ಕೆಂಗುಲಾಬಿಯೂ, ಊರ ಗುಬ್ಬಿಯೂ: ಪ್ರಶಸ್ತಿ

ಒಂದೂರಲ್ಲೊಂದು ಗುಬ್ಬಿಯಿತ್ತಂತೆ. ಆ ಗುಬ್ಬಿಗೆ ಸಿಕ್ಕಾಪಟ್ಟೆ ಗೆಳೆಯರು. ಗುಬ್ಬಿ ಪ್ರತೀ ಸಾರಿ ಚೀಂವ್ಗುಟ್ಟಿದಾಗಲೂ ಆಹಾ ಎಂತಾ ಮಧುರ ಗಾನ. ನಿನ್ನ ಚೀಂಗುಟ್ಟುವಿಕೆಯ ಮುಂದೆ ಕೋಗಿಲೆಯ ಗಾಯನವನ್ನೂ ನಿವಾಳಿಸಿ ಎಸೆಯಬೇಕೇನೋ ಎಂದು ಹೊಗಳುತ್ತಿದ್ದರಂತೆ. ಮೊದಮೊದಲು ಸುಮ್ಮನೇ ಹೊಗಳುತ್ತಿದ್ದಾರೆಂದುಕೊಂಡಿದ್ದ ಗುಬ್ಬಿಗೆ ನಿಧಾನಕ್ಕೆ ಅವರು ಹೇಳಿದ ಮಾತುಗಳೇ ಸತ್ಯವೆನಿಸಲಾರಂಭಿಸಿತು. ಅಷ್ಟೆಲ್ಲಾ ಜನ ಸುಳ್ಳು ಹೇಳುತ್ತಾರಾ ಅಂತ. ನಾನೆಂದ್ರೇನು ? ನಾ ಚೀಂಗುಟ್ಟುವುದೆಂದ್ರೇನು.. ಆಹಾ ಯಾರಾದ್ರೂ ನನಗೆ ಸಾಟಿಯುಂಟೆ ಅನ್ನೋ ಭಾವ ಅದಕ್ಕೇ ಅರಿವಿಲ್ಲದಂತೆ ಅದರೊಳಗೆ ಬೆಳೆಯಲಾರಂಭಿಸಿತು. ಒಂದಿನ ಹಿಂಗೇ ಆಹಾರ ಹುಡುಕುತ್ತುಡುಕುತ್ತಾ ತನ್ನ ಜಾಗದಿಂದ ದೂರ ಹಾರಿಬಂದ ಗುಬ್ಬಿಗೆ ಹೊಸ ಮರಗಳನ್ನು, ಹಕ್ಕಿಗಳನ್ನು ಕಂಡಂತಾಯಿತು. ತನಗಿಂತ ದೊಡ್ಡದಾಗಿದ್ದ ಅವು, ವಿಪರೀತ ಕಪ್ಪಗಾಗಿದ್ದು ನೋಡಲು ಭಯಾನಕವಾಗಿದ್ದ ಕಾಗೆ ಅನ್ನೋ ಪಕ್ಷಿಗಳನ್ನ ಕಂಡಿತು. ತನ್ನ ಗಾಯನದ ಪರಿಚಯವಾಗಲೆಂದು ಚೀಂ ಚೀಂ ಎಂದುಲಿಯಿತು. ಯಾರೂ ಗಮನವಿಟ್ಟು ಕೇಳಿದಂತಾಗಲಿಲ್ಲ. ನಾನು ಹಾಡು ಹೇಳುತ್ತಿದ್ದೇನೆ. ಕೇಳ್ತಾ ಇಲ್ವಾ ಅಂದ್ರೆ ಹಾಡಾ ? ನಿನ್ನದಾ ? ಹಾಡೆಂದ್ರೆ ಏನೂಂತ ಕೇಳ್ಬೇಕೂಂದ್ರೆ ಆ ಮಾವಿನ ಮರದತ್ರ ಹೋಗು. ಅಲ್ಲೊಂದು ಕೋಗಿಲೆ
ಹಾಡ್ತಾ ಇರತ್ತೆ. ಹಾಡಂದ್ರೆ ಅದು ಅಂತೊಂದು ಕಾಗೆ.

