ಕೃತಕ ಮಾಂಸ-ಎಲೆ ಮತ್ತು ವಿಶ್ವಬ್ಯಾಂಕ್ ಎಂಬ ವಿಷಜಾಲ: ಅಖಿಲೇಶ್ ಚಿಪ್ಪಳಿ ಅಂಕಣ

ಮೊನ್ನೆ ಅಂದರೆ ಅಗಸ್ಟ್ ೩ ೨೦೧೪ರಂದು ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿ ನೆರೆ ದೇಶವಾದ ನೇಪಾಳಕ್ಕೆ ಭೇಟಿ ನೀಡಿದ್ದರು. ಕಳೆದ ೧೭ ವರ್ಷಗಳಿಂದ ಯಾವುದೇ ಭಾರತದ ಪ್ರಧಾನಿ ಅಲ್ಲಿಗೆ ಭೇಟಿ ನೀಡಿರಲಿಲ್ಲ. ನೇಪಾಳದ ಪ್ರಸಿದ್ಧ ಪಶುಪತಿನಾಥ ದೇವಾಲಯಕ್ಕೆ ರುದ್ರಾಕ್ಷಿ ಸರ ತೊಟ್ಟು ಕೊಂಡು ಭೇಟಿ ನೀಡಿದ ಸಮಯದಲ್ಲೇ ಇತ್ತ ರಾಜ್ಯ ಮಟ್ಟದ ಪತ್ರಿಕೆಯಲ್ಲಿ ರುದ್ರಾಕ್ಷಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ವರದಿ ಮಾಡಿತ್ತು. ನೆರೆಯ ಚೀನಾದ ಮಂದಿ ಕಾರಿನ ಸೀಟು ಕವರ್‌ಗಳಿಗೆ ರುದ್ರಾಕ್ಷಿಯನ್ನು ಬಳಸುತ್ತಿದೆ ಎಂದು ಹೇಳಿತ್ತು. ಇದೇ ಸಮಯದಲ್ಲಿ ಅದೇ ದೇವಾಲಯಕ್ಕೆ ೨.೫ ಕ್ವಿಂಟಾಲ್ ಶ್ರೀಗಂಧವನ್ನು ದಾನ ನೀಡಿದರು ಹಾಗೂ ದೇವಸ್ಥಾನದ ಅಭಿವೃದ್ದಿಗಾಗಿ ೨೫ ಕೋಟಿ ರೂಪಾಯಿಗಳನ್ನು ನೆರವು ರೂಪದಲ್ಲಿ ನೀಡಲಾಗುವುದು ಎಂಬ ಭರವಸೆಯೂ ಭಾರತ ನೇಪಾಳಕ್ಕೆ ನೀಡಿದೆ. ಇತ್ತ ಗಂಧದ ಬೀಡಾದ ಕರ್ನಾಟಕದ ಗಂಧ ಕೆತ್ತನೆಕಾರರು ಹಲವು ವರ್ಷಗಳಿಂದ ಗಂಧವಿಲ್ಲದೆ, ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದಾರೆ. ಕರ್ನಾಟಕದಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿದ್ದ ಗಂಧ ಕಳ್ಳ-ಕಾಕರಿಂದಾಗಿ ಸರ್ವನಾಶವಾಗಿದೆ. ರುದ್ರಾಕ್ಷಿಗೆ ಬೇಡಿಕೆ ಹೆಚ್ಚಾಗಿ ರುದ್ರಾಕ್ಷಿಯು ಗಂಧದ ಹಾದಿ ಹಿಡಿದರೆ ಆಶ್ಚರ್ಯವೇನಿಲ್ಲ.

