ನನ್ನ ಪ್ರಕಾರ “ಛಾಯಾಗ್ರಹಣ” ಮತ್ತು “ಸಂಕಲನ” ಸಿನಿಮಾವನ್ನು ಬೇರೆಲ್ಲ ಕಲಾಪ್ರಕಾರಗಳಿಗಿಂತ ವಿಭಿನ್ನವಾಗಿಸುತ್ತವೆ. ತೆರೆಯ ಮೇಲೆ ಇಡೀ ಮರುಭೂಮಿಯನ್ನು ಒಮ್ಮೆಲೇ ಸೆರೆಹಿಡಿಯಬಹುದು, ಅಥವಾ ಕಣ್ಣಂಚಿನ ಒಂದೇ ಒಂದು ಹನಿಯನ್ನು ತೋರಿಸಬಹುದು. ಇದು ಸಿನಿಮಾ ಛಾಯಾಗ್ರಹಣದ ಶಕ್ತಿ! ಸಿನಿಮಾ ಸಂಕಲನ ಕೂಡ ಅಷ್ಟೇ, ಹಲವಾರು ಶಾಟ್ ಗಳನ್ನು ಒಟ್ಟುಗೂಡಿಸಿದಾಗ, ಸೀನಿಗೆ ಒಂದು ಅರ್ಥ, ಸಿನಿಮಾಗೆ ಒಂದು ದಿಕ್ಕು ಸಿಗುತ್ತದೆ.
ನನಗೆ ಸಿನಿಮಾ ಸಂಕಲನದ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ನಿಜಕ್ಕೂ ಸಂಕಲನ ಹೇಗೆ ಮಾಡುತ್ತಾರೆ ಅಂತ ಒಂದು ಸಲವೂ ನೋಡಿಲ್ಲ. ಗೊತ್ತಿಲ್ಲದಿರುವಾಗ ‘ಸಂಕಲನ’ದ ಮೇಲೆ ತಾಂತ್ರಿಕವಾಗಿ ಏನಾದರೂ ಬರೆಯಲು ಹೋದರೆ ಅದು ಉದ್ಧಟತನ ಆಗುತ್ತದೆ. ಈಗ ನಾನು ಹೇಳಲು ಹೊರಟಿರುವುದು ಕೇವಲ ಒಬ್ಬ ಸಾಮಾನ್ಯ ನೋಡುಗನಾಗಿ “ದೃಶ್ಯ ಜೋಡಣೆ” ಹೇಗೆ ಪರಿಣಾಮಕಾರಿ ಅಂತ.
ನಿಮಗೆ “ಒಂದು ಸಿನಿಮಾ ಕಥೆ” ಚಿತ್ರ ನೆನಪಿದ್ಯಾ? ಅದರಲ್ಲಿ ರಮೇಶ್ ಭಟ್ ಒಬ್ಬ ವಿಚಿತ್ರ ಕಥೆಗಾರ. “ಸರ್, ಜನ ಚೇಂಜ್ ಕೇಳ್ತಾರೆ ಸರ್” ಅಂತಲೇ ಶುರುಹಚ್ಚಿಕೊಳ್ಳುವ ಈತ ಹೇಳುವ ಒಂದು ಸನ್ನಿವೇಶ ಹೀಗಿದೆ: “ಆ ಕಡೆಯಿಂದ ಒಂದು ಕಾರ್ ಜೂಯ್ ಅಂತ ಬರ್ತಿದೆ, ಈ ಕಡೆಯಿಂದ ಇನ್ನೊಂದು ಕಾರ್ ಜೂಯ್ ಅಂತ ಬರ್ತಿದೆ. ಆ ಕಡೆ ಕಾರ್ ಸ್ಪೀಡ್ ಜಾಸ್ತಿ ಆಗ್ತಿದೆ, ಈ ಕಡೆ ಕಾರ್ ಸ್ಪೀಡ್ ಇನ್ನೂ ಜಾಸ್ತಿ ಆಗ್ತಿದೆ. ಇನ್ನೇನು ಹತ್ರ ಹತ್ರ ಬರ್ತಿರೋ ಹಂಗೆ ಆ ಕಾರ್ ಆ ಕಡೆಗೆ ಹೊರ್ಟೋಗುತ್ತೆ, ಈ ಕಾರ್ ಈ ಕಡೆ ಹೊರ್ಟೋಗುತ್ತೆ. ಹೆಂಗಿದೆ?” ಸಕ್ಕತ್ ತಮಾಷೆಯಾಗಿರುವ ಈ ಸೀನ್ ಮುಖ್ಯವಾಗಿ ಇನ್ನೊಂದು ವಿಷಯ ಹೇಳುತ್ತೆ. “ದೃಶ್ಯ ಜೋಡಣೆ” ನಮ್ಮ ಪಾಲಿಗೆ ಎಷ್ಟು ಟೇಕನ್ ಫಾರ್ ಗ್ರಾಂಟೆಡ್ ಆಲ್ವಾ?
