ತಿರೋದು ಒಂದೆ ದಾರಿ ಬಹುಶ ಮೈ ಮಾರ್ಕೊಂಡು…’

ಛೇ, ಈ ಜನ್ಮದಲ್ಲಿ ಇವಳು ಉದ್ದಾರ ಆಗೊಲ್ಲ. ಎಂದು ನನಗೆ ಒಂದು ಕ್ಷಣ ಬಹಳಷ್ಟು ಬೇಸರವಾಯಿತು.

‘ಅವಳ ಕೈಯಲ್ಲಿ ಫೋನು ಇರಲಿಲ್ಲವಾ. ನನಗೊಂದು ಫೋನು ಮಾಡಿದ್ದರೆ ನಾನು ಅರೇಂಜ್ ಮಾಡ್ತಿದ್ದೆ. ಅಥವಾ ತಾನು ಕೆಲಸ ಮಾಡೋ ಕಚೇರಿಯಲ್ಲಿ ಕೇಳಿದ್ದರೆ ಯಾರಾದರೂ ಸಹಾಯ ಮಾಡ್ತಿದ್ದರು.'

‘ನಾನು ಅದೆ ಹೇಳಿದ್ನಿ ಸರ್. ಅವಳು ಆಸ್ಪತ್ರೆ ಖರ್ಚಿಗೆ ತನ್ನ ಕೈಯಲ್ಲಿದ್ದ ಫೋನು ಮಾರಿಬಿಟ್ಟಿದ್ಲು' 

‘ಇವತ್ತು ಬೆಳಗ್ಗೆ ನಿಮಗೆ ಫೋನು ಮಾಡಲು ಸ್ವಲ್ಪ ಹೊತ್ತು ಪರದಾಡಿದಳು. ಆದರೆ, ಫೋನು ಮಾರಿದ್ದರಿಂದ ನಿಮ್ಮ ನಂಬರವೇ ಸಿಗಲಿಲ್ಲವಂತೆ.'

‘ಒಂದು ಗೌರವಾನ್ವಿತ ಸಂಸ್ಥೆಯಲ್ಲಿ ಕೆಲಸ ಮಡುತ್ತಿದ್ದಾಳೆ. ಯಾರಾದರನೂ ಸಾಲ ಕೇಳಿದ್ದರೆ ಕೊಡುತ್ತಿರಲಿಲ್ಲವೇ.' ನನ್ನ ಮನಸೊಳಗಿನ ಮಾತು ತುಟಿ ದಾಟಿ ಹೊರಬಿದ್ದು ಮುದುಕಿಯನ್ನು ತಡಕಿತು. 

‘ಹೇಳಿದ್ನಲ್ಲ ಸರ್. ಮೊಬೈಲ್ ಮಾರಿದಳು ಅಂತ. ಪರಿಚಯದವರ ಮನೆಗಳನ್ನು ಹುಡುಕಿ ದುಡ್ಡಿಗಾಗಿ ತಡುಕುತ್ತ ಕುಳಿತರೆ ಆಸ್ಪತ್ರೆಯಲ್ಲಿನ ಹೆಣ ಅಲ್ಲಿ ಕೊಳಿಲಿಕ್ಕೆ ಶುರುವಾಗಬಹುದು ಅಂತ ದುಡ್ಡಿಗಾಗಿ ಕಡೆಯ ಪ್ರಯತ್ನವೆಂಬಂತೆ ಹೊರ ಹೊದ್ಲು ಸರ್.’ 

ನನಗೆ ತಲೆ ಚಿಟ್ಟೆನ್ನುತ್ತಿತ್ತು. ‘ಈಗವಳು ಯಾವ ಕಡೆ ಹೋಗಿದ್ದಾಳೆ’ ಎಂದು ಕೇಳಿದೆ.

ಈ ಕಡೆ ಎಂದು ಮುದುಕಿ ಕೈ ಮಾಡಿ ಶಾರಿ ಹೋದ ದಿಕ್ಕನ್ನು ತೋರಿಸಿದಳು 

ನಾನು ಆಕೆ ಕೈ ಮಾಡಿದತ್ತ ಅವಸರವಾಗಿ ನಡೆಯತೊಡಗಿದೆ. ರಸ್ತೆಯ ಆ ಕಡೆಯಲ್ಲಿ ಕಾಲುದಾರಿಯ ಗೂಡಂಗಡಿಯ ಮುಂದೆ ಆಕೆ ನಿಂತಿದ್ದಳು

ಆಂಗಡಿಯವನೊಂದಿಗೆ ಏನನ್ನು ಮಾತಾಡುತ್ತಿದ್ದಳು ಅಷ್ಟೊತ್ತಿಗೆ ನಾನಲ್ಲಿಗೆ ಹೋದೆ. ‘ಏನು ಶಾರಿ ಎಲ್ಲೋ ಕೆಲಸ ಮಾಡ್ತಿ ಅಂತ ಕೇಳಿದ್ದೆ. ಯಾಕೆ ಕೆಲಸ ಒಗ್ಗಲಿಲ್ಲವಾ' ಎಂದು ಅಂಗಡಿಯವ ಪ್ರಶ್ನಾರ್ತಕವಾಗಿ ನೋಡಿದ. ಶಾರಿ ಆತನ ಮಾತುಗಳಿಗೆ ಗಮನ ಕೊಡಲಿಲ್ಲ. ಎದುರುಗಡೆ ಜೋತಾಡುತ್ತಿದ್ದ ಗುಟಕಾ ಪೊಟ್ಟಣ ಒಡೆದು ಬಾಯಿಗೆ ಸುರುವಿಕೊಂಡಳು. ಅವನೊಂದಿಗೆ ಏನನ್ನು ಮಾತಾಡಿದಳು. ಆತ ಇವಳ ಮುಂದೊಂದು ಬಾಟಲಿ ಇಟ್ಟ. ಇಕೆ ಗಟಗಟನೆ ಗಂಟಲಕ್ಕೆ  ಸುರುವಿಕೊಂಡಳು. ಖಾಲಿ ಬಾಟಲಿ ಇಟ್ಟು ಹಾಗೆ ಹೊರಟೆ ಬಿಟ್ಟಳು. ವೈನ್ ಅಂಗಡಿ ಮಾಲಿಕ ಅವಾಜ್ ಹಾಕುತ್ತಲೆ ಇದ್ದ. ‘ಬರೋವಾಗ ದುಡ್ಡು ಕೊಟ್ಹೋಗು, ಮುಂಡೇವು ಕುಡೀದೇ ಇದ್ರೆ ಇವಕ್ಕೆ ಸೆರಗು ಬೀಳೋಲ್ಲ, ಸೆರಗು ಬೀಳ್ದೆ ದುಡ್ಡು ಕೊಡೋಲ್ಲ.' ಅಂತ ಗೊಣಗುತ್ತಿರುವುದು ನನಗೆ ಕೇಳಿಸಿತು.

 ಜೋಲಿ ಹೊಡೆಯುತ್ತ ನಡೆಯುತ್ತಿದ್ದರೂ ಆ ನಡುಗೆಯಲ್ಲಿನ ಬಿರುಸು ಆಕೆಯ ಹತಾಶೆ, ಅಸಹಾಯಕತೆ, ಆಕ್ರೋಶಗಳೆಲ್ಲವೂ ಬೆರೆತಂತಿತ್ತು. ಆಕೆ ಮತ್ತೆ ತನ್ನ ಹಳೆಯ ಕತ್ತಲಕೂಪಕ್ಕೆ ಮರಳುವ ಗಟ್ಟಿ ನಿರ್ಧಾರಕ್ಕೆ ಬಂದತ್ತಿತ್ತು. ನಿನ್ನೆ ಮೊನ್ನೆ ಕಾಟನ್ ಸೀರೆಯುಟ್ಟು ಸೌಮ್ಯವಾಗಿದ್ದವಳೂ, ಗೌರವದಿಂದ ನೌಕರಿ ಮಾಡುತ್ತಿದ್ದವಳು ಇವಳೇನಾ ಎಂದು ನನ್ನಲ್ಲಿ ಒಮ್ಮೆ ಸಂಶಯ ಹುಟ್ಟಿ ಸತ್ತಿತ್ತು. ಮನುಷ್ಯ ಒಂದೊಮ್ಮೆ ಬದುಕಿನ ಹತಾಸೆಗೆ ತಳ್ಳಲ್ಪಟ್ಟರೆ, ಬದುಕಿನ ಎಲ್ಲ ಬಾಗಿಲುಗಳು ಮುಚ್ಚಿಬಿಟ್ಟರೆ ಯಾವ ಕೆಲಸ ಮಾಡಲಿಕ್ಕೂ ಹೇಸುವುದಿಲ್ಲ ಎಂಬುದಕ್ಕೆ ಶಾರಿಯ ನಿರ್ಧಾರವೇ ನಿದರ್ಶನವಾಗಿತ್ತು. 

