ಕಥಾಲೋಕ

ಕುರುಂಜಿಮಲೆ ಹೋಂಸ್ಟೇ: ಜಾನ್ ಸುಂಟಿಕೊಪ್ಪ.

John Sunticoppa

ಬಿದ್ದಪ್ಪ ಗೈಡ್ ಆದದ್ದೇನೂ ದೊಡ್ಡ ವಿಷಯವಾಗಿರಲಿಲ್ಲ. ಕುರುಂಜಿಮಲೆ ಹೋಂಸ್ಟೇ ಮಾಲಿಕ ಗಣಪತಿಯೂ ಅವನ ಹೆಂಡತಿ ದೇವಕ್ಕಿಯೂ, ಮತ್ತೆ ಆ ಬಡಕಲು ಲೈನ್‍ಮನೆಯಲ್ಲಿದ್ದ ನಾಲ್ಕು ಸಂಸಾರಗಳು ಅವರಷ್ಟಕ್ಕೇ ದಿನ ದೂಡುವುದು ಇದ್ದೇಇತ್ತು. ಕ್ಯಾಟರ್ ಬಿಲ್ಲೋ, ಸಾಹುಕಾರನ      ಕೋವಿಯೋ ಹಿಡಿದು ಆ ತಡಿಯಂಡಮೋಳು, ಮಾಪಿಳೆಕುಂದು, ಕರಡಿಮಲೆ ಎಂದೆಲ್ಲಾ ಇರೋಬರೋ ಬೆಟ್ಟ-ಕಾಡೊಳಗೆ ನುಗ್ಗಿ ಮೊಲವೋ, ಕಬ್ಬೆಕ್ಕೋ, ಕಾಡುಹಂದಿಯೋ, ಕೋಳಿಯೋ ಏನಾದರೂ ಹೊಡೆದು ತರುತ್ತಿದ್ದ ಬಿದ್ದಪ್ಪ ಆ ಗಣಪತಿ ಸಾಹುಕಾರನ ಮನೆ ಜಗಲಿಯಲ್ಲಿ ಬೇಟೆ ಹಾಕಿ ಕಾಲಿಗೆ ಹತ್ತಿದ ಜಿಗಣೆಗಳನ್ನು ಒಂದೊಂದಾಗಿ ಕಿತ್ತು ಹಾಕುತ್ತಾ ತನ್ನ ಬೇಟೆಯ ರೋಚಕತೆಯನ್ನು ವಿವರಿಸುತ್ತಾ ಇದ್ದರೆ, ಆ ಗಣಪತಿಯೂ ಅವನ ಪ್ರಾಯದ ಹೆಂಡತಿ ದೇವಕ್ಕಿಯೂ, ಮುದುಕಿ ಚೋಂದವ್ವಳೂ ಕಣ್ಣು ಬಾಯಿ ಬಿಟ್ಟುಕೊಂಡು ಒಮ್ಮೆ ಬೇಟೆಯನ್ನೂ ಇನ್ನೊಮ್ಮೆ ಕಾಡುನುಗ್ಗಿ ಬಂದ ಬಿದ್ದುನನ್ನೂ ನೋಡುತ್ತಾ ಇರೋರು. ಕಡೇಗೆ ಆ ಮುದುಕಿ ಚೋಂದವ್ವ ಬಿಸಿಬಿಸಿ ಕಪ್ಪುಕಾಪಿಯೂ ರೊಟ್ಟಿ- ಸಾರು ಕೊಟ್ಟರೆ ಸುಮ್ಮನೆ ತಿಂದು ಕುಡಿದು ತನ್ನ ಲೈನ್‍ಮನೆಗೆ ಬಂದು ಚಾಪೆ ಹಾಸಿ ಬಿದ್ದುಕೊಂಡನೆಂದರೆ ಅವತ್ತು ಕೆಲಸಕ್ಕೋಗದು ಅಷ್ಟಕ್ಕಷ್ಟೇ. ಬೇಟೆ ತಂದು ಕೊಟ್ಟದ್ದಕ್ಕೆಂದೇನೋ ಏನೋ ಒಂದರ್ಧ ಕೆ.ಜಿ. ಬೇಟೆಮಾಂಸ ಬಿದ್ದಪ್ಪನಿಗೆ ಕೊಟ್ಟು ಜತೆಗೆ ಒಂದು ಕ್ವಾಟ್ರನ್ನೂ ಕಳಿಸಿ ಗಣಪತಿ ಸಾಹುಕಾರರು ಆ ದಿನದ ರಜೆನೂ ಮಾಫಿಮಾಡೋರು.    

