ಯಾವುದೋ ಸಿನೆಮಾ ನೋಡುತ್ತಿರುತ್ತೇವೆ, ಇನ್ಯಾವುದೋ ಕಥೆ ನೆನಪಾಗುತ್ತೆ. ಯಾರದೋ ಜೊತೆ ಮಾತಾಡುತ್ತಿರುತ್ತೇವೆ ಇನ್ಯಾರದೋ ಮಾತಿನ ವರಸೆ ನೆನಪಾಗುತ್ತೆ. ಯಾವುದೋ ಹಾಡು ಗುನುಗು ತ್ತಿರುತ್ತೇವೆ, ಮತ್ಯಾವುದೋ ದುಃಖ ಎದೆಗಿಳಿಯುತ್ತೆ. ಸುಖದ ಕ್ಷಣಗಳು ಕೆಲವನ್ನೇ ಮಾತ್ರ ಜ್ನಾಪಿಸುತ್ತವೆ.
ನಮ್ಮಲ್ಲೂ ಒಂದಲ್ಲ ಒಂದು ಕೊರತೆ ಇದ್ದೇ ಇರುತ್ತದೆ. ಅದನ್ನು ಯಾವ ಹಂತದಲ್ಲಿ ಚಿವುಟಿ ದಾಟಬೇಕು ಅನ್ನುವುದರಲ್ಲಿ ನಮ್ಮ ಜಾಣತನ ಇರುತ್ತೆ. ದುರಂತವೆಂದರೆ, ಆ ಸಮಯಕ್ಕೆ ಅಂತ ಜಾಣತನಕ್ಕೆ ಕಿವುಡು ಮತ್ತು ಮೂಗತನ ಆವರಿಸಿರುತ್ತದೆ. ಆಗಲೇ ನಾವು ಮೆಟ್ಟಿಲಿಂದ ಮೆಟ್ಟಿಲಿಗೆ ಕೆಳಕ್ಕೆ ಪುಸುಗಿ ಜಾರುತ್ತೇವೆ. ಇಂಥದ್ದೇ ಸ್ಥಿತಿ ಅಂತೇನೂ ಹೇಳಲಾರೆ. ಆದರೆ, ಹಂತ ಹಂತವಾಗಿ ಅಧಃಪತನದತ್ತ ತನ್ನನ್ನು ತಾನು ದೂಡಿಕೊಂಡ, ಶಿಕ್ಷಿಸಿಕೊಂಡ, ಜೀವ ಕಳೆದುಕೊಂಡವನೊಬ್ಬನ ಕಥೆ, ಇನ್ನೊಬ್ಬ ಶ್ರೇಷ್ಠ ಕಲಾವಿದನ ಜೀವನದ ಚೂರು ಬರಹ ಓದುವಾಗ ನೆನಪಾಗಿಬಿಟ್ಟ.
ಕ್ಷಮಿಸಿ ಹೆಸರು ಹೇಳಲಿಕ್ಯಾಕೋ ಬೇಡವೆನಿಸಿದೆ. ಆಗಿನ ಎಸ್ ಎಸ್. ಎಲ್. ಸಿ. ಪಾಸಾಗಿಬಿಟ್ಟರೆ ಸಾಕೆಂಬ ಓದಿನ ಸಹವಾಸ. ಹೇಳಿಕೇಳಿ ಹಳ್ಳಿ. ಒಂದ್ನಾಲ್ಕು ಅಟ್ಟೆಂಪ್ಟ್ ಆದರೂ ಪಾಸಾಗುವ ಲಕ್ಷಣ ಕಾಣದಿದ್ದಾಗ, ಪಕ್ಕದ ತಾಲೂಕಿನ "ಸುಲಭ"ಕ್ಕೆ ಪಾಸಾಗಬಹುದಾದ ಪರೀಕ್ಷಾ ಕೇಂದ್ರಗಳನ್ನೂ ಹುಡುಕಿ ಬರೆದು ಬರುತ್ತಿದ್ದರು. ಅಂಥಹ ಪರೀಕ್ಷೆ ಬರೆಯುವ ಆರು ತಿಂಗಳ ಗ್ಯಾಪ್ ಏನಿರುತ್ತಲ್ಲ? ಆ ಹೊತ್ತಿನಲ್ಲೇ ಹಳ್ಳಿಯ ಹೊಲಗಳಲ್ಲಿ, ಹಾಳುಬಿದ್ದ ಗುಡಿ, ರಜೆ ಇದ್ದ ಶಾಲೆ ಮೂಲೆ, ಎಲ್ಲೆಂದರಲ್ಲಿ ಇಸ್ಪೀಟು ಎಲೆಗಳು ಹಾರಾಡುತ್ತಿದ್ದವು. ಹೆಚ್ಚುವರಿ ಯಾಗಿ ಬೆಟ್ಟಿಂಗ್ ಕಟ್ಟಿ ಆಡುವ ಕ್ರಿಕೆಟ್ ಆಟ, ಇತ್ಯಾದಿ. ಕೆಲ ಹುಡುಗರು ತಮ್ಮ ತಮ್ಮ ಓದನ್ನು ಒಂದು ಹಂತಕ್ಕೆ ಹದ್ದುಬಸ್ತಿನಲ್ಲಿಟ್ಟುಕೊಂಡು ಆಟ ಆಡುವ, ಹರಟೆಗೆ ಕೂಡುವ ಜಾಯಮಾನದವರೂ ಇದ್ದರು.