ಅಲ್ಲದೆ ದೇಶ-ದೇಶಗಳ ನಡುವಿನ ಸೌಹಾರ್ಧಯುತ ಸಂಬಂಧಕ್ಕಾಗಿ ಹಲವು ಕೋಟಿಗಳ ವಿನಿಮಯವಾಗಲಿದೆ. ಭಾರತದ ವಿದ್ಯುತ್ ಹಸಿವಿಗೆ ಅತ್ತ ನೇಪಾಳ ಬಲಿಯಾಗಲಿದೆ. ಅಲ್ಲಿ ಜಲ ವಿದ್ಯುತ್ ಯೋಜನೆಗಳನ್ನು ಪ್ರೋತ್ಸಾಹಿಸಲು ಭಾರತ ೧ ಬಿಲಿಯನ್ ರೂಪಾಯಿಗಳ ಎಲ್.ಓ.ಸಿ. ನೀಡಲಿದೆಯೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಅತ್ತ ಚೀನಾ ತನ್ನ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ನೇಪಾಳದಲ್ಲಿ ತನ್ನ ಉದ್ದಿಮೆಗಳನ್ನು ಪ್ರಾರಂಭಿಸುವ ಭರದಲ್ಲಿದೆ. ಇತ್ತ ಪರೋಕ್ಷ ಸವಾಲು ಎನ್ನುವ ರೀತಿಯಲ್ಲಿ ಭಾರತವೂ ಕೂಡ ನೇಪಾಳವನ್ನು ತನ್ನ ಹಿಡಿತದಲ್ಲಿಡಲು ಕಾಯುತ್ತಿದೆ. ಚಿಕ್ಕ ದೇಶವಾದ ನೇಪಾಳ ಕಲ್ಲಪ-ಗುಂಡಪ್ಪರ ನಡುವೆ ಸಿಕ್ಕಿದ ಮೆಣಸಪ್ಪನ ಸ್ಥಿತಿಯಲ್ಲಿದೆ. ದೇಶ-ದೇಶಗಳ ರಾಜತಾಂತ್ರಿಕ ನಡೆಗಳು ಏನೇ ಇರಲಿ, ನೈಸರ್ಗಿಕವಾಗಿ ಸಂಪದ್ಭರಿತ ದೇಶವಾಗಿಯೂ ನೇಪಾಳ ಇಷ್ಟು ಹಿಂದೆ ಉಳಿಯಲಿಕ್ಕೆ ಇಷ್ಟು ವರ್ಷ ಅಲ್ಲಿ ಆಳಿದ ರಾಜರುಗಳೇ ಕಾರಣ ಎನ್ನಬಹುದು. ಜಗತ್ತಿನಲ್ಲಿ ನೇಪಾಳಕ್ಕಿಂತಲೂ ಚಿಕ್ಕ ದೇಶಗಳಿವೆ. ಅವು ತಮ್ಮ ಸ್ವಾಭಿಮಾನವನ್ನು ಉಳಿಸಿಕೊಂಡು ಸ್ವತಂತ್ರವಾಗಿ ನಿಲ್ಲಬಲ್ಲ ಶಕ್ತಿ ಹೊಂದಿವೆ. 

೧೯೮೦ರಲ್ಲಿ ಆಗಿನ ಪ್ರಧಾನಿ ರಾಜೀವ್‌ಗಾಂಧಿ ತನ್ನ ಪತ್ನಿ ಸೋನಿಯಾಗಾಂಧಿಯವರ ಜೊತೆ ನೇಪಾಳಕ್ಕೆ ತೆರಳಿದ್ದರು. ಆಗ ಅಲ್ಲಿನ ಆಡಳಿತ ಸೋನಿಯಾ ಗಾಂಧಿಯನ್ನು ಪಶುಪತಿ ದೇವಾಸ್ಥಾನಕ್ಕೆ ಹಿಂದೂಗಳ ಹೊರತಾಗಿ ಬೇರೆಯವರಿಗೆ ಪ್ರವೇಶವಿಲ್ಲ ಎಂಬ ಕಾರಣ ನೀಡಿ ಪ್ರವೇಶ ನಿರಾಕರಿಸಿದ್ದರು. ರಾಜೀವ್ ಗಾಂಧಿ ಮತ್ತು ಅದರ ನಂತರ ಆಳಿದ ಕಾಂಗ್ರೇಸ್ ಪಕ್ಷ ಇನ್ನೂ ಇದನ್ನು ನೆನಪಿನಲ್ಲಿಟ್ಟುಕೊಂಡು ನೇಪಾಳದೊಂದಿಗೆ ತನ್ನ ಎಲ್ಲಾ ಆತ್ಮೀಯ ಸಂಬಂಧವನ್ನು ಕಡಿದುಕೊಂಡಿತು ಎಂದು ಅಲ್ಲಿನ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ. ಇದೇ ಅವಕಾಶವನ್ನು ಚೀನಾ ತನಗೆ ಅನುಕೂಲಕರವಾಗುವಂತೆ ಪರಿವರ್ತಿಸಿಕೊಂಡಿತು. 