ನನಗಿಂತ ಚೆನ್ನಾಗಿ ಹಾಡೋ ಕೋಗಿಲೆ  ಹೇಗಿರಬಹುದೆಂಬ ಉತ್ಸಾಹದಿಂದ ಗುಬ್ಬಿ ಅತ್ತ ತಿರುಗಿತು. ಅಲ್ಲಿ ಕೋಗಿಲೆಯೇನೂ ಕಾಣಲಿಲ್ಲ. ಆದ್ರೆ ಯಾರೋ ಮಧುರಕಂಠದಿಂದ ಹಾಡುತ್ತಿದ್ದಂತೆ ಕೇಳಿಸಿತು. ಸುಮಾರಷ್ಟು ಹೊತ್ತು ದನಿ ಬರುತ್ತಿದ್ದ ದಿಕ್ಕಿನಲ್ಲಿ ಹುಡುಕಿದ ಬಳಿಕ ದನಿಯೊಡತಿ ಕಂಡಳು. ಅರೆ ಇದೇನಿದು ? ಕೋಗಿಲೆ ಅಂದ್ರೆ ಸಖತ್ ಸುಂದರವಾಗಿ ಇರಬಹುದೆಂದು ಭಾವಿಸಿದ್ರೆ ಇದು ಕಾಗೆಯಂತೇ ಇದೆ. ಕಪ್ಪಗೆ, ಸಣ್ಣಗೆ , ಛೇ. ಇದರ ಕಂಠವೇ ? ಛೇ. ಇಷ್ಟು ಕಡುಕಪ್ಪಿನವಳು ಇಷ್ಟು ಸುಂದರವಾಗಿ ಹಾಡೋಕೆ ಸಾಧ್ಯವೇ ಇಲ್ಲ. ನನ್ನಂತ ಸುಂದರಾಗಿಗೆ, ಸಪೂರ ಶರೀರಕ್ಕೇ ಒದಗದ ಧ್ವನಿ ಇವಳಿಗೆ
ಸಿದ್ದಿಸಿದ್ದಾದ್ರೂ ಹೇಗೆ ? ಏನೋ ಗೋಲ್ಮಾಲಿದೆ ಇಲ್ಲಿ ಅನ್ನುತ್ತಾ ವಾಪಸಾದಳು. ಗೂಡಿಗೆ ಮರಳೋ ದಾರಿಯಲ್ಲಿ ಇನ್ನೊಂದಿಷ್ಟು ಕಾಗೆಗಳು, ಕೆಂಬೂತ ಅನ್ನೋ ಪಕ್ಷಿಗಳು, ಹಂಸಗಳು ಕಂಡವು. ಎಲ್ಲರ ಬಳಿಯೂ ಕೋಗಿಲೆಯ ಒಂದಿಲ್ಲೊಂದು ನಕಾರಾತ್ಮಕ ಅಂಶಗಳು ಸಿಗ್ತಿದ್ವು.ಅದನ್ನು ಹೊತ್ತು ತನ್ನ ಗೂಡಿಗೆ ಮರಳೋ ಹೊತ್ತಿಗೆ ತನ್ನ ಸಾಮರ್ಥಗಳಿಗಿಂತ ಕೋಗಿಲೆಯ ಲೋಪಗಳ ಪಟ್ಟಿಯೇ ದೊಡ್ಡದಾಗಿ ಕಾಣತೊಡಗಿತ್ತು. ಆ ಪಟ್ಟಿಗೆ ಇನ್ನೊಂದು ಮೊದಲೊಂದು ಸೇರಿಸುವುದರಲ್ಲೇ ಮುಳುಗಿ ಹೋದ ಗುಬ್ಬಿಗೆ ತನ್ನ ಹಾಡುವಿಕೆಯೇ ಕಾಲಕ್ರಮೇಣ ಮರೆತುಹೋಯ್ತು.

