ಕೃಷ್ಣಂ ವಂದೇ ಜಗದ್ಗುರುಂ !: ಕೆ ಟಿ ಸೋಮಶೇಖರ ಹೊಳಲ್ಕೆರೆ

ರಾಮಾಯಣ ಮಹಾಭಾರತಗಳು ಭಾರತ ದೇಶದ ಮಹಾಕಾವ್ಯಗಳು, ಹಾಗೇ ಅವು ಇತಿಹಾಸ ಅಂತನೂ ಸಾಕ್ಷಸಮೇತ ಇತಿಹಾಸಕಾರರು ಹೇಳುತ್ತಿದ್ದಾರೆ. ‘ಮಹಾಭಾರತ’ ಪ್ರಪಂಚದಲ್ಲೇ ಅತಿ ದೊಡ್ಡ ಮಹಾಕಾವ್ಯ. ಇದರ ಕತೃ ವ್ಯಾಸ. ಮಹಾಭಾರತದಲ್ಲಿ ಭೀಷ್ಮ ಪರ್ವ ಬಹಳ ಮುಖ್ಯವಾದುದು. ಏಕೆಂದರೆ ಭೀಷ್ಮಪರ್ವದಲ್ಲೇ ಕುರುಕ್ಷೇತ್ರ ಯುದ್ದ ಆರಂಭವಾಗುವ ಕಥನವಿರುವುದು, ಕೃಷ್ಣಾರ್ಜುನರ ಸಂವಾದ ರೂಪದಲ್ಲಿರುವ ಭಗವದ್ಗೀತೆ ಇರುವುದು. ಅರ್ಜುನನ ವಿಷಾದ ಭಾವದಿಂದ ಆರಂಭವಾಗುವ ಭಗವದ್ಗೀತೆ ಶ್ರೀಕೃಷ್ಣ ಅರ್ಜುನನಿಗೆ ಅನುಗ್ರಹಿಸುವ ಪ್ರಸಾದದೊಂದಿಗೆ ಮುಗಿಯುತ್ತದೆ. ವೇದಗಳ ಸಾರ ಉಪನಿಷತ್ತುಗಳು, ಉಪನಿಷತ್ತುಗಳ ಸಾರಸರ್ವಸ್ವ ಭಗವದ್ಗೀತೆ ಅಂತ ಹೇಳುವರು. ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ದವನ್ನು ಸವಿವರವಾಗಿ ಸಂಜಯನು ಕುರುಡನಾದ ಧೃತರಾಷ್ಟ್ರನಿಗೆ ವಿವರಿಸುತ್ತಾನೆ. ಭಗವದ್ಗೀತೆಯೂ ಕುರುಕ್ಷೇತ್ರ ಯುದ್ದದ ಆರಂಭದಲ್ಲಿನ ಬೋಧನೆಯಾದುದರಿಂದ ಸಂಜಯ ತಾನು ವ್ಯಾಸಮುನಿ ಅನುಗ್ರಹಿಸಿದ ಅತೀಂದ್ರಿಯ ದೃಷ್ಟಿಯಿಂದ ಧೃತರಾಷ್ಟ್ರನಿಗೆ ಕೃಷ್ಣಾರ್ಜುನರ ಗೀತೆಯ ಸಂವಾದವನ್ನು ಸಹ ವಿವರಿಸಿದ.

ಕುರುಕ್ಷೇತ್ರದಲ್ಲಿ ಯುದ್ದಸನ್ನದ್ದವಾಗಿ ಎರಡೂ ಕಡೆಯ ಸೈನ್ಯ ಪರಸ್ಪರ ಎದುರಾಗಿ ನಿಂತಿದೆ. ಕೌರವರು ಯುದ್ದೋತ್ಸಾಹದಿಂದ ಶಂಖಧ್ವನಿ, ನಾನಾ ರಣ ವಾದ್ಯಗಳು ಬಾಜಿಸಿದರು. ಕೃಷ್ಣ ಅರ್ಜುನ ಸಹಿತ ಪಾಂಡವರು ತಮ್ಮ ತಮ್ಮ ವಿಶೇಷ ಶಂಖ, ನಾನಾ ರಣವಾದ್ಯಗಳ ಮಾಡಿ ಇನ್ನೇನು ಯುದ್ದಾರಂಭವಾಗಬೇಕು ಅನ್ನುವಷ್ಟರಲ್ಲಿ ಅರ್ಜುನನ ಬಯಕೆ ಮೇರೆಗೆ ಎರಡೂ ಸೈನ್ಯಗಳ ಸಡುವೆ ಕೃಷ್ಣ ರಥ ತಂದು ನಿಲ್ಲಿಸುತ್ತಾನೆ. ಅಲ್ಲಿರುವ ತಾತ, ದೊಡ್ಡಪ್ಪ, ಚಿಕ್ಕಪ್ಪ, ಅಣ್ಣ – ತಮ್ಮ , ಮಾವ, ಆಚಾರ್ಯ ಎಲ್ಲಾ ಹತ್ತಿರದ ಬಂಧುಗಳನ್ನು ಗುರು ಹಿರಿಯರನ್ನು ನೋಡಿ ತುಂಡು ಭೂಮಿಗಾಗಿ ಸ್ವಂತ ಬಂಧು – ಬಳಗವನ್ನು ಕೊಲ್ಲಬೇಕೆ? ಅದು ಕುಲ ಕ್ಷಯ! ಮಹಾಪಾಪ! ಅದರಿಂದ ನರಕ ಪ್ರಾಪ್ತಿ! ಇವರನ್ನು ಕೊಲ್ಲುವ ಕರ್ಮದಿಂದ ಮೂರು ಲೋಕಗಳು ಲಭಿಸುತ್ತವೆಂದರೂ ಬೇಡ! ಶಸ್ತ್ರಹೀನನಾದ, ಪ್ರತೀಕಾರ ಮಾಡದ ನನ್ನನ್ನು ಶಸ್ತ್ರಧಾರಿಗಳಾದ ಧೃತರಾಷ್ಟ್ರ ಪುತ್ರರು ಯುದ್ದದಲ್ಲಿ ಸಂಹಾರ ಮಾಡಲಿ. ಆ ಸಾವು ನನಗೆ ಅತ್ಯಂತ ಶ್ರೇಯಸ್ಕರವಾದೀತು ಎಂದು ಅರ್ಜುನ ಶಸ್ತ್ರ ಕೆಳಗಿಟ್ಟು ರಥದ ಹಿಂದೆ ಹೋಗಿ ಕುಳಿತುಕೊಳ್ಳುತ್ತಾನೆ. ಆಗ ಅರ್ಜುನನನ್ನು ಯುದ್ದಸನ್ನದ್ದನ ಮಾಡಲು ಶ್ರೀ ಕೃಷ್ಣ ಹದಿನೆಂಟು ಅಧ್ಯಾಯದಲ್ಲಿ ಕಾವ್ಯದೋಪಾದಿಯಲ್ಲಿ ವಿಸ್ತಾರವಾಗಿರುವ ಗೀತೆಯನ್ನು ಬೋಧಿಸುತ್ತಾನೆ. ಪುರುಷೋತ್ತಮನಾದ ಶ್ರೀಕೃಷ್ಣನು ಪಾರ್ಥನಾದ ಅರ್ಜುನನಿಗೆ ಯುದ್ದ ಮಧ್ಯದಲ್ಲಿ ಉಪದೇಶಿಸಿದ ಈ ಪುಣ್ಯವಾಣಿಯನ್ನೇ ಮಹರ್ಷಿವ್ಯಾಸ ‘ ಭಗವದ್ಗೀತೆ ‘ ಎಂದು ಕರೆದಿದ್ದಾನೆ. ಇಲ್ಲಿ ಕೆಲವು ಪ್ರಶ್ನೆಗಳು ಹುಟ್ಟಲು ಅವಕಾಶವಾಗಿದೆ. ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಗೀತೆ ಬೋಧಿಸುವಾಗ ಯುದ್ದೋತ್ಸಾವದಲ್ಲಿದ್ದ ಎರಡೂ ಸೈನ್ಯ ಏನು ಮಾಡುತಿತ್ತು? ಅದರಲ್ಲೂ ಕೌರವರ ಸೈನ್ಯ ಏನು ಮಾಡುತಿತ್ತು? ಅದೂ ಗೀತೆಯ ಆಲಿಸುತಿತ್ತೇ? ಗೀತೆಯನ್ನು ಅರ್ಜುನನಿಗೆ ಬೋಧಿಸಿ ಯುದ್ಧಸನ್ನದ್ದನ ಮಾಡಲಿ ಆಮೇಲೆ ಯುದ್ದ ಮಾಡೋಣವೆಂದು ಕಾಯುತಿತ್ತೇ? ಹದಿನೆಂಟು ಅಧ್ಯಾಯದಲ್ಲಿ ವಿಸ್ತರಿಸಿರುವ ಗೀತೆಯನ್ನು ಎಷ್ಟು ದಿನ ಭಗವಂತ ಬೋಧಿಸಿದ? ಮುಂತಾದ ಪ್ರಶ್ನೆಗಳು ಕಾಡುತ್ತವೆ! ಇದಕ್ಕೆ ಒಬ್ಬೊಬ್ಬರು ಒಂದೊಂದು ರೀತಿ ಉತ್ತರ ಕಂಡುಕೊಡು ಸಮಾಧಾನ ಮಾಡಿಕೊಂಡಿದ್ದಾರೆ. ಅವನು ಪರಮಾತ್ಮನಾದುದರಿಂದಾಗಿ ಕೆಲವೇ ಕ್ಷಣದಲ್ಲಿ ಅದನ್ನು ಬೋಧಿಸಿರಬಹುದು ಎಂದು ಭಾವಿಸುವುದು ಹೆಚ್ಚು ತೃಪ್ತಿ ನೀಡಬಹುದು, ಸಮಾಧಾನದ ಉತ್ತರವಾಗಬಹುದು. ಆದರೂ ಅಷ್ಟು ಸುಧೀರ್ಘವಾದ ಭಗವದ್ಗೀತೆಯನ್ನು ಯುದ್ಧ ಭೂಮಿಯಲ್ಲಿ ಹೇಗೆ ಬೋಧಿಸಿದ ಎಂಬ ಪ್ರಶ್ನೆ ಕಾಡದೆ ಬಿಡುವುದಿಲ್ಲ! ಕೆಲವರು ಇದಕ್ಕೆ ಹೆಚ್ಚು ಒತ್ತು ಕೊಡುತ್ತಾರೆ.

ಮಹಾಭಾರತವೇ ಒಂದು ಮಹಾನ್ ಕಾವ್ಯ! ಇದರಲ್ಲಿ ಹದಿನೆಂಟು ಪರ್ವಗಳಿವೆ. ಅದರಲ್ಲಿನ ಭಗವದ್ಗೀತೆ ಹದಿನೆಂಟು ಅಧ್ಯಾಯಗಳನ್ನು ಹೊಂದಿ ಒಂದು ಪುಟ್ಟ ಕಾವ್ಯದಂತೆ ಗೋಚರಿಸುತ್ತದೆ. ಮಹಾಭಾರತದಲ್ಲಿ ಇದರ ಸಾರ ಮಾತ್ರ ಕೆಲವೇ ಸಾಲುಗಳಲ್ಲಿದೆ. ವಿಶ್ವರೂಪ ತೋರಿ ಕೆಲವೇ ಮಾತುಗಳಲ್ಲಿ ಯುದ್ದಕ್ಕೆ ಸಿದ್ದಗೊಳಿಸುತ್ತಾನೆ. ಹೀಗೆ ಮುಗಿದು ಹೋಗುವ ಈ ಭಾಗ ಭಗವದ್ಗೀತೆಯ ರೂಪು ತಾಳಿ ಪ್ರತ್ಯೇಕ ಕೃತಿಯಾಗಿ ಬೆಳೆದು ಆ ಅಮೂಲ್ಯ ಜ್ಞಾನವ ಸವಿವರವಾಗಿ ವಿವರಿಸುತ್ತದೆ. ಇದರಿಂದಾಗಿ ಅನೇಕ ಪ್ರಶ್ನೆಗಳು ಹುಟ್ಟಿವೆ. ಈ ಕೃತಿ ಪ್ರತ್ಯೇಕವಾಗಿರುವುದರಿಂದ ಇದು ಸಹ ಮಹಾಭಾರತದಂತೆ ವ್ಯಾಸ ರಚನೆಯೇ? ಇದರ ಕಾಲ ಯಾವುದು? ಎರಡರ ಕಾಲನೂ ಒಂದೆನಾ? ಎಂಬ ಪ್ರಶ್ನೆಗಳು ಎದ್ದರೂ ಸಾಮಾನ್ಯವಾಗಿ ಸಮಕಾಲೀನ ಕೃತಿ ಎಂದು ಕೆಲವರು ಹೇಳುವುದು ಸರಿಯೆನ್ನಬಹುದು.

ದೇಹ ಹೇಗೆ ಉಡುಪುಗಳ ಬದಲಿಸುತ್ತದೋ ಹಾಗೆ ಆತ್ಮ ದೇಹಗಳ ಬದಲಿಸುತ್ತದಾಗಲಿ ಆತ್ಮ ನಾಶ ಹೊಂದದು! ಅದು ಅವಿನಾಶಿ! ದೇಹ ನಾಶಿ! ಇಲ್ಲದ್ದು ಇರಲಾರದು, ಇದ್ದದ್ದು ನಾಶವಾಗದು. ಇವರೆಲ್ಲ ಈಗ ಇದ್ದಾರೆ ಹಿಂದೆಯೂ ಇದ್ದರು ಮುಂದೆಯು ಇರುವರು. ನೀನು ಇವರ ದೇಹವನ್ನು ನಾಶ ಮಾಡಬಹುದೇ ವಿನಃ ಆತ್ಮವನ್ನಲ್ಲ! ಆತ್ಮವನ್ನು ಯಾವ ಆಯ್ದದಿಂದಲೂ ನಾಶ ಮಾಡಲಾಗದು. ನೀನು ಅವರ ದೇಹವನ್ನು ಇಲ್ಲವಾಗಿಸಿದರೆ ನಿನ್ನ ಬಂಧು ಬಳಗ ಗೆಳೆಯರನ್ನು ಹೇಗೆ ನಾಶಮಾಡಿದಂತಾಯಿತು? ದೇಹವನ್ನು ನೀನು ನಾಶ ಮಾಡಿದರೂ ಮಾಡದಿದ್ದರೂ ಅದು ನಾಶವಾಗುವಂತಹದ್ದು, ಅದು ಯಾರೂ ನಾಶ ಮಾಡದಿದ್ದರೂ ತನ್ನಷ್ಟಕ್ಕೆ ತಾನು ನಾಶವಾದೇ ಆಗುತ್ತದೆ. ನಾಶವಾಗುವುದರ ಕುರಿತು ಸುಮ್ಮನೆ ದುಃಖೀಸಬೇಡ. ನಾಶವಾಗುವುದು ದೇಹದ ಧರ್ಮ. ಆದ್ದರಿಂದ ನೀನು ಯುದ್ದ ಮಾಡು. ಅವರನ್ನು ಕೊಲ್ಲು! ಏನೂ ಮಾಡದಿರುವುದಕ್ಕಿಂತ ಏನಾದರೂ ಮಾಡುವುದು ಉತ್ತಮ. ಕರ್ಮ ಮಾಡಲು ಅಧಿಕಾರವಿದೆಯೇ ಹೊರತು ಅದರ ಫಲದ ಮೇಲೆ ನಿನಗೆ ಅಧಿಕಾರವಿಲ್ಲ! ನರಕ ಪ್ರಾಪ್ತವಾಗುತ್ತದೆಂಬ ಫಲದ ಬಗ್ಗೆ ಚಿಂತಿಸಿ ದುಃಖಿಸದಿರು. ಯುದ್ದ ನಿನ್ನ ಕರ್ಮ! ಅದನ್ನು ಮಾಡುವುದು ಕ್ಷತ್ರಿಯರ ಧರ್ಮ! ಫಲಾಫಲಗಳ ಬಗ್ಗೆ ವೃಥಾ ಚಿಂತಿಸದೆ ಕ್ಷತ್ರಿಯರ ಧರ್ಮವೂ ಕರ್ಮವೂ ಆದ ಯುದ್ದ ಮಾಡು ಎಂದು ಕೊಟ್ಟ ಕೊನೆಯ ಸತ್ಯವ ಬೋಧಿಸಿದ. ಭಗವದ್ಗೀತೆ ” ಧರ್ಮಕ್ಷೇತ್ರೇ ಕುರುಕ್ಷೇತ್ರೇ ” ಎಂದು ಆರಂಭವಾಗುತ್ತದೆ. ಕುರುಕ್ಷೇತ್ರವೆಂಬ ಶಬ್ದಕ್ಕೆ ಕರ್ಮ ಕ್ಷೇತ್ರ ಎಂದು ಅರ್ಥ. ಏಕೆಂದರೆ ಅಲ್ಲಿ ಯುದ್ದ ಎಂಬ ಕರ್ಮ ಮಾಡಲಾಗುತ್ತದೆ. ಆದ್ದರಿಂದ ಕುರುಕ್ಷೇತ್ರವೇ ಕರ್ಮಕ್ಷೇತ್ರ, ಕರ್ಮಕ್ಷೇತ್ರವೇ ಧರ್ಮ ಕ್ಷೇತ್ರ. ಏಕೆಂದರೆ ಕ್ಷತ್ರಿಯರು ಮಾಡುವುದು ಧರ್ಮ ಯುದ್ದ! ಯುದ್ದ ಕ್ಷತ್ರಿಯರ ಧರ್ಮ ಸಹ. ಹೀಗೆ ಧರ್ಮ ಕರ್ಮಗಳನ್ನು ಸಮನ್ವಯಿಸಿ ಸೂತ್ರೀಕರಿಸಿದ್ದಾರೆ. ಭಕ್ತಿ ಎಂದರೆ ಭಗವಂತನನ್ನು ಬೇಡುವುದಲ್ಲ, ಭಗವಂತನಲ್ಲಿ ಕೂಡುವುದು. ಭಕ್ತಿಯ ಸ್ಥಾನ ಹೃದಯ, ಕರ್ಮದ ಸ್ಥಾನ ಶರೀರ, ಜ್ಞಾನದ ಸ್ಥಾನ ಆತ್ಮ ಹೀಗೆ ಶ್ರೀಕೃಷ್ಣ ಭಗವಂತ ಭಕ್ತಿ ಜ್ಞಾನ, ಕರ್ಮಗಳನ್ನು ಸಮನ್ವಯಿಸುತ್ತಾನೆ.

ಭಗವದ್ಗೀತೆಯಲ್ಲಿರುವ ಸಾರವನ್ನು ಎಲ್ಲಾ ಧರ್ಮದ ಜಗದ್ಗುರುಗಳು, ತತ್ವಜ್ಞಾನಿಗಳು, ವಿಜ್ಞಾನಿಗಳು, ಆಧ್ಯಾತ್ಮ ಚಿಂತಕರು, ವಿದೇಶೀಯ ಆಧ್ಯಾತ್ಮ ಚಿಂತಕರು, ಅಂತಿಮ ಜ್ಞಾನ, ಅಂತಿಮ ಸತ್ಯ ಎಂದು ಒಪ್ಪಿರುವುದು ಭಾರತೀಯರಿಗೆ, ಭಾರತೀಯ ಆಧ್ಯಾತ್ಮ ಚಿಂತನೆಗೆ ಸಂದ ಗೌರವ! ಪ್ರಯುಕ್ತ ಭಗವದ್ಗೀತೆ ಭಾರತೀಯರ ಹೆಮ್ಮೆ! ಕೃಷ್ಣನನ್ನು ಪುರುಷೋತ್ತಮ ಎಂದರೂ ಅವನು ಭಗವಂತನ ಅವತಾರಿ! ಶ್ರೀಕೃಷ್ಣನು ಪುರಾಣ ಪುರುಷನೂ ಹೌದು. ಐತಿಹಾಸಿಕ ಪುರುಷನೂ ಹೌದು. ಹರಿವಂಶಾಧಿಗಳಲ್ಲಿ ಶ್ರೀಕೃಷ್ಣನ ವಂಶಾವಳಿ ಉಲ್ಲೇಖವಿದೆ. ಭಗವದ್ಗೀತೆ ಗೇಯಾಂಶದಿಂದಿರುವ ಕೃಷ್ಣಾರ್ಜುನರ ನಡುವಿನ ಮಾತಿನ ರೂಪವನ್ನು, ಭಗವಂತನ ಬೋಧನೆಯನ್ನು ಭಗವದ್ಗೀತೆ ಎಂದು ಕರೆದಿರುವುದು ಸೂಕ್ತ! ಆತ್ಮಸಿದ್ದಿಯ ಜ್ಞಾನವಾದ ಭಗವದ್ಗೀತೆಯನ್ನು ಶ್ರೀಕೃಷ್ಣ ಅರ್ಜುನನಿಗೆ ಬೋಧಿಸುವುದು ನಿಜವಾದರೂ ಅರ್ಜುನ ವಿಶ್ವದ ಎಲ್ಲಾ ಜನರ ಸಂಕೇತ ಎಂಬುದನ್ನು ಅರಿಯಬೇಕು! ಅರ್ಜುನ ಮತ್ತೆ ಮತ್ತೆ ನಿಸ್ಸಹಾಯಕನಾಗಿ ಭಗವಂತನನ್ನು ಆಶ್ರಯಿಸುವುದನ್ನು ಮೊದಲನೇ ಅಧ್ಯಾಯ ಪೂರ್ತಿ ನೋಡಿದರೂ ಎಲ್ಲಾ ಅಧ್ಯಾಯದಲ್ಲೂ ಒಂದೊಂದೇ ಅಸಹಾಯಕತೆಯನ್ನು ಹೊರಗೆಡಹಿ ಪರಿಹಾರ ಕಾಣುತ್ತಾ ಹೋಗುತ್ತಾನೆ. ಜಗತ್ತಿನಲ್ಲಿ ಸ್ಥೂಲವಾಗಿ ಮೂರು ಹಂತದ ಜನರಿರುವುದು ಸಾಮಾನ್ಯ. ದಡ್ಡ, ಸಾಮಾನ್ಯಮಾನವ, ಬುದ್ದಿವಂತ ಅಂತ ತಿಳಿದರೆ ಅವರೆಲ್ಲರಿಗೂ ಮಹತ್ವದ ಆತ್ಮವಿದ್ಯೆ ಅರ್ಥವಾಗಲಿ ಎಂದು ವಿವರಿಸಲು ಒಂದು ಭಗವದ್ಗೀತೆಯಷ್ಟು ಮಾತುಗಳ ಆಡಿದ್ದಾನೆ. ಅಂದರೆ ಹದಿನೆಂಟು ಅಧ್ಯಾಯದಷ್ಟು ವಿಸ್ತಾರವಾದ ವಿವರಣೆ ನೀಡಿದ್ದಾನೆ! ಹೀಗೆ ಆ ನಿತ್ಯ ಸತ್ಯವನ್ನು ಆತ್ಮವಿದ್ಯೆಯನ್ನು ನಿಜವಾಗಿ ಅರ್ಜುನನಿಗೆ ಬೋಧಿಸಿದರೂ ಅರ್ಜುನನು ಜಗತ್ತಿನ ಎಲ್ಲಾ ಬುದ್ದಿಮತ್ತೆಯ ಎಲ್ಲಾ ಅಂತದ ಜನರ ಸಂಕೇತವಾಗಿರುವುದರಿಂದ ಇಡೀ ಜಗತ್ತಿನ ಆ ಮೂರೂ ಅಂತದ ಜನರಿಗೆ ಬೋಧಿಸಿದ್ದಾನೆ ಎಂದು ತಿಳಿಯಬೇಕು ವಿನಃ ಅರ್ಜುನನಿಗಷ್ಟೇ ಎಂದು ತಿಳಿಯಬಾರದು! ಅದಕ್ಕೆ ಭಗವದ್ಗೀತೆ ಅಷ್ಟು ವಿಸ್ತಾರವಾಗಿದೆ. ಕೃಷ್ಣ ಬೋಧಿಸಿದ ಈ ಜ್ಞಾನವನ್ನು ಕೊಟ್ಟ ಕೊನೆಯ ಜ್ಞಾನ ಎಂದು ಜಗತ್ತಿನ ಎಲ್ಲಾ ಜ್ಞಾನಿಗಳು ಒಪ್ಪಿರುವುದರಿಂದ, ಅರ್ಜುನ ಜಗತ್ತಿನ ಸಂಕೇತವಾದುದರಿಂದ ಅವನಿಗೆ ಬೋಧಿಸುವ ಮೂಲಕ ಜಗತ್ತಿಗೆ ಬೋಧಿಸಿರುವುದರಿಂದ ‘ ಕೃಷ್ಣಂ ವಂದೇ ಜಗದ್ಗುರುಂ ‘ ಆಗಿರುವುದು ಸತ್ಯಸ್ಯಸತ್ಯ.

* ಕೆ ಟಿ ಸೋಮಶೇಖರ ಹೊಳಲ್ಕೆರೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x