ಕೊಡಗಿನಲ್ಲಿ ಹೋಂಸ್ಟೇ, ರೆಸಾರ್ಟುಗಳ ಕಾರುಬಾರು ಶುರುವಾಗಿ ಊರೂರಲ್ಲೂ, ಬೆಟ್ಟಕಾಡುಗಳಲ್ಲೂ ಅಣಬೆಗಳಂತೆ ಕಂಡಕಂಡಲ್ಲಿ ಅನಧಿಕೃತವಾಗಿ ಹೋಂಸ್ಟೇಗಳು ಆರಂಭಗೊಂಡದ್ದೇ ಎಲ್ಲೆಲ್ಲಿಂದಲೋ ಬರೋ ಜನರಿಂದ ಹಣ ಸುಲಿಗೆ ಮಾಡೋದು ಕಂಡದ್ದೇ ಈ ಗಣಪತಿಯೂ ಚುರುಕಾಗಿಬಿಟ್ಟಿದ್ದ. ಹೇಳಿಕೇಳಿ ತಡಿಯಂಡಮೋಳು ಚಾರಣಿಗರ, ಪ್ರವಾಸಿಗರ ಸ್ವರ್ಗ, ಅದ್ಯಾವಾಗಲೋ ಕೊಡಗಿನ ಅರಸ ಕಟ್ಟಿದ್ದ  ಒಂದು ಹಾಳು ಅರಮನೆ ಬೇರೆ ಊರಲ್ಲಿದೆ. ಝರಿತೊರೆಗಳಿಗೇನೂ ಕೊರತೆಯಿಲ್ಲ. ಗಣಪತಿ ಸಾಹುಕಾರ್ರು ಕುರುಂಜಿಮಲೆ ಹೋಂಸ್ಟೇ ಶುರುಮಾಡೇ ಬಿಟ್ಟರು. ತೋಟದಲ್ಲಿದ್ದ ಕೂಲಿಯವರಿಗೆ ಕೂಲಿ ಹೆಚ್ಚು ಮಾಡಲು ದುಡ್ಡಿಲ್ಲ ದುಡ್ಡಿಲ್ಲ ಎಂದು ಮೇಲೆ ಕೆಳಗೆ ನೋಡುತ್ತಾ ಬಾಯಿಬಿಗಿದುಕೊಂಡಿರುತ್ತಿದ್ದ ಗಣಪತಿ ಎರಡು ಕಾಟೇಜುಗಳುಳ್ಳ ಒಂದು ಸೊಗಸಾದ ಹೋಂಸ್ಟೇ ಕಟ್ಟಿಸೇಬಿಟ್ಟ. ಪಕ್ಕದಲ್ಲೇ ಹರಿವ ತೊರೆ, ಕಾಫಿತೋಟದ ಕಾಲುದಾರಿಯಲ್ಲೇ ನಡೆದರೆ ಸಿಗುವ ಝರಿ. ತೋಟದೊಳಗೊಂದು ಸಾಧಾರಣವಾದ ಕೆರೆ, ಅದರಲ್ಲಿರೋ ಮೊರಂಟೆ, ಕಾಟ್ಲಾ ಮೀನುಗಳು, ತಂಪಾದ ವಾತಾವರಣ ಹತ್ತಿರವೇ ಇರುವ ತಡಿಯಂಡಮೋಳು , ಕರಡಿಮಲೆ ಬೆಟ್ಟಗಳು ಹಾಗಾಗಿ ಪ್ರವಾಸಿಗರ ಸುಗ್ಗಿಯೋ ಸುಗ್ಗಿ ಎಂದೆಲ್ಲಾ ಕನಸು ಕಾಣುತ್ತಿದ್ದ ಗಣಪತಿ ಮಡಿಕೇರಿಗೂ ಒಮ್ಮೆ ಹೋಗಿ ಅಲ್ಲಿದ್ದ ಖಾಸಗಿ ಪ್ರವಾಸಿ ಮಾಹಿತಿ ಕೇಂದ್ರಗಳಿಗೆ ತೆರಳಿ ಸ್ವಲ್ಪ ಭಕ್ಷೀಸು ನೀಡಿ ವಿಳಾಸ  ನೀಡಿ ಬಂದಿದ್ದ.   