ನಮ್ಮ ಜೀವನದಲ್ಲೂ ಹೀಗೇ ಅಲ್ವಾ ? ಯಾರಾದ್ರೂ ಯಶಸ್ವೀ ಲೇಖಕನ, ಗಾಯಕನ, ಕವಿಯ ಕೃತಿ, ಪ್ರಸ್ತುತಿಗಳಿಂದ ಸ್ಪೂರ್ತಿ ಪಡೆಯೋ ಬದಲು ಅದರಲ್ಲಿದ್ದ ಹುಳುಕ ಹುಡುಕುವುದರಲ್ಲೇ
ಜೀವನ ಕಳೆದುಬಿಡುತ್ತೇವೆ. ನಮ್ಮ ಸಾಧನೆಗಳಿಗಿಂತ ಮತ್ತೊಬ್ಬರ ಕೆಳಕಾಣಿಸುವುದರಲ್ಲೇ ತೃಪ್ತಿ ಹುಡುಕುತ್ತಿರುತ್ತೇವೆ. ಜೊತೆಗೆ ವಾಹ್, ಎಂತಾ ಬರಹ, ಅದ್ಭುತ ಅಂತ ಪ್ರತಿಯೊಂದಕ್ಕೂ ಹೊಗಳೋ ಹೊಗಳು ಭಟ್ಟಂಗಿಗಳು ಜೊತೆಯಾದರೆಂತೂ ಮುಗಿದೇ ಹೋಯ್ತು. ಬೆಂಬಲಿಗರಿಲ್ಲದ ಬರಹಗಾರ ಕೊಂಚ ಕಾಲದಲ್ಲೇ ಬೆನ್ನು ತಟ್ಟುವಿಕೆ ಸಿಗದ ಕಾರಣಕ್ಕೆ ಬರಹ ನಿಲ್ಲಿಸಿಬಿಡಬಹುದು. ಆದ್ರೆ ಕೆಲ ದಿನಗಳಲ್ಲೇ ಮತ್ಯಾವುದೋ ಸ್ಪೂರ್ತಿಯ ಚಿಲುಮೆ ಅವನನ್ನ ಸ್ವಾಭಾವಿಕ ಕಾರ್ಯಕ್ಷೇತ್ರಕ್ಕೆ ಎಳೆದು ತರುತ್ತದೆ. ಹಿಂದ್ಯಾರಿಲ್ಲದ ಸಂದರ್ಭಗಳಿಗಿಂತ ಎಲ್ಲೆಲ್ಲೂ ಹೊಗಳಭಟ್ಟಂಗಿಗಳೇ ತುಂಬಿರೋ ಸ್ಥಿತಿ ತೀರಾ ಅಪಾಯಕಾರಿ. ಯಾರನ್ನೋ ತೆಗಳಿದ, ವೈಯುಕ್ತಿಕ ವಿಚಾರ ಬಯಲಿಗಾಕೋ, ಮತ್ಯಾವುದೋ ನೀಲಿಕವನಕ್ಕೆ ಸಿಗೋ ಮೂರಂಕಿಯ ಲೈಕುಗಳು ಮತ್ತೆ ಮತ್ತೆ ಅದೇ ತರಹದಕ್ಕೆ ಕೈಹಾಕುವುದಕ್ಕೆ
ಪ್ರೇರಣೆಯಾಗುತ್ತದೆ. ಸಂತದ ವೈಫಲ್ಯಕ್ಕೆ ಇನ್ಯಾರನ್ನೋ ಕಾರಣವಾಗಿಸೋ , ಸಮಾಜದಲ್ಲಿನ ಕೊಳಕುಗಳನ್ನು ತೊಳೆಯೋ ಸ್ಪೂರ್ತಿಗೊಡದೇ ಅದನ್ನಿನ್ನೂ ಕೊಳಕಾಗಿ ತೋರಿಸಿ, ಅದಕ್ಕೆ
ಇನ್ನಷ್ಟು ಮತ್ತಷ್ಟು ಲೈಕುಗಳ ಗಳಿಸೋ ಮನಸ್ಥಿತಿಯಾಗೋ ಇದು ಮುಂದುವರಿಯಬಹುದು. ಯಾರೋ ಏನೋ ಅಂದರೆನ್ನೋ ವಿಷಯವನ್ನು ಸಮಯ, ಸಂದರ್ಭಗಳ ವಿವರಣೆಯಿಲ್ಲದೇ ಹೇಳಿಕೆಯ ವಿಪರೀತಾರ್ಥ ಕೊಟ್ಟು ಸಮಾಜ ಮಾಧ್ಯಮಗಳಲ್ಲಿಯೇ ನಿತ್ಯದ ಬದುಕ ಕಾಣೋ ಜನಕ್ಕೂ ಕೋಗಿಲೆಯ ಲೋಪಗಳ ಪಟ್ಟಿ ಮಾಡೋದ್ರಲ್ಲೇ ತನ್ನ ಗೀತೆ ಮರೆತ ಗುಬ್ಬಿಗೂ ತೀರಾ ವ್ಯತ್ಯಾಸವಿಲ್ಲ ಅಲ್ಲವಾ
ಅನಿಸಿಬಿಡತ್ತೆ ಹಲವು ಸಾರಿ.

