ಕುರ್ಚಿಯ ಗೌರವ!: ಕೆ ಟಿ ಸೋಮಶೇಖರ ಹೊಳಲ್ಕೆರೆ.

somashekar-k-t
ಕೆಲವರಿಗೆ ಕುರ್ಚಿಯಿಂದ ಬೆಲೆ ಬರುತ್ತದೆ. ಅವರು ಕುರ್ಚಿಯಲ್ಲಿ ಇರುವತನಕ ಗೌರವಿಸಲ್ಪಡುತ್ತಾರೆ. ಕುರ್ಚಿಯಿಂದ ಕೆಳಗಿಳಿದ ತಕ್ಷಣ ಹತ್ತಿರ ಯಾರೂ ಸುಳಿಯದಾಗುತ್ತಾರೆ. ಮತ್ತೆ ಕೆಲವರು ಕುರ್ಚಿಯ ಬೆಲೆ ಹೆಚ್ಚಿಸುತ್ತಾರೆ. ಕುರ್ಚಿಯ ಬೆಲೆ ಹೆಚ್ಚಿಸುವವರು ಅಪರೂಪ, ಅವರಿಂದ ಅನನ್ಯವಾದ ಸಾಧನೆಯಾಗುತ್ತದೆ. ಅವರು ಕುರ್ಚಿ ತೊರೆದ ನಂತರವೂ ಮೊದಲಿಗಿಂತ ಹೆಚ್ಚು ಗೌರವಿಸಲ್ಪಡುತ್ತಾರೆ. ಇದು ಜನರು ಕೊಡುವ ಆತ್ಮಪೂರಕ ಗೌರವವಾಗಿರುತ್ತದೆ. ಇವರು ಜನರ ಮನಸ್ಸಿನಲ್ಲಿ ಉಳಿಯುತ್ತಾರೆ. ಇನ್ನೂ  ಕೆಲವರು ಯಾವ ಅಧಿಕಾರ, ಅಂತಸ್ಥು ಇಲ್ಲದೆ ಅದ್ಭುತ ಸಾಧನೆ ಮಾಡಿ ಜನಮಾನಸದಲ್ಲಿ ಉಳಿದು ಅಮರರಾಗುತ್ತಾರೆ.

ಕೆಲವರು ಕುರ್ಚಿಗೆ ಅಂಟಿಕೊಳ್ಳುತ್ತಾರೆ. ಅವರಿಗೆ ಕುರ್ಚಿ ಹೊರತು ಅಸ್ತಿತ್ವ ಇರದು. ಕೆಲವರು ಕುರ್ಚಿಗೆ ಅಂಟಿಕೊಳ್ಳುವುದಿಲ್ಲ. ಆದರೂ ಅದೇ ಅವರನ್ನು ಹುಡುಕಿಕೊಂಡು ಬರುತ್ತದೆ. ಅವರು ಅದರ ಗೌರವ ಹೆಚ್ಚಿಸುತ್ತಾರೆ. ಕುರ್ಚಿ ಹೊರತು ಉತ್ತಮ ಭವಿಷ್ಯ ಅಸ್ತಿತ್ವ ಅವರಿಗೆ ಇರುತ್ತದೆ. ಇದೆ ಸತ್ಯ. ಕೆಲವರು ಇರುವ ಕುರ್ಚಿ ತೊರೆದು, ಅಲ್ಲಿ ಗಳಿಸಬಹುದಾದುದಕ್ಕಿಂತ ಅಪಾರ ಕೀರ್ತಿ ಪಡೆಯುತ್ತಾರೆ! ಜನರ ಪ್ರೀತಿಗೆ ಪಾತ್ರರಾಗುತ್ತಾರೆ!

ದೇಶದ ಜನರಿಗೆ ಭಾರತಕ್ಕೊಬ್ಬ ಚುನಾವಣಾ ಆಯುಕ್ತರು ಇರುತ್ತಾರೆ, ಎಂಬ ವಿಷಯವೇ ಟಿ ಎನ್ ಶೇಷನ್ ಭಾರತದ ಚುನಾವಣಾ ಆಯೋಗದ ಆಯುಕ್ತರಾಗುವವರೆಗೂ ತಿಳಿದಿರಲಿಲ್ಲ. ಭಾರತದಲ್ಲಿ ಎಷ್ಟೋ ಚುನಾವಣಾ ಆಯುಕ್ತರು ಆಗಿ ಹೋದರು. ಅವರುಗಳು ಯಾರೊಬ್ಬರ ನೆನಪಲ್ಲಿ ಉಳಿದಿಲ್ಲ. ಆದರೆ ಭಾರತದ ಮಾಜಿ ಚುನಾವಣಾ ಆಯುಕ್ತರಾಗಿದ್ದ ಟಿ ಎನ್ ಶೇಷನ್ ,ಆಯೋಗದ ನಿಯಮಗಳಿಗೆ ಜೀವತುಂಬಿ ರಾಷ್ಟ್ರೀಯ ಪಕ್ಷಗಳಿಗೆ ಕೆಲಕಾಲ ಭಯ ಹುಟ್ಟಿಸಿದರು. ಚುನಾವಣಾ ಸಂಹಿತೆಗೆ ಶಕ್ತಿತುಂಬಿ, ಅಕ್ರಮಗಳಿಗೆ ತಡೆಯೊಡ್ಡಿ, ಅಕ್ರಮಿಗಳಿಗೆ ಸಿಂಹ ಸ್ವಪ್ನರಾದರು. ಇಂಥವರು ಅವರ ಸ್ಥಾನದ ಶಕ್ತಿಯನ್ನು ತೋರಿಸಿ, ಗೌರವವನ್ನು ಹೆಚ್ಚಿಸಿ, ತಮ್ಮ ಗೌರವವನ್ನು ಹೆಚ್ಚಿಸಿಕೊಂಡು ಇತಿಹಾಸದ ಮುಖ್ಯ ಪುಟದಲ್ಲಿ ದಾಖಲಾಗಿದ್ದಾರೆ! ಸಾಂಗ್ಲಿಯಾನ, ಕಿರಣ್ ಬೇಡಿ ಮುಂತಾದವರು ಸ್ಥಾನದ ಮಹತ್ವ ಹೆಚ್ಚಿಸಲು ಪ್ರಯತ್ನಿಸಿದ್ದಾರೆ. ಜನಮಾನಸದಲ್ಲಿ ಜಾಗ ಪಡೆದಿದ್ದಾರೆ.

ನಿವೃತ್ತ ನ್ಯಾಯಮೂರ್ತಿಗಳೂ,  ಲೋಕಾಯುಕ್ತ ಸಂಸ್ಥೆಯ ಮಾಜಿ ಮುಖ್ಯ ಲೋಕಾಯುಕ್ತರೂ ಆಗಿದ್ದ ವೆಂಕಟಾಚಲಪತಿಯವರು ಮತ್ತು ಸಂತೋಷ್ ಹೆಗಡೆಯವರು, ಕರ್ನಾಟಕ ಸರ್ಕಾರಕ್ಕೆ , ಭ್ರಷ್ಟರಿಗೆ ದುಃಸ್ವಪ್ನವಾಗಿ ಕಾಡಿದರು. ಕರ್ನಾಟಕ ಲೋಕಾಯುಕ್ತದ  ಗೌರವ ಘನತೆಯನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ದರು. ರಾಷ್ಟ್ರಮಟ್ಟದಲ್ಲಿ ಖ್ಯಾತರಾದರು. ಇಂದು ಅವರು ಯಾವ ಅಧಿಕಾರ ಸ್ಥಾನದಲ್ಲಿ ಇಲ್ಲದಿದ್ದರೂ ನಾಡು ಆತ್ಮಪೂರ್ವಕವಾಗಿ ಗೌರವಿಸುತ್ತಾ  ಘನತೆಯಿಂದ ನಡೆಯಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲ ಕರ್ನಾಟಕದ ಇತಿಹಾಸದಲ್ಲಿ ಬಹು ಮುಖ್ಯ ಸ್ಥಾನ ಪಡೆದಿದ್ದಾರೆ!