ಮಳೆಗಾಲ ಕಳೆದು ಅಕ್ಟೋಬರಿನ  ಹಿತವಾದ ಬಿಸಿಲು ಕಾಣಿಸಿಕೊಂಡಿದ್ದೇ  ವೀಕೆಂಡಿನ ರಜೆಗಳಿಗೆ ಪ್ರವಾಸಿಗರ ಕಾರುಗಳು ಕುರುಂಜಿಮಲೆ ಹೋಂಸ್ಟೇಯ ಅಂಗಳದಲ್ಲಿ ಬಂದು ನಿಲ್ಲಲಾರಂಭಿಸಿದುವು.ಇತ್ತ ನಗರದಿಂದ ಬರೋ ತಳುಕುಬಳುಕಿನ ನಾಗರಿಕ ಪ್ರಾಣಿಗಳು ತಣ್ಣಗಿನ ತೋಟದೊಳಗೆ ಕಾಲಿರಿಸಿದ್ದೇ   " ಹಾ… ಹೋ…" ಎಂದು ಹಾಡುವುದು ಕಿರಿಚುವದು ಕಂಡು ಕಣ್ಣುಬಾಯಿ  ಬಿಟ್ಟು ನಿಂತಿದ್ದ      ಬಿದ್ದಪ್ಪಗೂ ಒಂದು ದಿನ ಅದೃಷ್ಟ ಒಲಿದು ಬಂತು. ಬೆಂಗಳೂರಿನಿಂದ ಬಂದ ಪುಂಡರ ಗುಂಪೊಂದು ತಡಿಯಂಡಮೋಳಿಗೆ ಹೋಗಲು ದಾರಿ ತಿಳಿಯದೇ ಇದ್ದಾಗ ಸಾಹುಕಾರನೂ ಆ ಹುಡುಗರು ಏನೋ ಚೌಕಾಸಿ ಮಾಡಿ ಕಡೆಗೆ ಇತ್ಯರ್ಥವಾದಂತಾಗಿ ಬಿದ್ದಪ್ಪನನ್ನು ಕರೆಸಿದ್ದರು. ಹೇಗೂ ಕಾಡು-ಮೇಡು ಅಲೆದು ರೂಢಿಯಿದ್ದ ಬಿದ್ದಪ್ಪನನ್ನು ಬೆಟ್ಟಕ್ಕೆ ಕರೆದುಕೊಂಡು ಹೋಗಿಬರಲು ನಿಗಧಿಪಡಿಸಿ ಅವನನ್ನು ಎಲ್ಲಾರೂ "ಗೈಡ್‍ಬಿದ್ದು" ಎಂದು ಕರೆಯಲು ಆರಂಭಿಸಿದ್ದೇ ಬಿದ್ದಪ್ಪನ ಎದೆ ಒಂದೆರಡು ಇಂಚು ಉಬ್ಬಿಬಿಟ್ಟಿತು.ಶಾಲೆ ಮೆಟ್ಟಿಲು ಏರದ ಬಿದ್ದು ಗೈಡು, ಗೆಸ್ಟು, ಹೋಂಸ್ಟೇ, ಡಿನ್ನರ್ , ಡ್ರಿಂಕ್ಸ್ ಅಂತೆಲ್ಲಾ ಮಾತನಾಡಲು ಆರಂಭಿಸಿಬಿಟ್ಟ. ಬೆಟ್ಟಕ್ಕೆ ಬರುವ ಗೆಸ್ಟುಗಳಿಂದ ಅಲ್ಪಸ್ವಲ್ಪ ಭಕ್ಷೀಸೂ ಸಿಗಲಾರಂಭಿಸಿತು.      