"ಇವ"ನಿದ್ದನಲ್ಲಾ? ಅದೆಷ್ಟು ಬೇಗ ತನ್ನ ಓರಗೆಯ ಮತ್ತು ತನಗಿಂತ ಚಿಕ್ಕ ಆ ಎಲ್ಲಾ ಹುಡುಗರ ಗುಂಪಿನಲ್ಲಿ ಚಾಲ್ತಿಗೆ ಬಂದ. ಹುಡುಗರೋ ಒಬ್ಬೊಬ್ಬರದೂ ಒಂದು ವರಸೆ. ಆ ಎಲ್ಲಾ ಹುಡುಗರಿಗೂ ಸಲೀಸಾಗಿ ಹುಟ್ಟು ಹೆಸರೇ ಮರೆಯುವಷ್ಟರ ಮಟ್ಟಿಗೆ "ಇವ" ಒಂದೊಂದು ನಿಕ್ ನೇಮ್ ಇಟ್ಟುಬಿಡುತ್ತಿದ್ದ. ಮೂಗು ಚೂಪಗಿದ್ದವ ಚೂಪಿ, ಅಶರೀರ "ವಾಣಿ"ಯೊಂದರ ಅನುಗ್ರಹವಾಗಿ ಲಾಟರಿ ಹತ್ತೇಬಿಡುತ್ತೆ ಅನ್ನುವ ನಂಬಿಕೆಯಿಂದಲೇ ಪದೇ ಪದೇ ಖರೀದಿಸುತ್ತಿದ್ದವನಿಗೆ "ವಾಣಿ". ಇಸ್ಪೀಟು ಆಡುವಾಗ ಆಡದೇ ಇರುವವನೊಬ್ಬಮನೆಯಲ್ಲಿ ಚಾ ಸೋಸಿ ತರುವವನಿಗೆ "ಕೇಟಿ" ಪದೇ ಪದೇ ತಮ್ಮ ತಾಕತ್ತು ತೋರಿಸಿದ ಮೊದಲನೆಯವನಿಗೆ "ಸೇರು" ನಂತರ ತೊಡೆ ತಟ್ಟಿದವನಿಗೆ "ಸೇರುವರಿ" ಜಗಳಕ್ಕಲ್ಲ ಮಾತಿಗೆ ನಿಂತರೆ ಇದ್ದವರ ಬಾಯಿ ಮುಚ್ಚಿಸುವಂತೆ ಅರಚು ತ್ತಿದ್ದವನಿದ್ದದ್ದು ಕೆಲವೇ ಕೇಜಿಗಳಷ್ಟು, ಅಂತವನಿಗೆ "ಮುಟಿಗಿ". ಒಂದು ಬಗೆಯ ಕೋಳಿಯನ್ನು ಹೆಚ್ಚು ಇಷ್ಟಪಡುವವನಿಗೆ- "ಕೌಜುಗ", ತೆಳ್ಳಗಿದ್ದ ವನೊಬ್ಬನಿಗೆ "ಲಾಳಕಿ" ಅಂತ. ಮುದ್ದಿ, ಚಾವಿ, ಇರುಕಾ, ಗುಂಗಾಡಿ, ಸಿಮೆಂಟು, ಮೀಸೆ, ಪಾಟಿ, ದಂತಿದುರ್ಗ, ಅಡವಿ, ಭಟ್ಟ, "ಸ್ಟ್ರಾಂಗ್ರಬಿಲ್ಲಿ" ಹೆಪ್ಲ್ಯಾ ಹೀಗೆ ಇನ್ನು ಯಾವ್ಯಾವುದೋ ಹೆಸರಿಟ್ಟು ಕರೆಯುತ್ತಿದ್ದ.
ಸರಿ, ಎಲ್ಲಾ ಹುಡುಗರಿಗೇನೋ "ಇವ" ಅಡ್ಡ ಹೆಸರಿಟ್ಟು ಕರೆದ. ಅವನಿಗೆ ಒಂದು ಹೆಸರನ್ನು ಎಲ್ಲರು ಕರೆಯ ಬೇಕಲ್ಲಾ? ಅದಕ್ಕೂ ಒಂದು ಚಾನ್ಸ್ ಸಿಕ್ಕಿತು. "ಕುರು"ಕ್ಷೇತ್ರದ ಅಧಿಪತಿ, ಎಲ್ಲಾ ರೀತಿಯಿಂದಲೂ ಸರ್ವೇ ಮಾಡಿ ಗ್ರೇಡ್ "ಬಿ" ಕೊಟ್ಟವರಂತೆ ಎಲ್ಲರೂ "ಇವ"ನಿಗೆ "ಕುರು"ಬಿ ಎಂದು ನಾಮಕರಣ ಮಾಡಿದರು. ಇವ ನ್ಯಾವ ಸೀಮೆಗೆ ಅಧಿಪತಿ, ಅದೇನದು "ಕುರು" ಬಿ? ಅದೆಂಥ ಅಡ್ಡ ಹೆಸರು ಅಂದ್ಕೊಂಡ್ರಾ? "ಇವ" ಇಟ್ಟ ಅಡ್ಡ ಹೆಸರುಗಳಲ್ಲಿ ಕೆಲವೊಂದಕ್ಕೆ ಅರ್ಥವೇ ಇರುತ್ತಿದ್ದಿಲ್ಲ. ಇನ್ನು ಕೆಲವು ಬಳಕೆಯಲ್ಲೇ ಇಲ್ಲದ ಪದಗಳು. ಅಂಥಾದ್ದ ರಲ್ಲಿ ಇವನಿಗೆ ಇಟ್ಟ ಹೆಸರಲ್ಲೂ ಅಂಥಾ ಪರೀ ಅರ್ಥ ಇರಲ್ಲ ಆಲ್ವಾ? ಉಹ್ಞೂ… ಇತ್ತು. ಅದೇನಾಗಿತ್ತೆಂದರೆ, "ಇವ"ನಿಗೆ ಆಗಾಗ ಅಂಡಿನ ಮೇಲೆ, ಮೊಳಕಾಲ ಸಂದು, ಕಂಕುಳ, ತೊಡೆ ಸಂದು, ಎಲ್ಲೆಂದರಲ್ಲಿ "ಕುರು" ಎದ್ದೇಳುತ್ತಿದ್ದವು. ರಕ್ತ ಕೆಟ್ಟು ಗಡ್ಡೆಯಂತಾಗಿ, ಬಾತು, ಪುಳ ಪುಳವೆನ್ನುವಂತೆ ಹಣ್ಣಾಗಿ ಪಟ್ ಅಂತ ಒಡೆದು ರಕ್ತ ಒಸರುತ್ತದೆ. ಅದೊಂಥರ ಕೆಟ್ಟ ನಾತ. ಒಮ್ಮೊಮ್ಮೆ ಒಂದಕ್ಕಿಂತ ಹೆಚ್ಚು "ಕುರು" ಆಗಿ ಹೆಜ್ಜೆ ಇಡಲು ಆಗ ದಂತೆ "ಇವ" ತಿಣುಕುತ್ತಿದ್ದರೆ ಬ್ಯಾಡಪ್ಪಾ ಫಜೀತಿ ಅನ್ನಿಸೋದು. ಹಂಗಾಗಿ "ಇವ" ನಿಗೆ "ಕುರು"ಬಿ ಅಂತಲೇ ಕರೆಯುತ್ತಿದ್ದರು.
ಸೀಜನ್ವೈಜ್ ಆಟಗಳಲ್ಲಿ ಸಹ ಓಣಿಯ ಹುಡುಗರು ನಿಸ್ಸೀಮರು. ಗೋಲಿ, ಬುಗುರಿ, ಚಿಣ್ಣಿ ದಾಂಡು, ಲಗೋರಿ, ಐಸ್ಪೈಸ್, ಇನ್ನು ಅನೇಕ. ಎಲ್ಲಾ ಆಟಗಳಲ್ಲೂ "ಕುರು"ಬಿ ಪಾತ್ರವಿರುತ್ತಿತ್ತು; ಎಲ್ಲಾ ಹುಡುಗರಂತೆ. ಹತ್ತನೇ ಕ್ಲಾಸಿನಲ್ಲಿ ಹಲವು ಬಾರಿ "ದಂಡ" ಯಾತ್ರೆಗೈದ "ಇವ" ನಂತರ ಶಿಕ್ಷಕರ ತರಬೇತಿಯಲ್ಲಿ ಎರಡು ವರ್ಷ ಮುಗಿಸಿದ. ನಂತರ ಅದ್ಹೇಗೋ "ಇವ" ಓದಿಗೆ ಒಗ್ಗಿದ. ಓದು ಸೀರಿಯಸ್ ಆದಂತೆಯೇ ಹುಡುಗರು ಸಹ ಲಕ್ಷ್ಯ ವಹಿಸಿದರು. ಹತ್ತರ ಹಾಗೂ ಪಿಯುಸಿ ನಂತರ ಒಬ್ಬೊಬ್ಬರು ಒಂದೊಂದು ಊರಿಗೆ ಶಿಫ್ಟ್ ಆದರು. ನಾವಿನ್ನು ಆಗ ಪ್ರೈಮರಿ ಶಾಲೆ ಹುಡುಗರು. ನಮ್ಮ ಓಣಿ ನಡುವೆ "ಇವ"ನ ಮನೆ ಎದುರಿಗೆ ಗುಡಿ, ಬೀದಿ- ನಲ್ಲಿ, ಮತ್ತು ನೀರಿಲ್ಲದ ಬಾವಿ ಇದ್ದವು. ಪ್ರತಿ ನಿತ್ಯ ಓಣಿಯ ಜನ ನಲ್ಲಿ ನೀರಿಗಾಗಿ ಸಾಲಿಡಿದು ನಿಲ್ಲುವುದು, ಅಗತ್ಯ ಬಿದ್ದರೆ ಸೊಂಟಕ್ಕೆ ಸೀರೆ ಸಿಕ್ಕಿಸಿಕೊಂಡು ವ್ಯಾಕರಣಬದ್ಧವಾಗಿ ಜಗಳವಾಡುವುದು ಇದ್ದೇ ಇತ್ತು. "ಇವ" ಧಾರವಾಡದ ಕಾಲೇಜೊಂದರಲ್ಲಿ ಡಿಗ್ರಿ ಓದುತ್ತಿದ್ದ. ಅವರ ಅಣ್ಣ ಅವನ ಓದಿನ ಖರ್ಚಿಗೆ ಪ್ರತಿ ತಿಂಗಳು ದುಡ್ಡು ಕಳಿಸುತ್ತಿದ್ದ. ಒಂದು ಚೂರು ಅಡಿಕೆ ಹೋಳು ಬಾಯಿಗೆ ಹಾಕದ "ಇವ" ಖರ್ಚಿಗೆ ಕಳಿಸಿದ ಹಣದಲ್ಲಿ ಉಳಿತಾಯ ಮಾಡಿ ಗೆಳೆಯರಿಗೆ ಸಾಲ ಕೊಟ್ಟು ಉಪಕರಿಸುತ್ತಿದ್ದ. ಕಾಲೇಜು ಮಧ್ಯೆ ಊರಿಗೆ ಬಂದಾಗ ಮನೆ ಮುಂದಿನ ಕಟ್ಟೆಗೆ ಕೂತು ಹರಟುತ್ತಿದ್ದ. ಹಾಗೆ ಹರಟುತ್ತಿದ್ದ ವೇಳೆ ಬೀದಿ ನಲ್ಲಿಯಲ್ಲಿ ನೀರು ತುಂಬಲು ಬಂದ "ಅವಳು" ಇವನೆಡೆಗೆ ಆಕರ್ಷಿತಳಾಗಿದ್ದಾಳೆ. ಮತ್ತಾಕೆ ಮದುವೆಯಾದ ಹೆಂಗಸು.