ನೇಪಾಳದ ಉತ್ತರ ದಿಕ್ಕಿಗೆ ಚೀನಾ ದೇಶ ಇನ್ನುಳಿದ ಮೂರು ದಿಕ್ಕುಗಳಲ್ಲಿ ಭಾರತ. ಹಿಮಾಲಯದ ತಪ್ಪಲಿನಲ್ಲಿರುವ ನೇಪಾಳದ ಬಹು ಹೆಚ್ಚು ಪ್ರದೇಶ ಗುಡ್ಡಗಾಡುಗಳಿಂದ ಕೂಡಿದೆ. ಇಲ್ಲಿನ ಮುಖ್ಯ ಕಸುಬು ಕೃಷಿಯಾದರೂ, ಕರಕುಶಲ ವಸ್ತುಗಳು ಹಾಗೂ ಪ್ರವಾಸೋಧ್ಯಮ ಇತರೆ ಆದಾಯ ತರುವ ಕ್ಷೇತ್ರಗಳಾಗಿವೆ. ಇಲ್ಲಿನ ಗುಡ್ಡಗಾಡುಗಳಲ್ಲಿ ಮುಳ್ಳುಕಂಟಿ (seಚಿ buಛಿಞಣhoಡಿಟಿ) ಗಿಡಗಳಿವೆ. ನಮ್ಮಲ್ಲಿ ಬೇಲ ಎಂದು ಕರೆಯಲಾಗುವ ತರಹದ ಹಣ್ಣೊಂದು ಇಷ್ಟು ವರ್ಷ ಅವಗಣನೆಗೊಳಗಾಗಿತ್ತು. ಬೆಟ್ಟ-ಗುಡ್ಡಗಳಿಂದ ಕೂಡಿದ ದೇಶವಾದರೂ, ಹಲವು ನದಿಗಳಿದ್ದರೂ, ನೇಪಾಳಿಯರಿಗೆ ಉರುವಲು ಎಂದರೆ ಸೌದೆ. ಸಗಣಿಯಿಂದ ಮಾಡಿದ ಬೆರೆಣಿ ಇತ್ಯಾದಿಗಳು. ಉರುವಲಿಗಾಗಿ ಈ ಬೇಲದ ಗಿಡಗಳ ನಾಶ ಅವ್ಯಾಹತವಾಗಿ ನಡೆದಿತ್ತು. ಈ ಮುಳ್ಳುಕಂಟಿ ಗಿಡಗಳು ಹೆಚ್ಚು ಮಳೆ ಬೀಳುವ ಗುಡ್ಡಗಾಡು ಪ್ರದೇಶಗಳ ಮಣ್ಣು ತೊಳೆದು ಹೋಗದ ತಡೆಹಿಡಿಯುತ್ತವೆ. ಆದರೆ ಜನರಿಗೆ ಬೇಕಾದ ಉರುವಲನ್ನು ಕೂಡ ಇದರಿಂದಲೇ ಪಡೆಯಬೇಕಾದ ಅನಿವಾರ್ಯವಿದೆ. ಈ ಮುಳ್ಳುಕಂಟಿಗಳಲ್ಲಿ ನಮ್ಮಲ್ಲಿ ದ್ಯಾವಣಿಗೆ ಹಣ್ಣುಗಳ ಬಣ್ಣವನ್ನು ಹೋಲುವ ಬೆಟ್ಟದ ನೆಲ್ಲಿಕಾಯಿಗಿಂತ ಸ್ವಲ್ಪ ದೊಡ್ಡದಾದ ಹಣ್ಣು ಬಿಡುತ್ತವೆ. ಇವುಗಳನ್ನು ಪಕ್ಷಿಗಳು ತಿನ್ನುತ್ತವೆ. ಇಲ್ಲಿನ ಸಾಂಪ್ರದಾಯಿಕ ಚಿಕಿತ್ಸೆಯಲ್ಲಿ ಔಷಧವಾಗಿ ಈ ಹಣ್ಣನ್ನು ಬಳಸುವುದನ್ನು ಬಿಟ್ಟರೆ ಇದರಿಂದ ಇನ್ನು ಯಾವ ತರಹದ ವ್ಯಾವಹಾರಿಕ ಲಾಭವೂ ಇರಲಿಲ್ಲ. ಆಲ್ಟ್ರರ್‌ನೇಟಿವ್ ಹರ್ಬಲ್ ಎಂಬ ಕಂಪನಿಯವರು ಇದರಿಂದ ಜ್ಯೂಸ್ ಮಾಡಬಹುದು ಎಂಬುದನ್ನು ತೋರಿಸಿದರು. ಕಳಿತ ಹಣ್ಣುಗಳನ್ನು ಸ್ಥಳೀಯರಿಂದ ಸಂಗ್ರಹಿಸಿ, ಅವರಿಂದಲೇ ಹಣ್ಣಿನ ರಸವನ್ನು ಬೇರ್ಪಡಿಸಿ ಕೊಡುವ ಕೆಲಸವನ್ನು ಮಾಡಿದರು. ಹಣ್ಣಿನ ರಸ ಅತ್ಯುತ್ತಮ ಸ್ವಾದಿಷ್ಟ ತಂಪು ಪಾನೀಯ ಎಂದು ಹೆಸರು ಪಡೆಯಿತು. ಅಲ್ಲಿನ ಜನರಿಗೆ ಕೆಲಸವಾಯಿತು. ಆದಾಯವೂ ಲಭಿಸಿತು. ಈಗ ಬೇಕಾಬಿಟ್ಟಿಯಾಗಿ ಈ ಮುಳ್ಳಕಂಟಿಯ ಗಿಡವನ್ನು ಅಲ್ಲಿಯ ಜನ ಕಡಿಯುತ್ತಿಲ್ಲ. ಅಂದರೆ ಜೀವಂತ ಗಿಡ ಅವರಿಗೆ ಆದಾಯದ ಮೂಲ. ಅಲ್ಲದೆ ನೈಸರ್ಗಿಕವಾಗಿ ಸಮೃದ್ಧವಾಗಿ ಬೆಳೆಯುವ ಈ ಗಿಡಗಳಲ್ಲಿ ಹೆಚ್ಚು-ಹೆಚ್ಚು ಹಣ್ಣು ಇರುತ್ತವೆ. ಗಿಡದ ತುಂಬಾ ಮುಳ್ಳು ಇರುವುದರಿಂದ ಕೊಯ್ಯುವುದು ತುಸು ಕಷ್ಟ. ಅದಕ್ಕಾಗಿ ಒಂದು ಉಪಾಯವೆಂದರೆ, ದೋಟಿಯಿಂದ ಗಿಡವನ್ನು ಗಲ-ಗಲ ಅಲುಗಿಸಿದರೆ ಆಯಿತು. ಕೆಳಗೊಂದು ಅಗಲದ ಗೋಣಿಯನ್ನು ಹಾಸಿಕೊಂಡರೆ,  ಹತ್ತು ನಿಮಿಷದಲ್ಲೇ ಒಂದು ಕೆ.ಜಿಯಷ್ಟು ಹಣ್ಣನ್ನು ಸಂಗ್ರಹಿಸಬಹುದು. ಕೆ.ಜಿಗೆ ೬ ರೂಪಾಯಿ ಮೌಲ್ಯವಿದೆ. ಪೆಪ್ಸಿ-ಕೋಲಗಳನ್ನು ಹಿಂದಿಕ್ಕಿ ಇದು ಜನಪ್ರಿಯವಾಯಿತು. ಆಲ್ಟ್ರರ್‌ನೇಟಿವ್ ಹರ್ಬಲ್ ಕಂಪನಿಯವರು ಇದೀಗ ತಿಂಗಳಿಗೆ ೨೦ ಸಾವಿರ ಬೇಲದ ಹಣ್ಣಿನ ರಸದ ಬಾಟಲಿಗಳನ್ನು ಮಾರುತ್ತಾರೆ. ನಮ್ಮಲಿರುವಂತೆ ಅಲ್ಲೂ ಕೂಡ ಗ್ರಾಮ ಅರಣ್ಯ ಸಮಿತಿಗಳಂತಹ ಸಮಿತಿಗಳಿವೆ. ಲಾಭಾಂಶದ ಒಂದು ಪಾಲು ಈ ಸಮಿತಿಗಳಿಗೂ ದಕ್ಕುತ್ತದೆ. ಈ ಹಣದಿಂದ ಸಾರ್ವಜನಿಕ ಕೆಲಸಗಳನ್ನೂ ಮಾಡಬಹುದಾಗಿದೆ. ಹೇಳಿ-ಕೇಳಿ ಪ್ರಪಂಚದ ಅತಿ ಜನಪ್ರಿಯ ಶಿವನ ಸ್ಥಾನ ನೇಪಾಳ. ನಮ್ಮಲ್ಲೂ ಶಿವರಾತ್ರಿಯ ಪೂಜೆಗೆ ಬಿಲ್ವಪತ್ರೆ ಬೇಕೇ ಬೇಕು. ನೇಪಾಳದಲ್ಲಿ ನೈಸರ್ಗಿಕವಾಗಿಯೇ ಬಿಲ್ವಪತ್ರೆ ಮರ ಹೇರಳವಾಗಿ ಬೆಳೆಯುತ್ತವೆ. ಇದರ ಹಣ್ಣನ್ನು ನಮ್ಮಲ್ಲಿ ಯಾರೂ ಉಪಯೋಗಿಸಿದ್ದನ್ನು ನೋಡಿಲ್ಲವಾದರೂ, ಇದರ ಎಳೇ ಕಾಯಿಯ ಒಳಗಿನ ತಿರುಳನ್ನು ಕೆಲವರು ಪದಾರ್ಥ ಮಾಡಿಕೊಂಡು ತಿನ್ನುತ್ತಾರೆ. ಇದರ ಹಣ್ಣು ಕೂಡ ಉಪಯೋಗಕಾರಿಯೇ ಆಗಿದೆ. ಪತ್ರೆಯ ಹಣ್ಣಿನ ಹೊರಕವಚವೂ ಕಾರ್ಕ್ ಚೆಂಡಿನಷ್ಟು ಗಟ್ಟಿಯಾಗಿದ್ದು, ಸುಲಭದಲ್ಲಿ ಒಡೆಯುವುದಿಲ್ಲ. ಇದರ ಒಳಗಿನ ರಸವನ್ನೂ ಜ್ಯೂಸ್ ಮಾಡಿ, ಮಾರುಕಟ್ಟೆಯಲ್ಲಿ ಮಾರಲಾಗುತ್ತದೆ. ಬಿಲ್ವಪತ್ರೆ ಹಣ್ಣಿನ ರಸದ ಜ್ಯೂಸ್ ನೇಪಾಳದಲ್ಲಿ ಜನಪ್ರಿಯ. ಇದೇ ವಿಚಾರ ಚರ್ಚೆ ಮಾಡುವಾಗ ಸಸ್ಯತಜ್ಞರೊಬ್ಬರು ಮಾತುಕತೆಯಲ್ಲಿ ಇದ್ದರು. ಅವರ ಪ್ರಕಾರ ಪತ್ರೆ ಹಣ್ಣಿನ ಒಳಗಿರುವ ಅಂಟಿನ ಪದಾರ್ಥವನ್ನು ಆರ್.ಸಿ.ಸಿ. ಕಟ್ಟಡದ ಮೇಲ್ಬಾಗದಲ್ಲಿ ಲೇಪಿಸಿದರೆ, ಮಳೆಗಾಲದಲ್ಲಿ ನೀರು ಸೋರುವುದಿಲ್ಲ. ಸಾಕಷ್ಟು ಪತ್ರೆ ಹಣ್ಣು ಸಿಕ್ಕರೆ ಪ್ರಯೋಗ ಮಾಡುವ ಆಲೋಚನೆಯಿದೆ.

