ಅಚ್ಯುತಮ್, ಕೇಶವಂ
ಕೃಷ್ಣ ದಾಮೋದರಂ
ಜಾನಕಿವಲ್ಲಭಂ
ವಾಸುದೇವಂ ಭಜೇ…
ಕೃಷ್ಣ ಎಂಬ ಹೆಸರೇ ಮನಕ್ಕೆ ಒಂದು ರೀತಿಯ ಆನಂದ ತರುತ್ತದೆ, ಕೃಷ್ಣ ಸರ್ವಾಂತರ್ಯಾಮಿ ಅಂದರೆ ಸರ್ವರ ಅಂತರಂಗಗಳಲ್ಲೂ ಅಲೆವವನು, ಅವನಿಲ್ಲದ ಉಸಿರಿಲ್ಲ.
'ಕೃಷ್ಣಂ ವಂದೇ ಜಗದ್ಗುರು' ಕೃಷ್ಣನೇ ಜಗದ ಗುರು, ಜಗದ ಗುರುವಾದ ಕೃಷ್ಣನೇ ನಿನಗೆ ವಂದಿಸುವೆ.
ನಾವೆಷ್ಟೆ ದೇವರನ್ನು ಪೂಜಿಸಿದರು ಆ ಪೂಜೆಯಲ್ಲೊಂದು ಭಯವಿರುತ್ತದೆ. ಆದರೆ ಕೃಷ್ಣನ ವಿಷಯ ಹಾಗಲ್ಲ ಆತನ ಪೂಜಿಸಲು ಭಯ ಪಡಬೇಕಿಲ್ಲ ಪ್ರೇಮ ಮಿಳಿತವಾದ ಭಕ್ತಿಯೊಂದಿದ್ದರೆ ಸಾಕು, ಕೃಷ್ಣನನ್ನು ನಮಗೆ ಬೇಕಾದ ರೀತಿಯಲ್ಲಿ ಆದರಿಸಬಹುದು, ಆತನು ಸಖ, ಸ್ನೇಹಿತ, ತಂದೆ-ತಾಯಿ, ಗುರು,ಸೋದರ, ಕೊನೆಗೆ ಮಗುವಾಗಿಯೂ ನಮ್ಮೊಡನೆ ಇರಬಲ್ಲ. ಏಕೆಂದರೆ ಕೃಷ್ಣ ಈ ಜಗತ್ತಿಗೆ ಬಂದದ್ದು ನಮ್ಮಂತೆಯೇ ಸಾಮಾನ್ಯ ಮಗುವಾಗಿ, ಗೆಳೆಯನಾಗಿ, ಸಖನಾಗಿ, ಪತಿಗಾಗಿ, ಮಗನಾಗಿ, ತಂದೆಯಾಗಿ ಜೀವನದ ಎಲ್ಲಾ ಮಜಲುಗಳನ್ನು ನಮ್ಮಂತೆಯೇ ಸವಿದವ ಆದರೆ ಆತ ಮಹಾ ಪುರುಷ ಅವನ ಲೀಲೆಗಳೆಲ್ಲ ಮನುಷ್ಯರ ತೀರ್ಪಿಗೆ, ಪರಾಮರ್ಶೆಗಳಿಗೆ, ಆಲೋಚನೆಗಳಿಗೆ ನಿಲುಕದಂತದು, ಅವನ ಪ್ರತಿಯೊಂದು ಲೀಲೆಯಲ್ಲಿಯೂ ನಾವು ಕಲಿಯಬೇಕಾದ ಜೀವನದ ಪಾಠವಿದೆ, ಏಕೆಂದರೆ ಕೃಷ್ಣ ಜನ್ಮ ತಳೆದದ್ದೆ ನಮಗೆ ಭಗವದ್ಗೀತೆಯನ್ನು ಬೋಧಿಸಲು. ಕೃಷ್ಣ "ಭಕ್ತ ವತ್ಸಲ" ಅಂದರೆ ಶರಣಾದ ಭಕ್ತನಿಗೆ ಒಲಿಯುವವನು ಎಂದು, ಕೃಷ್ಣ ಹೇಳುವಂತೆ "ಮಯಿ ಸರ್ವಮ್ ಇದಂ ಪೋತ್ರಂ ಸೂತ್ರೆ ಮಣಿ ಗಣ ಇವ" ಎಂದರೆ ಮುತ್ತುಗಳನ್ನು ದಾರದಲ್ಲಿ ಪೋಣಿಸಿರುವಂತೆ ನಾವೆಲ್ಲರೂ ಆತನ ಆಶ್ರಯದಲ್ಲಿ ಪೋಣಿಸಲ್ಪಟ್ಟಿದ್ದೇವೆ.