ಸಮಯ ಎಂಥವರನ್ನೂ ತನ್ನ ತೆಕ್ಕೆಯಲ್ಲಿ ಕತ್ತು ಹಿಸುಕುತ್ತೆ. ನೇರಾನೇರ ಅದೆಂದು ಭೇಟಿಯಾಗಿದ್ದರೋ ನಮ್ಮಂಥ ಹುಡುಗರಿಗೆ ಆಗಿನ್ನೂ ತಿಳಿಯದ ವಯಸ್ಸು. "ಅವಳು" ಗಂಡ, ತಂದೆ ತಾಯಿ ಎಲ್ಲರೂ ಅದೇ ಊರಲ್ಲಿದ್ದರೂ ಧೀಡೀರನೇ ರಾತ್ರೋ ರಾತ್ರಿ ಬಸ್ಸು ಹತ್ತಿ ಧಾರವಾಡದ "ಇವ"ನ ರೂಮಿನ ಬಾಗಿಲು ಬಡಿಯಲು ಶುರು ಮಾಡಿದಳು. ಮೊದಮೊದಲು ತಡವರಿಸಿದ ಇಬ್ಬರು ನಂತರ ಸಹಜವೆನ್ನುವಂತೆ ಒಮ್ಮೊಮ್ಮೆ ರೂಮಿನ ಜೊತೆಗಾರರು ಹೊರ ಹೋದಾಗ, ಇಲ್ಲವೇ ಅನಿವಾರ್ಯವಾಗಿ ಲಾಡ್ಜ್ ಮಾಡಿ "ಕೂಡುವ" ಕಲೆ ರೂಢಿಸಿ ಕೊಂಡರು. ಸಣ್ಣಗೆ ವಾಸನೆ ಹರಡಿದ ವಿಷಯ ಧಾರವಾಡದಿಂದ ನಮ್ಮೂರು, ಓಣಿ, ಅವರವರ ಮನೆಗಳು, ಜನಗಳು ಕಡೆಗೆ ಹುಡುಗರಿಗೂ ಹಡರಿತು. ಮೊದಲೆರಡು ವರ್ಷದ ಡಿಗ್ರಿಯನ್ನು ಚೆನ್ನಾಗೇ ಓದಿದ್ದ "ಇವ", ತನ್ನ ಜೊತೆಗಿದ್ದವರಿಗೆ ಓದಿನ, ಮುಂದಿನ ಭವಿಷ್ಯ ಬಗ್ಗೆ ಚೊಕ್ಕವಾಗಿ ಹೇಳಿ ಮಾದರಿಯಾಗಿದ್ದ. ಕೊನೆಯ ವರ್ಷ ಇನ್ನೇನು ಆರು ತಿಂಗಳು ಕಳೆದರೆ ಆತನ ಓದೇ ಮುಗಿಯುತ್ತಿತ್ತು. ಆದರೆ, ದೇಹ ಭಾಷೆಗೆ ಪರಿಚಯಗೊಂಡ "ಇವ"ನಿಗೆ ಓದು ವರ್ಜ್ಯವಾಯಿತು. ಎರಡು ತಿಂಗಳು ಕಳೆದರೆ ಚೆಂದಗೆ ಶಾಲಾ ದೇಗುಲದ ಕಾವಲಾಗಿ ಮಕ್ಕಳ ಮುಂದೆ ನಿಲ್ಲಬಹುದಾಗಿದ್ದ "ಇವ"ನು "ಅವಳ" "ಓಡಿ ಹೋಗುವ ಕರೆ"ಗೆ ಓದಿ ಬರುವ ಊರನ್ನೇ ಬಿಟ್ಟು ಇದ್ದೂರನ್ನು ಸೇರಿದ. ಬಹುಶಃ ತಿಳಿದವರು ಬುದ್ಧಿವಾದ ಹೇಳಿದ್ದಿರಬಹುದು. ಆದರೆ, ಕೇಳುವ ಸಹನೆ ಇಬ್ಬರಲ್ಲೂ ಇಲ್ಲದ್ದನ್ನು ಕೇಳಿ ಜನ ಆಡಿಕೊಂಡರು; "ಇದೆಂಥ ಹುಚ್ಚು ಪ್ರೇಮ?" ಅದೇ ಸಮಯಕ್ಕೆ "ಇವ"ನ ಓದಿಗೆ ದುಡ್ಡಿನ ಸಹಾಯ ಮಾಡುತ್ತಿದ್ದ ಅಣ್ಣನೂ ಕೈ ಎತ್ತಿದ್ದ.