 ಶಾರಿ ಅಲ್ಲಿಯೆ ಗೂಡಂಗಡಿಗಳ ಮಾರುಕಟ್ಟೆಯ ಬೀದಿಯಲ್ಲಿ ನಡೆಯತೊಡಗಿದಳು. ಆ ಬೀದಿಯ ತಿರುವುಗಳಲ್ಲಿಯೇ ಎಷ್ಟೋ ದಿನದ ಮುಸ್ಸಂಜೆಗಳಲ್ಲಿ ತನ್ನ ದೇಹವನ್ನು ಮಾರಾಟಕ್ಕಿಟ್ಟಿದ್ದಳು. ಕೊನೆಗೆ ನಡೆದು ಒಂದು ತಿರುವಿನಲ್ಲಿ ನಿಂತಳು. ನಾನು ಅವಳ ಮುಂದೆ ಹೋಗಿ ಅವಳನ್ನು ಮಾತಾಡಿಸಬೇಕೆಂದಿದ್ದೆ. ಅಷ್ಟರಲ್ಲಿ ಎದುರಿಗೆ ಸ್ವಲ್ಪ ದೂರದಲ್ಲಿ ವ್ಯಕ್ತಿಯೊಬ್ಬ ಬಂದು ನಿಂತದ್ದನ್ನು ನೋಡಿ ಜೋಲಿ ಹೊಡೆಯುತ್ತಲೇ ಅವನ ಹತ್ತಿರ ಹೋದಳು. ಅವನು ತನ್ನ ಬೆರಳುಗಳನ್ನು ಮಡಚಿ ಕೆಲವು ಅಂಕಿ ಸೂಚಿಸಿದ. ಈಕೆ ಏನೂ ಪ್ರತಿಕ್ರಿಯಿಸದೆ ಅವನ ಹಿಂದೆ ನಡೆದೇ ಬಿಟ್ಟಳು. ನಾನು ಓಡೋಡಿ ಹೋಗಿ ರಸ್ತೆ ಬದಿಯನ್ನು ಸೇರಿಕೊಂಡೆ. ಅವರ ಹಿಂದೆ ಓಡಿದೆ, ಶಾರದೆ ಎಂದು ಕೂಗುತ್ತಾ ಓಡಿದೆ. ಆದರೆ ಆಕೆ ಹೊಳ್ಳಿ ನೋಡದೆ ನಡೆಯುತ್ತಲೇ ಇದ್ದಳು. ಜೋರಾಗಿ ಅವರ ಮುಂದೆ ಓಡಿ ಹೋಗಿ ಅವರಿಗೆ ಅಡ್ಡವಾಗಿ ನಿಂತೆ. 

ಪಾಪ ಗಿರಾಕಿ ಹೊಸಬನಿರಬೇಕು ತಪ್ಪಿಸಿಕೊಳ್ಳುವುದಕ್ಕಾಗಿ ಕತ್ತಲಿನಲ್ಲಿ ಮರೆಯಾಗಿಬಿಟ್ಟ. ಶಾರದೆ ಸಿಟ್ಟಿನಿಂದ ನನ್ನನ್ನು ನೋಡುತ್ತಲೇ ಇದ್ದಳು. ಸಿಟ್ಟು ಕಣ್ಣೀರಾಗಿ ನೆಲ ಕಾಣತೊಡಗಿತು. ಅತ್ತು ಅತ್ತು ನನ್ನ ಎದೆಗೆ ಆತುಕೊಂಡಳು. ನಾನು ಸುತ್ತಲೂ ಗಮನಿಸುತ್ತಿದ್ದ ಜನರನ್ನು ಕೇರು ಮಾಡದೆ ಆಕೆಗೆ ನನ್ನ ಹೆಗಲ ಮಿದುವಿನಲ್ಲಿ ಜಾಗ ನೀಡಿದೆ. ಇಬ್ಬರ ಕಾಲುಗಳು ಆಸ್ಪತ್ರೆಯತ್ತ ದೃಡವಾಗಿ ಹೆಜ್ಜೆ ಊರತೊಡಗಿದವು. 

* * *

(ಮುಗಿಯಿತು…)

ಶ್ರೀ ಹನುಮಂತ ಹಾಲಿಗೇರಿಯವರು ತಮ್ಮ ಕಾದಂಬರಿ 'ಕೆಂಗುಲಾಬಿ'ಯನ್ನು ಪಂಜುವಿನಲ್ಲಿ ಪ್ರಕಟಿಸಲು ಕಳುಹಿಸಿಕೊಟ್ಟಿದ್ದಕ್ಕೆ ಅವರಿಗೆ ಪಂಜು ಬಳಗ ಹೃದಯಪೂರ್ವಕ ವಂದನೆಗಳು ಸಲ್ಲಿಸುತ್ತದೆ. ಅವರ ಲೇಖನಿಯಿಂದ ಮತ್ತಷ್ಟು ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ದಕ್ಕಲಿ ಎಂದು ಪಂಜು ಹಾರೈಸುತ್ತದೆ.

ಇತಿ

ಪಂಜು ಬಳಗ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x