ಪ್ರಶಸ್ತಿ ಅಂಕಣ

ಕುರುಡುಮಲೆ ಪ್ರವಾಸ: ಪ್ರಶಸ್ತಿಸ್ಥಳವೊಂದರ ಹೆಸರು ಕಾಲಕಾಲಕ್ಕೆ ಹೇಗೆ ಬದಲಾಗುತ್ತಾ ಸಾಗುತ್ತೆ ಅನ್ನೋದಕ್ಕೆ ಕೋಲಾರ ಮತ್ತು ಕುರುಡುಮಲೆ ಒಳ್ಳೆಯ ಉದಾಹರಣೆ ಅನಿಸುತ್ತೆ. ಮೂರನೆಯ ಶತಮಾನದಲ್ಲಿ ಗಂಗರ ಅಧೀನದಲ್ಲಿದ್ದ ಒಂದು ನಗರಿ ಕೂವಲಾಲಪುರ. ಅದು ನಂತರ ಚೋಳ,ಹೊಯ್ಸಳ, ವಿಜಯನಗರ ಅರಸರಿಂದ ಆಳಲ್ಪಡುತ್ತಾ ಕೋಲಾರಮ್ಮನ ದೇವಸ್ಥಾನವನ್ನು ಹೊಂದಿ ಕೋಲಾರವಾಯಿತಂತೆ. ಅದೇ ರೀತಿ ಬ್ರಹ್ಮ, ವಿಷ್ಣು, ಮಹೇಶ್ವರರು ಧರೆಗಿಳಿದು ಬಂದು ಕೂಡಿ ಮೂರ್ತಿಯನ್ನು ಪ್ರತಿಷ್ಟಾಪಿಸಿದರೆಂಬ ಪ್ರತೀತಿಯಿದ್ದರಿಂದ ಕೋಲಾರದ ಹತ್ತಿರದ ಸ್ಥಳವೊಂದಕ್ಕೆ ಕೂಟುಮಲೆಯೆಂದು ಹೆಸರಾಯಿತಂತೆ. ಕೂಟುಮಲೆ, ಕೂಡುಮಲೆ ಜನರ ಬಾಯಲ್ಲಿ ಕುರುಡುಮಲೆಯಾಗಿದೆಯೀಗ.

ಹೋಗುವುದು ಹೇಗೆ ? 
ಕೋಲಾರದಿಂದ ೧೫ಕಿಮೀ ಮುಳಬಾಗಿಲಿನಿಂದ ೭ ಕಿ.ಮಿ ದೂರವಿರುವ ಕುರುಡುಮಲೆಗೆ ಕೆ.ಎಸ್.ಆರ್‍ಟಿಸಿಯ ನೇರ ಬಸ್ಸುಗಳಿವೆ. ಬೆಂಗಳೂರಿನಿಂದ ಮುಳಬಾಗಿಲಿಗೆ ಹೋಗಿ ಅಲ್ಲಿಂದ ಕುರುಡುಮಲೆಗೆ ತೆರಳಬೇಕು.ಬೆಂಗಳೂರಿನಿಂದ ಇಲ್ಲಿಗೆ ೧೦೮ಕಿ.ಮಿ

ಕುರುಡುಮಲೆಯಲ್ಲಿ ನೋಡಲೇನಿದೆ?
೧೦೮ ಅಂದ ತಕ್ಷಣ ನೆನಪಾಗೋದು "ನೂರೆಂಟು ನಾಮದ ಗಣಪತಿರಾಯ, ನೂರೆಂಟು ಭಕುತರ ನೂರೆಂಟು ನಮನಗಳು.." ಎಂದು ಚಿಕ್ಕಂದಿನಲ್ಲಿ ಕೇಳುತ್ತಿದ್ದ ಭಕ್ತಿಗೀತೆ. ಕುರುಡುಮಲೆಯಲ್ಲಿ ಮುಖ್ಯವಾಗಿ ಇರೋದೂ ವಿನಾಯಕ ದೇವಸ್ಥಾನವೇ. ಅದರ ಜೊತೆಗೆ ಚೋಳರ ಕಾಲದ ಸೋಮೇಶ್ವರ ಮತ್ತು ಕ್ಷಮದಾಂಭ ದೇಗುಲಗಳಿವೆ