"ಅವಳು" ಗಂಡ, ತಂದೆ ತಾಯಿ ಎಲ್ಲರನ್ನೂ ಬಿಟ್ಟು "ಇವ" ತನ್ನವರನ್ನು ಬಿಟ್ಟು ರಾತ್ರೋ ರಾತ್ರಿ ಕಾಣೆ ಯಾದರು. ಆ ಹೊತ್ತಿಗೆ "ಇವ" ತನ್ನಲ್ಲಿ ಕೂಡಿಟ್ಟುಕೊಂಡಿದ್ದ ಸ್ವಲ್ಪ ಹಣವಿತ್ತು. ದುಡಿಮೆಗೆ ಏನೋ ಮಾಡಿದರು. ಕೆಲ ಕಾಲದ ನಂತರ ವ್ಯವಹಾರಕ್ಕೆ, ಸಂಭಂಧಿಕರ ಮನೆಗೆಂದು ಊರು ತಿರುಗುವ ವೇಳೆ ಅದೊಮ್ಮೆ ಪರಿ ಚಯದ ಜನರ ಕಣ್ಣಿಗೆ "ಇವ" ಕಣ್ಣಿಗೆ ಕಂಡಾಗ ಬೆಸ್ತು ಬಿದ್ದಿದ್ದಾರೆ. "ಇವ" ಒಂದೂರಲ್ಲಿ ಕಟ್ಟಡ ಕಾಮಗಾರಿ ಯಲ್ಲಿ ಕೂಲಿಯಾಗಿ ಕಲ್ಲು ಬಿಂಚಿ ಒಡೆಯುತ್ತಿದ್ದನಂತೆ. "ಅವಳೆಲ್ಲಿ? " ಎಂದು ಕೇಳಿದರೆ ಗೊತ್ತಿಲ್ಲ ಎಂದಿ ದ್ದಾನೆ. ಅಲ್ಲಿಗೆ ಸೂಕ್ಷ್ಮ ಅರ್ಥವಾಗಿದೆ. "ಅವಳಿಗೆ" ಬೇಕಾದ್ದು ತನಗೆ ದೊರೆತ ನಂತರ ಇವನಿಗೂ ಕೈ ಕೊಟ್ಟು ದಾಟಿ ನಡೆದಿದ್ದಾಳೆ. "ಇವ"ನಿಗೆ ಮರಳಿ ತನ್ನೂರಿಗೆ ಬರಲಾರದೇ ತನ್ನೆಡೆಗೆ ತಾನೇ ಅಸಹ್ಯಪಟ್ಟುಕೊಂಡಿ ದ್ದಾನೆ. ಅನಿವಾರ್ಯ, ಹೊಟ್ಟೆ ಕೇಳಬೇಕೇ? ಇದಿಷ್ಟೂ ಕಷ್ಟಗಳನ್ನು ಮೈಮೇಲೆ ಬೀಳುವ ಹೊತ್ತಿಗೆ ಅನಾ ಯಾಸವಾಗಿ ಕುಡಿತವೂ ಅಂಟಿದೆ. ಕೇವಲ ಇಪ್ಪತ್ತೈದರ ಆಸುಪಾಸಿನ ಮನುಷ್ಯ ಆ ಹೊತ್ತಿಗೆ ತಲೆಗೂದಲು ಉದುರಿ, ಬಾಯಲ್ಲಿ ಹಲ್ಲು ಬಿದ್ದು, ಕೃಶ ದೇಹ ಮತ್ತು ಬಿಳಿ ಗಡ್ದದೊಳಗೆ ಇಣುಕುವ ಬತ್ತಿದ ಕಣ್ಣಿನ ವಯಸ್ಸಾದ ಮುದುಕನಂತಾಗಿದ್ದ.