ಕೃಷ್ಣನನ್ನು 'ಅನೀಶ' ಎನ್ನುವರು ಎಂದರೆ ಭಕ್ತರಿಗೆ ಸಂಪೂರ್ಣವಾಗಿ ಶರಣಾಗತನಾಗುವವನು ಎಂದು, ನಿಜ ಕೃಷ್ಣ ಭಕ್ತ ಪ್ರಿಯ ಅವನಿಗೆ ಸ್ವಲ್ಪವೇ ಭಕ್ತಿ ಸಾಕು ಸುಲಭವಾಗಿ ಒಲಿಯುವನು ಆದರೆ ಆ ಭಕ್ತಿ ಹೃದಯಪೂರ್ವಕವಾಗಿರಬೇಕು, ಇದಕ್ಕೊಂದು ನಿದರ್ಶನವೆಂದರೆ ಕನಕನ ಕಿಂಡಿ, ಕನಕದಾಸರು ಭಕ್ತಿಯಿಂದ ಕರೆದಾಗ ತಾನಿದ್ದ ಜಾಗವನ್ನೇ ಬದಲಾಯಿಸಿ ಭಕ್ತನಿಗೆ ದರ್ಶನ ನೀಡಿದ ಶ್ರೀಕೃಷ್ಣ, ಅಜಮಿಳ ತಿಳಿಯದೆಯೇ ಆತನ ಮಗನ ಹೆಸರನ್ನು ಕರೆದ ಮಾತ್ರಕ್ಕೆ ಮುಕ್ತಿ ನೀಡಿದ ದಯಾಮಯಿ, ಕುಂತಿಯ ವಾತ್ಸಲ್ಯಕ್ಕೆ ಸೋತು ಮತ್ತೊಮ್ಮೆ ಮಗುವಾದ ಕರುಣಾಕರ, ಹೀಗೆ ನೀಡುತ್ತಾ ಹೋದರೆ ಹಲವಾರುಂಟು… ಒಟ್ಟಿನಲ್ಲಿ ಜಗವೆಲ್ಲ ಕೃಷ್ಣನ ಅಂಶವೇ, ಕೃಷ್ಣನೆಂದರೆ ಗೋವಿಂದ ಅದರಲ್ಲೇ ನಮ್ಮೆಲ್ಲರ ಆನಂದ.
ಕೃಷ್ಣ ಎಂದರೆ ಭಯವಿಲ್ಲ, ಕೃಷ್ಣ ಎಂದರೆ ಹುಟ್ಟು ಸಾವುಗಳ ಜಂಜಡವಿಲ್ಲ. ಪ್ರತಿಯೊಂದು ದೇಹದಲ್ಲೂ ಕೃಷ್ಣನಿರುವನು, ಅವನೇ ಪ್ರತಿಯೊಂದು ಜೀವದ ಒಡೆಯ. ನಮ್ಮ ಮನಸ್ಸನ್ನು ಕೇಂದ್ರೀಕರಿಸಿ, ನಮ್ಮ ಪ್ರೇಮವನ್ನು ಕೃಷ್ಣನಿಗೆ ಅರ್ಪಿಸುವ ಕಲೆಯೇ ಕೃಷ್ಣಪ್ರಜ್ಞೆ. ಒಟ್ಟಿನಲ್ಲಿ ತನ್ನ ಸುಪ್ತ ಪ್ರೇಮ ಪ್ರವೃತ್ತಿಯನ್ನು ಕೃಷ್ಣನಲ್ಲಿ ಇರಿಸಿದರೆ ಅಂತಹ ಮನುಷ್ಯನು ಯಶಸ್ವಿಯಾಗುತ್ತಾನೆ. ಕೃಷ್ಣನು ಒಬ್ಬ ಅಸಮಾನ್ಯ ಗುರು ನಾವೆಲ್ಲ ಅವನ ಶಿಷ್ಯರು, ಅವನು ಹೇಳಿದಂತೆ ಕೇಳುವುದಷ್ಟೆ ನಮ್ಮ ಕೆಲಸ, ನಾವೇನಾದರೂ ಅಹಂಕಾರದಿಂದ ನಮ್ಮ ಮಾರ್ಗದಲ್ಲಿ ಚಂಚಲ ಮನಸ್ಸು ಹೇಳಿದಂತೆ ಕೇಳಿದರೆ, ಚಕ್ರವಿಲ್ಲದ ಬಂಡಿಯಂತಾಗುತ್ತದೆ ಬದುಕು. ಹಾಗೇ ನಾವು ಅವನ ಮಾರ್ಗವನ್ನು ಅನುಸರಿಸಿ ನಡೆದಲ್ಲಿ ಆತ ನಮ್ಮ ಪಂಚೇಂದ್ರಿಯಗಳ ನಿಗ್ರಹಣ ಮಾಡಿ ನಮ್ಮ ಬದುಕಿನ ರಥವನ್ನು ನಿಶ್ಚಂಚಲವಾಗಿ ನಡೆಸುತ್ತಾನೆ. ಹುಟ್ಟು ಸಾವು ಎಂಬ ಬಂಧನಗಳು ಮನುಷ್ಯನಿಗೊಂದು ರೀತಿಯ, ಮನುಷ್ಯ ಎಂದರೆ ಅವನಲ್ಲಿರುವ ಆತ್ಮ, ಈ ದೇಹಕ್ಕೆ ಹುಟ್ಟು ಸಾವು ಒಂದೇ ಸಾರಿ ಎನ್ನುವುದಾದರೆ ಆತ್ಮಕ್ಕೆ ಅದು ನಿರಂತರ, ನಿಲ್ಲದೆ ಪ್ರಕ್ರಿಯೆ. ದೇಹಕ್ಕೆ ಕೊನೆಯುಂಟು ಆತ್ಮಕ್ಕೆ ಕೊನೆಯೆಂಬುದಿದ್ದರೆ ಅದು ಮೋಕ್ಷ ಮಾತ್ರದಿಂದ ಸಾಧ್ಯ. ಆ ಮೋಕ್ಷ ಬೇಕೆಂದರೆ ಈ ಆತ್ಮವು ಕೃಷ್ಣನಲ್ಲಿ ಲೀನವಾಗಬೇಕು, ಆಧ್ಯಾತ್ಮವನ್ನು ಕಾಣಬೇಕು. ಇದಕ್ಕಿರುವ ದಾರಿ ಒಂದೇ ಕೃಷ್ಣ ನಾಮ ಸ್ಮರಣೆ ಅದು ಮಾತ್ರವೇ ಮೋಕ್ಷ ನೀಡಲು ಸಾಧ್ಯ.
ಕೃಷ್ಣ ಹೇಳುವುದು ಅಷ್ಟೆ "ನನ್ನನ್ನು ನಂಬು, ನನ್ನ ನಾಮವನ್ನು ಜಪಿಸು, ನೀನು ಸೇರಬೇಕಾದ ಸ್ಥಳಕ್ಕೆ ನಾನು ಕರೆದೊಯ್ಯುತ್ತೇನೆ" ಎಂದು. ನಾವು ಈ ಭೌತಿಕ ಪ್ರಪಂಚದಲ್ಲಿ ಅನುಭವಿಸುತ್ತಿರುವ ಕಷ್ಟಗಳೆಲ್ಲ, ಪೂರ್ವ ಜನ್ಮದ ಪಾಪದ ಫಲ, ಇವುಗಳಿಂದ ಮುಕ್ತಿಯಾಗಲೂ ಇರುವ ದಾರಿಯೊಂದೆ 'ಹರಿನಾಮ ಸ್ಮರಣೆ'. ಈ ಸ್ಮರಣೆಯು ಸಹ ಸುಲಭದ ಕೆಲಸವಲ್ಲ, ಸ್ಮರಣೆಗೂ ಹರಿಯ ಪ್ರೇರಣೆ ಬೇಕು, ಬಾಯಲ್ಲಿ ನಾಮ ಸ್ಮರಿಸಿ ಕೈಯಲ್ಲಿ ಪಾಪ ಮಾಡಿದರೆ ಕೃಷ್ಣ ಒಲಿಯಲಾರ, ಮನಸ್ಸಿನಲ್ಲಿ ಕೃಷ್ಣನ ಸ್ಥಾಪಿಸಿ, ಮನಸ್ಸನ್ನು ಕೃಷ್ಣನಲ್ಲಿ ಕೇಂದ್ರೀಕರಿಸಿ, ಸತ್ಕಾರ್ಯ ಸತ್ಸಂಘಗಳೊಂದಿಗೆ ಶ್ರೀಕೃಷ್ಣನ ನೆನೆದರೆ ಮಾತ್ರ ಆತ ಒಲಿಯುತ್ತಾನೆ. ತಾಯಿ ಯಶೋದೆಗೆ ಕೃಷ್ಣನು ಯಾರೆಂಬುದು ಗೊತ್ತಿಲ್ಲ, ಗೊತ್ತಾದರೂ ಆತನನ್ನು ದೇವರೆಂದು ಪೂಜಿಸಲಿಲ್ಲ, ಆತ ಕೇವಲ ತನ್ನ ಮಗನಷ್ಟೆ ಅವನೆಂದರೆ ನನಗೆ ಪ್ರೀತಿ ಎಂದಷ್ಟೇ ಆಕೆ ತಿಳಿದಿದ್ದಳು, ಇದು ಆಕೆಯ ವಾತ್ಸಲ್ಯಮಿಳಿತ ಭಕ್ತಿ.