ಚಿಕ್ಕಂದಿನಿಂದಲೇ  ತಾಯಿಯನ್ನು ಕಳೆದುಕೊಂಡಿದ್ದ ಬಿದ್ದು, ತಂದೆಯ ಮಗನಾಗೇ ಉಳಿದುಬಿಟ್ಟಿದ್ದ.ಎರಡೋ ಮೂರೋ ವರ್ಷ ಹಿಂದೆ ಕಪಾತು ಮಾಡಲೆಂದು ಮರ ಹತ್ತಿದ್ದ ಅಪ್ಪ ಆಯತಪ್ಪಿ ಬಿದ್ದು ತಲೆಒಡೆದು ಸತ್ತುಬಿಟ್ಟ, ಬಿದ್ದುವನ್ನು ಅನಾಥನಾಗಿಸಿಬಿಟ್ಟ. ಯಾರ ತಂಟೆಗೂ ಹೋಗದ ಪಾಪದ ಬಿದ್ದುವಿಗೆ ಸಾಹುಕಾರ ಗಣಪತಿ ಸರಿಯಾಗೇ ಟೋಪಿ ಹಾಕಿಬಿಟ್ಟ.ಅತ್ತ ಪರಿಹಾರವೂ ಇಲ್ಲ ಇತ್ತ ಪೋಲೀಸು ಕಂಪ್ಲೇಂಟೂ ಇಲ್ಲದಂಗೆ ಮಾಡಿ, ಅಪ್ಪ ತೀರಿ ಹೋದರೂ ಅಪ್ಪನ ಸಾಲ ಮಾತ್ರ ತೀರಿ ಹೋಗದಂತೆ ಚಾಲಾಕಿತನ ಮೆರೆದಿದ್ದ. ಆ ಸಾಲಕ್ಕಾಗಿ ಬಿದ್ದು ಸಾಹುಕಾರನಿಗೆ ಅಡವಿಟ್ಟವನಂತೆ ದುಡಿದದ್ದೇ ದುಡಿದದ್ದು.      

ಅಷ್ಟೇ ಆದರೆ ಪರವಾಗಿತ್ತಿಲ್ಲ, ಆ ಸಾಹುಕಾರನಿಗೆ ತಲೆಕೆಟ್ಟಾಗಲೆಲ್ಲಾ ತೋಟದಲ್ಲಿ ಅವನ ಸಾಮಾನನ್ನು ಈ ಬಿದ್ದು ಬಾಯಿಗೆ ಹಾಕಿಕೊಳ್ಳಬೇಕಿತ್ತು." ಹೆಕ್ಕ್….ಥೂ….." ಎಂದು ಕ್ಯಾಕರಿಸಿ ಉಗಿದ ಬಿದ್ದು.ಅವನಿಗೆ ಇದನ್ನ ನೆನೆಸಿಕೊಂಡರೇ ವಾಂತಿ ಬಂದಂಗಾಗುತ್ತಿತ್ತು. ಇವನು ಮಾಡುವಂತಿಲ್ಲ ಈ ಸಾಹುಕಾರ ಬಿಡುವಂತಿಲ್ಲ.ಈ ಕಾಫೀ ತೋಟಗಳ ಒಂದೊಂದು ಕಥೆಗಳೋ ಹೇಳಿಕೊಳ್ಳಲು ಭಯವಾಗುವಂಥದ್ದು. ಇಲ್ಲಿ ನ್ಯಾಯ_ ಅನ್ಯಾಯಗಳು ಇಲ್ಲದವರ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ.      