“ದೃಶ್ಯ ಜೋಡಣೆ”ಯಿಂದ ಎರಡು ಸಂಬಂಧವೇ ಇಲ್ಲದಿರಬಹುದಾದ ಶಾಟ್ ಗಳನ್ನು ಒಂದುಗೂಡಿಸಿ, ಅವಕ್ಕೆ ಅರ್ಥ ಕಲ್ಪಿಸಲಾಗುತ್ತದೆ. ಚಂದನೆಯ ಹುಡುಗಿ ನಡೆದು ಬರುತ್ತಿದ್ದಾಳೆ, ಇದು ಒಂದು ಶಾಟ್. ಇನ್ನೊಂದು ಶಾಟ್ ಅಲ್ಲಿ, ಯಾವುದೋ ಯೋಚನೆಯಲ್ಲಿ ನಡೆದು ಬರುತ್ತಿದ್ದ ಹುಡುಗ ಏನನ್ನೋ ನೋಡಿ ಅವಾಕ್ಕಾಗಿ ನಿಲ್ಲುತ್ತಾನೆ. ಅವನು ಬೇರೆ ಏನನ್ನೋ ನೋಡಿರಬಹುದು, ಆದರೆ ಇವೆರಡನ್ನೂ ಅಕ್ಕಪಕ್ಕ ಇಟ್ಟಾಗ, ಅವನು ಆ ಹುಡುಗಿಯನ್ನು ನೋಡಿ ಕಲ್ಪನಾಸಾಗರದಲ್ಲಿ ತೇಲುತ್ತಿದ್ದಾನೆ ಅಂತ ಮನಸ್ಸು ಅರ್ಥ ಮಾಡಿಕೊಳ್ಳುತ್ತದೆ. ಹಾಗೆಯೇ ಬೇರೆ ಬೇರೆ ಜಾಗಗಳಲ್ಲಿ ನಡೆಯುವ ಘಟನೆಗಳನ್ನ ಹೊಸೆಯಬಹುದು. ಮಗನಿಗೆ ರಸ್ತೆಯಲ್ಲೆಲ್ಲೋ ಅಪಘಾತವಾಗಿದೆ, ಮನೆಯಲ್ಲಿ ಮಲಗಿದ್ದ ಅಮ್ಮ ಧಡಕ್ಕನೆ ಬೆಚ್ಚಿಬಿದ್ದು ನಿದ್ದೆಯಿಂದ ಏಳುತ್ತಾಳೆ. ಎರಡು ಸಂಬಂಧವಿರದ ಶಾಟ್ ಗಳು ಒಂದು ಭಾವಾತ್ಮಕ ಕೊಂಡಿಯಿಂದ ಬೆಸೆದುಕೊಂಡಿವೆ. ಹಾಗೆಯೇ ಹಿಂದೆ ನಡೆದಿರುವ ವಿಷಯಗಳನ್ನು ನೆನಪಿಸಿಕೊಳ್ಳುವ ಫ್ಲಾಶ್ ಬ್ಯಾಕ್, ಮುಂದೆ ನಡೆಯಬಹುದಾದ ಊಹೆಯ ಸನ್ನಿವೇಶಗಳು, ಕಲ್ಪನೆಯ ಕಥಾನಕಗಳನ್ನು ಕೂಡ ಬಹಳ ಸಮರ್ಪಕವಾಗಿ ಜೋಡಿಸಲು ಸಾಧ್ಯವಾಗುವುದು ಸಿನಿಮಾದ ವೈಶಿಷ್ಟ್ಯ!