ಕಡೆಗೊಂದು ದಿನ ಮನೆಯವರು ಮತ್ತು ಬೆರಳೆಣಿಕೆಗೆ ಸಿಕ್ಕ ಹಿತೈಷಿಗಳ ಮಾತು ಕೇಳಿ ತನ್ನೂರಿಗೆ ಬಂದ. ಬಂದವನನ್ನು ಓಣಿ ಮತ್ತು ಊರ ಜನ ನೋಡಿ "ಅವನೇನಾ?" "ಇವ" ಅನ್ನುವಂತಾಗಿದ್ದ. ಹೆಂಗಿದ್ದ "ಇವ" ಹೆಂಗಾದ ಅಂತೆಲ್ಲಾ ಜನ ಆಡಿಕೊಂಡರು. "ಇವ"ನಿಗೆ ಅದೆಲ್ಲವೂ ಗೊತ್ತಿತ್ತು. ಮೊದಲಾದರೆ ತಾನು ಎಂಥ ಹವರ ಎದುರಾದರೂ ನಿಂತು ತನ್ನನ್ನು ಸಮರ್ಥಿಸುವಂತೆ ವಾದಿಸಿ, ಜಗಳಕ್ಕೆ ನಿಲ್ಲುತ್ತಿದ್ದ; ಅದು ಕ್ರಿಕೆಟ್ಟೇ ಇರಲಿ, ಮತ್ಯಾವುದೇ ಇರಲಿ. ಆದರೆ ಈಗ ತನ್ನಲ್ಲಿ ಯಾವುದೇ ತರ್ಕವಿಲ್ಲ. ಸಿಟ್ಟಿಲ್ಲ, ಸೊಕ್ಕೂ ಇಲ್ಲ; ಹತಾಶೆ ಒಂದನ್ನು ಬಿಟ್ಟು. "ಇವ" ತನ್ನ ಮನೆಯ ಕಟ್ಟೆಗೆ ಇದ್ದ ಕೆಲವೇ ಹುಳುಕು ಹಲ್ಲುಗಳ ಮಧ್ಯೆ ಗುಟ್ಕಾ ಅಗಿಯುತ್ತಾ, ಉಗಿಯುತ್ತಾ ಕುಳಿತು ಹೊಸ ಪೀಳಿಗೆಯ ಹುಡುಗರ ಮುಖದಲ್ಲಿ ಚಿಗುರು ಮೀಸೆ ಮೂಡುತ್ತಿದ್ದ ದಿನಗಳನ್ನೇ ನೋಡಿ ದಿನ ತಳ್ಳುತ್ತಿದ್ದ. ವಿಧವೆ ಅಕ್ಕನ ಮನೆಯ ಊಟ, ರಾತ್ರಿಯಾದರೆ ಸಾಕು ತನ್ನ ಬದುಕನ್ನು ತಾನೇ ಹಾಳು ಮಾಡಿಕೊಂಡ ದುಃಖಕ್ಕೆ ಕುಡಿತ. ಕುಡಿತದ ಖರ್ಚಿಗೆ ಕೈ ಖಾಲಿಯಾದರೆ ಅವರಿವರ ಹತ್ತಿರ ಹತ್ತಿಪ್ಪತ್ತು ಪಡೆದು ಸಾರಾಯಿ ಪಾಕೆಟ್ಟು ಕುಡಿದು ಕಣ್ಣೀರಾಗುತ್ತಿದ್ದ. ದುಡಿದು ತಿನ್ನಲು ಮೈಯಲ್ಲಿ ಕಸುವೇ ಇಲ್ಲ. ಬದು ಕೋಣವೆಂದರೆ "ಇವ"ನಿಗೆ ಜಿಗುಪ್ಸೆ. ತನ್ನ ಓರಗೆಯವರಿಗೆ ಈ ಹಂತಕ್ಕೆ ದುಡಿಮೆ ಮದುವೆ, ಮಕ್ಕಳು, ಹೊರಜಗತ್ತಿಗೆ ಅವರದೇ ಆದ ಗುರುತು ಎಲ್ಲವೂ ಇವೆ. ಆದರೆ "ಇವ" ನನ್ನು ಹೊರಜಗತ್ತಿರಲಿ, ಮನೆಯವ ರಿಗೇ ತಮ್ಮವನೆಂದು ಗುರುತು ಹೇಳಿಕೊಳ್ಳಲು ಆಗದ ಮುಜುಗರ.
ಕಡೆಗೊಂದು ರಾತ್ರಿ ಮೊದಲಿಂದಲೂ "ಚಾವಿ" ಎಂದು ಅಡ್ಡ ಹೆಸರಿಟ್ಟು ಕರೆಯುತ್ತಿದ್ದವನ ಹತ್ತಿರ ತನಗೆ ಬದುಕು ಬೇಡವಾದ ಬಗ್ಗೆ, ತಾನು ಮಾಡಿಕೊಂಡ ಎಡವಟ್ಟಿಗೆ ತಾನು ಮಾತ್ರ ಬಲಿಯಾಗಲೇಬೇಕು. ಇನ್ನು ಮನೆಯವ ರಿಗೆ ಊಟಕ್ಕೆ ಹೊರೆಯಾಗಿರಲಾರದೇ, ಹೊರ ಜಗತ್ತಿಗೆ ಒಂದು ಉದಾಹರಣೆಯಾಗಿ ಕೊನೆಯಾಗಬೇಕೆಂದಿ ರುವ ಬಗ್ಗೆ ಅತ್ತು ಅತ್ತು ಕೊರಗಿದ್ದಾನೆ. "ಚಾವಿ" "ಇವ"ನ ಸಂಕಟ ನೋಡಲಾರದೇ ಒಂದಿಷ್ಟು ದುಡ್ಡು ಕೊಟ್ಟು ಚೆನ್ನಾಗಿ ಊಟ ಮಾಡು ಅಂದಿದ್ದಾನೆ. ಆಯಿತೆಂದು ಹೊರಟವನು ರಾತ್ರಿ ಹನ್ನೆರಡರ ಹೊತ್ತಿಗೆ ಕರುಳು ಸುಟ್ಟು ಹೋಗುವ ಹಾಗೆ ಸರಾಯಿ ಕುಡಿದು ಬಂದು ಮನೆಯ ಕಾಂಪೌಂಡಿನಲ್ಲಿ ಮಲಗಿದ್ದಾನೆ. ಅಷ್ಟೇ, ಒಂದು ಹೊತ್ತಿನಲ್ಲಿ ಸಂಕಟ, ಹೆದರಿಕೆ, ಅಸಹ್ಯ, ಒಟ್ಟೊಟ್ಟಿಗೆ ಬಂದವನಂತೆ ಅರಚಲು ಶುರು ಮಾಡಿದ್ದಾನೆ. "ಇವ"ನ ಸಂಕಟದ ಅರ ಚಾಟಕ್ಕೆ ಓಣಿ ಜನರು ಸಹಾಯ ಮಾಡಲೂ ಆಗದೇ ಅವನತ್ತ ಕರುಣೆಯಿಂದಲೂ ನೋಡ ಲಾರದ ಸ್ಥಿತಿ ತಲುಪಿದ್ದಾರೆ. ಅದೇ "ಚಾವಿ" "ಚೂಪಿ" ಮತ್ತು "ಭಟ್ಟ" ರೆಂಬ ಅಡ್ಡ ಹೆಸರಿನ ಹುಡುಗರು ಆ ರಾತ್ರಿ ಅವನ ಕೊನೆಯ ಕ್ಷಣಗಳನ್ನು ನೋಡಿ ಗುಳಿಗೆ ತಂದು ಕೊಟ್ಟಿದ್ದಾರೆ. ಬೆಳಗಾಗುವ ಹೊತ್ತಿಗೆ ಮನೆಯ ಬಾಗಿಲ ಮುಂದೆ "ಇವ" ಮಲಗಿದಂತೆಯೇ ಇದ್ದಾನೆ, ಆದರೆ ಜೀವ ಮಾತ್ರ ಇದ್ದಿಲ್ಲ. ಓಣಿಯ ಜನ ಯಾರೂ ಇವನ ಶವಸಂಸ್ಕಾರಕ್ಕೆ ಅಷ್ಟಾಗಿ ಮುಖ ತಿರುಗಿಸಿಲ್ಲ. ರಾತ್ರಿ ಗುಳಿಗೆ ತಂದು ಕೊಟ್ಟವರೇ ಬೆಳಿಗ್ಗೆ ಹೆಣ ಊಳಲು ವ್ಯವಸ್ಥೆ ಮಾಡಿ ಸುಮ್ಮನಾಗಿದ್ದಾರೆ.
ಮೊನ್ನೆ ಜಗತ್ತಿನ ಶ್ರೇಷ್ಠ ಕಲಾಕಾರ ವಿನ್ಸೆಂಟ್ ವ್ಯಾನ್ ಗೋ ಅವರ ಬಗ್ಗೆ ಬಂದಿದ್ದ ಲೇಖನವೊಂದನ್ನು ಓದು ತ್ತಿದ್ದೆ. ಈ ಮುಂಚೆ ಹಲವು ಬಾರಿ ಆ ಕಲಾವಿದನ ಬಗ್ಗೆ ಓದಿದ್ದೆನಾದರೂ ಮತ್ತೆ ಮತ್ತೆ ಓದಬೇಕಿನಿಸಿತು. ಆತನ ಹುಟ್ಟು, ಬಾಲ್ಯ, ಯೌವ್ವನ, ಉರ್ಸುಲಾಳೊಂದಿಗೆ ಇದ್ದ ಪ್ರೇಮ, ಸಿಡುಬು ರೋಗದ, ಒಂದು ಮಗುವಿನ ತಾಯಿಯಾದ ವೇಶ್ಯ ವೃತ್ತಿಯ ಸಿಯೋನ್ ಜೊತೆಗಿನ ಸಾಹಚರ್ಯ, ತನ್ನೆಲ್ಲಾ ಭಾವನೆಗಳನ್ನು ಅವನ ಸಹೋದರ ಥಿಯೋನೊಂದಿಗೆ ಹಂಚಿಕೊಳ್ಳುತ್ತಿದ್ದ ಪತ್ರ ಸಂಭಂಧ. ಹುಚ್ಚಾಸ್ಪತ್ರೆ ಸೇರಿದರೂ ತನ್ನೊಳಗಿನ ಕಲಾವಿದನನ್ನು ಜಾಗ್ರತೆಯಿಂದ ಕಾಪಾಡಿಕೊಂಡು ಬಂದಿದ್ದ ಕಲಾಕಾರ. ಜಗತ್ತು ಆತನ ನಂತರ ಅವನ ಕಲಾ ಕಸುಬಿನ ಕುರುಹುಗಳಿಗೆ ಲಕ್ಷ ಲಕ್ಷ ಡಾಲರ್ ಬೆಲೆ ಕಟ್ಟಿದರು. ದುರಂತವೆಂದರೆ, ವ್ಯಾನ್ ಗೋ ತನ್ನ ಜೀವಿತಾ ವಧಿಯಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡಿದ್ದ. ವ್ಯಾನ್ ಗೋ ತಮ್ಮ ಥಿಯೋನ ಹೆಂಡತಿ ಜೋಹನಾ ಅತ್ಯಂತ ಆಸ್ಥೆ ವಹಿಸಿ ವ್ಯಾನ್ ಗೋ ಅವರ ಚಿತ್ರಗಳನ್ನು ಮತ್ತು ಆತನ ಯೌವ್ವನಾವಸ್ಥೆಯಲ್ಲಿ ತಾನು ಆತನ ತಮ್ಮ ಥಿಯೋನೊಂದಿಗೆ ಬರೆಯುತ್ತಿದ್ದ ಪತ್ರಗಳನ್ನು ಜೋಡಿಸಿ ಆತ್ಮ ಕಥನವನ್ನಾಗಿಸುತ್ತಾರೆ.