ಇದಕ್ಕೆ ಕುರುಡುಮಲೆ ಎಂತಲೇ ಹೆಸರು ಬಂದಿದ್ದರ ಹಿಂದಿನ ಮತ್ತೊಂದಿಷ್ಟು ಕತೆಗಳು 
ಇಲ್ಲಿ ಕೌಂಡಿನ್ಯ ಮಹರ್ಷಿಗಳು ತಪಸ್ಸನ್ನಾಚರಿಸಿದ್ದರು, ಹಾಗಾಗಿ ಇದು ಕೌಂಡಿನ್ಯ ಕ್ಷೇತ್ರವೆಂಬ ಪ್ರತೀತಿಯಿದೆ.ಕೌಂಡಿನ್ಯ ನದಿ ಹುಟ್ಟುವ ಇಲ್ಲಿ ಎರಡು ಬೆಟ್ಟಗಳು ಕೂಡುವ ಕಾರಣ ಕೂಡುಮಲೆ ಎಂದು ಹೆಸರು ಬಂದಿದ್ದು, ಅದೇ ನಂತರದಲ್ಲಿ ಕುರುಡುಮಲೆ ಆಗಿರಬಹುದು ಎಂಬುದು ಒಂದಿಷ್ಟು ಜನರ ನಿಲುವು. ತ್ರಿಪುರಾಸುರ ಸಂಹಾರವಾದ ಬಳಿಕೆ ದೇವತೆಗಳೆಲ್ಲ ಈ ಬೆಟ್ಟದ ಮೇಲೆ ಕೂಡಿ ಸಂಭ್ರಮಪಟ್ಟಿದ್ದರಿಂದ ಇದಕ್ಕೆ ಕೂಡುಮಲೆಯೆಂದು ಹೆಸರು ಬಂದಿರಬಹುದೆಂಬುದು ಇನ್ನೊಂದು ಗುಂಪಿನ ನಿಲುವು. ಕೃತ ಮತ್ತು ದ್ವಾಪರಯುಗದಲ್ಲಿ ಇದು ಗಣೇಶಗಿರಿಯೆಂದು ಹೆಸರಾಗಿತ್ತೆಂದೂ ಇಲ್ಲಿದ್ದ ಗಣೇಶ ದೇಗುಲವನ್ನು ಚೋಳರು ಪುನರ್ನಿಮಿಸಿದರೆಂದೂ ಕೆಲ ಜನರ ನಂಬುಗೆ

ಸೋಮೇಶ್ವರ ಮತ್ತು ಕ್ಷಮದಾಂಭ ದೇಗುಲಗಳು:
ಚೋಳರ ಕಾಲದಲ್ಲಿ ಪ್ರಸಿದ್ಧ ಶಿಲ್ಪಿ ಜಕಣಾಚಾರಿ ಕಟ್ಟಿದ್ದೆನ್ನಲಾದ ಈ ದೇಗುಲಗಳು ತಮ್ಮ ಶಿಲ್ಪಕಲೆಯಿಂದ ಗಮನ ಸೆಳೆಯುತ್ತವೆ. ಸೋಮೇಶ್ವರ ದೇಗುಲದ ಎದುರಿಗೆ ಗಣೇಶನ ವಿಗ್ರಹವಿದೆ. ಮಕರಗಳಿಂದ ಕೂಡಿದ ಆರು ಮೆಟ್ಟಿಲುಗಳನ್ನು ಹತ್ತಿದರೆ ದೇಗುಲಕ್ಕೆ ಪ್ರವೇಶ. ಪ್ರವೇಶದ ಇಕ್ಕೆಲಗಳಲ್ಲೂ ತಾಂಡವ ನೃತ್ಯವನ್ನು ಮಾಡುತ್ತಿರುವ ಶಿವ, ಸಿಂಹಗಳು, ದೇವಿಯರ ಕೆತ್ತನೆಗಳಿರುವ ಕಂಬಗಳು ಸಿಗುತ್ತವೆ. ದೇಗುಲದ ಒಳಗಿನ ಕಂಬಗಳಲ್ಲಿ ಆನೆಯೇರಿದ ಇಂದ್ರಾಣಿ, ಗಂಡಭೇರುಂಡ, ಶಿವಪೂಜೆಗೈಯುತ್ತಿರುವ ದೃಶ್ಯಾವಳಿ,ಬೇಡರ ಕಣ್ಣಪ್ಪ,ಶುಕಮುನಿ, ಮಲ್ಲಯುದ್ದ . ಯಕ್ಷರು ಮುಂತಾದ ಶಿಲ್ಪಗಳಿವೆ. 