ಕೊಪೋಲ ಅವರ “ಗಾಡ್ ಫಾದರ್” ಚಿತ್ರದ ಕ್ಲೈಮಾಕ್ಸ್ ಅಲ್ಲಿ ದೃಶ್ಯವನ್ನು ಜೋಡಿಸಿರುವ ರೀತಿ ನಿಜಕ್ಕೂ ಅಮೋಘ. ಮೈಕಲ್ ತನ್ನ ತಂಗಿಯ ಮಗುವಿಗೆ ಗಾಡ್ ಫಾದರ್ ಆಗುವ ಬ್ಯಾಪ್ಟಿಸಮ್ ಅಲ್ಲಿ ಪಾಲ್ಗೊಳ್ಳುತ್ತಿದ್ದಾನೆ. ಅದೇ ಸಮಯದಲ್ಲಿ ಅವನ ಸಹಚರರು ಅವರ ಎಲ್ಲಾ ವೈರಿಗಳ ಮೇಲೆ ಏಕಕಾಲಕ್ಕೆ ಧಾಳಿ ನಡೆಸಿ, ಅವನ ಸಾರ್ವಭೌಮತ್ವವನ್ನು ಸ್ಥಾಪಿಸುತ್ತಿದ್ದಾರೆ. ಎಲ್ಲಾ ಕೊಲೆಗಳನ್ನೂ ಒಟ್ಟಿಗೆ ತೋರಿಸಿದದ್ದರೆ ಅದು ಒಂದು ಒಳ್ಳೆಯ ಆಕ್ಷನ್ ಸೀಕ್ವೆನ್ಸ್ ಆಗ್ತಿತ್ತು ಅನ್ಸುತ್ತೆ. ಆದರೆ ಚರ್ಚ್ ಅಲ್ಲಿ ನಡೆಯುತ್ತಿರುವ ಸಮಾರಂಭ ಮತ್ತು ಬೇರೆ ಕಡೆ ನಡೆಯುತ್ತಿರುವ ಕೊಲೆಗಳನ್ನು ಒಟ್ಟೊಟ್ಟಿಗೆ ತೋರಿಸಿ, ಮೈಕಲ್ ಒಳಗಿರುವ ಒಂದು ತಣ್ಣನೆಯ ಕ್ರೌರ್ಯ, ಅವನಲ್ಲಿರುವ ಅಸಾಧ್ಯ ಆತ್ಮವಿಶ್ವಾಸ ಇವೆಲ್ಲದರ ಪರಿಚಯ ಮಾಡಿಸುವ ಅದ್ಭುತ ಭಾವನಾತ್ಮಕ ಸೀನ್ ಆಗಿ ಮೂಡಿಬಂದಿದೆ.
ನನ್ನ ಇನ್ನೊಂದು ನೆಚ್ಚಿನ ಚಿತ್ರ “ಬೌರ್ನ್ ಅಲ್ಟಿಮೇಟಮ್”. ತಾನು ಯಾರು ಅನ್ನುವ ನೆನಪನ್ನು ಕಳೆದುಕೊಂಡಿರುವ ಜೇಸನ್ ಬೌರ್ನ್ ಹಿಂದೆ ಇಡೀ ಸಿ.ಐ.ಎ. ಬೆನ್ನುಬಿದ್ದಿದೆ. ಒಂದು ಹೊಡೆದಾತದಲ್ಲಂತೂ ಮೂರು ಜನ ನುರಿತ ಹಂತಕರನ್ನು ಐದು ಸೆಕೆಂಡ್ ಅಲ್ಲಿ ಹೊಡೆದು ಉರುಳಿಸುತ್ತಾನೆ ಬೌರ್ನ್. ಬಹುಷಃ ಐದು ಸೆಕೆಂಡ್ ಅಲ್ಲಿ ಹದಿನೈದು ಶಾಟ್ ಗಳಿಂದ ಹೊಡೆದಾಟವನ್ನು ತೋರಿಸಲಾಗಿದೆ. ಏನಾಯ್ತಪ್ಪ ಅಂತ ನಾವು ಕಣ್ಣು ಮಿಟುಕಿಸುವುದರ ಒಳಗೆ ಸೀನ್ ಮುಗಿದು ಹೋಗಿರುತ್ತೆ. ಇಲ್ಲಿ ಎಷ್ಟು ಚನ್ನಾಗಿ ಹೊಡೆದಾಡಿದ ಅನ್ನುವುದನ್ನ ನಮಗೆ ತೋರಿಸುವುದಕ್ಕಿಂತ ಮುಖ್ಯ ಅವನು ಎಷ್ಟು ವೇಗವಾಗಿ ಹೊಡೆದಾಡಿದ ಎನ್ನುವುದು. ಅವನ ವೇಗ, ಅವನ ಚಾಕಚಕ್ಯತೆ, ಚಾಣಾಕ್ಷತನ ಇವೆಲ್ಲಾ ನಮಗೆ ರಿಯಲ್ ಅನಿಸಿದಾಗ ಮಾತ್ರ, ಅವನು ಎಷ್ಟು ಜನ ಬಂದರೂ ಹೊಡೆದಾಡಬಲ್ಲ ಅಂತ ನಮಗೆ ಮನವರಿಕೆಯಾಗುತ್ತದೆ.