ಹಿಂಗೇ ಒಂದು ಗುಲಾಬಿ ತೋಟದಲ್ಲಿ ತಮ್ಮ ಪಾಡಿಗೆ ತಾವರಳುತ್ತಿರುವ ಬಣ್ಣ ಬಣ್ಣದ ಗುಲಾಬಿಗಳು. ಹಂಗೇ ಬಂದ ಕೆಲವರು ಗುಲಾಬಿಯಲ್ಲಿ ತಮ್ಮ ಬಳಿ ಇರುವ ಕೆಂಗುಲಾಬಿ ಚೆಂದ ಅಂದರು ಒಂದಿಷ್ಟು ಜನರು. ನಂತರ ಬಂದವರು ಏ ಕೆಂಪೇನು ರಕ್ತದ ಬಣ್ಣ. ಛೀ ಅದರಲ್ಲಿ ಸೌಂದರ್ಯವಿಲ್ಲ. ಆಹಾ ಹಳದಿ ಗುಲಾಬಿ ಎಷ್ಟು ಚಂದ ಅಂದರು. ಸ್ವಲ್ಪ ಕಾಲ ಹಾಗೇ ಕಳೆಯಿತು. ನಂತರದವರು ಏ ಕೆಂಪು, ಹಳದಿಗಳಲ್ಲೇನು ಸತ್ವವಿದೆ, ಯಾವ ಬಣ್ಣಗಳ ದಬ್ಬಾಳಿಕೆಯೂ ಇರದ ಬಿಳಿಯೇ ಸರ್ವಶ್ರೇಷ್ಟ ಅಂದರು. ಈ ವಾದವಿವಾದಗಳ ಬಗ್ಗೆ ತಲೆಕೆಡಿಸಿಕೊಳ್ಳದ ಒಂದಿಷ್ಟು ಗುಲಾಬಿಗಳು ತಮ್ಮ ಪಾಡಿಗೆ ತಾವರಳುತ್ತಲೇ ಇದ್ದವು. ಉದಯಿಸೋ ಸೂರ್ಯನೊಂದಿಗೆ ನಗುವಾಗುತ್ತಿದ್ದ ಅವು ಮುಳುಗೋ ರವಿಯೊಂದಿಗೆ ಉದುರಿದ ಪಕಳೆಗಳ ಗೊಬ್ಬರವಾಗಿ ಮತ್ತೆಲ್ಲೋ ಮಗುವಾಗುತ್ತಿದ್ದವು. ಮತ್ತೆ ವಾಸ್ತವಕ್ಕೆ ಬರೋದಾದ್ರೆ ಗುಬ್ಬಿಗೆ ಸಿಕ್ಕ ಕಾಗೆಗಳು ಪ್ರಪಂಚದ ಬುದ್ದಿಯೆಲ್ಲಾ ತಮ್ಮಲ್ಲೇ ಇದೆಯೆನ್ನೋ ಬು.ಜೀ.ಗಳಾ ? ಹಂಗೆನಿಸೋದು ಹೌದು ಕೆಲ ಸಲ.  ಇವರಿಗಿಂತಿಂತಾ ಉನ್ನತ ವಿಚಾರಗಳು ಬರೋದಾದ್ರೂ ಹೇಗೆ ? ಇವರಿರೋ ಎತ್ತರದಿಂದ ಆಗಿರಬಹುದಾ ಅನ್ನೋ ಕುತೂಹಲದಲ್ಲಿ ಮೂರ್ನಾಲ್ಕು ದಿನ ವೋಲ್ವೋ ಬಸ್ಸಲ್ಲಿ ಓಡಾಡಿದೆ. ಎತ್ತರೆತ್ತರದ ಬಿಲ್ಡಿಂಗುಗಳು ಕೊಂಚ ಹತ್ತಿರದಿಂದ ಕಂಡತಾದವು. ಆದರೆ ಉನ್ನತಧಾರೆಗಳು ಹರಿದಾವೇನೋ ಅನ್ನೋ ನಿರೀಕ್ಷೆ ಸುಳ್ಳೇ ಆಯ್ತು. ಸ್ವಚ್ಛ ಗಾಜುಗಳಾಚೆ ಕಂಡದ್ದು ಅದೇ ಬದುಕಿನೋಟಗಳು ಮತ್ತು ದೈನಂದಿನ ಬದುಕು. ಹಾಗೆ ಎತ್ತರದಲ್ಲಿದ್ದವರೆಲ್ಲಾ ಬು.