ಯಾವುದೋ ನೆಲದಿಂದ ಯಾವುದೋ ನೆಲಕ್ಕೆ ಬಂದು, ಯಾವುದೋ ಜನಾಂಗಕ್ಕೆ ಸೇರಿ ಮತ್ತಾವುದೋ ಜನಾಂಗದ ಅನಾಥ, ಬಡವ, ದೀನ – ದಲಿತ,  ರೋಗಿಗಳ ಮೇಲೆ ಮಮತೆಯ ಮಳೆಗರೆದು, ಅವರ ರೋಗಗಳ, ದುಃಖಗಳ, ಕಷ್ಟಗಳ ನೀಗಿಸುತ್ತಲೇ ಜೀವನ ಸವೆಯಿಸಿ, ಈ ದೀನ ದಲಿತರ ಸೇವೆಯೇ ದೇವರ ಸೇವೆಯೆಂದು ಮನತಣಿಯೆ ಸೇವೆ ಮಾಡಿ ಅನೇಕ ಪ್ರಶಸ್ತಿಗಳ ಮುಡಿಗೇರಿಸಿ ಮಹಾಮಾನವತಾವಾದಿಯೂ, ಕೀರ್ತಿವಂತಳೂ ಆದ ಮದರ್ ತೆರೆಸ ಯಾವುದೇ ಅಧಿಕಾರ, ಹಣ ಇಲ್ಲದೆ ಅನೇಕ ಸಂಘ ಸಂಸ್ಥೆಗಳನ್ನು ಕಟ್ಡಿ ಆ ಮೂಲಕ ಸೇವೆ ಸಲ್ಲಿಸಿ ಇಷ್ಟು ಅಪಾರ ಗೌರವಕ್ಕೆ ಭಾಜನರಾಗಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಕಲ್ಕತ್ತದಲ್ಲಿ ಸ್ಥಾಪಿಸಿದ ಆ ಸಂಘ ಸಂಸ್ಥೆಗಳು ವಿಶ್ವದ ಗಮನಸೆಳೆಯಿವಂತಾಗಿ ನೋಬಲ್ ಪ್ರಶಸ್ತಿಗೆ ಭಾಜನ ಮಾಡಿವೆ. ಕಲ್ಕತ್ತಕ್ಕೆ ಕೀರ್ತಿ ವಿಶ್ವ ಮಟ್ಟದಲ್ಲಿ ಸಂದಿದೆ!

ಗಾಂಧೀಜಿ ವ್ಯಕ್ತಿಯಾಗಿರಲಿಲ್ಲ ಶಕ್ತಿಯಾಗಿದ್ದರು. ಸ್ವಾತಂತ್ರ್ಯ ಹೋರಾಟದ ಆತ್ಮ ಆಗಿದ್ದರು! ಇವರು ಬಯಸಿದ್ದರೆ ಸ್ವಾತಂತ್ರಾನಂತರ ದೇಶದ ಯಾವ ಸ್ಥಾನ ಬೇಕೆಂದರೆ ಆ ಅಧಿಕಾರದ ಸ್ಥಾನವನ್ನು ಅಲಂಕರಿಸಬಹುದಿತ್ತು. ಆದರೆ ಅವರು ಯಾವ ಅದಿಕಾರಕೂ ಇಷ್ಟಪಡಲಿಲ್ಲ. ಸ್ವಾತಂತ್ರ್ಯ ಬಂದಾಗ ಎಲ್ಲರೂ ಸಂಭ್ರಮಾಚರಣೆಯಲ್ಲೆ ತೊಡಗಿದ್ದಾಗ ಇವರು ಕಲ್ಕತ್ತದಲ್ಲಿ ಯಾವುದೋ ಒಂದು ನಿರ್ಜನ ಬೀದಿಯಲ್ಲಿ ಒಂಟಿಯಾಗಿ ನಡೆದಾಡುತ್ತಿದ್ದರು. ಇಷ್ಟು ಬಡತನದಲ್ಲಿರುವ ದೇಶವನ್ನು ಹೇಗೆ ಉದ್ಧರಿಸುವುದು ಎಂದು ಚಿಂತಿಸುತ್ತಿದ್ದರೇನೋ ! ಹೀಗೆ ಇವರು ಯಾವ ಅಧಿಕಾರಕೂ ಆಸೆ ಪಡದೆ ಭಾರತದಲ್ಲಿ ಬೇರೆ ಯಾರೂ ಗಳಿಸದ ಕೀರ್ತಿ, ಜನಮಾನಸದ ಪ್ರೇಮವನ್ನು ಯಾವ ಅಧಿಕಾರದಲಿಲ್ಲದೆ ಪ್ರಪಂಚದಾದ್ಯಂತ ಗಳಿಸಿದ್ದಾರೆ.