ಈ ಬಿಡಿ ಬಿಡಿ ಚಿತ್ರಗಳನ್ನ ಒಟ್ಟಾಗಿ ಅರ್ಥೈಸಿಕೊಳ್ಳುವ ನಮ್ಮ ಮನಸ್ಸಿನ ತಾಕತ್ತಿದೆಯಲ್ಲಾ, ಅದು ನಿಜಕ್ಕೂ ಅಚ್ಚರಿ ಉಂಟುಮಾಡುತ್ತೆ. ಸುಮಾರು ನೂರು ವರ್ಷಗಳ ಹಿಂದೆ ಕುಲೆಶೋವ್ ಪ್ರಯೋಗ ಅಂತ ನಡೆದಿತ್ತು. ಒಂದು ನಿಮಿಷಕ್ಕಿಂತಲೂ ಕಮ್ಮಿ ಸಮಯದ ಶಾರ್ಟ್ ಫಿಲಂ ಇದು. ಇದರಲ್ಲಿ ನಟ ಒಂದು ರುಚಿಯಾದ ತಿನಿಸನ್ನು, ಶವಪೆಟ್ಟಿಗೆಯಲ್ಲಿ ಮಲಗಿರುವ ಮಗುವಿನ ಹೆಣವನ್ನು, ಸೋಫಾ ಮೇಲೆ ಮಲಗಿರುವ ಸುಂದರವಾದ ತರುಣಿಯನ್ನು ನೋಡುವ ಮೂರು ದೃಶ್ಯ ಇದೆ ಅಷ್ಟೇ. ಇದನ್ನು ನೋಡಿದವರೆಲ್ಲಾ ಆ ನಟನ ಅಭಿನಯ ಚಾತುರ್ಯವನ್ನು ಹೊಗಳಿದ್ದೂ ಹೊಗಳಿದ್ದೇ. ತಿನಿಸನ್ನು ತಿನ್ನುವ ಹಪಹಪಿ, ಹೆಣವನ್ನು ನೋಡಿದಾಗ ಆವರಿಸಿಕೊಳ್ಳುವ ದುಃಖ, ತರುಣಿಯ ಮೇಲೆ ಉಂಟಾಗಿರುವ ಆಕರ್ಷಣೆಯನ್ನು ಅಷ್ಟು ಭಾವಪೂರ್ಣವಾಗಿ ತೋರಿಸುವ ಬಗ್ಗೆ ಎಲ್ಲರಿಂದ ಮೆಚ್ಚುಗೆ. ನಂತರ ಎಲ್ಲರಿಗೂ ಗೊತ್ತಾದ ವಿಷಯ ಏನೆಂದರೆ ಆ ಮೂರೂ ಶಾಟ್ ಗಳಲ್ಲಿ ತೋರಿಸಿರುವ ನಟನ ಶಾಟ್ ಒಂದೇ ಅಂತ. ಫಿಲಂ ಎಡಿಟಿಂಗ್ ಎಷ್ಟು ಪರಿಣಾಮಕಾರಿ ಅಂತ ತಿಳಿದುಬಂದ ಮೊದಲ ಘಟನೆ ಇದೇ ಇರಬೇಕು. ನಿಜಕ್ಕೂ ನಮ್ಮ ಮನಸ್ಸು ಎಷ್ಟು ವಿಚಿತ್ರ ಆಲ್ವಾ?
ಸಂಕಲನ – ಛಾಯ ಚಿತ್ರಣ ನಿಜವಾಗಿಯೂ ಸಿನೆಮ ವಿಭಾಗಗಳಲ್ಲಿ ಬಹು ತಾಳ್ಮೆ ಮತ್ತು ಏಕಾಗ್ರತೆ ಬಯಸುವ ವಿಭಾಗಗಳು ಹಾಗೆಯೇ ಆ ಕಾರಣಕ್ಕಾಗಿಯೇ ಬಹುತೇಕ ಚಿತ್ರಗಳು ಹಿಟ್ ಆಗೋದು . ಕೆಟ್ಟ ಸಂಕಲನ -ಅವಾಸ್ತವಿಕ ಅವೈಜ್ಞಾನಿಕ ಚಿತ್ರೀಕರಣ ಕಾರಣ ಕೆಲ ಚಿತ್ರಗಳೂ ಮಕಾಡೆ ಮಲಗುವವು-
ಗಾಡ್ ಫಾದರ್ ಯಾವ ಸರಣಿಯನ್ನು ಇನ್ನೂ ನೋಡಿಲ್ಲ – ಡೌನ್ಲೋಡ್ ಮಾಡಿರುವೆ .. ಹಾಗೆಯೇ ಬೋರ್ನೆ ಅಲ್ಟಿಮೆಟಂ ಸಹಾ .. ನೀವ್ ಹೇಳಿದ ಆ ಸನ್ನಿವೇಶಗಳನ್ನು ನೋಡಿ ಆ ಸನ್ನಿವೇಶಗಳ ವಿಶೇಷತೆ ಅರಿಯುವ ಯತ್ನ ಮಾಡುವೆ . .
ಚಿತ್ರ ರಂಗ – -ನಟರು ನಟಿಯರು –
ಚಿತ್ರೀಕರಣ ಇತ್ಯಾದಿ ಬಗೆಗೆ ಬಹುತೇಕರ ಹಾಗೆ ನನಗೂ ಅತೀವ ಆಸಕ್ತಿ – ಮತ್ತು -ಕನ್ನಡ ತೆಲುಗು- ಹಿಂದಿ – ಆಂಗ್ಲ ಭಾಷೆಗಳ ೧೦೬ ಸಿನೆಮ ನೋಡಿರುವೆ – ಕೆಲ ಚಿತ್ರಗಳ ಬಗ್ಗೆ ಬರೆದಿರುವೆ – ಈಗಲೂ ದಿನ ನಿತ್ಯ ಹಲವು ಚಿತ್ರಗಳನ್ನು ಡೌನ್ಲೋಡ್ ಮಾಡಿ ನೋಡುವೆ . .
ಒಂದು ಸಿನೆಮ ತಯಾರಗುವುದರ ಹಿಂದೆ ಎಷ್ಟು ಜನರ ಎಷ್ಟು ಶ್ರಮ ಇರುತ್ತೆ ಯಾವ್ಯಾವ ವಿಭಾಗದಲ್ಲಿ ಹೇಗೆಲ್ಲ ಆ ಪ್ರಕ್ರಿಯೆ ನಡೆಯುತ್ತೆ – ಒಂದು ಸನ್ನಿವೇಶ ಹಾಡು ಸಂಗೀತ ಹೇಗೆಲ್ಲ ಉಟ್ಟಿತು ಎಂದೆಲ್ಲ ಪತ್ರಿಕೆಗಳಲ್ಲಿ ಹಲವು ಜನರ ಅನುಭವದಲ್ಲಿ ಓದಿರುವೆ . ಈಗ ನೀವು ಸಹಾ ಅಲ್ಲಿನ ಹಲವು ವಿಷಯಗಳ ಬಗ್ಗೆ ಸರಳವಾಗಿ ನಿರೂಪಿಸಿ ನಮ್ ಕುತೂಹಲವನ್ನು ತಣಿಸುತ್ತಿರುವಿರಿ
ನಿಮ್ಮ ಈ ಸರಣಿ ನಂಗೆ ಇಸ್ತವಾಯ್ತು ..
ಸರಣಿ ಬರಹ .. ಸದಾ ಮುಂದುವರೆಯಲಿ ..
ಶುಭವಾಗಲಿ
\।/
ವೆಂಕಟೇಶ (ಸಪ್ತಗಿರಿವಾಸಿ )ಮಡಿವಾಳ ಬೆಂಗಳೂರು