ಜೀ.ಗಳಾಗಬೇಕಂದ್ರೆ ಪೈಲಟ್ಟುಗಳು, ನಮ್ಮ ಕೆ.ಇ.ಬಿ ಲೈನ್ ಮೆನ್ನುಗಳೆಲ್ಲಾ ಅತೀ ಬುದ್ದಿವಂತರಾಗಬೇಕಿತ್ತಲ್ಲವೇ ಅನಿಸಿತು. ಆದ್ರೆ ಅವರ್ಯಾರೂ ಅತೀ ಬುದ್ದಿವಂತರಲ್ಲ. ಎತ್ತರದಲ್ಲಿದ್ದರೂ ಅವರಲ್ಲಿಲ್ಲದ ಉನ್ನತ ವಿಚಾರಗಳು ಈ ಬು.ಜೀ.ಗಳ ಹತ್ರವೆಲ್ಲಿಂದ ಬಂದವು ಅಂತ. ತೆಗಳೋಕೂ ಒಂದೊಂದು ಪಂಥಗಳು ! ಗುಲಾಬಿಗಳ ಬಣ್ಣದಲ್ಲಿ ಬೇಧವೆಣಿಸಿದಂತೆ ನವ್ಯ, ನವೀನ, ದಲಿತ, ಬಂಡಾಯಗಳೆಂದು, ಎಡಪಂತ, ಬಲಪಂಥಗಳೆಂದು ನೂರೆಂಟು ಹೆಸರಿಟ್ಟು ನಮ್ಮದೇ ಶ್ರೇಷ್ಟರೆಂಬ ಜಗಳಗಳು, ಮತ್ತೊಂದು ಪಂಥದವನನ್ನು ತುಳಿಯೋ ಪ್ರಯತ್ನಗಳಾ ? ಹೌದೆನ್ನೋ, ಅಲ್ಲವೆನ್ನೋ ಹಲವು ಉತ್ತರಗಳು ಸಿಕ್ಕಾವು, ಆ ಗುಲಾಬಿಗಳ ಹಲವು ಬಣ್ಣದಂತೆ..ಅಷ್ಟಕ್ಕೂ ನಮ್ಮದು ಸತ್ಯ, ಅವರದ್ದಲ್ಲ. ಅವರದ್ದಾದರೆ ನಮ್ಮದಲ್ಲವೇ ಅನ್ನೋ ವಾದವೇಕೆ  ? ಸತ್ಯಾಸತ್ಯಗಳ ವಾದದಾಚೆಯೂ ಇರುವ ಬದುಕ ಕಾಣೋ ಪ್ರಯತ್ನವ ಮಾಡಬಾರದೇಕೆ ? ಗುಲಾಬಿಗಳಲ್ಲಿ ಕೆಂಪು, ಹಳದಿ, ಬಿಳಿಯ ಬಣ್ಣಗಳ ಹೊರತಾಗಿಯೂ ಕಾಣೋ ಇನ್ನೆಷ್ಟೂ ಮಿಶ್ರ ಬಣ್ಣಗಳಂತೆ ನಮ್ಮ ಬದುಕಿನ ಚಿತ್ರಗಳೂ ಕೂಡ