ರಾಣಿಯಾಗಿದ್ದ ಅಕ್ಕಮಹಾದೇವಿ ರಾಜನ ದರ್ಪವನ್ನು, ಪುರುಷ ಪ್ರಧಾನ ಸಮಾಜದ ವ್ಯವಸ್ಥೆಯನ್ನು ರಾಣಿ ಪಟ್ಟವನ್ನು ಧಿಕ್ಕರಿಸಿ, ಅರಮನೆ ತ್ಯಜಿಸಿ, ವೈರಾಗ್ಯ ತಾಳಿ, ದಿಗಂಬರಳಾಗಿ ಹೊರಬರದಿದ್ದರೆ, ಅನುಭವ ಮಂಟಪದ ಕುಲುಮೆಮಯಲ್ಲಿ ಪುಟಕ್ಕಿಟ್ಟ ಚೊಕ್ಕ ಚಿನ್ನವಾಗಿ, ವಚನಕಾರರೆಂಬ ಮುತ್ತಿನ ಹಾರದಲ್ಲಿ ಪ್ರಧಾನ ಮುತ್ತಾಗಿ ಪ್ರಜ್ವಲಿಸುತ್ತಿರಲಿಲ್ಲ! ಸ್ತ್ರೀ ಶೋಷಣೆಯ ವಿರುದ್ಧ ಪ್ರಬಲವಾಗಿ ಹೋರಾಡಿ ಗೆದ್ದು, ಪರಮಪದವನೈದಿದ ಪವಿತ್ರ, ದಿಟ್ಟ, ಮಹಿಳಾ ದ್ವನಿಯಾಗುತ್ತಿರಲಿಲ್ಲ!

ಯುವರಾಜನಾಗಿದ್ದ ಬುದ್ದ ರಾಜನಾಗುತ್ತಿದ್ದ. ಆಗ ಅಪರಿಮಿತ ಅಧಿಕಾರ ಆತನದಾಗುತ್ತಿತ್ತು!  ಮಾನವರಿಗೆ ಬರುವ ದುಃಖ, ನೋವುಗಳ, ಕಷ್ಟಗಳ ಹೋಗಲಾಡಿಸಲು ಅರಮನೆ, ಪ್ರಿಯ ಮನದನ್ನೆ, ಮುದ್ದಿನ ಚಿಕ್ಕ ಮಗ, ಅರಮನೆಯ ಅಪಾರ ಸುಖ ತ್ಯಜಿಸಿ ಕಾಡಿಗೆ ಹೋಗಿ ಪ್ರಯತ್ನಿಸಿದ. ಪ್ರೀತಿಯ ಮಂತ್ರವ ಪಡೆದು ದುಃಖಿಗಳ, ರೋಗಿಗಳ ನೋವ ಹೋಗಲಾಡಿಸುತ ಮಾನವ ಪ್ರೇಮದಲ್ಲಿ ಮೀಯುತ ಜೀವಿಸಿದ! ಕ್ರೂರಿಯಾಗಿದ್ದ ಅಂಗುಲಿಮಾಲನನ್ನು ಸಾವು ಸನಿಹ ಸುಳಿದಾಡಿದರೂ ಹೆದರದೆ ಬಿಕ್ಷು ಆಗಿ ಪರಿವರ್ತಿಸಿದ್ದು ಅವನ ಮಾನವನ ಮೇಲಿನ ಅಪಾರ ಪ್ರೇಮವನ್ನು ತೋರುತ್ತದೆ. ಹಾಗೆ ಅವನ ಮಹಾನ್ ಸಾಧನೆಯಾಗಿದೆ! ರಾಜನಾಗಿ ಗಳಿಸಲಾಗದ ಅಪಾರ ಕೀರ್ತಿ, ಜನರ ಪ್ರೀತಿಯನ್ನು ಯುವರಾಜತ್ವ ತ್ಯಜಿಸಿ, ಯಾವ ಅಧಿಕಾರ, ಹಣ ಇಲ್ಲದೆ ಗಳಿಸಿದ!  ಕೀರ್ತಿಗಳಿಸಲು ಅಧಿಕಾರ, ಹಣ ಮುಖ್ಯವಲ್ಲ ಮಾನವ ಪ್ರೇಮ ಮುಖ್ಯ. ರೋಗಿಗಳನ್ನು, ನೋವಿನಿಂದ ನರಳುವವರನ್ನು  ಪ್ರೀತಿಸುವ ಮನಸ್ಸು, ಕರುಣೆಯ ಹೃದಯ,  ಮಾನವೀಯ ಮಹಾನ್ ಭಾವನೆಗಳು ಮುಖ್ಯ ಎಂದು ಜಗತ್ತಿಗೆ ಇವರು ಸಾರಿರುತ್ತಾರೆ. ಆದರೂ ಜಗತ್ತು ಅಧಿಕಾರ, ಹಣದ ಹಿಂದೆ ಬಿದ್ದು ತೊಳಲುತ್ತಿದೆ!

* ಕೆ ಟಿ ಸೋಮಶೇಖರ ಹೊಳಲ್ಕೆರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಶ್ರೀನಾಥ M V
ಶ್ರೀನಾಥ M V
7 years ago

ಸರಳ ಲೇಖನ "ಕುರ್ಚಿಯ ಗೌರವ" ಬರೆದ ಕೆ.ಟಿ.ಸೋಮಶೇಖರ್ ವ್ಯಕ್ತಿಗಳ, ಅವರು ಮಾಡಿದ ಕೆಲಸಗಳ ಉದಾಹರಣೆ ಸಹಿತ ಕುರ್ಚಿಯ ಗೌರವವನ್ನು ಹೆಚ್ಚಿಸಿದ್ದಾರೆ. ಅಭಿನಂದನೆಗಳು. ಒಳ್ಳೆಯ ಕೆಲಸ ಮಾಡಲು ಅಧಿಕಾರ, ಅಂತಸ್ತು, ಸ್ಥಾನಮಾನಗಳು ಇರಲೇಬೇಕೆಂದಿಲ್ಲ. ಇವೆಲ್ಲವೂ ಇರುವ ಕುರ್ಚಿಯಲ್ಲಿ ಕುಳಿತು ಒಳ್ಳೆಯ ಕೆಲಸ ಮಾಡುವವರು ಆ ಕುರ್ಚಿಯ ಗೌರವ ಹೆಚ್ಚಿಸುತ್ತಾರೆ. ಕೆಟ್ಟ ಕೆಲಸ ಮಾಡುವವರಿಂದ ಕುರ್ಚಿಗೆ ಕಳಂಕ ಬರುತ್ತದೆ.

1
0
Would love your thoughts, please comment.x
()
x