೨೦೧೩ರ ಆಗಸ್ಟ್ ೫ರಂದು ನೆದರ್‌ಲ್ಯಾಂಡಿನ ವಿಜ್ಞಾನಿಗಳು ಲಂಡನ್‌ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಕೃತಕವಾಗಿ ಸೃಷ್ಟಿಸಿದ ಮಾಂಸದಿಂದ ತಯಾರಿಸಿದ ಬರ್ಗರ್‌ನ್ನು ಬೇಯಿಸಿಕೊಂಡು ತಿಂದರು. ಪ್ರಯೋಗಾಲಯದಲ್ಲಿ ಕೃತಕವಾಗಿ ಬೆಳೆಸಿದ ಈ ಮಾಂಸವು ಕೊಲೆಸ್ಟರಾಲ್‌ರಹಿತವಾಗಿದೆ ಎಂದು ಹೇಳಿದ್ದರು. ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರವನ್ನು ಉತ್ಪತ್ತಿ ಮಾಡುವುದು ದುಬಾರಿಯಾಗುತ್ತದೆಯಾದ್ದರಿಂದ ಈ ತರಹ ಪ್ರಯೋಗಾಲಯದಲ್ಲಿ ಬೆಳೆದ ಮಾಂಸ ಬೆಳೆಯುವುದು ಲಾಭಕರವೆಂದು ಹೇಳಲಾಗಿತ್ತು. ಇದರ ಪರ-ವಿರೋಧ ಚರ್ಚೆಗಳು ನಡೆದವು. ಮೂಲತ: ದನದ ಮಾಂಸದ ತುಣುಕನ್ನು ಪ್ರಯೋಗಾಲಯದಲ್ಲಿ ದುಪ್ಪಟ್ಟುಗೊಳಿಸುವ ಈ ಕ್ರಿಯೆಗೆ ಕೆಲವು ಸಾಂಪ್ರದಾಯವಾದಿಗಳು ವಿರೋಧ ವ್ಯಕ್ತಪಡಿಸಿದ್ದನ್ನು ಬಿಟ್ಟರೆ, ಇತರೆ ಕೆಲವರು ಈ ಮಾಂಸವನ್ನು ತಿನ್ನಲು ಅಡ್ಡಿಯಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇದಲ್ಲದೆ ಬರೀ ಸೋಯಾ ಮತ್ತು ಶೇಂಗಾವನ್ನು ಬಳಸಿಕೊಂಡು ಕೋಳಿಯ ಮಾಂಸದ ತರಹದ ವಸ್ತುವನ್ನು ಉತ್ಪಾದಿಸುವ ಪ್ರಯತ್ನವನ್ನು ನಡೆಸಲಾಗಿದೆ. ಮಾಂಸದ ತರಹ ಕಾಣುವ ಹಾಗೂ ಮಾಂಸದ ರುಚಿ ಹೊಂದಿರುವ ವೆಜ್ ಚಿಕನ್ ಅಪ್ಪಟ ಸಸ್ಯಹಾರವೇ ಸೈ ಎಂದು ಇದರ ಉತ್ಪಾಕರರಾದ ಕೊಲಂಬಿಯಾದ ಬ್ರೌನ್ ತಂಡದ ವಾದವಾಗಿದೆ. 

ನಿಸರ್ಗದಲ್ಲಿ ನಮ್ಮ ತಿಳುವಳಿಕೆಗೆ ಬರದ ಅನೇಕ ಸಂಗತಿಗಳಿವೆ. ನಮ್ಮಲ್ಲೂ ಕೂಡ ಹುಳಿಮುರುಗ, ಉಪ್ಪಾಗೆಗಳು ಬಹಳಷ್ಟು ವರ್ಷ ಅವಗಣನೆ ಒಳಗಾಗಿದ್ದವು. ಒಂದೇ ಸಾರಿ ಮಾರುಕಟ್ಟೆಯಲ್ಲಿ ಬೆಲೆ ಬಂದು ನೈಸರ್ಗಿಕ ಕಾಡಿನಲ್ಲಿ ಇವುಗಳು ನಾಮಾವಶೇಷವಾಗುವ ಹಂತ ತಲುಪಿವೆ. ಕೋಕಂ ಜ್ಯೂಸ್ ಕೂಡ ನಮ್ಮಲ್ಲೀಗ ಜನಪ್ರಿಯ ತಂಪು ಪಾನೀಯವಾಗಿದೆ. ಇರಲಿ, ನಿಸರ್ಗದಲ್ಲಿ ಇಷ್ಟೆಲ್ಲಾ ಇದ್ದರೂ ನಮ್ಮ ಹಸಿವನ್ನು ತಣಿಸಲು ಸಾಧ್ಯವಾಗುತ್ತಿಲ್ಲ. ಅತ್ತ ಕಾಡು ನಾಶವಾಗುತ್ತಿದ್ದರೆ, ಇತ್ತ ವಿಜ್ಞಾನಿಗಳು ಕೃತಕವಾಗಿ ಸಸ್ಯಗಳನ್ನು ಸೃಷ್ಟಿಸುವತ್ತ ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಲಂಡನ್‌ನಿನ ರಾಯಲ್ ಕಾಲೇಜ್ ಆಫ್ ಆರ್ಟ್‌ನ ಯುವ ವಿಜ್ಞಾನಿ ಜೂಲಿಯನ್ ಮೆಲ್‌ಚೋರ್ರಿ ಟಫ್ ವಿಶ್ವವಿದ್ಯಾಲಯದ ರೇಷ್ಮೆ ಪ್ರಯೋಗಾಲಯದ ಸಂಯುಕ್ತ ಆಶ್ರಯದಲ್ಲಿ ಕೃತಕವಾದ ಮೊಟ್ಟಮೊದಲ ಜೈವಿಕ ಎಲೆಯನ್ನು ರೂಪಿಸಿದ್ದಾನೆ ಎಂದು ಡೀಜೀನ್ ಪತ್ರಿಕೆ ವರದಿ ಮಾಡಿದೆ. ಇದಕ್ಕಾಗಿ ಈತ ಬಳಸಿಕೊಂಡಿರುವ ಮುಖ್ಯವಾದ ಕಚ್ಚಾ ಸಾಮಾಗ್ರಿ ರೇಷ್ಮೆ ಎಳೆಗಳು. ಗಿಡದಲ್ಲಿ ಹರಿತ್ತನ್ನು ಉತ್ಪಾದಿಸುವ ರಾಸಾಯನಿಕ ಕ್ಲೋರೋಪ್ಲಾಸ್ಟ ಹಾಗೂ ರೇಷ್ಮೆ ಎಳೆಗಳಲ್ಲಿರುವ ಪ್ರೋಟಿನ್ ಇವುಗಳ ಸಂಯೋಜನೆಯಿಂದ ಕೃತಕ ಎಲೆ ತಯಾರಾಗಿದೆ. ಗುರುತ್ವಾಕರ್ಷಣ ಶಕ್ತಿ ಇರದ ಜಾಗದಲ್ಲಿ ನೈಸರ್ಗಿಕ ಗಿಡಗಳು ಬೆಳೆಯಲಾರವು. ಆದರೆ ಮನುಷ್ಯನ ಹೊಸ ಸೃಷ್ಟಿಯಾದ ಈ ರೇಷ್ಮೆ ಎಲೆ ಗುರುತ್ವಾಕರ್ಷಣ ಕ್ರಿಯೆ ನಡೆಯದ ಸ್ಥಳಗಳಲ್ಲೂ ಅಂದರೆ ಬಾಹ್ಯಾಕಾಶದಲ್ಲೂ ಸೂರ್ಯನ ಕಿರಣವನ್ನು ಬಳಸಿಕೊಂಡು ತನಗೆ ತಾನೆ ಆಹಾರ ಉತ್ಪಾದಿಸಿಕೊಳ್ಳುವ ಶಕ್ತಿಹೊಂದಿದೆ ಎಂದು ಹೇಳಲಾಗಿದೆ. ಅಂದರೆ ವಾತಾವರಣದ ಇಂಗಾಲಾಮ್ಲವನ್ನು ಹೀರಿಕೊಂಡು ನಮಗೆ ಉಸಿರಾಡಲು ಬೇಕಾದ ಆಮ್ಲಜನಕವನ್ನು ಉತ್ಪಾದಿಸುತ್ತದೆ. ಇದರಿಂದಾಗಿ ಬಾಹ್ಯಕಾಶದ ಸಂಶೋಧನೆಗಳಿಗೆ ಹೆಚ್ಚಿನ ಬಲ ಬಂದಂತಾಗುತ್ತದೆ ಎಂದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ. 

ಸ್ವಾಭಾವಿಕವಾಗಿ ಇಂಗಾಲಾಮ್ಲವನ್ನು ಹೀರಿಕೊಂಡು ಆಮ್ಲಜನಕ ನೀಡುವ ನೈಸರ್ಗಿಕ ಕೈಗಾರಿಕೆಗಳಾದ ಅರಣ್ಯಗಳನ್ನು ನಾಶ ಮಾಡಿದ ಮೇಲೂ ಮನುಷ್ಯ ಪ್ರಕೃತಿಗೆ ಸವಾಲು ಹಾಕಿ ಬದುಕುಳಿಯುವ ಪ್ರಯತ್ನದ ಮೊದಲ ಭಾಗವಾಗಿ ಈ ರೇಷ್ಮೆ ಎಲೆ ರೂಪುಗೊಂಡಿದೆ ಎಂದು ಕೊಂಡು ನಮ್ಮ ಬೆನ್ನು ನಾವೇ ತಟ್ಟಿಕೊಳ್ಳೋಣವೇ? ಬಾಬಾಗಳು ಅಥವಾ ಐಂದ್ರಜಾಲಿಕರು ಗಾಳಿಯಲ್ಲಿ ವಸ್ತುಗಳನ್ನು ಸೃಷ್ಟಿ ಮಾಡುವ ಕಣ್ಕಟ್ಟು ಮಾಡುತ್ತಾರೆ. ಮೇಲೆ ಹೇಳಿದ ರೇಷ್ಮೆ ಎಲೆ ಹೀಗೆ ಶೂನ್ಯದಿಂದ ಸೃಷ್ಟಿಯಾಗುವಂತಹದಲ್ಲ. ಇದಕ್ಕೆ ಹರಿತ್ತು ಉತ್ಪಾದಿಸಲು ಬೇಕಾದ ಕ್ಲೋರೋಪ್ಲಾಸ್ಟ ಜೊತೆಗೆ ಎಲೆ ಬೆಳೆಯಲು ರೇಷ್ಮೆಯ ಪ್ರೋಟಿನ್ ಇವೆರೆಡೂ ಬೇಕು. ಅಂದರೆ ಮೂಲತ: ಗಿಡ ಬೇಕು, ಹಾಗೂ ಬರೀ ಹಿಪ್ಪುನೇರಳೆ ಎಲೆಯನ್ನೇ ತಿಂದು ರೇಷ್ಮೆ ನಾರು ಉತ್ಪಾದಿಸುವ  ರೇಷ್ಮೆಹುಳುಗಳನ್ನು ಬೇಯಿಸಿ ತೆಗೆದ ದಾರ ಬೇಕು. ಇವೆರಡರ ಜೊತೆಗೆ ಮತ್ತಿನೇನನ್ನೋ ಸೇರಿಸಿ ಗುರುತ್ವಕ್ರಿಯೆ ನಡೆಯದ ಜಾಗದಲ್ಲೂ ಸೂರ್ಯನ ಬೆಳಕಿನಿಂದ ತನ್ನ ಆಹಾರವನ್ನು ತಾನೇ ಉತ್ಪಾದಿಸಿಕೊಳ್ಳುವ ಅದ್ಬುತ ಎಲೆ ಸೃಷ್ಟಿಯಾಗುತ್ತದೆ. 

ಪ್ರಪಂಚದ ಮುಂದುವರೆಯುತ್ತಿರುವ ಹಾಗೂ ಹಿಂದುಳಿದ ದೇಶಗಳಿಗೆ ವಿಶ್ವ ಬ್ಯಾಂಕ್ ದಾರಾಳವಾಗಿ ಹಣ ನೀಡುತ್ತದೆ. ಭಾರತವೂ ಸಹ ವಿಶ್ವ ಬ್ಯಾಂಕಿನಿಂದ ಕೋಟಿಗಟ್ಟಲೆ ಸಾಲ ಪಡೆದಿದೆ. ಖಾಸಗಿ ಹಣಕಾಸು ಸಂಸ್ಥೆಗಳು ವ್ಯಕ್ತಿಗಳಿಗೆ ಸಾಲ ನೀಡಿದರೆ, ವಿಶ್ವಬ್ಯಾಂಕ್ ದೇಶಗಳಿಗೆ ಸಾಲ ನೀಡುತ್ತದೆ. ಖಾಸಗಿ ಫೈನಾನ್ಸ್ ನಡೆಸುವ ವ್ಯಕ್ತಿಗಳು ಹಣವನ್ನು ವಾಪಸು ಪಡೆಯಲು ನಾನಾ ದಾರಿಗಳನ್ನು ಹುಡುಕುತ್ತಾರೆ. ಒಟ್ಟಾರೆ ಬಡ್ಡಿಗೆ ಬಡ್ಡಿ ಸೇರಿಸಿ ಹಣ ತೆಗೆದುಕೊಂಡವನನ್ನು ಅತ್ತ ಸಾಯಲು ಬಿಡದೆ ಬದುಕಲು ಬಿಡದೆ ಕಾಡುತ್ತವೆ. ಖಾಸಗಿ ಫೈನಾನ್ಸ್‌ಗಳ ಮಾಲೀಕರು ಇವತ್ತು ಕೋಟಿಗಟ್ಟಲೆಗೆ ಬಾಳುತ್ತಾರೆ. ಇವರೊಂತರ ಬಡ್ಡಿ ಮಕ್ಕಳು. ಹಾಗೆಯೇ ವಿಶ್ವ ಬ್ಯಾಂಕ್ ಕೂಡ ಈ ಬಡ್ಡಿ ಮಕ್ಕಳನ್ನು ಮೀರಿಸಿದ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ. ಇವರ ಮುಂದೆ ದೈನೇಸಿಯಾಗಿ ಕೈಯೊಡ್ಡುವ ದೇಶಗಳ ಮೇಲೆ ಇವರು ಹಲವು ತರಹದ ಷರತ್ತುಗಳನ್ನು ಹೇರುತ್ತಾರೆ. ಅಲ್ಲದೆ ಜನ-ಜೀವ ವಿರೋಧಿ ಯೋಜನೆಗಳಿಗೆ ಉದಾರವಾಗಿ ಬಡ್ಡಿ ಸಮೇತ ಹಣ ನೀಡುತ್ತಾರೆ. ಉದಾಹರಣೆಯಾಗಿ ನರ್ಮದಾ ನದಿಗೆ ಆಣೆ ಕಟ್ಟಲು ವಿಶ್ವ ಬ್ಯಾಂಕ್ ಹಣ ನೀಡಿತ್ತು. ಇಂಡೊನೇಷ್ಯಿಯಾದ ಮಳೆಕಾಡುಗಳನ್ನು ಸವರಿ ಪಾಮ್ ಗಿಡಗಳನ್ನೂ ನೆಡಲು ವಿಶ್ವ ಬ್ಯಾಂಕ್ ಹಣ ನೀಡುತ್ತಿದೆ.