ಅದೊಂದು ದಿನ ಬೆಳಗ್ಗೆಯೇ ನಾಪೋಕ್ಲಿಗೆ ಹೋದ ಬಿದ್ದಪ್ಪ ಹತ್ತು ಗಂಟೆಗೆಲ್ಲಾ ಕುರುಂಜಿಮಲೆ ಗೆ ವಾಪಾಸಾಗಿದ್ದ. ಜ್ವರ ಬಂದು ನಾಪೋಕ್ಲಿನ ಸರ್ಕಾರಿ ಆಸ್ಪತ್ರೆಗೆ ಹೋದವನಿಗೆ ಅಲ್ಲಿ ಡಾಕ್ಟ್ರಿಲ್ಲವೆಂದು ಅಲ್ಲಿಯ ನರ್ಸುಗಳು ಕೈತುಂಬಾ ಮಾತ್ರೆಗಳನ್ನು ನೀಡಿ ಕಳಿಸಿದ್ದರು. ಕ್ಲೀನಿಕಿಗೆ ಹೋಗಲು ದುಡ್ಡಿಲ್ಲದ ಬಿದ್ದು ಮಾತ್ರೆ ತೆಗೊಂಡು ಸುಮ್ಮನೇ ವಾಪಾಸು ಬಂದಿದ್ದ.ಲೈನುಮನೆಗೆ ಬಂದಿದ್ದೇ ಅಲ್ಲಿ ಪಕ್ಕದ ರೂಮಿನಿಂದ " ಹಾ….ಹೂ…." ಎಂಬ ನರಳಾಟ ಕೇಳಿ ತಬ್ಬಿಬ್ಬಾದ ಬಿದ್ದು ಅಲ್ಲಿ ಸಾಹುಕಾರನೂ ಆ ಅಡಿಯರ ಮಲ್ಲಿಯೂ ಬತ್ತಲೆಯಾಗಿ ಸುಖದ ನರಳಿಕೆಯಲ್ಲಿ ಮೈಮರೆತಿದ್ದರು.ಇದನ್ನು ನೋಡಿದ ಬಿದ್ದುವಿಗೆ ಜ್ವರ ಒಮ್ಮೆಗೇ ತಲೆಗೇ ಏರಿದಂತಾಗಿ , ಏನು ಮಾಡಬೇಕೆಂದು ತೋಚದೆ ಬಿಟ್ಟ ಕಣ್ಣು ಬಿಟ್ಟಂತಾಗಿ , ತನ್ನ ಚಡ್ಡಿಯೂ ಉಬ್ಬಿದಂತಾಗಿ ಕಂಗಾಲಾಗಿಬಿಟ್ಟ. ಇನ್ನು ಅಲ್ಲಿ ನಿಲ್ಲಲೂ ಆಗದೆ ಹೊರಡಲು ಮನಸ್ಸೂ ಬರದೆ ಮೆತ್ತಗೆ ಲೈನಿನ ಪಕ್ಕ ಹರಿಯುತ್ತಿದ್ದ ತೊರೆಗೆ ಹೋಗಿಬಿಟ್ಟ.       

ಸಾಹುಕಾರನೂ ಮಲ್ಲಿಯೂ ತೋಟದಲ್ಲಿ ಆಮೇಲೆ ಜತೆಯಾಗಿ ಓಡಾಡಿಕೊಂಡಿರೋದನ್ನ ನೋಡಿದ ಬಿದ್ದು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಇಲ್ಲ. ತೋಟಗಳಲ್ಲಿ ಇದು ಮಾಮೂಲಿ ವಿಚಾರ.ಯಾರು ಮಾರ ಜೊತೆ ಮಲಗುತ್ತಾರೋ, ಯಾರೊಂದಿಗೆ ಬದುಕುತ್ತಾರೋ ಎಲ್ಲಾ ಅಯೋಮಯ, ಒಟ್ರಾಸೆ ತಾನು ಮಾಡಬೇಕಾದುದ್ದನನ್ನು ಅವಳೇ ಮಾಡಿ ಮುಗಿಸುತ್ತಾಳಲ್ಲ ಸಧ್ಯ ಎಂದು ಕೊಂಡ ಬಿದ್ದು. ಆದರೆ ಕೆಲವು ಸಮಯದ ನಂತರ ಇದ್ದಕ್ಕಿದ್ದಂತೇ ಆ ಮಲ್ಲಿ ಕಾಣೆಯಾಗಿಬಿಟ್ಟಳು. ಗಣಪತಿ ಸಾಹುಕಾರ ಮಾತ್ರ ಆ ಹಾಳು ಮಲ್ಲಿ ತನಗೆ ಹತ್ತು ಸಾವಿರ ಸಾಲ ಕೊಡಬೇಕೆಂದೂ, ಎಲ್ಲಿ ಯಾರೊಂದಿಗೆ ಓಡಿ ಹೋದಳೋ ಎಂದು ತೀರಾ ಸಭ್ಯನಂತೆ ಕೂಗಾಡುತ್ತಿದ್ದ.     