ದೇಗುಲದ ಪಕ್ಕದಲ್ಲೇ ಆರು ಮುಖಗಳಿಂದ ಕೂಡಿದ ಕಾರ್ತೀಕೇಯನ ಪುಟ್ಟ ದೇಗುಲವಿದೆ. 
ಅದನ್ನು ದಾಟಿ ಬಂದರೆ ಕ್ಷಮದಾಂಭ ದೇವಿಯ ದೇಗುಲ. ನೋಡಲು ಪಾರ್ವತಿ ದೇವಿಯಂತೆ ಕಾಣುವ ಈ ದೇಗುಲದ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲ. ಅದನ್ನೂ ದಾಟಿ ಮುಂದೆ ಬಂದರೆ ದೇಗುಲದ ಗೋಡೆಯ ಆಚೆಗಿರುವ ನಂದಿಮಂಟಪ ಸಿಗುತ್ತದೆ. ಸಾಮಾನ್ಯವಾಗಿ ನಂದಿಮಂಟಪ ಸೋಮೇಶ್ವರನ ಎದುರಿಗಿದ್ದು ನಂದಿಯ ಕೋಡುಗಳ ಮೇಲೆ ಕೈಯಿಟ್ಟು ಶಿವನನ್ನು ದರ್ಶಿಸುವ ಪದ್ದತಿಯಿದೆ. ಇಲ್ಲಿ ನಂದಿ ಸೋಮೇಶ್ವರನ ಎದುರಿಗೇ ಇದ್ದರೂ ಮಧ್ಯ ಗೋಡೆಯಿರುವಂತಹ ದೇಗುಲದ ರಚನಾಶೈಲಿ ವಿಚಿತ್ರವೆನಿಸುತ್ತದೆ. ಈ ದೇಗುಲದ ಕೆಲ ಭಾಗವನ್ನು ಅಮರಶಿಲ್ಪಿಯೆಂದೇ ಪ್ರಸಿದ್ದನಾದ ಜಕಣಾಚಾರಿ ನಿರ್ಮಿಸಿದನೆಂದೂ ನಂತರದ ಭಾಗವನ್ನು ಆತನ ಮಗ ಡಕಣಾಚಾರಿ ಪೂರ್ಣಗೊಳಿಸಿದನೆಂದೂ ನಂಬಲಾಗಿದೆ. ಇಲ್ಲಿನ ದೇಗುಲಕ್ಕೆ ಸಾಗುವ ಪ್ರವೇಶದ್ವಾರದ ಮೆಟ್ಟಿಲುಗಳಲ್ಲಿ ಹಳೆಗನ್ನಡದ ಬರಹಗಳನ್ನು, ಪಕ್ಕದಲ್ಲಿ ಬೇಡರ ಕಣ್ಣಪ್ಪನ ಕೆತ್ತನೆಯನ್ನೂ ಕಾಣಬಹುದು. 

ನಟೇಶ್ವರ ದೇವಸ್ಥಾನ
ಕ್ಷಮದಾಂಭ. ಸೋಮೇಶ್ವರ ದೇಗುಲಗಳ ಕಾಂಪೌಂಡಿನ ಹೊರಗೆ, ಕ್ಷಮದಾಂಭ ದೇಗುಲದ ಎದುರಿಗೆ ಮುಚ್ಚಿದ ದೇಗುಲದಂತಹ ರಚನೆ ಕಂಡುಬರುತ್ತದೆ. ಬಾಗಿಲುಗಳಿಲ್ಲದ ಈ ದೇಗುಲದ ಹಿಂದೆ ನಟೇಶ್ವರ ದೇಗುಲವಾಗಿತ್ತಂತೆ. ನಿಧಿಯ ಆಸೆಗೆ ಕಳ್ಳರು ದೇಗುಲದ ಗರ್ಭಗೃಹದಲ್ಲಿನ ಮೂರ್ತಿಯನ್ನು ಕದ್ದೊಯ್ದ ಮೇಲಿಂದ ದೇಗುಲ ಪೂಜೆಯಿಲ್ಲದೇ ಅನಾಥವಾಗಿದೆ ಎಂದು ತಿಳಿದು ಬರುತ್ತದೆ. ಇಲ್ಲಿನ ಹೊರಗೋಡೆಯಲ್ಲಿರುವ ಹಸು, ಆನೆ ಮುಂತಾದ ಪ್ರಾಣಿಗಳು ಒಂದೇ ಶಿಲ್ಪದಲ್ಲಿರುವ ರಚನೆ ಗಮನ ಸೆಳೆಯುತ್ತದೆ.

ಗಣಪತಿ ದೇವಾಲಯ: 
ಇಲ್ಲಿನ ಸುಮಾರು ಹದಿನೈದಡಿ ಎತ್ತರದ ಗಣಪತಿ ವಿಗ್ರಹದ ಜೊತೆಗೆ ಅದರ ಎದುರಿಗೆ ಆತನ ವಾಹನವಾದ ಮೂಷಿಕದ ಪ್ರತ್ಯೇಕ ವಿಗ್ರಹವಿದೆ. ಶಿವದೇಗುಲಗಳಲ್ಲಿ ವಾಹನನಾದ ನಂದಿಯ ಪ್ರತ್ಯೇಕ ವಿಗ್ರಹಗಳಿರುತ್ತವೆಯೇ ಹೊರತು ಬೇರೆ ದೇವರ ವಾಹನಗಳಿಗೆ ಪ್ರತ್ಯೇಕ ವಿಗ್ರಹವನ್ನು ಕಂಡ ಉದಾಹರಣೆ ಕಡಿಮೆ. ಭಾದೃಪದ ಶುಕ್ಲ ಚೌತಿಯ ಮಾರನೆಯ ದಿನ ನಡೆಯುವ ಬ್ರಹ್ಮರಥೋತ್ಸವ ಇಲ್ಲಿನ ವಿಶೇಷ. 

ಒಂದೇ ಮಾತಲ್ಲಿ ಹೇಳೋದಾದ್ರೆ ಮುಳಬಾಗಿಲಿನಲ್ಲಿನ ಐತಿಹಾಸಿಕ ದೇಗುಲಗಳನ್ನು, ಸ್ಥಳಗಳನ್ನು ದರ್ಶಿಸುವ ಆಸಕ್ತಿಯವರು ಬರಲೇಬೇಕಾದ ಊರು ಕುರುಡುಮಲೆ. ಮುಳಬಾಗಿಲಿನ ಚೋಳರ ಶಿಲ್ಪಕಲೆಯ ಸಮೃದ್ಧಿಯ ದಿಕ್ಸೂಚಿಯೇ ಕುರುಡುಮಲೆಯೆಂದರೂ ತಪ್ಪಾಗಲಾರದೇನೋ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *