2019 ನೇ ಸಾಲಿನ “ಕುವೆಂಪು ರಾಷ್ಟ್ರೀಯ ಪುರಸ್ಕಾರ”ಕ್ಕೆ ಪಂಜಾಬಿ ಭಾಷೆಯ ಇಬ್ಬರು ಸುಪ್ರಸಿದ್ಧ ಸಾಹಿತಿಗಳು ಆಯ್ಕೆ ಆಗಿರುತ್ತಾರೆ. ಇದೇ ನವೆಂಬರ್ 16ನೆ ತಾರೀಕು (16-11-2019) ಶನಿವಾರ ಬೆಂಗಳೂರಿನಲ್ಲಿ, ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ನಾಡೋಜ ಪ್ರೊ. ಹಂಪ. ನಾಗರಾಜಯ್ಯನವರ ಅಧ್ಯಕ್ಷತೆಯಲ್ಲಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಆಯ್ಕೆ ಸಮಿತಿಯ ಸಭೆ ನಡೆದಿತ್ತು.
ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಹಾಗೂ ಸಾಹಿತಿಗಳಾದ ಶ್ರೀ ಚಿರಂಜೀವಿ ಸಿಂಗ್, ಜೆ.ಎನ್.ಯು. (ನವದೆಹಲಿ) ವಿಶ್ವವಿದ್ಯಾಲಯದ ನಿವೃತ್ತ ಪ್ರಾದ್ಯಾಪಕರೂ ಪಂಜಾಬಿ ಲೇಖಕರೂ ಆದ ಪಟಿಯಾಲದ ಪ್ರೊ. ಚಮನಲಾಲ್ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ನಿವೃತ್ತ ಕಾರ್ಯದರ್ಶಿ ಶ್ರೀ ಅಗ್ರಹಾರ ಕೃಷ್ಣಮೂರ್ತಿಯವರು ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. ಪ್ರತಿಷ್ಠಾನದ ಸಮಕಾರ್ಯದರ್ಶಿ ಶ್ರೀ ಕಡಿದಾಳ್ ಪ್ರಕಾಶ್ ಸಂಚಾಲಕರಾಗಿದ್ದರು.
ಪಂಜಾಬಿ ಸಾಹಿತ್ಯದ ಶ್ರೀಮಂತಿಕೆ ಹಾಗೂ ಸತ್ವವನ್ನು ತಮ್ಮ ಕಥೆ, ಕಾದಂಬರಿ, ಅನುವಾದಗಳನ್ನೊಳಗೊಂಡ ವಿಶಿಷ್ಟ ಕೃತಿಗಳ ಮೂಲಕ ಹೆಚ್ಚಿಸಿದ ಬಹು ಮಹತ್ವದ ಹಿರಿಯ ಲೇಖಕರಾ ಶ್ರೀಮತಿ ಅಜೀತ್ ಕೌರ್ ಹಾಗೂ ಶ್ರೀ ಗುರುಬಚನ್ ಸಿಂಗ್ ಭುಲ್ಲರ್ – ಈ ಇಬ್ಬರನ್ನು 2019ರ “ಕುವೆಂಪು ರಾಷ್ಟ್ರೀಯ ಪುರಸ್ಕಾರ”ಕ್ಕೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ರಾಷ್ಟ್ರಕವಿ ಕುವೆಂಪುರವರ ಜನ್ಮೋತ್ಸವ ದಿನದಂದು (29-12-2019 ಭಾನುವಾರ) ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಕುಪ್ಪಳಿಯಲ್ಲಿ ಶ್ರೀಮತಿ ಅಜೀತ್ ಕೌರ್ ಹಾಗೂ ಶ್ರೀ ಗುರುಬಚನ್ ಸಿಂಗ್ ಭುಲ್ಲರ್ ಅವರಿಗೆ ಜಂಟಿಯಾಗಿ “ಕುವೆಂಪು ರಾಷ್ಟ್ರೀಯ ಪುರಸ್ಕಾರ”ವನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಐದು ಲಕ್ಷ ರೂಪಾಯಿ ಮತ್ತು ಬೆಳ್ಳಿ ಪದಕಗಳನ್ನು ಒಳಗೊಂಡಿರುತ್ತದೆ.