ನಿತ್ಯನೂತನ. ನವಿಲ ನಾಟ್ಯ ನವಿಲಿಗಾದರೆ, ಕೋಗಿಲೆಯ ಕಂಠ ಅದಕ್ಕೆ. ಗುಬ್ಬಚ್ಚಿಯ ಪುಟಾಣಿ ಸುಂದರ ರೂಪವನ್ನು ಪಂಚರಂಗಿ ಗಿಣಿಗಿರುವ ಬಣ್ಣ ಇದಕ್ಕಿಲ್ಲ ಅಂತ ನೋಡೋ ಭಾವವೇಕೆ ? ಇದ್ದದ್ದನ್ನು ಇದ್ದಂತೇ ಸ್ವೀಕರಿಸಿದರಾಗದೇ ? ಭಾವಗಳ ಬಂಡಿಯಲ್ಲಿ ಬದುಕ ಯಾತ್ರೆಯ ಹೊರಡಲು ,  ಎದುರಾಗುವವರ ಹಾಡಿಗೊಮ್ಮೆ ತಲೆದೂಗಿ ಮೆಚ್ಚುಗೆ ಸೂಚಿಸೋಕೆ   ಈ ಪಂಥ, ಗುಂಪುಗಳ ಚೌಕಟ್ಟು ಬೇಕೆ ?  ಕೆಂಗುಲಾಬಿಯೇ ಸುಂದರ ,ನಾನು ಕಾಲಿಟ್ಟಲ್ಲೆಲ್ಲಾ ಕೆಂಪೇ ಇರಬೇಕು ಅಂತ ಬರೆಯೋ ಇಂಕಿಂದ, ತಿನ್ನೋ ಅನ್ನದವರೆಗೆ ಎಲ್ಲಾ ಕೆಂಪಾಗೇ ಇರಲೆಂದು ಬಯಸಬೇಕೇ ? ಈ ಶ್ರೇಷ್ಟ, ಕನಿಷ್ಟಗಳ ತಕ್ಕಡಿಯ ತೂಗುವಿಕೆಯಿಲ್ಲದೆಯೋ ಸಾಗೋ ಬಾಳದೋಣಿಯ ಪಯಣ ಸಾಕೇ ? .. ಕೇಳುತ್ತಾ ಹೋದರೆ ಹಲವುಂಟು ಪ್ರಶ್ನೆಗಳು. ಸಮಾಜ ಮಾಧ್ಯಮಗಳ ಗಲಾಟೆಯ ಬಗ್ಗೆ, ಬ್ಲಾಗುಗಳ ಗುಂಪುಗಳ ಬಗ್ಗೆ, ಪ್ರತಿಯೊಂದಕ್ಕೂ ಪುಕಾರೆತ್ತೋ ಬು.ಜೀ.ಗಳ ಬಗ್ಗೆ. ಆದ್ರೆ ಪ್ರಶ್ನೆಯೆತ್ತಿ ಸಾಧಿಸುವುದೇನು ? ನಕಾರಗಳ ಪಟ್ಟಿ ಮಾಡೋದ್ರಲ್ಲೇ ನನ್ನ ಆಕಾರ ಕರಗಿ ಹೋದೀತೆಂಬ ಭಯದಲ್ಲಿ ಮರೆತುಹೋಗುತ್ತಿರೋ ನನ್ನ ಹಾಡ ಮತ್ತೆ ಮೆಲುಕುಹಾಕಲು ಪ್ರಯತ್ನಿಸುತ್ತೀನೆ. .. ಈ ಪ್ರಶ್ನೆಗಳ ನಿಮ್ಮ ಸುಪರ್ದಿಗೇ ಬಿಟ್ಟು.

****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
padma
padma
9 years ago

superb…. prashu…. sakath barudde…

1
0
Would love your thoughts, please comment.x
()
x