ಮೊನ್ನೆ ಯಾರೋ ಬೇಟೆಗೆಂದು ಹೋದವರು ತಡಿಯಂಡಮೋಳಿನ ದಟ್ಟಕಾಡಿನಲ್ಲಿ ಒಂದು  ಹೆಣ ಕಂಡರಂತೆ , ಹೆಚ್ಚು ಕಡಿಮೆ ಕೊಳೆತು ಹೋಗಿದ್ದ ಹೆಣ ಕಂಡು ಹೆದರಿ ಹೇಳಲೂ ಭಯವಾಗಿ ಕಡೆಗೆ ಆ ಸುದ್ದಿ ಬೆಟ್ಟದ ಕುಡಿಯರಿಗೆ ತಲುಪಿ ಅಲ್ಲಿಂದ ಬೇಸಿಗೆಯ ಕಾಳ್ಗಿಚ್ಚಿನಂತೆ ನಾಲ್ಕುನಾಡು ಸೀಮೆಯೆಲ್ಲಾ ಹಬ್ಬಿಬಿಟ್ಟಿತು. ಕಡೆಗೊಮ್ಮೆ ಪೋಲಿಸು ಜೀಪೊಂದು ಕುರುಂಜಿಮಲೆ ಹೋಂಸ್ಟೇನ ಅಂಗಳದಲ್ಲಿ ಕಾಣಿಸಿಕೊಂಡಿದ್ದೇ ಯಾರುಯಾರಿಗೋ ಫೋನು ಹೋಗಿ ಬಂದ ಪೋಲೀಸರು ಹೊಟ್ಟೆತುಂಬಾ ತಿಂದುಕುಡಿದು ಪ್ರಕರಣ ಮುಗಿಯಿತೆಂಬಂತೆ ಡರ್ರನೆ ತೇಗಿ ಜೀಪು ಹತ್ತಿ ಧೂಳು ಹಾರಿಸುತ್ತಾ ಹೊರಟರು. ಬಿದ್ದುವಿಗೆ ಮಾತ್ರ ಲೈನ್ ರೂಮಿನಲ್ಲಿ, ತೋಟದಲ್ಲಿ " ಹಾ….ಹಾ…" ಎಂದು ಮಾಡುತ್ತಿದ್ದ ಆ ಸುಖದ ಸದ್ದು ಕಿವಿಗೆ ಮತ್ತೆ ಬಿದ್ದಂತಾಗಿ ಈ ಜೀವನವೇ ನರಕವಾದಂತಾಗಿ ಸುಮ್ಮನೆ ತನ್ನ ಪಾಡಿಗೆ ತಾನು ಸಿಲ್ವರ್ ಮರದ ಕಪಾತಿಗೆಂದು ನಡೆದುಬಿಟ್ಟ.

– ಜಾನ್ ಸುಂಟಿಕೊಪ್ಪ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಕುರುಂಜಿಮಲೆ ಹೋಂಸ್ಟೇ: ಜಾನ್ ಸುಂಟಿಕೊಪ್ಪ.

Leave a Reply

Your email address will not be published. Required fields are marked *