ಇದೀಗ ಕಾರ್ಪೊರೇಟ್ ಪ್ರಪಂಚದ ಕೈಗೊಂಬೆಯಾಗಿ ಮಾರ್ಪಟ್ಟ ವಿಶ್ವಬ್ಯಾಂಕ್ ಸಾಲ ಪಡೆಯುವ ದೇಶಗಳಿಗೆ ಪರಿಸರ ವಿರೋಧಿ ನಿಲುವು ತಳೆಯುವಂತೆ ಒತ್ತಡ ಹೇರುತ್ತಿದೆ. ಅಂದರೆ ಯಾವುದೇ ಅಂತಾರಾಷ್ಟ್ರೀಯ ಕಂಪನಿ ಸಾಲ ಪಡೆಯುವ ದೇಶಗಳಲ್ಲಿ ಹೂಡಿಕೆ ಮಾಡುವಾಗ ಅವುಗಳಿಗೆ ಹೆಚ್ಚಿನ ನಿರ್ಭಂದ ಹೇರಬಾರದು ಎಂಬ ಷರತ್ತುಗಳನ್ನು ಒಡ್ಡುತ್ತಿದೆ. ಗಣಿಗಾರಿಕೆಯಂತಹ ಪರಿಸರ ನಾಶ ಮಾಡುವ ಕೃತ್ಯಗಳಿಗೆ ಹೇರಳವಾದ ಹಣ ಸಹಾಯ ಮಾಡಲು ಮುಂದೆ ಬಂದಿದೆ. ಯಾವುದೇ ಯೋಜನೆಗಳನ್ನು ಅನುಷ್ಠಾನ ಮಾಡುವ ಕಂಪನಿಗಳಿಗೆ ನೆಲದ ಕಾನೂನುಗಳಿಂದ ವಿನಾಯತಿ ನೀಡಬೇಕು. ಇಲ್ಲಿನ ನೆಲ-ಜಲ-ಜನರಿಗೆ ತೊಂದರೆಯಾದರೂ ಸಹಿಸಿಕೊಳ್ಳಬೇಕಾಗುತ್ತದೆ. ಹೀಗೆ ಜನ ಮತ್ತು ಜೀವ ವಿರೋಧಿ ತಳೆಯುತ್ತಿರುವ ವಿಶ್ವ ಬ್ಯಾಂಕ್ ಈ ಭೂಮಿಯ ಮೇಲಿನ ಅತ್ಯಂತ ಪ್ರಭಲವಾದ ಸಂಸ್ಥೆಯಾಗಿದೆ. ಹೀಗೆ ಮುಂದೆ ಕೃತಕ ರುದ್ರಾಕ್ಷಿ, ಕೃತಕ ಗಿಡ, ಕೃತಕ ಬೇಲ, ಕೃತಕವಾಗಿ ಬೆಳೆಯುವ ಪತ್ರೆ ಉತ್ಪಾದಿಸುವ ಅಂತಾರಾಷ್ಟ್ರೀಯ ಕಂಪನಿಗಳಿಗೆ ಬೇಡಿಕೆ ಹೆಚ್ಚಬಹುದು ಹಾಗೂ ಇಂತಹ ಹೆಚ್ಚಿನ ಲಾಭ ತರುವ ಕೃತಕ ಯೋಜನೆಗಳಿಗೆ ನಿಶ್ಚಿತವಾಗಿ ವಿಶ್ವಬ್ಯಾಂಕ್ ಹಣ ನೀಡಬಹುದು. 

ನೇಪಾಳದ ಮುಳ್ಳುಕಂಟಿ ಗಿಡ ಮತ್ತು ಹಣ್ಣಿನ ರಸವನ್ನು ಪ್ಯಾಕ್ ಮಾಡುತ್ತಿರುವುದು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Guruprasad Kurtkoti
10 years ago

ಅಖಿಲೇಶ, ಎಂದಿನಂತೆ ತುಂಬಾ ಮಾಹಿತಿಪೂರ್ಣ ಲೇಖನ. 'ಕೃತಕ ಮಾಂಸ', ಎಷ್ಟೊಂದು ಒಳ್ಳೆಯ ಅನ್ವೇಷಣೆ! ಎಷ್ಟೋ ಪ್ರಾಣಿಗಳ ಜೀವ ಉಳಿಸಬಹುದಲ್ಲವೆ?!

1
0
Would love your thoughts, please comment.x
()
x