ಜಗತ್ತಿನ ಕೆಲವು ಶ್ರೇಷ್ಠರ ಜೀವನದಲ್ಲಿ ಅತ್ಯಂತ ದುರ್ಬರ ದಿನಗಳನ್ನು ಎದುರಿಸಿದ ಉದಾಹರಣೆ ಸಾಕಷ್ಟು ಸಿಗುತ್ತವೆ. ಅದು ಇಂಥದ್ದೇ ಆಗಬೇಕೆಂದೇನಿಲ್ಲ. ಪ್ರೀತಿಯದು, ದುಡಿಮೆಯದು, ಬಾಲ್ಯದ್ದು, ಮುಗಿಯ ಲಾರದ ದುಃಖದ್ದು, ಮೊಗೆದು ಮೊಗೆದು ತೆಕ್ಕೆ ತುಂಬಾ ಅನುಭವಿಸಿ ಈಗಿತ್ತು, ಈಗಿಲ್ಲ ಎನ್ನುವಂತೆ ಮುಗಿದು ಹೋದ ಸಂತೋಷದ್ದು. ಅವಮಾನಕ್ಕೆ ಎದೆ ಕೊಟ್ಟಿದ್ದು, ಸ್ವಾಭಿಮಾನ ಅಡವಿಟ್ಟು ಜೀವನವನ್ನೇ ಕೇವಲ ಒಂದು ಸಣ್ಣ ಸುಳ್ಳು, ಕಳ್ಳತನ, ವ್ಯಸನಕ್ಕೆ ಕೈ ಚಾಚಿ ಯಾವುದಾದರೊಂದು ತಿರುವಿನಲ್ಲಿ ಮುಗುಚಿ ಬಿದ್ದ ಕತೆಗಳು ಕಂತೆ ಕಂತೆಯಾಗಿ ಸಿಗುತ್ತವೆ.
"ಇವ"ನೇನೂ ವಿನ್ಸೆಂಟ್ ವ್ಯಾನ್ ಗೋ ನಂತೆ ಕಲಾವಿದನಲ್ಲ. ಜಗತ್ಪ್ರಸಿದ್ಧನಂತೂ ಅಲ್ಲವೇ ಅಲ್ಲ. ನಿಜಕ್ಕೂ "ಇವ"ನನ್ನು ಯಾರಿಗೂ ಯಾವ ಸಂಧರ್ಭಕ್ಕೂ ಹೋಲಿಸುವ ಪ್ರಶ್ನೆಯೇ ಇಲ್ಲ. ಆದರೆ, ಒಬ್ಬ ಶಿಕ್ಷಕನಾಗಿ ನೂರಾರು ಮಕ್ಕಳಿಗೆ ವಿದ್ಯೆ ಕಲಿಸಿಕೊಡಬಲ್ಲ ವ್ಯಕ್ತಿಯಾದರೂ ಆಗಬಹುದಾಗಿದ್ದ. ಕೊನೆ ಪಕ್ಷ ತನ್ನ ಅನ್ನ ತಾನು ದುಡಿದು ತಿನ್ನುವ ಸಾಧಾರಣ ಆರೋಗ್ಯವಂತ ಮನುಷ್ಯನೂ "ಇವ"ಆಗಲಿಲ್ಲವಲ್ಲ? ಅದು ನನಗೆ ವ್ಯಾನ್ ಗೋ ಬಗ್ಗೆ ಬರಹ ಓದಿದ ನಂತರ ಥಟ್ಟನೇ ನೆನಪಾದ ಸಂಗತಿ…….
*****
ಒಬ್ಬ ವ್ಯಕ್ತಿ ತಾನು ಬೆಳೆಯುವಾಗ ತನ್ನ ಬಾಲ್ಯದಲ್ಲಿ ಆಗುವ ಎಡರು ತೊಡರುಗಳು ಅವನ ಜೀವನದ ಮುಂದಿನ ಸ್ಥಿತಿ ಗತಿ ತಿಳಿಸುತ್ತದೆ. ಇವತ್ತಿನ ದಿನಮಾನದಲ್ಲಿ ಯಾವತ್ತು ಅನ್ಯ ಲಾಲಸೆಗಳಿಗೆ ಬಲಿಯಾಗದೆ ತಮ್ಮ ಬುದ್ದಿಶಕ್ತಿಯನ್ನು ಮೊದಲು ತನ್ನ ಏಳಿಗೆಗಾಗಿ ಹಾಗೂ ನಂತರ ತನ್ನ ಏರಿಯಾದ ಏಳಿಗೆಗಾಗಿ ಹಾಗೂ ದೇಶದ ಒಳಿತಿಗಾಗಿ ಬಳಸಿಕೊಳ್ಳಬೇಕು.
ಸ್ವಯಂಕೃತಾಪರಾಧ.
ಬದುಕು ಎಲ್ಲರಿಗೂ ಬದುಕುವ ಕಲೆ ಕಲಿಸುವುದಿಲ್ಲ ಅಲ್ವಾ.. 🙁
ottinalli kelavu hane baraha, innu kelavu swayamkrutha.. Kelavaru thamma dadda thanthinda jeevanavanna halu madkothare….
Tragic character Amar! Such people are like misguided Missiles!! They have huge potential, but their target and trajectory are not right. So, they end up destroying themselves! You have narrated the true incident in a commendebale manner.
ಅಮರ್, ಓದಿ ಬೇಜಾರಾಯ್ತು. ಇತರರಿಗೆ ಹೆಸರಿಟ್ಟವನು ಹೇಳ ಹೆಸರಿಲ್ಲದಂತಾಗಿದ್ದು ವಿಷಾಧದ ಸಂಗತಿ…