ಹಾಗೇ ಅರ್ಜುನನು ಕೃಷ್ಣನ ವಿಶ್ವರೂಪ ನೋಡಿದ ಮೇಲೂ, ಆತನ ಲೀಲೆಗಳು ತಿಳಿದರೂ ಆತನನ್ನು ಗೆಳೆಯನೆಂದೆ ತಿಳಿದಿದ್ದ, ಇದು ಸ್ನೇಹ ಮಿಳಿತ ಭಕ್ತಿ. ಇನ್ನು ಬಲರಾಮ ಕೃಷ್ಣನ ಅಂಶವೆ ಆತನಿಗೆ ಎಲ್ಲವೂ ತಿಳಿದಿತ್ತು ಆದರೂ ಆತ ಕೃಷ್ಣನನ್ನು ತಮ್ಮನೆಂದೆ ಪ್ರೀತಿಸುತ್ತಿದ್ದ, ಇದು ಸೋದರತೆ ಮಿಳಿತ ಭಕ್ತಿ. ರಾಧೆ ಕೃಷ್ಣನ ಅಂತರಂಗ ಲಕ್ಷ್ಮೀದೇವಿಯ ಅವತಾರ ಆದರೂ ಆಕೆ ಏನು ತಿಳಿಯದವಳಂತೆ, ಕೃಷ್ಣನ ಸಾಂಗತ್ಯಕ್ಕಾಗಿ ಹಂಬಲಿಸುತ್ತಿದ್ದಳು, ಇದು ಪ್ರೇಮ ಮಿಳಿತ ಭಕ್ತಿ. ಆದ್ದರಿಂದ ನಾವು ಹೇಗೆ ಆತನನ್ನು ಸ್ವೀಕರಿಸುತ್ತೇವೆ ಎಂಬುದು ಮುಖ್ಯವಲ್ಲ, ನಾವು ಹೇಗೆ ಅವನನ್ನು ಸ್ಮರಿಸುತ್ತೇವೆ ಎಂಬುದಷ್ಟೆ ಮುಖ್ಯ. ಇನ್ನು ಮುಕ್ತಿ ಹೊಂದುವುದೆಂದರೆ ಕೃಷ್ಣಲೋಕ ಸೇರುವುದು ಎಂದು, ಈ ಹುಟ್ಟು ಸಾವುಗಳ ತ್ಯಜಿಸಿ ಕೃಷ್ಣನಿರುವೆಡೆಗೆ ಹೋಗುವುದು, ಆ ಕೃಷ್ಣಲೋಕ ತುಂಬಾ ಸುಂದರವಂತೆ, ಅಲ್ಲಿ ಹಸಿವು ನಿದಿರೆಗಳ ದಣಿವಿಲ್ಲವಂತೆ, ಯಾವಾಗಲೂ ಮೋಹನ ಮುರಳಿಯ ರಾಗ ಕೇಳುತ್ತಾ ಮೈ ಮರೆಯಬಹುದಂತೆ, ಅಲ್ಲಿರುವರೆಲ್ಲ ಕೃಷ್ಣನ ಭಕ್ತರು, ಎಲ್ಲರ ಮುಖದಲ್ಲೂ ಕೃಷ್ಣ ವರ್ಚಸ್ಸು, ನವಿಲು, ಗಿಳಿ, ಗೋವುಗಳನ್ನು ನರ್ತನ ಹೀಗೆ ಏನೇನೊ ವಿವರಣೆ ಇದೆ ಭಾಗವತದಲ್ಲಿ ಕೃಷ್ಣಲೋಕದ ಬಗ್ಗೆ, ಈ ವೃಂದಾವನದ ಕಲ್ಪನೆಯೇ ಇಷ್ಟೊಂದು ಸುಂದರ ಎನಿಸುತ್ತದೆ ಅಲ್ಲವೆ ಹಾಗಾಗಿ ಆ ಕೃಷ್ಣನನ್ನು ಸೇರಲು ಶಾಶ್ವತವಾಗಿ ಅವನ ಮನೆಯಲ್ಲಿರಲು ನಾವೆಲ್ಲರೂ ಪ್ರತಿ ಕ್ಷಣ ಬಯಸೋಣ ಅಂದರೆ ಅವನ ನಾಮವನ್ನು ಸ್ಮರಿಸೋಣವೇ?
*****
ಜೈಹೋ